ಶಿಲ್ಪಾ ಪರಿಪೂರ್ಣ ಸಿದ್ಧತೆಯೊಂದಿಗೆ ಬ್ಲ್ಯಾಕ್‌ ಮೇಲರ್‌ ನ ಆಗಮನದ ನಿರೀಕ್ಷೆಯಲ್ಲಿದ್ದಳು. ಆಗ ಮನೆ ಬಾಗಿಲ ಕರೆಗಂಟೆ ಬಾರಿಸಿತು…….

ಬೆಡ್‌ ರೂಮಿನ ಗೋಡೆಯ ಮೇಲೆ ಮರ್ಫಿ ರೇಡಿಯೋದ ಪೋಸ್ಟರ್‌ ಬೇಬಿಯ ಫೋಟೋ ಈಗಲೂ ನೋಡಲು ಸಿಗುತ್ತದೆ. ಅದೆಂಥ ಸುಂದರ ಮಗು, ಅದೇನು ಖುಷಿಯಿಂದ ತುಟಿಯ ಮೇಲೆ ಬೆರಳಿಟ್ಟು ಪೋಸ್‌ ಕೊಟ್ಟಿದೆ. ಆ ಫೋಟೋ ಶಿಲ್ಪಾಳ ಬೆಡ್ ರೂಮಿನಲ್ಲಿ ಕಳೆದ 4 ವರ್ಷಗಳಿಂದ ಹಾಗೆಯೇ ಇದೆ. ಆ ಫೋಟೋ ನೋಡಿ ಒಮ್ಮೆ ಅತ್ತೆ ಹೇಳಿದ್ದರು, ಸುಂದರ ಮಗುವಿನ ಫೋಟೋ ನೋಡುವುದರಿಂದ ಹುಟ್ಟುವ ಮಗು ಕೂಡ ಸುಂದರವಾಗಿರುತ್ತದೆ. ಮಗುವಿನ ನಿರೀಕ್ಷೆ ಮಾಡುತ್ತಾ ಮಾಡುತ್ತಾ ಅವಳ ಅತ್ತೆ ತೀರಿಹೋದರು.

ಊಟ ಮುಗಿಸಿ ಶಿಲ್ಪಾ ನೈಟ್‌ ಬಲ್ಬಿನ ಮಂದ ಬೆಳಕಿನಲ್ಲಿ ಮರ್ಫಿ ಬೇಬಿಯನ್ನು ನೋಡುತ್ತಿದ್ದಳು. ಆಗ ಪತಿ ಅಮರ್‌ ಕೋಣೆಯೊಳಗೆ ಕಾಲಿಡುತ್ತಾ, “ನಾನು ಡಾಕ್ಟರ್‌ ಬಳಿ ಅಪಾಯಿಂಟ್‌ ಮೆಂಟ್‌ ತೆಗೆದುಕೊಂಡಿದ್ದೇನೆ. ಈಗ ನಾವು ಡಾಕ್ಟರ್‌ ಹತ್ತಿರ ಹೋಗಿ ಟೆಸ್ಟ್ ಮಾಡಿಸಿಕೊಳ್ಳಬೇಕು. ಅವರು ಏನು ಹೇಳ್ತಾರೋ ನೋಡಬೇಕು,” ಎಂದು ಹೇಳಿದ.

“ಹೌದು. ಇದು ಮೊದಲೇ ಆಗಿದ್ದರೆ ಅತ್ತೆಯ ಇಚ್ಛೆಯಾದರೂ ಪೂರೈಸುತ್ತಿತ್ತೇನೋ……?”

“ಈ ಮೊದಲು ಡಾಕ್ಟರ್‌ ಎಂದೂ ಇಬ್ಬರಿಗೂ ಟೆಸ್ಟ್ ಮಾಡಲು ಹೇಳಿರಲಿಲ್ಲ. ನಿನ್ನ ಗೆಳತಿ ಸುಜಾತಾ ಕೂಡ ವೈದ್ಯೆ. ಅವರು ಕೂಡ ಗರ್ಭ ಧರಿಸಲು ಒಮ್ಮೊಮ್ಮೆ ತಡ ಆಗಬಹುದು ಎಂದಿದ್ದರು. ನಾವು ಸಹ ಒಂದು ವರ್ಷ ನಿರ್ಲಕ್ಷ್ಯ ಮಾಡಿದೆ.”

ಅಮರ್‌ ಪದವಿ ಬಳಿಕ ಸ್ಪೋರ್ಟ್ಸ್ ಕೋಟಾದಡಿ ಒಂದು ಕಂಪನಿಯಲ್ಲಿ ನೌಕರಿ ಗಿಟ್ಟಿಸಿಕೊಂಡ.

ಅವನು ರಾಜ್ಯಮಟ್ಟದ ಬಾಕ್ಸಿಂಗ್‌ ಚಾಂಪಿಯನ್‌. ಅಮರ್‌ ನದು ಬಹಳ ಒಳ್ಳೆಯ ಪರ್ಸನಾಲಿಟಿ. ಆಫೀಸಿನಲ್ಲಿ ಅವನ ಸಹೋದ್ಯೋಗಿಗಳು ಹೇಳುತ್ತಿದ್ದರು. ಬಾಕ್ಸಿಂಗ್‌ ರಿಂಗ್‌ ನಲ್ಲಿ ನೀನು ಚಾಂಪಿಯನ್‌ ಆಗಿರುವೆ. ಈಗ ನಿನ್ನ ಕುಟುಂಬವನ್ನು ಬೆಳೆಸು. ನಿನ್ನಂತಹ ಬಲಿಷ್ಠ, ದಷ್ಟಪುಷ್ಟ ಭವಿಷ್ಯದ ಚಾಂಪಿಯನ್‌ ನನ್ನು ನೋಡೋಣ.

“ಅದೂ ಕೂಡ ಆಗುತ್ತದೆ. ಅದಕ್ಕೆ ಆತುರವೇನಿದೆ?” ಎಂದು ಅವನು ಹೇಳುತ್ತಿದ್ದ.

ಮದುವೆಯ 5 ವರ್ಷಗಳ ಬಳಿಕ ಶಿಲ್ಪಾ ಹಾಗೂ ಅಮರ್‌ ಈ ವಿಷಯದ ಬಗ್ಗೆ ಸಲಹೆ ಪಡೆಯಲು ವೈದ್ಯರ ಬಳಿ ಧಾವಿಸಿದ್ದರು. ಡಾಕ್ಟರ್‌ ಇಬ್ಬರ ಕೆಲವು ಟೆಸ್ಟ್ ಗಳನ್ನು ಮಾಡಿಸಿ, 2 ದಿನಗಳ ಬಳಿಕ ಭೇಟಿಯಾಗಲು ಹೇಳಿದರು. ವೈದ್ಯರನ್ನು ಭೇಟಿಯಾಗಲು ಬಂದ ದಂಪತಿಗಳನ್ನು ಉದ್ದೇಶಿಸಿ, “ನಿಮ್ಮಿಬ್ಬರ ರಿಪೋರ್ಟ್ಸ್ ಬಂದಿವೆ. ಶಿಲ್ಪಾ ಅವರ ರಿಪೋರ್ಟ್‌ ನಾರ್ಮಲ್ ಆಗಿದೆ. ಅವರಲ್ಲಿ ತಾಯಿಯಾಗುವ ಎಲ್ಲ ಸಾಧ್ಯತೆಗಳಿವೆ. ಆದರೆ…..”

“ಆದರೆ ಏನು ಡಾಕ್ಟರ್‌?” ಶಿಲ್ಪಾ ಡಾಕ್ಟರ್‌ ಮಾತನ್ನು ಅರ್ಧದಲ್ಲಿಯೇ ತಡೆದು ಕೇಳಿದಳು.

“ಐ ಆ್ಯಮ್ ಸಾರಿ.  ಆದರೆ…. ನಾನು ಈ ವಿಷಯ ತಿಳಿಸಲೇಬೇಕು. ಅಮರ್‌ ಅವರಿಗೆ ತಂದೆಯಾಗುವ ಸಾಮರ್ಥ್ಯ ಇಲ್ಲ.”

ಕೆಲವು ಕ್ಷಣಗಳ ಕಾಲ ಕ್ಯಾಬಿನ್‌ ನಲ್ಲಿ ಮೌನ ಆವರಿಸಿತು. ಬಳಿಕ ಶಿಲ್ಪಾ ಹೇಳಿದಳು, “ಆದರೆ ಡಾಕ್ಟರ್‌, ವೈದ್ಯ ವಿಜ್ಞಾನ ಈಗ ಎಷ್ಟು ಮುಂದುವರಿದಿದೆ, ಇದಕ್ಕೆ ಏನಾದರೂ ಔಷಧಿ ಅಥವಾ ಉಪಾಯ ಇರಬೇಕಲ್ಲ?”

“ಹೌದು ಹೌದು ಇದೆ. ಐವಿಎಫ್‌ ತಂತ್ರಜ್ಞಾನದ ನೆರವಿನಿಂದ ನೀನಿ ತಾಯಿಯಾಗಬಹುದು. ಇತ್ತೀಚೆಗೆ ಇದು ಬಹಳ ಸುಲಭವಾಗಿದೆ. ಯಾರಾದರೂ ಸದೃಢ ಪುರುಷನ ವೀರ್ಯಾಣು ಉಪಯೋಗಿಸಿ ನೀವು ಮಗುವಿಗೆ ಜನ್ಮ ನೀಡಬಹುದು.”

“ಡಾಕ್ಟರ್‌, ಇದರ ಹೊರತಾಗಿ ಬೇರೆ ಉಪಾಯ ಇಲ್ಲವೇ?”

“ಕ್ಷಮಿಸಿ. ಇದರ ಹೊರತಾಗಿ ಇರುವ ಏಕೈಕ ಉಪಾಯವೆಂದರೆ, ನೀವು ಯಾವುದಾದರೂ ಮಗುವನ್ನು ದತ್ತು ತೆಗೆದುಕೊಳ್ಳಬಹುದು. ನೀವು ಸರಿಯಾಗಿ ವಿಚಾರ ವಿಮರ್ಶೆ ಮಾಡಿ ನಿರ್ಧಾರ ತಿಳಿಸಿ. ನೀವು ಇನ್ನಷ್ಟು ಸಮಯಾವಕಾಶ ತೆಗೆದುಕೊಂಡು ನಿರ್ಧರಿಸುತ್ತೀರೆಂದರೆ, ಹಾಗೆಯೇ ಮಾಡಿ.”

ಶಿಲ್ಪಾ ಹಾಗೂ ಅಮರ್‌ ಸ್ವಲ್ಪ ಹೊತ್ತು ವೈದ್ಯರ ಕ್ಲಿನಿಕ್‌ ನಲ್ಲಿಯೇ ಕುಳಿತು ಯೋಚಿಸಿದರು. ಇನ್ನೂ ತಡ ಮಾಡಿದರೆ ಯಾವುದೇ ಲಾಭವಿಲ್ಲ. ಐವಿಎಫ್‌ ತಂತ್ರಜ್ಞಾನದ ಮುಖಾಂತರ ಮಗು ಪಡೆಯಲು ಅವರು ನಿರ್ಧರಿಸಿದರು. ಶಿಲ್ಪಾ ಮನಸ್ಸಿನಲ್ಲಿಯೇ ಯೋಚಿಸಿದಳು. ತನಗೆ ಇದರಿಂದ ಮಾತೃತ್ವದ ಅನುಭವ ಉಂಟಾಗುತ್ತದೆ. ಬಳಿಕ ಇಬ್ಬರೂ ವೈದ್ಯರಿಗೆ ತಮ್ಮ ನಿರ್ಧಾರ ತಿಳಿಸಿದರು.

“ವೆರಿ ಗುಡ್‌. ನಿಮ್ಮ ಇನ್ನಷ್ಟು ಟೆಸ್ಟ್ ಗಳು ಆಗುತ್ತವೆ. ನನ್ನ ಕ್ಲಿನಿಕ್‌ ನಲ್ಲಿ ಕೆಲವು ಡೋನರ್ಸ್‌ ಗಳ ಸ್ಯಾಂಪಲ್ಸ್ ಇವೆ. ಅವನ್ನು ಪರಿಶೀಲಿಸಿ ನಿಮಗೆ ಒಂದೆರಡು ದಿನಗಳಲ್ಲಿ ತಿಳಿಸ್ತೀನಿ. ಅದೇನು ದೊಡ್ಡ  ಪ್ರೊಸೆಸ್‌ ಅಲ್ಲ. ಬೇಗನೇ ನಿಮ್ಮ ಕೆಲಸ ಆಗಿಬಿಡುತ್ತದೆ.”

ಒಂದು ವಾರದೊಳಗೆ ಶಿಲ್ಪಾ ಐವಿಎಫ್‌ ತಂತ್ರಜ್ಞಾನದ ಮುಖಾಂತರ ಗರ್ಭ ಧರಿಸಿದಳು. ಇನ್ನು ನಿಯಮಿತವಾಗಿ ಚೆಕಪ್ ಗೆ ಬರುತ್ತಿರಬೇಕೆಂದು ವೈದ್ಯರು ಶಿಲ್ಪಾಗೆ ತಿಳಿಸಿದರು.

ಕೆಲವು ದಿನಗಳ ಬಳಿಕ ಅಮರ್‌ ಬಹಳ ಖುಷಿಯಿಂದ ಆಫೀಸಿನ ಸ್ನೇಹಿತರಿಗೆ ತಾನು ತಂದೆಯಾಗುತ್ತಿರುವ ಬಗ್ಗೆ ಘೋಷಿಸಿದ ಅದಕ್ಕೆ ಪ್ರತಿಯಾಗಿ ಒಬ್ಬ ಸಹೋದ್ಯೋಗಿ, “ಅಂತೂ ನಮ್ಮ ಚಾಂಪಿಯನ್‌ ಗೆದ್ದೇ ಬಿಟ್ಟ. ಈಗ ನೀನು ನಮ್ಮೆಲ್ಲರ ಬಾಯಿ ಸಿಹಿ ಮಾಡಬೇಕು,” ಎಂದ.

ಗೆಳೆಯರ ಆಗ್ರಹದ ಮೇರೆಗೆ ಅವನು ಆಫೀಸಿನ ಕ್ಯಾಂಟೀನ್‌ ನಿಂದ ಜಾಮೂನು ತರಿಸಿಕೊಟ್ಟ. ಜಾಮೂನು ತಿನ್ನುತ್ತಲೇ ಎಲ್ಲ ಸಹೋದ್ಯೋಗಿಗಳು ಹೇಳಿದರು, “ಈ ಚಿಕ್ಕಪುಟ್ಟ ಪಾರ್ಟಿಯಿಂದ  ನಮಗೆ ತೃಪ್ತಿ ಆಗೋದಿಲ್ಲ. ನಮಗೆಲ್ಲ ಕುಟುಂಬ ಸಮೇತ ಪಾರ್ಟಿ ವ್ಯವಸ್ಥೆ ಆಗಬೇಕು.”

“ಸರಿ ಸರಿ ಅದೂ ಕೂಡ ಆಗುತ್ತದೆ.”

ಸುಮಾರು ಒಂದು ತಿಂಗಳ ಬಳಿಕ ಡಾಕ್ಟರ್‌ ಶಿಲ್ಪಾಗೆ ಹೇಳಿದರು, “ನಿಮ್ಮ ಮಗುವಿನ ಬೆಳವಣಿಗೆ ಸರಿಯಾಗಿದೆ. ನೀವೀಗ ನಿಶ್ಚಿಂತರಾಗಿರಿ. ಹುಟ್ಟಲಿರುವ ನಿಮ್ಮ ಮಗು ದಷ್ಟಪುಷ್ಟವಾಗಿರಲಿದೆ.”

ಇದೇ ಖುಷಿಯಲ್ಲಿ ಒಂದು ದಿನ ರಾತ್ರಿ ಅಮರ್‌ ತನ್ನ ಸ್ನೇಹಿತರನ್ನು ಕುಟುಂಬ ಸಮೇತ ಪಾರ್ಟಿಗೆ ಆಹ್ವಾನಿಸಿದ. ಶಿಲ್ಪಾ ಕೂಡ ಮನೆಯಲ್ಲಿ ಪಾರ್ಟಿಯ ಸಿದ್ಧತೆಯಲ್ಲಿ ಮಗ್ನಳಾಗಿದ್ದಳು. ಅದೇ ಸಮಯದಲ್ಲಿ ಮನೆಯ ಕಾಲ್ ಬೆಲ್ ‌ಸದ್ದು ಕೇಳಿಸಿತು.

ಶಿಲ್ಪಾ ಬಾಗಿಲು ತೆರೆದಾಗ ಎದುರು ಒಬ್ಬ ವ್ಯಕ್ತಿ ನಿಂತಿದ್ದ. ಅವನು, “ನಮಸ್ಕಾರ ಮೇಡಂ,” ಎಂದು ಹೇಳಿದ.

“ನನಗೆ ನಿಮ್ಮ ಪರಿಚಯ ಆಗಲಿಲ್ಲ. ಆದರೆ ನಿಮ್ಮನ್ನು ಮೊದಲು ಎಲ್ಲೋ ನೋಡಿದ ನೆನಪು….. ಬಂದಿರೊ ಕೆಲಸ ಏನು ಹೇಳಿ. ಪತಿ ಈಗ ಮನೆಯಲ್ಲಿಲ್ಲ.”

“ನನಗೆ ನಿಮ್ಮ ಪತಿಯ ಜೊತೆ ಮಾತನಾಡುವ ಕೆಲಸ ಇಲ್ಲ. ನಿಮ್ಮೊಂದಿಗೆ ಮಾತನಾಡಬೇಕಿತ್ತು.”

“ನನ್ನೊಂದಿಗೆ….. ನನ್ನ ಜೊತೆ ಮಾತನಾಡುವುದು ಅಂಥದ್ದೇನಿದೆ?”

“ಮೇಡಂ, ನಿಮ್ಮ ಹೊಟ್ಟೆಯಲ್ಲಿ  ಮಗು ಬೆಳೀತಿದೆಯಲ್ಲ…… ಅದು ನನ್ನದು!”

“ಏನು ಮಾತಾಡುತ್ತಿರುವೆ? ಗೆಟ್‌ ಲಾಸ್ಟ್,” ಎಂದು ಹೇಳುತ್ತಾ ಶಿಲ್ಪಾ ಬಾಗಿಲು ಬಂದ್‌ ಮಾಡಲು ಪ್ರಯತ್ನಿಸಿದಳು.

ಆ ವ್ಯಕ್ತಿ ಕೈಯಿಂದ ಬಾಗಿಲು ಒತ್ತಿ ಹಿಡಿದು ಹೇಳಿದ, “ಈಗ ನನ್ನ ಮಾತನ್ನು ಗಮನವಿಟ್ಟು ಕೇಳಿಸಿಕೊಳ್ಳಿ. ಇಲ್ಲದಿದ್ದರೆ ಮುಂದೆ ಎಲ್ಲರೆದುರು ಅವಮಾನ ಅನುಭವಿಸಬೇಕಾಗಿ ಬರುತ್ತದೆ. ಅಮರ್‌ ಅಪ್ಪನಾಗುವ ಖುಷಿಯಲ್ಲಿ ಭಾರಿ ಪಾರ್ಟಿ ಕೊಡ್ತಿದಾರೆ. ನಾನು ಪಾರ್ಟಿಯ ಮಧ್ಯದಲ್ಲಿ ಬಂದು ಹುಟ್ಟಲಿರುವ ಮಗು ಅಮರ್‌ ಅವರದ್ದಲ್ಲ, ನನ್ನದು ಎಂದು ಹೇಳಬೇಕಾಗುತ್ತದೆ. ಅವರ ಪುರುಷತ್ವದ ಸಕಲ ವಿವರ ಬಹಿರಂಗವಾದರೆ ಏನಾಗುತ್ತದೆ ಎಂಬುದನ್ನು ಒಮ್ಮೆ ಕಲ್ಪನೆ ಮಾಡಿಕೊಳ್ಳಿ.”

ಶಿಲ್ಪಾ ಮತ್ತು ಅಮರ್‌ ಇಬ್ಬರೂ ಐವಿಎಫ್‌ ವಿಷಯನ್ನು ಬಚ್ಚಿಟ್ಟಿದ್ದರು. ಹೀಗಾಗಿ ಅವಳು ಹೆದರಿಕೆಯಿಂದ, “ನಿನಗೇನು ಬೇಕಾಗಿದೆ? ನಮಗೆ ತೊಂದರೆ ಕೊಟ್ಟು ನಿನಗೇನು ಸಿಗುತ್ತದೆ?” ಎಂದು ಕೇಳಿದಳು.

blackmale2

“ನನಗೆ ಬೇರೇನೂ ಬೇಕಿಲ್ಲ. ಕೇವಲ 2 ಲಕ್ಷ ರೂ. ಕೊಟ್ಟುಬಿಡಿ. ನಾನು ಬಾಯಿ ಮುಚ್ಚಿಕೊಂಡು ಸುಮ್ಮನಿದ್ದುಬಿಡ್ತೀನಿ.”

“ಅಷ್ಟೊಂದು ದೊಡ್ಡ ಮೊತ್ತ ನಿನಗೆ ಕೊಡಲು ಆಗುವುದಿಲ್ಲ.”

“ನೋಡಿ, ಇವತ್ತಲ್ಲ ನಾಳೆ ನೀವು ನನಗೆ ಹಣ ಕೊಡಲೇಬೇಕಾಗುತ್ತದೆ. ಅಂದಹಾಗೆ ನಾನು ರಾತ್ರಿ ನಡೆಯುವ ಪಾರ್ಟಿಗೆ ಬರಬೇಕಾ ಅಥವಾ ಬೇಡವಾ? ನೀವೇ ತಿಳಿಸಿ.”

ಶಿಲ್ಪಾ ಸ್ವಲ್ಪ ಹೊತ್ತು ಯೋಚಿಸಿ, “ನನ್ನ ಬಳಿ ಈಗ 2000 ರೂ. ಮಾತ್ರ ಇದೆ. ಅದನ್ನೇ ನಿಮಗೆ ಕೊಡುತ್ತಿರುವೆ,” ಎಂದಳು.

“ಸರಿ ಸರಿ…. ಈಗ ಅಷ್ಟೇ ಕೊಡಿ. ಉಳಿದ ಮೊತ್ತವನ್ನು ಒಂದೇ ಕಂತಿನಲ್ಲಿ ಕೊಡಬೇಕಾಗುತ್ತದೆ. ನಿಮ್ಮ ಡೆಲಿವರಿಗೂ ಮೊದಲು ಪೂರ್ತಿ ಹಣ ನನ್ನ ಕೈಗೆ ಬರಬೇಕು……”

ಶಿಲ್ಪಾ ಆ ವ್ಯಕ್ತಿಯ ಕೈಗೆ 2000 ರೂ. ಕೊಡುತ್ತಾ, “ಈಗ ಇದನ್ನು ಇಟ್ಟುಕೊಳ್ಳಿ. ಉಳಿದ ಹಣಕ್ಕಾಗಿ ನಾನು ಅಮರ್‌ ಜೊತೆ ಮಾತಾಡ್ತೀನಿ,” ಎಂದು ಹೇಳಿದಳು.

“ಸರಿ ಸರಿ…. 2 ದಿನ ಬಿಟ್ಟು ನಾನು ಪುನಃ ಬರ್ತೀನಿ.”

ಆ ರಾತ್ರಿ ಪಾರ್ಟಿಯ ಬಳಿಕ ಶಿಲ್ಪಾ ಅಮರ್‌ ಗೆ ಬ್ಲ್ಯಾಕ್‌ ಮೇಲರ್‌ ಹೇಳಿದ ಮಾತುಗಳನ್ನು ತಿಳಿಸಿದಳು.

“2 ಲಕ್ಷ ರೂ. ನಮಗೆ ದೊಡ್ಡ ಮೊತ್ತ ಅಷ್ಟು ಹಣವನ್ನು ಎಲ್ಲಿಂದ ತರುವುದು? ಅದಕ್ಕಾಗಿ ನಾನು ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಇದು ಬ್ಲ್ಯಾಕ್‌ ಮೇಲಿಂಗ್‌ ವಿಷಯ. ಆ ವ್ಯಕ್ತಿಗೆ ನಮ್ಮ ವಿಳಾಸ ಕೊಟ್ಟವರಾರು?”

“ಆ ವ್ಯಕ್ತಿಯನ್ನು ನಾನು ಡಾಕ್ಟರ್‌ ಕ್ಲಿನಿಕ್‌ನಲ್ಲಿ ನೋಡಿದ ನೆನಪು.”

“ಡಾಕ್ಟರ್‌ ಹೀಗೆ ಮಾಡುವುದಿಲ್ಲ. ಆದರೂ ಅವರ ಜೊತೆ ಒಂದು ಸಲ ಮಾತಾಡ್ತೀನಿ.”

ಮರುದಿನ ಅಮರ್‌ ಡಾಕ್ಟರ್‌ ಹತ್ತಿರ ಹೋದಾಗ ಅವರು, “ನಾವು ಇಂತಹ ವಿಷಯಗಳನ್ನು ಗುಪ್ತವಾಗಿಡುತ್ತೇವೆ. ಅದಕ್ಕಾಗಿ ನಾವು 3 ಪ್ರಮಾಣ ಪತ್ರಗಳನ್ನು ಸಿದ್ಧಪಡಿಸುತ್ತೇವೆ. ಮೊದಲನೆಯದು, ಐವಿಎಫ್‌ಗಾಗಿ ನಿಮ್ಮಿಬ್ಬರ ಒಪ್ಪಿಗೆ. ಎರಡನೆಯದು ನೀವು ಡೋನರ್‌ ಬಗ್ಗೆ ಯಾವುದೇ ಮಾಹಿತಿ ಕೇಳಬಾರದು ಎನ್ನುವುದರ ಕುರಿತು. ಆಕಸ್ಮಿಕವಾಗಿ ನಿಮಗೆ ಈ ಮಾಹಿತಿ ಗೊತ್ತಾಗಿ ಹೋದರೆ ಅದನ್ನು ನೀವು ಬೇರೆ ಯಾರಿಗೂ ತಿಳಿಸಬಾರದು ಹಾಗೂ ನಿಮ್ಮ ಮಗುವಿಗೆ ಡೋನರ್‌ ನ ಆಸ್ತಿಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ.”

“ಹೌದು, ನಮಗಿದು ನೆನಪಿದೆ. ಆದರೆ ಮೂರನೇ ಪ್ರಮಾಣ ಪತ್ರ ಯಾವುದು?”

“ನಾವು ಅದನ್ನು ಡೋನರ್‌ ನಿಂದ ತೆಗೆದುಕೊಳ್ಳುತ್ತೇವೆ. ಅದೇನೆಂದರೆ, ನಾನು ನನ್ನ ವೀರ್ಯವನ್ನು ಸ್ವಒಪ್ಪಿಗೆಯಿಂದ ನೀಡುತ್ತಿದ್ದೇನೆ ಹಾಗೂ ಅದನ್ನು ಯಾರಿಗೆ ಕೊಡಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲ. ಹಾಗೊಂದು ವೇಳೆ ಆ ವಿಷಯ ಗೊತ್ತಾದರೆ ಅದನ್ನು ಯಾರಿಗೂ ತಿಳಿಸುವುದಿಲ್ಲ  ಹಾಗೂ ಹುಟ್ಟಲಿರುವ ಮಗುವಿನ ಮೇಲೆ ತನಗೆ ಯಾವುದೇ ಹಕ್ಕು ಇಲ್ಲ, ಎಂಬುದೇ ಈ ಮೂರನೇ ಪ್ರಮಾಣ ಪತ್ರವಾಗಿದೆ.”

“ಆದರೆ ಶಿಲ್ಪಾ ಆ ವ್ಯಕ್ತಿಯನ್ನು ತಾನು ಮೊದಲು ನಿಮ್ಮ ಕ್ಲಿನಿಕ್‌ ನಲ್ಲಿ ನೋಡಿದ್ದಾಗಿ ಹೇಳುತ್ತಿದ್ದಾಳೆ. ನಿಮ್ಮ ಯಾರಾದರೂ ಸಿಬ್ಬಂದಿ ಆ ವ್ಯಕ್ತಿಯ ಜೊತೆ ಸೇರಿಕೊಂಡಿರಬಹುದೇ….?”

“ನಾವು ಸಂಪೂರ್ಣ ಎಚ್ಚರಿಕೆ ವಹಿಸುತ್ತೇವೆ. ಆದರೆ ಸ್ವಾರ್ಥದ ಕಾರಣದಿಂದ ಅದು ಲೀಕ್‌ ಆಗುವ ಸಾಧ್ಯತೆಯೂ ಇರುತ್ತದೆ,” ವೈದ್ಯರು ಹೇಳಿದರು.

“ನಮ್ಮಿಂದಾಗಿರುವ ತಪ್ಪು ಏನೆಂದರೆ, ನಾವು ಯಾರಿಗೂ ಈ ತಂತ್ರಜ್ಞಾನದ ಬಗೆಗೆ ಹೇಳದೆ, ಅದು ನಮ್ಮದೇ ಮಗು ಎಂದು ಹೇಳಿದ್ದೇವೆ,” ಅಮರ್‌ ಹೇಳಿದ.

“ನೀವು ಮುಂದೆಯೂ ಇದನ್ನು ಹೇಳಬಹುದು.”

“ಇಲ್ಲ ಡಾಕ್ಟರ್‌. ಇಟ್‌ ಈಸ್ ಟೂ ಲೇಟ್‌…… ಅವನು ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದಾನೆ. ಬಹುಶಃ ನಾವು ಹಣ ಕೊಡಲೇಬೇಕಾಗಿ ಬರುತ್ತದೇನೋ?’

‘ಡಾಕ್ಟರ್‌ ಸ್ವಲ್ಪ ಹೊತ್ತು ಯೋಚಿಸಿ ಬಳಿಕ ಹೇಳಿದರು, “ನೀವು ಆ ವ್ಯಕ್ತಿಗೆ ಒಂದು ರೂಪಾಯಿ ಕೂಡ ಕೊಡಬೇಡಿ. ನೀವು ಅದರಲ್ಲೂ ಶಿಲ್ಪಾ ಬಹಳ ಎಚ್ಚರಿಕೆಯಿಂದ ಕಾರ್ಯ ಪ್ರವೃತ್ತರಾಗಬೇಕು, ಜೊತೆಗೆ ಒಂದಿಷ್ಟು ಸಾಹಸ ಮನೋಭಾವ ತೋರಿಸಬೇಕು.”

“ಅದ್ಹೇಗೆ?”

“ನೋಡಿ, ನಿಮಗಿರೋದು ಎರಡೇ ದಾರಿಗಳು. ಮೊದಲನೆಯದು ಅಬಾರ್ಶನ್‌ ಮಾಡಿಕೊಳ್ಳೋದು ಅಥವಾ……”

“ಪ್ಲೀಸ್‌ ಡಾಕ್ಟರ್‌….. ಅಬಾರ್ಶನ್‌ ಮಾತು ಆಡಬೇಡಿ. ಶಿಲ್ಪಾ ಮನಸ್ಸು ಚೂರು ಚೂರಾಗುತ್ತದೆ.”

“ನಾನೂ ಕೂಡ ಅದನ್ನೇ ಬಯಸ್ತೀನಿ. ಆ ವ್ಯಕ್ತಿ ಹಣಕ್ಕಾಗಿ ಮತ್ತೆ ಬಂದರೆ ಹೆದರಬೇಡಿ. ಧೈರ್ಯದಿಂದ ಅವನನ್ನು ಎದುರಿಸಿ ಅಂತಾ ಶಿಲ್ಪಾಗೆ ಹೇಳಬೇಕು,” ಎಂದು ಡಾಕ್ಟರ್‌ ಅಮರ್‌ ಗೆ ಸಲಹೆ ನೀಡಿದರು.

“ಅದು ಹೇಗೆ?”

“ಅವನು ಮುಂದಿನ ಸಲ ಬಂದಾಗ ಶಿಲ್ಪಾ ಅವನ ಮುಂದೆ ಏನು ಹೇಳಬೇಕೆಂದರೆ, ನನಗೀಗ ಗೊತ್ತಾಗಿರುವ ವಿಚಾರವೆಂದರೆ, ನನ್ನನ್ನು ನೀನೇ ರೇಪ್‌ ಮಾಡಿದ್ದೆ. ಅದರ ಫಲಶ್ರುತಿ ಎಂಬಂತೆ ನಾನು ಪ್ರೆಗ್ನೆಂಟ್‌ ಆಗಿದ್ದೇನೆ. ಈ ವಿಷಯವನ್ನು ನಾನು ಪೊಲೀಸರಿಗೆ ತಿಳಿಸಲೆಂದು ಹೊರಟಿರುವೆ. ಈ ಮಾತನ್ನು ಅವನಿಗೆ ಬೆದರಿಕೆ ಹಾಕುತ್ತಾ ಬೋಲ್ಡ್ ಆಗಿ ಹೇಳಬೇಕು.”

2 ದಿನಗಳ ಬಳಿಕ ಆ ವ್ಯಕ್ತಿ ಹಣ ತೆಗೆದುಕೊಂಡು ಹೋಗಲು ಬರುವವನಿದ್ದ. ಶಿಲ್ಪಾ ಆ ದಿನ ಅಮರ್‌ ಗೆ ರಜೆ ತೆಗೆದುಕೊಳ್ಳಲು ಹೇಳಿದಳು. ಏಕೆಂದರೆ ಆ ವ್ಯಕ್ತಿ ತನ್ನ ಮೇಲೆ ಹಲ್ಲೇ ಮಾಡಿದರೆ ಏನು ಮಾಡುವುದು ಎಂಬ ಆತಂಕ ಅವಳಿಗಿತ್ತು.

ಅವರು ಅಂದುಕೊಂಡಂತೆ ಸರಿಯಾಗಿ 2 ದಿನಕ್ಕೆ ಬ್ಲ್ಯಾಕ್‌ ಮೇಲರ್‌ ಅವರ ಮನೆಗೆ ಬಂದ. ಆಗ ಶಿಲ್ಪಾ ಆ ವ್ಯಕ್ತಿಗೆ ಸ್ವಲ್ಪ ಎತ್ತರದ ಧ್ವನಿಯಲ್ಲಿ ಹೇಳಿದಳು, “ಹೌದು ನನಗೆ ಗೊತ್ತಾಗಿರುವ ವಿಷಯವೆಂದರೆ, ನನ್ನ ಗರ್ಭದಲ್ಲಿ ನಿನ್ನದೇ ಅಂಶ ಇದೆ. ಆ ದಿನ ನೀನೇ ನನ್ನನ್ನು ಬಲಾತ್ಕಾರ ಮಾಡಿದ್ದೆ. ಅದರ ಪರಿಣಾಮವೇ ಈ ಗರ್ಭ. ಅತ್ಯಾಚಾರ ಮಾಡಿದ ದಿನದಂದೂ ನೀನು ಮುಖವಾಡದಿಂದ ಮುಖ ಮುಚ್ಚಿಕೊಂಡಿದ್ದೆ. ಅಂದು ನಾನು ನಿನ್ನನ್ನು ಗುರುತಿಸಲು ಆಗಿರಲಿಲ್ಲ. ಇಂದು ನೀನೇ ಸ್ವತಃ ನನ್ನ ಮುಂದೆ ಬಂದಿರುವೆ. ಇದಕ್ಕಿಂತ ಒಳ್ಳೆಯ ವಿಷಯ ಏನಾಗಿರಲು ಸಾಧ್ಯ? ನಾನು ಅಂದು ನಿನಗೆ ಹಣ ಕೊಡುವಾಗ, ಮೊಬೈಲ್ ಫೋನ್‌ ನಿಂದ ನಿನ್ನ ಫೋಟೋ ತೆಗೆದಿಟ್ಟಿರುವೆ. ಈಗ ನಿನ್ನನ್ನು ಸುಲಭವಾಗಿ ಪೊಲೀಸರಿಗೆ ಒಪ್ಪಿಸಬಹುದು.”

ತನ್ನ ಉಪಾಯ ತಿರುವುಮುರುವಾದದ್ದನ್ನು ಕಂಡು ಆ ವ್ಯಕ್ತಿ ಗೋಗರೆಯತೊಡಗಿದ, “ಮೇಡಂ, ನೀವು ಹೀಗೆ ಮಾಡಬೇಡಿ. ನಾನು ಜೈಲಿಗೆ ಹೋಗಬೇಕಾಗುತ್ತದೆ. ನನಗೂ ಹೆಂಡತಿ ಮಕ್ಕಳು ಇದ್ದಾರೆ.”

“ನೀನೇಕೆ ದುಡಿದು ಹಣ ಗಳಿಸಬಾರದು? ಮೊದಲು ನನ್ನ 2000 ರೂ. ವಾಪಸ್‌ ಕೊಡು.”

ಆ ವ್ಯಕ್ತಿ ತನ್ನ ಜೇಬಿನಿಂದ 500 ರೂ.ಗಳ ಒಂದು ನೋಟನ್ನು ಶಿಲ್ಪಾಳಿಗೆ ತೋರಿಸುತ್ತಾ ಹೇಳಿದ, “ಮೇಡಂ, ನನ್ನ ಬಳಿ ಈಗ ಇರೋದು ಇಷ್ಟೇ ಇದನ್ನು ಇಟ್ಟುಕೊಳ್ಳಿ. ಉಳಿದ ಹಣವನ್ನು ನಾನು ಬೇಗ ವಾಪಸ್‌ ಮಾಡ್ತೀನಿ.”

ಶಿಲ್ಪಾ ಅವನಿಗೆ ಆ ನೋಟನ್ನು ವಾಪಸ್‌ ಮಾಡುತ್ತಾ ಹೇಳಿದಳು, “ಇದರಿಂದ ನಿನ್ನ ಮಕ್ಕಳಿಗೆ ಆಟಿಕೆ ಹಾಗೂ ಸಿಹಿತಿಂಡಿ ಕೊಡಿಸು. ಅದು ನನ್ನ ಪರವಾಗಿ. ಇನ್ನು ಮುಂದೆ ಈ ರೀತಿಯ ತಪ್ಪು ಕೆಲಸ ಮಾಡುವುದಿಲ್ಲವೆಂದು ನನ್ನ ಮುಂದೆ ಪ್ರಮಾಣ ಮಾಡು.”

ನೋಟು ವಾಪಸ್‌ ಜೇಬಿಗೆ ಹಾಕಿಕೊಂಡು ಬ್ಲ್ಯಾಕ್‌ ಮೇಲರ್‌ ಅಲ್ಲಿಂದ ಕಾಲ್ಕಿತ್ತ.

ಅವನು ಹೋದ ಬಳಿಕ ಶಿಲ್ಪಾ ಪತಿಯನ್ನು ಕೇಳಿದಳು, “ನೀವು ನಿಜವಾಗಿಯೂ ಫೋನ್‌ ಮಾಡಿ ತಿಳಿಸಿದ್ದೀರಾ?”

“ಇಲ್ಲ, ರೇಪ್‌ ಬಗ್ಗೆ ಒಂದು ಸುಳ್ಳು ನೀನು ಹೇಳಿದೆ. ಎರಡನೇ ಸುಳ್ಳು ನಾನು ಹೇಳಿದೆ. ಅಂತೂ ಬಹುದೊಡ್ಡ ಅವಾಂತರವೊಂದು ತಪ್ಪಿತು,” ಎಂದು ಇಬ್ಬರೂ ಜೋರಾಗಿ ನಕ್ಕರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ