“ನೋಡಿದೆಯಾ? ನಿನ್ನ ಗುರು ಬಾಬಾ ಕೃಷ್ಣ ಕದೀಮನ ಕುತಂತ್ರವನ್ನು…… ನನಗೆ ಆ ಸ್ವಾಮಿ ಯೋಗಿಯೆಂದಲ್ಲ ಭೋಗಿ ಎಂಬಂತೆ ಕಂಡು ಬರುತ್ತಾರೆ ಎಂದು ನಾನು ನಿನಗೆ ಅನೇಕ ಸಲ ಹೇಳ್ತಿದ್ದೆ. ಅದು ಇಂದು ಸಾಬೀತಾಗಿಯೇ ಹೋಯಿತು. ಪ್ರತಿಯೊಂದು ಟಿ.ವಿ. ಚಾನೆಲಿನಲ್ಲೂ ಅವನ ರಾಸಲೀಲೆಯ ಬಗ್ಗೆಯೇ ಚರ್ಚೆ ನಡೀತಿದೆ,” ಎಂದು ಮನೆಯೊಳಗೆ ಕಾಲಿಡುತ್ತಿದ್ದಂತೆ ದೇವರಾಜ್‌ ತನ್ನ ಪತ್ನಿ ಸುಚಿತ್ರಾಳ ಗಮನ ಸೆಳೆಯುತ್ತ ಹೇಳಿದ.

`ನಿಮಗೆ ಅದು ಇಂದು ತಿಳಿಯಿತು. ನಾನು ಆ ರಹಸ್ಯವನ್ನು ಮೊದಲಿನಿಂದಲೂ ಬಲ್ಲೆ….. ಕೇವಲ ತಿಳಿದಿಲ್ಲ, ಅದರ ನೋವನ್ನು ಅನುಭವಿಸಿದಳು,’ ಎಂದು ಯೋಚಿಸುತ್ತಾ ಸುಚಿತ್ರಾಳಿಗೆ ಬವಳಿ ಬಂದಂತಾಗಿತ್ತು. ಆ ಒಂದು ಕಹಿ ನೆನಪುಗಳ ನಡುವೆಯೂ ಎಷ್ಟೊಂದು ನೆಮ್ಮದಿಯೆನಿಸುತ್ತಿತ್ತು. ಇದನ್ನು ದೇವರಾಜ್‌ ಗಮನಿಸಲಿಲ್ಲ. ಅವನು ಗಡಿಬಿಡಿಯಲ್ಲಿ ಶೂ ಸಾಕ್ಸ್ ಕಳಚಿ, ಟಿ.ವಿ. ಆನ್ ಮಾಡಿಕೊಂಡು ಸೋಫಾದಲ್ಲಿ ಆಸೀನನಾದ.

“ಬಾಬಾನ ಮೇಲೆ ಬಿತ್ತು ಬರಸಿಡಿಲು….. ಧಾರ್ಮಿಕ ಗುರುವಿನಿಂದ ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ. ಆರೋಪಿ ನಾಪತ್ತೆ, ಪೊಲೀಸರಿಂದ ಬಾಬಾ ಕೃಷ್ಣ ಕದೀಮನ ಆಶ್ರಮಕ್ಕೆ ಸೀಲು!” ಪ್ರತಿಯೊಂದು ಚಾನೆಲಿನಲ್ಲೂ ಹೆಚ್ಚು ಕಡಿಮೆ ಇದೇ ಬ್ರೇಕಿಂಗ್‌ ನ್ಯೂಸ್‌ ಬರುತ್ತಿತ್ತು. ಅಡುಗೆಮನೆಯಲ್ಲಿ ಚಹಾ ತಯಾರಿಸುತ್ತಿದ್ದ ಸುಚಿತ್ರಾಳ ಕಿವಿಗಳು ಅತ್ತ ಕಡೆಯೇ ನೆಟ್ಟಿದ್ದವು. ದೇವರಾಜ್‌ ಚಹಾ ಗುಟುಕರಿಸುತ್ತ ಹಾಸಿಗೆಯ ಮೇಲೆ ಒರಗಿದ.

ಇಂದು ಸುಚಿತ್ರಾ ತನ್ನನ್ನು ತಾನು ಅತ್ಯಂತ ನಿರಾಳ ಎಂಬಂತೆ ಭಾವಿಸುತ್ತಿದ್ದಳು. ಅನೇಕ ವರ್ಷಗಳಿಂದ ತನ್ನ ತಲೆಯ ಮೇಲೆ ಹೊತ್ತು ತಿರುಗುತ್ತಿದ್ದ ಬಹು ದೊಡ್ಡ ಭಾರವೊಂದನ್ನು ಇಳಿಸಿದಂತೆ ಭಾಸವಾಗುತ್ತಿತ್ತು. ಈಗ ಅವಳಿಗೆ ಆ ಭಯಾನಕ ಫೋನ್ ಕರೆಗಳಿಂದಲೂ ಮುಕ್ತಿ ಸಿಗಲಿದೆ ಎಂದೆನಿಸುತ್ತಿತ್ತು. ಯಾವುದಾದರೂ ಫೋನ್‌ ಬಂದರೆ ಸಾಕು, ಅವಳ ದೇಹ ಭಯದಿಂದ ಕಂಪಿಸುತ್ತಿತ್ತು.

ಕಣ್ಣು ಮುಚ್ಚಿಕೊಳ್ಳುತ್ತಿದ್ದಂತೆ ಸುಚಿತ್ರಾಳ ಕಣ್ರೆಪ್ಪೆಗಳ ಹಿಂದೆ ಬೇರೊಂದು ಲೋಕವೇ ಜೀವ ತಳೆಯಿತು. ಸುಮ್ಮನೆ ನಿಂತುಕೊಂಡಿದ್ದ ಸುಚಿತ್ರಾಳ ಸುತ್ತ ಭಾವನೆಗಳು ಸುತ್ತುವರಿಯತೊಡಗಿದವು. ಅದು ಹೇಗೆಂದರೆ ಪರ್ವತವೇ ಮರಗಳ ಮೇಲೆ ಬಂದು ಬಿದ್ದಂತೆ, ಅವಳು ತನ್ನ ಆಸುಪಾಸಿನ ಲೋಕದಿಂದ ಅದೃಶ್ಯಳಾಗಿಬಿಟ್ಟಳು. ನೆರಳಿನ ಈ ಲೋಕದಲ್ಲಿ ಅವಳ ಜೊತೆಗೆ ಸುದೀಪ್‌ ಇದ್ದಾನೆ. ಬಾಬಾನ ಆಶ್ರಮ ಮತ್ತು ಸೇವೆಯ ಹೆಸರಿನಲ್ಲಿ ದೇಹದ ಜೊತೆಗೆ ನಡೆಯುವ ಚೆಲ್ಲಾಟ. ಸುದೀಪ್‌ ಜೊತೆಗಿನ ಸ್ನೇಹ ಅವಳಿಗೆ ಕಾಲೇಜಿನ ದಿನಗಳಿಂದಲೇ ಆಗಿತ್ತು. ಅದನ್ನು ಸ್ನೇಹ ಎನ್ನದೆ ಪ್ರೀತಿ ಎಂದು ಹೇಳಿದರೆ ಹೆಚ್ಚು ಸೂಕ್ತವಾಗುತ್ತದೆ. ಅವರ ಕಾಲೇಜು ನಗರದ ಹೊರಭಾಗದಲ್ಲಿತ್ತು. ಅಲ್ಲಿಯೇ ಸಮೀಪದಲ್ಲಿ ಬಾಬಾ ಕೃಷ್ಣ ಕದೀಮರ ಆಶ್ರಮ ಕೂಡ ಇತ್ತು, ಹಸಿರು ಮರಗಳ ನಡುವೆ ಸುತ್ತುವರಿದಿದ್ದ ಆ ಆಶ್ರಮ ರಹಸ್ಯಮಯ ಎಂಬಂತೆ ಅನಿಸುತ್ತಿತ್ತು.

ಇಬ್ಬರೂ ಏಕಾಂತ ಅರಸುತ್ತ ಅತ್ತ ಕಡೆಯೇ ಹೋಗುತ್ತಿದ್ದರು. ಆ ಆಶ್ರಮದ ಎತ್ತರದ ಭವ್ಯ ದ್ವಾರ ಅವಳಿಗೆ ಬಹಳ ಆಕರ್ಷಿತಗೊಳಿಸಿತ್ತು. ಅವಳು ಒಳಗೆ ಹೋಗಿ ನೋಡಬೇಕೆಂದುಕೊಳ್ಳುತ್ತಿದ್ದಳು. ಆದರೆ ಕೇವಲ ಬಾಬಾನ ಭಕ್ತರಿಗೆ ಮಾತ್ರ ಆಶ್ರಮದಲ್ಲಿ ಪ್ರವೇಶಿಸಲು ಅವಕಾಶವಿತ್ತು.

ಸುಚಿತ್ರಾ ಸಾಮಾನ್ಯವಾಗಿ ಸುದೀಪ್‌ಗೆ ತನ್ನ ಮನಸ್ಸಿನ ಮಾತನ್ನು ಹೇಳುತ್ತಿದ್ದಳು. ಒಂದು ದಿನ ಸುದೀಪ್‌ ಅವಳನ್ನು ಆಶ್ರಮಕ್ಕೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದ.

ಸುದೀಪ್‌ನ ಅತ್ತಿಗೆ ಬಾಬಾನ ಆಶ್ರಮಕ್ಕೆ ಆಗಾಗ ಹೋಗುತ್ತಿದ್ದರು. ಅವರು ಬಾಬಾನ ಭಕ್ತೆಯಂತಾಗಿ ಬಿಟ್ಟಿದ್ದರು. ಅಲ್ಲಿ ನಡೆಯುತ್ತಿದ್ದ ಅನೇಕ ಕೆಲಸಗಳಿಗೆ ಸಹಕರಿಸಿ ತನ್ನದೇ ಆದ ರೀತಿಯಲ್ಲಿ ಆಶ್ರಮದ ಸೇವೆ ಮಾಡುತ್ತಿದ್ದರು. ಅದೊಂದು ದಿನ ಅತ್ತಿಗೆ ಜೊತೆ ಮಾತಾಡಿ ಸುಚಿತ್ರಾಳನ್ನು ಆಶ್ರಮಕ್ಕೆ ಕರೆದುಕೊಂಡು ಹೋದ.

ಆಶ್ರಮದ ಮುಖ್ಯ ದ್ವಾರದಲ್ಲಿ ಸುರಕ್ಷಿತ ವ್ಯವಸ್ಥೆ ಅತ್ಯಂತ ಬಿಗಿಯಾಗಿತ್ತು. ಹಲವು ಹಂತಗಳ ಪರೀಕ್ಷೆಯ ಬಳಿಕ ಅವರೀಗ ಒಂದು ದೊಡ್ಡ ಸರ್ಕಲ್ ನಂತಹ ಜಾಗದಲ್ಲಿ ನಿಂತಿದ್ದರು. ಸುಚಿತ್ರಾ ಎಲ್ಲೆಡೆಯೂ ಕಣ್ಣರಳಿಸಿ ನೋಡುತ್ತಿದ್ದಳು. ಆಶ್ರಮದ ಒಂದು ಬಹುದೊಡ್ಡ ಜಾಗದಲ್ಲಿ ತರಕಾರಿ ಬೆಳೆಯಲಾಗಿತ್ತು. ಮತ್ತೊಂದೆಡೆ ಹಣ್ಣಿನ ಗಿಡಗಳು ಕೂಡ ಫಲ ಬಿಟ್ಟು ಕಂಗೊಳಿಸುತ್ತಿದ್ದವು. ಅನೇಕ ಭಕ್ತರು `ಸೇವಾಕರ್ತರು’ ಎಂದು ಕರೆಸಿಕೊಳ್ಳುತ್ತ, ತೋಟದ ಅನೇಕ ಕೆಲಸಗಳಲ್ಲಿ ಮಗ್ನರಾಗಿದ್ದರು. ಕೆಲವರು ತರಕಾರಿಗಳನ್ನು ಕಿತ್ತುಕೊಂಡು ಬಂದು ಬುಟ್ಟಿಗೆ ಸುರಿಯುತ್ತಿದ್ದರು. ಮತ್ತೆ ಕೆಲವರು ಅವನ್ನು ತಕ್ಕಡಿಗೆ ಹಾಕಿ ತೂಗಿ ಕವರಿನೊಳಕ್ಕೆ ಹಾಕಿ ಪ್ಯಾಕ್ ಮಾಡುತ್ತಿದ್ದರು. ಮತ್ತೆ ಕೆಲವರು ಹಣ್ಣುಗಳನ್ನು ಕೂಡ ಅದೇ ರೀತಿಯಲ್ಲಿ ಪ್ಯಾಕ್‌ ಮಾಡುತ್ತಿದ್ದರು. ಸುದೀಪ್‌ನ ಅತ್ತಿಗೆ ಹೇಳಿದ್ದೇನೆಂದರೆ ಭಕ್ತರು ತರಕಾರಿ ಹಾಗೂ ಹಣ್ಣುಗಳನ್ನು ಪ್ರಸಾದ ಎಂಬತೆ ಖರೀದಿಸಿಕೊಂಡು ಹೋಗುತ್ತಾರೆ. ಅವರು ಸ್ವತಃ ತಮ್ಮ ಮನೆಗೆ ಹಣ್ಣು ತರಕಾರಿಗಳನ್ನು ಇಲ್ಲಿಯೇ ಖರೀದಿಸಿಕೊಂಡು ಹೋಗುತ್ತಾರೆ ಎನ್ನುವುದನ್ನು ಸುಚಿತ್ರಾ ಗಮನಿಸಿದಳು.

ಒಂದು ದೊಡ್ಡ ಅಡುಗೆಮನೆಯಲ್ಲಿ ಕೆಲವು ಮಹಿಳೆಯರು ಆಶ್ರಮದಲ್ಲಿರುವ ಕೆಲವರಿಗಾಗಿ ಆಹಾರ ತಯಾರಿಸುವುದರಲ್ಲಿ ಮಗ್ನರಾಗಿದ್ದರು. ಮತ್ತೆ ಕೆಲವರು ಊಟ ಬಡಿಸುತ್ತಿದ್ದರು. ಇನ್ನು ಕೆಲವರು ಉಂಡ ತಟ್ಟೆಗಳನ್ನು ಸ್ವಚ್ಛಗೊಳಿಸಿ ತಮ್ಮನ್ನು ತಾವು ಧನ್ಯರೆಂದು ಭಾವಿಸುತ್ತಿದ್ದರು.

ಅಲ್ಲಿ ಜನರ ನಡುವೆ ಯಾವುದೇ ಭೇದಭಾವ ಇಲ್ಲ ಎನ್ನುವುದು ಸುಚಿತ್ರಾಳ ಗಮನಕ್ಕೆ ಬಂದಿತ್ತು. ಅದೇ ಕಾರಣದಿಂದ ಈ ಆಶ್ರಮದ ಬಾಬಾ ಬಹಳ ಪ್ರಸಿದ್ಧಿ ಪಡೆದಿರಬಹುದು ಎನ್ನುವುದು ಅವಳಿಗೆ ತಿಳಿಯಿತು. ಸುಚಿತ್ರಾಳಿಗೆ ಆಶ್ರಮದ ಮೂಲೆಯಲ್ಲಿ ಗುಹೆಯಂತಹ ಕೋಣೆಯೊಂದು ಕಾಣಿಸಿತು. ಅದು ಬಾಬಾರ ವಿಶೇಷ ಕೋಣೆಯೆಂದು ಸುದೀಪ್‌ನ ಅತ್ತಿಗೆ ಹೇಳಿದರು. ಆಶ್ರಮಕ್ಕೆ ಬಂದಾಗೆಲ್ಲ ಅವರು ಇದೇ ಕೋಣೆಯಲ್ಲಿ ಇರುತ್ತಾರೆ. ಹೀಗಾಗಿ ಅಲ್ಲಿಗೆ ಹೋಗಲು ಯಾರಿಗೂ ಅನುಮತಿ ಇಲ್ಲವೆಂದೂ ಅವರು ಸುಚಿತ್ರಾಗೆ ತಿಳಿಸಿದರು.

ಸುದೀಪ್‌ನ ಅತ್ತಿಗೆಗೆ ಅಲ್ಲಿನ ಸೆಕ್ಯುರಿಟಿಯವರೆಲ್ಲ ಪರಿಚಯದವರಾಗಿದ್ದ ಕಾರಣದಿಂದ, ಸುದೀಪ್‌ ಹಾಗೂ ಸುಚಿತ್ರಾ ಆಶ್ರಮದ ಮೂಲೆ ಮೂಲೆಯನ್ನೆಲ್ಲ ಸುತ್ತಾಡಿ ನೋಡಿದರು. ಕೆಲವು ಕಡೆ ದಟ್ಟ ಮರಗಳ ನಡುವೆ ಕೆಲವು ಕಲಾತ್ಮಕ ಗುಡಿಸಲುಗಳನ್ನು ನಿರ್ಮಿಸಲಾಗಿತ್ತು. ಅಲ್ಲಿನ ಏಕಾಂತತೆಯ ಲಾಭ ಪಡೆದು ಸುದೀಪ್‌ ಸುಚಿತ್ರಾಳನ್ನು ಚುಂಬಿಸಿದ್ದ.

ಸುಚಿತ್ರಾಳಿಗೆ ಆಶ್ರಮದ ವ್ಯವಸ್ಥೆ ಬಹಳ ಪ್ರಭಾವಿತಗೊಳಿಸಿತ್ತು. ಮುಂದೆಯೂ ಇಲ್ಲಿಗೆ ಬರುತ್ತಿರಬೇಕೆಂದು ಸುಚಿತ್ರಾ ಮನಸ್ಸಿನಲ್ಲಿಯೇ ನಿರ್ಧರಿಸಿದಳು. ಸುದೀಪ್‌ ಜೊತೆಗೆ ಕೆಲವು ಏಕಾಂತದ ಕ್ಷಣಗಳನ್ನು ಕಳೆಯಲು ಸಾಧ್ಯವಾಗುತ್ತದೆ ಎಂದು ಅವಳು ಯೋಚಿಸಿ ಅದರ ಬಗ್ಗೆ ಸುದೀಪ್‌ಗೆ ತಿಳಿಸಿದಳು.

“ಇದು ಆಶ್ರಮ. ಇದೇನು ಪಿಕ್ನಿಕ್‌ ಸ್ಪಾಟ್‌ ಅಲ್ಲ. ಯಾವಾಗ ಬೇಕಾದಾಗ, ಇಲ್ಲಿಗೆ ಬಂದು ನಮಗೆ ಬೇಕಾದ ಹಾಗೆ ಸುತ್ತಾಡಲು ಆಗುವುದಿಲ್ಲ. ಇಲ್ಲಿ ಸುರಕ್ಷತೆ ವ್ಯವಸ್ಥೆ ಎಷ್ಟು ಬಿಗಿಯಾಗಿದೆ ನೀನೇ ನೋಡಿದಿಯಲ್ಲ,” ಎಂದು ಹೇಳುತ್ತ ಅವಳ ಪ್ರಸ್ತಾಪವನ್ನು ತಿರಸ್ಕರಿಸಿದ.

“ನೀನು ಹೀಗೆ ಮಾಡಬಹುದು. ನಿನ್ನ ಅತ್ತಿಗೆ ಜೊತೆಗೆ ಬಾಬಾರ ಶಿಷ್ಯನಾಗಿ ಪ್ರತಿದಿನ ಅಲ್ಲದಿದ್ದರೂ ಆಗಾಗ ಆಶ್ರಮಕ್ಕೆ ಬರುತ್ತಿರಬಹುದು ಭೇಟಿಯಾಗುವ ಅವಕಾಶ ಸಿಕ್ಕರೆ ಸರಿ, ಇಲ್ಲದಿದ್ದರೆ ತಾಜಾ ಹಣ್ಣು ತರಕಾರಿಗಳಾದರೂ ಸಿಕ್ಕೇ ಸಿಗುತ್ತವೆ,” ಸುಚಿತ್ರಾ ಅವನನ್ನು ಪ್ರಚೋದಿಸಿದಳು.

ಆ ವಿಷಯ ಸುದೀಪ್‌ಗೂ ಹಿಡಿಸಿತು. ಅದೊಂದು ದಿನ ಸುದೀಪ್‌ ವಿಧಿ ಪ್ರಕಾರ, ಬಾಬಾ ಕೃಷ್ಣ ಕದೀಮರ ಶಿಷ್ಯನಾಗಿಬಿಟ್ಟ.

ಸುಚಿತ್ರಾ ಹಾಗೂ ಸುದೀಪ್‌ ಒಮ್ಮೊಮ್ಮೆ ಅವರ ಅತ್ತಿಗೆಯ ಜೊತೆಗೆ, ಮತ್ತೆ ಕೆಲವೊಮ್ಮೆ ತಾವಷ್ಟೇ ಆಶ್ರಮದೊಳಕ್ಕೆ ಪ್ರವೇಶಿಸುತ್ತಿದ್ದರು. ಇಬ್ಬರೂ ಬೇರೆಯವರ ಕಣ್ತಪ್ಪಿಸಿ ಗಿಡಗಂಟಿಗಳ ನಡುವೆ ಹೋಗಿ, ಕೆಲವು ನಿಮಿಷಗಳ ಕಾಲ ಏಕಾಂತದಲ್ಲಿ ಕಾಲ ಕಳೆದು ಪ್ರಸನ್ನ ಮನಸ್ಸಿನಿಂದ ವಾಪಸ್ಸಾಗುತ್ತಿದ್ದರು. ಜೊತೆಗೆ ಒಂದಿಷ್ಟು ಹಣ್ಣು ತರಕಾರಿಗಳನ್ನು ಕೂಡ ಕೊಂಡೊಯ್ಯುತ್ತಿದ್ದರು.

ಆಶ್ರಮದೊಳಗೆ ಬರುತ್ತಿದ್ದಾಗಿನಿಂದ ಆ ಆಶ್ರಮದ ಅನೇಕ ಶಾಖೆಗಳು ದೇಶದ ಬೇರೆ ಬೇರೆ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎನ್ನುವುದು ತಿಳಿದುಬಂತು. ವಿದೇಶದಲ್ಲೂ ಬಾಬಾರ ಅನುಯಾಯಿಗಳು ಇದ್ದಾರೆನ್ನುವುದು ಗೊತ್ತಾಯಿತು. ಅವರು ಬಾಬಾರನ್ನು ದೇವರಿಗಿಂತ ಹೆಚ್ಚು ಪ್ರೀತಿಸುತ್ತಾರೆಂದೂ ಹೆಚ್ಚಿನ ಮಾಹಿತಿ ತಿಳಿಯಿತು.

ಆಶ್ರಮದ ವತಿಯಿಂದ ಅನೇಕ ಸಾಮಾಜಿಕ ಕಾರ್ಯಗಳು ನಡೆಯುತ್ತಿರುವುದು ಅವರ ಅರಿವಿಗೆ ಬಂತು.

ಸುಚಿತ್ರಾಳ ಗಮನಕ್ಕೆ ಬಂದ ಮತ್ತೊಂದು ಸಂಗತಿಯೆಂದರೆ, ಅವರಿಬ್ಬರೂ ಸ್ವಾಮೀಜಿಯ ಬಗ್ಗೆ ತಿಳಿದುಕೊಳ್ಳಲು ಎಷ್ಟು ಪ್ರಯತ್ನಶೀಲರಾಗಿದ್ದರೂ ಅಷ್ಟೇ ಸುದೀಪ್‌ಗೆ ಸ್ವಾಮೀಜಿಯ ಕಡೆಗೆ ಒಲವು ಹೆಚ್ಚುತ್ತಾ ಹೊರಟಿರುವುದು ಗೊತ್ತಾಯಿತು.

ಈಗ ಅವರ ಮಾತಿನ ಕೇಂದ್ರಬಿಂದು ಸ್ವಾಮೀಜಿಗಳೇ ಆಗಿರುತ್ತಿದ್ದರು. ಮುಖ್ಯ ಸೇವಾಕರ್ತರು ಅವರಿಬ್ಬರ ನಿಷ್ಠೆ ಕಂಡು ಆಶ್ರಮಕ್ಕೆ ಸಂಬಂಧಪಟ್ಟ ಹಲವು ಜವಾಬ್ದಾರಿಗಳನ್ನು ಅವರಿಬ್ಬರಿಗೆ  ವಹಿಸಿಕೊಟ್ಟರು. ಇದರಿಂದಾಗಿ ಸುಚಿತ್ರಾ ಆಶ್ರಮದ ಪ್ರತಿಯೊಂದು ಕಡೆ ಹೋಗಿ ಬರುತ್ತಿದ್ದಳು.

ನೋಡು ನೋಡುತ್ತಿರುವಂತೆ ಅವರ ಕಾಲೇಜು ಶಿಕ್ಷಣ ಮುಗಿಯುತ್ತಾ ಬಂದಿತ್ತು. ಅಂತಿಮ ಪರೀಕ್ಷೆಯ ಟೈಮ್ ಟೇಬಲ್ ಕೂಡ ಬಂದಿತ್ತು.

ಇನ್ಮುಂದೆ ನಾವು ಅಭ್ಯಾಸದಲ್ಲಿ ಮಗ್ನರಾಗಬೇಕು. ಕೊನೆಗೊಂದು ಸಲ ಆಶ್ರಮಕ್ಕೆ ಹೋಗಿ ಬರೋಣವೇ?” ಸುಚಿತ್ರಾ ಎಡಗಣ್ಣನ್ನು ಹೊಡೆಯುತ್ತ ಹೇಳಿದಳು.

“ನಾಳೆ ಹೋಗೋಣ. ಬಾಬಾರ ಆಶೀರ್ವಾದ ಕೂಡ ತೆಗೆದುಕೊಳ್ಳೋದಿದೆ,” ಎಂದು ಸುದೀಪ್‌ ಹೇಳಿದ.

“ನಾಟ್‌ ಅನ್‌ ರೊಮಾಂಟಿಕ್‌,” ಅವಳು ಮುಗುಳ್ನಕ್ಕಳು.

“ನಾಳೆಯ ದಿನ ನಿನ್ನ ಜೀವನದ ಒಂದು ಸ್ಮರಣಾರ್ಹ ದಿನವಾಗಲಿದೆ,” ಸುದೀಪ್‌ ಸ್ವಲ್ಪ ತುಂಟತನದ ಧ್ವನಿಯಲ್ಲಿ ಹೇಳುತ್ತಾ ಅವಳ ಕೆನ್ನೆಯನ್ನು ಎಳೆದ.

ಆ ದಿನ ಅವಳ ಜೀವನದ ಒಂದು ಸ್ಮರಣಾರ್ಹ ದಿನವಾಗಿತ್ತು. ಆ ದಿನದ ವಾತಾವರಣ ಕೂಡ ಅಷ್ಟೇ ಮೋಹಕವಾಗಿತ್ತು. ಆಕಾಶದಲ್ಲಿ ಮೋಡಗಳು ಗುಂಪು ಗುಂಪಾಗಿ ಸೇರುತ್ತಾ ಹೊರಟಿದ್ದವು. ಬೆಳಕು ಮಂದವಾಗುತ್ತ ಹೋಗಿ ಮಳೆ ಹನಿಗಳು ತೇಲತೊಡಗಿದವು.

ಎಂದಿನಂತೆ ಇಬ್ಬರೂ ಗುಡಿಸಲಿನತ್ತ ಹೊರಟಿದ್ದರು. ಅಷ್ಟರಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ ಜೋರಾಗಿ ಮಳೆ ಸುರಿಯಲಾರಂಭಿಸಿತು. ಆಶ್ರಮದೊಳಗೆ ವಾಪಸ್‌ ಬರಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಇಬ್ಬರೂ ಒಂದು ಗುಡಿಸಲಿನೊಳಗೆ ಹೋದರು. ಹವಾಮಾನದ ಕುತಂತ್ರ, ಅವರಿಬ್ಬರ ಕಾಮನಬಿಲ್ಲಿನ ಯೌವನದ ಆವೇಶವೇ ಸುಚಿತ್ರಾ ಸಪ್ತವರ್ಣಗಳಲ್ಲಿ ಮುಳುಗೆದ್ದಳು. ಸುದೀಪ್‌ ಅವಳ ಕಿವಿಯಲ್ಲಿ ಮೆಲ್ಲನೆ ಪ್ರೀತಿಯ ಸಿನಿಮಾ ಹಾಡು ಗುನುಗಿದ……. ಅವನ ಹಾಡಿನ ಸಾಲುಗಳಿಗೆ ಸುಚಿತ್ರಾ ನಾಚಿ ಮುದುಡಿಕೊಂಡಳು. ಮಳೆ ಮುಗಿದ ಬಳಿಕ ಇಬ್ಬರೂ ಮನೆಯತ್ತ ಹೊರಟರು. ಸಂಜೆಯ ಸ್ಮರಣಾರ್ಹ ಕ್ಷಣಗಳಿಂದ ಸುಚಿತ್ರಾಳ ಕಣ್ರೆಪ್ಪೆಗಳು ಮುಚ್ಚುತ್ತಿದ್ದವು.

ಪರೀಕ್ಷೆ ಮುಗಿಯಿತು. 2 ದಿನ ವಿಶ್ರಾಂತಿಯೂ ಆಯಿತು. ಪರೀಕ್ಷೆಯ ದಣಿವು ಇಳಿದ ಬಳಿಕ ಅವಳು ಸುದೀಪ್‌ಗೆ ಫೋನ್‌ ಮಾಡಿದಳು. ಆದರೆ ಅವನ ಪೋನ್‌ ಸ್ವಿಚ್‌ ಆಫ್‌ಆಗಿತ್ತು.

`ಬಹುಶಃ ಅವನ ದಣಿವು ಇನ್ನೂ ನೀಗಿಲ್ಲ ಅನಿಸುತ್ತೆ,’ ಎಂದು ಯೋಚಿಸುತ್ತ ಸುಚಿತ್ರಾ ಮುಗುಳ್ನಕ್ಕಳು. ಆದರೆ ಅದು ಅವಳ ತಪ್ಪು ಕಲ್ಪನೆಯೇ ಆಗಿತ್ತು. ಮುಂದಿನ ಹಲವು ದಿನಗಳವರೆಗೆ ಅವನ ಫೋನ್‌ ಸ್ವಿಚ್‌ ಆಫ್‌ ಆಗಿರುವುದು ಗೊತ್ತಾಗಿ ಅವಳ ಚಿಂತೆ ಹೆಚ್ಚಾಯ್ತು. ಸುದೀಪ್‌ನ ಒಂದಿಬ್ಬರು ಸ್ನೇಹಿತರನ್ನು ಕೇಳಿ ನೋಡಿದಳು. ಆದರೆ ಪರೀಕ್ಷೆಯ ಬಳಿಕ ಯಾರೊಬ್ಬರೂ ಅವನನ್ನು ಕಂಡಿಲ್ಲವೆಂದು ಹೇಳಿದರು. ಸುಚಿತ್ರಾ ಆಶ್ರಮಕ್ಕೆ ತೆರಳಿ ಸುದೀಪ್‌ನ ಅತ್ತಿಗೆಯನ್ನು ಕೇಳಿದಳು. ಆದರೆ ಅವರೂ ಕೂಡ ತನಗೇನೂ ಗೊತ್ತಿಲ್ಲ ಎಂದರು.

ಒಂದು ವಾರದ ಬಳಿಕ ಅವರ ಅತ್ತಿಗೆಯಿಂದ ತಿಳಿದ ವಿಷಯವೆಂದರೆ, ಸುದೀಪ್‌ ಕಳೆದೊಂದು ವಾರದಿಂದ ನಾಪತ್ತೆ ಆಗಿದ್ದಾನೆ. ಅವನ ಮನೆಯವರೂ ಕೂಡ ಅವನಿಗಾಗಿ ಬಹಳಷ್ಟು ಶೋಧ ನಡೆಸಿದರು. ಆದರೆ ಅವನ ಬಗ್ಗೆ ಏನೂ ಗೊತ್ತಾಗಲಿಲ್ಲ. ಕೊನೆಗೊಮ್ಮೆ ಅವರು ಪೊಲೀಸ್‌ ಠಾಣೆಗೆ ದೂರು ಸಹ ಕೊಟ್ಟರು. ಪೊಲೀಸರು ಅವನ ಶೋಧದಲ್ಲಿ ನಿರತರಾದರು.

safad-perdey-ke-pichy2

ಸುಚಿತ್ರಾಳ ಎಲ್ಲ ಪ್ರಯತ್ನಗಳೂ ವಿಫಲವಾಗಿ ಅವಳು ಎಲ್ಲವನ್ನೂ ಕಾಲದ ಮಹಿಮೆ ಎಂದುಕೊಂಡು ತನ್ನ ಮುಂದಿನ ವಿದ್ಯಾಭ್ಯಾಸದ ಸಿದ್ಧತೆಯಲ್ಲಿ ನಿರತಳಾದಳು. ಅದೊಂದು ದಿನ ಪ್ರೈವೇಟ್‌ ನಂಬರ್‌ ನಿಂದ ಅವಳ ಮೊಬೈಲಿ‌ಗೆ ಕಾಲ್ ‌ಬಂತು, “ಸುಚಿತ್ರಾ, ನಾನು ಬಾಬಾರ ವಿಶೇಷ ಸಹಚರ ವಿದ್ಯಾಧರ ಮಾತಾಡ್ತಿರೋದು. ಬಾಬಾ ನಿನ್ನನ್ನು ಭೇಟಿಯಾಗಲು ಇಚ್ಛಿಸಿದ್ದಾರೆ. ನಾಳೆ ಮಧ್ಯಾಹ್ನ 3 ಗಂಟೆಗೆ ಆಶ್ರಮಕ್ಕೆ ಬರಬೇಕು.”

ಸುಚಿತ್ರಾ ಒಳಗೊಳಗೆ ನಡುಗಿಹೋದಳು. “ಕ್ಷಮಿಸಿ, ನನಗೀಗ ನಿಮ್ಮ ಬಾಬಾ ಹಾಗೂ ಆಶ್ರಮದ ಬಗ್ಗೆ ಯಾವುದೇ ಆಸಕ್ತಿ ಉಳಿದಿಲ್ಲ.”

“ನೀನು ಸ್ವಲ್ಪ ಹೊರಗೆ ಬಂದು ನೋಡು. ಬಾಬಾ ನಿನಗಾಗಿ ಒಂದು ವಿಶೇಷ ಉಡುಗೊರೆ ಕಳಿಸಿದ್ದಾರೆ,” ಎಂದು ಹೇಳಿ ಫೋನ್‌ಸಂಪರ್ಕ ಕಡಿತಗೊಳಿಸಿದ.

ಸುಚಿತ್ರಾ ಹೊರಗೋಡಿ ಬಂದು ನೋಡಿದರೆ ಅಲ್ಲೊಂದು ಕವರ್‌ ಇಡಲಾಗಿತ್ತು. ಅದರೊಳಗೆ ಒಂದು ಪೆನ್‌ ಡ್ರೈವ್ ‌ಇತ್ತು. ಅವಳು ನಡುಗುವ ಕೈಗಳಿಂದ ಅದನ್ನು ತನ್ನ ಫೋನ್‌ಗೆ ಕನೆಕ್ಟ್ ಮಾಡಿಕೊಂಡಳು. ಅದರಲ್ಲಿ ವಿಡಿಯೇ ಕ್ಲಿಪ್‌ ಇತ್ತು. ಅದನ್ನು ನೋಡುತ್ತಿದ್ದಂತೆ ಸುಚಿತ್ರಾ ಭಯದಿಂದ ಕಂಪಿಸಿದಳು. ಅದು ಅವಳು ಹಾಗೂ ಸುದೀಪ್‌ ಕೆಲವು ವಾರಗಳ ಹಿಂದಿನ ಅಂತರಂಗದ ಕ್ಷಣಗಳ ವಿಡಿಯೋ ಆಗಿತ್ತು.

ಮರುದಿನ ಮಧ್ಯಾಹ್ನ 3 ಗಂಟೆಗೆ ಸುಚಿತ್ರಾ ಬಾಬಾರ ಆಶ್ರಮ ತಲುಪಿದಳು. ಅಲ್ಲಿಂದ ಅವಳನ್ನು ವಿಶೇಷವಾಗಿ ನಿರ್ಮಿಸಿದ ಗುಹೆಯೊಂದಕ್ಕೆ ಕರೆದೊಯ್ಯಲಾಯಿತು. ಒಳಗೆ ಹೋಗುವ ಮುನ್ನ ಅವಳನ್ನು ಸಂಪೂರ್ಣ ಪರೀಕ್ಷೆಗೊಳಪಡಿಸಲಾಯಿತು. ಅವಳ ಬಟ್ಟೆಗಳನ್ನು ಬದಲಿಸಲಾಯಿತು. ಅವಳ ಮೊಬೈಲ್ ‌ಫೋನ್‌ ಸ್ವಿಚ್‌ ಆಫ್‌ ಮಾಡಲಾಯಿತು. ಇಯರ್‌ ರಿಂಗ್ಸ್, ಗಡಿಯಾರ ಎಲ್ಲವನ್ನೂ ತೆಗೆದುಕೊಳ್ಳಲಾಯಿತು.

ಹೊರಗಿನಿಂದ ಸಾಧಾರಣವೆಂಬಂತೆ ಕಂಡುಬರುವ ಗುಹೆ ಒಳಗಿನಿಂದ ನೋಡಿದಾಗ ಅದು ಯಾವುದೇ ಅರಮನೆಗಿಂತ ಕಡಿಮೆ ಎನಿಸುವಂತಿರಲಿಲ್ಲ. ಇಂದು ಪ್ರಥಮ ಬಾರಿಗೆ ಅವಳು ಬಾಬಾರನ್ನು ಪ್ರತ್ಯಕ್ಷವಾಗಿ ಭೇಟಿಯಾಗುತ್ತಿದ್ದಳು. ಅದೂ ಕೂಡ ಈ ಸ್ಥಿತಿಯಲ್ಲಿ. 2 ಗಂಟೆಗಳ ಕಾಲ ಅವಳು ಬಾಬಾ ಕೀ ಕೊಟ್ಟ ಬೊಂಬೆಯಂತಿದ್ದಳು. ಸುಚಿತ್ರಾ ವಾಪಸ್‌ ಮನೆಗೆ ಹೊರಟಾಗ ಅವಳಿಗೆ ತನ್ನ ದೇಹವನ್ನು ವಾಷಿಂಗ್‌ ಮೆಷಿನ್‌ ನಲ್ಲಿ ಹಾಕಿ ತೊಳೆದಂತೆ ಭಾಸವಾಯಿತು.

ಸುಮಾರು 2 ವರ್ಷಗಳ ಕಾಲ ಹೀಗೆಯೇ ನಡೆಯಿತು. ಸ್ವಾಮೀಜಿ ಈ ಆಶ್ರಮಕ್ಕೆ ಬಂದಾಗೆಲ್ಲ ಸುಚಿತ್ರಾಳಿಗೆ ಅವರ ಸೇವೆಗೆ ಹಾಜರಾಗಬೇಕಾಗುತ್ತಿತ್ತು. ತನ್ನ ಪ್ರೀತಿಯನ್ನು ರಹಸ್ಯವಾಗಿ ಕಾಪಾಡಲು ಇಷ್ಟು ದೊಡ್ಡ ಬೆಲೆಯನ್ನು ಕಂತುಗಳಲ್ಲಿ ಚುಕ್ತಾ ಮಾಡುತ್ತಿದ್ದಳು.

ಸುದೀಪ್‌ನ ಬಗ್ಗೆ ಈವರೆಗೆ ಏನೂ ಗೊತ್ತಾಗಿರಲಿಲ್ಲ. ಆಶ್ರಮದ ಕೆಲವರು ಕುಗ್ಗಿದ ಧ್ವನಿಯಲ್ಲಿ ಹೇಳಿದ್ದೇನೆಂದರೆ, ಸ್ವಾಮೀಜಿಯವರು ಅವನನ್ನು ವಿದೇಶದಲ್ಲಿರುವ ತಮ್ಮ ಆಶ್ರಮಕ್ಕೆ ಕಳಿಸಿಕೊಟ್ಟಿದ್ದಾರೆಂದು ತಿಳಿಯಿತು. ಈ ಮಧ್ಯೆ ಅವಳಿಗೆ ದೇವರಾಜ್‌ನ ಸಂಬಂಧ ಹುಡುಕಿಕೊಂಡು ಬಂದಿತ್ತು. ಮೊದ ಮೊದಲು ಅವಳು ನಿರಾಕರಿಸಲು ನೋಡಿದಳು. ಏಕೆಂದರೆ ಅವಳು ತನ್ನ ಅಪವಿತ್ರ ದೇಹವನ್ನು ದೇವರಾಜ್‌ಗೆ ಸಮರ್ಪಿಸಿಕೊಳ್ಳಲು ಸಿದ್ಧಳಿರಲಿಲ್ಲ. ಆದರೆ ಮನದ ಮೂಲೆಯಿಂದ ಅವಳಿಗೆ ಕೇಳಿಸಿದ್ದೇನೆಂದರೆ, ಈ ಸಂಬಂಧ ನಿನಗೆ ಆ ತೊಂದರೆಯಿಂದ ಮುಕ್ತಿ ಕೊಡಲು ಬಂದಿದೆ. ಆಶ್ರಮದ ನರಕದಿಂದ ಮುಕ್ತಿ ದೊರಕಿಸಿ ಕೊಡುತ್ತದೆ. ಇದೇ ನಂಬಿಕೆಯಿಂದ ಅವಳು ದೇವರಾಜ್‌ನ ಕೈ ಹಿಡಿದಳು.

ಮದುವೆಯ ಬಳಿಕ ಅವಳ ವಾಸಸ್ಥಳ ಹಾಗೂ ಫೋನ್‌ ನಂಬರ್‌ ಬದಲಾಯಿತು. ಹೀಗಾಗಿ ಅವಳು ನಿಶ್ಚಿಂತಳಾದಳು. ಅವಳು ಆ ಘಟನೆಯನ್ನು ಮರೆತುಬಿಟ್ಟಿದ್ದಳು. ಅಷ್ಟರಲ್ಲಿ ಒಂದು ದಿನ ಕಾಲ್ ‌ಬಂತು, “ಹನಿಮೂನ್‌ ಪೀರಿಯಡ್‌ ಮುಗಿದಿರಬಹುದು. ನಾಳೆ ಮಧ್ಯಾಹ್ನ ಆಶ್ರಮಕ್ಕೆ ಬರಬೇಕು. ಬಾಬಾ ನಿನ್ನ ನೆನಪು ಮಾಡಿಕೊಂಡಿದ್ದಾರೆ.”

ಆ ಮಾತು ಕೇಳಿಸಿಕೊಂಡು ಸುಚಿತ್ರಾ ಹೆದರಿಕೆಯಿಂದ ಒಣಗಿದ ಎಲೆಯಂತೆ ಕಂಪಿಸತೊಡಗಿದಳು. ಅವಳ ಬಾಯಿಂದ ಯಾವೊಂದು ಮಾತೂ ಹೊರಡಲಿಲ್ಲ.

“ಊರು ಹಾಗೂ ಫೋನ್‌ ನಂಬರ್‌ ಬದಲಿಸಿಕೊಳ್ಳುವುದರಿಂದ ನೀನು ಬಚಾವಾಗಬಹುದು ಅಂದ್ಕೊಡಿದೀಯಾ? ನಮ್ಮ ಬಾಬಾ ಸಮುದ್ರದಲ್ಲಿನ ಸೂಜಿಯನ್ನು ಕೂಡ ಹುಡುಕುವ ಶಕ್ತಿ ಹೊಂದಿದ್ದಾರೆ. ನೀನು ನಾಳೆ ಆಶ್ರಮಕ್ಕೆ ಬರುವುದಿಲ್ಲ ನಿನ್ನ ಹಿತ ಅಡಗಿದೆ…..” ಎಂದು ಹೇಳಿ ಎಚ್ಚರಿಕೆಯ ಆ ಧ್ವನಿ ಫೋನ್‌ ಕಟ್‌ ಮಾಡಿತು.

ಮತ್ತೆ ಅದೇ ಹಳೆ ಕ್ರಮ ಶುರುವಾಯಿತು. ಸುಚಿತ್ರಾಳಿಗೆ ಅದು ಹೇಸಿಗೆಯ ಜೀವನ ಅನಿಸತೊಡಗಿತ್ತು. ಈ ದ್ವಂದ್ವ ಜೀವನದಿಂದ ಅವಳು ಮುಕ್ತಿ ಕಂಡುಕೊಳ್ಳಲು ಬಯಸಿದ್ದಳು. ನೀರು ಈಗ ತಲೆ ಮೇಲೆ ಹೋಗಲು ಶುರು ಮಾಡಿದ್ದರಿಂದ, ತಾನು ಅದರಿಂದ ಪಾರಾಗಲು ಏನಾದರೂ ದಾರಿ ಕಂಡುಕೊಳ್ಳಲೇಬೇಕೆಂದು ಅವಳು ನಿರ್ಧರಿಸಿ, ಮನಸ್ಸಿನಲ್ಲಿಯೇ ಹೋರಾಡಲು ಯೋಜನೆ  ರೂಪಿಸಿಕೊಂಡಳು.

`ಆದೀತು ಆದೀತು ಅಂದ್ರೆ ಏನಾದೀತು…..? ದೇವರಾಜ್‌ನನ್ನನ್ನು ಬಿಟ್ಟಬಿಡಬಹುದು ಅಷ್ಟೇ ಅಲ್ವೇ? ಅದು ಸರಿಯಾಗೇ ಇರುತ್ತೆ. ನಾನು ಕೂಡ ಅವರಿಗೆ ಎಲ್ಲಿ ನ್ಯಾಯ ಕೊಡುತ್ತಿರುವೆ? ಅವರಿಗೆ ಎಂಜಲು ಊಟ ಬಡಿಸುತ್ತಿರುವೆ. ಇಲ್ಲ…. ಇಲ್ಲ… ಇನ್ಮುಂದೆ ಅದು ಸಾಧ್ಯವಿಲ್ಲ. ಇನ್ಮುಂದೆ ನಾನು ಆಶ್ರಮಕ್ಕೆ ಹೋಗಬಾರದು. ಬಾಬಾ ನನ್ನ ವಿರುದ್ಧ ಏನಾದರೂ ಹೆಜ್ಜೆ ಇಡುವ ಮೊದಲು ನಾನು ಅವರ ವಿರುದ್ಧ ಪೊಲೀಸ್‌ ಠಾಣೆಗೆ ದೂರು ಸಲ್ಲಿಸುತ್ತೇನೆ,’ ಎಂದು ಸುಚಿತ್ರಾ ಮನಸ್ಸಿನಲ್ಲಿಯೇ ನಿರ್ಧರಿಸಿದಳು.

`ನೀನು ಹಾಗೆ ಮಾಡಲು ಸಾಧ್ಯವೇ? ನಿನಗೆ ಅಷ್ಟು ಧೈರ್ಯ ಇದೆಯೆ?’ ಅವಳ ಮನಸ್ಸು ಅವಳಿಗೆ ಸವಾಲು ಹಾಕಿತ್ತು.`ಯಾಕಿಲ್ಲ? ಬಹಳಷ್ಟು ಮಹಿಳೆಯರು `ಮೀ ಟೂ’ ಅಭಿಯಾನದಲ್ಲಿ ಸೇರ್ಪಡೆಗೊಂಡು ಇಂತಹ ನಯವಂಚಕರ ಮುಖವಾಡ ಕಳಚುತ್ತಿದ್ದರೆ ನಾನೂ ಕೂಡ ಅದೇ ಧೈರ್ಯವನ್ನು ಒಗ್ಗೂಡಿಸುತ್ತೇನೆ,’ ಎಂದು ಸುಚಿತ್ರಾ ತನಗೆ ತಾನೇ ಧೈರ್ಯ ತುಂಬಿಕೊಂಡಳು.

ಸುಚಿತ್ರಾ ತನ್ನ ಯುದ್ಧ ನೀತಿ ಸಿದ್ಧಪಡಿಸುವುದರಲ್ಲಿ ಮಗ್ನಳಾಗಿದ್ದಳು. ಅಷ್ಟರಲ್ಲಿ ಬೇರೊಬ್ಬ ಹುಡುಗಿ ಆ ಧೈರ್ಯ ತೋರಿಸಿಯೇಬಿಟ್ಟಳು. ಆಶ್ರಮದ ಕಪ್ಪು ಛಾಯೆಯನ್ನು ಸಮಾಜದ ಮುಂದೆ ತರುವ ಧೈರ್ಯ ತೋರಿಸಿಯೇಬಿಟ್ಟಳು.

“ಇವತ್ತು ನನಗೆ ತಿಂಡಿ ಯೋಗ ಇಲ್ಲವೇ?” ಎಂದೆನ್ನುತ್ತಾ ದೇವರಾಜ್‌ ಕೋಣೆಯ ಒಳಗಡೆ ಬಂದ. ಆಗ ಸುಚಿತ್ರಾ ತನ್ನ ಕಣ್ರೆಪ್ಪೆಯ ಹಿಂದಿನ ಲೋಕದಿಂದ ವಾಸ್ತ ಲೋಕಕ್ಕೆ ಮರಳಿದಳು.

“ನಿಮಗಿವತ್ತು ಕೇವಲ ತಿಂಡಿಯಷ್ಟೇ ಅಲ್ಲ, ವಿಶೇಷ ಟ್ರೀಟ್‌ ಕೂಡ ದೊರಕುತ್ತೆ ಒಂದು ಗ್ರಾಂಡ್‌ ಪಾರ್ಟಿ. ಕೊನೆಗೊಮ್ಮೆ ಸಮಾಜಕ್ಕೆ ಕಪ್ಪು ಕಲೆಯಿಂದ ಮುಕ್ತಿ ದೊರಕಿದೆ,” ಎಂದು ಹೇಳುತ್ತ ಸುಚಿತ್ರಾ ರಹಸ್ಯ ಶೈಲಿಯಲ್ಲಿ ನಕ್ಕಳು.

ದೇವರಾಜ್‌ಗೆ ಅವಳ ರಹಸ್ಯಮಯ ನಗುವನ್ನು ಭೇದಿಸಲು ಆಗಲಿಲ್ಲ. ಸುಚಿತ್ರಾ ಮನಸ್ಸಲ್ಲೇ ಆ ಅಪರಿಚಿತ ಹುಡುಗಿಗೆ ಧನ್ಯವಾದ ಹೇಳುತ್ತ ಮತ್ತೊಮ್ಮೆ ಸಿದ್ಧಳಾಗಲು ಹೊರಟಳು. ಈಗ ಅವಳಲ್ಲಿ ಮತ್ತೊಮ್ಮೆ ಜೀವಿಸುವ ಚೈತನ್ಯ ಜಾಗೃತಗೊಂಡಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ