ಕಥೆ – ಪರಿಮಳಾ ಪ್ರಸಾದ್
ಇಂದು ಭಾನುವಾರ. ಇಡೀ ದಿನ ಮಳೆ ಸುರಿಯುತ್ತಿತ್ತು. ಈಗಷ್ಟೇ ಮಳೆಯ ಸುರಿಯುವಿಕೆ ನಿಂತಿತ್ತು. ಆದರೆ ಗಾಳಿಯ ರಭಸ ಈಗಲೂ ಕೇಳಿಬರುತ್ತಿತ್ತು. ಒದ್ದೆಯಾದ ರಸ್ತೆಯಲ್ಲಿ ಬೆಳಕು ಮಂದಾಗಿ ಗೋಚರಿಸುತ್ತಿತ್ತು. ಸುಷ್ಮಾ ಕಿಟಕಿಯ ಎದುರು ನಿಂತು, ಎಲ್ಲೋ ಕಳೆದುಹೋದಂತಿದ್ದಳು. ಕಿಟಕಿಯ ಹೊರಗೆ ನೋಡುತ್ತಾ ರಾಹುಲ್ ಬಗ್ಗೆ ಯೋಚಿಸುತ್ತಿದ್ದಳು. ಇಂತಹ ಹವಾಮಾನದಲ್ಲಿ ಅವನು ಎಲ್ಲಿದ್ದಾನೋ ಏನೋ? ಹವಾಮಾನದಲ್ಲಿ ಒಂದು ರೀತಿಯ ತಾಜಾತನವಿತ್ತು. ಆಸುಪಾಸಿನ ಸಮಸ್ತ ಸೌಂದರ್ಯ, ಆಸುಪಾಸಿನ ಏನೆಲ್ಲ ಬಣ್ಣಗಳು ಹೃದಯದ ಹವಾಮಾನದೊಂದಿಗೆ ಥಳಕು ಹಾಕಲ್ಪಟ್ಟಿರುತ್ತವೆ. ಅದೇ ಸಮಯದಲ್ಲಿ ಸುಷ್ಮಾಳ ಹೃದಯದ ಹವಾಮಾನದಲ್ಲಿ ವೈಪರೀತ್ಯ ಉಂಟಾಗಿತ್ತು.
ವಿಶಾಲ್ ಟಿ.ವಿಯಲ್ಲಿ ಒಂದು ಸಲ ಹಾಡುಗಳನ್ನು ಕೇಳಿಸಿಕೊಳ್ಳುತ್ತಿದ್ದರೆ, ಮತ್ತೊಮ್ಮೆ ಸುದ್ದಿ ನೋಡುತ್ತಿದ್ದ, ರಜೆಯಿತ್ತು. ಹೀಗಾಗಿ ಅವನು ನಿಶ್ಚಿಂತನಾಗಿದ್ದ. ಅವನು ಕೇಳಿದ, “ಸುಷ್ಮಾ, ನಿಂತುಕೊಂಡೇ ಏನು ಯೋಚಿಸುತ್ತಿರುವೆ?”
“ಏನಿಲ್ಲ. ಹಾಗೆಯೇ ಹೊರಗಡೆ ನೋಡುತ್ತಿರುವೆ. ಬಹಳ ಸೊಗಸಾಗಿದೆ.”
“ಯಶ್ ಹಾಗೂ ಸಂಜನಾ ಯಾವಾಗ ಬರ್ತಾರಂತೆ…..?”
“ಇನ್ನೇನು ಬಂದೇಬಿಡುತ್ತಾರೆ. ನಾನು ಅವರಿಗಾಗಿ ಏನಾದರೂ ತಿಂಡಿ ತಯಾರಿಸ್ತೀನಿ……” ಎಂದು ಹೇಳುತ್ತಾ ಸುಷ್ಮಾ ಅಡುಗೆಮನೆಯ ಕಡೆ ಹೊರಟಳು.
ಸುಷ್ಮಾ ಉದ್ದೇಶಪೂರ್ವಕವಾಗಿಯೇ ಅಡುಗೆಮನೆಗೆ ಬಂದಿದ್ದಳು. ಅವಳಿಗೆ ವಿಶಾಲನ ದೃಷ್ಟಿ ಎದುರಿಸುವ ಧೈರ್ಯವಿರಲಿಲ್ಲ. ಅವಳ ದೃಷ್ಟಿಕೋನದಲ್ಲಿ ರಾಹುಲನ ಆಗಮನದ ನಿರೀಕ್ಷೆಯಷ್ಟೇ ಇತ್ತು.
ಸುಷ್ಮಾ ಹಾಗೂ ವಿಶಾಲ್ ರ ವಿವಾಹವಾಗಿ 20 ವರ್ಷ ಕಳೆದಿತ್ತು. ಮಗ ಯಶ್ ಹಾಗೂ ಮಗಳು ಸಂಜನಾ ತಮ್ಮ ತಮ್ಮ ಓದು ಹಾಗೂ ಸ್ನೇಹಿತರಲ್ಲಿ ವ್ಯಸ್ತರಾಗಿಬಿಟ್ಟಾಗ, ಸುಷ್ಮಾಳ ಜೀವನದಲ್ಲಿ ಒಂದು ರೀತಿಯ ಖಾಲಿ ಖಾಲಿತನ ಅನಿಸುತ್ತಿತ್ತು. ಅವಳು ತನ್ನ ಏಕಾಂಗಿತನದ ಬಗ್ಗೆ ವಿಶಾಲ್ ಮುಂದೆ ಪ್ರಸ್ತಾಪಿಸುತ್ತಿದ್ದಳು.
“ವಿಶಾಲ್, ನೀ ಕೂಡ ಇತ್ತೀಚಿನ ದಿನಗಳಲ್ಲಿ ಬಹಳ ಬಿಜಿಯಾಗಿಬಿಟ್ಟಿರಿ. ಮಕ್ಕಳು ಕೂಡ ತಮ್ಮ ಕೆಲಸಗಳಲ್ಲಿ ವ್ಯಸ್ತರಾಗಿದ್ದಾರೆ. ನನ್ನ ದೇಹ ಮನೆ ಹಾಗೂ ಹೊರಗಿನ ಕರ್ತವ್ಯಗಳನ್ನೆಲ್ಲ ನಿಭಾಯಿಸುತ್ತದೆ. ಆದರೆ ಮನಸ್ಸಿನಲ್ಲಿ ಒಂದು ರೀತಿಯ ರಿಕ್ತತೆ ಉಂಟಾಗುತ್ತದೆ. ಏನು ಮಾಡಲಿ ಹೇಳಿ?”
ವಿಶಾಲ್ ಅವಳಿಗೆ ತಿಳಿಸಿ ಹೇಳುತ್ತಿದ್ದ, “ನನಗೆ ನಿನ್ನ ಮನಸ್ಸಿನ ಭಾವನೆ ಅರ್ಥವಾಗುತ್ತೆ. ಆದರೆ ಹುದ್ದೆಯ ಜೊತೆಗೆ ಜವಾಬ್ದಾರಿಗಳು ಕೂಡ ಹೆಚ್ಚುತ್ತಾ ಹೊರಟಿವೆ. ನೀನೂ ಕೂಡ ಯಾವುದಾದರೂ ಹವ್ಯಾಸದಲ್ಲಿ ನಿನ್ನನ್ನು ತೊಡಗಿಸಿಕೊಳ್ಳಬಹುದಲ್ವಾ?”
“ನನಗೆ ಏಕಾಂಗಿತನದ ಅನುಭವ ಬಹಳಷ್ಟು ಕಾಡುತ್ತಿರುತ್ತದೆ. ನನ್ನ ಮಾತನ್ನು ಯಾರಾದರೂ ಕೇಳಿಸಿಕೊಳ್ಳಬೇಕು, ನನ್ನ ಜೊತೆಗೆ ಸಮಯ ಕಳೆಯಬೇಕು ಅನ್ನಿಸುತ್ತಿರುತ್ತದೆ. ಆದರೆ ನೀವು ಮೂವರಂತೂ ನಿಮ್ಮದೇ ಲೋಕದಲ್ಲಿ ಕಳೆದು ಹೋಗಿರುತ್ತೀರಿ.”
“ಸುಷ್ಮಾ, ಇದರಲ್ಲಿ ಒಂಟಿತನದ ಮಾತೆಲ್ಲಿ ಬರುತ್ತದೆ? ಅದೆಲ್ಲ ನಿನ್ನ ಕೈಯಲ್ಲಿಯೇ ಇದೆ. ನೀನು ನಿನ್ನ ಯೋಚನೆಯನ್ನು ಹೇಗೆ ಬೇಕೋ ಹಾಗೆ ಚಲನಶೀಲಗೊಳಿಸಬಹುದು. ಹಾಗೆ ನೋಡಿದರೆ ಒಂಟಿತವೆನ್ನುವುದೇ ಇಲ್ಲ. ಒಬ್ಬರು ವೃದ್ಧರಾದ ಬಳಿಕ ಏಕಾಂಗಿಯಾಗುತ್ತಾರೆ. ಮತ್ತೆ ಕೆಲವರು ಅದಕ್ಕೂ ಮೊದಲೇ ಇಲ್ಲಿನ ವ್ಯತ್ಯಾಸ ಇಷ್ಟೆ, ಈ ಸತ್ಯವನ್ನು ಮನಸ್ಸಿನಿಂದ ಸ್ವೀಕರಿಸಿದಾಗ ಯಾವುದೇ ತೊಂದರೆ, ತಾಪತ್ರಯ ಉಂಟಾಗುವುದಿಲ್ಲ. ನೀನಂತೂ ಓದುಬರಹ ಬಲ್ಲವಳು. ಕಾಲೇಜು ಜೀವನದಲ್ಲಿ ನೀನು ಏನಾದರೂ ಬರೀತಿದ್ದೆ. ಈಗ ನಿನಗೆ ಬಿಡುವಿದೆ ಎನಿಸಿದರೆ, ಏನಾದರೂ ಬರೆಯಲು ಶುರು ಮಾಡು,” ಆದರೆ ಸುಷ್ಮಾಳಿಗೆ ತನ್ನ ಒಂಟಿತನದಿಂದ ಅಷ್ಟು ಸುಲಭವಾಗಿ ಮುಕ್ತಿ ದೊರೆಯುವ ಲಕ್ಷಣಗಳು ಕಂಡುಬರಲಿಲ್ಲ.
ಈ ಮಧ್ಯೆ ವಿಶಾಲ್, ದಾವಣಗೆರೆಯಿಂದ ಎಂಬಿಎ ಮಾಡಲು ಬೆಂಗಳೂರಿಗೆ ಬಂದಿದ್ದ ತನ್ನ ಆತ್ಮೀಯ ಗೆಳೆಯ ಹರ್ಷನ ತಮ್ಮ ರಾಹುಲ್ ಗೆ ಮನೆಗೆ ಬರಲು ಆಹ್ವಾನ ಕೊಟ್ಟಾಗ ಸುಷ್ಮಾಗೆ ಬಹಳ ಖುಷಿಯಾಗಿತ್ತು.
ಹಾಸ್ಟೆಲ್‌ನಲ್ಲಿ ಇರಲು ಯಾವುದೇ ವ್ಯವಸ್ಥೆ ಆಗದಿದ್ದಾಗ ಹರ್ಷ ವಿಶಾಲ್‌ಗೆ ಫೋನ್ ಮಾಡಿ ಹೇಳಿದ, “ನಿನ್ನ ಮನೆಯ ಆಸುಪಾಸು ಯಾವುದಾದರೂ ರೂಮ್ ಇದ್ರೆ ಹುಡುಕಿಕೊಡು. ಹಾಗೆ ಮಾಡಿದರೆ ನಮ್ಮ ಮನೆಯವರ ಚಿಂತೆ ಸಾಕಷ್ಟು ಕಡಿಮೆಯಾಗುತ್ತದೆ.”
ವಿಶಾಲನ ಸುವ್ಯವಸ್ಥಿತ ಮನೆಯ ಮೊದಲ ಮಹಡಿಯಲ್ಲಿ 2 ರೂಮುಗಳಿದ್ದವು. ಒಂದು ರೂಮ್ ಯಶ್ ಹಾಗೂ ಸಂಜನಾ ಇವರಿಬ್ಬರ ಸ್ಟಡಿ ರೂಮ್ ಆಗಿತ್ತು. ಎರಡನೆಯದು ಒಂದು ರೀತಿಯ ಗೆಸ್ಟ್ ರೂಮ್ ಆಗಿತ್ತು. ಎಲ್ಲರೂ ಕೆಳಗೇ ಇರುತ್ತಿದ್ದರು. ವಿಶಾಲನಿಗೆ ಏನೂ ಹೊಳೆಯದೇ ಇದ್ದಾಗ ಅವನು ಸುಷ್ಮಾಳ ಜೊತೆಗೆ ಸಮಾಲೋಚಿಸಿದ. ನಾವೇಕೆ ಮೇಲಿನ ರೂಮನ್ನು ರಾಹುಲ್‌ಗೆ ಕೊಡಬಾರದು? ಹೇಗೂ ಅವನೊಬ್ಬನೇ ಇರುತ್ತಾನೆ. ದಿನವಿಡೀ ಕಾಲೇಜಿನಲ್ಲಿ ಕಳೆಯುತ್ತಾನೆ ಹೇಗೂ ಅವನು ಬರುವುದು ಸಂಜೆ ಬಳಿಕವೇ ಅಲ್ವಾ?
ಸುಷ್ಮಾಗೆ ಇದರ ಬಗ್ಗೆ ಯಾವುದೇ ಆಕ್ಷೇಪ ಇರಲಿಲ್ಲ. ಹೀಗಾಗಿ ವಿಶಾಲ್ ತನ್ನ ಸ್ನೇಹಿತನಿಗೆ ಈ ವಿಷಯ ಅರುಹಿದ, “ನಿನ್ನ ತಮ್ಮ ನಮ್ಮ ಮನೆಯಲ್ಲೇ ಇರುತ್ತಾನೆ ಹಾಗೂ ನಮ್ಮ ಮನೆಯಲ್ಲಿಯೇ ಊಟ ಮಾಡುತ್ತಾನೆ. ನೀವೆಲ್ಲ ನಿಶ್ಚಿಂತೆಯಿಂದಿರಿ.”
ಹರ್ಷ ಅಭಿನಂದಿಸುತ್ತಾ ಹೇಳಿದ, “ಅವನನ್ನು ಪೇಯಿಂಗ್ ಗೆಸ್ಟ್ ರೀತಿಯಲ್ಲಿ ಇಟ್ಟುಕೊ.”
ವಿಶಾಲ್ ನಕ್ಕ, “ಅದೇನು ಮಾತು ಆಡ್ತಿರುವೆ. ಅವನು ನಿನಗೆ ಹೇಗೆ ತಮ್ಮನೊ, ಹಾಗೆ ನನಗೂ ಕೂಡ.”
ರಾಹುಲ್ ಬ್ಯಾಗ್ ತೆಗೆದುಕೊಂಡು ಬಂದ. ತನ್ನ ನಗುಮೊಗದ ಸ್ವಭಾವದಿಂದಾಗಿ ಮನೆಯ ಎಲ್ಲರಿಗೂ ಇಷ್ಟವಾದ. ಸುಷ್ಮಾಳನ್ನಂತೂ ತನ್ನ ಮಾತುಗಳಿಂದ ಹೇಗೆ ನಗಿಸುತ್ತಿದ್ದನೆಂದರೆ, ಸುಷ್ಮಾಳಿಗೆ ಪುನಃ ಜೀವನಾಸಕ್ತಿ ಮೂಡಿತು. ನಿಯಮಿತ ವ್ಯಯಾಮ ಹಾಗೂ ಸಮತೋಲಿತ ಆಹಾರದಿಂದಾಗಿ ಅವಳು ದಷ್ಟಪುಷ್ಟಳಾಗಿದ್ದಳು. ರಾಹುಲ್ ಅವಳನ್ನು ನೋಡಿ, “ನಿಮ್ಮನ್ನು ಯಶ್ ಹಾಗೂ ಸಂಜನಾರ ತಾಯಿ ಎಂದು ಹೇಳಲು ಆಗುವುದೇ ಇಲ್ಲ. ನೀವಂತೂ ಅವರಿಗೆ ಅಕ್ಕನ ತರ ಕಾಣ್ತೀರಾ,” ಎಂದು ಹೇಳುತ್ತಿದ್ದ.
ರಾಹುಲ್, ಸುಷ್ಮಾ ಮಾಡಿದ ಅಡುಗೆ, ಅವಳ ಸ್ವಭಾವ, ಸೌಂದರ್ಯವನ್ನು ಮನಸೋಕ್ತವಾಗಿ ಪ್ರಶಂಸಿಸುತ್ತಿದ್ದ. 40ನೇ ವರ್ಷದಲ್ಲಿ ಸುಷ್ಮಾ ಒಬ್ಬ ನವ ಯುವಕನಿಂದ ತನ್ನ ಬಗ್ಗೆ ಪ್ರಶಂಸೆ ಕೇಳಿ ಉತ್ಸಾಹದಿಂದ ತುಂಬಿಹೋಗುತ್ತಿದ್ದಳು.
ಕಳೆದ ಹಲವು ದಿನಗಳಿಂದ ವಿಶಾಲ್ ಬಹಳಷ್ಟು ಜವಾಬ್ದಾರಿಗಳಿಂದ ಸಾಕಷ್ಟು ವ್ಯಸ್ತನಾಗಿದ್ದ. ತಿಂಡಿಯ ಸಮಯದಲ್ಲಿ ಪೇಪರ್ ಓದುತ್ತಾ, `ಹ್ಞಾಂ….ಹ್ಞೂಂ….’ ಎಂದಷ್ಟೇ ಹೇಳುತ್ತಾ ಬೇಗ ಆಫೀಸಿಗೆ ಹೊರಟುಹೋಗುತ್ತಿದ್ದ. ರಾತ್ರಿ ಮನೆಗೆ ವಾಪಾಸ್ಸಾದಾಗ ಒಮ್ಮೆ ನ್ಯೂಸ್ ಮತ್ತೊಮ್ಮೆ, ಲ್ಯಾಪ್ ಟಾಪ್ ನಲ್ಲಿ, ಇನ್ನೊಮ್ಮೆ ಫೋನ್ ನಲ್ಲಿ ಮಗ್ನನಾಗಿರುತ್ತಿದ್ದ. ಸುಷ್ಮಾ ಅವನ ಹಿಂದೆ ಹಿಂದೆಯೇ ಸುತ್ತುತ್ತಾ ಅವನು ಯಾವಾಗ ತನ್ನೊಂದಿಗೆ ರಿಲ್ಯಾಕ್ಸ್ ಆಗಿ ಮಾತನಾಡಲೆಂದು ಕಾಯುತ್ತಿದ್ದಳು. ಅವಳು ತನ್ನ ಮನಸ್ಸಿನ ಹಲವು ಭಾವನೆಗಳನ್ನು ಅವನೊಂದಿಗೆ ಹಂಚಿಕೊಳ್ಳಲು ಕಾಯುತ್ತಿದ್ದಳು. ಆದರೆ ಅವನು ತನ್ನ ಜವಾಬ್ದಾರಿಯಿಂದ ಮುಕ್ತನಾಗಲು ಸಿದ್ಧನಿರಲಿಲ್ಲ. ಒಬ್ಬ ಚತುರ ಅಧಿಕಾರಿಯ ಮುಖವಾಡದ ಹಿಂದೆ ತನ್ನ ಪ್ರಿಯತಮ ಕಳೆದುಹೋಗಿದ್ದಾನೆಂದು ಅವಳಿಗೆ ಅನಿಸುತ್ತಿತ್ತು.
ಮಕ್ಕಳಿಗೂ ಕೂಡ ತಮ್ಮದೇ ಆದ ನಿರ್ದಿಷ್ಟ ದಿನಚರಿ ಇತ್ತು. ಅವರು ತಮ್ಮ ಮೊಬೈಲ್ ಹಾಗೂ ಟಿ.ವಿಯಲ್ಲಿ ಮಗ್ನರಾಗಿರುತ್ತಿದ್ದರು. ಇಲ್ಲಿ ಓದಿನಲ್ಲಿ ನಿರತರಾಗಿರುತ್ತಿದ್ದರು. ಸುಷ್ಮಾ ಮಕ್ಕಳೊಂದಿಗೆ ಮಾತನಾಡಲು ಇಚ್ಛಿಸಿದರೂ ಅವರು ಏನೋ ಒಂದಷ್ಟು ಮಾತನಾಡಿ, ಯಾರದ್ದೋ ಫೋನ್ ಬಂತೆಂದು ಹೇಳಿ ಅಲ್ಲಿಂದ ಎದ್ದು ಹೊರಗೆ ಹೋಗುತ್ತಿದ್ದರು. ಹೀಗಾಗಿ ಸುಷ್ಮಾ ತನ್ನನ್ನು ತಾನು ಉಪೇಕ್ಷಿತಳು ಎಂದು ಭಾವಿಸಿ ತನ್ನ ಕೆಲಸದಲ್ಲಿ ಮಗ್ನಳಾಗಿಬಿಡುತ್ತಿದ್ದಳು.
ಅವಳು ಏಕಾಂಗಿಯಾಗಿದ್ದಾಗ ರಾಹುಲ್ ನ ಬಗ್ಗೆ ಯೋಚಿಸತೊಡಗಿದಳು. ಆದರೆ ಯಾರು, ಯಾವಾಗ, ಕಾರಣವಿಲ್ಲದೆ, ಮುನ್ಸೂಚನೆ ಇಲ್ಲದೆ ಮನುಷ್ಯನ ಅಂತರಾಳದಲ್ಲಿ ಹೇಗೆ ಜಾಗ ಪಡೆಯುತ್ತಾನೆ ಎನ್ನುವುದು ಸುಷ್ಮಾಳಿಗೆ ಆ ಘಟನೆಯ ಬಳಿಕವೇ ಗೊತ್ತಾಯಿತು. ರಾಹುಲ್ ಬಂದನಂತರ ವಿಶಾಲ್ ಹಾಗೂ ಮಕ್ಕಳ ಹೆಚ್ಚುತ್ತಿರುವ ವ್ಯಸ್ತತೆಯ ಕಾರಣದಿಂದ ಮನಸ್ಸಿನ ಒಂದು ಮೂಲೆ ಖಾಲಿಯಾಗಿತ್ತು. ಅದೀಗ ಭರ್ತಿಯಾಗುತ್ತಿರುವುದು ಅವಳ ಗಮನಕ್ಕೆ ಬರುತ್ತಿತ್ತು.
ವಿಶಾಲ್ ಟೂರ್‌ನಲ್ಲಿದ್ದಾಗ ರಾಹುಲ್ ಕಾಲೇಜಿನಿಂದ ಬರುತ್ತಲೇ, “ವಿಶಾಲ್ ಸರ್ ಮನೆಯಲ್ಲಿಲ್ಲವೆಂದು ನಿಮಗೆ ಬೋರ್ ಆಗುತ್ತಿರಬಹುದು. ನೀವು ಇಷ್ಟಪಟ್ಟರೆ ನಾವೆಲ್ಲ ಹೊರಗೆ ಹೋಗಿ ಸುತ್ತಾಡಿಕೊಂಡು ಬರೋಣ. ನೀವು ಯಶ್ ಹಾಗೂ ಸಂಜನಾ ಅವರನ್ನು ಜೊತೆಗೆ ಕರೆದುಕೊಳ್ಳಿ,” ಎಂದು ಹೇಳುತ್ತಿದ್ದ.
ಆಗ ಸುಷ್ಮಾ, “ಅವರಿಬ್ಬರೂ ಕೋಚಿಂಗ್‌ಗೆ ಹೋಗಿದ್ದಾರೆ. ಅವರು ಬರುವುದು ರಾತ್ರಿ ತಡವಾಗಿ. ನಾವಿಬ್ಬರೇ ಹೋಗೋಣ,” ಎಂದೆನ್ನುತ್ತಾ ಗಾಡಿ ತೆಗೆಯುತ್ತಿದ್ದಳು.
ಇಬ್ಬರೂ ಹೊರಟುಹೋಗಿ ಅಲ್ಲಿ ಇಲ್ಲಿ ಸುತ್ತಾಡಿ, ತಮಗಿಷ್ಟವಾದುದನ್ನು ತಿಂದು ಮನೆಗೆ ಬರುತ್ತಿದ್ದರು. ಸುಷ್ಮಾ ರಾಹುಲ್‌ಗೆ ಪರ್ಸ್ ಹೊರತಗೆಯಲು ಅವಕಾಶವನ್ನೇ ಕೊಡುತ್ತಿರಲಿಲ್ಲ. ರಾಹುಲ್ ಅವಳ ಜೀವನದಲ್ಲಿ ಒಂದು ರೀತಿಯ ತಂಗಾಳಿಯ ಥರ ಬಂದಿದ್ದ. ಇಬ್ಬರ ಸ್ನೇಹದ ವ್ಯಾಪ್ತಿ ಹೆಚ್ಚುತ್ತಲೇ ಹೋಯಿತು. ಅವಳು ಏಕಾಂಗಿತನದ ಕೊರಕಲಿನಿಂದ ಹೊರಬಂದು ಹೊಸ ಸ್ನೇಹದ ಅನುಭವದ ಸಾಗರದಲ್ಲಿ ತೇಲಾಡುತ್ತಿದ್ದಳು. ತನ್ನ ವಯಸ್ಸನ್ನು ಮರೆತು ನವ ಯುವತಿಯ ಹಾಗೆ ದ್ವಿಗುಣ ಉತ್ಸಾಹದಿಂದ ಪ್ರತಿಯೊಂದು ಕೆಲಸವನ್ನು ಮಾಡಿ ಮುಗಿಸುತ್ತಿದ್ದಳು. ರಾಹುಲ್ ನ ಪ್ರತಿಯೊಂದು ಮಾತು ಅವನ ಹಾವಭಾವಗಳು ಬಹಳ ಇಷ್ಟವಾಗುತ್ತಿದ್ದವು.
ಹಲವು ದಿನಗಳ ಏಕಾಂಗಿತನದ ಅನುಭವದಿಂದ ಗೊತ್ತಿದ್ದೋ, ಗೊತ್ತಿಲ್ಲದೆಯೋ ತನ್ನೊಳಗಿನ ರಿಕ್ತತೆಯ ಅನುಭವ ಅವಳಿಗೆ ಆಗುತ್ತಿತ್ತು. ಈಗ ಈ ರಿಕ್ತತೆಯನ್ನು ರಾಹುಲ್‌ನ ಸಾಂಗತ್ಯ ತುಂಬುತ್ತಿತ್ತು. ಯಾವುದೇ ಕೆಲಸ ಮಾಡುತ್ತಿದ್ದರೂ ಅವಳಿಗೆ ರಾಹುಲ್‌ನ ನೆನಪಾಗುತ್ತಿತ್ತು. ಅವನ ಆಗಮನದ ನಿರೀಕ್ಷೆ ಆಗುತ್ತಿತ್ತು. ಬೇರೊಬ್ಬರ ಬಗೆಗಿನ ಕಲ್ಪನೆ ಮಾಡಿಕೊಳ್ಳುವುದು ಅಪರಾಧ. ಆದರೆ ಹೃದಯ ಅದನ್ನು ಅರ್ಥ ಮಾಡಿಕೊಳ್ಳುತ್ತದೆಯೇ? ಇಲ್ಲ. ಅದು ಕೇವಲ ತನ್ನದೇ ಆದ ಧ್ವನಿಯನ್ನು ಆಲಿಸುತ್ತದೆ, ತನ್ನದೇ ಆದ ಭಾವನೆ ಅರಿಯುತ್ತದೆ. ಅದರೊಳಗಿಂದ ಹೊರಬರುವುದು ಸ್ವಲ್ಪ ಕಷ್ಟಕರವೇ ಹೌದು.
ಈಗಂತೂ ಅವಳು ಇಷ್ಟವಿದ್ದೋ, ಇಲ್ಲದೆಯೋ ವಿಶಾಲ್ ಜೊತೆಗಿನ ಅಂತರಂಗದ ಕ್ಷಣಗಳಲ್ಲೂ ರಾಹುಲ್‌ನ ಮಧುರ ಧ್ವನಿ ಅವಳನ್ನು ಸುತ್ತುವರಿಯುತ್ತಿತ್ತು. ಮನಸ್ಸಿನಲ್ಲಿ ಅಲ್ಲೋಲ ಕಲ್ಲೋಲದ ವಾತಾವರಣ ಸೃಷ್ಟಿಯಾಗಿತ್ತು. ಮನಸ್ಸನ್ನು 2 ದಿಸೆಗಳಲ್ಲಿ ಎಳೆಯುವುದು, ಅವಳಿಗೆ ಇರುಸುಮುರುಸು ಉಂಟು ಮಾಡುತ್ತಿತ್ತು. ಮನೆಯಲ್ಲಿ ಕುಳಿತು ಕುಳಿತು ಇದೆಂತಹ ರೋಗ ತನಗೆ ಬಂದುಬಿಟ್ಟಿತು ಎಂದು ಅವಳಿಗೆ ಅನಿಸುತ್ತಿತ್ತು. ಯುವತಿಯರಂತಹ ತಳಮಳ, ಕನ್ನಡಿ ಎದುರು ನಿಂತಾಗ ತನ್ನದೇ ಮನೋದಿಸೆಯ ಬಗ್ಗೆ ಅವಳಿಗೆ ನಗು ಬರುತ್ತಿತ್ತು.
ಅದೊಂದು ದಿನ ರಾಹುಲ್ ಕಾಲೇಜಿನಿಂದ ಮನೆಗೆ ಬಂದಾಗ, ಅವನು ಜೋಲುಮುಖ ಹಾಕಿಕೊಂಡಿದ್ದ. ಸುಷ್ಮಾ ತಿಂಡಿ ತಿನ್ನಲು ಬಾ ಎಂದಾಗಲೂ ಕೂಡ ಅವನು ಮೌನವಾಗಿ ಕುಳಿತಿದ್ದ. ಸುಷ್ಮಾ ಮತ್ತೆ ಮತ್ತೆ ಪ್ರಶ್ನೆ ಮಾಡಿದಾಗ ಅವನು, “ಇಂದು ಕಾಲೇಜಿನಲ್ಲಿ ನನ್ನ ಮೊಬೈಲ್ ಕಳೆದುಹೋಯಿತು. ಮನೆಯಿಂದ ಬರುವಾಗ ಅಣ್ಣ ಎಷ್ಟೊಂದು ದುಬಾರಿ ಬೆಲೆಯ ಮೊಬೈಲ್ ಕೊಡಿಸಿದ್ದ. ಅಣ್ಣನಿಗೆ ಈ ವಿಷಯ ತಿಳಿದರೆ ಬಹಳ ಕೋಪ ಮಾಡಿಕೊಳ್ತಾರೆ,” ಹೇಳಿದ.
ಸುಷ್ಮಾ ಮೌನವಾಗಿ ನಿಂತುಕೊಂಡು ಅವನು ಹೇಳಿದ್ದನ್ನು ಕೇಳಿಸಿಕೊಂಡಳು. ಅವಳೇನೂ ಹೇಳಲಿಲ್ಲ. ಮರುದಿನವೇ ಅವಳು ತನ್ನ ಉಳಿತಾಯದ ಹಣದಿಂದ 15,000 ರೂ. ತೆಗೆದು ಅವನ ಕೈಲಿಟ್ಟಳು. ಅವನು ಬೇಡ ಬೇಡ ಎಂದು ನಿರಾಕರಿಸಿದರೂ ಅವಳು ತೆಗೆದುಕೊಳ್ಳಲೇಬೇಕೆಂದು ಹಠ ಹಿಡಿದಾಗ ಅವನು ಹಣ ಜೇಬಿಗೆ ಹಾಕಿಕೊಂಡ.
ಮತ್ತೆ ಕೆಲವು ದಿನಗಳು ಕಳೆದವು. ವಿಶಾಲ್ ಕೂಡ ಸಮಯ ಸಿಕ್ಕಾಗೆಲ್ಲ ರಾಹುಲ್‌ನ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದ. ಅಂದಹಾಗೆ ಅವನಿಗೆ ಮನೆಯ ಜವಾಬ್ದಾರಿ ನಿಭಾಯಿಸಲು ಸಮಯವೇ ಸಿಗುತ್ತಿರಲಿಲ್ಲ. ಹೆಂಡತಿ ಸುಷ್ಮಾಳಿಗೆ ಎಲ್ಲ ಜವಾಬ್ದಾರಿ ವಹಿಸಿ ಅವನು ನಿಶ್ಚಿಂತನಾಗಿದ್ದ. ಸುಷ್ಮಾ ಮನಸಾರೆ ರಾಹುಲ್‌ನ ಸ್ನೇಹದ ರಂಗಿನಲ್ಲಿ ಮುಳುಗಿ ಹೋಗಿದ್ದಳು. ಮೊದಲು ಅವಳಿಗೆ ವಿಶಾಲ್‌ನಲ್ಲಿ ಒಬ್ಬ ಸ್ನೇಹಿತ ಕಾಣಿಸುತ್ತಿದ್ದ. ಈಗ ಆ ಯಾವ ಲಕ್ಷಣಗಳೂ ಕಂಡುಬರುತ್ತಿರಲಿಲ್ಲ.
ಅವಳ ಈ ಯೋಚನೆ ತಪ್ಪಾಗಿತ್ತಾ? ವಿಶಾಲ್‌ಗೆ ಅವಳ ಕೋಮಲ ಭಾವನೆಗಳು ಅರ್ಥ ಆಗುತ್ತಲೇ ಇರಲಿಲ್ಲ. ಅವಳಿಗೆ ರಾಹುಲ್ ನಲ್ಲಿ ಒಬ್ಬ ಗೆಳೆಯ ಕಾಣಿಸುತ್ತಿದ್ದ. ಅವನು ಅವಳ ಮಾತುಕತೆಗಳಲ್ಲಿ ಆಸಕ್ತಿ ತೋರಿಸಿದ್ದ. ಅವಳ ಹವ್ಯಾಸಗಳನ್ನು ಗಮನಿಸುತ್ತಿದ್ದ. ಅವಳ ಆಸಕ್ತಿ ಅನಾಸಕ್ತಿಯ ಬಗ್ಗೆ ಚರ್ಚೆ ಮಾಡುತ್ತಿದ್ದ. ಅವಳಿಗೆ ಕೇವಲ ಇಂತಹ ಒಬ್ಬ ಗೆಳೆಯನ ಅವಶ್ಯಕತೆ ಇತ್ತು. ಅದು ಈಗ ರಾಹುಲ್ ನ ರೂಪದಲ್ಲಿ ಅವಳಿಗೆ ಸಿಕ್ಕಿದ್ದ.
ಅದೊಂದು ದಿನ ವಿಶಾಲ್ ಟೂರ್‌ಗೆ ಹೋಗಿದ್ದ. ಯಶ್ ಮತ್ತು ಸಂಜನಾ ಸ್ನೇಹಿತರೊಬ್ಬರ ಬರ್ತ್ ಡೇ ಪಾರ್ಟಿಗೆ ಹೋಗಿದ್ದರು. ಕತ್ತಲೆಯಾಗುತ್ತಾ ಬಂದಿತ್ತು. ರಾಹುಲ್ ಕೂಡಾ ಇನ್ನೂ ಬಂದಿರಲಿಲ್ಲ. ಸುಷ್ಮಾ ಲಾನ್ ನಲ್ಲಿ ಅತ್ತಿತ್ತ ಸುತ್ತಾಡುತ್ತಿದ್ದಳು. ಅಷ್ಟರಲ್ಲಿಯೇ ರಾಹುಲ್ ಬಂದ. ತಲೆ ಕೆಳಗೆ ಹಾಕಿಕೊಂಡಿದ್ದ. ಅವನು ನೇರವಾಗಿ ತನ್ನ ರೂಮಿಗೆ ಹೋದ. ಸುಷ್ಮಾಳನ್ನು ನೋಡಿಯೂ ಕೂಡ ಅವನು ನಿಲ್ಲಲಿಲ್ಲ. ಆದರೆ ಸುಷ್ಮಾಳಿಗೆ ಅವನ ಬಗ್ಗೆ ಚಿಂತೆಯಾಯಿತು. ಅವಳು ಅವನ ಹಿಂದೆಯೇ ಅವನ ಕೋಣೆಯವರೆಗೆ ಹೋದಳು.
ರಾಹುಲ್ ಆ ರೂಮಿಗೆ ಬಂದಾಗಿನಿಂದ ಅವಳು ಅವನ ರೂಮಿಗೆ ಹೋಗಿರಲಿಲ್ಲ. ಮನೆ ಕೆಲಸದವಳೇ ಅವನ ರೂಮನ್ನು ಗುಡಿಸಿ ಸ್ವಚ್ಛ ಮಾಡಿ ಹೋಗುತ್ತಿದ್ದಳು. ಸುಷ್ಮಾ ಅವನ ರೂಮಿಗೆ ಹೋದಾಗ, ಅವನು ತಲೆ ಕೆಳಗೆ ಹಾಕಿ ಕುಳಿತುಬಿಟ್ಟಿದ್ದ.
“ರಾಹುಲ್ ಏನಾಯ್ತು? ನಿನ್ನ ಆರೋಗ್ಯ ಸರಿ ಇದೆ ತಾನೇ?” ಸುಷ್ಮಾ ಕೇಳಿದಳು.
ರಾಹುಲ್ ಮುಖ ಎತ್ತದೆ, “ನಾನು ಆರೋಗ್ಯದಿಂದಿದ್ದೇನೆ,” ಎಂದ.
“ಆದರೆ ಈ ನಿನ್ನ ಅಳುಮುಖ ಏಕೆ?”
“ಅಣ್ಣ ಬೈಕ್‌ಗಾಗಿ ಹಣ ಕಳಿಸಿದ್ದರು. ನನ್ನ ಸ್ನೇಹಿತ ಉಮೇಶನ ತಂಗಿಯ ಮದುವೆಗೆಂದು ಆ ಹಣ ಕೊಟ್ಟುಬಿಟ್ಟೆ. ಈಗ ಅಣ್ಣ ಬೈಕ್ ಬಗ್ಗೆ ಕೇಳಿದರೆ ಏನು ಹೇಳುವುದು? ನನಗೊಂದೂ ಅರ್ಥ ಆಗ್ತಿಲ್ಲ. ಅದೊಂದು ದಿನ ನನ್ನ ಸ್ನೇಹಿತನೊಬ್ಬನನ್ನು ನಿಮಗೆ ಪರಿಚಯಿಸಿದ್ದೆ ಅಲ್ವಾ, ಅವನೇ ಉಮೇಶ್.”
“ಹೌದು ಹೌದು…. ನೆನಪಿಗೆ ಬಂತು.” ಆದರೆ ಆ ಹುಡುಗನ ಬಗ್ಗೆ ಅವಳಿಗೆ ಅಷ್ಟೇನೂ ಗೊತ್ತಾಗಿರಲಿಲ್ಲ. ಅವಳು ಪುನಃ ಕೇಳಿದಳು, “ಈಗ ಏನು ಮಾಡ್ತೀಯಾ?”
“ಮತ್ತೇನು ಮಾಡಲು ಸಾಧ್ಯ? ಅಣ್ಣನಂತೂ ನಾನಿಲ್ಲಿ ಪುಂಡಪೋಕರಿಗಳ ಜೊತೆ ಸುತ್ತುತ್ತಿದ್ದೇನೆ ಎಂದು ತಿಳಿಯುತ್ತಾನೆ. ಕೊನೆಗೆ ಅವನು ಓದೋದು ಸಾಕು ಇಲ್ಲಿಗೆ ಬಂದು ಬಿಡು ಎಂದು ಹೇಳುತ್ತಾನೆ,” ಎಂದ.
ರಾಹುಲ್ ಹೊರಟು ಹೋಗುತ್ತಾನೆ ಎಂಬ ಕಲ್ಪನೆಯೇ ಅವಳನ್ನು ಅಲ್ಲಾಡಿಸಿಬಿಟ್ಟಿತು. ಮುಂದೆ ಅದೇ ಏಕಾಂಗಿತನ, ಅದೇ ಬೇಸರ ಆಗುತ್ತದೆ. ರಾಹುಲ್ ಕಡೆ ನೋಡುತ್ತಾ ಸುಷ್ಮಾ ಹೇಳಿದಳು, “ನಾನು ನಿನಗೆ ಹಣದ ವ್ಯವಸ್ಥೆ ಮಾಡ್ತೀನಿ,” ಎಂದಳು.
“ಬೇಡ ಬೇಡ. ಅದೇನು ಅಷ್ಟು ಚಿಕ್ಕ ಮೊತ್ತವಲ್ಲ.”
“ಇರಲಿ ತೊಂದರೆಯಿಲ್ಲ. ನನ್ನ ಬಳಿ ಮಕ್ಕಳ ಕೋಚಿಂಗ್ ಹಣ ಇದೆ. ನಾನು ಅದನ್ನು ನಿನಗೇ ಕೊಡ್ತೀನಿ.”
“ಆದರೆ ಈ ಹಣವನ್ನು ನಾನು ನಿಮಗೆ ಬೇಗ ವಾಪಸ್ ಮಾಡ್ತೀನಿ.”
“ಸರಿ…. ಸರಿ…. ನೀನು ನಾಳೆ ಹಣವನ್ನು ತೆಗೆದುಕೊಂಡು ಹೋಗು. ಈಗ ಕೆಳಗೆ ತಿಂಡಿ ತಿನ್ನಲು ಬಾ,” ಎಂದಳು.
ಸುಷ್ಮಾ ಕೆಳಗೆ ಬಂದು ಕಪಾಟು ತೆರೆದಳು. ಅಲ್ಲಿ ನೋಟುಗಳು ಕಂಡುಬಂದವು. `ಈ ಹಣವನ್ನು ನಾನು ಈಗಲೇ ರಾಹುಲ್ ಗೆ ಕೊಟ್ಬುಬಿಡಬೇಕು. ಅವನಿಗೆ ಬಹಳ ಅವಶ್ಯಕತೆಯಿದೆ. ಅದರ ಬಗ್ಗೆ ಅವನು ಅದೆಷ್ಟು ಚಿಂತೆಯಲ್ಲಿದ್ದಾನೆ. ಈಗ ನಾನು ಅವನಿಗೆ ಹಣ ಕೊಟ್ಟರೆ ಎಷ್ಟು ಖುಷಿಪಡುತ್ತಾನೆ,’ ಎಂದು ಯೋಚಿಸುತ್ತಾ ಅವಳು ಹಣ ತೆಗೆದುಕೊಂಡು ನಿಧಾನವಾಗಿ ಹೆಜ್ಜೆ ಹಾಕುತ್ತಾ ರಾಹುಲ್ ರೂಮಿನ ಎದುರು ಹೋಗುತ್ತಿದ್ದಂತೆ ಅವಳ ಕಾಲು ಒಮ್ಮೆಲೆ ನಿಂತುಬಿಟ್ಟ.
ರಾಹುಲ್ ಫೋನ್ ನಲ್ಲಿ ಯಾರೊಂದಿಗೊ ಮಾತನಾಡುತ್ತಿದ್ದ. ಸುಷ್ಮಾಳ ಕಿವಿಗಳು ಅವನು ಆಡುತ್ತಿದ್ದ ಮಾತುಗಳನ್ನು ಆಲಿಸುತ್ತಿದ್ದ. ಅವನು ಗೆಳೆಯನಿಗೆ ಹೇಳುತ್ತಿದ್ದ, “ವಾಹ್ ಉಮೇಶ್….. ವಾಹ್! ಮೊಬೈಲ್ ಹಾಗೂ ಬೈಕ್‌ನ ವ್ಯವಸ್ಥೆಯಂತೂ ಆಯಿತು. ಇನ್ನು ಹೊಸದೇನನ್ನು ಕೇಳಬೇಕು ಅಂತಾ ಯೋಚಿಸುತ್ತಿರುವೆ. ಶ್ರೀಮಂತ ಮಹಿಳೆಯರ ಸ್ನೇಹ ಮಾಡುವುದರಿಂದ ಇದೇ ಲಾಭ. ಅವರಿಗೆ ತಮ್ಮ ಬೇಸರ ನೀಗಿಸಲು ಯಾರಾದರೂ ಬೇಕು. ನನಗೆ ನನ್ನ ಅವಶ್ಯಕತೆಗಳನ್ನು ಪೂರೈಸಲು ಇಂಥವರು ಯಾರಾದರೂ ಬೇಕಿತ್ತು.
“ನನಗೆ ಅನಿಸುತ್ತೆ. ನಾನು ಸ್ವಲ್ಪ ತಾಳ್ಮೆಯಿಂದ ಇದ್ದರೆ ಅವಳು ನನ್ನೊಂದಿಗೆ ಮಲಗಲು ಕೂಡ ಸಿದ್ಧಳಾಗುತ್ತಾಳೆ. ಮೂರ್ಖ ಹೆಂಗಸು. ಎಲ್ಲವೂ ಇದ್ದೂ ಅಲೆಮಾರಿಯ ಹಾಗಿದ್ದಾಳೆ. ನನಗೇನಾಗಬೇಕಾಗಿದೆ? ಅವಳ ಮೂರ್ಖತನದಲ್ಲಿ ನನಗಂತೂ ಲಾಭವೋ ಲಾಭ!”
ಸುಷ್ಮಾ ಭಾರವಾದ ಹೆಜ್ಜೆಗಳನ್ನಿಡುತ್ತಾ ಕೆಳಗೆ ಬಂದಳು. ಅವಳು ಕೊಡಲಿಯಿಂದ ಕಡಿದ ಮರವೊಂದರ ಹಾಗೆ ದೊಪ್ಪನೇ ಹಾಸಿಗೆ ಮೇಲೆ ಬಿದ್ದಳು. ಮನುಷ್ಯರನ್ನು ಅರಿತುಕೊಳ್ಳಲು ಕಣ್ಣುಗಳು ಅದ್ಹೇಗೆ ಮೋಸಹೋಗಿಬಿಡುತ್ತವೆ ಎಂದೆನಿಸಿತು ಅವಳಿಗೆ. ಅವಳಿಗೆ ತನ್ನ ಬಗ್ಗೆ ತನಗೇ ಅಸಹ್ಯವೆನಿಸತೊಡಗಿತು. ಇಷ್ಟು ದಿನಗಳಿಂದ ತಾನು ಚಾಣಾಕ್ಷ ರಾಹುಲ್‌ಗಾಗಿ ನಿರೀಕ್ಷಿಸುತ್ತಿದ್ದೆ. ಅವನು ತನ್ನ ಬಗ್ಗೆ ಸರಿಯಾಗೇ ಹೇಳಿದ್ದಾನೆ. ತಾನೇ ಮೂರ್ಖತನದ ಕೆಲಸ ಮಾಡುತ್ತಿದ್ದೆ. ಒಂಟಿತನದ ಅನುಭವದಿಂದ ಅವಳ ಹೆಜ್ಜೆಗಳು ಎತ್ತ ಕಡೆ ಸಾಗುತ್ತಿದ್ದವೋ, ಅದರ ಬಗ್ಗೆ ವಿಶಾಲ್ ಅಥವಾ ಮಕ್ಕಳಿಗೆ ಗೊತ್ತಾಗಿಹೋಗಿದ್ದರೆ, ಅವರ ದೃಷ್ಟಿಯಲ್ಲಿ ತನ್ನ ಗೌರವ ಏನಾಗಿರುತ್ತಿತ್ತು ಎಂದು ಅವಳು ಯೋಚಿಸಿದಳು.
ಅಷ್ಟರಲ್ಲಿಯೇ ವಿಶಾಲ್‌ನ ಧ್ವನಿ ಅವಳ ಕಿವಿಯಲ್ಲಿ ಗುಂಯ್‌ಗುಟ್ಟಿತ್ತು, `ಏಕಾಂಗಿತನದಿಂದ ಸದಾ ದುಃಖಿತರಾಗಿರುವುದಕ್ಕಿಂತ ವಿಧಿಯನ್ನು ಹಳಿಯುವುದಕ್ಕಿಂತ ಹೇಗಿದೆಯೋ ಹಾಗೆಯೇ ಅದನ್ನು ಸ್ವೀಕರಿಸುವುದರಲ್ಲಿಯೇ ಜಾಣ್ಮೆ ಇದೆ.’
ಆ ವಿಷಯ ಮನವರಿಕೆಯಾಗುತ್ತಿದ್ದಂತೆ ಅವಳ ಮನಸ್ಸಿಗೆ ಒಂದಿಷ್ಟು ಶಾಂತಿಯ ಅನುಭವವಾಯಿತು. ಅವಳು ಸೃಷ್ಟಿಗೆ ಧನ್ಯವಾದ ತಿಳಿಸಿದಳು. ವಯಸ್ಸಿನ ಈ ಹಂತದಲ್ಲಿ ತಾನು ಪರಿಸ್ಥಿತಿ ಸಂಭಾಳಿಸಲು ಆಗದಷ್ಟು ಕೆಟ್ಟಿಲ್ಲ ಎಂದು ಅವಳಿಗೆ ಅನ್ನಿಸಿತು. ನಾನು ನಾಳೆಯೇ ರಾಹುಲ್‌ಗೆ ಮನೆಯಿಂದ ಹೊರಟುಹೋಗಲು ಹೇಳಬೇಕು. ಪತಿ ಗಳಿಸಿದ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುವ ಮೂರ್ಖ ಹೆಂಡತಿ ನಾನಲ್ಲ ಎಂದು ಅವನಿಗೆ ಒತ್ತಿ ಒತ್ತಿ ಹೇಳಬೇಕು ಎನಿಸಿತು.
ಅವಳು ತನ್ನ ಜೀವನವೆಂಬ ಪುಸ್ತಕದಿಂದ ಆ ದುಃಖಾಂತ್ಯದ ಅಧ್ಯಾಯಕ್ಕೆ ಕೊನೆ ಹಾಡಲು ಯೋಚಿಸಿದ್ದಾಳೆ. ಏಕೆಂದರೆ ಅವಳಿಗೆ ಹೊಸದೊಂದು ಅಧ್ಯಾಯವನ್ನು ಆರಂಭಿಸುವ ಇಚ್ಛೆ ಇದೆ. ಕೆಲವು ಸಾರ್ಥಕ ಪ್ರಯತ್ನ ಮಾಡುತ್ತಾ ಅವಳು ಜೀವನದ ಶುಭಾರಂಭ ಮಾಡಿಯೇ ಮಾಡುತ್ತಾಳೆ. ಈಗ ತಾನು ಅಲೆಮಾರಿಯಲ್ಲ, ಕ್ರೋಧ, ಅವಮಾನ, ಅಸೂಯೆ, ಪಶ್ಚಾತ್ತಾಪದಿಂದ ಕೂಡಿದ ಅಶ್ರುಗಳು ಅವಳ ಕಣ್ಣಿಂದ ಹೊರಬಿದ್ದರೂ, ಅವಳ ಮನಸ್ಸಿನಲ್ಲಿ ಯಾವುದೇ ದ್ವಂದ್ವ ಇರಲಿಲ್ಲ. ಈಗ ತನಗೆ ತಾನೇ ಸೃಷ್ಟಿಸಿಕೊಂಡ ಭಾವನೆಗಳು ಹಾಗೂ ಹೊಸದೊಂದು ಪರಿಚಯದಿಂದ ಅವಳ ಮನಸ್ಸಿನ ಗೊಂದಲಗಳೆಲ್ಲ ನಿವಾರಣೆಯಾಗಿದ್ದವು. ಅವಳ ಹುಚ್ಚು ಮನಸ್ಸಿಗೆ ಇದೇ ಮುಖ್ಯ ಪರ್ಯಾಯವಾಗಿತ್ತು.
ಅವಳು ತಕ್ಷಣವೇ ರಾಹುಲ್ ಅಣ್ಣನಿಗೆ ಫೋನ್ ಮಾಡಲೆಂದು ಮೊಬೈಲ್ ಕೈಗೆತ್ತಿಕೊಂಡಳು. ತಾನು ಈವರೆಗೆ ಕೊಟ್ಟ ಹಣದ ಬಗ್ಗೆ ಮಾಹಿತಿ ಕೊಡಬೇಕು ಹಾಗೂ ಅದನ್ನು ವಾಪಸ್ ಕೇಳಬೇಕು ಎಂದು ಅವಳು ನಿರ್ಧರಿಸಿದಳು.