2020ರ ಮಾರ್ಚ್‌ ತಿಂಗಳು. ವಾತಾವರಣ ಅತ್ಯಂತ ಹಿತಕರವಾಗಿತ್ತು. ತರುಣ್‌ ಬೆಂಗಳೂರಿನ ಅಪಾರ್ಟ್‌ ಮೆಂಟಿನ ತನ್ನ ಮನೆಯಲ್ಲಿ ನೆಮ್ಮದಿಯಿಂದ ಮಲಗಿಕೊಂಡಿದ್ದ. ಆಗ ಅವನ ಫೋನ್‌ ರಿಂಗಾಯ್ತು. ನಿದ್ರೆಯಲ್ಲಿಯೇ ಒಂದಿಷ್ಟು ಕಣ್ತೆರೆದು ಸಮಯ ನೋಡಿದ. ರಾತ್ರಿಯ 2 ಗಂಟೆ ಆಗಿತ್ತು.`ಇಂತಹ ಹೊತ್ತಿನಲ್ಲಿ ಯಾರದಪ್ಪ ಫೋನ್‌….’ ಎಂದು ತನಗೇ ತಾನೇ ಗೊಣಗುತ್ತಾ ಸೈಡ್ ಟೇಬಲ್ ಮೇಲಿದ್ದ ಫೋನ್‌ ಕೈಗೆತ್ತಿಕೊಂಡು “ಹಲೋ…..” ಎಂದ.

“ನೀವು ತರುಣ್‌ ಅಲ್ವಾ…..?”

“ಹೌದು. ನಾನು ತರುಣ್‌ ಮಾತನಾಡ್ತಿರೋದು…. ನೀವು ಯಾರು?”

“ನಾನು ಜಯದೇವ್ ಆಸ್ಪತ್ರೆಯಿಂದ ಮಾತನಾಡ್ತಿರೋದು. ನಿಮಗೆ ಪ್ರತಾಪ್‌ ಬಗ್ಗೆ ಗೊತ್ತಾ….? ನಿಮ್ಮ ನಂಬರ್‌ ಅವರ ಎಮರ್ಜೆನ್ಸಿ ಕಾಂಟ್ಯಾಕ್‌ ಲಿಸ್ಟಿನಲ್ಲಿ ಸಿಕ್ಕಿತು.”

“ಹೌದು. ಪ್ರತಾಪ್‌ ನನ್ನ ಗೆಳೆಯ. ಅವನಿಗೆ ಏನಾಯ್ತು?” ಬೆಡ್‌ ನಿಂದ ಮೇಲೇಳುತ್ತಾ ತರುಣ್‌ ಗಾಬರಿಯ ಧ್ವನಿಯಲ್ಲಿ ಕೇಳಿದ.

“ತರುಣ್‌, ನಿಮ್ಮ ಗೆಳೆಯನಿಗೆ ಹಾರ್ಟ್‌ ಆಟ್ಯಾಕ್‌ ಆಗಿದೆ.”

“ಓಹ್‌…..!  ಈಗ ಅವನು ಹೇಗಿದ್ದಾನೆ?”

“ಈಗ ಅವರು ಆರಾಮಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ.”

“ನಾನು ಈಗಲೇ ಹೊರಟು ಬರ್ತೀನಿ.”

“ಬೇಡ ಬೇಡ. ನೀವು ಈಗಲೇ ಬರುವ ಅಗತ್ಯವಿಲ್ಲ. ನಾವ ಅವರಿಗೆ ನಿದ್ರೆಯ ಇಂಜೆಕ್ಷನ್‌ ಕೊಟ್ಟಿದ್ದೇವೆ. ಬೆಳಗ್ಗೆಯವರೆಗೂ ಅವರಿಗೆ ಎಚ್ಚರವಾಗುವುದಿಲ್ಲ. ಬೆಳಗ್ಗೆ 11 ಗಂಟೆಗೆ ನೀವು ಬನ್ನಿ. ಆಗ ಡಾಕ್ಟರ್‌ ಕೂಡ ಬಂದಿರುತ್ತಾರೆ. ಅವರೊಂದಿಗೆ ನೀವು ಮಾತನಾಡಬಹುದು.”

“ಸರಿ…ಸರಿ…” ಎಂದು ಹೇಳಿ ಫೋನ್‌ಇಟ್ಟು ಪುನಃ ನಿದ್ರಿಸುವ ಪ್ರಯತ್ನ ಮಾಡತೊಡಗಿದ.

ಆದರೆ ನಿದ್ರೆ ಅವನ ಕಣ್ಣುಗಳಿಂದ ಗಾವುದ ದೂರ ಹೋಗಿಬಿಟ್ಟಿತ್ತು. ಅವನ ಮನಸ್ಸು ತಳಮಳಗೊಂಡಿತ್ತು. ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದ ಶಾಲಿನಿಯನ್ನು ಎಬ್ಬಿಸಿ ವಿಷಯ ತಿಳಿಸುವ ಮನಸ್ಸು ಅವನಿಗೆ ಆಗಲಿಲ್ಲ.

ಅವನು ಕಣ್ಮುಚ್ಚಿ ಮತ್ತೊಮ್ಮೆ ಮಲಗುವ ಪ್ರಯತ್ನ ಮಾಡತೊಡಗಿದ. ಆದರೆ ನಿದ್ರೆಯ ಬದಲು ಅವನ ಕಣ್ಣುಗಳ ಮುಂದೆ 20 ವರ್ಷ ಹಿಂದೆ ಹುಬ್ಬಳ್ಳಿಯ ಎಂಜಿನಿಯರಿಂಗ್‌ ಕಾಲೇಜಿನ ದಿನಗಳು ನೆನಪಿಗೆ ಬಂದವು.

ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ತರುಣ್‌, ತನ್ನ ತಾಯಿ ತಂದೆಯರ ಹಿರಿಯ ಮಗ. ಅವನ ಬಗ್ಗೆ ಅವರು ಬಹಳಷ್ಟು ಅಪೇಕ್ಷೆ ಇಟ್ಟುಕೊಂಡಿದ್ದರು. ಒಳ್ಳೆಯ ಶಿಕ್ಷಣ ಪಡೆದುಕೊಂಡು ಆದಷ್ಟು ಬೇಗ ತನ್ನ ಕಾಲ ಮೇಲೆ ತಾನು ನಿಂತು, ತನ್ನ ತಮ್ಮಂದಿರ ಓದಿಗಾಗಿ ನೆರವು ನೀಡಬೇಕೆಂಬ ತುಡಿತ ಅವನಿಗಿತ್ತು.

ಅದೇ ಯೋಜನೆಯನ್ವಯ ಅವನು ಎಂಜಿನಿಯರಿಂಗ್‌ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೊಡಗಿಕೊಂಡ. ಮೊದಲ ಪ್ರಯತ್ನದಲ್ಲಿಯೇ ಅವನಿಗೆ ಒಳ್ಳೆಯ ಕಾಲೇಜಿನಲ್ಲಿ ಅಡ್ಮಿಶನ್‌ ದೊರಕಿತು.

ಕಾಲೇಜು ಸೇರಿಕೊಂಡ ಬಳಿಕ ಅಲ್ಲಿ ಅವನಿಗೆ ಅನೇಕ ಶ್ರೀಮಂತ ವಿದ್ಯಾರ್ಥಿಗಳ ಪರಿಚಯವಾಯಿತು. ಅವರಲ್ಲೊಬ್ಬ ವಿದ್ಯಾರ್ಥಿ ಪ್ರತಾಪ್‌. ಉದ್ದನೆಯ ಕಾಯ, ಬೆಳ್ಳಗಿನ ಬಣ್ಣ, ಗುಂಗುರು ಕೂದಲಿನ ಸ್ಮಾರ್ಟ್‌, ಸುಂದರ ಮುಖ.

ಪ್ರತಾಪ್‌ ಒಂದೆಡೆ ಆಕರ್ಷಕ ವ್ಯಕ್ತಿತ್ವ ಹೊಂದಿದ್ದನಾದರೆ, ಇನ್ನೊಂದೆಡೆ ಓದಿನಲ್ಲೂ ಮುಂದಿದ್ದ. ಶ್ರೀಮಂತ ತಾಯಿ ತಂದೆಗೆ ಅವನು ಕೊನೆಯ ಮಗ. ಶ್ರೀಮಂತಿಕೆಯ ಸುಖ ಹಾಗೂ ಕುಟುಂಬದವರ ಹೆಚ್ಚುವರಿ ಪ್ರೀತಿ ಅವನಿಗೆ ಸಿಗುತ್ತಿತ್ತು. ಪ್ರತಿಯೊದು ಕಲೆಯ ಬಗ್ಗೆ ಆಸಕ್ತಿ ಅವನಿಗೆ ಪರಂಪರಾಗತವಾಗಿಯೇ ದೊರಕಿತ್ತು. ಅವನ ವ್ಯಕ್ತಿತ್ವಕ್ಕೆ ಅದು ಒಂದು ರೀತಿಯ ಸಾಣೆ ಹಿಡಿಸಿದಂತಿತ್ತು. ಅವನು ತನ್ನೆಲ್ಲ ಈ ವಿಶೇಷತೆಯ ಕಾರಣದಿಂದ ಹುಡುಗಿಯರ ವಲಯದಲ್ಲಿ ಸಾಕಷ್ಟು ಜನಪ್ರಿಯನಾಗಿದ್ದ.

ಕಾಲೇಜಿನ ಅತ್ಯಂತ ಸುಂದರ ಹಾಗೂ ಸ್ಮಾರ್ಟ್‌ ಹುಡುಗಿ ಶಶಿ, ಮಿಲಿಟರಿ ಆಫೀಸರ್‌ ಮಗಳು. ಕಾಲೇಜಿನ ಆರಂಭದ ದಿನದಿಂದಲೇ ಅವಳು ಪ್ರತಾಪನನ್ನು ಇಷ್ಟಪಡುತ್ತಿದ್ದಳು.

ಪ್ರತಾಪನನ್ನು ನೋಡಿ ಸಾಮಾನ್ಯ ಬಣ್ಣದ ತರುಣವುಗೆ ಅಸೂಯೆ ಉಂಟಾಗುತ್ತಿತ್ತು. ಸೃಷ್ಟಿ ಅವನೊಬ್ಬನಿಗೆ ಎಲ್ಲ ವಿಶೇಷತೆಗಳನ್ನು ಧಾರೆ ಎರೆದಿದೆ ಎಂದು ಅವನಿಗೆ ಅನ್ನಿಸುತ್ತಿತ್ತು. ಸುಂದರ ರೂಪ, ಶಿಕ್ಷಣ, ಸುಖೀ ಕುಟುಂಬ ಹೀಗೆ ಅವನಿಗೆ 100ಕ್ಕೆ 100 ಅಂಕ ನೀಡಿದೆ ಎಂದು ತರುಣನಿಗೆ ಅನ್ನಿಸುತ್ತಿತ್ತು.

ಜೀವನದ ಯಾವುದೇ ಒಂದು ಕ್ಷೇತ್ರದಲ್ಲಿ ಯಾರಿಗಾದರೂ 80 ಅಂಕ ದೊರೆತರೆ, ಉಳಿದ ಕ್ಷೇತ್ರಕ್ಕೆ ಅವನ ಬಳಿ 20 ಅಂಕಗಳು ಮಾತ್ರ ಇವೆ ಎಂದೆನಿಸುತ್ತಿತ್ತು. ಆದರೆ ಪ್ರತಾಪನನ್ನು ನೋಡಿ ಅವನಿಗೆ ಈ ಫಿಲಾಸಪಿ ಕನ್ವಿನ್ಸಿಂಗ್‌ಆಗುತ್ತಿರಲಿಲ್ಲ. ಯಾವುದೇ ಕ್ಷೇತ್ರದಲ್ಲಿ ಅವನು ಹಿಂದುಳಿದಿರಲಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಅವನು ಮಿಂಚುವ ನಕ್ಷತ್ರದಂತಾಗಿಬಿಟ್ಟಿದ್ದ.

ತರುಣ್‌ ಹಾಗೂ ಪ್ರತಾಪ್‌ ನಡುವೆ ಯಾವುದೇ ಸಮಾನತೆ ಇರಲಿಲ್ಲ. ಆದರೆ ಬೌತಶಾಸ್ತ್ರದ ನಿಯಮ `ಆಪೋಸಿಟ್‌ ಅಟ್ರ್ಯಾಕ್’ನಿಂದಾಗಿ ಅವರಿಬ್ಬರ ನಡುವೆ ಒಳ್ಳೆಯ ಸ್ನೇಹವಾಗಿತ್ತು. ಮೊದಲ ವರ್ಷ ಇಬ್ಬರೂ ರೂಮ್ ಮೇಟ್‌ ಆಗಿದ್ದರು. ಇಬ್ಬಿಬ್ಬರು ಒಂದೇ ಕೋಣೆಯಲ್ಲಿ ಇರುವುದು ಅನಿವಾರ್ಯವಾಗಿತ್ತು. ಹೀಗಾಗಿ ಇಬ್ಬರಲ್ಲೂ ಸ್ನೇಹ ಚಿಗುರಿತ್ತು. ಮುಂದಿನ ಮೂರು ವರ್ಷ ಅವರು ಅಕ್ಕಪಕ್ಕದ ಕೋಣೆಯಲ್ಲಿ ಇದ್ದರು.

ತರುಣ್‌ ಹಾಗೂ ಪ್ರತಾಪ್‌ ನಡುವಿನ ಸ್ನೇಹ ಬಹಳ ವಿಶಿಷ್ಟವಾಗಿತ್ತು. ಒಬ್ಬರು ಇನ್ನೂ ಮಲಗಿಕೊಂಡಿದ್ದರೆ, ಮತ್ತೊಬ್ಬರು ಮೆಸ್ ಬಂದ್‌ ಆಗುವ ಮೊದಲೇ ಊಟವನ್ನು ತಂದು ಕೋಣೆಯಲ್ಲಿ ಇಟ್ಟುಕೊಳ್ಳುತ್ತಿದ್ದರು. ಒಬ್ಬರ ಪ್ರಾಜೆಕ್ಟ್ ವರ್ಕ್‌ ಅಪೂರ್ಣವಾಗಿದ್ದರೆ, ಇನ್ನೊಬ್ಬರು ಅದನ್ನು ಹೇಳುವ ಮೊದಲೇ ಪೂರ್ಣಗೊಂಡಿರುತ್ತಿತ್ತು. ಒಬ್ಬರು ಗಣಿತದಲ್ಲಿ ಸ್ಟ್ರಾಂಗ್‌ ಆಗಿದ್ದರೆ, ಇನ್ನೊಬ್ಬರು ಡ್ರಾಯಿಂಗ್‌ ನಲ್ಲಿ.

ಇಬ್ಬರೂ ಒಬ್ಬರಿಗೊಬ್ಬರು ಸಪೋರ್ಟ್‌ ಮಾಡುತ್ತಿದ್ದರು. ಒಬ್ಬರು ಓದಿನಲ್ಲಿ ಒಂದಿಷ್ಟು ಮಂದಗತಿ ತೋರಿಸಿದರೆ, ಇನ್ನೊಬ್ಬರು ಅದಕ್ಕೆ ಪುಶ್‌ ಮಾಡುತ್ತಿದ್ದರು. ಇಬ್ಬರಲ್ಲಿ ಜಗಳಗಳು ಆಗುತ್ತಲೇ ಇರಲಿಲ್ಲ. ಯಾವುದೇ ತಪ್ಪು ಕಲ್ಪನೆ ಉಂಟಾಗುತ್ತಿರಲಿಲ್ಲ. ಕಾಲೇಜಿನ ಆರಂಭದ ದಿನಗಳಿಂದಲೇ ಶುರುವಾದ ಅವರ ಸ್ನೇಹದ ಕೊಂಡಿ ಆರ್ಥಿಕ, ಸಾಮಾಜಿಕ ಹಾಗೂ ರೂಪ ಈ ಯಾವುದರಲ್ಲೂ ಅಸಮಾನತೆ ತರಲಿಲ್ಲ. ಅವರಿಬ್ಬರು ತಮ್ಮ ಇತರೆ ಸ್ನೇಹಿತರೊಂದಿಗೂ ಸಮಯ ಕಳೆಯುತ್ತಿದ್ದರು. ಆದರೆ ತರುಣ್‌ ಹಾಗೂ ಪ್ರತಾಪ್‌ ನಡುವಿನ ಸ್ನೇಹ ವಿಭಿನ್ನವಾಗಿತ್ತು. ಇಬ್ಬರೂ ಗಂಟೆಗಟ್ಟಲೇ ಪರಸ್ಪರ ಚರ್ಚಿಸುತ್ತಿದ್ದರು. ಒಮ್ಮೆ ಅವರ ನಡುವೆ ಮಾತುಕತೆ ಶುರುವಾದರೆ, ಅದು ನಿಲ್ಲುತ್ತಲೇ ಇರಲಿಲ್ಲ. ಒಬ್ಬರು ಇನ್ನೊಬ್ಬರಿಗೆ ಯಾವಾಗ ಅಗತ್ಯ ಬೀಳುತ್ತಿದ್ದರೊ ಹೇಳಲು ಆಗುತ್ತಿರಲಿಲ್ಲ.

ಒಂದು ಸಲ ಬೇಸಿಗೆ ರಜೆಯಲ್ಲಿ ತರುಣನಿಗೆ ಪ್ರತಾಪನ ಮನೆಗೆ ಹೋಗುವ ಅವಕಾಶ ದೊರಕಿತ್ತು. ಮೊದಲ ಸಲ ಅವನಿಗೆ ಅವರ ಕುಟುಂಬದವರನ್ನು ಭೇಟಿಯಾಗುವ ಸಂದರ್ಭ ಒದಗಿಬಂತು. ಅವನ ತಾಯಿ ತಂದೆ, ಇಬ್ಬರು ಅಣ್ಣಂದಿರ ಜೊತೆ ತರುಣ್‌ 2 ದಿನಗಳ ಕಾಲ ಕುಟುಂಬ ಸದಸ್ಯನಂತೆ ಇದ್ದ. ಆ ಮನೆಯವರ ವರ್ತನೆ, ವ್ಯವಹಾರ ನೋಡಿ ಸಮಾಜದ ಮೇಲ್ವರ್ಗದ ಜನ ಹೀಗೂ ಇರಬಹುದು ಎಂದು ಅವನಿಗೆ ಆಗಲೇ ಗೊತ್ತಾಗಿದ್ದು.

ಪ್ರತಾಪ್‌ ಜೊತೆಗೆ ತನ್ನ ಸ್ನೇಹ ಏಕೆ ಅಷ್ಟೊಂದು ಒಳ್ಳೆಯ ರೂಪದಲ್ಲಿ ಕುದುರುತ್ತಿದೆ ಎನ್ನುವುದು ಅವನಿಗೆ ಅಗಲೇ ಗೊತ್ತಾಗಿದ್ದು. ಅವರ ಮನೆಯಿಂದ ವಾಪಸ್‌ ಬಂದ ಬಳಿಕ ಅವರ ಕುಟುಂಬದವರೊಂದಿಗೆ ಅದರಲ್ಲೂ ಪ್ರತಾಪನ ತಾಯಿಯೊಂದಿಗೆ ಫೋನಿನಲ್ಲಿ ಸಂಪರ್ಕದಲ್ಲಿದ್ದ.

ಅದೊಂದು ಸಲ ಸೆಮಿಸ್ಟರ್‌ಫೈನಲ್ ಪರೀಕ್ಷೆ ಹತ್ತಿರವಾಗಿತ್ತು. ಆಗ ಪ್ರತಿಯೊಬ್ಬರೂ ಪುಸ್ತಕಗಳೊಂದಿಗೆ ಅಂಟಿಕೊಂಡು ಕುಳಿತಿದ್ದರು. ತರುಣ್‌ ಕೂಡ ಯಾವುದೊ ಒಂದು ಪುಸ್ತಕ ತರಲೆಂದು ರೂಮಿಗೆ ಹೋದಾಗ ಅಲ್ಲಿ ಪ್ರತಾಪ್‌ ಪ್ರಜ್ಞಾಹೀನನಾಗಿ ಬಿದ್ದಿರುವುದು ಕಂಡಿತು. ಅವನ ಹಣೆ ಮುಟ್ಟಿ ನೋಡಿದಾಗ ಜ್ವರದಿಂದ ಕುದಿಯುತ್ತಿರುವುದು ಗಮನಕ್ಕೆ ಬಂತು.

ತರುಣ್‌ ಸ್ವಲ್ಪ ವಿಳಂಬ ಮಾಡದೆಯೇ ತನ್ನ ಇತರೆ ಗೆಳೆಯರ ಸಹಾಯದೊಂದಿಗೆ ಪ್ರತಾಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ. ಕಾಂಪೌಂಡರ್‌ ಇಂಜೆಕ್ಷನ್‌ ಕೊಟ್ಟು, ಅವನನ್ನು ತಕ್ಷಣವೇ ಅಡ್ಮಿಟ್‌ ಮಾಡಲು ಹೇಳಿದರು. ಪ್ರತಿ ಗಂಟೆಗೊಮ್ಮೆ ಜ್ವರ ತಪಾಸಣೆ ಮಾಡುತ್ತಿರಬೇಕು. ಹಾಗೇನಾದರೂ ಸಂದರ್ಭ ಬಂದರೆ ನಾನು ಡಾಕ್ಟರನ್ನು ಕರೆಸಿಕೊಳ್ಳುತ್ತೇನೆ. ಈಗ ನೀವು ಹೋಗಬಹುದು ಎಂದು ಹೇಳಿ ಕಳುಹಿಸಿದರು.

ಎಲ್ಲ ಗೆಳೆಯರು ಹಾಸ್ಟೆಲಿ‌ಗೆ ವಾಪಸ್‌ ಹೋದರು. ಬೆಳಗ್ಗೆ ಪ್ರತಾಪ್‌ ಕಣ್ಣುಬಿಟ್ಟಾಗ ತರುಣ್‌ ಕೂಡ ಅಲ್ಲಿಯೇ ಸಮೀಪದಲ್ಲಿ ಬೆಡ್ ಮೇಲೆ ಮಲಗಿರುವುದು ಕಂಡಿತು.

“ಏ ತರುಣ್‌, ನೀನು ಇಲ್ಲೇನು ಮಾಡುತ್ತಿರುವೆ? ನೀನು ರಾತ್ರಿಯಿಡೀ ಓದಬೇಕಿತ್ತಲ್ಲ…..?” ಪ್ರತಾಪ್‌ ಅಚ್ಚರಿಯಿಂದ ಕೇಳಿದ.

“ಇಲ್ಲ ಪ್ರತಾಪ್‌ ಹೇಗೂ ಮಲಗಬೇಕಿತ್ತಲ್ಲ. ಹಾಗಾಗಿ ಇಲ್ಲಿಯೇ ಮಲಗಿಕೊಂಡೆ.”

ಆಗ ಕಾಂಪೌಂಡರ್‌ ಹಾಗೂ ಡಾಕ್ಟರ್‌ ಇಬ್ಬರೂ ಜೊತೆ ಜೊತೆಗೆ ಅಲ್ಲಿಗೆ ಬಂದರು. ಕಾಂಪೌಂಡರ್‌ ಡಾಕ್ಟರ್‌ಗೆ, “ಸಾರಿ ಡಾಕ್ಟರ್ ಸರ್‌, ನನಗೆ ನಿದ್ರೆ ಬಂದುಬಿಟ್ಟಿತು. ಹಾಗಾಗಿ ಗಂಟೆ ಗಂಟೆಗೆ ಜ್ವರ ತಪಾಸಣೆ ಮಾಡಲು ಆಗಲಿಲ್ಲ. ಆದರೆ ನಾನು ಇವರಿಗೆ ಇಂಜೆಕ್ಷನ್‌ ಮಾತ್ರ ಕೊಟ್ಟೆ.”

ಆಗ  ಪ್ರತಾಪನ ದೃಷ್ಟಿ ತರುಣನ ಕಡೆ ಹೋಯಿತು. ಅವನು ಕಣ್ಣು ಮಿಟುಕಿಸಿ ಮುಗುಳ್ನಕ್ಕ.

ಸ್ವಲ್ಪ ಹೊತ್ತಿನಲ್ಲಿ ಪ್ರತಾಪನ ತಾಯಿಯ ಫೋನ್‌ ಬಂತು, “ಮಗು ನಿನ್ನ ಆರೋಗ್ಯ ಈಗ ಹೇಗಿದೆ?”

“ಪರವಾಗಿಲ್ಲ ಅಮ್ಮ……”

“ತರುಣ್‌ ನಿನ್ನ ಹತ್ತಿರವೇ ಇದ್ದಾನಲ್ಲ?”

“ಹೌದು ಅಮ್ಮ. ಆದರೆ ಅದು ನಿಮಗೆ ಹೇಗೆ ಗೊತ್ತಾಯ್ತು?”

“ನಾನೇ ಅವನಿಗೆ ನಿನ್ನನ್ನು ಸರಿಯಾಗಿ ನೋಡಿಕೊಳ್ಳಲು ಹೇಳಿದ್ದೆ. ಬಹಳ ಒಳ್ಳೆಯ ಹುಡುಗ. ನಾನು ನಿನಗೆ ಹೇಳ್ತಿದ್ದೇನೆ ನೀನು ಯಾವಾಗಲೂ ಅವನ ಬಗ್ಗೆ ಗಮನ ಕೊಡಬೇಕು. ಸಮಸ್ಯೆ ಉಂಟಾದಾಗ ಎಂದೂ ಏಕಾಂಗಿ ಆಗಿಬಿಡಬಾರದು,” ಎಂದರು.

“ಇಲ್ಲ ಅಮ್ಮ…”

ನಾಲ್ಕು ವರ್ಷಗಳು ಹೇಗೆ ಕಳೆದುಹೋದವೋ ಗೊತ್ತೇ ಆಗಲಿಲ್ಲ. ಕಾಲೇಜಿನ ಈ 4 ವರ್ಷಗಳು ಎಲ್ಲ ಗೆಳೆಯರಿಗೆ ಎಂಜಿನಿಯರಿಂಗ್‌ ಡಿಗ್ರಿ ಕೊಟ್ಟು ಅವರಿಗೆ ಹೊಸ ರೆಕ್ಕೆಗಳನ್ನು ಮೂಡಿಸಿತು.

ಪ್ರತಾಪ್‌ ಹಾಗೂ ಶಶಿಯ ಸುಂದರ ಜೋಡಿಯ ಪ್ರೀತಿಯ ಸಸಿ ಈಗ ವಿಶಾಲ ವೃಕ್ಷದ ರೂಪ ಪಡೆದುಕೊಂಡಿತ್ತು.

ಗೆಳೆಯರು ತಮ್ಮ ತಮ್ಮ ಕೆರಿಯರ್‌ ರೂಪಿಸಿಕೊಳ್ಳಲು ದೇಶದ ಬೇರೆ ಬೇರೆ ನಗರ ಅಷ್ಟೇ ಏಕೆ ವಿದೇಶಗಳಿಗೂ ಕೂಡ ಹೋದರು.

ಕ್ರಮೇಣ ಎಲ್ಲರ ಮದುವೆಗಳು ಆಗತೊಡಗಿದವು. ತರುಣನ ಮದುವೆ ಮಧ್ಯಮ ವರ್ಗದ ಕುಟುಂಬದ ಹುಡುಗಿ ಶಾಲಿನಿಯ ಜೊತೆ ಆಯಿತು. ಅವರದು ಮನೆಯವರೇ ನಿರ್ಧರಿಸಿದ ಮದುವೆ. ಇಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ಇತ್ತು. 1 ವರ್ಷದ ಬಳಿಕ ಶಾಲಿನಿ ಒಂದು ಗಂಡುಮಗುವಿಗೆ ಜನ್ಮ ನೀಡಿದಾಗ ಮನೆಯಲ್ಲಿ ಖುಷಿಯ ಅಲೆ ತುಂಬಿಕೊಂಡಿತು.

ಅತ್ತ ಪ್ರತಾಪ್‌ ಹಾಗೂ ಶಶಿಗೂ ಒಳ್ಳೆಯ ನೌಕರಿ ದೊರಕಿತ್ತು. ಅವರಿಬ್ಬರೂ ಈಗಲೇ ಮದುವೆ ಮಾಡಿಕೊಳ್ಳಲು ಸಿದ್ಧರಿರಲಿಲ್ಲ. ಇನ್ನೂ ಕೆಲವು ತಿಂಗಳುಗಳವರೆಗೆ ಬ್ಯಾಚುಲರ್‌ ಲೈಫ್‌ ಎಂಜಾಯ್‌ ಮಾಡಲು ನಿರ್ಧರಿಸಿದರು. ಒಮ್ಮೊಮ್ಮೆ ತರುಣನಿಗೆ ಇಲ್ಲೂ ಕೂಡ ಪ್ರತಾಪನದೇ ಗೆಲುವಾಯಿತು ಎಂದು ಅನಿಸುತ್ತಿತ್ತು. ತಾನು ಮಾತ್ರ ಕುಟುಂಬದ ಗಾಡಿಯನ್ನು ಎಳೆದುಕೊಂಡು ಹೋಗುವುದು ಅನಿವಾರ್ಯವಾಗಿತ್ತು.

ಆದರೆ ತರುಣನಿಗೆ ತನ್ನ ಪುಟ್ಟ ಮಗನನ್ನು ಮಡಿಲಲ್ಲಿ ಕೂರಿಸಿಕೊಂಡು ಅವನನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರೆ, ಜಗತ್ತಿನ ಸುಖಗಳೆಲ್ಲ ಕಡಿಮೆ ಎಂದೆನಿಸುತ್ತಿತ್ತು. ಪುಟ್ಟ ಮಗ, `ಅಪ್ಪಾ’ ಎಂದು ಕರೆದಾಗ, ತರುಣ್‌ ಅವನನ್ನು ಮಡಿಲಲ್ಲಿ ಎತ್ತಿಕೊಂಡು ಖುಷಿಯಿಂದ ಕುಣಿದುಬಿಟ್ಟಿದ್ದ.

ಮರು ವರ್ಷ ಪ್ರತಾಪ್‌ ಹಾಗೂ ಶಶಿ ಮದುವೆ ಅದ್ಧೂರಿಯಿಂದ ನೆರವೇರಿತು. ಮದುವೆಯಾದ ಕೆಲವೇ ದಿನಗಳಲ್ಲಿ ಒಂದು ಅಸೈನ್ಮೆಂಟ್‌ ಮೇಲೆ ಪ್ರತಾಪ್‌ವಿದೇಶಕ್ಕೆ ಹೋಗಬೇಕಾಗಿ ಬಂದಿತು. ಅವನು ವಾಪಸ್‌ ಬರುವ ಹೊತ್ತಿಗೆ ಶಶಿ ಅವನ ಮುಂದೆ ವಿಚ್ಛೇದನದ ಬೇಡಿಕೆ ಇಟ್ಟಿದ್ದಳು.

ಪ್ರತಾಪನ ಪ್ರೀತಿ ಹೇಗಿತ್ತೆಂದರೆ, ಅವಳ ಯಾವುದೇ ಬೇಡಿಕೆಯನ್ನು ನಿರಾಕರಿಸಿರಲಿಲ್ಲ. ಹೀಗಾಗಿ ಅವಳ ಈ ಬೇಡಿಕೆಯನ್ನೂ ನಿರಾಕರಿಸಲಿಲ್ಲ. ಇದನ್ನು ಅವಳ ಖುಷಿಯೆಂದೇ ಭಾವಿಸಿದ. ಪರಸ್ಪರ ಒಪ್ಪಿಗೆಯ ಮೇರೆಗೆ ಇಬ್ಬರಿಗೂ ವಿಚ್ಛೇದನ ಸಿಕ್ಕಿತು.

ಮದುವೆಗೆ ಎಷ್ಟು ದಿನ ಸಿದ್ಧತೆ ನಡೆದಿತ್ತೋ ಅಷ್ಟು ದಿನ ಕೂಡ ಅವನ ಮದುವೆ ಉಳಿಯಲಿಲ್ಲ. ತಪ್ಪು ಯಾರದ್ದಿತ್ತು, ಏನಾಗಿತ್ತು ಆ ಎಲ್ಲಾ ಸಂಗತಿಗಳಿಗೆ ನಿರ್ಧಾರದ ಬಳಿಕ ಯಾವುದೇ ಮಹತ್ವ ಉಳಿಯುವುದಿಲ್ಲ. ಕೆಲವು ದಿನಗಳ ಬಳಿಕ ಬಂದ ಸುದ್ದಿಯೆಂದರೆ, ಶಶಿ ಇನ್ನೊಬ್ಬರನ್ನು ಮದುವೆಯಾದಳಂತೆ.

ಇತ್ತ ತರುಣನ ಹೆಂಡತಿ ಮತ್ತೊಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಆ ಮಗುವಿನ ಜೊತೆಗೆ ಅವರ ಕುಟುಂಬದ ಖುಷಿಯೂ ಇಮ್ಮಡಿಸಿತ್ತು.

ಪ್ರತಾಪನ ಮದುವೆ ಮುರಿದು ಬಹಳ ದಿನಗಳು ಕಳೆದುಹೋಗಿದ್ದವು. ಎಲ್ಲರೂ ಅದೆಷ್ಟು ತಿಳಿ ಹೇಳಿದರೂ ಅವನು ಮಾತ್ರ ಮತ್ತೊಂದು ಮದುವೆಗೆ ಮನಸ್ಸು ಮಾಡಲಿಲ್ಲ. ಶಶಿಯಿಂದ ಮುರಿದು ಹೋದ ಸಂಬಂಧ ಅವನ ಮನಸ್ಸನ್ನು ಎಷ್ಟು ನೋಯಿಸಿತ್ತೆಂದರೆ, ಅವನು ಮನಸ್ಸು ಮತ್ತಾರೊಂದಿಗೂ ಹೊಂದಿಕೊಳ್ಳಲು ತಯಾರಿರಲಿಲ್ಲ.

ಈಗ ತರುಣನಿಗೆ ಗೆಳೆಯ ಪ್ರತಾಪ್‌ ಯಾವುದರಲ್ಲಿ ಅಂಕ ಕಳೆದುಕೊಂಡಿದ್ದಾನೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. 100 ಅಂಕದ ಫಿಲಾಸಫಿ ಅವನಿಗೆ ಪರಿಪೂರ್ಣವಾಗಿ ಅನ್ವಯಿಸುತ್ತಿತ್ತು.

ಪ್ರತಾಪನ ವಯಸ್ಸು ಹಣ ಗಳಿಸುವುದರಲ್ಲಿ ಹಾಗೂ ಸ್ನೇಹಿತರನ್ನು ಭೇಟಿಯಾಗುವುದರಲ್ಲೇ ಕಳೆದು ಹೋಗುತ್ತಿತ್ತು. ಅವನ ಬೆರೆಯುವ ಸ್ವಭಾವ ಹಾಗೂ ಹಾಡಿನ ಹವ್ಯಾಸ ಎಂಥದೇ ಸಂದರ್ಭದಲ್ಲೂ ಜೀವ ತುಂಬುತ್ತಿತ್ತು. ಪ್ರತಿಯೊಬ್ಬ ಗೆಳೆಯರ ಮನೆಯಲ್ಲೂ ಅವನಿಗೆ ಅದ್ದೂರಿ ಸ್ವಾಗತ ದೊರಕುತ್ತಿತ್ತು. ಪ್ರತಿಯೊಂದು ಕುಟುಂಬದಲ್ಲಿ ಅವನಿಗೆ ಕೊಡಲಾಗುತ್ತಿದ್ದ ಉಡುಗೊರೆಗಳು ಕೇವಲ ಯೂಜರ್ಸ್‌ ಮ್ಯಾನುವೆಲ್ ಜೊತೆಗಷ್ಟೇ ಬರ್ತಾ ಇರಲಿಲ್ಲ, ಅದನ್ನು ಎಲ್ಲೆಡೆ ಬೇಕೆಂಬ ಸಲಹೆಯೊಂದಿಗೆ ಬರುತ್ತಿದ್ದ.

ತನ್ನ ಕಲಾತ್ಮಕ ಸಲಹೆ ಹಾಗೂ ಎಲ್ಲರ ಜೊತೆಗೂ ಬೆರೆಯುವ ಗುಣದೊಂದಿಗೆ ಅವನು ತನ್ನ ಸ್ನೇಹಿತರೊಂದಿಗೆ ಎಷ್ಟು  ನಿಕಟವಾಗಿದ್ದನೊ, ಅವರ ಪತ್ನಿಯರ ಜೊತೆಗೂ ಅಷ್ಟೇ ಜನಪ್ರಿಯನಾಗಿದ್ದ. ಅವನು ಕೆಲಸದ ನಿಮಿತ್ತ ಎಷ್ಟೋ ದೇಶ ಸುತ್ತುತ್ತಿದ್ದ. ಪ್ರತಿ ಬಾರಿ ವಾಪಸ್ಸಾಗುವಾಗ ಅವನು ಏಕಾಂಗಿಯಾಗಿಯೇ ಮರಳುತ್ತಿದ್ದ.

45ನೇ ವರ್ಷದಲ್ಲಿ ಅವನು ಬೆಂಗಳೂರಿನಲ್ಲಿ ಒಂದು ಲಕ್ಷುರಿ ಅಪಾರ್ಟ್‌ ಮೆಂಟ್‌ ನಲ್ಲಿ ಏಕಾಂಗಿಯಾಗಿಯೇ ವಾಸವಾಗಿದ್ದ.

ಇಡೀ ರಾತ್ರಿ ತರುಣ್‌ ಅದೇ ನೆನಪಲ್ಲಿ ಮುಳುಗಿದ್ದ. ಸೂರ್ಯನ ಎಳೆಯ ಕಿರಣಗಳು ಅವನ ಬೆಡ್‌ ರೂಮಿನಲ್ಲಿ ಇಣುಕಿದಾಗ ಶಾಲಿನಿಗೆ ಎಚ್ಚರವಾಯಿತು. ಅವಳು ಗಂಡನತ್ತ ನೋಡಿ, “ಏನಿತ್ತು ನೀವು ಇಷ್ಟು ಬೇಗ ಎದ್ದಿದ್ದೀರೀ….?” ಎಂದು ಕೇಳಿದಳು.

“ಇಲ್ಲ. ವಾಸ್ತವದಲ್ಲಿ ನಾನು ಮಲಗೇ ಇಲ್ಲ,” ಎಂದು ಹೇಳಿ ಅವನು ಪ್ರತಾಪನ ಬಗ್ಗೆ ಎಲ್ಲ ವಿಷಯ ತಿಳಿಸಿದ.

“ಓಹ್‌….! ಸೋ ಸ್ಯಾಡ್‌. ನಾವೀಗಲೇ ಆಸ್ಪತ್ರೆಗೆ ಹೋಗೋಣ ಬನ್ನಿ.”

“ನೀನು ಮಕ್ಕಳ ಜೊತೆ ಮನೆಯಲ್ಲೇ ಇರು. ನಾನೇ ಹೋಗಿ ಬರ್ತೀನಿ,” ಎಂದು ಹೇಳಿದ ತರುಣ್‌ ಅವಧಿಗೆ ಮುನ್ನವೇ ಆಸ್ಪತ್ರೆ ಹೋಗಿ ಐಸಿಯುನ ಕಿಟಕಿಯಿಂದ ಪ್ರತಾಪನನ್ನು ನೋಡುತ್ತಾ ನಿಂತುಬಿಟ್ಟ.

ಬಳಿಕ ಅಲ್ಲಿನ ವೈದ್ಯರಿಂದ ತಿಳಿದು ಬಂದ ವಿಚಾರ, ರಾತ್ರಿ 1 ಗಂಟೆಗೆ ಪ್ರತಾಪನನ್ನು ಆಸ್ಪತ್ರೆಗೆ ಕರೆತರಲಾಯಿತು. ಅವನಿಗೆ ಸಿವಿಯರ್‌ ಹಾರ್ಟ್‌ ಅಟ್ಯಾಕ್‌ ಆಗಿತ್ತು. ಸಕಾಲಕ್ಕೆ ವೈದ್ಯರ ಸಹಾಯ ದೊರಕಿದ್ದರಿಂದ ಅವನ ಸ್ಥಿತಿ ಈಗ ನಿಯಂತ್ರಣದಲ್ಲಿದೆ. ಉಳಿದ ವಿವರ ಸಂಜೆ ಕೊಡುವುದಾಗಿ ಹೇಳಿ ಹೋದರು. ಅವನನ್ನು ಆಸ್ಪತ್ರೆಗೆ ಕರೆತಂದವರಾರು ಎಂದ ತರುಣನ ಪ್ರಶ್ನೆಗೆ ವೈದ್ಯರಿಂದ ಸರಿಯಾದ ಉತ್ತರ ದೊರೆಯಲಿಲ್ಲ.

ಅಷ್ಟರಲ್ಲಿ ಒಬ್ಬ ಮಹಿಳೆ ಅಲ್ಲಿಗೆ ಬಂದು ಅದೇ ಡಾಕ್ಟರ್‌ ಹತ್ತಿರ ನಿಂತು ಪ್ರತಾಪ್‌ ಬಗ್ಗೆ ಕೇಳತೊಡಗಿದಳು. ತರುಣ್‌ ಅವಳತ್ತ ನೋಡುತ್ತಾ ನಿಂತುಬಿಟ್ಟ. ಅವಳು ಭಾರತೀಯ ಮಹಿಳೆಯಾಗಿರಲಿಲ್ಲ. ಫ್ರೆಂಚ್‌ ಶೈಲಿಯಲ್ಲಿ ಇಂಗ್ಲಿಷ್‌ ಮಾತನಾಡುತ್ತಿದ್ದಳು.

ಅವಳು ಧರಿಸಿದ್ದ ಪೋಷಾಕಿನಿಂದ ಆಕೆ ಆಧುನಿಕ ಮಹಿಳೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದರೆ ಅವಳ ಮುಖಚರ್ಯೆ ಅವಳು ಅರಬ್‌ ದೇಶದವಳು ಎಂದು ಹೇಳುತ್ತಿತ್ತು. ಅವಳ ಫ್ರೆಂಚ್‌ ಶೈಲಿಯ ಇಂಗ್ಲಿಷಿನಿಂದ ಅವಳು ಲೆಬನಾನ್‌ ಅಥವಾ ಈಜಿಪ್ಟ್ ಮೂಲದವಳೆಂದು ಗೊತ್ತಾಗುತ್ತಿತ್ತು.

ತರುಣ್‌ ಕೂಡ ಕೆಲಸದ ನಿಮಿತ್ತ ಹಲವು ದೇಶಗಳಿಗೆ ಭೇಟಿ ಕೊಡುತ್ತಿದ್ದ. ಹೀಗಾಗಿ ಅವನಿಗೆ ಇಂಗ್ಲಿಷಿನ ಬೇರೆ ಬೇರೆ ಧಾಟಿ  ಗೊತ್ತಾಗಿತ್ತು.

ಅದೊಂದು ದಿನ ತರುಣ್‌ ಮನೆಯಲ್ಲಿ ಪಾರ್ಟಿ ಏರ್ಪಡಿಸಲಾಗಿತ್ತು. ಆ ಪಾರ್ಟಿಗೆ ಪ್ರತಾಪನಿಗೂ ಕೂಡ ಆಹ್ವಾನ ನೀಡಲಾಗಿತ್ತು. ಪಾರ್ಟಿ ನಡೆಯುವ ದಿನದಂದು ಪ್ರತಾಪ್‌ ಫೋನ್‌ ಮಾಡಿ, “ನಾನಿಂದು ಪಾರ್ಟಿಗೆ ಬರಲು ಆಗುತ್ತಿಲ್ಲ. ಸಾರಿ,” ಎಂದು ಹೇಳಿದ್ದ.

“ಏನಾಯ್ತು? ನಿನ್ನ ಆರೋಗ್ಯ ಸರಿ ಇದೆ ತಾನೇ….?”

“ಆರೋಗ್ಯ ಸರಿಯಾಗೇ ಇದೆ. ಇಂದು ಈಜಿಪ್ಟಿನಿಂದ ನನ್ನ ಸ್ನೇಹಿತರೊಬ್ಬರು ಬರ್ತಾ ಇದ್ದಾರೆ. ಅವರನ್ನು ರಿಸೀವ್ ‌ಮಾಡಲು ಏರ್‌ ಪೋರ್ಟಿಗೆ ಹೋಗಬೇಕಿದೆ.”

“ಸರಿ… ಸರಿ….”

`ಓಹ್‌…. ಇದೇ ಸ್ನೇಹಿತ ಈಜಿಪ್ಟಿನಿಂದ ಬಂದಿರಬಹುದು ಅನಿಸುತ್ತೆ,’ ಎಂದು ತರುಣ್‌ ತನಗೆ ತಾನೇ ಬಡಬಡಿಸಿದ.

ಆಗ ನರ್ಸ್‌ ಬಂದು ತರುಣ್‌ಗೆ, “ನೀವೀಗ ಪ್ರತಾಪರನ್ನು ನೋಡಬಹುದು. ಅವರನ್ನು ವಾರ್ಡಿಗೆ ಶಿಫ್ಟ್ ಮಾಡಲಾಗಿದೆ,” ಎಂದಳು.

ತರುಣ್‌ ಆ ರೂಮಿಗೆ ತಲುಪುವ ಮೊದಲೇ ಆ ಮಹಿಳೆ ಪ್ರತಾಪನ ಬೆಡ್‌ ಹತ್ತಿರದ ಸ್ಟೂಲ್ ‌ಮೇಲೆ ಕುಳಿತಿದ್ದಳು. ಪ್ರತಾಪನ ಆರೋಗ್ಯ ಸರಿಹೋಗಿರುವುದು ಎದ್ದು ಕಾಣುತ್ತಿತ್ತು. ಅವನು ಆ ಮಹಿಳೆಯನ್ನು ಪರಿಚಯಿಸುತ್ತಾ, “ತರುಣ್‌, ಇವರು ನನ್ನ ಸ್ನೇಹಿತೆ ನಾಹಿದಾ. ಈಜಿಪ್ಟಿನಿಂದ ಬಂದಿದ್ದಾಳೆ. ನಾಹಿದಾ, ಈತ ನನ್ನ ಸ್ನೇಹಿತ ತರುಣ್‌,” ಎಂದ.

“ಹಾಯ್‌ ನಾಹಿದಾ….”

“ಹಾಯ್‌ ತರುಣ್‌……”

ನಾಹಿದಾಳ ಕಣ್ಣಲ್ಲಿ ಪ್ರತಾಪನಿಗಾಗಿ ಇದ್ದ ಚಿಂತೆ ಏನನ್ನೋ ಹೇಳುತ್ತಿತ್ತು. ತರುಣ್‌ ಅವರಿಬ್ಬರನ್ನು ಅಲ್ಲಿಯೇ ಬಿಟ್ಟು ಡಾಕ್ಟರನ್ನು ಭೇಟಿಯಾಗಲೆಂದು ಹೋದ. ಆದರೆ ವೈದ್ಯರು ಬಹಳ ಬಿಝಿಯಾಗಿದ್ದರು. ಅವನು ಪುನಃ ವಾರ್ಡಿಗೆ ವಾಪಸ್ಸಾದ.

ಈಗ ತರುಣ್‌ ಆ ಕಲ್ಪನೆಯ ಮೂಲ ಹುಡುಕುವಲ್ಲಿ ತಲ್ಲೀನನಾದ. 4 ವರ್ಷಗಳ ಹಿಂದೆ ಪ್ರತಾಪ್‌ ಅಸೈನ್ಮೆಂಟಿಗಾಗಿ ಈಜಿಪ್ಟಿಗೆ ಹೋಗಿದ್ದ. ಅಲ್ಲಿಯೇ 2 ವರ್ಷ ಉಳಿದುಕೊಂಡಿದ್ದ. ಆದರೆ ನಾಹಿದಾಳ ಕಥೆ ಏನು ಎಂದು ಅವನಿಗೆ ಎಳ್ಳಷ್ಟೂ ಮಾಹಿತಿ ಇರಲಿಲ್ಲ.

ಆಗ ಎದುರಿಗೆ ಬಂದ ಡಾಕ್ಟರನ್ನು ಕಂಡು ತರುಣ್‌ ಅವರಿಂದ ಪ್ರತಾಪ್‌ ಬಗ್ಗೆ ಅಪ್‌ ಡೇಟ್‌ ತೆಗೆದುಕೊಳ್ಳತೊಡಗಿದ.

ಡಾಕ್ಟರ್‌ ಹೇಳಿದರು, “ಕೊರೋನಾದ ಈ ದಿನಗಳಲ್ಲಿ ನಾವು ಪ್ರತಾಪರನ್ನು ಹೆಚ್ಚು ದಿನ ಇಟ್ಟುಕೊಳ್ಳಲು ಆಗುವುದಿಲ್ಲ. ಈಗ ಅವರ ಪರಿಸ್ಥಿತಿ ಸರಿಹೋಗಿದೆ. ನೀವು ಅವರನ್ನು ಮನೆಗೆ ಕರೆದುಕೊಂಡು ಹೋಗಬಹುದು. ಕೆಲವು ದಿನಗಳ ಬಳಿಕ ಅವರಿಗೆ ಆ್ಯಂಜಿಯೊಪ್ಲಾಸ್ಟಿ ಮಾಡಿಸಬೇಕಾಗಿ ಬರಬಹುದು. ಮಾಡಿಸದೆಯೂ ಇರಬಹುದು.”

ತರುಣ್‌ ಪ್ರತಾಪನನ್ನು ತನ್ನ ಮನೆಗೆ ಕರೆದುಕೊಂಡು ಹೋಗುವ ಬಗ್ಗೆ ಪ್ರಸ್ತಾಪಿಸುತ್ತಾ, “ನಾನು ನಿನ್ನನ್ನು ಏಕಾಂಗಿಯಾಗಿ ಬಿಡುವುದಿಲ್ಲ. ಹಾಗಾಗಿ ನೀನು ನನ್ನ ಮನೆಗೆ ಬರಬೇಕು. ಅಲ್ಲಿ ನಾನು ಹಾಗೂ ಶಾಲಿನಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ತೀವಿ,” ಎಂದು ಹೇಳಿದ.

ಪ್ರತಾಪ್‌ ಪ್ರಶ್ನಾರ್ಥಕ ದೃಷ್ಟಿಯಲ್ಲಿ ನಾಹಿದಾಳತ್ತ ನೋಡಿದಾಗ, ಅವಳು ಫ್ರೆಂಚ್‌ ಇಂಗ್ಲಿಷಿನಲ್ಲಿ, “ತರುಣ್‌, ನೀವು ಪ್ರತಾಪ್ ಬಗ್ಗೆ ಒಂದಿಷ್ಟೂ ಚಿಂತೆ ಮಾಡಬೇಡಿ. ನಾನು ಅವರನ್ನು ನೋಡಿಕೊಳ್ತೀನಿ,” ಎಂದಳು.

ತರುಣ್‌ ಅಚ್ಚರಿಯ ಕಂಗಳಿಂದ ಪ್ರತಾಪನತ್ತ ನೋಡಿ, “ಇವರು ಹೇಗೆ ನಿನ್ನನ್ನು ನೋಡಿಕೊಳ್ತಾರೆ……? ಇವರಿಗೆ ಇಲ್ಲಿನ ಭಾಷೆಯೂ ಬಾರದು ಹಾಗೂ ಇಲ್ಲಿನ ವ್ಯವಸ್ಥೆಯೂ ಗೊತ್ತಿಲ್ಲ,” ಎಂದ.

ತರುಣ್‌ ಹಾಗೂ ಪ್ರತಾಪ್‌ ನಡುವೆ ನಡೆಯುತ್ತಿದ್ದ ಸಂಭಾಷಣೆ ಅರ್ಥವಾಗದೆ ಗಲಿಬಿಲಿಯಿಂದ ನಾಹಿದಾ, “ತರುಣ್‌, ನೀವು ಸ್ವಲ್ಪ ಹೊತ್ತು ಪ್ರತಾಪ್‌ ಜೊತೆಯಲ್ಲಿರಿ. ನಾನು ಡಾಕ್ಟರರನ್ನು ಭೇಟಿಯಾಗಿ ಬರ್ತೀನಿ,” ಎಂದಳು.

ಅವಳು ಅತ್ತ ಹೋಗುತ್ತಿದ್ದಂತೆಯೇ ತರುಣ್‌ ಪ್ರತಾಪನತ್ತ ಪ್ರಶ್ನಾರ್ಥಕ ನೋಟ ಬೀರಿದ.

ಪ್ರತಾಪ್‌ ಸ್ಪಷ್ಟೀಕರಣ ನೀಡುತ್ತಾ, “ನಾನು ಎರಡು ವರ್ಷಗಳ ಹಿಂದೆ ಈಜಿಪ್ಟಿಗೆ ಹೋಗಿ ಅಲ್ಲೇ ಇದ್ದದ್ದು ನಿನಗೆ ನೆನಪಿದೆ ಅಲ್ಲವೇ?” ಎಂದು ತಲೆ ತಗ್ಗಿಸಿ ನಾಚಿದ ಭಂಗಿಯಲ್ಲಿ ಕೇಳಿದ.

lockdown-story2

“ಹೌದು…. ನೆನಪಿದೆ.”

“ನಾಹಿದಾ ನನ್ನ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದಳು. ಅವಳು ಅಲ್ಲಿನ ಹೆಸರಾಂತ ಮನೆತನದ ಹುಡುಗಿ. ಅವಳಿಗೆ ವಿಚ್ಛೇದನ ಆದಾಗ ತುಂಬಾ ನೊಂದುಕೊಂಡಿದ್ದಳು. ಆಗ ನೌಕರಿ ಬಗೆಗೂ ನಿರಾಸಕ್ತಳಾಗಿದ್ದಳು. ಅಷ್ಟೇ ಅಲ್ಲ, ಬಹಳ ನಿರಾಶೆಯ ಮೂಡಿನಲ್ಲಿ ಇರುತ್ತಿದ್ದಳು.”

“ಆಮೇಲೆ…..?”

“ಅವಳು ನೌಕರಿ ಕೂಡ ತೊರೆದಿದ್ದಳು.”

“ಅದನ್ನು ಬಿಟ್ಟು ಅವಳು ಮತ್ತೇನು ಮಾಡಲು ಸಾಧ್ಯವಿತ್ತು…..?”

“ಆ ಬಳಿಕ ಅವಳು ಈಜಿಪ್ಟಿನ ಅಲ್ಫೊಂಡ್ರಿಯಾ ನಗರದಲ್ಲಿ `ಸೊವಿನಿಯರ್‌’ನ ಒಂದು ಶಾಪ್‌ ತೆರೆದಳು. ಕಲೆ ಹಾಗೂ ಕಲಾಕೃತಿಗಳಲ್ಲಿ ಸಾಕಷ್ಟು ಆಸಕ್ತಿ ಇದ್ದುದರಿಂದ ಅವಳ ಶಾಪಿಗೆ ಬಹಳಷ್ಟು ಜನ ಭೇಟಿ ಕೊಡುತ್ತಿದ್ದರು. ನನಗೂ ಕೂಡ ಸಾಕಷ್ಟು ಆಸಕ್ತಿಯಿರುವುದು ನಿನಗೆ ಗೊತ್ತೇ ಇದೆಯಲ್ಲ…..”

“ಹೌದೌದು. ನನಗದು ಚೆನ್ನಾಗಿ ಗೊತ್ತು….”

“ಅವಳು ನೌಕರಿ ಬಿಟ್ಟ ಬಳಿಕ ನಮ್ಮಿಬ್ಬರ ಹವ್ಯಾಸಗಳು ಸಮಾನವಾಗಿದ್ದುದರಿಂದ ಇಬ್ಬರ ಸ್ನೇಹ ಹಾಗೆಯೇ ಉಳಿದುಕೊಂಡಿತು. ನನ್ನ ಸಲಹೆಯ ಮೇರೆಗೆ ಅವಳು ಭಾರತೀಯ ಕಲಾಕೃತಿಗಳನ್ನು ಇಡತೊಡಗಿದಳು.”

“ಹೌದು. ನೀನು ಭಾರತಕ್ಕೆ ವಾಪಸ್‌ ಬಂದು 2 ವರ್ಷಗಳೇ ಕಳೆದವು. ಈಗ ಈಕೆ ಇಲ್ಲಿ ಹೇಗೆ…..?”

“ನಾನೇ ಅವಳಿಗೆ ಇಲ್ಲಿಂದ ಕಲಾಕೃತಿಗಳನ್ನು ಕಳಿಸಿಕೊಡುತ್ತಿದ್ದೆ. ಈಗ ಅಲ್ಲಿ ಭಾರತೀಯ ಕಲಾಕೃತಿಗಳಿಗೆ ಭಾರಿ ಬೇಡಿಕೆ ಬಂದಿದೆ. ಈ ವರ್ಷ ತನ್ನದೇ ಅಪೇಕ್ಷೆಯ ಕಲಾಕೃತಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಬೇಕೆಂದು ಯೋಚಿಸಿದಳು…..”

“ನಂತರ…..”

“ಹಾಗೆಂದೇ ಅವಳು ಭಾರತಕ್ಕೆ ಬಂದಿದ್ದಳು. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಲಾಕ್‌ ಡೌನ್‌ ಆಯಿತು. ಅದರಿಂದ ಅವಳು ಇಲ್ಲಿಯೇ ಉಳಿದುಕೊಂಡಳು.”

“ಹಾಗಾಗಿದ್ದೇ ಒಳ್ಳೆಯದಾಯ್ತು,” ಎಂದು ತರುಣ್‌ ಕಣ್ಣು ಹೊಡೆದ.

“ಇಲ್ಲ ತರುಣ್‌, ಹಾಗೇನಿಲ್ಲ,” ಎಂದು ಹೇಳುತ್ತಾ ಪ್ರತಾಪ್‌ ತನ್ನ ದೃಷ್ಟಿ ಕೆಳಗೆ ಹರಿಸಿದ.

ಪ್ರತಾಪ್‌ ಹಾಗೂ ನಾಹಿದಾ ಪ್ರತಾಪನ ಅಪಾರ್ಟ್‌ ಮೆಂಟಿಗೆ ವಾಪಸ್ಸಾದರು. ತರುಣ್‌ ಒಂದೆರಡು ಬಾರಿ ಪ್ರತಾಪ್‌ ಮನೆಗೆ ಹೋಗಿ ಬಂದ. ಅವನು ಮುಖದಲ್ಲಿ ಬಂದ ಬದಲಾವಣೆಯನ್ನು ಗಮನಿಸಿ ನಾಹಿದಾಳ ಕಾಳಜಿಯಿಂದ ಇದೆಲ್ಲ ಸಾಧ್ಯವಾಗುತ್ತಿದೆ ಎನ್ನುವುದನ್ನು ಗಮನಿಸಿ ನೆಮ್ಮದಿಯ ಉಸಿರಾಡಿದ.

ಅದೊಂದು ದಿನ ಬೆಳಗ್ಗೆ ತರುಣನಿಗೆ ಪ್ರತಾಪನ ಫೋನ್‌ ಬಂತು, “ನೀನು ಇವತ್ತು 9 ಗಂಟೆಗೆ ನನ್ನ ಮನೆಗೆ ಬರೋಕೆ ಆಗುತ್ತಾ? ನಾನು ಆಸ್ಪತ್ರೆಗೆ ಹೋಗಬೇಕಿದೆ,” ಎಂದ.

“ಏನಾಯ್ತು? ಎಲ್ಲವೂ ಸರಿ ಇದೆ ತಾನೇ?”

“ಎಲ್ಲ ಸರಿ ಇದೆ. ಚೆಕಪ್‌ಗೆ ಕರೆದಿದ್ದಾರೆ.”

“ಸರಿ ಸರಿ….”

ಹೇಳಿದ ಸಮಯಕ್ಕೆ ತರುಣ್‌ ಅವನ ಮನೆಗೆ ಹೋದಾಗ ನಾಹಿದಾ ಹಾಗೂ ಪ್ರತಾಪ್‌ ಚೆನ್ನಾಗಿ ಡ್ರೆಸ್‌ ಮಾಡಿಕೊಂಡು ನಿಂತಿದ್ದರು.

ಆಸ್ಪತ್ರೆಗೆ ಹೋಗಲು ಇಷ್ಟೊಂದು ಸ್ಮಾರ್ಟ್‌ ಡ್ರೆಸ್‌ ಮಾಡಿಕೊಳ್ಳುವ ಅಗತ್ಯವೇನಿದೆ ಎಂದು ಯೋಚಿಸಿದ. ಬಳಿಕ ಅದು ಅವರ ಇಚ್ಛೆ. ನಾನೇಕೆ ಆ ಬಗ್ಗೆ ಪ್ರಶ್ನಿಸಬೇಕು ಎಂದು ಸುಮ್ಮನಾದ.

ಮನೆಯಿಂದ ಹೊರಡುತ್ತಲೇ ಪ್ರತಾಪ್‌ ಹೇಳಿದ, “ನಾನೇ ಗಾಡಿ ಓಡಿಸ್ತೀನಿ.”

“ನಾನಿದ್ದೀನಲ್ಲ. ನಿನಗೆ ಅದರ ಚಿಂತೆಯೇಕೆ?”

“ನಾನೇ ಓಡಿಸ್ತೀನಿ. ನಾನೀಗ ಸರಿ ಹೋಗಿದ್ದೇನೆ,” ಎಂದು ಹಠ ಮಾಡಿದ.

ತರುಣ್‌ ಅವನ ಮಾತಿಗೆ ಕಟ್ಟುಬಿದ್ದು ಅವನ ಕೈಗೆ ಬೀಗದ ಕೀ ಕೊಟ್ಟ. ಸ್ವಲ್ಪ ಹೊತ್ತಿನಲ್ಲಿಯೇ ಗಾಡಿ ಆಸ್ಪತ್ರೆಯ ಕಡೆ ಹೋಗದೆ ಬೇರೆ ದಿಸೆಯಲ್ಲಿ ಹೋಗುತ್ತಿರುವುದು ತರುಣ್‌ ಗಮನಕ್ಕೆ ಬಂತು.

“ಪ್ರತಾಪ್‌ ಏನಿದು? ಆಸ್ಪತ್ರೆ ದಾಟಿ ಮುಂದೆ ಬಂದೆವು. ನಿನ್ನ ಗಮನ ಎಲ್ಲಿದೆ?” ಎಂದು ಕೇಳಿದ ತರುಣ್‌.

ಪ್ರತಾಪ್‌ ಮುಗುಳ್ನಗುತ್ತಾ, “ನನ್ನ ಗಮನ ನೇರವಾಗಿ ಗುರಿಯ ಕಡೆ ಇದೆ,” ಎಂದು ಹೇಳಿದ.

“ಗುರಿ…. ಯಾವ ಗುರಿ?” ತರುಣನ ಮಾತು ಮುಗಿಯುವ ಮೊದಲೇ ಕಾರು ಮ್ಯಾರೇಜ್‌ ರಿಜಿಸ್ಟ್ರಾರ್‌ ಆಫೀಸ್‌ ಮುಂದೆ ನಿಂತಿತು.

“ಪ್ರತಾಪ್‌ ಇಲ್ಲಿಗೆ ಏಕೆ? ಏನು ವಿಷಯ….?”

“ಮ್ಯಾರೇಜಿಗಾಗಿ ಇಲ್ಲಿ ಬಿಟ್ಟು ಬೇರೆಲ್ಲಿಗೆ ಹೋಗಲು ಸಾಧ್ಯ”? ಗಾಡಿಯಿಂದ ಕೆಳಗೆ ಇಳಿಯುತ್ತಾ ಪ್ರತಾಪ್‌ ಹೇಳಿದ.

“ಮ್ಯಾರೇಜ್‌? ಯಾರದ್ದು?” ಗಾಡಿಯಿಂದ ಕೆಳಗೆ ಇಳಿದ.

ನಾಹಿದಾ ಹಾಗೂ ಪ್ರತಾಪ್‌ ಇಬ್ಬರೂ ಏಕಸ್ವರದಲ್ಲಿ “ನಮ್ಮಿಬ್ಬರದು,” ಎಂದು ಹೇಳಿದರು.

ತರುಣ್‌ ನಾಹಿದಾಳನ್ನು ಗಮನಿಸಿದ ಅವಳು ನಾಚಿಕೆಯಿಂದ ಕೆಂಪು ಕೆಂಪಾಗಿದ್ದಳು.

“ಇದೋ ಸಮಾಚಾರ. ನನ್ನನ್ನು ಇಲ್ಲಿಗೆ ಕರೆಸಿಕೊಂಡ ಉದ್ದೇಶ….”

“ನಮ್ಮಿಬ್ಬರ ಮದುವೆಗೆ ನಾವಷ್ಟೇ ಸಾಕ್ಷಿ ಆಗಬೇಕಿತ್ತಾ….?” ಎಂದು ಪ್ರತಾಪ್‌ ಮುಗುಳ್ನಕ್ಕ.

ತರುಣ್‌ ಗಾಢ ಯೋಚನೆಯಲ್ಲಿ ಮುಳುಗಿದ. ನನ್ನ ಗೆಳೆಯನದ್ದು ಎಷ್ಟೊಂದು ವಿಚಿತ್ರ ಕಥೆ…. ಅವನ ಕುಟುಂಬ ಮುಳುಗಿದ್ದು ಅದೇ ತೀರದಲ್ಲಿ. ಈಗ ಅದು ದಡ ಸೇರುತ್ತಿರುವುದು ಅದೇ ತೀರದಲ್ಲಿ. ಅದನ್ನು ದಡ ಸೇರಿಸಿದ್ದಾರು? ಅದೇ ಅಲೆಗಳು ಅಲ್ವಾ?

ಕೊರೋನಾ ಇಡೀ ಜಗತ್ತನ್ನೇ ನಡುಗಿಸಿಬಿಟ್ಟಿತು, ಎಲ್ಲರನ್ನೂ ಮನೆಯಲ್ಲಿ ಕೂರಿಸಿಬಿಟ್ಟಿತು, ಎಂತೆಂತಹ ಯೋಚನೆಗಳನ್ನೆಲ್ಲಾ ಬುಡಮೇಲು ಮಾಡಿಬಿಟ್ಟಿತು, ಕೂಡಿದರನ್ನು ಅಗಲಿಸಿಬಿಟ್ಟಿತು… ಆದರೆ ಅದು ನನ್ನ ಗೆಳೆಯನಿಗೆ ಮಾತ್ರ ಯೋಜನೆ ಹಾಕಿಕೊಳ್ಳದೆಯೇ ಅದನ್ನು ಯಶಸ್ವಿಗೊಳಿಸಿಬಿಟ್ಟಿತು. ತಾವು ಒಂದಾಗಬೇಕೆಂದು ಅವರು ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ.

ವಾಹ್‌ ಕೊರೋನಾ! ವಾಹ್‌ ಲಾಕ್‌ ಡೌನ್‌!!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ