ವ್ಯಂಗ್ಯ –  ರಾಗಿಣಿ ರಾಮಚಂದ್ರ

ಗಂಡ ಹಾಗೂ ಮಕ್ಕಳು ಹೊರಗಿನ ರುಚಿ ರುಚಿಯಾದ ತಿಂಡಿಗಳನ್ನು ತಿಂದು ಮನೆಯಲ್ಲಿ ಸಾದಾ ಊಟಕ್ಕೇ ಬೇಡಿಕೆ ಸಲ್ಲಿಸುತ್ತಿದ್ದರು. ಅನಿವಾರ್ಯವಾಗಿ ಪ್ರಿಯಾಳಿಗೂ ಅದನ್ನೇ ತಿನ್ನಬೇಕಾಗಿ ಬರುತ್ತಿತ್ತು. ದಿನದಿನ ಇದೇ ಪದ್ಧತಿ ಮುಂದುವರಿದಾಗ ಪ್ರಿಯಾಗೆ ಒಂದು ಉಪಾಯ ಹೊಳೆಯಿತು.

ಅನಿಲ್ ‌ಹಾಗೂ ಮಕ್ಕಳಾದ ಶುಭಾ ಮತ್ತು ಶಂಭು ಆಫೀಸ್‌ಗೆ ಹೊರಟುಹೋದಾಗ ಪ್ರಿಯಾ ಸ್ವಲ್ಪ ಹೊತ್ತು ಹಾಗೆಯೇ ಕುಳಿತು ಪತ್ರಿಕೆಯ ಪುಟಗಳನ್ನು ತಿರುಗಿಸತೊಡಗಿದಳು. ಆಕಸ್ಮಿಕವಾಗಿ ಅವಳ ಗಮನ ರೆಸಿಪಿಯ ಬಣ್ಣ ಬಣ್ಣದ ಪುಟಗಳ ಮೇಲೆ ಹೋಯಿತು. ಅದನ್ನು ಓದುತ್ತಿದ್ದಂತೆಯೇ ಅವಳ ಬಾಯಲ್ಲಿ ನೀರೂರಿತು. ಸಾಮಗ್ರಿಗಳತ್ತ ಗಮನಿಸಿದಳು. ಎಲ್ಲವೂ ಮನೆಯಲ್ಲಿ ಸಂಗ್ರಹವಿತ್ತು. ಪ್ರಿಯಾಳಿಗೆ ಹೊಸ ಹೊಸದನ್ನು ಮಾಡುವ ಹವ್ಯಾಸವಿತ್ತು. ಅವಳಿಗೆ ಬಗೆ ಬಗೆಯದನ್ನು ತಿನ್ನುವ ಅಭ್ಯಾಸವಿತ್ತು. ಆದರೆ ವ್ಯಾಯಾಮ ಮಾಡಿ ತನ್ನ ದೇಹ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಿದ್ದಳು. ಅವಳದು ದಷ್ಟಪುಷ್ಟ ದೇಹ ಯಾವುದೇ ದೈಹಿಕ ತೊಂದರೆಗಳಿರಲಿಲ್ಲ. ಅವಳು ತನ್ನ ಜೀವನದ ಬಗ್ಗೆ ಸಂಪೂರ್ಣ ತೃಪ್ತಳಾಗಿದ್ದಳು. ಆದರೆ ಇತ್ತೀಚಿನ ದಿನಗಳಲ್ಲಿ ಅನಿಲ್ ಹಾಗೂ ಮಕ್ಕಳಿಗೆ ಮನೆಯಲ್ಲಿ ಸಾದಾಸೀದಾ ಊಟ ತಿಂಡಿ ಸೇವನೆಯ ಭೂತ ತಲೆ ಸೇರಿಕೊಂಡಿತ್ತು.

ಆಕಸ್ಮಿಕವಾಗಿ ಪ್ರಿಯಾ ತನ್ನ ಕುಟುಂಬದವರ ಬಗ್ಗೆ ಯೋಚಿಸತೊಡಗಿದಳು. ಪತಿ ಅನಿಲ್ ಮೊದಲಿನಿಂದಲೂ ತಿಂಡಿಪೋತ. ಆದರೆ ಹೆಚ್ಚುತ್ತಿರುವ ವಯಸ್ಸಿನ ಕಾರಣದಿಂದಾಗಿ ಅವರು ಇತ್ತೀಚೆಗೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಆರೋಗ್ಯದಿಂದಿರುವ ಹವ್ಯಾಸ ಮನೆಯ ಎಲ್ಲರಿಗೂ ತಗುಲಿಕೊಂಡಿತ್ತು. ಮನೆಯ ಪ್ರತಿಯೊಬ್ಬರೂ ಒಮ್ಮೆಲೆ ಬೇಯಿಸಿದ  ತರಕಾರಿಗಳನ್ನೇ ತಿಂದು ಜೀವಿಸಬೇಕೆನ್ನುತ್ತಾರೆ. ಅದಕ್ಕೂ ಆಶ್ಚರ್ಯದ ಸಂಗತಿಯೆಂದರೆ, ಆಫೀಸಿನಲ್ಲಿ ಎಲ್ಲರೂ ಮಸಾಲೆಯುಕ್ತ ರುಚಿ ರುಚಿಯಾದ ತಿಂಡಿ ತಿಂದು ಬರುತ್ತಾರೆ. ಮನೆಯಲ್ಲಿ ಯಾವುದಾದರೂ ತಿಂಡಿ ತಯಾರಿಸಿದರೆ ಅವರ ದೃಷ್ಟಿ ಎಣ್ಣೆ, ಮಸಾಲೆ, ಕ್ಯಾಲೋರಿಯ ಕಡೆ ಹೋಗುತ್ತದೆ.

ರುಚಿಯಾದ ಪದಾರ್ಥಗಳು ಕ್ಯಾಲೋರಿಯುಕ್ತ ಆಗಿರುತ್ತವೆ. ಅದರಲ್ಲಿ ಪ್ರಿಯಾಳದ್ದೇನು ತಪ್ಪು? ಆಗ ಎಲ್ಲರೂ ಅವಳ ಹಿಂದೆ ಬಿದ್ದು ಎಷ್ಟೊಂದು ಹೆವಿ ಅಡುಗೆ ಮಾಡಿದ್ದೀಯಾ ಎಂದು ಹೇಳುತ್ತಾರೆ. ಆರೋಗ್ಯಕರ ಆಹಾರದ ಕುರಿತಂತೆ ತಾಯಿ ಮಕ್ಕಳು ಪತಿಯ ನಡುವೆ ದಿನ ಚರ್ಚೆ ನಡೆಯುತ್ತಿತ್ತು. ಅವರ ಮಾತಿನಿಂದ ರೋಸಿಹೋದ ಪ್ರಿಯಾ, ನಿಮ್ಮ ಆಫೀಸಿನಲ್ಲೂ ಬೇಯಿಸಿದ ತರಕಾರಿಗಳನ್ನಷ್ಟೇ ಏಕೆ ತಿನ್ನಬಾರದು ಎಂದು ಕೇಳುತ್ತಾಳೆ.

ಸಂಜೆ ಹೊತ್ತು ಮನೆಗೆ ವಾಪಸ್‌ ಬಂದಾಗ ಯಾರನ್ನು ಕೇಳಿದರೂ ತಾನು ಅದನ್ನು ತಿಂದೆ, ಇದನ್ನು ತಿಂದೆ ಎಂದು ಕೊಚ್ಚಿಕೊಳ್ಳುತ್ತಾರೆ. ಅದನ್ನು ಕೇಳಿ ಪ್ರಿಯಾಳ ಬಾಯಿಯಲ್ಲಿ ನೀರೂರುತ್ತಿತ್ತು. ಮನೆಯಲ್ಲಿ ತಾನು ಮೊಳಕೆ ಕಾಳಿನ ಪಲ್ಯ, ರೊಟ್ಟಿ ತಿನ್ನುತ್ತಿದ್ದರೆ, ಅತ್ತ ಮೂವರು ತಮ್ಮ ಆಫೀಸುಗಳಲ್ಲಿ ಪಿಜ್ಜಾ, ಬಿರಿಯಾನಿ ತಿನ್ನುತ್ತಿರುತ್ತಾರೆ. ಪತಿ ಅನಿಲ್ ‌ಮಾಡುವ ಹೊಸ ನಾಟಕ ಏನೆಂದರೆ, “ತಾನು ಇನ್ನು ಮುಂದೆ ಆಫೀಸಿಗೆ ಮನೆಯಿಂದಲೇ ತಿಂಡಿ ಊಟ ತೆಗೆದುಕೊಂಡು ಹೋಗುತ್ತೇನೆ. ಮನೆಯ ತಿಂಡಿಯೇ ಶ್ರೇಷ್ಠ ತಿಂಡಿ.”

ಪ್ರಿಯಾ ಬೆಳಗ್ಗೆಯೇ ಎದ್ದು ಎರಡು ಮೂವರು ಆರೋಗ್ಯಕರ ತಿಂಡಿಗಳನ್ನು ತಯಾರಿಸುತ್ತಾಳೆ. ಅದರ ಜೊತೆಗೆ ತಾನೂ ಸೇವಿಸುತ್ತಾಳೆ. ಸಂಜೆ ಎಲ್ಲರೂ ಒಟ್ಟಿಗೆ ಕುಳಿತಾಗ ಉಳಿದವರೆಲ್ಲ ರುಚಿ ರುಚಿಯಾದ ತಿಂಡಿ ತಿಂದು ಬಂದಿದ್ದಾರೆಂದು ಗೊತ್ತಾಗಿ ಪ್ರಿಯಾಳ ರಕ್ತ ಕುದ್ದು ಹೋಗುತ್ತದೆ. ಅದು ಅವಳದ್ದೇ ತಪ್ಪು. ಹೌಸ್‌ ವೈಫ್‌ ಆಗಿದ್ದು ಅವಳ ತಪ್ಪಲ್ಲ, ಮನೆಯಲ್ಲೇ ಇರುತ್ತಾಳೆ. ಹೊರಗೆ ಹೋಗಿ ವಿಶೇಷವಾದದ್ದೇನೂ ತಿನ್ನುವುದಿಲ್ಲ. ಟಿಫನ್‌ ಗಾಗಿ ಏನನ್ನು ತಯಾರಿಸಿಕೊಳ್ಳುತ್ತಾಳೊ, ಅದನ್ನೇ ಮಧ್ಯಾಹ್ನಕ್ಕೂ ತಿನ್ನಬೇಕು. ತನ್ನ ರುಚಿ ಬದಲಿಸಿಕೊಳ್ಳಲು ಅವಳೆಲ್ಲಿ ಹೋಗಬೇಕು? ಕಿಟಿ ಪಾರ್ಟಿ ಒಂದೇ ದಿನ ನಡೆಯುತ್ತದೆ. ಅದು ಬಹಳ ಖುಷಿ ಕೊಡುತ್ತದೆ. ಇತ್ತೀಚಿನ ದಿನಗಳಲ್ಲಿ ವೀಕೆಂಡ್‌ ನಲ್ಲಿ ಹೊರಗೆ ಹೋದಾಗ ಮೆನು ಕಾರ್ಡ್‌ ನೋಡಿ ಅವಳು ಮನದಲ್ಲೇ ಕುಣಿದಾಡುತ್ತಾಳೆ. ಏನಾದರೂ ವಿಶೇಷವಾದದ್ದನ್ನು ತಿನ್ನಬೇಕೆಂದು ಯೋಚಿಸುತ್ತಿರುವಾಗಲೇ ಅನಿಲ್ ವೇಟರ್‌ ಗೆ ಸೂಪ್‌ ಮತ್ತು ಸಲಾಡ್‌ ಗೆ ಆರ್ಡರ್‌ ಕೊಟ್ಟುಬಿಡುತ್ತಾನೆ. ಪ್ರಿಯಾಳಿಗೆ ದೊಡ್ಡ ಆಘಾತವೇ ಆಗುತ್ತದೆ. ಅವಳಿಗೆ ಸೂಪ್‌ ಇಷ್ಟವಾಗುತ್ತದೆ. ಆದರೆ ಸಲಾಡ್‌ ಏನಿದು? ತನ್ನೊಂದಿಗೆ ಏನಾಗುತ್ತಿದೆ ಎಂದು ಅವಳು ಯೋಚಿಸುತ್ತಾಳೆ.

ಪಾಸ್ತಾ, ವೆಜ್‌ ಕಬಾಬ್‌, ಕಾರ್ನ್‌ ಟಿಕ್ಕಿ, ದಹಿ ಕಬಾಬ್‌ ಅವಳಿಗೆ ಪಂಚಪ್ರಾಣ. ಆದರೆ ಇತ್ತೀಚಿನ ದಿನಗಳಲ್ಲಿ ಅನಿಲ್ ‌ಗೆ ಅದರಲ್ಲಿ ಹೆಚ್ಚುವರಿ ತೈಲ ಕಂಡುಬರುತ್ತದೆ.

ಅವಳು ಈವರೆಗೆ ತನ್ನ ಕುಟುಂಬದವರ ಆರೋಗ್ಯದ ಬಗ್ಗೆ ಗಮನ ಕೊಟ್ಟಿದ್ದಾಳೆ. ಅವಳು ಎಂದಾದರೊಮ್ಮೆ ಇದನ್ನೆಲ್ಲ ತಿನ್ನಬಹುದಲ್ವಾ? ತಾನು 20 ದಿನಗಳ ಬಳಿಕ ಸಲಾಡ್‌ ತಿನ್ನಲೆಂದು ಹೊರಗೆ ಬಂದೆನಾ? ಎಂದು ಅವಳಿಗೆ ಅನಿಸತೊಡಗಿತು.

ಪತಿ ಹೇಳಿದ ಮಾತಿಗೆ ಮಕ್ಕಳು ಕೂಡ ಹ್ಞೂಂ ಎಂದು ತಲೆದೂಗಿದರು. ಪ್ರಿಯಾ ಒಳಗೊಳಗೆ ರೋಸಿ ಹೋಗಿ ಸೂಪ್‌ ಮತ್ತು ಸಲಾಡ್‌ ತಿನ್ನತೊಡಗಿದಳು. ಇವರೆಲ್ಲ ಢೋಂಗಿ ವ್ಯಕ್ತಿಗಳು. ಎರಡು ದಿನಗಳ ಹಿಂದಷ್ಟೇ ಶಂಭು ಬಾರ್ಬೆಕ್ಯೂ ನೇಶನ್‌ಗೆ ಹೋಗಿ ಯಥೇಚ್ಛಾಗಿ ತಿಂದುಬಂದಿದ್ದ. ಶುಭಾ ಕೂಡ ಆಫೀಸಿನಲ್ಲಿ ಬಗೆಬಗೆಯ ತಿಂಡಿಗಳನ್ನು ತಿಂದು ಬಂದಿದ್ದಳು.

ಸಂಜೆ ಮನೆಗೆ ಬಂದು ಶುಭಾ ಹೇಳುತ್ತಾಳೆ, “ಮಾಮ್, ಡಿನ್ನರ್‌ ಸಾದಾಸೀದಾ ಆಗಿರಲಿ. ಸ್ನ್ಯಾಕ್ಸ್ ಹೆವಿ ಆಗಿರುತ್ತದೆ. ಹೆಚ್ಚು ತಿನ್ನೋಕೆ ಆಗುವುದಿಲ್ಲ,” ಪ್ರಿಯಾ ಮನಸ್ಸಿನಲ್ಲಿಯೇ, `ನೀವು ಮೂವರು ನನ್ನ ಮನಸ್ಸನ್ನು ಸ್ವಲ್ಪ ಅರ್ಥ ಮಾಡಿಕೊಳ್ರಪ್ಪ. ಮನೆಯ ಸಾದಾ ಸೀದಾ ಊಟ ಮಾಡುವ ಬಗ್ಗೆ ನನಗೆ ಏಕೆ ಒತ್ತಿ ಒತ್ತಿ ಹೇಳ್ತೀರಾ…… ನನ್ನ ನಾಲಿಗೆ ಅತ್ತು ಸತ್ತು ಕಂಗಾಲಾಗಿದೆ. ರುಚಿರುಚಿಯಾದ ತಿಂಡಿ ತಿನ್ನಲು ನಿಮಗೆ ನಾನು ಅತ್ತು ರಂಪ ಮಾಡಿ ಹೇಳಬೇಕಾ? ಅದೊಂದು ದಿನ ರುಚಿ ರುಚಿಯಾದ ತಿಂಡಿಗಳಿಗಾಗಿ ನಾನು ಅತ್ತು ಸೀನ್‌ ಕ್ರಿಯೇಟ್‌ ಮಾಡಬೇಕಾಗುತ್ತದೊ ಏನೊ ನನಗೆ ಗೊತ್ತಿಲ್ಲ ಜೀವನದುದ್ದಕ್ಕೂ ನಾನು ಹೀಗೆಯೇ ಇರಬೇಕಾ?’

ಅನಿಲ್ ‌ದಿನಗಳ ಕಾನ್ಛರೆನ್ಸ್ ಗಾಗಿ ಸಿದ್ಧನಾಗುತ್ತಿದ್ದ. ಪ್ರತಿದಿನ ಅದ್ಧೂರಿ ಊಟದ ವ್ಯವಸ್ಥೆ ಇತ್ತು. ಅವನು ಬೆಳಗ್ಗೆ ಹೋಗುವಾಗಲೇ ಹೇಳುತ್ತಿದ್ದ, “ಸಂಜೆ ಯಾವುದೇ ಹೆವಿ ಊಟ ಬೇಡ. ಅನ್ನ ಮೊಸರು ಸಾಕು,” ಅದನ್ನು ಕೇಳಿಸಿಕೊಂಡು ಅವಳಿಗೆ ಕಣ್ಣೀರು ಬಂತು. ಶುಭಾ ಹಾಗೂ ಶಂಭು ವಾರಾಂತ್ಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಲೈಫ್‌ ಎಂಜಾಯ್‌ ಮಾಡುತ್ತಾರೆ. ಈಗ ಉಳಿದವರಾರು? ತಾನೊಬ್ಬಳೇ ಅಲ್ವಾ? ಈಗ ಊಟಕ್ಕಾಗಿ ರೋದಿಸುವುದು ಅವಳಿಗೂ ಸರಿ ಅನ್ನಿಸುತ್ತಿರಲಿಲ್ಲ. ಆದರೆ ಏನು ಮಾಡುವುದು? ಹೊರಗಡೆ ಏನಾದರೂ ತಿನ್ನಲು ಮನಸ್ಸು ಆಗೇ ಆಗುತ್ತೆ. ಎಂದಾದರೊಂದು ದಿನ ಅನ್‌ ಹೆಲ್ದೀ ಕೂಡ ನಡೆಯುತ್ತಲ್ಲ…. ಈ ಮೂವರು ಎಷ್ಟರಮಟ್ಟಿಗೆ ಅಂದರೆ ಮನೆಯಲ್ಲಿ ಚಾಟ್‌ ತಿನಿಸುಗಳನ್ನು ನಿಲ್ಲಿಸಿಬಿಟ್ಟಿದ್ದಾರೆ. ಏಕೆಂದರೆ ಮೂವರಿಗೂ ಆಫೀಸಿನಲ್ಲಿ ಹೊರಗಿನ ತಿಂಡಿ ಏನಾದರೂ ಆಗಿಯೇ ಆಗಿರುತ್ತದೆ.

ನೀವೇ ಹೇಳಿ, 6 ತಿಂಗಳಲ್ಲಿ ಒಮ್ಮೆಯೂ ಪೂರಿಯ ಜೊತೆಗೆ ಕಾಬೂಲ್ ‌ಕಡಲೆಕಾಳಿನ ಪಲ್ಯ ಸಹ ಮಾಡೋದು ಬೇಡ್ವಾ? ಅವಳು ರಾತ್ರಿ ಕಾಳು ನೆನೆಯಿಟ್ಟರೆ ಸಾಕು, ಮೂವರು ನಾಳೆ ಪೂರಿ ಮಾತ್ರ ಮಾಡಬೇಡ, ರೊಟ್ಟಿ ಅಥವಾ ರೈಸ್‌ ಯಾವುದಾದರೂ ಸರಿ ಎನ್ನುತ್ತಾರೆ. ಆಗ ಅವಳಿಗೆ ಕಾಳಿನ ಪಾತ್ರೆಯನ್ನು ಅವರ ತಸೆಯ ಮೇಲೆ ಬೋರಲು ಹಾಕಿಬಿಡೋಣ ಅನಿಸುತ್ತೆ. ಮನೆಯಲ್ಲಿ ಯಾವಾಗಲೂ ಸಾದಾ ಅಡುಗೆಯನ್ನೇ ಮಾಡುವ ಅಗತ್ಯವಾದರೂ ಏನಿದೆ ಎಂದು ಕೇಳಬೇಕೆನಿಸುತ್ತೆ. ಮನೆಯಲ್ಲಿ ಎಂದಾದರೊಮ್ಮೆ ರುಚಿ ಬದಲಾವಣೆ ಮಾಡಿಕೊಳ್ಳಬೇಕಲ್ಲವೇ? ಮೂವರು ಯಾವ ಗ್ರಹದ ನಿವಾಸಿಗಳಾಗುತ್ತಾ ಹೊರಟಿದ್ದಾರೊ ಅನಿಸುತ್ತೆ. ಮನೆಯಲ್ಲಿ ತಿಂದರೆ ಸಾದಾ ಸೀದಾ ಅಡುಗೆಯನ್ನೇ ಮಾಡಬೇಕು ಎನ್ನುತ್ತಾರೆ. ಆದರೆ ಹೊರಗೆ ಏನೇನೊ ತಿಂದುಬಿಟ್ಟಿರುತ್ತಾರೆ.

ಕಳೆದ ಕಿಟಿ ಪಾರ್ಟಿಯಲ್ಲಿ ಅಂಜಲಿಯ ಮನೆಯ ಊಟದಲ್ಲಿ ಪೂರಿ ಕಾಬೂಲ್ ‌ಕಾಳಿನ ಪಲ್ಯ ತಿನ್ನದೇ ಹೋಗಿದ್ದರೆ, ಅದನ್ನು ತಿನ್ನದೇ ಒಂದು ವರ್ಷವಾಗುತ್ತಿತ್ತು. ಮಧ್ಯಮ ವಯಸ್ಸಿನ ಮಹಿಳೆಯೊಬ್ಬಳು ಪೂರಿ ತಿನ್ನದೇ ಇದ್ದರೆ ಇದ್ಯಾವ ನ್ಯಾಯ ಹೇಳಿ? ಆಲೂ ಅಥವಾ ಬೇರೆ ಬೇರೆ ಪಲ್ಯಗಳ ಜೊತೆ ಪೂರಿ ತಿಂದರೆ ಅದೇನು ಸೊಗಸಾದ ರುಚಿ ಅಂತೀನಿ. ಮನೆಯಲ್ಲಿ ಎಲ್ಲರೂ ರೊಟ್ಟಿ ಮಾಡಿ ಅಂತಾರೆ, ಕೇವಲ ನನಗಾಗಿ 4-5 ಪೂರಿಗಾಗಿ ಒಲೆಯ ಮೇಲೆ ಬಾಣಲೆ ಇಡುವುದು ಎಷ್ಟು ಸರಿ ಎನಿಸುತ್ತೆ.

gher-ka-khana2

ಪ್ರಿಯಾಳ ಕೈಯಲ್ಲಿ ಗೃಹಶೋಭಾದ ಸಂಚಿಕೆಯಿತ್ತು. ಅದರಲ್ಲಿ ಗೋಬಿ ಪಕೋಡಾ, ಮಿರ್ಚ್‌ ಪಕೋಡಾದ ರೆಸಿಪಿಗಳನ್ನು ಕೊಟ್ಟಿದ್ದರು. 2-3 ಸಲ ಆ ರೆಸಿಪಿಗಳನ್ನು ಓದಿದಳು. ಅದನ್ನು ಓದಿ ಅವಳ ಬಾಯಲ್ಲಿ ನೀರೂರಿತು. ಓದಿದರೆ ಇಷ್ಟು ಖುಷಿಯಾಯಿತು. ಇನ್ನು ತಿಂದರೆ ಎಷ್ಟು ಖುಷಿಯಾಗಬೇಡ ಎಂದುಕೊಂಡಳು. ಅವಳಿಗೆ ಮನೆಯ ಸಾದಾ ತಿಂಡಿ ಸಾಕಾಗಿಹೋಗಿತ್ತು . ಒಂದೊಳ್ಳೆ ಸಂಗತಿಯೆಂದರೆ ಗೋಬಿ, ಸಮೋಸಾ ಬೇಕ್‌ ಮಾಡುವ ಆಪ್ಶನ್‌ ಅಂತೂ ಇದ್ದೇ ಇತ್ತು. ಹಾಗಾಗಿ ಅವಳು ಬೇಕ್‌ ಮಾಡತೊಡಗಿದಳು. ಮೂವರು ಒಂದಿಷ್ಟು ರಾಗ ತೆಗೀಬಹುದು. ತೆಗೀಲಿ ಸ್ವಲ್ಪ ಪಲಾವ್ ‌ಕೂಡ ಮಾಡ್ತೀನಿ. ಎಲ್ಲ ಸರಿ ಹೋಗುತ್ತದೆ ಎಂದುಕೊಂಡಳು.

ಮೂವರು ಸುಮಾರು 8 ಗಂಟೆ ಹೊತ್ತಿಗೆ ಬಂದರು. ಇವತ್ತು ಡಿನ್ನರ್‌ ಬಗ್ಗೆ ಯೋಚಿಸಿಯೇ ಪ್ರಿಯಾಳ ಮುಖದಲ್ಲಿ ನಗು ತುಂಬಿತ್ತು. ಅದನ್ನು ತಯಾರಿಸ್ತಾ ಇರುವಾಗಲೇ 2-3 ಸಮೋಸಾ ತಿಂದು ಮುಗಿಸಿದಳು. ಬಹಳ ಖುಷಿಯಾಗುತ್ತಿತ್ತು. ಹೊಟ್ಟೆ ಹಾಗೂ ನಾಲಿಗೆ ಅವಳಿಗೆ ಥ್ಯಾಂಕ್ಸ್ ಹೇಳುತ್ತಿದ್ದವು. ಅದೆಷ್ಟು ದಿನಗಳಿಂದ ಅವೆರಡು ರುಚಿ ರುಚಿಯಾದ ತಿಂಡಿಗಳಿಗಾಗಿ ಚಡಪಡಿಸುತ್ತಿದ್ದವೋ ಏನೊ!

ನಾಲ್ವರು ಒಂದೇ ಕಡೆ ಸೇರುತ್ತಿದ್ದಂತೆ ಪ್ರಿಯಾ, `ಇಂದು ನನಗೆ ಖುಷಿಯ ದಿನ,’ ಎಂದು ಹಾಡುತ್ತ ಡೈನಿಂಗ್‌ ಟೇಬಲ್ ಮೇಲೆ ಊಟದ ಪಾತ್ರೆಗಳನ್ನು ಇಡತೊಡಗಿದಳು. ಟೇಬಲ್ ಮೇಲೆ ಅಡುಗೆ ಗಮನಿಸಿದ ಅನಿಲ್ ‌ಕೇಳಿದ, “ಇವತ್ತಿನ ಡಿನ್ನರ್‌ ನಲ್ಲಿ ಫ್ರೈಡ್ ಸಮೋಸಾನಾ? ಪ್ರಿಯಾ ಏನಿದು ಎಲ್ಲರ ಆರೋಗ್ಯದ ಬಗ್ಗೆ ನೀನೇಕೆ ಇಷ್ಟು ನಿಷ್ಕಾಳಜಿ ತೋರಿಸುತ್ತಿರುವೆ?” ಎಂದ.

“ಹಾಗಲ್ಲಾ ರೀ, ಅದು ಬೇಕ್ಡ್ ಸಮೋಸಾ ಡೋಂಟ್‌ ವರಿ.”

“ಆದರೆ ಮೈದವಾದ್ದು ಅಲ್ವಾ?”

“ನಿನ್ನೆ ನೀವು ಪಿಜ್ಜಾ ತಿಂದಿದ್ದಿರಲ್ಲ. ಅದು ಯಾವುದರಿಂದ ತಯಾರಿಸಲಾಗಿತ್ತು?” ಎಂದು ಅವಳಿಗೆ ಕೇಳಬೇಕೆನಿಸಿತು. ಆದರೆ ಮೂವರ ಜೊತೆಗೆ ಜಗಳ ಮಾಡುವುದು ಅವಳಿಗೆ ಬೇಕಿರಲಿಲ್ಲ. ಹೀಗಾಗಿ ಸುಮ್ಮನಾದಳು.

ಶುಭಾ ಹೇಳಿದಳು, “ಅಮ್ಮಾ ಪಕೋಡ ಅಂತೂ ಫ್ರೈಡ್‌ ಅಲ್ವಾ? ನಾನು ಪಲಾವ‌ನ್ನಷ್ಟೇ ತಿಂತೀನಿ.”

ಪ್ರಿಯಾ ಈಗ ಶಂಭುವಿನತ್ತ ನೋಡಿದಳು. ಅವನು ಹೇಳಿದ, “ಅಮ್ಮಾ, ಇವತ್ತು ಆಫೀಸಿನಲ್ಲಿ ಬಹಳಷ್ಟು ಚಾಟ್‌ ತಿಂದೆ. ಈಗ ಪುನಃ ತಿಂದರೆ ಸಾಕಷ್ಟು ಎಣ್ಣೆ ಪದಾರ್ಥ ತಿಂದಂತಾಗುತ್ತದೆ. ನಾನು ಪಲಾವ್ ಮಾತ್ರ ತಿಂತೀನಿ.”

ಡಿನ್ನರ್‌ ಟೈಮ್ ಆಗಿತ್ತು. ಬೆಳಗ್ಗೆ ಹೋದವರು ಈಗ ಎಲ್ಲರೂ ಒಂದೆಡೆ ಸೇರಿದ್ದರು. ಅವರನ್ನು ಶಾಂತಗೊಳಿಸುತ್ತ ಪ್ರಿಯಾ ಹೇಳಿದಳು, “ಸರಿ, ನೀವೆಲ್ಲ ಪಲಾವ್ ‌ಮಾತ್ರ ತಿನ್ತೀರಿ.”

ಅನಿಲ್ ‌ಒಂದು ಸಮೋಸಾವನ್ನು ಬಾಯಿಗೆ ಹಾಕಿಕೊಂಡು ರುಚಿ ನೋಡಿದ. ಮಕ್ಕಳು ಕೇವಲ ಪಲಾವ್ ‌ಅಷ್ಟೇ ತಿಂದರು. ಪ್ರಿಯಾ ತನ್ನೆಲ್ಲ ಒತ್ತಡ ಮರೆತು ತಿನ್ನಲು ಶುರು ಮಾಡಿದಳು. ಅವಳ ಮನಸ್ಸು ಖುಷಿಯಿಂದ ತೇಲಾಡಿತು. ಬಹಳ ದಿನಗಳ ನಂತರ ವಿಶಿಷ್ಟ ರುಚಿ ಪಡೆದು ನಾಲಿಗೆ ಧನ್ಯತೆಯ ಭಾವ ಪಡೆಯಿತು. ಅವಳ ಕಣ್ಣುಗಳು ತುಂಬಿ ಬಂದವು. ಇಷ್ಟೊಂದು ರುಚಿಕರ ಮನೆಯ ತಿಂಡಿ. ವಾಹ್….! ಅದೆಷ್ಟು ದಿನಗಳಾಗಿತ್ತು. ಅವಳು ದಿನ ಯಾವ ಕರಿದ ಪದಾರ್ಥ ತಿನ್ನಲು ಬಯಸುತ್ತಾಳೆ? ಮನೆಯಲ್ಲಿ ಯಾವಾಗಲಾದರೊಮ್ಮೆ ರುಚಿಕರ ಪದಾರ್ಥ ತಿನ್ನಬಹುದಲ್ವಾ? ತಿಂಗಳಿಗೊಂದು ಸಲವಾದರೂ ಸರಿ. ಆದರೆ ಇಲ್ಲಂತೂ ಅದು ಮರೆತೇ ಹೋಗಿತ್ತು. ಪ್ರಿಯಾ ಈಗ ಆ ಪದಾರ್ಥವನ್ನು ಅದೆಷ್ಟು ಉತ್ಸಾಹದಿಂದ ತಿನ್ನುತ್ತಿದ್ದಳೆಂದರೆ, ಅವಳಿಗೆ ಬಾಹ್ಯ ಪ್ರಪಂಚದ ಅರಿವೇ ಇದ್ದಂತಿರಲಿಲ್ಲ. ಅವಳ ಮೈಮನಸ್ಸು ಸಂತೃಪ್ತಿಯಲ್ಲಿ ಮುಳುಗಿತ್ತು. ಯಾರು, ಏನು ತಿನ್ನುತ್ತಿದ್ದಾರೆಂದು ಅವಳು ಗಮನಿಸಲು ಆಗುತ್ತಿರಲಿಲ್ಲ.

ಎಲ್ಲರೂ ದೈನಂದಿನ ಮಾತುಕಥೆಯಲ್ಲಿ ತಲ್ಲೀನರಾಗಿ ಬಳಿಕ ತಮ್ಮ ಕೆಲಸಗಳಲ್ಲಿ ನಿರತರಾದರು. ಅಂದು ನಿದ್ರೆಗೆ ಜಾರುವ ಮುನ್ನ ಬಹಳಷ್ಟು ಯೋಚನೆ ಮಾಡಿದ್ದಳು. ನಾನು ಇಷ್ಟೆಲ್ಲ ಶ್ರಮವನ್ನು ಎಲ್ಲರಿಗಾಗಿ ಮಾಡುವ ಅಗತ್ಯವಿಲ್ಲ. ನಾನು ಎಂದಾದರೊಮ್ಮೆ ಒಬ್ಬಳೇ ತಿನ್ನಬೇಕು. ಮನಸ್ಸಿನ ಖುಷಿಯನ್ನು ಗಮನಿಸಬೇಕು. ಒಂದು ಫೋನ್‌ ಮಾಡಿದರೆ ಸಾಕು, ಮನೆಗೆ ತೆಗೆದುಕೊಂಡು ಬರುತ್ತಾರೆ. ಅದೇ ನನಗೆ ಒಳ್ಳೆಯ ಉಪಾಯ. ನನಗೆ ದಿನದಿನ ಕ್ಯಾಲೋರಿಯ ಊಟ ಎಲ್ಲಿ? ಎಂದಾದರೊಮ್ಮೆ ಮನಸ್ಸು ಬಯಸುತ್ತಲ್ಲ, ಸಮಸ್ಯೆ ಮುಗಿಯಿತು.

ಆ ಬಳಿಕ ಪ್ರಿಯಾ ಅದನ್ನೇ ಮಾಡತೊಡಗಿದಳು. ತಿಂಗಳಿಗೊಮ್ಮೆ ತನಗಾಗಿ ಪಾಸ್ತಾ ಆರ್ಡರ್‌ ಮಾಡುತ್ತಿದ್ದಳು. ಮತ್ತೆ ಕೆಲವೊಮ್ಮೆ ಸ್ಟಾರ್ಟರ್‌ಗೆ ಬೇಡಿಕೆ ಸಲ್ಲಿಸುತ್ತಿದ್ದಳು. ಮನೆಯಲ್ಲೀಗ ಎಲ್ಲರೂ ಖುಷಿಯಿಂದಿದ್ದರು. ಏಕೆಂದರೆ ಸಾದಾ ತಿಂಡಿ ಊಟ ಹೊರತುಪಡಿಸಿ ಬೇರೇನೂ ತಯಾರಾಗುತ್ತಿಲ್ಲವೆಂದು. ಅವಳಿಗೆ ಯಾವಾಗ ಮನಸ್ಸಾಗುತ್ತಿತ್ತೊ ಆಗ ತನಗೆ ಇಷ್ಟವಾದದ್ದನ್ನೆಲ್ಲ ತಿನ್ನುತ್ತಿದ್ದಳು. ತನ್ನ ಪ್ರೀತಿ ಢೋಂಗಿ ಎಂದೆನಿಸುತ್ತಿದ್ದ ಉಳಿದವರ ಬಗ್ಗೆ ಯೋಚಿಸಿ ಅವಳಿಗೆ ನಗು ಬರುತ್ತಿತ್ತು. ಒಮ್ಮೊಮ್ಮೆ ಪ್ರೀತಿ ಉಕ್ಕುತ್ತಿತ್ತು. ಏಕೆಂದರೆ ಅವರ ಆದೇಶ ಈಗಲೂ ಮೊದಲಿನಂತೆಯೇ ಇತ್ತು.

“ಹೊರಗೆ ಊಟ ತಿಂಡಿ ಹೆವಿ ಆಗುತ್ತೆ. ಮನೆಯಲ್ಲಿ ಸಾದಾಸೀದಾ ಅಡುಗೆಯನ್ನಷ್ಟೇ ತಯಾರಿಸಬೇಕು,” ಎನ್ನುವುದಾಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ