ಜೀನದಲ್ಲಿ ಒಮ್ಮೊಮ್ಮೆ ಹೇಗಾಗಿ ಬಿಡುತ್ತದೆಂದರೆ, ಯಾವ ವ್ಯಕ್ತಿಯನ್ನು ನೀವು ಅತಿ ಹೆಚ್ಚು ಪ್ರೀತಿಸುತ್ತೀರೊ, ಅದೇ ವ್ಯಕ್ತಿಯಿಂದ ನಿಮಗೆ ಸಾಕಷ್ಟು ದುಃಖ, ನೋವು ಅನುಭವಿಸಬೇಕಾಗಿ ಬರುತ್ತದೆ. ವಿಪರ್ಯಾಸದ ಸಂಗತಿಯೇನೆಂದರೆ, ನೀವು ಆ ವ್ಯಕ್ತಿಗೆ ಏನನ್ನೂ ಹೇಳಿಕೊಳ್ಳಲಾರಿರಿ, ಏಕೆಂದರೆ ಆ ವ್ಯಕ್ತಿಯ ಮುಂದೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಯಾವುದೇ ಹಕ್ಕು ಕೂಡ ಇಲ್ಲ. ಯಾವುದೇ ಒಂದು ಸಂಬಂಧಕ್ಕೆ ಹೆಸರೇ ಸೂಚಿಸದಿದ್ದರೆ, ಒಬ್ಬರು ಇನ್ನೊಬ್ಬರಿಗೆ ಏನು ತಾನೇ ಆಗಲು ಸಾಧ್ಯ? ಎಳೆಗಳಿಂದ ಕೂಡಿದ ಪ್ರೀತಿಯ ಮಹಲು ಒಂದೇ ಏಟಿಗೆ ಚೂರು ಚೂರಾಗಿ ಹೋಗುತ್ತದೆ.

`ಆ ಅಸ್ತವ್ಯಸ್ತಗೊಂಡ ಅನುಭವಗಳ ಸ್ಛೋಟದಿಂದ ಗಾಯಗೊಂಡ ಹೃದಯದ ಉದಾಸತನ ಇತಿಮಿತಿಯೊಳಗೆ ನಿಮ್ಮ ಮನಸ್ಸು ಚಂಚಲಗೊಳ್ಳುತ್ತಾ ಇರುತ್ತದೆ. ಭಾವನೆಗಳ ಆಗಮನ ನಿರ್ಗಮನ ನಡೆಯುತ್ತಲೇ ಇರುತ್ತದೆ. ಆದರೆ ಹೃದಯದ ಬಿಗುವು ಮಾತ್ರ ಕಡಿಮೆಯಾಗುವುದಿಲ್ಲ,’ ಒಂದು ಕಡೆ ಓದಿದ ಈ ಸಾಲುಗಳು ಶೈಲಾಳ ಹೃದಯವನ್ನು ಬಹಳ ಆಳವಾಗಿ ತಟ್ಟಿದವು. ಸರಿಯಾಗಿ ಇಂಥದೇ ಪರಿಸ್ಥಿತಿಯನ್ನು ಅವಳೂ ಕೂಡ ಎದುರಿಸಿದ್ದಳು. ಯಾರನ್ನೋ ಮನಸಾರೆ ಇಷ್ಟಪಟ್ಟಳು, ಆದರೆ ಆ ವ್ಯಕ್ತಿಗೆ ಯಾವುದೇ ಪ್ರಶ್ನೆ ಮಾಡಲು ಆಗಲಿಲ್ಲ. ಆ ವ್ಯಕ್ತಿ ಇನ್ನೊಬ್ಬರ ನಿಕಟರಾಗುವುದನ್ನು ಕಂಡು ಸುಮ್ಮನಾಗಿಬಿಟ್ಟಳು.

“ಹಲೋ ಆಂಟಿ, ನೀವೆಲ್ಲಿ ಕಳೆದುಹೋಗಿಬಿಟ್ರಿ? ನೀವಿನ್ನೂ ಸಿದ್ಧರಾಗಿಲ್ಲವೇ? ನಾವೀಗಲೇ ಚಿತ್ರ ಕಲಾಪರಿಷತ್‌ಗೆ ಹೋಗಬೇಕು. ಪೇಂಟಿಂಗ್‌ ಪ್ರದರ್ಶನ ಮಾಡುತ್ತಿರುವ ಅಮ್ಮನಿಗೆ ಚಿಯರ್‌ ಅಪ್‌ ಮಾಡಲು,” ಎಂದು ಸ್ನೇಹಾ ಹೇಳಿದಳು.

“ಹ್ಞಾಂ…. ಹ್ಞಾಂ….. ನಾನೀಗಲೇ ಸಿದ್ಧಳಾಗ್ತೀನಿ,” ಎಂದು ಹೇಳುತ್ತಾ ಶೈಲಾ ಗಡಿಬಿಡಿಯಿಂದ ಮೇಲೆದ್ದಳು.ಇಂದು ಅವಳ ಪ್ರೀತಿಯ ಗೆಳತಿ ನಮ್ರತಾಳ ಜೀವನದ ಅತ್ಯಂತ ವಿಶೇಷ ದಿನವಾಗಿತ್ತು. ಇಂದು ಮೊದಲ ಬಾರಿ ಅವಳು ವಿಶ್ವಮಟ್ಟದ ಪೇಂಟಿಂಗ್‌ ಪ್ರದರ್ಶನವೊಂದನ್ನು ನೋಡಲು ಹೊರಟಿದ್ದಳು.

ತಿಳಿ ನೀಲಿ ಬಣ್ಣದ ಸೀರೆ ಧರಿಸಿ ಅವಳು ಹೋಗಲು ಸಿದ್ಧಳಾದಳು. ಸ್ನೇಹಾ ಸ್ಕೂಟಿ ಹೊರತೆಗೆದು ರೆಡಿಯಾಗಿ ನಿಂತಿದ್ದಳು, “ಬನ್ನಿ ಆಂಟಿ, ಕುಳಿತುಕೊಳ್ಳಿ.”

ಅವಳು ಸ್ನೇಹಾಳ ಹಿಂದೆ ಕುಳಿತರು. ಅವಳು ಗಾಳಿಯೊಂದಿಗೆ ಮಾತುಕತೆ ನಡೆಸುತ್ತಾ ನಿಗದಿತ ಸ್ಥಳಕ್ಕೆ ತಲುಪಿದಳು.

ಶ್ವೇತಾ ಅತ್ಯಂತ ಪ್ರೀತಿಯಿಂದ ಸ್ನೇಹಾಳತ್ತ ನೋಡುತ್ತಿದ್ದಳು. ಸ್ಕೂಟಿಯನ್ನು ಒಂದು ಬದಿಗೆ ನಿಲ್ಲಿಸುತ್ತಾ ಸ್ನೇಹಾ, ಅವಳಿಗೆ ಬಹಳ ಸ್ಮಾರ್ಟ್‌ ಹಾಗೂ ಪ್ರೀತಿಪಾತ್ರ ಎನಿಸುತ್ತಿದ್ದಳು.

ಸ್ನೇಹಾ, ಅವಳ ಗೆಳತಿ ನಮ್ರತಾಳ ಪುಟ್ಟ ಹೃದಯದಲ್ಲಿ ನೋವು ಇಟ್ಟುಕೊಂಡು ಶೈಲಾಗೆ ತನ್ನ ಕುಟುಂಬವನ್ನು ಪುನರ್ ಸ್ಥಾಪಿಸಿಕೊಳ್ಳಲು ಆಗಲಿಲ್ಲ. ಹಾಗೆಂದೇ ಈವರೆಗೂ ಅವಳು ಒಂಟಿತನದ ಜೀವನ ನಡೆಸುತ್ತಿದ್ದಳು. ನಮ್ರತಾ ಮಾತ್ರ ಅವಳಿಗೆ ಬೆನ್ನೆಲುಬಾಗಿ ನಿಂತಿದ್ದಳು. ನಮ್ರತಾ ಕೂಡ ವಿಚ್ಛೇದಿತೆ. ಇಬ್ಬರೂ ಸ್ನೇಹಿತೆಯರು ಜೊತೆ ಜೊತೆಗೆ ವಾಸಿಸುತ್ತಿದ್ದರು. ನಮ್ರತಾಳ ಸಂಬಂಧ ಮದುವೆಯ ಬಳಿಕ ಅಂತ್ಯಗೊಂಡಿತ್ತು. ಆದರೆ ಶೈಲಾಳ ಸಂಬಂಧ ಇನ್ನೂ ಕುದುರುವ ಮೊದಲೇ ಮುರುಟಿತ್ತು.

ಪೇಂಟಿಂಗ್ಸ್ ನೋಡುತ್ತ ನೋಡುತ್ತಾ ಶೈಲಾ ನಮ್ರತಾಳ ಜೊತೆ ಬಹಳಷ್ಟು ದೂರ ಕ್ರಮಿಸಿದಳು. ನಮ್ರತಾಳ ಒಂದು ಪೇಂಟಿಂಗ್‌ 1 ಲಕ್ಷ 70 ಸಾವಿರ ರೂ.ಗೆ ಮಾರಾಟವಾದದ್ದನ್ನು ಕಂಡು ಶೈಲಾ ನಗುತ್ತಲೇ ಕೇಳಿಯೇಬಿಟ್ಟಳು.

“ನಮ್ರತಾ ಈ ಪೇಂಟಿಂಗ್‌ ನಲ್ಲಿ ಅಂಥದ್ದೇನು ವಿಶೇಷತೆಯಿದೆ…… ನನಗೆ ಗೊತ್ತಾಗ್ತಾ ಇಲ್ಲ?”

“ಅದರಲ್ಲಿಯೇ ವಿಶೇಷತೆಯಿದೆ ಶೈಲಾ,” ನಮ್ರತಾ ಮುಗುಳ್ನಕ್ಕಳು, “ಯಾವುದೇ ಒಬ್ಬ ವ್ಯಕ್ತಿಗೆ ಒಂದು ಪೇಂಟಿಂಗ್‌ ಅಮೂಲ್ಯ ಎಂಬಂತೆ ಕಂಡುಬಂದರೆ, ಮತ್ತೆ ಕೆಲವರಿಗೆ ಅದು ಅಡ್ಡದಿಡ್ಡಾ ರೇಖೆಗಳಿಗಿಂತ ಬೇರೇನೂ ಅಲ್ಲ. ಅದನ್ನು ತಿಳಿದುಕೊಳ್ಳುವ ದೃಷ್ಟಿಕೋನ ಇರಬೇಕು ಅಷ್ಟೇ.”

“ನಿಜ ಹೇಳಿದೆ ನಮ್ರತಾ, ಇದೇ ಸ್ಥಿತಿ ಭಾವನೆಗಳದ್ದು ಕೂಡ ಆಗಿರುತ್ತದೆ. ಕೆಲವರಿಗೆ ಭಾವನೆಗಳ ಬಗ್ಗೆ ವಿಶೇಷ ಮಹತ್ವವಿರುತ್ತದೆ. ಇನ್ನು ಕೆಲವರಿಗೆ ಆ ಭಾವನೆಗಳ ಮಹತ್ವ ಏನೆಂದು ಗೊತ್ತೇ ಇರುವುದಿಲ್ಲ. ಬಹುಶಃ ಭಾವನೆಗಳನ್ನು ಅನುಭವ ಮಾಡಿಕೊಳ್ಳುವ ಹೃದಯ ಅವರ ಬಳಿ ಇರುವುದೇ ಇಲ್ಲ ಎನಿಸುತ್ತದೆ.”

ಶೈಲಾಳ ಮಾತುಗಳನ್ನು ಕೇಳಿ ನಮ್ರತಾ ಗಂಭೀರಳಾಗಿಬಿಟ್ಟಳು. ಶೈಲಾಳ ಮನಸ್ಸಿನಲ್ಲಿ ಯಾವ ರೀತಿಯ ಬಿರುಗಾಳಿ ಎದ್ದಿದೆ, ಎನ್ನುವುದನ್ನು ಅವಳು ಚೆನ್ನಾಗಿ ತಿಳಿದುಕೊಂಡಿದ್ದಳು. ವಿಜಯನ ನೆನಪಲ್ಲಿ ಅದೆಷ್ಟೋ ವರ್ಷಗಳಿಂದ ಕಳೆದುಹೋಗಿದ್ದ ಗೆಳತಿ ಶೈಲಾಳ ಬಗ್ಗೆ ತಿಳಿದುಕೊಂಡಳು ನಮ್ರತಾ ಮಾತ್ರ. ಪ್ರೀತಿಯಲ್ಲಿ ನೋವುಂಡು ನಲುಗಿಹೋಗಿದ್ದ ಶೈಲಾ ಪುನಃ ಎದ್ದೇಳುವಂತೆ ಮಾಡಿದ್ದೇ ನಮ್ರತಾ. ಅವಳಿಗೆ ಆಧಾರಸ್ತಂಭವಾಗಿ ನಿಂತಿದ್ದಳು. ಶೈಲಾ ಈವರೆಗೆ ತನ್ನ ಭಾವನೆಗಳನ್ನು ನಮ್ರತಾಳ ಮುಂದಷ್ಟೇ ಹಂಚಿಕೊಂಡಿದ್ದಳು.

ನಮ್ರತಾ ಶೈಲಾಳ ಭುಜ ತಟ್ಟುತ್ತಾ ಹೇಳಿದಳು, “ಬೇಡ ಶೈಲಾ, ಆ ನೆನಪುಗಳನ್ನು ಪುನಃ ನಿನ್ನ ಮೇಲೆ ಹೇರಿಕೊಳ್ಳಬೇಡ. ಕಳೆದುಹೋದ ದುಃಖದ ದಿನಗಳ ಬಗ್ಗೆ ಮತ್ತೆಂದೂ ನೆನಪು ಮಾಡಿಕೊಳ್ಳಬಾರದು.”

“ಹೇಗೆ ನೆನಪು ಮಾಡಿಕೊಳ್ಳಬಾರದು ಹೇಳು ನಮ್ರತಾ? ಆ ದಿನಗಳು ನನ್ನ ವರ್ತಮಾನವನ್ನು ಹಾಳುಗೆಡಹಿವೆ. ಯಾವ ವಿಜಯನಿಗಾಗಿ ನಾನು ಈವರೆಗೆ ಹೃದಯದಲ್ಲಿ ನೋವಿಟ್ಟುಕೊಂಡು ಬದುಕುತ್ತಿದ್ದೆನೊ, ಅದೇ ವ್ಯಕ್ತಿ ಈಗ ಜಗತ್ತಿನ ಯಾವುದೊ ಮೂಲೆಯಲ್ಲಿ ನೆಮ್ಮದಿಯ ನಿದ್ರೆ ಮಾಡುತ್ತಿರಬಹುದು. ಜೀವನದ ಸಂಪೂರ್ಣ ಸೊಗಸು ಪಡೆಯುತ್ತಿರಬಹುದು.”

“ನೀನೂ ಅದನ್ನು ಮಾಡಬಹುದಿತ್ತಲ್ಲ, ನಿನ್ನನ್ನು ಯಾರು ತಡೆದಿದ್ದಾರೆ?”

“ಆ ವ್ಯಕ್ತಿ ನನ್ನ ಈ ಪ್ರೀತಿಯನ್ನು ಅನುಭವ ಮಾಡಿಕೊಂಡು ಕೂಡ ಯಾವುದೇ ಮಹತ್ವ ಕೊಡಲಿಲ್ಲ. ಬಹುಶಃ ಆ ವ್ಯಕ್ತಿಗೆ ಭಾವನೆಗಳ ಬಗ್ಗೆ ಯಾವುದೇ ಮಹತ್ವ ಇರಲಿಲ್ಲ ಅನಿಸುತ್ತೆ. ಆದರೆ ನಾನು ಮಾತ್ರ ಆ ವ್ಯಕ್ತಿಯ ಭಾವನೆಗಳನ್ನು, ಚೆಲ್ಲಾಪಿಲ್ಲಿಯಾದ ಅನುಭವಗಳನ್ನು ಈವರೆಗೂ ಸಂಭಾಳಿಸಿ ಇಟ್ಟುಕೊಂಡಿದ್ದೇನೆ.”

“ನಿನ್ನದೇನೂ ಬದಲಾಗುವುದಿಲ್ಲ ಶೈಲಾ,” ಎಂದು ತಣ್ಣನೆಯ ಉಸಿರೆಳೆದುಕೊಳ್ಳುತ್ತಾ ನಮ್ರತಾ ಹೇಳಿದಾಗ ಶೈಲಾ ಮುಗುಳ್ನಕ್ಕಳು.

“ಬಾ, ಇವತ್ತಿನ ಸಂಜೆಯ ಸೊಗಸನ್ನು ಹಾಳು ಮಾಡಿಕೊಳ್ಳುವುದು ಬೇಡ. ನನ್ನ ಇವತ್ತಿನ ಚಿತ್ರ ಪ್ರದರ್ಶನದ ಯಶಸ್ಸನ್ನು ಸಂಭ್ರಮಿಸೋಣ. ಅಂದಹಾಗೆ ಸಂಬಂಧ ಹಾಗೂ ಭಾವನೆಗಳ ಹೊರತಾಗಿಯೂ ಒಂದು ಜೀವನ ಇದ್ದೇ ಇರುತ್ತಲ್ಲ,” ಎಂದು ನಮ್ರತಾ ಹೇಳಿದಳು.

ಶೈಲಾ ಹಾಗೂ ನಮ್ರತಾ ಹೊರಗೆ ಬಂದರು. ಸ್ನೇಹಾ ಯಾವುದೊ ಹುಡುಗನ ಜೊತೆ ಮಾತನಾಡುವುದರಲ್ಲಿ ಮಗ್ನಳಾಗಿದ್ದಳು. ಅಮ್ಮನನ್ನು ನೋಡಿ ಅವಳು ಆ ಹುಡುಗನಿಗೆ ಬೈ ಎಂದೆನ್ನುತ್ತಾ ಇವರಿಬ್ಬರ ಬಳಿ ವಾಪಸ್ಸಾದಳು. “ಸ್ನೇಹಾ, ಯಾರು ಆ ಹುಡುಗ?” ಅಮ್ಮ ಕೇಳಿದಳು.

“ಅಮ್ಮಾ, ಅವನು ನನ್ನ ಫ್ರೆಂಡ್‌ ಅನಿಲ್‌.”

“ಸ್ಪೆಷಲ್ ಫ್ರೆಂಡ್‌……?”

“ಹಾಗೇನೂ ಇಲ್ಲ ಅಮ್ಮ. ಆದರೆ ಹೌದು. ಅಷ್ಟಿಷ್ಟು ಸ್ಪೆಷಲ್,” ಎಂದು ಹೇಳುತ್ತಾ ನಕ್ಕಳು.

ಮೂವರು ಅಂದು ರಾತ್ರಿ ಊಟವನ್ನು ಹೊರಗಡೆಯೇ ಮುಗಿಸಿದರು.

ರಾತ್ರಿ ಮಲಗುವ ಸಮಯದಲ್ಲಿ ಶೈಲಾ ಪುನಃ ಹಳೆಯ ನೆನಪುಗಳಲ್ಲಿ ಕಳೆದುಹೋದಳು. ಅದೊಂದು ಕಾಲದಲ್ಲಿ ಅವಳ ಕನಸು ಮನಸ್ಸಿನಲ್ಲಿ ವಿಜಯನೇ ಇರುತ್ತಿದ್ದ. ಸುಸಂಸ್ಕೃತ, ಸಭ್ಯ, ತಿಳಿವಳಿಕೆಯುಳ್ಳ, ಆಕರ್ಷಕ ವ್ಯಕ್ತಿತ್ವದ ವಿಜಯ ಪ್ರಥಮ ದೃಷ್ಟಿಯಲ್ಲಿಯೇ ಅವಳಿಗೆ ಇಷ್ಟವಾಗಿಬಿಟ್ಟಿದ್ದ. ಆದರೆ ಆಮೇಲೆ ತಿಳಿದುಬಂದದ್ದೇನೆಂದರೆ ಅವನೊಬ್ಬ ವಿವಾಹಿತ ವ್ಯಕ್ತಿ ಎಂದು. ಶೈಲಾ ಆಗ ಏನು ಮಾಡಲು ಸಾಧ್ಯವಿತ್ತು? ಆದರೆ ಅವಳ ಮನಸ್ಸು ಮಾತ್ರ ಅದನ್ನು ಒಪ್ಪಲು ಸಿದ್ಧವಿರಲೇ ಇಲ್ಲ.

ನಮ್ರತಾ ಆಗಲೇ ಅವಳನ್ನು ಟೀಕಿಸಿದ್ದಳು, “ಶೈಲಾ, ಅದು ತಪ್ಪು. ವಿವಾಹಿತ ವ್ಯಕ್ತಿಯ ಬಗ್ಗೆ ನೀನು ಯೋಚಿಸಲೇಬಾರದು.”

ಆಗ ಶೈಲಾ ಅವಳ ಮುಂದೆ ತನ್ನ ತರ್ಕ ಮಂಡಿಸಿದ್ದಳು, “ನಾನೇನು ಮಾಡಲಿ ನಮ್ರತಾ, ನಾನು ಅವನಿಗಾಗಿ ಯಾವ ಭಾವನೆಗಳನ್ನು ಮಿಡಿದ್ದಿದೆನೊ, ಅಂತಹ ಭಾವನೆಗಳನ್ನು ಬೇರಾರಿಗೂ ಹಂಚಲಿಲ್ಲ. ಅವನು ವಿವಾಹಿತನಾಗಿರುವುದಕ್ಕೂ ಇದಕ್ಕೂ ಏನು ಸಂಬಂಧ? ನನ್ನ ಸಂಬಂಧ ಭಾವನಾತ್ಮಕ ಮಟ್ಟದಲ್ಲಿಯೇ ಹೊರತು, ದೈಹಿಕ ವ್ಯಾಪ್ತಿಯಿಂದ ಬಹುದೂರ.”

“ಆದರೆ ಇದು ತಪ್ಪು ಶೈಲಾ. ಒಂದು ದಿನ ನಿನಗೂ ಅದು ಗೊತ್ತಾಗುತ್ತದೆ. ಇಂದಿನ ಕಾಲಘಟ್ಟದಲ್ಲಿ ಯಾರೂ ಈ ರೀತಿಯ ಸಂಬಂಧಗಳನ್ನು ಒಪ್ಪುವುದಿಲ್ಲ.”

ನಮ್ರತಾಳ ಆ ಮಾತು ಶೈಲಾಳ ಜೀವನದ ವಾಸ್ತವೇ ಆಗಿಬಿಟ್ಟಿತ್ತು. ಅವಳಿಗೂ ಅದು ತಿಳಿದಿತ್ತು. ಅದೆಷ್ಟೋ ವರ್ಷಗಳ ಕಾಲ ಅವನನ್ನು ಮನದಾಳದಲ್ಲಿ ವಿಜೃಂಭಿಸಿಕೊಂಡ ನಂತರ, ಅವಳಿಗೆ ಉಂಟಾದ ಅನುಭವ ಏನೆಂದರೆ, ವಿಜಯ್‌ಗೆ ತನ್ನ ಭಾವನೆಗಳ ಅನುಭವ ಇದೆ ಎನ್ನುವುದು ಗೊತ್ತಾಗಿತ್ತು. ಅವನು ಕೂಡ ಅವಳ ಜೊತೆ ಸುತ್ತಾಡಿದ್ದ. ಆದರೆ ಅವನು ಅವಳ ಜೊತೆ ಮದುವೆಗೆ ಸಿದ್ಧನಿರಲಿಲ್ಲ. ಅವನು ಅತ್ಯಂತ ಸಹಜವಾಗಿ ಇನ್ನೊಬ್ಬರಿಗೆ ಹತ್ತಿರವಾಗುತ್ತಾ ಹೋದ. ಇದನ್ನು ಶೈಲಾ ಮೌನವಾಗಿ ನೋಡುತ್ತಾ ನಿಂತುಬಿಟ್ಟಳು. ಆ ಬಗ್ಗೆ ಅವಳು ಏನೂ ಮಾತನಾಡಲಾಗಲಿಲ್ಲ. ಪ್ರಶ್ನೆಗಳನ್ನು ಕೇಳಲಾಗಲಿಲ್ಲ. ಕೇವಲ ಉದಾಸನತದ ನೆರಳಿನಲ್ಲಿ ತನಗೆ ತಾನೇ ಕಳೆದುಹೋದಳು. ಕೊನೆಗೊಮ್ಮೆ ಆ ಆಫೀಸನ್ನು ಬಿಟ್ಟುಬಿಟ್ಟಲು.

ಇಂದು ಆ ಘಟನೆ ನಡೆದು ಹಲವು ವರ್ಷಗಳೇ ಕಳೆದುಹೋಗಿವೆ. ಆದರೆ ಶೈಲಾಳ ಮನಸ್ಸಿನ ನೋವು ಮಾತ್ರ ಕಡಿಮೆಯಾಗಿರಲಿಲ್ಲ. ಅವಳಿಗೆ ಅದಕ್ಕೆ ಪರ್ಯಾಯ ಇರಲಿಲ್ಲವೆಂದಲ್ಲ. ಹೊಸ ಆಫೀಸಿನಲ್ಲಿ ಮೊದಲ ನೋಟದಲ್ಲೇ ಅವಳ ಇಮೀಡಿಯೆಟ್‌ ಬಾಸ್‌ ರಾಜನ್‌ ಅವಳಿಂದ ಪ್ರಭಾವಿತನಾಗಿದ್ದ. ಅವನ ಕಣ್ಣುಗಳು ಯಾವಾಗಲೂ ಶೈಲಾಳನ್ನೇ ಹಿಂಬಾಲಿಸುತ್ತಿದ್ದ. ಕಣ್ಣುಗಳಲ್ಲಿ ಪ್ರಶಂಸೆ ಹಾಗೂ ಆಮಂತ್ರಣ ಭಾವನೆ ಇದ್ದೂ ಕೂಡ ಶೈಲಾ ಅದನ್ನು ನಿರ್ಲಕ್ಷ್ಯ ಮಾಡಿ ಕೆಲಸದ ಬಗೆಗಷ್ಟೇ ಗಮನ ಕೊಡುತ್ತಿದ್ದಳು. ಅವನು ಏನೋ ಹೇಳಲು ಬಯಸುತ್ತಿದ್ದಾನೆಂದು ಅವಳಿಗೆ ಎಷ್ಟೋ ಸಲ ಅನಿಸುತ್ತಿತ್ತು. ಆದರೆ ಶೈಲಾಳ ಮೌನ ನೋಡಿ ಅವನು ಸುಮ್ಮನಾಗಿಬಿಡುತ್ತಿದ್ದ. ಶೈಲಾಳ ಇನ್ನೊಬ್ಬ ಸಹೋದ್ಯೋಗಿ ಸುಧಾಕರ ಕೂಡ ಶೈಲಾಳನ್ನು ತನ್ನತ್ತ ಸೆಳೆಯಲು ಪ್ರಯತ್ನ ನಡೆಸಿದ್ದ. ಆದರೆ ಬಡಾಯಿಕೋರ ಹಾಗೂ ಚಂಚಲ ಮನಸ್ಸಿನ ಸುಧಾಕರ ಅವಳಿಗೆ ಎಂದೂ ಇಷ್ಟವಾಗಲಿಲ್ಲ.

ಶೈಲಾಳ ಪಕ್ಕದ ಮನೆಯ ಆನಂದ್‌ ವಿಧುರನಾಗಿದ್ದ. ಆದರೆ ನೋಡಲು ಅವನು ಸ್ಮಾರ್ಟ್‌ ಆಗಿದ್ದ. ಶೈಲಾಳನ್ನು ಭೇಟಿಯಾಗಲು ಕಾತರಿಸುತ್ತಿದ್ದ. ತನ್ನ ಅಣ್ಣನ ಮಗುವನ್ನು ಕರೆದುಕೊಂಡು ಮನೆಗೆ ಬರುತ್ತಿದ್ದ. ಕೆಲವೊಮ್ಮೆ ಅವನು ಆಫೀಸ್‌ ತನಕ ಲಿಫ್ಟ್ ಕೊಡುವುದಾಗಿ ಆಗ್ರಹಿಸುತ್ತಿದ್ದ. ಅದೊಂದು ದಿನ ಶೈಲಾ ಅವನ ಮನೆಗೆ ಹೋದಳು, ಆಗ ಅವನು ಏಕಾಂಗಿಯಾಗಿದ್ದ. ಅದೇ ಅವಕಾಶ ಎಂದುಕೊಂಡು ಅವನು ಶೈಲಾಳ ಮುಂದೆ ತನ್ನ ಮನದ ಭಾವನೆಗಳನ್ನು ಪ್ರಕಟಪಡಿಸಿದ.

option-story-2

ಶೈಲಾ ಮಾತ್ರ ಅವನಿಗೆ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಅವನ ಮಾತುಗಳು ಅವಳ ಅಂತರ್ಮನವನ್ನು ತಟ್ಟುತ್ತಿರಲಿಲ್ಲ. ವಿಜಯ್‌ ನನ್ನು ಮರೆತು ಆನಂದ್‌ ನನ್ನು ತನ್ನವನನ್ನಾಗಿಸಬೇಕೆಂಬ ಆಕಾಂಕ್ಷೆ ಅವಳಲ್ಲಿ ಇರಲೇ ಇಲ್ಲ. ಅವಳ ಮನಸ್ಸಿನ ಆ ಮೂಲೆಯಲ್ಲಿ ಬೇರೆ ಯಾರನ್ನು ತುಂಬಿಸಿಕೊಳ್ಳುವ ಇಚ್ಛೆ ಅವಳಲ್ಲಿ ಇರಲಿಲ್ಲ ಎನ್ನುವುದು ಸ್ಪಷ್ಟ. ಶೈಲಾ ಆ ಬಗ್ಗೆ ಏನೊಂದೂ ಮಾತನಾಡಲಿಲ್ಲ. ಆದರೆ ಆ ದಿನದ ಬಳಿಕ ಆನಂದ್‌ಗೆ ಎದುರಾಗುವುದನ್ನು ಅವಳು ತಪ್ಪಿಸಿಕೊಳ್ಳತೊಡಗಿದಳು.

ಕಾಲ ಹೀಗೆಯೇ ಸಾಗಿತ್ತು. ಶೈಲಾ ತನ್ನನ್ನು ತಾನು ಆಕರ್ಷಣೆಯ ದೃಷ್ಟಿಕೋನದಿಂದ ಇಲ್ಲಿ ಆಸೆಯ ದೃಷ್ಟಿಕೋನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸತೊಡಗಿದಳು.

ಕೆಲವು ದಿನಗಳ ಬಳಿಕ ಒಂದು ಸಲ ರಾಜನ್‌ ಅವಳಿಗೆ, “ಮುಂದಿನ ವಾರ 2 ದಿನದ ಬಿಸ್‌ನೆಸ್‌ ಟ್ರಿಪ್‌ ಹೋಗುವುದಿದೆ, ನೀನು ನನ್ನ ಜೊತೆ ಬರಬೇಕು,” ಎಂದು ಹೇಳಿದ.

ರಾಜನ್‌ನ ಆ ಮಾತು ಕೇಳಿ ಶೈಲಾಳಿಗೆ ಕಸಿವಿಸಿಯಾಯಿತು. ಅವಳು ಬಾಸ್‌ನ ಆದೇಶವನ್ನು ಸ್ಪಷ್ಟವಾಗಿ ನಿರಾಕರಿಸಬೇಕೆಂದು ಯೋಚಿಸಿದಳು. ಆದರೆ ಅಷ್ಟು ಸುಲಭವಾಗಿ ಹಾಗೆ ಮಾಡಲು ಸಾಧ್ಯವಿರಲಿಲ್ಲ. ಆ ಬಿಸ್‌ನೆಸ್‌ ಟ್ರಿಪ್‌ನಲ್ಲಿ ಬೇರೆಯವರು ಕೂಡ ಇದ್ದೇ ಇರುತ್ತಾರೆ ಎನ್ನುವುದು ಅವಳಿಗೆ ಗೊತ್ತಿತ್ತು. ಆದರೆ ಇಂತಹ ಸ್ಥಿತಿಯಲ್ಲೂ ರಾಜನ್‌ ತನಗೆ ಹತ್ತಿರವಾಗಲು ಅವಕಾಶ ಪಡೆದೇ ಪಡೆಯುತ್ತಾನೆ ಎನ್ನುವುದು ಕೂಡ ಅವಳಿಗೆ ತಿಳಿದಿತ್ತು.

ರಾತ್ರಿ ಬಹಳ ಹೊತ್ತಿನ ತನಕ ಅವಳು ಯೋಚಿಸುತ್ತಲೇ ಇದ್ದಳು. ನಂತರ ನೀರು ಕುಡಿಯಲೆಂದು ಎದ್ದಾಗ, ಬಾಲ್ಕನಿಯಲ್ಲಿ  ಸ್ನೇಹಾ ಯಾರೊಂದಿಗೊ ಮಾತನಾಡುತ್ತಿದ್ದಳು. ಸ್ವಲ್ಪ ಹೊತ್ತಿನ ಬಳಿಕ ಅವಳು ವಾಪಸ್‌ ಬಂದು ಮಲಗಿದಳು.

ಮರುದಿನ ರಾತ್ರಿ 11 ಗಂಟೆಗೆ ಪುನಃ ಸ್ನೇಹಾ ಕೋಣೆಯಿಂದ ಹೊರಗೆ ಬಂದು ಬಾಲ್ಕನಿಯಲ್ಲಿ ನಿಂತು ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ಶೈಲಾ ಗಮನಿಸಿದಳು. ತನ್ನ ಫ್ರೆಂಡ್‌ ಜೊತೆಗೆ ಅವಳು ಮಾತನಾಡುತ್ತಿರಬಹುದು ಎಂದು ಊಹಿಸಿದಳು.

ಸ್ನೇಹಾಳ ಹಾಭಾ ಮತ್ತು ಪೋಷಾಕುಗಳ ಬದಲಾವಣೆ ಆಗಿರುವುದು ಕಂಡುಬರುತ್ತಿತ್ತು. ಏಕಾಂಗಿಯಾಗಿದ್ದಾಗ ಅವಳು ಮುಗುಳ್ನಗುವುದು, ಏನನ್ನೋ ಗುನಗುನಿಸುತ್ತಿರುವುದು ಕಂಡುಬರುತ್ತಿತ್ತು. ಅವಳು ಹೆಚ್ಚಾಗಿ ಮೊಬೈಲ್ ‌ನಲ್ಲಿ ಕಾಲ ಕಳೆಯುತ್ತಿರುವುದನ್ನು ಶೈಲಾ ಗಮನಿಸಿದ್ದಳು. ಶೈಲಾ ಕೂಡ ಇಂತಹದೇ ದಿನಗಳನ್ನು ದಾಟಿ ಬಂದಿದ್ದಳು.

ಅದೊಂದು ದಿನ ಸಂಜೆ ಸ್ನೇಹಾ ಖಿನ್ನ ಮನಸ್ಸಿನಿಂದ ಮನೆಗೆ ವಾಪಸ್ಸಾಗಿ ರೂಮಿನ ಬಾಗಿಲು ಹಾಕಿಕೊಂಡಳು. ಒಳಗೆ ಅವಳು ಫೋನ್‌ ನಲ್ಲಿ ಯಾರ ಜೊತೆಗೊ ಜೋರು ಜೋರಾಗಿ ಮಾತನಾಡುತ್ತಿರುವುದು ಶೈಲಾಳ ಗಮನಕ್ಕೆ ಬಂತು.

ನಮ್ರತಾ ಅಂದು ರಾತ್ರಿ ತಡವಾಗಿ ಬರುಳಿದ್ದಳು. ಹೀಗಾಗಿ ತಾನೇ ಅವಳನ್ನು ಸಂಭಾಳಿಸಬೇಕಾದ ಜವಾಬ್ದಾರಿ ಇದೆ ಎನ್ನುವ ಅರಿವು ಅವಳಿಗೆ ಬಂತು. ಶೈಲಾ ತಕ್ಷಣವೇ ಸ್ನೇಹಾಳ ಕೋಣೆಗೆ ಹೋದಳು. ಅಲ್ಲಿ ಸ್ನೇಹಾ ದಿಂಬಿಗೆ ಮುಖ ಆನಿಸಿಕೊಂಡು ಮಲಗಿದ್ದಳು. ಶೈಲಾ ಅವಳ ತಲೆಯನ್ನು ಪ್ರೀತಿಯಿಂದ ಸವರುತ್ತಾ, “ಏನಾಯ್ತು ಸ್ನೇಹಾ, ನೀನೇಕೆ ಇಷ್ಟು ಡಿಸ್ಟರ್ಬ್‌ ಆಗಿದ್ದೀಯಾ? ಯಾರಾದ್ರೂ ಫ್ರೆಂಡ್‌ ಜೊತೆ ಜಗಳ ಆಯ್ತಾ?”

ಸ್ನೇಹಾ “ಹೌದು….” ಎಂದು ಹೇಳಿದಳು.

“ಅಂದಹಾಗೆ ನಿನ್ನ ಸ್ಪೆಷಲ್ ಫ್ರೆಂಡ್‌ ಜೊತೆ ಜಗಳ ಆಗಿದೆಯಾ?”

“ಕೇವಲ ಜಗಳ ಅಷ್ಟೇ ಅಲ್ಲ, ನಮ್ಮ ಬ್ರೇಕ್‌ ಅಪ್‌ ಕೂಡ ಆಯ್ತು. ಅವನು ನನ್ನನ್ನು ಬಿಟ್ಟು ಇನ್ನೊಬ್ಬ ಹುಡುಗಿಯ ಜೊತೆ ಹೋದ. ಮತ್ತು ನಾನು……”

“ಹೌದು ಮಗಳೇ, ಪ್ರೀತಿಯ ಬಾಬತ್ತಿನಲ್ಲಿ ಸಾಮಾನ್ಯವಾಗಿ ಹೀಗೆಯೇ ಆಗುತ್ತೆ. ಈಗ ನೀನು ಅದನ್ನು ಮರೆತುಬಿಡು ಎಂದು ನಾನು ಹೇಗೆ ಹೇಳಲು ಸಾಧ್ಯ? ಅದೂ ಕೂಡ ಎಲ್ಲಿ ಸಾಧ್ಯವಾಗುತ್ತದೆ? ಆ ನೋವು ಸದಾ ನಮ್ಮೊಂದಿಗೆ ಉಳಿದುಬಿಡುತ್ತದೆ.”

“ನೋವೇ ಆಂಟಿ. ಹೀಗಾಗಲೂ ಸಾಧ್ಯವಿಲ್ಲ. ಅವನಿಗೆ ನನ್ನನ್ನು ಬಿಟ್ಟು ಬೇರೊಬ್ಬರು ಇಷ್ಟವಾಗುತ್ತಾರೆ ಎಂದಾದರೆ, ನನಗೆ ಆಪ್ಶನ್ಸ್ ಏನು ಕಡಿಮೆ ಇವೆಯಾ? ಸಾಕು ಆಂಟಿ, ಇವತ್ತಿನ ಬಳಿಕ ನಾನು ಆ ವ್ಯಕ್ತಿಯ ನೆನಪು ಕೂಡ ಮಾಡಿಕೊಳ್ಳುವುದಿಲ್ಲ. ಹಿಸ್ ಚಾಪ್ಟರ್‌ ಹ್ಯಾಸ್‌ ಬೀನ್‌ ಕ್ಲೋಸ್ಡ್ ಇನ್‌ ಮೈ ಲೈಫ್‌. ಆಂಟಿ ನೀವೇ ಹೇಳಿ, ನನ್ನನ್ನು ಬಿಟ್ಟು ಅವನು ಇರುತ್ತಾನೆಂದಾದರೆ, ನಾನು ಇನ್ನೊಬ್ಬರ ಜೊತೆ ಖುಷಿಯಿಂದ ಇರಲು ಏಕೆ ಸಾಧ್ಯವಿಲ್ಲ?”

ಶೈಲಾ ಸ್ನೇಹಾಳನ್ನು ಒಂದೇ ಸಮನೇ ನೋಡತೊಡಗಿದಳು. ಅವಳಿಗೆ ಆಕಸ್ಮಿಕವಾಗಿ ತನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು ಎನಿಸತೊಡಗಿತು. ಮನಸ್ಸಿನ ಗೊಂದಲ ನಿವಾರಣೆಯಾದಂತೆ ಅನಿಸಿತು.

ಮರುದಿನ ಅವಳ ಮನಸ್ಸು ಅತ್ಯಂತ ಹಗುರವಾದಂತೆ ಭಾಸವಾಗುತ್ತಿತ್ತು. ಅವಳು ಜೀವನದ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಳು. ಈಗ ಅವಳಿಗೆ ಜೀವನದಲ್ಲಿ ಮುಂದೆ ಸಾಗಬೇಕಿತ್ತು. ಆಫೀಸ್‌ ತಲುಪುತ್ತಿದ್ದಂತೆ ಬಾಸ್‌ ರಾಜನ್‌ ಅವಳನ್ನು ಒಳಗೆ ಕರೆಸಿಕೊಂಡ. ಶೈಲಾ ಕೂಡ ಅದೇ ಕ್ಷಣಕ್ಕಾಗಿ ನಿರೀಕ್ಷಿಸಿದ್ದಳು.

ರಾಜನ್‌ನ ಕಣ್ಣುಗಳಲ್ಲಿ ಪ್ರಶ್ನೆ ಎದ್ದು ಕಾಣುತ್ತಿತ್ತು, “ನಿನ್ನ ನಿರ್ಧಾರ ಏನು?” ಅವನು ಕೇಳಿದ.

ಶೈಲಾ ಸಹಜತೆಯಿಂದ ಮುಗುಳ್ನಕ್ಕು ಉತ್ತರಿಸಿದಳು, “ಹೌದು, ನಾನೂ ಬರುತ್ತೇನೆ!”

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ