ಮ್ಯಾಂಗೋ ಗ್ರೇಪ್ಸ್ ಶಾರ್ಟ್

ಸಾಮಗ್ರಿ : 1 ಕಪ್‌ ಕಪ್ಪು ದ್ರಾಕ್ಷಿಯ ಹುಳಿಸಿಹಿ ಜೂಸ್‌, 1 ಸ್ಕೂಪ್‌ ಮ್ಯಾಂಗೋ ಐಸ್‌ ಕ್ರೀಂ, 2 ಚಮಚ ಪಿಸ್ತಾ ಚೂರು, ತುಸು ಕ್ರಶ್ಡ್ ಸ್ಟ್ರಾಬೆರಿ.

ವಿಧಾನ : ಮೊದಲು ಸಣ್ಣ ಗ್ಲಾಸುಗಳನ್ನು ಫ್ರಿಜ್‌ನಲ್ಲಿರಿಸಿ ಕೂಲ್ ‌ಮಾಡಿ. ಆವು ಕೋಲ್ಡ್ ಗ್ಲಾಸುಗಳಿಗೆ ಮೊದಲು ಕೋಲ್ಡ್ ಗ್ರೇಪ್ ಜೂಸ್‌ ಹಾಕಿಡಿ. ಇದರ ಮೇಲೆ ಮ್ಯಾಂಗೋ ಐಸ್‌ಕ್ರೀಂ ಹಾಕಿ, ಪಿಸ್ತಾ ಉದುರಿಸಿ. ಅದರ ಮೇಲೆ ಸ್ಟ್ರಾಬೆರಿ ಉದುರಿಸಿ ಸವಿಯಲು ಕೊಡಿ.

ಮಾವಿನ ಅನಾರ್ಕಲಿ

ಸಾಮಗ್ರಿ : 2 ಕಪ್‌ ಕೋಲ್ಡ್ ಹಾಲು, 2 ಚಮಚ ಫ್ರೆಶ್‌ ಕ್ರೀಂ, ಅರ್ಧ ಕಪ್‌ ದಾಳಿಂಬೆ ಜೂಸ್‌, 2 ಕಪ್‌ ಮಾಗಿದ ಮಾವಿನ ತಿರುಳು, 2 ಚಮಚ ಸಕ್ಕರೆ, 2-3 ಚಮಚ ಸೀಡ್ಲೆಸ್‌ ದಾಳಿಂಬೆ ಹರಳು, 3-4 ಚಮಚ ಮಿಕ್ಸ್ಡ್ ಫ್ರೂಟ್‌ ಜ್ಯಾಂ, 1 ಚಮಚ ಪಿಸ್ತಾ ಚೂರು.

ವಿಧಾನ : ಉದ್ದನೇ ಗ್ಲಾಸುಗಳ ಅಂಚಿಗೆ ಫ್ರೂಟ್‌ ಜ್ಯಾಂ ಸವರಿಡಿ. 10-15 ನಿಮಿಷ ಇದನ್ನು ಫ್ರಿಜ್‌ ನಲ್ಲಿರಿಸಿ. ಒಂದು ಬಟ್ಟಲಿಗೆ ಹಾಲು ಬಗ್ಗಿಸಿ, ಅದಕ್ಕೆ ದಾಳಿಂಬೆ ಜೂಸ್‌, ಅರ್ಧದಷ್ಟು ಮಾವಿನ ತಿರುಳು, ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಇದಕ್ಕೆ ಫ್ರೆಶ್‌ ಕ್ರೀಂ ಬೆರೆಸಿ ಮತ್ತೊಮ್ಮೆ ಚಲಾಯಿಸಿ. ನಂತರ ಫ್ರಿಜ್‌ ನಿಂದ ಹೊರತೆಗೆದ ಗ್ಲಾಸುಗಳಿಗೆ ಸಮನಾಗಿ ಸುರಿಯಿರಿ. ಇದರ ಮೇಲೆ ಉಳಿದ ಮಾವಿನ ತಿರುಳು, ದಾಳಿಂಬೆ ಹರಳು, ಪಿಸ್ತಾ ಉದುರಿಸಿ ತಣ್ಣಗೆ ಸವಿಯಲು ಕೊಡಿ.

ಮ್ಯಾಂಗೋ ಸ್ಟ್ರಾಬೆರಿ ಶೇಕ್

ಸಾಮಗ್ರಿ : 4 ಕಪ್‌ ಮಾಗಿದ ಮಾವಿನ ತಿರುಳು, 1 ಕಪ್‌ ಸ್ಟ್ರಾಬೆರಿ ಸಿರಪ್‌, ಅರ್ಧ ಲೀ. ಗಟ್ಟಿ ಕೆನೆಭರಿತ ಹಾಲು, ಅರ್ಧ ಕಪ್‌ ಪುಡಿ ಸಕ್ಕರೆ, 3-4 ಚಮಚ ಪಿಸ್ತಾ ಚೂರು, 1 ಕಪ್‌ ಪುಡಿ ಐಸ್‌.

ವಿಧಾನ : ಒಂದು ಬಟ್ಟಲಿಗೆ ಮಾವಿನ ತಿರುಳು, ಕಾದಾರಿದ ಹಾಲು, ಪುಡಿ ಸಕ್ಕರೆ ಸೇರಿಸಿ ಕದಡಿಕೊಂಡು, ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಇದಕ್ಕೆ ಪುಡಿ ಐಸ್‌ ಹಾಕಿ ಮತ್ತೆ ಚಲಾಯಿಸಿ. ಈ ಮಿಶ್ರಣವನ್ನು ಗ್ಲಾಸುಗಳಿಗೆ ಅರ್ಧರ್ಧ ಬರುವಂತೆ ಬಗ್ಗಿಸಿ. ಇದಕ್ಕೆ 1-1 ಚಮಚ ಸ್ಟ್ರಾಬೆರಿ ಸಿರಪ್‌ ಬೆರೆಸಿರಿ. ಇದರ ಮೇಲೆ ಉಳಿದ ಮಾವಿನ ಮಿಶ್ರಣ ಸುರಿಯಿರಿ. ಇದರ ಮೇಲೆ ಪಿಸ್ತಾ ಉದುರಿಸಿ ಸವಿಯಲು ಕೊಡಿ.

ಕಿವೀ ಮ್ಯಾಂಗೋ ಲೆಮೋನೇಡ್

ಸಾಮಗ್ರಿ : 1 ದೊಡ್ಡ ಮಾಗಿದ ಮಲಗೋವಾ ಮಾವು, ಅರ್ಧ ಕಪ್‌ ಕಿವೀ ಕ್ರಶ್‌, 4 ಚಮಚ ಪುಡಿ ಸಕ್ಕರೆ, 1 ಚಮಚ ನಿಂಬೆರಸ, 1 ಕಪ್‌ ಪುಡಿ ಐಸ್‌.

ವಿಧಾನ : ಮಾವಿನ ಸಿಪ್ಪೆ ಹೆರೆದು ತಿರುಳು ಬೇರ್ಪಡಿಸಿ. ಇದರ ಸ್ವಲ್ಪ ಭಾಗ ಉಳಿಸಿಕೊಂಡು, ಉಳಿದಿದ್ದನ್ನು ಮಿಕ್ಸಿಗೆ ಹಾಕಿ. ಜೊತೆಗೆ ಅರ್ಧದಷ್ಟು ಸಕ್ಕರೆ, ಏಲಕ್ಕಿಪುಡಿ ಸೇರಿಸಿ ತಿರುವಿಕೊಳ್ಳಿ. ಇದನ್ನು ಒಂದು ಬಟ್ಟಲಿಗೆ ಸುರಿದು ಅದೇ ಮಿಕ್ಸಿಗೆ ಕಿವೀ ಕ್ರಶ್‌, ಉಳಿದ ಸಕ್ಕರೆ, ನಿಂಬೆರಸ, ತುಸು ಪುಡಿ ಐಸ್‌ ಬೆರೆಸಿ ನೀಟಾಗಿ ತಿರುವಿಕೊಳ್ಳಿ. ಈಗ ಉದ್ದನೇ ಗ್ಲಾಸುಗಳಿಗೆ ಮೊದಲು ಮಾವಿನ ಮಿಶ್ರಣ, ಇದರ ಮೇಲೆ ಕಿವೀ ಮಿಶ್ರಣ, ಅದರ ಮೇಲೆ ಪುಡಿ ಐಸ್‌….. ಹೀಗೆ ಮತ್ತೆ ರಿಪೀಟ್‌ ಮಾಡಿ. ಹೀಗೆ ಭರ್ತಿಯಾದ ಗ್ಲಾಸನ್ನು ಟ್ರೇನಲ್ಲಿರಿಸಿ, ಮನೆಗೆ ಬಂದ ಅತಿಥಿಗಳಿಗೆ ಸವಿಯಲು ಕೊಡಿ.

ಚಾಕಲೇಟ್‌ ಮ್ಯಾಂಗೋ ಐಸ್‌ ಕ್ರೀಂ

ಸಾಮಗ್ರಿ : 1 ಲೀ. ಕಾದಾರಿದ ಗಟ್ಟಿ ಹಾಲು, 1 ದೊಡ್ಡ ಮಾಗಿದ ಮಾವಿನ ತಿರುಳು, 1 ಕಪ್‌ ಫ್ರೆಶ್‌ ಕ್ರೀಂ, 1 ದೊಡ್ಡ ಚಮಚ ತುರಿದ ಚಾಕಲೇಟ್‌, 1 ದೊಡ್ಡ ಚಮಚ ಕಾರ್ನ್‌ ಫ್ಲೋರ್‌.

ವಿಧಾನ : ಮೊದಲು ತುಸು ಹಾಲಿಗೆ ಕಾರ್ನ್‌ ಫ್ಲೋರ್‌ ಬೆರೆಸಿ ಚೆನ್ನಾಗಿ ಕದಡಿಕೊಂಡು ಮಿಶ್ರಣ ಮಾಡಿ. ಒಂದು ಸ್ಟೀಲ್ ‌ಪಾತ್ರೆಯಲ್ಲಿ ಮಂದ ಉರಿಯಲ್ಲಿ ಮತ್ತೆ ಹಾಲು ಕಾಯಿಸಿ, ಕುದಿಸಬೇಕು. ಇದಕ್ಕೆ ಕಾರ್ನ್‌ ಫ್ಲೋರ್‌ ಮಿಶ್ರಣ ಬೆರೆಸಿ ಗೊಟಾಯಿಸಿ. ಹಾಲು ಅರ್ಧದಷ್ಟು ಹಿಂಗಿದಾಗ, ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ಮಿಕ್ಸಿಗೆ ಮಾವಿನ ತಿರುಳು, ಸಕ್ಕರೆ, ಚಾಕಲೇಟ್‌ ತುರಿ ಹಾಕಿ ತಿರುವಿಕೊಳ್ಳಿ. ಆಮೇಲೆ ಇದಕ್ಕೆ ಹಾಲಿನ ಮಿಶ್ರಣ ಬೆರೆಸಿ ಕೈಯಾಡಿಸುತ್ತಿರಿ. ಇದನ್ನು ಕೆಳಗಿಳಿಸಿ ಫ್ಯಾನಿನಡಿ ಆರಿಸಿ. ತಣ್ಣಗಾದಾಗ ಐಸ್‌ಕ್ರೀಂ ಟ್ರೇಗೆ ಸಮನಾಗಿ ಹರಡಿರಿ. ಫ್ರೀಝರಿನಲ್ಲಿಟ್ಟು ಅರ್ಧ ಸೆಟ್‌ ಆದಾಗ ಹೊರತೆಗೆದು, ಕ್ರೀಂ ಬೆರೆಸಿ ಮಿಕ್ಸಿಯಲ್ಲಿ ಮತ್ತೆ ತಿರುವಿಕೊಳ್ಳಿ. ಮತ್ತೆ ಇದನ್ನು ಫ್ರೀಝರಿನಲ್ಲಿಟ್ಟು ಅರ್ಧ ಸೆಟ್‌ ಆದಾಗ ಹೊರ ತೆಗೆದು, ಕ್ರೀಂ ಬೆರೆಸಿ ಮಿಕ್ಸಿಯಲ್ಲಿ ಮತ್ತೆ ತಿರುವಿಕೊಳ್ಳಿ. ಮತ್ತೆ ಇದನ್ನು ಫ್ರೀಝರಿನಲ್ಲಿಟ್ಟು ಪೂರ್ತಿ ಸೆಟ್‌ ಮಾಡಿಸಿ. ನಂತರ ಹೊರತೆಗೆದು ಪಿಸ್ತಾ ಉದುರಿಸಿ, ಸವಿಯಲು ಕೊಡಿ.

ಮ್ಯಾಂಗೋ ಬ್ರೆಡ್‌ ಕುಲ್ಛಿ

Cookry-B

ಸಾಮಗ್ರಿ : 1 ದೊಡ್ಡ ಮಾಗಿದ ಮಾವಿನ ತಿರುಳು, 4-5 ಫ್ರೆಶ್‌ ಬ್ರೆಡ್‌ ಸ್ಲೈಸ್‌, 1 ಲೋಟ ಗಟ್ಟಿ ಹಾಲು, 2 ಚಮಚ ಹಾಲಿನಪುಡಿ, 3 ಚಮಚ ಪುಡಿ ಸಕ್ಕರೆ, 1 ಚಮಚ ಪಿಸ್ತಾ ಚೂರು.

ವಿಧಾನ : ಅರ್ಧದಷ್ಟು ಹಾಲು, ಹಾಲಿನ ಪುಡಿ, ಪುಡಿ ಸಕ್ಕರೆ, ಕಿವುಚಿದ ಬ್ರೆಡ್‌ ಮಿಕ್ಸಿಗೆ ಹಾಕಿ ತಿರುವಿಕೊಳ್ಳಿ. ಈ ಮಿಶ್ರಣವನ್ನು ಕುಲ್ಛಿಯ ಅಚ್ಚುಗಳಿಗೆ ತುಂಬಿಸಿ 5-6 ಗಂಟೆ ಕಾಲ ಫ್ರೀಝರಿನಲ್ಲಿಡಿ. ನಂತರ ಉಳಿದ ಹಾಲು, ಸಕ್ಕರೆ, ಹಾಲಿನ ಪುಡಿ, ಮಾವಿನ ತಿರುಳು ಹಾಕಿ ತಿರುವಿಕೊಳ್ಳಿ. ಇದನ್ನು ಕುಲ್ಛಿಯ ದಪ್ಪ ಅಚ್ಚುಗಳಲ್ಲಿ ಅರ್ಧ ಭಾಗ ತುಂಬಿಸಿ ಸೆಟ್‌ ಮಾಡಿಸಿ. ಅರೆ ಭಾಗ ಸೆಟ್ ಆದಾಗ, ಮತ್ತೆ ಹೊರತೆಗೆದು ಮ್ಯಾಂಗೋ ಕುಲ್ಛಿ ಅಚ್ಚುಗಳ ಮಧ್ಯೆ ಇರಿಸಿಬಿಡಿ. ಇನ್ನು ಮತ್ತೆ  7-8 ಘಂಟೆಗಳ ಕಾಲ ಸೆಟ್‌ ಮಾಡಿ. ನಂತರ ಹೊರತೆಗೆದು ಚಿತ್ರದಲ್ಲಿರುವಂತೆ ಕತ್ತರಿಸಿ, ಪಿಸ್ತಾ ಉದುರಿಸಿ ಸವಿಯಲು ಕೊಡಿ.

ಮ್ಯಾಂಗೋ ಕೋಲಾ ಪೆಪ್ಸಿ

ಸಾಮಗ್ರಿ : 1 ಮಾಗಿದ ಮಾವಿನ ತಿರುಳು, 2 ಚಮಚ ಪುಡಿಸಕ್ಕರೆ, ತುಸು ನಿಂಬೆ ರಸ, 1 ಕಪ್‌ ಕೋಲಾ/ಪೆಪ್ಸಿ.

ವಿಧಾನ : ಮೊದಲು ಮಿಕ್ಸಿಗೆ ಮಾವು ಹಾಕಿ ಇದಕ್ಕೆ ಸಕ್ಕರೆ, ನಿಂಬೆ ರಸ, 1 ಕಪ್‌ ನೀರು ಬೆರೆಸಿ ಚೆನ್ನಾಗಿ ಬ್ಲೆಂಡ್‌ ಮಾಡಿ. ಇದನ್ನು ಸೋಸಿಕೊಂಡು ಪೆಪ್ಸಿ ಮೋಲ್ದಿ‌ನಲ್ಲಿ ಮುಕ್ಕಾಲು ಭಾಗ ತುಂಬಿಸಿ, ಸೆಟ್‌ ಮಾಡಿ. 3-4 ಘಂಟೆಗಳ ನಂತರ, ಮೋಲ್ಡ್ ಖಾಲಿ ಭಾಗಕ್ಕೆ ಪೆಪ್ಸಿ/ಕೋಲಾ ತುಂಬಿಸಿ, ಮತ್ತೆ ಸೆಟ್‌ ಮಾಡಿಸಿ. ಮತ್ತೆ 3 ಘಂಟೆ ನಂತರ ಹೊರತೆಗೆದು, ಕೂಲ್ ಕೂಲ್ ‌ಸರ್ವ್ ಮಾಡಿ.

ಮಾವಿನ ಖೀರು

ಸಾಮಗ್ರಿ : 1 ದೊಡ್ಡ ಮಾಗಿದ ಮಾವಿನ ತಿರುಳು,  3-4 ಸ್ಲೈಸ್‌ ಮಾವು, ಅರ್ಧ ಕಪ್‌ ಅಕ್ಕಿ, 1 ಲೀ. ಗಟ್ಟಿ ಹಾಲು, ಅರ್ಧ ಕಪ್ ಸಕ್ಕರೆ, ತುಸು ಏಲಕ್ಕಿ ಪುಡಿ, ಪಿಸ್ತಾ ಚೂರು.

ವಿಧಾನ : ಒಂದು ಘಂಟೆ ಕಾಲ ಅಕ್ಕಿ ನೆನೆಸಿ ಶುಚಿಗೊಳಿಸಿ. ಇದಕ್ಕೆ ಅರ್ಧ ಕಪ್‌ ಕಾದಾರಿದ ಹಾಲು ಬೆರೆಸಿ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಉಳಿದ ಹಾಲನ್ನು ಮತ್ತೆ ಕಾಯಿಸಿ, ಅರ್ಧದಷ್ಟಾಗುವಂತೆ ಕುದಿಸಿರಿ. ಇದಕ್ಕೆ ರುಬ್ಬಿದ ಅಕ್ಕಿ ಪೇಸ್ಟ್, ಸಕ್ಕರೆ ಹಾಕಿ ಮಂದ ಉರಿಯಲ್ಲಿ 15 ನಿಮಿಷ ಕುದಿಸಿರಿ.

ಈ ಮಿಶ್ರಣ ಗಟ್ಟಿಯಾದಾಗ, ಏಲಕ್ಕಿ ಹಾಕಿ ಕದಡಿಕೊಳ್ಳಿ. ಕೆಳಗಿಳಿಸಿ ಇದಕ್ಕೆ ಮಾವಿನ ತಿರುಳು ಬೆರೆಸಿ ಗೊಟಾಯಿಸಿ. ಇದರ ಮೇಲೆ ಪಿಸ್ತಾ ಉದುರಿಸಿದರೆ ರೆಡಿ! ಇದನ್ನು ಸರ್ವಿಂಗ್‌ ಬಟ್ಟಲಿಗೆ ಹಾಕಿ, ಮೇಲೆ ಮಾವಿನ ಸ್ಲೈಸ್‌ ಇರಿಸಿ ಸವಿಯಲು ಕೊಡಿ.

ಮಾವಿನ ಮಡಕೆ ಕುಲ್ಛಿ

ಸಾಮಗ್ರಿ : 1 ಕಪ್‌ ಮಾಗಿದ ಮಾವಿನ ತಿರುಳಿನ ಪೇಸ್ಟ್, 2 ಕಪ್‌ ಕಾದಾರಿದ ಗಟ್ಟಿ ಹಾಲು, 4 ಚಮಚ ಕಾರ್ನ್‌ ಫ್ಲೋರ್‌, ಅರ್ಧ ಕಪ್‌ ಸಕ್ಕರೆ, ತುಸು ಏಲಕ್ಕಿ ಪುಡಿ, ಪಿಸ್ತಾ ಚೂರು.

ವಿಧಾನ : ಕಾರ್ನ್‌ ಫ್ಲೋರನ್ನು 4 ಚಮಚ ಬಿಸಿ ಹಾಲಲ್ಲಿ ಕದಡಿ ಕಾಯಿಸಿ, ಅರ್ಧದಷ್ಟಾಗುವಂತೆ ಕುದಿಸಿರಿ. ನಂತರ ಇದಕ್ಕೆ ಏಲಕ್ಕಿ, ಸಕ್ಕರೆ, ಕದಡಿದ ಕಾರ್ನ್‌ ಫ್ಲೋರ್‌ ಬೆರೆಸಿ ಚೆನ್ನಾಗಿ ಗೊಟಾಯಿಸಿ. ಇದನ್ನು ಕೆಳಗಿಳಿಸಿ ಚೆನ್ನಾಗಿ ಆರಿದ ನಂತರ, ಮಾವಿನ ತಿರುಳಿನ ಸಮೇತ ಮಿಕ್ಸಿಗೆ ಹಾಕಿ ತಿರುವಿಕೊಳ್ಳಿ. ನಂತರ ಈ ಮಿಶ್ರಣವನ್ನು ಶುಚಿಯಾದ ಸಣ್ಣ ಮಡಕೆಗಳಿಗೆ ತುಂಬಿಸಿ, 7-8 ಘಂಟೆಗಳ ಕಾಲ ಫ್ರಿಜ್‌ ನಲ್ಲಿರಿಸಿ ಸೆಟ್‌ ಮಾಡಿ. ನಂತರ ಹೊರತೆಗೆದು, ತುಂಡರಿಸಿ, ಕುಲ್ಛಿ ಸವಿಯಲು ಕೊಡಿ.

ಮ್ಯಾಂಗೋ ಡಸ್ಟ್ ವಿತ್‌ ಜಾಮೂನು

Cookry-C

ಸಾಮಗ್ರಿ : 1 ಕಪ್‌ ಮಾವಿನ ತಿರುಳು, 5-6 ಜಾಮೂನು, ಅರ್ಧ ಕಪ್‌ ಪುಡಿ ಸಕ್ಕರೆ, ತುಸು ನಿಂಬೆರಸ, ಗುಲಾಬಿ ಜಲ.

ವಿಧಾನ : ಮೊದಲು ಮಾವಿನ ತಿರುಳನ್ನು ಸಕ್ಕರೆ, 1 ಕಪ್‌ ನೀರಿನ ಜೊತೆ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಈ ಮಿಶ್ರಣಕ್ಕೆ  ಗುಲಾಬಿಜಲ, ನಿಂಬೆರಸ ಬೆರೆಸಿ ಕದಡಿಕೊಂಡು ಬಟ್ಟಲಿಗೆ ಹಾಕಿ, ಫ್ರೀಝರಿನಲ್ಲಿಟ್ಟು ಸೆಟ್‌ ಮಾಡಿ. 2 ಗಂಟೆ ಬಿಟ್ಟು ಹೊರತೆಗೆಯಿರಿ. ಇದನ್ನು ಚೆನ್ನಾಗಿ ಕದಡಿಕೊಂಡು, ಮತ್ತೆ ಫ್ರಿಜ್ ನಲ್ಲಿಟ್ಟು ಸೆಟ್‌ ಮಾಡಿ. ಇದೇ ರೀತಿ 4-5 ಸಲ ರೀಸೆಟ್‌ ಮಾಡಿ. ಕೊನೆಗೆ ಅದು ಮಾವಿನ ಹರಳಾಗುತ್ತದೆ. ಇದನ್ನು ಸರ್ವಿಂಗ್‌ ಬಟ್ಟಲಿಗೆ ಹಾಕಿ, ಜಾಮೂನು ಸೇರಿಸಿ ಸವಿಯಲು ಕೊಡಿ.

ಮಾವಿನ ಶ್ಯಾವಿಗೆ

 

ಸಾಮಗ್ರಿ : 1 ಕಪ್‌ ತುಂಡರಿಸಿದ ಶ್ಯಾವಿಗೆ, 1 ಕಪ್‌ ಮಾವಿನ ತಿರುಳಿನ ತೆಳು ಪೇಸ್ಟ್, ಅರ್ಧ ಕಪ್‌ ಪುಡಿ ಸಕ್ಕರೆ, ಅಗತ್ಯವಿದ್ದಷ್ಟು ಏಲಕ್ಕಿ ಪುಡಿ, ಬಾದಾಮಿ, ಗೋಡಂಬಿ ಚೂರು, ಹಳದಿ ಬಣ್ಣ, ತುಪ್ಪ, ಫ್ರೂಟ್‌ ಜ್ಯಾಂ.

ವಿಧಾನ : ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಶ್ಯಾವಿಗೆ ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ಇದಕ್ಕೆ 2 ಕಪ್‌ ನೀರು ಬೆರೆಸಿ, ಕುದಿಸಿ ಬೇಯಿಸಿ. ನಂತರ ಬಸಿದು ಬೇರ್ಪಡಿಸಿ. ಅದೇ ಬಾಣಲೆಗೆ ಪುಡಿ ಸಕ್ಕರೆ, ಬಸಿದ ತುಸು ನೀರು ಬೆರೆಸಿ ಕೈಯಾಡಿಸುತ್ತಾ ಕುದಿಸಿರಿ. ಸಕ್ಕರೆ ಚೆನ್ನಾಗಿ ಕರಗಿದಾಗ ಮಾವಿನ ಪೇಸ್ಟ್, ಹಳದಿ ಬಣ್ಣ, ಏಲಕ್ಕಿ ಸೇರಿಸಿ ಮಂದ ಉರಿಯಲ್ಲಿ ಕೆದಕಬೇಕು. ಈ ಮಿಶ್ರಣ ತುಸು ಗಟ್ಟಿಯಾದಾಗ ಇದಕ್ಕೆ ಬೆಂದ ಶ್ಯಾವಿಗೆ ಸೇರಿಸಿ. 2 ನಿಮಿಷ ಕೈಯಾಡಿಸಿ ಕೆಳಗಿಳಿಸಿ. ಇದಕ್ಕೆ ತುಪ್ಪದಲ್ಲಿ ಹುರಿದ ಬಾದಾಮಿ ಗೋಡಂಬಿ ಚೂರು, ಜ್ಯಾಂನಿಂದ ಅಲಂಕರಿಸಿ ಬಿಸಿಯಾಗಿ ಸವಿಯಲು ಕೊಡಿ.

ಜೀರಾ ಮಾವು

ಸಾಮಗ್ರಿ : ಮಾಗಿದ 1 ದೊಡ್ಡ ಮಾವು, 2 ಚಮಚ ರೀಫೈಂಡ್‌ ಎಣ್ಣೆ, ತುಸು ತುಪ್ಪ, ಜೀರಿಗೆ, ಪುಡಿಮೆಣಸು, ಅಮ್ಚೂರ್‌ ಪುಡಿ, ಗರಂ ಮಸಾಲ, ಇಂಗು, ಧನಿಯಾಪುಡಿ, ಅರಿಶಿನ, ರುಚಿಗೆ ಉಪ್ಪು.

ವಿಧಾನ : ಮಾವಿನ ಸಿಪ್ಪೆ ಹೆರೆದು ಸಣ್ಣ  ಹೋಳಾಗಿಸಿ ಬಾಣಲೆಯಲ್ಲಿ ತುಪ್ಪ, ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಇಂಗಿನ ಒಗ್ಗರಣೆ ಕೊಡಿ. ಇದಾದ ಮೇಲೆ ಒಂದೊಂದಾಗಿ ಎಲ್ಲಾ ಮಸಾಲೆ ಹಾಕಿ ಕೆದಕಿರಿ. ಆಮೇಲೆ ಮಾವಿನ ಹೋಳು ಹಾಕಿ ಬಾಡಿಸಿ. ಇದನ್ನು ಸರ್ವಿಂಗ್‌ ಡಿಶ್ಶಿಗೆ ಹಾಕಿ, ಮೇಲೆ ಪುದೀನಾ ಉದುರಿಸಿ ಚಪಾತಿ, ಪೂರಿ ಜೊತೆ ಸವಿಯಲು ಕೊಡಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ