ರೆಡಿ ಟು ಕುಕ್ ವ್ಯಂಜನಗಳ ಟ್ರೆಂಡ್ ಇದೀಗ ದಿನೇ ದಿನೇ ಹೆಚ್ಚುತ್ತಿದೆ. ಬ್ರೇಕ್ ಫಾಸ್ಟ್, ಸ್ನಾಕ್ಸ್ ಅಥವಾ ಸಂಜೆಯ ತಿಂಡಿಗೆ ಒದಗುವಂಥ ಇಡ್ಲಿ, ದೋಸೆ, ವಡೆ, ಡೋಕ್ಲಾ, ಉಪ್ಪಿಟ್ಟು, ಪಕೋಡ, ಥೇಪ್ಲಾ, ಪರೋಟ ಇತ್ಯಾದಿಗಳ ಸೀಲ್ಡ್ ಪ್ಯಾಕೆಟ್ಸ್ ರೆಡಿಮೇಡ್ ಲಭ್ಯವಿವೆ. ಪ್ಯಾಕೆಟ್‌ನಲ್ಲಿ ಸೂಚಿಸಿರುವಂತೆ ಇವನ್ನು ಬಿಸಿ ನೀರು ಅಥವಾ ಮೊಸರು ಬೆರೆಸಿ, ತಕ್ಷಣ ಅವಸರಕ್ಕೆ ವ್ಯಂಜನ ತಯಾರಿಸಿಕೊಳ್ಳಬಹುದು.
ಇದೇ ತರಹ ಪಾರಿಜ್, ಪುಡಿಂಗ್ ತಯಾರಿಸಲು ಓಟ್ಸ್, ಕಾರ್ನ್ ಫ್ಲೇಕ್ಸ್, ಮ್ಯೂಸಲಿ ಇತ್ಯಾದಿಗೆ ಬಿಸಿ ಹಾಲು ಬೆರೆಸಿದರೆ ಅವು ತಕ್ಷಣ ರೆಡಿ ಆಗುತ್ತವೆ. ಇದರರ್ಥ ಮಾರುಕಟ್ಟೆಯಲ್ಲಿ ಮುಖ್ಯವಾಗಿ 2 ತರಹದ ವ್ಯಂಜನಗಳ ರೆಡಿ ಪ್ಯಾಕೆಟ್ ಲಭ್ಯ. ಒಂದಕ್ಕೆ ಹಾಲು, ಮೊಸರು ಬೆರೆಸಿದ ನಂತರ ಕುಕ್ ಮಾಡಿದರೆ ಆಯಿತು ಸವಿಯಲು ಸಿದ್ಧ. ಇನ್ನೊಂದು ಬಗೆ ಎಂದರೆ ಪ್ಯಾಕೆಟ್ ಸಮೇತ (ಇಡಿಯಾಗಿ) ನೀರಲ್ಲಿ ಕುದಿಸಿದರೆ, ರೆಡಿ ಟು ಈಟ್ ವ್ಯಂಜನ ರೆಡಿ. ಕಾರ್ನ್ ಫೆಲ್ವಿಕ್ ಇತ್ಯಾದಿಗಳಿಗೆ ಕೇವಲ ಬಿಸಿ ಹಾಲು ಬೆರೆಸಿದರೆ ಸಾಕು. ತಕ್ಷಣ ಮಕ್ಕಳಿಗೆ ಸವಿಯಲು ಕೊಡಬಹುದು. ಬನ್ನಿ, ಇವೆರಡಕ್ಕೂ ಇನ್ನೊಂದಿಷ್ಟು ಸಾಮಗ್ರಿ ಬೆರೆಸಿ ಅವನ್ನು ಹೇಗೆ ಪೌಷ್ಟಿಕಗೊಳಿಸಬಹುದು ಎಂದು ವಿವರವಾಗಿ ನೋಡೋಣ.
ಹೆಸರುಬೇಳೆ ಬಜ್ಜಿ ಮಿಕ್ಸ್, ತಾಲಿಪಿಟ್ಟಿನ ಹಿಟ್ಟು : ಹೆಸರೇ ಸೂಚಿಸುವಂತೆ ಇಂಥ ರೆಡಿ ಬಜ್ಜಿ ಮಿಕ್ಸ್ ಗಳ ಹಿಟ್ಟಿಗೆ ನೀರು ಬೆರೆಸಿ ಮಿಶ್ರಣ ಕಲಸಿ ಈರುಳ್ಳಿ, ಆಲೂ, ಬದನೆ, ಸೀಮೆಬದನೆ ಇತ್ಯಾದಿ ಬಿಲ್ಲೆಗಳಿಂದ ಬಜ್ಜಿ ಸವಿಯಬಹುದು. ಇದಕ್ಕೆ ಅಪರೂಪ ಎನಿಸುವ ಸುವರ್ಣಗೆಡ್ಡೆ, ಹಲಸಿನಕಾಯಿಗಳ ಹೋಳನ್ನು ಲಘು ಬೇಯಿಸಿ ಈ ಮಿಶ್ರಣದಲ್ಲಿ ಅದ್ದಿ ಬೋಂಡ, ಬಜ್ಜಿ ತಯಾರಿಸಬಹುದು. ಈ ಮಿಶ್ರಣಗಳಿಂದ ದಿಢೀರ್ ದೋಸೆ ಕೂಡ ತಯಾರಿಸಬಹುದು. ತರಕಾರಿ ಹೆಚ್ಚಿ ಲಘು ಬಾಡಿಸಿ ಇದಕ್ಕೆ ಬೆರೆಸಿಕೊಳ್ಳಿ. ಈ ಬಜ್ಜಿ ಮಿಶ್ರಣಕ್ಕೆ ಮೇಲ್ಭಾಗದಿಂದ ಒಂದಿಷ್ಟು ಕೊ.ಸೊಪ್ಪು, ತುರಿದ ಪನೀರ್, ಕ್ಯಾರೆಟ್ ಇತ್ಯಾದಿ ಉದುರಿಸಿ ದಿಢೀರ್ ದೋಸೆ ತಯಾರಿಸಿ.
ನಿಮಗೆ ಡೀಪ್ ಫ್ರೈ ಬೋಂಡ, ಬಜ್ಜಿ ಬೇಡ ಎನಿಸಿದರೆ, ಇದೇ ಮಿಶ್ರಣದಿಂದ ಪಡ್ಡು ಸಹ ತಯಾರಿಸಬಹುದು. ಬಹಳ ಕನಿಷ್ಠ ಎಣ್ಣೆ ಬಳಸಿ ಸ್ವಾದಿಷ್ಟ ಪಡ್ಡು ತಯಾರಿಸಬಹುದು. ಇದೇ ತರಹ ತಾಲಿಪಿಟ್ಟಿನ (ರೊಟ್ಟಿ ತರಹ ತಟ್ಟಲು) ಮಿಶ್ರಣಕ್ಕೆ ತುರಿದ ಸೋರೆ, ಕ್ಯಾಪ್ಸಿಕಂ, ಸೌತೇಕಾಯಿ, ಸೀಮೆಬದನೆ, ಹೆಚ್ಚಿದ ಪಾಲಕ್, ಕೊ.ಸೊಪ್ಪು, ಪುದೀನಾ ಉದುರಿಸಿ ರೊಟ್ಟಿ ತರಹ ತಟ್ಟಬಹುದು, ಲಟ್ಟಿಸಿ ಥೇಪ್ಲಾ (ಗುಜರಾತಿ ತೆಳು ಚಪಾತಿ, ಉಪ್ಪು ಖಾರ ಬೆರೆತದ್ದು) ತಯಾರಿಸಬಹುದು.
ಓಟ್ಸ್ : ಇತ್ತೀಚೆಗೆ ಜನ ಬಹಳ ಡಯೆಟ್ ಕಾನ್ಶಿಯಸ್ ಆಗುತ್ತಿದ್ದಾರೆ. ಹೀಗಾಗಿ ಓಟ್ಸ್ ಬಹಳ ಜನಪ್ರಿಯವಾಗುತ್ತಿದೆ. ಇದನ್ನು ಲಘು ಹುರಿದು, ಹಾಲು ಬೆರೆಸಿ ಸವಿಯಬಹುದು. ದಿಢೀರ್ ದೋಸೆ ಮಾಡಲು ಬಜ್ಜಿ ಮಿಶ್ರಣಕ್ಕೆ ಅಥವಾ ರವೆ, ಅಕ್ಕಿಹಿಟ್ಟು, ಕಡಲೆಹಿಟ್ಟು ಇತ್ಯಾದಿಗಳಿಗೆ ಬೆರೆಸಿ ದೋಸೆ ತಯಾರಿಸಬಹುದು.