ಚಟಪಟಾ ಕಾರ್ನ್

ಸಾಮಗ್ರಿ : 200 ಗ್ರಾಂ ತಾಜಾ ಜೋಳದ ಕಾಳು, ಅರ್ಧ ಕಪ್‌ ಕಾರ್ನ್‌ ಫ್ಲೋರ್‌, 4-5 ಚಮಚ ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ಕರಿಯಲು ಎಣ್ಣೆ.

ವಿಧಾನ : ಮೊದಲು ಜೋಳದ ಕಾಳನ್ನು ಬಿಸಿ ನೀರಲ್ಲಿ 4-5 ನಿಮಿಷ ಕುದಿ ನೀರಲ್ಲಿ ಬೇಯಿಸಿ, ಆರಿದ ನಂತರ ಪಂಚೆ ಮೇಲೆ  ಹರಡಿ ಒಣಗಿಸಿ. ಒಂದು ಬಟ್ಟಲಿಗೆ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಳ್ಳಿ. ಈ ಮಿಶ್ರಣಕ್ಕೆ ತುಸು ನೀರು ಚಿಮುಕಿಸಿ, (ಅಕ್ಕಿ ರೊಟ್ಟಿ ಮಿಶ್ರಣದ ಹದಕ್ಕೆ) ಅದನ್ನು ಕಾಳಿನಲ್ಲಿ ಬೆರೆಸಿಕೊಳ್ಳಿ. ಎಣ್ಣೆ ಕಾದ ನಂತರ ಇದರಿಂದ ಗರಿಗರಿಯಾಗಿ ಕರಿದು ತೆಗೆಯಿರಿ.

ಅವಲಕ್ಕಿ ಕಟ್ಲೆಟ್

ಸಾಮಗ್ರಿ : ಅರ್ಧ ಕಪ್‌ ಅವಲಕ್ಕಿ, 1 ದೊಡ್ಡ ಬೇಯಿಸಿ ಮಸೆದ ಆಲೂ, 10-12 ಪಾಲಕ್‌ಎಲೆ, ಒಂದಿಷ್ಟು ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ಕರಿಬೇವು, ಶುಂಠಿ, ಬೆಳ್ಳುಳ್ಳಿ, 2 ಸ್ಲೈಸ್‌ ಬ್ರೆಡ್‌, 4 ಚಮಚ ಕಾರ್ನ್‌ ಫ್ಲೋರ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ಚಾಟ್‌ ಮಸಾಲ, ಕರಿಯಲು ಎಣ್ಣೆ.

ವಿಧಾನ : ಮೊದಲು ಅವಲಕ್ಕಿ ನೆನೆಹಾಕಿ, ಸೋಸಿ ಬೇರ್ಪಡಿಸಿ. ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಉಳಿದೆಲ್ಲ ಸಾಮಗ್ರಿ, ಉಪ್ಪು, ಖಾರ ಇತ್ಯಾದಿ ಸೇರಿಸಿ. ತುಸು ನೀರು ಚಿಮುಕಿಸಿ ಮೃದು ಮಿಶ್ರಣ ಕಲಸಿ, ಸಣ್ಣ ನಿಂಬೆ ಗಾತ್ರ ಉಂಡೆ ಹಿಡಿದು, ಚಿತ್ರದಲ್ಲಿರುವಂತೆ ಜಿಡ್ಡಿನ ಅಂಗೈ ಮೇಲೆ ಕಟ್ಲೆಟ್‌ ತಟ್ಟಿಕೊಂಡು, ಅಳ್ಳಕವಾದ ತವಾದಲ್ಲಿ ಧಾರಾಳ ಎಣ್ಣೆ ಬಿಡುತ್ತಾ, ತಿರುವಿ ಹಾಕುತ್ತಾ, ಶ್ಯಾಲೋ ಫ್ರೈ ಮಾಡಿ. ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ಟೇಸ್ಟಿ ಪಕೋಡ

ಸಾಮಗ್ರಿ : 2 ಕಪ್‌ ಉದ್ದಕ್ಕೆ ಹೆಚ್ಚಿದ ಈರುಳ್ಳಿ, 1 ಕಪ್‌ ಕಡಲೆಹಿಟ್ಟು, 5-6 ಚಮಚ ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ತುಸು ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಕರಿಬೇವು, ಪುದೀನಾ, ಕೊ.ಸೊಪ್ಪು, ಕರಿಯಲು ಎಣ್ಣೆ.

ವಿಧಾನ : ಒಂದು ಬೇಸನ್ನಿಗೆ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ, ತುಸು ನೀರು ಚಿಮುಕಿಸಿ, ಮಿಶ್ರಣ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಇದರಿಂದ ಸಣ್ಣ ಸಣ್ಣದಾಗಿ ಮಿಶ್ರಣ ತೆಗೆದುಕೊಂಡು ಎಣ್ಣೆಗೆ ಬಿಡುತ್ತಾ ಗರಿಗರಿಯಾಗಿ ಬರುವಂತೆ ಪಕೋಡ ಕರಿಯಿರಿ. ಪುದೀನಾ ಚಟ್ನಿ ಜೊತೆ ಬಿಸಿಯಾಗಿ ಸವಿಯಲು ಕೊಡಿ.

ಪನೀರ್‌ ಕ್ಯೂಬ್ಸ್

Cookry-C (1)

ಸಾಮಗ್ರಿ : 300 ಗ್ರಾಂ ಪನೀರ್‌ ತುಂಡು, 4 ಚಮಚ ಬಿಳಿ ಎಳ್ಳು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಸಾಸ್‌, ರೆಡ್‌ ಚಿಲೀ ಸಾಸ್‌, ತುಸು ಎಣ್ಣೆ.

ವಿಧಾನ : ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಮೊದಲು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ನಂತರ 2 ಬಗೆಯ ಸಾಸ್‌, ಪನೀರ್‌ ತುಂಡುಗಳು, ಉಪ್ಪು, ಖಾರ, ಮೆಣಸು ಹಾಕಿ ನಿಧಾನವಾಗಿ ಮಂದ ಉರಿಯಲ್ಲಿ ಕೈಯಾಡಿಸಿ. ಕೊನೆಯಲ್ಲಿ ಎಳ್ಳು ಸೇರಿಸಿ, ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಕೆದಕಿ ಕೆಳಗಿಳಿಸಿ. ಚಿತ್ರದಲ್ಲಿರುವಂತೆ ಪನೀರ್‌ ಪೀಸ್‌ ಜೋಡಿಸಿ, ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ರವೆಯ ಸ್ಯಾಂಡ್‌ ವಿಚ್‌

ಸಾಮಗ್ರಿ : 1 ಕಪ್‌ ಫ್ರೆಶ್‌ ಕ್ರೀಂ, ಅರ್ಧ ಕಪ್‌ ಹುರಿದ ಸಾದಾ ರವೆ, 4-5 ಬ್ರೆಡ್‌ ಸ್ಲೈಸ್‌, ಸಣ್ಣಗೆ ಹೆಚ್ಚಿದ 2 ಈರುಳ್ಳಿ, 5-6 ಎಸಳು ಬೆಳ್ಳುಳ್ಳಿ, 3 ಬಗೆಯ ಕ್ಯಾಪ್ಸಿಕಂ (ತಲಾ 2-2 ಚಮಚ), 2-3 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಅರ್ಧ ಸೌಟು ತುಪ್ಪ.

ವಿಧಾನ : ಫ್ರೆಶ್‌ ಕ್ರೀಂ ಗೊಟಾಯಿಸಿ ಅದಕ್ಕೆ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ. ಬ್ರೆಡ್‌ಗೆ ಬೆಣ್ಣೆ ಸವರಿ ಈ ಮಿಶ್ರಣವನ್ನು ಅದರ ಎರಡೂ ಬದಿ ಹಚ್ಚಿರಿ. ತವಾ ಮೇಲೆ 1-2 ಚಮಚ ತುಪ್ಪ ಹಾಕಿ,  ಈ ಬ್ರೆಡ್‌ ಸ್ಲೈಸ್‌ ನ್ನು ತಿರುವಿ ಹಾಕುತ್ತಾ ಎರಡೂ ಬದಿ ಬೇಯಿಸಿ, ಬಿಸಿಯಾಗಿ ಸವಿಯಲು ಕೊಡಿ.

ಸ್ಪೆಷಲ್ ಫ್ರೂಟ್‌ ಪಂಚ್‌

ಸಾಮಗ್ರಿ : 1 ಮಾಗಿದ ಮಾವು, 2 ಕಿವೀ ಫ್ರೂಟ್‌, 4-5 ಚಮಚ ಸೀಡ್ಲೆಸ್‌ ದಾಳಿಂಬೆ ಹರಳು, 1 ದೊಡ್ಡ ಸೇಬು, 2 ಮಾಗಿದ ಬಾಳೆಹಣ್ಣು, 150 ಗ್ರಾಂ ವೆನಿಲಾ ಐಸ್‌ ಕ್ರೀಂ, ಒಂದಿಷ್ಟು ಬಾದಾಮಿ ಚೂರು.

ವಿಧಾನ : ಎಲ್ಲಾ ಹಣ್ಣುಗಳನ್ನು ಸಣ್ಣದಾಗಿ ಹೆಚ್ಚಿ ಒಂದು ಬಟ್ಟಲಿಗೆ ಹಾಕಿಡಿ. ಚೆನ್ನಾಗಿ ಗೊಟಾಯಿಸಿದ ಐಸ್‌ ಕ್ರೀಂ ಇದಕ್ಕೆ ಬೆರೆಸಿರಿ. ತುಸು ನಿಂಬೆರಸ, ಚಿಟಕಿ ಚಾಟ್‌ ಮಸಾಲ ಉದುರಿಸಿ, ಬೆರೆಸಿ ಇದನ್ನು ಸರ್ವಿಂಗ್‌ ಬೌಲಿ‌ಗೆ ಹಾಕಿ ಸವಿಯಲು ಕೊಡಿ.

ಬ್ರೋಕನ್‌ ವೀಟ್‌ ಹುಗ್ಗಿ

Cookry-B (1)

ಸಾಮಗ್ರಿ : ಅರ್ಧ ಕಪ್‌ಬ್ರೋಕನ್‌ ವೀಟ್‌, ಅದರಲ್ಲಿ ಅರ್ಧ ಭಾಗ ಬೆಲ್ಲದ ಪುಡಿ, ಅರ್ಧ ಕಪ್‌ ಕೊಬ್ಬರಿ ತುರಿ, ತುಸು ಏಲಕ್ಕಿ ಪುಡಿ, ದಾಲ್ಚಿನ್ನಿ ಪುಡಿ, ಹಾಲಿನಲ್ಲಿ ನೆನೆಸಿದ ತುಸು ಕೇಸರಿ, ಅರ್ಧ ಸೌಟು ತುಪ್ಪ ಒಂದಿಷ್ಟು ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಚೂರು.

ವಿಧಾನ : ಮೊದಲು ಒಂದು ಚಿಕ್ಕ ಕುಕ್ಕರ್‌ ನಲ್ಲಿ ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಗೋಡಂಬಿ ಕರಿದು ತೆಗೆಯಿರಿ. ಅದರಲ್ಲಿ ಬ್ರೋಕನ್ ವೀಟ್‌ ಹಾಕಿ ಹುರಿಯಿರಿ, ಜೊತೆಗೆ ಏಲಕ್ಕಿಪುಡಿ, ದಾಲ್ಚಿನ್ನಿ ಪುಡಿ ಸೇರಿಸಿ. ಅಗತ್ಯವಿದ್ದಷ್ಟು ನೀರು ಬೆರೆಸಿ ಅನ್ನದ ತರಹ ಸೀಟಿ ಕೂಗಿಸಿ. ಒಂದು ಪಾತ್ರೆಯಲ್ಲಿ ಬೆಲ್ಲ ಕರಗಿಸಿ, ಸೋಸಿ ಬೇರ್ಪಡಿಸಿ. ನಂತರ ಬಾಣಲೆಯಲ್ಲಿ ಉಳಿದ ತುಪ್ಪ ಬಿಸಿ ಮಾಡಿ ಅದಕ್ಕೆ ಬೆಲ್ಲ, ಕೊಬ್ಬರಿ ಹಾಕಿ ಮಂದ ಉರಿಯಲ್ಲಿ ಕೆದಕಿ. ಇದಕ್ಕೆ ಬೆಂದ ಗೋಧಿ ಅನ್ನ ಹಾಕಿ ಎಲ್ಲವನ್ನೂ ಬೆರೆತುಕೊಳ್ಳುವಂತೆ ಮಾಡಿ. ಮೇಲೆ ದ್ರಾಕ್ಷಿ, ಗೋಡಂಬಿ ಹಾಕಿ, ತುಪ್ಪ ಬೆರೆಸಿ ಕೆದಕಿ ಬಿಸಿಯಾಗಿ ಸವಿಯಲು ಕೊಡಿ.

ಮ್ಯಾಂಗೋ ಪನೀರ್‌ ರೋಲ್ಸ್

ಸಾಮಗ್ರಿ : 2 ಮಾಗಿದ ಮಾವು, 100 ಗ್ರಾಂ ಪನೀರ್‌, ತುಪ್ಪದಲ್ಲಿ ಹುರಿದ ಒಂದಿಷ್ಟು ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಚೂರು, ತುಸು ಪುಡಿಸಕ್ಕರೆ, ಏಲಕ್ಕಿ ಪುಡಿ, ಉದ್ದಕ್ಕೆ ಹೆಚ್ಚಿದ ಸ್ಟ್ರಾಬೆರಿ.

ವಿಧಾನ : ಮಾವಿನ ಸಿಪ್ಪೆ ಹೆರೆದು ಉದ್ದದ ಹೋಳಾಗಿಸಿ. ಪನೀರ್‌ ತುರಿದುಕೊಳ್ಳಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಬೆರೆಸಿರಿ. ಮಾವಿನ ಸ್ಲೈಸ್‌ ಮೇಲೆ ಈ ಮಿಶ್ರಣ ಉದುರಿಸಿ, ರೋಲ್ ‌ಮಾಡಿ. ಚಿತ್ರದಲ್ಲಿರುವಂತೆ ಸ್ಟ್ರಾಬೆರಿಯಿಂದ ಅಲಂಕರಿಸಿ ಸವಿಯಲು ಕೊಡಿ.

ಟೇಸ್ಟಿ ಬಿಸ್ಕೆಟ್‌ ಬಾಲ್ಸ್

ಸಾಮಗ್ರಿ : 1-2 ಡೈಜೆಸ್ಟಿವ್ ‌ಬಿಸ್ಕೆಟ್, 150 ಡ್ರೈ ಪೇಠಾ (ರೆಡಿಮೇಡ್‌ ಲಭ್ಯ), ಅರ್ಧ ಕಪ್‌ ಕೋಕೋನಟ್‌ ಪೌಡರ್‌, ತುಸು ಬಾದಾಮಿ ಪುಡಿ, ಟೂಟಿಫ್ರೂಟಿ, ಬಾದಾಮಿ, ಪಿಸ್ತಾ ಚೂರು.

ವಿಧಾನ : ಮಿಕ್ಸಿಗೆ ಬಿಸ್ಕೆಟ್ಸ್ ಹಾಕಿ ತರಿ ತರಿ ಮಾಡಿಡಿ. ಅದೇ ತರಹ ಪೇಠಾಗೂ ಮಾಡಿ. ಇವೆರಡರ ಜೊತೆ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು, ಹಾಲಲ್ಲಿ ಕೈ ಒದ್ದೆ ಮಾಡಿಕೊಳ್ಳುತ್ತಾ ಉಂಡೆ ಹಿಡಿಯಿರಿ. ಸ್ವಲ್ಪ ಹೊತ್ತು ಬಿಟ್ಟು ಸರ್ವ್ ಮಾಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ