ತನ್ನೊಂದಿಗೆ ಕೆಲಸ ಮಾಡುವ ಯಾವುದೇ ಹುಡುಗಿಯರ ಜೊತೆ ಗೌತನಿ ಅಗತ್ಯಕ್ಕಿಂತ ಹೆಚ್ಚು ಮಾತುಕತೆ ನಡೆಸುತ್ತಲೇ ಇರಲಿಲ್ಲ. ಅದೊಂದು ದಿನ ಒಂದು ರಿಪೋರ್ಟ್ ತಯಾರಿಸಲೆಂದು ಆಫೀಸ್ ಮುಗಿದ ಬಳಿಕ ಶ್ರೇಯಾ ಹಾಗೂ ಗೌತಮ್ ಆಫೀಸಿನಲ್ಲಿಯೇ ಉಳಿದುಕೊಳ್ಳಬೇಕಾಯಿತು. ಹೋಗುವಾಗ ಬಾಸ್ ಗೌತಮ್ ಗೆ ಸೂಚನೆ ಕೊಟ್ಟು ಹೋದರು. “ಶ್ರೇಯಾಗೆ ಮನೆಗೆ ಹೋಗುವ ಸಮಯದಲ್ಲಿ ಏನಾದರೂ ಸಮಸ್ಯೆಯಾದರೆ ನೀನೇ ಅದನ್ನು ಬಗೆಹರಿಸಬೇಕು ಗೌತಮ್.”
ಕೆಲಸ ಮುಗಿಸಿ ಪಾರ್ಕಿಂಗ್‌ಗೆ ಬರುತ್ತಿದ್ದಂತೆ ಶ್ರೇಯಾಳ ಆ್ಯಕ್ಟಿವಾ ಸ್ಟಾರ್ಟ್ ಆಗುವ ಲಕ್ಷಣ ಕಂಡುಬರಲಿಲ್ಲ. ಅವಳ ಅವಿರತ ಪ್ರಯತ್ನ ಕಂಡು ಗೌತಮ್ ಹೇಳಿದ, “ನಿನ್ನ ಗಾಡಿಯನ್ನು ಇವತ್ತು ಇಲ್ಲೇ ಬಿಟ್ಟುಬಿಡು ಶ್ರೇಯಾ, ಈಗ ನಾವು ಇದನ್ನು ಹೇಗೋ ಸ್ಟಾರ್ಟ್ ಮಾಡಿಕೊಂಡು ತೆಗೆದುಕೊಂಡು ಹೋದರೆ, ದಾರಿ ಮಧ್ಯದಲ್ಲಿ ಕೈಕೊಟ್ಟರೆ ಆಗ ಏನು ಮಾಡ್ತೀಯಾ? ನಾಳೆ ಮೆಕ್ಯಾನಿಕ್‌ನನ್ನು ಕರೆದುಕೊಂಡು ಬಂದು ರಿಪೇರಿ ಮಾಡಿಸಿದರಾಯ್ತು.”
“ಸರಿ, ನಾನು ಈಗಲೇ ಪಂಕಜ್‌ಗೆ ಬಂದು ಕರೆದುಕೊಂಡು ಹೋಗಲು ಹೇಳ್ತೀನಿ,” ಎಂದು ಹೇಳುತ್ತ ಅವಳು ಮೊಬೈಲನ್ನು ಕೈಗೆತ್ತಿಕೊಂಡು, “ಅವನು 15-20 ನಿಮಿಷಗಳಲ್ಲಿ ಇಲ್ಲಿಗೆ ಬರ್ತಾನೆ,” ಎಂದಳು.
“ಅವನನ್ನು ಇಲ್ಲಿಗೆ ಕರೆಸುವ ಬದಲು ನನ್ನ ಬೈಕ್‌ನಲ್ಲಿ ಬರಹುದಲ್ವಾ?” ಗೌತಮ್ ಹೇಳಿದ.
“ಆದರೆ ನನ್ನ ಮನೆ ಇರೋದು ಒಂದು ಕಡೆ, ನಿನ್ನ ಮನೆ ಇರೋದು ಇನ್ನೊಂದು ಕಡೆ. ನಿನಗೆ ದೊಡ್ಡ ರೌಂಡ್ ಹೊಡೆಯಬೇಕಾಗುತ್ತದೆ.”
“ಇಲ್ಲಿಯೇ ನಿಂತು ಕಾಯುವುದಕ್ಕಿಂತ ನೀನು ನನ್ನೊಂದಿಗೆ ನಡೆ. ಅಂದಹಾಗೆ, ನಾನು ನಿನ್ನೊಬ್ಬಳನ್ನೇ ಇಲ್ಲಿ ಬಿಟ್ಟುಹೋಗಲು ಆಗುವುದಿಲ್ಲ.”
“ವಿಷಯ ಮನವರಿಕೆಯಾಗಿ ಶ್ರೇಯಾ ಗೌತಮ್ ನ ಬೈಕ್ ಹತ್ತಿ ಕುಳಿತಳು. ಮನೆ ತಲುಪಿದಾಗ ಶ್ರೇಯಾಳ ಆಗ್ರಹದ ಮೇರೆಗೆ ಗೌತಮ್ ಅವಳ ಮನೆಯೊಳಗೆ ಹೋಗಬೇಕಾಯಿತು. ತನ್ನ ತಂದೆ ದೇವರಾಜ್, ತಾಯಿ ಉಮಾ, ತಂಗಿ ಸೃಷ್ಟಿ ಹಾಗೂ ಅವಳಿ ಸೋದರ ಪಂಕಜ್ ಗೆ ಗೌತಮ್ ನನ್ನು ಪರಿಚಯಿಸಿದಳು.
“ಓಹ್, ಪಂಕಜ್ ನಿನ್ನ ಬಾಯ್ ಫ್ರೆಂಡ್ ಆಗಿರಬೇಕು. ಹಾಗಾಗಿ ನಿನ್ನನ್ನು ಕರೆದುಕೊಂಡು ಹೋಗಲು ಬರ್ತಾನೆ. ಅದರಿಂದ ಏನು ಭಯ ಇಲ್ಲ ಎಂದು ಭಾವಿಸಿದ್ದೆ,” ಗೌತಮ್ ಅವಳ ಮುಂದೆ ತನ್ನ ಮನಸ್ಸಿನ ವಿಚಾರ ಹೇಳಿಕೊಂಡ.
“ಪಂಕಜ್ ಇರುವಾಗ ನನಗೆ ಬಾಯ್ ಫ್ರೆಂಡ್‌ನ ಅವಶ್ಯಕತೆಯೇ ಇಲ್ಲ,” ಎಂದು ಹೇಳುತ್ತ ಶ್ರೇಯಾ ನಕ್ಕಳು.
“ಇವಳನ್ನು ಬಿಟ್ಟುಹೋಗುವ ಕೆಲಸ ನಿಮಗೆ ಬಂದದ್ದರಿಂದ ಇಂದು ನಿಮಗೆ ಮನೆಗೆ ಹೋಗಲು ತಡವಾಯಿತು,” ಎಂದು ಅಮ್ಮ ಉಮಾ ಹೇಳಿದರು.
“ಇರಲಿ ತೊಂದರೆ ಇಲ್ಲ ಆಂಟಿ. ನಿಮ್ಮೆಲ್ಲರ ಜೊತೆ ತಿಂಡಿ ತಿನ್ನುತ್ತಾ ಕಾಫಿ ಕುಡಿಯುವ ಯೋಗ ಸಿಕ್ಕಿತು.”
ಉಮಾಳಿಗೆ ಅವನ ಸರಳತೆ ಬಹಳ ಇಷ್ಟವಾಯಿತು. ಅವರು ಗೌತಮ್ ಕುಟುಂಬದ ಬಗ್ಗೆ ಕೇಳಿದಾಗ, ತನಗೆ ಅಕ್ಕ ತಂಗಿ, ತಮ್ಮ ಯಾರೂ ಇಲ್ಲ ಎಂದು ಹೇಳಿದ. ತಾಯಿ ತಂದೆ ಇಬ್ಬರೂ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಈಗ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಕೇಂದ್ರ ಆರಂಭಿಸಿರುವ ಬಗ್ಗೆಯೂ ಹೇಳಿದ.
“ನನ್ನದು ಚಿಕ್ಕ ಕುಟುಂಬ. ನಿಮ್ಮೆಲ್ಲರ ಜೊತೆ ಕುಳಿತುಕೊಂಡು ತಿಂಡಿ ತಿನ್ನುವುದು ನನಗೆ ಬಹಳ ಖುಷಿ ಕೊಡುತ್ತಿದೆ,” ಎಂದು ಹೇಳುತ್ತಾ ಗೌತಮ್ ಶ್ರೇಯಾಳ ತಂಗಿ ಹಾಗೂ ಅವಳ ಸೋದರನ ಕಡೆ ನೋಡುತ್ತಾ, “ಇವತ್ತು ನಾನು ಮೊದಲ ಬಾರಿ ತಾಯಿ ತಂದೆಗೆ ನನಗೇಕೆ ತಮ್ಮ, ತಂಗಿಯನ್ನು ಕೊಡಲಿಲ್ಲ ಎಂದು ಕೇಳ್ತೀನಿ.”
“ನೀವು ನಿಮ್ಮ ಅಪ್ಪ ಅಮ್ಮನಿಗೆ ಆ ವಿಷಯ ಹೇಳುವ ಬದಲು ಇಲ್ಲಿಗೇ ಬಂದು ಹೋಗುತ್ತಾ ಇರಿ. ನಮಗೂ ಖುಷಿಯಾಗುತ್ತದೆ,” ಎಂದು ಶ್ರೇಯಾಳ ಅಪ್ಪ ದೇವರಾಜ್ ಹೇಳಿದರು.
“ಅವಶ್ಯವಾಗಿ….. ನಾನೀಗ ಬರ್ತೀನಿ, ಅಪ್ಪ ಬರುವ ಮೊದಲೇ ನಾನು ಮನೆ ತಲುಪಬೇಕು,” ಎಂದು ಹೇಳಿದ.
“ನೀವು ತಡವಾಗಿ ಮನೆಗೆ ಹೋದ್ರೆ ಅಪ್ಪ ಬೇಜಾರಾಗ್ತಾರಾ?” ಪಂಕಜ್ ಕೇಳಿದ.
“ಅವರಿಗೆ ಬೇಜಾರೇನೂ ಆಗುವುದಿಲ್ಲ. ಆದರೆ ಅವರಿಗೆ ಅಸಮಾಧಾನ ಆಗೋದು ನನಗಿಷ್ಟವಿಲ್ಲ. ಏಕೆಂದರೆ ಅವರು ನನ್ನನ್ನು ಬಹಳ ಪ್ರೀತಿಸುತ್ತಾರೆ ಮತ್ತು ನಾನು ಅವರನ್ನು……”
ಆ ಬಳಿಕ ಆಫೀಸಿನಲ್ಲಿ ಇಬ್ಬರ ಸಂಬಂಧಗಳು ಮೊದಲಿನಂತೆಯೇ ಆದವು. ಯಾವಾಗಲಾದರೊಮ್ಮೆ ಶ್ರೇಯಾ ಅಪ್ಪನ ಕೋರಿಕೆಯ ಮೇರೆಗೆ ಮನೆಗೆ ಬರಲು ಆಗ್ರಹಿಸಿದಾಗ, ಅವನು ಅವಳ ಮನವಿಯನ್ನು ತಕ್ಷಣವೇ ಒಪ್ಪಿಕೊಂಡುಬಿಡುತ್ತಿದ್ದ. ಅದೊಂದು ದಿನ ಗೌತಮ್ ತನಗೆ ಬಿರಿಯಾನಿ ಬಹಳ ಇಷ್ಟ ಎಂದು ಶ್ರೇಯಾಳ ಮನೆಯವರ ಮುಂದೆ ಹೇಳಿದ. ಆ ಮಾತಿಗೆ ಶ್ರೇಯಾಳ ತಂದೆ ಪ್ರತಿ ರಜೆ ದಿನದಂದು ನಮ್ಮ ಮನೆಯಲ್ಲಿ ಬಗೆಬಗೆಯ ಬಿರಿಯಾನಿಗಳು ತಯಾರಾಗುತ್ತವೆ ಎಂದು ಹೇಳಿದರು.
“ಭಾನುವಾರದ ಆಹ್ವಾನವನ್ನಂತೂ ನಾನು ಸ್ವೀಕರಿಸಲು ಆಗುವುದಿಲ್ಲ. ಏಕೆಂದರೆ ನನಗೆ ಅಪ್ಪನ ಜೊತೆ ಕಾಲ ಕಳೆಯಲು ಅದೊಂದು ಭಾನುವಾರ ಮಾತ್ರವೇ ಸಮಯ ಸಿಗುತ್ತದೆ.”
“ಹಾಗಾದರೆ ನೀನು ಅಪ್ಪನನ್ನು ಜೊತೆಗೆ ಕರೆದುಕೊಂಡು ಬರಬಹುದಲ್ಲ….?”
“ಹೌದು ಅದೇ ಸರಿ,” ಎಂದು ತಕ್ಷಣವೇ ಉತ್ತರಿಸಿದ, “ಅಪ್ಪನಿಗೂ ಬಿರಿಯಾನಿ ಎಂದರೆ ಬಹಳ ಇಷ್ಟ.”
“ಹಾಗಾದರೆ ಸರಿ. ಈ ಭಾನುವಾರ ನೀನು ನಿನ್ನ ಅಪ್ಪಅಮ್ಮನೊಂದಿಗೆ ನನ್ನ ಮನೆಗೆ ಊಟಕ್ಕೆ ಬರ್ತೀದಿಯಾ, ಅಂದಹಾಗೆ ನನಗೆ ನಿನ್ನ ಅಪ್ಪ ಅಮ್ಮನ ನಂಬರ್ ಕೊಡು ನಾನೇ ಅವರಿಗೆ ಪೋನ್ ಮಾಡಿ ಆಗ್ರಹ ಮಾಡ್ತೀನಿ,” ಉಮಾ ಹೇಳಿದರು.
“ಅಷ್ಟೊಂದು ಔಪಚಾರಿಕತೆಯ ಅವಶ್ಯಕತೆ ಇಲ್ಲ ಆಂಟಿ. ನಾನು ಹೇಳಿದರೆ ಸಾಕು, ಅಪ್ಪ ಬಂದು ಬಿಡುತ್ತಾರೆ. ಅಮ್ಮ ಶುದ್ಧ ಸಸ್ಯಾಹಾರಿ. ಹೀಗಾಗಿ ಅವರು ಬರುವುದಿಲ್ಲ. ಅವರನ್ನು ಮತ್ತೆಂದಾದರೂ ಕರೆದುಕೊಂಡು ಬರ್ತೀನಿ,” ಎಂದು ಹೇಳುತ್ತ ಗೌತಮ್ ಬೈಕ್ ಹತ್ತಿದ.
ಭಾನುವಾರದಂದು ಗೌತಮ್ ತನ್ನ ಅಪ್ಪನನ್ನು ಕರೆದುಕೊಂಡು ಶ್ರೇಯಾ ಮನೆಗೆ ಬಂದ. ಗೌತಮ್ ತಂದೆ ವಸಂತ್ ಎಲ್ಲರ ಜೊತೆಗೂ ಬೆರೆಯುವ ಸಹೃದಯಿ. ತಂದೆ ಮಗನ ಆತ್ಮೀಯತೆ ಶ್ರೇಯಾಳ ಮನೆಯವರೆಲ್ಲರಿಗೂ ಬಹಳ ಇಷ್ಟವಾಯಿತು.
“ಇಷ್ಟೊಂದು ರುಚಿ ರುಚಿಯಾದ ಬಿರಿಯಾನಿ ನಮ್ಮ ಮನೆಯಲ್ಲಿ ಆಗೋಲ್ಲ. ಆದರೆ ನನ್ನ ಹೆಂಡತಿ ಗೀತಾ ಶ್ರೀಖಂಡ ಪೂರಿ ಬಹಳ ಸೊಗಸಾಗಿ ಮಾಡುತ್ತಾಳೆ. ಮುಂದಿನ ಭಾನುವಾರ ನೀವೆಲ್ಲ ನಮ್ಮ ಮನೆಗೆ ಬರುತ್ತಿದ್ದೀರಿ,” ಎಂದು ಗೌತಮ್ ತಂದೆ ವಸಂತ್ ಹೇಳಿದರು.
ದೇವರಾಜ್ ಹಾಗೂ ಉಮಾ ಇಬ್ಬರೂ ಅವರ ಆಹ್ವಾನವನ್ನು ಸ್ವೀಕರಿಸಿದರು.
ಮುಂದಿನ ಭಾನುವಾರ ದೇವರಾಜ್ ಹಾಗೂ ಉಮಾ, ಗೌತಮ್ ಮನೆ ತಲುಪಿದರು.
ಗೀತಾ ಕೂಡ ಅಪ್ಪ ಮಗನ ಹಾಗೆ ಎಲ್ಲರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವ ಸ್ವಭಾವದವರಾಗಿದ್ದರು. ಕೆಲವೇ ನಿಮಿಷಗಳಲ್ಲಿ ಎರಡೂ ಕುಟುಂಬಗಳ ನಡುವೆ ಒಳ್ಳೆಯ ಸ್ನೇಹ ಸಂಬಂಧ ಉಂಟಾಯಿತು. ಉಮಾ ಅಡುಗೆಮನೆಯಲ್ಲಿ ಗೀತಾಳಿಗೆ ಸಹಾಯ ಮಾಡಲು ಹೊರಟುಹೋದಳು. ವಸಂತ್ ಅತ್ಯಂತ ಉತ್ಸಾಹದಿಂದ ತಮ್ಮ ಮನೆಯ ಮೂಲೆ ಮೂಲೆಯನ್ನೆಲ್ಲ ತೋರಿಸಿದರು. ಎಲ್ಲರಿಗೂ ಮತ್ತೊಮ್ಮೆ ಬರಲು ಆಹ್ವಾನ ನೀಡಿದರು.
“ಎಲ್ಲಕ್ಕೂ ಮುಂಚೆ ಗೀತಾ ನಮ್ಮ ಮನೆಗೆ ಬರಬೇಕು,” ಎಂದು ಉಮಾ ಹೇಳಿದರು.
“ನೀವು ಹೇಳದೇ ಇದ್ದರೂ ಕೂಡ ನಾನೇ ಗೀತಾಳ ಜೊತೆಗೆ ಬರುವವನಿದ್ದೆ ಮತ್ತು ಬಂದೇ ಬರುತ್ತೇನೆ,” ಎಂದು ವಸಂತ್ ಹೇಳಿದ ರೀತಿಗೆ ಎಲ್ಲರೂ ಜೋರಾಗಿ ನಕ್ಕರು.
ಅದೊಂದು ದಿನ ಗೌತಮ್ ಲಂಚ್ ಬ್ರೇಕ್ ನಲ್ಲಿ ಶ್ರೇಯಾಳ ಬಳಿ ಬಂದು ಹೇಳಿದ, “ನನ್ನ ಅಪ್ಪ ಅಮ್ಮ ನಿಮ್ಮ ಮನೆಗೆ ಮದುವೆ ವಿಷಯದ ಬಗ್ಗೆ ಮಾತುಕತೆ ನಡೆಸಲು ಹೋಗುವವರಿದ್ದಾರೆ. ನಿಮ್ಮ ಮನೆಯವರೂ ಕೂಡ ನಮ್ಮಿಬ್ಬರ ಸಂಬಂಧದ ಬಗ್ಗೆ ನಿರಾಕರಿಸುವುದಿಲ್ಲ ಎಂದು ನಿನಗೂ ಕೂಡ ಗೊತ್ತೇ ಇದೆ. ಅದಕ್ಕೂ ಮೊದಲು ನೀನು `ಹ್ಞೂಂ’ ಎಂದು ಹೇಳಬೇಕು. ಆಗ ನಾನು ನನ್ನ ಹಾಗೂ ಕುಟುಂಬದ ಬಗೆಗೆ ಒಂದು ವಿಷಯ ಹೇಳಲು ಇಚ್ಛಿಸುತ್ತೇನೆ. ನನ್ನ ಮನದಲ್ಲಿ ಸರ್ವೋಚ್ಚ ಸ್ಥಾನ ನನ್ನ ತಂದೆಗೇ ಇರುತ್ತದೆ. ಏಕೆಂದರೆ ಅವರು ನನ್ನ ಬಗ್ಗೆ ಬಹಳ ಗೌರವಯುತವಾಗಿ ನಡೆದುಕೊಂಡಿದ್ದಾರೆ. ಹಾಗೆ ನೋಡಿದರೆ ಅವರು ನನ್ನ ವಾಸ್ತವ ತಂದೆಯಲ್ಲ. ನನ್ನ ತಂದೆ ನಾನು ಹುಟ್ಟಿದ ಕೆಲವೇ ದಿನಗಳಲ್ಲಿಯೇ ತೀರಿಹೋಗಿದ್ದರು.
“ನನ್ನ ಅಮ್ಮ ಕೆಲಸ ಮಾಡುತ್ತಿದ್ದ ಕಡೆಯೇ ಅವರು ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಅವರು ಅಮ್ಮನಿಗೆ ಒಳ್ಳೆಯ ಹಿತಚಿಂತಕರಾಗಿದ್ದರು. ಆಗಾಗ ಮನೆಗೆ ಬರುತ್ತಿದ್ದ ಅವರು ನನ್ನೊಂದಿಗೆ ಆಟ ಆಡುತ್ತಿದ್ದರು. ಅದೊಂದು ದಿನ ನನ್ನ ಅಮ್ಮನಿಗೆ ಬೇರೆ ಮದುವೆಯ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಯಿತು. ಅವರು ತಕ್ಷಣವೇ ಕೇಳಿದ್ದರು, “ಗೌತಮ್ ಬಗ್ಗೆ ಏನು?”
“ನನ್ನ ಮದುವೆ ಎಂತಹ ವರನ ಜೊತೆಗೆ ಮಾಡಬೇಕೆಂದರೆ, ಆ ವ್ಯಕ್ತಿ ನಮ್ಮ ಗೌತಮ್ ನನ್ನು ಕೂಡ ತನ್ನ ಮಗನಂತೆಯೇ ಒಪ್ಪಿಕೊಳ್ಳಬೇಕು,” ಅಮ್ಮ ಉತ್ತರಿಸಿದ್ದರು.
“ಮದುವೆಯ ಬಳಿಕ ಆ ಮಾತಿಗೆ ಏನು ಗ್ಯಾರಂಟಿ ಇರುತ್ತದೆ. ಆ ವ್ಯಕ್ತಿ ತನ್ನ ಮಾತಿಗೆ ಬದ್ಧನಾಗಿರುತ್ತಾನಾ?” ಅಪ್ಪ ಪುನಃ ಪ್ರಶ್ನಿಸಿದ್ದರು.
“ಇಂತಹ ಸಂಬಂಧಗಳಲ್ಲಿ ಯಾವಾಗಲೂ ಗ್ಯಾರಂಟಿಗಿಂತ ಹೆಚ್ಚಾಗಿ ರಿಸ್ಕ್ ಇರುತ್ತದೆ. ಅದನ್ನು ಎದುರಿಸಬೇಕಾಗುತ್ತದೆ,” ಅಮ್ಮ ಪುನಃ ಉತ್ತರಿಸಿದ್ದರು.
“ಗೌತಮ್ ಬಹಳ ಮುದ್ದಾದ ಮಗು. ಅವನೊಂದಿಗೆ ಯಾವುದೇ ರಿಸ್ಕ್ ತೆಗೆದುಕೊಳ್ಳಬಾರದು. ನಾನು ಒಂದು ಮಾತು ಕೊಡ್ತೀನಿ. ಗೌತಮ್ ಗೆ ಜೀವನದುದ್ದಕ್ಕೂ ತಂದೆಯ ಪ್ರೀತಿಯನ್ನು ಕೊಡ್ತೀನಿ. ಗೀತಾಳ ಮದುವೆಯನ್ನು ನನ್ನೊಂದಿಗೆ ಮಾಡಿಕೊಡಿ,” ಅಪ್ಪ ತಕ್ಷಣವೇ ಉತ್ತರಿಸಿದ್ದರು.
“ಅಮ್ಮನ ಮನೆಯವರು ತಕ್ಷಣವೇ ಒಪ್ಪಿದರು. ಆದರೆ ಅಪ್ಪನ ಮನೆಯವರಿಗೆ ಈ ಸಂಬಂಧ ಇಷ್ಟವಿರಲಿಲ್ಲ. ಹೀಗಾಗಿ ಅಪ್ಪ ಅವರೊಂದಿಗೆ ಸಂಬಂಧ ಕಡಿದುಕೊಂಡು, ನನ್ನ ಮೋಹದಲ್ಲಿ ಹಿರಿಯರಿಂದ ಬಂದ ಆಸ್ತಿಯನ್ನು ಕೂಡ ಬಿಟ್ಟುಕೊಟ್ಟಿದ್ದರು. ಅಷ್ಟೇ ಅಲ್ಲ, ಆಗ ಅಪ್ಪ ಐಎಎಸ್ ಪರೀಕ್ಷೆಯ ಸಿದ್ಧತೆ ನಡೆಸಿದ್ದರು. ಆದರೆ ಮದುವೆಯ ಬಳಿಕ ಅವರು ಓದುವ ಬದಲು ತಮ್ಮ ಸಂಪೂರ್ಣ ಗಮನವನ್ನು ನನ್ನ ಪಾಲನೆ ಪೋಷಣೆಯಲ್ಲಿ ತೊಡಗಿಸಿದರು. ಈ ಕಾರಣದಿಂದಾಗಿ ಅವರು ಪರೀಕ್ಷೆ ಬರೆಯಲಿಲ್ಲ. ಅದೇ ದಿನಗಳಲ್ಲಿ ಅಮ್ಮನ ಆಪರೇಶನ್ ಕೂಡ ಆಗಿತ್ತು. ಹತ್ತು ವಾರಗಳ ತನಕ ಅವರಿಗೆ ಬೆಡೆ ರೆಸ್ಟ್ ಅನಿವಾರ್ಯವಾಗಿತ್ತು.
“ಒಂದು ವಿಷಯ ಹೇಳುವುದು ಅತಿಶಯೋಕ್ತಿ ಎನಿಸದು. ಅದೇನೆಂದರೆ, ಅಪ್ಪ ತನ್ನ ಅಸ್ತಿತ್ವವನ್ನೇ ನನ್ನಲ್ಲಿ ಲೀನ ಮಾಡಿದ್ದರು. ಈಗಿನ ನನ್ನ ಕರ್ತವ್ಯ ಏನೆಂದರೆ, ಅಪ್ಪನ ಖುಷಿಯೇ ನನ್ನ ಖುಷಿಯೆಂದು ಭಾವಿಸಬೇಕು. ಮದುವೆಯ ಬಳಿಕ ನನ್ನ ಹೆಂಡತಿ ಕೂಡ ಆ ಜವಾಬ್ದಾರಿ ನಿಭಾಯಿಸಬೇಕು. ಕೇವಲ ಮನೆಯವರಷ್ಟೇ ಅಲ್ಲ, ನಾವು ಪರಸ್ಪರ ಇಷ್ಟಪಡುತ್ತಿದ್ದೇವೆ ಎನ್ನುವುದು ನನಗೆ ಗೊತ್ತು. ಆದಾಗ್ಯೂ ನೀನು ಹ್ಞೂಂ ಎಂದು ಹೇಳು ಮೊದಲು ನೀನು ಚೆನ್ನಾಗಿ ಯೋಚಿಸು. ನೀನು ಜೀವನವಿಡೀ ಅವಿಭಕ್ತ ಕುಟುಂಬದಲ್ಲಿ ಇರಬೇಕಾಗುತ್ತದೆ. ಅದೂ ಕೂಡ ಅಪ್ಪ ಅಮ್ಮನ ಇಚ್ಛೆಗನುಸಾರ.”
“ಅಪ್ಪ ಬಹಳ ಸಹೃದಯಿ ವ್ಯಕ್ತಿ ಮತ್ತು ನಿಮ್ಮ ಅಮ್ಮ ಕೂಡ. ಅವರ ಜೊತೆ ಇರಲು ನನಗೆ ಯಾವುದೇ ಸಮಸ್ಯೆ ಇಲ್ಲ. ಹಾಗೊಮ್ಮೆ ಅಂತಹ ಸಮಸ್ಯೆ ಏನಾದರೂ ಆದರೆ ಅದರ ಬಗ್ಗೆ ನಾನು ನಿಮ್ಮ ಮುಂದೆ ದೂರು ಕೂಡ ಹೇಳುವುದಿಲ್ಲ,” ಶ್ರೇಯಾ ದೃಢ ನಿರ್ಧಾರದಿಂದ ಹೇಳಿದಳು.
“ಹಾಗೊಮ್ಮೆ ನೀನು ಹೇಳಿದರೂ ಕೂಡ ನಾನು ಅದನ್ನು ಕೇಳಿಸಿಕೊಳ್ಳುವುದಿಲ್ಲ,” ಎಂದು ಹೇಳಿದ ಗೌತಮ್ ಧ್ವನಿಯಲ್ಲಿ ಚಾಲೆಂಜ್ ಎದ್ದು ಕಾಣುತ್ತಿತ್ತು.
ಬೇಗನೇ ಇಬ್ಬರ ಮದುವೆ ನಿರ್ಧಾರವಾಯಿತು. ಆದರೆ ಅದರ ಬಳಿಕ ಒಂದು ಸಮಸ್ಯೆ ಕೂಡ ಸೃಷ್ಟಿಯಾಯಿತು. ಆಫೀಸಿನ ನಿಯಮದ ಪ್ರಕಾರ, ಗಂಡ ಹೆಂಡತಿ ಇಬ್ಬರೂ ಒಂದೇ ಕಡೆ ಕೆಲಸ ಮಾಡುವ ಹಾಗಿರಲಿಲ್ಲ. ಶ್ರೇಯಾಳೇ ತನ್ನ ನೌಕರಿಗೆ ರಾಜೀನಾಮೆ ಕೊಟ್ಟುಬಿಟ್ಟಳು. ಹನಿಮೂನ್ ನಿಂದ ವಾಪಸ್ ಬಂದ ಬಳಿಕ ಅವಳು ಗೀತಾ ಹಾಗೂ ವಸಂತ್ ಜೊತೆಗೆ ಕೋಚಿಂಗ್ ಕಾಲೇಜಿಗೆ ಹೋಗತೊಡಗಿದಳು. ಅಲ್ಲಿ ಅವಳು ಆಫೀಸಿನ ಎಲ್ಲ ವ್ಯವಸ್ಥೆಗಳನ್ನು ನಿರ್ವಹಿಸತೊಡಗಿದಳು. ಈ ವೊದಲೇ ಅದನ್ನು ವಸಂತ್‌ನೋಡಿಕೊಳ್ಳುತ್ತಿದ್ದರು. ಹೀಗೆ ಮಾಡುವುದರ ಮೂಲಕ ಅವಳು ವಸಂತ್ ಗೆ ಸಾಕಷ್ಟು ನಿಕಟವಾದಳು. ಅವರು ಕೂಡ ಅವಳ ಬಗ್ಗೆ ಬಹಳ ನಂಬಿಕೆ ಇಟ್ಟುಕೊಂಡಿದ್ದರು.
“ಈ ಕೆಲಸ ಮಾಡುವುದರ ಮೂಲಕ ನೀನು ನನಗೆ ಬಹಳ ನಿರಾಳತೆ ದೊರಕಿಸಿಕೊಟ್ಟಿರುವೆ. ನಾನು ಈ ಕೆಲಸ ಮಾಡ್ತಾ ಮಾಡ್ತಾ ಬಹಳ ಸುಸ್ತಾಗಿ ಹೋಗುತ್ತಿದ್ದೆ. ಬೋಧನೆ ಹಾಗೂ ಆ ಬಳಿಕ ಈ ಕೆಲಸ ಬಹಳ ತಲೆನೋವಾಗಿ ಪರಿಣಮಿಸುತ್ತಿತ್ತು. ಅದಕ್ಕಾಗಿ ಒಬ್ಬರನ್ನು ವಿಶೇಷವಾಗಿ ಅಪಾಯಿಂಟ್ ಮಾಡೋಣ ಅಂದ್ರೆ ಅಷ್ಟು ಹೆಚ್ಚಿನ ಕೆಲಸ ಇಲ್ಲ,” ಎಂದು ಒಂದು ದಿನ ವಸಂತ್ ಶ್ರೇಯಾಗೆ ಹೇಳಿದರು.
“ಹಾಗಿದ್ದರೆ ಈ ಕೆಲಸನ್ನು ನನಗೇ ಬಿಟ್ಟುಬಿಡಿ ಮಾವ. ನನಗೆ ಬೇರೆ ನೌಕರಿ ಸಿಕ್ಕ ಬಳಿಕ, ನಾನು ಸಮಯ ಹೊಂದಿಸಿಕೊಂಡು ಈ ಕೆಲಸ ಮುಗಿಸಿ ಕೊಡುತ್ತೇನೆ,” ಎಂದು ಶ್ರೇಯಾ ಹೇಳಿದಳು.
“ನನಗಾಗಿ ಅಂದರೆ ನಿನ್ನ ಪ್ರೀತಿಯ ಮಾವನಿಗಾಗಿಯೂ ಸ್ವಲ್ಪ ಸಮಯ ಮೀಸಲಿಡಲು ಆಗುತ್ತಾ ಶ್ರೇಯಾ?” ವಸಂತ್ ಕಾತುರದ ಧ್ವನಿಯಲ್ಲಿ ಕೇಳಿದರು.
ಶ್ರೇಯಾಳಿಗೆ ಅಚ್ಚರಿಯಾಯ್ತು, “ನೀವೇನು ಹೇಳ್ತಿದಿರಿ ಮಾವ? ಈ ವಿಷಯ ಅತ್ತೆ ಹಾಗೂ ಗೌತಮ್ ಗೆ ತಿಳಿದರೆ ಅವರು ಇನ್ನಷ್ಟು ಚಿಂತಿತರಾಗಬಹುದು.”
“ಅವರಿಬ್ಬರಿಗೂ ಅದು ಗೊತ್ತಾಗಬಾರದು. ಅಂದಹಾಗೆ ಅವರು ಏನು ಮಾಡಲು ಆಗುವುದಿಲ್ಲ.”
“ಅಂಥದ್ದೇನು ಮಾವ, ನಾನು ಮಾಡುವಂಥ ಕೆಲಸ?”
“ಅದನ್ನು ಕೇವಲ ನೀನು ಮಾತ್ರ ಮಾಡುವಂಥದ್ದು,” ವಸಂತ್ ವಿಶ ಧ್ವನಿಯಲ್ಲಿ ಹೇಳಿದರು.
“ಅದೇನು ಹೇಳಿ ಮಾವ,” ಶ್ರೇಯಾ ಸ್ವಲ್ಪ ಧೈರ್ಯ ತಂದುಕೊಂಡು ಕೇಳಿದಳು.
“ನನ್ನ ವ್ಯಥೆ, ಕರುಣೆಯ ಕಥೆ ಕೇಳುವೆಯಾ?”
“ಅವಶ್ಯವಾಗಿ ಹೇಳಿ ಮಾವ. ಈಗ ನಿಮ್ಮ ಕ್ಲಾಸ್ ಕೂಡ ಇಲ್ಲ.”
“ಆದರೆ ಇಲ್ಲಿ ಬೇಡ. ಲಾಂಗ ಡ್ರೈವ್ ಗೆ ಬರುವೆಯಾ ನನ್ನ ಜೊತೆ?”
“ಬರ್ತೀನಿ, ಎನಿಥಿಂಗ್ ಫಾರ್ ಯೂ ಮಾವ.”
“ನಾವು ಲೈಬ್ರರಿಗೆ ಹೋಗುತ್ತಿದ್ದೇವೆ ಎಂದು ಮೇಡಂಗೆ ಹೇಳಬೇಕು. ಒಂದು ವೇಳೆ ನಾವು ಬರುವುದು ತಡವಾದರೆ, ಅವರು ನನ್ನ ಕ್ಲಾಸಿನಲ್ಲಿ ನಿನ್ನೆ ರಾತ್ರಿ ಸಿದ್ಧಪಡಿಸಿದ ಪ್ರಶ್ನೆ ಪತ್ರಿಕೆ ಹಂಚಬೇಕು,” ಎಂದು ವಸಂತ್ ಪ್ಯೂನ್ ಗೆ ಹೇಳುತ್ತಾ ಶ್ರೇಯಾ ಜೊತೆಗೆ ಹೊರಗೆ ಬಂದರು.
ಕಾರು ಚಲಾಯಿಸುತ್ತಾ ವಸಂತ್ ಮೌನವಾಗಿಯೇ ಇದ್ದರು. ನಗರದಿಂದ ಬಹುದೂರದ ಪ್ರದೇಶದಲ್ಲಿ ನಿರ್ಮಾಣವಾದ ಅರಮನೆಯಂಥ ಬಹುಮಹಡಿ ಕಟ್ಟಡವೊಂದರ ಮುಂದೆ ಅವರು ಕಾರು ನಿಲ್ಲಿಸಿದರು.
“ಇದು ನಮ್ಮ ವಂಶಸ್ಥರ ಹಳೆಯ ಕಟ್ಟಡ. ತಂದೆ ನನ್ನ ಹಾಗೂ ಗೀತಾಳ ಮದುವೆಗೆ ಒಂದೇ ಒಂದು ಷರತ್ತು ಹಾಕಿದ್ದರು. ಕೇವಲ ನನ್ನದೇ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳಿಗೆ ಮಾತ್ರ ಈ ಆಸ್ತಿ ಸಿಗುತ್ತದೆ, ಆದರೆ ಗೌತಮ್ ನಿಗಲ್ಲ ಎಂದ ಅವರು ಸ್ಪಷ್ಟವಾಗಿ ಹೇಳಿದ್ದರು. ಆದರೆ ನಾನು ಗೀತಾಳನ್ನು ಮದುವೆಯಾದದ್ದು ಗೌತಮನಿಗಾಗಿ. ಅವರು ಮಾತು ನನಗೆ ಹಿಡಿಸಲಿಲ್ಲ. ಆಗಲೇ ನಾನು ನನಗೆ ಯಾವುದೇ ಸಂತಾನ ಆಗಬಾರದು ಎಂದು ನಿರ್ಧರಿಸಿದೆ.
“ಗೀತಾಳ ಗರ್ಭಕೋಶದಲ್ಲಿ ಫೈಬ್ರಾಯ್ಡ್ ಗೆಡ್ಡೆಗಳಿದ್ದ ಕಾರಣದಿಂದ ಅವಳು ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ನಾನು ಔಷಧಿ ಸೇವನೆಯ ಕಿರಿಕಿರಿ ಬೇಡವೇ ಬೇಡ ಎಂದು ನಿರ್ಧರಿಸಿ ಅವಳ ಗರ್ಭಕೋಶವನ್ನೇ ತೆಗೆಸಿಹಾಕಿದೆ! ಆ ಬಳಿಕ ನಾನು ಇದೇ ನಗರದಲ್ಲಿದ್ದೂ ಕೂಡ ಅಪ್ಪ ನನ್ನನ್ನು ಕರೆಯಲಿಲ್ಲ. ನಾನು ಅಪ್ಪನನ್ನು ಭೇಟಿ ಆಗಲು ಹೋಗಲಿಲ್ಲ.
“ಕೆಲವು ವರ್ಷಗಳ ಹಿಂದೆ ತಂದೆಯವರು ನಿಧನರಾದರು. ಸಾಯುವ ಮೊದಲು ಅವರ ಅಂತ್ಯ ಸಂಸ್ಕಾರಕ್ಕೆ ನನ್ನನ್ನು ಕರೆಸಬೇಕೆಂದು ಆಸ್ತಿಯನ್ನು ಅನಿವಾರ್ಯವಾಗಿ ನನ್ನ ಹೆಸರಿಗೆ ಮಾಡಬೇಕೆಂದು ಹೇಳಿದರು. ದಾನ ಮಾಡಿದರೆ ಅದು ಪರರಿಗೆ ಹೋಗುತ್ತದೆ ಎಂಬ ಸತ್ಯ ಅವರಿಗೆ ಗೊತ್ತಿತ್ತು.
“ಆದರೆ ಸಾಯುವ ಮುನ್ನ ಒಂದು ಮಾರ್ಮಿಕ ಪತ್ರ ಬರೆದಿದ್ದರು. ಅದರಲ್ಲಿ ಅವರು ವಂಶವೃಕ್ಷ ನಷ್ಟಗೊಳಿಸಿದ ಹಾಗೂ ಹಿರಿಯರು ಕಷ್ಟಪಟ್ಟು ಗಳಿಸಿದ ಆಸ್ತಿಯನ್ನು ಇನ್ನೊಬ್ಬರ ರಕ್ತದಿಂದ ಹುಟ್ಟಿದವರಿಗೆ ಕೊಡುವ ಆರೋಪ ಹೊರೆಸಿದ್ದರು. ಸಾಧ್ಯವಾದರೆ ಹೀಗಾಗದಂತೆ ತಡೆಯಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದರು. ನಮ್ಮ ಪೂರ್ವಿಕರ ಹೆಸರು ಜೀವಂತವಾಗಿಡಲು ಗೌತಮ್ ನ ಹೊರತಾಗಿ ಹೆಚ್ಚುವರಿಯಾಗಿ ನನ್ನನ್ನೇ ಮಗು ಪಡೆಯಲು ಅವರು ವಿನಂತಿಸಿಕೊಂಡಿದ್ದರು.
“ಆ ಪತ್ರವನ್ನು ಓದಿದ ಬಳಿಕ ನಾನು ಬಹಳ ಖಿನ್ನನಾಗಿರುವೆ. ಒಂದು ಹೆಸರಾಂತ ಮನೆತನದ ವಂಶವೃಕ್ಷವನ್ನು ನಾಶಪಡಿಸಲು ನನಗೆ ಯಾವುದೇ ಹಕ್ಕು ಇಲ್ಲ. ತಮ್ಮ ವಂಶದ ಗೌರವ ಹೆಚ್ಚಿಸಲು ತಾತ ಮತ್ತು ಅಪ್ಪ ಎಷ್ಟೆಲ್ಲ ಕಷ್ಟಪಟ್ಟಿದ್ದರು. ನನ್ನನ್ನು ಖುಷಿಯಿಂದಿಡಲು ಏನೆಲ್ಲ ಮಾಡಿದ್ದರು. ನಾನು ಅವರ ವೃದ್ಧಾಪ್ಯವನ್ನಷ್ಟೇ ಹಾಳು ಮಾಡಲಿಲ್ಲ. ಅವರ ವಂಶವನ್ನು ನಾಶ ಮಾಡಿದೆ. ಗೌತಮ್ ಮನಸ್ಸಿನಲ್ಲಿ ಕೀಳರಿಮೆ ಬರಬಾರದು ಎಂದು ನಾನು ಹೀಗೆಲ್ಲ ಮಾಡಿದೆ.
“ನಮಗೆ ಎರಡನೇ ಮಗು ಆಗಿದ್ದರೆ ಹಾಗೂ ಆತನಿಗೆ ತಂದೆಯ ಆಸ್ತಿಪಾಸ್ತಿ ಹೋಗಿದ್ದರೆ ಅವರಿಗೆ ದುಃಖವೇನೂ ಆಗ್ತಿರಲಿಲ್ಲ. ಇಬ್ಬರಿಗೂ ಅಪ್ಪನ ಭಾವನೆಗಳೇನು ಎಂದು ತಿಳಿಯುತ್ತಿತ್ತು. ಗೌತಮ್ ಗೆ ನನ್ನ ಹಾಗೂ ಗೀತಾಳ ಆದಾಯವೇ ಸಾಕಷ್ಟಾಗುತ್ತಿತ್ತು.
“ಆದರೆ ನಾನು ಭಾವಾವೇಶಕ್ಕೊಳಗಾಗಿ ಗೀತಾಳಿಗೆ ಹಿಸ್ಟ್ರೆಕ್ಟೊಮಿ ಮಾಡಿಸಿ ಎಲ್ಲ ಸಾಧ್ಯತೆಗಳನ್ನು ಕೊನೆಗೊಳಿಸಿಬಿಟ್ಟೆ,” ಎಂದು ಹೇಳುತ್ತ ಬಿಕ್ಕಳಿಸಿದರು.
“ಶಾಂತರಾಗಿ ಮಾವ. ಆಗ ಮಾಡಿದ ತಪ್ಪನ್ನು ಈಗ ಯಾವುದೇ ರೀತಿಯಲ್ಲಿ ಸುಧಾರಿಸಲು ಆಗುವುದಿಲ್ಲ,” ಶ್ರೇಯಾ ನಿಸ್ಸಹಾಯಕ ಭಾವನೆಯಿಂದ ಹೇಳಿದಳು.
“ಬಹಳಷ್ಟು ಸುಧಾರಣೆ ಮಾಡಿಕೊಳ್ಳಬಹುದು. ಅಂದರೆ ಎಲ್ಲವನ್ನೂ ಸರಿಪಡಿಸಬಹುದು. ಆದರೆ ನೀನು ಮನಸ್ಸು ಮಾಡಿದರೆ ಮಾತ್ರ.”
“ನನಗೇನೂ ಅರ್ಥ ಆಗಲಿಲ್ಲ. ನಾನು ಇದರಲ್ಲಿ ಏನು ತಾನೇ ಮಾಡಲು ಸಾಧ್ಯ?” ಶ್ರೇಯಾ ಅಚ್ಚರಿಯಿಂದ ಪ್ರಶ್ನಿಸಿದಳು.
“ನನ್ನ ವಂಶವೃಕ್ಷವನ್ನು ಮುಂದುರಿಸಬಹುದು. ನನಗೆ ನನ್ನ ರಕ್ತದ ವಾರಸುದಾರನನ್ನು ಕೊಡುವುದರ ಮೂಲಕ,” ವಸಂತ್ ವ್ಯಾಕುಲ ಧ್ವನಿಯಲ್ಲಿ ಹೇಳಿದರು.
“ಅದಂತೂ ಸಮಯ ಬಂದಾಗ ಆಗಿಯೇ ಆಗುತ್ತದೆ ಮಾವ,” ಶ್ರೇಯಾ ನಾಚಿಕೊಳ್ಳುತ್ತಾ ಹೇಳಿದಳು.
“ಗೌತಮನದ್ದಲ್ಲ, ನನ್ನದೇ ಆದ ರಕ್ತದ ವಾರಸುದಾರ ಶ್ರೇಯಾ,” ವಸಂತ್ ಶಬ್ದಗಳ ಮೇಲೆ ಒತ್ತು ಕೊಟ್ಟು ಹೇಳಿದರು.
“ನಾನು ಅವನಿಗೆ ನನ್ನ ತಂದೆಯ ಕೊನೆಯ ಇಚ್ಛೆಯ ಪ್ರಕಾರ ಹಿರಿಯರ ಆಸ್ತಿಯನ್ನು ಹಂಚುವಂತಾಗಬೇಕು. ನನ್ನ ಅಪ್ಪ ತಮ್ಮ ವಿಲ್ ನಲ್ಲಿ ಯಾವುದೇ ಷರತ್ತಿಲ್ಲದೆ ಇಡೀ ಆಸ್ತಿಯನ್ನು ನನ್ನ ಹೆಸರಿಗೆ ಬರೆದಿದ್ದಾರೆ. ಅದನ್ನು ನಾನು ಏನಾದರೂ ಮಾಡಬಹುದು. ಆದರೆ ಅವರು ತಮ್ಮ ವೈಯಕ್ತಿಕ ಪತ್ರದಲ್ಲಿ ತಮ್ಮ ಈ ಇಚ್ಛೆ ಬಹಿರಂಗಪಡಿಸಿದ್ದಾರೆ. ಅದು ನನ್ನ ಹೊರತು ಯಾರಿಗೂ ಗೊತ್ತಿಲ್ಲ. ಆದರೆ ಅಪರಾಧಿ ಭಾವನೆಯಿಂದ ನಾನು ಸ್ವತಃ ಉಪಯೋಗಿಸಲಾಗುತ್ತಿಲ್ಲ. ಗೀತಾ ಹಾಗೂ ಗೌತಮ್ ಹೆಸರಿಗೂ ಬರೆಯಲು ಆಗುತ್ತಿಲ್ಲ.
“ಅದರ ಉಪೂಯೋಗನ್ನು ಕೇವಲ ತಂದೆಯ ರಕ್ತಸಂಬಂಧದ ನಿಜವಾದ ವಾರಸುದಾರ ಮಾತ್ರ ಮಾಡಿಕೊಳ್ಳಬಹುದು. ಆತ ಜಗತ್ತಿನ ದೃಷ್ಟಿಯಲ್ಲಿ ಗೌತಮನ ಮೊದಲ ಸಂತಾನ, ಆದರೆ ವಾಸ್ತವದಲ್ಲಿ ಆತನನ್ನು…. ಅಂದರೆ ವಸಂತನ ಸಂತಾನವೇ ಆಗಿರುತ್ತಾನೆ. ಗೌತಮ್ ನ ಮೊದಲ ಸಂತಾನದ ಹೆಸರಿನ ಮೇಲೆ ಆಸ್ತಿಪಾಸ್ತಿ ಕೊಡುವುದರಿಂದ ಯಾರಿಗೂ ಏನೂ ಸಂದೇಹ ಬರುವುದಿಲ್ಲ.”
ಮಾವ ವಸಂತ್ ಹೇಳಿದ ಮಾತು ಕೇಳಿ ಶ್ರೇಯಾಳಿಗೆ ಆಘಾತವಾಯಿತು. ಇಷ್ಟೊಂದು ಹೀನ, ಅನೈತಿಕ ಮಾತನ್ನು ಮಾವನಂತಹ ಒಬ್ಬ ಹೆಸರಾಂತ ವ್ಯಕ್ತಿ ಹೇಗೆ ತಾನೇ ಹೇಳಲು ಸಾಧ್ಯ? ಇದಕ್ಕೇ ಅವರು ನನ್ನ ಮೇಲೆ ಅಷ್ಟೊಂದು ಮಮತೆ, ಪ್ರೀತಿಯ ಮಳೆ ಸುರಿಸುತ್ತಿದ್ದರೇ….? ಆದರೆ ಅವಳು ಗೌತಮನಿಗೆ ನಂಬಿಕೆ ದ್ರೋಹ ಮಾಡುವುದು ಸಾಧ್ಯವಿರಲಿಲ್ಲ. ಗೌತಮ್ ಗೆ ಮಾವನ ಕಲುಷಿತ ಭಾವನೆಯ ಬಗೆಗೆ ಹೇಗೆ ತಾನೇ ಹೇಳಲು ಸಾಧ್ಯವಿತ್ತು? ಹಾಗೊಂದು ವೇಳೆ ಹೇಳಿದರೂ ಅದನ್ನು ಗೌತಮ್ ನಂಬುತ್ತಿರಲಿಲ್ಲ. ನಂಬಿದರೆ ಆ ನೋವಿನಿಂದ ಹೊರಬರುವುದೇ ಇಲ್ಲ. ಆದರೆ ತಾನು ಏನು ತಾನೇ ಮಾಡಬೇಕು? ಎಂಬ ಗೊಂದಲದಲ್ಲಿ ಬಿದ್ದಳು.
“ಗಾಬರಿಗೊಳ್ಳಬೇಡ ಶ್ರೇಯಾ, ನಾನು ನಿನಗೆ ಯಾವುದೇ ಬಲವಂತ ಮಾಡುವುದಿಲ್ಲ ಹಾಗೂ ಯಾವುದೇ ಅಶ್ಲೀಲ ಅಥವಾ ಅನೈತಿಕ ಚಟುವಟಿಕೆ ಕೂಡ ನಡೆಸುವುದಿಲ್ಲ,” ಎಂದು ವಸಂತ್ ಅತ್ಯಂತ ಮೃದು ಸ್ವರದಲ್ಲಿ ತಮ್ಮ ಉದ್ದೇಶ ಸ್ಪಷ್ಟಪಡಿಸತೊಡಗಿದರು.
“ನನ್ನ ಬಳಿ ಈ ಸಮಸ್ಯೆಗೆ ಒಂದು ಅತ್ಯಂತ ಸರಳ ಪರಿಹಾರವಿದೆ. ನೀನು ಒಂದಿಷ್ಟು ತರ್ಕಬದ್ಧವಾಗಿ ಯೋಚಿಸಬೇಕು ಹಾಗೂ ಗೌಪ್ಯತೆ ಕಾಪಾಡಬೇಕು. ನಿನಗೆ ಸ್ಪರ್ಮ್ ಟ್ರಾನ್ಸ್ ಪ್ಲಾಂಟ್ ಅಥವಾ ಐವಿಎಫ್ ತಂತ್ರಜ್ಞಾನದ ಬಗ್ಗೆ ಗೊತ್ತಿರಬೇಕಲ್ಲವೇ?”
“ಹೌದು ಗೊತ್ತಿದೆ ಮಾವ.” ಶ್ರೇಯಾಳ ಧ್ವನಿ ಕಂಪಿಸಿತು. ಪರಿಪೂರ್ಣ ಸಮರ್ಥ ಪತಿ ಇದ್ದಾಗ್ಯೂ ಬೇರೆಯವರ ವೀರ್ಯವನ್ನು ತನ್ನ ಒಡಲಲ್ಲಿ ಇರಿಸಿಕೊಳ್ಳುವ ಯೋಚನೆಯೇ ಅವಳಿಗೆ ಅಸಹನೀಯ ಎನಿಸುತ್ತಿತ್ತು.
ಆದರೆ ವಸಂತ್ ಅವರ ಕಾತರತೆ ಮತ್ತು ವಿವಶತೆ ಗೌತಮ್ ಗಾಗಿ ಅಪರಿಮಿತ ಮೋಹ ಗೌತಮ್ ಮತ್ತು ವಸಂತ್ ನಡುವಿನ ಅನ್ಯೋನ್ಯತೆ ಹಾಗೂ ಆತನ ಬಗೆಗಿನ ಕೃತಜ್ಞತೆ ಅವಳಿಗೆ ಬಾಧ್ಯತೆ ಉಂಟು ಮಾಡುತ್ತಿದ್ದವು. ತನ್ನ ಭಾವನೆಗಳನ್ನು ಹತ್ತಿಕ್ಕಿ ವಸಂತ್‌ರ ವಂಶವೃಕ್ಷವನ್ನು ಮುಂದುರಿಸಿಕೊಂಡು ಹೋಗಬೇಕು. ಅದರ ಹೊರತು ಅವಳ ಬಳಿ ಬೇರೆ ಯಾವುದೇ ಪರ್ಯಾಯಗಳಿರಲಿಲ್ಲ.
ವಸಂತ್‌ಗೆ ಇಲ್ಲವೆಂದು ನಿರಾಕರಿಸಬಹುದಿತ್ತು. ಆದರೆ ಆ ಬಳಿಕ ಅವಳು ಖಿನ್ನ ಮನಸ್ಕಳಾಗಿ ಕಂಡುಬಂದರೆ ತನ್ನ ಬಗ್ಗೆ ಅತ್ಯಂತ ಪ್ರೀತಿ ಇಟ್ಟಿರುವ ಗೌತಮ್ ಗೂ ಅದು ನೋವನ್ನುಂಟು ಮಾಡುತ್ತದೆ. ಈ ರೀತಿ ಇಡೀ ಕುಟುಂಬ ಖಿನ್ನತೆಗೆ ತುತ್ತಾಗುತ್ತದೆ.
“ಡಾ. ಅಶ್ವತ್ಥ್ ನನಗೆ ಒಳ್ಳೆಯ ಸ್ನೇಹಿತರು. ಅವರ ಕ್ಲಿನಿಕ್ ನಲ್ಲಿ ಎಲ್ಲ ಅತ್ಯಂತ ಎಚ್ಚರಿಕೆಯಿಂದ ಆಗುತ್ತದೆ,” ವಸಂತ್‌ಹೇಳಿದರು.
“ಹಾಗಾದರೆ ಮಾಡಿಸಿ ಮಾವ. ನೀವು ಯಾವಾಗ ಹೇಳ್ತೀರಿ, ಆಗ ನಾನು ಅಲ್ಲಿಗೆ ಹೋಗ್ತೀನಿ,” ಎಂದು ಶ್ರೇಯಾ ದೃಢ ನಿಶ್ಚಯದ ಧ್ವನಿಯಲ್ಲಿ ಹೇಳಿದಳು,
“ನಾವೀಗ ವಾಪಸ್ ಹೊರಡೋಣ. ನಿಮಗೂ ಕ್ಲಾಸ್ ಟೈಮ್ ಆಗ್ತಾ ಬಂತು.” ವಸಂತ್ ಅಚ್ಚರಿಯ ಕಂಗಳಿಂದ ಶ್ರೇಯಾಳತ್ತ ನೋಡಿದರು. ಅವಳು ಬಹಳಷ್ಟು ಪೌರಾಣಿಕ ಕಥೆಗಳಲ್ಲಿ ನಿಯೋಗದ ಬಗ್ಗೆ ಓದಿದ್ದಳು. ಆದರೆ ಶ್ರೇಯಾ ಯಾವುದನ್ನು ಮಾಡಲು ಹೊರಟಿದ್ದಳೊ, ಅದನ್ನು ಯಾವುದೇ ಕಾಲ್ಪನಿಕ ಕಥೆಯ ನಾಯಕಿ ಕೂಡ ಮಾಡಿರಲಿಲ್ಲ.