ಇಡೀ ಆಫೀಸು ಖಾಲಿಯಾಗಿತ್ತು. ಆದರೆ ವಿಜಯ್ ಮಾತ್ರ ಗೊಂದಲದಲ್ಲಿದ್ದರಂತೆ ಯೋಚನೆಯಲ್ಲಿ ಮುಳುಗಿದ್ದ. ಅವನು ಬಹಳ ಹೊತ್ತಿನಿಂದ ತನುಶ್ರೀಗೆ ಪೋನ್ ಮಾಡಲು ಯೋಚಿಸುತ್ತಿದ್ದ. ಎಷ್ಟೊ ಬಾರಿ ಮೊಬೈಲ್ ಕೈಗೆತ್ತಿಕೊಂಡರೂ, ಡಯಲ್ ಮಾಡದೆ ಸುಮ್ಮನಾಗಿಬಿಡುತ್ತಿದ್ದ. ತನುಶ್ರೀಗೆ ಏನು ಹೇಳಬೇಕೆಂದು ಅವನಿಗೆ ಗೊತ್ತಾಗುತ್ತಿರಲಿಲ್ಲ. ಈಗಾಗಲೇ ಅವನು ಅನೇಕ ಸಲ ಹೇಳಿದ್ದಾನೆ. ಮತ್ತೇ ಅದನ್ನೇ ಹೇಳಬೇಕಾದೀತೆಂದು ಅವನ ಮನಸ್ಸು ಯೋಚಿಸುತ್ತಿತ್ತು.
ಕಳೆದ ಅನೇಕ ದಿನಗಳಿಂದ ಅವನು ತನುಶ್ರೀ ಜೊತೆಗೆ ಮಾತಾಡಿಯೇ ಇಲ್ಲ. ಇಂದು ತಾನು ಅವಳ ಜೊತೆಗೆ ಮಾತಾಡಿಯೇ ತೀರಬೇಕೆಂದು ನಿರ್ಧರಿಸಿದ್ದ. ಮತ್ತೊಮ್ಮೆ ಫೋನ್ ಕೈಗೆತ್ತಿಕೊಂಡು ನಂಬರ್ ಮೇಲೆ ಬೆರಳಾಡಿಸತೊಡಗಿದ. ಅತ್ತ ಕಡೆಯಿಂದ ತನುಶ್ರೀಯ `ಹಲೋ’ ಧ್ವನಿ ಕೇಳಿಸಿತು.
“ತನುಶ್ರೀ……” ವಿಜಯ್‌ನ ಧ್ವನಿ ಕೇಳಿ ಅವಳು ಕ್ಷಣಕಾಲ ಮೌನವಾದಳು. ಬಳಿಕ ತಟಸ್ಥ ಧ್ವನಿಯಿಂದ ಹೇಳಿದಳು, “ಮಾತಾಡಿ ವಿಜಯ್……”
“ತನು ಮತ್ತೊಮ್ಮೆ ಯೋಚಿಸು. ಎಲ್ಲವೂ ಸರಿಹೋಗುತ್ತದೆ….. ಇಷ್ಟೊಂದು ಆತುರ ಒಳ್ಳೆಯದಲ್ಲ. ನಿನಗೆ ನನ್ನ ಬಗ್ಗೆ ಯಾವುದೇ ಸಮಸ್ಯೆಯಂತೂ ಇಲ್ಲವಲ್ಲ. ಉಳಿದೆಲ್ಲ ಸಮಸ್ಯೆಗಳು ಬಗೆಹರಿಯುತ್ತವೆ…. ಅವುಗಳಿಗೆ ಏನಾದರೊಂದು ಪರಿಹಾರ ಸಿಕ್ಕೇ ಸಿಗುತ್ತದೆ…. ನೀನು ವಾಪಸ್ ಬಂದುಬಿಡು, ನನ್ನ ಜೊತೆ ನೀನೇಕೆ ಹಾಗೆ ಮಾಡುತ್ತಿರುವೆ,” ಎಂದು ಹೇಳುತ್ತಾ ಹೇಳುತ್ತಾ ವಿಜಯ್‌ನ ಧ್ವನಿ ಸ್ವಲ್ಪ ಮೃದುವಾಯಿತು. ಅವನು ಅಳುತ್ತಿದ್ದಾನೇನೋ ಅನಿಸಿತು.
“ಕಳೆದ 2 ವರ್ಷದಿಂದ ಸಮಸ್ಯೆ ಬಗೆಹರಿಸಲು ಆಗಲಿಲ್ಲ, ಈಗೇನು ಬಗೆಹರಿಸ್ತೀರಾ ವಿಜಯ್….? ನಾನು ಅಲ್ಲಿ ಉಸಿರುಗಟ್ಟುವ, ಒತ್ತಡದ ವಾತಾವರಣದಲ್ಲಿ ಜೀವನ ಸಾಗಿಸಲು ಆಗುವುದಿಲ್ಲ. ಇಡೀ ಜೀವನ ಹೀಗೆಯೇ ಇರುವುದು ಕಷ್ಟಕರ. ನಾನು ಕ್ಷಮೆ ಕೇಳ್ತೀನಿ ನಿಮ್ಮಿಂದ……”
ಅವಳು ಫೋನ್ ಇಟ್ಟುಬಿಟ್ಟಳು. ವಿಜಯ್ ಮೌನವಾಗಿ ಫೋನ್ ನ್ನೇ ದಿಟ್ಟಿಸಿ ನೋಡುತ್ತಿದ್ದ. ಅವನ ಮದುವೆಯಾಗಿ 2 ವರ್ಷಗಳು ದಾಟಿವೆ. ಕಳೆದ 1 ವರ್ಷದಿಂದ ತನುಶ್ರೀ ತನ್ನ ತವರಿನಲ್ಲಿಯೇ ಇದ್ದಾಳೆ. ಅವಳ ಜೊತೆಗೆ ಸಂಬಂಧದ ಮಾತುಕಥೆ ನಡೆದಾಗ ಇಬ್ಬರೂ ಅನೇಕ ಸಲ ಪರಸ್ಪರ ಭೇಟಿಯಾಗಿ ಮಾತನಾಡಿದ್ದರು.
ವಿಜಯ್‌ಗೆ ತನುಶ್ರೀ ರೂಪವತಿ ಮಾತ್ರವಲ್ಲ, ಶಾಂತ ಸ್ವಭಾವದ ತಿಳಿವಳಿಕೆಯುಳ್ಳ, ಎಲ್ಲರ ಜೊತೆ ಬೆರೆಯುವ ಹುಡುಗಿ ಎನಿಸಿತ್ತು. ಅದಕ್ಕೆ ಅವಳು ಅರ್ಹಳೂ ಆಗಿದ್ದಳು. ಜೊತೆಗೆ ಅವಳು ಬಹುರಾಷ್ಟ್ರೀಯ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ತನುಶ್ರೀ ಜೊತೆಗೆ ಮಾತನಾಡುವಾಗ, ಅವನಿಗೆ ಒಂದು ವಿಷಯ ಸ್ಪಷ್ಟವಾಗಿತ್ತು. ಇಂದಿನ ಸ್ವತಂತ್ರ ಮನೋಭಾವದ ಹುಡುಗಿಯರು ಅತ್ತೆ ಮನೆಯಲ್ಲಿ ಇರಲು ಇಷ್ಟಪಡುವುದಿಲ್ಲ. ಆದರೆ ತಾನು ತಾಯಿ ತಂದೆಯರ ಏಕೈಕ ಪುತ್ರ. ಅಕ್ಕನ ಮದುವೆ ಬಹಳ ರ್ಷಗಳ ಹಿಂದೆಯೇ ಆಗಿದೆ. ಹೀಗಾಗಿ ತಾನು ತಾಯಿ ತಂದೆಯಿಂದ ಪ್ರತ್ಯೇಕವಾಗಿರಲು ಆಗುವುದಿಲ್ಲ. ಒಟ್ಟಿಗೆ ಇರಬಹುದಾ ಎಂದು ಅವನು ಕೇಳಿದ್ದ.
ಅದಕ್ಕೆ ತನುಶ್ರೀ, “ಅಮ್ಮ ಅಪ್ಪನ ಜೊತೆಗಿರಲು ನನಗೇನು ಸಮಸ್ಯೆ ಆಗುತ್ತೆ….? ಜೊತೆಗಿರುವುದರಿಂದ ಸಹಾಯವಂತೂ ಆಗುತ್ತದೆ. ಒಂದಿಷ್ಟು ಹೊಂದಾಣಿಕೆ ಮಾಡಿಕೊಳ್ಳಲೇಬೇಕು,” ಎಂದಿದ್ದಳು.
ತನುಶ್ರೀಯಿಂದ ಈ ಮಾತುಗಳನ್ನು ಕೇಳಿಸಿಕೊಂಡ ವಿಜಯ್ ಬಹಳ ಖುಷಿಯಾಗಿದ್ದ. ಆದರೆ ಅವನು ತನ್ನ ಅಮ್ಮ ವಿದ್ಯಾವಂತರಾಗಿಯೂ, ಹಳೆಯ ವಿಚಾರದರೆಂಬುದನ್ನು ಮಾತ್ರ ಅವಳಿಗೆ ಹೇಳಿರಲಿಲ್ಲ.
ಅವರಿಬ್ಬರ ಮದುವೆ ನಡೆದುಹೋಯಿತು. ಸುಲಲಿತ ವಿಚಾರಗಳು, ಪವಿತ್ರ ಭಾವನೆಗಳನ್ನು ಇಟ್ಟುಕೊಂಡು ವಿಜಯ್‌ನ ಬಾಳಿನಲ್ಲಿ ತನುಶ್ರೀ ಪ್ರವೇಶಿಸಿದ್ದಳು. ಆರಂಭದ ಕೆಲವು ತಿಂಗಳು ಎಲ್ಲವೂ ಸುಲಲಿತವಾಗಿಯೇ ಸಾಗಿತ್ತು. ಅದೆಷ್ಟೋ ಸಲ ಕೆಲವು ಮಾತುಗಳಿಗೆ ಅತ್ತೆ ಸಿಡಿಮಿಡಿಗೊಳ್ಳುತ್ತಿದ್ದರು. ಮುಂದೆ ಸರಿಹೋಗಬಹುದು ಎಂದು ತನುಶ್ರೀ ಯೋಚಿಸುತ್ತಿದ್ದಳು. ಅವರು ಅವಳನ್ನು ಅಷ್ಟೇ ಪ್ರೀತಿಯಿಂದ ನೋಡುತ್ತಿದ್ದರು. ಅವಳೂ ಅವರನ್ನು ಹಾಗೆ ನೋಡುತ್ತಿದ್ದಳು. ಆದರೆ ಕ್ರಮೇಣ ಮನೆಯ ವಾತಾವರಣ ಹೇಗಾಗಿಬಿಟ್ಟಿತೆಂದರೆ, ಪ್ರೀತಿಯ ಧಾರೆ ಕಡಿಮೆಯಾಗುತ್ತಾ ಹೋಯಿತು. ಅದು ಕ್ರಮೇಣ ಶುಷ್ಕಗೊಂಡದ್ದು ಅವಳ ಗಮನಕ್ಕೆ ಬರಲೇ ಇಲ್ಲ.
ತನುಶ್ರೀ ದೊಡ್ಡ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಳು. ಆದರೆ ಅವಳ ಅತ್ತೆ ಇದೆಲ್ಲವನ್ನು ಮರೆತುಬಿಡುತ್ತಿದ್ದರು. ಅವಳು ಬೇರೆ ಮನೆಗಳ ಸಾಮಾನ್ಯ ಸೊಸೆಯಂತೆಯೇ ಎಂದು ಅವರು ಭಾವಿಸುತ್ತಿದ್ದರು. ಅಡುಗೆ ಮನೆಯಲ್ಲಿ ತನುಶ್ರೀ ತನಗೆ ಸಾಧ್ಯವಾದಷ್ಟು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಳು. ಅತ್ತೆಗೂ ಸಹಾಯ ಮಾಡುತ್ತಿದ್ದಳು. ಆದರೆ ಅತ್ತೆಯ ಕಣ್ಮುಂದೆ ಪಕ್ಕದಮನೆಯ ಸೊಸೆಯೇ ಬರುತ್ತಿದ್ದಳು. ಅವಳು ಬೆಳಗ್ಗೆ ಕಾಫಿಯಿಂದ ಹಿಡಿದು ರಾತ್ರಿ ಮಲಗುವ ಮುನ್ನ ಹಾಲು ತಂದುಕೊಡುವ ತನಕ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದಳು. ಮನೆಯಲ್ಲಿ ನಡೆಯುವ ಹಬ್ಬ, ಹುಣ್ಣಿಮೆ, ವ್ರತ, ಉಪವಾಸದಲ್ಲಿ ಪಾಲ್ಗೊಳ್ಳುತ್ತಿದ್ದಳು. ನವರಾತ್ರಿಯಲ್ಲಂತೂ 9 ದಿನ ಉಪವಾಸ ಇರುತ್ತಿದ್ದಳು. ಮನೆಯಲ್ಲಿ ನಡೆಯುವ ಭಜನೆ, ಕೀರ್ತನೆಗಳಲ್ಲಿ ಚಪ್ಪಾಳೆ ತಟ್ಟುತ್ತಿದ್ದಳು. ಅಷ್ಟೇ ಅಲ್ಲ ಅದರಲ್ಲಿ ಪಾಲ್ಗೊಳ್ಳುತ್ತಿದ್ದವರಿಗೆ ಕಾಫಿತಿಂಡಿಯ ವ್ಯವಸ್ಥೆ ಮಾಡುತ್ತಿದ್ದಳು.
ತನುಶ್ರೀಯ ಅರ್ಹತೆಯನ್ನು ಗಮನಿಸಿಯೂ ಅವಳ ಒಳ್ಳೆಯ ಸ್ವಭಾವ, ಸಮತೋಲನ ವರ್ತನೆ ಅತ್ತೆಯ ಗಮನಕ್ಕೆ ಬರುತ್ತಲೇ ಇರಲಿಲ್ಲ. ಸಮಯದ ಕೊರತೆ ಹಾಗೂ ದಣಿವಿನ ನಡುವೆಯೂ ಅವಳು ಅವರನ್ನೆಲ್ಲ ಖುಷಿಯಿಂದಿಡಲು ಪ್ರಯತ್ನಪಡುತ್ತಿದ್ದಳು. ವಿಜಯ್ ಅದೆಷ್ಟೋ ಸಲ ತಾಯಿಗೆ, “ನೀವು ಸಣ್ಣ ಸಣ್ಣ ವಿಷಯಗಳಿಗೆ ಗಮನ ಕೊಡಬೇಡಿ. ಅಡುಗೆಮನೆಯ ಕೆಲಸ ಅಷ್ಟೇನು ದೊಡ್ಡ ಕೆಲಸವಲ್ಲ. ಈಗ ನಿಮಗೆ ಅದು ಕಷ್ಟಕರವೆಂದರೆ ನಾವು ಯಾರಾದರೂ ಕೆಲಸದವರನ್ನು ವ್ಯವಸ್ಥೆ ಮಾಡಬಹುದು. ತನುಶ್ರೀ ಆಫೀಸಿನಿಂದ ದಣಿದು ಬರುತ್ತಾಳೆ…. ನಾವೆಲ್ಲ ಹಣ ಗಳಿಸುವುದು ಏಕೆ ಹೇಳಿ? ಸುಖ ಸೌಲಭ್ಯಗಳಿಗೆ ತಾನೇ…. ನಾವು ಫುಲ್ ಟೈಮ್ ಕೆಲಸದವರನ್ನೇ ಇಟ್ಟುಕೊಳ್ಳೋಣ,” ಎಂದು ತಿಳಿಸಿ ಹೇಳುತ್ತಿದ್ದ.
ಆಗ ತಾಯಿ ಅವನ ಮಾತನ್ನು ತಿರುಗಿಸಿಬಿಡುತ್ತಿದ್ದರು, “ಈಗ ನಿನಗೆ ಎಲ್ಲ ಗೊತ್ತಾಗ್ತಿದೆ. ಹೆಂಡ್ತಿ ಬಂದ ಮೇಲೆ ನನ್ನ ಮಹತ್ವ ಕಡಿಮೆ ಆಯ್ತಲ್ವಾ? ನೀನು ಮೊದಲು ಕೂಡ ಹಣ ಗಳಿಸ್ತಿದ್ದೆ. ಆಗ ನಿನಗೆ ಈ ಅಮ್ಮನ ಕಷ್ಟದ ಅರಿವು ಆಗಲಿಲ್ಲ. ಹೆಂಡತಿ ಕೆಲಸ ಮಾಡಬೇಕಾಗುತ್ತೆ ಅಂತ ಕೆಲಸದವಳನ್ನು ಇಟ್ಟುಕೊಳ್ಳೋಣ ಎಂದು ಹೇಳ್ತೀದಿಯಾ….?” ಎಂದು ಹೇಳುತ್ತಾ ಕಣ್ಣರು ಸುರಿಸುತ್ತಾ, “ಮಗ ಮದುವೆಯಾದ ಮೇಲೆ ಬದಲಾಗುತ್ತಾನೆ ಎಂದು ಬೇರೆಯವರು ಹೇಳುತ್ತಿದ್ದರು. ಈಗ ಅದನ್ನು ನಾನು ಕಣ್ಣಾರೆ ನೋಡುತ್ತಿರುವೆ,” ಎನ್ನುತ್ತಿದ್ದರು.
ಅಮ್ಮನ ರೋದನ ಕೇಳಿಸಿಕೊಂಡು ಅಮ್ಮನನ್ನು ಸುಮ್ಮನಾಗಿಸಬೇಕೋ ಅಥವಾ ಒಳಗೆ ಈ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳುತ್ತಿರುವ ತನುಶ್ರೀಗೆ ಸಾಂತ್ವನ ಹೇಳಬೇಕೊ ಅವನಿಗೆ ಗೊತ್ತಾಗುತ್ತಿರಲಿಲ್ಲ. ರಜೆಯ ದಿನದಂದು ತನುಶ್ರೀ ಸ್ವಲ್ಪ ತಡವಾಗಿ ಏಳುವುದು ಕೂಡ ಅತ್ತೆಗೆ ಸರಿ ಎನಿಸುತ್ತಿರಲಿಲ್ಲ. ಅವಳ ಅಷ್ಟಿಷ್ಟು ಆಧುನಿಕ ಡ್ರೆಸ್‌ನ್ನಂತೂ ನೋಡಿ ಅವರು ಉರಿದೇಳುತ್ತಿದ್ದರು. ಡ್ರೆಸ್ ಬಗೆಗಿನ ಈ ದೈನಂದಿನ ಟೀಕೆ ಟಿಪ್ಪಣಿಗಳನ್ನು ಕೇಳಿಸಿಕೊಂಡ ತನುಶ್ರೀ ಮಾಡರ್ನ್ ಡ್ರೆಸ್ ಧರಿಸುವುದನ್ನೇ ಬಿಟ್ಟುಬಿಟ್ಟಿದ್ದಳು. ತವರಿಗೆ ಹೋದಾಗ ಮಾತ್ರ ಅವಳು ತನ್ನ ಆಸೆಯನ್ನು ಪೂರೈಸಿಕೊಳ್ಳುತ್ತಿದ್ದಳು.
ಅತ್ತೆಗೆ ತನ್ನ ಸೊಸೆಯ ಖುಷಿಗಿಂತ ಹೆಚ್ಚಾಗಿ ಅಕ್ಕಪಕ್ಕದವರ ಖುಷಿಯೇ ಹೆಚ್ಚು ಪ್ರೀತಿ ಪಾತ್ರ ಎನಿಸುತ್ತಿತ್ತು. ವಿಜಯ್ ಮುಂದೆ ಅವರು ಯಾವಾಗಲೂ ಹೇಳುತ್ತಿದ್ದುದು, “ಅಕ್ಕಪಕ್ಕದ ಮನೆಯ ಸೊಸೆಯಂದಿರು ವ್ರತ, ಉಪವಾಸ ಮಾಡುತ್ತಾರೆ. ನಮ್ಮ ಸೊಸೆಯೂ ಇದ್ದಾಳೆ. ಅವಳು ವ್ರತವನ್ನು ಮಾಡುವುದಿಲ್ಲ. ತನ್ನ ಗಂಡನ ದೀರ್ಘಾಯುಷ್ಯಕ್ಕೂ ಕೂಡ ಹಸಿವಿನಿಂದ ಇರುವುದಿಲ್ಲ,” ಎನ್ನುತ್ತಿದ್ದರು.
“ಒಂದು ದಿನ ಉಪವಾಸವಿದ್ದರೆ ಯಾವ ಗಂಡ ತಾನೇ ದೀರ್ಘಾಯುಷ್ಯು ಪಡೆದುಕೊಳ್ಳುತ್ತಾನೆ? ಗಂಡನೊಂದಿಗೆ ದಿನವಿಡೀ ಜಗಳವಾಡೋದು ಜೊತೆಗೆ ಬೈಗುಳದ ಮಳೆ ಸುರಿಸೋದು, ವರ್ಷದಲ್ಲಿ ಒಂದೆರಡು ಸಲ ಉಪವಾಸ ಇದ್ದು ಗಂಡನ ಕೈಯಿಂದ ನೀರು ಕುಡಿದು ಉಪವಾಸ ತೊರೆಯುವುದು ಇವೆಲ್ಲ ನನಗಿಷ್ಟವಿಲ್ಲ ಅಮ್ಮ. ಅದಕ್ಕಾಗಿ ನೀವು ತನು ಮೇಲೇಕೆ ಒತ್ತಡ ಹೇರುತ್ತೀರಿ…? ಇವೆಲ್ಲ ಮೂಢನಂಬಿಕೆಗಳು. ಈ ವ್ರತ, ಉಪವಾಸವೆಲ್ಲ ಈಗ ಫ್ಯಾಷನ್‌ಗಾಗಿ ನಡೆಸಲ್ಪಡುತ್ತಿವೆ……”
“ಹೌದೌದು. ನಾನು ಇಷ್ಟೊಂದು ವರ್ಷ ನಿನ್ನ ತಂದೆಗಾಗಿ ವ್ರತ, ಉಪವಾಸ ಮಾಡಿದ್ದು ಮೂಢನಂಬಿಕೆಯಾ…..?” ಎಂದರು ಅಮ್ಮ.
“ನೀವು ಮಾಡಿದ್ದು ಸರಿ. ಅದು ನಿಮ್ಮ ನಂಬಿಕೆ, ನಿಮ್ಮ ಯೋಚನೆ. ಆದರೆ ಅದಕ್ಕಾಗಿ ನಿಮ್ಮ ಯೋಚನೆಯನ್ನು ಬೇರೆಯವರ ಮೇಲೆ ಹೇರೋದು ಸರಿ ಅನಿಸುತ್ತಾ…..?”
ಅಮ್ಮನ ತರ್ಕ ರಹಿತ ವಿಚಾರಗಳು ಹಾಗೂ ನಂಬಿಕೆಗಳ ಬಗ್ಗೆ ಅವನು ಆಗಾಗ ಉರಿದೇಳುತ್ತಿದ್ದ. ತನುಶ್ರೀಯ ಪರ ವಹಿಸಿ ಮಾತನಾಡಿ ಅವನು ತಾಯಿಯೊಂದಿಗಿನ ಸಂಬಂಧವನ್ನು ಹಾಳು ಮಾಡಿಕೊಳ್ಳುತ್ತಿದ್ದ. ತಾಯಿಯ ಬಗ್ಗೆ ಇಷ್ಟೆಲ್ಲಾ ಮಾತನಾಡುತ್ತಿದ್ದರೂ ತಂದೆ ಮೌನವಾಗಿಯೇ ಇರುತ್ತಿದ್ದರು.
ರಜಾ ದಿನದಂದು ವಿಜಯ್ ತನುಶ್ರೀ ಎಲ್ಲಿಯಾದರೂ ಸುತ್ತಾಡಿಯೊ ಅಥವಾ ಸಿನಿಮಾಕ್ಕೊ ಹೊರಟರೆ ಅಮ್ಮ, “ದಿನ ಕೆಲಸದ ಕಾರಣದಿಂದ ಮನೆಯಿಂದ ಮಾಯವಾಗಿರುತ್ತಾರೆ ಮೇಡಂ….. ರಜೆಯ ದಿನ ಸಿನಿಮಾ, ಸುತ್ತಾಟ….. ಪುರಸತ್ತೆ ಇಲ್ಲ…..” ಎಂದು ವ್ಯಂಗ್ಯವಾಗಿ ಹೇಳುತ್ತಿದ್ದರು.
ತನುಶ್ರೀ ಮೂಡ್ ಹಾಳಾಗಿ ಹೋಗುತ್ತಿತ್ತು. ಅವಳು ಹೊರಗೆ ಹೋಗಲು ನಿರಾಕರಿಸುತ್ತಿದ್ದಳು. ವಿಜಯ್ ಅವಳನ್ನು ಹೇಗಾದರೂ ಮಾಡಿ ಮನವೊಲಿಸಿ ಹೊರಗೆ ಕರೆದುಕೊಂಡು ಹೋಗುತ್ತಿದ್ದ. ಆದರೂ ಇಬ್ಬರಿಗೂ ಮನಸ್ಸು ಶಾಂತವಾಗಿರುತ್ತಿರಲಿಲ್ಲ.
ಅವನು ತಾಯಿಗೆ, “ಅಮ್ಮಾ, ನೀವು ತನುಶ್ರೀಯನ್ನು ಬೇರೆಯವರೊಂದಿಗೆ ಹೋಲಿಸಿ ನೋಡಬೇಡಿ. ತನುಶ್ರೀಯ ಕಾರ್ಯಕೌಶಲ, ಕ್ರಿಯಾಕಲಾಪಗಳು ಅವಳ ವರ್ತನೆ ಹಾಗೂ ಸ್ವಭಾವವನ್ನು ಅವಳ ಅರ್ಹತೆಗನುಗುಣವಾಗಿ ತೂಗಿ ನೋಡಿ. ಆಗ ನಿಮಗೆ ಅವಳ ಬಗ್ಗೆ ಯಾವುದೇ ದೂರು ಇರದು….. ನೀವು ನನಗೆ ಈ ಕೆಲಸಗಳು ಮಾಡಲು ಹೇಳಿದಿರಿ ಅಂದ್ಕೊಳ್ಳಿ. ಅವನ್ನು ಮಾಡಲು ನನ್ನ ಬಳಿ ಸಮಯವಾದರೂ ಎಲ್ಲಿದೆ? ತನುಶ್ರೀ ಕೂಡ ನನ್ನ ಹಾಗೆಯೇ ಬಿಜಿಯಾಗಿದ್ದಾಳೆ. ಅವಳು ಈ ಕೆಲಸಗಳನ್ನು ಹೇಗೆ ಮಾಡಲು ಸಾಧ್ಯ? ನೀವು ಅವಳ ಸ್ವಭಾವವನ್ನು ಏಕೆ ಪರಿಗಣಿಸುತ್ತಿಲ್ಲ? ನೀವು ಅಷ್ಟೆಲ್ಲ ಮಾತನಾಡಿದರೂ ಅವಳು ತಿರುಗಿ ಉತ್ತರ ಸಹ ಕೊಡುವುದಿಲ್ಲ. ನೀವು ಚಿಕ್ಕ ಪುಟ್ಟ ವಿಷಯಗಳ ಬಗ್ಗೆ ಗಮನ ಕೊಡುವುದನ್ನು ಬಿಟ್ಟುಬಿಡಿ ಖುಷಿಯಾಗಿರಿ. ಜೀವನವನ್ನು ಖುಷಿಯಿಂದ ಕಳೆಯಲು ಕಲಿತುಕೊಳ್ಳಿ.
“ಎಲ್ಲರ ಜೀವನದ ಆದ್ಯತೆಗಳು ಬೇರೆ ಬೇರೆಯಾಗಿರುತ್ತವೆ. ನೀವು ಯಾವ ಸೊಸೆಯಂದಿರ ಬಗ್ಗೆ ಮಾತನಾಡುತ್ತೀರೋ, ಅವರ ಆದ್ಯತೆಗಳು ಅವೇ ಆಗಿವೆ. ಆದರೆ ತನುಶ್ರೀಯಂತಹ ಯುವತಿಯರ ಆದ್ಯತೆಗಳು ಬೇರೆಯಾಗಿವೆ. ಅದರ ಬಗ್ಗೆ ನಿಮ್ಮ ವಿಚಾರ, ನಿಮ್ಮ ಅಭಿಪ್ರಾಯಗಳನ್ನು ಹೇರಬೇಡಿ. ಅವಳು ಸ್ವಭಾವದಿಂದ ಕೆಟ್ಟವಳೇನಲ್ಲ. ಕೆಟ್ಟದ್ದೇನೂ ಹೇಳುವುದಿಲ್ಲ. ಕೆಟ್ಟದ್ದೇನೂ ಮಾಡುವುದಿಲ್ಲ.”
ಅಮ್ಮ ಅವನ ಉಪದೇಶ ಕೇಳಿಸಿಕೊಂಡು ಮತ್ತಷ್ಟು ರೋಸಿ ಹೋಗುತ್ತಾರೆ, “ದೊಡ್ಡ ದೊಡ್ಡ ಮಾತು ಆಡೋದನ್ನು ಕಲಿತುಬಿಟ್ಟಿದ್ದಾನೆ. ನನಗೇ ಉಪದೇಶ ಕಲಿಸೋಕೆ ತೊಡಗಿದ್ದಾನೆ. ಮದುವೆಯಾಗೋ ತನಕ ನಿನಗೆ ಇದೆಲ್ಲ ಸರಿ ಅನಿಸಿತ್ತು. ಆದರೆ ಈಗ ಇದು ಸರಿ ಅನಿಸ್ತಿಲ್ಲ ಅಲ್ವಾ……?”
ಅಮ್ಮನ ಆಕ್ರೋಶ ಹೊರಹೊಮ್ಮುತ್ತಿದ್ದಂತೆ ತನುಶ್ರೀಯ ಕಣ್ಣೀರು ಕೋಡಿ ಹರಿಯುತ್ತಿತ್ತು. ಈ ಎಲ್ಲ ಘಟನೆಗಳಿಂದ ಮನೆಯ ವಾತಾವರಣ ಉಸಿರುಗಟ್ಟುತ್ತಾ ಹೊರಟಿತ್ತು. ಒತ್ತಡಮಯ ಸ್ಥಿತಿಗಳಿಂದ ಕೂಡಿದ ದಿನಚರಿ ಸಂಬಂಧದ ಮಾಧುರ್ಯವನ್ನು ಹೀರುತ್ತಾ ಹೊರಟಿತ್ತು. ದಂಪತಿಗಳ ನಡುವೆ ಪ್ರೀತಿಯ ವಿಷಯಗಳಿಗಿಂತ ಹೆಚ್ಚಾಗಿ ಇತರ ವಿಷಯಗಳ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿತ್ತು.
ಸಾಮಾನ್ಯವಾಗಿ ಮೌನವಾಗಿರುತ್ತಿದ್ದ ತನುಶ್ರೀ ಈಗ ಎಂದಾದರೊಮ್ಮೆ ವಿಜಯ್ ನೊಂದಿಗೆ ವಾದ ವಿವಾದ ಕೂಡ ಮಾಡುತ್ತಿದ್ದಳು. ಒಂದು ಸಲ ಅವಳ ಸಹನಾಶಕ್ತಿ ಮೇರೆ ಮೀರಿ, “ಈ ದೈನಂದಿನ ಕಿರಿಕಿರಿ ನನ್ನಿಂದ ಸಹಿಸಿಕೊಳ್ಳಲಾಗುತ್ತಿಲ್ಲ ವಿಜಯ್. ಆಫೀಸಿನಿಂದ ದಣಿದು ಬಂದು, ಮನೆಯಲ್ಲಿ ಇದೆಲ್ಲವನ್ನು ಕೇಳಿಸಿಕೊಳ್ಳಬೇಕು. ಅಡುಗೆ ಮನೆಗೆ ಹೋಗಿ ಅತ್ತೆಗೆ ಸಹಾಯ ಮಾಡಬೇಕು ಅಂದ್ಕೊತೀನಿ. ಆದರೆ ಅವರು ಏನೇನೋ ಮಾತಾಡ್ತಾರೆ ಅಂತ ಹೆದರಿಕೆ ಆಗುತ್ತೆ. ನಾನು ಎಲ್ಲಿಯ ತನಕ ಸುಮ್ಮನಿರಬೇಕು? ನನಗೆ ಒಂದೇ ಕೆಲಸವಂತೂ ಇಲ್ಲವಲ್ಲ. ರಜೆಯ ದಿನ ಕೂಡ ದೇಹಕ್ಕೆ ವಿಶ್ರಾಂತಿ ಇಲ್ಲ, ಮನಸ್ಸಿಗೂ ಕೂಡ. ನೀವೇ ಅಮ್ಮನಿಗೆ ತಿಳಿಸಿ ಹೇಳಿ. ಇಲ್ಲೀ ನಾವು ಪ್ರತ್ಯೇಕವಾಗಿರಲು ವ್ಯವಸ್ಥೆ ಮಾಡಿ…..” ಎಂದು ಹೇಳಿದಳು.
“ನಾನು ಅಮ್ಮನಿಗೆ ತಿಳಿಸಿ ಹೇಳ್ತೀನಿ ತನುಶ್ರೀ, ಆದರೆ ಏನು ಮಾಡಲಿ….. ಅವರು ಅಮ್ಮ ನಮಗೆ ಕೆಟ್ಟವರಂತೂ ಅಲ್ಲ…. ಆದರೆ ಹಳೆಯ ವಿಚಾರದವರು…. ನೀನು ಅವರ ಮಾತುಗಳ ಬಗ್ಗೆ ಹೆಚ್ಚು ಗಮನ ಕೊಡಬೇಡ.”
“ಎಷ್ಟು ದಿನ ಗಮನ ಕೊಡದೇ ಇರಲಿ ವಿಜಯ್. ಅವರ ಮಾತುಗಳು ಕಿವಿಗೆ ಬಿದ್ದರೆ ಹೃದಯದ ಬೇಗೆ ಹೆಚ್ಚಿಸುತ್ತವೆ. ಅದೆಷ್ಟು ಸಲ ನಿರ್ಲಕ್ಷ್ಯ ಮಾಡಲಿ ಹೇಳಿ. ದಣಿದು ಹೋದ ಮೆದುಳು ರೋಸಿ ಹೋಗುತ್ತದೆ. ಇಂತಹ ಉಸಿರುಗಟ್ಟಿಸುವ ವಾತಾವರಣದಲ್ಲಿ ಎಷ್ಟು ದಿನ ಇರಲು ಸಾಧ್ಯ…….?”
“ಅವರು ಅಮ್ಮ….. ಹೃದಯದಿಂದ ಕೆಟ್ಟವರಾಗಿರಲಿಕ್ಕಿಲ್ಲ. ನಮ್ಮನ್ನು ಪ್ರೀತಿಸುತ್ತಿರಲೂಬಹುದು.”
“ಆದರೆ ಅವರ ಮಾತುಗಳನ್ನು ಕೇಳಿಸಿಕೊಂಡರೆ ಹೇಗನ್ನಿಸುತ್ತೆ ಅಂತ ನಿಮಗೆ ಹೇಗೆ ಗೊತ್ತಾಗುತ್ತೆ? ದಿನ ದಿನ ಅಂತಹ ಕಟು ಮಾತುಗಳನ್ನು ಕೇಳಿಸಿಕೊಳ್ಳಲಾಗುವುದಿಲ್ಲ. ಅವರ ಮಾತುಗಳ ಮೇಲೆ ಅವರು ನಿಯಂತ್ರಣ ಹೇರಿಕೊಳ್ಳುವುದು ಅವಶ್ಯ. ಅದು ಅವರ ಸ್ವಭಾವ ಮನುಷ್ಯ ತನ್ನ ಅಭ್ಯಾಸ ಬದಲಿಸಿಕೊಳ್ಳಬಹುದು. ಆದರೆ ಸ್ವಭಾವ ಬದಲಿಸಿಕೊಳ್ಳಲಾಗದು. ಅವರ ಜೊತೆಗೆ ನನಗೆ ಹೊಂದಾಣಿಕೆ ಆಗುವುದಿಲ್ಲ. ಅವರ ಜೊತೆ ಇಲ್ಲಿ ಇರಲು ಆಗುವುದಿಲ್ಲ,” ತನುಶ್ರೀ ನಿರ್ಧಾರ ಕೈಗೊಂಡವಳಂತೆ ಹೇಳಿಬಿಟ್ಟಳು.
“ಇದೇನು ಹೇಳುತ್ತಿರುವೆ ತನು….. ನಾನು ನಿನಗೆ ಈ ಕುರಿತಂತೆ ಅದೆಷ್ಟೋ ಸಲ ಸ್ಪಷ್ಟವಾಗಿ ಹೇಳಿರುವೆ. ನಾನು ಅವರಿಗೆ ಏಕೈಕ ಮಗ. ಅವರಿಂದ ಪ್ರತ್ಯೇಕವಾಗಿ ಇರಲು ಸಾಧ್ಯವಿಲ್ಲ.”
“ಅತ್ತೆಯ ಮಾತುಗಳು ಇಷ್ಟು ಕಠೋರವಾಗಿರುತ್ತವೆಂದು ನೀವು ನನಗೆ ಮೊದಲೇ ಹೇಳಿರಲಿಲ್ಲ. ಬೇರೆ ವಿಷಯಗಳೊಂದಿಗೆ, ಬೇರೆ ದಿನಚರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ಕಠೋರವಾಗಿ, ಕೆಟ್ಟದ್ದಾಗಿ ಮಾತನಾಡುವವರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟಕರ ವಿಜಯ್.
“ಪ್ರೀತಿಯ ಒಂದೆರಡು ಮಾತೂ ಕೂಡ ಅವರ ಹತ್ತಿರವಿಲ್ಲ. ಯಾವಾಗ ನೋಡಿದರೂ ಕೆಟ್ಟ ಮಾತುಗಳನ್ನೇ ಕೇಳಿಸಿಕೊಳ್ಳಬೇಕು. ನಾನು ಅಂಥದ್ದೇನು ಕೆಟ್ಟದಾಗಿ ನಡೆದುಕೊಂಡಿರುವೆ ನೀವೇ ಹೇಳಿ,” ಎನ್ನುತ್ತಾ ಅವಳ ಕಂಠ ತುಂಬಿಬಂದಿತು.
ವಿಜಯ್ ಮಾನಸಿಕ ಒತ್ತಡಕ್ಕೆ ಸಿಲುಕಿಹೋದ. ತಾಯಿ ತನ್ನ ಸ್ವಭಾವ ಬದಲಿಸಿಕೊಳ್ಳಲು ಸಿದ್ಧರಿರಲಿಲ್ಲ. ತನುಶ್ರೀ ಕೂಡ ಇತ್ತೀಚೆಗೆ ವಿಜಯ್ ಮುಂದೆ ತನ್ನ ಆಕ್ರೋಶ ಹೊರಹಾಕುತ್ತಿದ್ದಳು.
ಏನು ಮಾಡಬೇಕೆಂದು ವಿಜಯ್ ಗೆ ಹೊಳೆಯುತ್ತಿರಲಿಲ್ಲ. ಸಮಸ್ಯೆಗೆ ಯಾವುದೇ ಪರಿಹಾರ ಕಾಣಿಸುತ್ತಿರಲಿಲ್ಲ ಅವನಿಗೆ. ಬೇರೆ ಮನೆ ಮಾಡಿದರೆ ಸಂಬಂಧಿಕರು, ಸಮಾಜ ಏನು ಹೇಳಬಹುದು ಎಂಬ ಅಳುಕು ಅವನಿಗಿತ್ತು. ಮದುವೆಯ ನಂತರ ಹೆಂಡತಿಯ ಮಾತು ಕೇಳಿ ತಾಯಿ ತಂದೆಯನ್ನು ನಡುನೀರಿನಲ್ಲಿ ಕೈಬಿಟ್ಟ ಎಂಬ ಮಾತುಗಳು ಕೇಳಿಬರುತ್ತವೆ ಎಂಬ ಭೀತಿಯೂ ಅವನಿಗಿತ್ತು.
ಅವರ ಕಠೋರ ಮಾತುಗಳು ಹೇಗೆ ತನ್ನ ಜೀವನವನ್ನು ನರಕ ಮಾಡುತ್ತಿವೆ ಎನ್ನುವುದು ಅವನಿಗೆ ಅರಿವಾಗುತ್ತಿತ್ತು. ಹೆಂಡತಿ ಕೆಟ್ಟವಳಾಗಿದ್ದರೆ ಅವಳಿಗೆ ವಿಚ್ಛೇದನ ಕೊಡಬಹುದಿತ್ತು. ಆದರೆ ತಾಯಿಯ ಬಗ್ಗೆ ಏನು ಮಾಡಬೇಕು ಎಂದು ಯೋಚಿಸಿ ಯೋಚಿಸಿ ಅವನ ತಲೆ ಕೆಟ್ಟುಹೋಗುತ್ತಿತ್ತು.
ಸಂಬಂಧ ಉಳಿಸಿಕೊಳ್ಳಲು ಒಂದೇ ಕಡೆಯ ಪ್ರಯತ್ನ ಸಾಲುವುದಿಲ್ಲ ಎಂದು ಅವನಿಗೆ ಮನವರಿಕೆಯಾಗಿತ್ತು. ಕ್ರಮೇಣ ಅವನು ಹಾಗೂ ತನುಶ್ರೀ ನಡುವೆ ಜಗಳಗಳು ಶುರುವಾದವು.
ಅದಾಗಿ ಒಂದು ವರ್ಷವಾಗುತ್ತಾ ಬಂದಿತು. ಈಗ ತನುಶ್ರೀ ವಿಜಯ್‌ಗೆ, “ನಿಮಗೆ ಇದು ಇಷ್ಟೊಂದು ಕಷ್ಟ ಎನಿಸಿದರೆ, ನಾವಿಬ್ಬರೂ ನಮ್ಮ ದಾರಿ ಬದಲಿಸಿಕೊಳ್ಳಬಹುದು,” ಎಂದು ಹೇಳತೊಡಗಿದಳು. ಅವಳ ಮಾತು ಕೇಳಿ ಅವನು ದಿಗ್ಮೂಢನಾದ. ಚಿಕ್ಕಪುಟ್ಟ ವಿಷಯಗಳಿಗಾಗಿ ಇಷ್ಟೊಂದು ದೊಡ್ಡ ನಿರ್ಧಾರ ಹೇಗೆ ತೆಗೆದುಕೊಂಡಳೆಂದು ಯೋಚಿಸತೊಡಗಿದ.
ಸಿಟ್ಟಿನ ಭರದಲ್ಲಿ ಅವನು ಬಹಳ ದಿನಗಳವರೆಗೂ ತನುಶ್ರೀಗೆ ಫೋನ್ ಕೂಡ ಮಾಡಲಿಲ್ಲ. ಇಂದು ಬಹಳ ದಿನಗಳ ಕಾಲ ಅವನ ಮೆದುಳು ಶಾಂತವಾದಾಗ, ಅವಳಿಗೆ ಫೋನ್ ಮಾಡಿದಾಗ ಅವಳ ಉತ್ತರ ಮೊದಲು ಹೇಗಿತ್ತೋ, ಈಗಲೂ ಹಾಗೆಯೇ ಇತ್ತು.
ಚಿಕ್ಕ ಪುಟ್ಟ ಮಾತುಗಳು ಅವನ ಜೀವನದಲ್ಲಿ ಎಷ್ಟೊಂದು ಕ್ಲಿಷ್ಟಕರ ಸ್ಥಿತಿಯನ್ನು ಉಂಟು ಮಾಡಿದ್ದವೆಂದರೆ, ಅದಕ್ಕೆ ಅವನಿಗೆ ಯಾವುದೇ ಪರಿಹಾರಗಳು ಕಾಣಿಸುತ್ತಿರಲಿಲ್ಲ. ತನ್ನ ವೈವಾಹಿಕ ಜೀವನವನ್ನು ಹೇಗೆ ಕಾಪಾಡಿಕೊಳ್ಳಬೇಕು, ಖಿನ್ನ ಮನಸ್ಸಿನಿಂದ ಅವನು ಎದ್ದು ಕುಳಿತ. ಆಫೀಸಿನಿಂದ ಹೊರಗೆ ಬಂದ. ಆದರೆ ಮನೆಗೆ ಹೋಗುವ ಮನಸ್ಸಾಗಲಿಲ್ಲ. ಏನನ್ನೋ ಯೋಚಿಸಿ ಅವನು ತನ್ನ ಗೆಳೆಯ ಸತೀಶ್‌ನ ಮನೆ ಕಡೆಗೆ ಹೊರಟ. ಸತೀಶ್ ಅವನ ಸಮಸ್ಯೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿದ್ದ.
“ಅಂದರೆ ತನುಶ್ರೀ ಪ್ರತ್ಯೇಕವಾಗಿರುವುದರ ಹೊರತಾಗಿ ಯಾವುದೇ ಪರಿಸ್ಥಿತಿಯಲ್ಲಿ ವಾಪಸ್ ಬರಲು ಸಿದ್ಧಳಿಲ್ಲ……” ಕಾಫಿ ಕಪ್‌ನ್ನು ಮೇಜಿನ ಮೇಲಿಡುತ್ತಾ ಸತೀಶ್ ಹೇಳಿದ.
“ಅದ್ಹೇಗೆ ಬರುತ್ತಾಳೆ ಸತೀಶ್….. ಅಮ್ಮನ ಧೋರಣೆಯೇ ಹಾಗಿದೆಯಲ್ಲ. ಅವರು ಏನನ್ನೂ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಸಮಸ್ಯೆ ಹೇಗಿದೆಯೋ ಹಾಗೆಯೇ ಇದೆ. ಅದರಲ್ಲಿ ಯಾವ ಬದಲಾವಣೆ ಆಗಿಲ್ಲ. ಅಮ್ಮನ ಕಟು ಮಾತುಗಳು, ವರ್ತನೆ ಯಾವುದರ ಮೇಲೂ ಹಿಡಿತವಿಲ್ಲ. ಅವರ ವಿಚಾರಗಳನ್ನು ದಾಟಿ ಹೋಗುವುದು ತನುಶ್ರೀಗೆ ಅಸಾಧ್ಯವೇ ಸರಿ.”
“ನಾನೊಂದು ಮಾತು ಹೇಳ್ಲಾ…….?”
“ಅದೇನು ಹೇಳಪ್ಪಾ….,” ಎಂದು ಅವನ ಕಡೆ ನೋಡತೊಡಗಿದ.
“ನೀನು ಸದ್ಯ ತನುಶ್ರೀ ಮಾತನ್ನೇಕೆ ನಡೆಸಿಕೊಡಬಾರದು. ಹೆಚ್ಚು ದೂರ ಹೋಗಬೇಡ. ಅದು ಎಷ್ಟು ದೂರ ಅಂದರೆ ತನುಶ್ರೀಗೆ ಅಮ್ಮನ ಮಾತುಗಳು ಕೇಳಿಸಬಾರದು…..” ಎಂದು ಹೇಳುತ್ತಾ ಅವನು ಮಾತು ಮುಂದುವರಿಸಿದ, “ಆ ಮನೆ ಸಮೀಪದಲ್ಲೇ ಒಂದು ಮನೆ ಮಾಡು. ಹಾಗೆ ಮಾಡಿ ನಿನ್ನ ಕುಟುಂಬ ಉಳಿಸಿಕೊ. ನೀನು ಹಾಗೂ ತನುಶ್ರೀ ಜೊತೆಗೇ ಇದ್ದರೆ ಪರಸ್ಪರರ ಪ್ರೀತಿ ಹಾಗೂ ಆಕರ್ಷಣೆಯಲ್ಲಿ ಬಂಧಿಯಾಗಿ ಸಮಸ್ಯೆಗೆ ಪರಿಹಾರ ಕೂಡ ಕಂಡುಕೊಳ್ಳಬಹುದು.
“ಹೀಗೆ ಹತ್ತಿರ ಇದ್ದರೆ ಸಮಸ್ಯೆ ಇನ್ನಷ್ಟು ಕ್ಲಿಷ್ಟಕರವಾಗುವುದು. ದೂರ ದೂರ ಇದ್ದು ನಿಮ್ಮೆಲ್ಲರ ಸಂಬಂಧಗಳು ನಕಾರಾತ್ಮಕ ರೂಪ ಪಡೆದುಕೊಳ್ಳುತ್ತಿವೆ. ಅಂದಹಾಗೆ ನೀನು ಒತ್ತಾಯಪೂರ್ವಕವಾಗಿ ತನುಶ್ರೀಯನ್ನು ಎಲ್ಲರ ಜೊತೆಗಿರಲು ಒತ್ತಡ ಹೇರಲು ಸಾಧ್ಯವಿಲ್ಲ. ಇವೆಲ್ಲ ತಂತಮ್ಮ ಇಚ್ಛೆಗನುಗುಣವಾಗಿ ಆಗಬೇಕು ಹಾಗೂ ಅವರಿಬ್ಬರ ಸಂಬಂಧ ತಂತಾನೇ ಸುಧಾರಣೆಯಾಗಬೇಕು. ಇಲ್ಲದಿದ್ದರೆ ಹೀಗೆಯೇ ಇರುವುದರಿಂದ ಏನು ಲಾಭ…..?”
“ಆದರೆ ಜನ ಏನನ್ನುತ್ತಾರೆ ಸತೀಶ್….. ಸಂಬಂಧಿಕರು, ಸಮಾಜ….. ತಾಯಿ ತಂದೆ ದುಃಖಿತರಾಗಬಹುದು. ಅದು ಬೇರೆ ಮಾತು,” ವಿಜಯ್ ಯಾವುದೋ ಗೊಂದಲದಲ್ಲಿ ಸಿಲುಕಿದಂತೆ ಮಾತನಾಡಿದ.
“ನೀನು ಕೂಡ ಅದೇ ಮಾತು ಆಡ್ತಿರುವೆ. ನಿನಗೆ ಬೇರೆಯವರ ಚಿಂತೆ ಇದೆಯೋ ಅಥವಾ ನಿನ್ನ ಸಂಸಾರ ಉಳಿಸಿಕೊಳ್ಳುವ ಚಿಂತೆಯೋ? ಮೊದಲು ಒಂದು ಹೆಜ್ಜೆ ಮುಂದಿಡು. ನಂತರ ಮುಂದಿನದರ ಬಗ್ಗೆ ಆಮೇಲೆ ಯೋಚಿಸು. ನೀನು ಅಮ್ಮ ಅಪ್ಪನನ್ನಂತೂ ಬಿಟ್ಟುಬಿಡುತ್ತಿಲ್ಲ. ಅವರಿಂದ ಸ್ವಲ್ಪ ದೂರದಲ್ಲಿಯೇ ಇರ್ತೀಯಾ…. ಅವರು ಕರೆದಾಗ ತಕ್ಷಣ ಅಲ್ಲಿಗೆ ಹೋಗಬಹುದು.”
ಸತೀಶ್ ಹೇಳುತ್ತಿರುವುದು ಅವನಿಗೆ ಅರ್ಥವಾಯಿತು. ಮರುದಿನವೇ ಅವನು ತನುಶ್ರೀಯನ್ನು ಭೇಟಿಯಾಗಲು ಅವಳ ಆಫೀಸಿಗೆ ಹೋದ. ತನುಶ್ರೀಗೆ ಅದರಲ್ಲಿ ಯಾವುದೇ ತೊಂದರೆ ಎನಿಸಲಿಲ್ಲ. ವಿಜಯ್ ಸ್ವಲ್ಪ ದೂರದಲ್ಲಿಯೇ ಒಂದು ಮನೆ ನೋಡಿ, ಅಡ್ವಾನ್ಸ್ ಕೂಡ ಕೊಟ್ಟ. ಈಗ ತಾಯಿ ತಂದೆಗೆ ಈ ವಿಷಯ ತಿಳಿಸಬೇಕಿತ್ತು.
ವಿಜಯ್‌ನ ಮಾತು ಕೇಳಿಸಿಕೊಳ್ಳುತ್ತಿದ್ದಂತೆ ತಾಯಿ ಒಮ್ಮೆಲೆ ಬಿರುಗಾಳಿ ಎಬ್ಬಿಸಿಬಿಟ್ಟರು. ಅವಳಿಂದ ಆರಂಭದಲ್ಲಿಯೇ ಇಂತಹ ಲಕ್ಷಣಗಳು ಕಂಡುಬಂದಿದ್ದವು. ದೊಡ್ಡವರ ಮಾತು ಕೇಳಿಸಿಕೊಂಡು ಅದಕ್ಕೆ ತಕ್ಕಂತೆ ಇರುವ ಬದಲು ತಾನೇ ತವರಿಗೆ ಹೋಗಿ ಕುಳಿತುಬಿಟ್ಟಳು. ಅವಳು ತಾಯಿ ಮಗನನ್ನು ಅಗಲಿಸಿಯೇ ಬಿಡ್ತಾಳೆ ಅಂತ ನನಗನ್ನಿಸಿತ್ತು. ಈಗ ಅದು ಸತ್ಯವಾಗಿ ಪರಿಣಮಿಸಿತು. ನೀನು ಎಂತಹ ಮಗ? ಹೆಂಡತಿಯ ಮಾತು ಕೇಳಿ ಅಮ್ಮಅಪ್ಪನನ್ನು ಬಿಟ್ಟು ಹೋಗಲು ತಯಾರಾದೆ. ನನ್ನ ಮುಂದೆ ಈ ವಿಷಯ ಹೇಳಲು ನಿನಗೆ ನಾಚಿಕೆ ಆಗೋದಿಲ್ವೇ……?”
ಅಮ್ಮನಿಗೆ ಏನೇನು ಮಾತು ಬರುತ್ತಿದ್ದವೋ ಅವೆಲ್ಲವನ್ನೂ ಅವರು ಮಗನ ಮುಂದೆ ಉದುರಿಸುತ್ತಲೇ ಇದ್ದರು. ಅಮ್ಮನಿಗೆ ಎದುರುತ್ತರ ಕೊಡಬೇಕೆಂದು ಅವನಿಗೂ ಅನಿಸುತ್ತಿತ್ತು. ಆದರೆ ಅವನು ಅಮ್ಮನ ಮುಂದೆ ಅಂತಹ ಮಾತಾಡಿ ಅವರು ಇನ್ನಷ್ಟು ಕೆರಳಿ ಮಾತಾಡುವಂತೆ ಅವಕಾಶ ಮಾಡಿ ಕೊಟ್ಟಂತಾಗುತ್ತದೆ ಎಂದು ಸುಮ್ಮನಾದ. ತನ್ನ ಈ ನಿರ್ಧಾರದಿಂದಾಗಿ ಅವರಿಗೆ ಬಹಳ ದುಃಖವಾಗಿರಬೇಕು. ಆದರೆ ಇದರ ಹಿಂದೆ ತಮ್ಮದೂ ತಪ್ಪಿದೆ ಎಂದು ಅವರಿಗೆ ಅರ್ಥವಾಗಿಲ್ಲ ಎಂದುಕೊಂಡ.
ತಂದೆ ಕೂಡ ಈ ಕುರಿತಂತೆ ಏನನ್ನೂ ಹೇಳದೆ ತಮ್ಮ ಹಾವಭಾವಗಳಿಂದ ತಮ್ಮ ಅತೃಪ್ತಿ ವ್ಯಕ್ತಪಡಿಸಿ, ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ವಿಜಯ್ ಕೂಡ ತನ್ನ ನಿರ್ಧಾರಕ್ಕೆ ಬದ್ಧನಾಗಿ ಹೆಂಡತಿಯ ಜೊತೆಗೆ ಬೇರೆ ಮನೆ ಮಾಡಿಕೊಂಡ. ಅವನು ಮನೆಯಿಂದ ಒಂದೇ ಒಂದು ಸಾಮಾನು ಕೂಡ ತೆಗೆದುಕೊಂಡು ಹೋಗಲಿಲ್ಲ. ಕುಟುಂಬಕ್ಕೆ ಎಷ್ಟು ಬೇಕೋ ಅಷ್ಟೂ ಸಾಮಗ್ರಿಗಳನ್ನು ಹೊಸದಾಗಿಯೇ ಖರೀದಿಸಿಕೊಂಡು ಬಂದರು. ಫರ್ನೀಚರ್ ಮನೆ ಮಾಲೀಕರದ್ದೇ ಇದ್ದುದರಿಂದ ಅವನ್ನು ಹೊಸದಾಗಿ ಖರೀದಿಸುವ ಪ್ರಸಂಗ ಬರಲಿಲ್ಲ.
ವಿಜಯ್ ತನುಶ್ರೀ ಕೌಟುಂಬಿಕ ಜೀವನ ಯಶಸ್ವಿಯಾಗಿ ಸಾಗತೊಡಗಿತು. ಅವನು ಆಫೀಸಿನಿಂದ ಬರುತ್ತಿದ್ದಂತೆ ಅಮ್ಮಅಪ್ಪನ ಬಳಿ ಹೋಗಿ ಅವರೊಂದಿಗೆ ಕಾಫಿ ಕುಡಿಯುತ್ತಿದ್ದ. ಬಳಿಕ ತನ್ನ ಮನೆಗೆ ಬರುತ್ತಿದ್ದ.
ಆರಂಭದ ದಿನಗಳಲ್ಲಿ ಒಂದಿಷ್ಟು ಅತೃಪ್ತಿ, ಅಷ್ಟಿಷ್ಟು ಹೆದರಿಕೆಯ ಕಾರಣದಿಂದ ತನುಶ್ರೀ ಅತ್ತೆ ಮಾವನನ್ನು ಭೇಟಿ ಆಗಲು ಹೋಗುತ್ತಿರಲಿಲ್ಲ. ಕ್ರಮೇಣ ಅವಳೂ ಹೋಗಲು ಆರಂಭಿಸಿದಳು. ರಜೆ ದಿನಗಳು ಹಾಗೂ ಭಾನುವಾರಗಳಂದು ಅವಳು ವಿಜಯ್‌ಜೊತೆಗೆ ಅತ್ತೆ ಮಾವನನ್ನು ನೋಡಲು ಹೋಗುತ್ತಿದ್ದಳು. ಅವಳನ್ನು ನೋಡಿ ಮಾವನಂತೂ ಸುಮ್ಮನಿರುತ್ತಿದ್ದರು. ಆದರೆ ಅತ್ತೆ ಮಾತ್ರ ಅವಳನ್ನು ನೋಡುತ್ತಿದ್ದಂತೆ ಉರಿದೇಳುತ್ತಿದ್ದರು.
ಅವರು ಹೊಸ ಮನೆ ಮಾಡಿ 2 ತಿಂಗಳಾಗಿತ್ತು. ಅದೊಂದು ಬೆಳಗ್ಗೆ 8 ಗಂಟೆಗೆ ಆಫೀಸಿಗೆ ಹೋಗಲು ತಯಾರಾಗುತ್ತಿದ್ದರು. ಅಷ್ಟರಲ್ಲಿ ವಿಜಯ್‌ಗೆ ಅವರ ಅಪ್ಪನಿಂದ ಫೋನ್ ಬಂತು. ಅವರು ಗಾಬರಿಭರಿತ ಧ್ವನಿಯಲ್ಲಿ, “ನಿನ್ನ ಅಮ್ಮನಿಗೆ ಆಕ್ಸಿಡೆಂಟ್ ಆಗಿದೆ. ತಕ್ಷಣವೇ ಮನೆಗೆ ಬಾ,” ಎಂದು ಹೇಳಿದರು.
“ನಾವೀಗಲೇ ಬರ್ತೀವಿ ಅಪ್ಪ,” ಎಂದು ಹೇಳುತ್ತ ಇಬ್ಬರೂ ಗಾಬರಿಯಿಂದ ಮನೆಗೆ ಹೋದರು. ಬಳಿಕ ಅಮ್ಮನನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು.
ಅವರ ಕಾಲಿನ ಎಕ್ಸರೇ ಮಾಡಿದಾಗ ಫ್ರಾಕ್ಚರ್ ಆಗಿರುವುದು ತಿಳಿಯಿತು. ವೈದ್ಯರು ಅವರಿಗೆ ಪ್ಲಾಸ್ಟರ್ ಹಾಕಿದರು. 45 ದಿನಗಳರೆಗೂ ತೆಗೆಯಬಾರದು ಪೂರ್ಣ ವಿಶ್ರಾಂತಿಯಲ್ಲಿ ಇರಬೇಕೆಂದು ಹೇಳಿದರು. ಬಾಥ್ ರೂಮಿಗೂ ಸಹ ವೀಲ್‌ಚೇರ್‌ನಲ್ಲಿಯೇ ಕರೆದುಕೊಂಡು ಹೋಗಬೇಕೆಂದು ಹೇಳಿದರು.
ಪ್ಲಾಸ್ಟರ್ ಹಾಕಿಸಿಕೊಂಡು ಮನೆಗೆ ಕರೆದುಕೊಂಡು ಬಂದಾಗ ಸಾಕಷ್ಟು ತಡವಾಗಿತ್ತು. ತನುಶ್ರೀ ಸಾಕಷ್ಟು ದಣಿದಿದ್ದಾಗ್ಯೂ ಎಲ್ಲರಿಗೂ ತಿಂಡಿ ತಯಾರಿಸಿದಳು. ಆ ರಾತ್ರಿ ಅವರಿಬ್ಬರೂ ಅಲ್ಲಿಯೇ ಉಳಿದರು. ಮುಂದೇನು ಎಂಬ ಚಿಂತೆ ಅವರನ್ನು ಕಾಡತೊಡಗಿತು. ಅಮ್ಮನನ್ನು ನೋಡಿಕೊಳ್ಳುವುದು ಅಪ್ಪನಿಗೊಬ್ಬರಿಗೇ ಸಾಧ್ಯವಿರಲಿಲ್ಲ.
“ನಾನು ಒಮ್ಮೆಲೆ ರಜೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾಳೆಯಿಂದ ರಿವ್ಯೂ ಇದೆ. ದೆಹಲಿಯಿಂದ ಬಾಸ್ ಬೇರೆ ಬರಲಿದ್ದಾರೆ. ಕೆಲವು ದಿನಗಳ ಮಟ್ಟಿಗೆ ನಾನು ವ್ಯಸ್ತವಾಗಲಿದ್ದೇನೆ. ಅದಕ್ಕಾಗಿ ನಾನು ಎಷ್ಟೊಂದು ದಿನದಿಂದ ಸಿದ್ಧತೆ ನಡೆಸುತ್ತಿದ್ದೇನೆ,” ಎಂದು ವಿಜಯ್ ವಿಶಮ ಧ್ವನಿಯಲ್ಲಿ ಹೇಳಿದ.
ವಿಜಯ್ ಗೊಂದಲದಲ್ಲಿರುವುದನ್ನು ನೋಡಿ ತನುಶ್ರೀ, “ವಿಜಯ್ ನಾವು ಹೀಗೆ ಮಾಡಬಹುದು. ನನ್ನ ರಜೆಗಳು ಸಾಕಷ್ಟು ಹಾಗೆಯೇ ಉಳಿದಿವೆ. ನಾಳೆಯಿಂದ ನಾನು 15 ದಿನಗಳ ಮಟ್ಟಿಗೆ ರಜೆ ಹಾಕ್ತೀನಿ. ಅಲ್ಲಿಯವರೆಗೆ ರಿವ್ಯೂ ಕೂಡ ಮುಗಿದಿರುತ್ತದೆ. ಆಗ ನೀವು ರಜೆ ತೆಗೆದುಕೊಳ್ಳಲು ಪ್ರಯತ್ನಿಸಿ. ಆ ಬಳಿಕ ನಿಮ್ಮ ಅಕ್ಕನಿಗೆ ಕೇಳಿ…. ಅವರು ಒಂದು ವಾರದ ಮಟ್ಟಿಗೆ ಬರಲು ಆಗುತ್ತಾ ಅಂತ. ಇಲ್ಲದಿದ್ದರೆ ನಾನೇ ಪುನಃ ರಜೆ ಹಾಕಲು ಪ್ರಯತ್ನಿಸ್ತೀನಿ,” ಎಂದು ಹೇಳಿದಳು.
ವಿಜಯ್ ಅಚ್ಚರಿಯಿಂದ ತನುಶ್ರೀಯ ಕಡೆಗೆ ನೋಡಿದ. ಅವಳ ಮುಖದಲ್ಲಿ ಅಮ್ಮನ ತೊಂದರೆಗೆ ಸ್ಪಂದಿಸುವ ಭಾವ ಎದ್ದು ಕಾಣುತ್ತಿತ್ತು. ಅಮ್ಮನಿಗೇಕೆ ಇವಳ ಈ ಭಾವನೆ ಅರ್ಥವಾಗುತ್ತಿಲ್ಲ ಎಂದೂ ಅವನಿಗೆ ಅನಿಸತೊಡಗಿತು. ಅಮ್ಮ ತನುಶ್ರೀಯಂತಹ ಇಂದಿನ ಪೀಳಿಗೆಯ ಸೊಸೆಯಂದಿರನ್ನು ತಮ್ಮದೇ ಯುಗದ ಅತ್ತೆಯರ ಕನ್ನಡಕದಿಂದ ನೋಡುತ್ತಾರೆ. ಹಾಗೂ ಅವಳನ್ನು ತಮ್ಮ ಯುಗದ ಸೊಸೆಯರೊಂದಿಗೆ ಹೋಲಿಸಿ ಮಾತಾಡುತ್ತಾರೆ. ಆದರೆ ಅವರ ಯುಗದ ಸಮಾಜಕ್ಕೂ, ಶಿಕ್ಷಣಕ್ಕೂ, ಹುಡುಗ ಹುಡುಗಿಯರ ಪಾಲನೆ ಪೋಷಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಅವರು ಈ ಬಗ್ಗೆ ಯೋಚಿಸಲು ಸ್ವಲ್ಪ ಮನಸ್ಸು ಮಾಡುವುದಿಲ್ಲ.
ಇಂತಹ ಸಂದಿಗ್ಧ ಸಮಯದಲ್ಲಿ ತನುಶ್ರೀಯ ಸಹಕಾರದ ಬಗ್ಗೆ ಅವನ ಮನಸ್ಸು ತುಂಬಿಬಂತು. ಅಮ್ಮ ಅವಳ ಬಗ್ಗೆ ಆಡದ ಮಾತುಗಳೇ ಇಲ್ಲ. ಅವನು ತನುಶ್ರೀಯತ್ತ ಹೆಮ್ಮೆಯಿಂದ ನೋಡುತ್ತಾ, “ನಿನಗೆ ರಜೆ ತೆಗೆದುಕೊಳ್ಳಲು ಯಾವುದೇ ಸಮಸ್ಯೆ ಆಗುವುದಿಲ್ಲ ತಾನೇ…..?” ಎಂದು ಕೇಳಿದ.
“ಇಲ್ಲ ಇಲ್ಲ…. ಅಂತಹ ಸಮಸ್ಯೆಯೇನೂ ಇಲ್ಲ. ಅಗತ್ಯವಿದ್ದಾಗ ರಜೆ ಹಾಕದಿದ್ದರೆ ಅವುಗಳಿಂದ ಏನು ಪ್ರಯೋಜನ…..?” ಎಂದಳು.
ರಾತ್ರಿ ಅವರು ನಿಶ್ಚಿಂತೆಯಿಂದ ಮಲಗಿಕೊಂಡರು. ರಜೆ ಪಡೆದು ತನುಶ್ರೀ ತನುಮನದಿಂದ ಅತ್ತೆಯ ಸೇವೆ ಮಾಡಿದಳು. ಅದು ಆರಂಭದ ಸಮಯ ಹಾಗಾಗಿ ಬಹಳ ಕಷ್ಟಕರ ಹಾಗೂ ಸೂಕ್ಷ್ಮವಾಗಿಯೇ ಹೆಚ್ಚು ಮುತುವರ್ಜಿಯಿಂದ ಅವರನ್ನು ನೋಡಿಕೊಳ್ಳಬೇಕಿತ್ತು. ತನುಶ್ರೀಯ ನಿಶ್ಚಲ ಮನಸ್ಸಿನ ಸೇವೆಯ ಬಗ್ಗೆ ಅತ್ತೆಯ ಮನಸ್ಸು ಒಂದಿಷ್ಟು ಕರಗುತ್ತಿತ್ತು. ಅಂದಹಾಗೆ ಅದು ಅವಳ ಕರ್ತವ್ಯ ಕೂಡ ಎನ್ನುವುದು ಅವರ ಭಾವನೆಯಾಗಿತ್ತು.
15 ದಿನಗಳ ಬಳಿಕ ತನುಶ್ರೀ ಆಫೀಸಿಗೆ ಹೋಗಲು ಆರಂಭಿಸಿದಳು. ಈಗ ವಿಜಯ್ ರಜೆ ಪಡೆದುಕೊಂಡಿದ್ದ. ವಿಜಯ್ ರಜೆ ಮುಗಿಯುತ್ತಿದ್ದಂತೆ ಅಕ್ಕ ಒಂದು ವಾರದ ಮಟ್ಟಿಗೆ ಬಂದು ತಾಯಿಯನ್ನು ನೋಡಿಕೊಳ್ಳಲು ಊರಿಗೆ ಬಂದಳು. ಅಕ್ಕ ಹೋಗುತ್ತಿದ್ದಂತೆ ತನುಶ್ರೀ ಪುನಃ ರಜೆ ಪಡೆದುಕೊಂಡಳು.
ಅತ್ತೆ ಈಗ ಸಾಕಷ್ಟು ಮಟ್ಟಿಗೆ ಹುಷಾರಾಗಿದ್ದರು. ಯಾರ ಸಹಾಯವಿಲ್ಲದೆ ಅವರು ಬಾಥ್ ರೂಮಿಗೆ ಹೋಗತೊಡಗಿದ್ದರು. ವಿಜಯ್‌ತನುಶ್ರೀಯ ಬಗ್ಗೆ ಕೃತಜ್ಞತೆಯ ಭಾವ ತಾಳಿದ್ದ. ಅವಳು ಇಂತಹ ಕ್ಲಿಷ್ಟಕರ ಸಮಯದಲ್ಲಿ ಪೂರ್ವಾಗ್ರಹ ತೊರೆದು ಪರಿಪೂರ್ಣ ಮನಸ್ಸಿನಿಂದ ತಾಯಿಯ ಸೇವೆ ಮಾಡಿದ್ದಳು ಹಾಗೂ ಮಾಡುತ್ತಿದ್ದಳು. ಈಗ ಅಮ್ಮನಿಗೂ ತನುಶ್ರೀಯ ಸೇವಾ ಮನೋಭಾವ ಅವರ ಮನಸ್ಸು ತಟ್ಟಿತ್ತು.
ತನುಶ್ರೀಯ ಅಗತ್ಯಗಳ ಬಗ್ಗೆ ಎಂದೂ ಗಮನ ಕೊಡದ ಅಮ್ಮ ಈಗ ತಿಂಡಿ ತಿಂದೆಯಾ, ಕಾಫಿ ಕುಡಿದೆಯಾ? ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದುಕೋ. ದಣಿವು ನಿವಾರಿಸಿಕೊ ಎಂದೆಲ್ಲ ಹೇಳಿದಾಗ ವಿಜಯ್‌ಗೆ ಬಹಳ ಖುಷಿಯಾಗುತ್ತಿತ್ತು.
ನಾಳೆಯಿಂದ ತನುಶ್ರೀಯ ರಜೆಗಳು ಮುಗಿಯುತ್ತಿದ್ದವು. ಅವಳು ಮರುದಿನ ಆಫೀಸಿಗೆ ಹೋಗಬೇಕಿತ್ತು. ಅತ್ತೆ ಪರಿಪೂರ್ಣವಾಗಿ ಆರೋಗ್ಯವಾಗಿದ್ದರು. ರಾತ್ರಿಯ ಊಟ ಮುಗಿಸಿ ವಿಜಯ್ ತನುಶ್ರೀ ತಮ್ಮ ಮನೆಗೆ ಹೋಗಲು ಸಿದ್ಧರಾದರು. ತನುಶ್ರೀ ಅತ್ತೆಯನ್ನು ಮಾತನಾಡಿಸಿ ಹೊರಬಂದಳು.
ವಿಜಯ್ ಅಮ್ಮನನ್ನು ಮಾತನಾಡಿಸಲೆಂದು ಕೋಣೆಗೆ ಹೋದ, “ಅಮ್ಮಾ, ನಾವೀಗ ಹೊರಡ್ತೀವಿ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ನಾವು ಆಗಾಗ ಬರ್ತಾ ಇರ್ತೀವಿ. ತನುಶ್ರೀಯ ರಜೆಗಳು ಮುಗಿದಿವೆ. ನಾಳೆಯಿಂದ ಅವಳು ಆಫೀಸಿಗೆ ಹೋಗಬೇಕಿದೆ,” ಎಂದು ಹೇಳಿದ.
“ಹೌದು ವಿಜಯ್, ತನುಶ್ರೀ ನನ್ನ ಸೇವೆಯನ್ನು ಚೆನ್ನಾಗಿಯೇ ಮಾಡಿದಳು,” ಎಂದು ಹೇಳಿದರು.
ಅವರ ಧ್ವನಿಯಲ್ಲಿ ಪಶ್ಚಾತ್ತಾಪದ ಭಾವನೆ ಎದ್ದು ಕಾಣುತ್ತಿತ್ತು, “ಅವಳನ್ನು ಅರ್ಥ ಮಾಡಿಕೊಳ್ಳಲು ಬಹುಶಃ ನಾನು ಎಡವಿದೆ ಅನಿಸುತ್ತೆ,” ಎಂದರು.
“ಇರಲಿ ಬಿಡಮ್ಮ. ಅವೆಲ್ಲ ಮಾತುಗಳು ಈಗೇಕೆ,” ಎಂದು ವಿಜಯ್ ಖುಷಿಯಿಂದ, “ನೀವು ನಮ್ಮನ್ನು ಅರ್ಥ ಮಾಡಿಕೊಂಡಿರಿ. ಇದೇ ನಮಗೆ ಖುಷಿಯ ವಿಷಯ. ತಾಯಿ ತಂದೆಯ ಸೇವೆ ಮಾಡುವುದು ನಮ್ಮ ಕರ್ತವ್ಯ ಕೂಡ ಹೌದು. ನಿಮಗೆ ಯಾವಾಗ ಅವಶ್ಯಕತೆ ಇರುತ್ತೋ ನಮ್ಮನ್ನು ಕರೆಯಿರಿ. ನಾವು ಹತ್ತಿರದಲ್ಲಿಯೇ ಇರ್ತೀವಿ,” ಎಂದು ಹೇಳಿದವನ ಧ್ವನಿಯಲ್ಲಿ ಆರ್ದ್ರತೆಯ ಭಾವವಿತ್ತು. ಅಮ್ಮನ ಕಣ್ಣುಗಳಲ್ಲೂ ಕಣ್ಣೀರು ತುಂಬಿಕೊಂಡವು.
“ವಿಜಯ್, ತನುಶ್ರೀ ನೀವು ಇಲ್ಲಿಗೇ ಬಂದುಬಿಡಿ. ಬೇರೆ ಕಡೆ ಏಕೆ ವಾಸ ಮಾಡುತ್ತೀರಿ? ಎರಡು ಪಾತ್ರೆಗಳು ಇರುವ ಕಡೆ ಅಲ್ಲಿ ಒಂದಿಷ್ಟು ಘರ್ಷಣೆ ಸಹಜ. ಆದರೆ ಇದರರ್ಥ ನಾನು ಪ್ರೀತಿಸುವುದಿಲ್ಲ ಎಂದಲ್ಲ….. ದೊಡ್ಡವರ ಮಾತನ್ನು ಅಷ್ಟು ಕೆಟ್ಟದ್ದೆಂದು ಭಾವಿಸುವುದೇಕೆ…..?” ಅಮ್ಮನ ಕಂಠದಲ್ಲಿ ಅದೇನೋ ಮಮತೆಯಿತ್ತು.
“ಓಹ್ ಅಮ್ಮಾ,” ಅವನು ಭಾವುಕನಾಗಿ ಅಮ್ಮನನ್ನು ಬಾಚಿ ತಬ್ಬಿಕೊಂಡು, “ಅಮ್ಮಾ ನೀವು ಇಷ್ಟೊಂದು ಭಾವಕರಾಗುವುದೇಕೆ? ನಾವು ನಿಮ್ಮ ಮಕ್ಕಳೇ. ನಿಮ್ಮಿಂದ ದೂರವಾಗಲು ಸಾಧ್ಯವೇ? ಒಂದಿಷ್ಟು ದೂರದಲ್ಲಿರಬೇಕು ಅಷ್ಟೆ,” ಎಂದು ಹೇಳುತ್ತಾ ಅವನು ಅಮ್ಮನ ಬೆನ್ನು ಸವರತೊಡಗಿದ.
“ಅಮ್ಮಾ, ಒಂದೇ ಮನೆಯಲ್ಲಿ ಒಂದೇ ಸೂರಿನಡಿ ವಾಸಿಸುತ್ತಿದ್ದೆ. ನಿಮಗೆ ತೀರಾ ನಿಕಟವಾಗಿಯೇ ಇದ್ದೆ. ಆದರೆ ನಿಮ್ಮ ಹೃದಯದಿಂದ ದೂರ ಇದ್ದೆ. ಸಮೀಪದಲ್ಲಿಯೇ ಇದ್ದು ದೂರ ದೂರ ಇರುವುದಕ್ಕಿಂತ, ದೂರ ಇದ್ದು ಹೆಚ್ಚು ನಿಕಟ ಆಗುವುದು ಒಳ್ಳೆಯದು ಅಮ್ಮ. ನನ್ನ ಮಾತುಗಳು ನಿಮಗೆ ಅರ್ಥ ಆಗುತ್ತದೆ ಎಂದು ಭಾವಿಸಿರುವೆ……” ಅವನು ಅಮ್ಮನಿಂದ ಬೇರ್ಪಡುತ್ತಾ ಹೇಳಿದ.
“ಜೊತೆಗಿದ್ದು ಸ್ವಲ್ಪ ದಿನಗಳ ಬಳಿಕ ಅದೇ ಉಸಿರುಗಟ್ಟು ವಾತಾವರಣ, ಸಂಬಂಧದಲ್ಲಿ ಅದೇ ಎಳೆದಾಟ, ಬಹಳ ಕಷ್ಟ ಆಗುತ್ತದೆ. ಅಮ್ಮಾ, ತನುಗೂ ನೌಕರಿಯ ಜೊತೆಗೆ ಇದೆಲ್ಲವನ್ನೂ ಸಹಿಸಿಕೊಳ್ಳುವುದು ಕಷ್ಟ. ನಾನೀಗ ಅವಳ ಮೇಲೆ ನನ್ನ ಯಾವುದೇ ಇಚ್ಛೆ ಹೇರಲು ತಯಾರಿಲ್ಲ. ನಿಮ್ಮ ಹಾಗೂ ಅವಳ ಸಂಬಂಧಕ್ಕೆ ಇನ್ನೊಂದಿಷ್ಟು ಸಮಯ ಕೊಡಿ. ಈ ಸಂಬಂಧ ಪರಿಪಕ್ವಗೊಳ್ಳಬೇಕು. ನಿಮ್ಮ ವಿಚಾರಗಳಲ್ಲಿ ಬದಲಾವಣೆಯಾಗಬೇಕು. ನಿಮಗೆ ಹೇಗೆ ಅವಳ ಮೇಲೆ ನಂಬಿಕೆ ಬಂದಿದೆಯೋ, ಅದೇ ರೀತಿ ತನುಗೂ ನಿಮ್ಮ ಮೇಲೆ ನಂಬಿಕೆ ಬರಬೇಕು.
“ಎಲ್ಲಿಯವರೆಗೆ ಅವಳು ತಾನೇ ಸ್ವತಃ ಮನೆಗೆ ಹೋಗೋಣ ಎಂದು ಹೇಳುವಳೋ ಅಲ್ಲಿಯವರೆಗೆ ನಾನು ಹೆಜ್ಜೆ ಇಡಲಾರೆ…… ಅಲ್ಲಿಯವರೆಗೂ ನೀವು ಕೂಡ ನಿರೀಕ್ಷೆ ಮಾಡಿ. ತನುಶ್ರೀಯ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಒಂದು ದಿನ ನಿಮ್ಮ ಬಗ್ಗೆ ಹಾಗೂ ನಿಮ್ಮ ಸಂಬಂಧದ ಬಗ್ಗೆ ಅವಳಿಗೆ ಖಚಿತವಾಗಿ ನಂಬಿಕೆ ಬರುತ್ತದೆ. ಆಗ ಅವಳು ನಿಮ್ಮ ಬಳಿ ಖಂಡಿತ ವಾಪಸ್‌ಬರುತ್ತಾಳೆ.
“ನನಗೆ ಈ ಎರಡೂ ಸಂಬಂಧಗಳು ಪ್ರೀತಿ ಪಾತ್ರ. ನಿಮ್ಮ ಹಾಗೂ ಅವಳ ಮಧ್ಯೆ ಪ್ರೀತಿಭರಿತ ಸಂಬಂಧ ವಿಕಸಿತಗೊಳ್ಳುತ್ತದೆಂಬ ವಿಶ್ವಾಸ ನನಗಿದೆ. ಅವಳು ನಿಮ್ಮ ಹೃದಯ ಗೆದ್ದಳು. ನಿಮಗೆ ಅವಳ ಮೇಲೆ ನಂಬಿಕೆ ಬಂದ ರೀತಿಯಲ್ಲಿ ತನುಶ್ರೀಯ ನಂಬಿಕೆ ಕೂಡ ನಿಮ್ಮ ಮೇಲೆ ವಾಪಸ್ ಒಂದೇ ಬರುತ್ತದೆ ಎಂಬ ನಂಬಿಕೆ ನನಗಿದೆ. ಆಗ ಜೊತಗಿರುವ ಖುಷಿಯೇ ಬೇರೆ ಅಮ್ಮ……” ಎಂದು ಹೇಳುತ್ತಾ ಅವನು ಎದ್ದು ನಿಂತ.
ವಿಜಯ್ ಹಿಂದೆ ತಿರುಗಿದಾಗ ಅಲ್ಲಿ ಅಪ್ಪ ನಿಂತಿದ್ದರು. ಇಂದು ಮೊದಲ ಬಾರಿ ತಾನು ಹೇಳಿದ ಮಾತಿಗೆ ಒಪ್ಪಿಗೆ ಸೂಚಿಸಿದ ಭಾವ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಆತ್ಮೀಯತೆ ಹಾಗೂ ಭರವಸೆಯ ಭಾವದಿಂದ ಅವರು ಅವನ ಭುಜ ತಟ್ಟಿದರು.
ಹೊರಗೆ ಬಂದಾಗ ತನುಶ್ರೀ ಅವನಿಗಾಗಿ ಕಾಯುತ್ತಿದ್ದಳು. ಅಮ್ಮ ಈಗಷ್ಟೇ ಕಷ್ಟದ ಸ್ಥಿತಿಯಿಂದ ಹೊರಬಂದಿದ್ದಾರೆ. ಹೀಗಾಗಿ ಅವರು ಬದಲಾಗಿದ್ದಾರೆ. ಆದರೆ ವರ್ಷಾನುವರ್ಷಗಳಿಂದ ನಡೆದುಕೊಂಡು ಬಂದ ಅಭ್ಯಾಸಗಳು ಹಾಗೂ ವಿಚಾರಗಳು ನಾಲ್ಕು ದಿನಗಳಲ್ಲಿ ಬದಲಾಗುವುದಿಲ್ಲ ಎಂಬುದು ವಿಜಯ್‌ಗೆ ಚೆನ್ನಾಗಿ ಗೊತ್ತಿತ್ತು.
ಮತ್ತೆ ಜೊತೆಗಿರಲು ಶುರು ಮಾಡಿದರೆ ಅವರಿಗೆ ತಮ್ಮ ಮಾತು ಹಾಗೂ ವಿಚಾರಗಳ ಮೇಲೆ ಹಿಡಿತ ಹೊಂದುವುದು ಕಷ್ಟಕರವಾಗುತ್ತದೆ. ತನುಶ್ರೀಯನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಇನ್ನಷ್ಟು ಸಮಯ ಕೊಡಬೇಕು. ವ್ಯರ್ಥ ಮಾತುಗಳಿಗಿಂತ ಹೆಚ್ಚಾಗಿ ಮಕ್ಕಳ ಅವಶ್ಯಕತೆಯ ಹಾಗೂ ಅವರ ಜೀವನ ಅರ್ಥ ಮಾಡಿಕೊಳ್ಳಬೇಕು. ಹಿಂದೆ ತನುಶ್ರೀಗೆ ಅಮ್ಮನ ಮಾತುಗಳು ಎಷ್ಟು ಕಹಿ ಎನಿಸುತ್ತಿದ್ದವು, ಅಲ್ವೇ? ಮುಂದೆ ಸಿಹಿಯಾಗಿ ಗೋಚರಿಸಬಹುದು.
ಅಮ್ಮ ಅಪ್ಪನನ್ನು ನೋಡಿಕೊಳ್ಳುವುದು, ಸೇವೆ ಮಾಡುದು ತನ್ನ ಕರ್ತವ್ಯ ಎಂಬ ಭಾವನೆಯಿಂದ ತನುಶ್ರೀ ಈ ಮನೆಗೆ ಬಂದಿದ್ದಾಳೆ. ಅವಳಿಗೆ ಸುಂದರ ಹಾಗೂ ಸ್ವಚ್ಚ ಸಮತೋಲಿತ ಜೀವನ ಕೊಡುವುದು ನನ್ನ ಕರ್ತ್ಯ ಎಂದು ಯೋಚಿಸುತ್ತಾ ಅವನು ಹೆಂಡತಿಯ ಜೊತೆಗೆ ಮನೆಯಿಂದ ಹೊರಗೆ ನಡೆದ.