ಭಾರತೀಯ ಪುತ್ರಿಯರು ಈ ಸಲ ಟೋಕಿಯೊ ಒಲಿಂಪಿಕ್ ಕ್ರೀಡೆಯಲ್ಲಿ ತಮ್ಮ ಅಗಾಧ ಶಕ್ತಿಯನ್ನು ಪ್ರದರ್ಶಿಸಿ ಇಡೀ ಭಾರತ ದೇಶವೇ ಅವರಿಗೆ ಜೈಕಾರ ಹಾಕುವಂತಾಯಿತು. ಕ್ರೀಡೆಯ ಬಗೆಗಿನ ಅವರ ಒಲವು ಸರ್ವರೂ ಹುಬ್ಬೇರಿಸುವಂತೆ ಮಾಡಿತು. ಈವರೆಗಿನ ಒಲಿಂಪಿಕ್ ಕ್ರೀಡಾ ಕೂಟದ ಇತಿಹಾಸದಲ್ಲಿಯೇ ಭಾರತ ಅತಿ ಹೆಚ್ಚು 7 ಪದಕ ಗಳಿಸಿತು.
ಭಾರತೀಯ ಶಟ್ಲರ್ ಪಿ.ವಿ. ಸಿಂಧು ಅವರಂತೂ ಹೊಸ ಇತಿಹಾಸವನ್ನೇ ಬರೆದರು. ಅವರು ಸಿಂಗಲ್ಸ್ ನಲ್ಲಿ ಚೀನಾದವರಾದ ಜಿಂಗ್ ಜಯಾಹೋ ಅವರನ್ನು 2೦15ರಲ್ಲಿ ಸೋಲಿಸಿ ಕಂಚಿನ ಪದಕ ಗಳಿಸಿದರು. ಕೇವಲ 52 ನಿಮಿಷದಲ್ಲಿಯೇ ಅವರು ಆಟ ಮುಗಿಸಿ ಪದಕವನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ ಸಿಂಧು ಸತತ 2 ಒಲಿಪಿಂಕ್ ಗಳಲ್ಲಿ ಪದಕ ಗಳಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡರು, 2016ರಲ್ಲಿ ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು.
ಪ್ರಸಿದ್ಧ ಮರಳು ಶಿಲ್ಪಕಲಾವಿದ ಸುದರ್ಶನ್ ಪಟ್ನಾಯಕ್ ಸಿಂಧುವಿಗೆ ವಿಶಿಷ್ಟ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದರು. ಅವರು ಪುರಿ ಸಮುದ್ರ ತೀರದ ಮರಳಲ್ಲಿ ಸಿಂಧು ಆಕೃತಿ ಮೂಡಿಸಿ ಅಭಿನಂದನೆ ಸಲ್ಲಿಸಿದರು.
ಪ್ರಬಲ ಧೈರ್ಯ ಅದೇ ರೀತಿ ಮಹಿಳಾ ಹಾಕಿ ತಂಡ ಇದೇ ಒಲಿಂಪಿಕ್ಸ್ ನಲ್ಲಿ ಅದ್ಭುತ ಕ್ರೀಡಾ ಪ್ರದರ್ಶನ ನೀಡಿ ಇಡೀ ದೇಶವನ್ನು ಗೌರವಾನ್ವಿತಗೊಳಿಸಿತು. ಟೋಕಿಯೊ ಕ್ರೀಡಾಂಗಣದಲ್ಲಿ ದೇಶದ ಪುತ್ರಿಯರ ಪ್ರಬಲ ಧೈರ್ಯ ಹಾಗೂ ಉತ್ಸಾಹ ಎಲ್ಲರ ಹೃದಯನ್ನು ಗೆದ್ದಿತು.
ಭಾರತೀಯ ಮಹಿಳಾ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಅದು ಎಷ್ಟು ಆತ್ಮವಿಶ್ವಾಸದಿಂದ ಬ್ರಿಟನ್ ನಂತಹ ಬಲಿಷ್ಠ ತಂಡವನ್ನು ಎದುರಿಸಿತೊ ಮರೆಯಲಾಗದು.
ಆಸ್ಟ್ರೇಲಿಯಾದಂತಹ ದಿಗ್ಗಜ ತಂಡವನ್ನು ಸೋಲಿಸಿ ಭಾರತೀಯ ಹಾಕಿ ತಂಡ ಸೆಮಿಫೈನಲ್ ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿತ್ತು. ಸ್ವತಃ ಪ್ರಧಾನಿಯವರೇ ತಂಡಕ್ಕೆ ಅಭಿನಂದನೆ ಸಲ್ಲಿಸಿ ಅವರ ಧೈರ್ಯವನ್ನು ಕೊಂಡಾಡಿದ್ದರು.
ಈಗ ಬಾಕ್ಸಿಂಗ್ ಬಗ್ಗೆ ಮಾತನಾಡುವುದಾದರೆ, ಲಲೀನಾ ಬೊರ್ ಗೊಹೆನ್ 69 ಕಿಲೋ ವರ್ಗದಲ್ಲಿ ಟರ್ಕಿಯ ಹೆಸರಾಂತ ಬಾಕ್ಸಿಂಗ್ ಚಾಂಪಿಯನ್ ಬುನೆನಾಜ್ ಸುರಮೇನೆಲಿ ವಿರುದ್ಧ ಸೆಣಸಿ ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯ್ತು.
ಆದರೆ ಅವರು ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಪದಕ ಗೆದ್ದ ಎರಡನೇ ಮಹಿಳಾ ಬಾಕ್ಸರ್ ಅನಿಸಿಕೊಂಡರು. ಲನೀಲಾ ಅವರಿಗಿಂತ ಮುಂಚೆ ಮೇರಿಕೋಮ್ ಅವರಷ್ಟೇ ಈ ಸಾಧನೆ ಮಾಡಿದ್ದರು. ಈ ರೀತಿಯಾಗಿ 9 ವರ್ಷಗಳ ಬಳಿಕ ಭಾರತಕ್ಕೆ ಬಾಕ್ಸಿಂಗ್‌ನಲ್ಲಿ ಪದಕ ಬಂತು.
ಅಸ್ಸಾಂನ 23 ವರ್ಷದ ಲಲೀನಾ ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಮೂರನೆಯ ಕ್ರೀಡಾಪಟು ಆಗಿದ್ದಾರೆ. ಲಲೀನಾ ಸೆಮಿ ಫೈನಲ್ ನ ಫಾರ್ಮಾದಲ್ಲಿ ಕಂಡು ಬಂದಿದ್ದರು. ಒಲಿಂಪಿಕ್ಸ್ ನಲ್ಲಿ ಸೆಮಿ ಫೈನಲ್ ತಲುಪಿ ಅದ್ಭುತ ಸಾಧನೆ ಮಾಡಿದರು. ಲಲೀನಾ ಸೆಮಿಫೈನಲ್ ನಲ್ಲಿ ಚೀನಾ ತೈಪೆಯ ಚಿನ್ ಚೆನ್‌ರನ್ನು 41 ರಿಂದ ಸೋಲಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.
ಅಡೆತಡೆಗಳ ನಡುವೆಯೂ ಉತ್ತುಂಗಕ್ಕೆ
ಹುಡುಗಿಯರು ಯಾವುದೇ ಕ್ಷೇತ್ರದಲ್ಲೂ ಕಡಿಮೆ ಏನಿಲ್ಲ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರ, ಕ್ರೀಡಾ ಕ್ಷೇತ್ರ, ರಾಜಕೀಯ ಅಥವಾ ಕ್ರಿಕೆಟ್, ಶೂಟಿಂಗ್, ಹಾಕಿ ಯಾವುದೇ ಕ್ರೀಡೆಯಾಗಿರಬಹುದು, ಭಾರತೀಯ ಮಹಿಳೆಯರು ಕ್ರೀಡೆಯ ಪ್ರತಿಯೊಂದು ಕ್ಷೇತ್ರದಲ್ಲಿ ಗೆಲುವಿನ ಪತಾಕೆ ಹಾರಿಸುತ್ತಿದ್ದಾರೆ. ಈ ಮಹಿಳೆಯರು ಕೇವಲ ದೇಶದಲ್ಲಷ್ಟೇ ಅಲ್ಲ, ವಿಶ್ವ ಮಟ್ಟದಲ್ಲೂ ಮಿಂಚುತ್ತಿದ್ದಾರೆ. ಅವರು ಹಲವು ಅಡೆತಡೆಗೆಳ ನಡುವೆಯೂ ಮುನ್ನುಗ್ಗುತ್ತಿದ್ದಾರೆ.
ಭಾರತೀಯ ಮಹಿಳಾ ಕ್ರೀಡಾಪಟುಗಳ ಬಗ್ಗೆ ತಿಳಿದುಕೊಳ್ಳೋಣ.
ಪುಸರ್ಲಾ ವೆಂಕಟ ಸಿಂಧು
ಜುಲೈ 1995 ರಂದು ಹೈದರಾಬಾದ್‌ನಲ್ಲಿ ಜನಿಸಿದ ಪಿ.ವಿ. ಸಿಂಧು 8 ವರ್ಷದರಿರುವಾಗಲೇ ಬ್ಯಾಡ್ಮಿಂಟನ್ ಅಭ್ಯಾಸ ಶುರು ಮಾಡಿದರು. ಅವರು ಬ್ರೆಜಿಲ್‌ನ ರಿಯೊ ಡಿಜನೈರೊದಲ್ಲಿ ನಡೆದ 2016ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತನ್ನು ಪ್ರತಿನಿಧಿಸಿ, ಸಿಂಗಲ್ಸ್ ಫೈನಲ್ ತಲುಪಿದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡರು.
ಸಿಂಧು ಬ್ಯಾಡ್ಮಿಂಟನ್ ನಲ್ಲಿ ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ. ಈ ಸಲದ ಒಲಿಂಪಿಕ್ಸ್ ನಲ್ಲೂ ಕಂಚಿನ ಪದಕ ಪಡೆದು ದೇಶದ ಹೆಸರನ್ನು ಅಜರಾಮರಗೊಳಿಸಿದರು.
ಸಾನಿಯಾ ಮಿರ್ಜಾ
ಟೆನಿಸ್ ಸ್ಟಾರ್ ಎಂದೇ ಹೆಸರಾಗಿರುವ ಸಾನಿಯಾ ಮಿರ್ಜಾ ನವೆಂಬರ್ 15, 1986ರಲ್ಲಿ ಜನಿಸಿದರು. 1993ರಲ್ಲಿ ವಿಶ್ವ ಜೂನಿಯರ್ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಂಡರು. 2003 ಅವರ ಜೀವನದ ರೋಚಕ ಘಟ್ಟ ಎನ್ನಬಹುದು. ಅವರು ವೈಲ್ಡ್ ಕಾರ್ಡ್ ಎಂಟ್ರಿಯ ಬಳಿಕ ವಿಂಬಲ್ಡನ್ ಡಬಲ್ಸ್ ನಲ್ಲಿ ಗೆಲುವು ಸಾಧಿಸಿದರು. 2004ರಲ್ಲಿನ ಅತ್ಯುತ್ತಮ ಪ್ರದರ್ಶನಕ್ಕಾಗಿ ಅರ್ಜುನ ಪುರಸ್ಕಾರದಿಂದ ಸನ್ಮಾನಿತರಾದರು. 2009ರಲ್ಲಿ ಭಾರತದ ಪರವಾಗಿ ಗ್ರಾಂಡ್ ಸ್ಲ್ಯಾಮ್ ಗೆದ್ದ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡರು.
ಮೇರಿಕೋಮ್ ಮ್ಯಾಗ್ಸೆ ಚೆಗ್ಲೆಯಿಜೆಂಗ್
ಮೇರಿ ಕೋಮ್ (ಎಂ.ಸಿ. ಮೇರಿಕೋಮ್) ಹುಟ್ಟಿದ್ದು 1983ರ ಮಾರ್ಚ್ 1 ರಂದು. ಕ್ರೀಡೆಯಲ್ಲಿ ಅವರಿಗೆ ಬಾಲ್ಯದಿಂದಲೇ ಬಹಳ ಆಸಕ್ತಿಯಿತ್ತು. ಮಣಿಪುರದವರಾದ ಅವರು ತಮ್ಮದೇ ರಾಜ್ಯದ ಬಾಕ್ಸಿಂಗ್ ಪಟು ಡಿಂಗೊ ಸಿಂಹರ ಯಶಸ್ಸುನಿಂದ ಪ್ರೇರಿತರಾಗಿ ಬಾಕ್ಸಿಂಗ್ ನಲ್ಲಿ ಪಾಲ್ಗೊಂಡರು. ಅವರು 5 ಸಲ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಗೆಲುವು ಸಾಧಿಸಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಬಂದಿತ್ತು. 2015ರ ಏಷ್ಯನ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಸಿಕ್ಕಿತ್ತು.
ಸಾಕ್ಷಿ ಮಲಿಕ್
ಹರಿಯಾಣದ ರೋಹ್ಟಕ್‌ನಲ್ಲಿ ಸೆಪ್ಟೆಂಬರ್ 3, 1992ರಲ್ಲಿ ಜನಿಸಿದ ಸಾಕ್ಷಿ ಮಲಿಕ್ ಮಹಿಳಾ ಕುಸ್ತಿಪಟು. 2016ರ ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅದಕ್ಕೂ ಮುಂಚೆ ಗ್ಲಾಸ್ಗೊಯಲ್ಲಿ ಏರ್ಪಡಿಸಲಾಗಿದ್ದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿಪದಕ ಗೆದ್ದಿದ್ದರು. 2014ರಲ್ಲೂ ಅವರು ವಿಶ್ವ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಕರ್ಣಂ ಮಲ್ಲೇಶ್ವರಿ
1975ರಲ್ಲಿ ಆಂಧ್ರ ಪ್ರದೇಶದ ಶ್ರೀಕಾಕುಲಂನಲ್ಲಿ ಜನಿಸಿದ್ದ ಕರ್ಣಂ ಮಲ್ಲೇಶ್ವರಿ ವೇಟ್ ಲಿಫ್ಟರ್ ಆಗಿದ್ದಾರೆ. ಅವರು ತಮ್ಮ ಕ್ರೀಡಾ ಕೆರಿಯರ್‌ನ್ನು ಜೂನಿಯರ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಮುಖಾಂತರ ಆರಂಭಿಸಿ ನಂಬರ್ 1 ಪಟ್ಟವನ್ನು ತಮ್ಮ ಕೈವಶ ಮಾಡಿಕೊಂಡರು. 1992ರ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ 3 ಬೆಳ್ಳಿ ಪದಕ ಪಡೆದರು. ಅಂದಹಾಗೆ ಅವರು ವಿಶ್ವ ಚಾಂಪಿಯನ್ ಶಿಪ್ ನಲ್ಲಿ 3 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಆದರೆ ಅವರಿಗೆ ಎಲ್ಲಕ್ಕೂ ದೊಡ್ಡ ಯಶಸ್ಸು 2000ದ ಸಿಡ್ನಿ ಒಲಿಂಪಿಕ್ ನಲ್ಲಿ ಲಭಿಸಿತು. ಅದರಲ್ಲಿ ಅವರು ಕಂಚಿನ ಪದಕ ಪಡೆದು, ಒಲಿಂಪಿಕ್ ನಲ್ಲಿ ಪದಕ ಪಡೆದ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡರು.
ದೀಪಿಕಾ ಕುಮಾರಿ
ಜೂನ್ 13, 1994 ರಂದು ಝಾರ್ಖಂಡ್ ನಲ್ಲಿ ಜನಿಸಿದ ದೀಪಿಕಾ ಕುಮಾರಿ ಬಿಲ್ವಿದ್ಯೆಯಲ್ಲಿ ನಿಪುಣೆ. ತಮ್ಮ 15ನೇ ವಯಸ್ಸಿನಲ್ಲಿಯೇ ಅಮೆರಿಕಾದಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಪಾಲ್ಗೊಂಡು ಹೆಸರು ಮಾಡಿದ್ದರು. ಆರ್ಚರಿಯಲ್ಲಿ ಅವರ ಪ್ರೊಫೆಶನ್ ಕೆರಿಯರ್‌ಶುರುವಾದದ್ದು 2006ರಲ್ಲಿ. ಆ ವರ್ಷ ಮೆಕ್ಸಿಕೊದಲ್ಲಿ ನಡೆದ ಸ್ಪರ್ಧೆಯಲ್ಲಿ ಕಾಂಪೌಂಡ್ ಇಂಡಿ ವಿಜುವಲ್ ನಲ್ಲಿ ಚಿನ್ನದ ಪದಕ ಪಡೆದಿದ್ದರು. ಬಳಿಕ 2010ರಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಪಡೆದರು. ಅದೇ ವರ್ಷ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ಇಂಡಿವಿಜುವಲ್ ಹಾಗೂ ಟೀಮ್ ಜೊತೆಗೆ 2 ಚಿನ್ನದ ಪದಕ ಪಡೆದರು.
ಕ್ರೀಡಾಪಟುಗಳ ಜಾತಿ ಕೇಳಬೇಡಿ
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟೋಕಿಯೊ ಒಲಿಂಪಿಕ್ಸ್ ನ ಸೆಮಿ ಫೈನಲ್ ನಲ್ಲಿ ಭಾರತೀಯ ಮಹಿಳಾ ಹಾಕಿ ಟೀಮ್ ನ ಸೋಲನ್ನು ಕೆಲವರು ಜಾತಿವಾದದ ಸಾಮಾಜಿಕ ದುಷ್ಟ ಪದ್ಧತಿಗೆ ಜೋಡಿಸಿದರು. ಈ ಸೋಲಿನ ಬಳಿಕ ದಲಿತ ವರ್ಗದ ಹಾಕಿಪಟು ವಂದನಾ ಕಟಾರಿಯಾರ ಕುಟುಂಬದವರಿಗೆ ಕೆಲವು ನೆರೆಮನೆಯವರು, ಜಾತಿ ಸೂಚಕ ಬೈಗುಳಗಳನ್ನಷ್ಟೇ ಹರಿಸಲಿಲ್ಲ. ತಂಡದಲ್ಲಿ ಹೆಚ್ಚು ಜನ ದಲಿತ ಆಟಗಾರರಿದ್ದುದರಿಂದ ತಂಡ ಸೋತಿತು ಎಂದು ಟೀಕೆ ಮಾಡಿದರು.
ವಂದನಾ ಕಟಾರಿಯಾರ ರೋಶನಾಬಾದ್ ಹಳ್ಳಿಯ ಮನೆಯನ್ನು ಮೇಲ್ಜಾತಿಯ ಇಬ್ಬರೂ ವ್ಯಕ್ತಿಗಳು ಸುತ್ತುವರೆದು ಮನೆಯೆದುರು ಪಟಾಕಿ ಸಿಡಿಸಿ, ವಂದನಾರ ಕುಟುಂದವರನ್ನು ಜಾತಿಯ ಹೆಸರು ಹಿಡಿದು ಬೈಗುಳದ ಮಳೆ ಸುರಿಸಿದರು.
ಅದೇ ರೀತಿ ಖೇದಕರ ಟ್ರೆಂಡ್‌ವೊಂದು ಕಂಡುಬಂತು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದ ಪಿ.ವಿ. ಸಿಂಧುರ ಜಾತಿಯ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಲಾಯಿತು. ಗೂಗಲ್ ನಲ್ಲಿ ಯಾರು ಯಾವ ಶಬ್ದವನ್ನು ಹುಡುಕುತ್ತಿದ್ದಾರೆ ಎನ್ನುವುದರ ಮಾಹಿತಿ ದೊರೆಯುತ್ತದೆ. ಆಗಸ್ಟ್ 1 ರಂದು ಸಿಂಧು ಪದಕ ಗೆಲ್ಲುತ್ತಿದ್ದಂತೆ ಇಡೀ ದಿನ ಅತಿ ಹೆಚ್ಚು ಸರ್ಚ್ ಮಾಡಿದ ಕೀವರ್ಡ್ ಆಗಿತ್ತು. ಈ ಬಗ್ಗೆ ಜನರಲ್ಲಿ ಕೋಪ ಉಕ್ಕಿ ಬಂದಿತ್ತು. ಹಾಗೆ ಮಾಡುವವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂತು.
ಸಿಂಧು ಎದುರಾಳಿಯನ್ನು ಹೇಗೆ ಸೋಲಿಸಿದರು ಎಂಬ ಬಗ್ಗೆ ಚರ್ಚೆ ಮಾಡದೆ, ಅವರ ಜಾತಿ ಯಾವುದು ಎಂದು ಸರ್ಚ್ ಮಾಡಿದ್ದು ಖೇದದ ಸಂಗತಿ ಎಂದು ಸೋಶಿಯಲ್ ಮೀಡಿಯಾ ಯೂಸರ್ಸ್ ಹೇಳುತ್ತಾರೆ. ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಬಿಹಾರ ಹಾಗೂ ಗುಜರಾತ್‌ನವರೇ ಹೀಗೆ ಸರ್ಚ್ ಮಾಡಿದವರಲ್ಲಿ ಹೆಚ್ಚಿನ ಜನರಿದ್ದಾರೆ ಎನ್ನುವುದು ಕಂಡುಬಂತು.
ಗೂಗಲ್ ಟ್ರೆಂಡ್ಸ್ ನ ಗ್ರಾಫ್‌ನಲ್ಲಿ ಕೀವರ್ಡ್‌ನ್ನು ಮೊದಲ ಬಾರಿ ಆಗಸ್ಟ್ 2016ರಲ್ಲಿ ಶೋಧ ಮಾಡಲಾಗಿತ್ತು. ಆಗ ಸಿಂಧು ಬೇಸಿಗೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಪುನಃ ಈ ಟ್ರೆಂಡ್ ನಲ್ಲಿ 90% ಹೆಚ್ಚಳ ಕಂಡುಕೊಂಡಿತು. ಗೂಗಲ್ ಯಾವುದೇ ಕೀವರ್ಡ್ ಸರ್ಚ್‌ನ್ನು 0 ದಿಂದ ಹಿಡಿದು 100ರ ಮಧ್ಯದಲ್ಲಿ ಅಳೆಯುತ್ತವೆ. ಸಿಂಧುವಿನ ಜಾತಿಯ ಬಗ್ಗೆ ಮೊದಲ ಬಾರಿ ಆಗಸ್ಟ್ ನಲ್ಲಿ ಸರ್ಚ್ ಮಾಡಲ್ಪಟ್ಟು 100 ಅಂಕಗಳಷ್ಟು ಉನ್ನತ ಹಂತಕ್ಕೆ ತಲುಪಿ ಟಾಪ್ ಟ್ರೆಂಡ್ ಆಯಿತು.
ಕೇವಲ ಸಿಂಧು ಅಷ್ಟೇ ಅಲ್ಲ, ಸಾಕ್ಷಿ ಮಲಿಕ್‌ರ ಜಾತಿಯ ಬಗ್ಗೆಯೂ ಸರ್ಚ್ ಮಾಡಲಾಯಿತು. 2016ರಲ್ಲಿ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಆ ಬಳಿಕ ಗೂಗಲ್ನಲ್ಲಿ ಅವರ ಜಾತಿಯ ಬಗ್ಗೆ ಸರ್ಚ್ ಮಾಡಲಾಗುತ್ತಿತ್ತು. ಆ ಪದ್ಧತಿ ಈಗಲೂ ಮುಂದುವರಿದಿದೆ. ಗೂಗಲ್ ಡೇಟಾದ ಪ್ರಕಾರ, ಜನವರಿ ಫೆಬ್ರವರಿ 2021ರಲ್ಲಿ ಸಾಕ್ಷಿ ಮಲಿಕ್ ರಿಸ್ಟ್ ಕೀವರ್ಡ್ ಟಾಪ್ ಟ್ರೆಂಡ್ ನಲ್ಲಿ ಸೇರ್ಪಡೆಯಾಗಿತ್ತು. ರಾಜಾಸ್ಥಾನ್, ದೆಹಲಿ ಹಾಗೂ ಉತ್ತರ ಪ್ರದೇಶದವರೇ ಹೆಚ್ಚಿನ ಸಂಖ್ಯೆಯಲ್ಲಿ ಸರ್ಚ್ ಮಾಡುವವರಲ್ಲಿ ಸೇರಿದ್ದರು.
ಅದೇ ರೀತಿ ಕಳೆದ 10 ವರ್ಷಗಳಿಂದ ಜನರು ದೀಪಿಕಾ ಕುಮಾರಿಯವರ ಜಾತಿಯ ಹುಡುಕಾಟ ನಡೆಸಿದ್ದಾರೆ. ಅಥ್ಲೀಟ್ ದೀಪಿಕಾ ಕುಮಾರಿ ಮಹತೊ 2010ರ ಕಾಮನ್ ವೆಲ್ತ್ ನಲ್ಲಿ ಆರ್ಚರಿಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಆ ಸಮಯದಲ್ಲಿ ಅವರು ಜಗತ್ತಿನ ನಂಬರ್ ಒನ್ ಆರ್ಚರಿ ಆಟಗಾರ್ತಿಯಾಗಿದ್ದರು. 2018ರಲ್ಲಿ ಅವರಿಗೆ ಅರ್ಜುನ್ ಅವಾರ್ಡ್ ನೀಡಲಾಗಿತ್ತು. ಆಗಿನಿಂದ ಜನರು ಈವರೆಗೆ ಅವರ ಜಾತಿಯ ಬಗ್ಗೆ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾರೆ. ಇದೇ ವರ್ಷದ ಜೂನ್ 27 ರಿಂದ ಜೂನ್ 3ರ ತನಕ ಕೀವರ್ಡ್ ಟಾಪ್ ಟ್ರೆಂಡ್ ನಲ್ಲಿತ್ತು. ಆಗ ಅವರು ಪ್ಯಾರಿಸ್ ನಲ್ಲಿ ಏರ್ಪಡಿಸಲಾಗಿದ್ದ ವರ್ಲ್ಡ್ ಕಪ್ ನಲ್ಲಿ ಬಂಗಾರದ ಪದಕ ಪಡೆದಿದ್ದರು. ಈ ಕೀವರ್ಡ್ ಶೋಧಿಸುತ್ತಿರುವವರಲ್ಲಿ ಉತ್ತರ ಪ್ರದೇಶದವರೇ ಹೆಚ್ಚಿವನರಾಗಿದ್ದರು.
ಯಾವುದಾದರೂ ಆಟಗಾರರು ಯಶಸ್ಸು ಗಳಿಸಿದಾಗೆಲ್ಲ ಅವರ ಜಾತಿ ಬಗ್ಗೆ ಹುಡುಕಾಟ ನಡೆಸುವುದು ಎಷ್ಟು ಖೇದದ ಸಂಗತಿ. ಒಂದು ವೇಳೆ ತಂಡ ಸೋತಿದ್ದೆ ಆದರೆ ತಪ್ಪನ್ನು ಅವರ ಜಾತಿಯ ಮೇಲೆ ಹೊರಿಸಲಾಗುತ್ತದೆ. ಇದರರ್ಥ ಬಹಳಷ್ಟು ಜನರು ಯೋಚಿಸುವುದೇನೆಂದರೆ, ಯಾವುದೇ ಒಬ್ಬ ಆಟಗಾರನ ಯಶಸ್ಸನ್ನು ಇಡೀ ದೇಶದ ಸಾಧನೆ ಎಂದು ಪರಿಗಣಿಸದೆ ಜಾತಿಯ ಸಂಕೀರ್ಣತೆಯೊಂದಿಗೆ ಕಟ್ಟಿ ಹಾಕುವುದು ಎಷ್ಟು ಸರಿ ಹಾಗಿದ್ದರೆ ಭಾರತೀಯರಾಗಿರುವುದರ ಅರ್ಥವಾದರೂ ಏನು ಉಳಿಯುತ್ತದೆ?
ಒಂದು ವೇಳೆ ದಲಿತ ಕ್ರೀಡಾಪಟುಗಳಿಂದಾಗಿ ತಂಡ ಸೋಲುತ್ತದೆಂದಾದರೆ ಉನ್ನತ ವರ್ಗದವರು ತಮ್ಮ ಮಕ್ಕಳನ್ನು ಕ್ರೀಡಾಪಟುವಾಗಲು ಏಕೆ ಪ್ರೇರೇಪಿಸುವುದಿಲ್ಲ? ಅವರು ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕು ಎಂದಷ್ಟೇ ಏಕೆ ಅಪೇಕ್ಷೆ ಪಡಬೇಕು? ವ್ಯಕ್ತಿಯೊಬ್ಬನ ಸಾಮರ್ಥ್ಯ ಅವನ ಜಾತಿಯನ್ನು ಅವಲಂಬಿಸಿರುತ್ತದೆಯೇ ಎಂಬ ಪ್ರಶ್ನೆಯೂ ಏಳದಿರುವುದಿಲ್ಲ. ಆ ವ್ಯಕ್ತಿಯ ಪರಿಶ್ರಮ, ಉತ್ಸಾಹ, ತರಬೇತಿಯಂತಹ ಸಂಗತಿಗಳಿಗೆ ಯಾಕೆ ಮಹತ್ವ ಕೊಡಲಾಗುವುದಿಲ್ಲ? ಈ ತೆರನಾದ ಮಾನಸಿಕತೆಯ ಜೊತೆಗೆ ನಾವು ಅಂತಾರಾಷ್ಟೀಯ ಮಟ್ಟದಲ್ಲಿ ನಮ್ಮ ಪಡಿಯಚ್ಚು ಮೂಡಿಸಲು ಸಾಧ್ಯವಾಗುತ್ತದೆಯೇ? ನಾವು ಪ್ರತಿಯೊಬ್ಬ ನಾಗರಿಕನನ್ನು ಕೇವಲ ಭಾರತೀಯ ಎಂದು ಭಾವಿಸಿ. ಆ ವ್ಯಕ್ತಿಯ ಯಶಸ್ಸಿನಿಂದ ನಾವೇಕೆ ಖುಷಿ ಹೊಂದಬಾರದು?
ಅದೇ ರೀತಿ ವಿಫಲತೆ ಬಳಿಕ ನಿರರ್ಥಕ ದೋಷಾರೋಪದ ಬದಲು, ನಮ್ಮ ದೌರ್ಬಲ್ಯ ಕೊರತೆಗಳನ್ನು ನಾವೇಕೆ ದೂರಗೊಳಿಸಲು ಪ್ರಯತ್ನಿಸಬಾರದು? ಈ ರೀತಿಯ ವರ್ತನೆಯಿಂದ ನಾವು ನಮ್ಮ ಕ್ರೀಡಾಪಟುಗಳ ಉತ್ಸಾಹವನ್ನು ಆತ್ಮವಿಶ್ವಾಸವನ್ನು ಕುಂದಿಸಬಾರದು ಅಲ್ಲವೇ?
– ಗೌರಿ
ನಾನು ಗೊಂಬೆಗಳನ್ನಲ್ಲ, ಬಂದೂಕು ತೆಗೆದುಕೊಂಡು ಬರ್ತಿದ್ದೆ ಸೀಮಾ ತೋಮರ್, ಟ್ರ್ಯಾಪ್ ಶೂಟರ್ ವರ್ಷದ ಸೀಮಾ ತೋಮರ್ ಟ್ರ್ಯಾಪ್ ಶೂಟರ್ ಆಗಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾ ಕೂಟದ ಪರವಾಗಿ ನಡೆಸಲಾದ ವಿಶ್ವಕಪ್ ನಲ್ಲಿ ಪದಕ ಗೆದ್ದ ಏಕೈಕ ಭಾರತೀಯ ಮಹಿಳೆ ಅವರಾಗಿದ್ದಾರೆ. ಉತ್ತರ ಪ್ರದೇಶದವರಾದ ಅವರು 1 ಚಿನ್ನ, 1 ಬೆಳ್ಳಿ ಹಾಗೂ 18 ಅಂತಾರಾಷ್ಟ್ರೀಯ ಪದಕ ಪಡೆದಿದ್ದಾರೆ. ಅವರೊಂದಿಗೆ ನಡೆಸಿದ ಮಾತುಕತೆಯ ವಿವರ :
ನೀವು ಈ ಕ್ಷೇತ್ರದಲ್ಲಿ ಹೇಗೆ ಬಂದಿರಿ?
ಹಳ್ಳಿಯ ವಾತಾವರಣದಲ್ಲಿ ಕ್ರೀಡೆಯಲ್ಲಿ ಪ್ರವೇಶ ಅಷ್ಟು ಸುಲಭದ ವಿಷಯವಲ್ಲ. ನಾನು ಕ್ರೀಡೆಯಲ್ಲಿ ಅದರಲ್ಲೂ ಶೂಟರ್ ಆಗುವುದು ಮನೆಯವರಿಗೆ ಇಷ್ಟವಿರಲಿಲ್ಲ. ನನಗೆ ಬಾಲ್ಯದಿಂದಲೇ ಶೂಟಿಂಗ್ ಬಗ್ಗೆ ಒಲವು ಇತ್ತು. ಅಮ್ಮ ನನಗೆ ಬೆಂಬಲ ಕೊಡುತ್ತಿದ್ದರು. ಮನೆಯಲ್ಲಿ ಲೈಸೆನ್ಸ್ ಹೊಂದಿದ್ದ ಬಂದೂಕು ಇತ್ತು. ಅಣ್ಣ ಅದನ್ನು ಸ್ವಚ್ಛಗೊಳಿಸುತ್ತಾ ಇದ್ದಾಗೆಲ್ಲ ನಾನು ಅವನಿಗೆ ಅದನ್ನು ಹೇಗೆ ಚಲಾಯಿಸುತ್ತಾರೆ ಎಂದು ದುಂಬಾಲು ಬಿದ್ದು ಕೇಳುತ್ತಿದ್ದೆ. ನಾನು ಬಾಲ್ಯದಲ್ಲಿ ಆಟಿಕೆಗಳೊಂದಿಗೆ ಅಲ್ಲ, ಬಂದೂಕಿನೊಂದಿಗೆ ಆಡುತ್ತಿದ್ದೆ.
ಹುಡುಗಿಯರು ಕಡಿಮೆ ಪದಕ ಪಡೆದುಕೊಳ್ಳಲು ಕಾರಣ?
ಹುಡುಗಿಯರಿಗೆ ಅಭ್ಯಾಸಕ್ಕೆ ಹೆಚ್ಚು ಸಮಯ ಸಿಗುವುದಿಲ್ಲ. ಸೌಲಭ್ಯಗಳನ್ನು ದೊರಕಿಸಿ ಕೊಡುವುದಿಲ್ಲ. ಸೂಕ್ತ ಪೋಷಕಾಂಶಗಳು ಸಿಗುವುದಿಲ್ಲ. ಅವರು ಒಲಿಂಪಿಕ್ ನಂತಹ ದೊಡ್ಡ ಮಟ್ಟದಲ್ಲಿ ಹೋದಾಗ ಚಿನ್ನದ ಪದಕ ತೆಗೆದುಕೊಂಡು ಬರಬೇಕೆಂಬ ಅಪೇಕ್ಷೆ ಇಟ್ಟುಕೊಳ್ಳಲಾಗುತ್ತದೆ. ಅವರು ಗೆದ್ದು ಬಂದರಷ್ಟೇ ಸೌಲಭ್ಯ ದೊರಕಿಸಿಕೊಡಲಾಗುತ್ತದೆ. ಅಲ್ಲಿಯವರೆಗೆ ಏಜ್ ಫ್ಯಾಕ್ಟರ್ ಎದುರಾಗುತ್ತದೆ. ಸಾಕಷ್ಟು ಮಹತ್ವದ ಘಟ್ಟ ದಾಟಿ ಹೋಗಿರುತ್ತದೆ. ಈ ಸೌಲಭ್ಯಗಳನ್ನು ಮೊದಲೇ ಕೊಟ್ಟಿದ್ದರೆ ಅವರ ಗೆಲವು ಇನ್ನಷ್ಟು ಸುಲಭವಾಗುತ್ತಿತ್ತು.
ಶೂಟಿಂಗ್ ದುಬಾರಿ ಗೇಮ್ ಎಂದೆನಿಸುತ್ತದಾ?
ಶೂಟರ್ ಒಬ್ಬನ ಬಂದೂಕಿನ ಬೆಲೆ 8 ಲಕ್ಷ ರೂ. ಪ್ರಾಕ್ಟೀಸ್‌ಗೆ ಗುಂಡುಗಳ ಅವಶ್ಯಕತೆ ಇರುತ್ತದೆ. ಒಂದು ಸಲಕ್ಕೆ 15,000 ಗುಂಡು ಮಾತ್ರ ತರಿಸಬಹುದು. ಅವು ಸಿಗುವುದು ಇಟಲಿಯಲ್ಲಿ ಮಾತ್ರ. ಇದೆಲ್ಲದಕ್ಕಾಗಿ ಪ್ರ್ಯಾಕ್ಟೀಸ್‌ಹಾಗೂ ಟ್ರೇನಿಂಗ್ ಅತ್ಯಗತ್ಯ. ಹೆಚ್ಚಿನ ಗೇಮ್ ಗಳು ದುಬಾರಿ ಆಗಿರುತ್ತವೆ. ಇಂತಹದರಲ್ಲಿ ಸರ್ಕಾರ ಅವರಿಗೆ ಸ್ಪಾನ್ಸರ್ ಏಕೆ ಮಾಡುವುದಿಲ್ಲ ಎಂದೆನಿಸುತ್ತದೆ. ಒಂದು ವೇಳೆ ಸರ್ಕಾರ ಹೀಗೆ ಮಾಡಿದರೆ ಹೆಚ್ಚೆಚ್ಚು ಕ್ರೀಡಾಪಟುಗಳು ಭಾಗವಹಿಸಲು ಅನುಕೂಲವಾಗುತ್ತದೆ.
ಭಾರತೀಯ ಮಹಿಳಾ ಕ್ರೀಡಪಟುಗಳ ಸ್ಥಿತಿ ಮೊದಲಿಗಿಂತ ಚೆನ್ನಾಗಿದೆ. ಇನ್ನಷ್ಟು ಚೆನ್ನಾಗಿ ಆಗಬೇಕು. ಅದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಸೌಲಭ್ಯಗಳು ದೊರಬೇಕು. ಅಕಾಡೆಮಿಗಳು ರಚನೆಗೊಳ್ಳಬೇಕು. ಉಚಿತ ತರಬೇತಿ ಸಿಗಬೇಕು. ಒಳ್ಳೆಯ ಕೋಚ್ ಗಳು ಸಿಗಬೇಕು. ಒಳ್ಳೆಯ ಕ್ರೀಡಾಪಟುಗಳಿಗಾಗಿ ಒಳ್ಳೆಯ ಸಲಕರಣೆಗಳು ಸಿಗಬೇಕು, ಸ್ಪಾನ್ಸರ್ ಶಿಪ್ ಸಿಗಬೇಕು, ಒಳ್ಳೆಯ ಪೋಷಕಾಂಶಗಳು ದೊರಬೇಕು.
ಪದಕ ತಂದುಕೊಟ್ಟವರ ಕರುಣಾಜನಕ ಕಥೆ
ನಮ್ಮ ದೇಶದಲ್ಲಿ ಎಂತಹ ಕೆಲವು ಆಟಗಾರರಿದ್ದಾರೆಂದರೆ, ಅವರು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದುಕೊಟ್ಟರು. ಆದರೆ ಬಳಿಕ ಬಡತನದ ಕಾರಣದಿಂದ, ಎಂತಹ ದುರ್ದೆಸೆ ತಲುಪಿದರೆಂದರೆ, ಕೆಲವರು ತರಕಾರಿ ಮಾರುವಂತಾಯಿತು ಮತ್ತೆ ಕೆಲವರು ಕೂಲಿ ಕೆಲಸ ಮಾಡುವಂತಾಯಿತು.
ಓಟಗಾರ್ತಿ ಆಶಾರಾಯ್ ಅನಾಮಧೇಯಳಾಗಿ ಜೀವಿಸುತ್ತಿದ್ದಾಳೆ. ಅವರನ್ನು ಅತ್ಯಂತ ವೇಗದ ಓಟಗಾರ್ತಿ ಎಂದು ಘೋಷಿಸಲಾಗಿತ್ತು.
ಅವರ ತಂದೆ ತರಕಾರಿ ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಅದರ ಹೊರತಾಗಿಯೂ ಆಶಾರಾಯ್ ರಾಷ್ಟ್ರಮಟ್ಟದಲ್ಲಿ ಹಲವು ದಾಖಲೆ ಮಾಡಿದ್ದಾರೆ. ಅವರು 100 ಮೀ. ಓಟವನ್ನು 11.80 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದರು. ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಪಡೆದಿರುವುದರ ಹೊರತಾಗಿಯೂ ಅವರು ಅನಾಮಧೇಯರಂತೆ ಬದುಕು ನಡೆಸುತ್ತಿದ್ದಾರೆ. ಗಾಯದ ಕಾರಣದಿಂದ ಅವರು ರಿಯೋ ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳಲು ಆಗಲಿಲ್ಲ.
ಫುಟ್ಬಾಲ್ ಕ್ರೀಡಾಪಟು ರಶ್ಮಿತಾ ಪಾತ್ರಾ ಪಾನ್ ಬೀಡಾ ಅಂಗಡಿ ನಡೆಸಬೇಕಾಗಿ ಬಂತು. ರಶ್ಮಿತಾರ ತಂದೆ ಕೂಲಿಕಾರರು. ಅಂದರೆ ರಶ್ಮಿತಾ ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡು 2008ರಲ್ಲಿ ಕೌಲಾಲಂಪುರ್‌ನಲ್ಲಿ ನಡೆದ ಏಷ್ಯನ್ ಫುಟ್ಬಾಲ್ ಕಂ ಫೆಡರೇಶನ್‌ನ ಅಂಡರ್ ಟೀಮ್ ನಲ್ಲಿ ಪಾಲ್ಗೊಂಡಿದ್ದರು. ಅದೇ ರೀತಿ ಅಂಡರ್‌ರಲ್ಲೂ ಪಾಲ್ಗೊಂಡು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹಲವು ಪುರಸ್ಕಾರ ಗೆದ್ದು ಹೆಸರು ಮಾಡಿದ್ದರು. ಆದರೆ ಅವರ ಕುಟುಂಬ ಸಾಲದಲ್ಲಿ ಮುಳುಗಿತ್ತು. ಊಟಕ್ಕೂ ಪರದಾಡುವಂತಿತ್ತು. ಕೊನೆಗೊಮ್ಮೆ ರಶ್ಮಿತಾ ಫುಟ್ಬಾಲ್ ಬಿಟ್ಟು ಪಾನ್ ಬೀಡಾ ಅಂಗಡಿ ನಡೆಸಬೇಕಾಯ್ತು.
ಆರ್ಚರಿ ಕಿಟ್ ಮಾರಬೇಕಾಯ್ತು
ಜಾರ್ಖಂಡ್‌ನ ಒಂದು ಹಳ್ಳಿಯಲ್ಲಿ ವಾಸಿಸುವ ನಿಶಾರಾಣಿ ಒಂದು ಕಾಲಕ್ಕೆ ಆರ್ಚರಿಯಲ್ಲಿ ಭಾರಿ ಹೆಸರು ಮಾಡಿದರು. ತೈವಾನ್ ನಲ್ಲಿ ಅವರು ಶ್ರೇಷ್ಠ ಆರ್ಚರಿ ಪಟು ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದರು. ಸೌತ್ ಏಷ್ಯನ್ ಚಾಂಪಿಯನ್ ಶಿಪ್ ನಲ್ಲೂ ಬೆಳ್ಳಿಪದಕ ಪಡೆದಿದ್ದರು. ಸಿಕ್ಕಿಂನಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ಬೆಸ್ಟ್ ಪ್ಲೇಯರ್ ಪ್ರಶಸ್ತಿ ಪಡೆದಿದ್ದರು. ಆದರೆ ರೈತನ ಪುತ್ರಿಯಾಗಿದ್ದ ನಿಶಾರಾಣಿ ಫಸಲು ಹಾಳಾಗಿದ್ದುದರಿಂದ ಬಹಳ ಮನನೊಂದಿದ್ದರು. ಅವರ ಕುಟುಂಬಕ್ಕೆ ಬಿತ್ತನೆ ಬೀಜ ಖರೀದಿಸಲು ಕೂಡ ಹಣವಿರಲಿಲ್ಲ. 2008ರಲ್ಲಿ ಬ್ಯಾಂಕಾಕ್ ನಲ್ಲಿ ಕಂಚಿನ ಪದಕ ಪಡೆದಿದ್ದ ಅವರು 2011ರಲ್ಲಿ ಈ ಆಟವನ್ನು ತೊರೆಯಬೇಕಾಗಿ ಬಂತು. ನಿಶಾ 4,00,000 ರೂ. ಮೌಲ್ಯದ ಆರ್ಚರಿ ಕಿಟ್‌ನ್ನು ಕೇವಲ 50,000 ರೂ.ಗೆ ಮಾರಾಟ ಮಾಡಬೇಕಾಗಿ ಬಂತು.
ಸೀತಾ ಸಾಹು ಪಾನಿಪುರಿ ಮಾರಿ ಹೊಟ್ಟೆ ತುಂಬಿಸಿಕೊಂಡರು
ಮಧ್ಯ ಪ್ರದೇಶದ ಸೀತಾ ಸಾಹು ರಿಲೇ ಓಟಗಾರ್ತಿ. 2011ರಲ್ಲಿ ಅಥೆನ್ಸ್ ನಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ಸ್ ನಲ್ಲಿ 2 ಕಂಚಿನ ಪದಕ ಗೆದ್ದಿದ್ದರು. ಬಡತನದ ಪರಿಸ್ಥಿತಿಯಿಂದ ಅವರು ಪಾನಿಪುರಿ ಮಾರಿ ಹೊಟ್ಟೆ ಹೊರೆಯುವಂತಾಯ್ತು. ಆ ಬಳಿಕ ಅವರಿಗೆ ಒಂದಿಷ್ಟು ಸರ್ಕಾರಿ ನೆರವು ದೊರಕಿತು.
ಹಾಕಿ ಆಟಗಾರ್ತಿ ಶಿಕ್ಷಕಿಯಾಗಬೇಕಾಯ್ತು!
ರಾಷ್ಟ್ರೀಯ ಹಾಕಿ ಟೀಮಿನ ಹೆಸರಾಂತ ಆಟಗಾರ್ತಿ ನೊರಿ ಮುಂಡು ಜಾರ್ಖಂಡ್‌ನವರು. ಅವರು 1996ರಲ್ಲಿ ನೆಹರು ಗರ್ಲ್ಸ್ ಹಾಕಿ ಟೂರ್ನಮೆಂಟ್ ನಲ್ಲಿ ಕಂಚಿನ ಪದಕ ಪಡೆದಿದ್ದರು. ಒಟ್ಟು 19 ಸಲ ರಾಷ್ಟ್ರೀಯ ಟೀಮಿನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರು. 2013ರಲ್ಲಿ ಅರು ಜೀವನೋಪಾಯಕ್ಕಾಗಿ ಒಂದು ಶಾಲೆಯಲ್ಲಿ ಪಾಠ ಹೇಳಬೇಕಾಯ್ತು. 14 ಜನರ ತಮ್ಮ ಕುಟುಂಬ ಸಲಹಲು ಅವರು ಶಿಕ್ಷಕಿಯಾಗಿ ಅಷ್ಟೇ ಅಲ್ಲ, ರೈತ ಮಹಿಳೆಯಾಗಿ ಕೆಲಸ ಮಾಡುತ್ತಿದ್ದಾರೆ.
ತರಕಾರಿ ಮಾರಿದ ಕಬಡ್ಡಿ ಆಟಗಾರ್ತಿ ಶಾಂತಿದೇವಿ
80ರ ದಶಕದಲ್ಲಿ ಶಾಂತಿದೇವಿ 3 ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ನ್ಯಾಷನಲ್ ಕಬಡ್ಡಿ ಲೀಗ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಮನೆಯವರ ಇಚ್ಛೆಗೆ ವಿರುದ್ಧವಾಗಿ ಆಟ ಆಡಿದರು. ಆದರೆ ಸರ್ಕಾರದ ಪರವಾಗಿ ಏನೂ ಸಹಾಯ ಸಿಗಲಿಲ್ಲ. ಕುಟುಂಬದ ಆರ್ಥಿಕ ಬಿಕ್ಕಟ್ಟಿನಿಂದ ಹಾಗೂ ಪತಿಯನ್ನು ಕಳೆದುಕೊಂಡಿದ್ದರಿಂದ 4 ಪುಟ್ಟ ಮಕ್ಕಳ ಪಾಲನೆ ಪೋಷಣೆಗಾಗಿ ಜಮ್ಶೆಡ್‌ಪುರ ಮಾರುಕಟ್ಟೆಯಲ್ಲಿ ತರಕಾರಿ ಮಾರಬೇಕಾದ ಸ್ಥಿತಿ ಬಂತು.
ನೆಗೆಟಿವ್ ಯೋಚನೆಯರು ಎಲ್ಲೆಲ್ಲೂ ಇರುತ್ತಾರೆ.
ಪ್ರಾಚಿ ತೆಹ್ಲಾನ್
ಭಾರತೀಯ ನೆಟ್ ಬಾಲ್ ಟೀಮಿನ ಮಾಜಿ ಕ್ಯಾಪ್ಟನ್ ಪ್ರಾಚಿ ತೆಹ್ಲಾನ್ ನೆಟ್ ಬಾಲ್ ಹಾಗೂ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಅಷ್ಟೇ ಅಲ್ಲ, ನಟಿ ಕೂಡ. ಅವರು 2019ರಲ್ಲಿ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಹಾಗೂ ಇತರೆ ಪ್ರಮುಖ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರ ನೇತೃತ್ವದಲ್ಲಿ ತಂಡ 2011ರಲ್ಲಿ ಮೊದಲ ಪದಕ ಗಳಿಸಿತ್ತು. ಅವರೊಂದಿಗೆ ನಡೆಸಿದ ಮಾತುಕಥೆ ವಿವರ ಇಲ್ಲಿದೆ :
ವಿದೇಶೀಯರಿಗೆ ಹೋಲಿಸಿದರೆ ಭಾರತೀಯ ಕ್ರೀಡಾಪಟುಗಳ ಸ್ಥಿತಿ ಏಕೆ ಚೆನ್ನಾಗಿಲ್ಲ?
ಅದಕ್ಕೆ ಅನೇಕ ಕಾರಣಗಳಿವೆ. ಜಿಯಾಗ್ರಫಿಕ್ ಹಾಗೂ ಕ್ಲೈಮೆಟಿಕ್ ಕಂಡೀಷನ್‌ಗಳು ವಿಭಿನ್ನವಾಗಿವೆ. ಅವರಿಗೆ ಆರಂಭಿಕ ಹಂತದಲ್ಲಿ ಒಳ್ಳೆಯ ಸೌಲಭ್ಯಗಳು ದೊರಕುವುದಿಲ್ಲ. ವಿದೇಶಿ ಕ್ರೀಡಾಪಟುಗಳಿಗೆ ಅವರ ಸರ್ಕಾರಗಳು ಒಳ್ಳೆಯ ಸೌಲಭ್ಯಗಳನ್ನು ದೊರಕಿಸಿಕೊಡುತ್ತವೆ ಹಾಗೂ ಒಳ್ಳೆಯ ತರಬೇತಿ ನೀಡುತ್ತವೆ.
ಇದೆಲ್ಲದರ ಹೊರತಾಗಿ ಫಿಸಿಕಲ್ ಅಪಿಯರೆನ್ಸ್ ನಲ್ಲೂ ಸಾಕಷ್ಟು ವ್ಯತ್ಯಾಸವಿದೆ. ಕೆಲವು ಕ್ರೀಡೆಗಳಿಗೆ ಭಾರತೀಯರು ಹೊಂದಾಣಿಕೆ ಆಗುವುದಿಲ್ಲ. ಮತ್ತೆ ಕೆಲವು ಕ್ರೀಡೆಗಳಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್ ತೋರುತ್ತಾರೆ. ದೈಹಿಕ ಎತ್ತರ ಕೂಡ ಬಹಳ ಮುಖ್ಯವಾಗುತ್ತದೆ. ಅಮೆರಿಕ, ರಷ್ಯಾದ ಜನರು ಸಾಕಷ್ಟು ಎತ್ತರವಾಗಿರುತ್ತಾರೆ. ಹಾಗಾಗಿ ಕೆಲವು ಕ್ರೀಡೆಗಳಲ್ಲಿ ಅವರು ಒಳ್ಳೆಯ ಫಲಿತಾಂಶ ತೋರಿಸುತ್ತಾರೆ.
ಬದಲಾವಣೆ ಆಗುತ್ತಿದೆಯಾ?
ಈಗ ಜನರು ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಕ್ರೀಡೆಗಳ ಜನಪ್ರಿಯತೆ ಹೆಚ್ಚುತ್ತಿದೆ. 10 ವರ್ಷಗಳ ಹಿಂದೆ ನಾನು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಾಗ ಅಷ್ಟೊಂದು ಅರಿವು ಇರಲಿಲ್ಲ. ಆಗ ಇಷ್ಟೊಂದು ಚಾನಲ್ಗಳು ಇರಲಿಲ್ಲ. ಹೀಗಾಗಿ ಕ್ರೀಡೆಯ ಬಗ್ಗೆ ಚರ್ಚೆ ಆಗುತ್ತಿರಲಿಲ್ಲ. ಆದರೆ ಈಗ ಸೌಲಭ್ಯಗಳು ಸಿಗುತ್ತಿವೆ. ಕ್ರೀಡಾಪಟುಗಳಿಗೆ ನೌಕರಿಗಳು ಲಭಿಸುತ್ತಿವೆ. ಸ್ಕಾಲರ್ ಶಿಪ್ ದೊರಕುತ್ತವೆ. ಕ್ರಿಕೆಟ್ ಹೊರತಾಗಿಯೂ ಈಗ ಬೇರೆ ಕ್ರೀಡೆಗಳ ಬಗ್ಗೆ ಜನ ಗಮನಿಸುತ್ತಿರುವುದು ಸಕಾರಾತ್ಮಕ ವಾತಾವರಣವನ್ನು ತೋರಿಸಿ ಕೊಡುತ್ತದೆ.
ದಲಿತ ಕ್ರೀಡಾಪಟುಗಳ ಬಗ್ಗೆ ಮಾಡಿದ ಕಮೆಂಟ್ ಬಗ್ಗೆ ಏನು ಹೇಳಬಯಸುವಿರಿ?
ನೆಗೆಟಿವ್ ಯೋಚನೆಯವರು ಎಲ್ಲೆಲ್ಲೂ ಇರುತ್ತಾರೆ. ಒಳ್ಳೆಯದನ್ನು ಮಾಡುವವರ ಕಾಲೆಳೆಯುವರು ಇದ್ದೇ ಇರುತ್ತಾರೆ. ದಲಿತ ಕ್ರೀಡಾಪಟುಗಳು ಹೆಚ್ಚಿಗೆ ಇದ್ದುದರಿಂದ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿಸಿದೆ.
ಅಂದಹಾಗೆ ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಹೋದಾಗ, ನಾವು ಯಾವುದೇ ಒಂದು ಜಾತಿಯನ್ನು ಪ್ರತಿನಿಧಿಸುವುದಿಲ್ಲ. ದೇಶವನ್ನು ಪ್ರತಿನಿಧಿಸುತ್ತೇವೆ. ನಾವು ಈ ತೆರನಾದ ಸಂಗತಿಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಅವನ್ನು ನಾವು ನಿರ್ಲಕ್ಷಿಸಬೇಕು.
ಆಟಗಾರರ ಬಗ್ಗೆ ಜನರ ಧೋರಣೆ ಕುರಿತು ಏನನ್ನು ಹೇಳಲು ಬಯಸುವಿರಿ?
ಯಾವ ಆಟಗಾರ ಪದಕ ಗೆದ್ದು ಬರುತ್ತಾರೊ, ಅವರಿಗೆ ಅಭಿನಂದನೆಗಳ ಸುರಿಮಳೆ, ಬಹುಮಾನಗಳ ಫೋಷಣೆ ಆಗುತ್ತದೆ. ರಾಜಕೀಯ ಪಕ್ಷಗಳು ಕೂಡ ಬಹುಮಾನ ಕೊಡುತ್ತವೆ. ಕ್ರೀಡಾಪಟುಗಳ ಜೊತೆಗೆ ತಮ್ಮ ಹೆಸರು ಕೂಡ ಬರಬೇಕು ಎನ್ನುವುದು ಅವರ ಯೋಚನೆಯಾಗಿರುತ್ತದೆ. ಆದರೆ ಸಮಸ್ಯೆ ಏನೆಂದರೆ, ಯಾವ ಕ್ರೀಡಾಪಟುಗಳು ಟೂರ್ನಮೆಂಟ್‌ಗಾಗಿ ಸಿದ್ಧತೆ ನಡೆಸುತ್ತಿರುತ್ತಾರೊ ಅವರ ಸಮಸ್ಯೆಯನ್ನು ಯಾರೂ ಆಲಿಸುವುದಿಲ್ಲ. ಒಬ್ಬ ಕ್ರೀಡಾಪಟು ಮಹಿಳೆ ಯಾಕೆ ಗೆಲ್ಲಲು ಆಗಲಿಲ್ಲ, ಅವಳಲ್ಲಿ ಏನು ಕೊರತೆ ಇದೆ ಎನ್ನುವುದನ್ನು ಯಾರೂ ಕೇಳುವುದಿಲ್ಲ. ಫೆಡರೇಶನ್‌ನಿಂದ ಅವರು ಏನು ಅಪೇಕ್ಷೆ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ಯಾರೂ ಏನೂ ಹೇಳುವುದಿಲ್ಲ. ಆಟಗಾರ್ತಿಯರಿಗೆ ಸಕಾಲದಲ್ಲಿ ಸೂಕ್ತ ಸೌಲಭ್ಯಗಳು ಹಾಗೂ ಸಹಾಯ ದೊರಕಿದರೆ ಅವರಿಂದ ಮತ್ತಷ್ಟು ಪದಕದ ಅಪೇಕ್ಷೆ ಮಾಡಲು ಸಾಧ್ಯವಾಗುತ್ತದೆ.
ಫೆಡರೇಶನ್‌ನ ಅಪೇಕ್ಷೆ ಎಲ್ಲಿ ಕೊರತೆಯಾಗುತ್ತದೆ? ಕ್ರೀಡಾಪಟುಗಳಿಗೆ ದೊರಕುವ ಸೌಲಭ್ಯಗಳು ಯಾವುವು? ಅವರಿಗೆ ಸೂಕ್ತ ವಾಸದ ವ್ಯವಸ್ಥೆ ಇದೆಯೇ ಇಲ್ಲವೇ?
ಡಯೆಟ್ ಸರಿಯಾಗಿದೆಯೇ, ಸೂಕ್ತ ಶಿಕ್ಷಣ ಇದೆಯೇ, ದೈಹಿಕ ಬೆಳವಣಿಗೆಯ ಜೊತೆಗೆ ಮಾನಸಿಕ ಹಾಗೂ ಎಮೋಶನ್ ಡೆವಲಪ್ ಮೆಂಟ್‌ನ ಅವಶ್ಯಕತೆ ಈ ಎಲ್ಲದರ ಬಗ್ಗೆ ಫೆಡರೇಶನ್ ಗಮನ ಕೊಡಬೇಕು. ಬಹಳಷ್ಟು ವರ್ಷಗಳಿಂದ ಕಷ್ಟಪಡುವವರು ಪ್ರಾಕ್ಟೀಸ್‌ಮಾಡುವವರು ಭಾರತಕ್ಕಾಗಿಯೇ ಆಡುತ್ತಿರುತ್ತಾರೆ. ಅವರಿಗೆ ಸಂಬಳ ಅಥವಾ ಸ್ಟೈಫಂಡ್ ಕೊಡಬೇಕು. ಪ್ರತಿದಿನ 7-8 ಗಂಟೆ ಪ್ರಾಕ್ಟೀಸ್ ಮಾಡಬೇಕಿರುತ್ತದೆ. ಅವರಿಗೆ ತಮ್ಮ ಗಾಯದ ಬಗ್ಗೆ ಕಾಳಜಿ ವಹಿಸಬೇಕಿರುತ್ತದೆ. ಇದೊಂದು ದೀರ್ಘ ಪ್ರಕ್ರಿಯೆ ಈ ಸಮಯದಲ್ಲಿ ಅವರಿಗೆ ಮಾನಿಟರಿ ಸಪೋರ್ಟ್ ಅಗತ್ಯ.