ಗುಲಾಬ್ಜಾಮೂನು

ಜಾಮೂನಿನ ಮೂಲ ಸಾಮಗ್ರಿ : 1 ಕಪ್‌ ಹಾಲಿನಪುಡಿ, 4-5 ದೊಡ್ಡ ಚಮಚ ಮೈದಾ, 2 ಚಮಚ ಸಣ್ಣ ರವೆ, 2 ಚಿಟಕಿ ಬೇಕಿಂಗ್ ಸೋಡ, ಅರ್ಧ ಸೌಟು ತುಪ್ಪ, ತುಸು ಹಾಲು ಮೊಸರು.

ಸಕ್ಕರೆ ಪಾಕಕ್ಕಾಗಿ ಸಾಮಗ್ರಿ : 1-1 ಕಪ್‌ ಸಕ್ಕರೆ, ನೀರು, ತುಸು ಏಲಕ್ಕಿ ಪುಡಿ, ನಿಂಬೆರಸ, ಗುಲಾಬಿ ಜಲ.

ಇತರ ಸಾಮಗ್ರಿ : ಕರಿಯಲು ಧಾರಾಳ ರೀಫೈಂಡ್‌ ಎಣ್ಣೆ ಅಥವಾ ತುಪ್ಪ. ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್ ಚೂರು.

ವಿಧಾನ : ಒಂದು ಸ್ಟೀಲ್‌ ಪಾತ್ರೆಯಲ್ಲಿ ನೀರು ಕುದಿಸಿ, ಸಕ್ಕರೆ ಹಾಕಿ ಒಂದೆಳೆ ಪಾಕ ತಯಾರಿಸಿ. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ, ಕ್ರಿಸ್ಟಲ್ ಆಗದಂತೆ ಮಾಡಲು ನಿಂಬೆಹಣ್ಣು ಹಿಂಡಿಕೊಳ್ಳಿ. ಇದನ್ನು ಕೆಳಗಿಳಿಸಿ ಮುಚ್ಚಿಟ್ಟು, ತಣ್ಣಗಾಗಲು ಬಿಡಿ. ನಂತರ ಒಂದು ದೊಡ್ಡ ಬೇಸನ್ನಿಗೆ ಜರಡಿಯಾಡಿದ ಮೈದಾ, ಹಾಲಿನ ಪುಡಿ, ರವೆ, ಸೋಡ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಮೊಸರು, ತುಪ್ಪ ಬೆರೆಸಿ ಕಲಸಬೇಕು. ಆಮೇಲೆ ಹಾಲು ಬೆರೆಸಿ ಪೂರಿಗಿಂತಲೂ ಅತಿ ಮೃದುವಾದ ಮಿಶ್ರಣ ಆಗುವಂತೆ, ತುಪ್ಪ ಬೆರೆಸುತ್ತಾ ನಾದಿಕೊಳ್ಳಿ, ಒಂದಿಷ್ಟೂ ಗಂಟಿಲ್ಲದಂತೆ ಮಾಡಿ. ಇದನ್ನು ತುಸು ನೆನೆಯಲು ಬಿಟ್ಟು, ಸಣ್ಣ ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಇವನ್ನು ನೇರವಾಗಿ ಪಾಕಕ್ಕೆ ಹಾಕಿ, ಇಡೀ ರಾತ್ರಿ ನೆನೆಯಲು ಬಿಡಿ. ನಂತರ ಇದರ ಮೇಲೆ ಡ್ರೈ ಫ್ರೂಟ್ಸ್ ಉದುರಿಸಿ ಸವಿಯಿರಿ. ಧಾರೆಯ ಹಿಂದಿನ ಸಂಜೆ ಜಾಮೂನು ಮಾಡಿರಿಸಿ, ಮಾರನೇ ಬೆಳಗ್ಗೆ ಸವಿಯಲು ಕೊಡಿ.

ಮಲ್ಟಿಗ್ರೇನ್ಆಟಾ ಹಲ್ವಾ

cookry-meethe-swad-2

ಸಾಮಗ್ರಿ : 1 ಕಪ್‌ ಮಲ್ಟಿಗ್ರೇನ್‌ ಆಟಾ, 3 ಕಪ್‌ ಗಟ್ಟಿ ಹಾಲು, 1 ಕಪ್‌ತುಪ್ಪ, ಅರ್ಧ ಕಪ್‌ಸಕ್ಕರೆ, ಒಂದಿಷ್ಟು ಏಲಕ್ಕಿಪುಡಿ, ಡ್ರೈ ಫ್ರೂಟ್ಸ್ ಚೂರು.

ವಿಧಾನ : ಮೊದಲು ತುಪ್ಪ ಬಿಸಿ ಮಾಡಿ ಅದರಲ್ಲಿ ಡ್ರೈ ಫ್ರೂಟ್ಸ್ ಹುರಿದು ಪಕ್ಕಕ್ಕಿಡಿ. ನಂತರ ಇನ್ನಷ್ಟು ತುಪ್ಪ ಹಾಕಿ, ಆಟಾ ಸೇರಿಸಿ, ಘಮ್ಮೆನ್ನುವಂತೆ ಹುರಿಯಿರಿ. ಅದೇ ಸಮಯದಲ್ಲಿ ಪಕ್ಕದ ಒಲೆಯಲ್ಲಿ ಹಾಲು ಕಾಯಿಸಿ. ಅದು ಕುದಿಯುವಾಗ ಸಕ್ಕರೆ ಸೇರಿಸಿ, ಅರ್ಧದಷ್ಟು ಹಿಂಗಿಸಿ. ಆಟಾ ಗುಲಾಬಿ ಬಣ್ಣಕ್ಕೆ ತಿರುಗಿದಾಗ (ಸಣ್ಣ ಉರಿ ಇರಲಿ), ಇದಕ್ಕೆ ಹಿಂಗಿದ ಹಾಲು ಬೆರೆಸುತ್ತಾ, ಗಂಟಾಗದಂತೆ ಕದಡಿಕೊಳ್ಳಿ. ನಿಧಾನವಾಗಿ ಕೆದಕುತ್ತಾ ನಡುನಡುವೆ ತುಪ್ಪ ಬೆರೆಸುತ್ತಿರಿ. ಮಿಶ್ರಣ ಜಿಡ್ಡು ಬಿಟ್ಟಾಗ, ಅದಕ್ಕೆ ಏಲಕ್ಕಿ, ಡ್ರೈ ಫ್ರೂಟ್ಸ್, ಸೇರಿಸಿ ಕೆದಕಿ ಕೆಳಗಿಳಿಸಿ. ಈ ಹಲ್ವಾವನ್ನು ಪುಟ್ಟ ಬಟ್ಟಲುಗಳಿಗೆ ಹಾಕಿ, ಮೇಲೆ ತುಪ್ಪ ಹಾಕಿ, ಬಿಸಿಯಾಗಿ ಸವಿಯಲು ಕೊಡಿ.

ಬೇಸನ್ಲಡ್ಡು

cookry-meethe-swad-3

ಸಾಮಗ್ರಿ : 1 ಕಪ್‌ ಕಡಲೆಹಿಟ್ಟು, ಅರ್ಧ ಸೌಟು ತುಪ್ಪ, ಅರ್ಧ ಕಪ್‌ ಪುಡಿ ಸಕ್ಕರೆ, ಅಲಂಕರಿಸಲು ಬೆಳ್ಳಿ ರೇಕು, ಪಿಸ್ತಾ ಚೂರು.

ವಿಧಾನ : ಮೊದಲು ಕಡಲೆಹಿಟ್ಟು ಜರಡಿಯಾಡಿ. ಭಾರಿ ತಳದ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಇದರಲ್ಲಿ (ಮಂದ ಉರಿ ಇರಲಿ) ಕಡಲೆಹಿಟ್ಟು ಹಾಕಿ ಹುರಿಯಿರಿ. ತುಸು ಹೊಂಬಣ್ಣಕ್ಕೆ ತಿರುಗಿದಾಗ ಕೆಳಗಿಳಿಸಿ ಟ್ರೇನಲ್ಲಿ ಹರಡಿಕೊಳ್ಳಿ. ನಂತರ ಇದಕ್ಕೆ ಏಲಕ್ಕಿಪುಡಿ, ಪುಡಿ ಸಕ್ಕರೆ, ತುಪ್ಪ ಹಾಕಿ ಮಿಶ್ರಣ ಕಲಸಿಕೊಳ್ಳಿ. ನಂತರ ಇದರಿಂದ ಲಡ್ಡು ತಯಾರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಖೋವಾ ಸ್ಟಫ್ಡ್ ಲಡ್ಡು

cookry-meethe-swad-4

ಸಾಮಗ್ರಿ : 1 ಕಪ್‌ ಮಸೆದ ಸಿಹಿ ಖೋವಾ, ಅರ್ಧ ಕಪ್‌ಪುಡಿ ಸಕ್ಕರೆ, ಇದರಲ್ಲಿ ಅರ್ಧ ಮಿಶ್ರ ಡ್ರೈ ಫ್ರೂಟ್ಸ್ ಚೂರು, ಅರ್ಧ ಸೌಟು ತುಪ್ಪ, 1 ಗಿಟುಕು ಕೊಬ್ಬರಿ ತುರಿ, ಒಂದಿಷ್ಟು ಪಿಸ್ತಾ ಚೂರು.

ವಿಧಾನ : ಒಂದು ನಾನ್‌ ಸ್ಟಿಕ್‌ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ. ಮಂದ ಉರಿಯಲ್ಲಿ ಇದಕ್ಕೆ ಮಸೆದ ಖೋವಾ ಸೇರಿಸಿ ಕೈಯಾಡಿಸಿ. ನಂತರ ಸಕ್ಕರೆ ಸೇರಿಸಿ ಕೆದಕುತ್ತಾ 2 ನಿಮಿಷ ಬಿಟ್ಟು ಕೆಳಗಿಳಿಸಿ ಆರಲು ಬಿಡಿ. ನಂತರ ಕೈಗೆ ತುಪ್ಪ ಸವರಿಕೊಳ್ಳುತ್ತಾ, ಈ ಮಿಶ್ರಣದಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಕಟ್ಟಿಡಿ. ಇದರ ಮಧ್ಯೆ ರಂಧ್ರ ಮಾಡಿ, ಚಿತ್ರದಲ್ಲಿರುವಂತೆ ಪಿಸ್ತಾ ಚೂರು ತುಂಬಿಸಿ, ಮತ್ತೆ ಉಂಡೆ ಕಟ್ಟಿ ಇಡಿ. ನಂತರ ಈ ಉಂಡೆಗಳನ್ನು ಕೊಬ್ಬರಿ ತುರಿಯಲ್ಲಿ ಹೊರಳಿಸಿ, ಮೇಲೆ ಮತ್ತಷ್ಟು ಪಿಸ್ತಾ ಉದುರಿಸಿ 2-3 ಗಂಟೆ ಕಾಲ ಸೆಟ್‌ ಆಗಲು ಬಿಡಿ. ನಂತರ ಸವಿಯಲು ಕೊಡಿ. ಧಾರೆಯ ಬೆಳಗ್ಗೆ ಮೊದಲು ಇದನ್ನು ತಯಾರಿಸಿ, ಸೆಟ್‌ ಆಗಲು ಬಿಟ್ಟು, ಮಧ್ಯಾಹ್ನದ ಹೊತ್ತಿಗೆ ಸವಿಯಲು ಕೊಡಿ.

ಸ್ವಾದಿಷ್ಟ ಮೋದಕ

cookry-meethe-swad-5

ಹೂರಣಕ್ಕಾಗಿ ಸಾಮಗ್ರಿ : 1 ಕಪ್‌ ತುರಿದ ಉಂಡೆ ಬೆಲ್ಲ, 2 ಗಿಟುಕು ಕೊಬ್ಬರಿ ತುರಿ, ಅರ್ಧ ಸೌಟು ತುಪ್ಪ, ತುಸು ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್ ಚೂರು.

ಕಣಕಕ್ಕಾಗಿ ಸಾಮಗ್ರಿ : 1 ಕಪ್‌ ಅಕ್ಕಿ ಹಿಟ್ಟು, ಚಿಟಕಿ ಉಪ್ಪು, ತುಸು ತುಪ್ಪ, ಬಿಸಿ ನೀರು.

ವಿಧಾನ : ಒಂದು ಬಾಣಲೆಯಲ್ಲಿ ತುಸು ನೀರು ಬಿಸಿ ಮಾಡಿ, ಕುದ್ದಾಗ ಬೆಲ್ಲ ಹಾಕಿ ಕೈಯಾಡಿಸುತ್ತಿರಿ. ನಂತರ ಇದಕ್ಕೆ ತೆಂಗಿನ/ಕೊಬ್ಬರಿಯ ತುರಿ ಹಾಕಿ ಕೆದಕಬೇಕು. ನಂತರ ಇದಕ್ಕೆ ತುಪ್ಪ, ಏಲಕ್ಕಿ, ಡ್ರೈ ಫ್ರೂಟ್ಸ್ ಬೆರೆಸಿ ಕೈಯಾಡಿಸಿ. 2 ನಿಮಿಷ ಬಿಟ್ಟು ಕೆಳಗಿಳಿಸಿ, ಚೆನ್ನಾಗಿ ಆರಲು ಬಿಡಿ. ಇದೀಗ ಹೂರಣ ರೆಡಿ! ಕಣಕಕ್ಕಾಗಿ, ಮೊದಲು ಸ್ಟೀಲ್ ಪಾತ್ರೆಯಲ್ಲಿ ಬಿಸಿ ನೀರಿಟ್ಟು, ಅದಕ್ಕೆ ಉಪ್ಪು, ತುಪ್ಪ ಹಾಕಿ ಕುದಿಸಬೇಕು. ನೀರು ಮರಳುತ್ತಿರುವಾಗ (ಮಂದ ಉರಿಯಲ್ಲಿ) ಎಡಗೈನಿಂದ ಅಕ್ಕಿ ಹಿಟ್ಟು ಬೆರೆಸುತ್ತಾ ಬಲಗೈಯಿಂದ ಅದು ಗಂಟಾಗದಂತೆ ಕೈಯಾಡಿಸುತ್ತಿರಬೇಕು. ಮುಚ್ಚಳ ಮುಚ್ಚಿರಿಸಿ, 2 ನಿಮಿಷ ಹದನಾಗಿ ಬೇಯಿಸಿ. ಇದನ್ನು ಕೆಳಗಿಳಿಸಿ, ತುಸು ಆರಲು ಬಿಡಿ (ಮುಟ್ಟಲು ಸುಲಭ ಆಗುವಂತೆ, ಬಹಳ ತಣ್ಣಗಾಗಬಾರದು). ಇದನ್ನು ಸಣ್ಣ ಉಂಡೆಗಳಾಗಿಸಿ, ಬೇಗ ಬೇಗ ಪೂರಿಗಳಾಗಿ ಲಟ್ಟಿಸಿ. ನಂತರ ಇದಕ್ಕೆ 2-3 ಚಮಚ ಹೂರಣ ತುಂಬಿಸಿ, ಚಿತ್ರದಲ್ಲಿರುವಂತೆ ಮೋದಕದ ಆಕಾರ ಬರುವಂತೆ ಮಡಚಬೇಕು. ನಂತರ ತುಪ್ಪ ಸವರಿದ ಇಡ್ಲಿ ತಟ್ಟೆಗಳಲ್ಲಿ ಇವನ್ನು ಜೋಡಿಸಿಕೊಂಡು, ಇಡ್ಲಿ ತರಹ ಹಬೆಯಲ್ಲಿ 7-8 ನಿಮಿಷ ಬೇಯಿಸಿ. ನಂತರ ಹೊರತೆಗೆದು, ಆವಿ ಆಡುತ್ತಿರುವಾಗಲೇ ಇದರ ಮೇಲೆ ತುಪ್ಪ ಹಾಕಿ, ಬಿಸಿಯಾಗಿ ಸವಿಯಲು ಕೊಡಿ.

ಕ್ಯಾರೆಮಲ್ ಕಸ್ಟರ್ಡ್

cookry-meethe-swad-6

ಸಾಮಗ್ರಿ : ಅರ್ಧ ಕಪ್‌ ಸಕ್ಕರೆ, ಇದರಲ್ಲಿ ಅರ್ಧ ಪುಡಿ ಸಕ್ಕರೆ, 3 ಮೊಟ್ಟೆ, 2 ಸಣ್ಣ ಚಮಚ ವೆನಿಲಾ ಎಸೆನ್ಸ್, ಗಟ್ಟಿ ಹಾಲು, ತುಸು ತೇದ ಜಾಯಿಕಾಯಿ, ಅಲಂಕರಿಸಲು ಪುದೀನಾ ಎಲೆ.

ವಿಧಾನ : ಒಂದು ದಪ್ಪ ತಳದ ಪಾತ್ರೆಯಲ್ಲಿ ಸಕ್ಕರೆ ಹಾಕಿಕೊಂಡು, ಓವನ್ನಿನಲ್ಲಿ (ಲೋ ಹೀಟ್‌) ಕರಗುವಂತೆ ಮಾಡಿ. ನಂತರ ಈ ಪಾಕನ್ನು 4 ಮೋಲ್ಡ್‌ ಗೆ ಹಾಕಿರಿಸಿ, ಮತ್ತೆ ಓವನ್ನಿನಲ್ಲಿರಿಸಿ, ಹಾರ್ಡ್‌ ಆಗುವಂತೆ ಮಾಡಿ. ಒಂದು ಚಿಕ್ಕ ಬೇಸನ್ನಿಗೆ ಒಡೆದು ಗೊಟಾಯಿಸಿದ ಮೊಟ್ಟೆ, ಪುಡಿ ಸಕ್ಕರೆ, ವೆನಿಲಾ, ಜಾಯಿಕಾಯಿ ಬೆರೆಸಿ ಚೆನ್ನಾಗಿ ಗೊಟಾಯಿಸಿ. ಇದನ್ನು ಜರಡಿಯಲ್ಲಿ ಸೋಸಿಕೊಂಡು, ಮೋಲ್ಡಿನಲ್ಲಿ ಮುಕ್ಕಾಲು ಭಾಗ ಬರುವಂತೆ ತುಂಬಿಸಿ. ನಂತರ ಓವನ್ನಿನ ರಾಕ್‌ನಲ್ಲಿ ಆಯತಾಕಾರದ ಪ್ಯಾನಿನಲ್ಲಿ, ಅದರಲ್ಲಿ ಈ ತುಂಬಿದ ಮೋಲ್ಡ್ ಇರಿಸಿ. (ಮೊದಲು ಪ್ಯಾನಿಗೆ ಬಿಸಿ ನೀರು ತುಂಬಿಸಿ). ಇದನ್ನು ಸ್ವಲ್ಪ ಹೊತ್ತು ಬೇಕ್ ಮಾಡಿ. ಇದಕ್ಕೆ ಸ್ಟೀಲ್‌ ಕಡ್ಡಿ ಚುಚ್ಚಿ ನೋಡಿ, ಅದು ಸಲೀಸಾಗಿ ಒಳ ಹೋದರೆ ಬೇಕಿಂಗ್‌ ಸಾಕು ಎಂದರ್ಥ. ನಂತರ ಸ್ಪ್ಯಾಟುಲಾ ನೆರವಿನಿಂದ ಕಸ್ಟರ್ಡ್‌ ನ ಅಂಚು ಹಿಡಿದು, ಮೋಲ್ಡ್ ಮೇಲೆ ಪ್ಲೇಟ್‌ ಇರಿಸಿ, ಅದರ ಮೇಲೆ ಡಿಶ್‌ ನ್ನು ಬೋರಲು ಹಾಕಿ. ಈಗ ಸಿದ್ಧವಾದ ಕ್ಯಾರೆಮಲ್ ಸಿರಪ್‌ನ್ನು ಸಾಸ್‌ ತರಹ ಕಸ್ಟರ್ಡ್‌ ಅಂಚಿನಲ್ಲಿ ಹರಡಿ, ಚಿತ್ರದಲ್ಲಿರುವಂತೆ ಪುದೀನಾದಿಂದ ಅಲಂಕರಿಸಿ ಸವಿಯಲು ಕೊಡಿ.

ರವೆ ತೆಂಗಿನ ಬರ್ಫಿ

cookry-meethe-swad-7

ಸಾಮಗ್ರಿ : ಅರ್ಧ ಸೌಟು ತುಪ್ಪ, 1-1 ಕಪ್‌ ರವೆ, ಸಕ್ಕರೆ, ಗಿಟುಕು ತೆಂಗಿನ ತುರಿ, 2 ಕಪ್‌ ಹಾಲು, ತುಸು ಏಲಕ್ಕಿ ಪುಡಿ, ಅಲಂಕರಿಸಲು ಡ್ರೈ ಫ್ರೂಟ್ಸ್.

ವಿಧಾನ : ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಮೊದಲು ಡ್ರೈ ಫ್ರೂಟ್ಸ್ ಹುರಿದು ತೆಗೆಯಿರಿ. ನಂತರ ಇನ್ನಷ್ಟು ತುಪ್ಪ ಹಾಕಿ ಸಣ್ಣ ರವೆ ಹುರಿಯಿರಿ. ನಂತರ ಇದಕ್ಕೆ ತೆಂಗಿನ ತುರಿ ಬೆರೆಸಿ, ಮತ್ತೆ ಕೆದಕಿರಿ. ಇದನ್ನು ಕೆಳಗಿಳಿಸಿ ಆರಲು ಬಿಡಿ. ಇನ್ನೊಂದು ಪಾತ್ರೆಯಲ್ಲಿ ಹಾಲನ್ನು ಅರ್ಧದಷ್ಟು ಹಿಂಗುವಂತೆ ಕುದಿಸಬೇಕು. ಇದಕ್ಕೆ ರವೆ ಮಿಶ್ರಣ ಬೆರೆಸಿ ಕೈಯಾಡಿಸಿ. ಹಾಲು ಇನ್ನಷ್ಟು ಹಿಂಗಿದಾಗ, ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಬೆರೆಸಿರಿ. ಇದನ್ನು ಜಿಡ್ಡು ಬಿಟ್ಟುಕೊಳ್ಳುವವರೆಗೂ ಕೆದಕಬೇಕು. ನಂತರ ಒಂದು ಟ್ರೇನಲ್ಲಿ ತುಪ್ಪ ಸವರಿ, ಅದಕ್ಕೆ ರವೆ ಮಿಶ್ರಣ ಹರಡಿ, ಸಮನಾವಾಗಿಸಿ, ಚೆನ್ನಾಗಿ ಆರಲು ಬಿಡಿ. ನಂತರ ಚಿತ್ರದಲ್ಲಿರುವಂತೆ ಬರ್ಫಿ ಕತ್ತರಿಸಿ, ಡ್ರೈ ಫ್ರೂಟ್ಸ್ ನಿಂದ ಅಲಂಕರಿಸಿ.

ಬೆಲ್ಲದ ಕೊಬ್ಬರಿ ಮಿಠಾಯಿ

cookry-meethe-swad-8

ಸಾಮಗ್ರಿ : ಒಂದು ಗಿಟುಕು ಕೊಬ್ಬರಿ ತುರಿ, 1-1 ಕಪ್‌ ತುರಿದ ಬೆಲ್ಲ ಹಾಲು, ಅರ್ಧ ಕಪ್‌ ಮಸೆದ ಖೋವಾ, ಹಾಲಲ್ಲಿ  ನೆನೆದ ತುಸು ಕೇಸರಿ, ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್.

ವಿಧಾನ : ಮೊದಲು ಕೊಬ್ಬರಿ ತುರಿಯನ್ನು ತುಪ್ಪದಲ್ಲಿ ಲಘುವಾಗಿ ಹುರಿದು ಒಂದು ಬೇಸನ್ನಿಗೆ ಹಾಕಿಡಿ. ಈಗ ಒಂದು ಬಾಣಲೆಯಲ್ಲಿ ತುಸು ನೀರು ಬಿಸಿ ಮಾಡಿ, ಬೆಲ್ಲ ಹಾಕಿ ಕರಗಿಸಿ. ಕರಗಿದ ಬೆಲ್ಲಕ್ಕೆ ಕೊಬ್ಬರಿ ಸೇರಿಸಿ, ನಂತರ ಹಾಲು ಬೆರೆಸಿ, ಮಂದ ಉರಿಯಲ್ಲಿ ಕೆದಕುತ್ತಾ ಅರ್ಧದಷ್ಟು ಹಿಂಗಿಸಿ. ನಂತರ  ಖೋವಾ, ಏಲಕ್ಕಿ, ಕೇಸರಿ ಸೇರಿಸಿ. ಇದನ್ನು ಕೆಳಗಿಳಿಸಿ ಮೇಲೆ ಡ್ರೈ ಫ್ರೂಟ್ಸ್ ಉದುರಿಸಿ. ನಂತರ ಮೋಲ್ಡ್‌ ಗಳಿಗೆ ಇದನ್ನು ತುಂಬಿಸಿ, ಆರಿಸಿ, ಫ್ರಿಜ್‌ ನಲ್ಲಿರಿಸಿ ಸೆಟ್‌ ಮಾಡಿ. ನಂತರ ಹೊರತೆಗೆದು ಚಿತ್ರದಲ್ಲಿರುವಂತೆ ಕತ್ತರಿಸಿ, ಅಲಂಕರಿಸಿ ಸವಿಯಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ