ಮಧ್ಯಮ ವರ್ಗದ ದಂಪತಿ ವಿವೇಕ್‌ ಹಾಗೂ ವಿನುತಾ, ತಮ್ಮ ಏಕೈಕ ಪುತ್ರಿ ಊವರ್ಶಿ ಹಾಗೂ ವೃದ್ಧ ತಾಯಿ ತಂದೆಯರೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಕುಟುಂಬ ಚಿಕ್ಕದಾಗಿತ್ತು. ಮನೆಯಲ್ಲಿ ಎಲ್ಲವೂ ಅತ್ಯವಶ್ಯಕ ವಸ್ತುಗಳು ಲಭ್ಯವಾಗಿದ್ದವು. ಅವರಿಗೆ ಹೆಚ್ಚಿನ ದುರಾಸೆಯೇನೂ ಇರಲಿಲ್ಲ. ಅವರಿಗಿದ್ದ ಏಕೈಕ ಅಪೇಕ್ಷೆಯೆಂದರೆ, ತಮ್ಮ ಪುತ್ರಿಯನ್ನು ಚೆನ್ನಾಗಿ ಓದಿಸಿ ಅವಳ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂಬುದಾಗಿತ್ತು.

ಊವರ್ಶಿ ಕೂಡ ತನ್ನ ತಾಯಿ ತಂದೆಯರ ಅಪೇಕ್ಷೆಯನ್ನು ವಾಸ್ತವ ರೂಪಕ್ಕೆ ತರಲು ಪ್ರಯತ್ನ ನಡೆಸಿದ್ದಳು. 10 ವರ್ಷದ ಊವರ್ಶಿ ಓದಿನಲ್ಲಷ್ಟೇ ಅಲ್ಲ ಕ್ರೀಡೆಯಲ್ಲೂ ಕೂಡ ಮುಂದಿದ್ದಳು. ಅವಳು ಎಲ್ಲ ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿಯಾಗಿದ್ದಳು.

ವಿನುತಾ ತನ್ನ ಮಗಳ ಓದಿನ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿದ್ದಳು. ಮಗಳಿಗೆ ದಿನ ಓದಿಸುವುದು ಅವಳ ದಿನಚರಿಯೇ ಆಗಿಬಿಟ್ಟಿತ್ತು. ತಂದೆ ವಿವೇಕ್‌ತನ್ನ ಆಫೀಸಿನಿಂದ ಬರುತ್ತಿದ್ದಂತೆ ಮಗಳನ್ನು ಪಾರ್ಕಿಗೆ ಕರೆದುಕೊಂಡು ಹೋಗುತ್ತಿದ್ದ. ರಾತ್ರಿ ಅವಳು ತನ್ನ ಅಜ್ಜಿ ತಾತನಿಂದ ಕಥೆಗಳನ್ನು ಕೇಳುವುದರ ಮೂಲಕ ಅವಳ ದಿನ ಕೊನೆಗೊಳ್ಳುತ್ತಿತ್ತು. ಈ ರೀತಿಯಾಗಿ ಅವಳಲ್ಲಿ ಒಳ್ಳೆಯ ಸಂಸ್ಕಾರ ಮನೆ ಮಾಡುತ್ತಿತ್ತು.

ಊವರ್ಶಿ ಓದುತ್ತಿದ್ದುದು 5ನೇ ಕ್ಲಾಸಿನಲ್ಲಿ. ಅವಳು ತನ್ನೂರಿನಿಂದ ಬಸ್ಸಿನಲ್ಲಿ ಶಾಲೆಗೆ ಹೋಗಿ ಬಂದು ಮಾಡುತ್ತಿದ್ದಳು. ತಾಯಿ ವಿನುತಾ ಮಗಳನ್ನು ಶಾಲೆಗೆ ಕಳಿಸಲು ಹಾಗೂ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಲು ಬರುತ್ತಿದ್ದಳು. ಅಕಸ್ಮಾತ್‌ ಬಸ್ ಬರಲು ತಡವಾದರೆ ಬಸ್‌ ಡ್ರೈವರ್‌ಗೆ ಫೋನ್‌ ಮಾಡಿ ಕೇಳುತ್ತಿದ್ದಳು.

ಬಸ್ಸಿನಿಂದ ಇಳಿಯುತ್ತಿದ್ದಂತೆ ಊವರ್ಶಿ ತನ್ನ ಅಮ್ಮನಿಗೆ, “ಮಮ್ಮಿ, ಕೆಲವು ಮಕ್ಕಳ ತಾಯಂದಿರು ಬರುವುದು ತಡವಾಗುತ್ತದೆ. ಹಾಗಾಗಿ ಬಸ್‌ ಹೊರಡುವುದು ತಡವಾಗುತ್ತದೆ. ಎಲ್ಲಿಯವರೆಗೆ ಪುಟ್ಟ ಮಕ್ಕಳ ಅಮ್ಮಂದಿರು ಬರುವುದಿಲ್ಲವೋ ಅಲ್ಲಿಯವರೆಗೆ ಅವರನ್ನು ಬಸ್ಸಿನಿಂದ ಇಳಿಯಲು ಅವಕಾಶ ಕೊಡುವುದಿಲ್ಲ. ನೀನೇಕೆ ಚಿಂತೆ ಮಾಡ್ತೀಯಾ? ಮಮ್ಮಿ, ನಮ್ಮ ಶಾಲೆಯಲ್ಲಿ ಹಾಗೂ ಬಸ್ಸಿನಲ್ಲಿ ಎಲ್ಲರೂ ಒಳ್ಳೆಯವರಿದ್ದಾರೆ,” ಎಂದು ತಿಳಿಹೇಳುತ್ತಿದ್ದಳು.

ಊವರ್ಶಿಗೆ ವಾರದಲ್ಲಿ ಎರಡು ದಿನ ಆಟದ ಪೀರಿಯಡ್‌ ಇರುತ್ತಿತ್ತು. ಆ ಒಂದು ಪೀರಿಯಡ್‌ ಗಾಗಿ ಮಕ್ಕಳು ಬಹಳ ಉತ್ಸಾಹದಿಂದ ನಿರೀಕ್ಷಿಸುತ್ತಿದ್ದರು. ಊವರ್ಶಿಗೂ ಅದೇ ನಿರೀಕ್ಷೆ ಇರುತ್ತಿತ್ತು. ಚಿಕ್ಕ ತರುಣ ದೈಹಿಕ ಶಿಕ್ಷಕ ಮಹೇಶ್‌ಎಲ್ಲರಿಗಿಂತಲೂ ಊವರ್ಶಿಯ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದ. ಅವಳ ಬೆನ್ನು ನೇವರಿಸುವುದು, ಅವಳನ್ನು ಹೊಗಳುವುದು ಮಹೇಶನಿಗೇ ಅಭ್ಯಾಸವೇ ಆಗಿಹೋಗಿತ್ತು. ಪುಟ್ಟ ಹುಡುಗಿ ಊವರ್ಶಿ ಕೂಡ ಮಹೇಶ್‌ ಜೊತೆಗೆ ಚೆನ್ನಾಗಿ ನಗುತ್ತಾ ಮಾತನಾಡುತ್ತಿದ್ದಳು.

ಮಹೇಶನಿಗೆ ಮಾತ್ರ ಅವಳ ಮೇಲಿನ ದೃಷ್ಟಿ ಬೇರೆಯೇ ಆಗಿತ್ತು. ದಿನದಿಂದ ದಿನಕ್ಕೆ ಅವನು ಅವಳನ್ನು ತನ್ನ ಲಾಲಸೆಗೆ ಹೇಗೆ ಬಳಸಿಕೊಳ್ಳಬೇಕೆಂದು ಯೋಚಿಸುತ್ತಿದ್ದ. ಅವಳನ್ನು ತಾನು ಬಳಸಿಕೊಂಡರೂ ಅದರಿಂದ ಹೇಗೆ ಪಾರಾಗಬೇಕೆಂದು ಅವನ ಮನಸ್ಸಿನಲ್ಲಿ ಸದಾ ಯೋಚನೆ ನಡೆಯುತ್ತಿತ್ತು.

ಒಂದು ದಿನ ಅವನು ಊವರ್ಶಿಯನ್ನು ತನ್ನ ಬಳಿ ಕರೆದು, “ಊವರ್ಶಿ ಪುಟ್ಟಾ, ಇಂಟರ್‌ ಸ್ಕೂಲ್‌ ಕಾಂಪಿಟಿಶನ್‌ ನಡೆಯಲಿದೆ. ನೀನಂತೂ ಎಷ್ಟೊಂದು ವೇಗವಾಗಿ ಓಡ್ತೀಯ…. ನೀನು ಆ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಪಡೆದುಕೊಳ್ಳಬೇಕು. ನಾನು ನಿನ್ನ ಹೆಸರನ್ನು ಬರೆಸ್ತೀನಿ. ನೀನು ಇನ್ನು ಮುಂದೆ ಹೆಚ್ಚೆಚ್ಚು ಪ್ರಾಕ್ಟೀಸ್‌ ಮಾಡಬೇಕು. ಈ ವಿಷಯವನ್ನು ನಿನ್ನ ತಾಯಿ ತಂದೆಯರಿಗೆ ತಿಳಿಸಬೇಕು,” ಎಂದು ಹೇಳಿದ.

ಮಹೇಶನಿಂದ ಈ ವಿಷಯ ಕೇಳಿ ಊವರ್ಶಿಗೆ ಬಹಳ ಖುಷಿಯಾಯಿತು. “ಸರ್‌, ನಾನು ಬಹಳ ಪರಿಶ್ರಮ ಪಡ್ತೀನಿ ಹಾಗೂ ಬಹುಮಾನ ಗೆದ್ದು ತರ್ತೀನಿ,” ಎಂದಳು ಉತ್ಸಾಹದಿಂದ, “ಈ ವಿಷಯ ಕೇಳಿ ನಮ್ಮ ಮನೆಯಲ್ಲಿ ಎಲ್ಲರೂ ಖುಷಿಪಡ್ತಾರೆ. ನಾವು ಯಾವಾಗ ಸ್ಪರ್ಧೆಗೆ ಹೋಗಬೇಕಿದೆ ಸರ್‌?” ಎಂದಳು.

“ಅದನ್ನು ನಾನು ನಿನಗೆ ಹೇಳ್ತೀನಿ. ಆದರೆ ನೀನು ಈ ವಿಷಯವನ್ನು ಕ್ಲಾಸಿನಲ್ಲಿ ಈಗಲೇ ಯಾರಿಗೂ ಹೇಳಬೇಡ. ಏಕೆಂದರೆ ಅವರಿಗೆಲ್ಲ ನಿನ್ನ ಬಗ್ಗೆ ಅಸೂಯೆಯಾಗುತ್ತದೆ,” ಎಂದು ಮಹೇಶ್‌ ಹೇಳಿದ.

“ಸರಿ ಸರ್‌, ನಾನು ಯಾರಿಗೂ ಹೇಳುವುದಿಲ್ಲ. ನಾನು ಗೆದ್ದ ಬಳಿಕವೇ ಬೇರೆಯವರಿಗೆ ಹೇಳ್ತೀನಿ.”

“ಹಾಗೆ ಮಾಡು,” ಎನ್ನುತ್ತಾ, “ಊವರ್ಶಿ, ನೀನು ಈ ಚಾಕ್ಲೆಟ್‌ ತಿನ್ನು,” ಎಂದು ಹೇಳಿದ.

“ಬೇಡ ಸರ್‌, ಯಾರು ಏನೇ ಕೊಟ್ಟರೂ ತಿನ್ನಬಾರದು ಅಂತಾ ಅಮ್ಮ ಹೇಳಿದ್ದಾರೆ,” ಎಂದಳು.

“ಆದರೆ ನಾನು ನಿನ್ನ ಪ್ರೀತಿಯ ಸರ್‌  ಅಲ್ವಾ…. ನನ್ನಿಂದ ತಗೋಬಾರ್ದು ಅಂತ ಮಮ್ಮಿ ಹೇಳುವುದಿಲ್ಲ. ಅಂದಹಾಗೆ ನಿನಗೆ ಏನು ಇಷ್ಟ ಅಂತ ಹೇಳು ನಾನು ನಿನಗೆ ಅದನ್ನೇ ತೆಗೆದುಕೊಂಡು ಬರ್ತೀನಿ,” ಎಂದು ಮಹೇಶ್‌ಹೇಳಿದ.

“ಬೇಡ ಸರ್‌. ನನಗೇನೂ ಬೇಡ,” ಇಷ್ಟು ಹೇಳಿ ಊವರ್ಶಿ ಅಲ್ಲಿಂದ ಹೊರಟುಹೋದಳು.

ಮನೆಗೆ ಹೋದ ಬಳಿಕ ಅವಳು ಇಂಟರ್‌ ಸ್ಕೂಲ್‌ ಚಾಂಪಿಯನ್‌ ಬಗ್ಗೆ ಹೇಳಿದಾಗ ಎಲ್ಲರೂ ಬಹಳ ಖುಷಿಪಟ್ಟರು.

ಈಗ ಮಹೇಶನಿಗೆ ತಳಮಳ ಹೆಚ್ಚುತ್ತಾ ಹೊರಟಿತು. ಅವನಿಗೆ ತನ್ನ ಮನದ ಬಯಕೆ ಪೂರೈಸಿಕೊಳ್ಳಲು ಕಾತುರತೆ ಹೆಚ್ಚಾಗುತ್ತಿತ್ತು.

ಬುಧವಾರದ ಆಟದ ಪೀರಿಯಡ್‌ ನಲ್ಲಿ ಮಹೇಶ್‌ ಊವರ್ಶಿಯನ್ನು ಕರೆದು, “ಊವರ್ಶಿ, ಶನಿವಾರದಂದು ಕಾಂಪಿಟಿಶನ್‌ ಇದೆ. ನೀನು ಸ್ಕೂಲ್‌ ಯೂನಿಫಾರ್ಮ್ ಹಾಕಿಕೊಂಡು ಸಿದ್ಧಳಾಗಿರು. ನನ್ನೊಂದಿಗೆ ಬರಲು ಇನ್ನೂ ಇಬ್ಬರು ಮಕ್ಕಳು ತಯಾರಿದ್ದಾರೆ,” ಎಂದು ಹೇಳಿದ.

“ಸರಿ ಸರ್‌,” ಎಂದು ಹೇಳಿ ಊವರ್ಶಿ ಹೊರಟಳು. ಆಗ ಮಹೇಶ್‌ ಅವಳ ಕೈ ಹಿಡಿದು, “ನೀನು ಗೆಲ್ಲಲೇಬೇಕು. ನಿನ್ನ ಸರ್‌ಇಚ್ಛೆ ಪೂರ್ತಿಗೊಳಿಸ್ತಿ ಅಲ್ವಾ?”

“ಹೌದು ಸರ್‌. ನಾನು ವೇಗವಾಗಿ ಓಡ್ತೀನಿ.” ಊವರ್ಶಿ ಮನೆಗೆ ಹೋಗಿ ಅಮ್ಮನಿಗೆ, “ಮಮ್ಮಿ, ಶನಿವಾರ ನನಗೆ ಓಟದ ಸ್ಪರ್ಧೆ ಇದೆ. ನಾನು ಯೂನಿಫಾರ್ಮ್ ಹಾಕಿಕೊಂಡು ಸಿದ್ಧಳಾಗಿರಲು ಮಹೇಶ್‌ ಸರ್‌ ಹೇಳಿದ್ದಾರೆ. ಆಟ ಮುಗಿದ ಬಳಿಕ ಅವರು ನನ್ನ ಮನೆಗೆ ಬಿಟ್ಟು ಹೋಗುತ್ತಾರಂತೆ,” ಎಂದು ಹೇಳಿದಳು.

“ಸರಿ ಊವರ್ಶಿ. ನೀನು ಧೈರ್ಯದಿಂದ ಓಡು. ಯಾವುದೇ ಕಾರಣಕ್ಕೂ ಹೆದರಬೇಡ.”

“ಆಯ್ತು ಅಮ್ಮ…..”

ಶನಿವಾರ್ ಬೆಳಗ್ಗೆ 9 ಗಂಟೆ ಸಮಯ. ಮಹೇಶ್‌ ಇಬ್ಬರು ಮಕ್ಕಳನ್ನು ಕಾರಿನಲ್ಲಿ ಕೂರಿಸಿಕೊಂಡು ಊವರ್ಶಿಯ ಮನೆಯ ಹತ್ತಿರ ಬಂದ. ಊವರ್ಶಿಯ ಹತ್ತಿರ ನಿಂತುಕೊಂಡಿದ್ದ ಅವಳ ತಾಯಿ ತಂದೆಗೆ ಮಹೇಶ್‌ ಗಾಡಿಯಿಂದಲೇ ಗುಡ್‌ ಮಾರ್ನಿಂಗ್‌ ಹೇಳಿದ. ಅವರು ಏನನ್ನಾದರೂ ಕೇಳುವ ಮೊದಲೇ, “ಊವರ್ಶಿ ಪುಟ್ಟಾ, ತಡವಾಯ್ತು ಬೇಗ ಹೊರಡು,” ಎಂದು ಅವಸರಿಸಿದ.

“ಆಯ್ತು ಸರ್‌,” ಎನ್ನುತ್ತಾ ಊವರ್ಶಿ ಕಾರಿನಲ್ಲಿ ಕುಳಿತಳು.

ಆಗ ವಿನುತಾ, “ಮಹೇಶ್‌ಸರ್‌, ಊವರ್ಶಿ ಬಗ್ಗೆ ಗಮನ ಕೊಡಿ,” ಎಂದಳು.

“ಆಯ್ತು ಮೇಡಂ, ನೀವು ಅದರ ಬಗ್ಗೆ ಚಿಂತೆ ಮಾಡಬೇಡಿ. ಅವಳನ್ನು ವಾಪಸ್‌ ಬಿಡಲು ನಾನೇ ಸ್ವತಃ ಮನೆ ತನಕ ಬರ್ತೀನಿ,” ಎಂದ.

ಸ್ವಲ್ಪ ದೂರ ಹೋಗುತ್ತಿದ್ದಂತೆ ಅವನ ಪರಿಚಯದವರಾಗಿದ್ದ ಇಬ್ಬರು ಮಕ್ಕಳು ಕಾರಿನಿಂದ ಇಳಿದರು. ಆ ಮಕ್ಕಳನ್ನು ಅವನು ಹಾಗೆಯೇ ಸುತ್ತಾಡಿಸಲೆಂದು ಕರೆದುಕೊಂಡು ಬಂದಿದ್ದ. ಏಕೆಂದರೆ ಊವರ್ಶಿಯ ತಾಯಿ ತಂದೆಗೆ ತನ್ನ ಮಗಳ ಜೊತೆ ಬೇರೆ ಮಕ್ಕಳು ಹೋಗುತ್ತಿದ್ದಾರೆಂದು ತಿಳಿಯಲಿ ಎಂಬುದೇ ಅವನ ಯೋಜನೆಯಾಗಿತ್ತು.

ಈಗ ಕಾರಿನಲ್ಲಿ ಮಹೇಶ್‌ ಹಾಗೂ ಊವರ್ಶಿ ಮಾತ್ರ ಇದ್ದರು. “ಸರ್‌, ಆ ಮಕ್ಕಳಿಬ್ಬರು ಎಲ್ಲಿಗೆ ಹೋದರು?” ಎಂದು ಊವರ್ಶಿ ಕೇಳಿದಳು.

“ಅವರು ಮೊದಲು ನಾವೂ ಬರ್ತೀವಿ ಎಂದು ಹೇಳಿದರು. ಆಮೇಲೆ ಇಲ್ಲ ನಾವು ಬರೋದಿಲ್ಲ ಎಂದು ಹೇಳಿದ್ದರಿಂದ ನಾನು ಅವರನ್ನು ಇಳಿಸಬೇಕಾಯಿತು,” ಎಂದ.

ಮಹೇಶ್‌ ಕಾರನ್ನು ವೇಗವಾಗಿ ಓಡಿಸುತ್ತಾ ಒಂದು ನಿರ್ಜನ ರಸ್ತೆಗೆ ತೆಗೆದುಕೊಂಡು ಹೋದ. ಊವರ್ಶಿಗೆ ಮಹೇಶನ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎನ್ನುವುದರ ಕಲ್ಪನೆ ಕಿಂಚಿತ್ತೂ ಇರಲಿಲ್ಲ. ಅಷ್ಟೊಂದು ಯೋಚಿಸುವ ಬುದ್ಧಿಯಾಗಲಿ, ವಯಸ್ಸಾಗಲಿ ಅವಳದ್ದಾಗಿರಲಿಲ್ಲ. ಅವಳಂತೂ ಕಾರಿನ ಗಾಜಿನ ಮೂಲಕ ಹೊರಗಿನ ದೃಶ್ಯವನ್ನು ನೋಡುತ್ತಾ ಖುಷಿಯಾಗಿದ್ದಳು. ಅವಳಿಗೆ ತನ್ನ ಸರ್‌ ಮೇಲೆ ವಿಶ್ವಾಸವಿತ್ತು. ಹೀಗಾಗಿ ಹೆದರಿಕೆಯ ಅನುಭವ ಅವಳಲ್ಲಿ ಇರಲಿಲ್ಲ. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಮಹೇಶ್ ಗಿಡಗಂಟಿಗಳಿದ್ದ ಕಡೆ ಕಾರು ನಿಲ್ಲಿಸಿದ.

ಅದನ್ನು ಕಂಡು ಊವರ್ಶಿ ಕೇಳಿದಳು, “ಏನಾಯ್ತು ಸರ್‌? ಇದಂತೂ ಕಾಡಿನ ಹಾಗೆ ಕಾಣ್ತಿದೆ. ನಾವು ಇಲ್ಲೇಕೆ ಬಂದ್ವಿ?”

“ಊವರ್ಶಿ, ನಮ್ಮ ಕಾರು ಕೆಟ್ಟಿದೆ ಅನಿಸುತ್ತೆ. ನೀನು ಸ್ವಲ್ಪ ಹಿಂದಿನ ಸೀಟಿನಲ್ಲಿ ಕುಳಿತುಕೊ ನಾನು ಕಾರು ಸರಿಪಡಿಸ್ತೀನಿ.”

ಮಹೇಶನ ಮಾತಿಗೆ ಒಪ್ಪಿ ಊವರ್ಶಿ ಹಿಂದಿನ ಸೀಟಿಗೆ ಹೋಗಿ ಕುಳಿತಳು. ಮಹೇಶ ಅದೇ ಅವಕಾಶಕ್ಕಾಗಿ ಕಾಯುತ್ತಿದ್ದ. ಅವನು ತಕ್ಷಣವೇ ಹಿಂದಿನ ಸೀಟಿಗೆ ಬಂದು ಕುಳಿತ.

“ಊವರ್ಶಿ, ನೀನು ಬಹಳ ಚೆಂದ ಕಾಣ್ತೀದೀಯಾ. ಬಾ ಇಲ್ಲಿ ನನ್ನ ಹತ್ರ ಕುಳಿತುಕೊ,” ಎಂದು ಅವಳನ್ನು ಕರೆದ.

“ಇಲ್ಲ ಸರ್‌. ನಾನು ನಿಮ್ಮ ಹತ್ರ ಕುಳಿತುಕೊಳ್ಳುವುದಿಲ್ಲ,” ಊವರ್ಶಿ ಉತ್ತರಿಸಿದಳು.

“ಯಾಕೆ ಊವರ್ಶಿ, ನೀನು ನಿನ್ನ ಸರ್‌ ನನ್ನು ಪ್ರೀತಿಸುದಿಲ್ವಾ? ಬಾ ಹತ್ರ. ನಾನು ನಿನಗೆ ಇವತ್ತು ಒಂದು ಹೊಸ ಆಟ ಕಲಿಸ್ತೀನಿ,” ಎಂದ.

“ಇಲ್ಲ ಸರ್‌, ನಿಮ್ಮ ಹತ್ರ ಕುಳಿತುಕೊಳ್ಳುವುದಿಲ್ಲ. ನನ್ನ ಅಮ್ಮ ಹಾಗೆಲ್ಲ ಕುಳಿತುಕೊಳ್ಳಬಾರದು ಅಂತ ಹೇಳ್ತಿರುತ್ತಾರೆ,” ಎಂದಳು.

ಊವರ್ಶಿ ನಿರಾಕರಿಸಿದಾಗ ಮಹೇಶ್‌ಅವಳನ್ನು ಒತ್ತಾಯಪೂರ್ವಕವಾಗಿ ತನ್ನತ್ತ ಎಳೆದುಕೊಂಡು ಅವಳನ್ನು ತನ್ನ ಬಾಹುಗಳಲ್ಲಿ ಬಂಧಿಸಿ ಚುಂಬಿಸಿದ.

ಅವಳು ಜೋರಾಗಿ ಚೀರುತ್ತಾ, “ಸರ್‌, ಅಮ್ಮ ಹೀಗೆಲ್ಲ ಮಾಡಬಾರದೆಂದು ಹೇಳಿದ್ದಾರೆ…. ನೀವೇಕೆ ನನಗೆ ಕಿಸ್‌ಕೊಟ್ಟಿರಿ…..?”

“ಕೆಟ್ಟ ಜನರು ಹಾಗೆಲ್ಲ ಮಾಡಬಾರೆಂದು ನಿನ್ನ ಮಮ್ಮಿ ಹೇಳಿದ್ದಾರೆ. ನಾನು ನಿನ್ನ ಸರ್‌ಅಲ್ವಾ….,” ಎನ್ನುತ್ತಾ ಮಹೇಶ್‌ಆವೇಶಕ್ಕೊಳಗಾದವನಂತೆ ಅವಳ ಬಾಯನ್ನು ತನ್ನ ಕೈಯಿಂದ ಮುಚ್ಚಿ ಅವಳ ದೇಹವನ್ನು ತನ್ನಿಚ್ಛೆಯಂತೆ ಬಳಸಿಕೊಳ್ಳತೊಡಗಿದ. ಅವಳು ನೋವಿನಿಂದ ನರಳುತ್ತಿದ್ದರೂ ಕೇಳದೆ, ಅವಳ ಮೇಲೆ ಬಲಾತ್ಕಾರ ಮಾಡುತ್ತಾ ತನ್ನ ದೇಹದ ಹಸಿವನ್ನು ತೀರಿಸಿಕೊಂಡ.

ತನ್ನ ಇಚ್ಛೆ ಈಡೇರುತ್ತಿದ್ದಂತೆಯೇ, “ಊವರ್ಶಿ, ನೀನು ಈ ವಿಷಯವನ್ನು ಯಾರಿಗೂ ತಿಳಿಸಬೇಡ! ಒಂದು ವೇಳೆ ನೀನು ಈ ವಿಷಯ ತಿಳಿಸಿದರೆ ಅವರು ನಿನ್ನನ್ನು ಹೊಡೆಯುತ್ತಾರೆ,” ಎಂದು ಹೇಳಿದ.

ಮಹೇಶ್‌ಮತ್ತೆ ಮತ್ತೆ  ಆ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಅವಳ ಮನಸ್ಸಿನಲ್ಲಿ ಬಿತ್ತಿದ್ದ. ಮಹೇಶನ ಹಿಡಿತಕ್ಕೆ ಸಿಲುಕಿ ಅವಳು ಬಹಳ ದುರ್ಬಲಗೊಂಡಿದ್ದಳು. ಅವಳಿಗೆ ಬಟ್ಟೆ ಹಾಕಿಕೊಳ್ಳುವಷ್ಟು ಕೂಡ ಶಕ್ತಿ ಇರಲಿಲ್ಲ. ಮಹೇಶನೇ ಅವಳಿಗೆ ಬಟ್ಟೆ ತೊಡಿಸಿದ. ಊವರ್ಶಿಯ ಕೋಮಲ ತುಟಿಗಳು ನೀಲಿ ಬಣ್ಣಕ್ಕೆ ತಿರುಗಿದ್ದವು. ಅವಳ ಈ ಸ್ಥಿತಿ ಕಂಡು ಮಹೇಶ್‌, “ಓಡುವಾಗ ಜೋರಾಗಿ ಬಿದ್ದು ಗಾಯವಾಯಿತೆಂದು ನೀನು ಮನೆಯಲ್ಲಿ ಹೇಳಬೇಕು,” ಎಂದು ಅವಳಿಗೆ ತಾಕೀತು ಮಾಡಿದ.

ಊವರ್ಶಿ ಎಷ್ಟೇ ಚಿಕ್ಕವಳಾಗಿದ್ದರೂ ಅವಳಿಗೆ ತನ್ನ ಜೊತೆಗೆ ನಡೆಯಬಾರದ್ದು ನಡೆದಿದೆ ಎನ್ನುವುದು ಮಾತ್ರ ಗೊತ್ತಾಗಿತ್ತು. ಅಲ್ಲಿಂದ ಕಾರಿನಲ್ಲಿ ಕರೆದುಕೊಂಡು ಬಂದ ಮಹೇಶ್‌ಅವಳನ್ನು ಅವಳ ಮನೆಯ ಹತ್ತಿರವೇ ಇಳಿಸಿ, ವೇಗವಾಗಿ ಹೊರಟು ಹೋದ.

ಊವರ್ಶಿ ಹೇಗೋ ನರಳಿಕೊಂಡು ಮನೆ ತಲುಪಿ ಬೆಲ್‌ಬಾರಿಸಿದಳು. ಅಮ್ಮ ಬಾಗಿಲು ತೆರೆದು ಮಗಳ ಸ್ಥಿತಿ ಕಂಡು, “ನನ್ನ ಮಗಳಿಗೆ ಏನಾಯ್ತು?” ಎಂದು ಜೋರಾಗಿ ಕಿರುಚಿದಳು.

ಹೆಂಡತಿ ಜೋರಾಗಿ ಕಿರುಚಿದ್ದನ್ನು ಕೇಳಿ ಹಿತ್ತಲಲ್ಲಿದ್ದ ಗಂಡ ಓಡೋಡುತ್ತಾ ಬಂದ. ಅವನಿಗೂ ಗಾಬರಿಯಾಗಿತ್ತು. ಅಮ್ಮ ಊವರ್ಶಿಯನ್ನು ತಬ್ಬಿಕೊಂಡಳು.

ಮಗಳು ಗಾಬರಿಗೊಂಡಂತೆ ಕಾಣುತ್ತಿದ್ದುದನ್ನು ಕಂಡು ವಿವೇಕ್‌ ವಿನುತಾ ಸಹ ಚಿಂತಿತರಾಗಿ, “ಏನಾಯ್ತು ಊವರ್ಶಿ?” ಎಂದು ಮತ್ತೆ ಮತ್ತೆ ಕೇಳಿದರು. ಆದರೆ ಊರ್ವಶಿ ಏನನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಆದರೆ ಬಿಟ್ಟುಬಿಡದೇ ಅಳುತ್ತಲೇ ಇದ್ದಳು.

ಕೊನೆಗೊಮ್ಮೆ, “ಅಮ್ಮಾ, ನಾನು ಓಡುವಾಗ ಜೋರಾಗಿ ಬಿದ್ದೆ. ಹಾಗಾಗಿ ನನಗೆ ಏಟಾಗಿದೆ. ಮೈ ಕೈಯೆಲ್ಲ ನೋಯ್ತಿದೆ. ನಿದ್ರೆ ಕೂಡ ಬರ್ತಿದೆ ನನ್ನನ್ನು ಮಲಗಲು ಬಿಡಮ್ಮಾ,” ಎಂದು ಹೇಳಿದಳು.

“ಬೇಡ ಊವರ್ಶಿ, ಮೊದಲು ನಿನಗೆ ಸ್ನಾನ ಮಾಡಿಸ್ತೀನಿ. ಬಟ್ಟೆ ಬದಲಾಯಿಸಿ ಡಾಕ್ಟರ್‌ಬಳಿ ಹೋಗೋಣ. ನಿನ್ನ ತುಟಿಗೆ ಬಹಳ ಏಟಾಗಿದೆ,” ಎಂದು ಹೇಳುತ್ತಾ ಅವಳನ್ನು ಬಚ್ಚಲುಮನೆಗೆ ಕರೆದುಕೊಂಡು ಹೋದಳು ವಿನುತಾ.

ಊವರ್ಶಿಗೆ ಸ್ನಾನ ಮಾಡಿಸುವಾಗ ಅಳ ಬಟ್ಟೆಯ ಮೇಲಿದ್ದ ರಕ್ತದ ಕಲೆಯನ್ನು ಕಂಡು ವಿನುತಾ ಜೋರಾಗಿ ಕಿರುಚಿದಳು,

“ಊವರ್ಶಿ, ಈ ರಕ್ತ ನಿನಗೆ ಹೇಗೆ ಬಂತು?” ವಿನುತಾ ಬಹಳ ಗಾಬರಿಯಾಗಿದ್ದಳು. ಸ್ನಾನ ಮಾಡಿಸಿ ಮಗಳಿಗೆ ಟವೆಲ್‌ಸುತ್ತಿ ಕೊಂಡು ಹೊರಗೆ ಕರೆದುಕೊಂಡು ಬಂದಳು. ಮಗಳ ಬಟ್ಟೆಯನ್ನು ಗಂಡನಿಗೆ ತೋರಿಸುತ್ತಾ, “ನನ್ನ ಮಗಳ ಜೊತೆ……”

ವಿವೇಕ್‌ಅವಳನ್ನು ಮಧ್ಯದಲ್ಲಿಯೇ ತಡೆದು, “ಊವರ್ಶಿ, ನಿನಗೆ ಏನಾಯ್ತು? ನಿನ್ನ ಜೊತೆಗೆ ಯಾರಾದರೂ ಅಸಭ್ಯವಾಗಿ ನಡೆದುಕೊಂಡ್ರಾ? ಅವರು ಯಾರು? ನನಗೆ ಹೇಳು,” ಎಂದು ಕೇಳಿದ.

ಊವರ್ಶಿ ಹೆದರುತ್ತಲೇ, “ನಾನು ಓಡುವಾಗ ಬಿದ್ದೆ. ಹಾಗಾಗಿ ಈ ಗಾಯ ಆಯ್ತು ಅಪ್ಪಾ,” ಎಂದಳು.

“ಊವರ್ಶಿ, ನಿಜ ಹೇಳಮ್ಮ ಕೆಳಗೆ ಬಿದ್ದರೆ ಇಂತಹ ಜಾಗಕ್ಕೆ ಏಟಾಗುವುದಿಲ್ಲ,” ಎಂದು ಅಮ್ಮ ಅನುನಯಿಸಿದಳು.

“ನೀವು ನನ್ನನ್ನು ಹೊಡೆಯುವುದಿಲ್ಲ ತಾನೇ?” ಎಂದು ಮುಗ್ಧವಾಗಿ ಕೇಳಿದಳು ಊವರ್ಶಿ.

“ನಾವು ನಿನ್ನನ್ನು ಹೊಡೆಯುವುದಿಲ್ಲಮ್ಮ. ಎಲ್ಲ ಸತ್ಯ ಬಿಡಿಸಿ ಹೇಳು. ನಿನಗೆ ಯಾರು ಏನು ಮಾಡಿದರು? ಏನಾಯ್ತು?”

“ಅಮ್ಮಾ, ಮಹೇಶ್‌ಸರ್‌ನನಗೆ ಈ ವಿಷಯ ಯಾರಿಗೂ ಹೇಳಬಾರದು. ಇಲ್ಲದಿದ್ದರೆ ಜನ ನಿನ್ನನ್ನು ಹೊಡೆಯುತ್ತಾರೆ ಎಂದು ಹೇಳಿದ್ದಾರೆ,” ಎಂದಳು ಬಿಕ್ಕುತ್ತಾ.

ವಿನುತಾ ಅವಳ ಮನವೊಲಿಸಿ ಎಲ್ಲ ವಿಷಯವನ್ನು ಕೇಳಿದಳು. ಊವರ್ಶಿ ಅಳುತ್ತಲೇ ಎಲ್ಲ ವಿಷಯ ಹೇಳಿದಳು. ಅವಳ ಅಪ್ಪ ಅಮ್ಮನಿಗಂತೂ ಇಡೀ ಜಗತ್ತೇ ಲೂಟಿಯಾದಂತೆ ಅನಿಸಿತು. ತಮ್ಮ ಮಗಳ ದುರ್ದೆಶೆಗೆ ಇಬ್ಬರೂ ಬಿಕ್ಕಿ ಬಿಕ್ಕಿ ಅತ್ತರು. ತಾವು ಅಂತಹ ವ್ಯಕ್ತಿ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ತಮ್ಮನ್ನು ತಾವೇ ಹಳಿದುಕೊಳ್ಳತೊಡಗಿದರು. ಅಜ್ಜಿ ತಾತ ಕೂಡ ಮೊಮ್ಮಗಳ ಸ್ಥಿತಿಗೆ ಮಮ್ಮಲ ಮರುಗಿದರು.

“ವಿನುತಾ, ನಾವು ಈಗಲೇ ಪೊಲೀಸ್‌ಸ್ಟೇಷನ್‌ಗೆ ಹೋಗಿ ದೂರು ಕೊಡೋಣ. ಆ ಪಾಪಿಗೆ ತಕ್ಕ ಶಿಕ್ಷೆ ದೊರಕಬೇಕು,” ಎಂದು ವಿವೇಕ್‌ಹೇಳಿದ.

ಆದರೆ ವಿನುತಾ ಅದಕ್ಕೆ, “ಬೇಡ ವಿವೇಕ್‌, ನಾವು ಮಧ್ಯಮ ವರ್ಗದವರು. ಒಮ್ಮೆ ನಮ್ಮ ಮಗುವಿನ ಬಗ್ಗೆ ಈ ವಿಷಯ ಗೊತ್ತಾಗಿಬಿಟ್ಟರೆ ನಾವು ಸಮಾಜದಲ್ಲಿ ಜೀವಿಸುವುದು ಕಷ್ಟವಾಗುತ್ತದೆ. ಜನ ಅವಳನ್ನು ಬೇರೆ ದೃಷ್ಟಿಕೋನದಿಂದ ನೋಡಲಾರಂಭಿಸುತ್ತಾರೆ. ದೊಡ್ಡವಳಾದ ಬಳಿಕ ಅವಳನ್ನು ಯಾರು ತಾನೇ ಮದುವೆಯಾಗುತ್ತಾರೆ?” ಎಂದು ಸ್ಪಷ್ಟವಾಗಿ ನಿರಾಕರಿಸಿದಳು.

ವಿನುತಾ ಮಗಳಿಗೆ, “ಊವರ್ಶಿ ಪುಟ್ಟಾ, ನೀನು ಈ ವಿಷಯವನ್ನು ಯಾರಿಗೂ ಹೇಳಬಾರದು. ನಿನ್ನ ತುಟಿಗೆ ಬೀಗ ಹಾಕು. ಎಷ್ಟು ಸಾಧ್ಯವೋ ಅಷ್ಟು ಬೇಗ ಅದನ್ನು ಮರೆತುಬಿಡಲು ಪ್ರಯತ್ನಿಸು,” ಎಂದು ಹೇಳಿದಳು.

ವಿವೇಕ್‌ಡಾಕ್ಟರ್‌ಬಳಿ ಹೋಗಲು ಹೇಳಿದಾಗ, “ಹಾಗೆ ಮಾಡುವುದು ನಮ್ಮ ಮಾನ ನಾವೇ ಕಳೆದುಕೊಂಡಂತೆ. ಮನೆಯಲ್ಲೇ ಔಷಧಿ ಹಚ್ಚಿ ಸರಿಪಡಿಸೋಣ,” ಎಂದು ವಿನುತಾ ಹೇಳಿದಳು.

ಊವರ್ಶಿ ಯೋಚಿಸತೊಡಗಿದಳು. `ಯಾವ ವಿಷಯವನ್ನು ಯಾರಿಗೂ ಹೇಳಬೇಡವೆಂದು ಮಹೇಶ್‌ಸರ್‌ಹೇಳಿದ್ದರೊ, ಈಗ ಅಮ್ಮ ಕೂಡ ಅದೇ ವಿಷಯವನ್ನು ಯಾರಿಗೂ ಹೇಳಬೇಡವೆಂದು ಹೇಳುತ್ತಿದ್ದಾರೆ.’

ತನ್ನ ಅಮ್ಮನ ಮಾತಿಗೆ ಒಪ್ಪಿ ಊವರ್ಶಿ ಯಾರ ಬಳಿಯೂ ತುಟಿ ಬಿಚ್ಚಲಿಲ್ಲ. ಆದರೆ ಅವಳ ಮನಸ್ಸನ್ನೇನು ಮಾಡಬೇಕು? ಏನು ಮಾಡಿದರೂ ಅವಳಿಗೆ ಆ ದಿನದ ಘಟನೆಯನ್ನು ಮರೆಯಲು ಆಗಲಿಲ್ಲ. ಆ ಭಯಾನಕ ಅನುಭವ ಅವಳ ಹೃದಯದಲ್ಲಿ ಸದಾ ಮಡುಗಟ್ಟಿ ನಿಂತುಬಿಟ್ಟಿತು.

ವಿನುತಾ ಹಾಗೂ ವಿವೇಕ್‌ಇಬ್ಬರೂ ಸೇರಿ ಆಲೋಚಿಸಿ ತಾವು ಇನ್ಮುಂದೆ ಈ ಊರಿನಲ್ಲಿ ಇರುವುದು ಬೇಡ. ಹೊಸ ಊರಿಗೆ ಹೋಗಬೇಕೆಂದು ನಿರ್ಧರಿಸಿದರು. ವಿವೇಕ್‌ಅವಳ ಶಾಲೆಗೆ ಹೋಗಿ ಟಿ.ಸಿ ತೆಗೆದುಕೊಂಡು ಬಂದು ಊರು ಬಿಟ್ಟು ಬೆಂಗಳೂರಿಗೆ  ಬಂದುಬಿಟ್ಟರು.

ಊವರ್ಶಿ ದೈಹಿಕವಾಗಿ ಕ್ರಮೇಣ ಚೇತರಿಸಿಕೊಂಡಳು. ಆದರೆ ಮಾನಸಿಕವಾಗಿ ಅವಳು ಇನ್ನೂ ನೋವಿನಲ್ಲಿಯೇ ಇದ್ದಳು. ಬೆಂಗಳೂರಿನಲ್ಲಿ ಅವಳಿಗೆ ಶಾಲೆಯಲ್ಲಿ ಅಡ್ಮಿಷನ್‌ಸಿಕ್ಕಿತು. ಊವರ್ಶಿ ಖುಷಿಯಿಂದಿರಲು ಇಡೀ ಕುಟುಂಬ ಸದಾ ಪ್ರಯತ್ನಿಸುತ್ತಿತ್ತು. ಅದೆಷ್ಟೇ ಪ್ರಯತ್ನಿಸಿದರೂ ಅವಳ ತುಟಿಯಲ್ಲಿ ಮೊದಲಿನ ನಗು ಮೂಡಲಿಲ್ಲ.

ಅತ್ತ ಕೆಲವು ವಾರಗಳ ಕಾಲ ಮಹೇಶ್‌ರಜೆಯ ಮೇಲಿದ್ದ. ತನ್ನ ವಿರುದ್ಧ ಯಾರೊಬ್ಬರೂ ದೂರು ನೀಡಲಿಲ್ಲ ಎನ್ನುವುದು ಖಾತ್ರಿಯಾದಾಗ ಅವನು ಪುನಃ ಶಾಲೆಗೆ ಹೋಗತೊಡಗಿದ. ಊವರ್ಶಿ ಶಾಲೆ ಬಿಟ್ಟದ್ದು ಮಾತ್ರವಲ್ಲ ಕುಟುಂಬವೇ ಬೇರೊಂದು ಊರಿಗೆ ಹೋಗಿದ್ದು ಅವನು ಪಾಪಕೃತ್ಯದ ಹೆದರಿಕೆಯಿಂದ ಮುಕ್ತನಾಗಲು ಸಾಧ್ಯವಾಯಿತು.

ಕಾಲ ಹಾಗೆಯೇ ಸರಿಯುತ್ತಿತ್ತು. ಊವರ್ಶಿ ಈಗ ದೊಡ್ಡವಳಾಗಿದ್ದಳು. ಈಗ ಅವಳಿಗೆ ತನ್ನ ಮೇಲೆ ಅತ್ಯಾಚಾರ ನಡೆದಿತ್ತು ಎನ್ನುವುದು ಅರಿವಿಗೆ ಬಂದಿತ್ತು. `ಯಾರಿಗೂ ಏನನ್ನೂ ಹೇಳಬೇಡ, ನಿನ್ನ ತುಟಿಯನ್ನು ಹೊಲಿದುಕೊ,’ ಎಂಬ ಮಾತುಗಳು ಅವಳ ನೆನಪಿನಲ್ಲಿ ಉಳಿದು ಅವಳನ್ನು ಮಾನಸಿಕವಾಗಿ ಘಾಸಿಗೊಳಿಸುತ್ತಿದ್ದವು. ಅದೇ ರೀತಿ ಅಪ್ಪ ಹೇಳಿದ, `ಆ ಪಾಪಿ ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ದೊರಕಬೇಕು,’ ಎಂಬ ಮಾತು ಕೂಡ ಅವಳಿಗೆ ಆಗಾಗ ನೆನಪಾಗುತ್ತಿತ್ತು. ಅವಳು ಈವರೆಗೂ ತನ್ನೊಂದಿಗೆ ನಡೆದ ಘಟನೆಯನ್ನು ಮರೆಯಲು ಆಗುತ್ತಿರಲಿಲ್ಲ.

ಕಾಲದ ಜೊತೆ ಜೊತೆಗೆ ಊವರ್ಶಿಯ ದ್ವೇಷ ಕೂಡ ಹೆಚ್ಚುತ್ತಾ ಹೊರಟಿತ್ತು. ಯಾವುದೇ ಕಾರಣಕ್ಕೂ ಆ ಚಾರಿತ್ರ್ಯಹೀನ ವ್ಯಕ್ತಿಯ ವಿರುದ್ದ ಸೇಡು ತೀರಿಸಿಕೊಳ್ಳದೇ ಇರಬಾರದೆಂದು ಅವಳು ತನ್ನ ಮನಸ್ಸಿನಲ್ಲಿ ದೃಢವಾಗಿ ನಿರ್ಧಾರಿಸಿದಳು. ಊವರ್ಶಿಯ ಮನಸ್ಸಿನಲ್ಲಿ ನಡೆಯುತ್ತಿದ್ದ ತಾಕಲಾಟದ ಬಗ್ಗೆ ಕುಟುಂಬದವರಿಗೆ ಏನೊಂದೂ ಮಾಹಿತಿ ಇರಲಿಲ್ಲ. ಮಗಳು ಈವರೆಗೆ ಹಿಂದೆ ನಡೆದದ್ದೆಲ್ಲನ್ನೂ ಮರೆತು ಸಹಜವಾಗಿದ್ದಾಳೆಂದೇ ಭಾವಿಸಿದ್ದರು. ಆದರೆ ದ್ವೇಷ ಹಾಗೂ ಸೇಡಿನ ಜ್ವಾಲಾಮುಖಿ ಅವಳ ಅಂತರಂಗದಲ್ಲಿ ಸ್ಛೋಟದ ಸ್ವರೂಪ ಪಡೆದುಕೊಳ್ಳುತ್ತಿತ್ತು. ಅವಳು ಶಾಂತಳಾಗುವುದು ಅಸಾಧ್ಯವಾಗಿತ್ತು.

ಹಾಗೆಯೇ 12 ವರ್ಷಗಳು ಕಳೆದುಹೋದವು. ಊವರ್ಶಿಯ ಓದು ಕೂಡ ಮುಗಿದಿತ್ತು. ತನ್ನ ಕಾಲೇಜು ಕ್ಯಾಂಪಸ್‌ ನಲ್ಲಿ ನೌಕರಿಗಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು. ಊವರ್ಶಿ ಮಾತ್ರ ತಾನು ಹಿಂದೆ ಓದಿದ್ದ ಊರನ್ನೇ ಆಯ್ಕೆ ಮಾಡಿಕೊಂಡಳು.

ಊವರ್ಶಿಯ ಈ ನಿರ್ಣಯ ಕೇಳಿ ವಿವೇಕ್‌ಚಿಂತೆಗೀಡಾಗಿ, “ಊವರ್ಶಿ, ನೀನು ಆ ಊರನ್ನೇ ಏಕೆ ಆಯ್ಕೆ ಮಾಡಿಕೊಂಡೆಯಮ್ಮಾ…..?” ಎಂದು ಕೇಳಿದ.

ಊವರ್ಶಿ ನಗುತ್ತಲೇ, “ಅಪ್ಪಾ, ನಮಗೆ ಅದೇ ಹತ್ತಿರ ಅಲ್ವಾ? ನಾನು ಯಾವಾಗ ಬೇಕಾದಾಗ ಸುಲಭವಾಗಿ ಬಂದು ಹೋಗಬಹುದು.”

ಊವರ್ಶಿಯ ಜೊತೆ ಮಾತನಾಡಿದ ಬಳಿಕ ರಾತ್ರಿ ವಿವೇಕ್‌ವಿನುತಾಳಿಗೆ, “ಊವರ್ಶಿ ಅದೇ ಊರನ್ನು ಏಕೆ ಆಯ್ಕೆ ಮಾಡಿಕೊಂಡಳು. ಅವಳ ಬಳಿ ಬೇರೆ ಆಯ್ಕೆಗಳು ಕೂಡ ಇದ್ದವು. ನನಗೆ ಆ ಬಗ್ಗೆ ಚಿಂತೆ ಆಗ್ತಿದೆ,” ಎಂದು ಹೇಳಿದ.

“ಇಲ್ಲ ವಿವೇಕ್‌, ಅಂತಹ ವಿಷಯ ಏನಿಲ್ಲ. 12 ವರ್ಷಗಳೇ ಕಳೆದುಹೋಗಿವೆ. ಆಗ ಅವಳು ಬಹಳ ಚಿಕ್ಕವಳಿದ್ದಳು. ನೀವು ಸುಮ್ಮನೇ ಚಿಂತೆ ಮಾಡುತ್ತಿರುವಿರಿ,” ಎಂದು ಹೇಳಿದಳು.

ನೌಕರಿ ಜಾಯಿನ್‌ಮಾಡುವ ಸಮಯ ಬಂದಾಗ ಊವರ್ಶಿ ಎಲ್ಲರ ಆಶೀರ್ವಾದ ಪಡೆದು ಹೊರಟು ನಿಂತಳು.

ತನ್ನ ಆಫೀಸಿಗೆ ಜಾಯಿನ್‌ಆದ ಬಳಿಕ ತನ್ನ ಬಾಲ್ಯದ ಭಯಾನಕ ಘಟನೆ ನಡೆದ ಆ ಶಾಲೆಗೆ ಹೋಗಿ ಭೇಟಿಯಾದಳು. ಶಿಕ್ಷಕಿ ಹುದ್ದೆಗೆ ಅರ್ಜಿ ಕೊಡುವ ನೆಪದಲ್ಲಿ ಅವಳು ಕೆಲವು ಶಿಕ್ಷಕರ ಜೊತೆ ಚರ್ಚಿಸಿದಳು. ಮಾತು ಮಾತಿನಲ್ಲಿಯೇ ಅವಳು ಕ್ರೀಡೆಯ ಬಗ್ಗೆ  ಚರ್ಚಿಸಿ ಮಹೇಶನ ಬಗ್ಗೆ ಕೇಳಿ ತಿಳಿದುಕೊಂಡಳು. ಈಗ ಅವನು ಸ್ಪೋರ್ಟ್ಸ್ ಶೋರೂಮ್ ಒಂದರ ಮಾಲೀಕ ಎಂಬುದು ಅವಳಿಗೆ ತಿಳಿಯಿತು.

ಮಹೇಶನ ವಿಷಯ ತಿಳಿದು ಊವರ್ಶಿಯ ರಕ್ತ ಕುದ್ದು ಹೋಯಿತು. ತನ್ನ ಜೀವನವನ್ನು ನರಕಕ್ಕೆ ದೂಡಿ, ಈಗ ಇವನು ಮೋಜು ಮಜದಿಂದ ಕಾಲ ಕಳೆಯುತ್ತಿದ್ದಾನೆ. ತನ್ನ ತಪ್ಪಿಗೆ ಅವಶ್ಯವಾಗಿ ಪಶ್ಚಾತ್ತಾಪಪಡುವಂತೆ ಮಾಡಬೇಕು ಎಂದು ಅವಳು ಯೋಚಿಸತೊಡಗಿದಳು.

ಅಷ್ಟೊಂದು ದೊಡ್ಡ ಶೋರೂಮ್ ಹುಡುಕುವುದು ಅವಳಿಗೆ ಕಷ್ಟವಾಗಲಿಲ್ಲ. ಅವಳು ಶೋರೂಮ್ ಒಳಗೆ ಹೋಗುತ್ತಿದಂತೆಯೇ, ಅಲ್ಲಿ ಮಹೇಶ್‌ಬಹಳ ಗತ್ತಿನಿಂದ ಕುಳಿತಿರುವುದು ಕಾಣಿಸಿತು. ಅವನನ್ನು ನೋಡುತ್ತಿದ್ದಂತೆಯೇ ಅವಳ ಪಿತ್ತ ನೆತ್ತಿಗೇರಿತು. ಅವಳು ತಕ್ಷಣ ತನ್ನನ್ನು ತಾನು ಸಂಭಾಳಿಸಿಕೊಂಡಳು.

ಸಾಧಾರಣ ಡ್ರೆಸ್‌ ನಲ್ಲಿ ಯಾವುದೇ ಮೇಕಪ್‌ಇಲ್ಲದೆಯೂ ಊವರ್ಶಿ ಸುಂದರಳಾಗಿ ಕಾಣುತ್ತಿದ್ದಳು. ಊವರ್ಶಿಯನ್ನು ನೋಡುತ್ತಿದ್ದಂತೆಯೇ ಮಹೇಶನಿಗೆ ಅವಳ ಮೇಲೆ ಕಣ್ಣು ನೆಟ್ಟಿತು. ಮಹೇಶನನ್ನು ನೋಡಿಯೂ ನೋಡದವಳಂತೆ ಅವಳು ಒಳಗೆ ಹೋಗಿ  ಸೇಲ್ಸ್ ಮೆನ್‌ಗೆ, “ಬ್ಯಾಡ್ಮಿಂಟನ್‌ರಾಕೆಟ್‌ತೋರಿಸಿ,” ಎಂದಳು.

ಅಷ್ಟರಲ್ಲಿಯೇ ಅಲ್ಲಿಗೆ ಬಂದ ಮಹೇಶ್‌ಸೇಲ್ಸ್ ಮನ್‌ಗೆ, “ನೀನು ಬ್ಯಾಂಕಿಗೆ ಹೋಗಿ ಚೆಕ್‌ಕಲೆಕ್ಷನ್‌ ಗೆ ಕೊಡು. ಅಲ್ಲಿಯವರೆಗೆ ನಾನು ಕಸ್ಟಮರ್‌ಅಟೆಂಡ್‌ಮಾಡ್ತಾ ಇರ್ತೀನಿ,” ಎಂದ.

“ಹೇಳಿ ಮೇಡಂ, ನಿಮಗೇನು ಬೇಕು?”

“ಬ್ಯಾಡ್ಮಿಂಟನ್‌ರಾಕೆಟ್‌ತೋರಿಸಿ,” ಊವರ್ಶಿ ಕೇಳಿದಳು.

“ಅಂದಹಾಗೆ ನೀವು ಯಾವ ಸ್ಕೂಲಿನಿಂದ ಬಂದಿರುವಿರಿ?”

“ಇಲ್ಲ ಇಲ್ಲ… ನಾನು ಯಾವ ಸ್ಕೂಲಿನಿಂದಲೂ ಬಂದಿಲ್ಲ. ಅನಾಥಾಶ್ರಮದ ಮಕ್ಕಳಿಗೆ ಕೆಲವೊಂದು ವಸ್ತುಗಳು ಬೇಕಿವೆ.”

“ಅಂದರೆ ನೀವು ಸಮಾಜ ಸೇವಕಿಯೇ?”

“ನೀವು ಹೇಗೆ ಭಾವಿಸುತ್ತೀರೋ ಹಾಗೆ.”

“ನೀವು ಬಹಳ ಒಳ್ಳೆಯ ಕೆಲಸ ಮಾಡುತ್ತಿರುವಿರಿ. ನಾನು ನಿಮಗೆ ಶೇ.20 ರಿಯಾಯಿತಿ ಕೊಡ್ತೀನಿ.”

“ಇದನ್ನು ಬೇಗ ಪ್ಯಾಕ್‌ಮಾಡಿ ಕೊಡಿ,” ಎಂದು ಅವಳು ರಾಕೆಟ್‌ಕಡೆ ಕೈ ತೋರಿಸಿದಳು.

ಬ್ಯಾಡ್ಮಿಂಟನ್‌ರಾಕೆಟ್‌ಜೊತೆಗೆ ಅವಳು ಹೊರಗೆ ಬಂದು ಗಾಢ ನಿಟ್ಟುಸಿರುಬಿಟ್ಟು, `ಯಾವ ಸೌಂದರ್ಯದ ಕಾರಣದಿಂದ ತನ್ನ ಬಾಲ್ಯವನ್ನು, ನಗುವನ್ನು, ಆಟಪಾಠವನ್ನು ಈ ವ್ಯಕ್ತಿ ಕಸಿದುಕೊಂಡಿದ್ದನೋ, ಅದೇ ಸೌಂದರ್ಯದ ಬಲದಿಂದ ತಾನು ಅವನ ಸಮಸ್ತ ಖುಷಿಯನ್ನು ಕಿತ್ತುಕೊಳ್ಳಬೇಕು,’ ಎಂದು ಅವಳು ಯೋಚಿಸಿದಳು.

ಊವರ್ಶಿ 3-4 ದಿನಗಳಿಗೊಮ್ಮೆ ಮಹೇಶನ ಶೋರೂಮಿಗೆ ಭೇಟಿ ಕೊಡುತ್ತಿದ್ದಳು. ಏನಾದರೂ ಖರೀದಿ ಮಾಡಿ ಅವನ್ನು ಅನಾಥಶ್ರಮದ ಮಕ್ಕಳಿಗೆ ಕೊಡುತ್ತಿದ್ದಳು. ಅವಳನ್ನು ಕಾಣುತ್ತಿದ್ದಂತೆಯೇ ಮಹೇಶನ ಮುಖ ಅರಳುತ್ತಿತ್ತು.

ಈವರೆಗೆ 3 ತಿಂಗಳು ಕಳೆದಿದ್ದವು. ಊವರ್ಶಿ ಅವನೊಂದಿಗೆ ಸಾಕಷ್ಟು ಪರಿಚಿತಳಂತೆ ಮಾತನಾಡುತ್ತಿದ್ದಳು. ಅವಳು ಒಳಗೆ ಬರುತ್ತಿದ್ದಂತೆ ಮಹೇಶ್‌ಅವಳನ್ನು ಅಟೆಂಡ್‌ಮಾಡಲು ಬರುತ್ತಿದ್ದ.

ಕ್ರಮೇಣ ಅವರಲ್ಲಿ ಮಾತುಕತೆ ಮುಂದುವರಿಯಿತು. ಅದು ಸ್ನೇಹದಲ್ಲಿ ಪರಿವರ್ತನೆಗೊಂಡಿತು. ಮಹೇಶನಿಗೆ ಊವರ್ಶಿ ತನ್ನ ಹೆಸರನ್ನು `ಊರ್ಮಿ’ ಎಂದು ಹೇಳಿದ್ದಳು. ಈವರೆಗೆ ಅವರು ಪರಸ್ಪರರ ನಂಬರ್‌ಗಳನ್ನು ಸಹ ವಿನಿಮಯ ಮಾಡಿಕೊಂಡಿದ್ದರು. ಊರ್ಮಿ ತನಗೆ ಚೆನ್ನಾಗಿ ಸ್ಪಂದಿಸುತ್ತಾಳೆಂದು ಮಹೇಶನಿಗೆ ಅನಿಸುತ್ತಿತ್ತು. ಹೀಗಾಗಿ ಅವನ ಧೈರ್ಯ ಕೂಡ ಹೆಚ್ಚುತ್ತಿತ್ತು. ತನ್ನ ಬಗ್ಗೆ ಅವನು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾನೆ, ತನ್ನನ್ನು ಕಾಯುತ್ತಿರುತ್ತಾನೆ ಎಂದು ಅವಳಿಗೆ ಖಾತ್ರಿಯಾಗುತ್ತಿತ್ತು. ತನ್ನ ಯೋಜನೆಯನ್ನು ಮುಂದುವರಿಸುತ್ತಾ ಊವರ್ಶಿ ಕೆಲವು ದಿನಗಳ ಕಾಲ ಶೋರೂಮಿಗೆ ಹೋಗಲಿಲ್ಲ. ಹೀಗಾಗಿ ಮಹೇಶನ ತಳಮಳ ಹೆಚ್ಚಿತು. ಅವನು ಅವಳಿಗಾಗಿ ಕಾಯತೊಡಗಿದ.

1 ವಾರ ಅವಳು ಶೋರೂಮಿನ ಕಡೆ ಬರದೇ ಇದ್ದುದಕ್ಕಾಗಿ ಅವನು ಅವಳಿಗೆ ಕಾಲ್‌ಮಾಡಿದ, “ಹಲೋ ಊರ್ಮಿ, ಏನಾಯ್ತು? ನೀನ್ಯಾಕೆ ಇಷ್ಟು ದಿನ ಶೋರೂಮಿಗೆ ಬರಲಿಲ್ಲ?”

“ನನ್ನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು.”

“ಆ ವಿಷಯ ನೀನು ನನಗೇಕೆ ಹೇಳಲಿಲ್ಲ? ಡಾಕ್ಟರ್‌ಗೆ ತೋರಿಸಿದೆಯೋ ಇಲ್ವೋ? ನಾನು ಡಾಕ್ಟರ್‌ರನ್ನು ಕರೆದುಕೊಂಡು ಬರ್ತೀನಿ. ನೀನು ತಕ್ಷಣ ನಿನ್ನ ಅಡ್ರೆಸ್‌ಲೊಕೇಶನ್‌ಕಳಿಸು. ನಾನೀಗಲೇ ಬರ್ತೀನಿ.”

“ಬೇಡ ಮಹೇಶ್‌, ಅದರ ಅವಶ್ಯಕತೆ ಇಲ್ಲ. ನಾನು ಡಾಕ್ಟರ್‌ಹತ್ರ ಹೋಗಿ  ಬಂದೆ. ನಾನೀಗ ಆರೋಗ್ಯವಾಗಿರುವೆ. ನಾಳೆ ಶೋರೂಮಿಗೆ ಬರ್ತೀನಿ.”

“ಸರಿ ಸರಿ…..” ಎಂದ ಮಹೇಶ್‌.

ಮರುದಿನ ಊವರ್ಶಿ ಶೋರೂಮಿಗೆ ಹೋದಳು. ಮಹೇಶನ ಮುಖ ಅರಳಿತು. “ಊರ್ಮಿ, ನಾನು ದಿನ ನಿನ್ನ ದಾರಿ ನೋಡುತ್ತಿದ್ದೆ. ನೀನು ನನ್ನನ್ನು ಬಹಳ ಕಾಯಿಸಿದೆ. ನೀನು ಇವತ್ತು ನನ್ನ ಜೊತೆಗೆ ಡಿನ್ನರ್‌ಗೆ ಬರಬೇಕು.”

ಊವರ್ಶಿ ಮೊದಲು ನಿರಾಕರಿಸಿದಳು. ಬಳಿಕ ಮಹೇಶನ ಆಗ್ರಹದ ಮೇರೆಗೆ ಒಪ್ಪಿಕೊಂಡಳು.

ಬಾಲ್ಯದಲ್ಲಿ ಹೇಳಿದ ಅದೇ ವಾಕ್ಯ ಅವಳಿಗೆ ನೆನಪಿಗೆ ಬಂತು. ಅವಳು ಮಹೇಶನಿಗೆ, “ಸರಿ ನಾನು ನಿಮಗಾಗಿ ಕಾಯ್ತಾ ಇರ್ತೀನಿ,” ಎಂದಳು.

ಸಂಜೆ 7 ಗಂಟೆಗೆ ಸರಿಯಾಗಿ ಮಹೇಶ್‌ಅವಳನ್ನು ಕರೆದುಕೊಂಡು ಹೋಗಲೆಂದು ಬಂದ. ಊವರ್ಶಿ ಕೆಳಗೆ ನಿಂತು ಅವನಿಗಾಗಿ ಕಾಯುತ್ತಿದ್ದಳು. ಈಗ ಅವಳಿಗೆ ಬಾಲ್ಯದಲ್ಲಿ ಘಟಿಸಿದ ಘಟನೆ ನೆನಪಿಗೆ ಬರತೊಡಗಿತು.

ಡಾರ್ಕ್‌ನೀಲಿ ಜೀನ್ಸ್ ತಿಳಿ ಗುಲಾಬಿ ವರ್ಣದ ಕುರ್ತಾ ಹಾಗೂ ಇಳಿಬಿಟ್ಟ ಕೂದಲಿನಲ್ಲಿ ಊವರ್ಶಿ ಬಹಳ ಸುಂದರವಾಗಿ ಕಾಣುತ್ತಿದ್ದಳು.

ಅವಳನ್ನು ಕಾಣುತ್ತಿದ್ದಂತೆಯೇ ಮಹೇಶ್‌, “ಊರ್ಮಿ, ನೀನು ಬಹಳ ಸುಂದರವಾಗಿ ಕಾಣ್ತಿರುವೆ.” ಎಂದ.

“ಥ್ಯಾಂಕ್ಸ್ ಮಹೇಶ್‌, ನೀವು ಕೂಡ ಬಹಳ ಹ್ಯಾಂಡ್‌ ಸಮ್ ಆಗಿ ಕಾಣ್ತಿರುವಿರಿ,” ಎಂದು ಹೇಳುತ್ತಾ ಊವರ್ಶಿ ಕಾರಿನಲ್ಲಿ ಕುಳಿತಳು. ಕಾರು ಹೋಟೆಲ್‌ಕಡೆ ಹೊರಟಿತು.

ಅಲ್ಲಿ ಮಹೇಶ್‌ಮೊದಲೇ ಟೇಬಲ್ ರಿಸರ್ವ್ ಮಾಡಿದ್ದ. ಅದು ಅವರ ಮೊದಲ ಡಿನ್ನರ್‌ಸಂಜೆಯಾಗಿತ್ತು. ಡಿನ್ನರ್‌ಬಳಿಕ ಮಹೇಶ್ ಊವರ್ಶಿಯನ್ನು ಅವಳ ಮನೆಗೆ ಬಿಟ್ಟ. ಈ ರೀತಿಯಾಗಿ ಡಿನ್ನರ್‌ಗೆ ಹೋಗುವುದು ಇಬ್ಬರಿಗೂ ಸಾಮಾನ್ಯ ಸಂಗತಿಯಾಗಿಬಿಟ್ಟಿತು. ಮಹೇಶ್‌ಮನಸ್ಸಿನಲ್ಲಿಯೇ ಊವರ್ಶಿಯನ್ನು ಪ್ರೀತಿಸತೊಡಗಿದ್ದ. ಅವಳು 2 ದಿನದ ಮಟ್ಟಿಗೆ ಕಾಣದೇ ಇದ್ದರೆ ಅವನಿಗೆ ತಳಮಳವಾಗುತ್ತಿತ್ತು. ಆಗ ಅವನಿಗೆ ಯಾವುದೇ ಕೆಲಸದಲ್ಲಿ ಮನಸ್ಸು ನಿಲ್ಲುತ್ತಿರಲಿಲ್ಲ. ಅವಳ ಮುಂದೆ ಅವನು ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಯೋಚಿಸುತ್ತಿದ್ದ.

ಒಂದು ದಿನ ಅವನು ಊವರ್ಶಿಯ ಮುಂದೆ, “ಊರ್ಮಿ, ಇವತ್ತು ನಾನು ಕ್ಯಾಂಡಲ್ ಲೈಟ್‌ಡಿನ್ನರ್‌ವ್ಯವಸ್ಥೆ ಮಾಡಿರುವೆ. ನೀನು ಬರ್ತೀಯಾ ತಾನೇ?”

ಊವರ್ಶಿ ಖುಷಿಯಿಂದ ಯಾವುದೇ ಸಂಕೋಚ ವ್ಯಕ್ತಪಡಿಸದೆ, “ನಾನು ಅವಶ್ಯವಾಗಿ ಬರ್ತೀನಿ,” ಎಂದಳು.

ಇಬ್ಬರೂ ಕ್ಯಾಂಡಲ್ ಲೈಟ್‌ಡಿನ್ನರ್‌ಗೆ ಹೋದಾಗ ಮಹೇಶ್‌ಮೊದಲ ಬಾರಿ ಹೋಟೆಲಿನಲ್ಲಿ ಅವಳ ಕೈಯನ್ನು ತನ್ನ ಕೈಯಲ್ಲಿರಿಸಿಕೊಂಡು, “ನಾನು ನಿನ್ನನ್ನು ತುಂಬಾ ತುಂಬಾ ಪ್ರೀತಿಸುತ್ತಿರುವೆ,” ಎಂದ.

ಊವರ್ಶಿ ಸ್ವಲ್ಪ ಚಕಿತಗೊಳ್ಳದೆ, “ನನಗೆ ಗೊತ್ತಿತ್ತು ಮಹೇಶ್‌. ನಿಮ್ಮ ಕಣ್ಣುಗಳಲ್ಲಿ ನನಗಾಗಿ ಪ್ರೀತಿ ಎದ್ದು ಕಾಣುತ್ತದೆ. ನಾನು ಕೂಡ ನಿಮ್ಮನ್ನು ಮನಸಾರೆ ಪ್ರೀತಿಸುತ್ತಿರುವೆ. ಆದರೆ ನಿಮ್ಮ ಹೆಂಡತಿ ಅವರಿರುವಾಗ ನಾನ್ಹೇಗೆ ನಿಮ್ಮ ಜೀವನದಲ್ಲಿ ಬರಲು ಸಾಧ್ಯ? ನಾನು ಯಾರ ಜೀವನವನ್ನು ಹಾಳು ಮಾಡಲು ಇಷ್ಟಪಡುವುದಿಲ್ಲ.”

“ಅಂದಹಾಗೆ ಊರ್ಮಿ ನಾನು ಶೀಘ್ರದಲ್ಲಿಯೇ ನನ್ನ ಹೆಂಡತಿಯಿಂದ ದೂರವಾಗಲಿದ್ದೇನೆ. ಅವಳಿಗೂ ನನಗೂ ಹೊಂದಾಣಿಕೆಯೇ ಆಗುವುದಿಲ್ಲ. ಅವಳಿಗೂ ನನ್ನ ಜೊತೆಗೆ ಇರಲು ಮನಸ್ಸಿಲ್ಲ,” ಮಹೇಶ್‌ಸುಳ್ಳುಗಳನ್ನು ಪೋಣಿಸುತ್ತ ಸ್ಪಷ್ಟನೆ ನೀಡಿದ.

ಊವರ್ಶಿ ಸ್ವಲ್ಪ ಹೊತ್ತು ಯೋಚಿಸುತ್ತಾ, “ಆದರೆ ಮಹೇಶ್‌, ನಾನು ನನ್ನ ಭವಿಷ್ಯದ ನಿರ್ಧಾರ ನನ್ನ ಅಮ್ಮ ಅಪ್ಪನಿಗೆ ಬಿಟ್ಟುಕೊಟ್ಟಿದ್ದೇನೆ.”

“ನೀನು ಹ್ಞೂಂ ಅಂದರೆ ನಾನು ನಿನ್ನ ಅಪ್ಪನ ಜೊತೆಗೆ ಮಾತಾಡಲು ಬರ್ತೀನಿ. ಇಷ್ಟೊಂದು ದೊಡ್ಡ ಶೋರೂಮ್, ಬಂಗ್ಲೆ, ಗಾಡಿ ಎಲ್ಲವೂ ನನ್ನ ಹತ್ತಿರವಿದೆ. ಅವರು ಹೇಗೆ ತಾನೇ ನಿರಾಕರಿಸುತ್ತಾರೆ?”

“ಸರಿ ಮಹೇಶ್‌, ನಾನು ಕೆಲವೇ ದಿನಗಳಲ್ಲಿ ನನ್ನೂರಿಗೆ ಹೋಗಲಿದ್ದೇನೆ. ಆಗ ನಾನು ಆಪ್ಪನೊಂದಿಗೆ ಮಾತನಾಡುತ್ತೇನೆ.”

ಊವರ್ಶಿಯ ಬಾಯಿಂದ ಪ್ರೀತಿಯ ಶಬ್ದ ಕೇಳಿ ಅವನು ಅವಳನ್ನು ಕಿಸ್‌ಕೊಡಲು ಪ್ರಯತ್ನಿಸತೊಡಗಿದ. ಆದರೆ ಅವಳು ಅದಕ್ಕೆ ಅವಕಾಶ ಕೊಡದೆ, “ಇಲ್ಲ ಮಹೇಶ್‌, ಅದೆಲ್ಲ ಮದುವೆಯ ಬಳಿಕವೇ ಸರಿ ಅನಿಸುತ್ತೆ. ನನ್ನ ಅಪ್ಪ ನಮ್ಮಿಬ್ಬರ ವಿವಾಹಕ್ಕೆ ಒಪ್ಪಿಗೆ ಕೊಡುತ್ತಾರೊ ಇಲ್ಲವೋ ಗೊತ್ತಿಲ್ಲ ಮತ್ತು ನಾನು ಯಾರಿಗೂ ಮೋಸ ಮಾಡಲು ಇಷ್ಟಪಡುವುದಿಲ್ಲ. ಒಂದು ವೇಳೆ ನನ್ನ ಮದುವೆ ಬೇರೆ ಯಾರೊಂದಿಗಾದರೂ ಆದರೆ ಈ ಕಿಸ್‌ನನಗೆ ಬಹಳ ಮುಜುಗರ ಉಂಟು ಮಾಡುತ್ತದೆ.”

ತನ್ನನ್ನು ತಾನು ಸಂಭಾಳಿಸಿಕೊಳ್ಳುತ್ತಾ, “ನೀನು ಸರಿಯಾಗಿ ಹೇಳಿರುವೆ ಊರ್ಮಿ, ನಾನು ಸ್ವಲ್ಪ ಆವೇಶಕ್ಕೊಳಗಾಗಿದ್ದೆ. ಆದರೆ ನೀನು ಮದುವೆ ಬೇರೆ ಯಾರೊಂದಿಗೊ ಎಂದು ಯಾಕೆ ಯೋಚಿಸುತ್ತಿರುವೆ? ನಾವಿಬ್ಬರೂ ಎಷ್ಟೊಂದು ಪ್ರೀತಿಸುತ್ತಿದ್ದೇವೆಂದರೆ, ನಮ್ಮಿಬ್ಬರ ಮಿಲನ ನಿಶ್ಚಿತವಾಗಿಯೇ ಇದೆ.”

ಡಿನ್ನರ್‌ಬಳಿಕ ಮಹೇಶ್‌ಅವಳನ್ನು ಅವಳ ಮನೆವರೆಗೂ ಬಿಟ್ಟ. ಹಾಸಿಗೆಯ ಮೇಲೆ ಒರಗಿಕೊಂಡು ಊವರ್ಶಿ ತನ್ನ ಯೋಜನೆ ಯಶಸ್ವಿಯಾಗುತ್ತಿರುವ ಬಗ್ಗೆ ಖುಷಿಯಾದಳು. ಆದರೆ ಮುಂದೆ ಹೇಗೆ? ಏನು ಎಂಬ ಪ್ರಶ್ನೆಗಳು ಅವಳ ಮುಂದೆ ಸಾಲಾಗಿ ಕಾಡುತ್ತಿದ್ದವು.

ಮರುದಿನ ಊವರ್ಶಿ ಮಹೇಶ್‌ಗೆ ಫೋನ್‌ಮಾಡಿ, “ಹಲೋ ಮಹೇಶ್‌, ನಾನು ಒಂದು ವಾರದ ಮಟ್ಟಿಗೆ ನನ್ನೂರಿಗೆ ಹೋಗುತ್ತಿದ್ದೇನೆ.”

ಮಹೇಶ್‌ಅವಳನ್ನು ಮಧ್ಯದಲ್ಲಿಯೇ ತರಾಟೆಗೆ ತೆಗೆದುಕೊಳ್ಳುತ್ತಾ, “ಊರ್ಮಿ ಒಂದು ವಾರ ನೀನಿಲ್ಲದೆ ನಾನು ಹೇಗಿರುವುದು?” ಎಂದು ಕೇಳಿದ.

“ಮಹೇಶ್‌, ಸದಾ ಜೊತೆಯಾಗಿರಬೇಕೆಂದರೆ ಈ ಅಗಲಿಕೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ನಾನು ಊರಿಗೆ ಹೊರಡುತ್ತಿರುವುದು ಮದುವೆಯ ಬಗ್ಗೆ ಚರ್ಚೆ ಮಾಡಲು. ನನಗೂ ಕೂಡ ಆ ಬಗ್ಗೆ ಆತುರ ಇದ್ದೇ ಇದೆ.”

ಊವರ್ಶಿಯಿಂದ ಈ ವಿಷಯ ಕೇಳಿ ಮಹೇಶ್‌ಬಹಳ ಖುಷಿಗೊಂಡ. ಊರಿಗೆ ಹೋದಾಗ ತನಗೆ ಫೋನ್‌ಮಾಡಬಾರದು ಎಂಬ ಮಾತು ಪಡೆದು ಅವಳು ಊರಿಗೆ ಹೊರಟುಹೋದಳು. ಒಂದು ವಾರವೆಂದು ಹೇಳಿಹೋದ ಅವಳು 15 ದಿನಗಳ ಕಾಲ ವಾಪಸ್ ಬರಲಿಲ್ಲ.

ಇತ್ತ ಮಹೇಶನ ತಳಮಳ ಹೆಚ್ಚುತ್ತಾ ಹೊರಟಿತ್ತು. ಊವರ್ಶಿಗೆ ಬೇಕಾಗಿದ್ದುದು ಅದೇ. ಈವರೆಗೂ ಅವಳ ಯೋಜನೆಯಂತೆಯೇ ಎಲ್ಲವೂ ನಡೆಯುತ್ತಿತ್ತು. 15 ದಿನಗಳ ಬಳಿಕ ಅವಳು ವಾಪಸ್‌ಬಂದು ಮಹೇಶನಿಗೆ ಫೋನ್‌ಮಾಡಿ, “ಮಹೇಶ್‌, ನಾನೊಂದು ಕಹಿ ಸುದ್ದಿ ಹೇಳಲಿರುವೆ. ಸಂಜೆ ಡಿನ್ನರ್‌ ಗೆ ಬಂದಾಗ ಅದರ ಬಗ್ಗೆ ನಿಮಗೆ ಸವಿಸ್ತಾರವಾಗಿ ಹೇಳುವೆ,” ಎಂದಳು.

ಸಂಜೆ ಡಿನ್ನರ್‌ ನಲ್ಲಿ ಅವಳು ಉದಾಸಳಾಗಿ ಕುಳಿತಿರುವುದನ್ನು ನೋಡಿ ಮಹೇಶ್‌ಕೇಳಿದ, “ಏನಾಯ್ತು ಊರ್ಮಿ, ಮನೆಯಲ್ಲಿ ಆಗಲ್ಲ ಅಂತ ಏನಾದ್ರೂ ಹೇಳಿದ್ರಾ?”

ಬಹಳಷ್ಟು ಉದಾಸ ಮನಸ್ಸಿನಿಂದ ಊವರ್ಶಿ, “ಮಹೇಶ್‌, ಅಪ್ಪ ನನ್ನ ಮದುವೆ ನಿರ್ಧರಿಸಿದ್ದಾರೆ.”

“ಇದೇನು ಹೇಳ್ತಿರುವೆ ಊರ್ಮಿ? ನಿನ್ನನ್ನು ಕೇಳದೆ ಮನೆಯವರು ಈ ನಿರ್ಧಾರ ಹೇಗೆ ಮಾಡಿದರು?”

“ಆ ವಿಷಯ ನನಗೆ ಗೊತ್ತೇ ಇರಲಿಲ್ಲ. ನನ್ನ ಬಾಲ್ಯದ ಗೆಳೆಯ ರಾಕೇಶ್‌ನನ್ನನ್ನೇ ಪ್ರೀತಿಸುತ್ತಿದ್ದಾನೆ. ಅವನ ಜೊತೆಯೇ ನನ್ನ ಮದುವೆ ಮಾಡಲು ನಿರ್ಧರಿಸಿದ್ದಾರೆ. ನಾನು ಅವನ ಜೊತೆ ಒಂದು ದಿನ ಸಹ ಮಾತಾಡಿಲ್ಲ. ಒಂದು ದಿನ ಅವನು ನನ್ನ ತಂದೆಯನ್ನು ಭೇಟಿ ಮಾಡಿ ನನ್ನನ್ನು ಅಗಾಧವಾಗಿ ಪ್ರೀತಿಸುತ್ತಿದ್ದು, ನನ್ನನ್ನೇ ಮದುವೆಯಾಗುವುದಾಗಿ ಹೇಳಿದ್ದಾನೆ. ಜೊತೆಗೆ ನನಗಾಗಿ ಏನನ್ನು ಕೂಡ ಮಾಡಲು ಸಿದ್ಧ ಎಂದಿದ್ದಾನಂತೆ.

“ಹಾಗಾಗಿ ನನ್ನ ತಂದೆ ನೀನು ಅವಳಿಗಾಗಿ ಏನು ಮಾಡಲು ಸಿದ್ಧ ಎಂದು ಕೇಳಿದ್ದಾರೆ. ರಾಕೇಶ್‌ಸ್ವಲ್ಪ ಹೊತ್ತು ಯೋಚಿಸಿ, ನಾನು ಮದುವೆಗೆ ಮುಂಚೆ ತನ್ನ ಮನೆ, ಆಸ್ತಿ ಎಲ್ಲವನ್ನೂ ನನ್ನ ಹೆಸರಿಗೆ ಮಾಡಲು ಸಿದ್ಧ ಎಂದಿದ್ದಾನೆ.

“ನನ್ನ ಅಪ್ಪ ಚಕಿತರಾಗಿ ಇದೇನು ಹೇಳ್ತಿರುವೆ ರಾಕೇಶ್‌? ಹೇಳುವುದಕ್ಕೂ ಮಾಡುವುದಕ್ಕೂ ವ್ಯತ್ಯಾಸವಿದೆ ಎಂದಿದ್ದಾರೆ. ಅವನು ನಿಜವಾಗಿಯೂ ತನ್ನ ಆಸ್ತಿಯನ್ನು ನನ್ನ ಹೆಸರಿಗೆ ಬರೆದ. ಆದರೆ ನನ್ನ ಅಪ್ಪ ಅದೆಲ್ಲ ಏನೂ ಬೇಡ ಅಂತ ಹೇಳಿದರು. ಅಪ್ಪನ ಮಾತುಗಳನ್ನು ಕೇಳಿಸಿಕೊಂಡು ನಾನೇನೂ ಹೇಳಲಿಲ್ಲ. ಏಕೆಂದರೆ ನನ್ನ ಅಪ್ಪ ಅಮ್ಮ ಬಹಳ ಖುಷಿಯಾಗಿದ್ದಾರೆ.

“ನನಗೆ ತಿಳಿವಳಿಕೆ ಹೇಳುತ್ತಾ ಅಪ್ಪ ಹೇಳಿದರು, ಈ ಹುಡುಗ ನಿನ್ನನ್ನು ಅದೆಷ್ಟು ಪ್ರೀತಿಸುತ್ತಾನೆಂದರೆ, ಅವನು ಖಂಡಿತಾ ನಿನ್ನನ್ನು ಖುಷಿಯಿಂದ ಇಡುತ್ತಾನೆ,” ಎಂದು ಸುದೀರ್ಘವಾಗಿ ಹೇಳಿದಳು.

ಮಹೇಶ್‌ಸ್ವಲ್ಪ ಕಸಿವಿಸಿಗೊಂಡು, “ಇದೇನು ದೊಡ್ಡ ವಿಷಯ ಊರ್ಮಿ. ನಾನು ನನ್ನ ಸಂಪೂರ್ಣ ಆಸ್ತಿ ನಿನ್ನ ಹೆಸರಿಗೆ ಬರೆಯುತ್ತೇನೆ. ಪ್ರೀತಿಯ ಮುಂದೆ ಆಸ್ತಿಗೇನು ಬೆಲೆಯಿದೆ?” ಎಂದ.

ತನ್ನ ಯೋಜನೆ ಯಶಸ್ವಿಯಾಗುವುದನ್ನು ಕಂಡು ಖುಷಿಗೊಂಡು ಹೇಳಿದಳು, “ನನಗೆ ಗೊತ್ತು ಮಹೇಶ್‌, ಆದರೆ ರಾಕೇಶ್ ನಂತೂ ತನ್ನ ಸಮಸ್ತ ಆಸ್ತಿಯನ್ನು ನನ್ನ ಹೆಸರಿಗೆ ಬರೆದುಬಿಟ್ಟಿದ್ದಾನೆ. ನಾನು ಅವನನ್ನು ಹೇಗೆ ನಿರಾಕರಿಸಲಿ?”

“ಊವರ್ಶಿ, ನೀನು ಚಿಂತೆ ಮಾಡಬೇಡ. ನಾನು ನಿನ್ನ ಅಪ್ಪನನ್ನು ಭೇಟಿಯಾಗಿ ಅವರ ಜೊತೆ ಮಾತಾಡ್ತೀನಿ. ರಾಕೇಶ್‌ಏನೆಲ್ಲ ಕೊಟ್ಟಿದ್ದಾನೆ, ಅದನ್ನು ವಾಪಸ್‌ಮಾಡಲಿ.”

ಈ ರೀತಿ ಮಾತನಾಡುತ್ತಾ ಇಬ್ಬರೂ ಡಿನ್ನರ್‌ಮುಗಿಸಿದರು. ಬಳಿಕ ಮಹೇಶ್‌ಅವಳನ್ನು ಅವಳ ಮನೆತನಕ ಬಿಟ್ಟ. ಮಹೇಶನ ಪತ್ನಿಗೆ ಅವನ ಅಫೇರ್‌ಬಗ್ಗೆ ಗೊತ್ತಿತ್ತು. ಹೀಗಾಗಿ ದಿನ ಅವರ ಮನೆಯಲ್ಲಿ ಜಗಳಗಳಾಗುತ್ತಿದ್ದವು.

ಮಹೇಶ್‌ಮನೆಗೆ ಬರುತ್ತಿದ್ದಂತೆಯೇ ಪೂಜಾ ಕೋಪದಿಂದ, “ಇಷ್ಟು ಹೊತ್ತು ಎಲ್ಲಿದ್ದಿರಿ? ಒಂದು ಫೋನ್‌ಕೂಡ ಇಲ್ಲ. ನೀವು ಅಂಥದ್ದೇನು ಮಾಡ್ತಾ ಇರ್ತೀರಾ? ನನಗೇನೂ ಗೊತ್ತಿಲ್ಲ ಎಂದು ಭಾವಿಸ್ತಿದಿರಾ? ಮೋಸ ಮಾಡುವುದು, ತಪ್ಪು ಮಾಡುವುದು ನಿಮ್ಮ ಅಭ್ಯಾಸವೇ ಆಗಿಬಿಟ್ಟಿದೆ.”

ಪೂಜಾ ಅತ್ಯಂತ ಸ್ವಾಭಿಮಾನಿ ಯುವತಿ. ಅವಳು ಮಹೇಶನ ಚಟುವಟಿಕೆಗಳ ಬಗ್ಗೆ ಅವನನ್ನು ಧಿಕ್ಕರಿಸುತ್ತಾ, “ಮಹೇಶ್‌, ನೀವು ಏಕಕಾಲಕ್ಕೆ ಇಬ್ಬಿಬ್ಬರು ಯುವತಿಯರಿಗೆ ಮೋಸ ಮಾಡ್ತಾ ಇದೀರಾ. ಆಕೆ ಯಾರು ಏನು ಎನ್ನುವುದರ ಬಗ್ಗೆ ನನಗೆ ಬೇಕಿಲ್ಲ. ಆದರೆ ನೀವು ಮೋಸ ಮಾಡ್ತಾ ಇದೀರಾ. ನಾನು ನಿಮಗೆ ಜೊತೆ ಇರಲು ಆಗುವುದಿಲ್ಲ. ಗಂಡನೇ ದೇವರೆಂದು ಭಾವಿಸಿ ಅವನು ಮಾಡುವುದನ್ನೆಲ್ಲ ಸಹಿಸಿಕೊಂಡಿರುವುದು ನನಗೆ ಸಾಧ್ಯವಿಲ್ಲ. ನಿಮಗೆ ನನ್ನನ್ನು ಬಿಟ್ಟು ಬೇರೆಯವರೊಂದಿಗೆ ಪ್ರೀತಿ ಇದ್ದರೆ ನಾನು ನಿಮ್ಮನ್ನು ಸ್ವತಂತ್ರಗೊಳಿಸುತ್ತಿರುವೆ. ಇಷ್ಟು ವರ್ಷಗಳಲ್ಲಿ ನಿಮಗೆ ನನ್ನಿಂದ ಪ್ರೀತಿ ಕಡಿಮೆಯಾಯಿತು ಅನಿಸುತ್ತೆ. ಈವರೆಗೆ ನಮಗೆ ಮಕ್ಕಳಾಗದಿದ್ದುದೇ ಒಳ್ಳೆಯದಾಯಿತು. ಇಲ್ಲದಿದ್ದರೆ ನನ್ನ ಕಾಲುಗಳಿಗೆ ಬೇಡಿಯೇ ಗತಿಯಾಗುತ್ತಿತ್ತು.”

ಮಹೇಶ್‌ಪೂಜಾಳ ಮಾತಿಗೆ ಯಾವುದೇ ಉತ್ತರ ಕೊಡಲಿಲ್ಲ. ಅವನಲ್ಲಿ ಕೇವಲ ಊರ್ಮಿಯ ಪ್ರೀತಿಯ ನಶೆ ಆವರಿಸಿಕೊಂಡಿತ್ತು. ಊವರ್ಶಿಯ ಮನಸ್ಸಿನಲ್ಲಿ ನಡೆಯುತ್ತಿದ್ದ ಷಡ್ಯಂತ್ರದ ಬಗ್ಗೆ ಅರಿವಿರದಿದ್ದ ಮಹೇಶ್‌ಅವಳ ಜೊತೆ ಅವಳ ತಾಯಿ ತಂದೆಯ ಹತ್ತಿರ ಹೋಗಿ ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡು ಮದುವೆಯ ಪ್ರಸ್ತಾಪವಿಟ್ಟ.

ಆದರೆ ಊವರ್ಶಿಯ ತಂದೆ ವಿವೇಕ್‌ಅವನ ಮಾತನ್ನು ತಡೆಯುತ್ತಾ, “ಇದು ಸಾಧ್ಯವಿಲ್ಲ. ನಾನು ಊರ್ಮಿಯ ಮದುವೆಯನ್ನು ಈಗಾಗಲೇ ನಿರ್ಧಾರ ಮಾಡಿರುವೆ. ಆ ಹುಡುಗ ರಾಕೇಶ್‌ಅವಳನ್ನು ಬಹಳ ಪ್ರೀತಿಸುತ್ತಾನೆ. ನಾನು ಬೇಡ ಬೇಡ ಅಂದ್ರೂ ತನ್ನೆಲ್ಲ ಆಸ್ತಿಯನ್ನು ಅವಳ ಹೆಸರಿಗೆ ಮಾಡಿದ್ದಾನೆ. ನಾನು ಅವನನ್ನು ಹೇಗೆ ತಾನೇ ನಿರಾಕರಿಸಲು ಸಾಧ್ಯ?”

“ಆದರೆ ಊರ್ಮಿ ನನ್ನನ್ನು ಪ್ರೀತಿಸುತ್ತಾಳೆ ಅಂಕಲ್, ರಾಕೇಶ್‌ನನ್ನಲ್ಲ. ನಿಮ್ಮ ಮಗಳು ಖುಷಿಯಿಂದಿರುವುದನ್ನು ನೋಡಬೇಕೆಂದರೆ ನೀವು ಈಗಲೇ ಈ ಸಂಬಂಧವನ್ನು ಮುರಿದುಬಿಡಿ. ನಾನು ಊರ್ಮಿಯನ್ನು ಬಹಳ ಪ್ರೀತಿಸ್ತೀನಿ. ಅವಳಿಲ್ಲದೆ ನಾನು ಬದುಕಲು ಆಗುವುದಿಲ್ಲ. ನಾನೂ ಕೂಡ ನನ್ನೆಲ್ಲ ಆಸ್ತಿಯನ್ನು ಊರ್ಮಿಯ ಹೆಸರಿಗೆ ಬರೆಯಲು ಸಿದ್ಧ,” ಎಂದ.

ವಿವೇಕ್‌ಈಗ ಏನನ್ನೂ ಹೇಳಲಿಲ್ಲ. ಅವರು ಮಹೇಶನಿಗೆ `ಹ್ಞೂಂ’ ಎಂದಷ್ಟೇ ಹೇಳಿದರು. ಏಕೆದಂರೆ ಅವರು ಕೂಡ ಈ ಷಡ್ಯಂತ್ರದಲ್ಲಿ ಮೊದಲಿನಿಂದಲೇ ಊವರ್ಶಿಯ ಜೊತೆಗಿದ್ದರು.

ಮಹೇಶ್‌ಬಹಳ ಉಮೇದಿನಲ್ಲಿದ್ದ. ಅವನು ತಕ್ಷಣವೇ ಅಲ್ಲಿಂದ ಹೊರಟ. ಹೋಗುವಾಗ ಊರ್ಮಿಗೆ ಹೇಳಿದ, “ಊರ್ಮಿ ಐ ಲವ್ ಯೂ, ನಾನು ನಿನಗಾಗಿ ಏನು ಮಾಡಲೂ ಸಿದ್ಧ. ನಾನು ನಾಳೆಯೇ ನನ್ನ ವಕೀಲರೊಂದಿಗೆ ವಾಪಸ್‌ಬರ್ತೀನಿ. ನನ್ನ ಇಡೀ ಆಸ್ತಿಯನ್ನು ನಿನ್ನ ಹೆಸರಿಗೆ ಬರೆದುಕೊಡ್ತೀನಿ. ಆಗ ನಮ್ಮ ವಿವಾಹಕ್ಕೆ ಯಾರೂ ತಡೆಯೊಡ್ಡಲಾರರು.”

ಮರುದಿನವೇ ಬರುವುದಾಗಿ ಹೇಳಿ ಹೋದ ಮಹೇಶ್‌ದಿನಗಳಾದರೂ ಬರಲಿಲ್ಲ. ಅವನಿಂದ ಯಾವುದೇ ಫೋನ್‌ಕೂಡ ಬರಲಿಲ್ಲ. ಅತ್ತ ಊವರ್ಶಿಯ ತಂದೆ ತಾಯಿಗೆ ಬಹಳ ಕಸಿವಿಸಿ ಆಗುತ್ತಿತ್ತು.  ಮಹೇಶನಿಗೆ ಏನಾದರೂ ವಿಷಯ ತಿಳಿದು ಹೋಯಿತಾ ಎಂದು ಆತಂಕ ಆಗುತ್ತಿತ್ತು.

ಊವರ್ಶಿ ಅವನಿಗೆ ಮೇಲಿಂದ ಮೇಲೆ ಫೋನ್‌ಮಾಡುತ್ತಿದ್ದಳು. ಆದರೆ ಅವನ ಫೋನ್‌ಸ್ವಿಚ್‌ಆಫ್‌ಆಗಿತ್ತು. ನೋಡು ನೋಡುತ್ತಿರುವಂತೆ ಒಂದು ವಾರವೇ ಕಳೆದುಹೋಯಿತು. ಆದರೆ ಮಹೇಶ್‌ಬರಲಿಲ್ಲ. ಊವರ್ಶಿಗೆ ಗಾಬರಿಯಾಯಿತು. ಅವಳು ವಾಪಸ್‌ಮಹೇಶನ ಶೋರೂಮಿಗೆ ಹೋಗಿ ಕೇಳಿದಳು.

ಸೇಲ್ಸ್ ಮನ್‌ಅವಳನ್ನು ನೋಡುತ್ತಿದ್ದಂತೆ, “ಮೇಡಂ, ಮಹೇಶ್‌ಸರ್‌ಅವರ ತಾಯಿ ತಂದೆಯರಿಗೆ ಆಕ್ಸಿಡೆಂಟ್‌ಆಗಿ ತೀರಿಹೋದರು. ಆ ವಿಷಯ ತಿಳಿಯುತ್ತಿದ್ದಂತೆಯೇ ಅವರು ತಮ್ಮೂರಿಗೆ ಹೊರಟು ಹೋಗಿದ್ದಾರೆ. ಆಗಿನಿಂದ ಅವರ ಮೊಬೈಲ್‌ಕೂಡ ಬಂದ್‌ಆಗಿದೆ,” ಎಂದು ಹೇಳಿದ.

ಆ ವಿಷಯ ಕೇಳಿ ಊವರ್ಶಿ ತನ್ನ ಖೇದ ವ್ಯಕ್ತಪಡಿಸಿ ಮನೆಗೆ ವಾಪಸ್ಸಾದಳು. ಮಹೇಶನಿಗೆ ತನ್ನ ಯೋಜನೆಗಳ ಬಗ್ಗೆ ಏನೊಂದೂ ಗೊತ್ತಾಗಿಲ್ಲ ಎನ್ನುವುದು ಅರಿವಿಗೆ ಬಂದು ಅವಳಿಗೆ ಖುಷಿಯಾಯಿತು.

1 ವಾರದ ಬಳಿಕ ಮಹೇಶ್‌ತನ್ನ ಹುಟ್ಟೂರಿನಿಂದ ಬಂದ. ಅವನು ಎಲ್ಲಕ್ಕೂ ಮುಂಚೆ ಊರ್ಮಿಯನ್ನು ಭೇಟಿಯಾಗಲು ಅವಳ ಮನೆಗೆ ಹೋದ.

ಬೆಲ್‌ಸದ್ದಾಗುತ್ತಲೇ ಊವರ್ಶಿ ಬಾಗಿಲು ತೆರೆದಳು. ಎದುರಿಗೆ ಮಹೇಶನನ್ನು ಕಂಡು ನಿಟ್ಟುಸಿರುಬಿಟ್ಟಳು. ಮಹೇಶ್‌ಅವಳ ಹೆಗಲ ಮೇಲೆ ತಲೆಯಿಟ್ಟು ಅಳತೊಡಗಿದ.

ಊವರ್ಶಿ ಅವನಿಗೆ ಸಾಂತ್ವನ ನೀಡುತ್ತಾ, “ಮಹೇಶ್‌ನೀವೇಕೆ ಫೋನ್‌ರಿಸೀವ್‌ಮಾಡಲಿಲ್ಲ? ನಾನು ನಿಮಗೆ ಅದೆಷ್ಟು ಸಲ ಕಾಲ್‌ಮಾಡ್ತಿದ್ದೆ.”

“ಊರ್ಮಿ, ನಾನು ಬೈಕಿನಲ್ಲಿ ಹೋಗುತ್ತಿದ್ದೆ. ನನಗೆ ಅಪ್ಪ ಅಮ್ಮನ ಆ್ಯಕ್ಸಿಡೆಂಟ್‌ವಿಷಯ ತಿಳಿಯುತ್ತಿದ್ದಂತೆ ದುಃಖಿತನಾಗಿ ನನ್ನ ಕೈಯಿಂದ ಮೊಬೈಲ್‌ಬಿದ್ದುಹೋಯಿತು. ಹಿಂದಿನಿಂದ ಬರುತ್ತಿದ್ದ ಕಾರಿನ ಚಕ್ರದಡಿ ಸಿಲುಕಿ ನಜ್ಜುಗುಜ್ಜಾಯಿತು. ನಾನು ತಕ್ಷಣವೇ ನಮ್ಮ ಹಳ್ಳಿಗೆ ಹೊರಟುಹೋದೆ. ನಾನು ನನ್ನ ತಂದೆ ತಾಯಿಯನ್ನು ಕಳೆದುಕೊಂಡುಬಿಟ್ಟೆ ಊರ್ಮಿ. ನಾನೀಗ ಏಕಾಂಗಿಯಂತಾಗಿಬಿಟ್ಟೆ. ನೀನು ನನ್ನ ಜೀವನದಲ್ಲಿ ಬೇಗ ಬಾ,” ಎಂದ.

“ಹೌದು ಮಹೇಶ್‌ನಮಗಿದು ಅತ್ಯಂತ ದುಃಖದ ಸಮಯ. ಕೆಲವು ದಿನಗಳ ಬಳಿಕ ನಾವು ಪುನಃ ಅಪ್ಪನ ಬಳಿ ಹೋಗಿ ಮಾತುಕತೆ ನಡೆಸೋಣ.”

“ಊರ್ಮಿ, ನಾನು ಬಯಸುವುದೇನೆಂದರೆ, ನಿನ್ನ ಅಪ್ಪನನ್ನು ಭೇಟಿಯಾಗಲು ಹೋಗುವ ಮುಂಚೆ ನಾನು ನನ್ನ ಆಸ್ತಿಯನ್ನು ನಿನ್ನ ಹೆಸರಿಗೆ ಬರೆದುಬಿಡಬೇಕು.”

ಊವರ್ಶಿ, ಮನಸ್ಸಿನಲ್ಲಿಯೇ ಹರ್ಷಗೊಂಡು ಮೇಲ್ಮಾತಿಗೆ, “ಬೇಡ ಮಹೇಶ್‌, ಅದರ ಅವಶ್ಯಕತೆ ಇಲ್ಲ ಅನಿಸುತ್ತೆ,” ಎಂದಳು.

“ಊರ್ಮಿ, ನಾನು ನಿನ್ನ ಅಪ್ಪನಿಗೆ ಮಾತು ಕೊಟ್ಟಿರುವೆ. ಅದನ್ನು ಉಳಿಸಿಕೊಳ್ಳಬೇಕು.”

1 ವಾರದೊಳಗೆ ಮಹೇಶ್‌ತನ್ನೆಲ್ಲ ಆಸ್ತಿಯನ್ನು ಊವರ್ಶಿಯ ಹೆಸರಿಗೆ ಮಾಡಿದ.

ಅದನ್ನು ಕಂಡು ಊವರ್ಶಿ ಕೇಳಿದಳು, “ಮಹೇಶ್‌, ನೀವು ನನ್ನನ್ನು ಅಷ್ಟೊಂದು ಪ್ರೀತಿಸುವಿರಾ….?”

“ಹೌದು ಊರ್ಮಿ. ನಾನು ನಿನ್ನ ಪ್ರೀತಿ ಪಡೆದುಕೊಳ್ಳಲು ನನ್ನ ಹೆಂಡತಿಯನ್ನು ಕೂಡ ತೊರೆದೆ. ಈಗ ನಮ್ಮ ಮಧ್ಯೆ ಯಾರೊಬ್ಬರೂ ಬರಲು ಸಾಧ್ಯವಿಲ್ಲ.”

ಮಹೇಶನಿಂದ ಅದೆಲ್ಲವನ್ನು ಕೇಳಿ ಊವರ್ಶಿಯ ಮನಸ್ಸಿಗೆ ಬಹಳ ನೆಮ್ಮದಿಯೆನಿಸಿತು. ಆಸ್ತಿಪತ್ರದ ದಾಖಲೆಗಳನ್ನು ತೆಗೆದುಕೊಂಡು ಇಬ್ಬರೂ ಬೆಂಗಳೂರಿಗೆ ಬಂದರು. ಊವರ್ಶಿಯ ತಾಯಿ ತಂದೆ ಅವನಿಗೆ ಸ್ವಾಗತ ಹೇಳಿದರಲ್ಲದೆ, ತಾಯಿ ತಂದೆಯ ಅಗಲಿಕೆಗೆ ಸಾಂತ್ವನ ವ್ಯಕ್ತಪಡಿಸಿದರು.

ತನ್ನ ಮಗಳ ಯೋಜನೆಯನ್ನು ಯಶಸ್ವಿಗೊಳಿಸಲು ವಿವೇಕ್‌ಅವರ ಮದುವೆಯನ್ನು 20 ದಿನಗಳ ಬಳಿಕ ಮಾಡುವುದೆಂದು ನಿರ್ಧರಿಸಿದರು.

ಊವರ್ಶಿ ಮನಸ್ಸಿನಲ್ಲಿಯೇ ಹೇಳಿಕೊಂಡಳು. ಇದು ನನ್ನ ಸೇಡು ಅಷ್ಟೇ, ತನ್ನ ಸ್ವಾಭಿಮಾನದ ರಕ್ಷಣೆ ಮಾಡಿಕೊಳ್ಳಲು. ಕಳೆದುಹೋದ ನನ್ನ ಮಾನವಂತೂ ವಾಪಸ್‌ಬರಲಾರದು. ಆದರೆ ಈ ಪಾಪಿಗೆ ಅವಶ್ಯವಾಗಿ ಶಿಕ್ಷೆಯಂತೂ ಆಗಲೇಬೇಕು. ಮದುವೆಯ ದಿನ ನಿಗದಿಯಾಗುತ್ತಿದ್ದಂತೆ ಮಹೇಶ್‌ಹಾಗೂ ಊವರ್ಶಿ ತಾವಿದ್ದ ಊರಿಗೆ ವಾಪಸ್ಸಾದರು.

ಮದುವೆಗಿನ್ನೂ 1 ವಾರ ಮಾತ್ರ ಉಳಿದಿತ್ತು. ಊವರ್ಶಿ ಮಹೇಶನ ಮನೆಗೆ ಹೋಗಿ, “ಮಹೇಶ್‌, ನಾನು ನಿನ್ನನ್ನು ಮದುವೆಯಾಗಲು ಇಚ್ಛಿಸುವುದಿಲ್ಲ,” ಎಂದಳು

“ಇದೇನು ಹೇಳ್ತಿರುವೆ ಊರ್ಮಿ ನೀನು? ಈವರೆಗೆ ನಮ್ಮ ಮದುವೆಯ ಎಲ್ಲ ಸಿದ್ಧತೆಗಳು ಮುಗಿದಿವೆ.”

“ಮದುವೆ? ಯಾವ ಮದುವೆ? ನೀನೆಂದಾದರೂ ನಿನ್ನ ಜೀವನದ ಭೂತಕಾಲವನ್ನು ನೆನಪಿಸಿಕೊಂಡಿದ್ದೀಯಾ? 10 ವರ್ಷದ ಮುಗ್ಧ ಹುಡುಗಿಯ ಜೊತೆ ಹೇಗೆ ವರ್ತಿಸಬೇಕೆಂದು ನೀನೆಂದಾದರೂ ಯೋಚಿಸಿದ್ದೀಯಾ……?”

“ಇದೇನು ಹೇಳ್ತಿರುವೆ ಊರ್ಮಿ ನೀನು? ಯಾರು 10 ವರ್ಷದ ಹುಡುಗಿ?”

“ಮಹೇಶ್‌, ನೀನು ಆ ಹುಡುಗಿಯ ಹೆಸರು ಮರೆತು ಬಿಟ್ಯಾ? ಅದೇ ಊವರ್ಶಿ. ಇಂಟರ್‌ಸ್ಕೂಲ್‌ಕಾಂಪಿಟಿಶನ್‌ನ ನೆಪ ಮಾಡಿ ಕರೆದುಕೊಂಡು ಹೋಗಿ ಅವಳ ಮೇಲೆ ಅತ್ಯಾಚಾರ ಮಾಡಿದ್ದಿ. ನೀನು ಅವಳನ್ನು ಎಂತಹ ಜಾಗವೊಂದಕ್ಕೆ ಎಳೆದುಕೊಂಡು ಹೋದೆ ಅಂದ್ರೆ ಅದರಿಂದ ಅವಳು ಇದುವರೆಗೂ ಹೊರ ಬಂದಿಲ್ಲ.

“ನೀನು 10 ವರ್ಷದ ಮುಗ್ಧ ಹುಡುಗಿಯ ಬಾಲ್ಯವನ್ನು ಹಾಳು ಮಾಡಿದಿಯಲ್ಲ, ಅದೇ ಊವರ್ಶಿ ನಾನು. ಮಹೇಶ್‌, ನಾನು ನಿನ್ನನ್ನು ಪ್ರೀತಿಸುವುದಿಲ್ಲ. ನಿನ್ನನ್ನು ಅತಿಯಾಗಿ ದ್ವೇಷಿಸ್ತೀನಿ. ನೀನು ಆ ಬಿಕ್ಕುತ್ತಿದ್ದ, ನರಳುತ್ತಿದ್ದ, ದಯೆಯ ಭಿಕ್ಷೆ ಕೇಳುತ್ತಿದ್ದ ಮುಗ್ಧ ಹುಡುಗಿಯ ಮೇಲೆ ಒಂಚೂರು ಕರುಣೆ ತೋರಿಸಲಿಲ್ಲ. ಅವಳ ಭವಿಷ್ಯ ಏನಾಗಬಹುದು ಎಂದು ನೀನು ಯೋಚನೆ ಮಾಡಲಿಲ್ಲ. ಅವಳು ಅಳುತ್ತಿದ್ದಳು. ಆದರೆ ನೀನು ಆಗ ಸಂಭ್ರಮಿಸುತ್ತಿದ್ದೆ. ಆಗ ನೀನು ನನಗೆ ಯಾರಿಗೂ ಹೇಳಬೇಡ ಎಂದು ಕಲಿಸಿದ್ದೆ ಅಲ್ವೇ? ಈಗ ನಿನಗೆ ಯಾರೂ ಸಿಗುವುದಿಲ್ಲ ಮಹೇಶ್‌, ನಾನೂ ಸಿಗುವುದಿಲ್ಲ. ಅತ್ತ ನಿನ್ನ ಹೆಂಡತಿ ಕೂಡ.

“ನೀನು ನಿನ್ನ ಹೆಂಡತಿಗೂ ಕೂಡ ವಂಚನೆ ಮಾಡಿಬಿಟ್ಟೆ. ನಿನ್ನ ತಪ್ಪುಗಳಿಗೆ ಪ್ರಾಯಶ್ಚಿತ್ತ ಸಾಧ್ಯವೇ ಇಲ್ಲ. ಈ ಶಿಕ್ಷೆ ಕೂಡ ನಿನಗೆ ಕಡಿಮೆಯೇ. ಉಳಿದ ಶಿಕ್ಷೆಯನ್ನು ಆ ಸೃಷ್ಟಿಯೇ ನಿನಗೆ ಕೊಡುತ್ತದೆ.

“ನಿನ್ನ ಹೆಂಡತಿಯನ್ನು ವಾಪಸ್‌ಕರೆಸುವ ಪ್ರಯತ್ನ ಮಾಡಲೇಬೇಡ. ಏಕೆಂದರೆ ಅವಳು 10 ವರ್ಷದ ಮುಗ್ಧ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದವನ ಜೊತೆ ಇರಲು ಎಂದೂ ಇಷ್ಟಪಡುವುದಿಲ್ಲ.”

ಊವರ್ಶಿಯ ಬಾಯಿಯಿಂದ ಆ ಮಾತುಗಳನ್ನು ಕೇಳಿ ಮಹೇಶ್‌ಕಕ್ಕಾಬಿಕ್ಕಿಯಾಗಿ ಹೋದ. ಅವನು ಇಳಿದುಹೋದ ಚಹರೆಯನ್ನು ನೋಡಿ ಊವರ್ಶಿ ಹೇಳಿದಳು, “ಮಹೇಶ್‌, ನನ್ನ ಈ ಷಡ್ಯಂತ್ರದಲ್ಲಿ ನನ್ನ ಅಪ್ಪ ಅಮ್ಮನ ಹೊರತಾಗಿ ನಿನ್ನ ಹೆಂಡತಿ ಪೂಜಾ ಕೂಡ ಶಾಮೀಲಾಗಿದ್ದಳು. ನಾನು ಬಹಳ ಮೊದಲೇ ಅವರಿಗೆ ಈ ವಿಷಯದ ಬಗ್ಗೆ ತಿಳಿಸಿದೆ. ನಾನು ಹೇಗೆ ಮಾಡಲು ಹೇಳಿದ್ದೆನೊ ಅವರು ಹಾಗೆಯೇ ಮಾಡಿದರು. ಈಗ ಈ ಮನೆ ನನ್ನದು ಮಹೇಶ್‌. ನೀನು ಈಗಿಂದೀಗಲೇ ಇಲ್ಲಿಂದಲೇ ಹೊರಡು. ನಿನ್ನ ಮುಖವನ್ನು ಮತ್ತೆಂದೂ ತೋರಿಸಬೇಡ.”

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ