ಸ್ಪೈಸಿ ಪಾಲಕ್ತೊವ್ವೆ

ಸಾಮಗ್ರಿ : 4-5 ಕಪ್‌ ಸಣ್ಣಗೆ ಹೆಚ್ಚಿದ ಪಾಲಕ್‌ ಸೊಪ್ಪು, ರುಚಿಗೆ ತಕ್ಕಷ್ಟು ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಟೊಮೇಟೊ ಪೇಸ್ಟ್, ಇಂಗು, ಉಪ್ಪು, ಖಾರ, ಅರಿಶಿನ, ಗರಂಮಸಾಲ, ಒಗ್ಗರಣೆಗೆ 4-5 ಚಮಚ ತುಪ್ಪ, ತುಂಡರಿಸಿದ ಒಣ ಮೆಣಸಿನಕಾಯಿ, ಸಾಸುವೆ, ಜೀರಿಗೆ, ಸೋಂಪು, ಮೆಂತ್ಯ, 2-3 ಎಸಳು ಕರಿಬೇವು, 2 ಕಪ್‌ ಹುಳಿ ಮೊಸರು, ಅರ್ಧ ಕಪ್‌ ಕಡಲೆಹಿಟ್ಟು, 2-3 ಈರುಳ್ಳಿ, 1-2 ಟೊಮೇಟೊ.

ವಿಧಾನ : ಮೊಸರಿಗೆ ಕಡಲೆಹಿಟ್ಟು, ಅರಿಶಿನ, ಇಂಗು ಬೆರೆಸಿ ಚೆನ್ನಾಗಿ ಕಡೆದು ಒಂದು ಬದಿಗಿರಿಸಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ, ಆಮೇಲೆ ಟೊಮೇಟೊ ಹಾಕಿ ಬಾಡಿಸಿ. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಬೇಕು. ಹೆಚ್ಚಿದ ಸೊಪ್ಪು ಹಾಕಿ ಮಂದ ಉರಿಯಲ್ಲಿ ಕೈಯಾಡಿಸುತ್ತಾ ಬೇಯಿಸಿ. ಆಮೇಲೆ ಉಪ್ಪು, ಖಾರ, ಮಸಾಲೆ ಹಾಕಿ ಕೆದಕಬೇಕು. ಆಮೇಲೆ ಮೊಸರಿನ ಮಿಶ್ರಣ ಬೆರೆಸಿ, ಯಾವ ಹದಕ್ಕೆ ಬೇಕೋ ತೆಳ್ಳಗೆ ಮಾಡಿಕೊಳ್ಳಿ. ಚೆನ್ನಾಗಿ ಕುದ್ದ ಮೇಲೆ ಕೆಳಗಿಳಿಸಿ. ಬಿಸಿ ಬಿಸಿಯಾಗಿ ಅನ್ನ, ರೊಟ್ಟಿ, ಜೊತೆ ಸವಿಯಲು ಕೊಡಿ.

ಬಟಾಣಿ ಸೀಮೆಗೆಡ್ಡೆ ಕಬಾಬ್

ಸಾಮಗ್ರಿ : 200 ಗ್ರಾಂ ಸೀಮೆಗೆಡ್ಡೆ (ಆಲೂ ತರಹ ಬೇಯಿಸಿ ಸಿಪ್ಪೆ ಸುಲಿದಿಡಿ), 100 ಗ್ರಾಂ ಹಸಿ ಬಟಾಣಿ ಕಾಳು, 1-1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, 4 ಚಮಚ ಅಕ್ಕಿ ಹಿಟ್ಟು, ಅರ್ಧ ಕಪ್‌ ಬ್ರೆಡ್‌ ಕ್ರಂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ ಮಸಾಲ, ಗರಂ ಮಸಾಲ, ಅರ್ಧ ಕಪ್‌ ನೀರಲ್ಲಿ ನೆನೆದ ಕಡಲೆ ಬೇಳೆ, ಕರಿಯಲು ರೀಫೈಂಡ್ ಎಣ್ಣೆ.

ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ಬಟಾಣಿ ಹಾಕಿ ಬಾಡಿಸಿ. ನೀರು ಚಿಮುಕಿಸಿ ಬೇಯಿಸಿ. ಅದೇ ಹೊತ್ತಿಗೆ ಪಕ್ಕದ ಒಲೆಯಲ್ಲಿ ಕಡಲೆಬೇಳೆ ಬೇಯಿಸಿಕೊಳ್ಳಿ. ಆರಿದ ನಂತರ ಲಘು ಮಸೆದಿಡಿ. ಬಟಾಣಿಗೆ ಉಪ್ಪು, ಖಾರ, ಮಸಾಲೆ ಹಾಕಿ ಕೆದಕಿ. ನಂತರ ಇದಕ್ಕೆ ಮಸೆದ ಬೇಳೆ, ಮಸೆದ ಸೀಮೆಗೆಡ್ಡೆ ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ತುಸು ಆರಿದ ನಂತರ ಇದರ ಮೇಲೆ ಅಕ್ಕಿ ಹಿಟ್ಟು, ಕೊ.ಸೊಪ್ಪು, ಪುದೀನಾ, ಬ್ರೆಡ್‌ ಕ್ರಂಬ್ಸ್ ಹಾಕಿ ಮಿಶ್ರಣ ಕಲಸಿ, ಚಿತ್ರದಲ್ಲಿರುವಂತೆ ಕಟ್‌ ಲೆಟ್‌ ತರಹ ಮಾಡಿ. ನಂತರ ಇನ್ನು ಒಂದೊಂದಾಗಿ ಶ್ಯಾಲೋ ಫ್ರೈ ಮಾಡಿ. ಸಲಾಡ್‌, ಸಾಸ್‌ ಜೊತೆ ಸವಿಯಿರಿ.

ಟೇಸ್ಟಿ ಪಾಲಕ್ರೋಲ್ಸ್

ಮೂಲ ಸಾಮಗ್ರಿ : 1 ಕಂತೆ ಪಾಲಕ್‌ ಸೊಪ್ಪು, 1-2 ದೊಡ್ಡ ಆಲೂಗಡ್ಡೆ ಬೇಯಿಸಿ ಮಸೆದದ್ದು, ಅರ್ಧರ್ಧ ಕಪ್‌ ಬೆಂದ ಬಟಾಣಿ ಕಾಳು, ತುರಿದ ಕ್ಯಾರೆಟ್‌, 1 ದೊಡ್ಡ ನೆಲ್ಲಿಕಾಯಿಯ ತುರಿ, ಒಂದಿಷ್ಟು ಹೆಚ್ಚಿದ ಹಸಿಮೆಣಸು, ಕರಿಬೇವು, ಪುದೀನಾ, ಶುಂಠಿ, 2 ಚಮಚ ಕಾರ್ನ್‌ ಫ್ಲೋರ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ ಮಸಾಲ.

ಕೋಟಿಂಗ್ಸಾಮಗ್ರಿ : ಅರ್ಧರ್ಧ ಕಪ್‌ ಮೈದಾ, ಕಾರ್ನ್‌ ಫ್ಲೋರ್‌, ರುಚಿಗೆ ಉಪ್ಪು, ಪುಡಿಮೆಣಸು, ಅರ್ಧ ಕಪ್‌ ಬ್ರೆಡ್‌ ಕ್ರಂಬ್ಸ್, ಕರಿಯಲು ಎಣ್ಣೆ.

ವಿಧಾನ : ಮೊದಲು ಪಾಲಕ್‌ ಸೊಪ್ಪನ್ನು ಕುದಿ ನೀರಿಗೆ ಹಾಕಿ ಲೈಟ್‌ ಆಗಿ ಬ್ಲಾಂಚ್‌ ಮಾಡಿ ತೆಗೆದು ಬೇಸನ್ನಿಗೆ ಹಾಕಿಡಿ. ಇದಕ್ಕೆ ಉಳಿದೆಲ್ಲ ಮೂಲ ಸಾಮಗ್ರಿ ಹಾಕಿ ಹೂರಣದ ಮಿಶ್ರಣ ಕಲಸಿಡಿ. ನಂತರ ಕೋಟಿಂಗ್‌ ಸಾಮಗ್ರಿ ಎಲ್ಲಾ ಸೇರಿಸಿ, ತುಸು ನೀರು ಬೆರೆಸಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಡಿ. ಹೂರಣದಿಂದ ಸಣ್ಣ ನಿಂಬೆ ಗಾತ್ರ ಉಂಡೆ ಹಿಡಿದು, ಕೋಟಿಂಗ್‌ ನಲ್ಲಿ ಅದ್ದಿಕೊಂಡು, ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ಸಾಸ್‌ ಜೊತೆ ಸವಿಯಲು ಕೊಡಿ.

ಆಲೂ ಪಾಲಕ್ಪರೋಟ

ಮೂಲ ಸಾಮಗ್ರಿ : 2 ಕಪ್‌ ಗೋಧಿಹಿಟ್ಟು, ಅರ್ಧ ಕಪ್‌ ಹುಳಿ ಮೊಸರು, ತುಸು ಬೆಚ್ಚಗಿನ ನೀರು, ಅರ್ಧ ಸೌಟು ಬಿಸಿ ತುಪ್ಪ, ರುಚಿಗೆ ಉಪ್ಪು.

ಹೂರಣದ ಸಾಮಗ್ರಿ : 4-5 ಕಪ್‌ ಹೆಚ್ಚಿ ಬ್ಲಾಂಚ್‌ ಗೊಳಿಸಿದ ಪಾಲಕ್‌ ಸೊಪ್ಪು, 1-2 ಆಲೂ ಬೇಯಿಸಿ ಮಸೆದದ್ದು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸಿನ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಒಟ್ಟಾರೆ 1 ಚಮಚ (ಹಸಿಯದಾಗಿ) ಧನಿಯಾ, ಜೀರಿಗೆ, ಸೋಂಪಿನ ಪುಡಿ, ಇಂಗು, ಚಾಟ್‌ ಮಸಾಲ, ಅರ್ಧ ಸೌಟು ರೀಫೈಂಡ್‌ ಎಣ್ಣೆ.

ವಿಧಾನ : ಮೊದಲು ಗೋಧಿಹಿಟ್ಟಿಗೆ ಉಳಿದ ಸಾಮಗ್ರಿ ಬೆರೆಸಿ, ತುಪ್ಪ ಹಾಕಿ ಚೆನ್ನಾಗಿ ನಾದಿ ಪೂರಿ ಹಿಟ್ಟಿನ ಹದಕ್ಕೆ ಮೃದುವಾಗಿ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಜೀರಿಗೆ ಪುಡಿಯ ಮಿಶ್ರಣ ಹಾಕಿ ಚಟಪಟಾಯಿಸಿ. ಇದಕ್ಕೆ ಹೆಚ್ಚಿದ ಸೊಪ್ಪು ಹಾಕಿ ಚೆನ್ನಾಗಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಇಂಗು, ಮಸಾಲೆ ಎಲ್ಲಾ ಹಾಕಿ ಬಾಡಿಸಿ. ನಂತರ ಮಸೆದ ಆಲೂ ಹಾಕಿ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ಇದು ಚೆನ್ನಾಗಿ ಆರಿದ ನಂತರ 1-1 ನಿಂಬೆ ಗಾತ್ರದ ಉಂಡೆ ಮಾಡಿ, ಚೆನ್ನಾಗಿ ಲಟ್ಟಿಸಿದ ಚಪಾತಿ ಮೇಲೆ ಇರಿಸಿ, ಬಂದ್‌ ಮಾಡಿ, ಮತ್ತೆ ಲಟ್ಟಿಸಿ. ಈ ರೀತಿ ಸಿದ್ಧಪಡಿಸಿಕೊಂಡು ತವಾ ಮೇಲೆ ಹಾಕಿ, ಎಣ್ಣೆ ಬಿಡುತ್ತಾ ಎರಡೂ ಬದಿ ಬೇಯಿಸಿ. ಬಿಸಿ ಇರುವಾಗಲೇ ಚಿತ್ರದಲ್ಲಿರುವಂತೆ ಸಲಾಡ್‌ ಜೊತೆ ಮೊಸರು ಹಾಕಿ, ಸವಿಯಲು ಕೊಡಿ.

ಪಂಜಾಬಿ ಪಾಲಕ್ಸಾಗು

Cookry-A

ಮೂಲ ಸಾಮಗ್ರಿ : 1-2 ಕಂತೆ ತಾಜಾ ಪಾಲಕ್‌ ಸೊಪ್ಪು, 1 ಕಂತೆ ಮೆಂತೆ ಸೊಪ್ಪು, ಅರ್ಧ ಕಪ್‌ ಮೂಲಂಗಿ ತುರಿ, 2-3 ಈರುಳ್ಳಿ, 4-5 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನ ಪೇಸ್ಟ್, 4 ಚಮಚ ಕಾರ್ನ್‌ ಫ್ಲೋರ್‌, ಅರ್ಧರ್ಧ ಸೌಟು ತುಪ್ಪ, ಬೆಣ್ಣೆ, ಅಲಂಕರಿಸಲು ಸಲಾಡ್‌, ಉಪ್ಪಿನಕಾಯಿ.

ವಿಧಾನ : ಎಲ್ಲಾ ಸೊಪ್ಪು ಹೆಚ್ಚಿಕೊಂಡು, ಶುಚಿಗೊಳಿಸಿ ಮೂಲಂಗಿ ತುರಿಯೊಂದಿಗೆ ನೇರವಾಗಿ ಸ್ಟೀಲ್ ‌ಪಾತ್ರೆಗೆ ಹಾಕಿ ಬಿಸಿ ನೀರಲ್ಲಿ ಬೇಯಿಸಿ. ಕೆಳಗಿಳಿಸಿ ಆರಿದ ನಂತರ ಸೋಸಿಕೊಂಡು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಜೀರಿಗೆ, ಸೋಂಪಿನ ಒಗ್ಗರಣೆ ಕೊಡಿ. ಇದಕ್ಕೆ ಮೊದಲು ಈರುಳ್ಳಿ, ನಂತರ ಟೊಮೇಟೊ ಹಾಕಿ ಬಾಡಿಸಿ.  ಆಮೇಲೆ ಇದಕ್ಕೆ ಉಪ್ಪು, ಖಾರ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ನಂತರ ಇದಕ್ಕೆ ರುಬ್ಬಿದ ಸೊಪ್ಪಿನ ಮಿಶ್ರಣ, ಮಿಕ್ಸಿ ತೊಳೆದ ನೀರು ಬಸಿದು ಮಂದ ಉರಿಯಲ್ಲಿ ಗ್ರೇವಿ ಕುದಿಸಬೇಕು. ಕಾರ್ನ್‌ ಫ್ಲೋರ್‌ ಗೆ ತುಸು ಬಿಸಿ ನೀರು ಬೆರೆಸಿ ಇದಕ್ಕೆ ಸೇರಿಸಿ. ಹಾಗೇ ಬೆಣ್ಣೆ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ನಂತರ ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿ ಬಿಸಿ ಚಪಾತಿ ಜೊತೆ ಸವಿಯಲು ಕೊಡಿ.

ಸ್ಪಿನಾಚ್ಕಾರ್ನ್ಸ್ಯಾಂಡ್ವಿಚ್

ಸಾಮಗ್ರಿ : 1 ಕಂತೆ ಪಾಲಕ್‌ ಸೊಪ್ಪು, ಅರ್ಧ ಕಪ್‌ ಬೆಂದ ಸ್ವೀಟ್‌ ಕಾರ್ನ್‌, 4 ಚಮಚ ಕ್ಯಾರೆಟ್‌ ತುರಿ, 3 ಚಮಚ ಹುರಿದ ಕಡಲೆಬೀಜ, ಒಂದಿಷ್ಟು ಖಾರ ಮಿಕ್ಸ್ ಚರ್‌, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಚಾಟ್‌ ಮಸಾಲ, ಬೆಣ್ಣೆ, ನಿಂಬೆ ರಸ.

ವಿಧಾನ : ಮೊದಲು ಹೆಚ್ಚಿದ ಪಾಲಕ್‌ ಸೊಪ್ಪನ್ನು ಬ್ಲಾಂಚ್‌ ಗೊಳಿಸಿ ನೀರು ಬಸಿದಿಡಿ. ಆರಿದ ಇದನ್ನು ಮಿಕ್ಸಿಗೆ ಹಾಕಿ, ಜೊತೆಗೆ ಕೊ.ಸೊಪ್ಪು, ಪುದೀನಾ, ಕಡಲೆಬೀಜ, ಹಸಿಮೆಣಸು, ಚಾಟ್‌ ಮಸಾಲ, ಉಪ್ಪು ಹಾಕಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ. ಇದಕ್ಕೆ ಕ್ಯಾರೆಟ್‌, ಬೆಂದ ಕಾರ್ನ್‌, ಖಾರ ಮಿಕ್ಸ್ ಚರ್‌ ಸೇರಿಸಿ. ಪ್ರತಿ ಬ್ರೆಡ್‌ ಸ್ಲೈಸ್‌ ಮೇಲೆ ಬೆಣ್ಣೆ ಸರಿಡಿ. ಒಂದರ ಮೇಲೆ 2-3 ಚಮಚ ಮಿಶ್ರಣ ಹರಡಿ, ಇನ್ನೊಂದನ್ನು ಮಡಿಚಿ, ಸ್ಯಾಂಡ್‌ ವಿಚ್‌ ಮೇಕರ್‌ ನಲ್ಲಿ ಟೋಸ್ಟ್ ಮಾಡಿ. ಇದನ್ನು ತ್ರಿಕೋನಾಕಾರವಾಗಿ ಕತ್ತರಿಸಿ, ಚಿತ್ರದಲ್ಲಿರುವಂತೆ ಸಲಾಡ್‌ ಜೊತೆಗೆ ಅಲಂಕರಿಸಿ ಕಾಫಿ, ಟೀ ಜೊತೆ ಸವಿಯಲು ಕೊಡಿ.

ಬಟಾಣಿ ಹೂಕೋಸಿನ ಪಲ್ಯ

ಸಾಮಗ್ರಿ : 2 ಕಪ್‌ (ಬಿಸಿ ನೀರಲ್ಲಿ ಶುಚಿಗೊಳಿಸಿ) ತುರಿದ ಹೂಕೋಸು (ಕಾಲಿಫ್ಲವರ್‌), 1 ಕಪ್‌ ಬೆಂದ ಹಸಿ ಬಟಾಣಿ ಕಾಳು, ಅರ್ಧ ಕಪ್‌ ಬೆಂದ ಸ್ವೀಟ್‌ ಕಾರ್ನ್‌, 1 ಲವಂಗದ ಎಲೆ, 2 ಲವಂಗ, ತುಸು ಮೆಂತ್ಯ, 2 ಈರುಳ್ಳಿ, 7-8 ಎಸಳು ಹೆಚ್ಚಿದ ಬೆಳ್ಳುಳ್ಳಿ. ತುಸು ಹಸಿ ಮೆಣಸು, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಗರಂ ಮಸಾಲ, ತೆಂಗಿನ ತುರಿ, ಹೆಚ್ಚಿದ ಕೊ.ಸೊಪ್ಪು, ಒಗ್ಗರಣೆಗೆ ಎಣ್ಣೆ, ಇತರೆ ಸಾಮಗ್ರಿ.

ವಿಧಾನ : ಮೊದಲು ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಹಸಿ ಮೆಣಸು, ಶುಂಠಿ ಹಾಕಿ ಬಾಡಿಸಿ. ನಂತರ ಹೂಕೋಸು ಹಾಕಿ ಬಾಡಿಸಬೇಕು. ಆಮೇಲೆ ಬೆಂದ ಬಟಾಣಿ, ಸ್ವೀಟ್‌ ಕಾರ್ನ್‌, ತೆಂಗಿನ ತುರಿ ಹಾಕಿ ಮಂದ ಉರಿಯಲ್ಲಿ 5 ನಿಮಿಷ ಬಾಡಿಸಿ. ಕೆಳಗಿಳಿಸಿದ ಮೇಲೆ ನಿಂಬೆಹಣ್ಣು ಹಿಂಡಿಕೊಂಡು, ಕೊ.ಸೊಪ್ಪು, ಪುದೀನಾ ಉದುರಿಸಿ. ಇದೀಗ ಪಲ್ಯ ರೆಡಿ! ಬಿಸಿ ಬಿಸಿ ದೋಸೆ, ಚಪಾತಿಗೆ ಇದು ಹದನಾಗಿ ಹೊಂದುತ್ತದೆ.

ಸ್ಪೈಸಿ ಚೈನೀಸ್ಪಕೋಡ

Cookry-B

ಸಾಮಗ್ರಿ : 2 ಕಪ್‌ ಸಣ್ಣಗೆ ಹೆಚ್ಚಿದ ಎಲೆಕೋಸು, 2-3 ಈರುಳ್ಳಿ, ತುಸು ಬ್ರೋಕ್ಲಿ, ತುರಿದ ಕ್ಯಾರೆಟ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಸೋಯಾ ಸಾಸ್‌, ಟೊಮೇಟೊ ಸಾಸ್‌, ಅರ್ಧರ್ಧ ಕಪ್‌ ಮೈದಾ, ಕಾರ್ನ್‌ ಫ್ಲೋರ್‌, 1 ಸಣ್ಣ ಚಮಚ ಓರಿಗ್ಯಾನೋ, ಅಗತ್ಯವಿದ್ದಷ್ಟು ರೀಫೈಂಡ್‌ ಎಣ್ಣೆ.

ವಿಧಾನ : ಮೈದಾ ಕಾರ್ನ್‌ ಫ್ಲೋರ್‌ ಸೇರಿಸಿ. ಇದಕ್ಕೆ ತುಸು ಉಪ್ಪು, ನೀರು ಬೆರೆಸಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಪಕೋಡ ಹದಕ್ಕೆ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಮಿಶ್ರಣದಿಂದ ಚೂರು ಚೂರೇ ಎಣ್ಣೆಗೆ ಸೇರಿಸಿ ಪಕೋಡ ಕರಿದಿಡಿ. ಸಾಸ್‌ ಜೊತೆ ಬಿಸಿ ಬಿಸಿ ಪಕೋಡ ಸವಿದರೆ ಚಂದ!

ಝುಕೀನಿ ಕಾರ್ನ್ಕಟ್ಲೆಟ್

ಸಾಮಗ್ರಿ : 2 ಕಪ್‌ ತುರಿದ ಝುಕೀನೀ (ಆಸ್ಟ್ರೇಲಿಯನ್‌ ಸೌತೇಕಾಯಿ), 1 ಕಪ್‌ ಬೆಂದ ಸ್ವೀಟ್‌ ಕಾರ್ನ್‌ (ತರಿ ತರಿಯಾಗಿ ರುಬ್ಬಿಡಿ), 2 ಆಲೂ ಬೇಯಿಸಿ ಮಸೆದದ್ದು, ಅರ್ಧ ಕಪ್‌ ಅಕ್ಕಿಹಿಟ್ಟು, 2 ಚಮಚ ಕಾರ್ನ್‌ ಫ್ಲೋರ್‌, 2 ಈರುಳ್ಳಿ, 10-12 ಎಸಳು ಬೆಳ್ಳುಳ್ಳಿ (ಸಣ್ಣಗೆ ಹೆಚ್ಚಿದ್ದು), ಅರ್ಧ ಕಪ್‌ ಬೆಂದ ಹಸಿ ಬಟಾಣಿ ಕಾಳು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ ಮಸಾಲ, ಹುರಿದು ಪುಡಿ ಮಾಡಿದ ಜೀರಿಗೆ, ಚಿಲೀ ಫ್ಲೇಕ್ಸ್, ನಿಂಬೆರಸ, ಹೆಚ್ಚಿದ ಕೊ.ಸೊಪ್ಪು, ಪುದೀನಾ.

ಕೋಟಿಂಗ್ಸಾಮಗ್ರಿ : ಅರ್ಧ ಕಪ್‌ ಮೈದಾ, 2 ಚಮಚ ಕಾರ್ನ್‌ ಫ್ಲೋರ್‌, 2 ಕ್ಯೂಬ್‌ ಚೀಸ್‌, ರುಚಿಗೆ ಉಪ್ಪು, ಖಾರ, ಅರ್ಧ ಕಪ್ ಬ್ರೆಡ್‌ ಕ್ರಂಬ್ಸ್, ಕರಿಯಲು ರೀಫೈಂಡ್‌ ಎಣ್ಣೆ.

ವಿಧಾನ : ತುರಿದ ಝುಕೀನಿಗೆ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ ಪಕೋಡ ಮಿಶ್ರಣದ ಹದಕ್ಕೆ ಕಲಸಿಡಿ. ಇದರಂದ ಕಟ್‌ ಲೆಟ್ಸ್ ತಟ್ಟಿಕೊಳ್ಳಿ. ಮಧ್ಯದಲ್ಲಿ ರಂಧ್ರ ಮಾಡಿ ತುಸು ಚೀಸ್‌ ತುಂಬಿ, ಕ್ಲೋಸ್‌ ಮಾಡಿ. ಮೈದಾ ಕಾರ್ನ್‌ ಫ್ಲೋರ್‌ ಗೆ ತುಸು ನೀರು ಬೆರೆಸಿ ಬೋಂಡ ಹದಕ್ಕೆ ಕಲಸಿಡಿ. ಇದಕ್ಕೆ ಉಪ್ಪು, ಪುಡಿಮೆಣಸು ಸೇರಿಸಿ. ಪ್ರತಿ ಕಟ್‌ ಲೆಟ್‌ ನ್ನು ಮೈದಾ ಮಿಶ್ರಣದಲ್ಲಿ ಅದ್ದಿಕೊಂಡು, ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಚಿತ್ರದಲ್ಲಿರುವಂತೆ ಸಲಾಡ್‌ ಜೊತೆಗೆ ಅಲಂಕರಿಸಿ ಸಾಸ್‌, ಚಟ್ನಿ ಜೊತೆ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ