ಕಥೆ –  ಶ್ಯಾಮಲಾ ದಾಮ್ಲೆ

ನನ್ನ ಸೌಂದರ್ಯವೇ ನನ್ನ ಪತಿಯನ್ನು ನನ್ನಿಂದ ದೂರ ಮಾಡುತ್ತಿದೆ. ಕಡೆಗೆ ಒಂದು ದಿನ ನಾನು ಈ ಸಮಸ್ಯೆಯ ಪರಿಹಾರಕ್ಕೆ ಹೊಸತೊಂದು ದಾರಿಯನ್ನು ಕಂಡುಹಿಡಿದೆ. ನನ್ನ ಸುಂದರ ರೂಪ ಎಲ್ಲರ ಕಣ್ಣು ಕುಕ್ಕುವಂತಿತ್ತು.  ತಮ್ಮ ರೂಪವತಿಯಾದ ಮಗಳನ್ನು ಸಮಾಜದಲ್ಲಿರುವ ತೋಳಗಳಿಂದ ರಕ್ಷಿಸಲು ನನ್ನ ತಾಯಿ ತಂದೆಯರು ಸದಾ ಕಣ್ಗಾವಲಾಗಿದ್ದರು. ಅವರ ಕಠಿಣ ವಿಚರಣಾ ಕ್ರಮದಿಂದಾಗಿ ತೋಳಗಳೇಕೆ ಕುರಿಮರಿಗಳೂ ಸಹ ನನ್ನ ಸಮೀಪದಲ್ಲಿ ಸುಳಿಯಲು ಸಾಧ್ಯವಾಗುತ್ತಿರಲಿಲ್ಲ.

“ಇಡೀ ದಿನ ಕನ್ನಡಿ ಮುಂದೆ ನಿಂತಿರಬೇಡ… ಕಾಲೇಜಿಗೆ ಹೋಗುವುದಕ್ಕೆ ಇಷ್ಟು ಅಲಂಕಾರ ಏಕೆ….? ಓದುವುದರ ಕಡೆ ಗಮನ ಕೊಡು…. ಗಂಡು ಹುಡುಗರ ಜೊತೆ ಮಾತಿಗೆ ನಿಂತರೆ ಕೆಟ್ಟ ಹೆಸರು ತರುತ್ತೀಯಾ…” ನಾನು ಕಾಲೇಜಿಗೆ ಹೊರಡುವಾಗ ಇದು ನನ್ನ ತಾಯಿತಂದೆಯರ ನಿತ್ಯ ಭಾಷಣವಾಗಿರುತ್ತಿತ್ತು.

ನನ್ನ ಅಕ್ಕ ನೋಡಲು ಚೆನ್ನಾಗಿದ್ದಾಳೆ. ಆದರೆ ನನ್ನಷ್ಟು ಸುಂದರಿಯಲ್ಲ. ಒಂದೆರಡು ಸಲ ಏನಾಯಿತೆಂದರೆ ಅವಳನ್ನು ನೋಡಲು ಬಂದಿದ್ದ ಹುಡುಗರು ನನ್ನನ್ನು ಇಷ್ಟಪಟ್ಟರು. ಅದಾದ ಮೇಲೆ ಅವಳ ದೃಷ್ಟಿಯಲ್ಲಿ ನಾನು ಖಳನಾಯಕಿಯಾದೆ. ಅವಳಿಗೆ ತಂಗಿಯ ಮೇಲಿನ ವಿಶ್ವಾಸ ಯಾವ ಪರಿಯಾಗಿ ಮಾಸಿಹೋಯಿತೆಂದರೆ ರಾಜೇಶ್‌ ಭಾವನೊಂದಿಗೆ ನಾನು ಎಂದಾದರೂ ಮಾತನಾಡುತ್ತಿದ್ದೆ ಎಂದರೆ, ಅವಳು ತನ್ನ ಕೆಲಸವನ್ನೆಲ್ಲ ಬಿಟ್ಟು ನಮ್ಮ ನಡುವೆ ಬಂದು ಕುಳಿತುಬಿಡುತ್ತಿದ್ದಳು. ನಾನು ಖಂಡಿತ ತಪ್ಪು ನಡವಳಿಕೆಯವಳಲ್ಲ. ಆದರೆ ಪಾಪ! ಅವಳ ನಂಬಿಕೆಯ ಬುಡ ಅಲುಗಾಡಿಬಿಟ್ಟಿದೆ.

ನನ್ನನ್ನು ಉದ್ದೇಶಪೂರ್ವಕವಾಗಿ ಹುಡುಗಿಯರ ಕಾಲೇಜಿಗೇ ಸೇರಿಸಲಾಗಿತ್ತು. ಆದರೆ ಅಲ್ಲಿಯೂ ನನಗೆ ತೊಂದರೆ ತಪ್ಪಲಿಲ್ಲ. ಅಲ್ಲಿ ನನ್ನ ಗೆಳತಿಯರ ಅಸೂಯೆಯನ್ನು ಎದುರಿಸಬೇಕಾಯಿತು. ಪ್ರಾರಂಭದಲ್ಲಿ ನನ್ನ ಗೆಳತಿಯರ ಅನುಚಿತ ವ್ಯವಹಾರದಿಂದ ಕೋಪಗೊಳ್ಳುತ್ತಿದ್ದೆ. ಆದರೆ ಆಮೇಲೆ ಅವರ ಬಗ್ಗೆ ಸಹಾನುಭೂತಿಯಾಗತೊಡಗಿತು. ಪಾಪ, ಅವರು ಬಹಳ ಬೆಲೆಬಾಳುವ ಡ್ರೆಸ್ ಧರಿಸಿದ್ದರೂ ನಾನು ಸಾಧಾರಣ ಉಡುಪಿನಲ್ಲಿ ಕಾಣುವಷ್ಟು ಸುಂದರ ಮತ್ತು ಆಕರ್ಷಕವಾಗಿ ಕಾಣುತ್ತಿರಲಿಲ್ಲ. ನಾನು ಅವರ ಜೊತೆಯಲ್ಲಿದ್ದರೆ, ಅವರ ಬಾಯ್‌ ಫ್ರೆಂಡ್ಸ್ ಅವರತ್ತ ಕಡಿಮೆ ಗಮನ ನೀಡುತ್ತಿದ್ದರು. ನನ್ನನ್ನು ನೋಡಿ ಜೊಲ್ಲು ಸುರಿಸುತ್ತಿದ್ದರು.

ನನಗೆ ಯಾರೂ ಬಾಯ್‌ ಫ್ರೆಂಡ್‌ ಆಗಲು ಸಾಧ್ಯವಿರಲಿಲ್ಲ. ನನ್ನ  ತಾಯಿ ತಂದೆಯರು ನನ್ನ 2-3 ಗೆಳತಿಯರನ್ನು ಪತ್ತೇದಾರಿ ಕೆಲಸಕ್ಕೆ ಇರಿಸಿದ್ದರು. ಯಾವುದೇ ಹುಡುಗ ನನ್ನನ್ನು ಮಾತನಾಡಿಸಿದರೆ ಕೂಡಲೇ ಅವರಿಗೆ ಸುದ್ದಿ ಮುಟ್ಟುತ್ತಿತ್ತು. ಹೀಗಾಗಿ ನಾನು ನನ್ನೆಲ್ಲ ಬೆಡಗು, ಬಿನ್ನಾಣ, ರೊಮ್ಯಾಂಟಿಕ್‌ ಚೆಲ್ಲಾಟಗಳನ್ನೆಲ್ಲ ನನ್ನ ಭಾವೀ ಜೀವನ ಸಂಗಾತಿಗಾಗಿ ಕಾದಿರಿಸಿದ್ದೆ.

ಸುಂದರ  ಮತ್ತು ವಿದ್ಯಾಂತನಾದ ಸತೀಶನಿಗೆ ಅವನ ತಾಯಿ ಒಳ್ಳೆಯ ವರದಕ್ಷಿಣೆ ತರುವ ಹುಡುಗಿಗಿಂತ ಬೆಳದಿಂಗಳ ಬಾಲೆಯಂತಹ ಸೊಸೆಯನ್ನು ತರಬೇಕೆಂದು ಮನಸ್ಸು ಮಾಡಿದ್ದರು. ನನ್ನನ್ನು ನೋಡಿದ ಕೂಡಲೇ ಮರುಮಾತಿಲ್ಲದೆ ಮದುವೆಯ ಸಿದ್ಧತೆ ನಡೆಸಿದರು.

ಊಟಿಯಲ್ಲಿ ನಾವು ಕಳೆದ 1 ವಾರದ ಹನಿಮೂನ್‌ ಟ್ರಿಪ್‌ನನ್ನ ಜೀವನದ ಅತ್ಯಂತ ಸಂತೋಷದ ಸಮಯವೆಂದು ಭಾವಿಸಿದೆ. ನನ್ನ ಸೌಂದರ್ಯ ಸತೀಶನ ಮೈ ಮನಸ್ಸುಗಳನ್ನು ಮುಗ್ಧಗೊಳಿಸಿಬಿಟ್ಟಿತ್ತು. ನನ್ನನ್ನು ತಮ್ಮ ಬಲಿಷ್ಠ ಬಾಹುಗಳಲ್ಲಿ ಬಳಸಿ ಹಿಡಿದು ನನ್ನ ರೂಪವನ್ನು ವರ್ಣಿಸತೊಡಗಿದಾಗ ಒಬ್ಬ ಕವಿಯೇ ಆಗಿಬಿಡುತ್ತಿದ್ದರು…….

“ಶೀಲಾ, ನೀನು ಸ್ವರ್ಗದಿಂದ ಭೂಮಿಗೆ ಇಳಿದು ಬಂದ ಅಪ್ಸರೆ….. ಬಾಲಿವುಡ್‌ ನ ಬೆಳ್ಳಿತೆರೆಯ ಪ್ರಸಿದ್ಧ ಹೀರೋಯಿನ್‌ ಗಿಂತ ಹೆಚ್ಚು ಸುಂದರಿಯಾಗಿದ್ದೀ….. ನನ್ನ ಹೃದಯದ ರಾಣಿ ನೀನು…. ಜನರು ನಮ್ಮ ಜೋಡಿಯನ್ನು ಮೆಚ್ಚುಗೆಯ ದೃಷ್ಟಿಯಿಂದ  ನೋಡಿದಾಗ ನನಗೆ ಕಚಗುಳಿ ಇಟ್ಟಂತಾಗುತ್ತದೆ,” ಅವರ ಹೊಗಳಿಕೆಯ ಮಾತುಗಳು ನನಗೆ ಮುದ ನೀಡುತ್ತಿದ್ದವು.

ಹನಿಮೂನ್‌ ನಿಂದ ಹಿಂದಿರುಗಿದ ಮೇಲೆ ನನ್ನ ಅತ್ತೆ ಮಾವ ಮತ್ತು ನಾದಿನಿ ನನ್ನನ್ನು ಬಲು ಮುಚ್ಚಟೆಯಿಂದ ನೋಡಿಕೊಂಡರು. ನೆಂಟರು ಮತ್ತು ನೆರೆಹೊರೆಯವರು ಮನೆಗೆ ಬಂದಾಗ ನನ್ನ ರೂಪವನ್ನು ಹೊಗಳಿದರೆ ನನ್ನ ಅತ್ತೆ ಮಾಂದಿರು ಗರ್ವದಿಂದ ಬೀಗುತ್ತಿದ್ದರು.

ಮನೆಗೆ ಬಂದರು ನನ್ನ ಸೌಂದರ್ಯವನ್ನು ಮನಸಾರೆ ಹೊಗಳುವುದು ತಿಂಗಳು ಕಳೆಯುವವರೆಗೂ ನನ್ನ ಅತ್ತೆಮನೆಯವರಿಗೆ ಇಷ್ಟವಾಗುತ್ತಿತ್ತು. ಆದರೆ ನಂತರ ಅದರಿಂದ ಅವರಿಗೆ ಇರುಸುಮುರುಸಾಗತೊಡಗಿತು.

“ಒಳ್ಳೆ ರೂಪ ಇದ್ದರೆ ಸಾಲದು. ಒಳ್ಳೆ ಗುಣ ಇರಬೇಕು. ಇಲ್ಲದಿದ್ದರೆ ಅತ್ತೆಮನೆಯಲ್ಲಿ ಹತ್ತು ಮಾತು ಕೇಳಬೇಕಾಗುತ್ತದೆ. ಕೆಲಸ ಮಾಡುವಾಗ ಬೇಗ ಬೇಗ ಕೈ ಆಡಿಸಬೇಕು,” ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅತ್ತೆ ಹೇಳಿದ ಈ ಮಾತು ಕೇಳಿ, ಇನ್ನು ಈ ಮನೆಯಲ್ಲಿ ಆರಾಮವಾಗಿರುವ ಕಾಲ ಮುಗಿಯಿತು ಎಂದು ಅರ್ಥ ಮಾಡಿಕೊಂಡೆ.

ಮನೆ ಕೆಲಸ ಮಾಡುವಲ್ಲಿ ನಾನು ನನ್ನ ನಾದಿನಿಯಷ್ಟೇ ಚುರುಕಾಗಿದ್ದೆ. ಆದರೆ ಅತ್ತೆಗೆ ನನ್ನ ಕೆಲಸದಲ್ಲಿ ಮಾತ್ರ ತಪ್ಪು ಕಾಣುತ್ತಿತ್ತು. ನನ್ನನ್ನು ಟೀಕೆ ಮಾಡುವುದೇ ಅವರ ದಿನನಿತ್ಯದ ರಾಗವಾಯಿತು.

“ನೀವು ಹೇಳುವ ಹಾಗೆ ಕೆಲಸ ಕಲಿಯಲು ನಾನು ಸಿದ್ಧಳಿದ್ದೇನೆ. ಆದರೆ ನೀವು ಬಯ್ಯುವುದು ಕಡಿಮೆ ಮಾಡಿ ನನಗೆ ಕೆಲಸ ಕಲಿಸಿಕೊಡಿ,” ಒಂದು ದಿನ ನಾನು ಸ್ನೇಹ ಪ್ರೀತಿಯಿಂದ ಈ ಮಾತನ್ನು ಅತ್ತೆಗೆ ಹೇಳಿದೆ. ಅವರು ಈ ಮಾತನ್ನೇ ಹಿಡಿದು ಮನೆಯಲ್ಲಿ ದೊಡ್ಡ ಗಲಾಟೆ ಎಬ್ಬಿಸಿಬಿಟ್ಟರು.

“ಕೆಲಸ ಕಲಿಯಬೇಕು ಅನ್ನುವವರು ನಾಲಿಗೆಯನ್ನು ಹಿಡಿದಿಟ್ಟುಕೊಂಡು ಕಣ್ಣು ಕಿವಿಗಳನ್ನು ತೆರೆದಿಡಬೇಕು. ನಿನಗೆ ಸುಮ್ಮನೆ ಬಯ್ಯುವುದಕ್ಕೆ ನನಗೇನು ಹುಚ್ಚೇ? ಬರುವಾಗ ಕೆಲಸವನ್ನೆಲ್ಲ ಕಲಿತುಕೊಂಡು ಬಂದಿದ್ದರೆ ನಾನೇನೂ ಹೇಳಬೇಕಾಗಿಯೇ ಇರಲಿಲ್ಲ. ಮನೆಯಲ್ಲಿ ಚೆನ್ನಾಗಿ ಇರಬೇಕು ಅಂದರೆ ಕೆಲಸವನ್ನು ಚೆನ್ನಾಗಿ ಮಾಡುವುದನ್ನು ಕಲಿತುಕೊ,” ನನಗೆ ಇಷ್ಟು ಹೇಳಿದ ಮೇಲೆ ಮುಖ ಊದಿಸಿಕೊಂಡು ಕುಳಿತಿದ್ದ ಅತ್ತೆ ಮನೆಯವರಿಗೆಲ್ಲ ವಿಷಯ ತಿಳಿಯುವಂತೆ ಮಾಡಿದರು.

ಆ ರಾತ್ರಿ ಸತೀಶ್‌ ಸಹ ನನ್ನ ಮನಸ್ಸಿಗೆ ಬರೆ ಇಡಲು ಪ್ರಾರಂಭಿಸಿದರು, “ಶೀಲಾ, ಇಡೀ ದಿನ ಅಲಂಕಾರ ಮಾಡಿಕೊಂಡು ಓಡಾಡಿದರೆ ಆಗುವುದಿಲ್ಲ. ಸೊಸೆ ಬಂದ ಮೇಲೆ ಅಮ್ಮನಿಗೆ ಕೊಂಚ ಆರಾಮ ಸಿಗಬೇಕು….. ನೀನು ಅವರ ಜೊತೆ ವಾದ ಮಾಡುವುದರ ಬದಲು ಸರಿಯಾಗಿ ಕೆಲಸ ಮಾಡಲು ಕಲಿತುಕೊ. ನಿನ್ನಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಕೆಡಬಾರದು,” ಭಾಷಣ ಮಾಡುತ್ತಿದ್ದ ಸತೀಶ್‌ ನನ್ನ ಸೌಂದರ್ಯಾರಾಧಕ ಪ್ರಿಯಕರನಾಗಿ ಕಾಣದೆ, ಕುಂದು ಹುಡುಕು ವಿಮರ್ಶಕನಂತೆ ತೋರಿದರು.

ಇದ್ದಕ್ಕಿದ್ದಂತೆ ಬದಲಾದ ಸತೀಶನ ನಡವಳಿಕೆಯಿಂದ ನನ್ನ ಮನಸ್ಸಿಗೆ ನೋವಾಗಿ ಕಣ್ಣೀರು ಹರಿಯತೊಡಗಿತು. ಆ ಕೂಡಲೇ ಅವರು ನನ್ನನ್ನು ಎದೆಗಾನಿಸಿಕೊಂಡು ತಲೆ ನೇವರಿಸಿದರು. ಅವರ ಸ್ಪರ್ಶ ಯಾವಾಗಲೂ ನನ್ನನ್ನು ಪುಳಕಿತಗೊಳಿಸುತ್ತಿತ್ತು. ಆದರೆ ಈ ಬಾರಿ ಹಾಗಾಗಲಿಲ್ಲ. ಅವರ ಕಣ್ಣುಗಳಲ್ಲಿ ಒಂದು ಬಗೆಯ ಸಂತೋಷದ ಭಾವವನ್ನು ಗುರುತಿಸಿದೆ. ನನ್ನ ಬಗೆಗಿನ ಅವರ ದೂಷಣೆಯ ಭಾಷಣವನ್ನು ಕೇಳಿದ ಮೇಲೆ ನಾನು ಕಣ್ಣೀರು ಸುರಿಸಲು ಪ್ರಾರಂಭಿಸಿದಾಗ, ಅವರ ಕಣ್ಣುಗಳಲ್ಲಿ ಈ ಭಾವನೆ ವ್ಯಕ್ತವಾಗಿತ್ತು.

ನನಗೆ ಬುದ್ಧಿ ತಿಳಿದಾಗಿನಿಂದ ಇಂತಹ ಭಾವನೆಗಳನ್ನು ಅನೇಕರ ಕಣ್ಣುಗಳಲ್ಲಿ ನೋಡುತ್ತಾ ಬಂದಿದ್ದೇನೆ. ತಾಯಿತಂದೆಯರಿಂದ ಬೈಗುಳ ತಿಂದು ನಾನು ಅತ್ತಾಗ ಅವರ ಕಣ್ಣುಗಳಲ್ಲಿ ಇಂತಹ ಸಂತೋಷ ಕಾಣಿಸುತ್ತಿತ್ತು. ನನ್ನ ಕೆಲಸವನ್ನು ಕೆಡಿಸಿ ನನ್ನನ್ನು ತಪ್ಪಿತಸ್ಥಳ ಸ್ಥಾನದಲ್ಲಿ ನಿಲ್ಲಿಸಿದಾಗ ನನ್ನ ಅಕ್ಕನ ಕಣ್ಣುಗಳಲ್ಲಿ ಇಂತಹ ಭಾವನೆ ಕಂಡುಬರುತ್ತಿತ್ತು. ನನ್ನ ಕಾಲೇಜಿನ ಗೆಳತಿಯರು ತಮ್ಮ ದುರ್ವರ್ತನೆಯಿಂದ ನನ್ನನ್ನು ಒಂಟಿಯಾಗಿಸಿ, ಬೇಸರಿಸಿಕೊಳ್ಳುವಂತೆ ಮಾಡಿದ ನಂತರ ಇದೇ ರೀತಿಯ ಸಂತೋಷದ ಭಾವನೆಯಿಂದ ಮುಗುಳ್ನಗುತ್ತಿದ್ದರು.

“ನನ್ನ ಪತಿಯ ಮನಸ್ಸಿನಲ್ಲಿಯೂ ನನ್ನ ಸೌಂದರ್ಯ ಅಸೂಯೆಯ ಭಾವನೆ ಮೊಳೆಯುಂತೆ ಮಾಡಿದೆ,” ಎಂಬ ವಿಚಾರ ನನ್ನಲ್ಲಿ ಮೂಡಿದಾಗ ನಾನು ಬಿಕ್ಕಿಬಿಕ್ಕಿ ಅತ್ತುಬಿಟ್ಟೆ.  ನನ್ನ ಸುಂದರ ರೂಪದಿಂದಾಗಿ ಅನರು ಕೀಳರಿಮೆಗೆ ತುತ್ತಾಗಿದ್ದಾರೆ ಎಂಬ ಯೋಚನೆಯು ನನ್ನನ್ನು ಘಾಸಿಗೊಳಿಸಿತು. ಕೆಲವು ದಿನಗಳಿಂದ ಸತೀಶ್‌ ನನ್ನೊಡನೆ ವರ್ತಿಸುವ ರೀತಿ ಬದಲಾಗಿದೆ ಎಂದು ಗಮನಕ್ಕೆ ಬಂದಿತು. ನಿಧಾನವಾಗಿ ಯೋಚಿಸಿದಾಗ, ಅದು ಏಕೆ? ಹೇಗೆ ಎಂಬುದು ಹೊಳೆಯಿತು. ಅವರ ಸ್ನೇಹಿತರು ಯಾರಾದರೂ ನನ್ನನ್ನು ಹೊಗಳಿದರೆ ಅವರು ಬಿಗುವಿನಿಂದ ವರ್ತಿಸುತ್ತಿದ್ದುದನ್ನು ನಾನು ನೋಡಿದ್ದೆ.

ನನ್ನ ಹಿಂದಿನ ಅನುಭವಗಳ ಆಧಾರದಿಂದ ಮುಂದೇನಾಗುವುದೆಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ನಿಧಾನವಾಗಿ ದೋಷಾರೋಪಣೆ ಹೆಚ್ಚುವುದು ಮತ್ತು ನನ್ನನ್ನು ಕಡೆಗಣಿಸಲು ಪ್ರಾರಂಭಿಸುವರು. ಮುಂದೆ ನಮ್ಮ ಮಧುರ ಸಂಬಂಧ ಹಾಳಾಗುವುದೆಂದು ಯೋಚಿಸಿ ನನಗೆ ತಳಮಳವಾಯಿತು. ರಾತ್ರಿ ಇಡೀ ನಿದ್ರೆ ಬರಲಿಲ್ಲ. ಮೌನವಾಗಿ ಕಣ್ಣೀರು ಸುರಿಸಿದೆ. ಅತ್ತೆಯ ಕಟು ಮಾತುಗಳನ್ನು ನಾನು ಸಹಿಸಬಲ್ಲವಳಾಗಿದ್ದೆನು. ಆದರೆ ಸತೀಶ್‌ ರ ಪ್ರೀತಿಯಲ್ಲಿ ಗುಲಗಂಜಿಯಷ್ಟು ಕೊರತೆ ಕಾಣುವುದು ಸಹ ನನಗೆ ಒಪ್ಪಿಗೆಯಾಗಲಿಲ್ಲ.

`ಅವರ ಮನದಲ್ಲಿ ಮೊಳೆಯುತ್ತಿರುವ ಅಸೂಯೆಯ ಕಹಿಯಿಂದ ನನ್ನ ದಾಂಪತ್ಯ ಜೀವನ ಹಾಳಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ನಾನು ಏನಾದರೂ ಮಾಡಲೇಬೇಕು,’ ಎಂದು ನಾನು ನಿರ್ಧರಿಸಿದೆ.

ನಾವು ಊಟಿಗೆ ಹೋಗಿದ್ದಾಗ ಅಲ್ಲಿ ಅನೇಕರು ನನ್ನ ರೂಪವನ್ನು ಹೊಗಳಿದ್ದರು. ಆಗ ಸತೀಶ್‌ ಕೋಪಗೊಂಡಿದ್ದೇ ಇರಲಿಲ್ಲ. ಬದಲಾಗಿ ಅಂತಹ ಹೊಗಳಿಕೆಯನ್ನು ಕೇಳಿ ಅವರ ಎದೆ ಉಬ್ಬುತ್ತಿತ್ತು. ಇಲ್ಲಿ ಅವರ ಬಂಧುಮಿತ್ರರು, ಪರಿಚಿತರು ಯಾರಾದರೂ ನನ್ನನ್ನು ಹೊಗಳಿದರೆ ಅವರು ಅಸೂಯೆಗೆ ಬಲಿಯಾಗುತ್ತಾರೆ. ಅವರ ಪ್ರತಿಕ್ರಿಯೆಯಲ್ಲಿ ಇಂತಹ ಅಂತರವೇಕೆ ಹುಟ್ಟಿಕೊಂಡಿದೆ? ಈ ಪ್ರಶ್ನೆಗೆ ನಾನೇ ಉತ್ತರನ್ನು ಹುಡುಕಿದೆ. ಊಟಿಯಲ್ಲಿ ನನ್ನನ್ನು ಹೊಗಳುತ್ತಿದ್ದ ಜನರೆಲ್ಲ ನಮಗೆ ಅಪರಿಚಿತರು. ಅವರು ನಮ್ಮ ಜೀವನದ ಭಾಗವಾಗಿರಲಿಲ್ಲ. ಅಲ್ಲಿಯ ಜನರ ಹೊಗಳಿಕೆಯಿಂದ ಅವರಿಗೆ ತಮ್ಮನ್ನು ಅಲಕ್ಷ್ಯ ಮಾಡಿದಂತೆ ಭಾಸವಾಗಿರಲಿಲ್ಲ. ನಮ್ಮಿಬ್ಬರ ವ್ಯಕ್ತಿತ್ವವನ್ನು ಹೋಲಿಸಿದಂತೆ ಕಂಡಿರಲಿಲ್ಲ. ಈಗ ನನ್ನ ಹೊಗಳಿಕೆಯು ಅವರಲ್ಲಿ ನಕಾರಾತ್ಮಕ ಭಾವನೆಯನ್ನು ಹುಟ್ಟಿಸುತ್ತಿದೆ. ಇದರಿಂದ ನಮ್ಮ ಮಧುರ ದಾಂಪತ್ಯ ಜೀವನ ಅಲುಗಾಡುತ್ತಿದೆ. ಇಲ್ಲ, ನನ್ನ ಬಾಳಿನ ಪ್ರೀತಿ ಮತ್ತು ರೊಮ್ಯಾನ್ಸ್ ನ ಬಿಸುಪನ್ನು ನಾನೆಂದೂ ಕಳೆದುಕೊಳ್ಳಲಾರೆ.

ಮಾರನೆಯ ದಿನ ಸತೀಶ್‌ ರ ಆತ್ಮೀಯ ಗೆಳೆಯರೊಬ್ಬರು ತಮ್ಮ ವಿವಾಹ ವಾರ್ಷಿಕೋತ್ಸವದ ಸಲುವಾಗಿ ನಮ್ಮನ್ನು ಡಿನ್ನರ್‌ ಗೆ ಆಹ್ವಾನಿಸಿದ್ದರು. ಪಾರ್ಟಿಗೆ ಹೋಗಲು ನಾನು ಬಹಳ ಶ್ರಮಹಿಸಿ ಅಲಂಕರಿಸಿಕೊಂಡೆ. ನಾನು ಪೂರ್ತಿ ಸಿದ್ಧಳಾಗಿ ಸತೀಶರ ಮುಂದೆ ಬಂದು ನಿಂತಾಗ ಅವರು ಕ್ಲೀನ್‌ ಬೋಲ್ಡ್ ಆಗಿಬಿಟ್ಟರು. ಪಾರ್ಟಿಯಲ್ಲಿ ಪರಸ್ಪರ ಪರಿಚಿತರಿದ್ದ ಗೆಳೆಯರೇ ಸೇರಿದ್ದರು. ಹೀಗಾಗಿ ಮಾತು ನಗು ಜೋರಾಗಿ ನಡೆದಿತ್ತು.

“ಓಹೋ! ಶೀಲಾ ಬರುತ್ತಿದ್ದಂತೆ ಹಾಲ್ ‌ನಲ್ಲಿ ಬೆಳಕು ಎಷ್ಟು ಹೆಚ್ಚಾಯಿತು ಅಲ್ಲವೇ?” ಇವರ ಗೆಳಯ ನವೀನ್‌ ನ ಹಾಸ್ಯಕ್ಕೆ ಎಲ್ಲರೂ ಜೋರಾಗಿ ನಕ್ಕರು.

“ಸತೀಶನಿಗೆ ಈಗ ಕರೆಂಟ್‌ ಬಿಲ್ ‌ಉಳಿತಾಯ ಆಗುತ್ತಿದೆ. ಶೀಲಾ ಜೊತೆಗಿರುವುದರಿಂದ ಅವನಿಗೆ ರೂಮಿನಲ್ಲಿ ಲೈಟ್‌ ಆನ್ ಮಾಡುವುದೇ ಅಗತ್ಯವಿಲ್ಲ,” ರಾಜೀವನ ಈ ತಮಾಷೆಗೆ ಮತ್ತೊಮ್ಮೆ ಎಲ್ಲರೂ ಗಹಗಹಿಸಿ ನಕ್ಕರು.

“ಬೆಳಕು ಹೆಚ್ಚಾಗಿ ನಮ್ಮ ಸತೀಶನಿಗೆ ನಿದ್ರೆ ಮಾಡಲು ಕಷ್ಟ ಆಗುತ್ತಿರಬಹುದು.”

“ಏಯ್‌, ರಾತ್ರಿ ಅವನು ನಿದ್ರೆ ಎಲ್ಲಿ ಮಾಡುತ್ತಾನೆ?” ಈ ಸಲದ ನಗುವಿನ ಅಬ್ಬರ ಅಕ್ಕಪಕ್ಕದ ಮನೆಗಳಿಗೂ ತಲುಪಿರಬಹುದು.

ಆದರೆ ಸತೀಶ್‌ ಬಲವಂತವಾಗಿ ನಗುತ್ತಿರುವುದು ನನಗೆ ಗೊತ್ತಾಯಿತು. ನಾನು ಪಾರ್ಟಿಯ ಕೇಂದ್ರಬಿಂದುವಾಗಿರುವುದು ಅವರಿಗೆ ಸ್ವಲ್ಪ ಇಷ್ಟವಾಗಲಿಲ್ಲ. ತಮ್ಮ ಸ್ನೇಹಿತರ ಹೊಗಳಿಕೆಯ ಮಾತುಗಳನ್ನು ಇವರು ಸಹಿಸಿಕೊಳ್ಳಲಾರದೆ ಇರುವುದು ನನಗೆ ಸ್ಪಷ್ಟವಾಗಿ ತಿಳಿಯಿತು.

ನಾನು ಅವರ ಪಕ್ಕಕ್ಕೆ ಸರಿದು, ಅವರನ್ನೇ ದಿಟ್ಟಿಸಿ ನೋಡಿದೆ. ಮೆಲ್ಲನೆ ಅವರಿಗೊಂದು ಹೂಮುತ್ತನ್ನಿತ್ತೆ. ನಂತರ ಅವರ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ ಮುಗುಳ್ನಗೆ ಬೀರಿದೆ.

ಹಾಲ್ ತುಂಬ ಜನರಿದ್ದರು. ಆದರೆ ನಾನು ಕೋಣೆಯಲ್ಲಿ ನಾವಿಬ್ಬರೇ ಇರುವೆ ಎಂಬಂತೆ ಅತ್ತಿತ್ತ ಗಮನಿಸದೆ ಸತೀಶ್‌ ರನ್ನೇ ದೃಷ್ಟಿಯಾಗಿರಿಸಿಕೊಂಡೆ. ಅವರ ಪೂರ್ತಿ ಗಮನವನ್ನು ನನ್ನತ್ತ ಸೆಳೆಯುತ್ತಾ ಅವರ ಗೆಳೆಯರನ್ನೆಲ್ಲ ಅಪರಿಚಿತರ ಸಾಲಿಗೆ ಸೇರಿಸಿದೆ. ಸತೀಶ್‌ ಅತ್ತಿತ್ತ ನೋಡುತ್ತಾ ಮತ್ತೆ ಮತ್ತೆ ನನ್ನತ್ತ ನೋಡಿದರು. ನನ್ನತ್ತ ನೋಡುವಾಗೆಲ್ಲ ಪ್ರೀತಿ ತುಂಬಿದ ನೋಟ ಹರಿಸುತ್ತಿದ್ದರು. ಇದ್ದಕ್ಕಿದ್ದಂತೆ ಅವರು ಸಂತೋಷದಿಂದ ಮುಗುಳ್ನಕ್ಕಾಗ ನನ್ನ ಮನ ಅರಳಿತು. ನಾನು ಮೃದುವಾದ ಧ್ವನಿಯಲ್ಲಿ `ಐ ಲವ್ ಯೂ’ ಎಂದು ಹೇಳಿದೆ.

ನನ್ನ ಬಾಳ ಸಂಗಾತಿಯನ್ನು ಅಸೂಯೆಯ ಭಾವನೆಯಿಂದ ಹೊರತರುವ ವಿಧಾನವನ್ನು ನಾನು ಕಂಡುಹಿಡಿದೆ. ಆ ನಂತರ  ಪಾರ್ಟಿಯಲ್ಲಿ ಯಾರಾದರೂ ನನ್ನನ್ನು ಕೊಂಚ ಹೊಗಳಿದರೆ ಕೂಡಲೇ ನಾನು ಮುಗುಳ್ನಗುತ್ತಾ ಸತೀಶ್‌ ರ ಕಡೆ ನೋಡುತ್ತಿದ್ದೆ, “ಇಲ್ಲಿ ನನ್ನದಲ್ಲ, ನಿಮ್ಮ ಪತ್ನಿಯ ಹೊಗಳಿಕೆ ನಡೆಯುತ್ತಿದೆ. ನಿಮ್ಮ ಸ್ನೇಹಿತರನ್ನು ನೀವೇ ವಿಚಾರಿಸಿಕೊಳ್ಳಿ. ಅವರ ಬಾಯಿಂದ ಹೊಗಳಿಕೆ ಕೇಳಲು ನನಗೆ ಯಾವ ಆಸಕ್ತಿಯೂ ಇಲ್ಲ,” ಎಂಬ ಭಾವ ನನ್ನ ಮುಖದಲ್ಲಿ ಹೊಮ್ಮತ್ತಿತ್ತು.

ನನ್ನ ದಾಂಪತ್ಯ ಜೀವನದ ರೊಮ್ಯಾನ್ಸ್ ನ್ನು ನವನವೀನವಾಗಿರಿಸಿಕೊಳ್ಳುವ ಉಪಾಯವನ್ನು ನಾನು ಕಂಡುಹಿಡಿದೆ. ನನ್ನ ಸೌಂದರ್ಯದ ಬಗ್ಗೆ ಅವರ ಮನಸ್ಸಿನಲ್ಲಿ ಇನ್ನೆಂದೂ ಬೇಸರ ಅಥವಾ ಅಸೂಯೆ ಹುಟ್ಟುವ ಪ್ರಮೇಯವೇ ಬರುವುದಿಲ್ಲ. ಕೊಂಚ ಬುದ್ಧಿವಂತಿಕೆ ಬಳಸಿ ನಾನು ಸೌಂದರ್ಯ ಮತ್ತು ಪ್ರೀತಿ ಬಾಳಿನುದ್ದಕ್ಕೂ ಜೊತೆಯಾಗಿರುವಂತೆ ಮಾಡಿಕೊಂಡಿದ್ದೇನೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ