ರಕ್ಷಾಬಂಧನ ಹಬ್ಬದ ಹಿಂದಿನ ದಿನವೇ ಮಯಾಂಕನಿಗೆ ಮೊದಲ ಸಂಬಳ ಸಿಕ್ಕಿತ್ತು. ಅವನು ಅಮ್ಮ ಅಪ್ಪಂದಿರಿಗೆ ಉಡುಗೊರೆ ಕೊಳ್ಳುವಾಗ, ತನ್ನ ರಾಖಿ ಸಿಸ್ಟರ್‌ ಸ್ಮಿತಾಳಿಗೆ ಸಹ ಒಂದು ಪುಟ್ಟ ಸುಂದರ ಕೈ ಗಡಿಯಾರ ಕೊಂಡುಕೊಂಡ.

“ಏನಿದು ಮಯಾಂಕ್‌, ಮೊದಲ ಸಂಬಳ ಪೂರ್ತಿ ಈ ದುಬಾರಿ ರಿಸ್ಟ್ ವಾಚಿಗೇ ಸುರಿದ ಹಾಗಿದೆ….. ಅಮ್ಮ ಅಪ್ಪನಿಗೆ ಏನಾದರೂ ತಗೊಂಡ್ಯಾ ಇಲ್ವಾ?” ಸ್ಮಿತಾ ಅವನ ಉಡುಗೊರೆಯಿಂದ ಬಹಳ ಹಿಗ್ಗುತ್ತಾ, ಹೆಮ್ಮೆಯಿಂದ ತಕ್ಷಣ ತನ್ನ ಕೈಗೆ ಕಟ್ಟಿಕೊಳ್ಳುತ್ತಾ ಹೇಳಿದಳು.

“ಎಲ್ಲರಿಗೂ ತಗೊಂಡಿದ್ದೀನಿ ಬಿಡಕ್ಕಾ…. ಆದರೆ ಇನ್ನೂ ಅವರಿಗೆ ಕೊಟ್ಟಿಲ್ಲ. ಇದೆಲ್ಲ ಶಾಪಿಂಗ್‌ ಮುಗಿಸಿ, ಫ್ರೆಂಡ್ಸ್ ಗೆ ಪಾರ್ಟಿ ಕೊಡಿಸಿದ ಮೇಲೆ ರಾತ್ರಿ ಮನೆಗೆ ಹೋಗುವಷ್ಟರಲ್ಲಿ ಬಹಳ ತಡವಾಗಿತ್ತು. ಅಷ್ಟು ಹೊತ್ತಿಗೆ ಎಲ್ಲರೂ ಮಲಗಿಬಿಟ್ಟಿದ್ದರು.

“ಬೆಳಗ್ಗೆ ಏಳುವಷ್ಟರಲ್ಲಿ ತಡ ಆಗಿತ್ತು. ಅಮ್ಮನೇ ಬಂದು ಎಬ್ಬಿಸಿದ್ದು. 8 ಗಂಟೆ ಆಗಿಹೋಯ್ತು, ಸ್ಮಿತಾ ಬಂದಿದ್ದಾಳೆ ನೋಡು ಅಂತ ಬೇಗ ಎಬ್ಬಿಸಿದರು. ರಾಖಿಗಾಗಿ ಬೇಗ ಬಂದು ಹೋಗಿದ್ದೀಯಾ ಅಂತ ಅರ್ಥವಾಯಿತು. ಅದಕ್ಕೆ ಬೇಗ ಬೇಗ ಸ್ನಾನ ಮುಗಿಸಿ ಇಲ್ಲಿಗೇ ಓಡಿಬಂದೆ. ಇದಾದ ಮೇಲೆ ನೀನು ಭಾವನ ಜೊತೆ ನಿನ್ನ ನಾದಿನಿ ಮನೆಗೆ ಹೋಗಬೇಕಲ್ಲ…. ಅದಕ್ಕೆ ಎಲ್ಲಾ ಗಡಿಬಿಡಿ ಆಯ್ತು.”

“ಸರಿ ಬೇಗ ಹೊರಡು. ನಿನ್ನ ತಂದೆ ಸಹ ರಾಖಿಗಾಗಿ ಹೊರಗೆ ಹೊರಡುತ್ತಾರೆ ಅನ್ಸುತ್ತೆ.”

“ಅಪ್ಪಾಜಿ ರಾಖಿ ಕಟ್ಟಿಸಿಕೊಳ್ಳುವುದಕ್ಕಾಗಿ ಎಂದೂ ಎಲ್ಲೂ ಹೊರಗೆ ಹೋದದ್ದೇ ಇಲ್ಲ.”

“ಮತ್ತೆ ಅವರ ಕೈಗೆ ರಾಖಿ ಹೇಗೆ ಬಂದಿರುತ್ತದೆ? ಅದೂ ತಾನಾಗಿ ಬಂದು ಕಟ್ಟಿಸಿಕೊಳ್ಳೊಲ್ಲ ಬಿಡು. ಪ್ರತಿ ವರ್ಷ ನೋಡಿದ್ದೇವೆ, ಅವರ ಕೈ ರಾಖಿ ಇಲ್ಲದೆ ಖಾಲಿ ಇರುವುದೇ ಇಲ್ಲ. ಅವರ ಕೈನ ರಾಖಿ ನೋಡಿ ನೀನೂ ರಾಖಿ ಕಟ್ಟಿಸಿಕೊಳ್ಳಲೇಬೇಕು ಅಂತ ಹಠಹಿಡಿದೆ. ಆಗ ನಾವು ನಿಮ್ಮ ಪಕ್ಕದ ಮನೆಯಲ್ಲೇ ಇದ್ದೆ. ಹೀಗಾಗಿ ನಿಮ್ಮ ತಾಯಿ ತಂದೆ ನಮ್ಮ ಸ್ಮಿತಾ ಕೈಲಿ ನಿನಗೆ ರಾಖಿ ಕಟ್ಟಿಸಿ, ಆರತಿ ಬೆಳಗಿಸಿದರು. ಅಂದಿನಿಂದ ನೀನು ಒಂದಲ್ಲ ಒಂದು ಗಿಫ್ಟ್ ಕೊಡುತ್ತಿದ್ದೀಯಾ,” ಎಂದು ಸ್ಮಿತಾಳ ತಾಯಿ ರೇವತಿ ಹೇಳಿದರು.

“ಇದರಲ್ಲಿ ತಪ್ಪೇನಿದೆ ಆಂಟಿ? ಆಗಿನಿಂದ ನನಗೆ ಇಂಥ ಒಳ್ಳೆ ಅಕ್ಕಾ ಸಿಕ್ಕಿದ್ದಾಳೆ. ಸರಿಯಕ್ಕಾ, ಈಗಾಗಲೇ ನಿನಗೆ ತಡ ಆಗಿರಬಹುದು. ನೀವಿಬ್ಬರೂ ಹೊರಡಿ, ನಾನು ಇನ್ನೊಮ್ಮೆ ಸಿಗ್ತೀನಿ. ಮುಂದಿನ ಸಲ ನನ್ನ ಮೊದಲ ಸಂಬಳದಲ್ಲಿ ಏನೆಲ್ಲ ತೆಗೆದುಕೊಂಡಿದ್ದೆ ಅಂತ ನೋಡ್ತೀಯಂತೆ,” ಎಂದು ಬಾಯಿ ಸಿಹಿ ಮಾಡಿಕೊಂಡು ಹೊರಟ.

ಮಯಾಂಕ್‌ ಹೊರಟಾಗ, ಈಗ ಅವರ ಎದುರಿನ ಅಪಾರ್ಟ್‌ ಮೆಂಟ್‌ ಗೆ ಶಿಫ್ಟ್ ಆಗಿದ್ದ ರೇವತಿಯವರು, ಮಗಳೊಡನೆ ಹೊರಗೆ ಬಂದು ನೋಡಿದರು. ಆಗ ಅನಂತ್‌ ರಾವ್ ತಮ್ಮ ಮನೆಯ ಅಂಗಳದಲ್ಲಿ ರಾಖಿ ಸಮೇತ ಕಾಣಿಸಿಕೊಂಡರು.

“ನೋಡಿದ್ಯಾ ಮಯಾಂಕ್‌, ನಿಮ್ಮ ತಂದೆ ಕೂಡ ರಾಖಿ ಕಟ್ಟಿಸಿಕೊಂಡಿದ್ದಾರೆ,” ಎಂದರು ರೇವತಿ.

“ಇಷ್ಟು ಬೇಗ ಯಾರ ಬಳಿ ರಾಖಿ ಕಟ್ಟಿಸಿಕೊಂಡು ಬಂದಿರಿ ಅಪ್ಪ?”

“ನಮ್ಮ ಕಾಲೋನಿ ಹಿಂದಿನ ಮಂದಿರದ ಬಾಬಾ ಬಳಿಯಿಂದ,” ಅವನ ತಾಯಿ ಗಿರಿಜಾ ಹೇಳಿದರು.

ಅಪ್ಪನ ಬದಲು ಅಮ್ಮ ಉತ್ತರಿಸಿದ್ದು ನೋಡಿ ಮಯಾಂಕ್‌ ಕೇಳಿದ, “ಆದರೆ ಬಾಬಾ ಬಳಿ ಯಾಕೆ ರಾಖಿ ಕಟ್ಟಿಸಿಕೊಂಡದ್ದು?”

“ಏಕೆಂದರೆ….. ತಮ್ಮ ಅಕ್ಕನ ನೆನಪಿನಲ್ಲಿ ಇವರು ಆ ಬಾಬಾಗೆ ಏನಾದರೂ ಉಡುಗೊರೆ ಕೊಡುವ ನೆಪದಿಂದ,” ಎಂದು ಗಿರಿಜಾ ಸ್ಪಷ್ಟಪಡಿಸಿದರು.

“ಅದಿರಲಿ, ಈಗ ಟಿಫನ್‌ ಮಾಡ್ತೀಯಾ ಅಥವಾ ರೇವತಿ ಆಂಟಿ ಏನಾದರೂ ಕೊಟ್ಟರೋ?”

“ಹ್ಞೂಂ….. ಅವರ ಮನೆಯಲ್ಲಿ 2 ಪೇಡಾ ಕೊಟ್ಟರು. ಬೇಗ ಉಪ್ಪಿಟ್ಟು, ಅವಲಕ್ಕಿ ಏನಾದರೂ ಮಾಡಮ್ಮ. ಅದಿರಲಿ, ನಿಮ್ಮಿಬ್ಬರಿಗೂ ನಾನು ಏನು ತಂದಿದ್ದೇನೆ ನೋಡು,” ಎಂದು ಮಯಾಂಕ್‌ ಸಂಭ್ರಮದಿಂದ ಹೇಳಿದ.

ಅವನು ತನ್ನ ಕೋಣೆಗೆ ಹೋಗಿ 2 ಪ್ಯಾಕೆಟ್‌ ಹಿಡಿದು ಬಂದ. ಮಗನಿಂದ ಅದನ್ನು ಪಡೆದು, ತೆರೆದು ನೋಡಿ ದಂಪತಿಗಳು ಸಂತೃಪ್ತರಾಗಿದ್ದರು.

“ಈ ಎಲೆಕ್ಟ್ರಿಕ್‌ ಶೇವರ್‌ ನೋಡಿ, ಪ್ರತಿ ತಿಂಗಳೂ ನೀವು ಶೇವಿಂಗ್‌ ಬ್ಲೇಡ್‌ ಕೊಳ್ಳುವುದನ್ನು ತಪ್ಪಿಸುತ್ತದೆ,” ಎಂದು ಪತಿಗೆ ಹೇಳಿದರು.

“ನಿನ್ನ ಎಲೆಕ್ಟ್ರಿಕ್‌ ಹೇರ್‌ ಡ್ರೈಯರ್‌ ಕೂಡ ಚೆನ್ನಾಗಿದೆ,” ಎಂದರು ಅವನ ತಂದೆ.

“ಬಾಬಾ ವಿಷಯ ನೀನು ಅವನಿಗೆ ತಿಳಿಸಿ ಒಳ್ಳೆಯದು ಮಾಡಿದೆ,” ಎಂದು ಅವರು ಹೆಂಡತಿಗೆ ಹೇಳಿದರು. ತಂದೆ ಮಾತು ಕೇಳಿ ತನ್ನ ಕೋಣೆಗೆ ಹೊರಡಲಿದ್ದ ಮಗ, ಅಲ್ಲೇ ನಿಂತ.

ಅವನು ಅಲ್ಲಿಂದ ತಿರುಗಿ ನೋಡಿದಾಗ, ತಾಯಿತಂದೆ ಇಬ್ಬರೂ ಬಹಳ ಭಾವುಕರಾಗಿ ಪರಸ್ಪರ ದಿಟ್ಟಿಸುತ್ತಾ ನಿಂತಿದ್ದರು. ಅವರಿಬ್ಬರ ನಡುವೆ ನಿಂತು ಮತ್ತೇನೋ ಪ್ರಶ್ನೆ ಕೇಳುವುದು ಬೇಡವೆಂದು, ಅವನು ಆಫೀಸಿಗೆ ಹೊರಡಲು ಸಿದ್ಧನಾಗತೊಡಗಿದ. ಅವರು ಬಾಬಾ ಕುರಿತು ಹಾಗೆ ಹೇಳಿದ್ದೇಕೆಂದು ಅವನಿಗೆ ತಿಳಿಯಲಿಲ್ಲ. ತನ್ನ ಹೊಸ ಸ್ಮಾರ್ಟ್‌ ಫೋನ್‌ ಹಿಡಿದು ಅದರಲ್ಲಿ ತೃಪ್ತನಾದ.

ಅದರ ಮುಂದಿನ ತಿಂಗಳು ಅವನ 2ನೇ ಸಂಬಳ ಬಂದಾಗ ಮಯಾಂಕ್‌ ಒಂದು ಫರ್ನೀಚರ್‌ ಅಂಗಡಿಗೆ ಹೋದ. ತನ್ನ ಪಿ.ಸಿಗಾಗಿ ಒಂದು ಸಣ್ಣ ಚೇರ್‌, ಟೇಬಲ್ ಖರೀದಿಸಿದ. ಅಲ್ಲಿ ಬೇರೆ ಸಾಮಗ್ರಿ ಗಮನಿಸಿದಾಗ, ಅವನಿಗೆ ಒಂದು ಡಬಲ್ ಬೆಡ್‌ ಬಹಳ ಹಿಡಿಸಿತು. ತಾಯಿ ತಂದೆ ಇಬ್ಬರೂ ತಮ್ಮ  ಹಳೆಯ ಮಂಚಕ್ಕೆ ಯಾವುದೋ ಓಬಿರಾಯನ ಕಾಲದ ಹಾಸಿಗೆ ಹಾಸಿಕೊಂಡು ಹಾಗೆ ಕಾಲ ಕಳೆದಿದ್ದರು. ಆಧುನಿಕ ಕಾಲಕ್ಕೆ ತಕ್ಕಂತೆ ಈ ಡಬ್ಬಲ್ ಬೆಡ್‌, ಪಕ್ಕದಲ್ಲಿ ಒಂದು ಚಿಕ್ಕ ಸೈಡ್‌ ಟೇಬಲ್ ಇರಲಿ ಎಂದು ಬಯಸಿದ. ಆದರೆ ಯಾವ ಡಿಸೈನ್‌ ಆರಿಸುವುದೋ ತಿಳಿಯಲಿಲ್ಲ. ಅದನ್ನು ಅವರೇ ನಿರ್ಧರಿಸಿದರೆ ಒಳ್ಳೆಯದೆನಿಸಿತು. ಅದಕ್ಕೆ ಸಂಬಂಧಿಸಿದ ಬ್ರೋಶರ್ಸ್‌ ತೆಗೆದುಕೊಂಡು ಮನೆಗೆ ಬಂದ.

ಅದನ್ನು ನೋಡಿ ಗಿರಿಜಾ, “ನನಗೆ ಬೆಡ್‌ ಗಿಂತ ಹಾಲ್ ‌ನಲ್ಲಿ ಮುಖ್ಯವಾಗಿ ಒಳ್ಳೆಯ ಸೋಫಾ ಸೆಟ್‌ ಬೇಕು. ಹಾಸಿಗೆ ಹೇಗಿದ್ದರೇನು? ಅದು ಒಳಗಿನ ಕೋಣೆ. ಯಾರಾದರೂ ಬಂದರೆ ಹಾಲ್ ‌ನಲ್ಲಿ ಲಕ್ಷಣವಾಗಿ ಕೂರಲು ಸೋಫಾ ಬೇಡವೇ? ಯಾವ ಕಾಲದ ಸ್ಟೂಲು, ಬೆಂಚು ಅಷ್ಟೇ ಇದೆ,” ಎಂದರು.

“ಅದೆಲ್ಲ ಮುಂದಿನ ತಿಂಗಳು ನೋಡೋಣಮ್ಮ. ಈಗ  ನಿಮ್ಮ ಮಂಚದ ಹಾಸಿಗೆ ಹಳತು, ಬಹಳ ಹಾಳಾಗಿದೆ. ಮೊದಲು ಅಲ್ಲಿ ಡಬಲ್ ಬೆಡ್‌ ಬಂದರೆ ಎಷ್ಟೋ  ಚೆನ್ನಾಗಿರುತ್ತದೆ,” ಎಂದು ಹಠ ಹಿಡಿದ ಮಯಾಂಕ್‌.

ಮಗನ ಮಾತಿಗೆ ಪತಿ ಏನೂ ಉತ್ತರಿಸದೆ ಇರುವುದನ್ನು ನೋಡಿ ಆಕೆ ಸಿಡುಕಿದರು, “ಏನ್ರಿ ನೀವು….. ಅವನು ಹೊಸ ಬೆಡ್ ತರ್ತಾನೆ ಅಂದ್ರೆ ಬೇಡ ಅನ್ನದೆ ಸುಮ್ಮನೆ ನಿಂತಿದ್ದೀರಲ್ಲ….. ಅವನು ಡಬಲ್ ಬೆಡ್‌ ತಂದರೆ ನಮ್ಮಿಬ್ಬರಲ್ಲಿ ಒಬ್ಬರು ನೆಲದ ಮೇಲೆ ಮಲಗಬೇಕಾಗುತ್ತದೆ. ನಮ್ಮಿಬ್ಬರಲ್ಲಿ ಅದು ಯಾರಿಗೂ ಸರಿ ಹೋಗಲ್ಲ ಅನ್ನೋದು ನಿಮಗೆ ಗೊತ್ತು ತಾನೇ?”

“ಅದರೆ ನೀವುಗಳು ನೆಲದ ಮೇಲೆ ಏಕೆ ಮಲಗಬೇಕು?” ಮಯಾಂಕ್‌ ಅರ್ಥವಾಗದೆ ಕೇಳಿದ.

“ಆ ಹಳೆ ಕಾಲದ ಮಂಚ ಎಷ್ಟು ದೊಡ್ಡದಾಗಿದೆ ಎಂದರೆ, ಡಬ್ಬಲ್ ಬೆಡ್‌ ಹಾಕಿದ ಮೇಲೆ ನಿಮ್ಮ ಜೊತೆ ನಾನೂ ಅಲ್ಲೇ ಬಂದು ಮಲಗಬಹುದು.”

“ಆದರೆ ನಮ್ಮಿಬ್ಬರದು ಸಿಂಗಲ್ ಕಾಟ್‌ ಎಂಬುದನ್ನು ಮರೆಯಬೇಡ. ನನಗೋ ಮೊದಲಿನಿಂದ ಗೊರಕೆ ಹೊಡೆದು ಅಭ್ಯಾಸ. ಅದನ್ನಂತೂ ಕಂಟ್ರೋಲ್ ಮಾಡಲಾಗದು. ಹಾಗಾಗಿಯೇ ನಿಮ್ಮಮ್ಮ ಮಂಚ ತುಸು ಜರುಗಿಸಿಕೊಂಡು, ದಿನಾ ಬೇರೆ ಮಗ್ಗುಲಿಗೆ ತಿರುಗಿ ಮುಸುಕು ಹಾಕಿ ನಿದ್ದೆ ಮಾಡುತ್ತಾಳೆ. ಈಗ ಡಬ್ಬಲ್ ಬೆಡ್‌ ತಂದು ಎರಡೂ ಮಂಚ ಸೇರಿಸಿದರೆ, ನನ್ನ ಗೊರಕೆಯಿಂದಾಗಿ ಅವಳಿಗೆ ನಿದ್ದೆ ಎಲ್ಲಿಂದ ಬರಬೇಕು? ಬೇಡ ಬಿಡು ಈ ಐಡಿಯಾ,” ಎಂದರು ಅವನ ತಂದೆ.

“ಸರಿ ಬಿಡಿ, ನಿಮ್ಮ ಇಷ್ಟದಂತೆಯೇ ಆಗಲಿ,” ಎಂದು ಮಯಾಂಕ್‌ ಬೇಸರದಿಂದ ತನ್ನ ಕೋಣೆಗೆ ಹೊರಟುಹೋದ. ಅವನು ದೀರ್ಘ ಯೋಚನೆಗೆ ಸಿಲುಕಿದ. ತಾನು ಬಾಲ್ಯದಿಂದಲೂ ಸದಾ ಅವರಲ್ಲಿ ಒಬ್ಬರ ಬಳಿ ಮಲಗುತ್ತಿದ್ದೆ. 2 ತಿಂಗಳ ಹಿಂದೆ ತನ್ನ ಕೋಣೆಯ ಎ.ಸಿ ಕೆಟ್ಟಾಗ ಅವರ ಕೋಣೆಯಲ್ಲಿ ನೆಲದ ಮೇಲೆ ಮಲಗುತ್ತಿದ್ದೆ. ಆದರೆ ಆಗೆಲ್ಲ ಎಂದೂ ಅಪ್ಪನ ಗೊರಕೆ ಕೇಳಿಸಿದ್ದೇ ಇಲ್ಲ.

ಯಾಕೋ ಏನೋ ಅಮ್ಮ ಅಪ್ಪ ಇಬ್ಬರೂ ಬಹಳ ಚಿಂತೆಗೆ ಒಳಗಾಗಿದ್ದಾರೆ ಎನಿಸಿತು. ತನ್ನ ಹಠ ಸಾಧಿಸಿ ಅವರನ್ನು ಮತ್ತಷ್ಟು ದುಃಖಿಗಳಾಗಿಸುವುದು ಬೇಡ ಎನಿಸಿತು. ತಾನೆಂದರೆ ಅವರು ಎಷ್ಟು ಪ್ರಾಣ ಬಿಡುತ್ತಾರೆ ಎಂದು ಗೊತ್ತು. ಅಮ್ಮನಿಗಂತೂ ನನ್ನ ಸಂತೋಷದ ಮುಂದೆ ಬೇರೆ ಏನೂ ಬೇಕಿರಲಿಲ್ಲ. ಹೀಗಿರುವಾಗ ತಾನೂ ಅವರ ಸಂತೋಷಕ್ಕೆ ಬೆಲೆ ಕೊಡಬೇಕು. ಇವರಿಬ್ಬರಿಗೂ ಐಪ್ಯಾಡ್‌ ಕೊಡಿಸಿಬಿಟ್ಟರೆ, ವಾಟ್ಸ್ ಆ್ಯಪ್‌, ಫೇಸ್‌ ಬುಕ್‌ ಮುಖಾಂತರ ತಮ್ಮ ಹಳೆಯ ಗೆಳೆಯರು, ನೆಂಟರಿಷ್ಟರನ್ನು ಸುಲಭವಾಗಿ ಸಂಪರ್ಕಿಸಿಕೊಂಡು ಆನಂದವಾಗಿರುತ್ತಾರೆ ಎನಿಸಿತು.

ಶಿವಮೊಗ್ಗ ಸಾಗರದ ಮೂಲಕ ಇವನ ತಾಯಿ ತಂದೆ ತಮ್ಮ ಮನೆಯವರ ಆಸೆಗೆ ವಿರುದ್ಧವಾಗಿ, ಮನೆ ಬಿಟ್ಟು ಬಂದು ಮೈಸೂರು ಸೇರಿ, ಇಲ್ಲೇ ಮದುವೆ ಆಗಿ ಸೆಟಲ್ ಆಗಿದ್ದರು. ಅವರೆಂದೂ ತಮ್ಮ ಮನೆಯನ್ನು ನೋಡಲೆಂದು ಹೋಗಿರಲಿಲ್ಲ ಅಥವಾ ಆ ಜನರೂ ಇವರ ಸಂಪರ್ಕ ಬಯಸಿ ಬರಲಿಲ್ಲ. ತಮ್ಮದೇ ಪುಟ್ಟ ಸಂಸಾರದಲ್ಲಿ ಈ ದಂಪತಿಗಳು ಮೊದಲಿನಿಂದಲೂ ಸುಖಿಗಳಾಗಿದ್ದರು. ಮಯಾಂಕ್‌ ಚೆನ್ನಾಗಿ ವಿದ್ಯಾಭ್ಯಾಸ ಕಲಿತು, ಬಿ.ಇ ಮುಗಿಸಿ ಇನ್‌ ಫೋಸಿಸ್‌ ನಲ್ಲಿ ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿ ಕೆಲಸಕ್ಕೆ ಸೇರಿದ ಮೇಲೆ ಅವರ ಸಂತೃಪ್ತಿ ಮೇರೆ ಮೀರಿತ್ತು. ಆದರೂ ಒಮ್ಮೊಮ್ಮೆ ತಮ್ಮ ಮನೆಯವರನ್ನು ನೆನೆದು ದುಃಖಿಗಳಾಗುತ್ತಿದ್ದರು.

ಅಂದುಕೊಂಡಂತೆಯೇ ಮಯಾಂಕ್‌ ಅವರಿಗೆ ಐಪ್ಯಾಡ್‌ ತಂದುಕೊಟ್ಟಿದ್ದ. ಇಬ್ಬರಿಗೂ ಬಹಳ ಖುಷಿಯಾಗಿತ್ತು. ಒಮ್ಮೆ ಪತಿ ಅದರಲ್ಲಿ ಫೇಸ್‌ ಬುಕ್‌ ಗಮನಿಸುತ್ತಾ ತಮ್ಮ ಬಂಧುಗಳನ್ನು ನೆನೆದು ದುಃಖಿತರಾದುದನ್ನು ಕಂಡು ಗಿರಿಜಾ ಕೇಳಿದರು, “ಯಾಕೆ ಹಳೆಯದನ್ನು ಕೆದಕಿ ನೊಂದುಕೊಳ್ಳುತ್ತೀರಿ? ಹೂತ ಹೆಣವನ್ನು ಕೆದುಕುವುದರಿಂದ ಲಾಭವೇನು?”

“ನನಗೂ ಅಂಥ ಆಸೆ ಏನಿಲ್ಲ. ಆದರೆ ಮಗ ಐಪ್ಯಾಡ್‌ ತಂದಿರುವಾಗ ಅದರಲ್ಲಿ ಈ ಹೊಸ ಅನುಕೂಲಗಳನ್ನು ನೋಡುತ್ತಾ, ಏನೋ ನೆನಪಾಯಿತು ಅಷ್ಟೆ,” ಎಂದರು.

“ಖುಷಿಯಾಗಿ ನೋಡಿ ಮಹರಾಯರೆ…. ಆದರೆ ಈ ದುಃಖದ ಪೋಸ್‌ ಖಂಡಿತಾ ಬೇಡ.”

“ಬಹುಶಃ ಅಮ್ಮನಿಗೆ ಬಹಳ ಕಟು ಅನುಭವ ಆಗಿರಬೇಕು,” ಮಯಾಂಕ್‌ ಅಪ್ಪನನ್ನು ಕೇಳಿದ.

“ಹೌದಪ್ಪ…. ಅವಳು ಬಹಳಷ್ಟು ದುಃಖ ಕಂಡಿದ್ದಾಳೆ,” ತಂದೆ ಮಗನಿಗೆ ಹೇಳಿದರು.

“ಮತ್ತೆ…. ನೀವು?”

“ನಾನು ಏನೇ ಮಾಡಿದ್ದರೂ ನನ್ನ ಖುಷಿಯಿಂದಲೇ ಮಾಡಿದೆ. ನಮ್ಮ ಮನೆಯವರು ನನ್ನನ್ನು ಬಿಟ್ಟು ಹೋದರು. ಇಲ್ಲಿಗೆ ಬಂದಾಗ ಸಹಾಯ ನೀಡಿದ ಸ್ನೇಹಶೀಲ ಮಿತ್ರರು, ಮುಂದೆ ನಿನ್ನಂಥ ಮಗ ಹುಟ್ಟಿ ನಾವು ಹಳೆಯ ಕಷ್ಟ ಮರೆಯುವಂತಾಯಿತು,” ಅನಂತ್‌ ರಾವ್ ನಸುನಗುತ್ತಾ ಹೇಳಿದರು.

ಮುಂದೆ ಮಯಾಂಕ್‌ ಮತ್ತು ಅವನ ಸಹೋದ್ಯೋಗಿ ಸ್ನೇಹಾಳ ಸ್ನೇಹ, ಪ್ರೇಮ ಗಮನಿಸಿ ಈ ಮಧ್ಯಮ ವರ್ಗದ ತಾಯಿ ತಂದೆ ತಾವಾಗಿಯೇ ಹುಡುಗಿಯ ಮನೆಗೆ ಮಗನಿಗಾಗಿ ಹೆಣ್ಣು ಕೇಳಲು ಹೋದರು.

“ನಾವು ಮೊದಲಿನಿಂದಲೂ ಮಧ್ಯಮ ವರ್ಗದಲ್ಲೇ ಸಂಸಾರ ನಡೆಸಿಕೊಂಡು ಬಂದರು. ಹೇಗೋ ಬಂದು ಮೈಸೂರು ಸೇರಿ, ಇಬ್ಬರೂ ಇಲ್ಲೇ ದುಡಿದು, ಒಂದು ಗೂಡು ಅಂತ ಮಾಡಿಕೊಂಡಿದ್ದೇವೆ. ನಿಮ್ಮ ಮಗಳು ಆ ಮನೆಗೆ ಸೊಸೆ, ಮಗಳು ಎರಡೂ ಆಗಿ ಖಂಡಿತಾ ನೆಮ್ಮದಿಯಾಗಿರುತ್ತಾಳೆ,” ಎಂದು ಅನಂತ್‌ ಹುಡುಗಿಯ ತಂದೆ ಸೋಮನಾಥರಿಗೆ ಹೇಳಿದರು.

“ಸ್ನೇಹಾ ಎಲ್ಲಿಗೆ ಹೋದರೂ ಆ ಮನೆಯನ್ನು ಸ್ನೇಹಮಯವಾಗಿ ಮಾಡಿಕೊಳ್ಳುತ್ತಾಳೆ ಎಂಬುದರಲ್ಲಿ ನಮಗೆ ಯಾವ ಸಂದೇಹ ಇಲ್ಲ,” ಅವರು ಮಾತು ಮುಂದುವರಿಸುತ್ತಾ ಹೇಳಿದರು, “ನಮ್ಮ ಚಿಂತೆ ಇರುವುದೆಲ್ಲ ಅವಳ ಅಜ್ಜಿ ತಾತನದು. ನಮ್ಮದು ನಿಮ್ಮದು ಬೇರೆ ಜಾತಿಯಾದ್ದರಿಂದ, ಈ ಹಿರಿಯರು ತಮ್ಮ ಸಂಪ್ರದಾಯ ಬಿಡಲಾಗದೆ ಒದ್ದಾಡುತ್ತಾರೆ. ಮದುವೆ ಮಾತ್ರ ಅವರು ಹೇಳಿದ ರೀತಿಯಲ್ಲೇ ಅಚ್ಚುಕಟ್ಟಾಗಿ ಶಾಸ್ತ್ರೋಕ್ತವಾಗಿ ನಡೆಯಬೇಕು. ಆಗ ಅವರು ಈ ಸಂಬಂಧಕ್ಕೆ ಬೇಡ ಅನ್ನುವುದಿಲ್ಲ.”

“ಇದರಲ್ಲಿ ನಮಗೆ ಯಾವ ಅಭ್ಯಂತರ ಇಲ್ಲ. ಮಗಸೊಸೆ ಸುಖವಾಗಿರ್ತಾರೆ ಅಂದ ಮೇಲೆ ಮದುವೆ ಯಾವ ಸಂಪ್ರದಾಯದ ಪ್ರಕಾರ ನಡೆದರೇನು? ನೀವು ಹೇಳಿದಂತೆಯೇ ಆಗಲಿ,” ಎಂದು ಅನಂತ್‌ ರಾವ್ ಒಪ್ಪಿಗೆ ಸೂಚಿಸಿದರು. ಇದಕ್ಕೆ ಗಿರಿಜಾ ಸಹ ಸಂತಸದಿಂದ ಒಪ್ಪಿದರು.

“ನೀವು ಡೇಟ್‌ ಫಿಕ್ಸ್ ಮಾಡಿ ನಾವೇನು ತಯಾರಿ ಮಾಡಿಕೊಳ್ಳಬೇಕೋ ತಿಳಿಸಿಬಿಡಿ,” ಎಂದರು ಗಿರಿಜಾ.

ಇದನ್ನು ಕೇಳಿ ಮಯಾಂಕ್‌ ಹುಸಿಕೋಪ ನಟಿಸುತ್ತಾ, “ಯಾಕಮ್ಮ ಇದಕ್ಕೆಲ್ಲ ಒಪ್ಪಿಕೊಂಡೆ? ಆಮೇಲೆ ಅವರ ಕಡೆಯವರೆಲ್ಲ ಸೇರಿ ಒಬ್ಬೊಬ್ಬರಾಗಿ ಅಳಿಯನ ಮೂಗು ಹಿಂಡುತ್ತೇವೆ ಎಂದು ಬಂದು ನಿಂತರೆ ನನಗೇ ಕಷ್ಟ!” ಎಂದಾಗ ಎಲ್ಲರೂ ಜೋರಾಗಿ ನಕ್ಕರು.

“ಸ್ನೇಹಾ ನಮ್ಮ ಮನೆ ಮಗಳಾಗಿ ಬಂದ ಮೇಲೆ, ಅವಳ ಪರಿವಾರದವರೆಲ್ಲ ನಮ್ಮವರೇ ಅಲ್ಲವೇ?” ಗಿರಿಜಾ ಹೇಳಿದಾಗ, ಸ್ನೇಹಾಳ ತಾಯಿ ಸುಜಾತಾ ಮುಂದೆ ಬಂದು ಇವರ ಕೈ ಹಿಡಿದು ಹಾರ್ದಿಕವಾಗಿ, “ಇಂಥ ಅತ್ತೆಮನೆ ಪಡೆಯಲು ನಮ್ಮ ಮಗಳು ಪುಣ್ಯ ಮಾಡಿದ್ದಳು,” ಎಂದರು.

ಸ್ನೇಹಾ ಅಲ್ಲಿದ್ದವರಿಗೆಲ್ಲ ಕಾಫಿ, ತಿಂಡಿ ತಂದುಕೊಟ್ಟು ಹಿರಿಯರಿಗೆ ನಮಸ್ಕರಿಸಿ ಕೆಳಗೆ ಕುಳಿತಳು. ಬೀಗಿತಿಯರ ಮಧ್ಯೆ ಕುಳಿತಿದ್ದ ಅವಳನ್ನು ಮಯಾಂಕ್‌ ಕದ್ದು ಕದ್ದು ನೋಡಿ ಖುಷಿಪಡುತ್ತಿದ್ದ. ಒಟ್ಟಿನಲ್ಲಿ ಎಲ್ಲರೂ ತೃಪ್ತಿಯಾಗಿ ಆ ಸಂಜೆಯನ್ನು ಕಳೆದರು.

ಗಿರಿಜಾ ಉತ್ಸಾಹದಿಂದ ಮಗನ ಮದುವೆಯ ತಯಾರಿ ನಡೆಸಿದರು. ಬೇಕಾದಂತೆ ಶಾಪಿಂಗ್‌ ನಡೆಸಿ, ಭಾವಿ ಸೊಸೆಗೆ ಚಿನ್ನ ಬಣ್ಣ ತಂದಿದ್ದಾಯಿತು. ಮನೆ ಸುಣ್ಣ ಬಣ್ಣ ಕಂಡು ಸಿಂಗಾರಗೊಂಡಿತು. ಒಟ್ಟಿನಲ್ಲಿ ಎರಡೂ ಕಡೆಯ ಮನೆಗಳಿಗೆ ಮದುವೆ ಮನೆ ಕಳೆ ಬಂದುಬಿಟ್ಟಿತ್ತು. ಎಲ್ಲೆಲ್ಲೂ ಸಂತೋಷವೇ!

ಮದುವೆ 1 ವಾರ ಇದೆ ಎನ್ನುವಾಗ ಸುಜಾತಾ ಸೋಮನಾಥರು ಭಾವಿ ಬೀಗರ ಮನೆ ಹುಡುಕಿ ಬಂದರು.

“ಮದುವೆ ಮುಹೂರ್ತಕ್ಕೆ ಮೊದಲು ನಮ್ಮಲ್ಲಿ ಒಂದು ಹೋಮ ಮಾಡಿಸುವ ಸಂಪ್ರದಾಯವಿದೆ. ಮಗನ ಜೊತೆ ನೀವು ನಿಮ್ಮ ಹತ್ತಿರದ ನೆಂಟರಿಷ್ಟರನ್ನು ಕರೆದುಕೊಂಡು ಅಗತ್ಯ ಬರಬೇಕು,” ಎಂದರು ಸ್ನೇಹಾಳ ತಂದೆ.

“ಮುಂದಿನ ಭಾನುವಾರ ನೀವು ಯಾವ ವೇಳೆ ಹೇಳಿದರೆ ಅಗತ್ಯವಾಗಿ ಅದರ ಪ್ರಕಾರ ಫಂಕ್ಷನ್‌ ನಡೆಸೋಣ. ಏನಂತೀರಿ?” ಎಂದು ಹಾರ್ದಿಕವಾಗಿ ನಕ್ಕರು.

“ಹೋಮ ಹವನ ನಡೆಸುತ್ತಿರುವವರು ನೀವು. ನಿಮ್ಮ ಕಡೆಯ ಬಂಧು ಬಾಂಧವರೆಲ್ಲ ಇರುತ್ತಾರೆ. ನಿಮ್ಮ ಹಿರಿಯರು ಹೇಗೆ ನಿಶ್ಚಯಿಸುತ್ತಾರೋ ಹಾಗೆ ಮಾಡಿ,” ಎಂದು ಮಯಾಂಕನ ತಂದೆ ಹೇಳಿದರು.

ಗಿರಿಜಾ ಸಹ ಹೇಳಿದರು, “ಹುಡುಗನ ಕಡೆಯವರಾಗಿ ನಾವು ಅದಕ್ಕೆ ಏನೆಲ್ಲ ತರಬೇಕು ಹೇಳಿದರೆ ನಾವು ಮೊದಲೇ ಸಿದ್ಧರಾಗಿ ಬರುತ್ತೇವೆ.”

“ಹೆಚ್ಚಿಗೇನಿಲ್ಲ….. ಹೂವು, ಹಣ್ಣು, ಫಲ, ತಾಂಬೂಲ ತಂದರಾಯಿತು. ನಿಮ್ಮನ್ನು ಕೇಳಿ ಸಮಯ ಗೊತ್ತುಪಡಿಸೋಣ ಅಂತ, ಶಾಸ್ತ್ರಿಗಳಿಗೆ ಹೇಳಿ ಕಳುಹಿಸಬೇಕಾಗುತ್ತದೆ,” ಎಂದು ಸ್ನೇಹಾ ತಾಯಿ ಸುಜಾತಾ ಹೇಳಿದರು.

“ಹುಡುಗನ ತಾಯಿತಂದೆ ಹೋಮಕುಂಡದ ಒಂದು ಬದಿ, ಇನ್ನೊಂದು ಬದಿಯಲ್ಲಿ ಹುಡುಗಿ ತಾಯಿತಂದೆ ನಾವು ಕೂರುತ್ತೇವೆ. ಇದು ಮಕ್ಕಳ ಸುಖೀ ವೈವಾಹಿಕ ಜೀವನಕ್ಕಾಗಿ ನಡೆಸುವ ಪ್ರಾರ್ಥನೆ ಅಷ್ಟೆ,” ಎಂದು ಸುಜಾತಾ ವಿವರಿಸಿದರು.

“ದಯವಿಟ್ಟು ನೀವು ಬೆಳಗ್ಗೆ 8 ಗಂಟೆ ಹೊತ್ತಿಗೆಲ್ಲ ಬರಬೇಕು,” ಎಂದು ಸೋಮನಾಥ್‌ ಮತ್ತೆ ಕೈ ಜೋಡಿಸಿ ಹೇಳಿದರು.

ಹವನದಲ್ಲಿ ತಾವು ಕೂರಬೇಕಾಗುತ್ತದೆ ಎಂಬುದನ್ನು ಕೇಳಿ ಗಿರಿಜಾರ ಮುಖ ಯಾಕೋ ಬಾಡಿತು. ಬಂದವರಿಗೆ ಕಾಫಿ ಕೊಡುವ ನೆಪದಲ್ಲಿ ಅವರು ಅಡುಗೆಮನೆಗೆ ಹೋದರು. ತಮ್ಮ ಕಣ್ಣು ಮೂಗು ಒರೆಸಿಕೊಂಡು ಕಾಫಿ ಟ್ರೇ, ಬಿಸ್ಕತ್ತು ಹಿಡಿದು ಬಂದರು. ಎಲ್ಲರಿಗೂ ಕಾಫಿ ಕೊಟ್ಟ ಮೇಲೆ ಇಂಥವೂ ಇನ್ನೂ ಬೇರೇನಾದರೂ ಶಾಸ್ತ್ರದಲ್ಲಿ ಹುಡುಗನ ತಾಯಿತಂದೆ ಭಾಗಹಿಸಬೇಕೇ ಎಂದು ಗಿರಿಜಾ ಕೇಳಿದರು.

“ಹುಡುಗಹುಡುಗಿ ಹಾರ ಬದಲಾಯಿಸುವವರೆಗೂ ಹೀಗೆ ಸಣ್ಣಪುಟ್ಟ ಸಂಪ್ರದಾಯಗಳು ನಡೆಯುತ್ತಿರುತ್ತವೆ. ಎಲ್ಲದರಲ್ಲೂ ಹುಡುಗಿ ತಾಯಿತಂದೆ ಜೊತೆ ಹುಡುಗನ ತಾಯಿತಂದೆ ಕೂಡ ಪಾಲ್ಗೊಳ್ಳಬೇಕು,” ಎಂದರು ಸುಜಾತಾ.

“ಇತರೆ ಜಂಜಾಟ ಬಿಟ್ಟು ಇಂಥ ಸಮಾರಂಭದಲ್ಲಿ ಭಾಗಹಿಸುವುದು ಎಷ್ಟೋ ಹೆಮ್ಮೆ ಅಲ್ಲವೇ?”

“ಪತಿಪತ್ನಿ ಎಲ್ಲದರಲ್ಲೂ ಒಟ್ಟೊಟ್ಟಿಗೆ ಕೂರಬೇಕಲ್ಲವೇ?”

“ಹೌದು, ಅದಂತೂ ಖಂಡಿತಾ. ಶಾಸ್ತ್ರ ಅಂದಮೇಲೆ ಅದೆಲ್ಲ ಇದ್ದದ್ದೇ ಬಿಡಿ,” ಎಂದರು ಸುಜಾತಾ.

“ಹೌದು, ನಮ್ಮಲ್ಲೂ ಊರಲ್ಲಿ ಇಂಥ ಸಂಪ್ರದಾಯ ಉಂಟು. ಅಕಸ್ಮಾತ್‌ ವರ/ವಧು ತಾಯಿತಂದೆಯರಿಗೆ ಏನಾದರೂ ಅನಾನುಕೂಲವಾದರೆ, ಬದಲಿಗೆ ವರ/ವಧುವಿನ ಚಿಕ್ಕಪ್ಪ ಚಿಕ್ಕಮ್ಮ, ಸೋದರತ್ತೆ ಮಾವ….. ಹೀಗೆ ಯಾರೋ ಹಿರಿಯರು ಅವರ ಪರವಾಗಿ ಕೂರುತ್ತಾರೆ,” ಎಂದು ಸುಜಾತಾ ಸಾದ್ಯಂತರಾಗಿ ವಿವರಿಸಿದರು.

“ಒಟ್ಟಾರೆ ವರ/ವಧು ಹಿರಿಯರ ಪರವಾಗಿ ಬೇರೆ ಯಾರಾದರೂ ಕೂರಬಹುದಲ್ಲವೇ?” ಗಿರಿಜಾ ಮತ್ತೆ ಸಂದೇಹ ನಿವಾರಣೆಗಾಗಿ ಕೇಳಿದರು.

“ಓಹೋ….. ಧಾರಾಳವಾಗಿ! ಯಾರಾದರೂ ಆಗಬಹುದು,” ಎಂದು ಸುಜಾತಾ ಹೇಳಿದರು.

ಅಮ್ಮ ಏನೋ ಒಳಗೊಳಗೇ ಲೆಕ್ಕಾಚಾರ ಹಾಕುತ್ತಿದ್ದಾಳೆ ಎಂದು ಮಯಾಂಕನಿಗೆ ಅನಿಸಿತು. ಅವರು ಹೊರಟ ನಂತರ ಗಿರಿಜಾ ಗಂಡನನ್ನು ತಮ್ಮ ಕೋಣೆಗೆ ಕರೆದೊಯ್ದು ಕದವಿಕ್ಕಿಕೊಂಡರು. ಇದ್ಯಾಕೋ ವರಸೆ ವಿಚಿತ್ರವಾಗಿದೆಯಲ್ಲ ಎನಿಸಿತು. ಏನಿದ್ದರೂ ಅವರೇ ತಿಳಿಸುತ್ತಾರೆ ಎಂದು ಸುಮ್ಮನಾದ. ಸ್ವಲ್ಪ ಹೊತ್ತು ಬಿಟ್ಟು ಹೊರಬಂದ ಅವರು, ಎಂದಿನಂತೆ ತಮ್ಮ ಕೆಲಸ ಮುಂದುವರಿಸಿದರು.

Akalpnik-2

ಗಿರಿಜಾ ಅವಸರದಲ್ಲಿ ಯಾರಿಗೋ ಫೋನ್‌ ಮಾಡತೊಡಗಿದರು, “ಹಲೋ ಸ್ಮಿತಾ….. ಮನೇಲೆ ಇದ್ದೀಯಮ್ಮ. ಸ್ವಲ್ಪ ನಿಮ್ಮನ್ನೆಲ್ಲ ಭೇಟಿ ಆಗಬೇಕಿತ್ತು. ನಿನ್ನ ತಮ್ಮನ ಮದುವೆ ಫಿಕ್ಸ್ಸ ಆಗಿದೆ. ಓ….. ಈಗ ಮನೆಯಲ್ಲಿಲ್ಲ ಅಂತೀಯಾ? ಏನೂ ಪರವಾಗಿಲ್ಲ. ಸಂಜೆ ಆಫೀಸ್‌ ಮುಗಿಸಿಕೊಂಡು ಗಂಡ ಹೆಂಡತಿ ನೇರ ಇಲ್ಲಿಗೇ ಬಂದುಬಿಡಿ. ಹಾಗೇ ಅದೇ ಸಮಯಕ್ಕೆ ನಿಮ್ಮ ತಾಯಿ ತಂದೇನೂ ಬರಲು ಹೇಳು,” ಎಂದು ಸಂಭ್ರಮದಿಂದ ಮಗನ ಮದುವೆ ಫಿಕ್ಸ್ ಆದುದರ ಬಗ್ಗೆ ಹೇಳತೊಡಗಿದರು. ನಂತರ ಆಕೆ ಗಂಡ, ಮಗನ ಕಡೆ ತಿರುಗಿ, “ಸಂಜೆ ಬೇಗ ಬಂದು ಬಿಡೋ ಮಯಾಂಕ್‌…. ಸ್ಮಿತಾ, ಪ್ರಮೋದ್‌ ಸಾಧ್ಯವಾದರೆ ಅವಳ ತಾಯಿ ತಂದೆ ಸಹ ನಮ್ಮ ಮನೆಗೆ ಬರಲಿದ್ದಾರೆ. ಅರ್ಜೆಂಟ್‌ ಮಾತುಕಥೆ ಇದೆ,” ಎಂದರು.

ಅನಂತ್‌ ಮೌನವಾಗಿದ್ದರು.

“ಅದೇನಮ್ಮ….. ಸ್ಮಿತಾ ಅಕ್ಕಾ, ಭಾವನ್ನ ಕೂಡ ಇಲ್ಲಿಗೆ ಬರಬೇಕು ಅಂತ ಕರೆಸುತ್ತಿದ್ದಿ?”

ಅವರಿಬ್ಬರೂ ಮುಖ ಮುಖ ನೋಡಿ ಕೊಂಡರು, “ನೋಡಪ್ಪ, ಈ ಮದುವೆಯಲ್ಲಿ ಹುಡುಗನ ಅಕ್ಕಾಭಾವನಾಗಿ ಸ್ಮಿತಾ ಪ್ರಮೋದ್‌ ಎಲ್ಲಾ ಸಂಪ್ರದಾಯದಲ್ಲಿ ಪಾಲ್ಗೊಳ್ಳಲಿ. ನಾನು, ನಿಮ್ಮಮ್ಮ ಬಂದ ಅತಿಥಿಗಳನ್ನು ಗಮನಿಸಿಕೊಳ್ಳುವುದರಲ್ಲಿ ಬಿಝಿ ಇರ್ತೀವಿ,” ಎಂದರು.

“ಅದೆಲ್ಲ ಆಗಲ್ಲ….. ಇರೋ ಒಬ್ಬನೇ ಮಗನ ಮದುವೇಲಿ ಮಣೆ ಮೇಲೆ ನೀವು ಕೂರದೆ ಅಕ್ಕಾಭಾವ ಯಾಕೆ ಕೂರಬೇಕು? ಅತಿಥಿಗಳನ್ನು ಗಮನಿಸಿಕೊಳ್ಳಲು ನನ್ನ ಫ್ರೆಂಡ್ಸ್, ಅಕ್ಕಾಭಾವ ಇರ್ತಾರೆ. ನೀವು ಆ ಬಗ್ಗೆ ಚಿಂತೆ ಮಾಡಬೇಡಿ,” ಎಂದು ದೃಢವಾಗಿ ಹೇಳಿದ ಮಯಾಂಕ್‌.

“ಅದು ಹಾಗಲ್ಲಪ್ಪ…. ಮತ್ತೆ ಮತ್ತೆ ನಾವು ಮಣೆ ಮೇಲೆ ಕುಳಿತು ಏಳಬೇಕಾಗುತ್ತೆ. ಇಬ್ಬರಿಗೂ ಮಂಡಿ ನೋವು ಇರುವ ವಿಚಾರ ನಿನಗೆ ಗೊತ್ತಿದೆ. ಹಾಗಾಗಿ ಈ ಬದಲಾವಣೆ,” ಎಂದರು ತಾಯಿ.

“ಅದೇನೂ ಅನಿವಾರ್ಯ ಅಲ್ಲಮ್ಮ, ಮಣೆ ಮುಂದೆ 2 ಕುರ್ಚಿ ಹಾಕಿಸಿದರಾಯಿತು. ನೀವಿಬ್ಬರೂ ಅದರ ಮೇಲೆ ಕುಳಿತಿರಿ. ಶಾಸ್ತ್ರಿಗಳು ಹೇಳಿದ ಉಳಿದ ಕೆಲಸ ಮಧ್ಯೆ ಮಧ್ಯೆ ಮಾಡಿಕೊಂಡರಾಯಿತು,” ಎಂದು ಮಯಾಂಕ್‌ ಅಸಮಾಧಾನ ವ್ಯಕ್ತಪಡಿಸಿದ.

“ಅದೆಲ್ಲ ಏನೂ ಚೆನ್ನಾಗಿರುವುದಿಲ್ಲ. ಅಷ್ಟು ಜನ ಕೆಳಗೆ ಕುಳಿತಿರುವಾಗ ನಾವು ಕುರ್ಚಿ ಮೇಲೆ ಕೂರುವುದೇ? ಅದರ ಬದಲು ನಿನ್ನ ಅಕ್ಕಾಭಾವ ಕೂರುತ್ತಾರೆ ಬಿಡು,” ಗಿರಿಜಾ ಮತ್ತೆ ಹೇಳಿದರು.

“ನೀನು ಹೇಳಿದ ಹುಡುಗಿಯನ್ನು ಈಗ ನಾವು ಮನೆ ತುಂಬಿಸಿಕೊಳ್ಳುತ್ತಿಲ್ಲವೇ? ಅದೇ ತರಹ ನಾವು ಹೇಳಿದಂತೆ ಈಗ ನೀನು ಕೇಳು!” ಎಂದರು ಅನಂತ್‌.

“ಇದೊಳ್ಳೆ ತಮಾಷೆ! ಹೆತ್ತ ತಾಯಿ ತಂದೆ ಇರೋವಾಗ ರಾಖಿ ಸಿಸ್ಟರ್‌ ನ ತಾಯಿ ಮಾಡಿಕೊಳ್ಳಬೇಕೇ?” ಮಯಾಂಕ್‌ ಬಡಪಟ್ಟಿಗೆ ಒಪ್ಪುವ ಹಾಗಿರಲಿಲ್ಲ.

“ಹಾಗಲ್ಲಪ್ಪ…. ಇದೆಲ್ಲ ಸ್ನೇಹಾಳ ಅಜ್ಜಿ ತಾತಾ ಸಂಪ್ರದಾಯಸ್ಥರು ಅಂತ ಅವರ ಸಮಾಧಾನಕ್ಕಾಗಿ ಮಾಡುತ್ತಿರುವುದು, ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ,” ಎಂದು ಅವರು ಮತ್ತೆ ಹೇಳಿದರು.

“ಹೌದೇನು? ಹಾಗಿದ್ದರೆ ಯಾಕಾಗಿ ನೀವು ಆ ಬಾಬಾ ಬಳಿ ರಾಖಿ ಕಟ್ಟಿಸಿಕೊಂಡು ಬರಬೇಕು?” ವ್ಯಂಗ್ಯವಾಗಿ ಕೇಳಿದ ಮಯಾಂಕ್‌, “ಈಗ ನಾನಂತೂ ಸಣ್ಣ ಹುಡುಗನಲ್ಲ. ನೀವಿಬ್ಬರೂ ನನ್ನಿಂದ ಏನೋ ಮುಚ್ಚಿಡುತ್ತಿದ್ದೀರಿ ಅನ್ನೋದು ಚೆನ್ನಾಗಿ ಗೊತ್ತಾಗುತ್ತಿದೆ. ನಿಮಗೆ ಅದನ್ನು ಹೇಳಲು ಇಷ್ಟವಿಲ್ಲದಿದ್ದರೆ ಬೇಡ ಬಿಡಿ. ಆದರೆ ನಮ್ಮವರ ಹಕ್ಕನ್ನು ಬೇರೆಯವರಿಗೆ ಕೊಡಲು ನನ್ನ ಮನಸ್ಸು ಒಪ್ಪುತ್ತಿಲ್ಲ.”

“ಈಗ ವಿಷಯ ಇಲ್ಲಿಯವರೆಗೂ ಬಂದಿರುವಾಗ, ಗಿರಿಜಾ ನಾವು ಮಯಾಂಕನಿಗೆ ಎಲ್ಲಾ ವಿಷಯ ಹೇಳಿಬಿಡುವುದೇ ಸರಿ,” ಎಂದಾಗ ಗಿರಿಜಾರ ಕಣ್ಣಲ್ಲಿ ಮತ್ತೆ ಕಂಬನಿ ತುಂಬಿಕೊಂಡಿತು.

“ಮಗು, ನಾನು ನಿನ್ನ ಅಸಲಿ ತಂದೆಯಲ್ಲ, ಒಂದು ವಿಧದಲ್ಲಿ ನಿನಗೆ ಸೋದರಮಾವ! ಬಾಬಾ ಬಳಿ ಅಲ್ಲ, ಗಿರಿಜಾ ಬಳಿ ಪ್ರತಿ ವರ್ಷ ನಾನು ರಾಖಿ ಕಟ್ಟಿಸಿಕೊಳ್ಳೋದು. ಪೂರ್ತಿ ಕಥೆ ಕೇಳಿ ಬಿಡು. ಗಿರಿಜಾ ನನ್ನ ಹೆಂಡತಿ ಅಲ್ಲ, ರಾಖಿ ಸಿಸ್ಟರ್‌ ಅಂತ ತಿಳಿ.”

ಶಾಕ್‌ ಆಗಿದ್ದ ಮಯಾಂಕ್‌ ಅವರಿಬ್ಬರ ಕಡೆ ನೋಡತೊಡಗಿದ. ತಂದೆ ಹೇಳತೊಡಗಿದರು, “ನಾವಿಬ್ಬರೂ ಸಾಗರದಲ್ಲಿ ನೆರೆಹೊರೆಯವರು. ನನಗೆ ಯಾರೂ ಅಕ್ಕತಂಗಿಯರಿಲ್ಲ. ಹೀಗಾಗಿ ನಾನು, ನನ್ನ ತಮ್ಮ ಗಿರಿಜಾಳಿಂದ ರಾಖಿ ಕಟ್ಟಿಸಿಕೊಳ್ಳುತ್ತಿದ್ದೆವು. ಬೇರೆ ಮನೆಯಲ್ಲಿದ್ದರೂ ಎರಡೂ ಕಡೆ ಸಮಾನ ಪ್ರೀತಿವಿಶ್ವಾಸಗಳಿತ್ತು.

“ನಾನು ಎಂಜಿನಿಯರಿಂಗ್‌ ಕಲಿಯಲೆಂದು ಮೈಸೂರಿಗೆ ಬಂದು ಸೇರಿದೆ. ಆಗ ಗಿರಿಜಾ ಸಹ ಎಂಜಿನಿಯರ್‌ ಆಗಲಿ ಎಂದು ಇದೇ ಊರಿಗೆ ಅವಳ ತಾಯಿ ತಂದೆ ತಂದು ಸೇರಿಸಿದರು.

ಇವಳು ಅಲ್ಲಿ ಗರ್ಲ್ಸ್ ಹಾಸ್ಟೆಲ್ ‌ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮುಂದುವರಿಸಿದ್ದಳು. ನಾನು ಇವಳ ಕಸಿನ್‌ ಎಂದೇ ಅಲ್ಲಿ ಎಲ್ಲರಿಗೂ ಪರಿಚಯ. ಹಾಗಾಗಿ ಪ್ರತಿ ಭಾನುವಾರ ಬಂದು ಹೊರಗೆ ಸುತ್ತಾಡಲು ಅವಳನ್ನು ಕರೆದೊಯ್ಯುತ್ತಿದ್ದೆ.

“ನಾನಿದ್ದದ್ದು ಬಾಯ್ಸ್ ಹಾಸ್ಟೆಲ್ ‌ನಲ್ಲಿ. ನನ್ನ ರೂಮ್ ಮೇಟ್‌ ಗಂಗಾಧರ್‌ ನನಗಿಂತ ಬುದ್ಧಿವಂತ, ಆಕರ್ಷಕ ಸ್ಛುರದ್ರೂಪಿ. ಸ್ಪೋರ್ಟ್ಸ್ ನಲ್ಲಿ ಸದಾ ಮುಂದು. ಹೀಗಾಗಿ ನಾನು ಗಿರಿಜಾಳನ್ನು ಹೊರಗೆ ಕರೆದೊಯ್ಯುವಾಗ ಸಹಜವಾಗಿ ಅವನೂ ನಮ್ಮ ಜೊತೆಯೇ ಇರುತ್ತಿದ್ದ. ಹೀಗೆ ಅವರಿಬ್ಬರಲ್ಲಿ ಪ್ರೀತಿ, ಪ್ರೇಮ ಬೆಳೆಯಿತು. ಕೊನೆ ವರ್ಷದಲ್ಲಿ ಯಾರಿಗೂ ತಿಳಿಸದೆ ಯಾವುದೋ ಗುಡಿಯಲ್ಲಿ ಗುಟ್ಟಾಗಿ ಮದುವೆಯಾದರು. ನಾನು ಟೈಫಾಯಿಡ್‌ ಕಾರಣ ಊರಿಗೆ ಹೋಗಿ 2-3 ವಾರ ಕಳೆದು ಬರುವಷ್ಟರಲ್ಲಿ ಇಲ್ಲಿ ಇಷ್ಟೆಲ್ಲ ನಡೆದುಹೋಗಿತ್ತು.

“ಹೀಗೆ ಅವರು ಒಂದು ಪುಟ್ಟ ಮನೆ ಬಾಡಿಗೆಗೆ ಹಿಡಿದು ವಾಸಿಸತೊಡಗಿದರು. ಇಬ್ಬರೂ ಸಂಜೆ ಹೊತ್ತು ಪಾರ್ಟ್‌ ಟೈಂ ಕೆಲಸಕ್ಕೆ ಹೋಗುತ್ತಾ ಹೇಗೋ ಜೀವನೋಪಾಯಕ್ಕೆ ದಾರಿ ಕಂಡುಕೊಂಡರು. ಊರಿನಿಂದ ವಿದ್ಯಾಭ್ಯಾಸಕ್ಕೆ ಹೇಗೂ ಇಬ್ಬರಿಗೂ ಹಣ ಬರುತ್ತಿತ್ತು.

“ಹಾಸ್ಟೆಲ್ ಗೆ ನನ್ನನ್ನು ಹುಡುಕಿಕೊಂಡು ಬಂದ ಗಿರಿಜಾ ಎಲ್ಲವನ್ನೂ ತಿಳಿಸಿದಳು. ನಾನು ಅದನ್ನು ಒಪ್ಪಿಕೊಳ್ಳುವ ಅಥವಾ ವಿರೋಧಿಸುವ ಸ್ಥಿತಿಯಲ್ಲಿರಲಿಲ್ಲ. ಹೀಗೆ 3 ತಿಂಗಳು ಕಳೆಯಿತು. ಪರೀಕ್ಷೆಗಳು ಹತ್ತಿರವಾಗಿತ್ತು. ಇದ್ದಕ್ಕಿದ್ದಂತೆ ಗಂಗಾಧರನಿಗೆ ಅವನ ಊರಾದ ತುಮಕೂರಿನಿಂದ ಫೋನ್‌ ಬಂತು. ತಾಯಿ ಸೀರಿಯಸ್‌ ಕೂಡಲೇ ಹೊರಟು ಬಾ ಎಂದಿತ್ತು.

“ನಂತರ ಗಿರಿಜಾ ಹೇಳಿದ ವಿಷಯ ಬಹಳ ಗಂಭೀರವಾಗಿತ್ತು. ಅಲ್ಲಿ ಸಾಯುತ್ತಿದ್ದ ತಾಯಿಯ ಮಾತುಗಳಿಗೆ ಕಟ್ಟುಬಿದ್ದು, ಗಂಗಾಧರ್‌ ತಾಯಿಯ ಅಣ್ಣ ಸೋದರಮಾವನ ಮಗಳನ್ನೇ ಮದುವೆಯಾಗಿ ಅಪಾರ ಆಸ್ತಿ ದಕ್ಕಿಸಿಕೊಂಡ. ತಾಯಿಯೂ ಹೋದರು. ಇತ್ತ ಗರ್ಭವತಿ ಗಿರಿಜಾ ಅವನಿಗಾಗಿ ಕಾದಿದ್ದೇ ಬಂತು. ಕೊನೆಗೂ ಗಂಗಾಧರ್‌ ಅವಳನ್ನು ಮನೆಗೆ ಕರೆದೊಯ್ಯುವ ಸ್ಥಿತಿ ಬರಲಿಲ್ಲ. ಹೀಗೆ ನವಮಾಸ ಕಳೆದು ಅವಳು ಮಗು ಹೆತ್ತಳು.  ಆ…. ಮಗು…. ನೀನೇ! ಹೀಗಾಗಿ ನಾವು ಯಾವ ಮುಖ ಹೊತ್ತು ಊರಿಗೆ ಹೋಗುವುದು? ನಾನು ಗಿರಿಜಾಳನ್ನು ಮದುವೆಯಾಗಿ ಮಗುವಿಗೆ ತಂದೆಯಾಗುವೆ ಎಂದು ತಿಳಿಸಿದೆ. ಆದರೆ ನನಗೆ ಪ್ರತಿ ವರ್ಷ ರಾಖಿ ಕಟ್ಟಿ ಆ ಪವಿತ್ರ ಸಂಬಂಧ ಉಳಿಸಿಕೊಳ್ಳ ಬಯಸಿದ ಗಿರಿಜಾ ಈ ಮದುವೆಗೆ ಒಪ್ಪಲಿಲ್ಲ. ಹಾಗೆಂದು ಸಮಾಜದ ಮುಂದೆ ಅವಳು ನಗೆಪಾಟಲಾಗುವುದನ್ನು ನಾನೂ ಒಪ್ಪಲಿಲ್ಲ.

“ಹಾಗಾಗಿ ಮೈಸೂರಿನ ಇನ್ನೊಂದು ಪ್ರಾಂತ್ಯಕ್ಕೆ ಕೆಲಸ ಹುಡುಕಿಕೊಂಡು ಬಂದು ನಾವು ರಿಜಸ್ಟರ್ಡ್‌ ಮದುವೆ ಆದೆವು. ಸಮಾಜದ ಮುಂದೆ ನಾವು ಗಂಡಹೆಂಡತಿ, ಆದರೆ ಗಿರಿಜಾಳ ಭಾವನೆಗಳನ್ನು ಗೌರವಿಸಬೇಕೆಂದು ನಾನು ಶಾಶ್ವತವಾಗಿ ಅವಳಿಗೆ ಅಣ್ಣನಾಗಿಯೇ ಉಳಿದೆ. ಈ ರೀತಿ ನೀನು ನಮ್ಮ ಮಗನಾಗಿ ಬೆಳೆದೆ. ನಾವೆಂದೂ ಊರಿಗೆ ಮರಳದೆ ಇದೇ ಊರಲ್ಲಿ ಹೊಸ ಬದುಕು ನಡೆಸಿದೆವು.”

ಅವರ ಮಾತು ಮುಗಿಯುವಷ್ಟರಲ್ಲಿ ಗಿರಿಜಾ ಬಿಕ್ಕಳಿಸಿ ಅಳತೊಡಗಿದರು. ಮಯಾಂಕನಿಗೆ ಮಾತು ಹೊರಡದಾಯಿತು.

“ಅದಕ್ಕೆ ಮಗು, ಮಣೆ ಮೇಲೆ ಕುಳಿತು ನಾವು ಅಣ್ಣತಂಗಿಯ ಪವಿತ್ರ ಸಂಬಂಧಕ್ಕೆ ಮಸಿ ಬಳಿಯಲು ಬಯಸಲಿಲ್ಲ. ಸಮಾಜದ ಕಾರಣ ನಾವು ಧರ್ಮಕ್ಕೆ ದ್ರೋಹ ಎಸಗಿದಂತಾಗಬಾರದು,” ಅಮ್ಮನ ಅಳು ನಿಲ್ಲದಾಯಿತು.

ಮಯಾಂಕ್‌ ಮುಂದೆ ಬಂದು ಅವರನ್ನು ಸಮಾಧಾನಪಡಿಸಿದ. ಅವನು ಅವರಿಬ್ಬರಿಗೂ ನಮಸ್ಕಾರ ಮಾಡಿ, “ನಿಮ್ಮಿಬ್ಬರ ಆದರ್ಶ ಕೆಡದಂತೆ ನಾವು ಮದುವೆ ಆಗುತ್ತೇವೆ. ಅಪ್ಪಾಜಿ, ನೀವು ನನಗೆ, ನಮ್ಮಮ್ಮನಿಗೆ ನೀಡಿದ ಸ್ಥಾನ ಅಕಾಲ್ಪನಿಕ ಎನಿಸಿದರೂ ಅದುವೇ ವಾಸ್ತವ! ಈ ಬಗ್ಗೆ ಸ್ನೇಹಾ ಬಳಿ ಚರ್ಚಿಸಿ ಮುಂದೆ ಒಂದು ನಿರ್ಧಾರಕ್ಕೆ ಬರ್ತೀನಿ,” ಎಂದ.

ಅವರಿಗೆ ಮಗನ ಬಗ್ಗೆ ಹೆಮ್ಮೆ ಎನಿಸಿತು.

ಸ್ನೇಹಾಳ ಬಳಿ ಏನೂ ಮುಚ್ಚಿಡದೆ ಮಯಾಂಕ್‌ ಸತ್ಯವನ್ನೇ ಹೇಳಿಕೊಂಡ. ಸ್ನೇಹಾ ಅವನಿಗೆ ಭರವಸೆ ನೀಡಿ ಅವನ ತಾಯಿ ತಂದೆಯರ ಜವಾಬ್ದಾರಿ ತನ್ನದೆಂದಳು. ಅವಳು ತನ್ನ ಅಜ್ಜಿ ತಾತಾ ಮತ್ತು ಇತರ ನೆಂಟರಿಗೆ ಏನು, ಹೇಗೆ ಹೇಳಿ ಒಪ್ಪಿಸಿದಳೋ, ತಂದೆ ತಾಯಿ ಸಹ ಒಪ್ಪಿ ಇವರ ರಿಜಿಸ್ಟರ್ಡ್‌ ಮದುವೆಗೆ ಸಿದ್ಧರಾದರು. ಬೆಳಗ್ಗೆ ಕಾನೂನುಬದ್ಧ ಮದುವೆ ನಡೆದು, ಗುಡಿಯಲ್ಲಿ ಇಬ್ಬರೂ ಹಾರ ಬದಲಾಯಿಸಿ, ತಾಳಿ ಕಟ್ಟಿ ಧರ್ಮಸಾಕ್ಷಿಯಾಗಿ ದಂಪತಿಗಳಾದರು. ಸಂಜೆ ನೆಂಟರಿಷ್ಟರು, ಗೆಳೆಯರನ್ನೆಲ್ಲ ಕೂಡಿಸಿ ಗ್ರಾಂಡ್‌ ಆರತಕ್ಷತೆ ನೀಡಲಾಯಿತು. ಯುವ ಜೋಡಿಯ ಗಟ್ಟಿ ನಿರ್ಧಾರದಿಂದಾಗಿ, ಆ ಮುದಿ ಜೋಡಿಗಳ ಆದರ್ಶ ಎಲ್ಲರೆದುರು ಹಾಗೇ ಉಳಿಯಿತು. ತಾವಂದುಕೊಂಡಂತೆ ಮಗ ಮನೆಗೆ ಸೂಕ್ತ ಸೊಸೆಯನ್ನೇ ತಂದ ಎಂದು ಅವರು ಸಂಭ್ರಮಿಸಿದರು!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ