ಶಿವಾಂಗಿ ವಯಸ್ಸಿನಲ್ಲಿ ಚಿಕ್ಕವರು. ಆದರೆ ಆಕೆ ಉತ್ಸಾಹ ಹಿಮಾಲಯದಷ್ಟೇ ಉನ್ನತವಾಗಿತ್ತು!

17 ವರ್ಷದ ಶಿವಾಂಗಿ ಮೇ 2018ರಲ್ಲಿ ಹಿಮಾಲಯ ಪರ್ವತ ಏರಿ ಧ್ವಜದೊಂದಿಗೆ ಖುಷಿಯ ನಗೆ ಬೀರಿದರು. ಹರಿಯಾಣದ ಈ ಯುವತಿ ನೇಪಾಳಿ ಭಾಗದಿಂದ ಹಿಮಾಲಯದ ತುದಿ ತಲುಪಿದ ಅತ್ಯಂತ ಕಿರಿಯ ವಯಸ್ಸಿನ ಪರ್ವತಾರೋಹಿ ಎನಿಸಿದರು. ಪ್ರಧಾನಿ ನರೇಂದ್ರ ಮೋದಿ ತಮ್ಮ `ಮನ್‌ ಕೀ ಬಾತ್‌’ ಕಾರ್ಯಕ್ರಮದಲ್ಲಿ ಶಿವಾಂಗಿಯ ಸಾಹಸವನ್ನು ಹೊಗಳಿದರು.

ಶಿವಾಂಗಿಯ ಸಾಹಸ ಇಷ್ಟಕ್ಕೆ ಮುಗಿಯುವುದಿಲ್ಲ. ಜುಲೈ 2018ರಲ್ಲಿ ಆಕೆ ದಕ್ಷಿಣ ಆಫ್ರಿಕಾದ ಅತಿ ಎತ್ತರದ ಶಿಖರ ಕಿಲಿಮಂಜರೊ (5,895 ಮೀ.) ಪರ್ವತವನ್ನು ಕೇವಲ 3 ದಿನಗಳಲ್ಲಿಯೇ ಏರಿದರು. ಆ ಬಳಿಕ ಸೆಪ್ಟೆಂಬರ್‌ 2018ರಲ್ಲಿ ಯೂರೋಪ್‌ ನ ಮೌಂಟ್‌ ಅಬ್ರೂಸ್‌ (5,642 ಮೀ.) ಏರಿದರು.

ದೆಹಲಿಯಿಂದ 170 ಕಿ.ಮೀ. ದೂರದಲ್ಲಿರುವ ಹರಿಯಾಣದ ಹಿಸ್ಸಾರ್‌ ಪಟ್ಟಣದಲ್ಲಿ ಶಿವಾಂಗಿಯ ಕುಟುಂಬ ವಾಸಿಸುತ್ತದೆ. ಅದಕ್ಕೂ ಮುಂಚೆ ಆ ಕುಟುಂಬ ಝಾನ್ಸಿಯಲ್ಲಿ ವಾಸಿಸುತ್ತಿತ್ತು. ಆದರೆ ಕ್ರೀಡಾಪಟುಗಳಿಗೆ ಅಲ್ಲಿ ಹೆಚ್ಚಿನ ಸೌಕರ್ಯಗಳು ಇಲ್ಲದ ಕಾರಣ ಅವರ ಕುಟುಂಬ ಹಿಸ್ಸಾರ್‌ ನಗರಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅನೇಕ ಯುವತಿಯರು ಕ್ರೀಡೆಯಲ್ಲಿ ಕೆರಿಯರ್‌ ರೂಪಿಸಿಕೊಳ್ಳುತ್ತಾರೆ. ಶಿವಾಂಗಿ ತರಬೇತಿ ಪಡೆಯುವ ಕೇಂದ್ರದಲ್ಲಿ 50 ಮಕ್ಕಳಿದ್ದು, ಅವರಲ್ಲಿ 35 ಹುಡುಗಿಯರಿದ್ದಾರೆ. ಈ ಪಟ್ಟಿಯಲ್ಲಿ 4 ಜನ ಹುಡುಗಿಯರು ರಾಷ್ಟ್ರಮಟ್ಟದ ಕ್ರೀಡಾಪಟುಗಳು.

ಹರಿಯಾಣ ಅಗ್ರಿಕಲ್ಚರ್‌ ವಿವಿಯ ಗಿರಿ ಸೆಂಟರ್‌ ನಲ್ಲಿ ಅಥ್ಲೀಟ್‌ ಗಳನ್ನು ಸಜ್ಜುಗೊಳಿಸಲಾಗುತ್ತದೆ. ಅಲ್ಲಿ ಸಿಂಥೆಟಿಕ್ ಕ್ರೀಡಾಂಗಣವಿದ್ದು, ಅದು ಓಟಗಾರರಿಗೆ ತುಂಬಾ ಅನುಕೂಲಕರ.

ಹಿಸ್ಸಾರ್‌ ನಲ್ಲಿ ಪರ್ವತಗಳಾಗಲಿ, ಹಿಮಚ್ಛಾದಿತ ಗಿರಿಶಿಖರಗಳಾಗಲಿ ಇಲ್ಲ. ಆದರೆ ಯಾರಿಗೆ ಕನಸು ಕಾಣುವ ಹವ್ಯಾಸ ಇರುತ್ತದೊ, ಅವರು ಅದನ್ನು ಈಡೇರಿಸಿಕೊಳ್ಳಲು ದಾರಿ ಹಾಗೂ ಉತ್ತಮ ವಾತಾವರಣವನ್ನು ತಾವೇ ಸ್ವತಃ ಸೃಷ್ಟಿಸಿಕೊಳ್ಳುತ್ತಾರೆ. ಕೇವಲ 4 ತಿಂಗಳಲ್ಲಿ 3 ಪರ್ವತಗಳನ್ನು ಏರಿದರು. 18 ವರ್ಷ ಆಗುವುದರೊಳಗೆ ಆಕೆ 7 ಪರ್ವತಗಳನ್ನು ಏರಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ.

ಶಿವಾಂಗಿಯ ಕುಟುಂಬದ ಎಲ್ಲರೂ ಆಕೆಗೆ ಪ್ರೋತ್ಸಾಹ ನೀಡುತ್ತಾರೆ. ಅಮ್ಮ ಆರತಿ ಪಾಠಕ್‌ ಅವರಂತೂ ತರಬೇತಿ ಅವಧಿ ಸೇರಿದಂತೆ ಎಲ್ಲೆಲ್ಲೂ ಜೊತೆ ಕೊಡುತ್ತಾರೆ.

“ಹಿಮಾಲಯ ಪರ್ವತ ಏರುವ ಅಭಿಲಾಷೆ ಹೇಗೆ ಮೂಡಿತು?” ಎಂಬ ಪ್ರಶ್ನೆಗೆ ಅವರು ನಗುತ್ತಲೇ ಹೀಗೆ ಹೇಳುತ್ತಾರೆ, “ನನಗೆ ಬಾಲ್ಯದಿಂದಲೇ ಏನನ್ನಾದರೂ ಸಾಧಿಸಬೇಕೆಂಬ ಅಭಿಲಾಷೆ ಇತ್ತು. ಅದೊಂದು ದಿನ ಗೂಗಲ್ ನಲ್ಲಿ ನನ್ನ ಹೆಸರು ಟೈಪ್‌ ಮಾಡಿ ಸರ್ಚ್‌ ಗೆ ಹಾಕಿದೆ. ಅದಕ್ಕೆ ಪ್ರತಿಯಾಗಿ ಏನೂ ದೊರಕಲಿಲ್ಲ. ಆಗ ನನ್ನ ಅಣ್ಣ ಅದಕ್ಕಾಗಿ ಏನನ್ನಾದರೂ ಸಾಧಿಸಿ ತೋರಿಸಬೇಕು. ಆಗಲೇ ನೀನು ಯಾರು, ನಿನ್ನ ಸಾಧನೆ ಇಂಥಿಂಥದು ಎಂದು ಉಲ್ಲೇಖ ದೊರೆಯುತ್ತದೆ,” ಎಂದರು.

“ಕೆಲವರು ಪರ್ವತ ಏರುತ್ತಾರೆ. ಮತ್ತೆ ಕೆಲವರು ಅಪರೂಪದ ಸಾಧನೆ ಮಾಡುತ್ತಾರೆ. ಅಂಥವರು ಬಹುಬೇಗ ಗುರುತು ಸಿಗುತ್ತಾರೆ ಎಂದು ಹೇಳಿದ. ಆಗಲೇ ನನಗೆ ಪರ್ವತ ಹತ್ತುವ ಆಸಕ್ತಿ ಮೂಡಿತು. ಅದೊಂದು ದಿನ ನಾನು ಒಂದು ಸೆಮಿನಾರ್ ಅಟೆಂಡ್‌ ಮಾಡಿದೆ. ಅಲ್ಲಿ ಅರುಣಿಮಾ ಸಿನ್ಹಾರವರ ಸಾಹಸ ಕುರಿತ ವಿಡಿಯೋ ಒಂದನ್ನು ತೋರಿಸಲಾಗುತ್ತಿತ್ತು. 22 ನಿಮಿಷಗಳ ಆ ವಿಡಿಯೋ ನೋಡಿ ನಾನು ಮೌಂಟ್‌ ಎವರೆಸ್ಟ್ ಹತ್ತಲೇಬೇಕು ಎಂದು ಗಟ್ಟಿ ನಿರ್ಧಾರ ಮಾಡಿದೆ. ಆಗ ನಾನು 11ನೇ ತರಗತಿಯಲ್ಲಿ ಓದುತ್ತಿದ್ದೆ.

AA-DSC-7085

“ಒಂದು ದಿನ ಅಪ್ಪ, ನಿನ್ನಲ್ಲಿ ಧೈರ್ಯ ಇದೆಯೋ ಇಲ್ಲವೋ ಎನ್ನುವುದನ್ನು ಕಂಡುಕೊಳ್ಳಬೇಕು. ಬಾ ನನ್ನ ಜೊತೆಗೆ, ಎಂದರು. ಆಗ ಅಪ್ಪ ಹೃಷಿಕೇಶ್‌ ನಲ್ಲಿದ್ದರು. ಅವರು ನನಗೆ 83 ಮೀ. ಎತ್ತರದಿಂದ ಬಂಗಲೇ ಜಂಪಿಂಗ್‌ ಮಾಡಲು ಹೇಳಿದರು. ನಾನು ಅದನ್ನು ಸವಾಲು ಎಂಬಂತೆ ಸ್ವೀಕರಿಸಿ ಜಿಗಿದು ತೋರಿಸಿದೆ. ಆ ಬಳಿಕ ಅವರು ನನ್ನ ತರಬೇತಿಗೆ ವ್ಯವಸ್ಥೆ ಮಾಡಿದರು.

“2016ರಲ್ಲಿ ನನ್ನ ಫಿಟ್‌ ನೆಸ್‌ ಟ್ರೇನಿಂಗ್‌ ಶುರುವಾಗಿತ್ತು. ಆಗ ನನ್ನ ವಯಸ್ಸು ಕೇವಲ 14, ತೂಕ 61 ಕಿಲೋ ಇತ್ತು. ಹೀಗಾಗಿ ನನ್ನ ಫಿಟ್‌ ನೆಸ್‌ ಬಗ್ಗೆ ಗಮನಕೊಡುವುದು ಅತ್ಯವಶ್ಯಕವಾಗಿತ್ತು. ರಿಂಕು ಪಾನೂ ಅವರ ಶಿಷ್ಯೆಯಾಗಿ ನಾನು ಮುಂಜಾನೆ ಸಂಜೆ ತಲಾ ಎರಡೂವರೆ ಗಂಟೆ ಬೆವರು ಹರಿಸಲು ಶುರು ಮಾಡಿದೆ. 1 ಗಂಟೆ ಓಡುವುದು, 5000 ಸ್ಕಿಪಿಂಗ್‌, ವೇಟ್‌ ಲಿಫ್ಟಿಂಗ್‌, ಧ್ಯಾನ ಹೀಗೆ ಫಿಟ್‌ ನೆಸ್‌ ವರ್ಕ್‌ ಔಟ್‌ ಶುರು ಮಾಡಿದೆ.

“ಏಪ್ರಿಲ್ ‌ರಲ್ಲಿ ಜಮ್ಮುವಿನ ಪಹಲ್ ಗಾಂವ್ ನಲ್ಲಿ 1 ತಿಂಗಳ ಬೇಸಿಕ್‌ ಮೌಂಟೇನರಿಂಗ್‌ ಕೋರ್ಸ್‌ ಗೆ ಸೇರಿಕೊಂಡೆ. ಅದಾದ ಬಳಿಕ ಅಡ್ವಾನ್ಸ್ ಕೋರ್ಸ್‌ ಮಾಡಿದೆ. ಇದರಲ್ಲಿ ಎಲ್ಲವನ್ನೂ ಪ್ರ್ಯಾಕ್ಟಿಕಲ್ ಆಗಿ ಕಲಿಸಲಾಗುತ್ತದೆ. ಆ ಬಳಿಕ ಡಾರ್ಜಿಲಿಂಗ್ ನಲ್ಲಿ ಡಬಲ್ ಅಡ್ವಾನ್ಸ್ಡ್ ಕೋರ್ಸ್‌ ಕೂಡ ಮಾಡಿದೆ. ಅದಾದ ನಂತರ ಸೆಲೆನ್‌ ಸಮಿಟ್ಸ್ ಟ್ರ್ಯಾಕ್ಸ್ ಏಜೆನ್ಸಿ ಮೂಲಕ ಮೌಂಟ್‌ ಎವರೆಸ್ಟ್ ಗೆ ಹೋದೆವು.

“41 ದಿನಗಳ ಎವರೆಸ್ಟ್ ಪರ್ವತಾರೋಹಣ ಸಾಕಷ್ಟು ಚಾಲೆಂಜಿಂಗ್‌ ಆಗಿತ್ತು. ಇದರಲ್ಲಿ 14 ದಿನ ಬೇಸ್‌ ಕ್ಯಾಂಪ್‌ ತಲುಪಲು ಬೇಕಾದವು. ಅದರಲ್ಲಿ ಒಂದು ಕ್ಯಾಂಪ್‌ ಬಹಳ ಅಪಾಯಕಾರಿ ಆಗಿರುತ್ತದೆ. ಅಲ್ಲಿ ಹತ್ತುವಾಗ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಿಮಗಡ್ಡೆಗಳು ಕರಗಿ, ನಾವು ಕೆಳಗೆ ಕುಸಿಯುವ ಅಪಾಯ ಇರುತ್ತದೆ. 5 ಕಿಲೋ ತೂಕ ಇರುವ ಶೂ.ಗಳ ಹೊರತಾಗಿ ಬೆನ್ನಿಗೆ ಅಂಟಿಕೊಂಡ ಬ್ಯಾಗ್‌ ನಲ್ಲಿ ನೀರಿನ ಬಾಟಲ್, ಆಹಾರ ಸಾಮಗ್ರಿ, 2 ಸಿಲಿಂಡರ್‌ ಗಳು ಇರುತ್ತವೆ. ಇಂತಹ ಸ್ಥಿತಿಯಲ್ಲಿ ಭಾರ ಹೊತ್ತುಕೊಂಡು ಮೇಲೇರುವುದು ಸವಾಲಿನ ಕೆಲಸವೇ ಸರಿ.”

ಅಪಾಯಕಾರಿ ಪ್ರವಾಸ

ಶಿವಾಂಗಿ ನಾಲ್ಕು ಜನರ ತಂಡದಲ್ಲಿದ್ದರು. ಬೇಸ್‌ ಕ್ಯಾಂಪ್‌ ನ ಬಳಿಕ 4 ಕ್ಯಾಂಪ್‌ ಗಳಿರುತ್ತವೆ. ಒಂದು ಕ್ಯಾಂಪ್‌ ನಿಂದ ಮತ್ತೊಂದು ಕ್ಯಾಂಪ್‌ ಗೆ ತಲುಪಲು 12-24 ಗಂಟೆಯಷ್ಟು ಸಮಯ ತಗುಲುತ್ತದೆ. ಅಲ್ಲಿ ತಲುಪಿದ ಬಳಿಕ ಆಹಾರ ತಯಾರಿಸಿಕೊಳ್ಳಬೇಕಿರುತ್ತದೆ. ಅಷ್ಟೊಂದು ಗದಗುಟ್ಟುವ ಚಳಿಯಲ್ಲಿ ಆಹಾರ ತಯಾರಿಸಿಕೊಂಡು ತಿನ್ನುವುದು ಸುಲಭದ ಮಾತಲ್ಲ. ಹಿಮಪಾತ ಆಗುವ ಸಾಧ್ಯತೆ, ಪರ್ವತಾರೋಹಿಗಳು ಗಾಯಗೊಳ್ಳುವ ಸಾಧ್ಯತೆಯೂ ಇರುತ್ತದೆ.

ಶಿವಾಂಗಿ ಹೇಳುತ್ತಾರೆ, “3ನೇ ಕ್ಯಾಂಪ್‌ ನಲ್ಲಿ ನಾವು ಮಂಜುಗಡ್ಡೆ ಅಗೆದು ನೀರು ತೆಗೆಯಲು ಪ್ರಯತ್ನ ನಡೆಸಿದ್ದೆವು. ಆಗ ಒಳಭಾಗದಲ್ಲಿ ಕಪ್ಪು ಬಣ್ಣದ ಒಂದು ಕೈ ಕಂಡುಬಂತು. ಉಗುರುಗಳು ಅಡ್ಡಾದಿಡ್ಡಿಯಾಗಿದ್ದವು. ಅದನ್ನು ನೋಡಿ ನನಗೆ ಬಹಳ ಭಯವಾಗಿತ್ತು.”

ಅಗಣಿತ ಕಷ್ಟಗಳು

AA-DSC-7047

ಮೇಲೆ ಹತ್ತುವಾಗ ಯಾವಾಗ ಏನಾಗುತ್ತೊ ಹೇಳಲು ಆಗದು. ಆಗ ತಕ್ಷಣವೇ ನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತದೆ.

ಹುಡುಗಿಯರಿಗೆ ಸಮಸ್ಯೆ : ಅಷ್ಟೊಂದು ಕಡಿಮೆ ತಾಪಮಾನದಲ್ಲಿ ಹುಡುಗಿಯರಿಗೆ ಸಾಕಷ್ಟು ಸಮಸ್ಯೆಯಾಗುತ್ತದೆ. ಕೆಲವರಿಗೆ ಮುಟ್ಟು ಬೇಗ ಬರುತ್ತದಾದರೆ, ಕೆಲವರಿಗೆ ಬರುವುದೇ ಇಲ್ಲ. 41 ದಿನಗಳ ಪರ್ವತಯಾನದಲ್ಲಿ ಎರಡು ಸಲ ಈ ಸಮಸ್ಯೆಯನ್ನು ಎದುರಿಸಬೇಕಾಗಿ ಬಂತು ಎಂದು ಶಿವಾಂಗಿ ಹೇಳಿದರು.

ಶಿವಾಗಿ ಪಕ್ಕಾ ಸಸ್ಯಾಹಾರಿ. ಹೀಗಾಗಿ ಅವರು ಹೆಚ್ಚಿನ ಸಮಸ್ಯೆ ಎದುರಿಸಬೇಕಾಯಿತು. ಕಡಿಮೆ ತಾಪಮಾನದಲ್ಲಿ ಮೇಲೆ ಹತ್ತುವಾಗ ಸಾಕಷ್ಟು ಎನರ್ಜಿ ಬೇಕಾಗುತ್ತದೆ. ಆ ಎನರ್ಜಿ ಸಿಗುವುದು ಪ್ರೋಟೀನ್‌ ನಿಂದ. ಮಾಂಸಾಹಾರಿಗಳಿಗೆ ಅದು ಸುಲಭವಾಗಿ ಲಭ್ಯವಾಗುತ್ತದೆ. ಶಿವಾಂಗಿಗೆ ಈ ಒಂದು ಆಪ್ಶನ್‌ ಕೂಡ ಇರಲಿಲ್ಲ. ಹಸಿ ತರಕಾರಿಗೆ ಉಪ್ಪು ಖಾರ ಸವರಿ ಅನ್ನದ ಜೊತೆ ಸೇವಿಸಿ ಸಸ್ಯಾಹಾರಿಗಳು ತಮ್ಮ ಪ್ರೋಟೀನ್‌ ನ ಅಗತ್ಯ ನೀಗಿಸಿಕೊಳ್ಳುತ್ತಾರೆ.

ಪರ್ವತಾರೋಹಣದ ಸಮಯದಲ್ಲಿ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬ ಪ್ರಶ್ನೆಗೆ ಶಿವಾಂಗಿ ಹೀಗೆ ಹೇಳುತ್ತಾರೆ, “ಕೆಲವು ವಿಶೇಷ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದೆ ಸಾಗಬೇಕಾಗುತ್ತದೆ. ತಂಡದಲ್ಲಿ ಎಷ್ಟು ಜನರಿರುತ್ತಾರೆ? ಅವರೆಲ್ಲರ ಬಗ್ಗೆ ಗಮನ ಕೊಡುವುದು ಅತ್ಯಗತ್ಯ. ನಾವು ಒಟ್ಟು 4 ಜನರಿದ್ದೆ. ಪರಸ್ಪರರ ಬಗ್ಗೆ ಕಾಳಜಿ ವಹಿಸುತ್ತ ಮುಂದೆ ಸಾಗುತ್ತಿದ್ದೆವು. ಪ್ರಯಾಣದುದ್ದಕ್ಕೂ ನೀರಿನ ಅವಶ್ಯಕತೆ ಇರುತ್ತದೆ. ಹೀಗಾಗಿ ನೀರು ಖಾಲಿಯಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.

“ಮತ್ತೊಂದು ಮಹತ್ವದ ಸಂಗತಿಯೆಂದರೆ ನಾವು ಸತತವಾಗಿ ಬಾಯಿ ಚಲನೆಯಲ್ಲಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಪ್ರತಿ ಗಂಟೆಗೊಮ್ಮೆ ಏನಾದರೂ ತಿನ್ನುತ್ತಾ ಇರಬೇಕು. ಎಲ್ಲರ ಜೊತೆಗೆ ಮಾತನಾಡುತ್ತ ಇಲ್ಲವೇ ಹಾಡುತ್ತ ಬಾಯಿಗೆ ಕೆಲಸ ಕೊಡುತ್ತಿರಬೇಕು. ಹಾಗೆ ಮಾಡದಿದ್ದರೆ ಚಳಿಯಿಂದ ಹಲ್ಲುಗಳು ಪರಸ್ಪರ ಅಂಟಿಕೊಂಡುಬಿಡುತ್ತವೆ. ಖುಷಿಯಿಂದ ಇರುವುದು, ನಮಗೆ ನಾವೇ ಮಾತಾಡಿಕೊಳ್ಳುವುದು ಪ್ರೋತ್ಸಾಹ ಕೊಟ್ಟುಕೊಳ್ಳುವುದು ಅತ್ಯಗತ್ಯ.

“ಶೆರ್ಪಾಗಳೊಂದಿಗೆ ಅನ್ಯೋನತೆಯಿಂದ ಇರುವುದು ಅತ್ಯಗತ್ಯ. ಅವರಿಗೆ ಪರ್ವತಾರೋಹಣದ ಬಗ್ಗೆ ಬಹಳಷ್ಟು ವಿಷಯಗಳು ಗೊತ್ತಿರುತ್ತವೆ. ಎಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಅವರು ಹೇಳಿಕೊಡುತ್ತಾರೆ. ಅವರು ನಮ್ಮ ಸಲಕರಣೆಗಳನ್ನು ಎತ್ತಿಕೊಂಡು ಹೋಗಲು ಕೂಡ ನೆರವಾಗುತ್ತಾರೆ.”

ಪರಿಶ್ರಮಕ್ಕೆ ದಕ್ಕದ ಪುರಸ್ಕಾರ

AA-DSC-6886

“ನಮ್ಮ ಪರಿಶ್ರಮಕ್ಕೆ ತಕ್ಕ ಪುರಸ್ಕಾರ ಮಾತ್ರ ದೊರೆಯುತ್ತಿಲ್ಲ. ಇದೊಂದು ಅತ್ಯಂತ ದುಬಾರಿ ಗೇಮ್. ಸರ್ಕಾರ ಅಥ್ಲೀಟ್‌ ಗಳಿಗೆ ಮಹತ್ವ ಕೊಡುವ ಹಾಗೆ ಪರ್ವತಾರೋಹಿಗಳಿಗೆ ಯಾವುದೇ ಮಹತ್ವ ಕೊಡುತ್ತಿಲ್ಲ. ಮೌಂಟೇನರಿಂಗ್‌ ನ್ನು  ಕ್ರೀಡೆಯಲ್ಲಿ ಸೇರ್ಪಡೆ ಮಾಡುತ್ತಿಲ್ಲ,” ಎಂದು ಶಿವಾಂಗಿ ಖೇದದಿಂದ ಹೇಳುತ್ತಾರೆ.

ಎವರೆಸ್ಟ್ ಶಿಖರ ಹತ್ತಲು 30-35 ಲಕ್ಷ ರೂ. ಖರ್ಚು ಬರುತ್ತದೆ. ಪ್ರಾಯೋಜಕತ್ವ ಕೊಡುವುದಾಗಿ ಹೇಳಿದರು ಕೊನೆ ಗಳಿಗೆಯಲ್ಲಿ  ಕೈಕೊಟ್ಟರು ಹೀಗಾಗಿ ತಮ್ಮ ಮನೆಯನ್ನೇ ಬ್ಯಾಂಕಿಗೆ ಅಡವಿಟ್ಟು ಸಾಲ ಪಡೆದರು. ಈಗ ಅದರ ಸಾಲವನ್ನು ಕಂತಿನ ರೂಪದಲ್ಲಿ ಕಟ್ಟುತ್ತಿದ್ದಾರೆ.

ಎವರೆಸ್ಟ್ ಶಿಖರವನ್ನು ಹತ್ತಿ ಬಂದ ನಂತರ `ಕಸ್ತೂರಿ ಮೆಮೊರಿಯಲ್ ಟ್ರಸ್ಟ್’ ಹಾಗೂ `ಅಭಾವಿಪ’ ಶಿವಾಂಗಿಯನ್ನು ದತ್ತು ಪಡೆದು ಅವರ ಖರ್ಚು ವೆಚ್ಚವನ್ನು ನೋಡಿಕೊಳ್ಳುತ್ತಿವೆ.

ಗುರಿಗೆ ಸಿದ್ಧತೆ

ಶಿವಾಂಗಿಯ ಕೋಚ್‌ ರಿಂಕೂ ಪಾನೂ ಹೀಗೆ ಹೇಳುತ್ತಾರೆ, “ನನ್ನ ಕಡೆ ಬಂದ ನಂತರ ಆಕೆ ಡಯೆಟ್‌ ಬಗ್ಗೆ ಹೆಚ್ಚಿನ ಗಮನ ಕೊಟ್ಟರು. ಮೊಳಕೆಕಾಳು, ಬಾದಾಮಿ, ಒಣದ್ರಾಕ್ಷಿ, ಪನೀರ್‌, ಅಣಬೆ ಮುಂತಾದವನ್ನು ತಿನ್ನುವ ಅಭ್ಯಾಸ ಮಾಡಿಕೊಂಡರು. ಫಾಸ್ಟ್ ಫುಡ್‌ ಮುಂತಾದವನ್ನು ನಿಲ್ಲಿಸಿದರು. ಆಕೆ 2017ರಲ್ಲಿ ಇಲ್ಲಿಗೆ ಬಂದಾಗ ಒಂದು ರೌಂಡ್‌ ಓಡುತ್ತಿದ್ದಂತೆ ಸುಸ್ತಾಗಿ ಬರುತ್ತಿದ್ದರು. ಪರ್ವತಾರೋಹಿ ಆಗಲು ಸಹನಶಕ್ತಿ ಅತ್ಯಂತ ಅಗತ್ಯ. ಅದರ ತರಬೇತಿ ಜೊತೆಗೆ ತೂಕ ಎತ್ತುವ ತರಬೇತಿ ಕೂಡ ನೀಡಿದೆ.

“ಎಷ್ಟೋ ಸಲ ಮೇಲೆ ಹತ್ತುತ್ತಾ ಹೋಗುತ್ತಿದ್ದಂತೆ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಆಗ ವೇಗವಾಗಿ ಮುಂದೆ ಸಾಗಬೇಕಾಗುತ್ತದೆ. ಪರ್ವತಾರೋಹಿಗಳಿಗೆ ಫ್ಲೆಕ್ಸಿಬಿಲಿಟಿಯ ತರಬೇತಿ ಅಂದರೆ ಅತ್ಯಂತ ಕಡಿಮೆ ಜಾಗದಲ್ಲೂ ನುಸುಳಿಕೊಂಡು ಸಾಗಬೇಕಾಗುತ್ತದೆ. ಅಂತಹ ತರಬೇತಿ ನೀಡಲಾಯಿತು.”

ಪ್ರತಿನಿಧಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ