ಚಳಿಗಾಲ ರೋಮಾನ್ಸ್ ನ ಕಾಲವಾಗಿರುತ್ತದೆ. ಈ ಕಾಲದಲ್ಲಿ ಸಮಾಗಮದ ಭಾವನೆ ಉತ್ತುಂಗದಲ್ಲಿರುತ್ತದೆ. ಬಾಹ್ಯ ವಾತಾವರಣದಲ್ಲಿ ತಾಪಮಾನ ಕುಗ್ಗುತ್ತಿದ್ದಂತೆಯೇ ದೇಹದೊಳಗಿನ ತಾಪಮಾನ ಏರುಗತಿಯಲ್ಲಿರುತ್ತದೆ. ತನ್ನ ಪ್ರೀತಿಯ ಸಂಗಾತಿ ಜೊತೆ ಬೆರೆಯುವ ಇಚ್ಛೆ ತೀವ್ರಗೊಳ್ಳುತ್ತದೆ. ಗದಗುಟ್ಟುವ ಚಳಿಯಲ್ಲಿ ಪ್ರತಿಯೊಬ್ಬ ದಂಪತಿಗಳು ಪರಸ್ಪರರ ಬಾಹುಗಳಲ್ಲಿ ಬಿಸಿಯ ಅನುಭವ ಪಡೆಯಲು ತವಕಿಸುತ್ತಾರೆ. ಸಮಾಗಮ ಪ್ರಕ್ರಿಯೆ ತನ್ನದೇ ಆದ ವಿಶಿಷ್ಟ ಅನುಭವವಾಗಿದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ವಿಶಿಷ್ಟ ಕಲ್ಪನೆಯಲ್ಲಿ ರೊಮಾನ್ಸ್ ನಡೆಸುತ್ತಾರೆ. ಕೆಲವರಿಗೆ ತಮ್ಮ ಬೆಡ್‌ ರೂಮ್ ನಲ್ಲಿ ಹೆಚ್ಚು ಆನಂದ ದೊರೆತರೆ, ಮತ್ತೆ ಕೆಲವರಿಗೆ ನಿಸರ್ಗದ ನಡುವೆ ಹೋಗಬೇಕೆನಿಸುತ್ತದೆ. ಇನ್ನು ಕೆಲವರು ಬಿಸಿ ನೀರಿನ ಬಾಥ್‌ ಟಬ್‌ ನಲ್ಲಿ ಆನಂದ ಹೊಂದಲು ಇಚ್ಛಿಸುತ್ತಾರೆ.

ಚಳಿಗಾಲ ಕೇವಲ ಮನುಷ್ಯರಲ್ಲಷ್ಟೇ ಅಲ್ಲ, ಪ್ರಾಣಿಪಕ್ಷಿಗಳಲ್ಲೂ ಗಂಡು ಹೆಣ್ಣಿನ ನಡುವೆ ಒಡನಾಟ ಹೆಚ್ಚಿಸುತ್ತದೆ. ತಜ್ಞರು ಕೂಡ ಚಳಿಗಾಲವನ್ನು ಸಮಾಗಮಕ್ಕಾಗಿ ಹೇಳಿ ಮಾಡಿಸಿದ ಸುಮಧುರ ಕಾಲ ಎಂದು ಹೇಳುತ್ತಾರೆ. ಈ ಹವಾಮಾನದಲ್ಲಿ ಸಮಾಗಮ ಚಟುವಟಿಕೆಯಿಂದ ಅನೇಕ ರೋಗಗಳಿಂದ ಮುಕ್ತಿ ದೊರಕುತ್ತದೆ. ಅಷ್ಟೇ ಅಲ್ಲ, ದೈಹಿಕ ಸೌಂದರ್ಯ ಕೂಡ ಹೆಚ್ಚುತ್ತದೆ. ಅಂದಹಾಗೆ ಈ ಕಾಲದಲ್ಲಿ ಪುರುಷರು ಸಾಕಷ್ಟು ಮೂಡ್‌ ನಲ್ಲಿರುತ್ತಾರೆ. ಹೊರಗಡೆ ಚಳಿಗಾಳಿಯಿಂದ ಬಂದು ಸಮಾಗಮ ನಡೆಸುವುದು ಕೆಟ್ಟ ವಿಚಾರವೇನೂ ಅಲ್ಲ. ಹೊರಗಡೆಯ ಚಳಿಗಾಳಿಯನ್ನು ಎದುರಿಸಿ ಬಂದ ಪುರುಷನಿಗೆ ಲೈಂಗಿಕೇಚ್ಛೆ ಹೆಚ್ಚುತ್ತದೆ. ಹೀಗಾಗಿ ಚಳಿಗಾಲದಲ್ಲಿ ಪುರುಷರು ಸಾಕಷ್ಟು ರೊಮ್ಯಾಂಟಿಕ್‌ ಮೂಡ್‌ ನಲ್ಲಿರುವಂತೆ ಕಂಡುಬರುತ್ತಾರೆ. ಇಂಥ ಸ್ಥಿತಿಯಲ್ಲಿ ನೀವು ಈ ಚಳಿಗಾಲವನ್ನು ಸುಮಧುರವಾಗಿಸಿಕೊಳ್ಳಲು ಸ್ವತಃ ನಿಮ್ಮಲ್ಲಿ  ಹಾಗೂ ಬೆಡ್‌ ರೂಮಿನಲ್ಲಿ ಅಷ್ಟಿಷ್ಟು ಬದಲಾವಣೆ ಮಾಡಿಕೊಳ್ಳುವುದು ಅತ್ಯವಶ್ಯ. ಅದಕ್ಕಾಗಿ ಕೆಲವು ಕಿವಿಮಾತುಗಳು ಇಲ್ಲಿವೆ :

ಬಿಸಿ ನೀರಿನ ಆನಂದ

ಮಲಗುವ ಮುನ್ನ ಬಾಥ್‌ ಟಬ್‌ ನಲ್ಲಿ ಸಾಧಾರಣ ಬೆಚ್ಚಗಿನ ನೀರಿನಲ್ಲಿ 3-4 ಹನಿ ಯೂಡಿಕ್ಲೋರಿನ್‌, ಶ್ರೀಗಂಧ ಅಥವಾ ರೋಸ್ ವಾಟರ್‌ ಮಿಶ್ರಣ ಮಾಡಿಕೊಂಡು ಗಂಡ ಹೆಂಡತಿ ಇಬ್ಬರೂ ಜೊತೆ ಜೊತೆಗೆ ಸ್ನಾನದ ಆನಂದ ಪಡೆಯಬೇಕು. ಬೇಕೆಂದರೆ ನೀವು ಬೆಡ್‌ ರೂಮಿನಲ್ಲಿ ಸುವಾಸನೆ ಬೀರುವ ಕ್ಯಾಂಡಲ್ ಕೂಡ ಹಚ್ಚಬಹುದು. ಇದು ನಿಮ್ಮ ಸಂಗಾತಿಯಲ್ಲಿ ಉತ್ಕಟೇಚ್ಛೆಯನ್ನು ಹುಟ್ಟುಹಾಕುತ್ತದೆ. ಪ್ರೀತಿಯ ಈ ಹೊಸ ವಿಧಾನ ನಿಮ್ಮ ಸಂಬಂಧದಲ್ಲಿ ಹೊಸ ಹುರುಪು ತುಂಬುತ್ತದೆ. ಬಿಸಿ ನೀರಿನ ಸ್ನಾನದಿಂದ ದೇಹವಂತೂ ತಾಜಾತನದ ಅನುಭವ ಪಡೆದುಕೊಳ್ಳುತ್ತದೆ. ಜೊತೆಗೆ ದೇಹದ ರಕ್ತ ಸಂಚಾರ ವೇಗ ಪಡೆದುಕೊಳ್ಳುತ್ತದೆ. ಬಿಸಿನೀರಿನ ಟಬ್‌ ನಲ್ಲಿ ಸಂಗಾತಿಯ ಬಾಹುಗಳಲ್ಲಿ ಬಂಧಿಯಾಗುವುದು ಸಮಾಗಮಕ್ಕೆ ಉತ್ತಮ ಮುನ್ನುಡಿ ಬರೆಯುತ್ತದೆ.

ಫರ್ ಮೃದು ಸ್ಪರ್ಶ

ಹಳೆಯ ನೈಟಿಗೆ ಗುಡ್‌ ಬೈ ಹೇಳಿ ಈ ಚಳಿಗಾಲದಲ್ಲಿ ಮೃದು ಫರ್‌ ನ ನೈಟಿ ಅಥವಾ ಗೌನ್‌ ಧರಿಸಿ. ಇದು ನಿಮ್ಮ ಬಯಕೆಯನ್ನು ಇನ್ನಷ್ಟು ಹೆಚ್ಚಿಸುತ್ತದಲ್ಲದೆ, ಸಂಗಾತಿಯ ಇಚ್ಛೆಯನ್ನು ಬಲಗೊಳಿಸುತ್ತದೆ. ಅದರ ಸ್ಪರ್ಶ ಸಂಗಾತಿಗೆ ಉತ್ತೇಜನ ಭರಿಸುತ್ತದೆ.

ಕ್ಯಾಂಪ್‌ ಫೈರ್‌ ನ ಆನಂದ ಚಳಿಗಾಲದಲ್ಲಿ ಬಹಳಷ್ಟು ದಂಪತಿಗಳು ಹಿಮಪಾತದ ಮಜ ಪಡೆಯಲು ಗಿರಿ ಪ್ರದೇಶಕ್ಕೆ ಹೋಗಲು ಅಪೇಕ್ಷಿಸುತ್ತಾರೆ. ಇದರ ಹೊರತಾಗಿ ಬಾಹ್ಯ ವಾತಾವರಣದಲ್ಲಿ ಸಂಗಾತಿಯ ಜೊತೆ ಬೆಂಕಿಯ ಮುಂದೆ ಕುಳಿತು ದೇಹವನ್ನು ಬಿಸಿ ಮಾಡಲು ಇಚ್ಛಿಸುತ್ತಾರೆ.

ಪರ್ಫ್ಯೂಮ್ ಮಹಿಮೆ

ಚಳಿಗಾಲದ ದಿನಗಳಲ್ಲಿ ಪರ್ಫ್ಯೂಮ್ ನಿಮ್ಮ ರೊಮಾನ್ಸ್ ದಾರಿಯನ್ನು ಸುಗಮಗೊಳಿಸುತ್ತದೆ. ಬೇಸಿಗೆಯ ದಿನಗಳಲ್ಲಿ ಪ್ರತ್ಯಕ್ಷವಾಗುವ ಬೆವರಿನ ದುರ್ವಾಸನೆ ಈಗ ಮಾಯವಾಗಿ ಬಿಟ್ಟಿರುತ್ತದೆ. ಇಂತಹ ಸ್ಥಿತಿಯಲ್ಲಿ ಪರ್ಫ್ಯೂಮ್ ಕೂಡ ಸಂಗಾತಿಯನ್ನು ಉತ್ತೇಜನ ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಂದಬೆಳಕಿನ ಆನಂದ

ತಜ್ಞರ ಪ್ರಕಾರ ಕೋಣೆಯಲ್ಲಿ ಮಂದ ಬೆಳಕು ದಂಪತಿಗಳನ್ನು ಮತ್ತಷ್ಟು ಉತ್ತೇಜಿಸುತ್ತದೆ. ಮಂದ ಬೆಳಕು ಸುಗಂಧ ಬೀರುವ ಮೇಣದ ಬತ್ತಿಗಳು ಉರಿಯುತ್ತಿದ್ದರೆ ನಿಮ್ಮ ಸಂಗಾತಿಯ ಕಾತರತೆ ಹೆಚ್ಚುತ್ತಿರುತ್ತದೆ.

ಸಾಕ್ಸ್ ಧರಿಸಿ

ಸಂಶೋಧನೆಯ ಪ್ರಕಾರ, ನೀವು ಸಾಕ್ಸ್ ಧರಿಸಿ ಸಮಾಗಮ ಪ್ರಕ್ರಿಯೆ ನಡೆಸಿದರೆ, ಅದನ್ನು ಹೆಚ್ಚು ಎಂಜಾಯ್‌ ಮಾಡಬಹುದು. ಅಂದಹಾಗೆ, ಸಾಕ್ಸ್ ಧರಿಸಿದರೆ ನಿಮ್ಮ ಕಾಲುಗಳು ಬೆಚ್ಚಗಿರುತ್ತವೆ. ಕಾಲುಗಳಲ್ಲಿ ರಕ್ತ ಸಂಚಾರ ಹೆಚ್ಚುವುದರಿಂದ ಇಡೀ ದೇಹದಲ್ಲೂ ರಕ್ತ ಸಂಚಾರ ಹೆಚ್ಚುತ್ತದೆ. ದೇಹದಲ್ಲಿ ಬಿಸಿ ಹೆಚ್ಚುವುದರಿಂದ ನಿಮ್ಮ ಸೆಕ್ಸ್ ಮೂಡ್‌ ಮತ್ತಷ್ಟು ಉತ್ತಮಗೊಳ್ಳುತ್ತದೆ. ನೀವು ಹೆಚ್ಚು ಉತ್ತೇಜಿತರಾಗಿರುವುದು ನಿಮ್ಮ ಅನುಭಕ್ಕೆ ಬರುತ್ತದೆ. ಹೀಗಾಗಿ ಈ ಚಳಿಗಾಲದಲ್ಲಿ ಬಗೆಬಗೆಯ ಬಣ್ಣದ ಮೃದು, ಬೆಚ್ಚಗಿನ ಅನುಭವ ನೀಡುವ ಸಾಕ್ಸ್ ಖರೀದಿಸಿ.

ಮದ್ಯದಿಂದ ದೂರವಿರಿ

ಚಳಿಗಾಲದಲ್ಲಿ ಮದ್ಯ ಸೇವನೆಯಿಂದ ದೇಹದಲ್ಲಿ ಬಿಸಿ ಉಕ್ಕಿ ಲೈಂಗಿಕ ಬಯಕೆ ಹೆಚ್ಚುತ್ತದೆ ಎಂದು ಅನೇಕರು ಭಾವಿಸಿರುತ್ತಾರೆ. ಆದರೆ ಇದು ಪರಿಪೂರ್ಣ ತಪ್ಪು ಕಲ್ಪನೆ. ಮದ್ಯ ಸೇವನೆಯಿಂದ ನರವ್ಯೂಹದ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತದೆ. ಮೆದುಳಿನಿಂದ ನಿದ್ದೆಯ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಲೈಂಗಿಕ ಬಯಕೆ ಮಾಯವಾಗಿ ಹೋಗುತ್ತದೆ. ಹೀಗಾಗಿ ಸಮಾಗಮದ ಸಮಯದಲ್ಲಿ ಮದ್ಯದಿಂದ ದೂರ ಇರಿ. ದೇಹದಲ್ಲಿ ಬಿಸಿ ಹೆಚ್ಚಲು ಚುಂಬನ, ಆಲಿಂಗನಗಳೇ ಸಾಕು.

ಡ್ಯಾನ್ಸ್ ಮತ್ತು ವ್ಯಾಯಾಮ

ಚಳಿಗಾಲದಲ್ಲಿ ಸಂಗಾತಿಯ ಜೊತೆ ಡ್ಯಾನ್ಸ್ ಅಥವಾ ವ್ಯಾಯಾಮ ಮಾಡುವುದು ಕೂಡ ನಿಮ್ಮ ಸೆಕ್ಸ್ ಲೈಫ್‌ ನ್ನು ಉತ್ತಮಗೊಳಿಸುತ್ತದೆ. ಮನೆಯ ಟೆರೇಸ್‌ ಅಥವಾ ಬೆಡ್‌ ರೂಮಿನಲ್ಲಿ ಮಂದಸ್ವರದಲ್ಲಿ ಸಂಗೀತ ಹಾಕಿಕೊಂಡು ಪರಸ್ಪರರ ಬಾಹುಗಳಲ್ಲಿ ಬಾಹುಗಳನ್ನು ಬಳಸಿಕೊಂಡು ಡ್ಯಾನ್ಸ್ ಮಾಡುವುದು ಇಬ್ಬರನ್ನೂ ರೊಮಾನ್ಸ್ ನ ಸಮುದ್ರದಲ್ಲಿ ಮುಳುಗಿಸುತ್ತದೆ. ಮುಂಜಾನೆ ಹೊತ್ತು ಇಬ್ಬರೂ ವಾಕಿಂಗ್‌ ಮಾಡಿದರೆ ನಿಮ್ಮ ಸೆಕ್ಸ್ ಲೈಫ್‌ ನ್ನು ಮತ್ತಷ್ಟು ಉತ್ತಮಪಡಿಸುತ್ತದೆ.

ನಿಸರ್ಗದ ನಡುವೆ ಇರಿ

ಇಂದಿನ ಫ್ಲ್ಯಾಟ್‌ ವ್ಯವಸ್ಥೆಯ ಮನೆಗಳಲ್ಲಿ ಕೈ ತೋಟದ ಕಲ್ಪನೆಯೇ ಮರೆಯಾಗುತ್ತಿದೆ. ಹಳೆಯ ಮನೆಯಂಗಳಲ್ಲಿ ಸುಂದರ ಹೂಗಿಡಗಳ ನಡುವೆ ಸಂಗಾತಿಯ ಜೊತೆ ಮಾತನಾಡುತ್ತ ಕಾಲ ಕಳೆಯುವುದು ಖುಷಿ ಕೊಡುತ್ತಿತ್ತು. ನೀವು ಮನೆಯ ಸಮೀಪ ಇವರು ಯಾವುದಾದರೂ ಪಾರ್ಕ್‌ ಗೆ ಸಂಗಾತಿಯ ಜೊತೆಗೆ ಹೋಗಿ ಅಲ್ಲಿ ಚಳಿಗಾಲದ ಖುಷಿ ಪಡೆದುಕೊಳ್ಳಿ.

ಚಳಿಗಾಲದಲ್ಲಿ ಸಮಾಗಮದ ಲಾಭ

ಬೇಸಿಗೆಯಲ್ಲಿ ಸಮಾಗಮ ಪ್ರಕ್ರಿಯೆ ಬೇಸರ ತರಿಸಬಹುದು. ಆದರೆ ಚಳಿಗಾಲದಲ್ಲಿ ಆ ತೊಂದರೆಯಂತೂ ಇರುವುದಿಲ್ಲ. ಈ ಕಾಲದಲ್ಲಿ ಪರಸ್ಪರ ಅಂಟಿಕೊಂಡು ಮಲಗಿರುವುದು ದಂಪತಿಗಳಿಗೆ ಬಹಳ ಇಷ್ಟವಾಗುತ್ತದೆ.

ಸೌಂದರ್ಯ ಹೆಚ್ಚುತ್ತದೆ

ಚಳಿಗಾಲದಲ್ಲಿ ಸಮಾಗಮ ನಡೆಸುವುದು ಒತ್ತಡದಾಯಕ ಎನಿಸುವುದಿಲ್ಲ. ದೇಹದಲ್ಲಿ ರಕ್ತ ಸಂಚಾರ ಹೆಚ್ಚುವುದರಿಂದ ಇಡೀ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಲಭಿಸುತ್ತದೆ. ಇದರಿಂದ ಜೀವಕೋಶಗಳ ಪುನರುತ್ಥಾನ ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತದೆ. ಸಮಾಗಮದ ಸಮಯದಲ್ಲಿ ಆಕ್ಸಿಟೋಸಿನ್‌ ಹಾರ್ಮೋನ್‌ ಸ್ರಾವವಾಗುತ್ತದೆ. ಅದು ಪ್ರೀತಿಯ ಹಾರ್ಮೋನು ಎಂದು ಕರೆಯಿಸಿಕೊಳ್ಳುತ್ತದೆ. ಇದು ವ್ಯಕ್ತಿಯಲ್ಲಿ ಪ್ರೀತಿ ಹಾಗೂ ಸ್ನೇಹದ ಭಾವನೆಯನ್ನು ಹೆಚ್ಚಿಸುತ್ತದೆ. ಜೊತೆಗೆ ದೈಹಿಕ ಸೌಂದರ್ಯವನ್ನು ವರ್ಧಿಸುತ್ತದೆ. ಕಣ್ಣುಗಳು ಮತ್ತಷ್ಟು ಹೊಳಪುಳ್ಳದ್ದಾಗಿರುವಂತೆ ಕಂಡುಬರುತ್ತವೆ.

ಒತ್ತಡ ನಿವಾರಿಸುತ್ತದೆ

ದೈನಂದಿನ ಜೀವನದಲ್ಲಿ ಉತ್ಪನ್ನವಾದ ಒತ್ತಡ ಹಾಗೂ ದಣಿವು ಸಮಾಗಮದ ಸಂದರ್ಭದಲ್ಲಿ ಕಾಣೆಯಾಗಿಬಿಡುತ್ತವೆ. ಬೇಸಿಗೆಯಲ್ಲಿ ಈ ಉಪಾಯ ಅಷ್ಟೊಂದು ಪ್ರಭಾವಿ ಎನಿಸದು. ಆದರೆ ಚಳಿಗಾಲದಲ್ಲಿ ಮಾತ್ರ ಸಮಾಗಮ ಚಟುವಟಿಕೆಯಿಂದ ಒತ್ತಡ ನಿವಾರಣೆಯಾಗುತ್ತದೆ. ಅಂದಹಾಗೆ ನಿಮಗೆ ಗೊತ್ತಿರುವಂತೆ ಒತ್ತಡ ಹಲವು ರೋಗಗಳಿಗೆ ಮೂಲವಾಗಿದೆ. ಮಲಬದ್ಧತೆ, ದಣಿವು, ಸೊಂಟನೋವು, ರಕ್ತದೊತ್ತಡ, ಮಧುಮೇಹದಂತಹ ರೋಗಗಳು ಒತ್ತಡದಿಂದ ಉಂಟಾಗುತ್ತವೆ. ಚಳಿಗಾಲದಲ್ಲಿ ಸಮಾಗಮ ನಡೆಸುವುದರಿಂದ ಇಂತಹ ರೋಗಗಳ ಸಮಸ್ಯೆ ಅಷ್ಟಿಷ್ಟು ಕಡಿಮೆಯಾಗುತ್ತದೆ. ವೈದ್ಯರ ಪ್ರಕಾರ, ಸೆಕ್ಸ್ ಮನುಷ್ಯನ ನರವ್ಯೂಹ ಮತ್ತು ಶ್ವಾಸಕಾಂಗ ವ್ಯವಸ್ಥೆಗೆ ನಿರಾಳತೆ ನೀಡುತ್ತದೆ.

ಗರ್ಭಧಾರಣೆಯ ಸಾಧ್ಯತೆ ಹೆಚ್ಚು

ಬೇಸಿಗೆಗಿಂತ ಚಳಿಗಾಲದಲ್ಲಿಯೇ ಮಹಿಳೆಯರು ಗರ್ಭ ಧರಿಸುವ ಸಾಧ್ಯತೆ ಹೆಚ್ಚು. ಇದಕ್ಕೆ ಕಾರಣ ಪುರುಷ ದೇಹದ ತಾಪಮಾನ ಹೆಚ್ಚುವುದರಿಂದ ಅವನಲ್ಲಿ ವೀರ್ಯಾಣುಗಳ ಸಂಖ್ಯೆ ಏರಿಕೆಯಾಗುತ್ತದೆ. ಚಳಿಗಾಲದಲ್ಲಿ ವೀರ್ಯಾಣುಗಳ ಗುಣಮಟ್ಟ ಚೆನ್ನಾಗಿರುತ್ತದೆ ಹಾಗೂ ಅವುಗಳ ಚಲನೆ ವೇಗದಿಂದ ಕೂಡಿರುತ್ತದೆ. ಹೀಗಾಗಿ ಗರ್ಭಧಾರಣೆಯ ಸಾಧ್ಯತೆ ಹೆಚ್ಚುತ್ತದೆ.

ವನಿತಾ ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ