ಗೃಹಶೋಭಾ ಮಹಿಳಾ ಓದುಗರ ವಿಶೇಷ ಅಭಿವೃದ್ಧಿ ವ್ಯಕ್ತಿತ್ವ ವಿಕಾಸ, ಏಳಿಗೆಗಾಗಿ ಎಂದೇ, ಡೆಲ್ಲಿ ಪ್ರೆಸ್‌ ಪ್ರಕಟಣಾ ತಂಡ, ಗೃಹಶೋಭಾ ಮಾಸಪತ್ರಿಕೆಯ ವತಿಯಿಂದ `ಕುಕಿಂಗ್‌ ಕ್ವೀನ್‌’ ಇವೆಂಟ್‌ ನ್ನು ಇತ್ತೀಚೆಗೆ ಬಲು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಪ್ರಮುಖ ಪ್ರಾಯೋಜಕರು ಎಂದರೆ ಸ್ಪೈಸ್‌ ಪಾರ್ಟ್ನರ್‌ L.G  ಇಂಗು, ಟೂರಿಸಂ ಪಾರ್ಟ್‌ ನರ್‌ ಉತ್ತರಖಂಡ ಪ್ರವಾಸೋದ್ಯಮ ಇಲಾಖೆ.

ಈ ಕಾರ್ಯಕ್ರಮದ ಇಡೀ ಫೋಕಸ್‌ ಅಡುಗೆ, ಪೌಷ್ಟಿಕ ಆಹಾರ ಸೇವನೆಯ ಕುರಿತಾಗಿತ್ತು. ಕಳೆದ ತಿಂಗಳು ಸೆಪ್ಟೆಂಬರ್‌ 22 ರಂದು ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ರಾಜಾಜಿನಗರದ ಇಸ್ಕಾನ್‌ ಸಮೀಪದ ನಂ.19. ಆರ್.ಜಿ. ರಾಯಲ್ ಹೋಟೆಲ್ ‌ನಲ್ಲಿ  ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ನಗರದ ನೂರಾರು ಮಹಿಳೆಯರು ಅತಿ ಉತ್ಸಾಹದಿಂದ ತಮ್ಮ ಆರೋಗ್ಯ, ಪೌಷ್ಟಿಕ ಆಹಾರ, ಅಡುಗೆಯ ಸ್ಪರ್ಧೆ, ಸೆಲೆಬ್ರಿಟಿ ಶೆಫ್‌ ರಿಂದ ಅಡುಗೆ ಡೆಮೊ, ಹೆಚ್ಚಿನ ಮನರಂಜನೆ ಇತ್ಯಾದಿಗಳಿಗಾಗಿ ಇಲ್ಲಿ ಸೇರಿದ್ದರು.

ಸೆಲೆಬ್ರಿಟಿ ಶೆಫ್ಸೆಷನ್

`ಅಮೃತವರ್ಷಿಣಿ’ ಧಾರಾವಾಹಿಯಿಂದ ಕಿರುತೆರೆಯಲ್ಲಿ ಯಶೋದಮ್ಮನ ಪಾತ್ರದ ಮೂಲಕ ಪಾಪ್ಯುಲರ್‌ ವ್ಯಾಂಪ್‌ ಆಗಿ ಕರ್ನಾಟಕದ ಮನೆ ಮನೆಯಲ್ಲೂ ಜನಪ್ರಿಯತೆ ಗಳಿಸಿದ ಶೆಫ್‌ ಸವಿತಾ ಕೃಷ್ಣಮೂರ್ತಿ, `ಮನೆ ಅಡುಗೆ’ ಹಾಗೂ ಇತರ ಅನೇಕ ಅಡುಗೆ ಕಾರ್ಯಕ್ರಮಗಳಲ್ಲಿ ಚೀಫ್‌ಶೆಫ್‌ ಆಗಿ ಮಿಂಚಿದರು. ಮುಂದೆ 45ಕ್ಕೂ ಹೆಚ್ಚಿನ ಧಾರಾವಾಹಿಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ಸುಬ್ಬುಲಕ್ಷ್ಮಿ ಸಂಸಾರ, ಶನಿ, ಪಾರು, ಅರಮನೆ, ರಾಘವೇಂದ್ರ ವೈಭವ, ದೀಪವೂ ನಿನ್ನದೇ ಗಾಳಿಯೂ ನಿನ್ನದೇ….. ಇತ್ಯಾದಿ ಪ್ರಮುಖ. ಪ್ರಸ್ತುತ ಉದಯ ಟಿವಿಯ `ರಾಧಿಕಾ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸೀತಾರಾಮ ಕಲ್ಯಾಣ, ಪ್ರಿನ್ಸ್, ಗಾಡ್‌ ಫಾದರ್‌, ಮಾಯಾಬಜಾರ್‌ ಮುಂತಾದ 30ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ.

ಕಾರ್ಯಕ್ರಮ ಶುರುವಾಗುತ್ತಿದ್ದಂತೆ ಪ್ರೇಕ್ಷಕರಿಂದ ಈ ಸ್ಟಾರ್‌ ಶೆಫ್‌ ಗೆ ಅಪಾರ ಮೆಚ್ಚುಗೆಯ ಕರತಾಡನ.

ಎಲ್ಲರನ್ನೂ ಆತ್ಮೀಯಾಗಿ ಮಾತನಾಡಿಸುತ್ತಾ, ತಮ್ಮ ಪರಿಚಯ ಮಾಡಿಕೊಟ್ಟು, ಸ್ಯಾಂಡಲ್ ವುಡ್‌ ನಲ್ಲಿ ತಾವು ಬೆಳೆದುಬಂದ ಬಗೆಯನ್ನು ವಿವರಿಸುತ್ತಾ, `ಪಾವ್ ‌ಭಾಜಿ’ ರೆಸಿಪಿ ಶುರು ಮಾಡಿದರು. ಅದಕ್ಕೆ ಬೇಕಾಗುವ ಮೂಲ ಸಾಮಗ್ರಿ, ಅದನ್ನು ತಯಾರಿಸುವ ವಿಧಾನವನ್ನು ಅಚ್ಚುಕಟ್ಟಾಗಿ ವಿವರಿಸುತ್ತಾ, ಅದು ಉದ್ಯೋಗಸ್ಥ ವನಿತೆಯರಿಗೆ ಅವಸರದಲ್ಲಿ ತಯಾರಾಗಲು ಹೇಗೆ ಸಹಕಾರಿ, ಮಕ್ಕಳ ಹಿರಿಯರ ಟಿಫನ್‌ ಬಾಕ್ಸಿಗೆ ಹೇಗೆ ಸಪೋರ್ಟಿವ್ ‌ಎಂದೆಲ್ಲ ತಿಳಿಸಿಕೊಟ್ಟರು. ಪ್ರೇಕ್ಷಕರು ಇವರ ಈ ರುಚಿಕರ ಅಡುಗೆಯ ತಯಾರಿಕೆಗೆ ತೀವ್ರವಾಗಿ ಸ್ಪಂದಿಸುತ್ತಿದ್ದರು. ನಡುನಡುವೆ ಯಾವುದು ಹೆಚ್ಚು ಕಡಿಮೆ ಆದರೆ ಅದನ್ನು ಹೇಗೆ ಸರಿಪಡಿಸುವುದು, ಈ ಡಿಶ್ಶನ್ನು ಹೇಗೆ ಅತ್ಯುತ್ತವಾಗಿ ಪ್ರಸೆಂಟ್‌ ಮಾಡಬಹುದು ಎಂಬುದರ ಸಂಪೂರ್ಣ ವಿವರಣೆ ನೀಡಿದರು.

ನಂತರ ಇವರು ತಯಾರಿಸಿದ `ಪಾವ್ ‌ಭಾಜಿ’ ಸವಿಯಲು ಅನೇಕ ಪ್ರೇಕ್ಷಕರು ಮುಗಿಬಿದ್ದಾಗ, ಅವರಿಗೆಲ್ಲ ಆತ್ಮೀಯವಾಗಿ ಹಂಚಿದ್ದಲ್ಲದೆ, ಅಡುಗೆ ಕುರಿತಾದ ಅವರ ಎಲ್ಲಾ ಸಂದೇಹಗಳನ್ನೂ ನಿವಾರಿಸಿದರು. ಒಟ್ಟಾರೆ ಇವರ ಅಡುಗೆಯನ್ನು, ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ಹೆಂಗಸರು ಬಹಳ ಮೆಚ್ಚಿಕೊಂಡು, ಅವರೊಂದಿಗೆ ನಾ ಮುಂದು ತಾ ಮುಂದು ಎಂದು ಸೆಲ್ಛಿ ಫೋಟೋ ಕ್ಲಿಕ್ಕಿಸಿಕೊಂಡು ಮಜಾ ಪಡೆದರು.

ಕುಕಿಂಗ್ಕ್ವೀನ್ಸೂಪರ್ಜೋಡಿ ಸ್ಪರ್ಧೆ

REYE3713.....2

ಇದರ ಮುಂದಿನ ಕಾರ್ಯಕ್ರಮವಾಗಿ ಸಭೆಯಲ್ಲಿ ನೆರೆದಿದ್ದ ಹೆಂಗಳೆಯರಲ್ಲಿ ಲಕ್ಕಿ ಡ್ರಾ ಮೂಲಕ ಶೆಫ್‌ ಸವಿತಾ, ಅದೃಷ್ಟಶಾಲಿಗಳಾದ ಐವರು ಜೋಡಿಗಳನ್ನು ಆರಿಸಿದರು. ಅವರೆಲ್ಲರಿಗೂ ಸಾಲಾಗಿ 5 ಮೇಜು, ಇಂಡಕ್ಷನ್‌ ಸ್ಟವ್, ಉಪಾಹಾರ ತಯಾರಿಸಲು ಬೇಕಾದ ಸಕಲ ಸಾಮಗ್ರಿ, ಅದನ್ನು ಬಳಸಲು ಬೇಕಾದ ಪರಿಕರ ಎಲ್ಲಾ ಒದಗಿಸಲಾಯಿತು. ಅರ್ಧ ಗಂಟೆಯಲ್ಲಿ ಅಡುಗೆ ಮುಗಿಸಿ, ಗರಿಷ್ಠ ಪದಾರ್ಥಗಳನ್ನು ನೀಟಾಗಿ ಬಳಸಿ, ಕೌಂಟರ್‌ ನ್ನು ಯಾರು ಅತಿ ಶುಚಿಯಾಗಿ ಶುಭ್ರವಾಗಿ ಮೇಂಟೇನ್ ಮಾಡಿರುತ್ತಾರೋ, ಅಷ್ಟೇ ರುಚಿಕರವಾಗಿ ಅಡುಗೆ ತಯಾರಿಸಿ ಪರ್ಫೆಕ್ಟ್ ಪ್ರೆಸೆಂಟೇಶನ್‌ ನೀಡಿದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಶೆಫ್‌ ನೀಡಿದರು.

ಯಾರು ಅದನ್ನು ಪರ್ಫೆಕ್ಟ್ ಆಗಿ, ಅತಿ ಶುಚಿ ರುಚಿಕರವಾಗಿ ತಯಾರಿಸಿದ್ದರೋ, ಶೆಫ್‌ ಅದನ್ನು ಟೇಸ್ಟ್ ಮಾಡಿ, ಎಲ್ಲಾ ವಿಧದಲ್ಲೂ ಸೈ ಎನಿಸಿಕೊಂಡ ರೆಸಿಪಿಗಳಿಗೆ ಬಹುಮಾನ ಘೋಷಿಸಿದರು.

ಈ ನಿಟ್ಟಿನಲ್ಲಿ ತ್ರಿವೇಣಿ ಮತ್ತು ವರುಣಾ ಜೋಡಿ ತಯಾರಿಸಿದ `ವೆಜ್‌ ಖಾರಾಭಾತ್‌’ಗೆ ಮೊದಲ ಬಹುಮಾನ, ನಾಗಶ್ರೀ ಮತ್ತು ತನುಜಾ ಜೋಡಿ ತಯಾರಿಸಿದ `ರಾಗಿ ದೋಸೆ  ವೆಜ್‌ ಕರೀ’ ರೆಸಿಪಿಗೆ 2ನೇ ಬಹುಮಾನ, ಅನುರಾಧಾ ಮತ್ತು ಕಲಾವತಿ ಜೋಡಿ ತಯಾರಿಸಿದ `ಹೈದರಾಬಾದಿ ಪಕೋಡ’ ರೆಸಿಪಿಗೆ 3ನೇ ಬಹುಮಾನ, ಸೌಮ್ಯಾ ಮತ್ತು ರಶ್ಮಿ ಹಾಗೂ ಭವ್ಯಾ ಮತ್ತು ಚೂಡಾಮಣಿ ಜೋಡಿ ತಯಾರಿಸಿದ `ಉಪ್ಪಿಟ್ಟಿನ ಕಡುಬು’  `ಚಪಾತಿ ವೆಜ್‌ ಕುರ್ಮಾ’ ರೆಸಿಪಿಗಳಿಗೆ ಸಮಾಧಾನಕರ ಬಹುಮಾನಗಳನ್ನು ಶೆಫ್ ಸವಿತಾ, ಗೃಹಶೋಭಾ ಪರವಾಗಿ ನೀಡಿದರು. ಎಲ್ಲರಿಗೂ ಸೂಕ್ತ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ನ್ಯೂಟ್ರಿಷನಿಸ್ಟ್ ಸೆಷನ್

ಇದಾದ ನಂತರ ಆಯುರ್ವೇದಿಕ್‌ ಕನ್ಸಲ್ಟೆಂಟ್‌ ಡಾ. ಪ್ರಜ್ವಲಾ ರಾಜ್‌ ನೆರೆದಿದ್ದ ಅಪಾರ ಮಹಿಳಾ ವೃಂದಕ್ಕೆ ನಮ್ಮ ಆಹಾರದಲ್ಲಿನ ಪೌಷ್ಟಿಕತೆಯ ಬಗ್ಗೆ, ಆರೋಗ್ಯಕರ ಸಾತ್ವಿಕ ಆಹಾರ ಸೇವನೆಯ ಬಗ್ಗೆ ಆಮೂಲಾಗ್ರವಾಗಿ ವಿವರಿಸಿದರು. ಇವರು ಪ್ರತಿಧಿ ಆಯುರ್ವೇದಾ ಮೆಡಿಕಲ್ ಸೆಂಟರ್‌ ಸಂಸ್ಥಾಪಕರಾಗಿದ್ದು, ಈ ಕ್ಷೇತ್ರದಲ್ಲಿ 18 ವರ್ಷಗಳ ನುರಿತ ತಜ್ಞರಾಗಿದ್ದು, ಆಯುರ್ವೇದಿಕ್ ಗಿಡಮೂಲಿಕೆಗಳ ಸಂಶೋಧನೆಯಲ್ಲಿ ಎತ್ತಿದ ಕೈ ಎನಿಸಿದ್ದಾರೆ. ಅಥೆಂಟಿಕ್‌ ಆಯುರ್ವೇದಿಕ್‌ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಆಸ್ಪತ್ರೆ ಆರಂಭಿಸಿದರು. ಜೊತೆಗೆ ಇವರು ಪ್ರತಿಧಿ ಫೌಂಡೇಶನ್‌, NGO ಸಹ ನಡೆಸುತ್ತಿದ್ದು ಲಕ್ಷಾಂತರ ಕ್ಯಾನ್ಸರ್ ರೋಗಿಗಳಿಗೆ ಕೊಡುಗೈ ಸೇವೆ ಒದಗಿಸುತ್ತಿದ್ದಾರೆ. ಆ ಮೂಲಕ ಲಕ್ಷಾಂತರ ಅನಾಥ ಮಕ್ಕಳಿಗೂ ಉಚಿತ ಆರೋಗ್ಯ ಸೇವೆ, ನಿಶ್ಶುಲ್ಕ ಚಿಕಿತ್ಸೆ ಒದಗಿಸುತ್ತಿದ್ದಾರೆ.

ಹೆಣ್ಣುಮಕ್ಕಳು, 40+ ಮಹಿಳೆಯರು ತಮ್ಮ ದೈನಂದಿನ ಆಹಾರದಲ್ಲಿ ಯಾವ ರೀತಿ ಪೌಷ್ಟಿಕಾಂಶಗಳನ್ನು ಬೆರೆಸಿಕೊಂಡು ದಿನವಿಡೀ ಸೇವಿಸಬೇಕು, ಯಾವ ರೀತಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಬ್ಬಿಣದ ಕಡಲೆಯಾದ ವೈದ್ಯಕೀಯದ ಬಗ್ಗೆ ಸರಳ ಮಾತುಗಳಲ್ಲಿ ಸಂಪೂರ್ಣ ವಿವರಣೆ ನೀಡಿದರು. ನಮ್ಮ ಆಹಾರದಲ್ಲಿ ಮ್ಯಾಕ್ರೋ/ಮೈಕ್ರೋ ನ್ಯೂಟ್ರಿಯೆಂಟ್ಸ್, ಪ್ರೋಟೀನ್‌, ಕಾರ್ಬೋಹೈಡ್ರೇಟ್ಸ್, ಫ್ಯಾಟ್‌,  ವಿಟಮಿನ್‌, ಮಿನರಲ್ಸ್, ಫೈಬರ್‌ ಇತ್ಯಾದಿ ಎಲ್ಲ ಆಯಾ ವಯಸ್ಸಿನವರಿಗೆ ತಕ್ಕಂತೆ ಎಷ್ಟಿರಬೇಕು ಎಂಬುದನ್ನು ನಿಖರವಾಗಿ ತಿಳಿಸಿಕೊಟ್ಟರು.

ಪ್ರತಿ ಆಹಾರದ ಕ್ಯಾಲೋರಿ ಕೌಂಟ್‌ ಖಚಿತಪಡಿಸಿಕೊಂಡು ಸೇವಿಸಬೇಕು ಎಂದು ಸಲಹೆ ನೀಡಿದರು. ಹಾಲು, ಹಣ್ಣು, ತಾಜಾ ಹಸಿರು ತರಕಾರಿ, ಮೀನು, ಮೊಟ್ಟೆ, ವೈಟ್‌ ಮೀಟ್‌ (ಫಿಶ್‌ಬೇಕು, ರೆಡ್‌ ಮೀಟ್‌ ಬೇಡ) ಇತ್ಯಾದಿಗಳ ಪೌಷ್ಟಿಕತೆಯ ಹಿರಿಮೆ ಬಗ್ಗೆ ತಿಳಿಸಿಕೊಟ್ಟರು. ಮಧುಮೇಹಿಗಳು, ಹೈ ಬಿಪಿ, ಆರ್ಥ್‌ ರೈಟಿಸ್‌ ರೋಗಿಗಳು ಪಾಲಿಸಬೇಕಾದ ಆಹಾರ, ಓಟ್ಸ್, ಬಾರ್ಲಿ ಇತ್ಯಾದಿಗಳ ಕುರಿತು ಸೂಕ್ಷ್ಮವಾಗಿ ವಿವರಿಸಿದರು. ನಂತರ ಪ್ರೇಕ್ಷಕರ ಕಡೆಯಿಂದ ಬಂದಂಥ ನೂರಾರು ಸಂದೇಹಗಳಿಗೆ ಸೂಕ್ತವಾಗಿ ಉತ್ತರಿಸಿ, ಪೌಷ್ಟಿಕ ಆಹಾರದ ಬಗ್ಗೆ ಅವರಿಗಿದ್ದ ಎಲ್ಲಾ ಅನುಮಾನಗಳನ್ನೂ ಪರಿಹರಿಸಿದರು.

ಗೇಮಿಂಗ್ಸೆಷನ್

ಇಡೀ ಕಾರ್ಯಕ್ರಮದ ನಿರೂಪಣೆ ಮಾಡುತ್ತಾ ಆ್ಯಂಕರ್‌ ಸಮೀರಾ ಖಾನ್‌, ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳಾಮಣಿಗಳಿಗೆ ಅತ್ಯಂತ ರೋಚಕ ಮನರಂಜನೆ ಒದಗಿಸಿದರು. ಬಗೆಬಗೆಯ ಹಾಡು, ನೃತ್ಯಗಳಲ್ಲಿ ಪಾಲ್ಗೊಂಡ ಹೆಂಗಸರು ಉತ್ಸಾಹದಿಂದ ನಕ್ಕು ನಲಿದಾಡಿದರು. ಪ್ರತಿಯೊಂದು ಸೆಷನ್‌ ನಡೆಯುತ್ತಿದ್ದಂತೆ, ಅದಕ್ಕೆ ಸಂಬಂಧಿಸಿದಂತೆ ಹಾಗೂ ಮನರಂಜನೆ ಕುರಿತಾದ ಅನೇಕ ರಸಪ್ರಶ್ನೆಗಳನ್ನು ಸಭಿಕರಿಗೆ ಕೇಳಿದರು. ಸೂಕ್ತವಾಗಿ ಬೇಗ ಉತ್ತರಿಸಿದ ಹೆಂಗಸರಿಗೆ ಅತ್ಯಾಕರ್ಷಕ ಬಹುಮಾನಗಳನ್ನು ಗೃಹಶೋಭಾ ಸಿಬ್ಬಂದಿ ಆನ್‌ ದಿ ಸ್ಪಾಟ್‌ ವಿತರಿಸಿದರು.

ಇಷ್ಟೆಲ್ಲಾ ಕಾರ್ಯಕ್ರಮ ಮುಗಿಸಿಕೊಂಡು, ಇವೆಂಟ್‌ ಗೆ ಬಂದಿದ್ದ ಹೆಂಗಸರು, ಅತ್ಯುತ್ತಮ ಪೌಷ್ಟಿಕ ಆಹಾರ ಸೇವಿಸಿ, ಪ್ರತಿಯೊಬ್ಬರೂ ಅಪಾರ ಉಡುಗೊರೆ ತುಂಬಿದ್ದ ಗುಡೀ ಬ್ಯಾಗ್‌ ನ್ನು ಪಡೆದು, ಸಂತೋಷದಿಂದ ವಿದಾಯ ಕೋರಿದರು. ಒಟ್ಟಾರೆ ಗೃಹಶೋಭಾ ಕುಕಿಂಗ್‌ ಕ್ವೀನ್‌ ಇವೆಂಟ್‌ ಗೆ ಬಂದಿದ್ದ ಹೆಂಗಸರೆಲ್ಲರೂ ಇದನ್ನು ಬಹಳ ಎಂಜಾಯ್‌ ಮಾಡಿದರು. ಇವೆಂಟ್‌ ಬಹಳ ಯಶಸ್ವಿಯಾಗಿ ನೆರವೇರಿತು!

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ