ಗೃಹಶೋಭಾ ಮಹಿಳಾ ಓದುಗರ ವಿಶೇಷ ಅಭಿವೃದ್ಧಿ ವ್ಯಕ್ತಿತ್ವ ವಿಕಾಸ, ಏಳಿಗೆಗಾಗಿ ಎಂದೇ, ಡೆಲ್ಲಿ ಪ್ರೆಸ್ ಪ್ರಕಟಣಾ ತಂಡ, ಗೃಹಶೋಭಾ ಮಾಸಪತ್ರಿಕೆಯ ವತಿಯಿಂದ `ಕುಕಿಂಗ್ ಕ್ವೀನ್' ಇವೆಂಟ್ ನ್ನು ಇತ್ತೀಚೆಗೆ ಬಲು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಪ್ರಮುಖ ಪ್ರಾಯೋಜಕರು ಎಂದರೆ ಸ್ಪೈಸ್ ಪಾರ್ಟ್ನರ್ L.G ಇಂಗು, ಟೂರಿಸಂ ಪಾರ್ಟ್ ನರ್ ಉತ್ತರಖಂಡ ಪ್ರವಾಸೋದ್ಯಮ ಇಲಾಖೆ.
ಈ ಕಾರ್ಯಕ್ರಮದ ಇಡೀ ಫೋಕಸ್ ಅಡುಗೆ, ಪೌಷ್ಟಿಕ ಆಹಾರ ಸೇವನೆಯ ಕುರಿತಾಗಿತ್ತು. ಕಳೆದ ತಿಂಗಳು ಸೆಪ್ಟೆಂಬರ್ 22 ರಂದು ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ರಾಜಾಜಿನಗರದ ಇಸ್ಕಾನ್ ಸಮೀಪದ ನಂ.19. ಆರ್.ಜಿ. ರಾಯಲ್ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ನಗರದ ನೂರಾರು ಮಹಿಳೆಯರು ಅತಿ ಉತ್ಸಾಹದಿಂದ ತಮ್ಮ ಆರೋಗ್ಯ, ಪೌಷ್ಟಿಕ ಆಹಾರ, ಅಡುಗೆಯ ಸ್ಪರ್ಧೆ, ಸೆಲೆಬ್ರಿಟಿ ಶೆಫ್ ರಿಂದ ಅಡುಗೆ ಡೆಮೊ, ಹೆಚ್ಚಿನ ಮನರಂಜನೆ ಇತ್ಯಾದಿಗಳಿಗಾಗಿ ಇಲ್ಲಿ ಸೇರಿದ್ದರು.
ಸೆಲೆಬ್ರಿಟಿ ಶೆಫ್ ಸೆಷನ್
`ಅಮೃತವರ್ಷಿಣಿ' ಧಾರಾವಾಹಿಯಿಂದ ಕಿರುತೆರೆಯಲ್ಲಿ ಯಶೋದಮ್ಮನ ಪಾತ್ರದ ಮೂಲಕ ಪಾಪ್ಯುಲರ್ ವ್ಯಾಂಪ್ ಆಗಿ ಕರ್ನಾಟಕದ ಮನೆ ಮನೆಯಲ್ಲೂ ಜನಪ್ರಿಯತೆ ಗಳಿಸಿದ ಶೆಫ್ ಸವಿತಾ ಕೃಷ್ಣಮೂರ್ತಿ, `ಮನೆ ಅಡುಗೆ' ಹಾಗೂ ಇತರ ಅನೇಕ ಅಡುಗೆ ಕಾರ್ಯಕ್ರಮಗಳಲ್ಲಿ ಚೀಫ್‌ಶೆಫ್ ಆಗಿ ಮಿಂಚಿದರು. ಮುಂದೆ 45ಕ್ಕೂ ಹೆಚ್ಚಿನ ಧಾರಾವಾಹಿಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ಸುಬ್ಬುಲಕ್ಷ್ಮಿ ಸಂಸಾರ, ಶನಿ, ಪಾರು, ಅರಮನೆ, ರಾಘವೇಂದ್ರ ವೈಭವ, ದೀಪವೂ ನಿನ್ನದೇ ಗಾಳಿಯೂ ನಿನ್ನದೇ..... ಇತ್ಯಾದಿ ಪ್ರಮುಖ. ಪ್ರಸ್ತುತ ಉದಯ ಟಿವಿಯ `ರಾಧಿಕಾ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸೀತಾರಾಮ ಕಲ್ಯಾಣ, ಪ್ರಿನ್ಸ್, ಗಾಡ್ ಫಾದರ್, ಮಾಯಾಬಜಾರ್ ಮುಂತಾದ 30ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ.
ಕಾರ್ಯಕ್ರಮ ಶುರುವಾಗುತ್ತಿದ್ದಂತೆ ಪ್ರೇಕ್ಷಕರಿಂದ ಈ ಸ್ಟಾರ್ ಶೆಫ್ ಗೆ ಅಪಾರ ಮೆಚ್ಚುಗೆಯ ಕರತಾಡನ.
ಎಲ್ಲರನ್ನೂ ಆತ್ಮೀಯಾಗಿ ಮಾತನಾಡಿಸುತ್ತಾ, ತಮ್ಮ ಪರಿಚಯ ಮಾಡಿಕೊಟ್ಟು, ಸ್ಯಾಂಡಲ್ ವುಡ್ ನಲ್ಲಿ ತಾವು ಬೆಳೆದುಬಂದ ಬಗೆಯನ್ನು ವಿವರಿಸುತ್ತಾ, `ಪಾವ್ ಭಾಜಿ' ರೆಸಿಪಿ ಶುರು ಮಾಡಿದರು. ಅದಕ್ಕೆ ಬೇಕಾಗುವ ಮೂಲ ಸಾಮಗ್ರಿ, ಅದನ್ನು ತಯಾರಿಸುವ ವಿಧಾನವನ್ನು ಅಚ್ಚುಕಟ್ಟಾಗಿ ವಿವರಿಸುತ್ತಾ, ಅದು ಉದ್ಯೋಗಸ್ಥ ವನಿತೆಯರಿಗೆ ಅವಸರದಲ್ಲಿ ತಯಾರಾಗಲು ಹೇಗೆ ಸಹಕಾರಿ, ಮಕ್ಕಳ ಹಿರಿಯರ ಟಿಫನ್ ಬಾಕ್ಸಿಗೆ ಹೇಗೆ ಸಪೋರ್ಟಿವ್ ಎಂದೆಲ್ಲ ತಿಳಿಸಿಕೊಟ್ಟರು. ಪ್ರೇಕ್ಷಕರು ಇವರ ಈ ರುಚಿಕರ ಅಡುಗೆಯ ತಯಾರಿಕೆಗೆ ತೀವ್ರವಾಗಿ ಸ್ಪಂದಿಸುತ್ತಿದ್ದರು. ನಡುನಡುವೆ ಯಾವುದು ಹೆಚ್ಚು ಕಡಿಮೆ ಆದರೆ ಅದನ್ನು ಹೇಗೆ ಸರಿಪಡಿಸುವುದು, ಈ ಡಿಶ್ಶನ್ನು ಹೇಗೆ ಅತ್ಯುತ್ತವಾಗಿ ಪ್ರಸೆಂಟ್ ಮಾಡಬಹುದು ಎಂಬುದರ ಸಂಪೂರ್ಣ ವಿವರಣೆ ನೀಡಿದರು.
ನಂತರ ಇವರು ತಯಾರಿಸಿದ `ಪಾವ್ ಭಾಜಿ' ಸವಿಯಲು ಅನೇಕ ಪ್ರೇಕ್ಷಕರು ಮುಗಿಬಿದ್ದಾಗ, ಅವರಿಗೆಲ್ಲ ಆತ್ಮೀಯವಾಗಿ ಹಂಚಿದ್ದಲ್ಲದೆ, ಅಡುಗೆ ಕುರಿತಾದ ಅವರ ಎಲ್ಲಾ ಸಂದೇಹಗಳನ್ನೂ ನಿವಾರಿಸಿದರು. ಒಟ್ಟಾರೆ ಇವರ ಅಡುಗೆಯನ್ನು, ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ಹೆಂಗಸರು ಬಹಳ ಮೆಚ್ಚಿಕೊಂಡು, ಅವರೊಂದಿಗೆ ನಾ ಮುಂದು ತಾ ಮುಂದು ಎಂದು ಸೆಲ್ಛಿ ಫೋಟೋ ಕ್ಲಿಕ್ಕಿಸಿಕೊಂಡು ಮಜಾ ಪಡೆದರು.