ನೀವು ಎಂದಾದರೂ ಹೆಣ್ಣು ಹಾಗೂ ಗಂಡು ಪಾರಿವಾಳಗಳು ಪರಸ್ಪರ ಜಗಳವಾಡಿದ್ದನ್ನು ನೋಡಿದ್ದೀರಾ? ಗಂಡು ಆನೆ ಹೆಣ್ಣಾನೆಗೆ ಹಿಂಸೆ ಕೊಟ್ಟಿದ್ದನ್ನು, ಗಂಡು ನವಿಲು ಹೆಣ್ಣು ನವಿಲನ್ನು ಪೀಡಿಸಿದ್ದನ್ನು ಕಂಡಿದ್ದೀರಾ? ಇಲ್ಲವೇ ಇಲ್ಲ. ಏಕೆಂದರೆ ಸೃಷ್ಟಿ ಅವುಗಳಿಗೆ ಪ್ರೀತಿಸುವುದನ್ನು, ಸಮಾಗಮ ನಡೆಸುವುದನ್ನು ಹಾಗೂ ಸಂತಾನೋತ್ಪತ್ತಿ ಮಾಡುವುದನ್ನು ಮಾತ್ರ ಕಲಿಸಿದೆ. ಲಕ್ಷಾಂತರ ವರ್ಷಗಳಿಂದ ಸೃಷ್ಟಿಯ ಪ್ರತಿಯೊಂದು ಜೀವಿಯೂ ನಿಸರ್ಗದ ಇದೇ ನಿಯಮವನ್ನೇ ಪಾಲಿಸುತ್ತಾ ತಮ್ಮ ಜೀವನ ಚಕ್ರವನ್ನು ಪೂರ್ಣಗೊಳಿಸುತ್ತಿವೆ. ಸೃಷ್ಟಿಯಲ್ಲಿ ಕೇವಲ ಮನುಷ್ಯ ಜೀವಿ ಮಾತ್ರ ನಿಸರ್ಗದ ಈ ನಿಯಮವನ್ನು ಅಮಾನಿಸುತ್ತಾ ಬಂದಿದ್ದಾನೆ. ಪುರುಷ ಹೆಣ್ಣಿನ ಮೇಲೆ ಕೈ ಮಾಡುತ್ತಾ, ಇಡೀ ಜೀವನ ಅವಳನ್ನು ಶೋಷಿಸುತ್ತಾ ಇರುತ್ತಾನೆ.
ಸರ್ಕಾರೇತರ ಸಂಸ್ಥೆ `ಸಹಜ್’ ಮತ್ತು `ಈಕ್ವ್‌ಮೆಷರ್ಸ್ 2030′ ಮುಖಾಂತರ ಸಮೀಕ್ಷೆ ನಡೆಸಲಾಗಿತ್ತು. ಅದರ ಫಲಿತಾಂಶ ಅಭಿವೃದ್ಧಿಯ ಮುಖಕ್ಕೆ ಅವಮಾನಕ್ಕಿಂತ ಕಡಿಮೆ ಏನಿಲ್ಲ. ಗುಜರಾತ್ ನ ಡೋದವರಾದ ಈ ಎರಡು ಸಂಸ್ಥೆಗಳ ಫಲಿತಾಂಶದ ಪ್ರಕಾರ, ಭಾರತದ ಪ್ರತಿ ಮೂರು ವಿವಾಹಿತ ಮಹಿಳೆಯರಲ್ಲಿ ಒಬ್ಬಳು ವಿವಾಹಿತೆ ಗಂಡನ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾಳೆ. ಆದರೆ ಇವರಲ್ಲಿ ಬಹಳಷ್ಟು ಮಹಿಳೆಯರಿಗೆ ಇದರ ಬಗ್ಗೆ ಯಾವುದೇ ತಕರಾರು ಇಲ್ಲ. ಇದು ತಮ್ಮ ಹಣೆಬರಹ ಎಂದು ಅವರು ಸುಮ್ಮನಿರುತ್ತಾರೆ.
ಭಾರತದಲ್ಲಿ 15-49ರ ವಯೋಮಾನದ ಮಹಿಳೆಯರಲ್ಲಿ ಶೇ.27ರಷ್ಟು ಮಹಿಳೆಯರು 15ನೇ ವಯಸ್ಸಿನಿಂದಲೇ ಕೌಟುಂಬಿಕ ದೌರ್ಜನ್ಯವನ್ನು ಸಹಿಸಿಕೊಂಡು ಬರುತ್ತಿದ್ದಾರೆ. ತವರಿನಲ್ಲಿ ಅಪ್ಪ ಅಣ್ಣ ತಮ್ಮಂದಿರಿಂದ, ಗಂಡನ ಮನೆಯಲ್ಲಿ ಗಂಡನಿಂದ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ.
ಕಳೆದ ವರ್ಷ ಮೀಟೂ ಅಭಿಯಾನದಲ್ಲಿ ತುಂಬಾ ಓದಿದವರು, ಉನ್ನತ ಸ್ಥಾನದಲ್ಲಿರುವವರು, ಆಧುನಿಕ ಎಂದು ಕರೆಸಿಕೊಳ್ಳುವ ಮಹಿಳೆಯರ ವಿವಶತೆ, ದುರ್ದೆಶೆ ಬಯಲಿಗೆ ಬಂತು. ಅದನ್ನು ಗಮನದಲ್ಲಿಟ್ಟು ನೋಡಿದರೆ ಈ ದೇಶದ ಕಡಿಮೆ ಓದಿದ, ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಗ್ರಾಮೀಣ, ಕುಗ್ರಾಮವಾಸಿ ಮಹಿಳೆಯರು ಪುರುಷ ಸಮಾಜದಿಂದ ಅದೆಷ್ಟು ಹಿಂಸೆ, ಅವಮಾನ ಅನುಭವಿಸುತ್ತಿರಬಹುದು ಎಂಬುದನ್ನು ನೀವೇ ಅಂದಾಜು ಮಾಡಬಹುದು.
ಮಹಿಳೆಯೇ ಹಿಂಸೆಗೆ ತುತ್ತಾಗುವುದೇಕೆ?
ಅಂದಹಾಗೆ ಮಹಿಳೆಯಷ್ಟೇ ಹಿಂಸೆಗೆ ಗುರಿಯಾಗುವುದೇಕೆ? ಅವಳನ್ನಷ್ಟೇ ಏಕೆ ದೈಹಿಕವಾಗಿ, ಮಾನಸಿಕವಾಗಿ ಶೋಷಿಸಲಾಗುತ್ತದೆ? ಮಹಿಳೆಯನ್ನು ಹಿಂಸೆಗೊಳಪಡಿಸಿ ಅವಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಪದ್ಧತಿ ಈ ಭೂಮಿಯ ಮೇಲೆ ಯಾವಾಗ ಮತ್ತು ಹೇಗೆ ಸ್ಥಾಪಿಸಲ್ಪಟ್ಟಿತು? ಮನುಷ್ಯನ ಹೊರತಾಗಿ ಬೇರೆ ಯಾವುದಾದರೂ ಪ್ರಾಣಿಗಳು ಹೆಣ್ಣು ಪ್ರಾಣಿಯ ಮೇಲೆ ಶೋಷಣೆ ನಡೆಸುತ್ತಿಯೇ?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಾವು ಬೇರೆ ಜೀವಿಗಳ ವರ್ತನೆ ಮತ್ತು ಮಾನವ ಕುಲದ ಸಾವಿರಾರು ವರ್ಷಗಳ ಇತಿಹಾಸವನ್ನು ತೆರೆದು ನೋಡಬೇಕಾಗುತ್ತದೆ. ಜೊತೆಗೆ ಸೃಷ್ಟಿಯ ನಿಯಮಗಳನ್ನೂ ತಿಳಿದುಕೊಳ್ಳಬೇಕಾಗುತ್ತದೆ.
ಈ ಸೃಷ್ಟಿಯಲ್ಲಿ ಮುಖ್ಯವಾಗಿ ಎರಡೇ ಜಾತಿಗಳಿವೆ. ಒಂದು ಗಂಡು, ಮತ್ತೊಂದು ಹೆಣ್ಣು. ಇದರ ಹೊರತಾಗಿ ಮೂರನೇ ಜಾತಿಯೊಂದಿದೆ. ಅದೇ ಮಿಶ್ರ ಜಾತಿ ಅಥವಾ ತೃತೀಯ ಲಿಂಗಿಗಳು. ಅವರಲ್ಲಿ ಗಂಡು ಹಾಗೂ ಹೆಣ್ಣಿನ ಎರಡೂ ಅಂಶಗಳು ಗೋಚರಿಸುತ್ತವೆ. ಮೇಲಿನ ಎರಡು ಜಾತಿಗಳಿಗೆ ಹೋಲಿಸಿದರೆ ಇವರ ಸಂಖ್ಯೆ ತುಂಬಾ ಕಡಿಮೆ. ಗಂಡು ಹಾಗೂ ಹೆಣ್ಣು ಈ ಎರಡರಲ್ಲಿ ಯಾರೊಬ್ಬರ ಅನುಪಸ್ಥಿತಿ ಉಂಟಾದರೂ ಈ ಸೃಷ್ಟಿಯೇ ಕೊನೆಗೊಳ್ಳುತ್ತದೆ. ಜೀವನ ಸಮರ್ಪಕವಾಗಿ ಸಾಗುವಂತಾಗಲಿ. ಇಬ್ಬರಲ್ಲೂ ಸಮಾನತೆ ಇರಬೇಕು. ಈ ಮಾತು ಸೃಷ್ಟಿಯ ಪ್ರತಿಯೊಂದು ಪುಟ್ಟ ಜೀವಿಯಿಂದ ಹಿಡಿದು ದೊಡ್ಡ ಜೀವಿಯ ತನಕ ಎಲ್ಲರಿಗೂ ಅನ್ವಯಿಸುತ್ತದೆ.
ಗಂಡು ಹಾಗೂ ಹೆಣ್ಣು ಈ ಎರಡೂ ಜಾತಿಗಳು ಈ ಭೂಮಿಯ ಮೇಲೆ ಜೀವನದ ನಿರಂತರತೆಯನ್ನು ಕಾಯ್ದುಕೊಂಡು ಹೋಗುವ ಮಾಧ್ಯಮಗಳಾಗಿವೆ. ಇದೇ ಅವರ ಮುಖ್ಯ ಕೆಲಸ. ಹಾಗೆಂದೇ ಅವರ ನಡುವೆ ಪರಸ್ಪರರ ಬಗ್ಗೆ ಆಕರ್ಷಣೆ ಉಂಟಾಗುತ್ತದೆ. ಎರಡೂ ಜಾತಿಗಳು ಪರಸ್ಪರರಿಗೆ ಪೂರಕವಾಗಿವೆ. ಹಾಗೆಂದೇ ತನ್ನ ಆಕರ್ಷಣೆಯಲ್ಲಿ ಇನ್ನೊಬ್ಬರನ್ನು ಕಟ್ಟಿ ಹಾಕಬೇಕೆಂಬ ಅಭಿಲಾಷೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಪರಸ್ಪರರ ಪ್ರೇಮದಲ್ಲಿ ವಿಲೀನಗೊಳ್ಳಬೇಕು. ನಿಸರ್ಗದ ನಿಯಮವನ್ನು ಪಾಲಿಸಬೇಕು. ಏಕೆಂದರೆ ಹೊಸ ಜೀವವೊಂದಕ್ಕೆ ಭೂಮಿಗೆ ಬರಲು ಅವಕಾಶ ಸಿಗಬೇಕು.
ಬೇರೆ ಜೀವಿಗಳ ನಡುವೆ ಜಗಳ ಹೋರಾಟ ನಡೆಯುವುದಿಲ್ಲ ಎಂದೇನಿಲ್ಲ. ಅವಶ್ಯವಾಗಿ ನಡೆಯುತ್ತವೆ. ಆದರೆ ಅದಕ್ಕೆ ಕಾರಣ ಏನು ಗೊತ್ತೆ? ಪ್ರಾಣಿಗಳು ಒಂದಕ್ಕೊಂದು ಹೋರಾಡಲು ಏನು ಕಾರಣ ಗೊತ್ತೆ? ಜೀವನ ಮುನ್ನಡೆಯಲು ಆಹಾರ ಬೇಕು. ನಿಸರ್ಗದ ನಿಯಮ ಪಾಲಿಸಲು ಆಹಾರ ಅತ್ಯವಶ್ಯಕ. ಬೇರೆ ಪ್ರಾಣಿಗಳಲ್ಲಿ ಪರಸ್ಪರ ಕದನ ನಡೆಯಲು ಮುಖ್ಯ ಕಾರಣ ಬೇಟೆ.
ಸಮಾಗಮ ನಡೆಸುವ ಗಂಡು ಹಾಗೂ ಹೆಣ್ಣು ಪ್ರಾಣಿಗಳೆಂದೂ ಜಗಳಕ್ಕಿಳಿಯುವುದಿಲ್ಲ. ಅವು ಹೋರಾಡುವುದು ಇತರೆ ಪ್ರಾಣಿಗಳ ಜೊತೆ. ಅದೂ ಕೂಡ ಆಹಾರ ವಿಷಯಕ್ಕೆ ಸಂಬಂಧಪಟ್ಟಂತೆ ಮಾತ್ರ. ಪ್ರತಿಯೊಂದು ಪ್ರಾಣಿಯೂ ತಾನು ಹಾಗೂ ತನ್ನ ಮರಿಗಳನ್ನು ಸಾಕಿ ಸಲಹಲು ಆಹಾರದ ಹುಡುಕಾಟ ನಡೆಸುತ್ತಿರುತ್ತದೆ. ಒಂದು ಗಂಡು ಪ್ರಾಣಿ ಮತ್ತೊಂದು ಗಂಡು ಪ್ರಾಣಿಯ ಜೊತೆಯೇ ಹೋರಾಡುತ್ತದೆ. ಅದರಿಂದ ಆಹಾರ ಕಸಿದುಕೊಳ್ಳಲು ಮತ್ತು ತನ್ನ ಹೆಣ್ಣು ಸಂಗಾತಿ ಹಾಗೂ ಮರಿಯ ಹೊಟ್ಟೆ ತುಂಬಿಸಲು. ಕೆಲವೊಮ್ಮೆ ಗಂಡು ಪ್ರಾಣಿ ಮತ್ತೊಂದು ಗಂಡು ಪ್ರಾಣಿಯ ಜೊತೆ ಹೋರಾಡಲು ಬೇರೊಂದು ಕಾರಣವಿರುತ್ತದೆ. ಅದೇ ಬೇರೊಂದು ಹೆಣ್ಣು ಪ್ರಾಣಿಯನ್ನು ತನ್ನತ್ತ ಒಲಿಸಿಕೊಳ್ಳಲು. ಈ ಕಾಳಗದಲ್ಲಿ ಒಮ್ಮೊಮ್ಮೆ ಒಂದು ಇನ್ನೊಂದನ್ನು ಸಾಯಿಸಿಯೂ ಬಿಡುತ್ತದೆ. ಆದರೆ ಗಂಡು ಎನಿಸಿಕೊಳ್ಳುವ ಪುರುಷ ಮಾತ್ರ ಮನೆಯ ಹೆಂಗಸಿನ ಜೊತೆ ಜಗಳಕ್ಕಿಳಿಯುತ್ತಾನೆ. ಅವಳ ಮೇಲೆಯೇ ದೌರ್ಜನ್ಯ ಎಸಗುತ್ತಾನೆ.
ಪುರುಷ ಕ್ರೌರ್ಯ
24 ವರ್ಷಗಳ ಹಿಂದೆ ನಡೆದ ತಂದೂರ್ ಹತ್ಯಾಕಾಂಡದ ಬಗ್ಗೆ ಯಾರು ತಾನೇ ಮರೆಯಲು ಸಾಧ್ಯ? ಇತಿಹಾಸದಲ್ಲಿ ಮೊದಲ ಬಾರಿಗೆ ಪುರುಷ ಕ್ರೌರ್ಯದ ಇಂತಹ ಉದಾಹರಣೊಂದು ಕಂಡುಬಂತು. ಮಹಿಳೆಯೊಬ್ಬಳನ್ನು ತಂದೂರ್ ನಲ್ಲಿ ಹಾಕಿ ಅಮಾನವೀಯವಾಗಿ ಸಾಯಿಸಲಾಯಿತು. ಸುಶೀಲ್ ಶರ್ಮ ಹೆಸರಿನ ಉನ್ನತ ಶಿಕ್ಷಣ ಪಡೆದ ವ್ಯಕ್ತಿ ಹಾಗೂ ಹುದ್ದೆಯಲ್ಲಿ ಯುವ ಕಾಂಗ್ರೆಸ್ ಮುಖಂಡ. ಆತ ಆ ಮಹಿಳೆಯನ್ನು ಹೀಗೆ ಕ್ರೂರ ರೀತಿಯಲ್ಲಿ ಸಾಯಿಸಿದ. ಆತ ಅವಳನ್ನು ಪ್ರೀತಿಸಿ ಮದುವೆಯಾಗಿದ್ದ, ಆಕೆಯ ಹೆಸರು ನೈನಾ ಸಾಹ್ನಿ.
ಸುನೀಲ್ ಶರ್ಮ ಅವಳಿಗೆ ಮೊದಲು ಗುಂಡು ಹಾರಿಸಿದ. ಬಳಿಕ ಆಕೆಯ ದೇಹವನ್ನು ಒಂದು ಪಾಲಿಥಿನ್ ಚೀಲದಲ್ಲಿ ತುಂಬಿಕೊಂಡು ಕಾರಿನಲ್ಲಿ ಇಟ್ಟುಕೊಂಡು ದೆಹಲಿಯ ರಸ್ತೆಯಲ್ಲೆಲ್ಲ ಸುತ್ತಾಡಿದ. ಯಮುನಾ ಸೇತುವೆಯಿಂದ ನದಿಗೆ ಎಸೆದುಬಿಡೋಣ ಎಂದು ಯೋಚಿಸಿದ. ಆದರೆ ಅಲ್ಲಿನ ಜನಜಂಗುಳಿ ನೋಡಿ ಸಾಧ್ಯವಾಗದೆ ಕೊನೆಗೆ ಕನಾಟ್ ಪ್ಲೇಸ್ ನಲ್ಲಿದ್ದ ತನ್ನ ರೆಸ್ಟೋರೆಂಟ್ ನತ್ತ ವಾಹನ ತಿರುಗಿಸಿದ.
ಆಗ ರೆಸ್ಟೋರೆಂಟ್ ನಲ್ಲಿ ಇನ್ನೂ ಬಹಳಷ್ಟು ಜನರು ಊಟ ಮಾಡುತ್ತಿದ್ದರು. ತನ್ನ ಮ್ಯಾನೇಜರ್ ನನ್ನು ಕರೆದು ರೆಸ್ಟೋರೆಂಟ್ ಮುಚ್ಚಲು ಹೇಳಿದ. ಎಲ್ಲ ಕೆಲಸಗಾರರನ್ನು ಮನೆಗೆ ಕಳುಹಿಸಿದ. ಬಳಿಕ ತನ್ನ ಮ್ಯಾನೇಜರ್ ಗೆ ಕಾರಿನ ಡಿಕ್ಕಿಯಲ್ಲಿ ಒಂದು ಶವವಿದೆ, ಅದನ್ನು ತಂದೂರ್ ನಲ್ಲಿ ಹಾಕಿ ಹುರಿದು ಒಂದು ಗತಿ ಕಾಣಿಸಬೇಕು ಎಂದು ಹೇಳಿದ. ಆದರೆ ಆ ಶವ ತನ್ನ ಪ್ರಿಯ ಪತ್ನಿ ನೈನಾಳದ್ದು ಎನ್ನುವುದನ್ನು ಮಾತ್ರ ಒತ್ತಿ ಹೇಳಲಿಲ್ಲ.
ತಂದೂರ್ ನ ಬಾಯಿ ಚಿಕ್ಕದಾಗಿತ್ತು. ಹೀಗಾಗಿ ಇಡೀ ದೇಹ ಅದರಲ್ಲಿ ಹೋಗುತ್ತಿರಲಿಲ್ಲ. ಆಗ ಸುಶೀವ್ ಹಾಗೂ ಕೇಶವ್ ಸೇರಿಕೊಂಡು ನೈನಾಳ ಶವವನ್ನು ತುಂಡು ತುಂಡು ಮಾಡಿ ತಂದೂರ್ ನೊಳಗೆ ಹಾಕಿದರು. ಅದರ ಮೇಲೆ ಬೆಣ್ಣೆ ಸುರಿದು ಸುಟ್ಟು ಹಾಕಿದರು.
ರೆಸ್ಟೋರೆಂಟ್ ಹೊರಗಡೆ ಫುಟ್ ಪಾತ್ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬ ವಿಚಿತ್ರ ವಾಸನೆಯಿಂದ ಕೂಡಿದ ಹೊಗೆ ನೋಡಿ ಜೋರಾಗಿ ಕೂಗತೊಡಗಿದ. ಸಮೀಪದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ನೊಬ್ಬ ಒಳಗೆ ಬಂದು ಅಲ್ಲಿನ ಕ್ರೂರ ದೃಶ್ಯ ನೋಡಿ ತನ್ನ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ.
ಪುರಷರ ದೌರ್ಜನ್ಯದ ಇಂತಹ ಅನೇಕ ಕಥೆಗಳು ಇವೆ. ಅದು ಜೆಸ್ಸಿಕಾ ಲಾಲ್ ಅಥವಾ ಪ್ರಿಯದರ್ಶಿನಿ ಮಟ್ಟೂ ಇಲ್ಲವೇ ನಿರ್ಭಯಾ ಕೊಲೆ ಪ್ರಕರಣವೇ ಆಗಿರಬಹುದು. ಇಲ್ಲೆಲ್ಲ ಪುರುಷ ಕ್ರೌರ್ಯದ ಉದಾಹರಣೆಗಳು ಕಂಡುಬರುತ್ತವೆ. ಆದರೆ ಪ್ರಾಣಿಗಳಲ್ಲಿ ಈ ತೆರನಾದ ಕ್ರೌರ್ಯ ಮಾತ್ರ ಕಂಡುಬರುವುದಿಲ್ಲ.
ಪುರುಷರೇಕೆ ಹೀಗಾದರು?
ಅಂದಹಾಗೆ ಈ ವಿಕೃತ ಮನೋವೃತ್ತಿ ಯಾವಾಗ ಹುಟ್ಟಿಕೊಂಡಿತು? ಯಾಕೆ ಹುಟ್ಟಿಕೊಂಡಿತು? ಯಾರು ಇದಕ್ಕೆ ಕಾರಣರು? ಸ್ತ್ರೀಯರಿಗಿಂತ ತಾನು ಶ್ರೇಷ್ಠ ಎಂಬ ಭಾವನೆ ಪುರುಷನ ಡಿಎನ್‌ಎನಲ್ಲಿ ಯಾಾಗ ಸೇರ್ಪಡೆಗೊಂಡಿತು? ನಿಸರ್ಗ ಮಾತ್ರ ಇಬ್ಬರನ್ನೂ ಪರಸ್ಪರ ಪೂರಕ ಎಂಬಂತೆ ಸೃಷ್ಟಿಸಿತ್ತೇ ಹೊರತು ಪರಸ್ಪರ ವೈರಿಗಳಂತಲ್ಲ.
ಅಂದಹಾಗೆ, ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಆಟ ಸಾವಿರಾರು ವರ್ಷಗಳ ಹಿಂದೆ ಆರಂಭವಾಯಿತು. ಆಗ ಭೂಮಿಯ ಮೇಲೆ ಧರ್ಮ ತನ್ನ ಕಾಲು ಚಾಚಲು ಆರಂಭಿಸಿತ್ತು. ಧರ್ಮವನ್ನು ಪಸರಿಸುವವರು ಮನುಷ್ಯ ಮನುಷ್ಯರ ನಡುವೆ ಯುದ್ಧ ಆಗುವಂತೆ ನೋಡಿಕೊಂಡರು. ಹೆಚ್ಚೆಚ್ಚು ಭೂಭಾಗದ ಮೇಲೆ ತನ್ನ ಅನುಯಾಯಿಗಳನ್ನು ಹೊಂದಲು ಮತ್ತು ತಮ್ಮ ವಿಚಾರಗಳನ್ನು ಹರಡಲು ಅವರು ಭೀಕರ ಯುದ್ಧಗಳನ್ನು ನಡೆಸಿದರು. ದೇವರ ಅದೃಶ್ಯ ಶಕ್ತಿಯನ್ನು ಬಿಂಬಿಸಿದರು ಹಾಗೂ ತಮ್ಮ ಮಾತು ನಡೆಯುವಂತೆ ಮಾಡಲು ಸೃಷ್ಟಿ ನಿಯಮಗಳನ್ನು ಅಪಹಾಸ್ಯ ಮಾಡುತ್ತಾ, ದುರ್ಬಲರ ಮೇಲೆ ಆರೋಪ ಹೊರಿಸತೊಡಗಿದರು.
ವಿರೋಧ ಮಾಡುವ ಸ್ತ್ರೀಯರನ್ನು ಅವರಿಂದ ಬಲವಂತವಾಗಿ ಕಿತ್ತುಕೊಂಡರು. ಅವರ ಜೊತೆ ದೈಹಿಕ ಸಂಬಂಧ ಹೊಂದಿ ಅಕ್ರಮ ಸಂತಾನ ಸೃಷ್ಟಿಸಿದರು. ಇಲ್ಲಿಂದಲೇ ಜೀವನ ನಿರಂತರತೆ ಶುರುವಾಯಿತು.
ನಿಸರ್ಗಗುಣ ಕಿತ್ತುಕೊಂಡ ಧರ್ಮ
ಧರ್ಮ ಮಾನವ ಕುಲವನ್ನು ಎಂದೂ ಉದ್ಧಾರ ಮಾಡಲಿಲ್ಲ. ಅದು ಮನುಷ್ಯರ ನೈಸರ್ಗಿಕ ಗುಣವನ್ನು ಕಿತ್ತುಕೊಂಡಿದೆ. ಧರ್ಮದ ಉಗಮದ ಜೊತೆಗೆ ಮನುಷ್ಯ ಈ ಭೂಮಿಯ ಮೇಲೆ ಕಂಡುಬರುವ ಜೀವಿಗಳಲ್ಲಿಯೇ ಭಿನ್ನ ಜೀವಿಯಾದ. ಅವನು ನಿಸರ್ಗದ ನಿಯಮಗಳನ್ನು ಅವಹೇಳನ ಮಾಡತೊಡಗಿದ. ಪುರುಷ ತನ್ನನ್ನು ತಾನು ಎಷ್ಟೊಂದು ಶ್ರೇಷ್ಠ ಎಂದು ಭಾವಿಸುತ್ತಾನೆಂದರೆ ಅವನು ನಿಸರ್ಗದ ವಿನಾಶಕ್ಕೂ ಇಳಿದುಬಿಟ್ಟ.
ಕಾಲಕ್ರಮೇಣ ಅವನ ಗುಣಗಳಲ್ಲಿ ಕ್ರೌರ್ಯ, ಭಯ, ಕ್ರೋಧ, ವಿನಾಶ, ಶೋಷಣೆ, ಪೀಡಿಸುವಿಕೆಯಂತಹ ಗುಣಗಳು ಅವನ ಡಿಎನ್‌ಎನಲ್ಲಿ ಸೇರ್ಪಡೆಗೊಳ್ಳುತ್ತಾ ಹೋದವು. ಈಗ ಅವನು ತನ್ನನ್ನು ತಾನು ಸ್ತ್ರೀಗಿಂತ ಶ್ರೇಷ್ಠ ಎಂದು ಭಾವಿಸುತ್ತಾ ಅವಳನ್ನು ಕೂಡ ಹಿಂಸೆಯ ಸಾಧನ ಎಂದು ಕಾಣುತ್ತಾನೆ. ಇದಕ್ಕೆ ಹೊಣೆಯಾಗಿರುವುದು ಧರ್ಮ.
ಬಾಲ್ಯದಲ್ಲಿ ನಾವು ಕಥೆಯೊಂದನ್ನು ಕೇಳಿದ್ದೆ. ಸತ್ಯವಾನ ಹಾಗೂ ಸಾವಿತ್ರಿಯ ಪ್ರೀತಿಯ ಕಥೆಯದು. ಸತ್ಯವಾನ ಸತ್ತುಹೋಗುತ್ತಾನೆ. ಯಮ ಅವನ ಆತ್ಮವನ್ನು ತೆಗೆದುಕೊಂಡು ಹೊರಟು ನಿಲ್ಲುತ್ತಾನೆ. ಆಗ ಸಾವಿತ್ರಿ ಅವನ ಬೆನ್ನಟ್ಟಿ ಅವನ ಮನವೊಲಿಸಿ ತನ್ನ ಗಂಡನ ಆತ್ಮವನ್ನು ವಾಪಸ್ ತಂದು ಅವನ ದೇಹದೊಳಗೆ ಸೇರಿಸಿ, ಅವನನ್ನು ಪುನಃ ಜೀವಂತಳಾಗಿಸುತ್ತಾಳೆ. ಆದರೆ ತನ್ನ ಹೆಂಡತಿಗಾಗಿ ಹೀಗೆ ಮಾಡಿದ ಪುರುಷರ ಕಥೆ ನಮಗೆ ಎಲ್ಲೂ ಸಿಗುವುದಿಲ್ಲ. ಇವೆಲ್ಲ ಕಥೆಗಳು ಧರ್ಮದ ರಚನೆಯಾಗಿವೆ. `ಆ ಕೆಲಸ ಕೇವಲ ನಿನ್ನದು, ಪುರುಷನದಲ್ಲ’ ಎಂದು ಧರ್ಮ ಅವರಿಗೆ ಒತ್ತಿ ಒತ್ತಿ ಹೇಳುತ್ತಿರುತ್ತದೆ.
ಸಾವಿರಾರು ವರ್ಷಗಳಿಂದ ಸ್ತ್ರೀಯರು ಪುರುಷರಿಗಾಗಿ ತಮ್ಮದಾದ ಬಹಳಷ್ಟನ್ನು ಕಳೆದುಕೊಳ್ಳುತ್ತಿದ್ದಾರೆ. ಯುದ್ಧದಲ್ಲಿ ಪತಿಯ ಸಾವು ಸಂಭವಿಸಿದರೆ ಅವನ ಹೆಂಡತಿ ಕೂಡಲೇ ಅವನ ಜೊತೆಗೆ ಸಾಯುವುದರ ಮೂಲಕ ಸತಿ ಆಗುತ್ತಿದ್ದರೆ, ತನ್ನ ಹೆಂಡತಿಯ ಸಾವಿಗೆ ಯಾವ ಪತಿ ತಾನೇ ಹೀಗೆ ಮಾಡುತ್ತಾನೆ? ಎಲ್ಲ ನಿಯಮಗಳು, ಎಲ್ಲ ವ್ಯವಸ್ಥೆಗಳು ಹಾಗೂ ಶಿಸ್ತುಪಾಲನೆಯನ್ನು ಪುರುಷನೇ ಹುಟ್ಟುಹಾಕಿದ್ದಾನೆ. ಧರ್ಮದ ಹೆಸರಿನಲ್ಲಿ ಈ ಎಲ್ಲ ಸಂಗತಿಗಳು ಸೃಷ್ಟಿಸಲ್ಪಟ್ಟಿವೆ.
ಪುರುಷನು ಸ್ತ್ರೀಯರ ಮೇಲೆ ಧರ್ಮವನ್ನು ಹೇರುತ್ತಾನೆ. ಅವನೇ ಈ ಎಲ್ಲ ಕಥೆಗಳ ಸೃಷ್ಟಿಕರ್ತ. ಅದರಲ್ಲಿ ಸ್ತ್ರೀ ಪುರುಷನನ್ನು ಕಾಪಾಡಿ ಬರುತ್ತಾಳೆ ಎಂದು ಹೇಳಲಾಗುತ್ತದೆ ವಿನಾ ಪುರುಷ ಮಹಿಳೆಯನ್ನು ಕಾಪಾಡಿದ ಎಂದು ಎಲ್ಲಿಯೂ ಹೇಳಲ್ಪಡುವುದಿಲ್ಲ. ಒಬ್ಬಳು ಹೋದರೆ ಪುರುಷ ಇನ್ನೊಬ್ಬಳ ಶೋಧದಲ್ಲಿ ತೊಡಗುತ್ತಾನೆ. ಪುರುಷ ತನ್ನ ಅನುಕೂಲಕ್ಕಾಗಿ ಎಲ್ಲ ವ್ಯವಸ್ಥೆ ಮಾಡಿಕೊಂಡಿರುತ್ತಾನೆ. ಧರ್ಮದ ಸೃಷ್ಟಿಕರ್ತ ಪುರುಷರೇ ಈ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ತನ್ನನ್ನು ತಾನು ಧರ್ಮಗುರು ಎಂದು ಹೇಳಿಕೊಂಡ ಪುರುಷ ತನಗೆ ಬೇಕಾದ ಎಲ್ಲಾ ಐಷಾರಾಮಿ ವ್ಯವಸ್ಥೆಗಳನ್ನೆಲ್ಲ ಮಾಡಿಕೊಂಡ. ಮನುಷ್ಯನಲ್ಲಿ ಒಂದಿಷ್ಟು ಶಕ್ತಿ ಇದ್ದೇ ಇರುತ್ತದೆ. ಯಾವುದೊ ಕಾರಣದಿಂದ ಆತ ಶಕ್ತೀಹೀನನಾದಾಗ ಅವನ ಮೇಲೆ ಸವಾರಿ ಮಾಡಲಾಗುತ್ತದೆ. ಅದೇ ಕಾರಣದಿಂದ ಗುಲಾಮಗಿರಿ ವ್ಯವಸ್ಥೆ ಬಂತು.
ದೈಹಿಕವಾಗಿ ಪುರುಷ ಒಂದಿಷ್ಟು ಶಕ್ತಿಶಾಲಿ. ಆದರೆ ಅವನಲ್ಲಿ ಸಹನಶಕ್ತಿ ಇಲ್ಲ. ಮಹಿಳೆಯ ಬಳಿ ದೈಹಿಕ ಶಕ್ತಿ ಕಡಿಮೆ ಇದೆ. ಆದರೆ ಸಹನಶಕ್ತಿ ಅಪಾರವಾಗಿದೆ. ಇಬ್ಬರನ್ನು ಸೃಷ್ಟಿ ಹೇಗೆ ರೂಪಿಸಿದೆಯೆಂದರೆ, ಇಬ್ಬರ ಶಕ್ತಿಯನ್ನು ಸಮ್ಮಿಳಿತಗೊಳಿಸಿ ಜೀವನದ ನಿರಂತರತೆಯನ್ನು ಕಾಯ್ದುಕೊಂಡು ಹೋಗಬೇಕು ಎನ್ನುವುದು ಅದರ ನಿಯಮ.
ಮೂಲೆಗುಂಪಾದ ನಿಯಮ
ಪುರುಷನ ಕೆಲಸ ಆಹಾರ ಸಂಪಾದನೆ, ಸುರಕ್ಷತೆ ನೀಡುವುದು, ಪ್ರೀತಿ ಕೊಡುವುದು. ಸ್ತ್ರೀಯ ಕೆಲಸ ಆ ಪ್ರೀತಿಯನ್ನು ತನ್ನ ಒಡಲಲ್ಲಿ ಪೋಷಿಸಿ ಹೊಸ ಜೀವವೊಂದಕ್ಕೆ ಜನ್ಮ ನೀಡುವುದಾಗಿದೆ. ಇಡೀ ಸೃಷ್ಟಿ ಇದೇ ನಿಯಮದನ್ವಯ ನಡೆಯುತ್ತಿದೆ. ಮಹಿಳೆ 9 ತಿಂಗಳುಗಳ ಕಾಲ ಕಂದನನ್ನು ಒಡಲಲ್ಲಿ ಇಟ್ಟುಕೊಂಡು ಬಳಿಕ ಅದಕ್ಕೆ ಜನ್ಮ ನೀಡುವ ನೋವಿನಿಂದ ಸಾಗಬೇಕಾಗುತ್ತದೆ. ಈ ಕಾರಣದಿಂದ ಆಕೆಗೆ ಸಹನಾ ಶಕ್ತಿಯನ್ನು ಒಂದಿಷ್ಟು ಹೆಚ್ಚೇ ನೀಡಿದೆ. ಈ 9 ತಿಂಗಳುಗಳ ಕಾಲ ಪುರುಷ ಅವಳ ಉಸ್ತುವಾರಿ ನೋಡಿಕೊಳ್ಳಬೇಕಾಗುತ್ತದೆ. ಆಕೆಗೆ ಆಹಾರದ ವ್ಯವಸ್ಥೆ ಮಾಡಬೇಕಾಗುತ್ತದೆ. ಹೀಗಾಗಿ ಅವನಿಗೆ ದೈಹಿಕ ಶಕ್ತಿಯನ್ನು ಹೆಚ್ಚುವರಿಯಾಗಿ ಕೊಟ್ಟಿತು. ಆದರೆ ಕೆಲವು ಆತುರದ ಬುದ್ಧಿಯ ಜನರು ಸೃಷ್ಟಿಯ ಈ ಸಾಧಾರಣ ನಿಯಮವನ್ನು ಭಂಗ ಮಾಡಿ ಅದರ ಮೇಲೆ ಧರ್ಮವನ್ನು ಪ್ರತಿಷ್ಠೆಪಡಿಸಿದರು ಹಾಗೂ ಪುರುಷಶಕ್ತಿಯನ್ನು ತಪ್ಪಾಗಿ ಬಳಸಲು ಒತ್ತಡ ಹೇರಿದರು. ಅವನನ್ನು ಯುದ್ಧದಲ್ಲಿ ತೊಡಗುವಂತೆ ಮಾಡಿದರು.
ಧರ್ಮದಿಂದ ಸೃಷ್ಟಿಯಾದ ಈ ವಿಕೃತಿಗಳು ಸಾವಿರಾರು ವರ್ಷಗಳಿಂದ ಪುರುಷ ರಕ್ತದಲ್ಲಿ ಚಲಿಸುತ್ತಿವೆ. ಅದರ ಪರಿಣಾಮವೇ ಕೌಟುಂಬಿಕ ದೌರ್ಜನ್ಯ.
– ನಸೀಮ್ ಅನ್ಸಾರಿ