ಮತ್ತಷ್ಟು ಚಿಂತೆಗೆ ಒಳಗಾದ ಸಾರಾ

ಇತ್ತೀಚೆಗಷ್ಟೆ ಸಾರಾ ಅಲೀಖಾನ್‌ ಳ ಚಿತ್ರ `ಲವ್ ಆಜ್‌ ಕಲ್’ ಬಿಡುಗಡೆಯಾಯಿತು. ಇದೇ ಹೆಸರಿನಲ್ಲಿ ದಶಕಗಳಾಚೆ ಇವಳಪ್ಪನ ಅಂದ್ರೆ ಸೈಫ್‌ ಅಲಿಖಾನ್‌ ನ ಚಿತ್ರ ರಿಲೀಸ್‌ ಆಗಿತ್ತು, ಆ ಕಾಲಕ್ಕೆ ಓಡಿತ್ತು. ಇತ್ತೀಚೆಗೆ ನಡೆದ ಒಂದು ಪತ್ರಿಕಾ ಗೋಷ್ಠಿಯಲ್ಲಿ ಸಾರಾಳನ್ನು ಆ ಬಗ್ಗೆ ರಿಪೀಟ್‌ ಟೈಟಲ್ ಏಕೆಂದು ಪ್ರಶ್ನಿಸಲಾಯಿತು. ತುಸು ಹಿಂಜರಿಯುತ್ತಾ ಅವಳು, ಇದು ಆ ಚಿತ್ರದ ಸೀಕ್ವೆಲ್ ಅಲ್ಲ, ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ, ಹೊಸ ಕಥೆ ಎಂದಳು. ಈ ಚಿತ್ರ ಎಷ್ಟು ಮಾತ್ರ ಸಕ್ಸೆಸ್‌ ಆಗಲಿದೆ ಎಂದು ಕಾಲವೇ ಹೇಳಬೇಕು. ಆದರೆ ನಂಬಲರ್ಹ ಮೂಲಗಳ ಪ್ರಕಾರ, ಇವಳ ತಾಯಿ ಅಮೃತಾ ಸಿಂಗ್‌ ಅನಿಲ್ ‌ಕಪೂರ್‌ ಜೋಡಿಯ `ಚಮೇಲಿ ಕೀ ಶಾದಿ’  ಚಿತ್ರವನ್ನು ಮಗಳ ಹೆಸರಲ್ಲಿ ಮತ್ತೆ ರೀಮೇಕ್‌ ಮಾಡುತ್ತಿದ್ದಾರೆ. ಅಪ್ಪನದಾದ ಮೇಲೆ ಇದ್ಯಾಕಮ್ಮ ಅಮ್ಮನ ಚಿತ್ರ ಹಿಡಿದಿದ್ದೀಯಾ ಎಂದರೆ ಸಾರಾ ಕಕ್ಕಾಬಿಕ್ಕಿ ಆಗದೇ ಇದ್ದಾಳಾ?

ತನ್ನ ಬ್ರಾಂಡ್ವ್ಯಾಲ್ಯೂ ಗಮನಿಸದ ಜಾಹ್ನವಿ

jhanavi-3

ಈಗ ಬಹುತೇಕ ಸ್ಟಾರ್‌ ಮಕ್ಕಳು ಹೀಗೆ ಮಾಡಿದರೆ ಆಶ್ಚರ್ಯ ಆಗದೆ ಇದ್ದಿತೇ? ವಿಷಯ ಶ್ರೀದೇವಿ ಮಗಳು ಜಾಹ್ನವಿಯದು. ಕೇವಲ 1-2 ಚಿತ್ರಗಳಲ್ಲಷ್ಟೇ ನಟಿಸಿರುವ ಈಕೆ, ಈಗಲೇ ಸ್ಟಾರ್‌ ಗಿರಿಯ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದಾಳೆ. ಯಾವುದೋ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಈಕೆ, ಬಾಲಿವುಡ್‌ ನಲ್ಲಿ ನಾಯಕಿಯರ ಬ್ರಾಂಡ್‌ ವ್ಯಾಲ್ಯೂ ಕಡಿಮೆ ಆಗಿದೆ ಎಂದು ಗೊಣಗಿದಳು. ಅವರು ಹೆಚ್ಚು ಫೀಸ್‌ ಡಿಮ್ಯಾಂಡ್‌ ಮಾಡುವ ಹಾಗಿಲ್ಲ ಎಂದಳು. ಈ ಮಾತೇನೋ ಒಂದು ಹಂತದವರೆಗೆ ಸರಿ. ಆದರೆ ತನ್ನನ್ನು ತಾನು ಇನ್ನೂ ಸ್ಟಾರ್‌ ಆಗಿಸಿಕೊಳ್ಳದ ಈ ಮಿನಿಸ್ಟಾರ್‌, ಈಗಲೇ ಇಂತಹ ಸ್ಟೇಟ್‌ ಮೆಂಟ್ಸ್ ಕೊಡುವ ಅಗತ್ಯವೇನು? ಇತ್ತೀಚೆಗೆ ಈಕೆ ತಿರುಪತಿಗೆ `ಬರಿಗಾಲಲ್ಲಿ’ ಮೆಟ್ಟಿಲು ಹತ್ತಿ ದರ್ಶನ ಪಡೆದಳು ಎಂಬುದೂ ಸುದ್ದಿಯಾಯ್ತು. ಹಲೋ ಮರಿ ಸ್ಟಾರ್‌, ಈಗಲೇ ಇದೆಲ್ಲ ಬೇಕಾ ಎಂಬುದು ಹಿತೈಷಿಗಳ ಅಂಬೋಣ.

ಇವರು ಒಂದಾದರೆ ಜನರಿಗೆ ಏನಂತೆ?

Sath-1

ಅರ್ಜುನ್‌ ಕಪೂರ್‌ ಹಾಗೂ ಮಲೈಕಾ ಅರೋರಾ ಇಬ್ಬರೂ ಲಿವ್ ‌ಇನ್‌ ರಿಲೇಶನ್‌ ಗೆ ಬಂದು ಬಹಳ ದಿನಗಳಾಗಿವೆ. ಆದರೆ ಬೇಹುಗಾರರು ಈ ಜೋಡಿಯನ್ನು ಕಿಚಾಯಿಸುವುದನ್ನು ಇನ್ನೂ ಬಿಟ್ಟಿಲ್ಲ. ಎರಡು ಸ್ವತಂತ್ರ ಹಕ್ಕಿಗಳು ತಮ್ಮಷ್ಟಕ್ಕೆ ತಾವು ಎಂಜಾಯ್‌ ಮಾಡುತ್ತಿದ್ದರೆ ಅದನ್ನು ಕಂಡು ಅಸೂಯೆಪಡುವುದೇಕೆ? ಈ ಜೋಡಿ ಕಂಡು ಜನ ಒಂದು ಪಾಠ ಕಲಿಯಬೇಕಿದೆ, ಒಲ್ಲದ ದಾಂಪತ್ಯದಲ್ಲಿ ಅವಳು ಉಸಿರುಗಟ್ಟಿ ಬಾಳುವ ಬದಲು ಹೊಸ ಬಾಳಿಗೆ ತೊಡಗಲು ಮುಂದಾಗಿದ್ದಾಳೆ. ಅವಳಿಗಿಂತ ಅವನು ಕಿರಿಯ, ಆದರೇನಂತೆ? ಜೋಡಿ ಚೆನ್ನಾಗಿದೆ ಅನ್ನುವುದು ಮುಖ್ಯ. ಸದಾ ಪೂಜೆ ಪುನಸ್ಕಾರಗಳಲ್ಲಿ ಮುಳುಗಿರುವ ಹೆಂಗಸರು ಮಲೈಕಾಳಿಂದ ಫಿಟ್ನೆಸ್‌ ಹಾಗೂ ಪ್ರೇಮಕ್ಕೆ ವಯಸ್ಸು, ಧರ್ಮದ ಹಂಗಿಲ್ಲ ಎಂದು ಫ್ರೀಬರ್ಡ್‌ ಆಗಿರುವ ಅರ್ಜುನ್‌ ನನ್ನು ಕಂಡು ತರುಣರು ಕಲಿಯಬೇಕಿದೆ. ಗಾಸಿಪ್‌ ಮಾಡುವ ಹೆಂಗಸರು ಮಲೈಕಾಳಿಂದ ಫಿಟ್ನೆಸ್‌ ಕಲಿತರೆ ತಪ್ಪೇನು?

ಸ್ಕ್ರಿಪ್ಟ್ ನಲ್ಲಿ ದಮ್ ಇದ್ದರೆ ನಾವು ಗೆದ್ದಂತೆ!

jimmi-2

ಹೆಚ್ಚಿನ ಹೆಸರು, ಹಣ ಇಲ್ಲದಿದ್ದರೂ ಸಿಕ್ಕಿದ ಕೆಲವೇ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು ತನ್ನ ಸ್ವಪ್ರತಿಭೆಯಿಂದ ಮಿಂಚುತ್ತಿರುವ ಕೆಲವೇ ಕಲಾವಿದರಲ್ಲಿ ಜಿಮ್ಮಿ ಶೇರ್‌ ಗಿಲ್ ‌ಸಹ ಒಬ್ಬ. ಕಲಾವಿದರ ಗುಂಪಲ್ಲಿ 10ರಲ್ಲಿ 11 ಆಗಲು ಬಯಸದ ಜಿಮ್ಮಿ ತನ್ನದೇ ಆದ ಅಭಿಮಾನಿಗಳ ಬಳಗ ಹೊಂದಿದ್ದಾನೆ. ಹೀಗಾಗಿ ತನಗೊಂದು ಆಫರ್‌ ಬಂದಾಗೆಲ್ಲ ಈತ, ತನ್ನ ಪಾತ್ರದ ಕುರಿತು ಆಮೂಲಾಗ್ರವಾಗಿ ತಿಳಿದುಕೊಂಡು, ಚಿತ್ರದ ಸ್ಕ್ರಿಪ್ಟ್ ನ್ನೂ ವಿವರವಾಗಿ ಪರಿಶೀಲಿಸುತ್ತಾನೆ. ಈತನ ವಿಚಾರವನ್ನು ಬಹುತೇಕರು ಪ್ರಶಂಸಿಸುತ್ತಾರೆ. `ಮುನ್ನಾಭಾಯಿ, ತನು ವೆಡ್ಸ್ ಮನು’ ಮುಂತಾದ ಚಿತ್ರಗಳಲ್ಲಿ ಈತ ಯಶಸ್ವೀ ಎನಿಸಿದ್ದೇ ಹೀಗೆ. ಅಲ್ಲೆಲ್ಲ ಈತನ ಪಾತ್ರ ಚಿಕ್ಕದಾಗಿದ್ದರೂ, ಇಂದಿಗೂ ಜನ ಅದನ್ನು ನೆನಪಿರಿಸಿಕೊಳ್ಳುವಂತೆ ಮಾಡಿದ್ದಾನೆ. ಡಿಜಿಟಲ್ ನಲ್ಲಿ ಈಗ `ರಂಗ್‌ ಬಾಜ್‌ ಫಿರ್‌ ಸೇ’ ವೆಬ್‌ ಸೀರೀಸ್‌ ನಲ್ಲಿ ಧೂಳೆಬ್ಬಿಸಿದ್ದಾನೆ. ಹೀಗಾಗಿ ಸ್ಕ್ರಿಪ್ಟ್ ನಲ್ಲಿ ದಮ್ ಇದ್ದರೆ ನಾವು ಗೆದ್ದಂತೆ ಎನ್ನುತ್ತಾನೆ!

ಬೋಲ್ಡ್ ಆದ ನುಸ್ರತ್

Zaira-3 (1)

ಬಾಲಿವುಡ್‌ ನಾಯಕಿಯರ ನಡುವೆ ಅಂತೂ ಬೋಲ್ಡ್ ಅವತಾರವಾದ ಹುನ್ನಾರವೇ ನಡೆದಿದೆ. ಒಮ್ಮೆ ದಿಶಾ ಪಟಾನಿ ತನ್ನ ಗ್ಲಾಮರಸ್‌ ಲುಕ್ಸ್ ನಿಂದ ಸೋಶಿಯಲ್ ಮೀಡಿಯಾದ ತಾಪಮಾನ ಹೆಚ್ಚಿಸಿದರೆ, ಮತ್ತೊಮ್ಮೆ ನುಸ್ರತ್‌ ಭರೂಚಾ. ನುಸ್ರತ್‌ ಳ ಹೈ ಥೈ ಸ್ಲಿಟೆಡ್‌ ಡ್ರೆಸ್‌ ಇದೀಗ ಯುವಜನತೆಯ ಸೆನ್ಸೇಶನ್‌ ಆಗಿದೆ. ಬಿಕಿನಿ ಮತ್ತು ಮೋನೋಕನಿಯಲ್ಲಿ ತನ್ನ ಫೋಟೋವನ್ನು ಫೇಸ್ ಬುಕ್‌ ಗೆ ಹಾಕಿಕೊಳ್ಳುವ ನಟಿಯರಿಗಿಂತ ನುಸ್ರತ್‌-2 ಹೆಜ್ಜೆ ಮುಂದಿದ್ದಾಳೆ. ನುಸ್ರತ್‌ ನಿರ್ಮಾಪಕರಿಗೆ ಅವರ ಚಿತ್ರಗಳನ್ನು ಹಿಟ್ ಮಾಡಿಸುವ ನೆಪದಲ್ಲಿ, ತನ್ನ ಬೋಲ್ಡ್ ನೆಸ್‌ ನಿಂದ ಅವರ ಚಿತ್ರಗಳ ಹಾಟ್‌ ನೆಸ್‌ ಹೆಚ್ಚಿಸುತ್ತಿಲ್ಲ ತಾನೇ? ಇದಕ್ಕೆ ನುಸ್ರತ್‌ ತಾನೇ ಉತ್ತರಿಸಬೇಕಷ್ಟೆ.

ಇವರ ಬಯಕೆ ತುಸು ಭಿನ್ನ

anil-1

ಜಂಪಿಂಗ್‌ ಜ್ಯಾಕ್‌ ಜಿತೇಂದ್ರ ನಂತರ ಬಾಲಿವುಡ್‌ ನಲ್ಲಿ ಯಾರಾದರೂ ಫಾರೆವರ್‌ ಯಂಗ್‌ ಅಂತಿದ್ದರೆ ಅದು ಕೇವಲ ಒನ್‌& ಓನ್ಲಿ ಅನಿ‌ಲ್ ಕಪೂರ್‌! ಆದರೆ ಅವರ ಬಯಕೆ ತುಸು ಭಿನ್ನವಾದುದು. ಇತ್ತೀಚೆಗೆ ಅನಿಲ್ ‌ಫೇಸ್‌ ಬುಕ್‌ ನಲ್ಲಿ ಫರ್ಹಾನ್‌ ಅಖ್ತರ್‌ ಪೂಲ್ ‌ನಲ್ಲಿ ಒಂದು ಫೋಟೋ ಪೋಸ್ಟ್ ಮಾಡಿ, `ನನಗೆ ಮುಂದಿನ ಜನ್ಮದಲ್ಲಾದರೂ ಫರ್ಹಾನ್‌ ತರಹ ಬಾಡಿ ಬೇಕು,’ ಎಂದು ಕ್ಯಾಪ್ಶನ್‌ ಬರೆದಿದ್ದರು. ಅಯ್ಯೋ….. ಇದರಿಂದ ನಿಮ್ಮ ಅಭಿಮಾನಿಗಳಿಗೆ ಶಾಕ್‌ ತಗುಲೀತು ಅನಿಲ್ ‌ಜಿ, ಕೇರ್‌ ಫುಲ್! ಅಂದಹಾಗೆ ಇವರ ಮೊದಲ ಚಿತ್ರ ಯಾವುದು ಗೊತ್ತೇ? ಮಣಿರತ್ನಂ ನಿರ್ದೇಶನದ ಕನ್ನಡದ `ಪಲ್ಲವಿ ಅನುಪಲ್ಲವಿ.

ಜಾಯ್ರಾಳಿಗೆ ಜವಾಬು ಬೇಕಂತೆ

73926069.cms

ಜಾಯ್ರಾ ಈಗಾಗಲೇ ಬಾಲಿವುಡ್‌ ನಿಂದ ಮಾರು ದೂರ ಸರಿದಿದ್ದರೂ ಫೇಸ್‌ ಬುಕ್‌ ನಲ್ಲಿ ಸದಾ ಶಾಕಿಂಗ್‌ ನ್ಯೂಸ್ ಕೊಡುತ್ತಿರುತ್ತಾಳೆ. ಕಾಶ್ಮೀರದಲ್ಲಿ ಪ್ರಧಾನಿಯ ಆಡಳಿತಾತ್ಮಕ ಬದಲಾವಣೆ ಈಕೆಯ ಟೀಕೆಗೆ ಗುರಿಯಾಗಿದೆ. ಜಾಯ್ರಾ ಸೋಶಿಯಲ್ ಮೀಡಿಯಾದಲ್ಲಿ ತನ್ನ ಅಭಿಪ್ರಾಯ ತಿಳಿಸುತ್ತಾ, ಸರ್ಕಾರ ಇತ್ತೀಚೆಗೆ ಕಾಶ್ಮೀರದಲ್ಲಿ ಮಾಡಿರುವ ಬದಲಾವಣೆಗಳು ಅದು ಕಾಶ್ಮೀರಿಗಳನ್ನು ಒಳಗೊಳಗೆ ನುಚ್ಚುನೂರಾಗಿಸಿದೆ. ಅನೇಕಾನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇದಕ್ಕೆಲ್ಲ ಜವಾಬು ನೀಡುವವರು ಯಾರು? ಕಾಶ್ಮೀರಿಗಳ ಮನದಾಸೆಯನ್ನು ಮುರುಟಿ ಹಾಕಲಾಗಿದೆ. ಯಾವ ಜಾಗದಲ್ಲಿ ನೆಮ್ಮದಿಯಾಗಿ ಉಸಿರಾಡಲಿಕ್ಕೂ ಆಗದೋ ಅಂಥ ಜಾಗದಲ್ಲಿ ಯಾಕೆ ವಾಸವಿರಬೇಕು? ಈಕೆಯ ಈ ಮಹಾನ್‌ ಸವಾಲುಗಳಿಗೆ ಸರ್ಕಾರ ಎಂದು ಉತ್ತರ ಕೊಟ್ಟೀತೋ ನೋಡೋಣ.

ನನ್ನ ನಿನ್ನ ಮನ ಸೇರಿತು!

Aalia-3

ಹಳೆಯ ಚಿತ್ರದ ಈ ಸಾಲು ಇತ್ತೀಚೆಗೆ ರಣಬೀರ್‌ ಆಲಿಯಾರ ಪಾಲಿಗೆ ಅಕ್ಷರಶಃ ನಿಜವಾಗಿದೆ. ನಡೆದದ್ದಿಷ್ಟೇ, ಇತ್ತೀಚೆಗೆ ಯಾವುದೇ ಪಾರ್ಟಿ ಇರಲಿ, ಒಬ್ಬಂಟಿಯಾಗಿ ಇವರಿಬ್ಬರೂ ಕಾಣಿಸುವುದೇ ಇಲ್ಲ. ಬಂದರೆ ಯಾವಾಗಲೂ ಜೋಡಿಯಾಗಿ ಇಲ್ಲದಿದ್ದರೆ ನಾಪತ್ತೆ! ಇದಕ್ಕೆ ರಣಬೀರ್‌ ನ ತಂದೆ ರಿಷಿ ಕಪೂರ್‌ ಸಹ ಒಪ್ಪಿಕೊಂಡು, ಆಲಿಯಾ ನಮ್ಮ ಸುಸಂಸ್ಕೃತ ಸೊಸೆ ಎಂದು ಹಸಿರು ನಿಶಾನೆ ತೋರಿಸಿದ್ದಾರೆ. ಅದೇ ತರಹ ಭಾವಿ ಅತ್ತೆ ನೀತೂ ಸಿಂಗ್‌ ಜೊತೆ ನೆರಳಿನಂತೆ ಎಲ್ಲಾ ಫಂಕ್ಷನ್‌ ಗಳಲ್ಲೂ ಕಂಡುಬರುತ್ತಾಳೆ. ಯಾವಾಗ ಇವರ ಮದುವೆ ಡೇಟ್ಸ್ ಹೊರಬೀಳಲಿದೆಯೋ ಎಂದು ಸುದ್ದಿಗಾರರು ಕಾತರದಿಂದ ಕಾಯುತ್ತಿದ್ದಾರೆ. ಸುದ್ದಿಗಾರರಿಗೆ ಇರುವುದು ಒಂದೇ ಕೆಲಸ, ಯಾವ ಸಿನಿ ತಾರೆಯರು ಸದಾ ಅಂಟಿಕೊಂಡು ಸುತ್ತಾಡುತ್ತಾರೋ ಇವರುಗಳು ಅವರ ನೆರಳಾಗಿ ಬಿಡುತ್ತಾರೆ.

ಆಯ್ಕೆ ಎಂದರೆ ಹೀಗಿರಬೇಕು

_Juda-1

ಆಯುಷ್ಮಾನ್‌ ಖುರಾನಾ ಅಂದ್ರೆ ಹಿಟ್‌ ಪದಕ್ಕೆ ಪರ್ಯಾಯವಾಗಿದ್ದಾನೆ! ಆತನನ್ನು ಅವನ ಯಶಸ್ಸಿನ ರಹಸ್ಯದ ಬಗ್ಗೆ ಕೇಳಿದಾಗ, ಅವನು ಹೇಳಿದ್ದೆಂದರೆ, ತಾನು ಸಿನಿಮಾ ಆರಿಸಿಕೊಳ್ಳುವಾಗ ಎಲ್ಲಕ್ಕೂ ಭಿನ್ನವಾದ ತೆರೆಮರೆಯಲ್ಲೇ ಉಳಿದಿರುವಂಥ ವಿಷಯಗಳಿಗೆ ಮಾತ್ರ ಪ್ರಾಶಸ್ತ್ಯ ಕೊಡುವುದಾಗಿ ಹೇಳಿದ. ಅದರಲ್ಲೂ ಜನ ಹೊರಗೆ ಹೋಗಿ ಆ ವಿಷಯದ ಬಗ್ಗೆ ಮಾತನಾಡದೆ ಇರುವಂಥ ಅಪರೂಪದ ಸಬ್ಜೆಕ್ಟ್ ಆಗಿರಬೇಕಂತೆ. ಇಂಥ ವಿಷಯಗಳು ರೊಮಾನ್ಸ್, ಆ್ಯಕ್ಷನ್‌ ಗಿಂತ 100 ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿದ್ದು, ಜನಸಾಮಾನ್ಯರ ಜೀವನದ ಮೇಲೂ ಪ್ರಭಾವ ಬೀರುವಂತಿರಬೇಕು. ವಾಹ್‌ ಆಯುಷ್‌! ಸಿನಿಮಾದ ಬಜೆಟ್‌ ನಲ್ಲಿ ಅಲ್ಲ ಸ್ಕ್ರಿಪ್ಟ್ ನಲ್ಲಿ ದಮ್ ಇರಬೇಕೆಂಬ ಈ ವಿಷಯ ಖಾನ್‌ ತ್ರಯರ ಕಿವಿಗೂ ತಲುಪಿ ಅವರ ಮಂಡೆಗೆ ಏರಿದರೆ, ಎಷ್ಟೋ ಉತ್ತಮ ಚಿತ್ರಗಳನ್ನು ನಿರೀಕ್ಷಿಸಬಹುದು.

ಹೊಸ ಸ್ಟೈಲ್ ಐಕಾನ್ಅನನ್ಯಾ

ananya-2

ಬಾಲಿವುಡ್‌ ನ ಸ್ಟೈಲಿಶ್‌ ಐಕಾನ್‌ ಎಂಬ ಪಟ್ಟ ಇದುವರೆಗೂ ಸೋನಂ ಕಪೂರ್‌ ಳ ಬಳಿ ಇತ್ತು. ಆದರೆ ಅದೀಗ ದಶಕಗಳಾಚೆಯ ಆ್ಯಕ್ಷನ್‌ ನಟ ಚುಂಕಿ ಪಾಂಡೆಯ ಮಗಳು ಅನನ್ಯಾ ಪಾಂಡೆಯದಾಗಿದೆ. ಶಾರ್ಟ್‌ ಡ್ರೆಸ್‌ ಇರಲಿ, ಗೌನ್‌ ಅಥವಾ ಟ್ರೆಡಿಶನಲ್ ಔಟ್ ಫಿಟ್‌ ಆಗಿರಲಿ, ಅನನ್ಯಾಳ ಡ್ರೆಸ್‌ ಸೆನ್ಸ್ ಈಸ್‌ ಸಿಂಪ್ಲಿ ಗ್ರೇಟ್‌! `ಸ್ಟೂಡೆಂಟ್‌ ಆಫ್‌ ದಿ ಇಯರ್‌’ ಚಿತ್ರದಿಂದ ಈಗಾಗಲೇ ತಾನು ನಟನೆಯಲ್ಲೂ ಪ್ರತಿಭಾವಂತೆ ಎಂದು ನಿರೂಪಿಸಿದ್ದಾಳೆ. `ಪತಿ ಪತ್ನಿ ಔರ್‌ ಓ’ ಚಿತ್ರ ಸಹ ಇವಳಿಗೆ ಹೆಸರು ನೀಡಿತು. ಹೊಸ ನಟಿಯರ ಪಾಲಿಗೆ ಅನನ್ಯಾ ದೊಡ್ಡ ಸವಾಲಾಗಿದ್ದಾಳೆ.

ಇದು ಕೇವಲ ಇಷ್ಟೇ ವಿಷಯವಲ್ಲ

tapsi-1

ತಾಪಸಿಯ ಬರಲಿರುವ `ಥಪ್ಪಡ್‌’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡಿ ಎನಿಸಿದೆ. ಈ ಚಿತ್ರದ ನಿರ್ಮಾಪಕ, ನಿರ್ದೇಶಕ, ನಟನಟಿಯರು ಹೊಗಳಿಕೆಗೆ ಅರ್ಹರಾಗಿದ್ದಾರೆ. ಇವರು ಇಲ್ಲಿ ಆರಿಸಿಕೊಂಡಿರುವ ವಿಷಯ ಬಹುತೇಕ ಎಲ್ಲಾ ಮಹಿಳೆಯರಿಗೂ ಅನ್ವಯಿಸುತ್ತದೆ. ಕೌಟುಂಬಿಕ ದೌರ್ಜನ್ಯ ಭಾರತದಲ್ಲಿ ಮಾತ್ರವಲ್ಲದೆ, ಬೇರೆ ದೇಶಗಳಲ್ಲೂ ಮಾಮೂಲಿಯಾಗಿದೆ. ಹೆಂಗಸರು ತಮ್ಮ ಮನೆ ಉಳಿಸಿಕೊಳ್ಳುವ ನೆಪದಲ್ಲಿ ತಮ್ಮ ಆತ್ಮಾಭಿಮಾನ ಪಕ್ಕಕ್ಕಿಡುತ್ತಾರೆ. ಈ ಚಿತ್ರ ಅಂಥ ಮಹಿಳೆಯರ ಸ್ವಾಭಿಮಾನ ಮರಳಿಸುವಲ್ಲಿ `ಥಪ್ಪಡ್‌’ ಕೇವಲ ಕೆನ್ನೆಗೆ ಏಟು ಮಾತ್ರವಲ್ಲ ಎಂದು ತಿಳಿಸುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ