ವೀಣಾ ಮತ್ತು ನರೇಂದ್ರರ ವಿವಾಹವಾಗಿ 1 ವರ್ಷವಷ್ಟೇ ಕಳೆದಿತ್ತು. ಮನೆಯ ಜವಾಬ್ದಾರಿಗಳಿಗೆ ಹೆಗಲು ಕೊಟ್ಟಿದ್ದ ನರೇಂದ್ರ 45 ವಸಂತಗಳನ್ನು ಕಂಡಿದ್ದ. ವೀಣಾಳಿಗೂ ವಯಸ್ಸು ಮೀರಿದ ಮದುವೆ. ಆಧುನಿಕ ಜೀವನದ ಉನ್ನತ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ತವಕದಲ್ಲಿ ವರ್ಷಗಳೇ ಉರುಳಿ ಹೋಗಿದ್ದವು. ಮೊದಲು ಅತಿ ಹೆಚ್ಚಿನ ವಿದ್ಯಾಭ್ಯಾಸದ ಕನಸು, ನಂತರ ತಕ್ಕ ನೌಕರಿಯ ನಿರೀಕ್ಷೆ, ಒಳ್ಳೆಯ ಉದ್ಯೋಗ ಹಿಡಿದ ಮೇಲೆ ಪ್ರಮೋಶನ್‌ ಗಾಗಿ ಶ್ರಮ. ಹೀಗಾಗಿ ವೀಣಾಳ ಜೀವನದಲ್ಲಿ ವಿವಾಹವೆಂಬುದು ಕಟ್ಟಕಡೆಯ ಆಯ್ಕೆಯಾಗಿ ಉಳಿದಿತ್ತು.

ಮೊದಲೆಲ್ಲ ವೀಣಾಳ ತಂದೆ ತಾಯಿಯರು ತಮ್ಮ ಮೇಧಾವಿ ಮಗಳ ಮುನ್ನಡೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆದರೆ ಕಡೆಕಡೆಗೆ ವಿವಾಹದ ಕುರಿತಾದ ಅವಳ ಧೋರಣೆಯನ್ನು ಕಂಡು ಚಿಂತಾಕ್ರಾಂತರಾದರು. ತನ್ನ ವಿದ್ಯೆ, ಸ್ಥಾನಗಳಿಗೆ ತಕ್ಕವನಾಗಿಲ್ಲದ ವರನ ಪ್ರಸ್ತಾಪ ಬಂದರೆ ವೀಣಾ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಕಷ್ಟಪಟ್ಟು ಅವಳಿಗೆ ಸರಿಹೊಂದುವ ಹುಡುಗನನ್ನು ಹುಡುಕಿ ತಂದೆತಾಯಿಯರು ಇಬ್ಬರ ಭೇಟಿ ಮಾಡಿಸಿದರೆ ವೀಣಾ ಹುಡುಗನಿಗೆ ವಿಚಿತ್ರವಾದ ಪ್ರಶ್ನೆಯನ್ನು ಮುಂದಿಡುತ್ತಿದ್ದಳು.

“ನಿಮಗೆ ಮಕ್ಕಳನ್ನು ಪಡೆಯುವ ಆಸೆ ಇದೆಯೇ?”

ಭೇಟಿ ಮಾಡಿದ ಯುವಕರೆಲ್ಲರೂ ಮಕ್ಕಳು ಬೇಕೆಂದೇ ಹೇಳುತ್ತಿದ್ದರು. ಸಂಸಾರದ ಸಂತೋಷಕ್ಕೆ ಮಕ್ಕಳು ಅಗತ್ಯವೆಂಬುದು ಅವರೆಲ್ಲರ ನಿಲುವಾಗಿತ್ತು. ವೀಣಾ ಮದುವೆಯನ್ನು ನಿರಾಕರಿಸಲು ಇದೇ ಕಾರಣವಾಗುತ್ತಿತ್ತು. ಬಂದ ಯುವಕರನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸುತ್ತಿದ್ದ ವೀಣಾಳಿಗೆ ನರೇಂದ್ರನೊಡನೆ ನಡೆದ ಪ್ರಥಮ ಭೇಟಿಯು ಕೊಂಚ ವಿಭಿನ್ನವಾಗಿ ತೋರಿತು. ಚುರುಕಾಗಿ, ಪ್ರಭಾಶಾಲಿ ವ್ಯಕ್ತಿತ್ವವನ್ನು ಹೊಂದಿದ್ದ ನರೇಂದ್ರನನ್ನು ಕಂಡು ಅವಳು ನಿಜಕ್ಕೂ ಪ್ರಭಾವಿತಳಾಗಿದ್ದಳು. ಆದರೆ ಉನ್ನತ ವಿದ್ಯಾಭ್ಯಾಸ ಮತ್ತು ಉತ್ತಮ ಉದ್ಯೋಗ ಅವಳ ತಲೆ ತಿರುಗಿಸಿತ್ತು. ಅಲ್ಲದೆ, ಮಹಿಳೆಯರ ಹಕ್ಕು, ಅಧಿಕಾರಗಳ ಬಗ್ಗೆ ಅವಳು ಅತಿಯಾಗಿ ಜಾಗೃತಳಾಗಿದ್ದಳು. ಮಹಿಳೆಯರು ದಿಟ್ಟತನದಿಂದ ವರ್ತಿಸಬೇಕೆಂಬುದು ಅವಳ ಅಭಿಪ್ರಾಯವಾಗಿತ್ತು.

ಆದ್ದರಿಂದ ನರೇಂದ್ರನನ್ನು ಕಂಡೊಡನೆ ಪ್ರಶ್ನೆಗಳ ಸುರಿಮಳೆ ಸುರಿಸಿದಳು.

“ನನ್ನ ಬಯೊಡೇಟಾ ನೋಡಿ ನಿಮಗೆ ನನ್ನ ವಿಷಯವೆಲ್ಲ ತಿಳಿದಿರಬಹುದು,” ವೀಣಾ ನೇರವಾಗಿ ಕೇಳಿದಳು.

“ಹೌದು,” ಅವಳನ್ನು ಆಪಾದಮಸ್ತಕಾಗಿ ದಿಟ್ಟಿಸುತ್ತಾ ನರೇಂದ್ರ ಹೇಳಿದನು.

ಹುಡುಗಿಯರನ್ನೇ ಕಂಡಿಲ್ಲದವನಂತೆ ಹೀಗೆ ದಿಟ್ಟಿಸುತ್ತಿದ್ದಾನಲ್ಲ ಎಂದು ವೀಣಾ ಮನದಲ್ಲೇ ಸಿಡಿಗುಟ್ಟಿದಳು. ಆದರೆ ಹೊರಗೇನೂ ಮಾತನಾಡದೆ ಸುಮ್ಮನಿದ್ದಳು.

“ನೀವು ನಿಮ್ಮ ಬಗ್ಗೆ ಇನ್ನೇನಾದರೂ ಹೇಳುವುದಿದೆಯೇ?” ಕಡೆಗೆ ನರೇಂದ್ರನೇ  ಮೌನ ಮುರಿದನು.

“ಹೌದು. ಇದುವರೆಗೆ ನಾನೇಕೆ ವಿವಾಹವಾಗಿಲ್ಲ ಎಂದು ತಿಳಿಯಲು ಬಯಸುವಿರೇನು?”

“ಹೌದು….. ಖಂಡಿತಾ.”

“ಹಾಗಾದರೆ ಕೇಳಿ. ನನಗೆ ಕುಟುಂಬದ ಯಾವ ಜವಾಬ್ದಾರಿಗಳೂ ಇರಲಿಲ್ಲ, ಯಾವುದೇ ಅನಿವಾರ್ಯತೆಯೂ ಇರಲಿಲ್ಲ. ನಾನು ನನ್ನ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಅತ್ಯಂತ ಪರಿಶ್ರಮಪಟ್ಟಿದ್ದೇನೆ.”

“ಅದು ನನಗೆ ಗೊತ್ತು. ನೀವು ನಿಮ್ಮ ತಂದೆತಾಯಿಯರಿಗೆ ಒಬ್ಬಳೇ ಮಗಳು. ನಿಮ್ಮ ತಂದೆ ಹೆಸರಾಂತ ವ್ಯಾಪಾರಿಗಳು.  ಹಾಗಿರುವಾಗ ಕುಟುಂಬದ ಸಮಸ್ಯೆ ಅನ್ನುವ ಪ್ರಶ್ನೆಯೇ ಏಳುವುದಿಲ್ಲ. ಆದರೆ ನಾನು ಅಷ್ಟೊಂದು ಅದೃಷ್ಟವಂತ ಅಲ್ಲ. ನನ್ನ ತಂದೆಯ ಅನಾರೋಗ್ಯದಿಂದಾಗಿ ತಮ್ಮ ತಂಗಿಯರ ಪಾಲನೆ ಪೋಷಣೆ, ವಿದ್ಯಾಭ್ಯಾಸ, ವಿವಾಹ ಇವುಗಳೆಲ್ಲದರ ಜವಾಬ್ದಾರಿಯಿಂದ ನನ್ನ ಬಗ್ಗೆ ಯೋಚಿಸುವುದಕ್ಕೆ ನನಗೆ ಸಮಯವೇ ಸಿಗಲಿಲ್ಲ.”

“ನೀವೀಗ ವಿವಾಹ ಮಾಡಿಕೊಳ್ಳಲು ಸಿದ್ಧರಾಗಿರುವಾಗ, ನಿಮ್ಮ ಭಾವೀ ಪತ್ನಿಯಲ್ಲಿ ಯಾವ ಗುಣಗಳನ್ನು ನಿರೀಕ್ಷಿಸುವಿರಿ?”

“ಯಾವುದೇ ವಿಶೇಷ ಗುಣವನ್ನು ನಿರೀಕ್ಷಿಸುವುದಿಲ್ಲ. ಆದರೆ ನನ್ನನ್ನು ಮದುವೆಯಾಗುವವಳು ನನ್ನೆಲ್ಲ ಗುಣ ಅವಗುಣಗಳೊಂದಿಗೆ ಸ್ವೀಕರಿಸಲು ಸಿದ್ಧಳಿರಬೇಕು,” ನರೇಂದ್ರ ಮುಗ್ಧನಂತೆ ಮುಗುಳ್ನಕ್ಕು ಹೇಳಿದಾಗ ವೀಣಾ ಅವನನ್ನೇ ನೋಡುತ್ತಾ ಕುಳಿತಳು. ಇಂತಹ ವ್ಯಕ್ತಿ ಅವಳ ಕಲ್ಪನಾಲೋಕದಲ್ಲಿದ್ದ.

“ನಿಮ್ಮ ವಿಚಾರ ತಿಳಿದು ಸಂತೋಷವಾಯಿತು. ನಾವು ಜೀವನದ ಜೊತೆಗಾರರಾಗುವ ತೀರ್ಮಾನ ತೆಗೆದುಕೊಳ್ಳುವ ಮೊದಲು ಇನ್ನೂ ಕೆಲವು ವಿಷಯಗಳ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲವೇ?” ವೀಣಾ ಕೊಂಚ ಸಂಕೋಚದಿಂದ ಹೇಳಿದಳು.

“ನಾನು ಯಾವುದೇ ವಿಷಯದ ಬಗ್ಗೆ ಮಾತನಾಡಲು ಸಿದ್ಧನಿದ್ದೇನೆ. ನೀವು ಏನನ್ನಾದರೂ ಕೇಳಬಹುದು.”

“ನಾವಿಬ್ಬರೂ ಕಠಿಣ ಪರಿಶ್ರಮದಿಂದ ಸಫಲತೆಯನ್ನು ಪಡೆದಿದ್ದೇವೆ. ಇಬ್ಬರು ಸಫಲ ವ್ಯಕ್ತಿಗಳು ಒಂದೇ ಸೂರಿನಡಿ ವಾಸಿಸಿದರೆ ಕೆಲವು ಸಮಸ್ಯೆಗಳು ಏಳಬಹುದು.”

“ನಾವಿಬ್ಬರೂ ಸೇರಿ ಬಿಡಿಸಲಾಗದಂತಹ ಸಮಸ್ಯೆ ಬರಬಹುದು ಅಂತ ನನಗೆ ಅನ್ನಿಸುವುದಿಲ್ಲ.”

“ಚೆನ್ನಾಗಿ ಹೇಳಿದಿರಿ. ಸರಿ, ವಿವಾಹದ ನಂತರ ಮನೆಯ ಕೆಲಸಗಳನ್ನು ಯಾರು ಮಾಡುವರು?”

“ಇಬ್ಬರೂ ಸೇರಿ ಮಾಡಬಹುದು. ಸಂಸಾರದಲ್ಲಿ ಪತಿಪತ್ನಿಯರಿಗೆ ಸಮಾನ ಅಧಿಕಾರವಿರಬೇಕೆಂಬುದು ನನ್ನ ಅಭಿಪ್ರಾಯ.”

“ಮತ್ತೆ ಮಕ್ಕಳು?”

“ಮಕ್ಕಳು….? ಯಾವ ಮಕ್ಕಳು….?”

“ಅಂದರೆ ಮಕ್ಕಳ ಜವಾಬ್ದಾರಿ ನೋಡುವವರು ಯಾರು?”

“ಈ ಬಗ್ಗೆ ನಾನು ಯೋಚನೆಯನ್ನೇ ಮಾಡಿಲ್ಲ.”

“ಹಾಗಾದರೆ ಈಗ ಯೋಚಿಸಿ. ಏಕೆಂದರೆ ನನಗೆ ಮಕ್ಕಳು ಅಂದರೆ ಸ್ವಲ್ಪವೂ ಇಷ್ಟವಿಲ್ಲ. ನನಗೆ ಮಕ್ಕಳು ಅಂದರೆ ಜಿಗುಪ್ಸೆ.”

“ಏನು ಹೇಳುತ್ತಿದ್ದೀರಿ? ಆ ಮುಗ್ಧ ಪುಟಾಣಿ ಮಕ್ಕಳು ನಿಮಗೆ ಏನು ಮಾಡಿದ್ದಾರೆ?”

“ಅವರ ಮುಗ್ಧ ಮುಖಕ್ಕೆ ಸೋಲಬೇಡಿ. ಅವರಿಂದಾಗಿ ತಂದೆ ತಾಯಿಯರು ತಮ್ಮ ಜೀವನದ ಪ್ರತಿಯೊಂದನ್ನೂ ತ್ಯಾಗ ಮಾಡಬೇಕಾಗುತ್ತದೆ.”

“ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ. ಆದರೆ ಜನರು ಮಕ್ಕಳಿಗಾಗಿ ಆಸೆಪಡುತ್ತಾರೆ.”

“ಆಸೆ ಪಡಬಹುದು. ಆದರೆ ನಾನು ನನ್ನ ಉದ್ಯೋಗದ ಜೊತೆಗೆ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಲಾರೆ. ಅವುಗಳ ಹೆಸರು ಕೇಳಿದರೆ ನನಗೆ ನಡುಕ ಉಂಟಾಗುತ್ತದೆ.”

“ಹ್ಞಾಂ….. ಹ್ಞಾಂ…..! ಹೇಳಿ. ನಿಮ್ಮ ಮಾತು ಬಹಳ ಆಸಕ್ತಿಕರವಾಗಿದೆ.”

“ಸ್ವಲ್ಪ ಯೋಚನೆ ಮಾಡಿ. ಇಬ್ಬರೂ ಸಫಲ ವ್ಯಕ್ತಿಗಳು ಒಂದಾದಾಗ ಇಬ್ಬರ ಸಂಪಾದನೆಯೂ ಸೇರುತ್ತದೆ. ಜೀವನದಲ್ಲಿ ಆನಂದ ತುಂಬಿಬರುತ್ತದೆ. ಆದರೆ ನನ್ನ ಕೆಲವು ಸ್ನೇಹಿತರು ಮಕ್ಕಳ ಜವಾಬ್ದಾರಿಯಿಂದಾಗಿ ಬಹಳ ಕಷ್ಟಪಡುವುದನ್ನು ನೋಡಿದ್ದೇನೆ. ಸರಿ, ನಾನೊಂದು ಮಾತು ಕೇಳುತ್ತೇನೆ. ನಮ್ಮ ಮಕ್ಕಳು ಮಾತ್ರ ಅಳುವುದನ್ನು ನೋಡುತ್ತೇವೆ. ಪ್ರಾಣಿ ಪಕ್ಷಿಗಳ ಮರಿಗಳು ಅಳುವುದೇ ಇಲ್ಲವಲ್ಲ….?” ವೀಣಾ ಪ್ರಶ್ನೆಯೊಂದನ್ನು ಮುಂದಿಟ್ಟಳು.

“ಹ್ಞಾಂ…..  ನೀವು ಹೇಳುವುದು ಸರಿಯಾಗಿದೆ. ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ. ಆದರೆ ಮನೆಯಲ್ಲಿ, ಸಂಸಾರದಲ್ಲಿ ಮಗುವಿನ ಜಾಗವನ್ನು ನಾಯಿ, ಪಾರಿವಾಳಗಳು ತುಂಬಲಾರವು.”

“ಹಾಗಾದರೆ ಈ ಸಮಸ್ಯೆಯನ್ನು ನೀವು ಹೇಗೆ ಬಗೆಹರಿಸುವಿರಿ?”

“ನಾನು ಒಂದು ಸಲಕ್ಕೆ ಒಂದು ಸಮಸ್ಯೆಯನ್ನು ಮಾತ್ರ ಪರಿಹರಿಸುವ ಬಗ್ಗೆ ಗಮನ ನೀಡುತ್ತೇನೆ. ನಮ್ಮ ಮೊದಲನೆಯ ಸಮಸ್ಯೆ ವಿವಾಹ ಮಾಡಿಕೊಳ್ಳುವುದಾಗಿದೆ. ನಾವಿಬ್ಬರೂ ಒಂದೇ ಸೂರಿನಡಿಯಲ್ಲಿ ಬಾಳಲು ಸಾಧ್ಯವೇ ಎಂಬುದನ್ನು ತೀರ್ಮಾನಿಸಬೇಕಾಗಿದೆ. ಮಕ್ಕಳ ಸಮಸ್ಯೆ ಮುಂದಿನದು. ಅದರ ಬಗ್ಗೆ ಈಗಲೇ ಏಕೆ ತಲೆ ಕೆಡಿಸಿಕೊಳ್ಳಬೇಕು?” ನರೇಂದ್ರ ಗಂಭೀರವಾಗಿ ಹೇಳಿದ.

“ಆದರೆ ನನಗೆ ಈ ವಿಷಯ ಬಹಳ ಮುಖ್ಯ. ಎಂತಹ ಪರಿಸ್ಥಿತಿಯಲ್ಲೂ ನಾನು ನನ್ನ ಭವಿಷ್ಯವನ್ನು ಬಲಿಕೊಡಲಾರೆ. ತಾಯಿಯಾಗುವುದರಿಂದಲೇ ಮಹಿಳೆಯ ಜೀವನ ಸಾರ್ಥಕವಾಗುತ್ತದೆ ಎಂಬ ಮಾತನ್ನು ನಾನು ಒಪ್ಪುವುದಿಲ್ಲ.”

“ನನಗೆ ಅದೇನೂ ಸಮಸ್ಯೆಯಲ್ಲ. ಇಳಿ ವಯಸ್ಸಿನಲ್ಲಿ ಮಕ್ಕಳು ಊರುಗೋಲಾಗಿ ನಿಲ್ಲುತ್ತಾರೆ ಎಂಬ ಹಿಂದಿನ ಮಾತು ಇಂದಿಗೆ ಅನ್ವಯಿಸುವುದಿಲ್ಲ. ಆದ್ದರಿಂದ ವಿವಾಹಾನಂತರ ಸಂಸಾರ ಬೆಳೆಯಬೇಕು ಎಂಬುದು ನಿಮಗೆ ಇಷ್ಟವಿಲ್ಲದಿದ್ದರೆ, ನನಗೇನೂ ತೊಂದರೆ ಇಲ್ಲ,” ನರೇಂದ್ರ ತನ್ನ ತೀರ್ಮಾನವನ್ನು ತಿಳಿಸಿದ.

ವೀಣಾ ಕೊಂಚ ಹೊತ್ತು ಮೌನವಾಗಿದ್ದಳು. ತನ್ನ ಷರತ್ತುಗಳನ್ನು ಮನ್ನಿಸಿ ಯಾರಾದರೂ ವಿವಾಹಕ್ಕೆ ಒಪ್ಪಬಹುದೆಂದು ಅವಳು ನಿರೀಕ್ಷಿಸಿರಲೇ ಇಲ್ಲ. ಆದರೂ ಮನಸ್ಸಿನಲ್ಲಿ ಗೊಂದಲವಿತ್ತು. ನರೇಂದ್ರ ನಿಜವಾಗಿ ಹೀಗೆ ಹೇಳಿದ್ದಾನೋ ಅಥವಾ ತೋರಿಕೆಗೆ ಮಾತನಾಡಿ, ವಿವಾಹವಾದ ನಂತರ ಬೇರೆ ರೂಪ ತೋರಿಸುವನೋ……ಈ ಗೊಂದಲದ ಸ್ಥಿತಿ ಹೆಚ್ಚು ಕಾಲ ನಿಲ್ಲಲಿಲ್ಲ. ಅವಳ ವಿವಾಹದ ಕುರಿತು ಮನೆಯಲ್ಲಿ ಏರ್ಪಟ್ಟಿದ್ದ ಒತ್ತಡದ ವಾತಾವರಣ ಎಲ್ಲೇ ಮೀರಿತ್ತು. ಈಗ ವೀಣಾ ತನಗಾಗಿ ಅಲ್ಲದಿದ್ದರೂ ತಂದೆ ತಾಯಿಯರಿಗಾಗಿ ವಿವಾಹಕ್ಕೆ ಸಿದ್ಧಳಾಗಬೇಕಾಗಿತ್ತು.

ವೀಣಾ ಮತ್ತು ನರೇಂದ್ರ ಇಬ್ಬರ ತಂದೆ ತಾಯಿಯರೂ ಮಕ್ಕಳ ತೀರ್ಮಾನವನ್ನು ಎದುರು ನೋಡುತ್ತಿದ್ದರು. ಇವರಿಬ್ಬರೂ ಮದುವೆಗೆ ಒಪ್ಪಿಬಿಟ್ಟರೆ ತಾವು ನೆಮ್ಮದಿಯಿಂದ ಬಾಳಬಹುದು ಎಂಬುದು ಹಿರಿಯರ ಬಹುಕಾಲದ ಅಪೇಕ್ಷೆಯಾಗಿತ್ತು.

ಕಡೆಗೂ ವೀಣಾ ಮತ್ತು ನರೇಂದ್ರ ವಿವಾಹಕ್ಕೆ ಒಪ್ಪಿಗೆ ಸೂಚಿಸಿದಾಗ ಮನೆ ಜೀವಕಳೆಯಿಂದ ಶೋಭಿಸಿತು. ವೀಣಾಳ ತಾಯಿ ಸವಿತಾ ಮಗಳ ಮದುವೆಯ ಆಸೆಯನ್ನೇ ತೊರೆದಿದ್ದರು. ಮಗಳ ಮಾತನ್ನು ಕೇಳಿದಾಗ ಮೊದಲು ತಮ್ಮ ಕಿವಿಯನ್ನೇ ನಂಬಲಾಗಲಿಲ್ಲ. ಅದು ನಿಜವೆಂದು ತಿಳಿದಾಗ ಅವರ ಕಣ್ಣುಗಳು ತುಂಬಿ ಬಂದು ಕೆನ್ನೆಯ ಮೇಲೆ ನೀರಿಳಿಯಿತು. ಕೂಡಲೇ ಅವರು ಸಾವರಿಸಿಕೊಂಡು, “ಇದು ಸಂತೋಷದ ಕಣ್ಣೀರು,” ಎನ್ನುತ್ತಾ ಕಂಬನಿಯನ್ನು ಒರೆಸಿಕೊಂಡು ಅತಿಥಿ ಸತ್ಕಾರದಲ್ಲಿ ತೊಡಗಿದರು.

ಎರಡೂ ಕಡೆಯವರು ಬೇಗನೆ ಮದುವೆ ಮಾಡಲು ಉತ್ಸುಕರಾಗಿದ್ದರು. ಈಗಾಗಲೇ ಬಹಳಷ್ಟು ತಡವಾಗಿಬಿಟ್ಟಿತ್ತು. ಇನ್ನು ಒಂದೊಂದು ದಿನ ತಡ ಮಾಡುವುದು ಸೂಕ್ತವಲ್ಲವೆನಿಸಿತು.

ಪಕ್ಷ ತುಂಬುವುದರೊಳಗೇ ಸರಳವಾಗಿ ವಿವಾಹ ಕಾರ್ಯ ನೆರವೇರಿತು. ವಿವಾಹವಾಗುವ ಬಗ್ಗೆ ಹೆಚ್ಚು ಉತ್ಸಾಹ ತೋರಿಲ್ಲದಿದ್ದರೂ, ವೀಣಾ ಮತ್ತು ನರೇಂದ್ರರು ವಿವಾಹವಾದ ನಂತರ ಕಥೆ ಕಾದಂಬರಿಗಳಲ್ಲಿ ನೋಡುವಂತೆ ಅತ್ಯಂತ ಆನಂದಮಯ ಸ್ಥಿತಿಯಲ್ಲಿದ್ದರು.

ಮಧುಚಂದ್ರವನ್ನು ಮುಗಿಸಿ ಬಂದಾಗ ವೀಣಾ ಮುಖದಲ್ಲಿ ವಿಶೇಷವಾದ ಶಾಂತಿ ತುಂಬಿತ್ತು. ಅದನ್ನೂ ಕಂಡು ಅವಳ ತಂದೆ ತಾಯಿಯರು ನಿರಾಳವಾದರು ಮತ್ತು ಸಂತೋಷ ಪಟ್ಟರು.

ಹೊಸ ಬಾಳಿಗೆ ಹೊಂದಿಕೊಂಡು ನಡೆಯುತ್ತಿರುವ ಸಮಯದಲ್ಲಿ ವೀಣಾಳ ಆರೋಗ್ಯ ಕೆಟ್ಟಿತು. ಆಯಾಸ ಆವರಿಸಿತು. ಇತರರನ್ನು ಹುರಿದುಂಬಿಸಿ ನಡೆಯುವವಳು ನಿರುತ್ಸಾಹದಿಂದ ಮಂಕಾದಳು.

ನಾಲ್ಕಾರು ದಿನ ಕಳೆದರೂ ಆರೋಗ್ಯ ಸುಧಾರಿಸದಿದ್ದಾಗ ನರೇಂದ್ರ ಅವಳನ್ನು ಡಾಕ್ಟರ್‌ ಬಳಿಗೆ ಕರೆದೊಯ್ದ. ಡಾಕ್ಟರ್‌ ಹೊಸ ಅತಿಥಿಯ ಆಗಮನದ ಶುಭ ಸಮಾಚಾರವನ್ನು ತಿಳಿಸಿದ ಕೂಡಲೇ ವೀಣಾ ಚೀರಿ ಪ್ರಜ್ಞೆ ತಪ್ಪಿದಳು. ಡಾಕ್ಟರ್‌ ಪ್ರಯತ್ನದಿಂದ ಪ್ರಜ್ಞೆ ಮರಳಿದಾಗ ಅವಳ ಚೀರಾಟ ಮತ್ತೆ ಪ್ರಾರಂಭವಾಯಿತು. ಆಗಬಾರದ್ದೇನೋ ಆಗಿ ಬಿಟ್ಟಿರಬಹುದೆಂದು ಸುತ್ತಲಿದ್ದವರೆಲ್ಲ ಡಾಕ್ಟರ್ ರೂಮಿನತ್ತ ಇಣುಕಿ ನೋಡುತ್ತಿದ್ದರು.

“ಶುಭ ಸಮಾಚಾರನ್ನು ಕೇಳಿ ಆನಂದ ಹೊಂದುವಿರೆಂದುಕೊಂಡರೆ, ನೀವು ಈ ರೀತಿ ವರ್ತಿಸುತ್ತಿರುವಿರಲ್ಲ? ನಿಮ್ಮಿಂದ ಇಂತಹ ವರ್ತನೆಯನ್ನು ನಾನು ಖಂಡಿತ ನಿರೀಕ್ಷಿಸಿರಲಿಲ್ಲ. ಸಮಾಧಾನ ಮಾಡಿಕೊಳ್ಳಿ. ತಾಳ್ಮೆ ಕಳೆದುಕೊಳ್ಳುವುದರಿಂದ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ,” ಡಾಕ್ಟರ್‌ ವೀಣಾಳಿಗೆ ತಿಳಿಹೇಳಲು ಪ್ರಯತ್ನಿಸಿದರು.

ಆದರೆ ವೀಣಾಳದು ಒಂದೇ ಹಠ, “ಡಾಕ್ಟರ್‌ ಪ್ಲೀಸ್‌….. ಹೇಗಾದರೂ ಮಾಡಿ ಈ ಬೇಡದ ಗರ್ಭವನ್ನು ನಿವಾರಿಸಿ.”

“ಕ್ಷಮಿಸಿ ವೀಣಾ, ನಿಮ್ಮ ಈ ವಯಸ್ಸಿನಲ್ಲಿ ಗರ್ಭಪಾತ ಮಾಡಲಾಗುವುದಿಲ್ಲ.”

“ಡಾಕ್ಟರ್‌, ಇಲ್ಲ ಅನ್ನಬೇಡಿ. ನಾನು ನಿಮಗೆ ಎರಡರಷ್ಟು, ಮೂರರಷ್ಟು ಫೀಸ್‌ ಕೊಡಲು ಸಿದ್ಧಳಿದ್ದೇನೆ.”

“ಕ್ಷಮಿಸಿ, ಯಾವ ಬೆಲೆಗೂ ನಾನು ಈ ಕೆಲಸ ಮಾಡಲಾರೆ. ಅದು ಒಳ್ಳೆಯದಲ್ಲ.”

ಮೊದಲಿನಿಂದ ತನಗೆ ಬೇಕಾದಂತೆ ನಡೆಯುತ್ತಿದ್ದ ವೀಣಾಳಿಗೆ ಡಾಕ್ಟರ್‌ ಮಾತಿನಿಂದ ಕೋಪ ಬಂದಿತು.

“ಈ ಊರಿಗೆಲ್ಲ ನೀವೊಬ್ಬರೇ ಡಾಕ್ಟರ್‌ ಅಂದುಕೊಂಡಿದ್ದೀರಾ?” ಎಂದು ಡಾಕ್ಟರ್‌ ಗೇ ಜೋರು ಮಾಡಿದ ವೀಣಾ, “ರೀ ನಡೆಯಿರಿ, ನಾವು ಬೇರೆ ಕಡೆಗೆ ಹೋಗೋಣ,” ಎನ್ನುತ್ತಾ ನರೇಂದ್ರನ ಕೈ ಹಿಡಿದು ಡಾಕ್ಟರ್‌ ರೂಮಿನಿಂದ ಹೊರನಡೆದಳು.

“ವೀಣಾ, ನಾವು ಮೊದಲು ಮನೆಗೆ ಹೋಗೋಣ. ಏನು ಮಾಡಬೇಕು, ಯಾವ ಡಾಕ್ಟರ್‌ ಹತ್ತಿರ ಹೋಗಬೇಕು ಎನ್ನುವುದನ್ನು ಯೋಚನೆ ಮಾಡಿ ತೀರ್ಮಾನ ಮಾಡೋಣ,” ಕಾರಿನಲ್ಲಿ ಕುಳಿತುಕೊಳ್ಳುತ್ತಾ ನರೇಂದ್ರ ಹೇಳಿದ.

“ಓ…. ನನಗೆ ಗೊತ್ತು. ನೀವುಗಳೆಲ್ಲ ಒಂದಾಗಿ ಸೇರಿದ್ದೀರಿ. ನಾನು ಇದರಿಂದ ಬಿಡಿಸಿಕೊಳ್ಳುವುದು ನಿಮಗೆ ಇಷ್ಟವಿಲ್ಲ.”

“ಏನು ಹೇಳುತ್ತಿದ್ದೀಯ ವೀಣಾ? ಇಷ್ಟು ದಿನ ಆದರೂ ನೀನು ನನ್ನನ್ನು ಅರ್ಥ ಮಾಡಿಕೊಂಡಿಲ್ಲ. ನನಗೆ ನಿನ್ನ ಆರೋಗ್ಯದ ಚಿಂತೆ. ನೋಡು, ನಾನು ನಿನ್ನ ಮತ್ತು ನನ್ನ ತಂದೆತಾಯಿಯರಿಗೆ ತಿಳಿಸಿದ್ದೇನೆ. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಸಲಹೆ ಪಡೆಯಬೇಕು.”

“ಯಾರನ್ನು ಕೇಳಿ ಹಾಗೆ ಮಾಡಿದಿರಿ? ನೀವೇ ಡಾಕ್ಟರ್‌ ಕಿವಿಯನ್ನು ತುಂಬಿಸಿರಬೇಕು ಅಂತ ಕಾಣಿಸುತ್ತದೆ. ನನ್ನ ಸಫಲತೆಯನ್ನು ಸಹಿಸಲು ನಿಮಗೆ ಆಗುತ್ತಿಲ್ಲ ಅಂತ ನೇರವಾಗಿ ಹೇಳಿಬಿಡಿ. ಅದಕ್ಕೇ ನನ್ನ ದಾರಿಗೆ ಅಡ್ಡ ಬರುತ್ತಿದ್ದೀರಿ,” ವೀಣಾ ಒಂದೇ ಉಸಿರಿನಲ್ಲಿ ಹೇಳಿದಳು.

ವೀಣಾಳ ಬಡಬಡಿಕೆ ನಡೆಯುತ್ತಿರುವಾಗಲೇ ಅವಳ ತಾಯಿಯಿಂದ ಫೋನ್‌ ಕರೆ ಬಂದಿತು, “ನಾನು ಈಗಲೇ ಹೊರಟು ಬರುತ್ತಿದ್ದೇನೆ. ಅಲ್ಲಿಯವರೆಗೂ ಧೈರ್ಯವಾಗಿರು,” ಎಂದರು.

ಸಾಯಂಕಾಲವಾಗುವಷ್ಟರಲ್ಲಿ ಮನೆಯಲ್ಲಿ ಆಪ್ತರೆಲ್ಲ ಸೇರಿಬಿಟ್ಟಿದ್ದರು. ದೈವ ಕೃಪೆಯಿಂದ ದೊರೆತಿರುವ ವರದಾನವನ್ನು ನಿರಾಕರಿಸಲು ವೀಣಾಳಿಗೆ ಯಾವ ಅಧಿಕಾರ ಇಲ್ಲ ಎಂದು ಎಲ್ಲರೂ ಒಮ್ಮತದಿಂದ ಘೋಷಿಸಿದರು.

ವೀಣಾ ತೆಪ್ಪಗೆ ಉಳಿಯಬೇಕಾಯಿತು. ಆದರೂ, ಅವಕಾಶ ದೊರೆತೊಡನೆ ಈ ಸಂಕಷ್ಟವನ್ನು ನಿವಾರಿಸಿಕೊಳ್ಳುವೆನೆಂದು ತೀರ್ಮಾನಿಸಿದಳು.

ಎಷ್ಟೇ ಬಯಸಿದರೂ, ಏನೇ ಪ್ರಯತ್ನಪಟ್ಟರೂ ವೀಣಾಳಿಗೆ ಅವಕಾಶ ಸಿಗಲಿಲ್ಲ. ಅವಳ ಅತ್ತೆ ಮಾವಂದಿರು ಅರೆಗಳಿಗೆಯೂ ಅವಳನ್ನು ಒಂಟಿಯಾಗಿ ಬಿಡಲಿಲ್ಲ.

ವೀಣಾಳ ತಾಯಿ ಮಗುವನ್ನು ಪೋಷಿಸುವ ಜವಾಬ್ದಾರಿಯನ್ನು ತಾವು ಸಂಪೂರ್ಣವಾಗಿ ಹೊರುವುದಾಗಿ ಘೋಷಿಸಿದರು. ಅದನ್ನು ಕೇಳಿದ ಮೇಲೆ ನರೇಂದ್ರನ ತಾಯಿ ಸುಮ್ಮನಿರುವರೇ? ಅವರೂ ಸಹ ತಾವು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು.

dasvidania-story-2

ವೀಣಾಳಂತೂ ಮಗು ಜನಿಸಿ ತನ್ನ ಶಾರೀರಿಕ ಮತ್ತು ಮಾನಸಿಕ ಯಾತನೆ ದೂರವಾಗುವ ಕ್ಷಣವನ್ನೇ ನಿರೀಕ್ಷಿಸುತ್ತಿದ್ದಳು. ಅವಳು ಆಗಾಗ ನರೇಂದ್ರನೊಡನೆ ಹಾಸ್ಯವಾಗಿ ಹೇಳುತ್ತಿದ್ದುದುಂಟು, `ದೈವ ಮಹಿಳೆಯರ ಬಗ್ಗೆ ಪಕ್ಷಪಾತಿಯಾಗಿದೆ, ಕಷ್ಟಗಳನ್ನೆಲ್ಲ ಅವರ ಪಾಲಿಗೇ ಇಟ್ಟಿದೆ.’

ವೀಣಾಳಿಗೆ ದಿನ ತುಂಬಿ ಹೆರಿಗೆಯಾಯಿತು. ಎಲ್ಲ ಸುಸೂತ್ರವಾಗಿ ನಡೆದುದರಿಂದ ಎಲ್ಲರೂ ಸಮಾಧಾನದ ನಿಟ್ಟುಸಿರುಬಿಟ್ಟರು.

ವೀಣಾಳ ತಾಯಿ ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಅತ್ತುಬಿಟ್ಟರು.

“30-35 ರ್ಷಗಳ ನಂತರ ಈಗ ಮನೆಯಲ್ಲಿ ಮಗುವಿನ ಕಿಲಕಿಲ ಸದ್ದು ಕೇಳುವ ಭಾಗ್ಯ ಬಂದಿದೆ. ನಮ್ಮ ಮೇಲೆ ಇಂತಹ ದೈವ ಕೃಪೆ ಆಗುವುದೆಂಬ ಭರವಸೆಯೇ ನನಗಿರಲಿಲ್ಲ,” ಹೇಳುತ್ತಾ ಅವರ ಧ್ವನಿ ಗದ್ಗದಿತವಾಯಿತು.

ನರೇಂದ್ರನ ತಾಯಿ ಮಗುವನ್ನು ಮುದ್ದಿಸಿ, “ನರೇಂದ್ರ, ಮಗು ಥೇಟ್‌ ನಿಮ್ಮ ಅಪ್ಪನ ಹಾಗೇ ಇದೆ. ಕಣ್ಣುಗಳು, ಚೂಪುಗಲ್ಲ ಎಲ್ಲವೂ ಅದೇ ರೀತಿ ಇವೆ. ಸರಿ. ಮಗುವಿಗೆ ಏನು ಹೆಸರು ಇಡಬೇಕು ಅಂದುಕೊಂಡಿದ್ದೀರಿ?”

“ಅಮ್ಮಾ, ಮಗುವನ್ನು ಪೋಷಿಸುವವರು ನೀವೇ ಆದ್ದರಿಂದ ಹೆಸರನ್ನೂ ನೀವೇ ಯೋಚಿಸಿ,” ನರೇಂದ್ರ ಮಗುವನ್ನು ಎತ್ತಿಕೊಳ್ಳುತ್ತಾ ಹೇಳಿದ.

ವೀಣಾ ಕುತೂಹಲದಿಂದ ನಡೆಯುತ್ತಿದ್ದುದನ್ನು ನೋಡುತ್ತಾ ಮಲಗಿದ್ದಳು. ಕೊಂಚ ಹೊತ್ತಾದ ಮೇಲೆ ಅವಳು ಹಾಸಿಗೆಯ ಮೇಲೆ ಎದ್ದು ಕುಳಿತಳು. ಆಗ ನರೇಂದ್ರ ಮಗುವನ್ನು ನಿಧಾನವಾಗಿ ಅವಳ ತೊಡೆಯ ಮೇಲಿಟ್ಟ.

ಮಗುವಿನ ಸ್ಪರ್ಶ ವೀಣಾಳ ಶರೀರದಲ್ಲಿ ವಿದ್ಯುತ್‌ ಸಂಚಾರವನ್ನು ಉಂಟು ಮಾಡಿತು. ಅವಳು ಮೃದುವಾಗಿ ಅದರ ಕೆನ್ನೆಯನ್ನು ಸವರಿದಳು. ಬಿಗಿ ಹಿಡಿದಿದ್ದ ಅದರ ಮುಷ್ಟಿಯನ್ನು ಬಿಡಿಸಲು ಪ್ರಯತ್ನಿಸಿದಳು. ಬೆಚ್ಚಗಿನ ಪುಟ್ಟ ಪಾದನ್ನು ಬಗ್ಗಿ ಕೆನ್ನೆಗೊತ್ತಿಕೊಂಡಳು.

ಇಂತಹ ಪುಟ್ಟ ಮಗುವನ್ನೂ, ಮುದ್ದು ಮಗುವನ್ನೂ ದೂರ ಮಾಡಿಕೊಳ್ಳಲು ಸಾಧ್ಯವಿಲ್ಲವೆಂಬುದು ಅವಳಿಗೆ ಮೊದಲ ಬಾರಿಗೆ ಅನುಭವ ಉಂಟಾಯಿತು. ಅವಳು ಮಗುವನ್ನು ಪ್ರೀತಿಯಿಂದ ಎದೆಗೊತ್ತಿಕೊಂಡು ಅದರ ಮಧುರ ಸ್ಪರ್ಶ ಸುಖದಲ್ಲಿ ಮುಳುಗಿದಳು. ಅವಳಿಗೆ ಅದೊಂದು ಸುಂದರ, ವರ್ಣನಾತೀತ ಅನುಭವ!

ಪತ್ನಿಯ ಮುಖದಲ್ಲಿ ಬದಲಾಗುತ್ತಿದ್ದ ಭಾವನೆಗಳನ್ನು ದೂರ ನಿಂತು ಗಮನಿಸುತ್ತಿದ್ದ ನರೇಂದ್ರನಿಗೆ ಎಲ್ಲವೂ ಅರ್ಥವಾಯಿತು ಬಾನಿನಲ್ಲಿ ಉದಯ ಸೂರ್ಯನ ಕಿರಣ ತನ್ನ ಆಗಮನವನ್ನು ಪ್ರಚುರಪಡಿಸಿದ್ದಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ