ದೀಪಾವಳಿ ಹಬ್ಬಕ್ಕೂ ವಿದ್ಯುತ್ ತಂತಿಗೂ ಅವಿನಾಭಾವ ಸಂಬಂಧವಿದೆ. ಇದೇ ರೀತಿ ವಧೂವರರ ಜೋಡಿಗೂ ಅವರಿಬ್ಬರ ಹೊಂದಾಣಿಕೆಗೂ ಅದೇ ರೀತಿಯ ನಂಟಿದೆ.
ದೀಪಾವಳಿ ಹಬ್ಬದಲ್ಲಿ ವಿದ್ಯುತ್ ತಂತಿಗಳು ಸಮರ್ಪಕವಾಗಿ, ಓಲ್ಟೇಜ್ ಫ್ಲಕ್ಚುಯೇಷನ್ಸ್ ಇಲ್ಲದೆ, ಎಲ್ಲವೂ ಸರಿಯಾಗಿ ನಡೆದರೆ, ಹಬ್ಬಕ್ಕೆ ಸೀರಿಯಲ್ ಸೆಟ್ ಮತ್ತು ಲೈಟಿಂಗ್ ನಿಂದ ಕಳೆಯೇರುತ್ತದೆ. ಅದೇ ಹೆಚ್ಚು ಕಡಿಮೆ ಆಯ್ತೋ ಶಾರ್ಟ್ ಸರ್ಕ್ಯೂಟ್ ಆಗುತ್ತದೆ.
ಅದೇ ತರಹ ವಧೂ ವರರ ನಡುವೆ ಹೊಂದಾಣಿಕೆ ಪರಸ್ಪರ ಬಿಟ್ಟುಕೊಡುವಿಕೆ, ಸಾಮರಸ್ಯ ಸರಿ ಇದ್ದರೆ ದಾಂಪತ್ಯ ನಂದನ ವನವಾಗುತ್ತದೆ, ಇಲ್ಲದಿದ್ದರೆ ಅಶೋಕ ವನವಾಗುತ್ತದೆ!
ಆಫೀಸಿಗೆ ಹೊಸದಾಗಿ ವರ್ಗವಾಗಿ ಬಂದಿದ್ದ ಬಾಸ್ ಒಂದು ನೋಟೀಸ್ ಹೊರಡಿಸಿದರು `ನಾನೀಗ ಇಲ್ಲಿನ ಹೊಸ ಬಾಸ್! ಇದನ್ನು ಯಾರೂ ಮರೆಯಬಾರದು, ಮರೆತು ಯಾವುದೇ ತಪ್ಪು ಮಾಡಬೇಡಿ.’
ಶಿಸ್ತಿನ ಸಿಪಾಯಿಗಳಾಗಿ ಸಿಬ್ಬಂದಿ ವರ್ಗ ಗಡಗಡ ನಡುಗುತ್ತ ಕೆಲಸ ಮಾಡಿದರು.
ಸಂಜೆ ಜವಾನ ಜವರಯ್ಯ ಒಂದು ಚೀಟಿ ತಂದು ಯಾರೋ ಮೇಡಂ ಕಾರಿನಿಂದ ನಮ್ಮ ಆಫೀಸ್ ಮುಂದೆ ಇದನ್ನು ಎಸೆದು ಹೋದರು ಎಂದು ಹೇಳಿದ.
ಅದರಲ್ಲಿ ಹೀಗೆ ಬರೆದಿತ್ತು, `ನಿಮ್ಮ ಬಾಸ್ ಗೆ ಹೇಳಿ…. ಮನೆಯಲ್ಲಿ ಅಂಟಿಸಿದ್ದ ನೋಟೀಸ್ ಬೋರ್ಡ್ ನ್ನು ನನಗೆ ಕಾಣದಂತೆ ಕದ್ದು ತಂದು ಆಫೀಸಿನಲ್ಲಿ ಹಾಗೆಲ್ಲ ಅಂಟಿಸಿಕೊಳ್ಳಬಾರದಂತೆ….. ಸಂಜೆ ತೆಪ್ಪಗೆ ಅದನ್ನು ವಾಪಸು ತಂದು ಅದು ಎಲ್ಲಿತ್ತೋ ಅಲ್ಲಿಯೇ ಅಂಟಿಸಬೇಕಂತೆ ಅಂತ!’
ಆ ಚೀಟಿಯಲ್ಲಿದ್ದ ಬರವಣಿಗೆಯ ಗುರುತು ಹತ್ತಿದಂತೆ ಹೊಸ ಬಾಸ್ ಮುಖ ಇಂಗು ತಿಂದ ಮಂಗನಂತಾಗಿತ್ತು!
ಸ್ಮಿತಾ ತನ್ನ ಬಾಯ್ ಫ್ರೆಂಡ್ ರಾಹುಲ್ ಜೊತೆ ಜಗಳ ಆಡಿಕೊಂಡು, ಮಾತು ಬಿಟ್ಟು 2 ವಾರ ಆಯಿತು.
ಇದನ್ನು ಗಮನಿಸಿದ ಅವಳ ಗೆಳತಿ ರೇಖಾ ಕಸಿವಿಸಿಗೆ ಒಳಗಾದಳು. ಗೆಳತಿಗೆ ಸಹಾಯ ಮಾಡಲು ನಿರ್ಧರಿಸಿದಳು.
ರೇಖಾ : ಏನಾಯಿತೇ ಸ್ಮಿತಾ? ಯಾಕೆ ಆ ಪಾಪದವನನ್ನು ಹಾಗೆ ಕಾಡಿಸುತ್ತಿದ್ದೀಯಾ? ರಾಜಿ ಮಾಡಿಕೊಳ್ಳಬಾರದಾ?
ಸ್ಮಿತಾ : ಯಾವನೇ ಪಾಪದವನು? ಅವನು ಏನು ಮಾಡಿದ ಗೊತ್ತೇ….. ನೆನೆಸಿಕೊಂಡ್ರೆ ಮೈಯೆಲ್ಲ ಉರಿಯುತ್ತೆ.
ರೇಖಾ : ಈಗಿನ ಕಾಲದ ಮಾಡರ್ನ್ ಬಾಯ್ ಫ್ರೆಂಡ್ಸ್ ಸ್ವಲ್ಪ ಹಾಗೆ ಹೀಗೆ ಓವರ್ ಆಗಿ ರೊಮಾನ್ಸ್ ಮಾಡುತ್ತಾರೆ. ಅದಕ್ಕೆ ಹೋಗಿ ನೀನು ಕೋಪಿಸಿಕೊಂಡ್ರೆ.
ಸ್ಮಿತಾ : ಹಾಗೇನೂ ಮಾಡಲಿಲ್ಲ ಅಂತಾನೇ ನನ್ನ ಕೋಪ!
ರೇಖಾ : ಅಸಲಿಗೆ ಏನಾಯಿತು ಅಂತ ಹೇಳಬಾರದೇ?
ಸ್ಮಿತಾ : ಮೊನ್ನೆ ಅವರಪ್ಪ ಅಮ್ಮ ತಿರುಪತಿಗೆ ಹೊರಟರು, ಒಬ್ಬನೇ ಇದ್ದೇನೆ, ಸಂಜೆ 7 ಗಂಟೆಗೆ ಬಾ ಅಂದ. ನಾನು ರೋಮಾಂಚಿತಳಾಗಿ ಅಲ್ಲಿಗೆ ಹೋದೆ. ನನ್ನ ಕೈಗೊಂದು ಗುಲಾಬಿ ಕೊಟ್ಟ. ರೂಮಿಗೆ ಕರೆದುಕೊಂಡು ಹೋಗಿ ಕಿಸ್ ಮಾಡಿದ ಮೇಲೆ, `ಇವತ್ತು ಕೆಲಸದವಳು ಬಂದಿಲ್ಲ. ಸ್ವಲ್ಪ ಪಾತ್ರೆ ತೊಳೆದು ಏನಾದರೂ ಅಡುಗೆ ಮಾಡು ಡಾರ್ಲಿಂಗ್……’ ಅನ್ನೋದೇ?
ಸೈಕಾಲಜಿಯ ಒಬ್ಬ ಪ್ರೊಫೆಸರ್ ತಮ್ಮ ಡ್ರಾಯಿಂಗ್ ರೂಮಿನಲ್ಲಿ ಈ ರೀತಿ ಪೋಸ್ಟರ್ ಅಂಟಿಸಿದ್ದರು :
ಗಂಡಸರು ಅತ್ಯಗತ್ಯ ಗಮನಿಸತಕ್ಕದ್ದು. ಮದುವೆಗೆ ಮೊದಲು ವಿಶ್ವ ಪೂರ್ತಿ ಸುತ್ತಾಡಿಕೊಂಡು ಬನ್ನಿ! ಮದುವೆ ನಂತರ ವಿಶ್ವ ಸುತ್ತದೊಂದೇ ಕಾಣಿಸುತ್ತದೆ, ನೀವು ಎಲ್ಲೂ ಸುತ್ತಾಡಲಿಕ್ಕಾಗಲ್ಲ.
ಕಿಡ್ನ್ಯಾಪರ್ : ನೋಡಯ್ಯ…. ನಿನ್ನ ಹೆಂಡತಿಯನ್ನು ಕಿಡ್‌ನ್ಯಾಪ್ ಮಾಡಿದ್ದೇವೆ. ಮರ್ಯಾದೆಯಾಗಿ 5 ಲಕ್ಷ ರೂ. ತಗೊಂಡು ಊರಾಚೆಯ ಹಾಳು ಬಾವಿಗೆ ಬಾ! ಇಲ್ಲದಿದ್ದರೆ… ನಿನ್ನ ಹೆಂಡತಿಯ ಗತಿ ಗೊತ್ತಲ್ಲ…
ಗಂಡ : ಪರರ ಚಿಂತೆ ನಮಗೆ ಏಕೆ… ಅಯ್ಯ…. ಪರರ ಚಿಂತೆ …. ಅದಾದ ಮೇಲೆ 5 ನಿಮಿಷ ಮೌನ ಆವರಿಸಿತ್ತು.
ಹೆಂಡತಿ : ಹಲೋ… ಹಲೋ…. ನಾನು ಕಣ್ರೀ ರೋಜಾ…. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ನಾನು ಇವರ ಹತ್ತಿರ ಸಿಕ್ಕಿ ಹಾಕಿಕೊಂಡಿದ್ದೀನಿ… ಪ್ಲೀಸ್ ಬೇಗ ಬಂದು ನನ್ನನ್ನು ಬಿಡಿಸಿಕೊಳ್ಳಿ…..
ಗಂಡ : ಲವ್ ಯೂ ಡಿಯರ್…. ಅದಿರಲಿ, ಮೊದಲು ಟಿವಿ ರಿಮೋಟ್ ಎಲ್ಲಿಟ್ಟಿದ್ದೀಯಾ ಹೇಳು… 4 ಓವರ್ ಕ್ರಿಕೆಟ್ ಮ್ಯಾಚ್ ನೋಡಿಕೊಂಡು ಬಂದುಬಿಡ್ತೀನಿ, ನಮ್ಮವರು ಬ್ಯಾಟಿಂಗ್ ಗೆ ಬಂದುಬಿಟ್ಟಿದ್ದಾರೆ…..
ಬಸ್ಸಿನಲ್ಲಿ ಗುಂಡ ಮೆಜೆಸ್ಟಿಕ್ ನಿಂದ ಜಯನಗರಕ್ಕೆ ಹೊರಟಿದ್ದ. ಸ್ವಲ್ಪ ಹೊತ್ತಿಗೆ ಸುಂದರವಾಗಿ ಮೇಕಪ್ ಮಾಡಿಕೊಂಡಿದ್ದ ಒಬ್ಬ ಮಹಿಳೆ ಬಂದು ಪಕ್ಕದಲ್ಲಿ ಕುಳಿತಳು.
ಗುಂಡ : ಮೇಡಂ, ನೀವು ಬಳಸುತ್ತಿರು ಪರ್ಫ್ಯೂಮ್ ಯಾವುದು? ಪರಿಮಳ ಬಹಳ ಚೆನ್ನಾಗಿದೆ. ಮುಂದಿನ ಸಲ ಯಾರಿಗಾದರೂ ಗಿಫ್ಟ್ ಕೊಡಲು ಇದನ್ನೇ ಕೊಂಡುಕೊಳ್ಳುವೆ.
ಮೇಡಂ : ಅಯ್ಯೋ…. ಖಂಡಿತಾ ಇದನ್ನು ಕೊಂಡರೆ ನಿಮ್ಮ ಹೆಂಡತಿಗೆ ಕೊಡಬೇಡಿ. ಪಾಪ, ಆಕೆ ಅದನ್ನು ಬಳಸಿ ಹೊರಗೆ ಹೊರಟರೆ ಬೀದೀಲಿ ಹೋಗೋ ದಾಸಯ್ಯ ಬಂದು ಅದರ ಬಗ್ಗೆ ವಿವರ ಕೇಳಿ ಅವರನ್ನು ಗೋಳುಹೊಯ್ದು ಕೊಳ್ಳುತ್ತಾನೆ. ಯಾಕೋ ಏನೋ ಗುಂಡ ತಲೆ ತಗ್ಗಿಸಿ ಮರು ಸ್ಟಾಪ್ ನಲ್ಲಿಯೇ ಬಸ್ಸಿನಿಂದ ಇಳಿದು ಹೊರಟು ಹೋದನಂತೆ!
ಒಮ್ಮೆ ಪತಿಪತ್ನಿ ನಡುವೆ ಜಗಳ ನಡೆದಿತ್ತು.
ಪತ್ನಿ : ಅಲ್ಲ ರೀ…. ದಿನವಿಡೀ ಟಿವಿ, ಮ್ಯಾಚು, ಸಿನಿಮಾ, ಮೊಬೈಲ್ ಫೇಸ್ ಬುಕ್ ಹಾಳುಮೂಳು ಅಂತ ಇದೇ ಆಗೋಯ್ತು. ಇಡೀ ದಿನ ನಾನೊಬ್ಬಳೇ ದುಡಿದೂ ದುಡಿದೂ ಸಾಕಾಗಿದೆ…..
ಪತಿ : ಸಾಕು…. ಸಾಕು…. ವಾರವಿಡೀ ದುಡಿದು ಇವತ್ತು ಭಾನುವಾರ ಒಂದು ದಿನ ಏನೋ ಸ್ವಲ್ಪ ಮ್ಯಾಚ್ ನೋಡ್ತಿದ್ದೀನಪ್ಪ…. ಅದಕ್ಕೆ ಹೀಗಾ ಹೇಳೋದು?
ಪತ್ನಿ : ನನ್ನ ತರಹ ಕಷ್ಟಪಟ್ಟರೆ ಗೊತ್ತಾಗುತ್ತೆ!
ಪತಿ : ಓಹೋ…. ಏನು ಕಷ್ಟವೋ? ನಲ್ಲಿ ತಿರುಗಿಸಿದರೆ ನೀರು ಬರುತ್ತೆ, ಬಾವಿ ಬೋರ್ ವೆಲ್ ಅಂತ ಓಡಾಡಬೇಕಿಲ್ಲ. ಕೆಲಸದವಳು ಬಂದು ಮನೆ ಕ್ಲೀನಿಂಗ್, ಪಾತ್ರೆ, ಬಟ್ಟೆ ಮುಗಿಸಿ ಹೋಗ್ತಾಳೆ. ತರಕಾರಿ ಹೆಚ್ಚಿ ಅಡುಗೆ ಮಾಡೋದು ಮಹಾ ಕಷ್ಟದ ಕೆಲಸವೇ?
ಪತ್ನಿ : ಅಷ್ಟೇನಾ…. ಬೇರೇನಿಲ್ವಾ? ಇಡೀ ಮನೆ ಸಂಭಾಳಿಸುತ್ತೇನೆ, ಮಕ್ಕಳನ್ನು ರೆಡಿ ಮಾಡಿ ಸ್ಕೂಲಿಗೆ ಕಳಿಸಬೇಕು, ನಿನ್ನಂಥ ಸೋಮಾರಿ ಗಂಡನ ಜೊತೆ ಏಗಬೇಕು, ಮನೆಗೆ ಬಂದವರನ್ನು ವಿಚಾರಿಸಬೇಕು… ಇದೆಲ್ಲ ಸುಲಭಾನಾ? ಮನೆಯಲ್ಲಿದ್ದಾಗ ನೀವು ಏನು ಮಹಾ ಮಾಡ್ತೀರಿ?
ಪತಿ : ನಾನು ನನ್ನನ್ನು ಸಂಭಾಳಿಸಿಕೊಳ್ಳುತ್ತಾ…. ನಿನ್ನ ಆಳವಾದ ಸರೋವರದಂಥ ಈ ಕಂಗಳಲ್ಲಿ ಪ್ರೇಮಲೋಕ ಹುಡುಕುತ್ತಾ ತನ್ಮಯನಾಗ್ತೀನಿ….
ಪತ್ನಿ : ಥೂ… ಹೋಗೀಪ್ಪ… 2 ಮಕ್ಕಳಾದರೂ ನಿಮ್ಮ ರಸಿಕತೆ ಇನ್ನೂ ಹೋಗಿಲ್ಲ. ಇವತ್ತು ಸ್ಪೆಷಲ್ ಅಂತ ನಿಮಗೆ ಶ್ಯಾವಿಗೆ ಹಾಲುಖೀರು ಬೇಕಾ… ಗಸಗಸೆ ಪಾಯಸಾ ಮಾಡಿಕೊಡ್ಲಾ?
ಒಬ್ಬ ಆಟೋ ಡ್ರೈವರ್ ನ ಮದುವೆ ನಡೆಯುತ್ತಿತ್ತು. ಆಗ ತಾನೇ ತಾಳಿ ಕಟ್ಟಿ ಆಗಿತ್ತು ಸಪ್ತಪದಿ ನಂತರ ವಧುವನ್ನು ಅವನ ಎಡಗಡೆ ಕೂರಿಸಿದರು.
ಅಭ್ಯಾಸ ಬಲದಿಂದ ತಕ್ಷಣ ಅವನು ಹೇಳಿದ, “ರೀ ಮೇಡಂ, ಇನ್ನೂ ಸ್ವಲ್ಪ ಹತ್ತಿರ ಬಂದು ಕುಳಿತುಕೊಳ್ಳಿ ಮಣೆ ಮೇಲೆ ಇನ್ನೊಬ್ಬರು ಕೂರಬಹುದು.”
ಮಹೇಶ್ : ಅಲ್ಲ, ಈ ಧರ್ಮಬೀರು, ಧೈವಭಕ್ತಿಯುಳ್ಳ ಹೆಂಗಸರೆಲ್ಲ ಮೂಢ ನಂಬಿಕೆಯಿಂದ ಹೊರಬಂದು ಢೋಂಗಿ ಬಾಬಾಗಳ ಆಶ್ರಮಕ್ಕೆ ಹೋಗುವುದನ್ನೇ ನಿಲ್ಲಿಸಿಬಿಟ್ಟರೆ ಆಗ ಏನಾಗುತ್ತೆ…..?
ಸುರೇಶ್ : ಏನಿಲ್ಲ. ಆಗ ಈ ಢೋಂಗಿ, ಕಪಟಿ ಬಾಬಾಗಳು ಕಂಡ ಕಂಡ ಹೋಟೆಲ್ ಗಳಲ್ಲಿ ಎಂಜಲು ತಟ್ಟೆ ಎತ್ತಿ ಕ್ಲೀನ್ ಮಾಡುವ ಕೆಲಸಕ್ಕೆ ಸೇರಬೇಕಾಗುತ್ತೆ!