ಮತ್ತೆ ಹಳ್ಳಿ ಹುಡುಗಿ
ನೋಡುವುದಕ್ಕೆ ಮಾಡರ್ನಾಗಿ ಕಂಡರೂ ನಟಿ ಶುಭಾ ಪೂಂಜಾಳಿಗೆ ಹಳ್ಳಿ ಹುಡುಗಿ ಪಾತ್ರಗಳು ಹೆಚ್ಚಾಗಿ ಸಿಗುತ್ತಲೇ ಇರುತ್ತವೆ. `ಮೊಗ್ಗಿನ ಮನಸ್ಸು’ ಚಿತ್ರದಲ್ಲೂ ಸಹ ಹಳ್ಳಿ ಹುಡುಗಿ ಪಾತ್ರ ಮಾಡಿದ್ದಳು. ದುನಿಯಾ ವಿಜಯ್ ಜೊತೆ `ತಾಕತ್’ ಚಿತ್ರದಲ್ಲೂ ಹಳ್ಳಿ ಹುಡುಗಿಯಾಗಿದ್ದಳು. ಇದೀಗ ಮತ್ತೊಮ್ಮೆ ಶುಭಾಳಿಗೆ ಹಳ್ಳಿ ಹುಡುಗಿಯಾಗೋ ಅದೃಷ್ಟ ಬಂದಿದೆ. ಅಂದಹಾಗೆ ಚಿತ್ರದ ಹೆಸರು ಕೂಡ `ಅದೃಷ್ಟ.’ ಬದ್ರಿನಾಥ್ ನಿರ್ದೇಶನದ ಈ ಚಿತ್ರದಲ್ಲಿ ಲಂಗ ದಾವಣಿಯಲ್ಲಿ ಮಿಂಚಲು ಬರುತ್ತಿದ್ದಾಳೆ. ಒಂದೇ ರೀತಿ ಪಾತ್ರಕ್ಕೆ ಬ್ರ್ಯಾಂಡ್ ಆಗಲು ನನಗಿಷ್ಟವಿಲ್ಲ. ಈಗಾಗಲೇ ನಾನು ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ ಯಾವುದೇ ಇರಲಿ ಅದರ ಮೂಲಕ ನನ್ನ ಪ್ರತಿಭೆ ತೋರಿಸುವ ಪ್ರಯತ್ನ ಮಾಡುತ್ತೇನೆ ಎನ್ನುತ್ತಾಳೆ ಶುಭಾ ಪೂಂಜಾ.
ಮತ್ತೆ ಗೆದ್ದ ದರ್ಶನ್
ಛಾಲೆಂಜಿಂಗ್ ಸ್ಟಾರ್, ಕಲೆಕ್ಷನ್ ಕಿಂಗ್ ಎಂದೆಲ್ಲ ಹೆಸರು ಪಡೆದಿರುವ ದರ್ಶನ್ ಅವರಿಗೀಗ ಶುಕ್ರದೆಸೆ. ಒಂದಾದ ಮೇಲೊಂದರಂತೆ ಅವರ ಚಿತ್ರಗಳು ಜಯಭೇರಿ ಬಾರಿಸುತ್ತಲೇ ಇವೆ. ಇತ್ತೀಚೆಗೆ ಬಿಡುಗಡೆಯಾಗಿ ಭಾರಿ ಕಲೆಕ್ಷನ್ ಮಾಡಿದಂಥ `ಬುಲ್ ಬುಲ್’ ಅವರ ಇಡೀ ತಂಡಕ್ಕೆ ಲಾಭ ತಂದುಕೊಟ್ಟಿದೆ. ದರ್ಶನ್ ಅವರ ಜೊತೆ ಮೊದಲಿನಿಂದಲೂ ಕೆಲಸ ಮಾಡಿಕೊಂಡು ಬಂದಿರುವಂಥ ಅವರ ತಂಡವೇ ಈ ಚಿತ್ರದ ನಿರ್ಮಾಪಕರಾಗಿದ್ದರಿಂದ ಎಲ್ಲರಿಗೂ ಗೆಲುವು ತಂದುಕೊಟ್ಟಿದೆ. ಸಿನಿಮಾರಂಗದಲ್ಲಿ ಮೊದಲ ಬಾರಿಗೆ ಇಂಥವೊಂದು ಪ್ರಯತ್ನ ಮಾಡಿರೋದ್ರಿಂದ ದರ್ಶನ್ ತಂಡವನ್ನು ಗೆಲ್ಲಿಸಿ ತಾವೂ ಗೆದ್ದಿದ್ದಾರೆ. ದರ್ಶನ್ ಇಂಥದ್ದೇ ಪಾತ್ರವೊಂದು ಬ್ರ್ಯಾಂಡಾಗದೇ ಎಲ್ಲ ತರಹದ ಪಾತ್ರ ಮಾಡಿಕೊಂಡು ಬಂದಿರೋದ್ರಿಂದ ಅವರ ಹೊಸ ಚಿತ್ರಗಳಲ್ಲಿ ಏನಾದರೊಂದು ಹೊಸತನವಿರುತ್ತದೆ. ಕಾಮಿಡಿ, ಫ್ಯಾಮಿಲಿ, ಆ್ಯಕ್ಷನ್, ಸೆಂಟಿಮೆಂಟ್ ಎಂಥದ್ದೇ ಪಾತ್ರವಿರಲಿ ಎಲ್ಲದಕ್ಕೂ ಫಿಟ್ ಆಗುವ ದರ್ಶನ್ ಕನ್ನಡದ ಅತ್ಯಂತ ಜನಪ್ರಿಯ ನಾಯಕ ಎನಿಸಿಕೊಂಡಿದ್ದಾರೆ.
ಜೈ ಭಜರಂಗಬಲಿ
`ಈ ಬಾರಿ ಗೆಲುವು ಖಚಿತ’ ಎಂದು ಪಣ ತೊಟ್ಟಿರುವ ನಿರ್ದೇಶಕ ರವಿವರ್ಮ ತಮ್ಮ ಹೊಸ ಚಿತ್ರವನ್ನು ಶುರು ಮಾಡಿ ಆಗಲೇ ಡಬ್ಬಿಂಗ್ ಹಂತಕ್ಕೆ ತಂದಿದ್ದಾರೆ. ಹರಿಕೃಷ್ಣ ನಿರ್ಮಿಸುತ್ತಿರುವ ಈ ಚಿತ್ರಕ್ಕೆ `ಜೈ ಭಜರಂಗಬಲಿ’ ಎಂದು ಹೆಸರಿಡಲಾಗಿದೆ. ಅಜೇಯ ರಾವ್ ಸಿಂಧು ಲೋಕನಾಥ್ ಜೋಡಿಯ ಈ ಚಿತ್ರಕ್ಕಾಗಿ ರವಿವರ್ಮ ವಿಶೇಷವಾದ ಚಿತ್ರಕಥೆ ಮಾಡಿದ್ದಾರಂತೆ. ಪ್ರೇಕ್ಷಕರು ಸಲೀಸಾಗಿ ಏನನ್ನು ಊಹಿಸುವಂತಿಲ್ಲ, ಅಷ್ಟೊಂದು ಸಸ್ಪೆನ್ಸ್ ಇಟ್ಟಿದ್ದಾರಂತೆ. ಮೊದಲ ಬಾರಿಗೆ ಆ್ಯಕ್ಷನ್ ಹೀರೋ ಆಗಿ ಲವರ್ ಬಾಯ್ ಅಜೇಯ್ ರಾವ್ ನಟಿಸುತ್ತಿರುವುದು ವಿಶೇಷ. ಅಜೇಯ್ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಚಾಂಪಿಯನ್. ಹಾಗಾಗಿ ಅವರ ಈ ವಿದ್ಯೆಯನ್ನು ರವಿ ಚೆನ್ನಾಗಿಯೇ ಬಳಸಿಕೊಂಡಿದ್ದಾರಂತೆ. ಸಿಕ್ಕಾಪಟ್ಟೆ ಕ್ಯಾರೆಕ್ಟರ್ ಆರ್ಟಿಸ್ಟ್ ಗಳು ಈ `ಜೈ ಭಜರಂಗಬಲಿ’ ಚಿತ್ರದಲ್ಲಿರೋದು ಮತ್ತೊಂದು ವಿಶೇಷ. ಅನಂತ್ ನಾಗ್ ಅವರಿಗೆ ಆಯುರ್ವೇದ ಪಂಡಿತನ ಪಾತ್ರ. ತುಂಬಾ ಇಷ್ಟಪಟ್ಟು ನಟಿಸಿದ್ದಾರಂತೆ. ಈ ಚಿತ್ರದ ಐದು ಹಾಡುಗಳನ್ನು ವಿದೇಶದಲ್ಲೇ ಚಿತ್ರೀಕರಣ ಮಾಡುವ ಐಡಿಯಾ ರವಿವರ್ಮ ಮತ್ತು ಹರಿಕೃಷ್ಣರದು.
ಕಾಫಿ ವಿತ್ ಮೈ ಲೈಫ್
ಮಂತ್ರ ಆನಂದ್ ಸಂಗೀತ ಸಂಯೋಜನೆಯಲ್ಲಿ ಬಂದಂಥ `ಕಾಫಿ ವಿತ್ ಮೈ ಲೈಫ್’ ಚಿತ್ರದ ಹಾಡುಗಳು. ಬಿಸಿ ಬಿಸಿ ಕಾಫಿ ಹೀರಿದಷ್ಟೇ ರುಚಿ ರುಚಿಯಾಗಿತ್ತು. ಹಾಡುಗಳು ಕೇಳುವಷ್ಟೇ, ನೋಡುಗರನ್ನು ರಂಜಿಸುವ ಶಕ್ತಿ ಕಾಫಿಗಿತ್ತು. `ಕಾಫಿ ವಿತ್ ಮೈ ಲೈಫ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ಮೌನ ವಾತಾವರಣದಲ್ಲಿ, ಅಲ್ಲಲ್ಲ ರುಚಿಯ ಕಚುಗುಳಿಯಿಡುವ ಮಾತುಗಳಿಂದ ಮೀಡಿಯಾದವರಿಗೆ ಬಿಸಿ ಮುಟ್ಟಿಸಿತ್ತು. ಅಲ್ಲಿಯ ಆಕರ್ಷಣೆ ಪುನೀತ್ ರಾಜ್ ಕುಮಾರ್, ಯೋಗಾರಾಜ್ ಭಟ್, ರಾಕ್ ಲೈನ್, ಡಿಂಪಲ್, ಮೇಘನಾ ಗಾಂಕರ್ ಅತಿಥಿಗಳು. ಬಂದವರನ್ನೆಲ್ಲಾ ಕಾಫಿ ಬಗ್ಗೆ ಪ್ರಶ್ನೆ ಕೇಳಲಾಗುತ್ತಿತ್ತು. ಯಾರು ಮಾಡುವ ಕಾಫಿ ಇಷ್ಟ? ಮೊದಲ ಬಾರಿಗೆ ಕಾಫಿ ಕುಡಿದ ಅನುಭವ! ಈ ಪ್ರಶ್ನೆಗಳಿಗೆಲ್ಲ ಉತ್ತರಿಸಿದ ಅತಿಥಿಗಳು ಹೊಸಬರ ಈ ಕಾಫಿ ಪ್ರಯತ್ನಕ್ಕೆ ಜಯ ಸಿಗಲಿ ಎಂದರು. ಅನೀಶ್, ಸಿಂಧು ಲೋಕನಾಥ್ ಜೋಡಿಯ ಈ ಕಾಫಿ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಸ್ಟೈಲಿಶ್ ಗೂಗ್ಲಿ ನಟ
ಯಶ್ ಮತ್ತೆ ಮಿಂಚಲು ಬರುತ್ತಿದ್ದಾರೆ. `ಗೋವಿಂದಾಯ ನಮಃ’ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ `ಗೂಗ್ಲಿ’ ಚಿತ್ರವನ್ನು ಬಹಳ ಸ್ಟೈಲಿಶಾಗಿ ಮಾಡುತ್ತಿದ್ದಾರೆ. ಯಶ್ ಯಾವ ರೀತಿ ಗೂಗ್ಲಿ ಹಾಕುತ್ತಾನೆ ಎಂಬುದನ್ನು ಕಥೆಯಲ್ಲಿ ಹೇಳಲಾಗಿದೆ. ಕನ್ನಡದಲ್ಲಿ ಸಾಕಷ್ಟು ಮಿಂಚುತ್ತಿರುವಂಥ ನಾಯಕಿ ಕೃತಿಕಾ ಖರ್ ಬಂದಾ ಈ ಬಾರಿ ಯಶ್ ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ. ಚಿತ್ರದಲ್ಲಿನ ಆ್ಯಕ್ಷನ್ ಸೀನ್ ಗಳಲ್ಲಿ ಯಶ್ ಡ್ಯೂಪ್ ಇಲ್ಲದೆ ಡೇರಿಂಗಾಗಿ ಮಾಡಿದ್ದಾನಂತೆ. ವಿಭಿನ್ನವಾದ ಗೆಟಪ್ ನಲ್ಲಿ ಕಾಣಿಸಿಕೊಳ್ಳುವ ಯಶ್ ಗೆ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದೆ. ಇತ್ತೀಚೆಗಷ್ಟೆ ಆಡಿಯೋ ಬಿಡುಗಡೆ ಸಮಾರಂಭ ನಡೆದಿದೆ. ವಿತರಕ, ನಿರ್ಮಾಪಕ ಜಯಣ್ಣ ಈಗಾಗಲೇ `ಡ್ರಾಮಾ’ ಚಿತ್ರ ನಿರ್ಮಿಸಿ ಸೈ ಎನಿಸಿಕೊಂಡರು, ಈಗ ಗಾಂಧೀನಗರದಲ್ಲಿ `ಗೂಗ್ಲಿ’ ಹಾಕಲಿದ್ದಾರೆ. ಜಯಣ್ಣನವರ ಈ ಪ್ರಾಜೆಕ್ಟ್ ಜಯ ಬಾರಿಸಲಿ ಎನ್ನೋಣ.
ಅರ್ಜುನ್ 25
ಕನ್ನಡ ಚಿತ್ರರಂಗದಲ್ಲಿ ಹೊಸಬರ ಆಗಮನವಾಗುತ್ತಿದ್ದರೂ ಅವರಲ್ಲಿ ಗಟ್ಟಿಯಾಗಿ ನಿಂತವರು ಕೆಲವೇ ಕೆಲವರು. ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆ ಹುಟ್ಟಿಸಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇತ್ತೀಚೆಗೆ 25 ಚಿತ್ರಗಳನ್ನು ಪೂರೈಸಿ ಸಂಭ್ರಮ ಆಚರಿಸಿದ್ದಾರೆ. ಇವರ ಹೆಸರಿಗೆ ಜನ್ಯ ಅಂತ ಸೇರಿಸಿದ್ದು ಮತ್ತ್ಯಾರಲ್ಲ ಕಿಚ್ಚ ಸುದೀಪ್. `ಕೆಂಪೇಗೌಡ’ ಚಿತ್ರಕ್ಕೆ ನೀಡಿರುವ ಸಂಗೀತ ಸಖತ್ ಹಿಟ್ ಆಯಿತು. ಅಂದಿನಿಂದ ಅರ್ಜುನ್ ಜನ್ಯ ಆಗಿಬಿಟ್ಟರು. ಎ.ಆರ್. ರೆಹಮಾನ್ ರ ಕಟ್ಟಾ ಅಭಿಮಾನಿಯಾಗಿರುವ ಅರ್ಜುನ್ ಒಪ್ಪಿ ರೆಹಮಾನ್ ಅವರ ಕೈ ಕುಲುಕಿ ಬಂದಾಗ ಅವರಲ್ಲಿ ಸಾಕಷ್ಟು ಬದಲಾವಣೆ ಆಗಿತ್ತಂತೆ. ಇದೀಗ `ಬರ್ಫಿ’ ಚಿತ್ರಕ್ಕೆ ಉತ್ತಮವಾದ ಏಳು ಹಾಡುಗಳನ್ನು ನೀಡಿರುವ ಅರ್ಜುನ್ ಯುವ ಪೀಳಿಗೆಯನ್ನು ಸಾಕಷ್ಟು ಆಕರ್ಷಿಸುತ್ತಿದ್ದಾರೆ. ನಾನು 25 ಚಿತ್ರಗಳಿಗೆ ಸಂಗೀತ ನೀಡಿದ್ದೇನೆ ಅಂದರೆ ಅದಕ್ಕೆ ಕಾರಣ, ಚಿತ್ರರಂಗ. ನನ್ನ ಹಾಡುಗಳನ್ನು ಕೇಳುವ ಸಿನಿಮಾದ ಪ್ರೇಕ್ಷಕರಿಗೆ ನಾನು ಸದಾ ಋಣಿ ಎಂದು ಅರ್ಜುನ್ ಹೇಳುತ್ತಾರೆ.
ಮನದ ಮರೆಯಲ್ಲಿ
ಯು.ಎಂ. ಡ್ರೀಮ್ ಮೂವೀಸ್ ಲಾಂಛನದಲ್ಲಿ ಮಹೇಶ್ ಆನೇಕಲ್ ನಿರ್ಮಿಸುತ್ತಿರುವ `ಮನದ ಮರೆಯಲ್ಲಿ’ ಚಿತ್ರಕ್ಕೆ ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ಎಂ.ಎಸ್. ತ್ಯಾಗರಾಜ್ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಡಾ. ರಾಜ್ ಕುಮಾರ್ ಅವರು ನೇತ್ರದಾನದ ಬಗ್ಗೆ ಹೇಳುತ್ತಿದ್ದ ಮಾತುಗಳ ಸ್ಛೂರ್ತಿಯಿಂದ ಈ ಚಿತ್ರ ನಿರ್ಮಾಣವಾಗುತ್ತಿದೆ ಎಂದು ನಿರ್ದೇಶಕ ಎ.ಎಚ್. ರಾಜೀವ್ ನೇತ್ರ ತಿಳಿಸಿದ್ದಾರೆ. `ಒಲವೇ ಮಂದಾರ’ ಖ್ಯಾತಿಯ ನಾಯಕ ಶ್ರೀಕಾಂತ್ ಈ ಚಿತ್ರದ ನಾಯಕ. ವಿಂಧ್ಯಾ ನಾಯಕಿಯಾಗಿ ನಟಿಸುತ್ತಿದ್ದಾಳೆ. ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಜೇಯ್ ರಾವ್ ಅಭಿನಯಿಸಿದ್ದಾರೆ. ಅನಂತ್ ನಾಗ್, ರಂಗಾಯಣ ರಘು, ಸಂದೀಪ್, ಮಮತಾ ರಾಹುಲ್ ಮುಂತಾದವರ ತಾರಾಬಳಗವಿದೆ.
ರಮ್ಯಾಳಿಗೆ ನೀರಿನ ಚಿಂತೆ
ಬೆಂಗಳೂರಿನಲ್ಲಿ ಮುಂಗಾರು ಮಳೆ ಶುರುವಾಗಿದೆ. ಹನಿಗಳ ಲೀಲೆಯಿಂದ ಜನ ತತ್ತರಿಸಿ ಹೋಗುತ್ತಿದ್ದಾರೆ. ನೀರು ಬೇಕು ನೀರು ಎನ್ನುತ್ತಿರುವಾಗಲೇ ಕೈಗೆ ಸಿಗದ ಹಾಗೆ ಮಳೆ ನೀರು ಹರಿದು ಹೋಗುತ್ತಿದೆ. ಅಯ್ಯ ಎಷ್ಟೊಂದು ನೀರು ವ್ಯರ್ಥವಾಗುತ್ತಿದೆಯಲ್ಲ ಎಂದು ಸಾಮಾನ್ಯ ಜನರು ಪೇಚಾಡುತ್ತಿದ್ದಾರೆ. ಆದರೆ ನಮ್ಮ ರಮ್ಯಾ ಕೂಡಾ ಮಳೆ ನೀರು ವೇಸ್ಟ್ ಆಗ್ತಿದೆ ಎಂದು ಕೊರಗುವುದನ್ನು ಕಂಡಾಗ ನಿಜಕ್ಕೂ ಆಶ್ಚರ್ಯವಾಗುತ್ತವೆ. ಪಂಚತಾರಾ ಹೋಟೆಲ್ ನಲ್ಲಿ ತನ್ನ ಹೆಚ್ಚು ಕಾಲವನ್ನು ಕಳೆಯುವ ರಮ್ಯಾಳಿಗೇಕೆ ನೀರಿನ ಚಿಂತೆ ಅಂತ ಚಿಂತಿಸಬೇಡಿ. ರಮ್ಯಾಳಿಗೆ ಜನರದೇ ಚಿಂತೆಯಾಗಿದೆ. ಮಳೆ ನೀರನ್ನು ಹಿಡಿದಿಟ್ಟುಕೊಳ್ಳಿ. ಪಾತ್ರೆ, ಬಟ್ಟೆ ಒಗೆಯೋದಿಕ್ಕೆ ಬಳಸಿ. ಬಾತ್ ರೂಮಿಗಾಗಿ ಉಪಯೋಗಿಸಿ ವೇಸ್ಟ್ ಮಾಡಬೇಡಿ ಎಂದು ಉಚಿತ ಸಲಹೆ ಕೊಡುತ್ತಿದ್ದಾಳೆ. ಬಹುಶಃ ರಮ್ಯಾಳ ಅಭಿಮಾನಿಗಳು ಪಾಲಿಸಬಹುದೇನೋ?
ಕ್ರೇಜಿ ಗಿಫ್ಟ್
ಎರಡು ಮೂರು ವರ್ಷಗಳಿಂದ ರವಿಚಂದ್ರನ್ ಅವರು ತಮ್ಮ ಪುತ್ರ ಮನೋರಂಜನ್ ನನ್ನು ಬೆಳ್ಳಿತೆರೆಗೆ ಪರಿಚಯಿಸುವುದಾಗಿ ಹೇಳುತ್ತಲೇ ಇದ್ದರು. ಮನೋರಂಜನ್ ಸಿನಿಮಾ ಮೇಕಿಂಗ್ ನಿಂದ ಹಿಡಿದು ಆ್ಯಕ್ಟಿಂಗ್, ಆ್ಯಕ್ಷನ್, ಡ್ಯಾನ್ಸ್ ಎಲ್ಲವನ್ನೂ ಕಲಿತಾಗಿತ್ತು. ಆದರೆ ಸಿನಿಮಾ ಶುರವಾಗಲು ಮುಹೂರ್ತ ಕೂಡಿಬರಬೇಕಿತ್ತು. ಮನೋರಂಜನ್ ಅಪ್ಪನ ಅಸಿಸ್ಟೆಂಟಾಗಿ ಕ್ರೇಜಿ ಸ್ಟಾರ್ ಚಿತ್ರದಲ್ಲಿ ದುಡಿದ, ಅನುಭವ ಪಡೆದ. ಸಿನಿಮಾರಂಗದಲ್ಲಿ ಕಲಿಕೆಗೆ ಕೊನೆಯಿಲ್ಲ ಎನ್ನುತ್ತಾರೆ. ಇತ್ತೀಚೆಗಷ್ಟೆ ರವಿಚಂದ್ರನ್ ತಮ್ಮ 52ನೇ ಹುಟ್ಟುಹಬ್ಬವನ್ನು ಮೀಡಿಯಾದವರ ಜೊತೆ ತಮ್ಮ ಮನೆಯಲ್ಲಿ ಅಡ್ವಾನ್ಸಾಗಿ ಆಚರಿಸಿಕೊಂಡಾಗ ಅಲ್ಲೊಂದು ಅಚ್ಚರಿ ಕಾದಿತ್ತು. ರವಿ ತನ್ನ ಪುತ್ರನಿಗಾಗಿ ಸಿನಿಮಾ ಶುರು ಮಾಡಿದ್ದರು. ಬಣ್ಣ ಹಚ್ಚಿಸಿದ್ದರು, ಮುಹೂರ್ತದ ಶಾಟ್ ಕೂಡಾ ತೆರೆದಿದ್ದರು. ಚಿತ್ರದ ಹೆಸರು `ಅಂದು.’ ಇದನ್ನೇ ರವಿ ಸ್ಟೆಷಾಲಿಟಿ ಅನ್ನೋದು. ಮಗನಿಗೆ ಒಳ್ಳೆಯ ಪಾತ್ರವಿದೆ, ನಾಯಕನಾಗಿ ಮೊದಲ ಚಿತ್ರದಲ್ಲೇ ಇಂಥ ಪಾತ್ರ ಸಿಕ್ಕಿದ್ದು ಕಂಡಾಗ ನಾನಿದುವವರೆಗೂ ಅಂಥ ಪಾತ್ರ ಮಾಡಿಲ್ಲವಲ್ಲ ಅನಿಸಿತು. ಮನೋರಂಜನ್ ಎತ್ತರ ನಿಲುವಿನ ಹೀರೋ. ಕನ್ನಡದ ಬೆಳ್ಳಿತೆರೆಯಲ್ಲಿ ಮಿಂಚಲು ಬರ್ತಾ ಇದ್ದಾನೆ. ಮಗನಿಗಾಗಿ ಅಪ್ಪ ಕೊಟ್ಟ ರಿಟರ್ನ್ ಗಿಫ್ಟ್ ಇದು.
ನಿಂಬೆ ಹುಳಿ
ಹೇಮಂತ್ ಹೆಗ್ಡೆ ಈ ಬಾರಿ ಒಂದು ಕಾಮಿಡಿ ಭರಿತ ಚಿತ್ರ ತಯಾರು ಮಾಡಿದ್ದಾರೆ. ಅದನ್ನವರು ಬಾಲಿವುಡ್ ನ ಕಾಮಿಡಿ ಚಿತ್ರಗಳಿಗೆ ಹೋಲಿಸುತ್ತಾರೆ. ಪಕ್ಕಾ ಪ್ಯೂರ್ ಕಾಮಿಡಿ ಎಂದು ಹೇಳುವ ಹೇಮಂತ್, ಚಿತ್ರದಲ್ಲಿ ಡಬ್ಬಲ್ ಮೀನಿಂಗ್ ಡೈಲಾಗ್ ಇಡಲು ಅವಕಾಶವಿದ್ದರೂ ಬೇಡ ಎಂದಿದ್ದಾರೆ. ಈಗಾಗಲೇ ಸಂಗೀತ ನಿರ್ದೇಶಕ ವೀರ್ ಸಮರ್ಥ ಸಂಯೋಜಿಸಿರುವ ಹಾಡುಗಳು ಹಿಟ್ ಆಗುತ್ತಿವೆ. ಯೂಟ್ಯೂಬ್ ನಲ್ಲಿ ಹರಿದಾಡುತ್ತಿದ್ದು ಲಕ್ಷಾಂತರ ಜನ ವೀಕ್ಷಿಸಿದ್ದಾರಂತೆ. ಚಿತ್ರದಲ್ಲಿ ಮಧುರಿಮಾ, ಕೋಮ್ ರಮಾ ಮತ್ತು ನಿವೇದಿತಾ ಎಂಬ ಮೂವರು ನಾಯಕಿಯರಿದ್ದಾರೆ. ನೂರು ಹುಡುಗರನ್ನು ನಿಭಾಯಿಸಬಹುದು, ಮೂವರು ನಾಯಕಿಯರನ್ನು ಸಂಭಾಳಿಸೋದು ಕಷ್ಟ ಕಷ್ಟ ಎನ್ನುವ ಹೇಮಂತ್ `ನಿಂಬೆ ಹುಳಿ’ ಚಿತ್ರದ ನಾಯಕ ಕೂಡ ಆಗಿದ್ದಾರೆ. ಅವರ ಎಲ್ಲ ಚಿತ್ರಗಳಂತೆ `ನಿಂಬೆ ಹುಳಿ’ಯನ್ನು ಕೂಡಾ ಅಚ್ಚುಕಟ್ಟಾಗಿ ನಿರ್ದೇಶಿಸಿರುವ ಹೇಮಂತ್ ಹೆಗ್ಡೆ ಪ್ರೇಕ್ಷಕರನ್ನು ನಿರಾಸೆಗೊಳಿಸುವುದಿಲ್ಲ ಎಂದು ಸ್ವೀಟಾಗಿ ಹೇಳುತ್ತಾರೆ.