ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ಪರಭಾಷೆ ತಾರೆಯರಿಗೆ ಮಣೆ ಹಾಕುತ್ತಲೇ ಬಂದಿದ್ದಾರೆ. ಕಲ್ಪನಾ, ಜಯಂತಿ, ಆರತಿ, ಭಾರತಿ, ಜಯಮಾಲಾ, ಮಂಜುಳಾ ಈ ತಾರೆಯರು ಇಲ್ಲದೇ ಹೋಗಿದ್ದಿದ್ದರೆ ಇನ್ನಷ್ಟು ಆಮದು ತಾರೆಯರು ಇಲ್ಲಿ ಮನೆ ಮಾಡಿಬಿಡುತ್ತಿದ್ದರೇನೋ. ಆದರೆ ಕಾಲ ಬದಲಾದಂತೆ ಕನ್ನಡದ ತಾರೆಯರು ಪರಭಾಷಾ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡುತ್ತಾ ಬಂದರು. ಅಲ್ಲಿ ಇಲ್ಲಿ ಎಲ್ಲ ಕಡೆ ಸಲ್ಲುವ ತಾರೆಯರಾದರು. ಇಂದಿಗೂ ಅದೇ ಪರಂಪರೆ ಜಾರಿಯಲ್ಲಿದೆ. ನಟಿ ಸೌಂದರ್ಯಾ ಮೊದಲು ಬಣ್ಣ ಹಚ್ಚಿದ್ದು ಕನ್ನಡ ಚಿತ್ರಕ್ಕಾದರೂ ಮಿಂಚಿದ್ದು ತೆಲುಗು ಚಿತ್ರರಂಗದಲ್ಲಿ.
ಕನ್ನಡದ ಪ್ರತಿಭೆಗಳು ಇಲ್ಲಿ ಅವಕಾಶವಿಲ್ಲದಿದ್ದಾಗ ಪರಭಾಷೆಗೆ ಹೋಗಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದರು. ನಿಧಿ ಸುಬ್ಬಯ್ಯ, ಡೈಸಿ ಬೋಪಣ್ಣ, ಭಾವನಾ, ಸುಮನ್ ರಂಗನಾಥ್ ಇವರೆಲ್ಲರೂ ಕನ್ನಡದವರಾದರೂ ಅವಕಾಶ ಗಿಟ್ಟಿಸಿದ್ದು ಬಾಲಿವುಡ್ ನಲ್ಲಿ. ಆದರೀಗ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿರುವುದು, ಇಲ್ಲಿಯೂ ಒಳ್ಳೆ ಚಿತ್ರಗಳಲ್ಲಿ ನಟಿಸುತ್ತಿರೋದು ಅವರಲ್ಲಿ ಹೆಚ್ಚು ಕಾನ್ಛಿಡೆನ್ಸ್ ತುಂಬಿದಂತಿದೆ.
ಮೇಘನಾ ರಾಜ್ ಈಗ ಸುದ್ದಿ ಮಾಡುತ್ತಿರುವ ಕನ್ನಡದ ಪ್ರತಿಭೆ. ಪರಭಾಷೆಯಲ್ಲಿ ಮಿಂಚಿ ಕನ್ನಡಕ್ಕೆ ಹಿಂದಿರುಗಿರುವ ಈ ನಟಿ `ಪುಂಡ’ ಚಿತ್ರದಲ್ಲಿ ನಟಿಸಿದ ನಂತರ ಈಗ `ರಾಜ ಹುಲಿ’ ಚಿತ್ರದಲ್ಲಿ ಯಶ್ ಗೆ ಜೋಡಿಯಾಗಿದ್ದಾಳೆ. ಕೆ. ಮಂಜು ನಿರ್ಮಾಣದ ಈ ಚಿತ್ರವನ್ನು ಗುರು ದೇಶ್ ಪಾಂಡೆ ನಿರ್ದೇಶಿಸಿದ್ದಾರೆ. ಇಷ್ಟು ದಿನ ಮಲೆಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸುತ್ತಾ ಬಿಜಿಯಾಗಿದ್ದ ಮೇಘನಾ ರಾಜ್ ಕನ್ನಡದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆಂದು ಸುದ್ದಿ ಬಂದಾಗ…. ಕನ್ನಡಕ್ಕೆ ಮರಳಿ ಬಂದಳೇ? ಕನ್ನಡದಲ್ಲೇ ಏನಾದರೂ ಹೆಸರು ಮಾಡೋಣ ಎನ್ನುವ ಆಸೆಯೇ? ಇವೆಲ್ಲದಕ್ಕೂ ಮೇಘನಾಳಿಂದಲೇ ಉತ್ತರ ಸಿಗಬೇಕಲ್ವ….. ಹಾಗಾಗಿ ಅವಳನ್ನೇ ಮಾತನಾಡಿಸಿದಾಗ ಬಂದಂಥ ಮಾತುಗಳಿವು:
ಮಲೆಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಬಿಜಿಯಾಗಿರೊ ನೀನು ಇದ್ದಕ್ಕಿದ್ದಂತೆ ಕನ್ನಡದಲ್ಲಿ ನಟಿಸುತ್ತಿರುವುದಕ್ಕೆ ಕಾರಣ?
ನಾನು ಕನ್ನಡದ ಹುಡುಗಿ. ಸುಂದರ್ ರಾಜ್ ಪ್ರಮೀಳಾ ಅವರ ಮಗಳು. ಈ ಇಂಡಸ್ಟ್ರಿಯನ್ನು ನೋಡುತ್ತಾ ಬೆಳೆದವಳು. ಆದರೆ ನನಗೆ ಮೊದಲ ಅವಕಾಶ ಸಿಕ್ಕಿದ್ದು ತಮಿಳಿನಲ್ಲಿ. ಆನಂತರ ಮಲೆಯಾಳಂನಲ್ಲಿ. ಹಾಗಾಗಿ ಅಲ್ಲಿಯೇ ಬಿಜಿಯಾದೆ.
ಕನ್ನಡದಲ್ಲಿ ಅವಕಾಶಗಳು ಸಿಗಲಿಲ್ಲ ಅಂತ ಬೇಸರವೇ?
ಯಾರು ಹೇಳಿದ್ದು ಅವಕಾಶ ಸಿಗಲಿಲ್ಲ ಅಂತ? ಬೇಕಾದಷ್ಟು ಆಫರ್ಸ್ ಬಂದಿತ್ತು. ಆ ಪಾತ್ರಗಳನ್ನು ನಾನಲ್ಲದೇ ಬೇರೆ ಯಾರು ಬೇಕಾದರೂ ನಟಿಸಬಹುದಿತ್ತು. ನನಗಂಥ ಪಾತ್ರಗಳು ಇಷ್ಟವಿಲ್ಲ. ಒಳ್ಳೆ ಅವಕಾಶಗಳು ಬಂದರೆ ಮಾತ್ರ ಕನ್ನಡದಲ್ಲಿ ನಟಿಸಬೇಕೆಂಬ ಹಟ ಇತ್ತು. ಮಲೆಯಾಳಂನಲ್ಲಿ ದೊಡ್ಡ ದೊಡ್ಡ ನಿರ್ದೇಶಕರ ಜೊತೆ ನಾಯಕರ ಜೊತೆ ನಟಿಸಿದ್ದರೂ ನನಗೆ ಪ್ರಾಮುಖ್ಯತೆ ಕೊಡುವಂಥ ಪಾತ್ರವಿರುತ್ತಿತ್ತು.
ಈಗ `ರಾಜ ಹುಲಿ‘ ಚಿತ್ರದಲ್ಲಿ ಅಂತಹ ಪಾತ್ರವಿದೆಯಾ?
ಹೌದು, ಖಂಡಿತವಾಗಿಯೂ ಇದೆ. ಇಲ್ಲದೇ ಹೋಗಿದ್ದಿದ್ರೆ ನಾನು ಒಪ್ಪಿಕೊಳ್ತಿರಲಿಲ್ಲ. ನಿರ್ಮಾಪಕ ಮಂಜು ನನಗೆ `ಸುಂದರ್ ಪಾಂಡ್ಯನ್’ ತಮಿಳು ಚಿತ್ರದ ಸಿ.ಡಿ. ತಂದುಕೊಟ್ಟು ನೋಡಿ ಅಭಿಪ್ರಾಯ ತಿಳಿಸು ಅಂದಿದ್ರು. ಆ ಚಿತ್ರ ನೋಡುತ್ತಿರುವಾಗ ನಾಯಕಿ ಪಾತ್ರ ನನಗೆ ತುಂಬಾ ಹಿಡಿಸಿತು. ನಾನು ಮಾಡುವುದಾದರೆ ಇಂಥ ಪಾತ್ರ ಮಾಡಬೇಕು ಅಂತ ಮನಸ್ಸಿನಲ್ಲೇ ಅಂದುಕೊಳ್ತಿದ್ದೆ. ಮಂಜು ಬಂದು ಸಿನಿಮಾ ಬಗ್ಗೆ ಅಭಿಪ್ರಾಯ ಕೇಳಿದಾಗ, `ಸರ್, ಒಳ್ಳೆ ಚಿತ್ರ. ಅದರಲ್ಲೂ ನಾಯಕಿ ಪ್ರಧಾನವಿದೆಯಲ್ಲ ತುಂಬಾನೆ ಇಷ್ಟಾಯ್ತು ಅಂದೆ.’ ಆಗ ಮಂಜು ಸರ್ ಅದನ್ನು ನೀನೇ ಮಾಡಬೇಕು ಅಂದಾಗ ನಿಜಕ್ಕೂ ಸಂತೋಷಾಯ್ತು.
ಪಾತ್ರದ ಬಗ್ಗೆ ವಿವರವಾಗಿ ಹೇಳು?
ಕಾವೇರಿ ಎನ್ನುವ ಟಿಪಿಕ್ ಮಂಡ್ಯ ಹುಡುಗಿ. ತನಗೆ ಬೇಕಾದ್ದನ್ನು ಹಟ ಮಾಡಿ ಪಡೆದುಕೊಳ್ಳುವ ಹುಡುಗಿ. ರಫ್ ಅಂಡ್ ಟಫ್ ಆದ್ರೂ ಮನಸ್ಸು ಮಂಡ್ಯ ಬೆಣ್ಣೆ ಇದ್ದಂತೆ. ತುಂಬಾನೆ ಶೇಡ್ಸ್ ಇದೆ. ಲಂಗದಾವಣಿ, ಜಡೆ, ಹೂ ಮುಡಿದುಕೊಂಡು ಕಾವೇರಿ ಸದಾ ಉತ್ಸಾಹದ ಚಿಲುಮೆಯಂತಿರುತ್ತಾಳೆ. ನಾನು ಸಹ ನಿಜ ಜೀವನದಲ್ಲಿ ಹಾಗೆಯೇ ಇರೋದು. ಕ್ಯಾರೆಕ್ಟರ್ ತುಂಬಾ ರಿಲೇಟ್ ಆಗುತ್ತೆ. ನಾನು ಬಯಸಿದ್ದನ್ನು ಪಡೆಯದೇ ಬಿಡೋದಿಲ್ಲ. ನಾನು ಏನು ಬೇಕೆನ್ನುತ್ತೇನೋ ಅದನ್ನು ನನ್ನ ತಂದೆ ತಾಯಿ ತಂದುಕೊಡುತ್ತಾರೆ. ಈ ಬಾರಿ ನಾನು ಯಾವ ವಸ್ತುವನ್ನು ಕೇಳಿಲ್ಲ. ಮೊದಲು ಡಿಗ್ರಿ ಎಗ್ಸಾಮ್ ಬರೆಯಲೇಬೇಕು ಅಂತ ಹಟ ಹಿಡಿದಿದ್ದೇನೆ. ಈ ವರ್ಷ ಎಷ್ಟೇ ಬಿಜಿ ಇದ್ದರೂ ಖಂಡಿತಾ ಬರೆಯುತ್ತೇನೆ.
ಪರಭಾಷಾ ತಾರೆಯರ ಹಾವಳಿ ಕನ್ನಡದಲ್ಲಿ ಹೆಚ್ಚಾಗುತ್ತಿದೆ ಅನ್ಸುತ್ತಾ?
ಕಲೆಗೆ ಭಾಷೆಯಿಲ್ಲ ಅನ್ನುತ್ತಾರೆ. ನಾವು ಅಲ್ಲಿ ಹೋಗಿ ನಟಿಸ್ತೀವಿ. ಅವರು ಇಲ್ಲಿಗೆ ಬರುತ್ತಾರೆ. ಆದರೆ ಯಾರು ಎಲ್ಲೇ ಹೋಗಿ ನಟಿಸಲಿ, ಭಾಷೆ ಕಲಿಯುವುದನ್ನು ಮಾತ್ರ ಮರೆಯಬಾರದು. ಕನ್ನಡಕ್ಕೆ ಬರುವ ಆಮದು ತಾರೆಯರು ಕನ್ನಡವನ್ನು ಕಲಿಯಬೇಕು. ಈಗ ನನ್ನನ್ನೇ ತಗೊಳ್ಳಿ, ಮಲೆಯಾಳಂ ಚಿತ್ರಗಳಲ್ಲಿ ನಟಿಸುವುದಷ್ಟೇ ಅಲ್ಲ, ಅಲ್ಲಿಯ ಭಾಷೆ ಸ್ಪಷ್ಟವಾಗಿ ಮಾತನಾಡಬಲ್ಲೆ. ನನ್ನ ಚಿತ್ರಕ್ಕೆ ನಾನೇ ಡಬ್ ಮಾಡ್ತೀನಿ. ತಮಿಳು, ತೆಲುಗು ಭಾಷೆಗಳಲ್ಲೂ ಅಷ್ಟೇ, ನಾನು ಚೆನ್ನಾಗಿ ಮಾತನಾಡಬಲ್ಲೆ.
ಪರಭಾಷಾ ತಾರೆಯರಿಗೆ ನಾನು ಹೇಳೋದಿಷ್ಟೆ, ಕನ್ನಡ ಕಲಿಯಿರಿ. ನಾವು ನಿಮ್ಮ ಭಾಷೆಯನ್ನು ಕಲಿತಿಲ್ಲವೇ? ಭಾಷೆ ಕಲಿತರೆ ಅಭಿನಯಿಸುವುದು ಕೂಡ ಸುಲಭವಾಗುತ್ತೆ.
ಸಿನಿಮಾ ನಟಿಸುವುದು ಬಿಟ್ಟು ಬೇರೆ ಯಾವುದರಲ್ಲಿ ಆಸಕ್ತಿ ಇದೆ?
ಓದುವುದು ನನ್ನ ಹವ್ಯಾಸ. ಪುಸ್ತಕ ನನ್ನ ಕೈಯಲ್ಲಿರಲೇಬೇಕು. ಎಷ್ಟು ಓದಿದರೂ ಕಡಿಮೆ ಅನ್ಸುತ್ತೆ. ನನಗೂ ಬರೆಯುವ ಆಸೆ ಇದೆ. ಮುಂದೆ ಎಂದಾದರೂ ಒಂದು ಪುಸ್ತಕ ಬರೆಯೋ ಆಸೆ. ಖಂಡಿತಾ ಬರೆಯುತ್ತೇನೆ.
ನಾನು ಗಾಯಕಿಯೂ ಆಗಿರೋದ್ರಿಂದ ಸಿನಿಮಾದಲ್ಲಿ ಹಾಡಬೇಕೆಂಬ ಪ್ಲ್ಯಾನಿದೆ. ಮಲೆಯಾಳಂನಲ್ಲಿ ಸದ್ಯದಲ್ಲೇ ಸಿನಿಮಾವೊಂದಕ್ಕೆ ಹಿನ್ನೆಲೆ ಗಾಯಕಿಯಾಗಲಿದ್ದೇನೆ. ಕನ್ನಡದಲ್ಲೂ ಅವಕಾಶ ಸಿಕ್ಕರೆ ಇನ್ನೂ ಖುಷಿಯಾಗುತ್ತೆ. ಕಥಕ್ ಕಲಿಯುತ್ತಾ ಇದ್ದೇನೆ. ಭವಿಷ್ಯದಲ್ಲಿ ಒಂದೊಳ್ಳೆ ಸಿನಿಮಾ ನಿರ್ದೇಶಿಸುವ ಆಸೆಯೂ ಇದೆ. ಇವಿಷ್ಟು ನನ್ನ ಕನಸು.
ಸಾಕಷ್ಟು ಗ್ಯಾಪ್ ನಂತರ ಕನ್ನಡದಲ್ಲಿ ನಟಿಸುತ್ತಿದ್ದೀಯಾ, ಹೇಗನಿಸುತ್ತೆ?
ಬೇರೆ ಭಾಷೆಗಳಲ್ಲಿ ನಟಿಸುವಾಗ ನಾನು ಅಲ್ಲಿ ಬರೀ ನಟಿಯಾಗಿರ್ತೀನಿ. ಇಲ್ಲಿ ನನ್ನನ್ನು ಮನೆ ಹುಡುಗಿ ತರಹ ಕಾಣ್ತಾರೆ. ಅಷ್ಟೇ ವ್ಯತ್ಯಾಸ. ನನ್ನ ತಂದೆ ತಾಯಿ ಜೊತೆ ಕೆಲಸ ಮಾಡಿರೋರೆಲ್ಲ ಇರ್ತಾರೆ. ನನ್ನನ್ನು ಪುಟ್ಟ ಹುಡುಗಿ ತರಹ ನೋಡ್ಕೋತಾರೆ. ಸಖತ್ ಖುಷಿ ಆಗುತ್ತೆ.
– ಸರಸ್ವತಿ