“ರೀ, ಈ ಸಾರಿ ದಸರಾಗೆ 4-5 ದಿನಗಳು ರಜ ಇದೆ,” ಉಮಾ ಕಾಫಿ ಲೋಟ ಕೈಗಿಡುತ್ತಾ ಗಂಡನಿಗೆ ಹೇಳಿದಳು.

“ರಜಾ ಇದ್ರೇನು?” ರಾಜೀವ್ ‌ನಿರಾಸಕ್ತಿಯಿಂದ ಕೇಳಿದ.

“ನಾನು ಅಮ್ಮನ ಮನೆಗೆ ಹೋಗಬೇಕು,” ಉಮಾ ಹೇಳಿದಳು.

“ಅಮ್ಮನನ್ನು ಒಂದು ಮಾತು ಕೇಳು,” ರಾಜೀವ್ ‌ಹೇಳಿದ.

“ನೀವೇ ಕೇಳ್ರಿ. ನನಗೆ ಏನೇನೋ ನೆಪಗಳು ಹೇಳಕ್ಕಾಗಲ್ಲ,” ಉಮಾ ಸಿಡುಕುತ್ತಾ ಹೇಳಿದಳು.

ಅತ್ತೆ ಸೊಸೆಗೆ ಸರಿಹೋಗಲ್ಲ. ಒಬ್ಬರ ವಿಚಾರಗಳು ಇನ್ನೊಬ್ಬರಿಗೆ ಒಪ್ಪಿಗೆಯಾಗಲ್ಲ ಎಂದು ರಾಜೀವ್ ‌ಗೆ ಗೊತ್ತಿತ್ತು. ಉಮಾ ತೀಕ್ಷ್ಣ    ಸ್ವಭಾವದವಳಾಗಿದ್ದಳು. ಅವಳು ತನ್ನ ಕೆಲಸದಲ್ಲಿ ಯಾರ ಹಸ್ತಕ್ಷೇಪವನ್ನೂ ಸಹಿಸುತ್ತಿರಲಿಲ್ಲ. ಸಣ್ಣ ವಿಷಯಕ್ಕೆ ಯಾರಾದರೂ ಏನಾದರೂ ಅಂದರೆ ದೊಡ್ಡವರು ಚಿಕ್ಕವರೆನ್ನದೆ ಮುಖದ ನೀರು ಇಳಿಸಿಬಿಡುತ್ತಿದ್ದಳು. ಅವರಿಗೆ ಮುಂದೆ ಮಾತಾಡಲು ಧೈರ್ಯವೇ ಇರುತ್ತಿರಲಿಲ್ಲ. ಅತ್ತೆಮನೆಯಲ್ಲಿ ಎಲ್ಲರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಅವಳ ಮನಸ್ಸಿನಲ್ಲಿ  ಚೆನ್ನಾಗಿ ಕುಳಿತಿತ್ತು. ಅತ್ತೆ ಮಾವನನ್ನು ಅವಳು ಲೆಕ್ಕಕ್ಕೇ ಇಟ್ಟಿರಲಿಲ್ಲ. ಸಾಧಾರಣ ವಿಷಯಕ್ಕೂ ಒರಟಾಗಿ ಉತ್ತರಿಸುತ್ತಿದ್ದಳು. ಹೀಗಾಗಿ ಎಲ್ಲರೂ ಅವಳಿಂದ ಕೊಂಚ ದೂರವಿರುತ್ತಿದ್ದರು. ಮನೆಯಲ್ಲಿ ಯಾವುದೇ ಶಿಸ್ತು, ಹಿರಿಯರಿಗೆ ಗೌರವ ಇಲ್ಲದೆ ವಾತಾವರಣ ಬಿಗಿಯಾಗಿರುತ್ತಿತ್ತು.

“ಆಯ್ತು, ನಾನೇ ಕೇಳ್ತೀನಿ,” ರಾಜೀವ್ ‌ಹೇಳಿದ ನಂತರ, “ ಈ ಬಾರಿ ರಜಾ ನಾನೂ ಅಲ್ಲೇ ಕಳೀತೀನಿ,” ಎಂದ.

ಉಮಾಗೆ ಆಶ್ಚರ್ಯವಾಯಿತು, “ಏನು ಸಮಾಚಾರ? ಪ್ರತಿ ಸಾರಿ ನನ್ನನ್ನು ಅಲ್ಲಿ ಬಿಟ್ಟು ವಾಪಸ್‌ ಬಂದುಬಿಡ್ತಿದ್ರಿ.”

“ ಇಲ್ಲ, ಈ ಸಾರಿ ಬರೋಣ ಅನ್ನಿಸ್ತು. ನಾನೂ ಅಲ್ಲಿಗೆ ಬರ್ತಿದ್ದೀನಿ ಅಂತ ನಿಮ್ಮ ಅಮ್ಮನಿಗೆ ಫೋನ್‌ ಮಾಡು.”

“ಬೇಡ… ಬೇಡ. ನೀವು ನನ್ನನ್ನು ಅಲ್ಲಿ ಬಿಟ್ಟು ವಾಪಸ್‌ ಬಂದ್ಬಿಡಿ, ಇಲ್ದಿದ್ರೆ ನಿಮ್ಮಮ್ಮ ಏನಾದ್ರೂ ಹೇಳ್ತಾರೆ.”

“ ಪರವಾಗಿಲ್ಲ, ನಾನು ಅಲ್ಲಿಗೆ ಬರ್ತೀನಿ,” ರಾಜೀವ್ ‌ಗಂಭೀರ ಸ್ವರದಲ್ಲಿ ಹೇಳಿದ.

ಅಂದುಕೊಂಡಿದ್ದಂತೆ ರಾಜೀವ್ ‌ಅತ್ತೆಮನೆಯಲ್ಲಿ ರಜೆ ಆಚರಿಸುವುದನ್ನು ಕೇಳಿ ಅಮ್ಮನಿಗೆ ಖುಷಿಯಾಗಲಿಲ್ಲ. ಕಾರಣವಿಲ್ಲದೆ ಅತ್ತೆ ಮನೆಯಲ್ಲಿರುವುದು ಅವರಿಗೆ ಇಷ್ಟವಿರಲಿಲ್ಲ. ಅವರು ಅವನಿಗೆ ಎಷ್ಟೇ ಹೇಳಿದರೂ ರಾಜೀವ್ ‌ನಿರ್ಧಾರ ಮಾಡಿದನಂತೆ, “ ಅಮ್ಮಾ ನೀವೇನೂ ಯೋಚಿಸಬೇಡಿ. ಎಲ್ಲಾ ಸರಿಯಾಗಿರುತ್ತೆ,” ಎಂದ.

ಉಮಾ ತೌರಿನಿಂದ ಹಿಂತಿರುಗಿದಾಗೆಲ್ಲಾ ತಕರಾರು ಮಾಡುವ ಹೊಸ ವಿಧಾನಗಳನ್ನು ಕಲಿತು ಬರುತ್ತಿದ್ದಳು. ಇದು ಅಮ್ಮ ಹಾಗೂ ರಾಜೀವ್ ಇಬ್ಬರಿಗೂ ಗೊತ್ತಿತ್ತು. ಆದ್ದರಿಂದ ಉಮಾ ತೌರಿಗೆ ಹೋಗುವ ಬಗ್ಗೆ ಅಮ್ಮ ಸದಾ ಅಪ್ರಸನ್ನತೆಯಿಂದಿರುತ್ತಿದ್ದರು. ರಾಜೀವ್ ಬರುವ ಸುದ್ದಿ ತಿಳಿದ ಕೂಡಲೇ ಅತ್ತೆ ಮನೆಯಲ್ಲಿ ಸ್ವಾಗತ ಸತ್ಕಾರಕ್ಕೆ ಎಲ್ಲರೂ ಅಣಿಯಾದರು. ಮನೆಯ ಮುಂದೆ ಟ್ಯಾಕ್ಸಿ ನಿಂತಾಗ ಉಮಾಳ ತಮ್ಮ ನರಹರಿ ಕ್ರಿಕೆಟ್‌ ಆಡಲು ಹೊರಟಿದ್ದವನು ಎಗರುತ್ತಾ ಬಂದ. ಅಕ್ಕ ಭಾವನನ್ನು ಸ್ವಾಗತಿಸಿ ಅವರ ಲಗ್ಗೇಜ್‌ ಒಳಗೆ ತೆಗೆದುಕೊಂಡು ಹೋದ. ಅಡುಗೆ ಮನೆಯಲ್ಲಿ ಅತ್ತೆ ಅಡುಗೆ ಮಾಡುತ್ತಿದ್ದರು. ಮಾವ ಕುರ್ಚಿಯಲ್ಲಿ ಕುಳಿತು ಪೇಪರ್‌ ಓದುತ್ತಿದ್ದರು. ಮಾವನಿಗೆ ನಮಸ್ತೆ ಹೇಳಿದ ರಾಜೀವ್ ‌ಅಡುಗೆಮನೆಗೆ ಹೋಗಿ ಅತ್ತೆಗೆ ನಮಸ್ಕರಿಸಿ, “ಏನು ಮಾಡ್ತಿದ್ದೀರಿ? ಘಮ್ ಅಂತ ವಾಸನೆ ಬರ್ತಿದೆ. ನೀವು ಮಾಡೋ ಅಡುಗೆ, ತಿಂಡಿ ನೆನೆಸಿಕೊಂಡ್ರೆ ಬಾಯಲ್ಲಿ ನೀರು ಸುರಿಯುತ್ತೆ,” ಎಂದ.

ಅತ್ತೆ ತಮ್ಮ ಪ್ರಶಂಸೆ ಕೇಳಿ ಮುಗುಳ್ನಕ್ಕರು. “ಕೂತ್ಕೊಳ್ಳಿ. ಟಿಫನ್‌ ಕೊಡ್ತೀನಿ” ಎಂದರು. ರಾಜೀವ್ ‌ಮಾವನ ಪಕ್ಕದಲ್ಲಿ ಕುಳಿತ. ಸ್ವಲ್ಪ ಹೊತ್ತಿಗೆ ಉಪ್ಪಿಟ್ಟು, ಪಕೋಡ, ಕಾಫಿ ಬಂತು. ಅವನು ತಿಂಡಿ ತಿನ್ನುತ್ತಾ ಎಲ್ಲರೊಡನೆ ಹರಟುತ್ತಿದ್ದ. ನಂತರ ಅವನು ಬ್ಯಾಗಿನಿಂದ ಒಂದು ಕುರ್ತಾ ಪೈಜಾಮ ಸೆಟ್‌ ತೆಗೆದು ಮಾವನಿಗೆ ತೋರಿಸಿ “ಹೇಗಿದೆ ಇದು?” ಎಂದು ಕೇಳಿದ.

ಮಾವ ಅದನ್ನು ಕೈಗೆ ತೆಗೆದುಕೊಂಡು, “ತುಂಬಾ ಚೆನ್ನಾಗಿದೆ. ಇದರ ಮೇಲಿನ ಕಸೂತಿ, ಇದರ ಡಿಸೈನ್‌ ಎಲ್ಲ ಚೆನ್ನಾಗಿದೆ,” ಎಂದರು.

“ಇದು ನಿಮಗೆ,” ರಾಜೀವ್ ನಗುತ್ತಾ ಹೇಳಿದ, “ಇದನ್ನು ಡೆಲ್ಲಿಯಿಂದ ತಂದೆ. ಎರಡು ಸೆಟ್‌ ತಗೊಂಡೆ ಒಂದು ನಿಮಗೆ, ಇನ್ನೊಂದು ನಮ್ಮ ತಂದೆಗೆ.”

“ರಾಜೀವ್‌, ನನಗೆ ಯಾಕೆ ತರೋಕೆ ಹೋದ್ರಿ?” ಎಂದು ಹೇಳಿ ಹೆಂಡತಿಯ ಕಡೆ ತಿರುಗಿ, “ಶಾರದಾ, ನೋಡು ರಾಜೀವ್ ‌ನನಗೆ ಏನು ತಂದಿದ್ದಾರೇಂತ,” ಎಂದರು.

ಅತ್ತೆ ಸಂತೋಷ ವ್ಯಕ್ತಪಡಿಸುತ್ತಾ, “ ಇದರ ಬಣ್ಣ, ಡಿಸೈನ್‌ ತುಂಬಾ ಚೆನ್ನಾಗಿದೆ. ಬೆಲೆ ತುಂಬಾ ಹೆಚ್ಚಾಗಿರಬಹುದು,” ಎಂದರು.

“ಬೆಲೆ ಕೇಳಬೇಡಿ. ನನಗೆ ಇಷ್ಟ ಆಯ್ತು. ತಂದೆ ಅಷ್ಟೇ.” ನಂತರ ರಾಜೀವ್‌ಬ್ಯಾಗಿನಿಂದ ಒಂದು ಸೀರೆ ತೆಗೆದು, “ತಗೊಳ್ಳಿ ಅಮ್ಮಾ, ಇದು ನಿಮಗೆ,” ಎಂದ.

ಅತ್ತೆಗೆ ಬಹಳ ಖುಷಿಯಾಯಿತು. ಆದರೂ, “ಅಯ್ಯೋ ಇಷ್ಟು ಖರ್ಚು ಯಾಕೆ ಮಾಡೋಕೆ ಹೋದ್ರಿ?” ಎಂದರು.

“ಮತ್ತೆ ಖರ್ಚಿನ ಮಾತು ಹೇಳ್ತಾ ಇದ್ದೀರಿ. ನಾನೂ ನಿಮ್ಮ ಮಗ ಅಲ್ವೇ?”

“ಹೌದು. ನಿಮ್ಮ ಮನಸ್ಸು, ನಿಮ್ಮ ನಡವಳಿಕೆ ಬಗ್ಗೆ ನಮಗೆಲ್ಲಾ ಬಹಳ ಸಂತೋಷವಿದೆ.”

ರಾಜೀವ್ ‌ಮೈದುನ ಮತ್ತು ನಾದಿನಿಗೂ ಕೆಲವು ಉಡುಗೊರೆಗಳನ್ನು ನೀಡಿದ.

ಉಮಾ ಇವೆಲ್ಲವನ್ನೂ ಚಕಿತಳಾಗಿ ನೋಡುತ್ತಿದ್ದಳು. ಅವರಿಬ್ಬರೇ ಇದ್ದಾಗ, “ಇವೆಲ್ಲವನ್ನೂ ಯಾವಾಗ ಕೊಂಡಿರಿ? ನನಗೆ ಹೇಳಲೇ ಇಲ್ಲ,” ಎಂದಳು.

“ ನಿನಗೆ ಎಲ್ಲವನ್ನೂ ಹೇಳಬೇಕಾದ ಅವಶ್ಯಕತೆ ಇಲ್ಲ.”

ಉಮಾ ಮುಖ ಊದಿಸಿಕೊಂಡು ತೆಪ್ಪಗಾದಳು. ರಾಜೀವ್ ‌ಊಟ ಮಾಡುವಾಗ ಅಡುಗೆಯನ್ನು ಚೆನ್ನಾಗಿ ಹೊಗಳಿದ. ಮಧ್ಯೆ ನಗೆ ಚಟಾಕಿಗಳನ್ನು ಹಾರಿಸುತ್ತಿದ್ದ. ಎಲ್ಲರೂ ಬಹಳ ಖುಷಿಯಾಗಿದ್ದರು.

ಊಟವಾದ ನಂತರ ರಾಜೀವ್ ನಾದಿನಿ ಮತ್ತು ಮೈದುನರೊಂದಿಗೆ ಹರಟತೊಡಗಿದ. ಉಮಾ ಅಮ್ಮನೊಂದಿಗೆ ಮಾತಾಡುತ್ತಿದ್ದಳು.

ರಾಜೀವ್ ನರಹರಿಯನ್ನು ಹತ್ತಿರ ಕರೆದು ಅವನ ಕಾಲೇಜು, ಓದು, ಗೆಳೆಯರ ಬಗ್ಗೆ ವಿಚಾರಿಸಿದ.

“ಅದು ಸರಿ, ಆಗಾಗ್ಗೆ ಪಿಕ್ನಿಕ್‌ ಗೆ ಹೋಗ್ತಾ ಇರ್ತೀಯಾ?” ರಾಜೀವ್ ನರಹರಿಯನ್ನು ಕೇಳಿದ.

“ಕಾಲೇಜಿನಿಂದ 1-2 ಬಾರಿ ಹೋಗಿದ್ದೀನಿ. ಆದ್ರೆ ಮನೆಯವರ ಜೊತೆ ಸಿಗುವಷ್ಟು ಮಜಾ ಇರಲ್ಲ,” ನರಹರಿ ಮತ್ತು ರಶ್ಮಿ ಹೇಳಿದರು.

“ಹಾಗಾದ್ರೆ ನಾಳೆ ಪಿಕ್ನಿಕ್‌ ಗೆ ಹೋಗೋಣ್ವಾ?” ರಾಜೀವ್ ‌ಕೇಳಿದ.

ನರಹರಿ ಮತ್ತು ರಶ್ಮಿಗೆ ಬಯಸದೇ ಬಂದ ಭಾಗ್ಯದಂತಾಯಿತು. ಅವರು ಕೂಡಲೇ ಅದಕ್ಕೆ ತಯಾರಾಗತೊಡಗಿದರು. ಅಳಿಯನ ಈ ಸ್ನೇಹಪೂರ್ವ ನಡವಳಿಕೆಗೆ ಮನೆಯರಿಗೆಲ್ಲಾ ಖುಷಿಯಾಯಿತು.

ಮರುದಿನ ಒಂದು ಟ್ಯಾಕ್ಸಿ ಮಾಡಿಕೊಂಡು ಮನೆಯವರೆಲ್ಲಾ ಹೊರಟರು. ಊರಿನಿಂದ ಹೊರಗೆ ಒಂದು ಕೆರೆ ಇತ್ತು. ಹತ್ತಿರದಲ್ಲೇ ಮಾವಿನ ತೋಪಿತ್ತು. ಉಮಾ ಅಮ್ಮನೊಂದಿಗೆ ಸೇರಿ ಪೂರಿ ಸಾಗು ಇತ್ಯಾದಿ ಮಾಡಿದ್ದಳು. ರಾಜೀವ್ ಹತ್ತಿರದ ಸ್ವೀಟ್‌ ಸ್ಟಾಲ್ ನಿಂದ ಸ್ವೀಟ್ಸ್ ತಂದ.

ಪಿಕ್ನಿಕ್‌ ನಲ್ಲಿ ಎಲ್ಲರಿಗೂ ಬಹಳ ಖುಷಿಯಾಗಿತ್ತು. ಹುಡುಗರು ಚೆನ್ನಾಗಿ ಆಟವಾಡಿದರು. ತಿಂಡಿ ತಿಂದ ನಂತರ ಎಲ್ಲರೂ ನಗೆಚಟಾಕಿ ಹಾರಿಸತ್ತಾ ನಕ್ಕು ನಲಿದಾಡಿದರು.

ಹೀಗೆ ಮೋಜು ಮಾಡುತ್ತಾ ರಜೆ ಹೇಗೆ ಮುಗಿಯಿತೋ ತಿಳಿಯಲೇ ಇಲ್ಲ. ರಾಜೀವ್ ‌ಗೆ ಮನೆಗೆ ಹಿಂದಿರುಗಲು ಮನಸ್ಸಾಯಿತು. ಅಂದು ಸಂಜೆ ಎಲ್ಲರೂ ಕಾಫಿ ಕುಡಿಯುತ್ತಿದ್ದರು, ರಾಜೀವ್ ಟೇಪ್‌ ರೆಕಾರ್ಡರ್‌ ತೆಗೆದು ಎಲ್ಲರಿಗೂ ಹೇಳಿದ, “ಈ ಧ್ವನಿ ಯಾರದೆಂದು ಗುರುತಿಸಿ ನೋಡೋಣ.”

ಟೇಪ್‌ ಆನ್‌ ಆಯಿತು. ಎಲ್ಲರೂ ಗಮನವಿಟ್ಟು ಕೇಳತೊಡಗಿದರು.ಇದಕ್ಕಿದ್ದಂತೆ ನರಹರಿ ಕಿರುಚಿದ, “ಅರೆ, ಇದು ಉಮಾ ಅಕ್ಕನ ವಾಯ್ಸ್. ಅಕ್ಕಾ ನೀನು ಯಾರನ್ನು ಬೈತಿರೋದು? ಇನ್ನೊಂದು ವಾಯ್ಸ್ ನಿಮ್ಮ ಅತ್ತೇದು. ಅವರು ಮೆಲ್ಲಗೆ ಏನೋ ಹೇಳ್ತಿದ್ದಾರೆ.”

“ ಏನಕ್ಕಾ, ಅತ್ತೆಮನೇಲಿ ನೀನು ಹೀಗೇನಾ ಮಾತಾಡೋದು? ಇಲ್ಲಿಗೆ ಬಂದಾಗ ನಮಗೆ ಬೇರೇನನ್ನೋ ಹೇಳ್ತಿದ್ದೆ,” ರಶ್ಮಿ ಹೇಳಿದಳು.

ಉಮಾಳ ತಂದೆತಾಯಿ ಹತಪ್ರಭರಾಗಿ ಉಮಾಳ ಮುಖ ನೋಡತೊಡಗಿದರು. ರಾಜೀವ್ ‌ಮೆಲ್ಲಗೆ ನಗುತ್ತಿದ್ದ. ರಾಜೀವ್ ನಗುತ್ತಲೇ ಹೇಳಿದ, “ನಿಮ್ಮ ಮಗಳು ಸಣ್ಣ ಸಣ್ಣ ವಿಷಯಕ್ಕೂ ಕಿರುಚುತ್ತಾ ಇರ್ತಾಳೆ. ಎಲ್ಲರ ಮೇಲೂ ದೋಷಾರೋಪಣೆ ಮಾಡುತ್ತಿರುತ್ತಾಳೆ. ನಾನು ಏನಾದರೂ ಹೇಳಿದರೆ ಇವಳು ಒಪ್ಪೋದಿಲ್ಲ. ಅತ್ತೆ ಮನೆಯಲ್ಲಿ ಎಲ್ಲರನ್ನು ನಿಗ್ರಹಿಸಬೇಕು ಎಂದುಕೊಂಡಿದ್ದಾಳೆ.

“ನನಗಂತೂ ದಿನದಿನ ಬೇಸರವಾಗುತ್ತಿತ್ತು. ನಿಮಗೆ ಹೇಳಿದರೆ ನೀವು ನಂಬುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅದಕ್ಕೆ ಈ ಉಪಾಯ ಮಾಡಬೇಕಾಯಿತು. ಇನ್ನು ನಿಮಗೆ ಹೇಗೆ ಸರಿಯೆನ್ನಿಸಿದರೆ ಹಾಗೆ…”

ಆಗ ಮಾವ, “ ರಾಜೀವ್‌, ನಮಗೆ ಇದೆಲ್ಲಾ ಗೊತ್ತಿರಲಿಲ್ಲ. ಇದು ಅತಿ ಆಯ್ತು. ಹಿರಿಯರಿಗೆ ಮರ್ಯಾದೆ ಕೊಡದೆ ಇರೋದು ತಪ್ಪು. ನಮಗೆ ಬಹಳ ನಾಚಿಕೆ ಆಗ್ತಿದೆ ರಾಜೀವ್‌,” ಎಂದರು.

ಅತ್ತೆ ಉಮಾಗೆ ಬೈದು ಬುದ್ಧಿ ಹೇಳಿದರು. ಉಮಾಗೆ ರಾಜೀವ್ ‌ಮೇಲೆ ವಿಪರೀತ ಕೋಪ ಬಂದಿತ್ತು. ತೌರಿಗೆ ಹೋದಾಗೆಲ್ಲಾ ಉಮಾ ಅತ್ತೆ ಮಾವನ ಮೇಲೆ ಬಹಳ ಚಾಡಿ ಹೇಳುತ್ತಿದ್ದಳು. ನಮ್ಮತ್ತೆ ಹಾಗಂತಾರೆ, ಹೀಗಂತಾರೆ, ಬೈತಾರೆ ಅಂತೆಲ್ಲಾ. ಇಂದು ಅದರ ರಹಸ್ಯ ಬಯಲಾಯಿತು. ಅವಳಿಗೆ ನಾಚಿಕೆಯೂ, ಕೋಪವೂ ಬಂದಿತ್ತು. ಅತ್ತೆ ರಾಜೀವನ ಬಳಿ ಕ್ಷಮೆ ಕೋರಿದರು. ಒಳಗೆ ಉಮಾಗೆ ಬುದ್ಧಿವಾದ ಹೇಳಿದರು. ಉಮಾ ಅಳುತ್ತಿದ್ದಳು. ದಾರಿಯಲ್ಲಿ ರಾಜೀವನೊಡನೆ ಉಮಾ ಮಾತಾಡಲಿಲ್ಲ. ಅವರು ಮನೆ ತಲುಪಿದಾಗ ಅಮ್ಮನ ಮುಖ ಕೊಂಚ ಸಪ್ಪಗಿತ್ತು. ಅವರು ಏನಾದರೂ ಹೇಳುವಷ್ಟರಲ್ಲಿ ಉಮಾ ಬಗ್ಗಿ ಅವರ ಕಾಲಿಗೆ ನಮಸ್ಕರಿಸಿ ಸಮಾಚಾರ ಕೇಳಿದಳು. ಅತ್ತೆಯ ಮುಖವರಳಿತು. ಅವರು ಆಶೀರ್ವಾದ ಮಾಡಿದರು. ಉಮಾ ಮಾನವರ ಕಾಲಿಗೂ ನಮಸ್ಕಾರ ಮಾಡಿ ಆಶೀರ್ವಾದ ಪಡೆದಳು. ಅತ್ತೆ ಅಡುಗೆಮನೆಯತ್ತ ಹೊರಟಾಗ ಉಮಾ ಅವರನ್ನು ತಡೆದು, “ನೀವು ಕೂತ್ಕೊಳ್ಳಿ, ನಾನು ಕಾಫಿ ಮಾಡ್ತೀನಿ,” ಎಂದಳು.

ಅವಳ ಧ್ವನಿ ಮಧುರವಾಗಿತ್ತು. ಅತ್ತೆಗೆ ನಂಬಿಕೆ ಬರದೆ ಮಗ, ಸೊಸೆಯ ಮುಖ ನೋಡಿದರು. ರಾಜೀವ್ ‌ಒಳಗೊಳಗೇ ನಗುತ್ತಿದ್ದ. ಉಮಾ ಮುಖ ಅರಳಿಸಿದ್ದರೂ ಮಾತಾಡದೆ ಯಾಂತ್ರಿಕವಾಗಿ ತನ್ನ ಕೆಲಸ ಮಾಡಿಕೊಂಡು ಹೋಗುತ್ತಿದ್ದಳು. ರಾಜೀವ್ ‌ರೂಮಿನಲ್ಲಿ ಬಟ್ಟೆ ಬದಲಿಸುತ್ತಿದ್ದ. ಉಮಾ ಕಾಫಿ ಲೋಟ ತಂದಿಟ್ಟು, “ಕಾಫಿ ಇಟ್ಟಿದ್ದೀನಿ,” ಎಂದಳು.

ಅವಳು ಹೊರಡಲು ತಿರುಗಿದಾಗ ರಾಜೀವ್ ‌ಅವಳ ಕೈಹಿಡಿದು, “ಇಲ್ಲೇ ಕೂತ್ಕೊ. ನಿನ್ನ ಕಾಫಿ ಇಲ್ಲೇ ತಗೊಂಡು ಬಾ,” ಎಂದ.

“ನಾನು ಕೂತುಕೊಳ್ಳಲ್ಲ,” ಉಮಾ ಕೋಪದಿಂದ ಹೇಳಿದಳು. ಅದರೆ ರಾಜೀವ್ ‌ಅವಳನ್ನು ಹೋಗಲು ಬಿಡಲಿಲ್ಲ. ಪಕ್ಕದಲ್ಲೇ ಕೂಡಿಸಿಕೊಂಡು ಹೇಳಿದ, “ ಉಮಾ, ಯಾಕೆ ಕೋಪಿಸಿಕೊಳ್ತೀಯಾ? ನಾನು ನಿನಗೆ ಬಹಳ ಸಾರಿ ಹೇಳಿದ್ದೆ. ಆದರೆ ನೀನು ಒಪ್ಪಲಿಲ್ಲ. ಮನೆಯಲ್ಲಿ ಸುಖ, ಶಾಂತಿಗಾಗಿ ಏನಾದರೂ ಉಪಾಯ ಮಾಡಲೇಬೇಕಿತ್ತು. ಅಪ್ಪ ಅಮ್ಮ ನನ್ನನ್ನು ಬೆಳೆಸೋಕೆ ಬಹಳ ಸಂಘರ್ಷ ಮಾಡಿದ್ದಾರೆ. ಈಗ ನನಗೆ ಒಳ್ಳೆ ಕೆಲಸ ಸಿಕ್ಕಿರುವಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ನನ್ನ ಕರ್ತವ್ಯ. ಅವರಿಗೆ ದುಃಖ ಉಂಟುಮಾಡೋದು ಅಥವಾ ಅವಮಾನ ಮಾಡಿದರೆ ನನಗೆ ಸಹಿಸಿಕೊಳ್ಳೋಕೆ ಆಗಲ್ಲ. ಕೊಂಚ ಪ್ರೀತಿಯಿಂದ ಮಾತಾಡಿದರೆ, ಒಳ್ಳೆಯ ರೀತಿಯಿಂದ ವರ್ತಿಸಿದರೆ ಅವರಿಗೆ ಬಹಳ ಸಂತೋಷವಾಗುತ್ತೆ. ಅವರು ಬಯಸಿದ್ದನ್ನು ಮಾಡಿಕೊಡೋಕೆ ಏನು ಕಷ್ಟ ಪಡಬೇಕು?”

ಉಮಾ ಏನೋ ಯೋಚಿಸುತ್ತಿದ್ದಳು, ನಂತರ ನಿಧಾನವಾಗಿ ಹೇಳಿದಳು. “ ನನ್ನನ್ನು ಕ್ಷಮಿಸಿ ರಾಜೀವ್‌. ಇನ್ನು ಮೇಲೆ ನಾನು ಹಿಂದಿನಂತೆ ವರ್ತಿಸೋದಿಲ್ಲ.”

“ವೆರಿ ಗುಡ್‌. ಈಗ ನಿನ್ನ ಕಾಫೀನೂ ಇಲ್ಲೇ ತಗೊಂಡು ಬಾ ಒಟ್ಟಿಗೇ ಕುಡಿಯೋಣ,” ರಾಜೀವ್ ‌ತುಂಟತನದಿಂದ ಹೇಳಿದ.

“ಬೇಡ, ಕಾಫಿ ತಗೊಂಡು ನೀವು ಆಚೆ ಬನ್ನಿ, ಮನೆಯವರೆಲ್ಲಾ ಒಟ್ಟಿಗೇ ಕುಡಿಯೋಣ,” ಉಮಾ ಕೂಡಾ ತುಂಟತನದಿಂದ ಉತ್ತರಿಸಿ ನಗುತ್ತಾ ಆಚೆ ಹೊರಟಳು. ರಾಜೀವ್ ಮನದಲ್ಲೇ ನಕ್ಕ. ಅವನ ಉಪಾಯ ಯಶಸ್ವಿಯಾಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ