ಮಿನಿ ಹಾಟ್ ಡಾಗ್
ಸಾಮಗ್ರಿ : 1-2 ತುಂಡು ಬೋನ್ ಲೆಸ್ ಚಿಕನ್, 1-2 ಪೀಸ್ ಹಾಟ್ ಡಾಗ್ ಬನ್, 300 ಗ್ರಾಂ ಈರುಳ್ಳಿ, ಇಂಗ್ಲಿಷ್ ಮಸ್ಟರ್ಡ್ ಹೆಚ್ಚಿದ ಲೆಟ್ಯೂಸ್ (ತಲಾ 20 ಗ್ರಾಂ), ಫ್ರೆಂಚ್ ಫ್ರೈಸ್ ಬಾರ್ಬೆಕ್ಯು ಸಾಸ್ (ತಲಾ 30 ಗ್ರಾಂ), ರುಚಿಗೆ ತಕ್ಕಷ್ಟು ಉಪ್ಪು ಮತ್ತು ಗಾರ್ಲಿಕ್‌ಬಟರ್ ಸ್ಪ್ರೆಡ್.
ವಿಧಾನ : ಒಂದು ಬಟ್ಟಲಿಗೆ ಚಿಕನ್ ತುಂಡು ಹಾಕಿಟ್ಟು, ಮೇಲೊಂದಿಷ್ಟು ಉಪ್ಪು ಸಾಸ್ ಹರಡಿ ಚೆನ್ನಾಗಿ ಬೆರೆಸಿಕೊಳ್ಳಿ. ಈಗ ಹಾಟ್ ಡಾಗ್ ಬನ್ ಗಳನ್ನು ಉದ್ದಕ್ಕೆ ಕತ್ತರಿಸಿ, ಒಳಭಾಗಕ್ಕೆ ಗಾರ್ಲಿಕ್‌ಬಟರ್ ಸ್ಪ್ರೆಡ್ ಹಚ್ಚಿಡಿ. ನಂತರ ಇದರ ಮೇಲೆ ಹೆಚ್ಚಿದ ಲೆಟ್ಯೂಸ್, ಈರುಳ್ಳಿ ಹಾಗೂ ಬಾರ್ಬೆಕ್ಯುಗೊಳಿಸಲಾದ ಚಿಕನ್ ತುಂಡುಗಳಿರಿಸಿ. ಬನ್ ಮೇಲೆ ಇಂಗ್ಲಿಷ್ ಮಸ್ಟರ್ಡ್ ಸವರಿ, ಫ್ರೆಂಚ್ ಫ್ರೈಸ್ ಜೊತೆ ಸವಿಯಲು ಕೊಡಿ.
ಮೆಲನ್ ಮಿಂಟ್ ಶೂಟರ್
ಸಾಮಗ್ರಿ : 150 ಗ್ರಾಂ ಕಲ್ಲಂಗಡಿ ಹಣ್ಣಿನ ಹೋಳು, 20 ಗ್ರಾಂ ಪುದೀನಾ ಎಲೆ, 60 ಮಿ.ಲೀ. ಸೇಬಿನ ರಸ, ರುಚಿಗೆ ತಕ್ಕಷ್ಟು ಉಪ್ಪು ಮೆಣಸು ಐಸ್ ಕ್ಯೂಬ್ಸ್.
ವಿಧಾನ : ಮೊದಲು ಮಿಕ್ಸಿಗೆ ಬೀಜರಹಿತ ಕಲ್ಲಂಗಡಿ ಹಣ್ಣಿನ ಹೋಳು, ಪುದೀನಾ, ಸೇಬಿನ ರಸ, ಉಪ್ಪು, ಮೆಣಸು ಸೇರಿಸಿ ನುಣ್ಣಗೆ ತಿರುವಿಕೊಳ್ಳಿ. ಇದನ್ನು ಗ್ಲಾಸುಗಳಿಗೆ ಸುರಿದು, ಐಸ್ ಕ್ಯೂಬ್ಸ್ ತೇಲಿಬಿಟ್ಟು, ಪುದೀನಾದಿಂದ ಅಲಂಕರಿಸಿ ಸವಿಯಲು ಕೊಡಿ.
ಸ್ಪೈಸ್ಡ್ ಕುಕುಂಬರ್ ರಾ ಮ್ಯಾಂಗೊ
ಸಾಮಗ್ರಿ : 100 ಗ್ರಾಂ ಸೌತೆಕಾಯಿ, 50 ಗ್ರಾಂ ಹುಳಿ ಮಾವಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸುಪುಡಿ, ಸಕ್ಕರೆ, ಟೊಬ್ಯಾಸ್ಕೊ ಫ್ರಿಜ್ ವಾಟರ್.
ವಿಧಾನ : ಸೌತೇಹೋಳಿಗೆ ಉಳಿದೆಲ್ಲ ಸಾಮಗ್ರಿ ಬೆರೆಸಿ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ. ಇದಕ್ಕೆ ಅಗತ್ಯವಿದ್ದಷ್ಟು ತಣ್ಣೀರು ಬೆರೆಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ, ಸವಿಯಲು ಕೊಡಿ.
ರಾಟಿಯೋಲಿ ಬ್ರೂಶೇಟ
ಸಾಮಗ್ರಿ : 2 ತುಂಡು ಫ್ರೆಂಚ್ ಬಗೆಟ್, 60 ಗ್ರಾಂ ಬೆಣ್ಣೆ, 60 ಗ್ರಾಂ ಹಳದಿ/ಕೆಂಪು ಕ್ಯಾಪ್ಸಿಕಂ, 50 ಗ್ರಾಂ ಝುಕೀನಿ (ಆಸ್ಟ್ರೇಲಿಯನ್‌ಸೌತೇಕಾಯಿ), 40 ಗ್ರಾಂ ಈರುಳ್ಳಿ, 40 ಗ್ರಾಂ ಆಲಿವ್ ಬದನೇಕಾಯಿ, ಅಗತ್ಯವಿದ್ದಷ್ಟು ಉಪ್ಪು, ಮೆಣಸು, ಟೊಮೇಟೊ ಸಾಸ್, ರೀಫೈಂಡ್ ಎಣ್ಣೆ, ಪಾರ್ಸ್ಲೆ ಬೆಳ್ಳುಳ್ಳಿ.
ವಿಧಾನ : ಫ್ರೆಂಚ್ ಬಗೆಟ್ ನ್ನು ಗೋಲಾಕಾರದ ತುಂಡುಗಳಾಗಿಸಿ, ಟೋಸ್ಟ್ ಮಾಡಿಡಿ. 7-8 ಎಸಳು ಬೆಳ್ಳುಳ್ಳಿ, ಹೆಚ್ಚಿದ ಪಾರ್ಸ್ಲೆ, ತುಸು ಬೆಣ್ಣೆ ಬೆರೆಸಿ ಬಾಡಿಸಿ, ನುಣ್ಣಗೆ ತಿರುವಿಕೊಳ್ಳಿ. ಇದೀಗ ಗಾರ್ಲಿಕ್ ಬಟರ್ ರೆಡಿ. ಟೋಸ್ಟ್ ಗಳ ಮೇಲೆ ಇದನ್ನು ಸವರಬೇಕು. ಒಂದು ಚಿಕ್ಕ ಬಾಣಲೆಯಲ್ಲಿ ತುಸು ರೀಫೈಂಡ್ ಎಣ್ಣೆ ಬಿಸಿ ಮಾಡಿ, ಅದಕ್ಕೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಬದನೆ ಹೋಳು ಬಿಟ್ಟು ಮಿಕ್ಕಿದ್ದೆಲ್ಲ ಸೇರಿಸಿ ಬಾಡಿಸಬೇಕು. ಆಮೇಲೆ ಬದನೆ ಹೋಳು ಸೇರಿಸಿ ಬಾಡಿಸಬೇಕು. ಉಪ್ಪು, ಮೆಣಸು ಹಾಕಿ ಬಾಡಿಸಿ. ನಂತರ ಟೊಮೇಟೊ ಸಾಸ್ ಬೆರೆಸಿರಿ. 2 ನಿಮಿಷ ಕೆದಕಿ ಕೆಳಗಿಳಿಸಿ. ಈ ರೆಡಿ ಮಿಶ್ರಣವನ್ನು ಟೋಸ್ಟ್ ಮೇಲೆ ಸಮನಾಗಿ ಹರಡಿ, ಮೇಲೆ ಹೆಚ್ಚಿದ ಆಲಿಲ್ ನಿಂದ ಗಾರ್ನಿಶ್ ಮಾಡಿ ಸವಿಯಲು ಕೊಡಿ.
ಕ್ರಂಬ್ಡ್ ಅರಾನ್ಸಿ
ಸಾಮಗ್ರಿ : 150 ಗ್ರಾಂ ಅಕ್ಕಿ, 600 ಮಿ.ಲಿ. ವೆಜ್ ಸ್ಟಾಕ್, 20 ಗ್ರಾಂ ಚೀಸ್, 15 ಗ್ರಾಂ ಪಾರ್ಸ್ಲೆ, 40 ಗ್ರಾಂ ಹಸಿ ಬಟಾಣಿ, 100 ಗ್ರಾಂ ಬ್ರೆಡ್ ಕ್ರಂಬ್ಸ್, 60 ಗ್ರಾಂ ಮೈದಾ, 1 ಚಿಟಿಕಿ ಕೇಸರಿ, 50 ಗ್ರಾಂ ಈರುಳ್ಳಿ, 60 ಮಿ.ಲೀ. ವೈಟ್ ವೈನ್, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.
ವಿಧಾನ : ಮೊದಲು ಮೈದಾಗೆ ತುಸು ಉಪ್ಪು, ಪುಡಿಮೆಣಸು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಡಿ. ಒಂದು ಚಿಕ್ಕ ಕುಕ್ಕರ್ ನಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಹಸಿ ಬಟಾಣಿ, ಹೆಚ್ಚಿದ ಪಾರ್ಸ್ಲೆ ಹಾಕಿ ಬಾಡಿಸಿ. ಆಮೇಲೆ ತೊಳೆದ ಅಕ್ಕಿ, ವೈನ್ ಬೆರೆಸಿ ಕೈಯಾಡಿಸಿ. ಆಮೇಲೆ ಹಾಲಲ್ಲಿ ನೆನೆದ ಕೇಸರಿ, ಉಪ್ಪು ಮೆಣಸು, ವೆಜ್ ಸ್ಟಾಕ್‌ಬೆರೆಸಿ, ಅಗತ್ಯವೆನಿಸಿದರೆ ನೀರು ಸಹ ಬೆರೆಸಿಕೊಂಡು, ಚೆನ್ನಾಗಿ ಕೈಯಾಡಿಸಿ, ವೆಯ್ಟ್ ಹಾಕಿ 2 ಸೀಟಿ ಕೂಗಿಸಿ. ಕುಕ್ಕರ್ ತಣಿದು, ಮಿಶ್ರಣ ಹೊರತೆಗೆದ ನಂತರ, ಚೆನ್ನಾಗಿ ಆರಲು ಬಿಡಿ. ಇದರ ಮೇಲೆ ಚೀಸ್ ತುರಿದು ಹಾಕಿ, ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ. ನಂತರ ಇವನ್ನು ಒಂದೊಂದಾಗಿ ಮೈದಾ ಮಿಶ್ರಣದಲ್ಲಿ ಅದ್ದಿ, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಬೋಂಡ ತರಹ ಕರಿಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿಯಾಗಿ ಕಾಫಿಟೀ ಜೊತೆ ಸವಿಯಲು ಕೊಡಿ.
ವೆಜ್ ರಾಪ್
ಸಾಮಗ್ರಿ : 150 ಗ್ರಾಂ ಗಾರ್ಲಿಕ್ ಚೀಸ್ ಸ್ಪ್ರೆಡ್, 4 ಟಾರ್ಟಿಲಾ, 200 ಗ್ರಾಂ ಉದ್ದಕ್ಕೆ ಹೆಚ್ಚಿದ ಲೆಟ್ಯೂಸ್, 250 ಗ್ರಾಂ ಟೊಮೇಟೊ, 100 ಗ್ರಾಂ ಕೆಂಪು ಕ್ಯಾಪ್ಸಿಕಂ, 100 ಗ್ರಾಂ ಸೌತೇಕಾಯಿ, 100 ಗ್ರಾಂ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಚೀಸ್.
ವಿಧಾನ : ರೆಡಿಮೇಡ್ ಟಾರ್ಟಿಲಾ ಮೇಲೆ ಮೊದಲು ಗಾರ್ಲಿಕ್ ಚೀಸ್ ಹರಡಿರಿ. ಇದರ ಮೇಲೆ ಟೊಮೇಟೊ ಬಿಲ್ಲೆ, ಲೆಟ್ಯೂಸ್, ಕೆಂಪು ಕ್ಯಾಪ್ಸಿಕಂ ಬಿಲ್ಲೆ, ಸೌತೆ, ಈರುಳ್ಳಿ ಬಿಲ್ಲೆಗಳು ಹಾಗೂ ತೆಳುವಾಗಿ ತುಂಡರಿಸಿದ ಚೀಸ್ ಬರಲಿ. ಇದರ ಮೇಲೆ ಉಪ್ಪು, ಮೆಣಸು ಸಿಂಪಡಿಸಿ, ರೋಲ್ ಮಾಡಿ, ಸಾಸ್ ಜೊತೆ ಸವಿಯಲು ಕೊಡಿ.
ಬ್ರೀ ಝುಕೀನಿ ಫ್ರೀಟರ್ಸ್
ಸಾಮಗ್ರಿ : 300 ಗ್ರಾಂ ಬ್ರೀ ಚೀಸ್, 800 ಗ್ರಾಂ ಝುಕೀನಿ, 200 ಗ್ರಾಂ ಮೈದಾ, 60 ಗ್ರಾಂ ಕಾರ್ನ್ ಫ್ಲೋರ್, ಅಗತ್ಯವಿದ್ದಷ್ಟು ನೀರು ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಬೇಕಿಂಗ್ ಪೌಡರ್.
ವಿಧಾನ : ಚಿತ್ರದಲ್ಲಿರುವಂತೆ ಝುಕೀನಿಯನ್ನು 1 ಅಂಗುಲದ ಗುಂಡನೆಯ ತುಂಡುಗಳಾಗಿ ಕತ್ತರಿಸಿ. ಇದರ ಮೇಲೆ ಬ್ರೀ ಚೀಸ್‌ಸವರಿಡಿ. ಒಂದು ಬಟ್ಟಲಿಗೆ ಮೈದಾ, ಕಾರ್ನ್ ಫ್ಲೋರ್, ತುಸು ನೀರು, ಬೇಕಿಂಗ್ ಪೌಡರ್, ಉಪ್ಪು, ಮೆಣಸು ಬೆರೆಸಿಕೊಂಡ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. 10 ನಿಮಿಷ ನೆನೆಯಲು ಬಿಟ್ಟು, ಇದರಲ್ಲಿ ಒಂದೊಂದಾಗಿ ಝುಕೀನಿ ಅದ್ದಿಕೊಂಡು ಬಜ್ಜಿ ಕರಿಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಸಾಸ್ ಜೊತೆ ಸವಿಯಲು ಕೊಡಿ.
ಚಿಕನ್ ಟಿಕ್ಕಾ ಟ್ಯಾಕೋಜ್
ಸಾಮಗ್ರಿ : 16 ತುಂಡು ಟ್ಯಾಕೋ ಶೆಲ್ಸ್, 800 ಗ್ರಾಂ ಚಿಕನ್ ಟಿಕ್ಕಾ, 100 ಗ್ರಾಂ ಈರುಳ್ಳಿ, 50 ಗ್ರಾಂ ಕೆಂಪು/ಹಳದಿ/ಹಸಿರು ಕ್ಯಾಪ್ಸಿಕಂ, 200 ಗ್ರಾಂ ಟೊಮೇಟೋ, 200 ಗ್ರಾಂ ಲೆಟ್ಯೂಸ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಪುದೀನಾ ಚಟ್ನಿ, ಮೆಯೋನೀಸ್.
ವಿಧಾನ : ಚಿಕನ್ ಟಿಕ್ಕಾಗಳನ್ನು ಉದ್ದಕ್ಕೆ ಹಾಗೂ ತೆಳುವಾಗಿ ಕತ್ತರಿಸಿ. ಅದೇ ತರಹ ತರಕಾರಿಗಳನ್ನೂ ಉದ್ದಕ್ಕೆ ಹೆಚ್ಚಿಡಿ. ಇವೆರಡನ್ನೂ ಬೆರೆಸಿಕೊಂಡು ಮೇಲೆ ಪುದೀನಾ ಚಟ್ನಿ, ಉಪ್ಪು, ಮೆಣಸು ಹಾಕಿ ಎಲ್ಲ ಚೆನ್ನಾಗಿ ಮಿಶ್ರಗೊಳ್ಳುವಂತೆ ಮಾಡಿ. ಇದನ್ನು ಮೈಕ್ರೋವೇವ್ ನಲ್ಲಿರಿಸಿ ಹದನಾಗಿ ಬೇಯಿಸಿ. ನಂತರ ಹೊರತೆಗೆದು, ಇದಕ್ಕೆ ಮೆಯೋನೀಸ್, ಕೊ.ಸೊಪ್ಪು ಸೇರಿಸಿ ಟ್ಯಾಕೋ ಶೆಲ್ಸ್ ನಲ್ಲಿ ಸಮನಾಗಿ ಮಿಶ್ರಣ ತುಂಬಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಸ್ಪೆಷಲ್ ಪಾಪಡ್ ರೋಲ್ಸ್
ಸಾಮಗ್ರಿ : 4 ಅಗಲದ ಉದ್ದಿನ ಹಪ್ಪಳ, 100 ಗ್ರಾಂ ಪನೀರ್, 1-1 ದೊಡ್ಡ ಚಮಚ ಗೋಡಂಬಿ-ದ್ರಾಕ್ಷಿ, ಸಕ್ಕರೆ ಹೆಚ್ಚಿದ ಕೊ.ಸೊಪ್ಪು, 4-4 ಚಮಚ ಮೈದಾ, ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಸಾಸ್, ಕರಿಯಲು ಎಣ್ಣೆ.
ವಿಧಾನ : ಎಲ್ಲಾ ಹಪ್ಪಳಗಳನ್ನು ಒಮ್ಮೆ ಬಿಸಿನೀರಿನಲ್ಲಿ ಅದ್ದಿ ತಕ್ಷಣ ತೆಗೆದುಬಿಡಿ, ಇನ್ನು ಅರ್ಧರ್ಧ ಭಾಗ ಮಾಡಿ. ಒಂದು ಬಟ್ಟಲಿಗೆ ಉಳಿದ ಎಲ್ಲಾ ಸಾಮಗ್ರಿ ಸೇರಿಸಿ ಚೆನ್ನಾಗಿ ಮಿಶ್ರಣ ಕಲಸಿಡಿ. ಇದನ್ನು ಹಪ್ಪಳಗಳ ಮೇಲೆ ಸಮನಾಗಿ ಹರಡಿ, ನೀಟಾಗಿ ಕವರ್ ಮಾಡಿ, ಮೈದಾ ಪೇಸ್ಟ್ ನಿಂದ ಬಿಟ್ಟುಕೊಳ್ಳದಂತೆ ಅಂಟಿಸಿ. ನಂತರ ಎಣ್ಣೆಯಲ್ಲಿ ಕರಿದು, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಿರಿ.
ಕ್ಯಾಬೇಜ್ ಕಪ್ಸ್
ಸಾಮಗ್ರಿ : ಕಡಲೆಹಿಟ್ಟು ಮಲ್ಟಿಗ್ರೇನ್ ಆಟಾ ರವೆ ಹೆಚ್ಚಿದ ಎಲೆಕೋಸು, ಈರುಳ್ಳಿ (ತಲಾ ಅರ್ಧರ್ಧ ಕಪ್), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಸಕ್ಕರೆ, ನಿಂಬೆರಸ, ಈನೋಸಾಲ್ಟ್, ಒಗ್ಗರಣೆಗೆ ತುಸು ಎಣ್ಣೆ, ಸಾಸುವೆ, ಜೀರಿಗೆ, ಎಳ್ಳು, ಕರಿಬೇವು, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಯಲು ಎಣ್ಣೆ.
ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ತುಸು ನೀರಿನೊಂದಿಗೆ ಒಂದು ಬೇಸನ್ನಿನಲ್ಲಿ ಬೆರೆಸಿಕೊಂಡು, ಪಕೋಡ ಹಿಟ್ಟಿನ ಹದಕ್ಕೆ ಕಲಸಿಡಿ. ಇದರಿಂದ ತುಸು ದೊಡ್ಡ ಗಾತ್ರದ ಮಿಶ್ರಣ ಹಿಡಿದು, ಕಾದ ಎಣ್ಣೆಯಲ್ಲಿ ಪಕೋಡ ತಯಾರಿಸಿ. ಕೋಸಿನ ಎಲೆಗಳನ್ನು ಇಡಿಯಾಗಿ ಬಿಡಿಸಿಕೊಂಡು, ತುಸು ಬೆಣ್ಣೆ ಸವರಿ, ಮೈಕ್ರೋವೇವ್ ನಲ್ಲಿ ನೇರವಾಗಿ ಬೇಯಿಸಿ. ಗಾಜಿನ ಬಟ್ಟಲುಗಳ ಮೇಲೆ ಎಲೆ ಹರಡಿ, ಅದರ ಮೇಲೆ ಪಕೋಡ ಇರಿಸಿ. ಚಿಕ್ಕ ಬಾಣಲೆಯಲ್ಲಿ ಒಗ್ಗರಣೆ ಸಿದ್ಧಪಡಿಸಿಕೊಂಡು ಇವುಗಳ ಮೇಲೆ ಸಮನಾಗಿ ಹರಡಿ, ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.
ಮಸಾಲಾ ಸಾಸೇಜ್
ಸಾಮಗ್ರಿ : 600 ಗ್ರಾಂ ಚಿಕನ್ ಸಾಸೇಜ್, 100 ಗ್ರಾಂ ಈರುಳ್ಳಿ, 100 ಗ್ರಾಂ ಟೊಮೇಟೊ, 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಕರಿಯಲು ಎಣ್ಣೆ.
ವಿಧಾನ : ಮೊದಲು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಚಿಕನ್ ಸಾಸೇಜ್ ನ್ನು ಕರಿದು ತೆಗೆಯಿರಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಒಗ್ಗರಣೆ ಕೊಡಿ. ನಂತರ ಹೆಚ್ಚಿದ ಈರುಳ್ಳಿ, ಆಮೇಲೆ ಟೊಮೇಟೊ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ, ಧನಿಯಾಪುಡಿ, ಅರಿಶಿನ ಸೇರಿಸಿ ಎಲ್ಲ ಬೆರೆತುಕೊಳ್ಳುವಂತೆ ಕೆದಕಬೇಕು. ಇದಕ್ಕೆ ಕರಿದ ಚಿಕನ್ ಸಾಸೇಜ್ ಬೆರೆಸಿ, ಚೆನ್ನಾಗಿ ಕೈಯಾಡಿಸಿ ಕೆಳಗಿಳಿಸಿ. ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು ಉದುರಿಸಿ. ಬಿಸಿ ಬಿಸಿಯಾಗಿ ಚಪಾತಿ ಪರೋಟ ಜೊತೆ ಸವಿಯಲು ಕೊಡಿ.