ಐಸ್ ಪೈಸ್
ಹೌದು, ಈ ಹೆಸರಿನ ಒಂದು ಹೊಸ ಕನ್ನಡ ಚಿತ್ರ ಸೆಟ್ಟೇರಿದೆ. ಶಿವಸಾಯಿ ಕೃಷ್ಣ ನಿರ್ದೇಶನದ ಈ ಚಿತ್ರವನ್ನು ಸುರೇಶ್ ಮುತ್ತಪ್ಪ ನಿರ್ಮಿಸುತ್ತಿದ್ದಾರೆ. ಪತ್ರಕರ್ತ ಮಂಜುನಾಥ್ ಕಾರ್ಯಕಾರಿ ನಿರ್ಮಾಪಕ. ನೀತೂ ಮುಖ್ಯ ಪಾತ್ರ ಮಾಡುತ್ತಿದ್ದು, ರಂಗಾಯಣ ರಘು ಜೊತೆಯಲ್ಲಿ ಸ್ಟೆಪ್ ಹಾಕಿದ್ದಾರೆ. ಹಾಗಂದ ಮಾತ್ರಕ್ಕೆ ಇವರದು ಪ್ರೇಮಿಗಳ ಜೋಡಿಯಲ್ಲ. ರಂಗಾಯಣ ರಘು, ನೀತೂ ಜೊತೆ ತುಂಬಾ ರೊಮ್ಯಾಂಟಿಕ್ ಮೂಡ್ ನಲ್ಲಿ ಅಭಿನಯಿಸಿದ್ದಾರಂತೆ. ಚಿತ್ರಕ್ಕೆ ನೀತೂ ಬಂದ ಮೇಲೆ ಹೊಸ ತಿರುವು ತೆಗೆದುಕೊಂಡಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ನಾನು ಕುಣಿಯುವುದಕ್ಕಷ್ಟೇ ಬಂದಿಲ್ಲ, ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರು ಹೇಗೆ ಕಥೆ ಹೇಳಿದರೋ ಅದೇ ರೀತಿ ನೀಟಾಗಿ ನಿರೂಪಣೆ ಮಾಡಿದ್ದಾರೆ. ರಘು ಅವರಂಥ ಪ್ರತಿಭಾವಂತ ನಟರ ಜೊತೆ ನಟಿಸುವುದಕ್ಕೆ ಖುಷಿ ಇದೆ ಎನ್ನುತ್ತಾಳೆ ನೀತು. ಚಿತ್ರತಂಡದ ಪ್ರಕಾರ ಎಲ್ಲ ವರ್ಗದ ಪ್ರೇಕ್ಷಕರೂ ನೋಡುವ ಸಿನಿಮಾ ಇದು ಎನ್ನಲಾಗಿದೆ.
ವಿಷಲ್ ಮೊಳಗುತ್ತಿದೆ
ಪ್ರಶಾಂತ್ ಒಂಥರಾ ಸ್ಟೈಲಿಶ್ ನಿರ್ದೇಶಕ. ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗೆ ಇವರ ಚಿತ್ರವೆಂದರೆ ಬಲು ಪ್ರೀತಿ. ಇವರ ಇತ್ತೀಚಿನ `ವಿಷಲ್’ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಸಾಕಷ್ಟು ಗೊಂದಲಗಳು ಉಂಟಾಗಿತ್ತು. ಹಾಗಾಗಿ ಎಲ್ಲ ಗೊಂದಲಗಳನ್ನು ನಿವಾರಿಸಲು ಪ್ರಶಾಂತ್ ಚಿತ್ರದ ಕ್ಲೈಮ್ಯಾಕ್ಸ್ ಬದಲಾಯಿಸುತ್ತಿದ್ದಾರಂತೆ. `ವಿಷಲ್’ ಅದೇ ಆದರೂ ಕ್ಲೈಮ್ಯಾಕ್ಸ್ ಹೊಸದಾಗಿರುತ್ತದೆ. ಮೊದಲೇ ಅಂಥವೊಂದು ಕ್ಲೈಮ್ಯಾಕ್ಸ್ ನ್ನು ಚಿತ್ರೀಕರಿಸಿ ಇಟ್ಟುಕೊಂಡಿದ್ದರಿಂದ ಪ್ರಶಾಂತ್ ಯಾವುದೇ ತೊಂದರೆ ಇಲ್ಲದೆ, ಕೊನೆಯ ದೃಶ್ಯವನ್ನು ಕಟ್ ಮಾಡಿ ಮೊದಲೇ ಸಿದ್ಧಪಡಿಸಿದ್ದ ಕ್ಲೈಮ್ಯಾಕ್ಸ್ ನ್ನು ಸೇರಿಸಿದ್ದಾರೆ. ಇವರ ಈ ಸೂಪರ್ ಐಡಿಯಾಗೆ ನಿಜಕ್ಕೂ `ವಿಷಲ್’ ಹಾಕಲೇಬೇಕು ಅಲ್ಲವೇ? ವಿಭಿನ್ನವಾದ ಪ್ರಯತ್ನಕ್ಕೆ ಎಲ್ಲರಿಂದ ಬೆನ್ನು ತಟ್ಟಿಸಿಕೊಂಡಿದ್ದಾರೆ ಪ್ರಶಾಂತ್.
ಅರ್ಜುನ್ ರ `ಅಭಿಮನ್ಯು‘
ಅರ್ಜುನ್ ಸರ್ಜಾ ಕನ್ನಡದ ಹುಡುಗ, ಆದರೆ ಮಿಂಚಿದ್ದು ಪಕ್ಕದ ರಾಜ್ಯದಲ್ಲಿ. ತಮಿಳು ಚಿತ್ರರಂಗದ `ಜಂಟಲ್ ಮ್ಯಾನ್’ ಆಗಿರುವ ಅರ್ಜುನ್ ತಮ್ಮ ಸಂಸಾರದ ಜೊತೆ ಬಹಳ ವರ್ಷಗಳಿಂದ ಚೆನ್ನೈನಲ್ಲಿ ವಾಸವಾಗಿದ್ದರೂ, ಬೆಂಗಳೂರು ಅವರ ತವರೂರಾಗಿದೆ. ಇತ್ತೀಚೆಗೆ ಕನ್ನಡ ಚಿತ್ರವೊಂದನ್ನು ಶುರು ಮಾಡಿರು ಅರ್ಜುನ್ ಸರ್ಜಾರ ಚಿತ್ರಕ್ಕೆ `ಅಭಿಮನ್ಯು’ ಎಂದು ಹೆಸರಿಡಲಾಗಿದೆ. ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡು ಮೈಸೂರಿನಿಂದ ಹೈದರಾಬಾದ್ ಗೆ ಚಿತ್ರತಂಡ ಶಿಫ್ಟ್ ಆಗಲಿದೆ. ಅರ್ಜುನ್ ಸರ್ಜಾ ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವೇಣು ಛಾಯಾಗ್ರಹಣ, ಹರಿಕೃಷ್ಣ ಅವರ ಸಂಗೀತವಿದೆ. ಅರ್ಜುನ್ ಗೆ ಜೋಡಿಯಾಗಿ ಸುರ್ವಿನ್ ಚಾವ್ಲಾ ನಟಿಸುತ್ತಿದ್ದು ರವಿ ಕಾಳೆ, ಸಿಮ್ರಾನ್ ಕಪೂರ್, ರಾಹುಲ್ ದೇವ್, ಬಿರಾದಾರ್, ವಿನಯಾ ಪ್ರಕಾಶ್ ಮುಂತಾದವರ ತಾರಾಗಣವಿದೆ. ಕನ್ನಡದ ಹುಡುಗನಾಗಿ ಕನ್ನಡ ಚಿತ್ರವನ್ನು ಬಹಳ ಪ್ರೀತಿಯಿಂದ ಮಾಡುತ್ತಿರುವ ಅರ್ಜುನ್ ಸರ್ಜಾಗೆ ತಮಿಳಿನಲ್ಲಿ ಸಿಕ್ಕಂತೆ ಇಲ್ಲಿಯೂ ಯಶಸ್ಸು ಸಿಗಲಿ.
ಪ್ರೇಮ್ ರಾಗ
ಸಿನಿಮಾರಂಗಕ್ಕೆ ಬಂದು ಹನ್ನೊಂದು ವರ್ಷಗಳಾಗಿವೆ. ನಮ್ಮ ಪ್ರೇಮ್ ಹೇಗಿದ್ದ ಹೇಗಾದ ಗೊತ್ತಾ ಎಂದು ಆತ್ಮೀಯರು ಸಂತೋಷಪಡುತ್ತಾರೆ. ಕನ್ನಡದ ರೊಮ್ಯಾಂಟಿಕ್ ಹೀರೋ ಎಂದೇ ಜನಪ್ರಿಯರಾಗಿರುವ ಪ್ರೇಮ್ ಮಾತ್ರ ಇತ್ತೀಚೆಗೆ ಪತ್ರಕರ್ತರನ್ನೆಲ್ಲ ಕರೆದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಹೀಗೆ…..
`ನನ್ನ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಆತ್ಮಹತ್ಯೆ ಮಾಡಿಕೊಳ್ತಿದ್ರು, ಇಲ್ಲವೇ ಹುಚ್ಚು ಹಿಡಿಸಿಕೊಳ್ತಿದ್ದರು. ಸೋತ ಮೇಲಷ್ಟೇ ನನಗೆ ಸಕ್ಸಸ್ ಎಂದರೆ ಏನು ಎಂಬುದು ಅರ್ಥವಾಗಿದ್ದು, ಯಾವುದೇ ಛಲವಿಲ್ಲದಿದ್ದರೂ ನಾನಿಂದು ಉಳಿದುಕೊಂಡಿದ್ದೇನೆ,’ ಎಂದು ತೃಪ್ತಿಪಡುತ್ತಾರೆ. ಆದರೂ ಸಹ ಒಂದೊಂದ್ಸಲ ಕಿರಿಕ್ ಮಾಡಿಕೊಂಡು ಸುದ್ದಿಯಾಗಿದ್ದೂ ಇದೆ. ಇತ್ತೀಚಿನ `ಚಂದ್ರ’ ಚಿತ್ರದ ನಿರ್ದೇಶಕಿ ರೂಪಾ ಅಯ್ಯರ್ ಜೊತೆ ಕಿರಿಕ್ ಆಗಿತ್ತು. ಆದರೆ ಈಗ ಅವರು ನಟಿಸಿರುವ `ಶತ್ರು’ ಚಿತ್ರದ ಬಗ್ಗೆ ತುಂಬಾನೆ ಆಸಕ್ತಿ ತೋರುತ್ತಾ ಪ್ರಚಾರಕ್ಕಿಳಿದಿದ್ದಾರೆ.
`ನೆನಪಿರಲಿ‘ ಚಿತ್ರದ ನಂತರ ಯಶಸ್ವಿ ಹೀರೋ ಎನಿಸಿದ ಪ್ರೇಮ್
ಒಬ್ಬ ಜಂಟಲ್ ವುಮನ್ ಇಮೇಜ್‌ಹೊಂದಿರುವಂಥ ನಟ. ಸ್ಟಾರ್ ಗೆ ಆಗ್ ಬಿಟ್ಟೈತೆ……ಪ್ಯಾರ್ ಗೇ ಆಗ್ ಬಿಟ್ಟೈತೆ…. ಈ ಹಾಡು ಅದೆಷ್ಟು ಜನಪ್ರಿಯಾಯಿತೆಂದರೆ, ಗುರಕಿರಣ್, ಕೋಮಲ್, ಪಾರೂಲ್ ಯಾವುದೇ ಸಮಾರಂಭಕ್ಕೆ ಹೋಗಲಿ ಅದನ್ನು ಗುನುಗಿ ಬರಲೇಬೇಕು. ಅದೇ ಯಶಸ್ಸಿನಲ್ಲಿ `ಪ್ಯಾರ್ ಗೇ ಆಗ್ ಬಿಟ್ಟೈತೆ!’ ಹೆಸರಿನಲ್ಲಿ ಚಿತ್ರವೊಂದು ತಯಾರಾಗಿಬಿಡ್ತು. ಕೋಮಲ್ ನಟಿಸಿರುವ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಗಾಲ್ಫ್ ಕ್ಲಬ್ ನಲ್ಲಿ ನಡೆದ ಸಮಾರಂಭದಲ್ಲಿ ಕೋಮಲ್ ಎಂದಿನಂತೆ ಹ್ಯೂಮರೆಸ್ಸಾಗಿ ಮಾತನಾಡುತ್ತಾ, `ಅಂದು ನಾವು ಕರೆದೋರು ಯಾರೂ ಬಂದಿರಲಿಲ್ಲ. ಇಂದು ಬಂದಿರೋ ಜನರನ್ನು ನೋಡಿದ್ರೆ ಫುಲ್ ಖುಷಿ ಆಗುತ್ತೆ. ಇಷ್ಟೊಂದು ಅದ್ಧೂರಿತನ ಬೇಕಾ ಅಂತ ಅನಿಸುತ್ತೆ. ಆದರೆ ಕೆಲವರು ಇವೆಲ್ಲಾ ಇದ್ರೇನೆ ಸ್ಟಾರ್ ಗೆ ಆಗ್ ಬಿಟ್ಟೈತಿ ಅನಿಸಿಕೊಳ್ಳೋದು ಅಂದ್ರು. ಅದಕ್ಕೆ ಒಪ್ಪಿಕೊಂಡೆ,’ ಎನ್ನುತ್ತ ತಮ್ಮದೇ ಸ್ಟೈಲಿನಲ್ಲಿ ತಮಾಷೆ ಮಾಡುತ್ತಾ ನಗಿಸುತ್ತಿದ್ದರು. ಚಿತ್ರದ ಹಾಡುಗಳನ್ನು ಟ್ರೇಲರ್ ನಲ್ಲಿ ಪ್ರದರ್ಶಿಸಲಾಯಿತು. ಚಿತ್ರದ ನಾಯಕಿ ಯಾರು ಅಂದ್ರ….? ಪ್ರಾರ್ಥನಾ.
ಪುಂಗಿದಾಸ
ನಟ ಕೋಮಲ್ ರ ಚಿತ್ರಗಳ ಟೈಟಲ್ ಉಳಿದೆಲ್ಲ ಚಿತ್ರಗಳಿಗಿಂತ ವಿಭಿನ್ನವಾಗಿರುತ್ತದೆ ಎನ್ನುವುದಕ್ಕೆ ಇದೀಗ ಸ್ಟಾರ್ಟ್ ಮಾಡಿರೋ `ಪುಂಗಿದಾಸ’ ಉತ್ತಮ ನಿದರ್ಶನ. ಕೋಮಲ್ ನಟಿಸುತ್ತಿರುವ ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಅಂದಿನ ಖ್ಯಾತ ನಟಿ ಸಾಹುಕಾರ್ ಜಾನಕಿ ಅವರು ನಟಿಸುತ್ತಿರುವುದು. ರಾಜಕಾರಣಿ ಬಿ.ಸಿ. ಪಾಟೀಲ್ ಈ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚುತ್ತಿರೋದು. ಕೋಮಲ್ ಗೆ ನಾಯಕಿಯಾಗಿ ಅಸ್ಮಾ ಎಂಬ ಬೆಡಗಿ ಬಾಂಬೆಯಿಂದ ಹಾರಿಬಂದಿದ್ದಾಳೆ. ಇದು ನನ್ನದೇ ಸ್ಟೈಲಿನ ಚಿತ್ರವಾದರೂ ನಿರ್ದೇಶಕ ಶ್ರೀನಾಥ್ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಫಾರ್ಮುಲಾಗಳನ್ನು ಬಳಸಿಕೊಂಡಿದ್ದಾರೆ. `ಒಟ್ಟಿನಲ್ಲಿ ಪ್ರೇಕ್ಷಕರು ಫುಲ್ ಖುಷ್ ಆಗಬೇಕು. ಈ ಚಿತ್ರದಲ್ಲಿ ನನ್ನ ರೆಗ್ಯುಲರ್ ಲುಕ್ ಜೊತೆ ವಿವಿಧ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಮಟ್ಟಿಗೆ ಹೊಸ ರೀತಿ ಸಿನಿಮಾ ಇದು,’ ಎನ್ನುತ್ತಾರೆ ಕೋಮಲ್.
ಮಳೆ ಬಂತು ಮಳೆ!
ಇತ್ತೀಚಿನ ಟ್ರೆಂಡ್ ಹೇಗಿದೆ ಅಂದರೆ ಯಶಸ್ವಿ ನಿರ್ದೇಶಕರಡಿ ಕೆಲಸ ಮಾಡಿದಂಥ ಸಹಾಯಕ ನಿರ್ದೇಶಕರು ಬಹಳ ಬೇಗನೇ ಸ್ವತಂತ್ರವಾಗಿ ಚಿತ್ರ ನಿರ್ದೇಶಿಸಲು ಹೊರಟುಬಿಡುತ್ತಾರೆ. ಅದಕ್ಕೆ ತಕ್ಕಂತೆ ಅವರ ಗುರುಗಳು ಕೂಡಾ ಚೆನ್ನಾಗಿಯೇ ಪ್ರೋತ್ಸಾಹ ಕೊಡುತ್ತಿದ್ದಾರೆ. ಈಗಾಗಲೇ ಯೋಗರಾಜ್ ಭಟ್ಟರ ಇಬ್ಬರು ವಿದ್ಯಾರ್ಥಿಗಳು ತಮ್ಮ ಕೆಪಾಸಿಟಿ ಏನೆಂದು ತೋರಿಸಿಯಾಗಿದೆ. ಪವನ್ ಒಡೆಯರ್ ಗೋವಿಂದಾಯ ನಮಃ, ಗೂಗ್ಲಿಯಂಥ ಯಶಸ್ವಿ ಚಿತ್ರ ನೀಡಿದರೆ, ಪವನ್ ಎನ್ನುವ ಮತ್ತೊಬ್ಬ ಉತ್ಸಾಹಿ ಶಿಷ್ಯ ಲೈಫು ಇಷ್ಟೇನೇ ಮತ್ತು ಇದೀಗ ಲೂಸಿಯಾ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವಂತೆ ಮಾಡಿದ್ದಾರೆ. ಆರ್. ಚಂದ್ರು ಅವರು ಕೂಡಾ ತಮ್ಮ ಶಿಷ್ಯನಾದ ತೇಜಸ್ ಎಂಬಾತನನ್ನು ಸ್ವತಂತ್ರ ನಿರ್ದೇಶಕನನ್ನಾಗಿ ಮಾಡುತ್ತಿದ್ದಾರೆ. ತಮ್ಮದೇ ಬ್ಯಾನರ್ ನಡಿ ತಯಾರಾಗಲಿರುವ `ಮಳೆ’ ಎಂಬ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ನೆನಪಿರಲಿ ಪ್ರೇಮ್ ಗೆ ಜೋಡಿಯಾಗಿ ಅಮೂಲ್ಯಾ ನಟಿಸುತ್ತಿರುವುದು ವಿಶೇಷ. `ಕಥೆ ನನ್ನದೇ, ಉಳಿದ ಎಲ್ಲ ಜವಾಬ್ದಾರಿಯನ್ನೂ ತೇಜಸ್ ಗೆ ವಹಿಸಲಾಗಿದೆ. ಅವರು ಒಳ್ಳೆಯ ಸಿನಿಮಾ ಮಾಡುತ್ತಾರೆಂಬ ನಂಬಿಕೆ ಇದೆ,’ ಎನ್ನುತ್ತಾರೆ ಚಂದ್ರು.
ಘರ್ಷಣೆಗೆ ರಿಂಗಾ ರಿಂಗಾ
ಮಾಲಾಶ್ರೀಯವರ ಮತ್ತೊಂದು ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಈ ಬಾರಿ `ಘರ್ಷಣೆ’ ಚಿತ್ರಕ್ಕೆ ವಿಶೇಷವಾಗಿ ರೆಡಿಯಾಗಿರುವ ಮಾಲಾಶ್ರೀ ಆ್ಯಕ್ಷನ್ಸ್ ಹೇಗಿರುತ್ತದೆಂಬ ಕುತೂಹಲ ಆಕೆಯ ಅಭಿಮಾನಿಗಳಿಗಿದೆ. ಮಾಲಾಶ್ರೀ ಚಿತ್ರಕ್ಕೆ ಯಾವತ್ತೂ ಡಿಮ್ಯಾಂಡ್ ಇದ್ದೇ ಇರುತ್ತದೆ. ನಾಯಕರ ಸರಿಸಮಾನವಾಗಿ ನಿಂತು ಹೊಡೆದಾಡುವ ಮಾಲಾಶ್ರೀ ಆ್ಯಕ್ಷನ್ ಕ್ವೀನ್ ಆಗಿ ಬಹಳ ವರ್ಷಗಳಿಂದ ಮೆರೆಯುತ್ತಲೇ ಬಂದಿದ್ದಾರೆ. ಶಂಕರ್ ಗೌಡ ಹಾಗೂ ಶಂಕರ್ ರೆಡ್ಡಿ ನಿರ್ಮಿಸುತ್ತಿರುವ `ಘರ್ಷಣೆ’ ಚಿತ್ರಕ್ಕೆ ಹಾಡುಗಳ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗೆ `ರಿಂಗಾಗಿದೆ, ರಿಂಗಾಗಿದೆ, ಫೋನ್ ರಿಂಗಾಗಿದೆ….’ ಎಂಬ ಹಾಡಿಗೆ ತ್ರಿಭುವನ್ ಅವರ ನೃತ್ಯ ನಿರ್ದೇಶನದಲ್ಲಿ ತರುಣ್ ಚಂದ್ರ ಹೆಜ್ಜೆ ಹಾಕಿದರು. ದಯಾಳ್ ಪದ್ಮನಾಭ್ ನಿರ್ದೇಶನದ ಈ ಚಿತ್ರದಲ್ಲಿ ಮಾಲಾಶ್ರೀ ನಾಯಕಿಯಾಗಿ ನಟಿಸುತ್ತಿದ್ದು, ಆಶಿಷ್ ವಿದ್ಯಾರ್ಥಿ, ಪವಿತ್ರಾ ಲೋಕೇಶ್, ಅಯ್ಯಪ್ಪ ಶರ್ಮ ಮುಂತಾದವರು ನಟಿಸುತ್ತಿದ್ದಾರೆ. ಮಣಿಕಾಂತ್ ಕದ್ರಿಯವರ ಸಂಗೀತದ ಮೋಡಿ ಈ ಚಿತ್ರಕ್ಕಿದೆ.