ಯಾಂತ್ರಿಕ ಜೀವನದ ಜಂಜಾಟ ತಪ್ಪಿಸಲೆಂದೇ ಅನಾದಿಕಾಲದಿಂದ ನಮ್ಮ ಪೂರ್ವಜರು ಹಬ್ಬಗಳ ಆಚರಣೆಯನ್ನು ಜಾರಿಗೆ ತಂದರು. ಹೀಗಾಗಿ ಹಬ್ಬಗಳು ಬಂದಾಗ ಮೋಜು, ಸಡಗರ, ಸಂಭ್ರಮ ಉತ್ಸಾಹ ಇತ್ಯಾದಿ ಹೆಚ್ಚುತ್ತವೆ. ಈ ಹಬ್ಬಗಳ ಆಚರಣೆಯೂ ಏಕತಾನತೆ ತರಿಸಿದರೆ ಅದರಲ್ಲಿ ಒಂದಿಷ್ಟು ವೈವಿಧ್ಯತೆ ಬೇಕೆನಿಸುತ್ತದೆ. ಪ್ರತಿ ವರ್ಷ ಹಬ್ಬಗಳು ಒಂದೇ ರೀತಿಯಲ್ಲಿ ಬಂದು ಹೋಗಿಬಿಡುತ್ತವೆ. ಎಷ್ಟೋ ಸಲ ಈ ಗಡಿಬಿಡಿಗಳ ಮಧ್ಯೆ ನಮ್ಮ ಪ್ರಿಯ ಬಂಧುಮಿತ್ರರು, ಆಪ್ತೇಷ್ಟರನ್ನು ಸರಿಯಾಗಿ ವಿಚಾರಿಸಕೊಳ್ಳಲಿಕ್ಕೇ ಆಗುವುದಿಲ್ಲ. ಈ ಸಲದಿಂದ ಹಬ್ಬಗಳಲ್ಲಿ ಒಂದಷ್ಟು ವಿಭಿನ್ನತೆ ತಂದುಕೊಂಡರೆ ಹೇಗೆ?

ಸಾಮಾನ್ಯವಾಗಿ ನೆಂಟರಿಷ್ಟರು, ಫ್ಯಾಮಿಲಿ ಫ್ರೆಂಡ್ಸ್, ಆತ್ಮೀಯರೆಲ್ಲ ಒಂದೆಡೆ ಕಲೆತು ಪಾರ್ಟಿ ತರಹ ಏರ್ಪಡಿಸಿ, ಹೆಚ್ಚಿನ ಮನರಂಜನೆಗೆ ಒತ್ತುಕೊಟ್ಟರೆ ಹಬ್ಬಗಳು ಮತ್ತಷ್ಟು ರಂಗೇರುತ್ತವೆ, ವಾತಾವರಣ ಕಳೆಗಟ್ಟುತ್ತದೆ. ಇಂದಿನ ದಿನಗಳಲ್ಲಿ ಎಲ್ಲೆಡೆ ವಿಭಕ್ತ ಕುಟುಂಬಗಳೇ ತುಂಬಿರುವಾಗ, ಒಬ್ಬರೇ ಮನೆಯವರು ಪಾರ್ಟಿ ಅರೇಂಜ್‌ ಮಾಡುವುದು ಕಷ್ಟ. ಹೀಗಾಗಿ ನಾಲ್ಕಾರು ಜನ ಕೈಗೂಡಿಸಿದರೆ ಬಹಳ ಚೆನ್ನಾಗಿರುತ್ತದೆ, ಅಲ್ಲವೇ?

ಹೀಗಾಗಿ ಹಬ್ಬದ ನೆಪದಲ್ಲಿ ಒಂದು ಪಾರ್ಟಿ ಆಯೋಜಿಸಲು ಸಿದ್ಧರಾಗಿ. ಯಾವುದೇ ಹಬ್ಬ ಇರಬಹುದು, ಅದಕ್ಕೆ ಸಂಬಂಧಿಸಿದಂತೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅತಿ ಮುಖ್ಯ. ನಿಮಗೆ ಬೇಕಾದ ಆಪ್ತೇಷ್ಟರಿಗೆ ಈ ಕುರಿತಾಗಿ ಮುಂಚೆಯೇ ಮಾಹಿತಿ ನೀಡಿ ಪಾರ್ಟಿಗಾಗಿ ಸಿದ್ಧಪಡಿಸಿಕೊಳ್ಳಿ. ಯಾವುದೇ ಪಾರ್ಟಿ ಇರಲಿ, ಅಲ್ಲಿ ಮನರಂಜನೆಗೆ ಮಹತ್ವ ಹೆಚ್ಚು. ಹೀಗಾಗಿ ಅಂತ್ಯಾಕ್ಷರಿ, ಲಘು ಸಂಗೀತ, ಹಾಡುಗಾರಿಕೆ, ಗಾನಬಜಾನಾ, ಲೈಟ್‌ ಡ್ಯಾನ್ಸ್, ನೃತ್ಯ ಇತ್ಯಾದಿಗಳನ್ನು ಏರ್ಪಡಿಸಬಹುದು. ಇತ್ತೀಚೆಗಂತೂ ನವರಾತ್ರಿಯ ಸಂದರ್ಭದಲ್ಲಿ ಒಂದು ಪುಟ್ಟ ಹಾಲ್ ಬುಕ್‌ ಮಾಡಿ, ಗುಜರಾತಿ ಶೈಲಿಯ ಗರ್ಭಾ ನೃತ್ಯಗಳನ್ನು ಏರ್ಪಡಿಸುವುದು ನಮ್ಮ ದ. ಭಾರತದಲ್ಲೂ ಬಲು ಸಾಮಾನ್ಯವಾಗಿಹೋಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್‌, ಕೊಚ್ಚಿನ್‌ ಗಳಲ್ಲಿ ಎಲ್ಲೆಡೆ ಇದು ರೂಢಿಗೆ ಬಂದಿದೆ. ಒಟ್ಟಾರೆ ಇಂಥ ಗೆಟ್‌ ಟು ಗೆದರ್‌ ಪಾರ್ಟಿಗಳಲ್ಲಿ ಮನರಂಜನೆ ಅಂದ ಮೇಲೆ ಹಾಡು, ನೃತ್ಯ, ಮೋಜುಮಸ್ತಿ ಇರಲೇಬೇಕು. ಇದಕ್ಕಾಗಿ ನಿಮಗೆ ಬೇಕಾದ ಪಾರ್ಟ್‌ ನರ್‌ ಅಥವಾ ಗುಂಪಿನ ಸದಸ್ಯರನ್ನು ಆರಿಸಿಕೊಂಡು ಹಾಡುನೃತ್ಯಗಳಿಗೆ  ಬೇಕಾದ ಅಭ್ಯಾಸ ನಡೆಸಿರಿ.  ಬನ್ನಿ, ಇಂಥ ಮೋಜಿನ ಪಾರ್ಟಿಗಳನ್ನು ಹೇಗೆ ಆಯೋಜಿಸುವುದೆಂದು ವಿವರವಾಗಿ ತಿಳಿಯೋಣ :

ವೆನ್ಯು ಅಥವಾ ಸ್ಥಳದ ಆಯ್ಕೆ : ಎಲ್ಲಕ್ಕೂ ಮೊದಲು ಪಾರ್ಟಿ ಯಾವಾಗ, ಎಲ್ಲಿ ಅರೇಂಜ್‌ ಮಾಡಬೇಕು ಅದಕ್ಕೆ ಎಷ್ಟು ಜನ ಬರುತ್ತಾರೆ ಎಂಬುದನ್ನು ಗುರುತಿಸಿಡಿ. ಅತಿಥಿಗಳ ಸಂಖ್ಯೆಯನ್ನು ಆಧರಿಸಿ ಪಾರ್ಟಿಯನ್ನು ಮನೆಯಲ್ಲೇ ಏರ್ಪಡಿಸುವುದೇ, ಶಾಮಿಯಾನಾ ಹಾಕಿ ಅಂಗಳಕ್ಕೂ ವಿಸ್ತರಿಸುವುದೇ ಅಥವಾ ಮಿನಿ ಹಾಲ್ ಬೇಕಾಗಬಹುದೇ ಎಂಬುದನ್ನು ನೋಡಿಕೊಳ್ಳಿ. ಅಗತ್ಯಬಿದ್ದರೆ ಪಾರ್ಟಿಗಾಗಿ ನಿಮ್ಮ ಇಡೀ ಬೀದಿಯನ್ನು ಸಹ ಬಳಸಿಕೊಳ್ಳಬಹುದು, ಆಗ ಅಕ್ಕಪಕ್ಕದವರ ನೆರವು ಸಿಗುತ್ತದೆ.

ಅಗತ್ಯದ ಲಿಸ್ಟ್ : ಪಾರ್ಟಿಗೆ ಬರಲಿರುವ ಅತಿಥಿಗಳ ಒಂದು ಪಟ್ಟಿ ತಯಾರಿಸಿ. ಪಾರ್ಟಿಗೆ 2-3 ದಿನಗಳ ಮೊದಲೇ ಅತಿಥಿಗಳಿಗೆ sms ಸಂದೇಶ ಅಥಾ ಕರೆ ಮಾಡಿ ಆಮಂತ್ರಣ ನೀಡಿ.

ಬಜೆಟ್‌ : ಇದಕ್ಕೆ ಮೊದಲು ಪಾರ್ಟಿಗಾಗಿ ನೀವು ಎಷ್ಟು ಖರ್ಚು ಮಾಡಲು ಬಯಸುತ್ತೀರಿ ಎಂಬುದನ್ನು ನಿಗದಿಪಡಿಸಿಕೊಳ್ಳಿ. ಅದಕ್ಕೆ ಅನುಸಾರವಾಗಿ ಬಾಕಿ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಳ್ಳಬಹುದಾಗಿದೆ. ಮೆನು, ಅಡುಗೆ ಮನೆಯಲ್ಲೋ ಹೊರಗಿನಿಂದ ತರಿಸುವುದೋ, ಮ್ಯೂಸಿಕ್‌ ಸಿಸ್ಟಂ, ಅಲಂಕಾರ, ರಿಟರ್ನ್‌ ಗಿಫಟ್ಸ್ ಇತ್ಯಾದಿ.

ಮೆನು : ಪಾರ್ಟಿಗೆ ಏನೆಲ್ಲ ತಿನಿಸುಗಳು ಬೇಕಾಗುತ್ತವೆ ಎಂಬುದನ್ನು ಮೊದಲೇ ನಿರ್ಧರಿಸಬೇಕು. ಅಗತ್ಯವೆನಿಸಿದರೆ, ನೀವು ಮನೆಯಲ್ಲೇ 2-3 ಬಗೆಯ ತಿನಿಸುಗಳನ್ನು ತಯಾರಿಸಿ, ನಿಮ್ಮ ಪ್ರತಿಯೊಬ್ಬ ಗೆಳತಿಯನ್ನೂ 1-1 ಡಿಶ್‌ ಮಾಡಿ ತರುವಂತೆ ಹೇಳಬಹದು. ಅನುಕೂಲವಿದ್ದರೆ ಇಡೀ ಮೆನು ಹೊರಗಿನಿಂದ ತರಿಸಬಹುದು. ಗೆಳತಿಯರೆಲ್ಲ 1-1 ಡಿಶ್‌ ತರುವುದರಿಂದ, ಪಾರ್ಟಿಯ ತಿನಿಸುಗಳಲ್ಲಿ ಖಂಡಿತಾ ಬೊಂಬಾಟ್‌ ವೈವಿಧ್ಯತೆ ಇರುತ್ತದೆ. ಜೊತೆಗೆ ಇಡೀ ದಿನ ನೀವು ಅಡುಗೆಮನೆಯಲ್ಲೇ ಕೊಳೆಯುವ ಕಷ್ಟ ತಪ್ಪುತ್ತದೆ. ನೀವು ಬೇಗ ನೀಟಾಗಿ ಸಿದ್ಧರಾಗಿ, ಅತಿಥಿಗಳ ಜೊತೆ ಹೆಚ್ಚು ಸಮಯ ಕಳೆಯಬಹುದು. ನೀವೇನಾದರೂ ಪೂಲ್ ‌ಪಾರ್ಟಿ (ಬಳಿಯಲ್ಲೇ ಸ್ವಿಮ್ಮಿಂಗ್‌ ಪೂಲ್ ಇರಬೇಕಾಗುತ್ತದೆ) ಅರೇಂಜ್‌ ಮಾಡಿದ್ದರೆ, ಅದಕ್ಕೆ ತಕ್ಕಂತೆ, ಪೂಲ್ ‌ಬದಿಯಲ್ಲೇ ತಿನಿಸುಗಳನ್ನು ಒದಗಿಸಬೇಕಾಗುತ್ತದೆ.

ಅವಶ್ಯಕ ಥೀಮ್ : ಅಗತ್ಯವೆನಿಸಿದರೆ ನೀವು ನಿಮ್ಮ ಪಾರ್ಟಿಯನ್ನು ಥೀಮ್ ಪಾರ್ಟಿ ಸಹ ಮಾಡಿಕೊಳ್ಳಬಹುದು. ಇದರಲ್ಲಿ ಎಂಥ ಥೀಮ್ ಇರಬೇಕೆಂದು ಮೊದಲೇ ನಿರ್ಧರಿಸಿ. ಅಂದರೆ ಎಥ್ನಿಕ್‌ (ಸಾಂಪ್ರದಾಯಿಕ) ಥೀಮ್, ವೆಸ್ಟರ್ನ್‌, ಮುಘಲೈ, ರಾಕ್‌, ಗುಜರಾತಿ (ಗರ್ಭಾ ಥೀಮ್) ಇತ್ಯಾದಿ ಯಾವುದೇ ಥೀಮ್ ಆಗಬಹುದು. ಇದರಲ್ಲಿ ಪಾಲ್ಗೊಳ್ಳುವ ಎಲ್ಲಾ ಅತಿಥಿಗಳ ಡ್ರೆಸ್‌ ಕೋಡ್ ಹಾಗೂ ಪಾರ್ಟಿ ಅಲಂಕಾರ ಥೀಮ್ ಗೆ ಅನುಸಾರವಾಗಿರಬೇಕು.

ಡ್ರೆಸ್ಕೋಡ್‌ : ಪಾರ್ಟಿಗಾಗಿ ಯಾವುದೇ ಡ್ರೆಸ್‌ ಕೋಡ್‌ ಇರಿಸಿಕೊಳ್ಳಬಹುದು (ಉದಾ: ಎಲ್ಲರೂ ಸೀರೆ ಉಟ್ಟಿರಬೇಕು ಅಥವಾ ಸಲ್ವಾರ್‌ ಕುರ್ತಾ ಅಥವಾ ಮಾಡ್‌ ಡ್ರೆಸ್‌). ಯಾವ ಜೋಡಿ ಹೆಚ್ಚು ಆಕರ್ಷಕವಾಗಿ ಎಲ್ಲರ ಗಮನಸೆಳೆಯುತ್ತಾರೋ ಅವರಿಗೆ ಬಹುಮಾನ ಸಹ ನೀಡಬಹುದು.

ಟೇಬಲ್ ಥೀಮ್ : ಟೇಬಲ್ ಸಿಂಗರಿಸಲು ಬ್ಲ್ಯಾಕ್‌, ಗೋಲ್ಡನ್‌, ಸಿಲ್ವರ್‌ ಥೀಮ್ ಬಹು ಆಕರ್ಷಕವೆನಿಸುತ್ತದೆ. ಈ ಥೀಮ್ ಪ್ರಕಾರ, ಟೇಬಲ್ ಅಲಂಕರಿಸುವಾಗ ಪ್ರತಿ ವಸ್ತು ಬ್ಲ್ಯಾಕ್‌, ಗೋಲ್ಡನ್‌ ಅಥವಾ ಸಿಲ್ವರ್‌ ಆಗಿರಬೇಕು. ಎಲ್ಲಕ್ಕೂ ಮೊದಲು ಬ್ಲ್ಯಾಕ್‌ ಕಲರ್‌ ನ ಟೇಬಲ್ ಕ್ಲಾತ್‌ ನ್ನು ಗೋಲ್ಡನ್‌ ಬಾರ್ಡರ್‌ ನಿಂದ ಅಲಂಕರಿಸಬೇಕು. ಥೀಮ್ ಪ್ರಕಾರ ಕಪ್ಪು ಅಥವಾ ಗೋಲ್ಡನ್‌ ಕ್ರಾಕರಿ ಸಿಗದಿದ್ದರೆ ಗಾಜಿನ ಪಾರದರ್ಶಕ ಕ್ರಾಕರಿಯನ್ನೇ ಬಳಸಿಕೊಳ್ಳಿ. ಚಮಚ, ಚಾಕು, ಪೇರ್ಕ್‌ ಇತ್ಯಾದಿಗಳು ಗೋಲ್ಡನ್‌, ಸಿಲ್ವರ್‌ ಅಥವಾ ಸ್ಟೀಲಿನದ್ದನ್ನೇ ಆರಿಸಿ.

ನ್ಯಾಪ್ಕಿನ್‌ : ನೀವು ಬ್ಲ್ಯಾಕ್‌ ನ್ಯಾಪ್‌ ಕಿನ್‌ ಬಳಸುತ್ತಿದ್ದರೆ, ಅದನ್ನು ಗೋಲ್ಡನ್‌ ಪೇಪರ್‌ ನಲ್ಲಿ ಫೋಲ್ಡ್ ಮಾಡಿ ಪ್ಲೇಟ್‌ ನಲ್ಲಿಡಿ. ನೀವು ಸಿಲ್ವರ್‌ ಅಥವಾ ಗೋಲ್ಡನ್‌ ನ್ಯಾಪ್‌ ಕಿನ್‌ ಬಳಸುತ್ತಿದ್ದರೆ, ಅದನ್ನು ಬ್ಲ್ಯಾಕ್‌ ಪೇಪರ್‌ ನಲ್ಲಿ ಫ್ಲೋಲ್ಡ್ ಮಾಡಿ ಪ್ಲೇಟ್‌ ನಲ್ಲಿಡಿ.

ಪ್ಲೇಸ್ಕಾರ್ಡ್‌ : ವೀಳ್ಯದೆಲೆಯ ಮೇಲೆ ಸಿಲ್ವರ್‌ ಗೋಲ್ಡನ್‌ ಬಣ್ಣಗಳಿಂದ ಚಿತ್ತಾರ ಬಿಡಿಸಿ, ಪಾರ್ಟಿಗೆ ಬರಲಿರುವ ಪ್ರತಿಯೊಬ್ಬ ಅತಿಥಿಯ ಹೆಸರನ್ನು ಅದರಲ್ಲಿ ಮೂಡಿಸಿ, ಒಂದು ಅತ್ಯಾಕರ್ಷಕ ಪ್ಲೇಸ್‌ ಕಾರ್ಡ್‌ ಮಾಡಿಕೊಳ್ಳಿ ಹಾಗೂ ಡೈನಿಂಗ್‌ ಟೇಬಲ್ ಬಳಿ ಅತಿಥಿಗಳು ಕೂರುವೆಡೆ, ಒಂದೊಂದು ಪ್ಲೇಸ್‌ ಕಾರ್ಡ್‌ ಇರಿಸಿಬಿಡಿ. ಅವರವರ ಹೆಸರು ನೋಡಿಕೊಂಡು ಅತಿಥಿಗಳು ಕೂರಲು ಅನುಕೂಲವಾಗುತ್ತದೆ.

ಸೆಂಟರ್ಪೀಸ್‌ : ಇದಕ್ಕಾಗಿ ನೀವು ಗೋಲ್ಡನ್‌ ಅಥವಾ ಸಿಲ್ವರ್‌ ಕಲರ್‌ ನ ಯಾವುದಾದರೂ ಹಣ್ಣಿನ ಬುಟ್ಟಿ ಅಥವಾ ಬಟ್ಟಲನ್ನು ಬಳಸಬಹುದು. ಈ ಬುಟ್ಟಿಯಲ್ಲಿ ಸೇಬನ್ನು ಗೋಲ್ಡನ್‌ ಪೇಪರ್‌ ನಲ್ಲಿ ರಾಪ್‌ ಮಾಡಿ ಇಡಬಹುದು.

ಕ್ಯಾಂಡಲ್ ಅರೇಂಜ್ಮೆಂಟ್‌ : ಪ್ರತಿ ಟೇಬಲ್ ನಲ್ಲೂ ಅಲ್ಲಲ್ಲಿ ವಿಭಿನ್ನ ಡಿಸೈನಿನ ಗೋಲ್ಡನ್‌ ಹಾಗೂ ಸಿಲ್ವರ್‌ ಕ್ಯಾಂಡಲ್ಸ್ ಸಿಗಿಸಿಡಿ. ಇಡೀ ಟೇಬಲ್ ನ್ನು ಸಣ್ಣಪುಟ್ಟ ಹೂಗಳಿಂದಲೂ ಸಿಂಗರಿಸಬಹುದು.

SP004-105439-pih

ಪಾರ್ಟಿಗೆ ಹೊಸ ರಂಗು ನೀಡಿ : ಪಾರ್ಟಿಯನ್ನು ಇನ್ನಷ್ಟು ವೈಭವಯುತಗೊಳಿಸಲು ಅಂತ್ಯಾಕ್ಷರಿ, ಹಾಸ್ಯ ಚಟಾಕಿಗಳು, ಫ್ಯಾನ್ಸಿ ಡ್ರೆಸ್‌, ಏಕಪಾತ್ರಾಭಿನಯ, ಡ್ಯಾನ್ಸ್ ಗಳ ಜೊತೆಗೆ ಎಲ್ಲ ವಯಸ್ಸಿನವರೂ ಎಂಜಾಯ್‌ ಮಾಡಬಹುದಾದಂಥ, `ಮ್ಯೂಸಿಕ್‌ ಚೇರ್‌’ ಇತ್ಯಾದಿ ಪಾರ್ಟಿ ಗೇಮ್ಸ್ ಏರ್ಪಡಿಸಿ. ಮತ್ತೊಂದು ಮುಖ್ಯ ವಿಷಯ ನೆನಪಿಡಿ, ಪಾರ್ಟಿಗೆ ಬರುವ ಮಕ್ಕಳಿಗಾಗಿಯೇ ವಿವಿಧ ಮನರಂಜನೆಯ ಕಾರ್ಯಕ್ರಮಗಳಿರಲಿ. ಅದರಲ್ಲಿ ಮಕ್ಕಳು ಮೆಚ್ಚುವ ಆಟಗಳೂ ಇರಲಿ. ಹಿರಿಯರಿಗೆ ಕೊಡದಿದ್ದರೂ ಸರಿ, ಮಕ್ಕಳಿಗೆ ಅಗತ್ಯವಾಗಿ ರಿಟರ್ನ್‌ ಗಿಫ್ಟ್ ಕೊಡಿ.

ಮ್ಯೂಸಿಕ್‌, ಡ್ಯಾನ್ಸ್, ಮೋಜು, ಮಜಾ : ಮ್ಯೂಸಿಕ್‌ ಸಿಸ್ಟಮ್ ನಿಂದ ಉತ್ತಮ ಹಾಡುಗಳನ್ನು ಪ್ಲೇ ಮಾಡಿ. ಅದಕ್ಕೆ ಸ್ಟೆಪ್ಸ್ ಹಾಕುತ್ತಾ ಯುವ ಜೋಡಿಗಳು ನರ್ತಿಸಲು, ನಡುನಡುವೆ ಹೋಸ್ಟ್ ಡೀಜೆ ಎಫೆಕ್ಟ್ ಸಹ ನೀಡಬಹುದು. ಇಂದಿನ ಆಧುನಿಕ ದಿನಗಳ ಪಾರ್ಟಿಗಳಂತೂ ಮ್ಯೂಸಿಕ್‌ ಡ್ಯಾನ್ಸ್ ಗಳಿಲ್ಲದಿದ್ದರೆ ಅಪೂರ್ಣವೆಂದೇ ಅರ್ಥ. ಇದಕ್ಕಾಗಿ ಉತ್ತಮ ಗೀತೆಗಳ ಆಯ್ಕೆ ಮಾಡಿ, ಅದು ಬಂದವರಿಗೆ ಮೋಜುಮಜಾ ಹೆಚ್ಚಿಸಂತಿರಬೇಕೇ ಹೊರತು ಯಾರಿಗೂ ಕಿರಿಕಿರಿ ಅಥವಾ ಮುಜುಗರ ತರಿಸುವಂತಿರಬಾರದು. ಕಾಲಕ್ಕೆ ತಕ್ಕಂತೆ ಹಾಡು ಕುಣಿತಗಳ ಆಯ್ಕೆ ಇರಲಿ.

ನವರಾತ್ರಿಯ ಗರ್ಬಾ  ನೃತ್ಯಗಳು : ನವರಾತ್ರಿಯ ಸಾಲು ಸಾಲು ದಿನಗಳ ಹಬ್ಬದ ಸಂದರ್ಭದಲ್ಲಿ ಡ್ಯಾನ್ಸ್ ಕುರಿತು ಹೇಳುವಾಗ, ಗುಜರಾತಿ ಗರ್ಬಾ ನೃತ್ಯಗಳ ಕುರಿತು ಹೇಳಲೇಬೇಕಾಗುತ್ತದೆ. ಉ. ಭಾರತ ಮಾತ್ರವಲ್ಲದೆ ಈಗ ದೇಶಾದ್ಯಂತ ವ್ಯಾಪಕವಾಗಿ ಹರಡಿರುವ ಈ ಗರ್ಬಾ ನೃತ್ಯಗಳ ಸೊಗಸನ್ನು ನೋಡಿಯೇ ತಣಿಯಬೇಕು. ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಗರ್ಬಾ ನೃತ್ಯಗಳ ಆಯೋಜನೆಗಾಗಿ ಖಂಡಿತಾ ಮನೆ ಮುಂದೆ ವಿಸ್ತಾರವಾದ ಜಾಗವಿರಬೇಕು ಅಥವಾ ಹಾಲ್ ‌ಬುಕ್‌ ಮಾಡಿದ್ದರೆ ಆದೀತು. ಅಗತ್ಯವೆನಿಸಿದಲ್ಲಿ ಮನೆಯ ಮುಂದಿನ ಲಾನ್‌, ಅಂಗಳ, ಟೆರೇಸ್‌ ಮೇಲೆ ಸಹ ಏರ್ಪಡಿಸಬಹುದು. ಇದರಲ್ಲಿ ಹೆಚ್ಚು ಆಸಕ್ತಿ ಇರುವಂಥ ಜೋಡಿಗಳ ಹೆಸರು ನೋಟ್‌ ಮಾಡಿಕೊಂಡು, ಇದಕ್ಕೆ ಬೇಕಾಗುವ ರೆಡಿಮೇಡ್‌ ಡ್ರೆಸ್‌ ಗಳನ್ನು ಮೊದಲೇ ಸಿದ್ಧಪಡಿಸಿ ಇಟ್ಟುಕೊಳ್ಳಲು ಹೇಳಿ. ಹಿಂದಿನ ವಾರದಿಂದಲೇ ನೃತ್ಯಾಭ್ಯಾಸ ಮಾಡಿಕೊಳ್ಳುವುದು ಲೇಸು. ಇದಕ್ಕೆ ಅಗತ್ಯವಿರುವ ಸಿ.ಡಿ. ಆರಿಸಿಕೊಂಡು, ಹಾಡುಗಳನ್ನು ಪ್ಲೇ ಮಾಡಿ, ನೃತ್ಯ ಆರಂಭಿಸಲು ಹೇಳಿ. ಇದರ ಜೊತೆಗೆ ನಮ್ಮ ಗ್ರಾಮೀಣ ಕೋಲಾಟ, ಜಾನಪದ ನೃತ್ಯಗಳು ಇತ್ಯಾದಿಗಳೂ ಸೇರಿದರೆ ಹಬ್ಬಗಳಿಗೆ ಹೆಚ್ಚಿನ ಜೀವಂತಿಕೆ ಕೂಡಿಕೊಳ್ಳುತ್ತದೆ. ಈ ಸಲದ ಹಬ್ಬಗಳಿಂದ ಇಂಥ ವೈವಿಧ್ಯಮಯ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ನೀವು ಹೊಸತನ ರೂಢಿಸಿಕೊಳ್ಳಬಹುದು. ಏನಂತೀರಿ?

ಶ್ರೀಲಕ್ಷ್ಮಿ ಜೈನ್‌. 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ