“ಅಯ್ಯೋ, ಅದ್ಯಾವ ಕೇಡುಗಾಲವೋ ಏನೋ ಈ ಅನಿಷ್ಟವನ್ನು ತಂದು ಮನೆ ತುಂಬಿಸಿಕೊಂಡೆ. ಇದೊಂದು ಬಂಜರು ಭೂಮಿ ಎಂದು ನನಗೆ ಆವಾಗಲೇ ಗೊತ್ತಾಗಲಿಲ್ಲವಲ್ಲ! ಒಂದಕ್ಕಿಂತ ಒಂದು ಮಿಗಿಲಾದ ಸಂಬಂಧಗಳು ಬಂದಿದ್ದವು. ಅವನ್ನು ಬಿಟ್ಟು ಇದನ್ನು ಕಟ್ಟಿಕೊಂಡೆ. ಐದು ವರ್ಷಗಳೇ ಕಳೆದವು. ಗೊಡ್ಡು ಮುಂದೇಡು, ಒಂದು ಮಗುವನ್ನೂ  ಹೆರಲಿಲ್ಲ…..” ಎಂದು ನನ್ನ ಅತ್ತೆ ನಿರಂತರವಾಗಿ ಹಲುಬುತ್ತಲೇ ಇರುತ್ತಿದ್ದಳು. ಆ ಕೊಂಕು ಮಾತುಗಳನ್ನು ಕೇಳಿ ನನ್ನ ಕಿವಿಯಲ್ಲಿ ಕಾದ ಸೀಸ ಹೊಯ್ದಂತಾಗುತ್ತಿತ್ತು.

ಇದೇನು ಮೊದಲಲ್ಲ. ಮದುವೆಯಾದ ಮಾರನೇ ವರ್ಷದಿಂದಲೇ ಇಂತಹ ಕರ್ಣ ಕಠೋರ ಅಪಮಾನಭರಿತ ನುಡಿಗಳನ್ನು ಕೇಳುತ್ತಲೇ ಇದ್ದೇನೆ. ಶಿವರಾಜ್‌ ಅವರ ಏಕಮಾತ್ರ ಸುಪುತ್ರ ಹಾಗೂ ನನ್ನ ಪತಿ. ನನ್ನ ಮಾನವರಂತೂ ಬಹುದಿನಗಳ ಹಿಂದೆಯೇ ತೀರಿಹೋಗಿದ್ದರು. ಮನೆಯಲ್ಲಿ ಅತ್ತೆ ಮತ್ತು ಶಿವರಾಜ್‌ ರನ್ನು ಹೊರತುಪಡಿಸಿದರೆ ಬೇರಾರೂ ಇರಲಿಲ್ಲ. ಅತ್ತೆಗೆ ಅರ್ಜೆಂಟಾಗಿ ಮೊಮ್ಮಗು ಬೇಕಾಗಿತ್ತು. ಹೇಗಾದರೂ ಸರಿ ನಾನು ಅವರಿಗೆ ಮೊಮ್ಮಗು ಹೆತ್ತು ಕೊಡಬೇಕಿತ್ತು.

ನಾನೂ ಎರಡು ಬಾರಿ ಗೈನಕಾಲಜಿಸ್ಟ್ ಬಳಿ ಪರೀಕ್ಷೆ ಮಾಡಿಸಿಕೊಂಡಿದ್ದೆ. ಎಲ್ಲಾ ರೀತಿಯಲ್ಲೂ ಆರೋಗ್ಯಯುತವಾಗಿರುವುದು ಸಾಬೀತಾಗಿತ್ತು. ಶಿವರಾಜ್‌ ಗೂ ಸಾಕಷ್ಟು ತಿಳಿಹೇಳಿ ಡಾಕ್ಟರ್‌ ಬಳಿ ಕರೆದುಕೊಂಡು ಹೋಗಿದ್ದೆ. ಅವರಲ್ಲೂ ಏನೂ ದೋಷವಿಲ್ಲ ಎಂದು ವರದಿ ಬಂದಿತ್ತು.

ಡಾಕ್ಟರೇ ನಮಗೆ ಮಾರ್ಗದರ್ಶನ ನೀಡಿದ್ದರು, “ಇತ್ತೀಚೆಗೆ ಹೀಗಾಗುವುದು ತುಂಬಾ ಸಾಮಾನ್ಯವಾಗಿದೆ. ಯಾವುದೇ ಕಾರಣಕ್ಕೂ ನೀವು ಆತಂಕಪಡುವ ಅಗತ್ಯವಿಲ್ಲ. ಅತಿ ಶೀಘ್ರ ಆ ನೈಸರ್ಗಿಕ ಪ್ರಕ್ರಿಯೆ ನಿಮ್ಮಲ್ಲೂ ಚಿಗುರಲಿ,” ಎಂದು ಹಾರೈಸಿದ್ದರು ಕೂಡ.

ಡಾಕ್ಟರ್‌ ರ ಮಾತುಗಳೇನೊ ನಮ್ಮಿಬ್ಬರಿಗೂ ಅರ್ಥವಾಗಿದ್ದವು. ಆದರೆ ನಮ್ಮ ಅತ್ತೆಗೆ ಅರ್ಥವಾಗುವಂತೆ ಹೇಳುವವರು ಯಾರು? ಪ್ರತಿದಿನ ಅವರ ವಕ್ರದೃಷ್ಟಿ ನನ್ನ ಮೇಲೆಯೇ ಭುಸುಗುಟ್ಟುತ್ತಿತ್ತು. ಅವರ ದೃಷ್ಟಿಯಲ್ಲಿ ನಾನೇ ಅಪರಾಧಿಯಾಗಿದ್ದೆ. ಇತ್ತೀಚೆಗಂತೂ, ತನ್ನ ವಂಶ ಬೆಳೆಯಬೇಕೆಂದರೆ ಇವಳಿಗೆ ನನ್ನ ಮಗನಿಂದ ಸೋಡಾ ಚೀಟಿ ಕೊಡಿಸಿ ಬೇರೆ ಸೊಸೆಯನ್ನು ತರುವೆ ಎಂದು ಬಹಿರಂಗವಾಗಿಯೇ ಹೇಳಿಕೊಂಡು ಓಡಾಡತೊಡಗಿದ್ದರು.

ಅವರ ಇಂತಹ ಬಿರುನುಡಿಗಳಿಂದಾಗಿ ನನ್ನ ತಲೆಕೆಟ್ಟು ಹೋಗುತ್ತಿತ್ತು. ಹೀಗಿರುವಾಗ ಕೆಲವೊಮ್ಮೆ ಶಿವರಾಜ್‌ ನನ್ನನ್ನು ಸಂತೈಸುತ್ತಿದ್ದರು, “ಅಮ್ಮನ ಮಾತಿಗೆ ಕಿವಿಗೊಟ್ಟು ನಿನ್ನ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳಬೇಡ. ಅಮ್ಮನಿಗೆ ವಟಗುಟ್ಟುವುದೇ ಒಂದು ಅಭ್ಯಾಸ.”

“ನಿಮಗೇನೂ ಚಿಂತೆ ಇಲ್ಲ ಬಿಡಿ, ದಿನಪೂರ್ತಿ ಆಫೀಸಿನಲ್ಲಿರುತ್ತೀರಿ. ಅವರ ಅಣಕದ ಮಾತುಗಳನ್ನು ಕೇಳುವುದೇ ನನ್ನ ಕೆಲಸವಾಗಿಬಿಟ್ಟಿದೆ. ಇತ್ತೀಚೆಗಂತೂ ನಮಗಿಬ್ಬರಿಗೂ ಡೈವೋರ್ಸ್‌ ಕೊಡಿಸಿ ನಿಮಗೆ ಬೇರೆ ಮದುವೆ ಮಾಡುವ ಮಾತುಗಳನ್ನೂ ಆಡುತ್ತಿದ್ದಾರೆ.”

“ರಾಧಿಕಾ, ನೀನು ಚಿಂತಿಸಬೇಡ. ನಾನು ನಿನಗೆ ಡೈವೋರ್ಸ್‌ ಕೊಡೋದಿಲ್ಲ, ಬೇರೆ ಮದುವೆಯ ಆಲೋಚನೆಯೂ ನನಗಿಲ್ಲ. ಏಕೆಂದರೆ, ನಿನ್ನಲ್ಲೇನೂ ಕೊರತೆಯಿಲ್ಲ ಅಂತ ನನಗೆ ನಂಬಿಕೆ ಇದೆ.”

ಒಂದು ಸಲ ನಮ್ಮ ಊರಿಗೆ ಒಬ್ಬ ಬಾಬಾ ಬಂದಿದ್ದ. ಅವನು ಅಧೂತ ಸನ್ಯಾಸಿ ಎಂದೇ ಪ್ರಸಿದ್ಧಿ ಪಡೆದವನಂತೆ. ಆತ ನೀಡುವ ಭಸ್ಮ ಹಾಲಿನಲ್ಲಿ ಬೆರೆಸಿ ಕುಡಿದರೆ ಬಂಜೆಯರಿಗೆ ಸಂತಾನಭಾಗ್ಯ ಖಚಿತವೆಂದೂ ಹೇಳಲಾಗುತ್ತಿತ್ತು.

ಇಂತಹ ವಿಚಾರಗಳಲ್ಲಿ ನನಗೆ ಎಳ್ಳಷ್ಟೂ ಭರವಸೆಯಿರಲಿಲ್ಲ. ಆದರೆ ನಮ್ಮತ್ತೆ ಇಂತಹ ಸುದ್ದಿಗಳನ್ನು ಕಣ್ಣು ಮುಚ್ಚಿಕೊಂಡು ನಂಬಿಬಿಡುತ್ತಾರೆ. ಅವರ ಬಲವಂತಕ್ಕಾಗಿ ನಾನೂ ಆ ಢೋಂಗಿ ಬಾಬಾನನ್ನು ನೋಡಲು ತೆರಳಬೇಕಾಯಿತು.

ಆ ಬಾಬಾ ಸುಮಾರು 30-35 ವರ್ಷ ವಯಸ್ಸಿನವನಿರಬೇಕು. ತುಂಬಾ ಕಟ್ಟುಮಸ್ತಾದ ಅಜಾನುಬಾಹು ಆಗಿದ್ದ. ನನ್ನ ಅತ್ತೆ ಅವನ ಪಾದ ಮುಟ್ಟಿ ನಮಸ್ಕರಿಸಿ, ಕಣ್ಣಿಗೊತ್ತಿಕೊಂಡು ನನಗೂ ನಮಸ್ಕರಿಸಲು ಹೇಳಿದರು. ಅವನು ನನ್ನ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸಿದ. ಆಶೀರ್ವಾದ ಮಾಡುವ ನೆಪದಲ್ಲಿ ತಲೆಯ ಮೇಲೆ ಕೈಯಾಡಿಸಿದ ರೀತಿಯಲ್ಲೇ ಅವನೊಬ್ಬ ಢೋಂಗಿ ಮತ್ತು ಧೂರ್ತ ಮನುಷ್ಯ ಎಂದು ನನಗೆ ಅರಿವಾಗಿಬಿಟ್ಟಿತು.

ಅವನು ನನ್ನ ಅತ್ತೆಗೆ ಇಲ್ಲಿಯವರೆಗೂ ಬಂದಿರುವ ಕಾರಣ ಏನು ಎಂದು ಕೇಳಿದ. ಅತ್ತೆ ತಮ್ಮ ಸಮಸ್ಯೆ ಹೇಳಿಕೊಂಡ ರೀತಿಗೇ ಆ ಕಳ್ಳ ಸನ್ಯಾಸಿ ನನ್ನತ್ತ ವಾಂಛೆಯಿಂದ ಗುರಾಯಿಸತೊಡಗಿದ. ತದೇಕಚಿತ್ತನಾಗಿ ನನ್ನ ದೇಹಾದ್ಯಂತ ಗಮನಿಸುತ್ತ, “ನಿನ್ನ ಸೊಸೆಗೆ ಒಂದು ಹೆಣ್ಣು ಪಿಶಾಚಿ ಗಂಟು ಬಿದ್ದಿದೆ, ಹೀಗಾಗಿಯೇ ಅವಳಿಗಿನ್ನೂ ಸಂತಾನಭಾಗ್ಯ ಪ್ರಾಪ್ತಿಯಾಗಿಲ್ಲ. ಆ ಪಿಶಾಚಿ ಇವಳನ್ನು ಬಿಟ್ಟು ತೊಲಗುವವರೆಗೂ ಇವಳಿಗೆ ಮಕ್ಕಳಾಗಲಾರದು. ದುರ್ಗಾಪೂಜೆ ಒಂದೇ ಇದಕ್ಕೆ ಪರಿಹಾರ,” ಎಂದು ಹೇಳಿದ.

“ದುರ್ಗಾ ಪೂಜೆ ಹೇಗೆ ಮಾಡುವುದು ಬಾಬಾ?” ಎಂದು ಅತ್ತೆ ಉತ್ಸಾಹದಿಂದ ಕೇಳಿದರು.

“ದುರ್ಗಾ ಪೂಜೆ ಮಾಡಲೇಬೇಕು. ಪೂಜೆ ಮಾಡಿದ ನಂತರ ನಿನ್ನ ಸೊಸೆಗೆ ಮಂತ್ರಿಸಿದ ಭಸ್ಮ ನೀಡುವೆ. ಅದನ್ನು ಪ್ರತಿ ಅವಮಾಸ್ಯೆಯಂದು ಮಾತ್ರ ನೀಡಲಾಗುತ್ತದೆ. ಅಂದು ರಾತ್ರಿ 12 ಗಂಟೆಯ ನಂತರ, ಒಂದು ಲೋಟ ಹಾಲು ತೆಗೆದುಕೊಂಡು ಬರಬೇಕು. ಆ ಹಾಲಿನಲ್ಲಿ ಭಸ್ಮ ಬೆರೆಸಿ ನಮ್ಮ ಕಣ್ಣೆದುರೇ ಕುಡಿಯಬೇಕು. ಹೀಗೆ ಮಾಡಿದರಷ್ಟೇ ಆ ಪಿಶಾಚಿಯಿಂದ ಮುಕ್ತಿ ದೊರೆಯಬಲ್ಲದು.”

“ಬಾಬಾ ಇದಕ್ಕೆಲ್ಲ ಎಷ್ಟು ಖರ್ಚಾದೀತು?”

“ಜಾಸ್ತಿಯೇನಿಲ್ಲ, 7-8 ಸಾವಿರ ಅಷ್ಟೇ.”

ಆಗ ನನ್ನತ್ತ ತಿರುಗಿ ನೋಡಿದ ನಮ್ಮತ್ತೆಯ ನೋಟ ಇಷ್ಟೊಂದು ದುಡ್ಡನ್ನು ನೀನು ಹೊಂದಿಸಬಲ್ಲೆಯಾ? ಎಂದು ಕೇಳುವಂತಿತ್ತು. ನಾನೇ ನೋಟ ಬದಲಿಸಿ ಬಾಬಾನನ್ನೇ ನೋಡುತ್ತ, “ಬಾಬಾ, ನೀವು ನೀಡುವ ಭಸ್ಮದಿಂದ ಸಂತಾನ ಆಗಿಯೇ ಆಗುತ್ತದೆ ಎನ್ನಲು ಗ್ಯಾರಂಟಿ ಏನು?” ಎಂದು ಕೇಳಿಬಿಟ್ಟೆ. ಢೋಂಗಿ ಬಾಬಾನ ಮುಖ ಗಂಟಿಕ್ಕಿಕೊಂಡಿತು.

ಆತ ಕೋಪದಿಂದಲೇ, “ನೋಡಮ್ಮ, ಖರೀದಿಸಿದ ಮಾಲಿಗೆ ಗ್ಯಾರಂಟಿ ಕೊಡಲು ನಮ್ಮದು ಕಿರಾಣಿ ಅಂಗಡಿಯಲ್ಲ. ನಾನು ಅಧೂತ ಸನ್ಯಾಸಿ, ಸಾಕಷ್ಟು ಸಿದ್ಧಿ ಮಾಡಿಕೊಂಡಿದ್ದೇನೆ. ನಿನಗೆ ಸಂತಾನ ಭಾಗ್ಯ ಬೇಕಿದ್ದರೆ ನಾನು ಹೇಳಿದಂತೆ ಮಾಡು. ಇಲ್ಲವೆಂದರೆ ನೀವಿನ್ನು ಹೊರಡಬಹುದು.”

ಢೋಂಗಿ ಬಾಬಾನ ರೌದ್ರಾವತಾರ ಕಂಡ ಅತ್ತೆ ನನ್ನ ಮೇಲೆ ಕಿಡಿಕಾರತೊಡಗಿದರು. ಕೆಂಗಣ್ಣಿನಿಂದ ನನ್ನನ್ನು ಗುರಾಯಿಸಿ ಬಾಬಾನನ್ನು ಸಮಾಧಾನಪಡಿಸುವ ಧ್ವನಿಯಲ್ಲಿ, “ಕ್ಷಮಿಸಿ ಬಾಬಾ, ಅವಳಿನ್ನೂ ಚಿಕ್ಕವಳು. ಪ್ರಪಂಚ ಜ್ಞಾನ ಇಲ್ಲ, ನಿಮ್ಮ ಕುರಿತಾಗಿ ಏನೇನೂ ಗೊತ್ತಿಲ್ಲ ಅವಳಿಗೆ. ಪೂಜೆ ಯಾವಾಗ ಮಾಡುವುದೆಂದು ಹೇಳಿಬಿಡಿ ಬಾಬಾ.”

“ಅಮವಾಸ್ಯೆಯ ದಿನ ಸಾಯಂಕಾಲ 7 ಗಂಟೆಯ ನಂತರ ನಾವು ದುರ್ಗಾಮಾತೆಗೆ ಪೂಜೆ ಸಲ್ಲಿಸುತ್ತೇವೆ. ಆದರೆ ಒಂದು ವಿಷಯ ನೀನು ಗಮನದಲ್ಲಿಟ್ಟುಕೊಳ್ಳಬೇಕು.”

“ಏನು ಬಾಬಾ, ಆ ವಿಷಯ?”

“ಪೂಜೆ ಮಾಡುವ ವಿಚಾರ ಯಾರಿಗೂ ತಿಳಿಸಬಾರದು. ನಿನ್ನ ಮಗನಿಗೂ ಕೂಡ. ಅಕಸ್ಮಾತ್‌ ಯಾರಿಗಾದರೂ ತಿಳಿದದ್ದೇ ಆದರೆ ಮಾಡುವ ಪೂಜೆ ವ್ಯರ್ಥವಾಗುತ್ತದೆ!”

“ಹಾಗೇ ಆಗಲಿ, ಈ ವಿಚಾರವನ್ನು ಯಾರಿಗೂ ಬಹಿರಂಗಪಡಿಸುವುದಿಲ್ಲ,” ಎಂದು ಭರವಸೆ ಕೊಟ್ಟರು ಅತ್ತೆ. ನಂತರ ಇಬ್ಬರೂ ಮನೆಗೆ ಮರಳಿದೆ.

ಮೂರೇ ದಿನಗಳ ನಂತರ ಅಮವಾಸ್ಯೆ. ನಮ್ಮತ್ತೆ ಅದ್ಹೇಗೊ ದುಡ್ಡುಕಾಸು ವ್ಯವಸ್ಥೆ ಮಾಡಿ, ಪೂಜೆಯ ತಯಾರಿಯಲ್ಲಿ ಮಗ್ನರಾದರು. ಆ ಪೂಜೆಯಲ್ಲಿ ನಾನು ಭಾಗಹಿಸುವುದು ಅವಶ್ಯ ಇರಲಿಲ್ಲವಂತೆ. ಅಂದು ರಾತ್ರಿ ಮಾತ್ರ ಒಂದು ಲೋಟ ಹಾಲು ತೆಗೆದುಕೊಂಡು ಢೋಂಗಿ ಬಾಬಾನ ಬಳಿಗೆ ತೆರಳಬೇಕಿತ್ತು.

ಆ ಢೋಂಗಿ ಬಾಬಾನ ಉದ್ದೇಶ ಏನೆಂದು ನನಗೆ ಚೆನ್ನಾಗಿಯೇ ಅರಿವಾಗಿತ್ತು. ಹೀಗಾಗಿ ಮಧ್ಯರಾತ್ರಿ ಹೊರಡುವಾಗ ಚೂರಿಯೊಂದನ್ನು ಇಟ್ಟುಕೊಂಡೇ ಬಾಬಾನ ಬಳಿ ಹೊರಟೆ.

ನಡುರಾತ್ರಿ ಆಶ್ರಮ ತಲುಪಿದಾಗ ಆತ ನಶೆಯಲ್ಲಿ ತೂರಾಡುತ್ತಿದ್ದ. ಅವನ ಬಾಯಿಂದ ಮದ್ಯದ ಗಬ್ಬುವಾಸನೆ ಹೊಡೆಯುತ್ತಿತ್ತು. ನನ್ನನ್ನು ನೋಡುತ್ತಿದ್ದಂತೆ ಪಕ್ಕದ ಕುಟೀರದಲ್ಲಿ ತೆರಳುವಂತೆ ಹೇಳಿದ. ಕುಟೀರದೊಳಗೆ ಹೋಗಲು ನಾನು ಖಡಾಖಂಡಿತವಾಗಿ ನಿರಾಕರಿಸಿದೆ. ಹೀಗಾಗಿ ಅವನು ಕೋಪೋದ್ರಿಕ್ತನಾಗಿ, “ನಿನಗೆ ಸಂತಾನ ಭಾಗ್ಯ ಬೇಕೋ, ಬೇಡವೋ?” ಎಂದು ದಬಾಯಿಸಿದ.

“ಮಾನ ಕಳೆದುಕೊಂಡು ಸಂತಾನ ಭಾಗ್ಯ ಪಡೆದುಕೊಳ್ಳುವುದಕ್ಕಿಂತ ಬಂಜೆಯಾಗಿರುವುದೇ ಉತ್ತಮ,” ಎಂದು ನಾನು ದೃಢವಾಗಿ ಉತ್ತರಿಸಿದೆ.

“ಯಾಕೋ ನೀನು ತುಂಬಾನೇ ಮಾತಾಡುತ್ತಿರುವೆ. ನಾನೇನೂ ಕಡಿಮೆಯಲ್ಲ. ನೀನು ಸೇರಾದರೆ, ನಾನು ಸವ್ವಾ ಸೇರು. ಕಬ್ಬಿಣ ಕಾದಿರುವಾಗಲೇ ಹೇಗೆ ಬಗ್ಗಿಸಬೇಕೆಂದು ನನಗೆ ಚೆನ್ನಾಗಿ ಗೊತ್ತು,” ಎನ್ನುತ್ತಾ ನನ್ನ ಮೇಲೆ ಎರಗಿಬಿಟ್ಟ. ನನಗೆ ಮೊದಲೇ ಈ ಅನಾಹುತದ ಬಗ್ಗೆ ಅಂದಾಜಿತ್ತು. ತಕ್ಷಣ ಬ್ಯಾಗಿನಿಂದ ಚೂರಿ ತೆಗೆದು ಅವನ ಕತ್ತಿಗೆ ಆನಿಸುತ್ತಾ, “ನಿನ್ನಂತಹ ಢೋಂಗಿ ಬಾಬಾಗಳ ಕಥೆ ಏನೂಂತ ನನಗೆ ಚೆನ್ನಾಗಿ ಗೊತ್ತು. ಬಡಜನರನ್ನು ನಿಮ್ಮ ಬೆಣ್ಣೆ ಮಾತುಗಳಲ್ಲೇ ಮರಳು ಮಾಡಿ, ನಿಷ್ಪಾಪಿ ಹೆಂಗಳೆಯರ ಶೀಲಹರಣ ಮಾಡುತ್ತೀರ. ನಮ್ಮತ್ತೆಯ ಸಮಾಧಾನಕ್ಕೆಂದು ನಾನು ಇಲ್ಲಿಯವರೆಗೆ ಬರಬೇಕಾಯಿತು. ನನಗ್ಯಾವ ಭಸ್ಮ ಗಿಸ್ಮ ಬೇಕಾಗಿಲ್ಲ. ನನಗ್ಯಾವ ಹೆಣ್ಣು ಪಿಶಾಚಿ ಪೀಡೆಯೂ ಇಲ್ಲ. ನಿನ್ನ ಭಸ್ಮವನ್ನು ಹಾಲಲ್ಲಿ ಬೆರೆಸಿಕೊಂಡು ಕುಡಿದಿದ್ದೇನೆ ಎಂದೇ ನೀನು ನಮ್ಮತ್ತೆಗೆ ಹೇಳಬೇಕು. ಇಲ್ಲಾಂದ್ರೆ ನಿನ್ನ ಕತ್ತನ್ನೇ ಕತ್ತರಿಸಿಬಿಟ್ಟೇನು ಜೋಕೆ….!”

ಭಯದಿಂದ ಥರಗುಟ್ಟುತ್ತಿದ್ದ ಢೋಂಗಿ ಬಾಬಾ `ಹ್ಞೂಂ…,’ ಎಂಬಂತೆ ತಲೆ ಅಲ್ಲಾಡಿಸಿದ. ಆಗ ಹಾಲಿನ ಲೋಟವನ್ನು ಅಲ್ಲಿಯೇ ಬಿಸಾಕಿ ನಾನು ಮನೆಯತ್ತ ನಡೆದೆ.

ಕೆಲವು ತಿಂಗಳ ನಂತರ ನನಗೆ ವಾಂತಿಯಾಗತೊಡಗಿತು. ಈ ಕುರಿತು ಅತ್ತೆಗೆ ತಿಳಿಯುತ್ತಿದ್ದಂತೆ ಅವರ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ಈ ಸಮಾಚಾರ ಶಿವರಾಜ್‌ ಗೂ ತಿಳಿದಾಗ ಅವರೂ ಖುಷಿಪಟ್ಟರು. ಅವತ್ತು ರಾತ್ರಿ ಶಿವರಾಜ್‌ ಸಂತೋಷದಿಂದ ಇರುವುದನ್ನು ಕಂಡು ನನಗೂ ನೆಮ್ಮದಿಯೆನಿಸಿತು. ಆದರೆ ಅತ್ತೆ ಮಾತ್ರ ಢೋಂಗಿ ಬಾಬಾನ ಭಸ್ಮದಿಂದಲೇ ನನ್ನ ಸೊಸೆ ಗರ್ಭಿಣಿಯಾದಳು ಎಂಬ ನಂಬಿಕೆ ಕಂಡು ಪಿಚ್ಚೆನಿಸಿತು.

ಈಗ ಅತ್ತೆ ನನ್ನೊಟ್ಟಿಗೇ ಮಲಗತೊಡಗಿದ್ದರು. ರಾತ್ರಿ ನಿದ್ರೆಯಲ್ಲಿ ನಾನು ಕಾಲುಗಳನ್ನು ಅಸ್ತವ್ಯಸ್ತವಾಗಿ ಇಟ್ಟುಕೊಂಡು ಮಲಗಿದರೆ, ತಕ್ಷಣವೇ ಸರಿಪಡಿಸಿ ಹಾಗೆಲ್ಲ ಬೇಕಾಬಿಟ್ಟಿ ನಿದ್ರಿಸಿದರೆ ಹುಟ್ಟುವ ಮಗು ವಿಕಲಾಂಗವಾದೀತು ಎಂದು ಎಚ್ಚರಿಸುತ್ತಿದ್ದರು.

ನಮ್ಮ ಅತ್ತೆಯನ್ನು ಕಂಡರೆ ನನಗೆ ಎಲ್ಲಿಲ್ಲದ ಪ್ರೀತಿ. ಆದರೆ ಅವರ ಮೂಡನಂಭಿಕೆಗಳನ್ನು ಕಂಡು ಅಯ್ಯೋ ಎನಿಸುತ್ತದೆ.

ಒಂದು ದಿನ ಅತ್ತೆ ತೆಂಗಿನಕಾಯಿಯೊಂದನ್ನು ತಂದುಕೊಟ್ಟು, ಇದನ್ನು ನೀನು ದೇವರ ಮುಂದೆ ಒಂದೇ ಏಟಿಗೆ ಒಡೆದರೆ ನಿನಗೆ ಹುಟ್ಟುವ ಮಗುವಿನ ಕೆನ್ನೆಯಲ್ಲಿ ಗುಳಿ ಮೂಡಿ ಆಕರ್ಷಕವಾಗಿ ಕಾಣುತ್ತದೆ ಎಂದರು. ಇದೆಲ್ಲ ಇವರ ಮೌಢ್ಯತನ ಎಂಬುದು ನನಗೆ ಖಚಿತವಾಯಿತು. ಆದರೂ ಅವರ ಮನಸ್ಸು ನೋಯಿಸಬಾರದೆಂಬ ಒಂದೇ ಕಾರಣಕ್ಕೆ ಅವರ ಮಾತನ್ನು ತಳ್ಳಿ ಹಾಕದೆ ಒಂದೇ ಏಟಿಗೆ ಈಡುಗಾಯಿ ಒಡೆದುಹಾಕಿದೆ. ಆದರೆ ತೆಂಗಿನ ಚಿಪ್ಪು ಚುಚ್ಚಿ ಅಂಗೈಗೆ ಗಾಯವಾಗಿ ರಕ್ತ ಸುರಿಯತೊಡಗಿತು. ಆದರೆ ಅತ್ತೆ ಗಾಯದ ಕಡೆಗೆ ಗಮನವನ್ನೇ ಹರಿಸಲಿಲ್ಲ. ಖುಷಿಯಿಂದ ತಮ್ಮ ಪಾಡಿಗೆ ತಾವು ಗಣೇಶನ ಪೂಜೆಯಲ್ಲಿ ಲೀನರಾದರು.

ಸಾಯಂಕಾಲ ಆಫೀಸಿನಿಂದ ಮರಳಿ ಬಂದ ಶಿವರಾಜ್‌ ನನ್ನ ಕೈಗೆ ಬ್ಯಾಂಡೇಜ್‌ ಸುತ್ತಿರುವುದನ್ನು ಕಂಡು ಗಾಬರಿಯಾದರು. ಏನಿದು? ಹೇಗಾಯಿತು? ಎಂದು ಕೇಳಿದಾಗ ನಾನು ಅನಿವಾರ್ಯವಾಗಿ ಎಲ್ಲವನ್ನೂ ತಿಳಿಸಬೇಕಾಯಿತು.

ಆಗ ಶಿವರಾಜ್‌, “ನೋಡು ರಾಧಿಕಾ, ಅಮ್ಮನ ಸ್ವಭಾವ ಹೇಗೆ ಅಂತ ನಿನಗೆ ಚೆನ್ನಾಗಿಯೇ ತಿಳಿದಿದೆ. ಅವಳಿಗೆ ತಾನಂದುಕೊಂಡದ್ದೇ ಆಗಬೇಕು ಎನ್ನುವ ಹಠ. ಇತ್ತೀಚೆಗಂತೂ ಅವಳ ಮೂಢ ಸಂಪ್ರದಾಯಗಳು ವಿಪರೀತಗೊಳ್ಳುತ್ತಿವೆ. ಹೀಗಾಗಿಯೇ ಅವಳು ಚಿತ್ರವಿಚಿತ್ರವಾಗಿ ವರ್ತಿಸುತ್ತಿದ್ದಾಳೆ. ನೀನು ಹೀಗೆಯೇ ಅವಳು ಹೇಳಿದ್ದನ್ನೆಲ್ಲ ಬಾಯಿಮುಚ್ಚಿಕೊಂಡು ಮಾಡುತ್ತಿದ್ದರೆ ಏನಾದರೂ ಹೆಚ್ಚು ಕಡಿಮೆ ಆದೀತು ಹುಷಾರು,” ಎಂದ.

ಶಿವರಾಜ್‌ ಹೇಳಿದ್ದೂ ನಿಜ. ನನ್ನ ಗರ್ಭ ಬೆಳೆದಂತೆಲ್ಲ, ನಮ್ಮತ್ತೆಯ ಅಂಧ ವಿಶ್ವಾಸಗಳೂ ಹೆಚ್ಚಾಗತೊಡಗಿದ್ದವು. ಕೆಲವೊಮ್ಮೆ ಇಳಿಹೊತ್ತಿನಲ್ಲಿ ಮೂರು ದಾರಿ ಸೇರುವ ಜಾಗದತ್ತ ನನ್ನನ್ನು ಸುಳಿಯಲೂ ಬಿಡುತ್ತಿರಲಿಲ್ಲ. ಹೀಗಾಗಿ ರಸ್ತೆಗಳನ್ನು ಸುತ್ತಿ ಬಳಸಿ ಓಡಾಡಬೇಕಾಯಿತು. ಹೆಚ್ಚಿನ ಓಡಾಟದಿಂದಾಗಿ ವಿಪರೀತ ಆಯಾಸವಾಗುತ್ತಿತ್ತು. ಆದರೆ ಮೂಢನಂಬಿಕೆಗಳ ಆಳದಲ್ಲಿ ಹುದುಗಿದ ಅತ್ತೆಗೆ ನನ್ನ ಆಯಾಸದ ಬಗ್ಗೆ ಗಮನವೇ ಇರುತ್ತಿರಲಿಲ್ಲ.

ನನಗೆ ಎಂಟು ತಿಂಗಳು ತುಂಬಿದಾಗ ನಾನು ಮನೆಯಿಂದ ಹೊರಗೆ ಹೆಜ್ಜೆ ಇಡುವುದನ್ನೂ ನಿರ್ಬಂಧಿಸಿಬಿಟ್ಟರು. ಅದೂ ಅಲ್ಲದೆ, ಯಾವುದೇ ಕಾರಣಕ್ಕೂ ತವರಿಗೆ ಹೋಗುವ ಹಾಗಿಲ್ಲ ಮತ್ತು ಕಾಮದಹನ ದೃಶ್ಯ ನೋಡಲೇಬಾರದು ಎಂದು ಆದೇಶಿಸಿದ್ದರು. ಇನ್ನೇನು ಹೆರಿಗೆಯ ದಿನಗಳು ಸಮೀಪವಿದ್ದ ದಿನಗಳಲ್ಲಿಯೇ, ಅತ್ತೆ ಢೋಂಗಿ ಬಾಬಾನ ಬಳಿ ತೆರಳಿ ಅವನು ಕೊಟ್ಟ ಭಸ್ಮವನ್ನು ಹಾಲಿನಲ್ಲಿ ಬೆರೆಸಿ ನನಗೆ ಕುಡಿಯಲು ಹೇಳಿದರು. ಏಕೆ ಎಂದು ಕೇಳಿದರೆ, ಇದನ್ನು ಕುಡಿದರೆ ಗಂಡು ಮಗುವೇ ಜನಿಸುತ್ತದೆ ಎಂದರು.

ಅತ್ತೆಯ ಮೂಢನಂಬಿಕೆ ಕಂಡು ನನಗೆ ಮತ್ತೇ ಅಯ್ಯೋ ಎನಿಸಿತು. ನಾನು ಹಾಲು ಕುಡಿಯಲು ನಿರಾಕರಿಸುತ್ತ, “ಅತ್ತೆ, ನೀವು ಏನು ಹೇಳಿದರೂ ನಾನು ಮಾಡಲು ತಯಾರಾಗಿದ್ದೇನೆ. ಆದರೆ ಈ ಹಾಲು ಮಾತ್ರ ಕುಡಿಯಲಾರೆ,” ಎಂದೆ.

“ಯಾಕೆ?” ಎಂದು ಅತ್ತೆ ಹುಬ್ಬುಗಂಟಿಕ್ಕಿದರು.

“ಏಕೆಂದರೆ ಆ ಭಸ್ಮದಲ್ಲಿ ಏನೇನು ಹಾಕಿರುತ್ತಾರೋ ಏನೋ? ಅದರಿಂದ ಹುಟ್ಟುವ ಶಿಶುವಿನ ಆರೋಗ್ಯದ ಮೇಲೆ ಏನಾದರೂ ದುಷ್ಪರಿಣಾಮ ಉಂಟಾದರೆ…”

“ಅರೆ, ಈ ಭಸ್ಮದಿಂದಲೇ ನೀನು ಗರ್ಭವತಿಯಾದೆ ಎಂಬುದನ್ನು ಇಷ್ಟು ಬೇಗ ಮರೆತುಬಿಟ್ಟೆಯಾ?”

ಅವರು ಅದೇನೇ ಸಬೂಬು ಹೇಳಿದರೂ ನಾನು ಮಾತ್ರ ಭಸ್ಮ ಬೆರೆಸಿದ ಹಾಲು ಕುಡಿಯಲು ಒಪ್ಪಲಿಲ್ಲ. ಅತ್ತೆ ಏನು ಅಂದುಕೊಂಡರೂ ಏನೊ? ಮೌನವಾಗಿ ಹೊರಟುಹೋದರು.

ಕೆಲವು ದಿನಗಳ ನಂತರ ಪ್ರಸವದ ದಿನಗಳಲ್ಲಿ ಅತ್ತೆ ನನ್ನ ಬಳಿ ಬಂದು ಇನ್ನಿಲ್ಲದ ಕಕ್ಕುಲತೆಯಿಂದ, “ರಾಧಿಕಾ, ನೋಡುತ್ತಿರು ನಿನಗೆ ಗಂಡು ಮಗುವೇ ಹುಟ್ಟುವುದು,” ಎಂದರು.

“ಅದೇನು ಅಷ್ಟು ಖಚಿತವಾಗಿ ಹೇಳುತ್ತಿರುವಿರಿ, ನಿಮಗೆ ಹೇಗೆ ಗೊತ್ತಾಯಿತು,” ಎಂದು ವಿಸ್ಮಯದಿಂದ ಕೇಳಿದಾಗ, “ನೀನು ಬಾಬಾ ನೀಡಿದ ಭಸ್ಮವನ್ನು ಕುಡಿಯಲು ನಿರಾಕರಿಸಿದ್ದೆಯಲ್ಲ, ಅಂತಹ ಮಹಾಮಹಿಮರ ನುಡಿಯನ್ನು ಪಾಲಿಸದಿದ್ದರೆ ಹೇಗೆಂದು ನಾನೇ ಆ ಭಸ್ಮವನ್ನು ನಿನಗೆ ಊಟದಲ್ಲಿ ಬೆರೆಸಿ ಪ್ರತಿದಿನ ಕೊಡುತ್ತಿದ್ದೆ,” ಎಂದರು.

ಇದನ್ನು ಕೇಳಿ ದಂಗುಬಡಿದಂತೆ ಆಗಿಬಿಟ್ಟಿತು. ಏನಾದರೂ ಪ್ರತಿಕ್ರಿಯಿಸೋಣ ಎನ್ನುವಷ್ಟರಲ್ಲಿ ಕಣ್ಣಿಗೆ ಕತ್ತಲೆ ಆವರಿಸಿದಂತಾಯಿತು. ಕ್ರಮೇಣ ಎಲ್ಲ ಶ್ಯೂನಗೊಂಡಂತೆ ಆಗಿ ಪ್ರಜ್ಞಾಹೀನಳಾದೆ ಎನಿಸಿತು. ಒಂದು ನಿರ್ಜವ ಶಿಶುವಿಗೆ ಜನ್ಮ ನೀಡಿದ್ದೆನೆಂಬ ವಿಷಯ ನನಗೆ ಪ್ರಜ್ಞೆ ಮರಳಿದ ನಂತರವೇ ತಿಳಿಯಿತು. ಆ ಡೋಂಗಿ ಬಾಬಾ ನನ್ನ ಮೇಲಿನ ದ್ವೇಷ ತೀರಿಸಿಕೊಳ್ಳಲು ಭಸ್ಮದಲ್ಲಿ ಮಗುವಿನ ಮೇಲೆ ದುಷ್ಪರಿಣಾಮ ಬೀರುವಂತಹ ಔಷಧಿ ಬೆರಸಿದ್ದರಿಂದ ಮಗು ಗರ್ಭದಲ್ಲೇ ಸತ್ತು ಹೋಗಿತ್ತು. ಕೊನೆಗೆ ವಾಸ್ತವ ಅರಿತ ಅತ್ತೆ ಪಶ್ಚಾತ್ತಾಪದಿಂದ ನಮ್ಮಿಬ್ಬರ ಬಳಿ ಬಂದು, “ರಾಧಿಕಾ, ನನ್ನಿಂದಾಗಿಯೇ ಈ ಅನಾಹುತ ನಡೆದುಹೋಯಿತು. ಮೊಮ್ಮಗನನ್ನು ಕಾಣುವ ಹಂಬಲದಲ್ಲಿ ನಿನ್ನ ಸಂತಾನವನ್ನೇ ಮೂಢನಂಬಿಕೆಗಳಿಗೆ ಬಲಿಕೊಟ್ಟೆ. ಈ ದುರಂತಕ್ಕೆ ನೀವು ಏನೇ ಶಿಕ್ಷೆ ನೀಡಿದರೂ ನಾನು ಅನುಭವಿಸಲು ಸಿದ್ಧ. ಉಸಿರೆತ್ತದೆ ನಿಮ್ಮ ಶಿಕ್ಷೆ ಅನುಭವಿಸುತ್ತೇನೆ,” ಎಂದು ರೋದಿಸತೊಡಗಿದರು.

ಅತ್ತೆಗೆ ನಾನೇನು ಶಿಕ್ಷೆ ಕೊಡುವುದು! ಇನ್ನು ಮೇಲಾದರೂ ನಿಮ್ಮ ಮೂಢನಂಬಿಕೆಗಳಿಗೆ ಮುಕ್ತಾಯ ಹೇಳಿ ಎಂದ ಮರುಕ್ಷಣವೇ ಅವರು ಒಪ್ಪಿಕೊಂಡರು. ಅನಂತರದ ದಿನಗಳಲ್ಲಿ ಅಂಧವಿಶ್ವಾಸದ ಲವಲೇಶವೂ ಅವರಲ್ಲಿ ಉಳಿದಿರಲಿಲ್ಲ.

ಒಂದು ವರ್ಷದ ನಂತರ ನಾನು ಮತ್ತೆ ಗರ್ಭವತಿಯಾಗಿದ್ದೆ. ಈ ಬಾರಿ ಮುದ್ದಾದ ಅವಳಿ ಮಕ್ಕಳು ಜನಿಸಿದವು. ನಮ್ಮತ್ತೆ ಸಂತೋಷದಿಂದ ಹುಚ್ಚಿಯೇ ಆಗಿಬಿಟ್ಟಿದ್ದರು. ಊರ ಜನರಿಗೆಲ್ಲ ಅಂಧ ವಿಶ್ವಾಸದಿಂದ ಹೊರಬರುವಂತೆ ಪ್ರೋತ್ಸಾಹಿಸತೊಡಗಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ