ತಿಳಿವಳಿಕೆ ಗ್ಯಾರಂಟಿ, ಆರೋಗ್ಯ ಗೋವಿಂದಾಯ…… ನಮಃ!
ಇತ್ತೀಚೆಗೆ ಎಚ್ 1 ಎನ್ 1, ಸ್ಪೈನ್ ಫ್ಲೂ, ಬರ್ಡ್ ಫ್ಲೂ, ಮೆಡ್ರಾಸ್ ಐಗಳಿಗಿಂತಲೂ ಹೆಚ್ಚಾಗಿ ವೈಫ್ ಫ್ಲೂ (ಪತ್ನಿ ಜ್ವರ) ಎಂಬ ಭಯಾನಕ ಕಾಯಿಲೆಗೆ ಬೆಚ್ಚಿ ಬಿಳುವಂತಾಗಿದೆ. ಇದರಿಂದಾಗಿ ಸಮಾಜದಲ್ಲಿ ಮಾನಸಿಕ ಪ್ರಕ್ಷೋಭೆ ಉಂಟಾಗುತ್ತಿರುವುದು ಸಾಮಾನ್ಯವಾಗಿದೆ. ಎಲ್ಲಾ ಫ್ಲೂಗಳನ್ನು ಔಷಧೋಪಚಾರ ಮಾಡಿ ನಿವಾರಿಸಬಹುದು, ಆದರೆ ವೈಫ್ ಫ್ಲೂಗೆ ಮಾತ್ರ ಇನ್ನೂವರೆಗೂ ಔಷಧಿಯೇ ಸಿಕ್ಕಿಲ್ಲ.
ಇನ್ನು ನಮ್ಮ ಯುವಕರೆಲ್ಲರಿಗೂ ದಟ್ಟವಾಗಿ ಮೀಸೆ ಬಿಟ್ಟು ಆಕರ್ಷಕವಾಗಿ, ರೋಮಾಂಚಕವಾಗಿ ಕಾಣಿಸಿಕೊಳ್ಳಬೇಕೆಂಬ ಚಪಲ ನಿಸರ್ಗ ಸಹಜವಾಗಿ ಬಂದಿರುತ್ತದೆ. ಆದರೆ ಮದುವೆಯಾದ ನಂತರ ಇದರ ಕಥೆಯೇ ಬದಲಾಗಿಬಿಡುತ್ತಲ್ಲ…..? ಪ್ರಥಮ ರಾತ್ರಿಯೇ ವೈಫ್ ಫ್ಲೂ ನಮ್ಮ ಮೀಸೆಯ ಮೇಲೆಯೇ ಆಕ್ರಮಿಸಿಬಿಡುತ್ತದೆ. ಅವರಿಗೆ ಅದೇನು ಕಷ್ಟ ಕೊಡುತ್ತದೋ? `ನೋಡ್ರಿ ಈ ಮೀಸೆ ನಿಮಗೆ ಸೂಟ್ ಆಗ್ತಾ ಇಲ್ಲ. ಸೋ ನಾಳೇನೇ ತೆಗೆದ್ಬಿಡಿ’ ಎಂದು ಖಡಾಖಂಡಿತವಾಗಿ ನೇರವಾಗಿಯೇ ಹೇಳಿಬಿಡುತ್ತಾರಲ್ಲ!
ಇದೇನೊ ಅವಸರದ ಅಭಿಪ್ರಾಯ ಇರಬಹುದು ಎಂದು ಉದಾಸೀನ ಮಾಡಿ, ಇಷ್ಟು ವರ್ಷ ಪ್ರೀತಿಯಿಂದ ಬೆಳೆಸಿಕೊಂಡು ಬಂದ ಮೀಸೆಯನ್ನು ತುಟಿಯಿಂದ ನೇವರಿಸಿಕೊಂಡು ನಿದ್ರೆಗೆ ಜಾರಿದ್ದೆ. ಸಹಜವಾಗಿ ಬೆಳಗ್ಗೆ ಎದ್ದು ಬ್ರಷ್ ಮಾಡಲು ಸಿಂಕ್ ಎದುರು ನಿಂತಾಗ, ಕನ್ನಡಿಯಲ್ಲಿ ಮೀಸೆಯೇ ಇಲ್ಲದ ಮುಖವನ್ನು ಕಂಡು ಅಯೋಮಯನಾದೆ. ಆಮೇಲೆ ಗೊತ್ತಾಯಿತು, ವೈಫ್ ಏನನ್ನು ಹೇಳುತ್ತಾಳೊ ಅದನ್ನು ಮಾಡಿ ತೋರಿಸುವ ಶಕ್ತಿಯನ್ನು ಪಡೆದಿದ್ದಾಳೆಂದು. ಹೀಗಾಗಿ ಅವತ್ತೇ ಡಿಸೈಡ್ ಮಾಡಿದೆ, ಇನ್ನು ಜೀವನ ಪೂರ್ತಿ ವೈಫ್ ದಾಸನಾಗಿಯೇ ಇರಬೇಕು ಇಲ್ಲವಾದರೆ ಉಳಿಗಾಲವಿಲ್ಲ ಎಂದು.ಇನ್ನೊಂದು ದಿನ ಮುಂಜಾನೆ, ನಾನಿನ್ನೂ ಸ್ವಲ್ಪ ನಿದ್ದೆ ಮಾಡಬೇಕೆಂದು ಮಲಗಿಯೇ ಇದ್ದೆ. ಅಷ್ಟರಲ್ಲಿ ಸಿಂಹ ಘರ್ಜಿಸಿದಂತಾಯಿತು.
“ರೀ, ಸೂರ್ಯ ನೆತ್ತಿಯ ಮೇಲೆ ಬಂದಾಯ್ತು ಇನ್ನೂ ಮಲಗಿದ್ದೀರಲ್ರಿ, ಏನು? ಮನೆಯ ಎಲ್ಲಾ ಕೆಲಸಗಳನ್ನು ನಾನೊಬ್ಬಳೆ ಮಾಡಬೇಕೆಂದು ಏನಾದ್ರು ಕಾನೂನಿದೆಯಾ? ಎದ್ದೇಳ್ರಿ, ನಲ್ಲಿಯಲ್ಲಿ ನೀರು ಬಂದಿದೆ, ತುಂಬಿಟ್ಟು ಬೇಗ ಹೋಗಿ ತರಕಾರಿ ತೆಗೆದುಕೊಂಡು ಬನ್ರಿ. ಹಾಂ! ಹಾಲು ಮುಗಿದಿದೆ. ಮರೀದೆ ಹಾಲು ಕೂಡ ತಗೊಂಬನ್ನಿ.” ಚಟಕ್ಕನೆ ಎದ್ದು ಕುಳಿತಿದ್ದೆ. ನಿಮ್ಮ ಆಜ್ಞೆ ಮಹಾರಾಣಿಯವರೇ ಎನ್ನುತ್ತಾ ತಲೆಬಾಗಿಸುವುದೊಂದೇ ಬಾಕಿ ಇತ್ತು.
ಇದಾದ ಮೇಲೆ ಸ್ವಲ್ಪ ಪ್ರೀತಿಯನ್ನು ತೋರಿಸುತ್ತ “ರೀ, ಒಂಚೂರು ಟೀ ಮಾಡ್ಕೊಂಡು ಬನ್ರಿ. ಇಬ್ಬರೂ ಒಟ್ಟಿಗೇ ಕೂತು ಕುಡಿಯೋಣ” ಎನ್ನಬೇಕೇ?
ಇಲ್ಲಿಯವರೆಗೂ ಇದೇನೂಂತಾನೇ ಅರ್ಥವಾಗಿರಲಿಲ್ಲ. ಕ್ರಮೇಣ ನಿಧಾನಕ್ಕೆ ಅರಿವಾಗಿದ್ದೇನೆಂದರೆ, ನಾನು ವೈಫ್ ಫ್ಲೂಗೆ ಬಲಿಯಾಗಿದ್ದೇನೆ, ಇದು ಅಷ್ಟು ಸರಳವಾಗಿ ವಾಸಿಯಾಗುವ ಕಾಯಿಲೆಯಲ್ಲ. ಬಿಸಿಲು ಏರಿದಂತೆಲ್ಲ ಈ ಜ್ವರ ಏರುತ್ತದೆ, ಸಾಯಂಕಾಲ ತಂಪಾದಂತೆಲ್ಲ ತಣ್ಣಗಾಗುತ್ತದೆ. ಆದರೆ ಅದೇಕೊ ವೈಫ್ ನ್ನು ನೋಡಿದ ಕೂಡಲೇ ದೇಹವೆಲ್ಲ ಗಡಗಡನೆ ನಡುಗುತ್ತದೆ.
ಈಗ ಇದೇ ನಮಗೆ ಒಂದು ಸಂಶೋಧನೆಯ ವಿಷಯವಾಯಿತು ಈ ವೈಫ್ ಫ್ಲೂ ಎಂದರೆ ಏನು? ಇದು ಏಕೆ ತಗುಲುತ್ತದೆ? ಇದು ತುಂಬಾ ಸರಳವಾದ ವಿಷಯ. ಮದುವೆಯಾಗುತ್ತಲೇ ವೈಫ್ ಫ್ಲೂ ತಗುಲಿಕೊಳ್ಳುತ್ತದೆ. ಇದರ ಹರಡುವಿಕೆಯ ತೀವ್ರತೆ ಆಯಾಯ ಹಸ್ಬೆಂಡ್‌ಗಳ ಫ್ಲೂ ನಿರೋಧಕ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಒಂದು ಸಾರಿ ವೈಫ್ ಫ್ಲೂಗೆ ಬಲಿಯಾದವರು ಜೀವನಪೂರ್ತಿ ಇದನ್ನು ಅನುಭವಿಸಬೇಕಾಗುತ್ತದೆ.
ನಿರಂತರವಾಗಿ ವೈಫ್ ಫ್ಲೂನಿಂದ ಬಳಲುತ್ತಿರುವ ಹಸ್ಬೆಂಡ್ ಗಳು ಯಾವಾಗಲೂ ಒಂದು ರೀತಿಯ ಭಯಭ್ರಾಂತಿಯಲ್ಲಿರುತ್ತಾರೆ. ಅವರ ದೃಷ್ಟಿ ನೆಲದ ಕಡೆಗೇ ನೆಟ್ಟಿರುತ್ತದೆ, ಮಾತನಾಡುವ ಶಕ್ತಿ ಕ್ರಮೇಣ ನಶಿಸತೊಡಗುತ್ತದೆ. ಆದರೆ ಶ್ರವಣಶಕ್ತಿ ಮಾತ್ರ ಸಾಕಷ್ಟು ಅಭಿವೃದ್ಧಿಯಾಗುತ್ತದೆ. ಇದರ ಜೊತೆಗೇ ಬ್ಲಡ್ ಪ್ರೆಶರ್ ಅಂತೂ ಬೇಕಾಬಿಟ್ಟಿ ಏರತೊಡಗುತ್ತದೆ.
ಇಂತಹ ರೋಗಿಯು ದಿನದ ಬಹಳಷ್ಟು ಸಮಯವನ್ನು ಮನೆಯಿಂದ ಆಚೆಯೇ ಕಳೆಯಲು ಇಷ್ಟಪಡುತ್ತಾನೆ. ಅಲ್ಲದೆ ಎಂತಹ ದುರ್ಭರ ಪರಿಸ್ಥಿತಿ ಎದುರಾದರೂ ಕೂಡ ಜೀವನೋತ್ಸಾಹವನ್ನು ಕೈಬಿಡುವುದಿಲ್ಲ.
ವೈಫ್ ಫ್ಲೂ ಪೀಡಿತರಿಗೆ ಬಿಡುವಿಲ್ಲದೆ ನಿರಂತರ ಕೆಲಸ ಮಾಡಿ ಮಾಡಿ, ಅಭ್ಯಾಸವಾಗಿ ಹೋಗಿರುತ್ತದೆ. ಹೀಗಾಗಿ ಅವರು ವರ್ಕೊಹಾಲಿಕ್ ಗಳಾಗಿರುತ್ತಾರೆ ಮತ್ತು ಗಾಣದ ಎತ್ತಿನಂತೆ ನಿರಂತರವಾಗಿ ಕೆಲಸ ಮಾಡಿ ತಂತಮ್ಮ ವೈಫ್ ಗಳಿಂದ ಶಹಬ್ಬಾಸ್ ಗಿರಿಯನ್ನು ಗಿಟ್ಟಿಸಲು ಹಾತೊರೆಯುತ್ತಿರುತ್ತಾರೆ. ಇಂತಹ ಹಸ್ಬೆಂಡ್ ಗಳಿಗೆ ಕೋಪ ಬರುವುದು ತುಂಬಾ ಅಪರೂಪ, ಆದರೆ ಒಳಗೊಳಗೆ ಕುದಿಯುತ್ತಿರುವುದು ಮಾತ್ರ ಗ್ಯಾರಂಟಿ.
ಇದರ ವೈರಸ್, ವಿವಿಧ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಮತ್ತು ಪ್ರಮುಖವಾಗಿ ಮದುವೆ ಸಮಾರಂಭಗಳಲ್ಲಿ ವಿಪುಲವಾಗಿ ಕಂಡುಬರುತ್ತದೆ. ವಿಶೇಷವಾಗಿ ಇದು ತರುಣರನ್ನೇ ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತದೆ. ಈ ವೈರಸ್ ಮೊದಮೊದಲು ಸುಂದರ ಕನಸುಗಳನ್ನು ತೋರಿಸುತ್ತದೆ, ನಂತರ ಆ ಕನಸುಗಳನ್ನು ನನಸು ಮಾಡಿಕೊಳ್ಳಲು ಇನ್ನಿಲ್ಲದಂತೆ ಪರದಾಡಿಸುತ್ತದೆ. ಕೊನೆಗೆ ಜೀವನದುದಕ್ಕೂ ಬವಣೆ ಪಡುವಂತೆ ಮಾಡಿಬಿಡುತ್ತದೆ.
ಹೀಗೆ ಒಂದು ಮದುವೆ ಸಮಾರಂಭದಲ್ಲಿ ನಮ್ಮ ಅತ್ತಿಗೆ ಕಣ್ಣಿನಲ್ಲೇ ಸನ್ನೆ ಮಾಡಿ, ಬಳುಕುವ ಬಳ್ಳಿಯಂತಹ ಆ ಸುಂದರಿಯನ್ನು ತೋರಿಸಿದಾಗ ನಮ್ಮ ಭಾವನೆಗಳೆಲ್ಲ ಗರಿಗೆದರಿದ್ದವು. ಆಗ ನಾವು ಸಂತೋಷದಿಂದ ಗಾಳಿಯಲ್ಲಿ ತೇಲುತ್ತಲೇ ಹೋಗಿ ಅವಳನ್ನು ಸಮೀಪಿಸಿದ್ದೆ. ಆದರೆ ತಕ್ಷಣ ವೈಫ್ ಫ್ಲೂನೊಂದಿಗೆ ಸೆಣಸಾಡುತ್ತಿರುವ ಕೆಲವು ಗೆಳೆಯರು ನೆನಪಿಗೆ ಬಂದ ತಕ್ಷಣ, ಬಳುಕುವ ಬಳ್ಳಿಯ ಬಲೆಗೆ ಸಿಲುಕದಂತೆ ಎಚ್ಚರಗೊಂಡು ದೂರ ಸರಿದೆನು.
ಆಗ ಅವಳು ತನ್ನ ಸುಕೋಮಲ ಧ್ವನಿಯಲ್ಲಿ, “ಇದೇನ್ರಿ ನನ್ನ ನೋಡಿ ಒಳ್ಳೆ ವೈರಸ್ ನೋಡ್ದಂಗೆ ಸಿಡಿದು ಹೋಗ್ತಾ ಇದ್ದೀರಲ್ಲಾ! ಅಲ್ಲಾ, ಒಂದು ದುಂಬಿ ಕೂಡ ಪ್ರೀತಿ ಪ್ರೇಮಕ್ಕಾಗಿ ತನ್ನನ್ನೇ ತಾನು ಬಲಿಕೊಡುತ್ತದೆ. ನೀವು ಮನಷ್ಯರಾಗಿ ಪ್ರೇಮದ ಮೌಲ್ಯವನ್ನಾದರೂ ಅರ್ಥ ಮಾಡಿಕೊಳ್ಳಬಾರದೇ?” ಎಂದಳು. ಅವಳ ಮಾಯಾವಿ ಮಾತುಗಳಿಗೆ ಮರುಳಾದ ನಾನು ದುಂಬಿಯಂತೆ ಅವಳ ಹಿಂದೆಯೇ ಭ್ರಮಿಸತೊಡಗಿದೆ.
ಇರಲಿಬಿಡಿ, ಹೇಗಿದ್ರೂ ಮದುವೆಯಂತೂ ಆಗಲೇಬೇಕಿತ್ತು. ಆಗಿಯೂ ಹೋಯಿತು. ಸಂಪೂರ್ಣವಾಗಿ ನಾನಂತೂ ಶಿರಬಾಗಿ ವೈಫ್ ಫ್ಲೂಗೆ ಬಲಿಯಾಗಿದ್ದೆ. ಇನ್ನೂ ಈ ಫ್ಲೂನಿಂದ ಪಾರಾಗುವುದು ಹೇಗೆಂದು ಯೋಚಿಸುತ್ತಿರುವಾಗ ಒಂದು ಉಪಾಯ ಸಿದ್ಧಿಸಿತು. ಅದೇನೆಂದರೆ, ವೈಫ್ ಫ್ಲೂ ಪೀಡಿತ ಹಸ್ಬೆಂಡ್‌ಗಳು ಈ ವೈರಸ್ ದಾಳಿಯನ್ನು ಕೊಂಚ ಮಟ್ಟಿಗೆ ತಡೆಗಟ್ಟಬೇಕೆಂದರೆ, ಆಗಿಂದಾಗ್ಗೆ ವೈಫ್ ನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸುವ ಆ್ಯಂಟಿ ಬಯಾಟಿಕ್ಸ್ ಡೋಜ್ ತೆಗೆದುಕೊಳ್ಳಲೇಬೇಕು. ಆಗ ಸ್ವಲ್ಪವಾದ್ರೂ ಉಸಿರಾಡಬಹುದು.
ವೈಫ್ ಶಾಪಿಂಗ್ ಗೆ ಹೊರಟು ನಿಂತಾಗ ಬೇಗ ಬೇಗ ತಯಾರಾಗಿ, ಒಂದು ಹೆಗಲಿಗೆ ಸಾಮಾನು ತರುವ ಚೀಲ ಇನ್ನೊಂದು ಹೆಗಲಲ್ಲಿ ಮಗುವನ್ನು ಹೊತ್ತುಕೊಂಡು ಹೋಗಲು ಹಿಂಜರಿಯಬಾರದು. ವೈಫ್ ಏನಾದ್ರೂ ಸೆಲೆಕ್ಟ್ ಮಾಡುತ್ತಿರುವಾಗ ಅಥವಾ ಚೌಕಾಶಿ ಮಾಡುತ್ತಿರುವಾಗ ಅಪ್ಪಿತಪ್ಪಿಯೂ ಮಧ್ಯೆ ಬಾಯಿ ಹಾಕಬಾರದು. ಹಸ್ಬೆಂಡ್ ಅಂದ್ರೆ ಸುಮ್ನೆ ಜೇಬು ತುಂಬಾ ದುಡ್ಡು ತುಂಬಿಕೊಂಡು ಬರಬೇಕು, ಮತ್ತೆ ಖರ್ಚು ಮಾಡುವಾಗ ತನ್ನ ಕಂಜೂಸ್ ಬುದ್ಧಿಯನ್ನು ತೋರಿಸಲೇಕೂಡದು.
ವೈಫ್ ಫ್ಲೂ ಪೀಡಿತ ಹಸ್ಬೆಂಡ್ ಗಳು ತಮ್ಮನ್ನು ತಾವು ಸಂರಕ್ಷಿಸಿಕೊಳ್ಳಬೇಕೆಂದರೆ, ಬೆಳಗಿನಿಂದ ಸಂಜೆಯವರೆಗೂ `ವೈಫಾಯ ನಮಃ’, `ವೈಫಾಯ ನಮಃ’ ಎಂದು ಜಪಿಸುತ್ತಲೇ ಇರಬೇಕು ಮತ್ತು ರಾಶಿ ಫಲ ನೋಡಿಕೊಂಡೇ ತಂತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಪ್ರಾರಂಭಿಸಬೇಕು. ಅಕಸ್ಮಾತ್ ರಾಶಿಫಲದಲ್ಲಿ ದಿನ ಭವಿಷ್ಯ ಚೆನ್ನಾಗಿದೆಯೆಂದರೆ, ಏನೋ ಒಂದೆರಡು ಜೋರಾರಿ ಮಾತುಗಳಲ್ಲೇ ದಿನ ಕಳೆಯುತ್ತದೆ. ಇಲ್ಲ ದಿನ ಭವಿಷ್ಯ ಚೆನ್ನಾಗಿಲ್ಲ, ಶನಿ ಬಂದು ವಕ್ಕರಿಸಿದ್ದಾನೆ ಎಂದರೆ, ತುಂಬಾ ಎಚ್ಚರಿಕೆಯಿಂದಿರಬೇಕು. ಇಲ್ಲವಾದಲ್ಲಿ ಲಟ್ಟಣಿಗೆ ರುಚಿ ನೋಡಬೇಕಾದೀತು ಹುಷಾರು!
ಇನ್ನೇನು ನಮ್ಮ ವೈಫ್ ಫ್ಲೂ ಸಂಶೋಧನೆಯು ಕೊನೆಯ ಹಂತದಲ್ಲಿದ್ದಾಗಲೇ ಗದಗದಿಸುವ ಘರ್ಜನೆಯಿಂದ ಪತರಗುಟ್ಟಿ ಹೋದೋನು “ಅಯ್ಯ, ಎದ್ದೇಳ್ರಿ ಬೇಗ, ಇತ್ತೀಚೆಗೆ ತುಂಬಾ ಸೋಮಾರಿಯಾಗುತ್ತಿದ್ದೀರಾ ನೀನೂ, ಇವತ್ತು ಭಾನುವಾರ ಮರೆತುಬಿಟ್ಟಿರೇನು? ಇತ್ತಿನ ಎಲ್ಲಾ ಕೆಲಸಗಳೂ ನಿಮ್ಮ ಜವಾಬ್ದಾರಿನೇ….” ಎಂದು ಇನ್ನೇನೋ ಹೇಳುತ್ತಿದ್ದಳು, ಅಷ್ಟರಲ್ಲಿ ನನಗೆ ದೊಡ್ಡದಾದ ಸೀನು ಬಂತು. ` ಆ……..ಕ್ಷೀ………… ಎಂದು ಸೀನಿದೆ.
“ರ್ರೀ, ನನಗ್ಯಾಕೋ ಡೌಟು. ಈಗ ವಾತಾವರಣ ತುಂಬಾ ಕೆಟ್ಟದಾಗಿದೆ. ನಿಮಗೆ ಸ್ವೈನ್ ಫ್ಲೂ ವೈರಸ್ ಏನಾದ್ರೂ ತಗುಲಿದೆಯಾ ನೋಡಿ. ಬೇಗ ಡಾಕ್ಟರ್ ಹತ್ತಿರ ಹೋಗಿ ಚೆಕ್ ಅಪ್ ಮಾಡಿಸಿಕೊಂಡು ಬನ್ರಿ,” ಎಂದಳು.
“ಅಯ್ಯೋ ಮದುವೆ ಆದಾಗಿಂದ್ಲೇನೆ ವೈಫ್ ಫ್ಲೂನಿಂದ ಒದ್ದಾಡುತ್ತಿದ್ದೇನೆ. ಇನ್ನು ಈ ಸ್ವೈನ್ ಫ್ಲೂ ಯಾವ ಲೆಕ್ಕ ಬಿಡು,” ಎಂದು ಮರು ಉತ್ತರ ನೀಡಿದೆ.
ಆಗಲೇ ನಮ್ಮ ಕೆಲಸದವಳು ಗಂಗಾ ಮುಂದೆ ಬಂದು ಇನ್ನಿಲ್ಲದ ಪ್ರೀತಿಯಿಂದ ಹೇಳಿದಳು, “ಅಯ್ಯೋ ಬುದ್ದಿ, ಬೇಗ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಕೊಳ್ಳಿ. ಸ್ವೈನ್ ಫ್ಲೂ ಎಂದರೆ ತುಂಬಾ ಅಪಾಯಕಾರಿಯಂತೆ, ಇದರಿಂದ ನಿಮಗೆ ಭಯವಾಗದೇ ಇರಬಹುದು, ಆದರೆ ನನಗಂತೂ ಸಿಕ್ಕಾಪಟ್ಟೆ ಹೆದರಿಕೆಯಾಗುತ್ತಿದೆ. ನೀವು ಆಸ್ಪತ್ರೆಗೆ ಹೋಗದೆ ಇದ್ರೆ ನಾನು ಕೆಲಸವನ್ನೇ ಬಿಟ್ಟುಬಿಡುತ್ತೇನೆ. ಆಮೇಲೆ ನಾನು ಮಾಡುವ ಎಲ್ಲಾ ಕೆಲಸಗಳನ್ನೂ ನೀವೇ ಮಾಡಬೇಕಾಗುತ್ತೆ ನೋಡಿ. ಬುದ್ದಿ ನಿಜ ಹೇಳಬೇಕೂಂದ್ರೆ, ನೀವು ಚೆನ್ನಾಗಿದ್ರೆ ತಾನೇ ನಾನೂ ಚೆಂದಾಕಿರೋದು….” ಎನ್ನುತ್ತಾ ನುಲಿಯತೊಡಗಿದಳು.
ವೈಫ್ ಫ್ಲೂನಿಂದ ಘಾಸಿಗೊಂಡ ನನ್ನ ಮನಸ್ಸಿಗೆ ಈ ಗಂಗಾ ಆವಾಗಾವಾಗ ಮುಲಾಮು ಸವರುತ್ತಿರುತ್ತಾಳೆ. ನನ್ನ ಮೇಲೆ ದಾಳಿ ಮಾಡಿದ ವೈಫ್ ಫ್ಲೂ ವೈರಸನ್ನು ಕೊಂಚಮಟ್ಟಿಗೆ ತಣ್ಣಗಾಗಿಸುವವಳು ಈ ಗಂಗಮ್ಮನೇ. ಏಕೆಂದರೆ ನಾನು ಇವಳೊಂದಿಗೆ ಪಾತ್ರೆ ತಿಕ್ಕಲೋ ಬಟ್ಟೆ ತೊಳೆಯಲೋ ಕುಳಿತಾಗ, ನನ್ನ ವೈಫ್ ಸ್ವತಃ ತಾನೇ ಬಂದು ನಮ್ಮನ್ನು ಒಳಗೆ ಕಳುಹಿಸಿ ತಾನೇ ಆ ಕೆಲಸಗಳನ್ನು ಮಾಡುತ್ತಾಳೆ. ಆದ್ದರಿಂದ ನಾನು ಯಾವತ್ತೂ ಗಂಗಾ ಮಾತನ್ನು ಉದಾಸೀನ ಮಾಡುವುದಿಲ್ಲ. ತಕ್ಷಣ ಆಸ್ಪತ್ರೆಗೆ ದೌಡಾಯಿಸಿದೆ. ಡಾಕ್ಟರು ನನ್ನನ್ನು ಸಂಪೂರ್ಣವಾಗಿ ಚೆಕಪ್ ಮಾಡಿ, ದೊಡ್ಡದೊಂದು ಚೀಟಿಯಲ್ಲಿ ಸ್ವೈನ್ ಫ್ಲೂ ಎಂದು ಬರೆಯುವ ಬದಲಾಗಿ ವೈಫ್ ಫ್ಲೂ ಎಂದು ಬರೆದು ಕೈಗೆ ಕೊಟ್ಟರು. ನಂತರ “ಈ ವೈರಸ್, ಗಂಡನಾಗಲಿ ಹೆಂಡತಿಯಾಗಲಿ, ಯಾರಾದರೊಬ್ಬರು ಇಲ್ಲವಾದ ಮೇಲೆಯಷ್ಟೇ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಸಹನೆ ಮತ್ತು ಸಹಬಾಳ್ವೆಯೇ ಇದಕ್ಕೆ ಮದ್ದು,” ಎಂದು ಹೇಳಿದರು.