ಅರುಣ್‌ : ನನ್ನ ಫ್ರೆಂಡ್‌ ಕಿರಣ್‌ ಎಷ್ಟು ಶಾಂತ ಸ್ವಭಾವದವನು ಗೊತ್ತಾ? ಅವನೆಂದೂ ಯಾವ ವಿಷಯಕ್ಕೂ ಕೋಪ ಮಾಡಿಕೊಂಡ ಪ್ರಸಂಗವೇ ಇಲ್ಲ. ಮನಸ್ಸನ್ನು ಸದಾ ಸ್ಥಿಮಿತದಲ್ಲಿ ಇಟ್ಟುಕೊಂಡಿರುತ್ತಾನೆ.

ವರುಣ್‌ : ಹೌದೇನು? ಒಂದು ಉದಾಹರಣೆ ಕೊಡು ನೋಡೋಣ.

ಅರುಣ್‌ : ನಾನು ನಿನ್ನೆ ಸಂಜೆ ಮಾಲ್ ಗೆ ಹೋಗೋಣ ಅಂತ ಅವನನ್ನು ಹುಡುಕಿಕೊಂಡು ಹೊರಟೆ. ಅವರ ಮನೆ ಅಪಾರ್ಟ್ ಮೆಂಟ್‌ನ 3ನೇ ಮಹಡಿಯಲ್ಲಿದೆ. ಅಲ್ಲಿಂದ ಇಳಿದು ನಾವು ಹೊರಹೋಗಬೇಕು, ಅಷ್ಟರಲ್ಲಿ 5ನೇ ಮಹಡಿಯಿಂದ ಯಾರೋ ಒಬ್ಬ ಮಹಿಳೆ ಮೇಲಿನಿಂದ ಅವನ ತಲೆ ಮೇಲೆ ಸಾಂಬಾರ್‌ ಸುರಿದುಬಿಟ್ಟಳು.

ವರುಣ್‌ : ಅಯ್ಯಯ್ಯೋ….. ಆಮೇಲೇನಾಯ್ತು?

ಅರುಣ್‌ : ಅವನು ಒಂದಿಷ್ಟು ವಿಚಲಿತನಾಗದೆ, `ಮೇಡಂ, ಹಾಗೆ 1-2 ರೊಟ್ಟಿ ಇದ್ದರೆ ಎಸೆದು ಬಿಡಿ, ರಾತ್ರಿ ಡಿನ್ನರ್‌ ಈಗಲೇ ಮುಗಿಸಿಕೊಳ್ತೀನಿ,’ ಎನ್ನುವುದೇ?

ಸತೀಶ : ನಿನ್ನೆ ನನ್ನ ಹೆಂಡತಿ ಜೊತೆ ಕಾರಣವಿಲ್ಲದೆ ಜಗಳ ಆಯ್ತು.

ಮಹೇಶ : ಯಾಕೆ? ಅಂಥದ್ದು ಏನಾಯ್ತು?

ಸತೀಶ : ನಾನು ಟಿ.ವಿ.ಯಲ್ಲಿ ಕ್ರಿಕೆಟ್‌ ಮ್ಯಾಚ್‌ ನೋಡಬೇಕಿತ್ತು, ಅವಳು ನೋಡಿದ್ರೆ ಇವತ್ತೇ ಸಿನಿಮಾಗೆ ಹೋಗೋಣ ಅಂತ ಶುರು ಮಾಡಿದ್ಲು.

ಮಹೇಶ : ಹ್ಞೂಂ…. ಸಿನಿಮಾ ಹೇಗಿತ್ತು?

ಅತ್ತೆ : ನೋಡಮ್ಮ, ನೀನು ಹೊರಗಡೆ ಬೀದಿಯಲ್ಲಿ ಓಡಾಡುವಾಗ ಮರೆಯದೆ ಖಂಡಿತಾ ತಲೆ ಮೇಲೆ ಸೆರಗು ಹೊದ್ದಿರಬೇಕು, ನೀನಿನ್ನು ತಾರುಣ್ಯದಲ್ಲಿದ್ದಿ ಅಂತ ಮರೀಬೇಡ. ನನ್ನನ್ನು ನೋಡು, ವಯಸ್ಸಾದ ಮೇಲೂ ನಾನು ತಲೆ ಮೇಲೆ ಸೆರಗು ಹೊದೆಯದೆ ಹೊರಗೆ ಓಡಾಡೋಲ್ಲ.

ಸೊಸೆ : ಆಗಲಿ ಅತ್ತೆ, ನಿಮ್ಮಂತೆಯೇ ನಾನೂ ಸಹ ವಯಸ್ಸಾದ ಮೇಲೆ ಮುಖದ ಸುಕ್ಕು ಕಾಣಿಸದಿರಲಿ ಎಂದು ತಲೆಯ ಮೇಲೆ ಸೆರಗು ಹೊದ್ದು ಓಡಾಡುತ್ತೇನೆ.

ಪತ್ನಿ : ನೀವು ನಿಜಕ್ಕೂ ನನ್ನನ್ನು ಬಹಳ ಪ್ರೇಮಿಸುತ್ತೀರಾ?

ಪತಿ : ನಾನು ನಿನ್ನನ್ನು ಎಷ್ಟು ಪ್ರೇಮಿಸುತ್ತೇನೆಂದರೆ ನೀನು ನನಗೆ ನಕಲಿ ವಿಷ ಕೊಟ್ಟರೂ ಗಟಗಟ ಕುಡಿದುಬಿಡ್ತೀನಿ, ಬೇಕಾದ್ರೆ ಈ ಅಸಲಿ ವಿಷ ಟ್ರೈ ಮಾಡಿ ನೋಡು!

ಹೊಸ ಸೀರೆ : ಗಂಡಸಿಗೆ 2 ಪೆಗ್‌ ಹಾಕುವುದರಿಂದ ಏರುವ ಅದೇ ನಶೆ, ಇದನ್ನು ಉಡುವ ಹೆಂಗಸಿಗೆ ಆಗುತ್ತದಂತೆ.

ಎರಡನೇ ಮದುವೆ : ಅನುಭವಗಳ ಮೇಲೆ ಆಶಾಕಿರಣದ ವಿಜಯೋತ್ಸವ.

ಹೆಂಡತಿ : ಮದುವೆಯ ನಂತರ ನಿಮ್ಮ ಎಲ್ಲಾ ಅಭ್ಯಾಸಗಳಿಗೂ ಆಕ್ಷೇಪಣೆ ಹೇಳುತ್ತಾ, ತನಗೆ ಬೇಕಾದಂತೆ ಪರಿವರ್ತಿಸಿಕೊಳ್ಳುತ್ತಾ, ಕೊನೆಗೊಂದು ದಿನ `ನೀವೆಷ್ಟು ಬದಲಾಗಿ ಹೋದ್ರಿ…. ಮದುವೆ ಹೊಸತರಲ್ಲಿ ನೀವು ಹೀಗಿರಲಿಲ್ಲ’ ಎನ್ನುವಳು.

ಯಶಸ್ವೀ ವ್ಯಕ್ತಿ : ಮೊದಲ ಹೆಂಡತಿಯ ಕಾರಣದಿಂದ ಯಶಸ್ಸು ದೊರಕಿಸಿಕೊಂಡ ಈತ, ಯಶಸ್ಸಿನ ಕಾರಣದಿಂದ ಎರಡನೇ ಹೆಂಡತಿಯನ್ನು ದಕ್ಕಿಸಿಕೊಳ್ಳುವನು.

ಸುರೇಖಾ : ವಿಚ್ಛೇದನದ ನಂತರ ನನ್ನ ಹಾಗೂ ನನ್ನ ಗಂಡನ ಮಧ್ಯೆ ಎಲ್ಲ ಸಮಸಮನಾಗಿ ಹಂಚಿಕೆಯಾದ. 2 ಮಕ್ಕಳು ಆತನ ಬಳಿ, 2 ಮಕ್ಕಳು ನನ್ನ ಬಳಿ ಉಳಿದರು.

ವಿನುತಾ : ಅದು ಸರಿ, ಆಸ್ತಿ ಹೇಗೆ ಹಂಚಿಕೆಯಾಯ್ತು?

ಸುರೇಖಾ : ಅದೂ ಸಹ ಸಮಸಮನಾಗಿ ಹಂಚಿಹೋಯ್ತು. ಆಸ್ತಿಯ ಅರ್ಧ ಭಾಗ ಅವರ ಲಾಯರ್‌ ಗೆ, ಉಳಿದರ್ಧ ಭಾಗ ನನ್ನ ಲಾಯರ್‌ ಗೆ ಹಂಚಿಹೋಯ್ತು!

ಕುಮುದಾ ಯಾವುದೋ ಕಾರಣಕ್ಕೆ ಅವಸರವಾಗಿ ತನ್ನ ತವರೂರಿಗೆ ಹೋಗಬೇಕಾಯ್ತು. ಶಾಲೆಯಿಂದ ಬಂದ ಮಗನನ್ನು ಅತ್ತೆಯ ವಶಕ್ಕೆ ಒಪ್ಪಿಸಿ, ಬೇಗ ಬಂದುಬಿಡುವುದಾಗಿ ಹೇಳಿ ಊರಿಗೆ ಹೊರಟಳು.

2 ದಿನ ಕಳೆಯುವಷ್ಟರಲ್ಲಿ ಅತ್ತೆಯಿಂದ ತಂತಿ ಹೊರಟುಬಂದಿತ್ತು : `ಬೇಗ ಮರಳಿ ಬಾ, ಮಗನ ಕಾಟ ತಡೆಯಲಾಗುತ್ತಿಲ್ಲ.’

ಜಾಣೆ ಕುಮುದಾ ಕೂಡಲೇ ತಂತಿ ಮೂಲಕ ಉತ್ತರಿಸಿದಳು : `ಯಾರ ಮಗ….?!’.

ಗುಂಡನ ಹೆಂಡತಿ ಇದ್ದಕ್ಕಿದ್ದಂತೆ ಮನೆಯಿಂದ ಮಾಯವಾದಳು. ಗುಂಡ ಒಂದು ವಾರದವರೆಗೂ ತನಗೆ ಗೊತ್ತಿರುವ ಜಾಗಗಳಲ್ಲೆಲ್ಲ ಹುಡುಕಾಡಿದ, ಏನೂ ಲಾಭವಾಗಲಿಲ್ಲ. ಇನ್ನೆಲ್ಲೂ ಸಿಕ್ಕಲಾರಳು ಎಂದು ಖಚಿತವಾದಾಗ ಪೊಲೀಸ್‌ ಠಾಣೆಗೆ ದೂರು ನೀಡಿದ. 15 ದಿನಗಳಾದರೂ ಏನೂ ಲಾಭವಾಗಲಿಲ್ಲ.

ಕೊನೆಗೆ ದೈನಿಕವೊಂದಕ್ಕೆ ಹೀಗೆ ಜಾಹೀರಾತು ನೀಡಿಯೇಬಿಟ್ಟ `ನನ್ನ ಹೆಂಡತಿ 3-4 ವಾರಗಳಿಂದ ಕಾಣೆಯಾಗಿದ್ದಾಳೆ. ಯಾರೇ ಆಗಲಿ, ಅವಳನ್ನು ಹುಡುಕಿಕೊಡಲು ಯತ್ನಿಸಿದರೆ, ಅವರ ಜೀವಕ್ಕೆ ಅಪಾಯ ತಪ್ಪಿದ್ದಲ್ಲ!’

ಗೋಪಾಲಯ್ಯ ತಮ್ಮ ಹೆಂಡತಿ ರತ್ನಮ್ಮನ ಜೊತೆ ಘನಘೋರ ಜಗಳಕ್ಕೆ ಇಳಿದಿದ್ದರು.

ಗೋಪಾಲಯ್ಯ : ನೋಡು…. ನಿಂಗೆ ಮತ್ತೆ ಮತ್ತೆ ಹೇಳ್ತಾ ಇದ್ದೀನಿ, ನೀನು ಇದೇ ರೀತಿ ಹಠ ಮಾಡುತ್ತಿದ್ದರೆ ನನ್ನೊಳಗಿನ ಮೃಗ ಜಾಗೃತವಾಗಿಬಿಡುತ್ತೆ…. ಹುಷಾರ್‌!

ರತ್ನಮ್ಮ : ಸರಿ, ಆಗಲಿ ಬಿಡಿ. ಆ ಇಲಿಗೆ ಮಾತ್ರ ನಾನು ಹೆದರುತ್ತೀನಿ ಅಂದುಕೊಂಡ್ರಾ…..?

ಆಧುನಿಕ ಯುಗದ ವ್ಯಾಖ್ಯಾನಗಳು :

ಜೀವನ ಸಂಗಾತಿ : ಯಾವ ವ್ಯಕ್ತಿ ನಿಮ್ಮ ಸಂಕಟದ ಘಳಿಗೆಯಲ್ಲಿ ಸದಾ ಜೊತೆಗಿರುತ್ತಾರೋ ಅವರು. (ಮದುವೆಗೆ ಮೊದಲು ಹತ್ತಿರ ಸುಳಿಯದವರು)

ಆಕಳಿಕೆ : ಯಾವ ವಿವಾಹಿತ ಗಂಡಸು ಇದಕ್ಕಾಗಿ ಬಾಯಿ ತೆರೆದರೂ ಅದಕ್ಕೇನೂ ಆಕ್ಷೇಪಣೆ ಇರುವುದಿಲ್ಲ.

ಆದರ್ಶ ಪತ್ನಿ : ಮನೆಯ ಕೆಲಸಕಾರ್ಯಗಳಾದ ಗುಡಿಸು, ಸಾರಿಸು, ಪಾತ್ರೆ ತೊಳಿ, ಬಟ್ಟೆ ಒಗಿ… ಮುಂತಾದವುಗಳಿಗೆ ಗಂಡನಿಗೆ ಸಹಾಯ ಮಾಡುವವಳು.

ಮನೋಚಿಕಿತ್ಸಕರು : ಯಾರು ನಿಮ್ಮಿಂದ ಭಾರಿ ಫೀಸ್‌ ವಸೂಲಿ ಮಾಡಿಯೂ, ನಿಮ್ಮ ಹೆಂಡತಿ ನಿಮ್ಮನ್ನು ನಯಾ ಪೈಸಾ ಖರ್ಚಿಲ್ಲದೆ ದಿನನಿತ್ಯ ಕೆದಕಿ ಕೇಳುವಂಥ ಪ್ರಶ್ನೆಗಳನ್ನೇ ಕೇಳುವರು.

ಪತಿ : ನಾನು 5 ದಿನಗಳಿಗಾಗಿ ಅಫಿಶಿಯಲ್ ಟೂರ್‌ ಮೇಲೆ ಹೊರಟಿದ್ದೀನಿ.

ಪತ್ನಿ : ಒಳ್ಳೆಯದು, ಹೋಗಿಬನ್ನಿ, ಬೇಗ ಬಂದು ನನಗೆ ಸರ್‌ಪ್ರೈಸ್‌ ಕೊಡಲು ಯತ್ನಿಸಬೇಡಿ, ಆಮೇಲೆ ನೀವೇ ಸರ್‌ಪ್ರೈಸ್ಡ್ ಆಗಿಹೋಗ್ತೀರಿ!

ಪತಿ : ನಿನ್ನನ್ನು ನೋಡುತ್ತಿದ್ದರೆ ಒಂದು ಸುಂದರವಾದ ಹಾಡು ನೆನಪಿಗೆ ಬರುತ್ತಿದೆ…

ಪತ್ನಿ : ಹೌದೇ? ಅದೇನು?

ಪತಿ : ಮೌನವೇ ಆಭರಣ…. ಮುಗುಳ್ನಗೆ ಶಶಿಕಿರಣ… ಲಜ್ಜೆಯೇ ಹೂಬಾಣ…..

ಪತ್ನಿ : ಸಾಕು ಸಾಕು, ಈ ಸಲದ ಆ್ಯನಿವರ್ಸರಿಗೂ ಏನು ಕೊಡಿಸೋದಿಲ್ಲ ಅಂತ ನೇರವಾಗಿ ಹೇಳ್ಬಿಡಿ!

ಪ್ರೌಢ ದಂಪತಿಗಳು ಒಮ್ಮೆ ತಮ್ಮ ಹಿಂದಿನ ಆ ರಸವತ್ತಾದ ದಿನಗಳನ್ನು ಮತ್ತೆ ಸವಿಯೋಣವೆಂದು, ಹಿಂದಿನ ತರಹವೇ ಪುನರಾವರ್ತಿಸೋಣ ಎಂದು ಮಾತನಾಡಿಕೊಂಡರು. ಮಾರನೇ ಸಂಜೆ ತಾತಾ ಪಾರ್ಕಿನಲ್ಲಿ ಅಜ್ಜಿಗಾಗಿ ಗುಲಾಬಿ ಹಿಡಿದು ಎಷ್ಟು ಕಾದರೂ ಅಜ್ಜಿ ಬರಲೇ ಇಲ್ಲ. ಕೋಪದಿಂದ ಅವರು ಮನೆಗೆ ಬಂದು ರೇಗಿದಾಗ, “ನಾನೇನ್ರಿ ಮಾಡ್ಲಿ…. ಅಮ್ಮ ಪಾರ್ಕಿಗೆ ಕಳಿಸೋದೇ ಇಲ್ಲ,” ಎನ್ನುವುದೇ ಅಜ್ಜಿ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ