ಖರ್ಜೂರದ ಮೋದಕ
ಸಾಮಗ್ರಿ : 1-1 ಕಪ್ ಮೈದಾ ಕಾದಾರಿದ ಹಾಲು, ಅರ್ಧರ್ಧ ಕಪ್ ರವೆ ತುಪ್ಪ, ಅಗತ್ಯವಿದ್ದಷ್ಟು ಪುಡಿಸಕ್ಕರೆ ಹಸಿ ಖರ್ಜೂರ ಸಿಹಿ ಖೋವಾ ಏಲಕ್ಕಿ ಪುಡಿ ಹಾಲಲ್ಲಿ ನೆನೆದ ಕೇಸರಿ, ಕರಿಯಲು ರೀಫೈಂಡ್ ಎಣ್ಣೆ, ಅಲಂಕರಿಸಲು ಬೆಳ್ಳಿ ರೇಕು, ಗೋಡಂಬಿ ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್).
ವಿಧಾನ : ಒಂದು ಬಟ್ಟಲಿಗೆ ಮೈದಾ, ರವೆ ಚಿಟಕಿ ಉಪ್ಪು ಸೇರಿಸಿ, ಹಾಲು ಬೆರೆಸುತ್ತಾ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ. ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಅದಕ್ಕೆ ಖೋವಾ, ಮಸೆದ ಹಸಿ ಖರ್ಜೂರ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಇದಕ್ಕೆ ಏಲಕ್ಕಿ, ಕೇಸರಿ, ಸಕ್ಕರೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿ ಕೈಯಾಡಿಸಿ. ಹೂರಣ ಒಂದು ಉತ್ತಮ ಹದಕ್ಕೆ ಬಂದಾಗ ಕೆಳಗಿಳಿಸಿ, ಆರಲು ಬಿಡಿ. ಅದೇ ಸಮಯದಲ್ಲಿ ಅರ್ಧ ಕಪ್ ಸಕ್ಕರೆಗೆ ಅಷ್ಟೇ ನೀರು ಬೆರೆಸಿ ಒಂದೆಳೆ ಪಾಕ ತಯಾರಿಸಿ. ಇದಕ್ಕೆ ತುಸು ಕೇದಗೆ ಎಸೆನ್ಸ್ ಬೆರೆಸಿ ಆರಲು ಬಿಡಿ. ಈಗ ಮೈದಾ ಮಿಶ್ರಣಕ್ಕೆ ಮತ್ತಷ್ಟು ತುಪ್ಪ ಬೆರೆಸಿ ನಾದಿಕೊಂಡು, ಸಣ್ಣ ಉಂಡೆಗಳಾಗಿಸಿ, ಪುಟ್ಟ ಪೂರಿಗಳಾಗಿ ಲಟ್ಟಿಸಿಕೊಳ್ಳಿ. ಇದಕ್ಕೆ 2-3 ಚಮಚ ಹೂರಣ ತುಂಬಿಸಿ, ಚೆನ್ನಾಗಿ ಕವರ್ ಮಾಡಿ, ಚಿತ್ರದಲ್ಲಿರುವಂತೆ ಮೋದಕದ ಆಕಾರ ನೀಡಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಅವು ಚೆನ್ನಾಗಿ ಆರಿದ ಮೇಲೆ, ಸಕ್ಕರೆ ಪಾಕದಲ್ಲಿ ಅದ್ದಿ, ಹೊರತೆಗೆದು, ಒಣಗಿದ ಮೇಲೆ ಸವಿಯಲು ಕೊಡಿ.
ಪಿಸ್ತಾ ಖೋವಾ ಕೇಕ್
ಸಾಮಗ್ರಿ : 250 ಗ್ರಾಂ ಮೈದಾ, 10 ಮೊಟ್ಟೆ, 250 ಗ್ರಾಂ ಪುಡಿಸಕ್ಕರೆ, 15 ಗ್ರಾಂ ಸ್ಪಂಜ್ ಜೆಲ್, 2 ಚಿಟಕಿ ಬೇಕಿಂಗ್ ಪೌಡರ್, 4 ಚಮಚ ರೀಫೈಂಡ್ ಎಣ್ಣೆ, 150 ಗ್ರಾ ಪಿಸ್ತಾ ಪೇಸ್ಟ್. 200 ಗ್ರಾಂ ಸಿಹಿ ಖೋವಾ, 100 ಗ್ರಾಂ ಚೀಜ್, 300 ಗ್ರಾಂ ಬೀಟ್ ಮಾಡಿಕೊಂಡ ಕ್ರೀಂ, ಅಗತ್ಯವಿದ್ದಷ್ಟು ಶುಗರ್ ಸಿರಪ್ ನೀರು.
ವಿಧಾನ : ಒಂದು ಬೇಸನ್ನಿಗೆ ಒಡೆದು ಗೊಟಾಯಿಸಿದ ಮೊಟ್ಟೆ, ಪುಡಿಸಕ್ಕರೆ, ಸ್ಪಂಜ್ ಜೆಲ್ ಬೆರೆಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ಇದಕ್ಕೆ ಮೈದಾ, ಬೇಕಿಂಗ್ ಪೌಡರ್, ಪಿಸ್ತಾ ಪೇಸ್ಟ್ ಹಾಕಿ ಚೆನ್ನಾಗಿ ಬೆರೆಸಿಡಿ. ಆಮೇಲೆ ಸ್ವಲ್ಪ ಸ್ವಲ್ಪವಾಗಿ ನೀರು ಬೆರೆಸುತ್ತಾ ಪೂರಿ ಹಿಟ್ಟಿಗಿಂತಲೂ ಮೃದುವಾಗಿ ಬರುವಂತೆ ಕಲಸಬೇಕು. ಇದಕ್ಕೆ ರೀಫೈಂಡ್ ಎಣ್ಣೆ ಬೆರೆಸಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ. ಅರ್ಧ ಗಂಟೆ ಬಳಿಕ ಬೇಕಿಂಗ್ ಡಿಶ್ಶಿಗೆ ತುಪ್ಪ ಸವರಿ, ಅದರ ಮೇಲೆ ಈ ಮಿಶ್ರಣ ಹರಡಿ. ಮೊದಲೇ ಪ್ರೀಹೀಟೆಡ್ ಓವನ್ನಿನಲ್ಲಿ 230 ಡಿಗ್ರಿ ಶಾಖದಲ್ಲಿ 7-8 ನಿಮಿಷ ಹದನಾಗಿ ಬೇಕ್ ಮಾಡಿ. ಇದನ್ನು ಹೊರತೆಗೆದು ಆರಿದ ಮೇಲೆ, ಶುಗರ್ ಸಿರಪ್ ಸವರಬೇಕು. ಅದರ ಮೇಲೆ ನೀಟಾಗಿ ತುರಿದ ಚೀಸ್, ಆ ಪದರದ ಮೇಲೆ ಬೀಟ್ ಮಾಡಿದ ಕ್ರೀಂ ಬರುವಂತೆ ಪೇರಿಸಿ. ಈ ತರಹ 3 ಪದರಗಳು ಬರುವಂತೆ ಮಾಡಿಕೊಂಡು, ಆಯತಾಕಾರವಾಗಿ ಕತ್ತರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಆ್ಯಪಲ್ ಕೇಸರಿಯ ಜಿಲೇಬಿ
ಮೂಲ ಸಾಮಗ್ರಿ : ಅರ್ಧ ಸಣ್ಣ ಚಮಚ ಯೀಸ್ಟ್. 1 ಚಮಚ ಸಕ್ಕರೆ, 1 ಕಪ್ ಮೈದಾ, 2 ಚಮಚ ತುಪ್ಪ, 1-2 ಮಾಗಿದ ಸೇಬು, ಕರಿಯಲು ರೀಫೈಂಡ್ ಎಣ್ಣೆ.
ಸಕ್ಕರೆಯ ಪಾಕಕ್ಕಾಗಿ : 1 ಕಪ್ ಸಕ್ಕರೆ, 8-10 ಎಸಳು (ಹಾಲಲ್ಲಿ ನೆನೆಸಿದ) ಕೇಸರಿ, 2 ಸಣ್ಣ ಚಮಚ ಗುಲಾಬಿಜಲ, 2 ಚಮಚ ಹಾಲು, 2 ಚಿಟಕಿ ಕೇಸರಿ ಬಣ್ಣ.
ಅಲಂಕರಿಸಲು : 5-6 ಎಸಳು ಕೇಸರಿ, 2 ಚಮಚ ಪಿಸ್ತಾ, ಬಾದಾಮಿ ಚೂರು, ಒಂದಿಷ್ಟು ತಾಜಾ ಗುಲಾಬಿ ದಳಗಳು.
ವಿಧಾನ : ಒಂದು ಸ್ಟೀಲ್ ಬಟ್ಟಲಲ್ಲಿ ಅರ್ಧ ಕಪ್ ಬಿಸಿ ನೀರು ಹಾಕಿಕೊಂಡು ಅದಕ್ಕೆ ಸಕ್ಕರೆ, ಯೀಸ್ಟ್ ಬೆರೆಸಿ ಚೆನ್ನಾಗಿ ಕದಡಿಕೊಳ್ಳಿ. ನಂತರ ಇದಕ್ಕೆ 2 ಚಿಟಕಿ ಮೈದಾ ಬೆರೆಸಿ ಕದಡಿಕೊಂಡು, 5 ನಿಮಿಷ ಹಾಗೇ ಬಿಡಿ. ಇನ್ನೊಂದು ದೊಡ್ಡ ಪಾತ್ರೆಗೆ ಮೈದಾ, ಯೀಸ್ಟ್ ಮಿಶ್ರಣ, ತುಪ್ಪ, ಚಿಟಕಿ ಉಪ್ಪು, ಅರ್ಧ ಕಪ್ ಬಿಸಿ ನೀರು ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣ ಸಿದ್ಧಪಡಿಸಿ. ಇದನ್ನು 1 ತಾಸು ಹಾಗೇ ನೆನೆಯಲು ಬಿಡಿ. ನಂತರ ಮತ್ತೆ ಗೊಟಾಯಿಸಿ. ಒಂದು ಚಿಕ್ಕ ಪ್ಯಾನಿನಲ್ಲಿ ತುಸು ತುಪ್ಪ ಬಿಸಿ ಮಾಡಿ, ಅದಕ್ಕೆ ಕೇಸರಿ ಹಾಕಿ ಕೆದಕಬೇಕು. ಇದಕ್ಕೆ ಹಾಲು ಬೆರೆಸಿ ಚೆನ್ನಾಗಿ ಕುದಿಸಿ. ಮಂದ ಉರಿ ಇರಲಿ. ಇದಕ್ಕೆ ಹಾಲು ಕೇಸರಿ ಮಿಶ್ರಣ, ಕೇಸರಿ ಬಣ್ಣ, ಗುಲಾಬಿ ಜಲ ಬೆರೆಸಿ ಮತ್ತೆ 2-3 ನಿಮಿಷ ಕುದಿಸಬೇಕು. ಒಂದೆಳೆ ಪಾಕ ಸಿದ್ಧಗೊಂಡಾಗ ಅದನ್ನು ಕೆಳಗಿಳಿಸಿ ಆರಲು ಬಿಡಿ. ಬಾಣಲೆಯಲ್ಲಿ ರೀಫೈಂಡ್ ಎಣ್ಣೆ ಬಿಸಿ ಮಾಡಿ. ಸೇಬಿನ ಸಿಪ್ಪೆ ಹೆರೆದು, ಅದನ್ನು ಗುಂಡನೆಯ ಬಿಲ್ಲೆಗಳಾಗಿ ಹೆಚ್ಚಿಕೊಳ್ಳಿ. ಇದನ್ನು ಮೈದಾ ಮಿಶ್ರಣದಲ್ಲಿ ಅದ್ದಿಕೊಂಡು, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ನಂತರ ಸಕ್ಕರೆ ಪಾಕಕ್ಕೆ ಹಾಕಿ ನೆನೆಯಲು ಬಿಡಿ. ಒಂದು ತಟ್ಟೆಯಲ್ಲಿ ಇವನ್ನು ಜೋಡಿಸಿಕೊಂಡು, ಚಿತ್ರದಲ್ಲಿರುವಂತೆ ಕೇಸರಿ, ಗುಲಾಬಿ ದಳಗಳಿಂದ ಅಲಂಕರಿಸಿ ಸವಿಯಲು ಕೊಡಿ.
ಕ್ಯಾಪ್ಸಿಕಂ ಹಲ್ವಾ
ಸಾಮಗ್ರಿ : 3-4 ಕ್ಯಾಪ್ಸಿಕಂ, ಅರ್ಧರ್ಧ ಲೀ. ಗಟ್ಟಿ ಹಾಲು, 100 ಗ್ರಾಂ ತುರಿದ ಖೋವಾ, 150 ಗ್ರಾಂ ಸಕ್ಕರೆ, ಒಂದಿಷ್ಟು ಗುಲಾಬಿ ಜಲ, ತುಂಡರಿಸಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು, 4-5 ಚಮಚ ತುಪ್ಪ.
ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಗೋಡಂಬಿಗಳನ್ನು ಹುರಿದು ತೆಗೆಯಿರಿ. ಅದರಲ್ಲಿ ಹೆಚ್ಚಿದ ಕ್ಯಾಪ್ಸಿಕಂ ಹಾಕಿ ಬಾಡಿಸಿ. ಇದನ್ನು ಹೊರತೆಗೆದು ಆರಲು ಬಿಡಿ. ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ತಿರುವಿಕೊಳ್ಳಿ. ಅದೇ ಬಾಣಲೆಯಲ್ಲಿ ಮತ್ತೆ ತುಪ್ಪ ಬಿಸಿ ಮಾಡಿಕೊಂಡು, ತುರಿದ ಖೋವಾ ಹಾಕಿ ಬಾಡಿಸಿ. ನಂತರ ಅದಕ್ಕೆ ಸಕ್ಕರೆ, ಹಾಲು ಬೆರೆಸಿ ಮಂದ ಉರಿಯಲ್ಲಿ ಸತತ ಕೈಯಾಡಿಸಿ. ಹಾಲು ಅರ್ಧದಷ್ಟು ಹಿಂಗಿದಾಗ, ಇದಕ್ಕೆ ಕ್ಯಾಪ್ಸಿಕಂ ಪೇಸ್ಟ್, ಗೋಡಂಬಿ, ದ್ರಾಕ್ಷಿ, ಗುಲಾಬಿಜಲ ಸೇರಿಸಿ ಕೇಸರಿಭಾತ್ ಹದಕ್ಕೆ ಕೆದಕಿ ಕೆಳಗಿಳಿಸಿ. ಬಿಸಿ ಇರುವಾಗಲೇ ಇನ್ನಷ್ಟು ತುಪ್ಪ ಹಾಕಿ ಸವಿಯಲು ಕೊಡಿ.
ಜ್ಯಾಫ್ರಾನಿ ರೋಲ್ ವಿತ್ ಡ್ರೈಫ್ರೂಟ್ಸ್
ಸಾಮಗ್ರಿ : 5-6 ಬ್ರೆಡ್ ಸ್ಲೈಸ್, 2 ಚಿಟಕಿ ಕೇಸರಿ, ಅರ್ಧ ಕಪ್ ಕಾದಾರಿದ ಕೆನೆಹಾಲು, 200 ಗ್ರಾಂ ಸಕ್ಕರೆ, 100 ಗ್ರಾಂ ಖೋವಾ, ಅಗತ್ಯವಿದ್ದಷ್ಟು ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು ಮತ್ತು ತುರಿದ ಚಾಕಲೇಟ್, ಕರಿಯಲು 2-3 ಸೌಟು ತುಪ್ಪ.
ವಿಧಾನ : ಒಂದು ಚಿಕ್ಕ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು, ಬ್ರೆಡ್ ಸ್ಲೈಸ್ ನ್ನು ಇದರಲ್ಲಿ ಹೊಂಬಣ್ಣ ಬರುವಂತೆ ಕರಿದು ತೆಗೆಯಿರಿ. ಅದರಲ್ಲಿನ ತುಪ್ಪವನ್ನು ಒಂದು ಬಟ್ಟಲಿಗೆ ಬಗ್ಗಿಸಿ, ಅದೇ ಪ್ಯಾನಿನಲ್ಲಿ ಕೆನೆ ಹಾಲು ಬಿಸಿ ಮಾಡಿ. ಇದಕ್ಕೆ ಬೆಚ್ಚಗಿನ ಹಾಲಲ್ಲಿ ನೆನೆಸಿ ಕದಡಿದ ಕೇಸರಿ, ಸಕ್ಕರೆ ಸೇರಿಸಿ ಕೈಯಾಡಿಸುತ್ತಾ ಕುದಿಸಬೇಕು. ಇದು ಅರ್ಧದಷ್ಟು ಹಿಂಗಿದಾಗ ಕೆಳಗಿಳಿಸಿ. ಅದೇ ಪ್ಯಾನಿನಲ್ಲಿ ತುಸು ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಗೋಡಂಬಿ ಹುರಿದು ತೆಗೆಯಿರಿ, ಅಗಲ ತಟ್ಟೆಯಲ್ಲಿ ಹರಡಿಕೊಳ್ಳಿ. ಮತ್ತೆ ಅದೇ ಪ್ಯಾನಿಗೆ ತುರಿದ ಚಾಕಲೇಟ್ ಹಾಕಿ ಕರಗಿಸಿ. ಮೊದಲು ಕರಿದ ಬ್ರೆಡ್ ಸ್ಲೈಸನ್ನು ಗಟ್ಟಿ ಹಾಲಿನಲ್ಲಿ ಅದ್ದಿ ತೆಗೆಯಿರಿ. ದ್ರಾಕ್ಷಿ, ಗೋಡಂಬಿಗಳ ಒಂದು ಪದರ ಮೆತ್ತಿಕೊಳ್ಳುವಂತೆ ಮಾಡಿ, ಚಿತ್ರದಲ್ಲಿರುವಂತೆ ರೋಲ್ ಮಾಡಿ. ಕರಗಿದ ಚಾಕಲೇಟ್ ನಲ್ಲಿ ಎರಡೂ ಬದಿ ಅದ್ದಿಕೊಂಡು, ಬೆಂದ ಸಿಹಿ ಶ್ಯಾವಿಗೆ ಅಥವಾ ನೂಡಲ್ಸ್ ಮೇಲೆ ಹರಡಿ ಸವಿಯಲು ಕೊಡಿ.
ಬಾಳೇಹಣ್ಣಿನ ಪಡ್ಡು
ಸಾಮಗ್ರಿ : 100 ಗ್ರಾಂ ಮೈದಾ, 3-4 ಮಾಗಿದ ಚುಕ್ಕೆ ಬಾಳೆಹಣ್ಣು, 50 ಗ್ರಾಂ ಹಸಿ ಖರ್ಜೂರ (ಬಿಸಿ ಹಾಲಲ್ಲಿ ನೆನೆಸಿಡಿ), ಅರ್ಧ ಕಪ್ ಗಟ್ಟಿ ಹಾಲು, 50 ಗ್ರಾಂ ಬೆಣ್ಣೆ, 2-3 ಚಿಟಕಿ ಬೇಕಿಂಗ್ ಪೌಡರ್, ಅಲಂಕರಿಸಲು ಒಂದಿಷ್ಟು ಸೀಡ್ ಲೆಸ್ ದಾಳಿಂಬೆ ಹರಳು.
ಗಮನಿಸಿ : ಇದನ್ನು ತಯಾರಿಸಲು `ಪಡ್ಡು ತವಾ’ ಇರಬೇಕು. ಕಪ್ಪು ಕಲ್ಲಿನ ಅಥವಾ ಕಬ್ಬಿಣ, ಸ್ಟೀಲ್ ನ ಕುಳಿಗಳಿರುವ ಈ `ಪಡ್ಡು ತವಾ’ ಮಾರ್ಕೆಟ್ ನಲ್ಲಿ ಅದೇ ಹೆಸರಿನಲ್ಲಿ ಲಭ್ಯ. ಇದನ್ನು ಮೈಕ್ರೋವೇವ್ ನಲ್ಲಿ ಸಹ ತಯಾರಿಸಬಹುದು, ಆದರೆ ಮೈಕ್ರೋವೇವ್ ಪ್ರೂಫ್ ಪಡ್ಡು ಡಿಶ್ ಬಳಸಲು ಮರೆಯದಿರಿ.
ವಿಧಾನ : ಒಂದು ಬಟ್ಟಲಿಗೆ ಮೈದಾ, ಚಿಟಕಿ ಉಪ್ಪು, ಚೆನ್ನಾಗಿ ಕಿವುಚಿದ ಬಾಳೆಹಣ್ಣು, ಹಸಿ ಖರ್ಜೂರ, ಕರಗಿದ ಬೆಣ್ಣೆ, ಬೇಕಿಂಗ್ ಪೌಡರ್ ಸೇರಿಸಿ ಕಲಸಿಕೊಳ್ಳಿ. ಇದಕ್ಕೆ ನಿಧಾನವಾಗಿ ಕಾದಾರಿದ ಹಾಲು ಬೆರೆಸುತ್ತಾ ಇಡ್ಲಿ ಹಿಟ್ಟಿನ ಹದಕ್ಕೆ ಗೊಟಾಯಿಸಿ. ಈ ಮಿಶ್ರಣವನ್ನು 1-2 ತಾಸು ನೆನೆಯಲು ಬಿಡಿ. ನಂತರ ಪಡ್ಡು ತವಾದ ಎಲ್ಲಾ ಕುಳಿಗಳಿಗೂ ತುಪ್ಪ ಸವರಿಕೊಂಡು, ಈ ಮಿಶ್ರಣದ ಅರ್ಧರ್ಧ ಭಾಗ ತುಂಬಿಸಿ. ಇದನ್ನು ನೇರವಾಗಿ ಗ್ಯಾಸ್ ಒಲೆಯ ಮೇಲಿರಿಸಿ, ಮೇಲೆ ಮುಚ್ಚಳ ಮುಚ್ಚಿಡಿ. 5-6 ನಿಮಿಷ ಬಿಟ್ಟು, ಸ್ಟೀಲ್ ಕಡ್ಡಿಯಿಂದ ಚುಚ್ಚಿ ನೋಡಿ ಬೆಂದಿದೆಯೇ ಎಂದು ಖಾತ್ರಿಪಡಿಸಿಕೊಂಡು, ಪಡ್ಡುಗಳನ್ನು ತಿರುವಿಹಾಕಿ, ಮತ್ತೆ ಸ್ವಲ್ಪ ಸ್ವಲ್ಪ ತುಪ್ಪ ಸೇರಿಸಿ, ಎರಡೂ ಬದಿ ಚೆನ್ನಾಗಿ ಬೇಯಿಸಿ. ನಂತರ ತವಾ ಕೆಳಗಿಳಿಸಿ, ಬಿಸಿ ಪಡ್ಡುಗಳನ್ನು ತಟ್ಟೆಯಲ್ಲಿ ಜೋಡಿಸಿ, ಮೇಲೊಂದಿಷ್ಟು ತುಪ್ಪ ಹಾಕಿ, ಚಿತ್ರದಲ್ಲಿರುವಂತೆ, ದಾಳಿಂಬೆ ಹರಳಿನಿಂದ ಅಲಂಕರಿಸಿ ಸವಿಯಲು ಕೊಡಿ.
ಸೂಚನೆ ಹಿಂದಿನ ದಿನ ಉಳಿದ ಇಡ್ಲಿ ಹಿಟ್ಟಿಗೆ (ಚೆನ್ನಾಗಿ ಹುದುಗು ಬಂದು ಹುಳಿ ಆಗಿರುತ್ತದೆ) 1-2 ಈರುಳ್ಳಿ, ಹಸಿಮೆಣಸು, ಶುಂಠಿ, ಕೊ.ಸೊಪ್ಪ, ಕರಿಬೇವು, ಚಿಟಕಿ ಉಪ್ಪು ಸೇರಿಸಿ ಇದೇ ತರಹ `ಖಾರದ ಪಡ್ಡು’ ತಯಾರಿಸಬಹುದು. ಖಾರ ಒಲ್ಲದವರಿಗೆ ಅದೇ ಹಿಟ್ಟಿಗೆ ಹೆಚ್ಚಿಗೆ ತೆಂಗಿನತುರಿ, ಬೆಲ್ಲ ತುರಿದು ಹಾಕಿ, ಮೇಲೆ ಒಂದಿಷ್ಟು ಏಲಕ್ಕಿ ಪುಡಿ ಉದುರಿಸಿ, ಸಿಹಿ ಪಡ್ಡು ಸಹ ತಯಾರಿಸಬಹುದು. ಆದರೆ ಹಿಟ್ಟು ಮಾತ್ರ ಇಡ್ಲಿ ಹಿಟ್ಟಿನಂತೆ ಗಟ್ಟಿಯಾಗಿರಬೇಕು, ದೋಸೆ ಹಿಟ್ಟಿನಂತೆ ನೀರಾದರೆ, ಕುಳಿಗಳಿಂದ ಅವು ಸಲೀಸಾಗಿ ಮೇಲೆ ಬರುವುದಿಲ್ಲ. ಇದೇ ಕ್ರಮವನ್ನು ಮೈಕ್ರೋವೇವ್ ನಲ್ಲಿ ಮಾಡಲು, ತುಪ್ಪ ಸರಿದ ಮೈಕ್ರೋವೇವ್ ಪ್ರೂಫ್ ಡಿಶ್ ನ ಕುಳಿಗಳಿಗೆ ಹಿಟ್ಟು ತುಂಬಿಸಿ, 4-5 ನಿಮಿಷ ಬೇಯಿಸಿ. ಹೊರತೆಗೆದು ಪಡ್ಡುಗಳನ್ನು ತಿರುವಿಹಾಕಿ, ಮತ್ತೆ 3-4 ನಿಮಿಷ ಬೇಯಿಸಿದರೆ, ಬಿಸಿ ಬಿಸಿ ಪಡ್ಡು ಸವಿಯಲು ಸಿದ್ಧ, ರುಚಿ ವಿಭಿನ್ನವಾಗಿರುತ್ತದೆ!
ಬೀಟ್ ರೂಟ್ ಹಲ್ವಾ
ಸಾಮಗ್ರಿ : 1 ಕಿಲೋ ಬೀಟ್ ರೂಟ್, 3 ಕಪ್ ಸಕ್ಕರೆ, ಅರ್ಧ ಲೀ. ಕಾದಾರಿದ ಗಟ್ಟಿ ಹಾಲು, ಅಗತ್ಯವಿದ್ದಷ್ಟು ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು, ಸಿಹಿ ಖೋವಾ, ತುಪ್ಪ, ತುರಿದ ಪನೀರ್, ಏಲಕ್ಕಿಪುಡಿ, ಪಚ್ಚಕರ್ಪೂರ.
ವಿಧಾನ : ನೀಟಾಗಿ ತುರಿದ ಬೀಟ್ ರೂಟ್ ಗೆ ಕಾದಾರಿದ ಹಾಲು ಬೆರೆಸಿ 1 ಸೀಟಿ ಬರುವಂತೆ ಕುಕ್ಕರ್ ನಲ್ಲಿ ಬೇಯಿಸಿ. ನಂತರ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಗೋಡಂಬಿಗಳನ್ನು ಹುರಿದು ತೆಗೆಯಿರಿ. ಆಮೇಲೆ ಇನ್ನಷ್ಟು ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಮಸೆದ ಖೋವಾ ಸೇರಿಸಿ, ಮಂದ ಉರಿಯಲ್ಲಿ ಬಾಡಿಸಬೇಕು. ಆಮೇಲೆ ಸಕ್ಕರೆ, ಬೀಟ್ ರೂಟ್ ಬಸಿದ ಹಾಲು ಬೆರೆಸಿ ಕೈಯಾಡಿಸಿ. ಆಮೇಲೆ ಇದಕ್ಕೆ ಬೀಟ್ ರೂಟ್ ಸೇರಿಸಿ ಚೆನ್ನಾಗಿ ಬಾಡಿಸಿ. ನಡುನಡುವೆ ತುಪ್ಪ ಬೆರೆಸಿಕೊಳ್ಳಿ, ಮಂದ ಉರಿ ಇರಲಿ. ಕೊನೆಯಲ್ಲಿ ಏಲಕ್ಕಿಪುಡಿ, ಪಚ್ಚಕರ್ಪೂರ, ಗೋಡಂಬಿ, ದ್ರಾಕ್ಷಿ ಎಲ್ಲಾ ಬೆರೆಸಿ ಕೇಸರಿಭಾತ್ ಹದಕ್ಕೆ ಬಂದಾಗ ಕೆಳಗಿಳಿಸಿ. ಇದನ್ನು ಚೂಪಾದ ಅಂಚುಳ್ಳ ಒಂದು ಸ್ಟೀಲ್ ಬಟ್ಟಲಿಗೆ ತುಂಬಿಸಿ, ಟೈಟಾಗಿ ಅದುಮಬೇಕು. ಅದನ್ನು ಒಂದು ತಟ್ಟೆಗೆ ಬೋರಲು ಹಾಕಿ, ಅದರ ಮೇಲೆ ತುರಿದ ಪನೀರ್ ಉದುರಿಸಿ, ಚಿತ್ರದಲ್ಲಿರುವಂತೆ ಆ್ಯಪಲ್, ಕಿವೀ ಫ್ರೂಟ್ ಹೋಳುಗಳಿಂದ ಅಲಂಕರಿಸಿ ಸವಿಯಲು ಕೊಡಿ.
ಗುಲ್ ಕಂದ್ ಪುಡಿಂಗ್
ಸಾಮಗ್ರಿ : 50 ಗ್ರಾಂ ಗುಲ್ ಕಂದ್, 30 ಮಿ.ಲೀ. ರೋಸ್ ಸಿರಪ್, 150 ಗ್ರಾಂ ವೆನಿಲಾ ಐಸ್ ಕ್ರೀಂ, 2 ಚಿಟಕಿ ಜೆಲ್ಲಿ ಪೌಡರ್, ಒಂದಿಷ್ಟು ರೋಸ್ ಎಸೆನ್ಸ್ ಗುಲಾಬಿ ದಳಗಳು.
ವಿಧಾನ : ಮೊದಲು ತುಸು ಬಿಸಿ ನೀರಿಗೆ ಜೆಲ್ಲಿ ಪೌಡರ್ ಬೆರೆಸಿ, 1 ಗಂಟೆ ಕಾಲ ನೆನೆಯಲು ಬಿಡಿ. ಆಗ ಅದು ಚೆನ್ನಾಗಿ ಅರಳಿ ಹಿಗ್ಗುತ್ತದೆ. ಮಿಕ್ಸಿಗೆ ಬೆಣ್ಣೆ ಗುಲ್ ಕಂದ್, ಐಸ್ ಕ್ರೀಂ ಬೆರೆಸಿ ಚೆನ್ನಾಗಿ ವಿಪ್ ಮಾಡಿ ಇದಕ್ಕೆ ರೆಡಿಯಾದ ಜೆಲ್ಲಿ, ರೋಸ್ ಸಿರಪ್, ಎಸೆನ್ಸ್ ಬೆರೆಸಿ ಮತ್ತೊಮ್ಮೆ ಬ್ಲೆಂಡ್ ಮಾಡಿ. ನಂತರ ಇವನ್ನು ಸೂಕ್ತ ಆಕಾರದ ಮೋಲ್ಡ್ ಗಳಿಗೆ ತುಂಬಿಸಿ, ಫ್ರೀಝರಿನಲ್ಲಿಟ್ಟು ಸೆಟ್ ಮಾಡಿ. ನಂತರ ಹೊರತೆಗೆದು ಚಿತ್ರದಲ್ಲಿರುವಂತೆ ಅದನ್ನು ಬೋರಲು ಹಾಕಿ ಅದರ ಮೇಲೆ ಮತ್ತೊಂದು ಸ್ಕೂಪ್ ವೆನಿಲಾ ಐಸ್ ಕ್ರೀಂ ಸೇರಿಸಿ, ಗುಲಾಬಿ ದಳ ಉದುರಿಸಿ ಸವಿಯಲು ಕೊಡಿ. ಅಗತ್ಯವೆನಿಸಿದರೆ, ಯಾವುದೇ ರೆಡಿಮೇಡ್ ಸಿಹಿ ಪಿಜ್ಜಾ ಮೇಲೆ ಇದನ್ನು ಸರ್ವ್ ಮಾಡಬಹುದು. ಜೊತೆಗೆ ಇನ್ನಷ್ಟು ಬೆಣ್ಣೆ ಗುಲ್ ಕಂದ್ ಇರಲಿ.
ಹಾಲಿನ ರಬಡಿಯ ಶಾರ್ಟ್ ಕ್ರಸ್ಟ್ ಬೋಟ್
ಮೂಲ ಸಾಮಗ್ರಿ : 100 ಗ್ರಾಂ ಮೈದಾ, 1 ಮೊಟ್ಟೆ, 50-50 ಗ್ರಾಂ ಬೆಣ್ಣೆ ಹಾಲಿನ ರಬಡೀ, 100 ಗ್ರಾಂ ಐಸಿಂಗ್ ಶುಗರ್, 7-8 ಡ್ರೈ ಜಾಮೂನು, ತುಪ್ಪದಲ್ಲಿ ಹುರಿದ ಒಂದಿಷ್ಟು ಡ್ರೈಫ್ರೂಟ್ಸ್.
ರಬಡೀ ಸಾಮಗ್ರಿ : 250 ಮಿ.ಲೀ. ಕೆನೆಭರಿತ ಗಟ್ಟಿ ಹಾಲು, 100 ಗ್ರಾಂ ಪುಡಿಸಕ್ಕರೆ, ಒಂದಿಷ್ಟು ಏಲಕ್ಕಿಪುಡಿ.
ವಿಧಾನ : ಮೊದಲು ಹಾಲನ್ನು ಕಾಯಿಸಿ. ಮಂದ ಉರಿ ಮಾಡಿಕೊಂಡು ಏಲಕ್ಕಿಪುಡಿ ಸೇರಿಸಿ. ಇದನ್ನು ಕೈಯಾಡಿಸುತ್ತಾ ಚೆನ್ನಾಗಿ ಮರಳಿಸಬೇಕು. ಇದರಲ್ಲಿ ಅರ್ಧಕ್ಕೂ ಹೆಚ್ಚು ಪಾಲು ಹಿಂಗಿದಾಗ, ಸಕ್ಕರೆ ಸೇರಿಸಿ ಕದಡಿಕೊಳ್ಳಿ. ಇದು ಸಾಕಷ್ಟು ಗಟ್ಟಿಯಾದಾಗ ಕೆಳಗಿಳಿಸಿ ಆರಲು ಬಿಡಿ, ನಂತರ ಫ್ರಿಜ್ ನಲ್ಲಿರಿಸಿ ಕೂಲ್ ಮಾಡಿ. ಇದೀಗ ರಬಡೀ ರೆಡಿ.
ಪ್ಯಾನಿಗೆ ಬೆಣ್ಣೆ ಹಾಕಿಕೊಂಡು ಬಿಸಿ ಮಾಡಿ. ಅದಕ್ಕೆ ಐಸಿಂಗ್ ಶುಗರ್ ಬೆರೆಸಿ ಕದಡಿಕೊಳ್ಳಿ. ತಕ್ಷಣ ಕೆಳಗಿಳಿಸಿ ಆರಲು ಬಿಡಿ. ಆಮೇಲೆ ಇದಕ್ಕೆ ಒಡೆದ ಮೊಟ್ಟೆ ಹಾಕಿ ಗೊಟಾಯಿಸಿ. ಆಮೇಲೆ ನಿಧಾನವಾಗಿ ಮೈದಾ ಸೇರಿಸುತ್ತಾ, ಗಂಟಾಗದಂತೆ ಕಲಸಿಕೊಳ್ಳಿ. ಈ ಮಿಶ್ರಣವನ್ನು 1 ತಾಸು ಫ್ರಿಜ್ ನಲ್ಲಿರಿಸಿ. ನಂತರ ಹೊರತೆಗೆದು ಇನ್ನಷ್ಟು ಮೈದಾ, ತುಪ್ಪ ಹಾಕಿ ಪೂರಿಗಿಂತಲೂ ಮೃದುವಾಗುವಂತೆ ನಾದಬೇಕು. ಇದನ್ನು ಮತ್ತೆ 1 ತಾಸು ಫ್ರಿಜ್ ನಲ್ಲಿರಿಸಿ, ಹೊರತೆಗೆದು ನಾದಿದ ನಂತರ, ಬೋಟ್ ಆಕಾರ ನೀಡಬೇಕು. ಆಮೇಲೆ ಓವನ್ ನಲ್ಲಿರಿಸಿ 160 ಡಿಗ್ರಿ ಶಾಖದಲ್ಲಿ ಹದನಾಗಿ ಬೇಕ್ ಮಾಡಿ. ಈ ಬೋಟ್ ಮೇಲೆ ಮೊದಲು ರಬಡೀ ಹರಡಬೇಕು, ನಂತರ ಚಿತ್ರದಲ್ಲಿರುವಂತೆ ಅದರ ಮೇಲೆ ಡ್ರೈ ಜಾಮೂನು ಇರಿಸಿ, ಬೆಳ್ಳಿ ರೇಕಿನಿಂದ ಅಲಂಕರಿಸಿ. ಗೋಂಡಬಿ, ಬಾದಾಮಿಗಳಿಂದ ಗಾರ್ನಿಷ್ ಮಾಡಿ, ಸವಿಯಲು ಕೊಡಿ.
ಚಾಕಲೇಟ್ ರಸಮಲಾಯಿ ಡ್ಯುಯೆಟ್
ಸಾಮಗ್ರಿ : 6 ಪೀಸ್ ರಸಮಲಾಯಿ, 250 ಗ್ರಾಂ ಬೀಟ್ ಮಾಡಿದ ಫ್ರೆಶ್ ಕ್ರೀಂ, 125 ಗ್ರಾಂ ಡಾರ್ಕ್ ಚಾಕಲೇಟ್, 2 ಮೊಟ್ಟೆ, 25 ಗ್ರಾಂ ಸಕ್ಕರೆ, 2 ಚಿಟಕಿ ಜೆಲ್ಲಿ ಪೌಡರ್.
ವಿಧಾನ : ಮೊದಲು ಜೆಲ್ಲಿ ಪೌಡರ್ ನ್ನು ಬಿಸಿ ನೀರಲ್ಲಿ ನೆನೆಸಿ ಜೆಲ್ಲಿ ರೆಡಿ ಮಾಡಿ. ಒಂದು ಪ್ಯಾನ್ ನಲ್ಲಿ ಚಾಕಲೇಟ್ ಬಿಸಿ ಮಾಡಿ. ಕರಗಿದ ಈ ಚಾಕಲೇಟ್ ಗೆ ಬೀಟ್ ಮಾಡಿದ ಫ್ರೆಶ್ ಕ್ರೀಂ, ಒಡೆದು ಗೊಟಾಯಿಸಿದ ಮೊಟ್ಟೆ, ಸಕ್ಕರೆ, ಜೆಲ್ಲಿ ಬೆರೆಸಿ ಚೆನ್ನಾಗಿ ಕದಡಿಕೊಳ್ಳಿ. ಇದರ ಮಧ್ಯೆ ಅಲ್ಲಲ್ಲಿ ರಸಮಲಾಯಿ ಇರಿಸಿ, ಫ್ರೀಝರಿನಲ್ಲಿಟ್ಟು 1 ತಾಸು ಸೆಟ್ ಮಾಡಿ. ಹೊರತೆಗೆದ ನಂತರ, ಚಿತ್ರದಲ್ಲಿರುವಂತೆ ಕಟ್ ಮಾಡಿ ಸವಿಯಲು ಕೊಡಿ