ಮರಳಿ ಬರಲಿರುವ ಐಶ್
ಇತ್ತೀಚೆಗೆ ಮುಂಬೈನಲ್ಲಿ ಯಾವುದೋ ಕಾರ್ಯಕ್ರಮದ ಉದ್ಘಾಟನೆಗೆ ಬಂದಿದ್ದ ಐಶ್ವರ್ಯಾಳನ್ನು ಮತ್ತೆ ಎರಡನೇ ಸಲ ತಾಯಿ ಆಗಲಿದ್ದೀಯಾ ಎಂದಾರೋ ಕೇಳಿದರಂತೆ. ಸದ್ಯಕ್ಕೆ ಹಾಗೇನೂ ಇಲ್ಲ ಎಂದು ಆಕೆ ನಾಚಿ ಕೆಂಪು ಕೆಂಪಾದಳಂತೆ. ಈಚೀಚೆಗೆ ಈಕೆ ದುಬಾರಿ ಗಡಿಯಾರಗಳು, ವಜ್ರಾಭರಣಗಳು ಹಾಗೂ ಬ್ಯೂಟಿ ಪ್ರಾಡಕ್ಟ್ ಗಳ ಸತತ ಪ್ರಮೋಶನ್ ಗೆ ತೊಡಗಿದ್ದಾಳೆ. ಇಂದಿಗೂ ಆಕೆಯ ಫೇವರಿಟ್ ಡ್ರೆಸ್ ಅನಾರ್ಕಲಿ ಸೂಟ್ ಆಗಿದೆ. ಕೆಲವು ದಿನಗಳ ಹಿಂದೆ ವಾಚ್ ಕಲೆಕ್ಷನ್ನಿನ ಈವೆಂಟ್ ನಲ್ಲಿ ಕಪ್ಪು ಲೆಹಂಗಾದಲ್ಲಿ ಹೀಗೆ ಕಾಣಿಸಿಕೊಂಡಿದ್ದಳು. ಬಹಳ ದಿನಗಳಿಂದ ಈಕೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ಅಭಿಮಾನಿಗಳ ಆಕ್ಷೇಪ. ಅವರಿಗೆ ನಿರಾಸೆಯಾಗಬಾರದೆಂದೇ ಪತಿ ಅಭಿಷೇಕ್ ಬಚ್ಚನ್ ಜೊತೆ `ಹ್ಯಾಪಿ ಆ್ಯನಿವರ್ಸರಿ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.
ವ್ಯಾಂಪೈರ್ ಅಕ್ಷಯ್
ಸದಾ `ಕಿಲಾಡಿ’ ಸೀರೀಸ್ ನಲ್ಲಿ ಮಿಂಚುತ್ತಿದ್ದ ಅಕ್ಷಯ್ ಕುಮಾರ್, ಸ್ಟಂಟ್ ಕಿಂಗ್ ಎಂಬುದು ಗೊತ್ತಿರುವ ವಿಚಾರವಾದರೆ, ಕಾಮಿಡಿ ರೋಲ್ಸ್ ನಲ್ಲೂ ಸಾಕಷ್ಟು ಕಾಣಿಸಿಕೊಂಡಿದ್ದಾನೆ. ಹೀಗಾಗಿ ಒಂದು ಚೇಂಜ್ ಗೋಸ್ಕರ ಡ್ರಾಕುಲಾ ತರಹ ಈಗ ್ಯಾಂಪೈರ್ ಆಗಿ ಅಭಿಮಾನಿಗಳನ್ನು ಭಯಪಡಿಸಬೇಕೆಂದು ಆಸೆಯಂತೆ, ಆಲ್ ದಿ ಬೆಸ್ಟ್! ಮೀಡಿಯಾಗಾಗಿ ಸ್ಲಿಮ್ ಟ್ರಿಮ್ ಸಲ್ಮಾನ್ ಖಾನ್ ನಾಯಕತ್ವದ `ವೀರ್’ ಚಿತ್ರದ ಪ್ರಿನ್ಸೆಸ್ ಯಶೋಧರಾ ಪಾತ್ರದಿಂದ ಖ್ಯಾತಳಾದ ಜರೀನ್ ಖಾನ್, ಕ್ರಮೇಣ ಬಲೂನಿನಂತೆ ಊದಿದ್ದಳು. ಇಂಥವಳನ್ನು ಗ್ಲಾಮರ್ ಮೀಡಿಯಾ ಯಾಕೆ ಮೂಸೀತು? ಅದನ್ನು ಮನಗಂಡು ಸತತ ತನ್ನ ದೇಹ ದಂಡಿಸಿಕೊಂಡು ಈಕೆ ಈಗ ಸ್ಲಿಮ್ ಟ್ರಿಮ್ ಆಗಿದ್ದಾಳೆ. ತನ್ನ ಆರೋಗ್ಯದ ಕ್ರೆಡಿಟ್ ಮೀಡಿಯಾಗೇ ಸಲ್ಲಬೇಕೆಂದು ಹೇಳುತ್ತಾಳೆ. ಇದಕ್ಕಾಗಿ ಪಡಬಾರದ ಪಾಡು ಪಟ್ಟಿರುವ ಜರೀನ್ ಳನ್ನು ಇನ್ನಾದರೂ ಮೀಡಿಯಾ ಮೆರೆಸಲಿದೆಯೇ?
ಶೃತಿಗೆ ದಕ್ಕಿದ ಅವಕಾಶ
ಸಾರಿಕಾ ಕಮಲಹಾಸನ್ ರ ಮಗಳು ಶೃತಿ ಹಾಸನ್ `ರಾಮಯ್ಯ ಸ್ತಾಯ್ಯ’ ಹಾಗೂ `ಡೀ ಡೇ’ ಚಿತ್ರಗಳಲ್ಲಿ ಮೈಚಳಿ ಬಿಟ್ಟು ನಟಿಸಿದ್ದರೂ ಯಾರೂ ಚಳಿ ಚಳಿ ಎನ್ನುತ್ತಾ ಈಕೆಗೆ ಸೊಪ್ಪು ಹಾಕಲಿಲ್ಲ. ಸತತ 2 ಫ್ಲಾಪ್ ಗಳಿಂದ ಇವಳ ಕೆರಿಯರ್ ಕುಸಿಯಿತೆಂದೇ ಸಹನಟಿಯರು ಸಂಭ್ರಮಿಸಿದ್ದರು. ಆದರೆ ಅಷ್ಟರಲ್ಲಿ ಅನೀಸ್ ಬಜ್ಮಿ ನಿರ್ದೇಶನದ `ವೆಲ್ ಕಂ ಬ್ಯಾಕ್’ ಚಿತ್ರದಲ್ಲಿ ನಾಯಕಿ ಪಟ್ಟ ದೊರೆತಾಗ, ಈಕೆ ನಿರಾಳವಾಗಿ ಉಸಿರಾಡಿದಳು. ಸೂಪರ್ ಹಿಟ್ ಎನಿಸಿದ್ದ `ವೆಲ್ ಕಂ’ ಚಿತ್ರದ ಸೀಕ್ವೆಲ್ `ವೆಲ್ ಕಂ ಬ್ಯಾಕ್’ನಲ್ಲಿ ಕತ್ರೀನಾಳ ಪಾತ್ರವನ್ನು ನರ್ಗೀಸ್ ಫಕ್ರಿ ನಿಭಾಯಿಸುವುದೆಂದಿತ್ತು, ಏನು ಕಾರಣವೋ…. ನರ್ಗೀಸ್ ಔಟ್, ಶೃತಿ ಇನ್!
ಬಾಲಿವುಡ್ ನಲ್ಲಿ ಗರ್ಬಾ ದರ್ಬಾರ್
ಕಳೆದ ನವರಾತ್ರಿ, ದೀಪಾವಳಿ ಹಬ್ಬಗಳಿಂದಾಗಿ ಇಡೀ ಭಾರತೀಯ ಚಿತ್ರೋದ್ಯಮದಲ್ಲಿ ಹಬ್ಬದ ವಾತಾವರಣ ಹರಡಿರುವಾಗ ಬಾಲಿವುಡ್ ಮಾತ್ರ ಹೇಗೆ ಹಿಂದುಳಿದೀತು? `ಪೊಲೀಸ್ ಗಿರಿ’ ಚಿತ್ರದಲ್ಲಿ ಐಟಂ ಗರ್ಲ್ಸ್ ಆಗಿದ್ದ ಕವಿತಾ ವರ್ಮ ಹಾಗೂ ಶಹಾಬಾದಿ ಸೇಠ್, ಇಂಥ ಗುಜರಾತಿ ಗೆಟಪ್ ನಲ್ಲಿ ಮುಂಬೈನ ರಾಜಬೀದಿಗಳಲ್ಲಿ ದಾಂಡಿಯಾ ಆಡುತ್ತಾ, ಟ್ರೆಡಿಷನಲ್ ಗರ್ಬಾ ನೃತ್ಯಗಳ ಮೂಲಕ ಫೋಟೋ ಶೂಟಿಂಗ್ ಗೆ ಪೋಸ್ ನೀಡಿ ಮಿಂಚಿದರು. ಈ ಕನ್ಯಾಮಣಿಗಳ ಕೋಲಾಟ ನಮ್ಮ ಪಡ್ಡೆಗಳಿಗೆ ಕಿಚ್ಚು ಹಚ್ಚದಿದ್ದೀತೇ?
ಮರೆಯಲಾಗದ ಮುಮ್ತಾಜ್ ರಲ್ಲಿ ಹುಟ್ಟಿದ ಮುಮ್ತಾಜ್
ಬಾಲ್ಯದಿಂದಲೇ ತಾನೊಬ್ಬ ಸಿನಿಮಾ ನಟಿ ಆಗಬೇಕೆಂದು ಕನಸು ಕಂಡವಳು. ಆಕೆಯ ತಾಯಿ ನವಾಜ್ ಹಾಗೂ ಆಂಟಿ ನಿಲೋಫರ್ ಮೊದಲಿನಿಂದಲೇ ಬಾಲಿವುಡ್ ನಟಿಯರು. 1958ರಲ್ಲಿ `ಸೋನೆ ಕಿ ಚಿಡಿಯಾ’ ಮೂಲಕ ಚೈಲ್ಡ್ ಆರ್ಟಿಸ್ಟ್ ಆಗಿ ತನ್ನ ಕೆರಿಯರ್ ಆರಂಭಿಸಿದ ಈಕೆ, 1960ರ ಹೊತ್ತಿಗೆ ಸಣ್ಣ ಪುಟ್ಟ ಪಾತ್ರಗಳಿಂದ ಖುಷಿ ಪಡಬೇಕಾಯ್ತು. ಮೊದ ಮೊದಲು `ಸಿ’ ಗ್ರೇಡ್‌ಪಾತ್ರಗಳಿಗಷ್ಟೇ ಸೀಮಿತಗೊಂಡಿದ್ದ ಈಕೆಯ ಕೆರಿಯರ್ ಗ್ರಾಫ್ ಗಮನಿಸಿ, ಅಂದಿನ ಸೂಪರ್ ಸ್ಟಾರ್ ಶಶಿಕಪೂರ್ ಮುಮ್ತಾಜ್ ನನಗೆ ನಾಯಕಿ ಆಗಲೇಬಾರದೆಂದು ಕರಾರು ಒಡ್ಡಿದ್ದರಂತೆ! ನಂತರ ದಾರಾಸಿಂಗ್ ಜೊತೆ ಸತತ 16 ಚಿತ್ರಗಳಲ್ಲಿ ನಟಿಸಿದ ಈಕೆ ಒಟ್ಟು 10 ಹಿಟ್ ಚಿತ್ರ ನೀಡಿದ್ದಳು. ಹೀಗಾಗಿ ಅದೇ ಶಶಿಕಪೂರ್ ಮುಂದೆ ಈಕೆಯೇ ತನ್ನ `ಚೋರ್ ಮಚಾಯೆ ಶೋರ್’ ಚಿತ್ರದ ನಾಯಕಿ ಆಗಬೇಕೆಂದು ಪಟ್ಟುಹಿಡಿದರಂತೆ! 1969ರಲ್ಲಿ ಅಂದಿನ ರಾಕಿಂಗ್ ಸ್ಟಾರ್ ರಾಜೇಶ್ ಖನ್ನಾ ಜೊತೆ `ದೋ ರಾಸ್ತೆ’ ಚಿತ್ರದಲ್ಲಿ ನಟಿಸಿದ ಈಕೆ ರಾತ್ರೋರಾತ್ರಿ ಸ್ಟಾರ್ ಎನಿಸಿದಳು. ಇವರಿಬ್ಬರ ಜೋಡಿ ಸತತ ಹಿಟ್ಸ್ ನೀಡತೊಡಗಿ ನಿಜ ಜೀವನದಲ್ಲೂ ನಿಕಟವರ್ತಿಗಳಾದರು. ತನ್ನ 15 ವರ್ಷಗಳ ಯಶಸ್ವಿ ಕೆರಿಯರ್ ನಲ್ಲಿ ಈಕೆ 108 ಚಿತ್ರಗಳಲ್ಲಿ ನಟಿಸಿ, ಬೇಡಿಕೆ ಇರುವಾಗಲೇ ಚಿತ್ರರಂಗಕ್ಕೆ ಬೈ ಬೈ ಹೇಳಿ ಕೌಟುಂಬಿಕ ಜೀವನಕ್ಕೆ ಅಡಿಯಿಟ್ಟಳು.
ಮಂದಿರಾಳ ಟ್ಯಾಟೂ ಹಂಗಾಮ
ಟಿ.ವಿ.ಯ ಚಿಕ್ಕ ಪರದೆಯಲ್ಲಿ ಯಶಸ್ವಿ ಎನಿಸಿದ ಕಲಾವಿದರು ಮುಂದೆ ದೊಡ್ಡ ಬೆಳ್ಳಿ ಪರದೆಯಲ್ಲಿ ಕೆರಿಯರ್ ರೂಪಿಸಿಕೊಳ್ಳುವುದು ಹೊಸ ವಿಷಯವಲ್ಲ. ಹೀಗಿರುವಾಗ ಅಲ್ಲಿ ಸಲ್ಲದವರು ಮರಳಿಗೂಡಿಗೆ ಬರುವುದೂ ಸಹಜ. ಇಂಥವರಲ್ಲಿ ಒಬ್ಬಳಾದ ಮಂದಿರಾ ಬೇಡಿ, ಈಚೆಗೆ ಕಲರ್ಸ್ ಟಿ.ವಿ.ಯ `24′ ಎಂಬ ಅನಿಲ್ ಕಪೂರ್ ನ ಆ್ಯಕ್ಷನ್ ಭರಿತ ಸೀರಿಯಲ್ ನಲ್ಲಿ ಸರ್ಕಾರಿ ಏಜೆಂಟ್ ರೂಪದಲ್ಲಿ ಗ್ಲಾಮರಸ್ ಪಾತ್ರ ವಹಿಸುತ್ತಿದ್ದಾಳೆ. ಇದಕ್ಕಾಗಿ ಈಕೆ ತೆರೆದ ಬೆಂಭಾಗ ಪ್ರದರ್ಶಿಸಲು ಗ್ಲಾಮರಸ್ ಟ್ಯಾಟೂ ಮೊರೆಹೊಕ್ಕಾಗ, ಈಕೆ ತನ್ನ ಸಿಖ್ ಕುಲಗುರುಗಳ ಕೆಂಗಣ್ಣಿಗೆ ಗುರಿಯಾಗಬೇಕಾಯ್ತು. ಬೀ ಕೇರ್ ಫುಲ್ ಮಂದಿರಾ!
ನಾನು ನಟನಾಗಲು ಬಯಸಿರಲಿಲ್ಲ!
1992ರಲ್ಲಿ `ಬಲಾನ್’ ಚಿತ್ರದ ಮೂಲಕ ಹಿಂದಿ ಬೆಳ್ಳಿತೆರೆಯಲ್ಲಿ ಮಿಂಚಲಾರಂಭಿಸಿದ ಮಂಗಳೂರು ಮೂಲದ ಸುನೀಲ್ ಶೆಟ್ಟಿ, ನೆಗೆಟಿವ್ ರೋಲ್ಸ್ ನಿಂದ ಕಾಮಿಡಿವರೆಗೂ ಎಲ್ಲದರಲ್ಲೂ ಪಳಗಿದ ಕೈ. 52ರ ಅಂಚಿನ ಈ ನಟನಿಗೆ ಅಸಲಿಗೆ ನಟನೆಗಿಂತ ಕ್ರಿಕೆಟ್ ನಲ್ಲಿ ಹೆಚ್ಚಿನ ಆಸಕ್ತಿ ಇತ್ತಂತೆ. ಈತನ ಮಗಳು ಅಥಿಯಾ ಶೆಟ್ಟಿ, ಆದಿತ್ಯ ಪಂಚೋಲಿಯ ಮಗ ಸೂರಜ್ ಜೊತೆ, ಜಾಕಿಶ್ರಾಫ್ ಮೀನಾಕ್ಷಿ ಶೇಷಾದ್ರಿ ಜೋಡಿಯ ಹಿಟ್ ಚಿತ್ರ `ಹೀರೋ’ದ ರೀಮೇಕ್ ನಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ.
ವಿದ್ಯಾಳ ಜನಪ್ರಿಯತೆ ಹಳ್ಳಿ ಹಳ್ಳಿಗೂ
ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ಜಾಹೀರಾತುಗಳಿಗೆ ರಾಯಭಾರಿ ಆಗಿರುವ ವಿದ್ಯಾಬಾಲನ್, ಉ.ಭಾರತದ ಪ್ರತಿ ಕಗ್ಗಹಳ್ಳಿಗೂ ಹೋಗಿ ಜನಸಾಮಾನ್ಯರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಹೊಸ ಸಂಚಲನವನ್ನೇ ಸೃಷ್ಟಿಸಿದ್ದಾಳೆ. ಇತ್ತೀಚೆಗೆ ಈಕೆ ಜಾರ್ಖಂಡ್ ರಾಜ್ಯದ ಠೇಠ್ ಹಳ್ಳಿಗೆ ಹೋದಾಗ, ಅಲ್ಲಿನ ಮಂದಿ `ಊ…ಲಾ….ಲಾ….’ ಮೇಡಂ ಬಂದರೆಂದು ಈಕೆಗೆ ಮುಗಿಬಿದ್ದರಂತೆ! ಅಲ್ಲಿನ ಗ್ರಾಮ ಪಂಚಾಯಿತಿ ಮೂಲಕ ಗ್ರಾಮೀಣ ಮಂದಿಯ ಪರಿಚಯ ಮಾಡಿಕೊಂಡ ವಿದ್ಯಾ, ಅವರ ಒತ್ತಾಯದ ಮೇರೆಗೆ `ಡರ್ಟಿ ಪಿಕ್ಚರ್’ ಚಿತ್ರದ ಹಾಡಿಗೆ ಸ್ಟೆಪ್ಸ್ ಹಾಕಿದ ನಂತರವೇ ಆಕೆ ಆರೋಗ್ಯ, ಶುಚಿತ್ವ, ಶಿಕ್ಷಣ ಇತ್ಯಾದಿಗಳ ಬಗ್ಗೆ ಮಾತನಾಡಲು ಅವರು ಅನುವು ಮಾಡಿಕೊಟ್ಟದ್ದು!
ಸಮಯದ ಸದುಪಯೋಗ
ಇತ್ತೀಚೆಗೆ ಯಾಕೋ ಹಿಂದಿಯ ಹೀರೋಗಳೆಲ್ಲ ಅನಾರೋಗ್ಯದ ಹಾದಿ ಹಿಡಿದಿದ್ದಾರೆ. ಮೊದಲು ರಣವೀರ್ ಡೆಂಗ್ಯು ಕಾಯಿಲೆಗೆ ಸಿಲುಕಿ ಸುಧಾರಿಸಿಕೊಂಡ ಮೇಲೆ, ಕಿಂಗ್ ಖಾನ್ ಎನಿಸಿದ ಶಾರೂಖ್ ತೀವ್ರ ವಿಷಮಶೀತ ಜ್ವರಕ್ಕೆ ತುತ್ತಾಗಿ ಮನೆಯಲ್ಲಿ ಬೆಡ್ ರೆಸ್ಟ್ ನಲ್ಲಿ ಇದ್ದಾನಂತೆ. ಹಾಗೆಂದು ಆತ ಸುಮ್ಮನೆ ಟೈಂ ಪಾಸ್ ಮಾಡುತ್ತಿಲ್ಲ, ಸಮಯದ ಸದುಪಯೋಗಕ್ಕಾಗಿ ತನ್ನೆಲ್ಲ ಹಳೆ ಚಿತ್ರಗಳ ಸಿ.ಡಿ. ನೋಡುತ್ತಾ, ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದಾನಂತೆ!
ಬೊಂಬಾಟ್ ರೀಎಂಟ್ರಿ
ಮಾಜಿ ಮಿಸ್ ಯೂನಿವರ್ಸ್ ಸುಷ್ಮಿತಾ ಸೇನ್ 3 ದೀರ್ಘ ವರ್ಷಗಳ ಗ್ಯಾಪ್ ನಂತರ ಬೆಳ್ಳಿತೆರೆಗೆ ಮರಳುತ್ತಿದ್ದಾಳೆ. ಈಕೆಯ `ರನ್ಸಿ ಕೀ ರಾನಿ’ ಚಿತ್ರವಂತೂ 3 ವರ್ಷಗಳಾದರೂ ಡಬ್ಬ ಬಿಟ್ಟು ಹೊರಬರವಲ್ಲೋ ಎನ್ನುತ್ತಿದೆ. ಹೀಗಿರುವಾಗ ತಾನು ಮತ್ತೆ ರೀ ಎಂಟ್ರಿ ಕೊಡಬೇಕೆಂದರೆ ಅದು ಬೊಂಬಾಟ್ ಆಗಲೇಬೇಕು ಎಂಬುದಿವಳ ಹಠ. ಶ್ರೀದೇವಿಯ `ಇಂಗ್ಲಿಷ್ ವಿಂಗ್ಲಿಷ್’ ಚಿತ್ರದಲ್ಲಿನ ಮಹಿಳಾ ಪ್ರಧಾನ ಪಾತ್ರದಿಂದ ಸಖತ್ ಇಂಪ್ರೆಸ್ ಆಗಿರುವ ಸುಷ್ಮಿತಾ, ತನಗೂ ಅಂಥ ಗಟ್ಟಿ ಪಾತ್ರವೇ ಬೇಕು ಎಂದು ಕಾಯುತ್ತಿದ್ದಾಳೆ. ಈ ಕಾರಣಕ್ಕಾಗಿ ಈಕೆ ಇತರ ಸಾಧಾರಣ ಪಾತ್ರಗಳನ್ನು ನಿರಾಕರಿಸಿ, ರಾಜಶ್ರೀ ಓಜಾರ ಹೊಸ ಚಿತ್ರದಲ್ಲಿ ಬೊಂಬಾಟ್ ಪಾತ್ರದಲ್ಲಿ ಮಿಂಚಲಿದ್ದಾಳಂತೆ. ಅದಾ ಚಿತ್ರ? ಅದಿನ್ನೂ ಸಸ್ಪೆನ್ಸ್!
ಬರ್ತಿದ್ದಾಳೆ ಚಂಬಲ್ ರಾಣಿ!
ಈಚೆಗೆ ನಟಿ ಕಂಗನಾ ರಾಣಾವತ್ ಗೆ ಬಾಲಿವುಡ್ ನಲ್ಲಿ ಶುಕ್ರದೆಸೆ ನಡೆಯುತ್ತಿದೆ ಎಂದೇ ಹೇಳಬೇಕು. ಹೀಗಾಗಿ ಆಕೆಯ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿ ಎನಿಸಿವೆ. `ಕೃಷ್’ ಚಿತ್ರದಲ್ಲಿ ಸೂಪರ್ ಪವರ್ ವುಮನ್, `ರಜ್ಜೋ’ ಚಿತ್ರದಲ್ಲಿ ವೇಶ್ಯೆಯ ಪಾತ್ರಗಳಂಥ ವಿಭಿನ್ನ ರೋಲ್ಸ್ ನಲ್ಲಿ ಕಾಣಿಸಿಕೊಂಡ ಕಂಗನಾಳಿಗೆ ಇದೀಗ ನಿರ್ದೇಶಕ ಟಿ. ಧೂಲಿಯಾ `ರಿವಾಲ್ವರ್ ರಾಣಿ’ ಚಿತ್ರದಲ್ಲಿ ಚಂಬಲ್ ಕಣಿವೆ ಡಾಕು ರಾಣಿಯ ಪಾತ್ರ ನೀಡಿದ್ದಾರೆ.
ತಂದೆಗೆ ತಕ್ಕ ಮಗಳು
ತಂದೆ ಅನಿಲ್ ಕಪೂರ್ ರ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸುವ ಮಗಳು ಸೋನಂ, ತನ್ನ ಉರ್ದು ಉಚ್ಚಾರಣೆಯಿಂದಾಗಿ `ರಾಂಝಣ’ ಹಾಗೂ ಪಂಜಾಬಿ ಆ್ಯಕ್ಸೆಂಟ್ ನಿಂದಾಗಿ `ಭಾಗ್ ಮಿಲ್ಕಾ ಭಾಗ್’ ಚಿತ್ರಗಳಲ್ಲಿ, ಕಟುವಾಗಿ ಟೀಕಿಸುವ ವಿಮರ್ಶಕರ ಬಾಯಿಗೂ ಬೀಗ ಬಡಿಯುವಂತೆ ಮಾಡಿದ್ದಾಳೆ! ಇವಳ ಭಾಷಾಜ್ಞಾನದಿಂದ ಪ್ರಭಾವಿತರಾಗದ ಬಾಲಿವುಡ್ ಮಂದಿಯೇ ಇಲ್ಲವಂತೆ. ಇದೆಲ್ಲದರ ಕ್ರೆಡಿಟ್ ನನ್ನ ತಂದೆಗೇ ಸಲ್ಲಬೇಕು ಎನ್ನುತ್ತಾಳೆ ಅನಿಲ್ ರ ವಿಧೇಯ ಮಗಳು ಸೋನಂ.
ಫಿಲ್ಮಿ ಸಂಗಾತಿ ಬೇಡ
`ಮರ್ಡರ್’ ಖ್ಯಾತಿಯ ಮಲ್ಲಿಕಾ ಶೆರಾವತ್ ತನ್ನ ಕೂರಲುಗಿನ ಮಾತುಗಳಿಂದ ಸದಾ ಚರ್ಚೆಯಲ್ಲಿರುತ್ತಾಳೆ. ಯಾವಾಗಮ್ಮ ನಿನ್ನ ಮದುವೆ, ಯಾರ ಜೊತೆ….. ಎಂದು ಯಾರೋ ಕೇಳಿದರಂತೆ. `ನಾನು ಮದುವೆ ಅಂತ ಮಾಡಿಕೊಂಡರೆ ಖಂಡಿತಾ ಅದು ಸಿನಿಮಾ ಮಂದಿಯನ್ನಲ್ಲ,’ ಎನ್ನುತ್ತಾಳೆ. ಬಹುಶಃ ಮಾಧುರಿ ದೀಕ್ಷಿತ್ ಹಾಗೂ ಶಿಲ್ಪಾ ಶೆಟ್ಟಿಯವರನ್ನು ನೋಡಿ ಮಲ್ಲಿಕಾಳಿಗೂ ಈ ಐಡಿಯಾ ಹೊಳೆದಿರಬಹುದೇ?
ಕಿರು ಪರದೆಯಲ್ಲಿ ಲವ್ವೋ ಲವ್ವು!
ಇತ್ತೀಚಿನ ಯಾವ ಟಿ.ವಿ. ಧಾರಾವಾಹಿ ನೋಡಿ, ಅಲ್ಲಿ ಪ್ರೀತಿಪ್ರೇಮಗಳ ಸುರಿಮಳೆಯೇ ಇರುತ್ತದೆ. ಟಿ.ವಿ. ಕಪಲ್ಸ್ ಪರಸ್ಪರ ನಿಕಟವರ್ತಿಗಳಾಗಲು ಎಲ್ಲಾ ಪ್ರಯತ್ನ ಮಾಡುತ್ತಿರುತ್ತಾರೆ. `ಬಡೇ ಅಚೆ ಲಗ್ತೆ ಹೈ’ ಧಾರಾವಾಹಿಯಲ್ಲಿ ಸಿಡಿಮಿಗುಟ್ಟುತ್ತಲೇ ಮದುವೆಯಾದ ಪ್ರಿಯಾ ರಾಮ್ ಕಪೂರ್ ನಂತರ ಆದರ್ಶ ದಂಪತಿಗಳೆನಿಸಿದ್ದಾರೆ. 7 ಸುದೀರ್ಘ ವರ್ಷಗಳ ಕೋಮಾದ ನಂತರ ಎದ್ದ ಪ್ರಿಯಾಳಲ್ಲಿ ರಾಮ್ ಅದೇ ಹಿಂದಿನ ಪ್ರೀತಿ ಉಳಿಸಿಕೊಂಡಿದ್ದರೆ, `ಖೇಲ್ತಿ ಹೈ ಝಿಂದಗಿ ಆಂಖ್ ಮಿಚೋಲಿ’ಯಲ್ಲಿ ವಿಧವೆ ಶೃತಿಯನ್ನು ಪ್ರೇಮಿಸುವ ಸಂಜಯ್, ಅದನ್ನು ವ್ಯಕ್ತಪಡಿಸಲಾಗದೆ ಬೇರೆಲ್ಲ ವಿಧದಲ್ಲೂ ನೆರವಾಗುತ್ತಾ ಪ್ರೇಮಭಿಕ್ಷೆಗಾಗಿ ಕಾಯುತ್ತಾನೆ. `ಸರಸ್ವತಿ ಚಂದ್ರ’ ಧಾರಾವಾಹಿಯ ಸರಸ್ ಕುಮುದಾಳನ್ನು ಅವಳ ದುಷ್ಟ ಪತಿಯಿಂದ ಬಿಡಿಸಿಕೊಂಡು ಬಂದು ಕಾಪಾಡಿದ್ದರೂ, ತನ್ನ ಪ್ರಣಯ ನಿವೇದನೆ ಮಾಡಿಕೊಳ್ಳಲಾಗದೆ ತುಡಿಯುತ್ತಾನೆ. `ಜೋಧಾ ಅಕ್ಬರ್’ ಧಾರಾವಾಹಿಯಲ್ಲಂತೂ ಜಾವ್ ಜೋಧಾಳನ್ನು ತನ್ನ ಕೋಣೆಯಲ್ಲೇ ಉಳಿಸಿಕೊಳ್ಳಲು ಯತ್ನಿಸಿದರೂ, ಜೋಧಾ ಅಂತರ ಕಾಪಾಡಿಕೊಂಡು ತನ್ನ ಪ್ರೀತಿ ಹಂಚುತ್ತಾಳೆ. ಒಟ್ಟಾರೆ ಪ್ರೇಕ್ಷಕರಿಗೆ ಉತ್ತಮ ಲವ್ ಟ್ರೈನಿಂಗ್ ಲಭಿಸುತ್ತಿದೆ.
ಸ್ಥೂಲತೆಯಿಂದ ತಪ್ಪುತ್ತಿದ್ದ ಅವಕಾಶಗಳು
`ಉತರನ್’ ಧಾರಾವಾಹಿಯಿಂದ ಎಲ್ಲರ ಮನೆಮಾತಾಗಿರುವ ತಪಸ್ಯಾ ಅಥವಾ ದಿವ್ಯಾ ದೇಸಾಯಿ ಒಂದು ಕಾಲದಲ್ಲಿ ಮಹಾ ಡುಮ್ಮಿ ಆಗಿದ್ದಳಂತೆ. ನಾನು ಜನಪ್ರಿಯತೆಯ ಈ ತುದಿಗೇರುತ್ತೇನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎನ್ನುವ ದಿವ್ಯಾ, ತನ್ನ ಕೆರಿಯರ್ ನಲ್ಲಿ ಹಲವಾರು ಏರಿಳಿತಗಳನ್ನು ಕಂಡಳು. `ಜನ ನನ್ನ ಆ್ಯಕ್ಟಿಂಗ್ ಹಾಗೂ ಅಂದ ಕಂಡು ಹೊಗಳುತ್ತಿದ್ದರು ನಿಜ, ಆದರೆ ಟಿ.ವಿ.ಗೆ ಬಂದ ಹೊಸದರಲ್ಲಿ ನಾನು ಬಹಳ ಸ್ಥೂಲಳಾಗಿದ್ದೆ. ಈ ಕಾರಣದಿಂದ ನಾನು ಹಲವಾರು ಉತ್ತಮ ಅವಕಾಶಗಳನ್ನು ಕಳೆದುಕೊಂಡಿದ್ದೆ. ಅನೇಕ ಸಲ ಮುಖದ ಮೇಲೆ ಹೊಡೆದಂತೆ ರಿಜೆಕ್ಟ್ ಮಾಡಿಬಿಡುತ್ತಿದ್ದರು. ನನ್ನ ದೃಢ ಸಂಕಲ್ಪದಿಂದ ನಾನು ಪ್ರಯತ್ನಪಟ್ಟು ತೆಳುಕಾಯ ಹೊಂದಿದೆ, ಸ್ವಪ್ರತಿಭೆಯಿಂದ ಹೊಸ ಹೊಸ ಅವಕಾಶ ಪಡೆಯುತ್ತಿದ್ದೇನೆ,’ ಎನ್ನುತ್ತಾಳೆ ದಿವ್ಯಾ.
ಡ್ಯಾನ್ಸ್ ಪೈಪೋಟಿಯ ನಚ್ ಬಲಿಯೇ
ಸಬ್ ಟಿ.ವಿ.ಯ `ಎಫ್.ಐ.ಆರ್’ ಧಾರಾವಾಹಿಯಲ್ಲಿ ಸದಾ ನಕ್ಕು ನಲಿಸುವ ಕೀಕು ಪಾತ್ರಧಾರಿಯನ್ನು ಯಾರೂ ಮರೆಯಲಾರರು. ಇದೀಗ ಕೀಕು ತನ್ನ ಪತ್ನಿ ಪ್ರಿಯಾಂಕಾ ಜೊತೆ `ನಚ್ ಬಲಿಯೇ ಸೀಸನ್-6′ ನಲ್ಲಿ ಕುಣಿದು ಕುಪ್ಪಳಿಸಲಿದ್ದಾನೆ. ಇವನ ಜೊತೆ ರಾಮಾಯಣದ ಸೀತಾರಾಮ ಪಾತ್ರಧಾರಿಗಳಾದ ದಿ ಬೀನಾ ಬ್ಯಾನರ್ಜಿ ಗುರುಮೀತ್ ಚೌಧರಿ ಹಾಗೂ ಕನ್ನಿಕಾ ಮಹೇಶ್ವರಿ ಅಂಕುರ್ ಘೈ ದಂಪತಿಗಳೂ ಸಹ ಭಾಗವಹಿಸುತ್ತಿದ್ದಾರೆ.