ನಾ. ಡಿಸೋಜ

ಎಪ್ಪತ್ತರ ದಶಕದಲ್ಲಿ ಆಗತಾನೇ ಓದಲು ಕಲಿತದ್ದೇ ತಡಾ, ನಮ್ಮಮ್ಮ, ಪ್ರಜಾವಾಣಿ ಪತ್ರಿಕೆಯ ಹೆಡ್ ಲೈನ್ ಮತ್ತು ಕ್ರೀಡಾ ಪುಟಗಳನ್ನು ಓದಲು ನನ್ನನ್ನು ಶುರು ಹಚ್ಚಿದರು. ಕೆಲವೇ ತಿಂಗಳಲ್ಲಿ ಪತ್ರಿಕೆ ಓದುವುದು ಸರಾಗವಾದಾಗ ಪತ್ರಿಕೆಯ ಜೊತೆ, ಸುಧಾ, ಪ್ರಜಾಮತ, ಮಯೂರ ಪುಸ್ತಗಳು ಕೈಗೆ ಬಂದವು. ಇನ್ನೂ ನಾಲ್ಕೈದನೇಯ ತರಗತಿಗೆ ಬರುವಷ್ಟರಲ್ಲಿಯೇ ಮಜ್ನೂ, ಶೂಜಾ, ಡಾಬು, ಫ್ಯಾಂಟೆಮ್, ಪುಟ್ಟಿ ಗಳನ್ನು ದಾಟಿ ಧಾರಾವಾಹಿಗಳನ್ನು ಓದಲು ಶುರು ಮಾಡಿಕೊಂಡಾಗಲೇ ನನಗೆ ಪರಿಚಯವಾದ ಮೊದಲ ಲೇಖಕರೇ ಶ್ರೀ ನಾರ್ಬಟ್ ಡಿಸೋಜ ಅಂದರೆ ನಾ. ಡಿಸೋಜಾ. ಆವರ ಮಾತೃಭಾಷೆ ಕೊಂಕಣಿ ಆದರೂ ಅಪ್ಪಟ ಕನ್ನಡಿಗ, ಆಚರಿಸುವುದು ಕ್ರೈಸ್ತ ಧರ್ಮವಾದರೂ ಅಪ್ಪಟ ಭಾರತೀಯ. ಕೇವಲ ಕವಿಯಲ್ಲದೇ, ಅಪ್ಪಟ ಪರಿಸರವಾದಿಯಾದ ನಾ. ಡಿಸೋಜಾವರು ಭಾನುವಾರ 2025 ಜನವರಿ 5 ರಾತ್ರಿ ನಿಧನರಾಗಿರುವುದು ಬಹಳ ದುಃಖಕರವಾದ ವಿಷಯವಾಗಿದ್ದು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾಗಿ ತಿಳಿಯೋಣ ಬನ್ನಿ.

ಶಿವಮೊಗ್ಗದ ಸಾಗರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಶ್ರೀ ಫಿಲಿಪ್ ಡಿಸೋಜ ಮತ್ತು ಶ್ರೀಮತಿ ರೂಪೀನಾ ಡಿಸೋಜ ದಂಪತಿಗಳ ಸುಪುತ್ರರಾಗಿ 1937 ಜೂನ್ 6ರಂದು ಪೋಷಕರು ನಾರ್ಬಟ್ ಡಿಸೋಜ ಎಂದು ನಾಮಕರಣ ಮಾಡಿದರೂ, ಸಾಹಿತ್ಯ ಲೋಕದಲ್ಲಿ ನಾ.ಡಿಸೋಜ ಎಂದೇ ಚಿರಪರಿಚಿತರು ಮತ್ತು ಆತ್ಮೀಯ ಒಡನಾಡಿಗಳ ಪ್ರೀತಿಯ ನಾಡಿ.

ಅಪ್ಪಟ ಕನ್ನಡಾಭಿಮಾನಿ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಅವರ ತಂದೆಯವರು ತಮ್ಮ ಶಾಲೆಯ ಮಕ್ಕಳಿಗೆ ಕಲಿಸಲು ಜಿ.ಪಿ. ರಾಜರತ್ನಂ, ಕುವೆಂಪು, ಬೇಂದ್ರೆ ಮುಂತಾದವರ ಪದ್ಯಗಳನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟಿದ್ದರು. ತಮ್ಮ 6ನೇ ವಯಸ್ಸಿಗೆ ಪುಸ್ತಕವನ್ನು ಓದಿ ಪ್ರಭಾವಿತರಾಗಿ ಕನ್ನಡ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡರು ಡಿಸೋಜರವರು. ಅವರು ಓದುತ್ತಿದ್ದ ಸಾಗರದ ಹೈಸ್ಕೂಲಿನಲ್ಲಿ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರರ ತಮ್ಮ ಗೊರೂರು ನರಸಿಂಹಾಚಾರ್ಯರು ಶಿಕ್ಷಕರಾಗಿದ್ದರು. ಅವರ ಪಾಠ ಪ್ರವಚನಗಳು ಕಗ್ಗಂಟಾಗಿರದೆ, ಕಥೆಗಳ ರೂಪದಲ್ಲಿ ಇರುತ್ತಿದ್ದವು. ಅವರ ಪ್ರಭಾವದಿಂದಾಗಿ ಬಾಲ್ಯದಲ್ಲೇ ಡಿಸೋಜ ಅವರಿಗೆ ಸಾಹಿತ್ಯಸಕ್ತಿಯನ್ನು ಹೆಚ್ಚಿಸಿತು.

2

ಇವರ ಕಲಿಯುತ್ತಿದ್ದ ಶಾಲೆಯಲ್ಲಿ ಸರ್ವಧರ್ಮ ಸಮಾನತೆಯ ಪ್ರತೀಕವಾಗಿ ಪ್ರತೀ ಬುಧವಾರ ಬಸವಣ್ಣನವರ ವಚನಗಳು, ಗುರುವಾರ ಭಗವದ್ಗೀತೆ, ಶುಕ್ರವಾರ ಕುರಾನ್ ಮತ್ತು ಶನಿವಾರ ಬೈಬಲ್ ಪಠಿಸಬೇಕಾಗಿತ್ತು. ಈ ವಿಷಯವನ್ನು ತಿಳಿದ ಅವರ ಚರ್ಚಿನ ಪಾದ್ರಿಯವರು ಮಗೂ, ನೀನು ಕ್ರಿಶ್ಚಿಯನ್. ನಿನ್ನ ಶಾಲೆಯಲ್ಲಿ ಇತರೇ ಧರ್ಮಗಳ ಬಗ್ಗೆ ಪ್ರಾರ್ಥನೆ ಮಾಡುವಾಗ ನೀನು ದೂರ ಹೋಗಿ ನಿಂತು ಬೈಬಲ್ ಮಾತ್ರ ಓದಬೇಕು ಎಂದು ಬುದ್ಧಿ ಹೇಳಲು ಬಂದಾಗ, ಬಾಲಕ ಡಿಸೋಜ ಪಾದ್ರಿಗಳಿಗೆ ಫಾದರ್, ನನಗೆ ಕ್ರಿಸ್ತನ ಬಗ್ಗೆ ಮತ್ತು ಕ್ರೈಸ್ತ ಧರ್ಮದ ಬಗ್ಗೆ ನಂಬಿಕೆ ಮತ್ತು ಭಕ್ತಿ ಇದೆ. ಅದೇ ರೀತಿ ಭಾರತದಲ್ಲಿರುವ ಇತರೇ ಧರ್ಮಗಳ ಬಗ್ಗೆಯೂ ಶ್ರದ್ಧಾ ಭಕ್ತಿಯಿದೆ. ಏಕೆಂದರೆ, ಕ್ರಿಶ್ಫಿಯನ್ ಧರ್ಮವೊಂದೇ ನಿಜವಾದ ಧರ್ಮವಲ್ಲ ಎಂದು ತೀಕ್ಷ್ಣವಾಗಿ ಹೇಳಿದ್ದರಂತೆ. ಇದರ ಪರಿಣಾಮವಾಗಿ  ಪಾದ್ರಿಗಳು ಪ್ರತೀ ಭಾನುವಾರ ಡಿಸೋಜರವರನ್ನು ಚರ್ಚಿನ ಪ್ರಾರ್ಥನೆಗಳಿಗೆ ಬಾರದಂತೆ ತಡೆದಿದ್ದರಂತೆ ಮತ್ತು ದಿವ್ಯ ಪ್ರಸಾದವನ್ನು ಕೊಡುವುದನ್ನು ನಿಲ್ಲಿಸಿದ್ದರಂತೆ.  ರೀತಿಯಾಗಿ ವಿದ್ಯಾರ್ಥಿ ದಿಶೆಯಲ್ಲೇ ನಾ ಡಿಸೋಜರವರು ಸರ್ವ ಧರ್ಮ ಸಮನ್ವಯಕಾರಾಗಿದ್ದರುಅವರನ್ನು ಎಂದಿಗೂ ಸಹಾ ಬರಿಯ ಹಣೆಯಲ್ಲಿ ನೋಡೇ ಇಲ್ಲ. ಸದಾಕಾಲವೂ ಅವರ ಹಣೆಯ ಮೇಲೆ ಕುಂಕುಮ ಇದ್ದೇ ಇರುತ್ತಿತ್ತು.

ಮುಂದೆ ಶಿವಮೊಗ್ಗದ ಸಜ್ಯಾದ್ರಿ ಕಾಲೇಜಿನಲ್ಲಿ ಖ್ಯಾತ ಕವಿ ಜಿ.ಎಸ್. ಶಿವರುದ್ರಪ್ಪ ಅವರಂಥ ಪ್ರಾಚಾರ್ಯರು ದೊರೆತು ಇವರೊಳಗಿನ ಸಾಹಿತ್ಯ ಮೊಳಕೆಯೊಡೆದು ಚಿಗುರಲು ನೀರೆರೆದಂತಾಗಿತ್ತು. ಇನ್ನು ಮಲೆನಾಡಿನ ಸೊಬಗಿನ ಸೌಂದರ್ಯ ಸಿರಿಯೂ ಅವರು ಸಾಹಿತಿಯಾಗಿ ರೂಪುಗೊಳ್ಳಲು ಸಹಕಾರಿಯಾಯಿತು ಎಂದರೂ ತಪ್ಪಾಗಲಾರದು. ಕಾಲೇಜು ಓದುತ್ತಿರುವಾಗಲೇ ಅಂದಿನ ಕಾಲದ ಎಲ್ಲಾ ಯುವಕ ಯುವತಿಯರಂತೆ ಬೆರಳಚ್ಚು ಮತ್ತು ಶೀಘ್ರ ಲಿಪಿ ಪರೀಕ್ಷೆಯನ್ನು ಪಾಸು ಮಾಡಿಕೊಂಡಿದ್ದರಿಂದ ಪದವಿ ಮುಗಿಯುತ್ತಿದ್ದಂತೆಯೇ ಲೋಕೋಪಯೋಗಿ ಇಲಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿ ಕೆಲಸಕ್ಕೆ ಸೇರಿಕೊಂಡು ನಂತರದ ದಿನಗಳಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಶರಾವತಿ ಯೋಜನೆ (ಕಾರ್ಗಲ್), ಮಾಸ್ತಿಕಟ್ಟೆ, ತೀರ್ಥಹಳ್ಳಿ, ಸಾಗರ ಮತ್ತಿತರೆಡೆ ಸುಮಾರು ಮೂರೂವರೆ ದಶಕಗಳಿಗೂ ಹೆಚ್ಚುಕಾಲ ಕಾರ್ಯನಿರ್ವಹಿಸಿ 1995ರಲ್ಲಿ ನಿವೃತ್ತಿ ಹೊಂದಿದ್ದರು.

ಒಮ್ಮೆ ನೆಮ್ಮದಿಯಾದ ಸರ್ಕಾರಿ ಕೆಲಸ ದೊರೆತ ಮೇಲೆ ಅವರಲ್ಲಿದ್ದ ಸಾಹಿತ್ಯಾಸಕ್ತಿ ಮತ್ತಷ್ಟೂ ಹೆಚ್ಚಾಗಿ ಲೇಖನಗಳನ್ನು ಬರೆಯತೊಡಗಿದರು. ಮೊದಲ ಬಾರಿಗೆ ಪ್ರಪಂಚ ಎಂಬ ಪತ್ರಿಕೆಯಲ್ಲಿ ಆವರ ಕಥೆ ಮುದ್ರಿತವಾಗಿ ಜನಪ್ರಿಯವಾಗಿ ನಂತರ ನಿರಂತರವಾಗಿ ಪತ್ರಿಕೆಯಲ್ಲಿ ಕಥೆಗಳನ್ನು ಬರೆಯುತ್ತಾ ಪ್ರಖ್ಯಾತರಾಗಿ ಹೋದಂತೆಲ್ಲಾ ನಾಡಿನಾದ್ಯಂತ ಬಹುತೇಕ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಇವರ ಕಥೆಗಳು ಪ್ರಕಟವಾಗತೊಡಗಿದವು ಅದೇ ಸಮಯದಲ್ಲಿಯೇ 1964ರಲ್ಲಿ  ಅವರ ಮೊದಲ ಕಾದಂಬರಿ ಬಂಜೆ ಬೆಂಕಿ ಪ್ರಕಟವಾಗಿ ಅಪಾರ ಮೆಚ್ಚುಗೆಗಳಿಸಿದ ನಂತರ ಅವರು  ಮಂಜಿನ ಕಾನು, ಮುಳುಗಡೆ, ಕಾಡಿನ ಬೆಂಕಿ, ನೆಲ ಈಜಲ, ಕೆಂಪು ತ್ರಿಕೋನ, ನೆಲೆ, ಗಾಂಧಿ ಬಂದರು, ದ್ವೀಪ, ಜೀವಕಳೆ ಹೀಗೆ  ಕಾದಂಬರಿಗಳ ಮುಖಾಂತರ ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹೀಗೆ ಹಲವು ಹತ್ತು ವಿಷಯಗಳನ್ನು ತಮ್ಮ ಕಾದಂಬರಿಗಳಲ್ಲಿ ಮನೋಜ್ಞಾವಾಗಿ ಬರೆಯುವ ಮೂಲಕ ಓದುಗರ ಮನಸೂರೆಗೊಂಡವುಅವರ ಅನೇಕ ಕಾದಂಬರಿಗಳು ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಓದುಗರನ್ನು ವಾರ ವಾರವೂ ಕುತೂಹಲಕ್ಕೀಡು ಮಾಡುತ್ತಿತ್ತು. ಅಂತಹ ಓದುಗರಲ್ಲಿ ನಾನೂ ಒಬ್ಬ ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಇಗರ್ಜಿ ಎನ್ನುವ ಪದವನ್ನು ಕೇಳಿದ್ದೇ ಅವರ ಲೇಖನದಲ್ಲಿಯೇ.

ನಾಡಿಗೆ ಬೆಳಕನ್ನು ನೀಡಲು ವಿಶ್ವೇಶ್ವರಯ್ಯನವರು ಜೋಗದಲ್ಲಿ ವಿದ್ಯುಚ್ಛಕ್ತಿ ಯೋಜನೆಯನ್ನು ಆರಂಭಿಸಿದರೆ, ಆ ಯೋಜನೆಯಿಂದಾಗಿ ಬಹಳಷ್ಟು ಜನರ ಬದುಕುಗಳು ಕತ್ತಲೆಯಲ್ಲಿ ಕರಗಿ ಹೋಗುವ ವಸ್ತುವನ್ನಾಗಿ ಉಳ್ಳ ಮುಳುಗಡೆ ಕಾದಂಬರಿಯು ಸುಧಾ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಲ್ಲದೆ ಅದೇ ಚಿತ್ರ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ, ದಿ. ಸೌಂದರ್ಯ ಆಭಿನಯಿಸಿದ್ದ ದ್ವೀಪ ಎಂಬ ಚಲನಚಿತ್ರವಾಗಿ ಸ್ವರ್ಣ ಕಮಲ ಪ್ರಶಸ್ತಿಯನ್ನು ಪಡೆದಿದೆ ಅದೇ ರೀತಿ ರಜತ ಕಮಲ ಪ್ರಶಸ್ತಿ ವಿಜೇತ ಕಾಡಿನ ಬೆಂಕಿ ಸುರೇಶ್ ಹೆಬ್ಲೀಕರ್‌ರವರ ನಿರ್ದೇಶನದಲ್ಲಿ ತಯಾರಾಗಿದೆ. ಸಿರಿಗಂಧ ಶ್ರೀನಿವಾಸಮೂರ್ತಿಯವರ ನಿರ್ದೇಶನದಲ್ಲಿ ಬಳುವಳಿ, ಕೋಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ಬೆಟ್ಟದಪುರದ ದಿಟ್ಟ ಮಕ್ಕಳು ಮತ್ತು ಮನುರವರ ನಿರ್ದೇಶನದಲ್ಲಿ ಆಂತರ್ಯ ಕಾದಂಬರಿಗಳು ಚಲನಚಿತ್ರಗಳಾಗಿ ಜನಪ್ರಿಯತೆಯನ್ನು ಪಡೆದಿವೆ. ಡಿಸೋಜ ಅವರ ಹಲವಾರು ಸಣ್ಣ ಕಥೆಗಳು ಕೊಂಕಣಿ, ಮಲಯಾಳಂ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿವೆ.

ಡಿಸೋಜ ಅವರು ಇಲ್ಲಿಯವರೆಗೆ ಸುಮಾರು 75 ಕಾದಂಬರಿಗಳು, 6 ಚಾರಿತ್ರಿಕ ಕಾದಂಬರಿ, ಮಕ್ಕಳಿಗಾಗಿ 25 ಕಾದಂಬರಿ, 9 ಕಥಾ ಸಂಕಲನ, ಸಮಗ್ರ ಕಥೆಗಳ ಎರಡು ಸಂಪುಟಗಳು, 500ಕ್ಕೂ ಹೆಚ್ಚು ಕಥೆಗಳು, 10ಕ್ಕೂ ಹೆಚ್ಚು ನಾಟಕಗಳು, ಅಷ್ಟೇ ಸಂಖ್ಯೆಯ ರೇಡಿಯೋ ನಾಟಕಗಳು, ನಾಡಿನ ಪತ್ರಿಕೆಗಳಿಗೆ, ಇತರೇ ಪುರವಣಿ, ಸಂಚಿಕೆ, ಗ್ರಂಥಗಳಿಗೆ ಅಂತ ಸಾವಿರಾರು ಬಿಡಿ ಲೇಖನಗಳನ್ನು ಬರೆದಿದ್ದಾರೆ ಮತ್ತು ಇಂದಿಗೂ ಬರೆಯುತ್ತಲೇ ಇದ್ದಾರೆ.

ಇಷ್ಟೆಲ್ಲಾ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ.

  • 1988ರಲ್ಲಿ & 1993 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • 1988ರಲ್ಲಿ ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ
  • 1993-98ರ ವರೆಗೆ ಹಂಪಿ ಕನ್ನಡ ಓದು ಮನೆಯ ಸೆನೆಟ್
  • 1995 ರಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • 1996-98ರ ವರೆಗೆ ಕುವೆಂಪು ಓದು ಮನೆಯ ಸೆನೆಟ್
  • 1997 ರಲ್ಲಿ ಅಖಿಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • 1998ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • 1998ರಲ್ಲಿ ಮಂಗಳೂರು ಸಂದೇಶ ಪ್ರಶಸ್ತಿ
  • 1998ರಲ್ಲಿ ನವದೆಹಲಿ ಕಳಾ ಪ್ರಶಸ್ತಿ
  • 2003ರಲ್ಲಿ ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ
  • 2006 ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ
  • 2006 ರಲ್ಲಿ ಭಟ್ಕಳ ತಾಲ್ಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ
  • 2006ರಲ್ಲಿ ವರ್ಧಮಾನ ಪ್ರಶಸ್ತಿ
  • 2006 ರಲ್ಲಿ ಮುಂಬಯಿಯ ಅಖಿಲ ಭಾರತ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ
  • 2007 ರಲ್ಲಿ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್
  • 2011 ರಲ್ಲಿ ಚಿತ್ರದುರ್ಗದ ಬೃಹನ್ಮಠದ ಡಾ. ಶಿವಮೂರ್ತಿ ಮುರುಘ ಶರಣ ಪ್ರಶಸ್ತಿ
  • 2011 ರಲ್ಲಿ ಕೇಂದ್ರಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾರ
  • 2012 ರಲ್ಲಿ ಮಾಸ್ತಿ ಪ್ರಶಸ್ತಿ
  • 2014 ರಲ್ಲಿ ಕೊಡಗಿನಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ನಾ. ಡಿಸೋಜ ಅವರು ಕೇವಲ ಸಾಹಿತಿಯಲ್ಲದೇ ಪರಿಸರ ಪ್ರೇಮಿಯಾಗಿ ಹಸಿರೇ ಉಸಿರು ಎಂದು ಪರಿಸರ ಸಂರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಾರೆ. ಇಕ್ಕೇರಿ ಗಣಿಬೇಡ ಹೋರಾಟ, ಅಂಬುತೀರ‍್ತದಿಂದ ಅರಬ್ಬೀಸಮುದ್ರದವರೆಗಿನ ಶರಾವತಿ ನಡೆ, ತಾಳಗುಪ್ಪ ಶಿವಮೊಗ್ಗ ಬ್ರಾಡ್ ಗೇಜ್ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಸದಾ ಕನ್ನಡ ಮತ್ತು ಕನ್ನಡಿಗರ ಹಿತಾಸಕ್ತಿಗಳಿಗೇ ತಮ್ಮನ್ನು ಅರ್ಪಿಸಿಕೊಂಡಿದ್ದ  ಶ್ರೀ ನಾ. ಡಿಸೋಜರವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಜಾತಸ್ಯ ಮರಣ ಧೃವಂ ಅರ್ಥಾತ್ ಹುಟ್ಟಿದವರು ಸಾಯಲೇ ಬೇಕು ಎನ್ನುವ ಜಗದ ನಿಯಮದಂತೆ ಖ್ಯಾತ ಸಾಹಿತಿ ಹಾಗೂ ಕತೆಗಾರ ಡಾ. ನಾ ಡಿಸೋಜಾ ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಭಾನುವಾರ 2025 ಜನವರಿ 5 ರಾತ್ರಿ ತಮ್ಮ 87 ವರ್ಷದಲ್ಲಿ ನಿಧರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯ ಜೊತೆ ಕೊಟ್ಯಾಂತರ ಆಭಿಮಾನಿಗಳನ್ನು ಅಗಲಿರುವುದು ಸಾರಸತ್ವ ಲೋಕಕ್ಕೆ ತುಂಬಲಾರದ ನಷ್ಟವೇ ಸರಿ.

ಏನಂತೀರೀ?
ಸೃಷ್ಟಿಕರ್ತ ಉಮಾಸುತ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ