ಅರೇ ಇದೇನಿದು ಇಂತಹ ಶೀರ್ಷಿಕೆ? ಎಂದು ಆಶ್ಚರ್ಯ ಪಡುವ ಮುನ್ನಾ ಈ ಲೇಖನವನ್ನು ಸ್ವಲ್ಪ ಸಂಪೂರ್ಣವಾಗಿ ಓದಿದರಲ್ಲಿ ಎಲ್ಲವೂ ಅರ್ಥವಾಗುತ್ತದೆ. ನಮ್ಮ ಹಿಂದಿನ ತಲಮಾರಿನವರಿಗೆ ಇಂದಿನಷ್ಟು ಸುಖ ಸಂಪತ್ತು ಇಲ್ಲದೇ ಇದ್ದರೂ, ಸರಿಯಾಗಿ ಮೂರು ಹೊತ್ತು ತಿನ್ನಲು ಇಲ್ಲದೇ ಇದ್ದರೂ, ಅವರೆಲ್ಲರೂ ಯಾವುದೇ ರೀತಿಯ ಅನಾರೋಗ್ಯವಿಲ್ಲದೇ, 80-100 ವರ್ಷಗಳ ಕಾಲ ಆರಾಮಾಗಿ ಜೀವಿಸಿದ್ದದ್ದನ್ನು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಇಂದು ಹೊಟ್ಟೆ ಬಟ್ಟೆಗೆ ಯಾವುದೇ ರೀತಿಯ ಸಮಸ್ಯೆಗಳು ಇಲ್ಲದೇ ಹೋದರೂ, 20-30 ವರ್ಷ ಆಗುವಷ್ಟರಲ್ಲೇ, ಅಧಿಕ ರಕ್ತದೊತ್ತಡ (ಬಿಪಿ) ಮಧುಮೇಹ (ಷುಗರ್) ಖಾಯಿಲೆಗಳಿಗೆ ತುತ್ತಾಗಿ 35-50 ವರ್ಷಕ್ಕೆಲ್ಲಾ ಹೃದಯಾಘಾತವೋ ಇಲ್ಲವೇ ಕಿಡ್ನಿ ಫೇಲ್ ಆಗಿ ಅಕಾಲಿಕವಾಗಿ ಮರಣ ಹೊಂದುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದ್ದು ಇದಕ್ಕೆಲ್ಲವೂ ನಾವು ಇಂದು ಸೇವಿಸುತ್ತಿರುವ ಆಹಾರ ಮತ್ತು ನಮ್ಮ ಜೀವನ ಶೈಲಿ ಎನ್ನುವುದು ಎಂದರೆ ಅಚ್ಚರಿಯ ಕಠುಸತ್ಯವಾಗಿದೆ.
ನಮ್ಮ ದೇಶ ಕೃಷಿಯಾಧಾರಿತವಾದ ದೇಶವಾಗಿದ್ದು ಲಕ್ಷಾಂತರ ಹಳ್ಳಿಗಳ ಕೋಟ್ಯಾಂತರ ರೈತರುಗಳೇ ದೇಶದ ಬೆನ್ನೆಲುಬಾಗಿದ್ದರು. ಅವರ ಬಳಿ ಇದ್ದಷ್ಟು ಜಮೀನುಗಳಲ್ಲಿಯೇ ಮಳೆಯಾಧಾರಿತವಾಗಿ ಬೆಳೆಗಳನ್ನು ಬೆಳೆದು ಆ ಬೆಳೆಗಳಿಗೆ ತಮ್ಮದೇ ಮನೆಯ ದನಕರುಗಳ್ಲು ಮತ್ತು ಆಡು ಕುರಿಗಳ ತಿಪ್ಪೇ ಗೊಬ್ಬರವನ್ನೇ ಬಳಸುತ್ತಾ ವರ್ಷಕ್ಕೊಂದೋ ಇಲ್ಲವೇ ಎರಡು ಬೆಳೆಗಳನ್ನು ಬೆಳೆದು ತಮ್ಮ ಮನೆಗೆ ಅವಶ್ಯಕವಿದ್ದಷ್ಟನ್ನು ಬಳಸಿಕೊಂಡು ಉಳಿದದ್ದನ್ನು ಪರಸ್ಪರ ವಿನಿಮಯದ ಮೂಲಕವೂ ಇಲ್ಲವೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಸುಖಃವಾಗಿ ಜೀವನ ನಡೆಸುತ್ತಿದ್ದರು.
ಹಿಂದಿನ ಕಾಲದಲ್ಲಿ ಅತಿ ಹೆಚ್ಚು ದನಕರುಗಳನ್ನು ಹೊಂದಿರುವವರೇ ಭಾರೀ ಶ್ರೀಮಂತರು ಎಂದೆನಿಸಿಕೊಳ್ಳುತ್ತಿದ್ದರು. ಒಟ್ಟು ಕುಟುಂಬದಲ್ಲಿ ಮನೆ ತುಂಬಾ ಜನ, ದೊಡ್ಡಿಯಲ್ಲಿ ನೂರಾರು ದನಕರುಗಳು ಮತ್ತು ಅದನ್ನು ನೋಡಿಕೊಳ್ಳಲು ಕೈಗೊಬ್ಬ ಕಾಲ್ಗೊಬ್ಬ ಆಳು ಇದ್ದಲ್ಲಿ ಅವರೇ ಶ್ರೀಮಂತರರು. ಹೀಗೆ ದನಕರು ಹೆಚ್ಚಾಗಿರುವವರ ಮನೆಯವರಿಗೆ ಸಹಜವಾಗಿಯೇ ಆಸ್ತಿ-ಪಾಸ್ತಿ, ಹೊಲ ಗದ್ದೆಯೂ ಹೆಚ್ಚಾಗೇ ಇರುತ್ತಿತ್ತು, ಹಾಗಾಗಿ ಮದುವೆಗೆ ಸಂಬಂಧ ಹುಡುಕುವಾಗ ಹೆಣ್ಣಿನ ಕಡೆಯವರು ಗಂಡಿನ ಮನೆಗೆ ಹೋದಾಗ ಅಥವಾ ಗಂಡಿನ ಮನೆಯವರು ಹೆಣ್ಣಿನ ಮನೆಗೆ ಹೋದಾಗ ಅವರೆಲ್ಲರ ಕಣ್ಣೂ ಆ ಮೆನಯವರ ಅಕ್ಕ ಪಕ್ಕದಲ್ಲೇ ಇರುತ್ತಿದ್ದ ಸಗಣಿಯ ರಾಶಿ ತಿಪ್ಪೆಯ ಮೇಲೇ ಇರುತ್ತಿತ್ತು. ತಿಪ್ಪೆ ದೊಡ್ಡದಿದ್ದರೆ, ಆ ಮನೆಯವರು ಶ್ರೀಮಂತರಾಗಿದ್ದು ಅಂತಹ ಮನೆಗೆ ನಮ್ಮ ಮಗ/ಮಗಳನ್ನು ಕೊಟ್ಟಲ್ಲಿ/ತಂದಲ್ಲಿ ಸುಖವಾಗಿರುತ್ತಾರೆ ಎಂದು ಭಾವಿಸಿಯೇ ಮದುವೆ ಮಾಡಿಕೊಡುತ್ತಿದ್ದರು. ಆದರೆ
ಇನ್ನು ಹಳ್ಳಿಯ ಹೆಣ್ಣುಮಕ್ಕಳು ಬೆಳಿಗ್ಗೆ ಎದ್ದು ಮನೆಯನ್ನು ಶುಚಿಗೊಳಿಸಿ ಮನೆಯ ಮುಂದೆ ಚಂದನೆಯ ರಂಗೋಲಿ ಇಟ್ಟು ಊರಿನ ಹೊರಗಿನ ಸಿಹಿ ನೀರಿನ ಭಾವಿಯಿಂದ ತಲೆಯ ಮೇಲೆ ಎರಡು ಬಿಂದಿಗೆ, ಕಂಕಳಲ್ಲಿ ಒಂದು ಮತ್ತು ಕೈಯ್ಯಲ್ಲೊಂದು ಸಣ್ಣನೆಯ ಬಿಂದಿಗೆಯ ನೀರನ್ನು ತಂದು ಅಡುಗೆಮನೆಯನ್ನು ಶುಭ್ರಗೊಳಿಸಿ, ಸ್ನಾನ ಮಾಡಿ ದೇವರ ಪೂಜೆ ಮುಗಿಸಿ, ಅಡುಗೆಗೆ ಅಗತ್ಯವಿದ್ದ ಮಸಾಲೆಗಳನ್ನು ಸ್ವತಃ ಕೈಯ್ಯಾರೆ ಕುಟ್ಟಿಯೂ, ಬೀಸಿಯೋ, ಇಲ್ಲವೋ ರುಬ್ಬಿಯೋ ಶುಚಿ ರುಚಿಯಾದ ಅಡುಗೆಯನ್ನು ಮಾಡಿ, ಅಡುಗೆಯ ಸಮಯಲ್ಲಿ ಅಕ್ಕಿ, ತರಕಾರಿ ತೊಳೆದ ನೀರನ್ನು ಸುಮ್ಮನೆ ಹೊರಗೆ ಚೆಲ್ಲದೇ, ಕಲಗಚ್ಚು ಮಡಿಕೆಯಲ್ಲಿ ಹಾಕಿ ಅದನ್ನು ಮನೆಯ ಹಸುಗಳಿಗೆ ಕುಡಿಯಲು ಕೊಡುತ್ತಿದ್ದರೆ, ಇನ್ನು ಮನೆಯ ಹಿತ್ತಲಲ್ಲಿ ಪಾತ್ರೆ ತೊಳೆದ ನೀರು ಮತ್ತು ಕೈ ತೊಳೆದ ನೀರೂ ಸಹಾ ಪೋಲಾಗದೇ ಸೀದಾ ಅದು ಹಿತ್ತಲಿನ ಕೈತೋಟದ ತರಕಾರಿ, ಹೂಗಿಡಗಳು, ಬಾಳೆ ಗಿಡ, ಕರಿಬೇವಿನ ಸೊಪ್ಪಿನ ಮರಕ್ಕೆ ಹೋಗುತ್ತಿದ್ದ ಕಾರಣ ಕೊಂಚವೂ ನೀರು ಪೋಲಾಗುತ್ತಿರಲಿಲ್ಲ ಮತ್ತು ಇಂತಹ ಶುದ್ದ ನೀರಿನಲ್ಲಿ ಬೆಳೆದ ಹಣ್ಣು ಮತ್ತು ತರಕಾರಿಗಳು ಸಹಾ ಸತ್ವ ಭರಿತವಾಗಿರುತ್ತಿದ್ದವು. ಸಹಜವಾಗಿ ಈರೀತಿಯಾಗಿ ಸಾವಯವವಾಗಿ ಬೆಳೆಯುತ್ತಿದ್ದ ಆಹಾರ ಮತ್ತು ನೀರನ್ನು ಕುಡಿಯುತ್ತಿದ್ದ ನಮ್ಮ ಹಿಂದಿನವರು ಯಾವುದೇ ರೀತಿಯ ರೋಗ ರುಜಿನಗಳಲ್ಲಿಲ್ಲದೇ ಸುದೀರ್ಘಕಾಲ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರು.
ಆದರೆ ಕಾಲ ಬದಲಾದಂತೆಲ್ಲಾ, ಮನುಷ್ಯನ ಆಸೆಗಳೆಲ್ಲವೂ ಬದಲಾಗುತ್ತಲೇ ಹೋದವು. ಕಡಿಮೆ ಭೂಮಿಯಲ್ಲಿ ಹೆಚ್ಚು ಹೆಚ್ಚು ಆಹಾರವನ್ನು ಬೆಳೆಯುವಂತಾಗಲೂ ಕೃತಕವಾದ ರಾಸಾಯನಿಕ ಗೊಬ್ಬರಗಳನ್ನು ಬಳಸತೊಡಗಿದನು. ಹಾಗೆ ಬೆಳೆಯುವ ಭರದಲ್ಲಿ ಬೆಳೆಗಳಿಗೆ ಕೀಟಗಳ ಬಾಧೆ ತಾಗದಿರಲಿ ಎಂದು ಸಾಂಪ್ರದಾಯಕವಾಗಿ ಬಳಸುತ್ತಿದ್ದ ಹಸುವಿನ ಗಂಜಲ, ಗೋಮಯ, ಸಾವಯವ ಬೆಲ್ಲದಿಂದ ತಯಾರು ಮಾಡುತ್ತಿದ್ದ ಜೀವಾಮೃತದ ಬದಲಾಗಿ ಕೃತಕವಾದ ರಾಸಾಯನಿಕ ಕೀಟನಾಶಕಗಳನ್ನು ಬಳಸಲು ಆರಂಭಿಸಿದ ಕಾರಣ ಹೆಚ್ಚಿನ ಉಳುವರಿ ಬರಲಾರಂಭಿಸಿತು. ಇನ್ನು ಬೆಳೆದ ಕಾಯಿಗಳು ತತ್ ಕ್ಷಣದಲ್ಲೇ ಅರ್ಥಾತ್ ಶ್ರೀಘ್ರವಾಗಿ ಹಣ್ಣಾಗಲಿ ಎಂದು ಸಾಂಪ್ರದಾಯಕ ಅಡೆ ಹಾಕುವ ಪದ್ದತಿಯ ಬದಲಾಗಿ ಮತ್ತೆ ರಾಸಾಯನಿಕವನ್ನು ಸಿಂಪಡಿಸಿ ಹಣ್ಣು ಮಾಗುವಂತೆ ಮಾಡಲಾರಂಭಿಸಿದರು. ಇನ್ನು ಹಣ್ಣಿನ ಒಳಗಡೆ ಬಣ್ಣ ಬರಲೆಂದು ರಾಸಾಯಿನಿಕವನ್ನು ಚುಚ್ಚಲಾರಂಭಿಸಿದ ಹೀಗೆ ಪದೇ ಪದೇ ರಾಸಾಯನಿಕ ವಸ್ತುಗಳನ್ನು ಎಗ್ಗಿಲ್ಲದೇ ಬಳಸುತ್ತಿರುವುದರಿಂದ ಅದೇ ಹಣ್ಣು ಮತ್ತು ತರಕಾರಿಗಳನ್ನು ಆಹಾರದ ಮೂಲಕ ಸೇವಿಸುವ ಕಾರಣ ಪರೋಕ್ಷವಾಗಿ ವಿಷಕಾರೀ ಅಂಶಗಳು ಮನುಷ್ಯನ ದೇಹ ತಲುಪುವುದರಿಂದಾಗಿ ವಿನಾಕಾರಣ ಖಾಯಿಲೆಗೆ ಬೀಳುವುದಲ್ಲದೇ ಅಕಾಲಿಕವಾಗಿ ಮರಣ ಹೊಂದುತ್ತಿರುವುದು ನಿಜಕ್ಕೂ ಬೇಸರ ಸಂಗತಿಯಾಗಿದೆ.
ಇದೇ ಕುರಿತಾಗಿ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಓದಿದ್ದ ಒಂದು ಸಂಗತಿ ನಿಜಕ್ಕೂ ಆಶ್ವರ್ಯಕರವಾಗಿ ದುಃಖವನ್ನು ತರಿಸುತ್ತಿದೆ. ಸಾವಯವ ಕೃಷಿ, ಸಿರಿದಾನ್ಯಗಳನ್ನು ಬೆಳೆಯಲು ಸರ್ಕಾರಗಳು ಪ್ರೋತ್ಸಾಹಿಸುತ್ತಿದ್ದರೂ, ಕೆಲವು ಸೋಮಾರಿ ರೈತರುಗಳು ಅಧಿಕ ಇಳುವರಿಯ ಆಸೆಗೆ ಬಿದ್ದು, ಬೀಜ ಮೊಳಕೆ ಒಡೆದು ಸಣ್ಣ ಸಸಿ ಯಾಗಿದ್ದ ಸಮಯದಿಂದಲೇ, ರಾಸಾಯನಿಕ ಔಷಧಿಗಳನ್ನು ಸಿಂಪಡಿಸುವ ಮುಖಾಂತರ ನೇರವಾಗಿ ಭೂಮಿಯ ಫಲವತ್ತೆಯನ್ನು ಕಡಿಮೆ ಮಾಡಿ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಆ ಭೂಮಿಯಲ್ಲಿ ಯಾವುದೇ ರೀತಿಯ ಕೃಷಿ ಚಟುವಟಿಕೆಗಳು ನಡೆಸಲಾಗದಂತಹ ಬಂಜರು ಭೂಮಿಯನ್ನಾಗಿ ಮಾಡುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಇತ್ತೀಚೆಗೆ ಅವಿಭಜಿತ ಕೋಲಾರ ಜಿಲ್ಲೆಯ ಪ್ರದೇಶವೊಂದಕ್ಕೆ ಹೋಗಿದ್ದಾಗ, ಅಲ್ಲಿನ ಹಿರಿಯ ರೈತರೊಬ್ಬರ ಬಳಿ ಲೋಕಾರೂಢಿಯಾಗಿ ಮಾತನಾಡುತ್ತಿದ್ದಾಗ ಈಗಾಗಲೇ, ಸಾವಿರಾರು ಅಡಿಗಳಷ್ಟು ಆಳದ ಕೊಳವೇ ಭಾವಿಗಳನ್ನು ಕೊರೆದು ಅಂತರ್ಜಲವನ್ನು ಬರಿದು ಮಾಡಿರುವ ಅಲ್ಲಿನ ರೈತರು, ಎಗ್ಗಿಲ್ಲದೇ ರಾಸಾಯನಿಕಗಳನ್ನು ಸಿಂಪಡಿಸುತ್ತಿರುವ ಕಾರಣ, ಇನ್ನು ಐದಾರು ವರ್ಷಗಳಲ್ಲಿ ಕೋಲಾರದ ಜಿಲ್ಲೆಯ ಬಹುತೇಕ ಕೃಷಿ ಚಟುವಟಿಕೆಗಳು ನಿಂತು ಹೋಗುವ ಆತಂಕವನ್ನು ವ್ಯಕ್ತಪಡಿಸಿದ್ದದ್ದು ನಿಜಕ್ಕೂ ಭಯಾನಕವಾಗಿದೆ.
ದ್ರಾಕ್ಷಿ ಬಳ್ಳಿಗಳು ಚಿಗುರೊಡೆದಾರಿಂದಲೂ ಆರಂಭಿಸಿ ಹಣ್ಣಾಗುವವರೆಗೂ ರಾಸಾಯನಿಕ ವಸ್ತುಗಳನ್ನು ಸಿಂಪಡಿಸಿದ ಕಾರಣ, ವಾತಾವರಣದಲ್ಲಿನ ಗಾಳಿಯೂ ಸಹಾ ಕಲುಶಿತಗೊಂಡು ರೇಷ್ಮೇ ಬೆಳೆಯೂ ಸಹಾ ಸಂಪೂರ್ಣವಾಗಿ ನೆಲಕಚ್ಚಿದ್ದನ್ನು ಹೇಳಿದ್ದಲ್ಲದೇ, ಇನ್ನೂ ಅಚ್ಚರಿಯ ವಿಷಯವೇನೆಂದರೆ, ದ್ರಾಕ್ಷಿ ಬೆಳೆಗೆ ಬಳಸುವುದಕ್ಕಿಂತಲೂ ಹತ್ತು ಪಟ್ಟು ಹೆಚ್ಚಿನ ರಾಸಾಯನಿಕವನ್ನು ಕೇವಲ ನಾಲ್ಕು ತಿಂಗಳ ಬೆಳೆಯಾದ ಮೆಣಸಿನಕಾಯಿಗೆ ಬಳಸಿದ ಉದಾಹಣೆಯನ್ನು ನೀಡಿದರು. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹೀಗೆ ದಿನಕ್ಕೆ ಎರಡು ಬಾರಿಯಂತೆ 120 ದಿನಗಳ ಕಾಲ ರಾಸಾಯನಿಕ ವಸ್ತುಗಳನ್ನು ಸಿಂಪರಣೆ ಮಾಡಿದ ಕಾರಣ, ವಾತಾವರಣದಲ್ಲಿನ ಗಾಳಿ ಸಂಪೂರ್ಣ ವಿಷವಾಗಿದ್ದಲ್ಲದೇ ಅಕ್ಕ ಪಕ್ಕದ ಕೆರೆ ಭಾವಿಗಳ ನೀರು ಸಹಾ ಕಲುಷಿತವಾಗಿ ಹೋಗಿರುವುದು ನಿಜಕ್ಕೂ ಭಯಾನಕವಾಗಿದೆ. ಅವರು ಮೆಣಸಿನ ಗಿಡದ ಹೊಲಕ್ಕೆ ಬಳಸಿದ ರಾಸಾಯನಿಕ ಖಾಲಿ ಡಬ್ಬಿಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ರದ್ದಿ ಅಂಗಡಿಗೆ ಮಾರಾಟ ಮಾಡಿ 10,000 ರೂಪಾಯಿಗಳನ್ನು ಗಳಿಸಿದರು ಎಂದರೆ ಇನ್ನು ಯಾವ ಪರಿಯಲ್ಲಿ ರಾಸಾಯನಿಕವನ್ನು ಬಳಸಿದ್ದಾರೆ ಎಂಬುದು ಅರ್ಥವಾಗುತ್ತದೆ. ಅದೇ ರೀತಿಯಲ್ಲಿ ಆರೋಗ್ಯಕರವಾದ ಆದರೆ ಕಡಿಮೆ ಹಾಲನ್ನು ಕೊಡುವ ದೇಸೀ ನಾಟಿ ಹಸುಗಳ ಬದಲಾಗಿ ಹೆಚ್ಚು ಹಾಲನ್ನು ಕೊಡುವ ಜರ್ಸಿ ಹಸುಗಳು, ಹೆಚ್ಚಿನ ಮಾಂಸದ ಆಸೆಗಾಗಿ ಸಣ್ಣ ಮರಿ ಕೋಳಿಗಳಿಗೆ ಇಂಜೆಕ್ಷನ್ ಕೊಟ್ಟು ದಪ್ಪ ಮಾಡಿ ಅವುಗಳ ಕಾಲುಗಳೇ ಆವುಗಳ ದೇಹದ ಭಾರವನ್ನು ತಡೆಯಲಾದಂತೆ ಮಾಡಿದ್ದಲ್ಲದೇ ಅದೇ ಮಾಂಸದಿಂದ ತಯಾರಿಸಿದ ಖಾದ್ಯಗಳು ಆಕರ್ಷಣೀಯವಾಗಿ ಕಾಣುವಂತಾಗಲು ಕೃತಕ ರಾಸಾಯನಿಕ ಬಣ್ಣಗಳನ್ನು ಬಳಸುವ ಮೂಲಕ ಮತ್ತು ರುಚಿಯನ್ನು ಹೆಚ್ಚಿಸಲು ಅಜಿನೋಮೋಟೋ ಬಳಸುವ ಮೂಲಕ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡುತ್ತಿರುವುದು ನಿಜಕ್ಕೂ ಭಯಾನಕವಾಗಿದೆ.
ಹಿಂದೆಲ್ಲಾ ಎತ್ತಿನ ಗಾಣಗಳಿಗೆ ಕಡಲೇಕಾಯಿ, ಒಣಕೊಬ್ಬರಿ, ಎಳ್ಳು, ಸಾಸಿವೆ, ಸೂರ್ಯಕಾಂತಿ ಮುಂತಾದ ಎಣ್ಣೇ ಬೀಜಗಳನ್ನು ಸ್ವತಃ ತೆಗೆದುಕೊಂಡು ಹೋಗಿ ಸ್ವತಃ ನಮ್ಮ ಕಣ್ಣ ಮುಂದೆಯೇ ಎಣ್ಣೆಯನ್ನು ತೆಗೆಸಿಕೊಂಡು ಅದರಿಂದ ಬಂದ ಬೂಸವನ್ನು ಮನೆಯ ಹಸುಗಳು ಬಳಸುತ್ತಿದ್ದದ್ದೆಲ್ಲವೂ ಮಾಯವಾಗಿ ಇಂದು ಕಚ್ಚಾ ತೈಲದಿಂದ ಡೀಸೆಲ್ ಮತ್ತು ಪೆಟ್ರೋಲ್ ಹೊರ ತೆಗೆದ ನಂತರ ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಲಿಕ್ವಿಡ್ ಪ್ಯಾರಾಫೈನ್ ಎಂಬ ವಿಷಕಾರಿ ಎಣ್ಣೆಯ ಜಿಡ್ಡನ್ನು ಆಕರ್ಷಣೀಯ ಬಣ್ಣ ಬಣ್ಣಗಳ ಪ್ಯಾಕೆಟ್ಟುಗಳಲ್ಲಿ ವಿಟಮಿನ್ A, B. C.D… ಹೀಗೆ ಆಂಗ್ಲ ಭಾಷೆಯೆ ಎಲ್ಲಾ ವರ್ಣಮಾಲೆಯೂ ಸೇರಿಸಿ ಆರೋಗ್ಯಕರ ಎಣ್ಣೆ ಎಂಬ ಜಾಹೀರಾತಿಗೆ ಮರುಳಾಗಿೆ ಎಗ್ಗಿಲ್ಲದೇ ಬಳಸುತ್ತಿರುವ ಕಾರಣದಿಂದಲೇ ಇನ್ನೂ ಬಾಲ್ಯಾವಸ್ಥೆಯನ್ನೂ ದಾಟದ 8-10 ವರ್ಷದ ಸಣ್ಣ ಸಣ್ಣ ಹೆಣ್ಣು ಮಕ್ಕಳೆಲ್ಲರೂ ಋತುಮತಿಯರಾಗಿ ನಂತರ ಯೌವನಾವಸ್ಥೆಯಲ್ಲಿ ಸರಿಯಾದ ಸಮಯಕ್ಕೆ ಋತುಚಕ್ರವಾಗದೇ ನಂತರ ಮದುವೆಯಾದ ನಂತರ ಸೂಕ್ತಸಮಯಕ್ಕೆ ಗರ್ಭಿಣಿಗಾಗದೇ, ಒಂದು ಪಕ್ಷ ಗರ್ಭಧರಿಸಿದರೂ ವಿಕಲಾಂಕ ಚೇತನರಿಗೆ ಜನ್ಮ ನೀಡುತ್ತಿದ್ದರೆ, ಇನ್ನು ಇದೇ ಕಲುಷಿತ ಎಣ್ಣೆ ಮತ್ತು ಹಣ್ಣು, ತರಕಾರಿ ಮತ್ತು ಆಹಾರಗಳನ್ನು ಸೇವಿಸುವ ಗಂಡು ಮಕ್ಕಳಲ್ಲಿ ಸಂತಾನಕ್ಕೆ ಅವಶ್ಯಕವಾದಷ್ಟು ವೀರ್ಯಗಳಿಲ್ಲದೇ IVF centerಗಳಿಗೆ ಎಡ ತಾಕಿ ಲಕ್ಷಾಂತರ ರೂಪಾಯಿ ಖರ್ಚುಮಾಡಿದರೂ ಸಂತಾನ ಭಾಗ್ಯವಿಲ್ಲದೇ ನರಳುತ್ತಿರುವ ಸಂಖ್ಯೆಗೇನೂ ಕಡಿಮೆ ಇಲ್ಲಾ.
ನಾವು ಚಿಕ್ಕವರಿದ್ದಾಗ ನಮ್ಮ ತಾತಾ ಅಜ್ಜಿಯವರ ತೊಡೆಯ ಮೇಲೆ ಕುಳಿತುಕೊಂಡು ರಾಗಿ ಮುದ್ದೇ, ರಾಗಿ ರೊಟ್ಟಿ ತಿನ್ನುತ್ತಿದ್ದಾಗ, ಅವರು ಹೇಳುತ್ತಿದ್ದ ಹಿಟ್ಟಂ ತಿಂದವ ಬೆಟ್ಟಂ ಕಿತ್ತಿಟ್ಟಂ ಎಂಬ ಪದ ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಲೇ ಇದ್ದರೂ, ನಮ್ಮ ಇಂದಿನ ಮಕ್ಕಳು ಆರೋಗ್ಯಕರ ಮತ್ತು ಸಾಂಪ್ರದಾಯಕ ರಾಗಿ, ಜೋಳ, ಸಿರಿಧಾನ್ಯಗಳತ್ತ ಮುಖ ಮಾಡದೇ, ಅಂದ ಪಾಶ್ಚಾತ್ಯೀಕರಣದ ಪ್ರಭಾವದಿಂದ instant junk foodಗಳು ಮತ್ತು ಅನಾರೋಗ್ಯಕರ ಕೃತಕ ಬಣ್ಣದ ಪಾನೀಯಗಳು ಅರ್ಥಾತ್ ಕೋಲಾಗಳನ್ನು ಸೇವಿಸುವ ಪರಿಣಾಮ ದೇಹದಲ್ಲಿನ ಪ್ರತಿರೋಧ ಶಕ್ತಿಯನ್ನೇ ಕಳೆದುಕೊಳ್ಳುವಂತಾಗಿ ತೀರ್ಥ ತೆಗೆದುಕೊಂಡರೆ ಶೀತ, ಮಂಗಳಾರತಿ ತೆಗೆದುಕೊಂಡರೆ ಉಷ್ಣ ಎನ್ನುವಂತಹ ಪರಿಸ್ಥಿತಿಗೆ ತಲುಪಿ delicate darlingಗಳಂತಾಗಿರುವುದು ಸಹಾ ಕಳವಳಕಾರಿಯಾದ ಸಂಗತಿಯೇ.
ಈ ಹಿಂದೆ ಬಿದ್ದು ಎದ್ದು ಸಣ್ಣ ಪುಟ್ಟ ಗಾಯಗಳಾದ ಕೂಡಲೇ ಮನೆಯಲ್ಲಿಯೇ ಇದ್ದ ಅರಿಶಿನ ಪುಡಿ ಶ್ರೀಗಂದ, ಕೊಬ್ಬರಿ ಎಣ್ಣೆ ಮುಂತಾದವುಗಳನ್ನು ಹಚ್ಚುವ ಮೂಲಕ ಗಾಯವನ್ನು ವಾಸಿ ಮಾಡಿಕೊಳ್ಳುತ್ತಿದ್ದೆವು. ಇನ್ನು ಸಣ್ಣದಾದ ಶೀತ, ನೆಗೆಡಿ ಕೆಮ್ಮುಗಳಾದ ಕೂಡಲೇ, ಹಿಪ್ಪಳಿಯ ಪುಡಿಯನ್ನು ಜೇನು ತುಪ್ಪದಲ್ಲಿ ಕಲಸಿ ಕೊಂಡು ಎರಡು ಬಾರಿ ತಿಂದೋ ಇಲ್ಲವೇ, ಶುಂಠಿ, ಕೊತ್ತಂಬರಿ, ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಮೆಣಸು ಕುಟ್ಟಿ ಹಾಕಿದ ಬಿಸಿ ಕಷಾಯವನ್ನು ಸೇವಿಸಿದ ಕೂಡಲೇ ಎಂತಹ ಖಾಯಿಲೆ ಇದ್ದರೂ ಮಾಯವಾಗಿ ಬಿಡುತ್ತಿತ್ತು. ಒಂದು ಪಕ್ಷ ಖಾಯಿಲೆ ವಾಸಿ ಆಗದೇ ಹೋದರೂ, ಸೇವಿಸಿದ ಪದಾರ್ಥಗಳಿಂದ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮಗಳಾಗುತ್ತಿರಲಿಲ್ಲ. ಆದರೆ ಇಂದು ಸಣ್ಣ ಪುಟ್ಟ ಖಾಯಿಲೆಗಳಿಗೂ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ಹೋಗಿ ವೈದ್ಯರಿಗೆ ಮತ್ತು ಔಷಧಿಗಳಿಗೆ ಸಾವಿರಾರು ರೂಪಾಯಿ ಹಣವನ್ನು ಖರ್ಚುಮಾಡಿ ಹಾಗೆ ನಿರಂತವಾಗಿ ಸೇವಿಸಿದ ಔಷಧಿಗಳ ಅಡ್ಡ ಪರಿಣಾಮದಿಂದ ದೇಹದ ಮೇಲೆ ಮತ್ತೊಂದು ವ್ಯತಿರಿಕ್ತ ಪರಿಣಾಮವಾದ ಉದಾರಣೆಗಳು ಹೇರಳವಾಗಿವೆ.
ಈ ಆಘಾತಕಾರಿ ವಿಷಯವೆಲ್ಲವೂ ನಮ್ಮ ಜನರಿಗೆ ತಿಳಿದಿಲ್ಲಾ ಎಂದೇನಲ್ಲಾ, ಆದರೆ ಆರೋಗ್ಯಕರ ಶುದ್ಧ ಗಾಣದ ಕಡಲೇಕಾಯಿ ಎಣ್ಣೆ ಒಂದು ಕೆಜಿಗೆ 300-400 ರೂಪಾಯಿಗಳನ್ನು ಕೊಡುವ ಬದಲು 150-180ಕ್ಕೇ ಸಿಗುವ ಲಿಕ್ವಿಡ್ ಪ್ಯಾರಾಫಿನ್ ಎಣ್ಣೆಯನ್ನು ಬಳಸೋಣ ನಂತರ ನೋಡಿಕೊಳ್ಳೋಣ ಎನ್ನುವ ಉದಾಸೀನತೆ ಅವರಿಗೆ ನಂತರ ದಿನಗಳಲ್ಲಿ ಭಾರೀ ಹೊಡೆತವನ್ನು ನೀಡುತ್ತಿದೆ. ಎಲ್ಲಿಯ ವರೆಗೂ ಮೋಸ ಹೋಗುವ ಮಂದಿಯರು ಇರುತ್ತಾರೋ ಅಲ್ಲಿಯ ವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ಹಾಗಾಗಿ ನಾವು ರೈತರ ಮನಗಳನ್ನು ಪರಿವರ್ತನೆ ಮಾಡುವುದಕ್ಕಿಂತ ಮೊದಲು ಗ್ರಾಹಕರಾಗಿ ನಾವು ನಮ್ಮ ಮನ ಪರಿವರ್ತನೆ ಆಗುವುದು ಅತ್ಯಂತ ಅವಶ್ಯಕವಾಗಿದೆ. ನಾವು ಅಗ್ಗದ ಅನಾರೋಗ್ಯಕರ ವಸ್ತುಗಳನ್ನು ಬಳಸುವುದನ್ನು ಬಿಟ್ಟು health is first everything is next ಎನ್ನುವುದನ್ನು ಮನಸ್ಸಿಲ್ಲಿ ಇಟ್ಟುಕೊಂಡು ತುಸು ಬೆಲೆ ಹೆಚ್ಚಾದರೂ, ಉತ್ತಮವಾಗಿ ಸಾವಯವವಾಗಿ ಮತ್ತು ನೈಸರ್ಗಿಕವಾಗಿ ಬೆಳೆದ ಪದಾರ್ಥಗಳನ್ನು ಬಳಸುವುದುನ್ನು ರೂಢಿಯಾಡಿ ಕೊಂಡಲ್ಲಿ ಸಹಜವಾಗಿ ರೈತರುಗಳೂ ಸಹಾ ನೈಸರ್ಗಿಕ ಕೃಷಿಯ ಕಡೆ ಹೆಚ್ಚಾಗಿ ಗಮನ ಹರಿಸುತ್ತಾನೆ. ತನ್ಮೂಲಕ ಆರೋಗ್ಯಕರ ದೇಹ ಮತ್ತು ದೇಶ ಎರಡೂ ಸಹಾ ಆಗುತ್ತದೆ, ಹಾಗಾಗಿ ಅಂತಹ ಬದಲಾವಣೆಯನ್ನು ಇತರರು ಮಾಡಲಿ ಎಂಬುದನ್ನು ಬಯಸದೇ ಆ ಬದಲಾವಣೆ ನಮ್ಮ ನಿಮ್ಮಿಂದಲೇ ಆಗಲಿ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ