ಪ್ರಿನ್ಸಿಪಾಲ್ ‌ಅಮರ್‌ ದೃಷ್ಟಿ ಇತ್ತೀಚೆಗೆ ಅಮೃತಾಳ ಮೇಲೆಯೇ ಇರುತ್ತಿತ್ತು. ಅಮೃತಾ ಇತ್ತೀಚೆಗಷ್ಟೇ ಆ ಶಾಲೆಗೆ ಬಂದಿದ್ದಳು. ಅವಳ ವ್ಯಕ್ತಿತ್ವ ಇತರರಿಗಿಂತ ಸ್ವಲ್ಪ ಭಿನ್ನವಾಗಿತ್ತು. ಉದ್ದನೆಯ ಕಾಯ, ಗೌರವರ್ಣ, ಗುಂಗುರು ಕೂದಲು ಹಾಗೂ ಆತ್ಮವಿಶ್ವಾಸಭರಿತ ನಡೆಯುಳ್ಳ ಅಮೃತಾ 30-32 ವರ್ಷದವಳಾಗಿ ಇದ್ದಿರಬಹುದು. 48ನೇ ವಯಸ್ಸಿನಲ್ಲೂ ಅಮರ್ ಏಕಾಂಗಿಯಾಗಿದ್ದರು. 10 ವರ್ಷಗಳಷ್ಟು ಹಿಂದೆಯೇ ಅವರ ಹೆಂಡತಿ ತೀರಿಕೊಂಡಿದ್ದರು. ಆಗಿನಿಂದ ಅವರು ಶಾಲೆಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಆದರೆ ಅವರಿದ್ದ ಶಾಲೆಗೆ ಅಮೃತಾ ಬಂದಾಗಿನಿಂದ ಅವರ ಹೃದಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಅಮೃತಾ ಕೂಡ ವಿವಾಹಿತೆ. ಆದರೆ ಹೃದಯದ ಮೇಲೆ ಯಾರು ತಾನೇ ಒತ್ತಡ ಹೇರಲು ಆದೀತು. ಅಂದರೆ ಪ್ರಿನ್ಸಿಪಾಲ್ ‌ಅಮರ್‌ ಗೆ ಅಮೃತಾಳನ್ನು ನೋಡಿ ಅವರ ಹೃದಯ ನಿಯಂತ್ರಣಕ್ಕೆ ಸಿಗದಂತಾಯಿತು.

“ಅಮೃತಾ, ಬನ್ನಿ ಕುಳಿತುಕೊಳ್ಳಿ,” ಪ್ರಿನ್ಸಿಪಾಲರು ಅಮೃತಾಳನ್ನು ತಮ್ಮ ಕ್ಯಾಬಿನ್‌ ಗೆ ಕರೆಸಿಕೊಂಡರು.

ಅವರ ದೃಷ್ಟಿ ಅಮೃತಾ ತಲೆಯಲ್ಲಿ ಮುಡಿದುಕೊಂಡ ಗುಲಾಬಿ ಹೂವಿನ ಮೇಲೆ ನೆಟ್ಟಿತ್ತು. ಅಮೃತಾಳ ತಲೆಯಲ್ಲಿ ಪ್ರತಿದಿನ ಒಂದು ಪುಟ್ಟ ಗುಲಾಬಿ ಹೂ ಇರುತ್ತಿತ್ತು. ಪ್ರತಿದಿನ ಅದರ ಬಣ್ಣ ಬೇರೆ ಬೇರೆ ಆಗಿರುತ್ತಿತ್ತು. ಪ್ರಿನ್ಸಿಪಾಲ್ ‌ಅಮರ್‌ ಇಂದು ಕೇಳಿಯೇ ಬಿಟ್ಟರು, “ನಿಮ್ಮ ತಲೆಗೆ ಪ್ರತಿದಿನ ಗುಲಾಬಿ ಹೂ ಯಾರು ಮುಡಿಸುತ್ತಾರೆ?”

“ಯಾರು ಮುಡಿಸುತ್ತಾರೆ ಎನ್ನುವುದು ಮಹತ್ವದಲ್ಲ ಸರ್‌. ಆದರೆ ನಿಮ್ಮ ದೃಷ್ಟಿ ಅದರ ಮೇಲೆಯೇ ಇರುತ್ತದೆ ಎನ್ನುವುದು ಮುಖ್ಯ. ನಿಮ್ಮ ಉದ್ದೇಶವಾದರೂ ಏನು ಸ್ಪಷ್ಟಪಡಿಸಿ,” ತುಂಟತನದ ಮುಗುಳ್ನಗೆ ಬೀರುತ್ತ ಅಮೃತಾ ಕೇಳಿದಳು. ಪ್ರಿನ್ಸಿಪಾಲ್ ‌ಸಾಹೇಬರಿಗೆ ಒಮ್ಮಲೆ ಗಲಿಬಿಲಿ. ಅವರು ತಮ್ಮನ್ನು ತಾವು ಸಂಭಾಳಿಸಿಕೊಳ್ಳುತ್ತಾ, “ಇಲ್ಲ ಇಲ್ಲ…. ಹಾಗೇನೂ ಇಲ್ಲ. ಅಂದಹಾಗೆ ನನ್ನ ದೃಷ್ಟಿಯಂತೂ ನಿಮ್ಮ ಮೇಲೆಯೇ ಇತ್ತು,” ಹೇಳಿದರು.

ಅಮೃತಾ ಅಚ್ಚರಿಯ ಕಂಗಳಿಂದ ಪ್ರಿನ್ಸಿಪಾಲ್ ಕಡೆ ನೋಡುತ್ತಾ, ಸುಂದರ ಮುಗುಳ್ನಗೆ ಬೀರುತ್ತಾ, “ಈ ವಿಷಯ ನನಗೆ ಗೊತ್ತಿತ್ತು. ಆದರೆ ನಾನು ಅದನ್ನು ನಿಮ್ಮ ಬಾಯಿಂದ ಕೇಳಲು ಕಾತುರಳಾಗಿದ್ದೆ. ಅಂದಹಾಗೆ ನೀವು ನನ್ನ ಬಗ್ಗೆ ಬಹಳ ಆಸಕ್ತಿ ತೋರಿರುವುದು ನಿಜಕ್ಕೂ ಕುತೂಹಲಕರ.”

“ಥ್ಯಾಂಕ್ಸ್.” ಅಮೃತಾಳ ಕಮೆಂಟ್‌ ಬಗ್ಗೆ ಪ್ರಿನ್ಸಿಪಾಲರು ಒಂದಿಷ್ಟು ಸಂಕೋಚದಿಂದಲೇ, “ನಾನು ನಿಮಗಾಗಿ ಏನು ತರಿಸಲಿ, ಕಾಫಿ ಅಥವಾ ಟೀ?”  ಕೇಳಿದರು.

“ಬೇಡ ಬೇಡ ಸರ್‌, ನನಗೆ ನೀರು ಸಾಕು. ನಿಮ್ಮ ಮಾತುಗಳೇ ಚಹಾ ಕಾಫಿಯ ಕೆಲಸ ಮಾಡಿಬಿಟ್ಟವು,” ಎಂದು ಹೇಳುತ್ತಾ ಅಮೃತಾ ನಕ್ಕಳು.

ಇಂತಹ ಚಿಕ್ಕ ಪುಟ್ಟ ಸಂಭಾಷಣೆಗಳ ಬಳಿಕ ಕೊನೆಗೊಮ್ಮೆ ಪ್ರಿನ್ಸಿಪಾಲ್ ‌ಸಾಹೇಬರು ಧೈರ್ಯ ಮಾಡಿ, “ನೀವು ನನಗೆ ಬಹಳ ಇಷ್ಟವಾಗಿರುವಿರಿ. ಅಂದಹಾಗೆ ನಾನು ವಿವಾಹಿತ ಮಹಿಳೆಯೊಬ್ಬಳ ಜೊತೆ ಈ ತೆರನಾದ ಮಾತುಗಳನ್ನು ಹೇಳುವುದು ಸರಿಯಲ್ಲ. ಆದರೂ ಒಂದು ಸಲ ಹೇಳಲು ಬಯಸಿದ್ದೆ,” ಎಂದರು,“ಅಮರ್‌ ಸರ್‌, ಪ್ರತಿಯೊಂದು ಮಾತನ್ನು ಬಾಯಿಯಿಂದ ಹೇಳಲೇಬೇಕೆಂದಿಲ್ಲ. ಕೆಲವೊಂದು ಸಲ ಕಣ್ಣುಗಳೇ ಅದನ್ನು ಹೇಳಿಬಿಡುತ್ತವೆ.”

“ಅಂದಹಾಗೆ ನೀವು ಕೂಡ ಕಣ್ಣಿನ ಭಾಷೆಯನ್ನು ಓದುತ್ತೀರಾ?”

“ಹೌದು. ನಾನು ಪ್ರತಿಯೊಂದು ತೆರನಾದ ಭಾಷೆಯನ್ನೂ ಓದಬಲ್ಲೆ.”

“ನಿಮ್ಮ ಗಂಡ ಕೂಡ ನಿಮ್ಮನ್ನು ಬಹಳ ಪ್ರೀತಿಸುತ್ತಿರಬೇಕಲ್ಲ,” ಪ್ರಿನ್ಸಿಪಾಲರು ಅವಳ ಮುಖದತ್ತ ದೃಷ್ಟಿ ಹರಿಸುತ್ತಾ ಹೇಳಿದರು.

“ಅವರು ನನ್ನನ್ನು ಪ್ರೀತಿಸುವುದಿಲ್ಲ ಎಂದು ನಾನು ಹೇಳುವುದಿಲ್ಲ. ಪ್ರೀತಿಯನ್ನೇನೋ ಮಾಡುತ್ತಾರೆ, ಆದರೆ ಬಹಳ ಬೋರಿಂಗ್ ವ್ಯಕ್ತಿ. ಎಲ್ಲೂ ಸುತ್ತಾಡಲು ಹೋಗುವುದಿಲ್ಲ. ರೊಮ್ಯಾಂಟಿಕ್‌ ಮಾತಿಲ್ಲ, ನಗು ಇಲ್ಲ. ವೆರಿ ಬೋರಿಂಗ್‌. ಗಂಡನ ಹೊರತಾಗಿ ಕೇವಲ ಅತ್ತೆ ಇದ್ದಾರೆ, ಆದರೆ ಅವರು ಅನಾರೋಗ್ಯ ಪೀಡಿತರು. ಇಡೀ ದಿನ ಮನೆಯಲ್ಲಿದ್ದೂ ಇದ್ದೂ ಬೋರ್‌ ಆಗುತ್ತದೆ. ಹೀಗಾಗಿ ನಾನು ಸ್ಕೂಲ್ ಗೆ ಜಾಯಿನ್‌ ಆದೆ. ನನಗೆ ಸುತ್ತಾಡುವ ಆಸಕ್ತಿದಾಯಕ ಮಾತುಗಳನ್ನಾಡುವುದೆಂದರೆ ಬಲು ಇಷ್ಟ. ಯಾರ ಬಳಿ ಆಕರ್ಷಣೆ ಇರುತ್ತದೊ, ಅವರು ಇಷ್ಟವಾಗುತ್ತಾರೆ. ನನ್ನ ಗಂಡನಲ್ಲಿ ಯಾವುದೇ ಆಕರ್ಷಣೆ ಇಲ್ಲ.”

ಅಮೃತಾಳ ಮಾತು ಕೇಳಿ ಅಮರ್‌ ಗೆ ಬಹಳ ರೋಮಾಂಚನ ಉಂಟಾಯಿತು. ಅಮೃತಾಳಂತಹ ಮಹಿಳೆ ಅವರನ್ನು  ಆಕರ್ಷಿತಗೊಳಿಸಿದ್ದಳು. ಅದಕ್ಕಿಂತ ಅವರಿಗೆ ಇನ್ನೇನು ತಾನೇ ಬೇಕಿತ್ತು? ಅವಳನ್ನು ತನ್ನ ಬಾಹುಗಳಲ್ಲಿ ಬಳಸಿಕೊಳ್ಳಬೇಕೆಂದು ಅನಿಸುತ್ತಿತ್ತು. ಆದರೆ ಹೇಗೆಂದು ಅವರಿಗೆ ಅರ್ಥ ಆಗುತ್ತಿರಲಿಲ್ಲ. ಅದಕ್ಕಾಗಿ ಏನಾದರೂ ಉಪಾಯ ಮಾಡಲೇಬೇಕಾಗುತ್ತದೆ. ಅಂತೂ ಒಂದು ಉಪಾಯ ಮಾಡಿಯೇ ಬಿಟ್ಟರು.

“ಅಮೃತಾ, ನಾವು ನಿಮ್ಮ ಕ್ಲಾಸಿನ ಮಕ್ಕಳನ್ನು ಕರೆದುಕೊಂಡು ಪಿಕ್ನಿಕ್‌ ಗೆ ಏಕೆ ಹೋಗಬಾರದು? ಸ್ಪೋರ್ಟ್ಸ್ ಡೇ ಸಂದರ್ಭದಲ್ಲಿ ನಿಮ್ಮ ಕ್ಲಾಸಿನ ಮಕ್ಕಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಒಳ್ಳೆಯ ರಿಸಲ್ಟ್ ಕೂಡ ಕೊಟ್ಟಿದ್ದಾರೆ,” ಎಂದು ಪ್ರಿನ್ಸಿಪಾಲರು ಒಂದು ದಿನ ಅಮೃತಾಳಿಗೆ ಹೇಳಿದರು.

“ಗ್ರೇಟ್‌ ಐಡಿಯಾ ಸರ್‌. ಯಾವಾಗ ಮತ್ತು ಎಲ್ಲಿಗೆ ಹೋಗುವುದು ಹೇಳಿ,” ಅಮೃತಾ ಖುಷಿಗೊಂಡು ಹೇಳಿದಳು.

ಅಮೃತಾ 7ನೇ ಕ್ಲಾಸಿನ ಟೀಚರ್‌. ಮುಂದಿನ ಭಾನುವಾರದಂದು ಆ ಕ್ಲಾಸಿನ ಮಕ್ಕಳನ್ನು ನಗರದ ಅತ್ಯಂತ ಸುಂದರವಾದ ಪಾರ್ಕಿಗೆ ಕರೆದುಕೊಂಡು ಹೋದರು. ಮಕ್ಕಳು ಇಡೀ ದಿನ ತಮ್ಮಷ್ಟಕ್ಕೆ ತಾವು ಎಂಜಾಯ್‌ ಮಾಡುತ್ತಿದ್ದರು. ಇನ್ನೊಂದೆಡೆ ಪ್ರಿನ್ಸಿಪಾಲ್ ‌ಹಾಗೂ ಅಮೃತಾ ಪ್ರೀತಿಭರಿತ ಮಾತುಗಳಲ್ಲಿ ವ್ಯಸ್ತರಾಗಿದ್ದರು.

ಈಗಂತೂ ಅವರು ನೆಪಗಳನ್ನು ಹುಡುಕುತ್ತಿದ್ದರು. ಪ್ರಿನ್ಸಿಪಾಲ್ ‌ಸಾಹೇಬರು ಅವಳನ್ನು ಮೀಟಿಂಗ್‌ ನೆಪದಲ್ಲಿ ಒಂದು ಸಲ ಕರೆದುಕೊಂಡು ಹೋದರೆ, ಮತ್ತೊಮ್ಮೆ ಯಾವುದಾದರೂ ಸೆಲೆಬ್ರೇಷನ್‌ ನೆಪದಲ್ಲಿ ಹೊರಗೆ ಕರೆದೊಯ್ಯುತ್ತಿದ್ದರು. ಒಮ್ಮೊಮ್ಮೆ ಬೇರೆ ಬೇರೆ ಕ್ಲಾಸಿನ ಟೀಚರ್‌ ಗಳು ಸಹ ಪಾಲ್ಗೊಳ್ಳುತ್ತಿದ್ದರು. ಕೆಲವೊಮ್ಮೆ ಇಬ್ಬರೇ ಹೋಗುವ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದರು. ಪ್ರಿನ್ಸಿಪಾಲರಿಗೆ ಅಮೃತಾಳ ಸಂಗ ಇಷ್ಟವಾಗುತಿತ್ತು. ಇಬ್ಬರೂ ತಮ್ಮ ತಮ್ಮ ಇಚ್ಛೆಗಳನ್ನು ಈಡೇರಿಸಿಕೊಂಡು ತಮ್ಮ ಉದ್ದೇಶ ಸಾಧಿಸಿಕೊಳ್ಳುತ್ತಿದ್ದರು.

ಹೀಗೆಯೇ ಕಾಲಚಕ್ರ ಸಾಗುತ್ತಿತ್ತು. ಅವರ ಈ ಅಕ್ರಮ ಸಂಬಂಧ, ಸಕ್ರಮ ದಾರಿಯಲ್ಲಿಯೇ ಸಾಗುತ್ತಿತ್ತು.

ಇತ್ತೀಚೆಗೆ ಅಮೃತಾ ತನ್ನ ಕೈಯಾರೆ ತಯಾರಿಸಿದ ತಿಂಡಿಗಳನ್ನು ತಂದು ಪ್ರಿನ್ಸಿಪಾಲರಿಗೆ ಕೊಡುತ್ತಿದ್ದಳು. ಎಲ್ಲರ ದೃಷ್ಟಿ ತಪ್ಪಿಸಿ ಇಬ್ಬರೂ ಪರಸ್ಪರರಲ್ಲಿ ಮಗ್ನರಾಗುತ್ತಿದ್ದರು. ಆದರೆ ಪ್ರೀತಿಯ ರಹಸ್ಯ ಬಚ್ಚಿಡಲಾಗುವುದಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಕಾಲಕ್ರಮೇಣ ಬೇರೆ ಟೀಚರ್‌ ಗಳು ಇವರಿಬ್ಬರ ಸಂಬಂಧದ ಬಗ್ಗೆ ಗುಸುಗುಸು ಮಾತನಾಡುವಂತೆ ಆಯಿತು. ಆದರೆ ಅಮೃತಾ ಈ ಮಾತುಗಳಿಗೆ ತನ್ನನ್ನು ತಾನು ಸಿದ್ಧಪಡಿಸಿಕೊಂಡಿದ್ದಳು. ಅವಳು ಅತ್ಯಂತ ಕುಶಲತೆಯಿಂದ ಅವೆಲ್ಲ ಗಾಳಿ ಸುದ್ದಿ ಎಂದು ಹೇಳುವುದರ ಮೂಲಕ ಮುಂದೆ ಸಾಗಿದಳು.

ಅದೊಂದು ದಿನ ಅಮೃತಾ ಶಾಲೆಗೆ ಬಂದಾಗ ಅವಳಿಗೊಂದು ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತು. ಅದೇ ಶಾಲೆಗೆ ಸಾಧಾರಣ ಟೀಚರ್‌ ಆಗಿ ಸೇರಿಕೊಂಡಿದ್ದ ಶ್ವೇತಾಗೆ ಪ್ರಮೋಷನ್‌ ಕೊಟ್ಟು 10ನೇ ಕ್ಲಾಸ್‌ ಟೀಚರ್‌ ಆಗಿ ನೇಮಿಸಲಾಗಿತ್ತು. ಈ ವಿಷಯದ ಬಗ್ಗೆ ಶಾಲೆಯ ಪ್ರತಿಯೊಬ್ಬ ಶಿಕ್ಷಕರೂ ಆಶ್ಚರ್ಯಚಕಿತರಾಗಿದ್ದರು. ಶಾಲೆಯ ಅತ್ಯಂತ ಸೀನಿಯರ್‌ ಕ್ಲಾಸಿನ ಟೀಚರ್‌ ಆಗಿಸುವುದು ಅದೂ ಕಡಿಮೆ ಸಮಯದಲ್ಲಿ ಯಾರೊಬ್ಬರಿಗೂ ನಂಬಲು ಆಗುತ್ತಿರಲಿಲ್ಲ. ಅಮೃತಾಳಂತೂ ಆ ಬಗ್ಗೆ ಬಹಳ ಕಳವಳಗೊಂಡಿದ್ದಳು.

ಪ್ರಿನ್ಸಿಪಾಲರು ಇತ್ತೀಚೆಗೆ ಶ್ವೇತಾಳ ಬಗ್ಗೆ ಬಹಳ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅಮೃತಾಳಿಗೆ ಅನಿಸತೊಡಗಿತ್ತು. 20 ವರ್ಷದ ಶ್ವೇತಾ ಬಹಳ ಸುಂದರವಾಗಿದ್ದಳು. ಅದೇ ಆಗ ಅರಳಿದ ಗುಲಾಬಿ ಹೂವಿನಂತಿದ್ದಳು. ಅವಳು ಆಂಗ್ಲ ಭಾಷೆಯಲ್ಲಿ ಹೆಚ್ಚು ಪ್ರಭುತ್ವ ಹೊಂದಿದ್ದಳು. ಜೊತೆಗೆ ಗ್ಲಾಮರಸ್‌ ಬಟ್ಟೆ ಧರಿಸುತ್ತಿದ್ದಳು. ಒಮ್ಮೆ ಆಫ್‌ ಶೋಲ್ಡರ್‌, ಮತ್ತೊಮ್ಮೆ  ಸ್ಲೀವ್ ಲೆಸ್, ಬ್ಯಾಕ್‌ ಲೆಸ್‌, ಇನ್ನು ಕೆಲವೊಮ್ಮೆ ಶಾರ್ಟ್‌ ಸ್ಕರ್ಟ್‌ಧರಿಸಿ ಬರುತ್ತಿದ್ದಳು.

ಅವಳ ಚಂಚಲ ನೋಟಕ್ಕೆ ಮಾದಕತೆಗೆ ಪುರುಷ ಟೀಚರ್‌ ಗಳು ಬೋಲ್ಡ್ ಆಗಿದ್ದರು. ಅದರಲ್ಲೂ ಎಲ್ಲಕ್ಕೂ ಪವರ್‌ ಫುಲ್ ಪ್ರಿನ್ಸಿಪಾಲ್ ‌ಅಮರ್‌ ಕೂಡ ಸೇರಿದ್ದರು. ಹೀಗಾಗಿ ಶ್ವೇತಾ ಸದಾ ಅವರ ಕ್ಯಾಬಿನ್‌ ಸುತ್ತಲೇ ಗಿರಕಿ ಹೊಡೆಯುತ್ತಿದ್ದಳು.

ಕೋಪದಿಂದ ಕೆಂಡಾಮಂಡಲಳಾದ ಅಮೃತಾ ಪ್ರಿನ್ಸಿಪಾಲರ ಕ್ಯಾಬಿನ್‌ ಗೆ ನುಗ್ಗಿದಳು. ಆದರೆ ಅವರು ಅಲ್ಲಿರಲಿಲ್ಲ. ಪ್ಯೂನ್‌ ಗೆ ಕೇಳಿದಾಗ ಅವರು ಶ್ವೇತಾ ಜೊತೆ ಲೈಬ್ರೆರಿಯಲ್ಲಿದ್ದಾರೆಂದು ಗೊತ್ತಾಯಿತು. ಅವಳು ಬ್ಯಾಗ್‌ ಎತ್ತಿಕೊಂಡು ಯಾರಿಗೂ ಮುನ್ಸೂಚನೆ ಕೊಡದೆ ಅಲ್ಲಿಂದ ಮನೆಗೆ ಹೊರಟಳು. ಆ ಬಳಿಕ ಈ ಬಗ್ಗೆ ವಿಚಾರಿಸಿಕೊಳ್ಳಲು ಪ್ರಿನ್ಸಿಪಾಲರು ಫೋನ್‌ ಮಾಡಿದಾಗ  ಅವಳು ಫೋನ್‌ ರಿಸೀವ್ ಮಾಡಲಿಲ್ಲ.

khof-story-2

ಮರುದಿನ ಕೂಡ ಅವಳು ಶಾಲೆಗೆ ಬರಲಿಲ್ಲ. ಆಗ ಪ್ರಿನ್ಸಿಪಾಲರು ಅವಳಿಗೆ ಸಂದೇಶ ಕಳಿಸಿ, “ನಾನು ಸ್ವಲ್ಪ ಹೊತ್ತಿನಲ್ಲಿ ನಿನ್ನ ಮನೆ ಮುಂದೆ ಕಾರು ತೆಗೆದುಕೊಂಡು ಬರುತ್ತೇನೆ. ನನ್ನ ಬಗ್ಗೆ ನೀನು ಬೇಸರಗೊಂಡಿದ್ದರೂ ಕೂಡ, ನಾವಿಬ್ಬರೂ ಕುಳಿತು ಮಾತನಾಡಬೇಕು. ಇಂದು ನಾವು ಹೊರಗಡೆಯೇ ಊಟ ಮಾಡೋಣ. 20-25 ನಿಮಿಷದಲ್ಲಿಯೇ ಬರ್ತೀನಿ ಸಿದ್ಧಳಾಗಿರು,” ಎಂದರು.

ಅಮೃತಾ ಸಿದ್ಧಳಾಗಿ ಹೊರಗೆ ಬಂದಳು. ಅಲ್ಲಿಯವರೆಗೆ ಪ್ರಿನ್ಸಿಪಾಲರ ಕಾರು ಅವಳ ಮನೆ ಮುಂದೆ ಬಂದು ನಿಂತಿತ್ತು. ಅವಳು ಕಾರಿನ ಹಿಂದಿನ ಸೀಟಿನಲ್ಲಿ ಹೋಗಿ ಕುಳಿತಳು.

ಹೋಟೆಲ್ ‌ನ ಮೂಲೆಯ ಒಂದು ಸೀಟಿನಲ್ಲಿ  ಕುಳಿತುಕೊಳ್ಳುತ್ತಾ ಪ್ರಿನ್ಸಿಪಾಲರು ಮಾತು ಆರಂಭಿಸಿದರು, “ನಿನ್ನ ಈ ಬೇಸರಕ್ಕೆ ಮುನಿಸಿಗೆ ಕಾರಣವೇನು?”

“ಕಾರಣ ಕೂಡ ಹೇಳಲೇಬೇಕಾ? ನೀವು ಅಷ್ಟು ಮುಗ್ಧರೇನು ಅಲ್ಲವಲ್ಲ…..?”

“ಹೌದು, ನಾನು ಶ್ವೇತಾಗೆ ಪ್ರಮೋಷನ್‌ ಕೊಟ್ಟ ಬಗ್ಗೆಯೇ ಅಲ್ವೇ ನಿನಗೆ ಬೇಸರ, ಮುನಿಸು ಬಂದಿರುವುದು?” ಪ್ರಿನ್ಸಿಪಾಲರು ತಮ್ಮ ತಪ್ಪನ್ನು ಒಪ್ಪಿಕೊಂಡರು.

“ನಾನು ಒಂದು ವಿಷಯ ಕೇಳ್ತೀನಿ. ಅವಳಲ್ಲಿರುವ ಯಾವ ವಿಶೇಷತೆ ನನ್ನಲ್ಲಿಲ್ಲ ಹೇಳ್ತೀರಾ?” ಅಮೃತಾ ಕೇಳಿದಳು.

“ಅಂಥದ್ದೇನೂ ಇಲ್ಲ ಡಾರ್ಲಿಂಗ್‌, ನಾನು………”

“ಡೋಂಟ್‌ ಟೆಲ್ ‌ಮಿ ಡಾರ್ಲಿಂಗ್‌. ಈಗ ನಿಮಗೆ ಹೊಸ ಡಾರ್ಲಿಂಗ್‌ ಸಿಕ್ಕಿದ್ದಾಳೆ.”

“ಅಂತಹದ್ದೇನೂ ಇಲ್ಲ ಅಮೃತಾ, ಹೀಗೇಕೆ ಹೇಳ್ತಿರುವೆ?”

“ನಿಜವನ್ನೇ ಹೇಳ್ತಿರುವೆ. ಅವಳು ನಿಮ್ಮನ್ನು ನಿಜವಾಗಿಯೂ ಖುಷಿಪಡಿಸಿರಬಹುದು. ಹಾಗೆಂದೇ ನೀವು ಇಷ್ಟೊಂದು ಕಡಿಮೆ ಅವಧಿಯಲ್ಲಿ……” ಅಮೃತಾ ನೇರಾನೇರ ಆರೋಪ ಮಾಡಿದಳು.

“ನಿನ್ನ ಮಾತುಗಳಲ್ಲಿ ಹಿಡಿತವಿರಲಿ ಅಮೃತಾ, ಪ್ರತಿಯೊಬ್ಬರನ್ನು ನಾನು ಅದೇ ದೃಷ್ಟಿಯಿಂದ ನೋಡುತ್ತೇನೆಂದಲ್ಲ. ಇನ್ನೊಮ್ಮೆ ಈ ರೀತಿ ಮಾತಾಡಿದರೆ ಹುಷಾರ್‌! ನಾನು ಪ್ರಿನ್ಸಿಪಾಲ್. ಯಾರು ಸಮರ್ಥರೊ ಅವರಿಗೆ ಪ್ರಮೋಷನ್‌ ಕೊಡುವ ಅಧಿಕಾರ ನನಗಿದೆ. ಇದರಲ್ಲಿ ನಿನಗೆ ಮಧ್ಯೆ ಪ್ರವೇಶಿಸುವ ಹಕ್ಕು ಇಲ್ಲ,” ಪ್ರಿನ್ಸಿಪಾಲರು ಕೂಡ ಕೋಪದಿಂದಲೇ ಹೇಳಿದರು.

“ಅಂದಹಾಗೆ, ನನ್ನ ಬಗ್ಗೆ ಏನೂ ಡಿಸೈಡ್‌ ಮಾಡಿಲ್ಲವಲ್ಲ. ಈಗ ನನ್ನನ್ನು ಎಲ್ಲಿ ಬಿಸಾಕುತ್ತೀರಿ ಹೇಳಿ, ಈಗ ನಿಮಗೆ ನನ್ನ ಅವಶ್ಯಕತೆಯಾದರೂ ಎಲ್ಲಿದೆ?”

“ಶಟ್‌ ಅಪ್‌ ಅಮೃತಾ, ನೀನು ಏನು ಈ ರೀತಿ ಮಾತಾಡ್ತಿರುವೆ ನಿನಗೆ ಗೊತ್ತಾ?”

“ಮಾತಷ್ಟೇ ಆಡುವುದಿಲ್ಲ. ಅದನ್ನು ತೋರಿಸಿ ಕೊಡ್ತೀನಿ. ನೀವು ನಿಮ್ಮನ್ನು ಸೀನಿಯರ್‌ ಮೋಸ್ಟ್ ಎಂದು ಭಾವಿಸಬೇಡಿ. ನಿಮ್ಮ ಮೇಲೆ ಮ್ಯಾನೇಜ್‌ ಮೆಂಟ್‌ ಇದೆ. ನಾನು ನಿಮ್ಮ ವಿರುದ್ಧ ಮ್ಯಾನೇಜ್‌ ಮೆಂಟ್‌ ಗೆ ದೂರು ಕೊಡ್ತೀನಿ…..”

“ನೀನು ಇಷ್ಟೊಂದು ಸಣ್ಣ ವಿಷಯಕ್ಕೆ ನನಗೆ ಬೆದರಿಕೆ ಹಾಕ್ತಿರುವೆಯಾ ಅಮೃತಾ? ನನ್ನ ಪ್ರೀತಿಗೆ ಪ್ರತೀಕಾರ ತೀರಿಸಿಕೊಳ್ತಿರುವೆಯಾ? ಹಾಗಿದ್ದರೆ ನಾನೂ ನೋಡಿಕೊಳ್ತೀನಿ. ನಿನಗೆ ಶ್ರೀಮಂತ ಗಂಡನಿದ್ದಾನೆ. ಅವನಿಗೆ ನೀನು ಮೋಸ ಮಾಡ್ತಿಲ್ಲವೇ? ನನ್ನ ಬಳಿ ಕೂಡ ಸಾಕಷ್ಟು ಪುರಾವೆಗಳಿವೆ. ಅವನ್ನು ನಾನು ನಿನ್ನ ಗಂಡನಿಗೆ ತೋರಿಸಿದರೆ ನಿನ್ನ ಕೈಗೆ ವಿಚ್ಛೇದನ ಪತ್ರ ಸಿಗುತ್ತದೆ ಅಷ್ಟೇ,” ಎಂದು ಪ್ರಿನ್ಸಿಪಾಲರು ಬೆದರಿಕೆ ಹಾಕಿದರು.

“ಹಾಗಿದ್ದರೆ ಅಮರ್‌ ಪ್ರಿನ್ಸಿಪಾಲ್ ‌ರೇ, ನೀವು ಎಚ್ಚರದಿಂದಿರಿ. ನನ್ನ ಬಳಿ ನಿಮ್ಮ ಅನೇಕ ಚಿತ್ರಗಳಿವೆ. ಮೆಸೇಜ್‌ ಚಾಟಿಂಗ್‌ ಗಳಿವೆ. ಅವನ್ನು ನಾನು ಮ್ಯಾನೇಜ್‌ ಮೆಂಟ್‌ ಗೆ ತೋರಿಸಿ ನಿಮ್ಮನ್ನು ನೌಕರಿಯಿಂದ ಕಿತ್ತು ಹಾಕಿಸಬಹುದು. ನಿಮ್ಮನ್ನು ಲೂಸ್ ಕ್ಯಾರೆಕ್ಟರ್‌ ಎಂದು ಸಾಬೀತು ಮಾಡಿ ನಿಮ್ಮ ಮರ್ಯಾದೆಯನ್ನು ಬೀದಿ ಪಾಲು ಮಾಡಬಹುದು. ಆದರೆ ನಾನು ಹಾಗೆ ಮಾಡುವುದಿಲ್ಲ. ಏಕೆಂದರೆ ನಾನು ನಿಮ್ಮನ್ನು ಪ್ರೀತಿಸಿದ್ದೇನೆ. ನಿಮಗೆ ಈಗ ಬೇರೆ ಯಾರೊ ಇಷ್ಟ ಆಗಿರಬಹುದು.”

“ಹಾಗಲ್ಲ ಅಮೃತಾ, ಶ್ವೇತಾ ನನಗೆ ಇಷ್ಟವಾಗಿಲ್ಲ. ಅವಳು ನನ್ನ ತಮ್ಮನ ಫ್ರೆಂಡ್‌. ಅವಳು ಆ ಹುದ್ದೆಗೆ ಸಮರ್ಥಳೂ ಕೂಡ. ನನ್ನ ಈ ನಿರ್ಧಾರದಿಂದ ನಿನಗೆ ಬೇಸರವಾಗಿದ್ದರೆ ಕ್ಷಮಿಸು,” ಈಗ ಪ್ರಿನ್ಸಿಪಾಲ್ ‌ಸಾಹೇಬರ ಧ್ವನಿ ಮೆತ್ತಗಾಗಿತ್ತು.

“ಇಟ್ಸ್ ಓ.ಕೆ. ಸಾರ್‌. ನಾನೂ ಕೂಡ ಸ್ವಲ್ಪ ಹೆಚ್ಚಿಗೆ ಮಾತಾಡಿದೆ ಅನಿಸುತ್ತೇ,” ಅಮೃತಾಳಿಗೂ ಕೂಡ ಜಗಳ ಮುಂದುವರಿಸುವುದು ಬೇಕಿರಲಿಲ್ಲ.

ಜಗಳ ಹೆಚ್ಚು ಮುಂಚೆಯೇ ಇಬ್ಬರೂ ಅದನ್ನು ಪ್ಯಾಚಪ್‌ ಮಾಡಿಕೊಂಡು ತಮ್ಮಿಬ್ಬರ ದೌರ್ಬಲ್ಯಗಳು ಇಬ್ಬರಿಗೂ ಗೊತ್ತು, ಅದನ್ನೇ ಬಂಡವಾಳ ಮಾಡಿಕೊಂಡು ಯಾರೂ ಬೇಕಾದರೂ ಮುಂದುವರಿದರೂ, ಅಪಾಯ ಇಬ್ಬರಿಗೂ ಕಟ್ಟಿಟ್ಟ ಬುತ್ತಿ ಎನ್ನುವುದು ಇಬ್ಬರಿಗೂ ಗೊತ್ತಿತ್ತು. ಹೀಗಾಗಿ ಅದನ್ನು ಮರೆತು ಇಬ್ಬರೂ ಪುನಃ ರೊಮಾನ್ಸ್ ನಲ್ಲಿ ಮುಳುಗಿದರು.

ಆದರೆ ಈ ಸಲ ಇಬ್ಬರೂ ಬಹಳ ಎಚ್ಚರಿಕೆ ವಹಿಸಲಾರಂಭಿಸಿದರು. ಇಬ್ಬರೂ ಜೊತೆ ಜೊತೆಗೆ ನಿಂತು ಸೆಲ್ಛೀ ತೆಗೆದುಕೊಳ್ಳುವುದನ್ನು ನಿಲ್ಲಿಸಿದರು. ಇಬ್ಬರೂ ಹೊರಗಡೆ ಸುತ್ತಾಡಲು ಹೋದರೆ ಆದಷ್ಟು ಕಡಿಮೆ ಫೋಟೋ ತೆಗೆಯುತ್ತಿದ್ದರು. ಚಾಟಿಂಗ್‌ ಬದಲಿಗೆ ವಾಟ್ಸ್ ಆ್ಯಪ್‌ ಕಾಲ್ ‌ಮಾಡುತ್ತಿದ್ದರು. ಮೆಸೇಜ್‌ ಮಾಡುವುದನ್ನು ಹೆಚ್ಚು ಕಡಿಮೆ ನಿಲ್ಲಿಸಿಯೇಬಿಟ್ಟರು. ಇಬ್ಬರಿಗೂ ಇದ್ದ ಭಯ ಏನೆಂದರೆ, ಎದುರಿಗಿನ ವ್ಯಕ್ತಿ ಯಾವುದೇ ಕ್ಷಣವಾದರೂ ತನ್ನ ಬಂಡವಾಳ ಬಯಲು ಮಾಡಬಹುದು ಎಂಬ ಆತಂಕ ಕಾಡುತ್ತಿತ್ತು.

ಅವರಿಬ್ಬರ ನಡುವೆ ಗಂಡ ಹೆಂಡತಿಯ ಸಂಬಂಧವಂತೂ ಇರಲಿಲ್ಲ. ಹಾಗಾಗಿ ಅಧಿಕಾರಯುತವಾಗಿ ರೊಮಾನ್ಸ್ ಮಾಡಲು ಸಾಧ್ಯವಿರಲಿಲ್ಲ. ಇಲ್ಲಿ ರೊಮಾನ್ಸ್ ಕೂಡ ಕದ್ದುಮುಚ್ಚಿಯೇ ಮಾಡಬೇಕಿತ್ತು. ಒಬ್ಬರು ಇನ್ನೊಬ್ಬರ ಮೇಲೆ ಯಾವುದೇ ಹಕ್ಕು ಸಾಧಿಸುವ ಹಾಗಿರಲಿಲ್ಲ. ಅಮೃತಾ ತನ್ನ ಮೊಬೈಲ್ ‌ನಲ್ಲಿದ್ದ ಎಲ್ಲ ಫೋಟೋಗಳನ್ನು ಲ್ಯಾಪ್‌ ಟಾಪ್‌ ನಲ್ಲಿ ಒಂದು ಕಡೆ ಸಂಗ್ರಹಿಸಿ ಇಟ್ಟಳು. ಆ ಚಿತ್ರಗಳಲ್ಲಿ ಇಬ್ಬರೂ ಅತ್ಯಂತ ನಿಕಟರಾಗಿರುವುದು ಕಂಡುಬರುತ್ತಿತ್ತು.

ಅಷ್ಟೇ ಅಲ್ಲ, ಎಲ್ಲ ಚಾಟಿಂಗ್‌ ಮತ್ತು ಮೆಸೇಜ್‌ ಗಳನ್ನು ಒಂದೆಡೆ ಸ್ಟೋರ್‌ ಮಾಡಿ ಇಡಲಾಯಿತು. ಸಂದರ್ಭ ಬಂದಾಗ ಅದನ್ನು ಉಪಯೋಗಿಸಿಕೊಳ್ಳಬೇಕೆಂಬ ಅಪೇಕ್ಷೆ ಇತ್ತು. ಪ್ರಿನ್ಸಿಪಾಲರು ಹಾಗೆ ಮಾಡಿಯೇ ಮಾಡುತ್ತಾರೆಂಬ ಅಳುಕು ಅವಳಿಗೆ ಇತ್ತು. ಹಾಗಾಗಿ ಅವಳು ಈ ಸಂಬಂಧ ಕಡಿದುಕೊಂಡು ಅವರ ಬೇಸರ ಕೋಪ ಹೆಚ್ಚಿಸಲು ಇಚ್ಛಿಸುತ್ತಿರಲಿಲ್ಲ.

ಅವರಿಬ್ಬರ ನಡುವೆ ಯಾವ ರೊಮಾನ್ಸ್ ಇತ್ತೋ, ಅದರಲ್ಲಿ ಮಜವಂತೂ ಇತ್ತು. ಆದರೆ ಪರಸ್ಪರರ ಬಗೆಗಿನ ಭಯ, ಆತಂಕ ಕೂಡ ಇತ್ತು. ಪ್ರೀತಿಯೊಂದಿಗಿನ ಹೆದರಿಕೆಯ ಭಾವನೆ ಇಬ್ಬರಿಗೂ ಹೊಸದಾಗಿತ್ತು. ಆದರೆ ಅದೇ ಭಯ ಆತಂಕ ಅವರ ಜೀವನದ ಭಾಗವಾಗಿಬಿಟ್ಟಿತ್ತು. ಇಬ್ಬರೂ ಪರಸ್ಪರರನ್ನು ಪ್ರೀತಿಯ ದೃಷ್ಟಿಯಿಂದ ನೋಡುತ್ತಿದ್ದರು, ಆದರೆ ಇಬ್ಬರ ಮೆದುಳಿನ ಒಂದು ಭಾಗ  ಮಾತ್ರ ಎದುರುಗಿನ ವ್ಯಕ್ತಿ ಯಾವಾಗ ಬೇಕಾದರೂ ತನ್ನನ್ನು ಹಾಳುಗೆಡುಹಲು ಕಾರಣವಾಗಬಹುದು ಎಂದು ಯೋಚಿಸುತ್ತಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ