ಹೋಟೆಲ್ ‌ಸಿಟಿ ಪ್ಯಾಲೆಸ್‌ ನ ರೆಸ್ಟಾರೆಂಟ್‌ ನಿಂದ ಹೊರಬರುತ್ತಿದ್ದಾಗ ಪ್ರಿಯಾಳ ಹೆಜ್ಜೆಯಲ್ಲಿ ಮಂದಗತಿ ಇತ್ತು. ಆದರೆ ಆ ಹೆಜ್ಜೆಯಲ್ಲಿ ಆತ್ಮವಿಶ್ವಾಸದ ಕೊರತೆ ಇರಲಿಲ್ಲ. ಮನಸ್ಸು ಬಿರುಗಾಳಿಗೆ ತಲ್ಲಣಗೊಂಡಿತ್ತು. ಆದರೆ ಅವಳು ತನ್ನ ನಿರ್ಧಾರವನ್ನು ಆ ಬಿರುಗಾಳಿಗೆ ಸಿಲುಕಿ ನಲುಗಲು ಅವಕಾಶ ಕೊಡಲಿಲ್ಲ.

ಅವಳ ಮುಖದಲ್ಲಿ ಉದಾಸತನದ ಒಂದು ಪದರ ಆವರಿಸಿಕೊಂಡಿತ್ತು. ಆದರೆ ಅವಳು ಅದನ್ನು ಮನಸ್ಸಿನೊಳಗೆ ಪ್ರವೇಶಿಸಲು ಅವಕಾಶ ಕೊಡಲಿಲ್ಲ. ಮನೆಗೆ ಬಂದು ಹಾಸಿಗೆ ಮೇಲೆ ಉರುಳಿ, ಅನಿಲ್ ‌ನ ಜೊತೆಗಿನ ತನ್ನ ಸಂಬಂಧಕ್ಕೆ ಅಂತಿಮ ವಿದಾಯ ಹೇಳುವಾಗ ಅವಳ ಕಣ್ಣು ತುಂಬಿ ಬಂದಿದ್ದವು.

ಅವರ ಪ್ರೀತಿ 5 ವರ್ಷಗಳಷ್ಟು ದೀರ್ಘವಾದದ್ದು. ಹೀಗಾಗಿ ಬ್ರೇಕಪ್‌ ಅಂತೂ ಮನಸ್ಸಿಗೆ ಘಾಸಿ ಮಾಡಿಯೇ ಮಾಡುತ್ತದೆ. ಆದರೆ ಅದಕ್ಕೆ ಬ್ರೇಕಪ್‌ ಎಂದು ಹೇಳುವುದು ಆ ಸಂಬಂಧಕ್ಕೆ ಅವಮಾನ ಮಾಡಿದಂತೆ. ಬ್ರೇಕಪ್‌ ಅಂದರೆ ಸಂಬಂಧ ತುಂಡರಿಸಿಕೊಳ್ಳುವುದೇ ಅಲ್ಲವೇ? ಆದರೆ ಆ ಸಂಬಂಧ ಒತ್ತಾಯಪೂರ್ವಕವಾಗಿ ಕಟ್ಟಲ್ಪಟ್ಟಿದ್ದರೆ ಹಾಗೆ ಹೇಳಿದ್ದು ಸರಿ ಎನಿಸುತ್ತಿತ್ತು. ಆದರೆ ಅನಿಲ್ ಜೊತೆಗಿನ ಸಂಬಂಧದಲ್ಲಿ ಒತ್ತಾಯ ಒತ್ತಡಪೂರ್ವಕ ಎಂಬ ಮಾತುಗಳೇ ಅರ್ಥಹೀನ. ಇದಂತೂ ಇಬ್ಬರೂ ತಮ್ಮ ಇಚ್ಛೆಗನುಗುಣವಾಗಿ ಪರಸ್ಪರರ ಕೈ ಹಿಡಿದಿದ್ದರು. ಅದು ಅನುಕೂಲಕರ ಎನಿಸದೇ ಇದ್ದಾಗ ಬಹಳ ಎಚ್ಚರಿಕೆಯಿಂದ ಆ ಬಂಧನದಿಂದ ಹಿಂದೆ ಸರಿಯುವ ನಿರ್ಧಾರವಾಗಿತ್ತು, ಅದೂ ಕೂಡ ಅನಿಲ್ ‌ನ ಭಾವೀ ಜೀವನಕ್ಕೆ ಶುಭ ಹಾರೈಸುತ್ತ.

ಪ್ರಿಯಾ ಹಾಗೂ ಅನಿಲ್ ‌ಕಾಲೇಜಿನ ಮೊದಲ ವರ್ಷದಿಂದಲೇ ಒಳ್ಳೆಯ ಸ್ನೇಹಿತರಾಗಿದ್ದರು. ಕೊನೆಯ ವರ್ಷಕ್ಕೆ ಬರುವ ಹೊತ್ತಿಗೆ ಆ ಸ್ನೇಹ ಪ್ರೀತಿಯ ರೂಪ ಪಡೆದುಕೊಂಡಿತ್ತು. ಆದರೆ ಅದು ಕಥೆ ಕಾದಂಬರಿ ಅಥವಾ ಸಿನಿಮಾಗಳಲ್ಲಿನ ರೀತಿ ಕುರುಡು ಪ್ರೀತಿಯಾಗಿರಲಿಲ್ಲ. ಅದು ಕಾಲಕ್ರಮೇಣ ಪರಿಪಕ್ವ ಹಾಗೂ ತಿಳಿವಳಿಕೆಯ ರೂಪ ಪಡೆದುಕೊಂಡಿತ್ತು. ಅವರ ನಡುವೆ ನಕ್ಷತ್ರಗಳನ್ನು ತಂದುಕೊಡುವ ಆಶ್ವಾಸನೆಯಂತಹ ಮಾತುಗಳು ನಡೆಯುತ್ತಿರಲಿಲ್ಲ. ಅಲ್ಲಿಯೂ ತಮ್ಮ ಕಾಲ ಮೇಲೆ ನಿಂತು ಜೊತೆ ಜೊತೆಗೆ ಮುಂದೆ ಸಾಗುವ ಕನಸು ಕಾಣಲಾಗುತ್ತಿತ್ತು.

ಕಾಲೇಜು ಮುಗಿಯುತ್ತಿದ್ದಂತೆ ಪ್ರಿಯಾ ಹಾಗೂ ಅನಿಲ್ ‌ಇಬ್ಬರೂ ಉದ್ಯೋಗದ ಬೇಟೆಯಲ್ಲಿ ಮಗ್ನರಾದರು. ಎಷ್ಟು ಸಾಧ್ಯವೋ ಅಷ್ಟು ಬೇಗನೇ ಕನಸನ್ನು ನನಸುಗೊಳಿಸುವ ಬಯಕೆ ಅವರದ್ದಾಗಿತ್ತು. ಅಂದಹಾಗೆ ಅನಿಲ್ ಗೆ ತನ್ನದೇ ಆದ ಕೌಟುಂಬಿಕ ವಹಿವಾಟು ಇತ್ತು. ಹಾಗಾಗಿ ಅವನು ತನ್ನನ್ನು ತಾನು ಜಗತ್ತಿನ ಸ್ಪರ್ಧೆಯಲ್ಲಿ ಒಡ್ಡಲು ತಯಾರಾಗಿದ್ದ. ಹೀಗಾಗಿ ಅವನು ಸ್ವತಂತ್ರವಾಗಿ ಏನಾದರೂ ನೌಕರಿ ಮಾಡುವ ಅಪೇಕ್ಷೆ ಇಟ್ಟುಕೊಂಡಿದ್ದ. ಅದು ಅವನಿಗೆ ಕುಟುಂಬದಿಂದ ಬಳುವಳಿ ಬಂದದ್ದಾಗಿರದೆ, ಅದು ತನ್ನ ಪರಿಶ್ರಮದ ಬಲದಿಂದ ದೊರೆತಂತಾಗಿರಬೇಕು.

ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ನಡೆಸಲು ಅವನು ಹಾಗೂ ಅವಳು ಇಬ್ಬರೂ ತಮ್ಮ ಹಳ್ಳಿಯಿಂದ ಬೆಂಗಳೂರಿಗೆ ಬಂದರು. ಒಂದೇ ಕೋಚಿಂಗ್‌ ನಲ್ಲಿ ಸಿದ್ಧತೆ ನಡೆಸುವುದು ಹಾಗೂ ಮನೆಯ ಶಿಸ್ತಿನಿಂದ ದೂರ ಇರುವುದರ ಹೊರತಾಗಿ ಇಬ್ಬರೂ ತಮ್ಮದೇ ಆದ ಪರಿಧಿಯೊಂದನ್ನು ನಿರ್ಮಿಸಿಕೊಂಡಿದ್ದರು. ಏಕಾಂಗಿಯಾಗಿದ್ದಾಗ ಇಬ್ಬರಲ್ಲಿ ಯಾರಾದರೂ ಒಬ್ಬರು ದಾರಿ ತಪ್ಪತೊಡಗಿದಾಗ, ಮತ್ತೊಬ್ಬರು ಅವರನ್ನು ಸರಿದಾರಿಯಲ್ಲಿ ನಡೆಸುತ್ತಿದ್ದರು. ಎಷ್ಟೋ ಜೋಡಿಗಳು ಲಿವ್ ‌ಇನ್‌ ನಲ್ಲಿ ಇರುವುದನ್ನು ನೋಡಿಯೂ ಕೂಡ ಅವರ ಮನಸ್ಸು ಗುರಿಯಿಂದ ಹಿಂದೆ ಸರಿಯುತ್ತಿರಲಿಲ್ಲ.

ನಾವು ಮದುವೆ ಮಾಡಿಕೊಳ್ಳಲು ನಿರ್ಧರಿಸಿರುವಾಗ, ಅದು ಈಗಲೇ ಏಕಿಲ್ಲ….. ಕೇವಲ 1 ಸಲ ಎಷ್ಟೋ ಸಲ ಅವಸರದ ಪುರುಷ ಮನಸ್ಸು ಹಠಕ್ಕೆ ಬೀಳುತ್ತಿತ್ತು.

“ಮದುವೆ ಬಳಿಕ ಅದನ್ನೇ ತಾನೇ ಮಾಡೋದು. ಒಂದು ಸಲ ಕೆರಿಯರ್‌ ರೂಪುಗೊಳ್ಳಬೇಕು. ಆ ಬಳಿಕ ಸದಾ ಜೊತೆ ಜೊತೆಗೆ ಇರುವುದು,” ಸಂಯಮದ ಸ್ತ್ರೀ ಮನಸ್ಸು. ಅವನ ಚಾಚಿದ ಕೈಯನ್ನು ನಗುತ್ತಲೇ ಹಿಂದೆ ಸರಿಸುತ್ತಿತ್ತು. ಎಂದಾದರೊಮ್ಮೆ  ಯಾರದ್ದಾದರೂ ದೃಢ ಹೆಜ್ಜೆ ಕನಸಿನ ಗೋಪುರದಿಂದ ಜಾರತೊಡಗಿದಾಗ, ಅವರು ಇನ್ನಿಲ್ಲದ ದೃಢ ಬಲಿಷ್ಠ ಬಾಹುಗಳು ಕೆಳಕ್ಕೆ ಬೀಳದಂತೆ ಹಿಡಿದುಕೊಳ್ಳಲಾಗುತ್ತಿದ್ದವು.

ಇಂದು ಮೇಲೆ, ನಾಳೆ ಕೆಳಗೆ, ಕೊಲಂಬಸ್‌ ರೈಡ್‌ ನ ಹಾಗೆ ಇಬ್ಬರ ಸಂಬಂಧಗಳು ತೂಗುಯ್ಯಾಲೆಯಲ್ಲಿದ್ದವು. ಈ ಮಧ್ಯೆ ಪ್ರಿಯಾಗೆ ಬ್ಯಾಂಕ್‌ ನಲ್ಲಿ ನೌಕರಿ ದೊರಕಿ ಅವಳು ಬೆಂಗಳೂರಿನಿಂದ ದೂರ ಹೋದಳು. ಆದರೆ ಇಬ್ಬರೂ ಫೋನ್‌ ಮತ್ತು ಸೋಶಿಯಲ್ ಮೀಡಿಯಾದ ಮುಖಾಂತರ ಸತತ ಸಂಪರ್ಕದಲ್ಲಿದ್ದರು. ಆದರೆ ಈಗ ಅನಿಲ್ ‌ಗೆ ಏಕಾಂಗಿಯಾಗಿ ಬೆಂಗಳೂರಿನಲ್ಲಿ ಇದ್ದುಕೊಂಡು ಪರೀಕ್ಷೆಯ ಸಿದ್ಧತೆ ನಡೆಸುವುದು ಕಷ್ಟಕರವಾಗಿ ಪರಿಣಮಿಸಿತ್ತು. ಅವನ ಮನಸ್ಸು ಯಾವಾಗಲೂ ಪ್ರಿಯಾಳ ಬಳಿ ಓಡಿಹೋಗುತ್ತಿತ್ತು. ಆದರೂ ಅವನು ತನಗೆ ತಾನೇ ಒಂದು ಅವಕಾಶ ಕೊಟ್ಟು ತನ್ನ ಮನಸ್ಸನ್ನು ಅಲ್ಲಿಯೇ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದ.

2 ವರ್ಷಗಳ ಪ್ರಯತ್ನದ ಬಳಿಕ ಅವನಿಗೆ ಎಲ್ಲೂ ಆಯ್ಕೆ ಆಗದಿದ್ದಾಗ ಅವನು ತನ್ನ ಮನೆಗೆ ವಾಪಸ್‌ ಬಂದು ತನ್ನ ಮನೆತನದ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡ. ಅವನ ಓಡಾಟ ಕಡಿಮೆಯಾಯಿತು. ಅವನಲ್ಲಿ ಒಂದು ರೀತಿಯ ಸ್ಥಿರತೆ ಬಂತು. ಜೀವನ ಒಂದು ನಿಟ್ಟಿನಲ್ಲಿ ಸಾಗತೊಡಗಿತು.

ಸಾಮಾನ್ಯವಾಗಿ ಮಧ್ಯಮ ವವರ್ಗದ ಕುಟುಂಬದಲ್ಲಿ ಮಕ್ಕಳ ಜೀವನದಲ್ಲಿ ಸ್ಥಿರತೆ ಬರುತ್ತಿದ್ದಂತೆ, ಅವರಿಗಾಗಿ ಮನೆಯಲ್ಲಿ ವಧು ಹುಡುಕುವ ಕಾರ್ಯ ಆರಂಭವಾಗುತ್ತದೆ. ಅನಿಲ್ ‌ನ ಮನೆಯಲ್ಲೂ ಅವನಿಗಾಗಿ ಮದುವೆ ಮಾತುಕತೆ ಶುರುವಾಯಿತು. ಅತ್ತ ಪ್ರಿಯಾಳಿಗಾಗಿಯೂ ವರನ ಹುಡುಕಾಟ ನಡೆದಿತ್ತು. ಅನಿಲ್ ‌ನ ಕುಟುಂಬದಲ್ಲಿ ಯಾರಾದರೂ ಅಪ್ಪಟ ಗೃಹಿಣಿಯಾಗಿ ಉಳಿಯುವ ಹುಡುಗಿಗೆ ಪ್ರಾಮುಖ್ಯತೆ ಕೊಡಬೇಕೆನ್ನುವ ನಿರ್ಧಾರವಾಗಿತ್ತು. ಅತ್ತ ಪ್ರಿಯಾಳಿಗಾಗಿ ಯಾರಾದರೂ ಬ್ಯಾಂಕ್‌ ಉದ್ಯೋಗಿಯನ್ನೇ ಹುಡುಕಲಾಗುತ್ತಿತ್ತು. ಏಕೆಂದರೆ ಇಬ್ಬರ ನಡುವೆ ಸರಿಯಾಗಿ ಹೊಂದಾಣಿಕೆ ಆಗುತ್ತದೆ ಎನ್ನುವುದು ಅವರ ಭಾವನೆಯಾಗಿತ್ತು.

ಅನಿಲ್ ‌ಅವಿಭಕ್ತ ಕುಟುಂಬದ ಮೂರನೇ ಪೀಳಿಗೆಯ ಎಲ್ಲಕ್ಕೂ ದೊಡ್ಡ ಮಗನಾಗಿದ್ದ. ಅವನು ಇಡುವ ಯಾವುದೇ ಹೆಜ್ಜೆ  ಅದು ಒಳ್ಳೆಯದಾಗಿರಬಹುದು ಅಥವಾ ಕೆಟ್ಟದ್ದು, ಭಾವೀ ಪೀಳಿಗೆಗಾಗಿ ಮಾದರಿಯಾಗಬಹುದು. ಪಾರಂಪರಿಕ ವ್ಯಾಪಾರಿ ಕುಟುಂಬದವನಾಗಿದ್ದ ಕಾರಣದಿಂದ ಅನಿಲ್ ‌ನ ಮನೆಯಲ್ಲಿ ದೊಡ್ಡವರ ಮಾತನ್ನು ನೇರ ವಾಕ್ಯವೊಂದು ಪರಿಗಣಿಸಲಾಗುತ್ತದೆ. ತಾತ ಹೇಳಿದ ಮಾತು ಅಂತಿಮವಾಗಿರುತ್ತದೆ. ಆ ಬಳಿಕ ಅಪ್ಪ, ಚಿಕ್ಕಪ್ಪ ಯಾರು ಏನೇ ಹೇಳಿದರೂ ಅದು ನಡೆಯುವುದಿಲ್ಲ. ಇನ್ನೊಂದೆಡೆ ಪ್ರಿಯಾಳ ಕುಟುಂಬದಲ್ಲಿ ಪ್ರಗತಿಪರ ದೃಷ್ಟಿಕೋನ. ಅವರಿಗೆ ಪ್ರಿಯಾಳ ಆಯ್ಕೆ ಬಗ್ಗೆ ಯಾವುದೇ ಆಕ್ಷೇಪ ಇರಲಿಲ್ಲ. ಆದರೆ ಅವಳ ಆಯ್ಕೆ ಎಲ್ಲರಿಗೂ ಸರಿ ಎನಿಸಬೇಕು, ಅದು ವ್ಯಾವಹಾರಿಕವಾಗಿರಬೇಕು.

ಕುಟುಂಬದ ರೀತಿ ನೀತಿಗಳ ಬಗ್ಗೆ ಚೆನ್ನಾಗಿ ಅರಿವಿದ್ದ ಅನಿಲ್ ‌ತನ್ನ ಮನದ ಮಾತನ್ನು ಮನೆಯವರ ಮುಂದೆ ಹೇಳುವ ಧೈರ್ಯ ಒಗ್ಗೂಡಿಸಲು ಆಗುತ್ತಿರಲಿಲ್ಲ. ಅತ್ತ ಪ್ರಿಯಾ ಈ ನಿಟ್ಟಿನಲ್ಲಿ ಅತ್ಯಂತ ನಿಶ್ಚಿಂತ ಸ್ಥಿತಿಯಲ್ಲಿದ್ದಳು. ಅವಳು ಅನಿಲ್ ‌ಗೆ ತನ್ನನ್ನು ಮದುವೆ ಆಗಬೇಕೆಂದು ಯಾವುದೇ ಒತ್ತಡ ಹೇರುತ್ತಿರಲಿಲ್ಲ ಹಾಗೂ ತನ್ನ ಅಸಮ್ಮತಿಯನ್ನು ಸೂಚಿಸುತ್ತಿರಲಿಲ್ಲ.

“ಪ್ರಿಯಾ, ನಾನು ಬಹಳ ಗೊಂದಲದಲ್ಲಿದ್ದೇನೆ. ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಮನೆಯವರು ನಮ್ಮದೇ ಜಾತಿಯ ಹುಡುಗಿಯ ಜೊತೆ ಮದುವೆ ಆಗು ಅನ್ನುತ್ತಿದ್ದಾರೆ. ಅಂದರೆ ಮದುವೆ ಇಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಅಲ್ಲ, ಎರಡು ವ್ಯಾಪಾರಿ ಕುಟುಂಬಗಳ ನಡುವೆ ಆಗಬೇಕು ಎನ್ನುವುದು ಇವರ ಧೋರಣೆ. ನಿನಗಂತೂ ಗೊತ್ತೇ  ಇದೆ, ನಾನು ನಿನ್ನ ಬಗ್ಗೆಯೇ ಕನಸು ಕಟ್ಟಿಕೊಂಡಿದ್ದೇನೆ. ನಾನು ನನ್ನ ತಾತನನ್ನು ಹೇಗೆ ಒಪ್ಪಿಸಬೇಕೆಂದು ನೀನೇ ಹೇಳು,” ಎಂದು ಅನಿಲ್ ‌ಕೇಳಿದ.

“ನೀನು ಅಷ್ಟಂತೂ ಧೈರ್ಯ ಒಗ್ಗೂಡಿಸಲೇಬೇಕು. ಇತ್ತು ನೀನು ಧೈರ್ಯ ತೋರಿಸದೇ ಹೋದರೆ ಮುಂದೊಮ್ಮೆ ನೀನು ಪಶ್ಚಾತ್ತಾಪ ಪಡಬೇಕಾಗುತ್ತದೆ. ಈ ನಿನ್ನ ನಿರ್ಧಾರ ನಮ್ಮಿಬ್ಬರ ಮುಂದಿನ ಜೀವನಕ್ಕೆ ಸಂಬಂಧಪಟ್ಟಿದೆ,” ಎಂದಳು ಪ್ರಿಯಾ.

“ಹಾಗಾದರೆ ನೀನೇನೂ ಮಾಡುವುದೇ ಇಲ್ಲವೇ?” ಅನಿಲ್ ‌ಆಶ್ಚರ್ಯಚಕಿತನಾಗಿ ಕೇಳಿದ.

“ನಿಮ್ಮ ಕುಟುಂಬದ ಬಗ್ಗೆ ನಾನೇನು ಮಾಡಲು ಸಾಧ್ಯ? ನನ್ನಷ್ಟರ ಮಟ್ಟಿಗೆ ನಾನು ಕ್ಲಿಯರ್‌ ಆಗಿರುವೆ. ನನ್ನ ಮನೆಯವರು ಇದಕ್ಕಾಗಿ ಒಪ್ಪಿಗೆ ಸಹ ಸೂಚಿಸುತ್ತಾರೆ. ಆದರೆ ಮೊದಲು ನಿನ್ನ ಮನೆಯವರನ್ನು ಒಪ್ಪಿಸು. ಆದರೆ ಒಂದು ಸಂಗತಿ ನೆನಪಿನಲ್ಲಿರಲಿ. ಅನಿಲ್‌, ನಾನು ಈಗ ಯಾವ ಸ್ಥಿತಿಯಲ್ಲಿದ್ದೇನೊ ಅದೇ ಸ್ಥಿತಿಯಲ್ಲಿ ಸ್ವೀಕರಿಸಬೇಕು. ನನ್ನ ಗುರುತು, ಪಡಿಯಚ್ಚು ಕಿತ್ತುಕೊಳ್ಳುವ ಪ್ರಯತ್ನ ಮಾಡಬಾರದು. ಈಗ ಅಷ್ಟೇ ಅಲ್ಲ, ಮುಂದೆಯೂ ಕೂಡ,” ಪ್ರಿಯಾ ತನ್ನ ನಿರ್ಧಾರ ತಿಳಿಸಿದಾಗ ಅನಿಲ್ ಯೋಚನೆಯಲ್ಲಿ ಮುಳುಗಿದ.

ಆಧುನಿಕ ಹಾಗೂ ಸ್ವಾವಲಂಬಿ ಪ್ರಿಯಾಳ ಪಡಿಯಚ್ಚು ಅವನ ತಾತನ ಆಯ್ಕೆಗೆ ಅತ್ಯಂತ ತದ್ವಿರುದ್ಧವಾಗಿತ್ತು. ಅಂದಹಾಗೆ ಈವರೆಗೂ ಅವರ ಮನೆಯಲ್ಲಿ ಬೇರೆ ಜಾತಿಯ ಹುಡುಗಿಯನ್ನು ಯಾರೂ ಮದುವೆಯಾಗಿರಲಿಲ್ಲ. ಅವರನ್ನು ಪ್ರಿಯಾಳಿಗಾಗಿ ಸಿದ್ಧಗೊಳಿಸುವುದು ಸಾಧ್ಯವಿರಲಿಲ್ಲ.

ಅನಿಲ್ ‌ತನ್ನ ಚಿಕ್ಕಮ್ಮನ ಜೊತೆ ಹೆಚ್ಚು ನಿಕಟತೆ ಹೊಂದಿದ್ದ. ಅವರಿಗೆ ತನ್ನ ಮನಸ್ಸಿನ ಮಾತನ್ನು ಹೇಳಿಕೊಂಡ. ಮೊದಮೊದಲು ಅವರು ಅನಿಲ್ ‌ಗೆ ತಿಳಿವಳಿಕೆ ಹೇಳಲು ಪ್ರಯತ್ನಿಸಿದರು. ಆದರೆ ಅವನು ಒಪ್ಪದೇ ಇದ್ದಾಗ ಅನಿಲ್ ‌ನ ಚಿಕ್ಕಪ್ಪನ ಜೊತೆಗೆ ಈ ವಿಷಯ ಪ್ರಸ್ತಾಪಿಸಿದರು.

ಈ ವಿಷಯ ಕೇಳಿ ಅವರು ಗರಂ ಆದರು. “ಅವನ ತಲೆಗಿಲೆ ಕೆಟ್ಟಿದೆಯಾ? ನಮ್ಮ ಸಮಾಜದಲ್ಲಿ ಹುಡುಗಿಯರ ಕೊರತೆ ಇದೆಯಾ? ಅವನನ್ನು ಬೆಂಗಳೂರಿಗೆ ಕಳುಹಿಸುವಾಗಲೇ ನಾನು ಬೇಡ ಅಂದಿದ್ದೆ. ಅವನ ಕೋರಿಕೆ ಯೌವನದ ಹಠ ಎಂದು ಭಾವಿಸಿದ್ದೆ. ಅದು ಒಂದೆರಡು ವರ್ಷಗಳಲ್ಲಿ ಇಳಿಯಬಹುದೆಂದು ತಿಳಿದಿದ್ದೆ. ಆದರೆ ಅವನು ತನ್ನ ಹಠದೊಂದಿಗೆ ಮತ್ತೊಂದು ಹಠವನ್ನು ಸೇರಿಸಿಕೊಂಡು ಬಂದ. ಅವನು ಬಿಸ್‌ ನೆಸ್‌ ನಲ್ಲಿ 2 ವರ್ಷ ಹಿಂದುಳಿದ. ಜೊತೆಗೆ ಪ್ರೇಮದ ಸುಳಿಗೆ ಸಿಲುಕಿಕೊಂಡ. ನಮ್ಮ ಮನೆಗೆ ನೌಕರಿ ಮಾಡುವ ಹುಡುಗಿ ಆಗಿಬರುವುದಿಲ್ಲ ಎಂದು ಹೇಳು,” ಚಿಕ್ಕಪ್ಪ ಅನಿಲ್ ‌ನನ್ನು ಬೆಂಗಳೂರಿಗೆ ಕಳಿಸಿಕೊಟ್ಟ ದೊಡ್ಡಣ್ಣನ ನಿರ್ಧಾರದ ಕೋಪವನ್ನು ಚಿಕ್ಕಮ್ಮನ ಮೇಲೆ ತೀರಿಸಿಕೊಂಡ.

ಆದರೆ ಅನಿಲ್ ‌ಧೈರ್ಯ ಕಳೆದುಕೊಳ್ಳಲಿಲ್ಲ. ಒಮ್ಮೆ ಚಿಕ್ಕಮ್ಮನ ಮುಖಾಂತರ ಚಿಕ್ಕಪ್ಪನಿಗೆ, ಮತ್ತೊಮ್ಮೆ ಅಮ್ಮನ ಮುಖಾಂತರ ಅಪ್ಪನನ್ನು ಒಪ್ಪಿಸುವ ಪ್ರಯತ್ನ ಮುಂದುವರಿಸಿದ. ಇತ್ತ ಅವನು ಪ್ರಿಯಾಳನ್ನು ಉದ್ಯೋಗ ಬಿಟ್ಟುಬಿಡಲು ರಾಜಿ ಮಾಡಿಸುತ್ತಾ ಹುಡುಗಿ ಗೃಹಿಣಿ ಎನ್ನುವುದನ್ನು ಪ್ರೂವ್ ಮಾಡಬೇಕೆನ್ನುತ್ತಿದ್ದ. ಆದರೆ ಅನಿಲ್ ‌ನ ಪ್ರಸ್ತಾಪ ಪ್ರಿಯಾಳಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ.

“ನೀನು ನನ್ನನ್ನು ಏನೆಂದು ಭಾವಿಸಿರುವೆ ಅನಿಲ್? ನನಗೆ ನನ್ನ ಜಾಬ್‌ ಮುಂದುವರಿಸಬೇಕೆಂಬ ಅಪೇಕ್ಷೆ ಇದೆ. ನೋಡು ಇದನ್ನು ತಿಳಿದುಕೊಳ್ಳುವ ಅವಶ್ಯಕತೆ ನಿಮಗಿದೆ. ನಿಮ್ಮೆದುರು ಎರಡು ಪರ್ಯಾಯಗಳಿವೆ. ಒಂದು ನಿಮ್ಮ ಕುಟುಂಬದ ಪರಂಪರೆ ಮತ್ತು ಎರಡನೆಯದು ಪ್ರೀತಿ ಅಂದರೆ ನಾನು. ನನ್ನ ಅಸ್ತಿತ್ವ ಕಳೆದುಕ್ಳೊದೆಯೇ ನನ್ನನ್ನು ಒಪ್ಪಬೇಕು. ಇದರಲ್ಲಿ ಯಾವುದಾದರೊಂದು ಪರ್ಯಾಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲೂ ಬಹಳ ಎಚ್ಚರಿಕೆಯಿಂದ ನಿರ್ಧರಿಸಬೇಕು,” ಪ್ರಿಯಾ ದೃಢವಾಗಿ ಹೇಳಿದಳು. ಒಂದು ರೀತಿಯಲ್ಲಿ ಅವಳು ಅನಿಲ್ ‌ಮುಂದೆ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಳು.

ಕುಗ್ಗಿದ ಮನಸ್ಸಿನಿಂದ ಅನಿಲ್ ಮತ್ತೊಮ್ಮೆ ತನ್ನ ಮನೆಯವರನ್ನು ಒಪ್ಪಿಸುವುದರಲ್ಲಿ ಮಗ್ನನಾದ. ಈ ಸಲ ಅವನು ತನ್ನ ತಾತನನ್ನು ಆಯ್ಕೆ ಮಾಡಿಕೊಂಡ.

ಮೊಮ್ಮಗನ ಆಗ್ರಹಕ್ಕೆ ತಾತಾ ಕರಗಿಬಿಟ್ಟು ಅಷ್ಟಿಷ್ಟು ನಿರಾಕರಣೆಯ ನಡುವೆಯೂ ಅವರು ಬೇರೆ ಜಾತಿಯ ಪ್ರಿಯಾಳನ್ನು ಸೊಸೆಯಾಗಿ ತರಲು ಒಪ್ಪಿಕೊಂಡರು. ತಮ್ಮದೇ ಆದ ಕೆಲವು ಷರತ್ತುಗಳೊಂದಿಗೆ ಅವರು ಪ್ರಿಯಾಳನ್ನು ತಮ್ಮ ಕುಟುಂಬಕ್ಕೆ ತರಲು ಸಿದ್ಧರಾದರು.

ಅನಿಲ್ ‌ಇದನ್ನು ತನ್ನ ಗೆಲುವು ಎಂದು ಭಾವಿಸಿ ಕುಣಿದು ಕುಪ್ಪಳಿಸಿದ. ಅವನು ಫೋನ್‌ ನಲ್ಲಿ ಪ್ರಿಯಾಳಿಗೆ ಇದರ ಸಿಹಿ ಸುದ್ದಿ ತಿಳಿಸಿದ ಹಾಗೂ ಅವಳನ್ನು ಅದೇ ಹೋಟೆಲ್ ‌ಸಿಟಿ ಪ್ಯಾಲೇಸ್‌ ಗೆ ಭೇಟಿಯಾಗಲು ಕರೆದ. ಅವರು ಆಗಾಗ ಭೇಟಿ ಆಗುತ್ತಿದ್ದುದು ಅದೇ ಹೋಟೆಲ್ ‌ನಲ್ಲಿ.

ಅಂದಹಾಗೆ ಪ್ರಿಯಾಳಿಗೆ ಈಗಲೂ ಸಂದೇಹ ಇದ್ದೇ ಇತ್ತು. “ನಾನು ಮದುವೆಯ ನಂತರ ಉದ್ಯೋಗ ಬಿಡುವುದಿಲ್ಲ ಎಂದು ನೀನು ಅವರಿಗೆ ಸ್ಪಷ್ಟಪಡಿಸಿದೆ ತಾನೇ?” ಎಂದು ಕೇಳಿದಳು.

ಪ್ರಿಯಾಳ ಮಾತು ಕೇಳಿ ಅನಿಲ್ ‌ಒಮ್ಮೆಲೆ ನಿರಾಸನಾಗಿಬಿಟ್ಟ. ಪ್ರಿಯಾಳ ಸಂದೇಹ ನಿಜ ಆಗಿಯೇಬಿಟ್ಟಿತು. ಅವಳು ಅನಿಲ್ ‌ನ ಕಡೆ ಅವಿಶ್ವಾಸದಿಂದ ನೋಡಿದಾಗ, ಅವನಿಗೆ ತನ್ನ ತಪ್ಪಿನ ಅರಿವಾಯಿತು. ಅವನು ಪ್ರಿಯಾಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಗ್ಗಿದ ಸ್ವರದಲ್ಲಿ, “ನಮ್ಮ ಸಮಾಜದಲ್ಲಿ ಸೊಸೆಯಂದಿರು ಸದಾ ತಗ್ಗಿ ಬಗ್ಗಿ ನಡೆಯುತ್ತಾರೆ,” ಎಂದು ಹೇಳುತ್ತಾ ಅನಿಲ್‌ಪ್ರೀತಿಯಿಂದ ಅವಳ ಕೆನ್ನೆ ಎಳೆದ.

ಪ್ರಿಯಾ ಅವನ ಕೈಯನ್ನು ದೂರ ಸರಿಸುತ್ತಾ, “ನಿಮ್ಮ ಸಮಾಜದಲ್ಲಿನ ಸೊಸೆಯಂದಿರು ತಲೆಯ ಮೇಲೆ ಸೆರಗು ಹೊದ್ದುಕೊಂಡಿರಬೇಕು. ಯಾರನ್ನೂ ತಲೆ ಎತ್ತಿ ನೋಡಬಾರದು, ಅಲಂಕರಿಸಿದ ಬೊಂಬೆಯ ಹಾಗೆ ಮನೆಯಲ್ಲಿ ಗೆಜ್ಜೆನಾದ ಹೊರಡಿಸುತ್ತಾ ಓಡಾಡುತ್ತಿರಬೇಕು ಎಂದೆಲ್ಲ ಅಪೇಕ್ಷೆಗಳನ್ನು ನನ್ನಿಂದ ಇಟ್ಟುಕೊಳ್ಳಬೇಡಿ,” ಎಂದು ಹೇಳಿದಳು.

“ನೀನು ಬಹಳ ವಿಚಿತ್ರವಾಗಿ ಮಾತಾಡ್ತೀಯಾ. ಒಮ್ಮೆ ಮದುವೆಯಾದರೂ ಆಗಲಿ. ಆಮೇಲೆ ನೀನು ಹೇಳಿದ ಹಾಗೆ ಇರಬಹುದು. ನಾನು ನನ್ನ ಮನೆಯವರ ಜೊತೆ ಮಾತಾಡ್ತೀನಿ,” ಅನಿಲ್ ‌ಅವಳನ್ನು ಒಪ್ಪಿಸಲು ಪ್ರಯತ್ನಿಸಿದ.

“ನನ್ನ ಬಗ್ಗೆಯೂ ನೀನು ಇದೇ ಮಾತನ್ನು ನಿಮ್ಮ ಮನೆಯವರ ಮುಂದೆ ಹೇಳಿರಬಹುದು. ಒಂದು ಸಲ ಮದುವೆಯಾದರೂ ಆಗಲಿ. ಆಮೇಲೆ ಅವಳ ನೌಕರಿ ಬಿಡಿಸಿದರಾಯಿತು, ನಾನು ಪ್ರಿಯಾಳ ಜೊತೆ ಮಾತಾಡ್ತೀನಿ ಅಂತ,” ಅನಿಲ್ ‌ನ ಕಣ್ಣುಗಳಲ್ಲಿ ಇಣುಕಿ ನೋಡುತ್ತಾ ಅವನದೇ ಧಾಟಿಯಲ್ಲಿ ಹೇಳಿದಳು ಪ್ರಿಯಾ.

ವಿಷಯ ಹಾಗೆಯೇ ಇತ್ತು. ಅವನು ತನ್ನ ತಾತನಿಗೆ ಇದೇ ಮಾತು ಹೇಳಿ ಪ್ರಿಯಾಳ ಜೊತೆ ಮದುವೆಯಾಗಲು ರಾಜಿ ಮಾಡಿಸಿಕೊಂಡಿದ್ದ. ಅನಿಲ್ ‌ನ ಬಳಿ ಪ್ರಿಯಾಳ ಪ್ರಶ್ನೆಗಳಿಗೆ ಯಾವುದೇ ಉತ್ತರ ಇರಲಿಲ್ಲ. ಅವನು ಅವಳಿಂದ ದೃಷ್ಟಿ ತಪ್ಪಿಸಿಕೊಳ್ಳತೊಡಗಿದ.

“ಅಂದಹಾಗೆ ನನ್ನ ಅಮ್ಮನ ಹೆಸರೇನು ಹೇಳು?” ಪ್ರಿಯಾ ಕೇಳಿದ ಪ್ರಶ್ನೆಯಿಂದ ಅನಿಲ್ ಚಕಿತನಾಗಿ ಗೊತ್ತಿಲ್ಲ ಎಂಬಂತೆ ಅವನು ತಲೆ ಅಲ್ಲಾಡಿಸಿದ.

“ಇಲ್ಲ. ಗೊತ್ತಿಲ್ಲ ತಾನೇ? ಗೊತ್ತಾಗುವುದಾದರೂ ಹೇಗೆ? ಏಕೆಂದರೆ ಜನರು ಅವರನ್ನು ಅವರ ಹೆಸರಿನಿಂದ ಗುರುತಿಸುವುದೇ ಇಲ್ಲ. ಅವರು ಹೊರಗಿನ ಜನರಿಗೆ ಮಿಸೆಸ್‌ ಸುಂದರ್‌. ಸಂಬಂಧಿಕರಿಗೆ ಪ್ರಿಯಾಳ ಮಮ್ಮಿ. ಕೇವಲ ಅವರಷ್ಟೇ ಅಲ್ಲ, ಹೀಗೆ ಅದೆಷ್ಟೋ ಮಹಿಳೆಯರು ತಮ್ಮ ನಿಜ ನಾಮ ಮರೆತೇಬಿಟ್ಟಿರಬಹುದು. ಅವರು ಏನೇನೋ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿರಬಹುದು. ನಾನು ನನ್ನ ಮನೆಯ ಆಸುಪಾಸು, ನನ್ನ ಮನೆಯಲ್ಲೂ ಕೂಡ ಇದನ್ನು ಕಂಡಿದ್ದೇನೆ. ಆದರೆ ಇದು ನನಗೆ ಬಹಳ ಕೆಡುಕೆನಿಸುತ್ತದೆ,” ಎಂದಳು ಪ್ರಿಯಾ ಆವೇಶಕ್ಕೊಳಗಾದವಳಂತೆ.

ನಂತರ ತನ್ನನ್ನು ತಾನು ಸಂಭಾಳಿಸಿಕೊಳ್ಳುತ್ತಾ, ದೀರ್ಘ ನಿಟ್ಟುಸಿರುಬಿಟ್ಟು ಅನಿಲ್‌ ನ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದಳು.

“ಹುಡುಗಿಯರಿಗೆ ತಮ್ಮ ಕಾಲ ಮೇಲೆ ತಾವು ನಿಲ್ಲುವುದು ಅತ್ಯವಶ್ಯ. ನಾನು ನಿಮ್ಮನ್ನು ತುಂಬಾ ಪ್ರೀತಿಸ್ತೀನಿ. ಆದರೆ ನಿಮ್ಮ ಮನೆಯಲ್ಲಿ ಇದೇ ಕಾರಣದಿಂದ ಶೋಪೀಸ್‌ ಆಗಲು ಇಷ್ಟಪಡುವುದಿಲ್ಲ. ನೀನು ನನ್ನ ಸಂಘರ್ಷ ಕಾಲದ ಸಂಗಾತಿಯಾಗಿರುವೆ. ನಾನು ಅದೆಷ್ಟು ಕಷ್ಟಪಟ್ಟು ನನ್ನದೇ ಆದ ಒಂದು ನೆಲೆ ಕಂಡುಕೊಂಡಿದ್ದೇನೆ ಎಂಬುದನ್ನು ನೀನು ತಿಳಿದಿರುವೆ. ಇಷ್ಟೊಂದು ಕಷ್ಟಪಟ್ಟು ದಕ್ಕಿಸಿಕೊಂಡಿರುವ ಈ ಪಡಿಯಚ್ಚನ್ನು ನಾನು ಸೆರಗಿನ ಮರೆಯಲ್ಲಿ ಬಚ್ಚಿಡಲು ಇಷ್ಟಪಡುವುದಿಲ್ಲ. ನನ್ನ ಹೆಸರಿನ ಗುರುತನ್ನು, ನನಗಿರುವ ಐಡೆಂಟಿಟಿಯನ್ನು ದುರಾಸೆಯ ಬೆಂಕಿಯಲ್ಲಿ ಬೇಯಲು ಬಿಡುವುದಿಲ್ಲ!” ಪ್ರಿಯಾ ಅನಿಲ್ ‌ನ ಮುಖವನ್ನು ಓದುತ್ತಾ ಹೇಳಿದಳು.

“ಇದರರ್ಥ ನಿನಗೆ ನಿನ್ನ ಐಡೆಂಟಿಟಿ ನನಗಿಂತ ಹೆಚ್ಚು ಮಹತ್ವದ್ದಾಗಿ ಹೋಯಿತೆ? ನಿನ್ನ ಹೆಸರನ್ನು ನನ್ನ ಹೆಸರಿನೊಂದಿಗೆ ಸೇರಿಸಿ ಗುರುತಿಸುವುದನ್ನು ನೀನು ಇಷ್ಟಪಡುವುದಿಲ್ಲವೇ? ನಮ್ಮ ಹೆಸರು ಒಂದಾಗಬೇಕು. ಸ್ವಲ್ಪ ಯೋಚಿಸು, ಪ್ರಿಯಾ ಅನಿಲ್‌! ಆಹಾ!! ಕೇಳಲು ಎಷ್ಟು ಖುಷಿಯಾಗುತ್ತೆ!” ಅನಿಲ್ ‌ಧ್ವನಿಯಲ್ಲಿ ಈಗಲೂ ಒಂದು ಆಶಾಕಿರಣ ಬಾಕಿ ಇತ್ತು.

“ಇಲ್ಲ…. ನನ್ನ ಗುರುತು ನಿಮ್ಮ ಹೆಸರಿನ ಪೊರೆಯಲ್ಲಿ ಸೇರಬೇಕೆನ್ನುವುದನ್ನು ನಾನು ಇಷ್ಟಪಡುದಿಲ್ಲ. ಪ್ರಿಯಾ ಅನಿಲ್ ‌ಎಂದು ಗುರುತಿಸಿಕೊಳ್ಳದೇ ನಾನು ಕೇವಲ ಪ್ರಿಯಾ ಎಂದೇ ಗುರುತಿಸಿಕೊಳ್ಳಲು ಇಷ್ಟಪಡ್ತೀನಿ. ನನ್ನ ಹೆಸರ ಮುಂದೆ ಮತ್ತೇನೂ ಬರುವುದು ಬೇಡವೇ ಬೇಡ. ಜಗತ್ತಿನ ಪ್ರತಿಯೊಬ್ಬ ಹುಡುಗಿಗೂ ತನ್ನದೇ ಆದ ಗುರುತು ಹೊಂದಿರುವುದು ಅತ್ಯವಶ್ಯಕ,” ಎಂದು ಹೇಳುತ್ತಾ ಪ್ರಿಯಾ ಅನಿಲ್ ‌ನ ಕೈಯನ್ನು ಮುಟ್ಟಿದಳು.

“ಅಂದರೆ ನಿನ್ನದು `ನೋ’ ಎಂಬ ಅರ್ಥವೇ? ನಮ್ಮ ಕನಸುಗಳ ಗತಿಯೇನು ಪ್ರಿಯಾ?”

“ನಮ್ಮಿಬ್ಬರ ಕನಸುಗಳು ಒಗ್ಗೂಡಿದವು ನಿಜ. ಆದರೆ ಅವು ಅದರ ಹೊರತಾಗಿಯೂ ಸ್ವತಂತ್ರವಾಗಿದ್ದ. ಪರಸ್ಪರರಿಂದ ಪ್ರತ್ಯೇಕವಾಗಿದ್ದ. ನನಗೆ ನಿಮ್ಮ ಬಗ್ಗೆ ಯಾವುದೇ ತಕರಾರು ಇಲ್ಲ. ನೀವು ನನಗಾಗಿ ಮನೆಯಿಂದ ಪಲಾಯನ ಮಾಡಬೇಕೆಂದೂ ನಾನು ಬಯಸುವುದಿಲ್ಲ. ಆದರೆ ಕ್ಷಮಿಸಿ, ನಾನು ನನ್ನ ಗುರುತನ್ನು ಕಳೆದುಕೊಳ್ಳಲು ಆಗುವುದಿಲ್ಲ. ಇದನ್ನು ನನ್ನ ಕೊನೆಯ ತೀರ್ಮಾನವೆಂದೇ ಭಾವಿಸಬಹುದು,” ಪ್ರಿಯಾ ತನ್ನ ಆತ್ಮವಿಶ್ವಾಸಭರಿತ ನಿರ್ಧಾರ ತಿಳಿಸಿದಳು ಹಾಗೂ ಸ್ನೇಹದಿಂದ ಅನಿಲ್ ‌ನ ಭುಜ ತಟ್ಟಿ ಎದ್ದು ನಿಂತಳು.

ತನ್ನ ಈ ನಿರ್ಧಾರವನ್ನು ಅವನು ಅದೆಷ್ಟು ಸಹಜವಾಗಿ ಸ್ವೀಕರಿಸಬಹುದೆಂದು ಪ್ರಿಯಾಳಿಗೆ ಗೊತ್ತಿರಲಿಲ್ಲ. ಆದರೆ ಅದಂತೂ ಕಠೋರ ಸತ್ಯವಾಗಿತ್ತು. ಇಂತಹ ಸಮಯದಲ್ಲಿ ಮನಸ್ಸೆಂಬ ತಕ್ಕಡಿಯಲ್ಲಿ ಒಂದೆಡೆ ನಿರ್ಣಯ ಇನ್ನೊಂದೆಡೆ ಅದರ ಮೌಲ್ಯವನ್ನು ಇಡಲಾಗುತ್ತದೆ. ಅದು ನಿರ್ಣಯವೋ ಅಥವಾ ಮೌಲ್ಯವೋ ಎಂಬದನ್ನು ನಾವೇ ನಿರ್ಧರಿಸಬೇಕು.

ಈಗಲೂ ಕೂಡ ಪ್ರಿಯಾಳ ಮನಸ್ಸಿನ ತಕ್ಕಡಿಯಲ್ಲಿ ಒಂದೆಡೆ ಅವಳ ನೈಜ ಗುರುತು ಹಾಗೂ ಇನ್ನೊಂದೆಡೆ ಪ್ರೀತಿ ಹಾಗೂ ಸೌಲಭ್ಯ ಕೂಡಿದ ಭವಿಷ್ಯ. ಪ್ರಿಯಾ ಪ್ರೀತಿಯ ಬದಲಿಗೆ ತನ್ನ ಗುರುತನ್ನು ಆಯ್ಕೆ ಮಾಡಿಕೊಂಡಳು. ಅವಳು ಅನಿಲ್ ‌ಎಂಬ ಹೆಸರಿನ ಪೊರೆಯನ್ನು ತನ್ನ ಹೆಸರಿನ ಮೇಲೆ ಆರಿಸಿಕೊಳ್ಳಲು, ಅವನ ಮನೆಯ ಶೋಪೀಸ್‌ ಆಗಲು ಅವಕಾಶ ಕೊಡಲಿಲ್ಲ, ಹಾಗೂ ತನ್ನ ಐಡೆಂಟಿಟಿ ಉಳಿಸಿಕೊಳ್ಳಲು ತನ್ನದೇ ದಾರಿಯಲ್ಲಿ ಮುನ್ನಡೆದಳು.

ಅನಿಲ್ ‌ತುಂಬಿದ ಕಣ್ಣುಗಳಿಂದ ಅವಳ ಆತ್ಮವಿಶ್ವಾಸದ ಮುಖ ನೋಡುತ್ತಾ ಅಲ್ಲಿಂದ ಹೆಜ್ಜೆ ಹಾಕಿದ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ