ನಾನು ನನ್ನ ಕೆಲಸ ಬೇಗ ಮುಗಿದಿದ್ದರಿಂದ, ನನ್ನ ಪ್ರಾಣ ಸ್ನೇಹಿತನಾದ ಡಾ.ಮಹೇಶ್ ನನ್ನು ನೋಡಲು ಅವನ ಕ್ಲಿನಿಕ್ ಗೆ ಹೋದೆ. ಅವನು ಒಬ್ಬ ಮನೋವೈದ್ಯ, ಅವನ ಸಲಹೆ ಪಡೆಯಲು ಯಾವಾಗಲೂ ಅವನ ಕ್ಲಿನಿಕ್ಕಿನಲ್ಲಿ ಜನಜಂಗುಳಿ ಸದಾ ಇರುವುದು. ಇವತ್ತು ಅಪರೂಪಕ್ಕೆ ಅವನೊಬ್ಬನೇ ಕುಳಿತು ಯಾವುದೋ ಮೆಡಿಕಲ್ ಜರ್ನಲ್ ನೋಡುತ್ತಿದ್ದಾಗ ನನ್ನನ್ನು ನೋಡಿ – ಏಯ್ ಸುರೇಶ, ಎಷ್ಟು ದಿನವಾಯ್ತೋ ನಿನ್ನ ನೋಡಿ, ಬಾರೋ ಕೂತ್ಕೋ ಎಂದನು. ನಾವು ಅದು ಇದು ಅಂತ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ…..
ಒಬ್ಬ ಒಂಬತ್ತು ಹತ್ತು ವರ್ಷದ ಗಂಡು ಹುಡುಗ, ಅವನ ಜೊತೆಗೆ ಅವನ ಅಪ್ಪ ಅಮ್ಮ, ಅವನ ಎರಡು ಕಡೆಯ ಅಜ್ಜ, ಅಜ್ಜಿಯರು ಸೇರಿ, ಒಟ್ಟು ಏಳು ಜನ ಒಳಗೆ ಬಂದದ್ದನ್ನು ನೋಡಿ, ನಾನು ಹೊರಡಲು ಅನುವಾದಾಗ, ಡಾ.ಮಹೇಶ್ – ಏಯ್ ನೀನು ಇಲ್ಲೇ ಇರು ಪರವಾಗಿಲ್ಲ, ಅವರೇನಾದರೂ ನಿನ್ನ ಇರುವಿಕೆಗೆ ಪ್ರತಿರೋಧ ತೋರಿಸಿದರೆ, ನೀನು ನನ್ನ ಅಸಿಸ್ಟೆಂಟ್ ಅಂತ ಹೇಳುತ್ತೇನೆಂದು ನನ್ನನ್ನು ಅಲ್ಲೇ ಇರಿಸಿಕೊಂಡನು.
ಹೇಳಿ, ನನ್ನಿಂದ ಏನಾಗಬೇಕು ? ಎಂದು ಡಾ.ಮಹೇಶ್ ಕೇಳಲು, ಆ ಹುಡುಗನ ತಾಯಿಯು – ತನ್ನ ಗಂಡನನ್ನು ತೋರಿಸುತ್ತಾ, ಇವರು ಯಾವಾಗ ನೋಡಿದರೂ ತಮ್ಮ ಮೊಬೈಲ್ ಫೋನಿನಲ್ಲಿ ಮುಳುಗಿರುತ್ತಾರೆ, ಸಾಮಾಜಿಕ ಜಾಲತಾಣವೇ ಈಗ ಇವರ ಪ್ರಪಂಚವಾಗಿದೆ. ಈಗೀಗಂತೂ ನನ್ನನ್ನು ನೋಡಿ ಮಾತನಾಡಿಸುವುದಿಲ್ಲ, ನನಗೆ ಒಂದು ಸ್ಮೈಲ್ ಮಾಡಿ ವರ್ಷಗಳೇ ಆಗಿದೆ….ಇತ್ಯಾದಿ ಆಕೆ ದೂರುತ್ತಿದ್ದಾಗಲೇ….
ಅವಳ ಗಂಡ – ಯಾರು ಜಾಸ್ತಿ ಮೊಬೈಲ್ ನೋಡ್ತಾರೆ ಅಂತ ಅವರವರ ಸ್ಕ್ರೀನ್ ಟೈಮ್ ನೋಡಿದರೆ ತಿಳಿಯುತ್ತೆ ಎಂದನು. ಆಗ ಅವನ ಅತ್ತೆಯು – ಈಗಿನ ಎಲ್ಲಾ ಪ್ರಶ್ನೆಗಳಿಗೂ ಮೂಲ ಕಾರಣ ಅವರುಗಳ ಮೊಬೈಲ್ ಫೋನ್ ಆಗಿರುತ್ತೆ ಎಂದು ಹೇಳುತ್ತಾ ನೊಂದುಕೊಂಡರು.
ಆದರೆ, ಇವರು ಸಹ ಟಿವಿ ವಾಹಿನಿಗಳಲ್ಲಿ ಬರುವ ಧಾರಾವಾಹಿಗಳನ್ನು ತಮ್ಮ ಮೊಬೈಲ್ ನೋಡುತ್ತಾ ಇರುವುದನ್ನು ನಾನು ಅನೇಕ ಬಾರಿ ನೋಡಿ ಖಂಡಿಸಿದ್ದೀನಿ ಎಂದರು ಅವರ ಸಂಬಂಧಿಯಾದ ಹುಡುಗನ ತಾಯಿ. ಇವರಿಬ್ಬರ ದೂಷಣೆಯ ನಂತರ ಮತ್ತಷ್ಟು ಪರಿಸ್ಥಿತಿ ಬಿಗಾಡಾಯಿಸುವ ಲಕ್ಷಣಗಳು ಕಂಡು ಬಂದಾಗ, ಆ ಗಂಡನ ತಂದೆಯು – ಈ ಮೊಬೈಲ್ ಗೀಳಿನಿಂದ ಹೇಗೆ ತಪ್ಪಿಸಿಕೊಳ್ಳುವುದು ಅಂತ ಹೇಳಿ ಡಾಕ್ಟರ್ ಎಂದರು.
ಅಲ್ಲಿ ಏನು ನಡೆಯುತ್ತಿದೆ ಎಂದು ಸರಿಯಾಗಿ ತಿಳಿಯದೆ ಗೊಂದಲದ ಗೂಡಾಗಿದ್ದ ಆ ಹುಡುಗನನ್ನು ನೋಡಿ ಡಾಕ್ಟರ್ ಕೇಳಿದರು – ನೀನು ಏನಾದರೂ ಹೇಳುವುದು ಇದೆಯಾ ಮಗು ಎಂದು ಕೇಳಿದಾಗ, ಇಷ್ಟು ಹೊತ್ತು ಇವರುಗಳು ಹೇಳಿದ್ದನ್ನು ಕೇಳಿದಿರಿ, ಅಬ್ಬಾ, ಈಗಲಾದರೂ ತನ್ನ ಕಡೆ ಗಮನ ಹರಿಸಿದ್ದಕ್ಕೆ ಕಣ್ಣಲ್ಲೇ ಆನಂದ ಸೂಚಿಸುತ್ತಾ – ಈ ಮೊಬೈಲ್ ನಲ್ಲಿ ವಾಟ್ಸಪ್, ಫೇಸ್‌ಬುಕ್, ಇನ್ಸ್ಟಾಗ್ರಾಮ್ ಗಳು ಇರುವತನಕ ನಮ್ಮ ಮನೆಯಲ್ಲಿ ಈ ತರಹದ ಜಗಳ ದಿನಾಲೂ ನಡೆಯುತ್ತಲೇ ಇರುವುದು. ಮನೆಯಲ್ಲಿ ಶಾಂತಿಯ ವಾತಾವರಣವೇ ಇರಲ್ಲ. ನನ್ನ ತಂದೆ ತಾಯಿ, ನಾನು ಏನು ಮಾಡುತ್ತೀನಿ, ಏನು ತಿನ್ನುತ್ತೀನಿ ಎನ್ನುವ ಗಮನವೇ ಇಲ್ಲ, ನನ್ನ ಹತ್ತಿರ ಮಾತನಾಡುವುದು ಅಂದರೆ, ಊಟಕ್ಕೆ ಬಾ ಅನ್ನುವುದಷ್ಟೇ, ಅಲ್ಲಿ ಸಹ ನಾನೇ ಬಡಿಸಿಕೊಳ್ಳಬೇಕು. ಅವರುಗಳು ಮೊಬೈಲ್ ನೋಡಿಕೊಂಡೇ ಊಟ ಮಾಡ್ತಾರೆ, ಅವರಿಗೆ ಯಾವುದರ ಪರಿವೆಯೂ ಇರುವುದಿಲ್ಲ. ನನ್ನಪ್ಪ ಅಮ್ಮ ನನ್ನನ್ನು ತಬ್ಬಿ ಮುದ್ದಾಡಿ, ಮುತ್ತಿಟ್ಟು ಹಲವಾರು ವರ್ಷಗಳೇ ಆಯಿತು. ಮುಂಚೆ ಬರೀ ಬೇಸಿಕ್ ಫೋನ್ ಇದ್ದಾಗ, ಅದನ್ನು ಬರೀ ಮಾತನಾಡಲು ಉಪಯೋಗಿಸುತ್ತಿದ್ದರು, ಆಗ ಎಲ್ಲಾ ಸರಿಯಿತ್ತು. ಈಗ ಸುಮಾರು ಮೂರು ವರ್ಷದ ಮುಂಚೆ ಯಾವಾಗ ಎಲ್ಲರ ಬಳಿ ಒಂದೊಂದು ಆಂಡ್ರಾಯ್ಡ್ ಫೋನ್ ಬಂತೋ ಆಗಲಿಂದ ಇವರ ಜೀವನ ಶೈಲಿಯೇ ಬದಲಾಗಿಹೋಯಿತು…! ಎಂದನು ಆ ಮನನೊಂದ ಹುಡುಗ.
ಇದನ್ನು ಕೇಳಿ, ಅವನ ತಂದೆ ತಾಯಿ, ಅಜ್ಜ ಅಜ್ಜಿಯರೆಲ್ಲಾ ದಿಗ್ಮೂಡರಾದರು. ಹುಡುಗನ ತಂದೆ ತಾಯಿ ಒಬ್ಬರ ಮುಖ ಒಬ್ಬರು ನೋಡಿಕೊಂಡರು, ಆಮೇಲೆ ಆ ಮಗನನ್ನು ಇಬ್ಬರು ತಬ್ಬಿಹಿಡಿದು ಮುತ್ತಿನ ಮಳೆಗರೆದರು. ಆಗ ಡಾ.ಮಹೇಶ್ – ಇದು ನಿಮ್ಮೊಬ್ಬರ ಮನೆ ಕಥೆಯಲ್ಲಾ, ನಗರಗಳಲ್ಲಿನ ಮುಕ್ಕಾಲು ವಾಸಿ, ಎಲ್ಲರ ಮನೆಯ ಕತೆಯೂ ಇದೆ ಆಗಿದೆ. ಮುಖ್ಯವಾಗಿ, ತಮ್ಮ ಸ್ವಾರ್ಥದ ಉದ್ದೇಶಕ್ಕಾಗಿ, ಕೆಲವೊಮ್ಮೆ ವಿಧಿಯಿಲ್ಲದೆ ಚಿಕ್ಕ ಮಕ್ಕಳಿಗೆ ಮೊಬೈಲ್ ಫೋನ್ ಕೊಡುವ ಪದ್ದತಿ ಈಗ ಹಾಸುಹೊಕ್ಕಾಗಿದೆ. ಪುಟ್ಟ ಮಕ್ಕಳಿಗೆ ಏನೋ ಕ್ಷಣ ಕ್ಷಣಕ್ಕೂ ಬದಲಾಗುವ ದೃಶ್ಯಗಳನ್ನು ನೋಡಿ ಅದರ ಮೇಲೆ ಆಕರ್ಷಣೆ ಉಂಟಾಗುತ್ತದೆ. ಆಮೇಲೆ ಅದೇ ಅಭ್ಯಾಸ ಆಗಿ, ಯಾವಾಗಲೂ ಅದನ್ನೇ ಬಯಸುತ್ತದೆ, ತಮ್ಮ ಇತರ ಕಾರ್ಯಗಳನ್ನು ಪೂರೈಸಲು ಅನುಕೂಲವಾಗುವುದರಿಂದ ಅದನ್ನು ಕೊಡುವ ಪದ್ದತಿ ಎಲ್ಲೆಡೆಯೂ ವೈರಸ್ ನಂತೆ ಹಬ್ಬಿದೆ. ಇದಕ್ಕೆ ಮದ್ದೆಂದರೆ, ಮಕ್ಕಳ ಅಮ್ಮಂದಿರು, ಕಡ್ಡಾಯವಾಗಿ ತಮ್ಮ ಸಮಯವನ್ನು ಮಕ್ಕಳಿಗೆ ಮೀಸಲಾಗಿಟ್ಟು, ಹಿಂದಿನ ಕಾಲದ ಅಮ್ಮಂದಿರಂತೆ ಮಕ್ಕಳಿಗೆ ಊಟ ಮಾಡಿಸುವಾಗ, ಮರ ಗಿಡಗಳನ್ನು ತೋರಿಸುತ್ತಾ, ಪಕ್ಷಿ ಪ್ರಾಣಿಗಳ ಬಗ್ಗೆ ತಿಳಿ ಹೇಳುತ್ತಾ, ಆಕಾಶ, ಮೋಡಗಳು, ಚಂದ್ರನನ್ನು ತೋರಿಸುತ್ತಾ, ಹೇಗಾದರೂ ಪುಸಲಾಯಿಸುತ್ತಾ ಉಣಿಸಬೇಕು. ಮಕ್ಕಳ ಬೆಳವಣಿಗೆಯನ್ನು ಎಲ್ಲಾ ಹಂತದಲ್ಲೂ ಸೂಕ್ಷ್ಮವಾಗಿ ಗಮನಿಸುತ್ತಾ, ಪ್ರೋತ್ಸಾಹಿಸುತ್ತಾ ಇರಬೇಕು. ನಿದ್ರೆಯ ಸಮಯದಲ್ಲಿ ನೀತಿ ಕತೆಗಳನ್ನು, ಬುದ್ಧಿವಂತಿಕೆಯ ಕತೆಗಳನ್ನು, ಶ್ಲೋಕಗಳನ್ನು ಹೇಳುತ್ತಾ ಮಲಗಿಸುವ ಅಭ್ಯಾಸ ಮಾಡಬೇಕು. ಹಾಗೂ ಮನೆಯಲ್ಲಿ ಅತಿ ಅವಶ್ಯಕತೆ ಇದ್ದಾಗ ಮಾತ್ರ ಆಂಡ್ರಾಯ್ಡ್ ಫೋನ್ ಬಳಕೆ ಮಾಡುವ ಪರಿಪಾಠವನ್ನು ಇಟ್ಕೊಬೇಕು. ಮಕ್ಕಳು ಸದಾ ನಿಮ್ಮನ್ನು ಗಮನಿಸುತ್ತಿರುತ್ತಾರೆ, ಅವರ ಮುಂದೆ ನಿಮ್ಮ ನಡುವಳಿಕೆ ಉತ್ತಮವಾಗಿರಬೇಕು. ಅವರು ನಿಮ್ಮನ್ನೇ ಮುಂದೆ ಅನುಸರಿಸುತ್ತಾರೆ, ಅದರ ಗಮನವಿಟ್ಟುಕೊಂಡು ನೀವು ಮಕ್ಕಳೊಂದಿಗೆ ಜೀವನ ಸಾಗಿಸಬೇಕು. ಸರಿ, ಹೋಗಿ ಬನ್ನಿ, ಒಳ್ಳೆಯದಾಗಲಿ ಎಂದು ಆ ಕುಟುಂಬವನ್ನು ಕಳಿಸಿಕೊಟ್ಟನು.
ನಾನು ಮನೆಗೆ ಬಂದಾಗ, ಆಗಲೇ ರಾತ್ರಿಯಾಗಿತ್ತು. ನನ್ನ ಪುಟ್ಟ ಮಗಳು ಸ್ಟಡಿ ಟೇಬಲ್ ಇಟ್ಟುಕೊಂಡು ತನ್ನ ಹೋಮ್ ವರ್ಕ್ ಮಾಡುತ್ತಿದ್ದಳು. ಆ ಹುಡುಗನು ಹೇಳಿದ್ದೇ, ಇನ್ನೂ ನನ್ನ ಕಿವಿಯಲ್ಲಿ ಗುಯ್ ಗುಟ್ಟುತ್ತಿತ್ತು. ಹೋಗಿದ್ದೆ ನನ್ನ ಮಗಳನ್ನು ಎತ್ತಿಕೊಂಡು ಮುದ್ದಾಡಿ, ಮುತ್ತಿಡುತ್ತಾ, ನಿನ್ನ ಹೋಮ್ ವರ್ಕ್ ಆಗಿದ್ದರೆ, ಬಾ ಪುಟ್ಟ ನಿನಗೆ ಕತೆ ಹೇಳುತ್ತಾ ಮಲಗಿಸುತ್ತೇನೆ ಎಂದು ಹೇಳುತ್ತಾ ಮಗಳನ್ನು ಎತ್ತಿಕೊಂಡು ಹೋಗುತಿದ್ದದ್ದನ್ನು ಕಂಡು ಸ್ತಂಭಿಬೂತಳಾಗಿ ನಿಂತದ್ದು ನೋಡಿ ಮನಸ್ಸಿನಲ್ಲೇ ನಗುತ್ತಾ, ಆಮೇಲೆ ಇವತ್ತು ಡಾಕ್ಟರ್ ಕ್ಲಿನಿಕ್ ನಲ್ಲಿ ಆಗಿದ್ದು, ಡಾ.ಮಹೇಶ್ ನ ಉಪದೇಶವನ್ನು ಅವಳಿಗೆ ಹೇಳಬೇಕೆಂದುಕೊಂಡನು ಸುರೇಶ್.
ವಿ.ವಿಜಯೇಂದ್ರ ರಾವ್
401,3rd floor, SIRI snow drops
1st main, 1st cross, kanaka layout
Bangalore 560070
Cell: 9486836278