ಮಾನಸಾ ಗಂಡನ ಮನೆಗೆ ಹೋದ ಮೊದಲ ದಿನವದು. ಎಲ್ಲೆಡೆಯೂ ಗಜಿಬಿಜಿಯ ವಾತಾವರಣವಿತ್ತು. ಮಾನಸಾಳ ಓರಗಿತ್ತಿ, ನಾದಿನಿ, ಅತ್ತಿಗೆಯವರೆಲ್ಲರ ನಗುವಿನ ಅಲೆಯ ನಡುವೆ ಅವಳ ಗಂಡ ಶೇಖರ್ ನ ರೂಮಿಗೆ ಬಂದಾಗ, ಸುಧಾ ಆಂಟಿ ಅವನ ಕಿವಿ ಹಿಂಡುತ್ತಾ, “ಏನೋ, ನಿನಗೆ ಸ್ವಲ್ಪ ತಾಳ್ಮೆ ಇಲ್ಲವೇ? ಇಡೀ ಜೀವನ ಜೊತೆ ಜೊತೆಗೆ ಇರ್ತೀರಾ, ಈಗ ಸ್ವಲ್ಪ ಕಾಯೋಕೆ ಆಗೋದಿಲ್ವೇನು…..?” ಎಂದು ರೇಗಿಸಿದರು.
ಎಲ್ಲರೂ ನಗುವಿನ ಅಲೆಯಲ್ಲಿ ತೇಲುತ್ತಿದ್ದರು. ಆದರೆ ಶೇಖರ್ ನ ಅಮ್ಮ ಅಂದರೆ ಮಾನಸಾಳ ಅತ್ತೆ ಮಾಧುರಿಯ ಮುಖದಲ್ಲಿ ಮಾತ್ರ ಅದೇನೋ ನಿರ್ಲಿಪ್ತ ಭಾವ ಗೋಚರಿಸುತ್ತಿತ್ತು. ಭಾರಿ ಬೆಲೆಬಾಳುವ ಪೋಷಾಕು ಹಾಗೂ ಆಭರಣಗಳನ್ನು ಧರಿಸಿರುವ ಹೊರತಾಗಿ ಅವರ ಮುಖದಲ್ಲಿ ನಗು ಇಲ್ಲದೆ ಏನೋ ಕಳೆದುಕೊಂಡವರ ಹಾಗೆ ಕಾಣುತ್ತಿದ್ದರು.
ಮಾನಸಾ ಹಾಗೂ ಶೇಖರ್ ನ ಮದುವೆಯ ರಿಸೆಪ್ಶನ್ ಬಹಳ ಜೋರಾಗಿತ್ತು. ಹೊಂಬಣ್ಣದ ಸೀರೆ ಹಾಗೂ ಅದಕ್ಕೆ ಹೊಂದುವಂತಹ ರವಿಕೆ ಧರಿಸಿದ ಮಾನಸಾ ಬಹಳ ಸುಂದರವಾಗಿ ಕಾಣುತ್ತಿದ್ದಳು. ಶೇಖರ್ ಕೂಡ ಅಷ್ಟೇ ಚೆನ್ನಾಗಿ ಕಾಣುತ್ತಿದ್ದ. ನೋಡಿದವರು ಸುಂದರ ಜೋಡಿ ಎಂದು ಹೇಳುತ್ತಿದ್ದರು.
ಮರುದಿನ ಮಧ್ಯಾಹ್ನದ ಹೊತ್ತಿಗೆ ಇಡೀ ಮನೆ ಖಾಲಿಯಾಯಿತು. ಈಗ ಮನೆಯಲ್ಲಿ ಉಳಿದವರೆಂದರೆ ಮಾನಸಾ, ಶೇಖರ್, ಅವನ ಅಕ್ಕ ಸುಚಿತ್ರಾ, ತಂದೆ ವಿನೋದ್, ತಾಯಿ ಮಾಧುರಿ.
ಮರುದಿನ ಮಾನಸಾ ನೆಂಟರ ಮನೆಯ ಭೇಟಿಗೆ ಹೋಗಬೇಕಿತ್ತು. ಅವಳು ಯಾವ ಸೀರೆ ಉಡಬೇಕೆಂಬ ಗೊಂದಲದಲ್ಲಿದ್ದಳು. ನಾನು ಈ ಬಗ್ಗೆ ಅತ್ತೆಯನ್ನು ಏಕೆ ಕೇಳಬಾರದೆಂದು ಮಾನಸಾ ಯೋಚಿಸಿ, ಕೈಯಲ್ಲಿ ಸೀರೆಗಳನ್ನು ಹಿಡಿದುಕೊಂಡು ಅತ್ತೆಯ ಬಳಿ ಹೋಗಿ, “ಅತ್ತೆ, ನಾನು ಈ 2 ಸೀರೆಗಳಲ್ಲಿ ಯಾವುದನ್ನು ಉಟ್ಟರೆ ಚೆನ್ನಾಗಿ ಕಾಣಿಸ್ತೀನಿ ಹೇಳ್ತೀರಾ?” ಎಂದು ಕೇಳಿದಳು.
ಅತ್ತೆ ಮಾಧುರಿ, “ನಿನಗೆ ಯಾವುದು ಇಷ್ಟವೋ ಅದನ್ನೇ ಉಡು. ಅಂದಹಾಗೆ ಆ ಕಿತ್ತಳೆ ವರ್ಣದ ಸೀರೆ ನಿನಗೆ ಬಹಳ ಚೆನ್ನಾಗಿ ಒಪ್ಪುತ್ತದೆ.”
ಆಗ ಮಾವ ವಿನೋದ್ ಗಹಗಹಿಸಿ ನಗುತ್ತಾ, “ಆ ಪೆದ್ದಿಯ ಮಾತು ಏನು ಕೇಳ್ತೀಯಾ? ಕಣ್ಣಿಗೆ ರಾಚುವ ಈ ಬಣ್ಣ ಚಳಿಗಾಲದಲ್ಲಿ ಸರಿ ಅನಿಸುತ್ತೇ ಹೊರತು ಏಪ್ರಿಲ್ ತಿಂಗಳಲ್ಲಿ ಅಲ್ಲ,” ಎಂದರು.
ಅತ್ತೆ ಮಾಧುರಿ ಒಮ್ಮೆಲೆ ಮೌನವಾಗಿಬಿಟ್ಟರು. ಆಗ ಮಾವ ಪುನಃ ಮಾತು ಆರಂಭಿಸಿ, “ಮಾನಸಾ ನೀನು ಸುಚಿತ್ರಾಳನ್ನು ಕೇಳು. ಅವಳೇ ನಿನಗೆ ಯಾವುದು ಸರಿ ಅಂತ ಹೇಳ್ತಾಳೆ,” ಎಂದರು.
ಮಾನಸಾಳಿಗೆ ತನ್ನ ಅತ್ತೆಯ ಬಗ್ಗೆ ಮಾವನ ಈ ರೀತಿಯ ವರ್ತನೆ ಬಹಳ ವಿಚಿತ್ರವೆನಿಸಿತು. ತನ್ನ ಗಂಡನ ವರ್ತನೆ ಕೂಡ ಹೀಗೆಯೇ ಇದ್ದರೆ ಏನು ಮಾಡುವುದು, ಎಂದು ಅವಳಿಗೆ ಭಯ ಕೂಡ ಆಯಿತು. ಮಗ ಕಲಿಯುವುದು ತಂದೆಯಿಂದಲೇ ಅಲ್ವೇ? ಮರುದಿನದ ಕಾರ್ಯಕ್ರಮಕ್ಕೆ ಹಳದಿ ವರ್ಣದ ಶಿಫಾನ್ ಸೀರೆ ಉಟ್ಟಳು. ಅತ್ತೆ ಮಾಧುರಿ ಬೆಳಗಿನ ತಿಂಡಿಗಾಗಿ ಪೂರಿಪಲ್ಯ, ಕೇಸರಿ ಭಾತ್ ಮಾಡಿದ್ದರು. ಆಗ ಸುಚಿತ್ರಾ, “ಅಮ್ಮಾ, ನೀವು ನಮ್ಮನ್ನೆಲ್ಲ ದಪ್ಪ ಮಾಡೋಕೆ ನಿರ್ಧಾರ ಮಾಡಿದಂತೆ ಕಾಣುತ್ತೆ,” ಎಂದಳು.
ಆಗ ಶೇಖರ್, “ಅಮ್ಮಾ, ನಾನು ನಿಮಗೆ ಅದೆಷ್ಟು ಸಲ ಹೇಳಿದ್ದೇನೆ, ಡಯೆಟ್ ಫುಡ್ ಕೂಡ ಮಾಡಲು ಕಲಿತುಕೊಳ್ಳಿ ಎಂದು,” ತುಂಟತನದಿಂದ ಹೇಳಿದ.
ಆ ಮಾತಿಗೆ ಮಾವ, “ಅದೆಲ್ಲ ಕಲೀತಾಳೊ ನಿನ್ನ ಅಮ್ಮ. ಅವಳಿಗೆ ಅಷ್ಟು ಪುರಸತ್ತಾದರೂ ಎಲ್ಲಿದೆ ಹೇಳು?” ಎಂದರು.
ಆಗ ಮಾನಸಾ, “ಇಷ್ಟು ರುಚಿಕರವಾದ ತಿಂಡಿ ನನಗೆ ಸಿಕ್ಕಿರೋದು ಮೊದಲ ಸಲ,” ಎಂದಳು.
ಮಾನಸಾಳ ಮಾತು ಕೇಳಿ ಮಾಧುರಿಯ ಮುಖ ಅರಳಿತು.
ಆ ದಿನದ ಕಾರ್ಯಕ್ರಮದ ಬಳಿಕ ಶೇಖರ್ ಹಾಗೂ ಮಾನಸಾ 15 ದಿನಗಳ ಹನಿಮೂನ್ ಪ್ರವಾಸಕ್ಕೆ ಹೊರಟರು. ಅಲ್ಲೂ ಕೂಡ ಮಾನಸಾಳಿಗೆ ಆದ ಅನುಭವೆಂದರೆ, ಶೇಖರ್ ನ ಮನೆಯಿಂದ ಅಕ್ಕ ಅಥವಾ ಅಪ್ಪ ಮಾತ್ರ ಫೋನ್ ಮಾಡುತ್ತಿದ್ದರು. ಅಮ್ಮ ಮಾತ್ರ ಫೋನ್ ಮಾಡುತ್ತಲೇ ಇರಲಿಲ್ಲ.
ಶೇಖರ್ ಹಾಗೂ ಮಾನಸಾ ಗೋವಾದಿಂದ ವಾಪಸ್ ಆಗುವ ಹೊತ್ತಿಗೆ ಸುಚಿತ್ರಾ ತನ್ನ ಗಂಡನ ಮನೆಗೆ ಹೋಗಿದ್ದಳು. ಮಾನಸಾ ತಾನು ತಂದಿದ್ದ ಉಡುಗೊರೆಗಳನ್ನು ಅತ್ತೆ ಮಾಧುರಿ ಹಾಗೂ ಮಾವ ವಿನೋದ್ ಗೆ ತೋರಿಸತೊಡಗಿದಳು. ಮಾನಸಾ ಮಾವನಿಗಾಗಿ ಟೀಶರ್ಟ್ ಹಾಗೂ ಅತ್ತೆಗಾಗಿ ಕೂಲಿಂಗ್ ಗ್ಲಾಸ್ ತಂದಿದ್ದಳು. ಮಾಧುರಿಗೆ ತಂದಿದ್ದ ಉಡುಗೊರೆ ನೋಡಿ ಮಾವ, “ಮಾನಸಾ, ನೀನು ನಿನ್ನ ಅತ್ತೆಗೆ ಇದನ್ನೇನು ತಂದಿರುವೆ? ಮಾಧುರಿ ಇದನ್ನೆಂದೂ ಧರಿಸಿಯೇ ಇಲ್ಲ. ಇವಳು ಇಷ್ಟು ವರ್ಷ ನಗರದಲ್ಲಿದ್ದುಕೊಂಡು ಇದುವರೆಗೂ ಬದಲಾಗಿಲ್ಲ. ಈಗ ಇದನ್ನು ಹೇಗೆ ಹಾಕಿಕೊಳ್ತಾಳೆ….?” ಎಂದರು.
“ಆಗ ಧರಿಸದಿದ್ದರೆ ಏನಾಯ್ತು? ಇನ್ಮುಂದೆ ಧರಿಸ್ತಾರೆ. ನಾನು ಅವರಿಗಾಗಿ ಬಹಳ ಇಷ್ಟಪಟ್ಟು ತಂದಿರುವೆ,” ಎಂದಳು ಮಾನಸಾ.
ಮರುದಿನ ವಿನೋದ್ ಹಾಗೂ ಶೇಖರ್ ಇಬ್ಬರೂ ಆಫೀಸಿಗೆ ಹೊರಟುಹೋದರು. ಮಾನಸಾಳಿಗೆ ಇನ್ನೂ 7 ದಿನದ ರಜೆ ಬಾಕಿ ಉಳಿದಿತ್ತು. ಅವಳು ಹಿಂಜರಿಕೆಯಿಂದಲೇ ಅಡುಗೆಮನೆಗೆ ಕಾಲಿಟ್ಟಾಗ ಅಲ್ಲಿ ಅತ್ತೆ ಮಾಧುರಿ ಬೇಸನ್ ಉಂಡೆ ಕಟ್ಟುವಲ್ಲಿ ನಿರತರಾಗಿದ್ದರು. ಮಾನಸಾಳನ್ನು ನೋಡುತ್ತಾ ಅತ್ತೆ ಮುಗುಳ್ನಗುತ್ತಾ, “ಮಾನಸಾ, ನಿನಗೆ ಬೇಸನ್ ಉಂಡೆ ಬಹಳ ಇಷ್ಟ ಅಲ್ವೇ? ಅದಕ್ಕೆ ಇವನ್ನು ಮಾಡ್ತಿರುವೆ,” ಎಂದರು.
ಮಾನಸಾ ಒಂದು ಲಡ್ಡು ಕೈಗೆತ್ತಿಕೊಂಡು ತಿನ್ನುತ್ತಾ, “ಅತ್ತೆ, ಬಹಳ ರುಚಿ ರುಚಿಯಾದ ಲಡ್ಡು! ನಾನು ಸುಳ್ಳು ಹೇಳ್ತಿಲ್ಲ,” ಎಂದಳು ಖುಷಿಯಾಗಿ.
“ನಾನು 30 ವರ್ಷಗಳಿಂದ ಅಡುಗೆ ಮಾಡ್ತಿರುವೆ. ಇದನ್ನು ಸರಿಯಾಗಿ ಮಾಡೋಕೆ ಬಂದಿಲ್ಲ ಅಂದ್ರೆ ಏನು ಲಾಭ?” ಮಾಧುರಿ ಸ್ವಲ್ಪ ಉದಾಸ ಸ್ವರದಲ್ಲಿ ಹೇಳಿದರು.“ಇಲ್ಲ ಅತ್ತೆ, ನಾನು ನಿಜವನ್ನೇ ಹೇಳ್ತಿರುವೆ. ನೀವು ಬಹಳ ರುಚಿ ರುಚಿಯಾಗಿ ಅಡುಗೆ ಮಾಡ್ತೀರಿ. ಎಲ್ಲರಿಗೂ ಹೀಗೆ ಅಡುಗೆ ಮಾಡಲು ಬರುವುದಿಲ್ಲ,” ಎಂದಳು ಮಾನಸಾ.
ಮನೆಯ ಪ್ರತಿಯೊಂದು ಕೆಲಸದಲ್ಲೂ ಅತ್ತೆಯ ಶಿಸ್ತು ಎದ್ದು ಕಾಣುತ್ತಿತ್ತು. ಆದರೆ ತಮ್ಮದೇ ಆದ ಅಲಂಕಾರ ಪೋಷಾಕಿನ ಬಗ್ಗೆ ಉದಾಸೀನತೆ ತೋರಿಸುತ್ತಿದ್ದರು.
ಸಂಜೆಯಾಗುತ್ತಿದ್ದಂತೆ ಮಾವ ಮತ್ತು ಮಗನಿಗಾಗಿ ಅತ್ತೆ ಅವಲಕ್ಕಿಭಾತ್ ತಯಾರಿಸುತ್ತಿದ್ದರು. ಅಷ್ಟರಲ್ಲಿ ಮಾನಸಾ ಲಘುವಾಗಿ ಮೇಕಪ್ ಮಾಡಿಕೊಂಡು ತಯಾರಾಗಿ ಬಂದಳು ಅತ್ತೆಯನ್ನು ನೋಡುತ್ತಾ, “ಅತ್ತೆ ನಾನು ಚಹಾ ಮಾಡ್ತೀನಿ. ಅಲ್ಲಿಯವರೆಗೆ ನೀವು ತಯಾರಾಗಿ ಬನ್ನಿ,” ಎಂದಳು.
“ಅದೇಕೆ?” ಎಂದರು ಅತ್ತೆ.
ಮಾನಸಾ ಅವರಿಗೆ ಒಂದು ಸೂಟ್ ಕೊಡುತ್ತಾ, “ನೀವು ಫ್ರೆಶ್ ಆಗಿರೋದನ್ನು ನೋಡಿ ಮಾವ ಖುಷಿಯಾಗಬಹುದು,” ಎಂದಳು.
ಮಾವ ಹಾಗೂ ಶೇಖರ್ ಮನೆಗೆ ಬಂದು ಚಹಾ ಕುಡಿಯುತ್ತಿದ್ದಾಗ, ಶೇಖರ್ ತನ್ನ ಹೊಸ ಪ್ರಾಜೆಕ್ಟ್ ಬಗ್ಗೆ ಮಾನಸಾಳಿಗೆ ಹೇಳುತ್ತಿದ್ದ. ಮಾವ ಅತ್ತೆಯ ಕಡೆ ದೃಷ್ಟಿಹರಿಸಿ, “ಮಾಧುರಿ, ನಾನು ನಿನ್ನ ಜೊತೆಗೆ ಆಫೀಸಿನ ಒತ್ತಡದ ಬಗ್ಗೆ ಮಾತನಾಡಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಅಲ್ವಾ?” ಎಂದರು ವ್ಯಂಗ್ಯವಾಗಿ.
“ಕೇವಲ ಅವಲಕ್ಕಿ ಭಾತ್ ಮಾತ್ರ ನಿಮ್ಮ ಒತ್ತಡ ಕಡಿಮೆ ಮಾಡಬಹುದು,” ಎನ್ನುತ್ತಾ ಅತ್ತೆ ಸೆರಗಿನಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಾ ತಮ್ಮ ಕೋಣೆಗೆ ಹೊರಟುಹೋದರು. ವಿನೋದ್ ಹೆಂಡತಿಗೆ ಗೌರವವನ್ನು ಕೊಟ್ಟಿದ್ದಾದರೂ ಯಾವಾಗ? ಮಾಧುರಿಯನ್ನು ಸದಾ ಹಳ್ಳಿ ಗುಗ್ಗು, ಪೆದ್ದಿ ಎಂದೆಲ್ಲ ಕರೆಯುತ್ತಾ, ಆಕೆಯನ್ನು ಹೇಗೆ ಮಾಡಿಬಿಟ್ಟಿದ್ದರೆಂದರೆ, ಅವರಿಗೆ ತಮ್ಮ ಪೋಸ್ಟ್ ಗ್ರಾಜ್ಯುಯೇಶನ್‌ಬಯೇ ಸಂದೇಹ ಬರುಂತೆ ಆಗಿ ಹೋಗಿತ್ತು.ರಾತ್ರಿ ಮಲಗು ಸಮಯದಲ್ಲಿ ಮಾನಸಾ ಶೇಖರ್‌ನನ್ನು ಕೇಳಿಯೇಬಿಟ್ಟಳು, “ಅತ್ತೆಯ ಬಗ್ಗೆಯೇ ಮಾವ ಏಕೆ ಸದಾ ಟೀಕೆ ಮಾಡುತ್ತಿರುತ್ತಾರೆ?”
“ಅಪ್ಪ ಬಹಳ ಸ್ಮಾರ್ಟ್, ಅಮ್ಮ ನೋಡು ಹಳ್ಳಿಯವರ ಥರ ಇದ್ದಾರೆ. ಹಾಗಾಗಿ ಅವರು ಹೀಗೆ ಹೇಳುತ್ತಿರುತ್ತಾರೆ…..” ಎಂದ ಶೇಖರ್.
ಆ ಬಳಿಕ ಮಾನಸಾಳನ್ನು ತನ್ನ ಬಾಹುಗಳಲ್ಲಿ ಬಳಸುತ್ತಾ, “ಎಲ್ಲರೂ ನನ್ನ ಹಾಗೆ ಲಕ್ಕಿ ಆಗಿರುವುದಿಲ್ಲ. ನಿನ್ನಂತಹ ಸುಂದರ ಹಾಗೂ ಸ್ಮಾರ್ಟ್ ಪತ್ನಿ ಎಲ್ಲರಿಗೂ ಸಿಗೋದಿಲ್ಲ,” ಎಂದ.
ಮರುದಿನ ಮಾಧುರಿ ಹಾಗೂ ಮಾನಸಾ ಇಬ್ಬರೇ ಕುಳಿತಿದ್ದರು. ಆಗ ಮಾನಸಿ, “ಅತ್ತೆ, ನೀವು ತಪ್ಪು ತಿಳಿದುಕೊಳ್ಳುವುದಿಲ್ಲ ಎಂದರೆ ಒಂದು ಮಾತು ಹೇಳ್ಲಾ? ನೀವು ಮಾವನ ಪ್ರತಿಯೊಂದು ಮಾತುಗಳಿಗೂ ಏಕೆ ತಲೆ ಅಲ್ಲಾಡಿಸುತ್ತೀರಿ?” ಎಂದು ಕೇಳಿದಳು.
“ನಾನು ನಿನ್ನ ಹಾಗೆ ಸ್ಮಾರ್ಟ್ ಅಲ್ಲ, ಸುಂದರಿಯೂ ಅಲ್ಲ, ನಾನು ನನ್ನ ಕಾಲ ಮೇಲೂ ನಿಂತಿಲ್ಲ,” ಎಂದರು ಅತ್ತೆ ನೋವಿನಿಂದ.
“ಅತ್ತೆ, ನೀವು ಕೂಡ ಸ್ಮಾರ್ಟ್. ನಿಮ್ಮ ಬಾಡಿ ಅಷ್ಟೇ ಚೆನ್ನಾಗಿ ಮೇಂಟೇನ್ ಮಾಡಿಕೊಂಡಿದ್ದೀರಿ. ಆದರೆ ಅದರಲ್ಲಿ ಒಂದು ಪ್ರೀತಿಯ ಮುಗುಳ್ನಗೆಯ ಕೊರತೆಯಾಗಿದೆ ಅಷ್ಟೇ,” ಎಂದಳು.
“ನೀನು ತಮಾಷೆ ಮಾಡಬೇಡ. ನನ್ನ ಅತ್ತೆ, ನಾದಿನಿ, ಓರಗಿತ್ತಿ ಅಷ್ಟೇ ಏಕೆ ನನ್ನ ಮಕ್ಕಳು ಕೂಡ ನನ್ನನ್ನು ಪೆದ್ದಿ, ಹಳ್ಳಿ ಗುಗ್ಗು ಎಂದು ಕರೆಯುತ್ತಾರೆ. ನಿನ್ನ ಮಾವನಿಗೆ ನಾನು ಸರಿಯಾದ ಜೋಡಿ ಅಲ್ಲ,” ಎಂದರು ಅತ್ತೆ.
“ನೀವು ನಿಮ್ಮ ಬಗ್ಗೆ ಹೀಗೆ ಯೋಚಿಸಿದರೆ ಇತರರು ಕೂಡ ಹಾಗೆಯೇ ಯೋಚಿಸುತ್ತಾರೆ,” ಮಾನಸಾ ಹೇಳಿದಳು.
ರಾತ್ರಿ ಡೈನಿಂಗ್ ಟೇಬಲ್ ಮೇಲೆ ಅಡುಗೆಯ ಪಾತ್ರೆಗಳನ್ನಿಡುತ್ತಾ ಮಾನಸಾ, “ಮಾವ, ಅತ್ತೆ ಎಷ್ಟು ಚೆನ್ನಾಗಿ ಅಡುಗೆ ಮಾಡುತ್ತಾರೆ. ಅದರಿಂದ ಒಂದು ಸಣ್ಣ ಉದ್ಯಮ ಏಕೆ ಸೆಟಪ್ ಮಾಡಬಾರದು?” ಎಂದು ಕೇಳಿದಳು.
ಮಾವ ಸ್ವಲ್ಪ ಉದಾಸೀನ ಭಾವದಿಂದ, “ ಮಾನಸಾ, ಇದು ಪ್ರೆಸೆಂಟೇಶನ್ ಕಾಲ. ಮಾಧುರಿಯ ಹಾಗೆ ಪ್ರತಿಯೊಬ್ಬರೂ ಅಡುಗೆ ಮಾಡುತ್ತಾರೆ. ಇದರ ಮಾರ್ಕೆಟಿಂಗ್ ಹಾಗೂ ಇತರ ಕೆಲಸ ಯಾರು ತಾನೇ ಮಾಡುತ್ತಾರೆ? ಅಂದಹಾಗೆ ನಿನ್ನತ್ತೆ ಇಡೀ ಜೀವನ ಏನೂ ಮಾಡಲಿಲ್ಲ. ಈ 51ನೇ ವಯಸ್ಸಿನಲ್ಲಿ ಏನು ತಾನೇ ಮಾಡುತ್ತಾಳೆ?” ಎಂದರು.
ಮರುದಿನ ಮಾಧುರಿ ಅಡುಗೆಮನೆಯಲ್ಲಿ ವ್ಯಸ್ತರಾಗಿದ್ದರು. ಮಾನಸಾ ಸಂಪೂರ್ಣ ರೂಪುರೇಷೆ ಸಿದ್ಧಪಡಿಸಿದಳು. ಅವಳು `ಮಾಧುರಿ ಅಡುಗೆಮನೆ’ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದಳು. ಅವಳು ಅತ್ತೆಯನ್ನು ಉದ್ದೇಶಿಸಿ, “ಅತ್ತೆ, ನೀವು ಏನೇ ತಯಾರಿಸಿದರೂ ನಾನು ಅದರ ವಿಡಿಯೋ ಮಾಡಿ ಹಾಕ್ತೀನಿ. ಕ್ರಮೇಣ ನಿಮ್ಮ ಸಬ್ ಸ್ಕ್ರೈಬರ್ ಹೆಚ್ಚುತ್ತಾ ಹೋದಂತೆ ಜನರಿಗೆ ನಿಮ್ಮ ಬಗ್ಗೆ ಗೊತ್ತಾಗುತ್ತೆ ಹಾಗೂ ನಿಮಗೆ ಆದಾಯ ಬರತೊಡಗುತ್ತದೆ,” ಎಂದಳು.
“ಮಾನಸಾ, ನನಗೆ ಇದೆಲ್ಲ ಆಗುವುದಿಲ್ಲ,” ಎಂದರು ಅತ್ತೆ ಗಾಬರಿಯಿಂದ.
ಮಾನಸಾಳ ಒತ್ತಾಯದ ಮೇರೆಗೆ ಮಾಧುರಿ ಲಘು ಮೇಕಪ್ ನೊಂದಿಗೆ ಸಿದ್ಧರಾದರು. ಆದರೆ ಅವರು ಬಹಳ ಗಾಬರಿಗೊಂಡಿದ್ದರು. ಅದರಿಂದ ಅವರು ಮಾಡುತ್ತಿದ್ದ ಪಾವ್ ಬಾಜಿಯ ಪಲ್ಯವೆಲ್ಲ ಕರಕಲಾಯಿತು. ಅದನ್ನು ನೋಡಿ ಅತ್ತೆ, “ಮಾನಸಾ, ನಾನು ನಿನಗೆ ಮೊದಲೇ ಹೇಳಿದ್ನಲ್ಲ. ನನಗೇನೂ ಬರುವುದಿಲ್ಲ ನಾನು ದಡ್ಡಿ ಅಂತಾ,” ಹೇಳಿದರು.
ಮಾನಸಾಳಿಗೆ ಅದೇನೊ ಆವೇಶ. ಅವಳು ಪುನಃ ಸಂಜೆ ಬಂದವಳೇ, “ಅತ್ತೆ, ನೀವು ಮೊದಲು ಸಿದ್ಧರಾಗಿ ಬನ್ನಿ. ಆ ಬಳಿಕ ಯಾವುದಾದರೂ ಟಿಫನ್ ಮಾಡಿ. ನಾವು ಅದರಿಂದಲೇ ಆರಂಭ ಮಾಡೋಣ,” ಎಂದಳು.
ಈ ಸಲ ಅದು ಚೆನ್ನಾಗಿ ತಯಾರಾಗಲಿಲ್ಲ. ಆದರೆ ಗೋಧಿ ಹಲ್ವಾ ಮಾಡುವ ವಿಡಿಯೋ ತಯಾರಿಸಿ ಅಪ್ ಲೋಡ್ ಮಾಡಿದಳು. ಮಾನಸಾ ಆ ವಿಡಿಯೋವನ್ನು ತನ್ನ ಆಫೀಸ್ ಹಾಗೂ ಸ್ನೇಹಿತರ ಗ್ರೂಪ್ ನಲ್ಲಿ ಶೇರ್ ಮಾಡಿದಳು. ಸಂಜೆಯಾಗುತ್ತಿದ್ದಂತೆ ಆ ವಿಡಿಯೋಗೆ 200 ಲೈಕ್ಸ್ ಹಾಗೂ 34 ಜನರಿಂದ ಕಮೆಂಟ್ ಕೂಡ ಸಿಕ್ಕಿತು.
ಒಬ್ಬ ವ್ಯಕ್ತಿಯ ಕಮೆಂಟ್ ಹೀಗಿತ್ತು, “ಹೆಂಡ್ತಿ ಎಂದರೆ ಹೀಗಿರಬೇಕು. ಸುಂದರ ಗುಣವಂತೆ ಹಾಗೂ ಪಾಕಕಲೆಯಲ್ಲಿ ನಿಪುಣೆ.”
“ನೋಡಿ ಅತ್ತೆ, ನಿಮ್ಮ ಫ್ಯಾನ್ಸ್, ಫಾಲೋಯಿಂಗ್ಸ್ ಆರಂಭವಾಯಿತು,” ಖುಷಿಯಿಂದ ಹೇಳಿದಳು ಮಾನಸಾ.
ಮರುದಿನ ಮಾಧುರಿ ಸ್ವತಃ ತಯಾರಾಗಿ ನಿಂತಿದ್ದರು. ಇಂದಿನ ವಿಡಿಯೋದಲ್ಲಿ ಅವರು ನಿನ್ನೆಗಿಂತ ಹೆಚ್ಚು ಕಾನ್ಛಿಡೆಂಟ್ ಆಗಿದ್ದರು. ಮಾಧುರಿಗೆ ತನ್ನ ಸೊಸೆಯ ಜೊತೆ 7 ದಿನಗಳು ನೋಡುನೋಡುತ್ತಿದ್ದಂತೆ ಕಳೆದುಹೋದವು. ಆ ದಿನಗಳಲ್ಲಿ ಮಾಧುರಿ ಪುನಃ ನಗಲು ಹಾಗೂ ತಮ್ಮ ಮೇಲೆ ತಾವೇ ವಿಶ್ವಾಸವಿಡುವುದನ್ನು ಕಲಿತರು.
ಮರುದಿನ ಮಾನಸಾ ಆಫೀಸಿಗೆ ಹೋಗಲು ತಯಾರಾಗುತ್ತಿದ್ದಳು, ಮಾಧುರಿ ಅವಳ ಕೋಣೆಗೆ ಬಂದು, “ಮಾನಸಾ, ಈಗ ಆ ಚಾನೆಲ್ ಗತಿಯೇನು?” ಎಂದು ಕೇಳಿದರು.
“ಅತ್ತೆ, ನಾವು ಪ್ರತಿದಿನ ಸಂಜೆ ತಪ್ಪದೇ ಒಂದು ವಿಡಿಯೋ ಮಾಡೋಣ. ನಾನು ನಿಮಗೆ ಯಾರ ನೆರವನ್ನೂ ಪಡೆಯದೆ ನೀವೇ ನಿಮ್ಮ ವಿಡಿಯೋ ಹೇಗೆ ತೆಗೆಯಬಹುದು ಎಂಬುದನ್ನು ಕಲಿಸಿಕೊಡ್ತೀನಿ,” ಎಂದು ಹೇಳಿದಳು.
ಮಾನಸಾಳ ಪ್ರೀತಿ ಹಾಗೂ ಗೌರವದ ಕಾರಣದಿಂದ ಮಾಧುರಿ ಈಗ ಹೆಚ್ಚೆಚ್ಚು ನಿಕಟರಾಗುತ್ತಾ ಹೊರಟಿದ್ದರು. ಅವರ ಮುಖದಲ್ಲಿ ಸದಾ ಮುಗುಳ್ನಗು ಮಿನುಗುತ್ತಿತ್ತು. ಮಾನಸಾ ನೆರವಿನಿಂದ ಈಗ ಅವರು ಆನ್ ಲೈನ್ ಆರ್ಡರ್ ಕೂಡ ಪಡೆಯ ತೊಡಗಿದರು.
ಇವತ್ತು ಮಾಧುರಿಗೆ ಮೊದಲ ಚೆಕ್ ಕೈಗೆ ಸಿಕ್ಕಿತು. ಅದು 16,000 ರೂ.ಗಳದ್ದು. ಆ ಮೊತ್ತ ದೊಡ್ಡದಾಗಿರದೇ ಇರಬಹುದು. ಆದರೆ ಅದರಿಂದ ದೊರೆಯುವ ಪ್ರೋತ್ಸಾಹದಿಂದ ಈವರೆಗೆ ಹಳ್ಳಿ ಗುಗ್ಗು, ಪೆದ್ದಿ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ಮಾಧುರಿಯಲ್ಲಾದ ಬದಲಾವಣೆಯಿಂದ ಆಕೆಯ ಪತಿ ವಿನೋದ್ ಚಕಿತರಾಗಿದ್ದರು.
“ಅಮ್ಮಾ, ನಿಮ್ಮ ಸೊಸೆ ಏಳು ದಿನಗಳಲ್ಲಿ ನಿಮ್ಮ ವರ್ಚಸ್ಸನ್ನೇ ಬದಲಿಸಿಬಿಟ್ಟಳು!” ಎಂದ ಶೇಖರ್ ಅಭಿಮಾನದಿಂದ.
“ಇಲ್ಲ. ಅವರಲ್ಲಿ ಆ ಪ್ರತಿಭೆ ಮೊದಲೇ ಇತ್ತು. ಆದರೆ ಆ ಪ್ರತಿಭೆಗೆ ಪ್ರೋತ್ಸಾಹದ ಕೊರತೆ ಇತ್ತು,” ಎಂದಳು ಮಾನಸಾ.
ಮಾಧುರಿ ಎಲ್ಲರ ಮಾತುಗಳಿಂದ ದೂರ ಬಂದು ಹೊಸ ರೆಸಿಪಿಯ ಸಿದ್ಧತೆಯಲ್ಲಿ ಮಗ್ನರಾಗಿದ್ದರು.