ಅಲಕಾ ಬೆಳಬೆಳಗ್ಗೆ ತಿಂಡಿ ಸಿದ್ಧಪಡಿಸಿ ಬೇಗ ಬೇಗ ತಯಾರಾಗತೊಡಗಿದಾಗ, ಪತಿ ಸುಮಿತ್ ಅವಳನ್ನು, “ಏನ್ ವಿಷಯ? ಇವತ್ತು ಎಲ್ಲಿಯಾದರೂ ಹೊರಟಿರುವೆಯಾ?” ಎಂದು ಕೇಳಿದ.
“ಹೌದು. ಇವತ್ತು ಸ್ವಾಮೀಜಿಯ ಬಳಿ ಹೋಗಬೇಕಿದೆ. ನೀವು ಆ ವಿಷಯ ಮರೆತುಬಿಟ್ರಾ? ಇವತ್ತು ಅವರು ಬರಲು ಹೇಳಿದ್ರಲ್ಲ, ಸಂತಾನ ಪ್ರಾಪ್ತಿಗಾಗಿ ಯಾವುದೊ ಅನುಷ್ಠಾನ ಆರಂಭ ಮಾಡಲಿದ್ದಾರಂತೆ.”
“ಹೌದು. ನೆನಪಿಗೆ ಬಂತು. ಕಳೆದ ತಿಂಗಳು ನಾವು ಅಲ್ಲಿಗೆ ಹೋದಾಗ ಫೆಬ್ರವರಿ ತಿಂಗಳ ಚತುರ್ದಶಿಯ ದಿನದಂದು ಅನುಷ್ಠಾನ ಆರಂಭಿಸುವುದಾಗಿ ಹೇಳಿದ್ದರು. ಸರಿ… ಸರಿ… ನೀನು ಹೋಗಿ ಅವರನ್ನು ಭೇಟಿಯಾಗು. ಸಂಜೆ ಆಫೀಸ್ ನಿಂದ ಬೇಗ ಹೊರಟು ನಾನೂ ಕೂಡ ಅಲ್ಲಿಗೆ ಬರ್ತೀನಿ,” ಸುಮಿತ್ ಹೇಳಿದ.
“ಸರಿ ಹಾಗಾದ್ರೆ. ನಾನು ಹೋಗಿರ್ತಿನಿ. ನೀವು ನನ್ನನ್ನು ಕರೆದುಕೊಂಡು ಹೋಗಲು ಅವಶ್ಯವಾಗಿ ಬರಬೇಕು. ನಾನು ಚಪಾತಿ ಹಿಟ್ಟು ಕಲಸಿ ಇಟ್ಟಿದ್ದೇನೆ. ಪಲ್ಯ ಕೂಡ ರೆಡಿಯಾಗಿದೆ. ಅತ್ತೆ ಚಪಾತಿ ಮಾಡಿಕೊಳ್ತಾರೆ. ಮಕ್ಕಳಿಬ್ಬರೂ ಇನ್ನೂ ಮಲಗಿದ್ದಾರೆ,” ಎಂದು ಅಲಕಾ ಅತ್ತೆಯ ಕಡೆ ನೋಡುತ್ತಾ ಹೇಳಿದಳು.
“ನೀನು ಅದರ ಬಗ್ಗೆ ಚಿಂತೆ ಮಾಡಬೇಡ, ಹೋಗಿ ಬಾ. ನಾನು ಇಬ್ಬರನ್ನು ನೋಡಿಕೊಳ್ತೀನಿ. ಆ ಸ್ವಾಮೀಜಿ ನಿನ್ನ ಮನದಿಚ್ಛೆಯನ್ನು ಈಡೇರಿಸಲಿ. ಅದರ ಹೊರತು ನಮಗೆ ಇನ್ನೇನೂ ಬೇಡ,” ಎಂದು ಅತ್ತೆ ಅವಳಿಗೆ ಭರವಸೆ ನೀಡಿದರು.
ಅಲಕಾ ಇವತ್ತು ನೀಲಿ ಬಣ್ಣದ ಸೀರೆ ಉಟ್ಟಿದ್ದಳು. ಸ್ವಾಮೀಜಿ ಅವಳಿಗೆ ಮಂಗಳ, ಶುಕ್ರ ಹಾಗೂ ಶನಿವಾರದಂದು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಲು ಹೇಳಿದ್ದರು. ಅಲಕಾ ಇನ್ನೇನು ಮನೆಯಿಂದ ಹೊರಡಬೇಕು ಎನ್ನುವಷ್ಟರಲ್ಲಿ ಚಿಕ್ಕವಳು ಎದ್ದು ಅಳಲು ಶುರು ಮಾಡಿದಳು. ಅಲಕಾ ಅವಳನ್ನು ಹೇಗೋ ಸುಮ್ಮನಾಗಿಸಿ, ಬಾಯಲ್ಲಿ ಹಾಲಿನ ಬಾಟಲ್ ಕೊಟ್ಟು ಅತ್ತೆಯ ಬಳಿ ಕೂರಿಸಿದಳು. ಚಿಕ್ಕವಳಿಗೆ ಈಗ 3 ವರ್ಷವಾಗಿತ್ತು. ಆದರೆ ಎದ್ದಕೂಡಲೇ ಅವಳಿಗೆ ಹಾಲಿನ ಬಾಟಲ್ ಕೊಡಬೇಕಾಗುತ್ತಿತ್ತು. ದೊಡ್ಡವಳಿಗೆ 7 ವರ್ಷ. 2ನೇ ತರಗತಿಗೆ ಪ್ರವೇಶಿಸಿದ್ದಳು.
ಅಂದಹಾಗೆ ಅಲಕಾಗೆ ಯಾವುದೇ ಕೊರತೆ ಇರಲಿಲ್ಲ. ಗಂಡ ಸುಮಿತ್ ಚೆನ್ನಾಗಿ ಗಳಿಸುತ್ತಿದ್ದ. ಮನೆಯಲ್ಲಿ ಎಲ್ಲ ಸುಖ ಸೌಲಭ್ಯಗಳಿದ್ದವು. ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಅತ್ತೆ ಮಾವ ಅವಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದರು. ಇಷ್ಟೆಲ್ಲ ಇದ್ದರೂ ಅಲಕಾಗಿದ್ದ ಒಂದು ಕೊರತೆಯೆಂದರೆ, ಅದು ಗಂಡು ಮಗುವಿನದ್ದು. ಅತ್ತೆಗೂ ಕೂಡ ಅದೇ ಆಸೆ ಇತ್ತು. ಅವರ ಒಬ್ಬ ಪರಿಚಿತರು ಸ್ವಾಮೀಜಿ ಬಗ್ಗೆ ತಿಳಿಸಿದ್ದರು. ಅವರ ಆಶೀರ್ವಾದ ದೊರೆತರೆ ಎಲ್ಲ ಸಾಧ್ಯ ಎಂದು ಹೇಳಿದ್ದರು.
ಸ್ವಾಮೀಜಿಯ ವಯಸ್ಸು 50ರ ಆಸುಪಾಸು ಇರಬಹುದು. ಮುಖದಲ್ಲಿ ಗಡ್ಡ ಮೀಸೆ ಧಾರಾಳವಾಗಿ ಬೆಳೆದಿತ್ತು. ಮೈಮೇಲೆ ಕಾವಿ ಬಟ್ಟೆ. ನಗರದಿಂದ 15 ಕಿ.ಮೀ. ದೂರದ ಒಂದು ನಿರ್ಜನ ಪ್ರದೇಶದಲ್ಲಿ ಸ್ವಾಮೀಜಿಯ ದೊಡ್ಡ ಆಶ್ರಮವಿತ್ತು. ಅಲ್ಲಿ ಸುಖ ಸೌಲಭ್ಯಗಳು ಹೇರಳವಾಗಿದ್ದವು. ಆಶ್ರಮದಲ್ಲಿ ಹಲವು ಕೋಣೆಗಳಿದ್ದವು. ಒಂದು ದೊಡ್ಡ ಹಾಲ್ ನಲ್ಲಿ ಅವರು ಭಕ್ತಾದಿಗಳಿಗೆ ಉಪದೇಶ ಕೊಡುತ್ತಿದ್ದರು. ಬೇರೊಂದು ಕೋಣೆಯಲ್ಲಿ ಧ್ಯಾನ ಮಾಡುವ ವ್ಯವಸ್ಥೆ ಇತ್ತು. ಮೂರನೇ ಕೋಣೆ ಸ್ವಲ್ಪ ಒಳಭಾಗದಲ್ಲಿತ್ತು. ಅಲ್ಲಿ ಸ್ವಾಮೀಜಿ ತನ್ನ ವಿಶೇಷ ಭಕ್ತರಿಗಾಗಿ ಮಾತ್ರ ಬುಲಾವ್ ಕೊಡುತ್ತಿದ್ದರು. ಹಾಗಾಗಿ ಅವರೊಂದಿಗೆ ಏಕಾಂಗಿಯಾಗಿ ಸಮಯ ಕಳೆಯುತ್ತಿದ್ದರು. ಒಂದು ಕೋಣೆಯಲ್ಲಿ ಸ್ವಾಮೀಜಿಯವರ ಎಲ್ಲ ಗ್ಯಾಜೆಟ್ಸ್ ಇಡಲಾಗಿತ್ತು. ಅಲ್ಲಿ ಯಾರೊಬ್ಬರಿಗೂ ಪ್ರವೇಶ ನೀಡಲಾಗುತ್ತಿರಲಿಲ್ಲ. ಅಲಕಾ ಸ್ವಾಮೀಜಿಯ ವಿಶೇಷ ಭಕ್ತರಲ್ಲಿ ಒಬ್ಬಳೆನಿಸಿಕೊಂಡಿದ್ದಳು. ಆದರೆ ಈವರೆಗೂ ಅವಳನ್ನು ಒಳಗೆ ಕರೆದಿರಲಿಲ್ಲ. ಅವಳು ಹಾಲ್ ನಲ್ಲಿ ಕುಳಿತು ಸ್ವಾಮೀಜಿಯ ಪ್ರವಚನ ಕೇಳಿಸಿಕೊಳ್ಳುತ್ತಿದ್ದಳು.
ಅಲಕಾ ಆಶ್ರಮಕ್ಕೆ ತಲುಪಿದಾಗ, ಅವಳಿಗೆ ವಿಶೇಷ ಕೋಣೆಗೆ ಬರಲು ತಿಳಿಸಲಾಯಿತು. ಅಲ್ಲಿ ವಿಶೇಷ ಭಕ್ತರಿಗಷ್ಟೇ ಅವಕಾಶ ಇರುತ್ತಿತ್ತು. ಅಲಕಾಗೆ ಆದ ಖುಷಿ ಅಷ್ಟಿಷ್ಟಲ್ಲ. ಅವಳು ಬೇಗ ಬೇಗ ಒಳಗಿನ ಕೋಣೆಯೊಳಗೆ ಹೋದಳು.
ಅವಳು ಒಳಗೆ ಬರುತ್ತಿದ್ದಂತೆ ಸ್ವಾಮೀಜಿ ಕೋಣೆಯ ಬಾಗಿಲು ಮುಚ್ಚಿದರು. ಅವರ ಮೈಮೇಲೆ ಧೋತಿ ಹೊರತು ಬೇರೆ ಯಾವುದೇ ವಸ್ತ್ರಗಳಿರಲಿಲ್ಲ. ಅಲಕಾಳಿಗೆ ವಿಚಿತ್ರವೆನಿಸಿತು. ಆದರೆ ಸ್ವಾಮೀಜಿಯ ಬಗ್ಗೆ ಗಾಢ ಶ್ರದ್ಧೆ ಇತ್ತು. ಅವಳು ಕೈ ಜೋಡಿಸಿ ಕೆಳಗೆ ಕುಳಿತುಕೊಳ್ಳಲು ನೋಡಿದಾಗ ಸ್ವಾಮೀಜಿ ಅವಳ ಭುಜಗಳನ್ನು ಹಿಡಿದುಕೊಂಡು ಅವಳನ್ನು ಬೆಡ್ ನಂತಿದ್ದ ಕುರ್ಚಿಯ ಮೇಲೆ ಕೂರಿಸಿದರು.
ಆ ಬಳಿಕ ಅವಳಿಗೆ ಕಣ್ಮುಚ್ಚಿಕೊಂಡು ಧ್ಯಾನ ಭಂಗಿಯಲ್ಲಿ ಕುಳಿತುಕೊಳ್ಳಲು ತಿಳಿಸಿದ ಸ್ವಾಮೀಜಿ, “ಪುತ್ರಿ, ನಾನು ನಿನಗೆ ಒಂದು ಮಂತ್ರ ಹೇಳ್ತೀನಿ. ನೀನು ಆ ಮಂತ್ರವನ್ನು 108 ಭಾರಿ ಜಪಿಸಬೇಕು. ಈ ಮಧ್ಯೆ ನಾನು ನಿನ್ನೊಂದಿಗೆ ಯೋಗಕ್ರಿಯೆ ಮಾಡ್ತಾ ಇರ್ತೀನಿ. ನೀನು ಮೌನವಾಗಿದ್ದುಕೊಂಡು ಮಂತ್ರ ಜಪಿಸುತ್ತಾ ಇರಬೇಕು. ಏನನ್ನೂ ಮಾತಾಡಬಾರದು.”
ಅಲಕಾ ಕಣ್ಣುಚ್ಚಿಕೊಂಡಳು ಮತ್ತು ಸ್ವಾಮೀಜಿ ಹೇಳಿಕೊಟ್ಟ ಮಂತ್ರ ಜಪಿಸತೊಡಗಿದಳು. ಆಗ ಅವಳಿಗೆ ತನ್ನ ತುಟಿಗೆ ಯಾರೋ ಏನನ್ನೋ ಅಂಟಿಸುತ್ತಿರುವಂತೆ ಅನುಭವವಾಯಿತು. ಅವಳು ತಕ್ಷಣವೇ ಕಣ್ತೆರೆದು ನೋಡಿದಾಗ, ಸ್ವಾಮೀಜಿ ತನ್ನ ಅತ್ಯಂತ ನಿಕಟ ಬಂದಿರುವುದನ್ನು ಕಂಡಳು. ಸ್ವಾಮಿಯ ಕೆಂಪು ಕಣ್ಣುಗಳಲ್ಲಿ ಕಾಮವಾಸನೆ ಎದ್ದು ಕಾಣುತ್ತಿತ್ತು. ಸ್ವಾಮೀಜಿ ಅವಳ ಬಾಯಿಗೆ ಟೇಪ್ ಅಂಟಿಸಿದ್ದ. ಏಕೆಂದರೆ ಅವಳು ಕೂಗಿಕೊಳ್ಳದಿರಲಿ ಎಂದು.
ಈಗ ಸ್ವಾಮೀಜಿ ಅವಳ ಒಂದೊಂದೇ ಬಟ್ಟೆಗಳನ್ನು ಕಳಚತೊಡಗಿದ. ಅವಳು ಈ ಮೃಗರೂಪಿ ಸ್ವಾಮೀಜಿಯಿಂದ ತನ್ನನ್ನು ತಾನು ಕಾಪಾಡಿಕೊಳ್ಳಲು ವ್ಯರ್ಥ ಪ್ರಯತ್ನ ಮಾಡತೊಡಗಿದಳು. ಸ್ವಾಮಿ ಅವಳ ದೇಹದ ಮೇಲೆ ತನ್ನ ದೌರ್ಜನ್ಯ ತೋರಿಸಿದ್ದ.
ತನ್ನ ಹಸಿವು ನೀಗಿಸಿಕೊಂಡ ಬಳಿಕ ಸ್ವಾಮೀಜಿ ಅವಳ ಕಣ್ಣಲ್ಲಿ ಕಣ್ಣಿಟ್ಟು, “ಪುತ್ರಿ, ಗಾಬರಿಯಾಗಬೇಡ. ನನ್ನ ಆಶೀರ್ವಾದದಿಂದ ನಿನಗೆ ಪುತ್ರ ರತ್ನ ಪ್ರಾಪ್ತಿ ಆಗುತ್ತದೆ. ಇವತ್ತಿನ ಈ ವಿಷಯವನ್ನು ಮನೆಯಲ್ಲಿ ಯಾರಿಗೂ ತಿಳಿಸಬೇಡ. ಇಲ್ಲದಿದ್ದರೆ ಕಾರ್ಯದ ಸಫಲತೆಯಲ್ಲಿ ಬಾಧೆ ಉಂಟಾಗುತ್ತದೆ ಮತ್ತು ನಿನಗೂ ಕೆಟ್ಟ ಹೆಸರು ಬರುತ್ತದೆ. ಹಾಗೊಂದು ವೇಳೆ ನೀನು ಬಾಯಿಬಿಟ್ಟರೆ ನಿನ್ನ ಜೊತೆಗೆ ಬಹಳ ಕೆಟ್ಟದ್ದಾಗುತ್ತದೆ. ನಿನ್ನ ಮಕ್ಕಳು ತೊಂದರೆಗೆ ಸಿಲುಕುತ್ತಾರೆ.”
ಅಲಕಾಳಿಗೆ ಏನೊಂದೂ ಅರ್ಥವಾಗುತ್ತಿರಲಿಲ್ಲ. ಈಗ ತಾನೇನು ಮಾಡಬೇಕು? ಯಾರ ಮೇಲೆ ತಪ್ಪು ಹೊರಿಸಬೇಕು? ಯಾರ ಮುಂದೆ, ಏನು ಹೇಳಬೇಕು ಎಂದು ಅವಳಿಗೆ ಗೊತ್ತಾಗುತ್ತಿರಲಿಲ್ಲ. ಅವಳು ಅಸ್ತವ್ಯಸ್ತ ಸ್ಥಿತಿಯಲ್ಲಿ ಹೊರಗೆ ಹೋಗುತ್ತಿರುವುದನ್ನು ಕಂಡು ಸ್ವಾಮೀಜಿ ಅವಳನ್ನು ತಡೆದು, “ಪುತ್ರಿ ಬಾತ್ ರೂಮಿಗೆ ಹೋಗಿ ಮುಖ ತೊಳೆದುಕೊ, ಬಟ್ಟೆ, ಕೂದಲು ಸರಿಪಡಿಸಿಕೊಂಡು ಹೊರಗೆ ಹೋಗು. ಇಲ್ಲದಿದ್ದರೆ ಜನ ನಿನ್ನ ಬಗ್ಗೆ ಏನು ಅಂದುಕೊಂಡಾರು? ನಿನ್ನ ಮನದಿಚ್ಛೆಯನ್ನು ಈಡೇರಿಸಲು ನಾನು ಸಾಮೀಪ್ಯ ಬರಬೇಕಾಯಿತು. ಈಗ ನೀನು ಪುತ್ರವತಿ ಆಗುತ್ತೀಯ. ಇನ್ಮುಂದೆ ನಿನ್ನ ಎಲ್ಲ ಕಷ್ಟಗಳು ದೂರವಾಗುತ್ತವೆ,” ಎಂದು ಹೇಳಿದ.
ಅಲಕಾ ನೋವಿನಿಂದ ಕಂಗೆಟ್ಟು ಹೋಗಿದ್ದಳು. ಮನಸ್ಸಿನಲ್ಲಿ ಅವಳಿಗೆ ಸ್ವಾಮೀಜಿಯ ಬಗ್ಗೆ ಹೇಸಿಗೆಯ ಭಾವನೆ ಉಂಟಾಗಿತ್ತು. ಮನದಲ್ಲಿ ಸಾವಿರಾರು ಪ್ರಶ್ನೆಗಳು ಏಳುತ್ತಿದ್ದವು. ಒಂದು ವೇಳೆ ತಾನು ಮನೆಯವರಿಗೆ ಈ ವಿಷಯ ತಿಳಿಸಿದರೆ, ಮೊದಲಿನ ಹಾಗೆ ಅವರು ತನ್ನ ಜೊತೆ ವರ್ತಿಸುತ್ತಾರೆಯೇ? ಅವಳ ಮನಸ್ಸು ತಳಮಳದಿಂದ ಬೇಯುತ್ತಿತ್ತು. ತಾನು ಸತ್ಯ ಹೇಳಿ ಪತಿಯ ದೃಷ್ಟಿಯಲ್ಲಿ ಕೀಳಾಗುವುದಿಲ್ಲವೇ? ಗಂಡ ತನ್ನ ಮಾತಿನ ಮೇಲೆ ನಂಬಿಕೆ ಇಡುತ್ತಾನೆಯೇ?
ಗಾಬರಿವಿಚಲಿತ ಮನಸ್ಸಿನಿಂದ ಅವಳು ಮುಖ ತೊಳೆದುಕೊಂಡು ಹೊರಬಂದಾಗ, ಸ್ವಾಮಿ ಅವಳ ಗಂಡನ ಜೊತೆ ಮಾತನಾಡುತ್ತಿದ್ದ. ಅಲಕಾ ಒಳಗೊಳಗೆ ಹೆದರಿ ಹೋಗಿದ್ದಳು. ಸ್ವಾಮಿ ಅವಳತ್ತ ನೋಡುತ್ತಾ ಅವಳ ಪತಿಗೆ ಹೇಳಿದ, “ನಿನ್ನ ಪತ್ನಿಯನ್ನು ಕರೆದುಕೊಂಡು ಹೋಗು. ನಾನು ಅವಳಿಗೆ ನನ್ನ ಆಶೀರ್ವಾದ ನೀಡಿರುವೆ, ಅನುಷ್ಠಾನ ಕೂಡ ಆರಂಭಿಸಿರುವೆ. ಅಂದಹಾಗೆ ಅಲಕಾ ಪುತ್ರಿ, ನಾನು ನಿನ್ನ ಗಂಡನಿಗೆ ಪ್ರತಿ ಸೋಮವಾರ ನಿನ್ನನ್ನು ಕರೆದುಕೊಂಡು ಬರಲು ಹೇಳಿರುವೆ. ಏಕೆಂದರೆ ಅನುಷ್ಠಾನ ಪೂರ್ಣಗೊಳ್ಳಬೇಕು,” ಎಂದು ಸ್ವಾಮೀಜಿ ಧೂರ್ತತೆಯಿಂದ ಹೇಳಿದಾಗ, ಅಲಕಾ ಒಳಗೊಳಗೆ ಗಾಬರಿಗೊಳಗಾದಳು.
ಸುಮಿತ್ ಸ್ವಾಮೀಜಿಯ ಕಾಲು ಮುಟ್ಟಿ ನಮಸ್ಕರಿಸಿ, ಅವರಿಂದ ವಿದಾಯ ಪಡೆದು ಅಲಕಾಳನ್ನು ಕರೆದುಕೊಂಡು ಹೊರಟ. ಮನೆಯವರಿಗೆ ಸ್ವಾಮೀಜಿಯ ಬಗ್ಗೆ ಅದೆಷ್ಟು ಮೂಢಭಕ್ತಿ ಇದೆ ಎನ್ನುವುದನ್ನು ಅವಳು ಅರ್ಥ ಮಾಡಿಕೊಂಡಿದ್ದಳು. ಅವಳು ಇಷ್ಟಪಟ್ಟೂ ಕೂಡ ಗಂಡನ ಮುಂದೆ ಸ್ವಾಮೀಜಿಯ ವಾಸ್ತವವನ್ನು ಬಹಿರಂಗ ಪಡಿಸಲು ಆಗಲಿಲ್ಲ. ಅದಕ್ಕೆ ತದ್ವಿರುದ್ಧವೆಂಬಂತೆ ಸುಮಿತ್ ರಸ್ತೆಯುದ್ದಕ್ಕೂ ಸ್ವಾಮೀಜಿಯ ಬಗ್ಗೆ ಪ್ರಶಂಸೆಯ ಸುರಿಮಳೆ ಸುರಿಸುತ್ತಿದ್ದ. ಅಲಕಾಳ ಮೆದುಳಿನಲ್ಲಿ ಬಿರುಗಾಳಿಯೇ ಎದ್ದಿತ್ತು.
ಆ ರಾತ್ರಿ ಅವಳು ಮಲಗಲು ಕೂಡ ಆಗಲಿಲ್ಲ. ಮೇಲಿಂದ ಮೇಲೆ ಎದ್ದು ಕುಳಿತುಕೊಳ್ಳುತ್ತಿದ್ದಳು. ಇನ್ನೇನು ಕಣ್ಣಲ್ಲಿ ನಿದ್ರೆ ಅವರಿಸುತ್ತಿದೆ ಎನ್ನುವಷ್ಟರಲ್ಲಿ ಸ್ವಾಮೀಜಿಯ ಮುಖ ಅವಳ ಕಣ್ಮುಂದೆ ಬಂದು ಕುಣಿಯುತ್ತಿತ್ತು. ಅವಳು ಜೋರಾಗಿ ಕಿರುಚುತ್ತಾಳೆ, ಉಸಿರು ವೇಗವಾಗಿ ಹೊರಬರುತ್ತಿತ್ತು.
ಮತ್ತೊಂದು ಸೋಮವಾರ ಬರುತ್ತಿತ್ತು. ಆ ಬಗ್ಗೆ ಯೋಚಿಸಿಯೇ ಅವಳು ತಳಮಳಗೊಂಡಿದ್ದಳು. ಅವಳು ತನ್ನ ಹೃದಯದ ನೋವನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಈಗ ತಾನು ಏನು ಮಾಡಬೇಕೆಂದು ಅವಳಿಗೆ ಗೊತ್ತಾಗುತ್ತಿರಲಿಲ್ಲ.
ಭಾನುವಾರ ರಾತ್ರಿ ಗಂಡ, “ಅಲಕಾ, ನಾಳೆ ನಾವು ಸ್ವಾಮೀಜಿ ಬಳಿ ಹೋಗಬೇಕು. ರಜೆ ಹಾಕಿದ್ದೇನೆ. ನೀನು ಬೆಳಗ್ಗೆ ಸಿದ್ಧಳಾಗು,” ಎಂದು ನೆನಪಿಸುತ್ತಾ ಹೇಳಿದ.
“ಆದರೆ ನನಗೆ ಅಲ್ಲಿಗೆ ಹೋಗಲು ಇಷ್ಟವಿಲ್ಲ.”
“ಆದರೆ ಏಕೆ? ಅಂಥದ್ದೇನು ಆಯಿತು? ಹೇಳು ಅಲಕಾ,” ಸುಮಿತ್ ಕೇಳಿದ.
ತಾನು ಆ ವಿಷಯವನ್ನು ಹೇಗೆ ತಿಳಿಸಬೇಕೆಂದು ಅಲಕಾಳಿಗೆ ಗೊತ್ತಾಗುತ್ತಿರಲಿಲ್ಲ. ಗಂಡ ತನ್ನ ಬಗ್ಗೆ ತಪ್ಪಾಗಿ ಭಾವಿಸಿದರೆ? ಹೀಗಾಗಿ ಅವಳು ನೆಪ ಹೇಳಿದಳು, “ಮಕ್ಕಳನ್ನು ಬಿಟ್ಟು ಹೋಗಬೇಕಲ್ಲ ಅದಕ್ಕೆ.”
“ಅಲಕಾ, ನೀನು ಮಕ್ಕಳ ಬಗ್ಗೆ ಯೋಚಿಸಬೇಡ. ಅವರನ್ನು ಅಮ್ಮ ನೋಡಿಕೊಳ್ಳುತ್ತಾರೆ. ಅನುಷ್ಠಾನ ಅಪೂರ್ಣಗೊಂಡರೆ, ಇಡೀ ಕುಟುಂಬದ ಮೇಲೆ ಅದರ ಕರಿನೆರಳು ಆವರಿಸುತ್ತದೆ ಎಂದು ಸ್ವಾಮೀಜಿ ಹೇಳಿದ್ದಾರಲ್ಲ. ಮಕ್ಕಳ ಮೇಲೂ ಅದು ದುಷ್ಪರಿಣಾಮ ಬೀರುತ್ತದೆ. ಅಂದಹಾಗೆ ಒಂದು ಸಲ ಅನುಷ್ಠಾನ ಮುಗಿಸಿದರೆ, ಸ್ವಾಮೀಜಿಯ ಆಶೀರ್ವಾದದಿಂದ ನೀನು ಪುತ್ರವತಿಯಾಗುವೆ. ನಿನಗೂ ಕೂಡ ಅದೇ ಬೇಕಾಗಿದೆಯಲ್ವಾ?” ಸುಮಿತ್ ತಿಳಿಸಿ ಹೇಳಿದ.
ಅಲಕಾ ತನ್ನ ಮನಸ್ಸನ್ನು ಒಪ್ಪಿಸಿ ಪುನಃ ಸ್ವಾಮೀಜಿಯ ಬಳಿ ಬರಬೇಕಾಯಿತು. ಸುಮಿತ್ ಅಲಕಾಳನ್ನು ಕರೆದುಕೊಂಡು ಭಕ್ತರ ಸಾಲಿನಲ್ಲಿ ನಿಲ್ಲಿಸಿದ. ದೂರದಿಂದಲೇ ಅಲಕಾಳನ್ನು ನೋಡಿದ ಸ್ವಾಮೀಜಿ ಕಣ್ಣಲ್ಲಿ ಅದೇನೋ ಹೊಳಪು ಮೂಡಿತು. ಇತ್ತ ಅಲಕಾಳ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಸ್ವಾಮೀಜಿ ಮೊದಲು ಸ್ವಲ್ಪ ಹೊತ್ತು ಉಪದೇಶ ನೀಡುವ ನಾಟಕ ಮಾಡಿದ ಬಳಿಕ ಎದ್ದು ನಿಂತ.
ಇತ್ತ ಸುಮಿತ್ ಗೆ ಕ್ಲೈಂಟ್ ಕಡೆಯಿಂದ ಫೋನ್ ಬಂದಿತು. ಅವನು ಎದ್ದು ನಿಂತು, “ನಾನು ತುರ್ತು ಕೆಲಸದ ಮೇಲೆ ಕ್ಲೈಂಟ್ ಒಬ್ಬರನ್ನು ಭೇಟಿ ಆಗಬೇಕಿದೆ. 1-2 ಗಂಟೆಗಳಲ್ಲಿಯೇ ವಾಪಸ್ ಬರ್ತೀನಿ,” ಎಂದು ಹೇಳಿ ಅಲ್ಲಿಂದ ಹೊರಟ.
ಅಲಕಾ ಪ್ರಜ್ಞೆ ಕಳೆದುಕೊಂಡವರ ರೀತಿಯಲ್ಲಿ ಕುಳಿತುಕೊಂಡಳು. ಕೆಲವೇ ನಿಮಿಷಗಳಲ್ಲಿ ಸ್ವಾಮೀಜಿ ಅವಳನ್ನು ಒಳಗೆ ಬರುವಂತೆ ಹೇಳಿ ಕಳಿಸಿದ. ಆಗಲೇ ತಾನು ಅಲ್ಲಿಂದ ಓಡಿ ಹೋಗಬೇಕು ಎಂದೆನಿಸುತ್ತಿತ್ತು. ಆದರೆ ಗಂಡನಿಗೆ ಏನೆಂದು ಹೇಳಲು ಸಾಧ್ಯವಿತ್ತು? ಅದನ್ನೇ ಯೋಚಿಸಿ ಅವಳು ಅಲ್ಲಿಂದ ಏಳಲೂ ಆಗಲಿಲ್ಲ. ಸ್ವಾಮಿ ಅವಳಿಗೆ ಪುನಃ ಕರೆಕಳುಹಿಸಿದ. ಮತ್ತೊಮ್ಮೆ ಸ್ವಾಮೀಜಿ ಅವಳ ಮೇಲೆ ಆಕ್ರಮಣ ಮಾಡಿದ.
ತನ್ನ ದೇಹಜ ಹಸಿವು ನೀಗಿಸಿಕೊಂಡ ಬಳಿಕ ಸ್ವಾಮೀಜಿ ಧೂರ್ತ ಧ್ವನಿಯಲ್ಲಿ, “ಪುತ್ರಿ, ಮುಖ ತೊಳೆದುಕೊಂಡು ಹೋಗು. ನೀನು ಮುಂದಿನ ಸೋಮವಾರ ಪುನಃ ಬರಬೇಕು,” ಎಂದು ಹೇಳಿದ.
ಅವಳ ಮನಸ್ಸಿಗೆ ಅಲ್ಲಿಯೇ ಸಮೀಪದಲ್ಲಿ ಇಡಲಾಗಿದ್ದ ಕುರ್ಚಿಯೊಂದನ್ನು ಎತ್ತಿ ಸ್ವಾಮೀಜಿಯ ಮೇಲೆ ಎಸೆದುಬಿಡಬೇಕು ಎನಿಸುತ್ತಿತ್ತು. ಆದರೆ ಅವಳು ಹಾಗೆ ಮಾಡುವ ಹಾಗಿರಲಿಲ್ಲ. ತನ್ನ ಜೊತೆಗೆ ತನ್ನ ಕುಟುಂಬದರ ಗೌರವವನ್ನು ಮಣ್ಣುಪಾಲು ಮಾಡುವ ಹಾಗಿರಲಿಲ್ಲ.
ಹಲವು ಸಲ ಇದೇ ಪುನರಾವರ್ತನೆಯಾಯಿತು ಅನುಷ್ಠಾನ ಮುಗಿದ ಬಳಿಕ ಅವಳ ಹೊಟ್ಟೆಯಲ್ಲಿ ಪುತ್ರರತ್ನ ಜನಿಸುತ್ತಾನೆಂದು ಮನೆಯವರೆಲ್ಲ ಖುಷಿಯಿಂದಿದ್ದರು. ಆದರೆ ಅಲಕಾಗೆ ಮಾತ್ರ ಒಳಗೊಳಗೆ ಉಸಿರುಗಟ್ಟಿದಂತಾಗುತ್ತಿತ್ತು. ಕ್ರಮೇಣ ಅಲಕಾಗೆ ತನ್ನ ದೇಹದಲ್ಲಿ ಬದಲಾವಣೆ ಆಗುತ್ತಿರುವುದು ಗಮನಕ್ಕೆ ಬಂದಿತು.
ಆ ದಿನ ಬೆಳಗ್ಗೆ ಬೆಳಗ್ಗೆಯೇ ಬಾಥ್ ರೂಮ್ ನಲ್ಲಿ ಅವಳಿಗೆ ವಾಂತಿಯಾಯಿತು. ಮುಟ್ಟು ಮೊದಲೇ ನಿಂತಿತ್ತು. ತಾನು ಗರ್ಭಿಣಿ ಆಗಿದ್ದೇನೆಂದು ಅವಳಿಗೆ ಅನಿಸಿತು. ಆದರೆ ಈ ಸಲ ಅವಳಿಗೆ ಗರ್ಭಿಣಿಯಾಗಿರುವ ಬಗ್ಗೆ ಖುಷಿಯಾಗಿರಲಿಲ್ಲ. ಅವಳ ಮನಸ್ಸು ಕೂಗಿ ಕೂಗಿ ಅದನ್ನು ಪ್ರತಿಭಟಿಸುತ್ತಿತ್ತು. ಅಳು ಬಿಕ್ಕಿ ಬಿಕ್ಕಿ ಅತ್ತಳು. ಕುಟಿಲ ಸ್ವಾಮೀಜಿಯ ಕೆಂಪು ಕಣ್ಣುಗಳು ಈಗಲೂ ಅವಳನ್ನು ಹಿಂಬಾಲಿಸುತ್ತಿರುವಂತೆ ಅನಿಸುತ್ತಿದ್ದವು. ಬಳಿಕ ಅವಳು ಪ್ರಜ್ಞಾಹೀನಳಾಗಿ ಬಿದ್ದಳು.
ಬಳಿಕ ಮನೆಯವರು ವೈದ್ಯರನ್ನು ಕರೆಸಿದಾಗ, ಅವರು ಹೇಳಿದ ವಿಷಯದಿಂದ ಅವಳು ಗರ್ಭಿಣಿಯಾಗಿದ್ದಾಳೆಂದು ತಿಳಿಯಿತು. ಎಲ್ಲರ ಮುಖದಲ್ಲಿ ಖುಷಿಯ ಅಲೆಗಳು ತೇಲಿದವು. ಆದರೆ ಅಲಕಾಳ ಮುಖ ಕಳಾಹೀನವಾಗಿತ್ತು. ತಾನು ಗರ್ಭಿಣಿಯಾಗಿರುವುದಕ್ಕೆ ಖುಷಿಪಡಬೇಕೋ, ಸ್ವಾಮೀಜಿಯ ಕುಕೃತ್ಯಕ್ಕೆ ದುಃಖಪಡಬೇಕೋ ಎನ್ನುವುದು ಅವಳಿಗೆ ಗೊತ್ತಾಗುತ್ತಿರಲಿಲ್ಲ.
ಗಂಡ ಅವಳತ್ತ ಪ್ರೀತಿಯಿಂದ ನೋಡುತ್ತಿದ್ದ. ಅತ್ತೆ ಖುಷಿಯ ಉಯ್ಯಾಲೆಯಲ್ಲಿದ್ದರು. ಆದರೆ ಅಲಕಾ ತನ್ನ ಕಣ್ಣಿಂದ ಬಚ್ಚಿಟ್ಟುಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಳು. 2 ದಿನಗಳ ಬಳಿಕ ಸೋಮವಾರ. ಗಂಡ ಅವಳನ್ನು ಪುನಃ ಸ್ವಾಮೀಜಿಯ ಬಳಿ ಕರೆದುಕೊಂಡು ಹೋದ. ಸ್ವಾಮಿಗಳ ಕಾಲು ಮುಟ್ಟಿ ಆಶೀರ್ವಾದ ಪಡೆದು, “ಸ್ವಾಮೀಜಿಗಳೇ, ನಿಮ್ಮ ಆಶೀರ್ವಾದದಿಂದ ಅಲಕಾ ತಾಯಿಯಾಗುತ್ತಿದ್ದಾಳೆ,” ಎಂದು ಹೇಳಿದ.
ಅಲಕಾ ಸ್ವಾಮಿಗಳತ್ತ ನೋಡಿದಳು. ಸ್ವಾಮಿ ಧೂರ್ತ ನಗು ಬೀರುತ್ತಾ, “ಪುತ್ರವತಿ ಭವ. ಇವತ್ತು ಅನುಷ್ಠಾನದ ಕೊನೆಯ ದಿನ ಪುತ್ರಿ. ಬಾ ನನ್ನ ಜೊತೆಗೆ,” ಎಂದು ಕರೆದ.
ಕೋಣೆಯೊಳಗೆ ಹೋದ ಅಲಕಾ ಚೀರುತ್ತಾ, “ನಿನ್ನ ಮಗು ನನ್ನ ಹೊಟ್ಟೆಯಲ್ಲಿದೆ ಧೂರ್ತ ಸ್ವಾಮಿ! ಈಗ ಏನು ಮಾಡುವುದು? ನಿನ್ನ ಮಗುವಿಗೆ ನಿನ್ನ ಹೆಸರು ಕೊಡೋದಿಲ್ವೇ?”
“ನೀನೇನು ಹುಚ್ಚಿಯಾ? ನಿನ್ನ ಮಗುವಿಗೆ ನನ್ನ ಹೆಸರು ಕೊಟ್ಟರೆ ನನ್ನನ್ನು ಯಾರು ತಾನೇ ನಂಬುತ್ತಾರೆ? ಸಾವಿರಾರು ಜನರು ದೂರ ದೂರಿಂದ ಬರುತ್ತಿರುತ್ತಾರೆ. ಅವರು ಎಷ್ಟೊಂದು ನಂಬುತ್ತಾರೆ ಎಂದು ನೀನು ನೋಡಿಲ್ವಾ?”
“ಹೌದು ಮೋಸಗಾರ ಸ್ವಾಮಿ, ಯಾರ ಮುಂದೆಯೂ ನಿನ್ನ ಬಣ್ಣ ಬಯಲಾಗುವುದಿಲ್ಲ ಧೂರ್ತ ಸ್ವಾಮಿ. ದಿನ ಹೊಸ ಹೊಸ ಹೆಂಗಸರನ್ನು ನಿನ್ನ ಹಸಿವಿಗೆ ಬಲಿಯಾಗಿಸಿಕೊಳ್ಳುತ್ತಿರುವೆ… ನನ್ನಂತಹ ನಿಸ್ಸಹಾಯಕ ಮಹಿಳೆಯರು ಮೌನವಾಗಿಯೇ ನಿನ್ನ ಅತಿರೇಕವನ್ನು ಸಹಿಸಿಕೊಳ್ಳುತ್ತಾರೆ. ಹಾಗೆಂದೇ ನಿನ್ನ ಧೈರ್ಯ ಇಷ್ಟೊಂದು ಹೆಚ್ಚಿದೆ.”
“ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತಾಡು. ನೀನು ನನ್ನನ್ನು ಏನು ತಾನೇ ಮಾಡಲು ಸಾಧ್ಯ? ನಿನಗೆ ಧೈರ್ಯವಿದ್ದರೆ ನಿನ್ನ ಗಂಡನಿಗೆ ಹೇಳುವುದಾದರೆ ಹೇಳು. ಆಗ ಯಾರ ಮರ್ಯಾದೆಗೆ ಧಕ್ಕೆ ಬರುತ್ತದೆಂದು ನೀನೇ ನೋಡುವೆಯಂತೆ. ಇಲ್ಲಿ ಭಕ್ತರ ದಂಡು ನೋಡಿದ್ದೀಯಾ? ಎಲ್ಲರೂ ನಿನ್ನನ್ನು ಹುಚ್ಚಿ ಎಂದು ಹೇಳಿ ನಿನಗೇ ಕಲ್ಲು ಎಸೆಯುತ್ತಾರೆ. ಮಕ್ಕಳು ಗಂಡನೊಂದಿಗೆ ಸುಖಿ ಜೀವನ ನಡೆಸುವುದರಲ್ಲಿ ಜಾಣತನವಿದೆ. ಇನ್ಮುಂದೆ ನೀನು ಇಲ್ಲಿಗೆ ಬರುವ ಅಗತ್ಯವಿಲ್ಲ.”
“ನಾನು ಈ ಸತ್ಯವನ್ನು ನನ್ನ ಗಂಡನ ಮುಂದೆ ಹೇಳಿಯೇ ಹೇಳುತ್ತೇನೆ,” ಎಂದು ಅಳುತ್ತಲೇ ಅಲಕಾ ಹೇಳಿದಳು.
ಸ್ವಾಮಿ ನಕ್ಕು, “ನಾನು ನಿನಗೆ ಹೇಳ್ತಿರುವೆ. ಇಂತಹ ತಪ್ಪು ಮಾಡಲು ಹೋಗಬೇಡ. ನಿನ್ನ ಹಾಗೂ ನಿನ್ನ ಕುಟುಂಬದ ಗೌರವ ಮಣ್ಣುಪಾಲಾಗುತ್ತದೆ. ಈಗ ಇಲ್ಲಿಂದ ಹೊರಡು. ಮತ್ತೆ ನೆನಪಿಟ್ಟುಕೊ, ಬಾಯಿ ಬಿಟ್ಟರೆ ನಿನ್ನ ಜೀವನವೇ ನಾಶವಾಗುತ್ತದೆ. ಅದು ನನ್ನ ಮೇಲೆ ಯಾವುದೇ ಪರಿಣಾಮ ಬೀರದು,” ಎಂದ ಸ್ವಾಮೀಜಿ.
ಅಲಕಾ ಮನೆಗೆ ವಾಪಸ್ ಬಂದಳು. ಆದರೆ ಈ ಮಾತು ಅವಳ ಮನಸ್ಸಿನಲ್ಲಿ ಗರಗರ ತಿರುಗುತ್ತಲೇ ಇತ್ತು. ಮನೆಯಲ್ಲಿ ಖುಷಿ ಸಂಭ್ರಮದ ವಾತಾವರಣವಿತ್ತು. ಆದರೆ ಅಲಕಾ ಮಾತ್ರ ತೀವ್ರ ಆಘಾತದಲ್ಲಿದ್ದಳು. ತಾನು ತನ್ನ ಈ ನೋವನ್ನು ಮನೆಯವರ ಮುಂದೆ ಹಂಚಿಕೊಳ್ಳಬೇಕೋ ಬೇಡವೋ ಎಂದು ಅವಳ ಮನಸ್ಸು ತೂಗುಯ್ಯಾಲೆಯಾಗಿತ್ತು. ಅವಳ ಮನದ ದುಃಖವನ್ನು ಯಾರೂ ಗಮನಿಸಲಿಲ್ಲ. ಆದರೆ ಗಂಡ ಸುಮಿತ್ ತನ್ನ ಪತ್ನಿಯ ಮುಖದಲ್ಲಾಗುತ್ತಿದ್ದ ಬದಲಾವಣೆಯನ್ನು ಗಮನಿಸಿದ. ಅವಳಲ್ಲಿ ಯಾವ ಖುಷಿಯೂ ಕಾಣದೆ ವಿಚಲಿತನಾಗಿದ್ದ.
ರಾತ್ರಿ ಎಲ್ಲರೂ ಮಲಗಿದ ಬಳಿಕ ಸುಮಿತ್ ಪ್ರೀತಿಯಿಂದ ಹೆಂಡತಿಯ ಹಣೆ ಸವರುತ್ತಾ, “ಏನಾಯ್ತು ಅಲಕಾ? ಯಾಕೆ ನೀನು ಇಷ್ಟೊಂದು ದುಃಖದಲ್ಲಿರುವಂತೆ ಕಾಣ್ತಿದೆ? ಎಲ್ಲರಿಗಿಂತ ಹೆಚ್ಚು ನೀನೇ ಖುಷಿಯಿಂದರಬೇಕಾಗಿತ್ತು. ಅಂಥದ್ದೇನಾಯ್ತು? ಅಂದಹಾಗೆ ಕಳೆದ ಕೆಲವು ದಿನಗಳಿಂದ ನೀನು ಸಂತೋಷವಾಗಿಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ. ನೀನು ನನ್ನಿಂದ ಯಾವುದೊ ವಿಷಯವನ್ನು ಬಚ್ಚಿಡುತ್ತೀಯಾ ಅನಿಸುತ್ತೆ. ಅದೇ ಕಾರಣಕ್ಕೆ ನೀನು ಇಷ್ಟೊಂದು ದುಃಖದಲ್ಲಿದ್ದೀಯಾ?” ಎಂದು ಕೇಳಿದ.
ಅಲಕಾಳ ಕಣ್ಣುಗಳು ತುಂಬಿ ಬಂದವು. ತನ್ನ ಗಂಡನಿಗೆ ಈ ವಿಷಯವನ್ನು ಹೇಳಬೇಕೊ, ಬೇಡವೋ ಎಂದು ಅವಳಿಗೆ ಅನಿಸತೊಡಗಿತು. ಅವನೊಬ್ಬ ಗಂಡಸು, ಅವನು ಎಲ್ಲವನ್ನೂ ಅರ್ಥ ಮಾಡಿಕೊಳ್ಳಬಹುದು. ಆದರೆ ತನ್ನ ಹೆಂಡತಿ ಚಾರಿತ್ರ್ಯಹೀನ ಎನ್ನುವುದನ್ನು ಹೇಗೆ ಒಪ್ಪಿಕೊಳ್ಳುತ್ತಾನೆ? ಯಾವ ಮಹಿಳೆ ತನ್ನ ಗೌರವ ಕಳೆದುಕೊಂಡಿರುತ್ತಾಳೋ ಅಂಥವಳನ್ನು ಅವನು ಖಂಡಿತ ಸ್ವೀಕರಿಸಲಾರ ಎಂದು ಅವಳ ಮನಸ್ಸು ಹೇಳತೊಡಗಿತು.
ಅವಳು ಗಂಡನ ಕಡೆ ನೋಡುತ್ತಾ ಅತ್ತುಬಿಟ್ಟಳು. ಆಗ ಸುಮಿತ್ ಅವಳನ್ನು ಎಬ್ಬಿಸಿ ತನ್ನ ಎದೆಗೊರಗಿಸಿಕೊಂಡು, ಅವಳ ಕಣ್ಣೀರು ಒರೆಸುತ್ತಾ, “ಅಲಕಾ, ನೀನು ಯಾವ ವಿಷಯದ ಬಗ್ಗೆ ಇಷ್ಟೊಂದು ದುಃಖಿತಳಾಗಿರುವೆ? ಅದೇನು ಅಂತ ನನಗೆ ಹೇಳು ಪ್ಲೀಸ್. ನಾನು ನಿನ್ನ ಸಂಗಾತಿ. ನಾವು ಪರಸ್ಪರ ಯಾವುದೇ ರಹಸ್ಯ ಇಟ್ಟುಕೊಳ್ಳಬಾರದು,” ಎಂದು ಪ್ರೀತಿಯಿಂದ ಕೇಳಿದ.
ಈಗ ಅಲಕಾ ತನ್ನನ್ನು ತಾನು ಸಂಭಾಳಿಸಿಕೊಳ್ಳಲು ಆಗದೆ, ಬಿಕ್ಕಿ ಬಿಕ್ಕಿ ಅಳುತ್ತಾ, “ಆ ನಿರ್ಲಜ್ಜ ಸ್ವಾಮಿ ನನ್ನನ್ನು ಅಪವಿತ್ರಗೊಳಿಸಿದ್ದಾನೆ. ಸುಮಿತ್, ಆ ಸ್ವಾಮಿ ನಿನ್ನ ಅಲಕಾಳ ಗೌರವಕ್ಕೆ ಚ್ಯುತಿ ತಂದಿದ್ದಾನೆ. ನೀವು ಯಾವ ಮಗುವಿಗಾಗಿ ಇಷ್ಟು ಖುಷಿಯಾಗಿದ್ದೀರೋ, ಅದು ಆ ಪಾಪಿಯ ನೀಚತನದ ಕೃತ್ಯದ ಫಲವಾಗಿದೆ. ಹಾಗಿದ್ರೆ ಹೇಳು, ನಾನು ಖುಷಿಯಿಂದಿರಲು ಹೇಗೆ ಸಾಧ್ಯ?” ಎಂದಳು.
“ಆದರೆ ಅಲಕಾ, ಇದೆಲ್ಲಾ ಯಾವಾಗ ಆಯಿತು. ಯಾಕೆ ನೀನು ನನಗೆ ಮೊದಲೇ ಈ ವಿಷಯನ್ನು ತಿಳಿಸಲಿಲ್ಲ?” ಎಂದು ಕೇಳಿದ.
“ಹೇಗೆ ಹೇಳಲು ಸಾಧ್ಯವಿತ್ತು ಸುಮಿತ್? ಯಾವ ಅಲಕಾಳನ್ನು ನೀನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದಿಯೋ, ಅಂತಹವಳನ್ನು ಯಾವನೋ ಒಬ್ಬ ಸ್ವಾಮಿ ತನ್ನ ಕಾಮಪಿಪಾಸೆಗೆ ಬಳಸಿಕೊಂಡ ಎಂದು ನಾನು ಯಾವ ಮುಖ ಹೊತ್ತು ಹೇಳಲು ಸಾಧ್ಯವಿತ್ತು? ಅದೂ ಕೂಡ ಒಂದೇ ಸಲವಲ್ಲ…. ಹಲವು ಸಲ. ಹೌದು ಸುಮಿತ್, ನನಗೆ ಈ ಸತ್ಯವನ್ನು ಹೇಳುವ ಧೈರ್ಯವಿರಲಿಲ್ಲ. ಇದರ ದುರ್ಲಾಭ ಪಡೆದು ಪ್ರತಿ ಸೋವಮವಾರ ಅವನು ತನ್ನ ಕರಾಳ ಕೃತ್ಯ ನಡೆಸುತ್ತಿದ್ದ. ಆದರೆ ಎಲ್ಲವನ್ನೂ ಹೇಳಿದ ಬಳಿಕ ನಾನು ನಿನ್ನನ್ನು ಹೇಗೆ ಎದುರಿಸಬೇಕು ಎಂದು ತಿಳಿಯುತ್ತಿಲ್ಲ. ಸುಮಿತ್ ಈಗ ನನಗೆ ಬದುಕು ಆಸೆ ಉಳಿದಿಲ್ಲ. ನಾನು ಸತ್ತು ಹೋಗಬೇಕು,” ಎಂದು ಹೇಳುತ್ತಾ ಅವಳು ಟೇಬಲ್ ಮೇಲಿದ್ದ ಚಾಕೂವನ್ನು ಕೈಗೆತ್ತಿಕೊಂಡಳು.
ಸುಮಿತ್ ಚೀರಿದ, “ಅಲಕಾ, ಯಾಕೆ ಹೀಗೆ ಹುಚ್ಚಿಯಂತೆ ಆಡುತ್ತಿರುವೆ? ನೀನು ನಿನ್ನ ಪ್ರಾಣ ಕಳೆದುಕೊಳ್ತೀಯಾ? ನೀನು ಸತ್ತರೆ ಮಕ್ಕಳ ಗತಿ ಏನು? ನನ್ನ ಪರಿಸ್ಥಿತಿ ಏನು? ಇನ್ನೊಮ್ಮೆ ಹೀಗೆ ಮಾತನಾಡಿದರೆ…….” ಎಂದು ಹೇಳುತ್ತಾ ಅವಳ ಕೈಯಿಂದ ಚಾಕೂ ಕಸಿದುಕೊಂಡ.
ಆಗ ಅಲಕಾ ತನ್ನ ಹೊಟ್ಟೆಯ ಮೇಲೆ ಹೊಡೆದುಕೊಳ್ಳತೊಡಗಿದಳು, “ನೀನು ನನಗೆ ಸಾಯಲು ಅವಕಾಶ ಕೊಡದಿದ್ದರೆ ನಾನು ಹೊಟ್ಟೆಯಲ್ಲಿರುವ ಈ ಮಗುವನ್ನು ಸಾಯಿಸಿಬಿಡ್ತೀನಿ. ಈ ಮಗುವನ್ನು ನನ್ನ ಗರ್ಭದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಪಾಪದ ಪಿಂಡವಾಗಿರುವ ಈ ಮಗು ನನಗೆ ಬೇಡ. ಇಲ್ಲದಿದ್ದರೆ ನಾನು ಕೊರಗಿ ಕೊರಗಿ ಸಾಯ್ತೀನಿ,” ಎಂದಳು.
“ಇಲ್ಲ ಅಲಕಾ, ನೀನು ಹಾಗೆಲ್ಲ ಮಾಡಬಾರದು. ಮೊದಲು ನೀನು ನೆಮ್ಮದಿಯಾಗಿರು,” ಸುಮಿತ್ ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸತೊಡಗಿದ.
“ಇಲ್ಲ ಸುಮಿತ್, ನಾನು ಈ ಮಗುವಿಗೆ ಜನ್ಮ ಕೊಡಲು ಆಗುವುದಿಲ್ಲ,” ಅಲಕಾ ಏನನ್ನೂ ಕೇಳಿಸಿಕೊಳ್ಳಲು ತಯಾರಿರಲಿಲ್ಲ.
“ಆದರೆ ಅಲಕಾ, ಇದರಲ್ಲಿ ಇನ್ನೂ ಜನಿಸದೇ ಇರುವ ಈ ಮಗುವಿನದು ಏನು ತಪ್ಪು? ನೀನು ಆ ಮಗುವನ್ನು ಹತ್ಯೆ ಮಾಡಲು ಹೇಗೆ ಸಾಧ್ಯ? ಪ್ಲೀಸ್ ಅಲಕಾ, ಈ ಮಗುವನ್ನು ನಾನು ಒಪ್ಪಿಕೊಳ್ತೀನಿ. ನಾನು ಇದನ್ನು ನನ್ನದೇ ಸಂತಾನ ಎಂದು ತಿಳಿಸ್ತೀನಿ. ಆದರೆ ನೀನು ಹೀಗೆ ಪ್ರಜ್ಞೆ ಕಳೆದುಕೊಳ್ಳುವ ಮಾತನಾಡಬಾರದು.
“ಕಳೆದ ಸಲ ಡಾಕ್ಟರ್ ಹೇಳಿದ್ದು ನಿನಗೆ ನೆನಪಿದೆಯಾ? ಗರ್ಭಪಾತ ಮಾಡಿಸಿಕೊಳ್ಳುವುದು ನಿನ್ನ ಜೀವಕ್ಕೆ ಅಪಾಯವಾಗಿ ಪರಿಣಮಿಸಬಹುದು ಅಂತ. ನಾನು ಇದಕ್ಕೆ ಖಂಡಿತಾ ಅನುಮತಿ ಕೊಡುವುದಿಲ್ಲ,” ಎಂದು ಹೇಳಿದ ಸುಮಿತ್.
“ಇಲ್ಲ ಸುಮಿತ್, ನಾನು ನಿದ್ರೆ ಮಾತ್ರೆ ಸೇವಿಸಿ ಈ ಮಗುವನ್ನು ಸಾಯಿಸಿಬಿಡ್ತೀನಿ,” ಎಂದು ಹೇಳುತ್ತಾ ಅಲಕಾ ನಿದ್ರೆ ಮಾತ್ರೆ ಡಬ್ಬಿ ಕೈಗೆ ತೆಗೆದುಕೊಳ್ಳತೊಡಗಿದಳು.
ಸುಮಿತ್ ಅವಳಿಗೆ ತಿಳಿಸಿ ಹೇಳುತ್ತಾ, “ಈ ರೀತಿ ಮಾಡಿದರೆ ಮಗು ಅಂಗವಿಕಲವಾಗುತ್ತದೆ. ಹಾಗೆ ಮಾಡಿ ಅದರ ಜೀವನ ಹಾಳು ಮಾಡುವುದರಿಂದ ನಿನಗೇನು ಸಿಗುತ್ತದೆ? ಅಲಕಾ, ಏನು ಬರುತ್ತದೋ ಅದು ಬರಲಿ ಬಿಡು. ಯಾವುದು ಘಟಿಸಿ ಹೋಗಿದೆಯೋ ಅದರ ಮೇಲೆ ನಿನಗೆ ಯಾವುದೇ ಹಿಡಿತ ಇಲ್ಲ. ಈಗ ಏನಾಗಲಿದೆಯೋ ಅದಕ್ಕೆ ನೀನು ತಲೆ ಕೆಡಿಸಿಕೊಳ್ಳಬೇಡ ನೆಮ್ಮದಿಯಾಗಿರು. ಈ ರಹಸ್ಯ ನನ್ನಲ್ಲಿ ಮಾತ್ರ ಇರುತ್ತೆ. ಅದರ ಬಗ್ಗೆ ನೀನು ಮನಸ್ಸು ಕೆಡಿಸಿಕೊಳ್ಳಬೇಡ,” ಎಂದು ಪರಿಪರಿಯಾಗಿ ಹೇಳಿದ.
ಬಹಳಷ್ಟು ತಿಳಿ ಹೇಳಿದ ಬಳಿಕ ಅಲಕಾ ಮೌನವಾಗಿ ಮಲಗಲು ಹೋದಳು. ಆದರೆ ಅವಳ ಮನಸ್ಸಿನಲ್ಲಿನ ಬಿರುಗಾಳಿ ಇನ್ನೂ ನಿಂತಿರಲಿಲ್ಲ. ಅವಳ ತಳಮಳ ತೊಳಲಾಟ ಮುಂದುವರಿದೇ ಇತ್ತು.
ಅವಳು ಉದ್ದೇಶಪೂರ್ವಕವಾಗಿ ಗರ್ಭಾವಸ್ಥೆಯಲ್ಲಿ ಏನು ಮಾಡಬಾರದೋ ಅದನ್ನೇ ಮಾಡುತ್ತಿದ್ದಳು. ತೂಕ ಎತ್ತುವುದು, ಮೆಟ್ಟಿಲು ಹತ್ತುವುದು, ಒಮ್ಮೆಲೆ ಏಳುವುದು ಹೀಗೆಲ್ಲಾ ಮಾಡುತ್ತಿದ್ದಳು. ಹೀಗಾದರೂ ತನ್ನೊಡಲಲ್ಲಿರುವ ಬೇಡವಾದ ಗರ್ಭ ಹೋಗಲಿ ಎನ್ನುವುದು ಅವಳ ಉದ್ದೇಶವಾಗಿತ್ತು. ಆದರೆ ಅವಳು ಹೀಗೆ ಮಾಡುವುದನ್ನು ಕಂಡಾಗ ಸುಮಿತ್ ಹೀಗೆ ಮಾಡಲು ಬಿಡುತ್ತಿರಲಿಲ್ಲ. ಅವಳಿಗೆ ಸಮಾಧಾನ ಹೇಳುತ್ತಿದ್ದ. ನಿನ್ನ ಜೊತೆ ನಾನಿರುತ್ತೇನೆ ಎಂದು ಅವಳಲ್ಲಿ ಭರವಸೆ ತುಂಬುತ್ತಿದ್ದ.
ಕಾಲ ಹೀಗೆಯೇ ಉರುಳುತ್ತಿತ್ತು. ಅವಳು ಮನಸ್ಸಿಲ್ಲದ ಮನಸ್ಸಿನಿಂದ ಗರ್ಭಾವಸ್ಥೆಯ ಆ ದಿನಗಳನ್ನು ಕಳೆದಳು. ಅದೊಂದು ದಿನ ಅವಳು ಒಂದು ಗಂಡು ಮಗುವಿಗೆ ಜನ್ಮ ನೀಡಿದಳು. ಅವಳಿಗೆ ಆ ದಿನ ಅತ್ಯಂತ ಖುಷಿ ಕೊಡುವ ದಿನವಾಗುವ ಬದಲು ಅವಳಿಗೆ ಅತ್ಯಂತ ವ್ಯಥೆಯ ದಿನವಾಗಿ ಪರಿಣಮಿಸಿತ್ತು.
ಅವಳು ಈವರೆಗೂ ತನ್ನ ಕಂದನ ಮುಖ ನೋಡಿರಲಿಲ್ಲ. ನೋಡುವ ಇಚ್ಛೆಯೂ ಅವಳಿಗಿರಲಿಲ್ಲ.
ಸುಮಿತ್ ಅವಳ ಹತ್ತಿರ ಬಂದು, ಅವಳಿಗೆ ಪ್ರೀತಿಯಿಂದ ತಿಳಿಸಿ ಹೇಳುತ್ತಿದ್ದ, “ಅಲಕಾ, ಏನಾಗಿದೆಯೋ ಅದನ್ನೆಲ್ಲ ಮರೆತುಬಿಡು. ಮನಸಾರೆ ನಿನ್ನ ಮಗುನ್ನು ಒಪ್ಪಿಕೊ. ಎಲ್ಲ ಗೊತ್ತಿದ್ದೂ ಇದನ್ನು ನಾನು ನನ್ನ ಮಗುವೆಂದು ಒಪ್ಪಿಕೊಂಡಿದ್ದೇನೆ. ಇಂತಹ ಸ್ಥಿತಿಯಲ್ಲಿ ನೀನು ಅದರ ಬಗ್ಗೆ ಹಾಗೆಲ್ಲ ಮಾಡಲು ಹೋಗಬೇಡ. ಅಮ್ಮನ ಮುಖದಲ್ಲಿ ಅದೆಷ್ಟು ಖುಷಿ ನಲಿದಾಡುತ್ತಿದೆ ನೋಡು. ಖುಷಿಯನ್ನು ಕಾಯ್ದುಕೊಂಡು ಹೋಗಲು ಅವಕಾಶ ಕೊಡು. ಏನು ಘಟನೆ ಘಟಿಸಿತ್ತೋ ಅದರಲ್ಲಿ ಈ ಪುಟ್ಟ ಜೀವದ್ದೇನೂ ತಪ್ಪಿಲ್ಲ. ಅಲಕಾ, ಅದನ್ನು ಪ್ರೀತಿಯಿಂದ ಪೋಷಿಸು,” ಎಂದು ಹೇಳಿದ.
ಅಲಕಾಳ ಕಣ್ಣೆದುರಿನಲ್ಲಿ ಅವಳ ಇಬ್ಬರೂ ಹೆಣ್ಣುಮಕ್ಕಳು ತಮ್ಮ ನವಜಾತ ತಮ್ಮನನ್ನು ಖುಷಿಯಿಂದ ನೋಡುತ್ತಿದ್ದರು. ಅವರ ಸಂತೋಷಕ್ಕೆ ಯಾವುದೇ ಮೇರೆ ಇರಲಿಲ್ಲ. ಅತ್ತೆ ಕೂಡ ಮಗುವಿನ ಕಡೆ ನೋಡಿದ್ದೇ ನೋಡಿದ್ದು. ಆದರೆ ಅಲಕಾಳ ಹೃದಯದಲ್ಲಿ ಮಾತ್ರ ಒಂದು ವಿಚಿತ್ರ ರೀತಿಯ ತಿರಸ್ಕಾರ ಮನೆ ಮಾಡಿತ್ತು. ಗಂಡ ತಿಳಿವಳಿಕೆ ಹೇಳಿದ ಬಳಿಕ ಅವಳು ಇದರಲ್ಲಿ ಮಗುವಿನದ್ದೇನೂ ತಪ್ಪಿಲ್ಲ. ಹಾಗಾದರೆ ಅದರ ಬಗ್ಗೆ ತನಗೇಕೆ ತಿರಸ್ಕಾರ ಇರಬೇಕು ಎಂದು ತನಗೆ ತಾನೇ ಹೇಳಿಕೊಂಡಳು. ನಂತರ ಅವಳು ಇವನು ತನ್ನ ಮಗುವೇ ಎಂದು ಒಪ್ಪಿಕೊಳ್ಳಲು ನಿರ್ಧರಿಸಿದಳು.
ಅವಳು ಹೀಗೆ ಯೋಚಿಸುತ್ತಿರುವಾಗಲೇ ಅತ್ತೆ ಮಗುವನ್ನು ತನ್ನ ಕೈಗೆತ್ತಿಕೊಂಡು ಅದರ ಮುಖ ನೋಡುತ್ತಾ, “ನೋಡು, ಮಗು ಥೇಟ್ ತನ್ನ ಅಪ್ಪನಂತೆಯೇ ಇದೆ,” ಎಂದರು.
ಅಲಕಾ ಮಗುವಿನ ಕಡೆ ನೋಡಿದಳು. ಅವಳಿಗೆ ಮಗುವಿನ ಮುಖದಲ್ಲಿ ಸ್ವಾಮೀಜಿಯ ಮುಖವೇ ಕಾಣಿಸಿತು. ಅವಳು ಒಮ್ಮೆಲೇ ಚೀರಿದವಳೇ ಜೋರಾಗಿ ಅಳತೊಡಗಿದಳು. ತಕ್ಷಣವೇ ಡಾಕ್ಟರ್ ಮತ್ತು ನರ್ಸ್ ಹತ್ತಿರ ಬಂದು ಅವಳಿಗೆ ಪ್ರಜ್ಞೆ ತಪ್ಪುವ ಇಂಜೆಕ್ಷನ್ ನೀಡಿ ಅವಳನ್ನು ಮಲಗಿಸಿದರು. ತನ್ನ ಸೊಸೆಗೆ ಆಕಸ್ಮಿಕವಾಗಿ ಹೀಗೇಕಾಯಿತು ಎಂದು ಅತ್ತೆಗೆ ಗೊತ್ತಾಗಲಿಲ್ಲ. ಅತ್ತ ಸುಮಿತ್ ಗೆ ಇದೆಲ್ಲ ಅರ್ಥವಾಗಿತ್ತು. ಆದರೆ ಅವನು ತಾಯಿಗೆ ಏನನ್ನೂ ಹೇಳುವ ಧೈರ್ಯವಿರಲಿಲ್ಲ.
ಎರಡು ದಿನಗಳ ಬಳಿಕ ಅಲಕಾ ಮಗುವಿನ ಜೊತೆಗೆ ಮನೆಗೆ ಬಂದಳು. ಅತ್ಯಂತ ವಿಜೃಂಭಣೆಯಿಂದ ಮಗುವನ್ನು ಮನೆತುಂಬಿಸಿಕೊಳ್ಳಲಾಯಿತು. ಅತ್ತೆಗೆ ಮೊಮ್ಮಗನನ್ನು ಪಡೆದು ಜಗತ್ತನ್ನೇ ಗೆದ್ದಷ್ಟು ಸಂತೋಷವಾಗುತ್ತಿತ್ತು. ಅಲಕಾಳ ಇಬ್ಬರೂ ಹೆಣ್ಣುಮಕ್ಕಳು ಇಡೀ ದಿನ ಮಗುವಿನ ಬಗ್ಗೆಯೇ ಹೆಚ್ಚು ಗಮನ ಕೊಡುತ್ತಿದ್ದರು. ಆದರೆ ಅಲಕಾಳ ಮುಖದಲ್ಲಿ ಮಾತ್ರ ಈಗ ನಗು ಇರಲಿಲ್ಲ ಹಾಗೂ ಕಣ್ಣೀರು ಸುರಿಯುತ್ತಲೇ ಇತ್ತು. ಅವಳೀಗ ಸಂಪೂರ್ಣ ಮೌನವಾಗಿದ್ದಳು.
ಮಗುವನ್ನು ನೋಡಿದಾಗೆಲ್ಲ ಅವಳಿಗೆ ಧೂರ್ತ ಸ್ವಾಮೀಜಿಯ ಮುಖವೇ ಕಂಡುಬರುತ್ತಿತ್ತು. ಅವಳು ಮಗುವಿನಿಂದ ದೂರವೇ ಉಳಿಯುತ್ತಿದ್ದಳು. ರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಎಚ್ಚರಗೊಂಡು ಒಮ್ಮೆಲೇ ಕಿರುಚುತ್ತಿದ್ದಳು, “ಬಿಟ್ಟು ಬಿಡು ಸ್ವಾಮಿ, ನನ್ನನ್ನು ಬಿಟ್ಟುಬಿಡು…. ಬಿಡು….” ಎಂದು ಹೇಳುತ್ತಾ ಅವಳು ಅಳಲು ಆರಂಭಿಸುತ್ತಿದ್ದಳು. ಈ ರೀತಿ ಅವಳ ನಿದ್ರೆ ದೂರ ಹಾರಿ ಹೋಗುತ್ತಿತ್ತು. ಗಂಡನ ಪ್ರೀತಿ ಕೂಡ ಅವಳನ್ನು ಸಾಮಾನ್ಯ ಸ್ಥಿತಿಗೆ ತರಲು ಆಗುತ್ತಿರಲಿಲ್ಲ. ಸಂತೃಪ್ತಿಯ ಜೀವನ ನಡೆಸುತ್ತಿದ್ದ ಅಲಕಾ ಈಗ ಮಾನಸಿಕ ರೋಗಿಯಾಗಿಬಿಟ್ಟಳು.