ಅನಿವಾರ್ಯ ಕಾರಣಗಳಿಂದ ಗಂಡನಿಂದ ದೂರವಾಗಿದ್ದ ಮೈನಾ, ತನ್ನ ಮಗ ತಂದೆಯಿಲ್ಲದೆ ಕೊರಗಬಾರದು ಎಂಬ ಕಾರಣಕ್ಕಾಗಿ ಕೊನೆಗೂ ತನ್ನನ್ನು ಹುಡುಕಿಕೊಂಡು ಬಂದ ಗಂಡನೊಂದಿಗೆ ಕಾಂಪ್ರಮೈಸ್ ಆದಳೇ……?
“ಯಶವಂತ್ ಸ್ಕೂಲ್ ವ್ಯಾನ್ ಬಂದಿದೆ ಬಾರೋ…. ಬೇಗ ಹತ್ತು…. ಮೆಲ್ಲಗೆ ಹುಷಾರ್. ತಗೋ ಇದು ಲಂಚ್ ಬ್ಯಾಗ್….. ಹತ್ತಿದ್ಯಾ ಬೈ…ಬೈ….,” ಎನ್ನುತ್ತಾ ಮಗನನ್ನು ಸ್ಕೂಲ್ ವ್ಯಾನಿಗೆ ಹತ್ತಿಸಿ ಬಂದ ಮೈನಾ ಮನೆಯೊಳಗೆ ಕಾಲಿಡುತ್ತಾ, “ಅಮ್ಮಾ, ಬ್ಯಾಗ್ ನಲ್ಲಿ ಎಕ್ಸ್ ಟ್ರಾ ಮಾಸ್ಕ್, ಸ್ಯಾನಿಟೈಸರ್ ಎಲ್ಲಾ ಹಾಕಿದ್ದೀಯಾ? ಎಂದು ಕೇಳಿದಳು.
“ಅವನ ಡೈರಿ ನೋಡಿ ಎಲ್ಲಾ ಹಾಕಿದ್ದೀನಿ ಕಣೆ,” ಎಂದರು ಅವರಮ್ಮ.
“ಸರಿ ಹಾಗಿದ್ರೆ. ಇದೆ ಮೊದಲು ಅಲ್ವಾ ಅವನನ್ನು ಶಾಲೆಗೆ ಕಳುಹಿಸುತ್ತಾ ಇರೋದು ಸ್ವಲ್ಪ ಆತಂಕ ಅಲ್ವಾ,” ಎನ್ನುತ್ತಾ ಮೈನಾ ಲಿವಿಂಗ್ ರೂಮಿನ ಸೋಫಾ ಮೇಲೆ ಕುಳಿತು ಪೇಪರ್ ಓದಲು ಆರಂಭಿಸಿದಳು.
ಆ ಪೇಪರಿನ ಒಂದು ಬದಿಯಲ್ಲಿ ನಾಳೆ ಪೋಷಕರ ದಿನವಾದ್ದರಿಂದ ನೀವು ಪೋಷಕರೊಂದಿಗೆ ಸೆಲ್ಛಿ ತೆಗೆದು ಸಂಜೆ ನಾಲ್ಕು ಗಂಟೆಯೊಳಗೆ ಕೆಳಕಂಡ ವಾಟ್ಸ್ ಆ್ಯಪ್ ನಂಬರ್ ಗೆ ಕಳುಹಿಸಿ ಎಂದಿತ್ತು.
“ಅಮ್ಮ ಬಾ, ಅಪ್ಪ ನೀವು ಬನ್ನಿ,” ಎಂದು ಸೆಲ್ಛಿ ತೆಗೆದುಕೊಂಡಳು. ಮೂರ್ನಾಲ್ಕು ಸೆಲ್ಛಿ ಒಟ್ಟಿಗೆ ನೋಡುತ್ತಲೇ ಮಗ ಯಶವಂತ್ ನ ನೆನಪಾಗಿ, “ಛೇ…. ನನ್ ಮಗನಿಗೆ ಈ ಅದೃಷ್ಟ ಇಲ್ವೇ…..” ಎಂದು ಹನಿಗಣ್ಣಾದಳು.
ಅಷ್ಟರಲ್ಲಿ ಮೈನಾಳ ಅಮ್ಮ, “ಇದೇನೇ ಹೀಗೆ ಕೂತಿದ್ದೀಯಾ…. ಮೈ ಹುಷಾರಿಲ್ವಾ,” ಕೇಳಿದರು.
“ಹ್ಞೂಂ…. ಹೋಗು ನೀನು,” ಎಂದಳು ಮೈನಾ.
“ಹೌದು ಕಣೆ, ನೀನು ಈಗ ಹೋಗು ಹೋಗು ಅಂತಿದ್ದೀಯ. ಎಲ್ಲಿಗೆ ಹೋಗ್ಲಿ ಹೇಳು. ಅದೂ ಸರಿ, ಕೆಲಸಕ್ಕೆ ಅಂತ ನಿನ್ನನ್ನು ಹೈದರಾಬಾದ್ ಗೆ ಕಳಿಸಿದ್ದು ಗೊತ್ತು. ಅಲ್ಲಿಂದ ಮುಂದೆ ನೀನು ಎಲ್ಲಿ ಹೋಗಿದ್ದೆ ಹೇಳು. ಇವತ್ತಾದರೂ ಹೇಳು. ನಿನ್ನ ಗಂಡ ಯಾರು? ಅವನು ಏನು ಮಾಡ್ತಿದ್ದ ಅಂತ. ಎರಡು ಸರ್ತಿ ಲಾಕ್ ಡೌನ್ ಆಯ್ತು. ನೀನು ಅವನನ್ನು ನೆನಪಿಸಿಕೊಂಡು ಕೊರಗ್ತಿದ್ದೆ. ಹೆತ್ತ ಕರುಳಿಗೆ ಅಷ್ಟೂ ಅರ್ಥವಾಗಲ್ವಾ….? ಮಗು ಎದುರು ಮಾತಾಡಕ್ಕಾಗ್ಲಿಲ್ಲ ಈಗ ಹೇಳು,” ಎನ್ನುತ್ತಾ ಅಮ್ಮ ಸಿಟ್ಟಿನಿಂದ ಮಗಳನ್ನು ಗದರುತ್ತಾ ಅವಳ ಬಳಿ ಬಂದು ಕುಳಿತರು.
ಮೊದಲೇ ಗಂಡ ಅಭಿಯ ವಿಚಾರದಲ್ಲಿ ನೊಂದಿದ್ದ ಮೈನಾ, “ಸುಮ್ನೆ ಇರಮ್ಮಾ ….. ಸುಮ್ನಿರು. ಮತ್ತೆ ಮತ್ತೆ ಕೇಳ್ಬೇಡ ನೋವಾಗುತ್ತೆ,” ಎಂದು ಕಿರುಚಿದಳು.
ಹಠಕ್ಕೆ ಬಿದ್ದವರಂತೆ ಮೈನಾಳ ಅಮ್ಮ, “ಅಲ್ಲ ಕಣೆ ನೀನು ಹೇಳಲೇಬೇಕು. ನಿನ್ನ ಅಣ್ಣಂಗೆ ಮದುವೆ ಮಾಡಬಾರದಾ….? ಅವನಿಗೆ ಈಗಲೇ ಹುಡ್ಗೀರ ಪ್ರೊಫೈಲ್ ಗಳು ಬರ್ತಿವೆ. ಬಂದ ಹುಡುಗಿ ಕೇಳಿದ್ರೆ ಹೇಳ್ತೀಯಾ….? ಅವಾಗ ಬೇಜರಾಗಲ್ವಾ…. ಸಿಟ್ ಬರಲ್ವಾ…..” ಎಂದು ಇನ್ನಿಲ್ಲದ ಹಾಗೆ ಮಗಳ ಮೇಲೆ ರೇಗಾಡಿದರು.
ನಂತರ ಅಡುಗೆ ಮನೆಯಲ್ಲಿ ಬೇಕೆಂತಲೇ ಸದ್ದು ಮಾಡಿ ಬಂದು ಪುನಃ, “ಅಯ್ಯೋ… ಮದುವೆ ಆಗಿದಿಯೋ ಇಲ್ವೋ ಏನೂಂತ ಹೇಳು. ಯಾವಾಗ ಕರೆದ್ರೂ ಆಗ ಬರ್ತೀನಿ, ಈಗ ಬರ್ತೀನಿ ಅಂತಿದ್ದೆ. ಕೊರೋನಾ ಸ್ಟಾರ್ಟ್ ಆಗೋ ಟೈಮಿಗೆ ಇಲ್ಲೇ ಬೆಂಗಳೂರಲ್ಲೇ ಕೆಲಸ ಹುಡುಕಿಕೊಂಡು ಮನೆಗೆ ಬಂದೆ. ಇನ್ನೆಷ್ಟು ದಿನ ನಾನೂ ಸುಮ್ಮನೆ ಇರಲಿ? ನಿಮ್ಮತ್ತೆ ಮಕ್ಕಳು ನಿಮ್ಮಪ್ಪನಿಗೆ ಎಲ್ಲೋ ಸಿಕ್ಕಾಗ ಮೈನಾ ಲಿವ್ ಇನ್ ಇದ್ದು, ಮದುವೆ ಆಗಿಲ್ಲ. ಮಗು ಹುಟ್ಟೋ ಟೈಮಿಗೆ ಸರಿಯಾಗಿ ಅವನು ಕೈ ಕೊಟ್ಟ. ಅವಳು ಒಬ್ಬಳೇ ಸಂಭಾಳಿಸ್ಕೊಂಡು ಎಲ್ಲಾ ಸರಿ ಇದೆ ಅನ್ನೋ ಹಂಗೆ ಡ್ರಾಮಾ ಮಾಡ್ತಿದ್ದಾಳೆ ಅಂದ್ರಂತೆ.
“ನಿಮ್ಮಪ್ಪ ತುಂಬಾ ದಿನ ಅದನ್ನೇ ತಲೇಲಿ ಇಟ್ಕೊಂಡು ಬೇಜಾರಾಗಿದ್ರು. ನನ್ನ ಸಮಾಧಾನಕ್ಕೆ ಹೋಗಲಿ ಬಿಡು ಅಂತೂ ಮಗಳು ಮನೆಗೆ ಬಂದಳು ಅಂತಿದ್ರು. ನಿನ್ನದೇ ಯೋಚನೇಲಿ ಒಂದು ದಿನಾನೂ ಕಣ್ತುಂಬ ನಿದ್ರೆ ಮಾಡಿಲ್ಲ ಗೊತ್ತಾ ಅವರು. ಇನ್ನೊಂದು ಸಮಾಧಾನ ಅಂದ್ರೆ ನಿಮ್ಮಣ್ಣ ಕೊಚ್ಚಿಯಲ್ಲಿರೋದು. ಇಲ್ಲೇ ಇದ್ದಿದ್ರೆ ಇನ್ನೂ ಇರಿಸು ಮುರುಸು ಆಗಿರೋದು ಎಂದು ಚಡಪಡಿಸುತ್ತಾರೆ ನಿಮ್ಮಪ್ಪ,” ಎಂದರು ಅಮ್ಮ ಬೇಸರದಿಂದ.
ಅಷ್ಟು ದಿನ ಸುಮ್ಮನಿದ್ದ ಅಮ್ಮನನ್ನು ಎದುರಿಸಲು ಮೈನಾಗೆ ಧೈರ್ಯ ಸಾಲದೆ ಎಲ್ಲವನ್ನೂ ಹೇಳಲಾಗದೆ ಹಾಗೆ ಓರೆಯಾಗಿ ಸೋಫಾಗೆ ಒರಗಿ ಕುಳಿತುಕೊಂಡು ಪಕ್ಕದಲ್ಲಿದ್ದ ಹೂವಿನ ಪಕಳೆ ಕಿತ್ತು ನೆಲಕ್ಕೆ ಹಾಕುತ್ತಿದ್ದಳು.
“ಅಲ್ಲಾ ಕಣೆ ಮೈನಾ, ಇಷ್ಟು ದಿನ ಯಾರೇ ಸುಮ್ಮನೆ ಇರುತ್ತಾರೆ. ಪಾಪ ನೋವಲ್ಲಿದ್ದಾಳೆ ಅವಳೇ ಹೇಳುತ್ತಾಳೆ ಅಂದ್ಕೊಂಡು ಕಾದು ಕಾದು ಸಾಕಾಯ್ತು. ಈಗ ನೀನೇ ಹೇಳಬೇಕು ಅಷ್ಟೆ,” ಎಂದರು ಮತ್ತೆ ಅವರಮ್ಮ.ಮೈನಾ ಸ್ವಲ್ಪ ಸಮಾಧಾನದಿಂದಲೇ, “ಅದು ಮುಗಿದು ಹೋದ ಕಥೇನಮ್ಮ. ಈಗ ಮುಂದೆ ಆಗಬೇಕಾಗಿರೋ ಕೆಲಸ ನೋಡಬೇಕು. ಇನ್ನು ಮೇಲೆ ವರ್ಕ್ ಫ್ರಂ ಹೋಮ್ ತೆಗೀತಾರಂತೆ. ಆಫೀಸಿಗೆ ಹೋಗಬೇಕು. ನೀನಿದ್ದಿಯಲ್ಲಾ ಯಶವಂತ್ ನನ್ನು ನೋಡ್ಕೊಳೋಕೆ,” ಎಂದು ಮುಗುಳ್ನಕ್ಕಳು.
ಇನ್ನು ಮಗಳಿಂದ ಹೆಚ್ಚಿನ ಉತ್ತರ ಸಿಗದು ಎಂದುಕೊಳ್ಳುತ್ತಾ, ತಾಯಿಗಿಂತ ತಂದೆಯ ಪ್ರೀತಿಯಿಂದ ವಂಚಿತನಾಗಿದ್ದ ಪುಟ್ಟ ಹುಡುಗ ಯಶವಂತನ ಮುಖ ನೆನಪಿಸಿಕೊಂಡು ಬೇಸರಿಸಿಕೊಂಡರಾಕೆ.
“ಪಾಪ ಆ ಮಗು ಅಪ್ಪ ಬಂದೇ ಬರುತ್ತಾರೆ ಅಂತ ಕಾಯ್ತಾ ಇದೆ. ಎಲ್ಲಾ ಒಳ್ಳೇದೇ ಆದ್ರೆ ಸಾಕು,” ಎಂದು ದೇವರಿಗೆ ನಮಸ್ಕಾರ ಮಾಡುತ್ತಿದ್ದ ತಾಯಿಯನ್ನು ನೋಡಿ, “ನಮ್ಮ ದುರಾದೃಷ್ಟಕ್ಕೆ ಭಗವಂತನೂ ಹೆಲ್ಪ್ ಲೆಸ್,” ಎಂದು ವಿಷಾದದ ನಗೆ ನಕ್ಕಳು ಮೈನಾ. ಹೀಗೆ ಒಂದೆರಡು ವಾರಗಳಿಂದ ಅಮ್ಮ ಮಗಳ ನಡುವೆ ಪ್ರಾರಂಭವಾಗುತ್ತಿದ್ದ ಮಾತುಕತೆ ವ್ಯಂಗ್ಯ, ವಿಷಾದಗಳಲ್ಲಿ ಕೊನೆಯಾಗುತ್ತಿತ್ತು. ಅಭಿಯನ್ನು ಅತಿಯಾಗಿ ಪ್ರೀತಿಸಿದ ಮೈನಾ, ಅವನು ಈ ರೀತಿ ಮಾಡುತ್ತಾನೆ ಎಂದು ಕನಸಿನಲ್ಲೂ ನೆನೆಸಿರಲಿಲ್ಲ. ಅಮ್ಮ ಮತ್ತೆ ಮತ್ತೆ `ಲಿವ್ ಇನ್, ಲಿವ್ ಇನ್,’ ಎಂದು ಹೇಳುತ್ತಿದ್ದುದನ್ನು ತಡೆಯಲಾಗದೆ, “ಮದುವೆ ಆಗಿದ್ವಿ….. ಹಾಗೆ ಹೇಳ್ಬೇಡ….. ನೋಡಿಲ್ಲಿ,” ಎನ್ನುತ್ತಾ ಮೊಬೈಲ್ ನಲ್ಲಿದ್ದ ಮದುವೆ ಫೋಟೋ, ಜೊತೆಗೆ ಮಗು ಹುಟ್ಟಿದಾಗ ಜೊತೆಗೆ ತೆಗೆಸಿದ್ದ ಫೋಟೋಗಳನ್ನು ತೋರಿಸಿದಳು.
“ಮತ್ಯಾಕೆ ಅವನನ್ನ ಬಿಟ್ಟೆ?” ಎಂದರು ಅಮ್ಮ.
“ಅವನು…. ಅವನು…. ಮನೆಯವರ ಬಲವಂತಕ್ಕೆ ಇನ್ನೊಂದು ಮದುವೆ ಆದ,” ಎಂದು ಜೋರಾಗಿ ಚೀರಿ ರಂಪ ಮಾಡಿದಳು.
ಹೆತ್ತಮ್ಮನಿಗೆ ಕರುಳು ಹಿಂಡಿದಂತಾಯಿತು. ಎಲ್ಲಾ ಆದ ನಂತರ ಬೈದು ಏನು ಪ್ರಯೋಜನ ಎಂದುಕೊಳ್ಳುತ್ತಾ, “ಸಮಾಧಾನ ಮಾಡ್ಕೊಳೆ ಅಳಬೇಡ ಸಮಾಧಾನವಾಗಿರು….. ಇನ್ನೂ ನಾವು ಜೀವಂತ ಇದ್ದೀವಿ. ನನಗೆ ರಿಯಲ್ ಫ್ಯಾಕ್ಟ್ ಬೇಕಿತ್ತು ಅಷ್ಟೆ. ಮುಂದೆ ನಿನ್ ಬದುಕು ಹೇಗೆ ಅನ್ನೋ ಚಿಂತೆ ಕಣೆ,” ಎನ್ನುತ್ತಾ ಉಮ್ಮಳಿಸಿ ಬರುತ್ತಿದ್ದ ದುಃಖ ತಡೆಯಲಾರದೆ ಬಂದ ಕಂಬನಿಯನ್ನು ಸೆರಗಿಗೆ ಒರೆಸಿಕೊಂಡರು.
ಹೀಗೆ ಹೇಳಿಕೆ ಕೇಳಿಕೆಗಳು ತಿಂಗಳವರೆಗೆ ಮುಂದುವರಿಯಿತು. ಇತ್ತ ಯಶವಂತ್ ಗೆ ಅಪ್ಪನ ಮುಖ ಗೊತ್ತಿತ್ತು, ಆದರೆ ಧ್ವನಿ ಗೊತ್ತಿರಲಿಲ್ಲ. ಅಭಿ ಮದುವೆ ಆದ ಮೇಲೆ ಮೈನಾ ತನ್ನ ಫೋನ್ ನಂಬರ್ ಬದಲಿಸಿ, ಫೇಸ್ ಬುಕ್ ಖಾತೆ ರದ್ದು ಮಾಡಿ ಅವನಿಗೆ ತನ್ನ ಯಾವುದೇ ಕಾಂಟಾಕ್ಟ್ ನಂಬರ್ ಸಿಗದಂತೆ ಮಾಡಿದ್ದಳು. ಆದರೆ ಮನದಲ್ಲಿ ಅವನು ಬಂದೇ ಬರುವನು ಎಂಬ ನಿರೀಕ್ಷೆಯಿತ್ತು.
ಅಭಿಗೆ ಮೈನಾಳ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅವಳನ್ನು ಮಾತನಾಡಿಸಲು ಬಹಳ ಪ್ರಯತ್ನಿಸಿದ್ದ, ಆದರೂ ಅವಳ ನಂಬರ್ ಸಿಕ್ಕಿರಲಿಲ್ಲ. ಅವಳನ್ನು ನೋಡಲೇಬೇಕೆಂದು ಅವಳ ಮನೆ ವಿಳಾಸವನ್ನು ಪರಿಚಯದವರ ಸಹಾಯದಿಂದ ಪತ್ತೆ ಮಾಡಿದ. ಮೈನಾ ತುಂಬಾ ಕೋಪದಿಂದ ಇರುವಳೆಂದು ಅವಳ ತಂದೆಯ ಫೋನ್ ನಂಬರ್ ಗೆ ಕರೆ ಮಾಡಿ ತನ್ನ ಪರಿಚಯ ಹೇಳಿಕೊಂಡು ಕ್ಷಮೆ ಕೋರಿ, “ನಿಮ್ಮ ಮಗಳಿಗೆ ಬುದ್ಧಿ ಹೇಳಿ ಕಳುಹಿಸಿ, ನಾನು ಕರಕೊಂಡು ಹೋಗಿ ನಿಮ್ಮ ಮಗಳನ್ನು ಸುಖವಾಗಿ ನೋಡಿಕೊಳ್ಳುತ್ತೇನೆ,” ಎಂದು ಹೇಳಿದ.
ಮೈನಾ ತಾಯಿಗೂ ಇದೇ ಬೇಕಾಗಿತ್ತು. ಅಷ್ಟರವರೆಗೂ ಯೋಚನೆ ಮಾಡಿದ್ದನ್ನೇ ಮಾಡಿ, ಕೇಳಿದ್ದನ್ನೇ ಕೇಳಿ ಮೈನಾಗೂ ಬೇಸರವಾಗಿತ್ತು. ಅಣ್ಣನ ಮದುವೆ ಆಗುತ್ತದೆಂದು ತಿಳಿದ ಮೇಲಂತೂ ಬರುವ ಹೊಸಬರ ಮುಂದೆ ನನ್ನ ಉಸಾಬರಿ ಏಕೆ ಎನ್ನುತ್ತಲೇ ಯೋಚಿಸುತ್ತಿದ್ದಳು.
ಆದರೆ ಅಭಿ ಮತ್ತೆ ಜೀವನದಲ್ಲಿ ಬಂದೇ ಬರುವನು ಎಂಬ ಸಿಟ್ಟಿನಿಂದ, ಕೆಲವೊಮ್ಮೆ ಆ ಖುಷಿಯ ಕ್ಷಣಕ್ಕೋಸ್ಕರ ಕಾಯುತ್ತಿದ್ದಳು. ಹೆಚ್ಚು ಸಮಯ ತೆಗೆದುಕೊಳ್ಳದ ಅಭಿ, ಹೆಂಡತಿ ಮಗನಿಗೋಸ್ಕರ ಪ್ರೀತಿಯ ಹೂಬುಟ್ಟಿಯನ್ನು ಹೊತ್ತು ತಂದ. ಅವನು ಬರುವಾಗ ಕಾರಿನ ತುಂಬಾ ಆಟದ ಸಾಮಾನು, ಚಾಕಲೇಟ್ ಗಳನ್ನು ತುಂಬಿಸಿ ತಂದಿದ್ದ. ಮೈನಾಳಿಗೆ ಅದರ ಬಗ್ಗೆ ಆಸಕ್ತಿಯೇ ಇರಲಿಲ್ಲ. ಆದರಿಂದ ಅವುಗಳನ್ನು ಕಿರುಗಣ್ಣಲ್ಲಿ ಕೂಡ ಅವಳು ನೋಡಲೇ ಇಲ್ಲ.
ಆತುರದಿಂದ ಕಾರು ಇಳಿದವನೇ ಮೈನಾಳನ್ನು ಹುಡುಕಿ, “ಹಾಯ್ ಹೇಗಿದ್ದೀಯಾ? ಐ ಆಮ್ ಸೋ ಸಾರಿ, ಮಗು ಎಲ್ಲಿ?” ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಕೇಳಿದ.
ಮೈನಾಳ ಮನಸ್ಸಿನಲ್ಲಿ ದ್ವಂದ್ವ ಕಾಡಲಾರಂಭಿಸಿತು. `ನಾನು ಮಾಡಬಾರದ್ದೇನೂ ಮಾಡಿಲ್ಲ ನನಗೆ ಅನ್ಯಾಯ ಆಗಿದೆ. ಈಗ ಅಲ್ಲಿಗೆ ಹೋಗುವುದಾದರೆ ಹೇಗೆ? ಅಲ್ಲಿ ಇನ್ನೊಬ್ಬ ಹೆಣ್ಣಿಗೆ ನೋವಾಗುತ್ತಲ್ಲ,’ ಎಂದು ದೀರ್ಘವಾಗಿ ಆಲೋಚಿಸಿ ಯಾರ ಪ್ರಶ್ನೆಗೂ ಉತ್ತರಿಸಲಿಲ್ಲ.
ಆದರೆ ಅಭಿ ಮನೆಯೊಳಗೆ ಬಂದವನೇ ಮೈನಾಳ ತಂದೆಯ ಬಳಿ ಮುಜುಗರದಿಂದಲೇ ಮಾತನಾಡಿದ. ಮೈನಾಳ ತಂದೆ, ಅಭಿಯ ತಾಯಿ ತಂದೆಯರ ಬಗ್ಗೆ ಪ್ರಸ್ತಾಪ ಮಾಡಿದಾಗ, ಉಮ್ಮಳಿಸಿ ಬಂದ ದುಃಖವನ್ನು ಸಾವರಿಸಿಕೊಂಡು, “ನಾನು ನಿಮ್ಮ ಮಗಳಿಗೆ ಯೋಗ್ಯನಾಗಿ ನಡೆದುಕೊಳ್ಳಲಿಲ್ಲ,” ಎನ್ನುತ್ತಾ ಅತ್ತೆ ಮಾವ, ಹೆಂಡತಿಯನ್ನು ಕೂರಿಸಿಕೊಂಡು, “ನನ್ನ ತಂದೆ ತೀರಿಹೋಗಿ ಬಹಳ ವರ್ಷಗಳೇ ಆಗಿದ್ದವು. ಹೈದರಾಬಾದಿನಲ್ಲೇ ಕೆಲಸ ಮಾಡುತ್ತಿದ್ದೆ. ಅಷ್ಟರಲ್ಲಿ ಅಮ್ಮನಿಗೆ ಕೊರೋನಾ ಪಾಸಿಟಿವ್ ಬಂತು. ಉಸಿರಾಟದ ಸಮಸ್ಯೆಯಿಂದ ಅವರು ಪ್ರಾಣಬಿಟ್ಟರು. ಅಮ್ಮನನ್ನು ಆರೈಕೆ ಮಾಡುತ್ತಿದ್ದ ನನ್ನ ಹೆಂಡತಿಗೂ ಹುಷಾರಾಗಲಿಲ್ಲ,” ಎಂದು ಒಂದೇ ಉಸುರಿಗೆ ಕೊರೋನಾ ದುರಂತವನ್ನು ಹೇಳಿದ.
ಅಷ್ಟರಲ್ಲಿ ಶಾಲೆಯಿಂದ ಬಂದ ಮಗನನ್ನು ನೋಡಿ ತಬ್ಬಿಕೊಂಡು ಚಾಕಲೇಟ್ ಡಬ್ಬ ನೀಡಿದರೂ ಯಶವಂತ್ ಅದನ್ನು ಲಕ್ಷಿಸದೆ, “ವೇರ್ ಆರ್ ಯೂ ಡ್ಯಾಡ್. ಐ ಮಿಸ್ಡ್ ಯೂ ಎ ಲಾಟ್. ಮಮ್ಮ ಟೋಲ್ಡ್ ದಟ್ ಯೂ ಆರ್ ಇನ್ ಸ್ಟೇಟ್ಸ್. ಎವರಿ ಟೈಮ್ ಐ ಮಿಸ್ಡ್ ಯುವರ್ ಕಾಲ್. ಹೌ ಆರ್ ಯೂ?” ಎಂದು ಕೇಳಿದ.
ತನ್ನ ಬಗ್ಗೆ ಮೈನಾ ಪಾಸಿಟಿವ್ ಆಗಿಯೇ ಮಗನಲ್ಲಿ ಹೇಳಿದ್ದಾಳೆ ಎಂದು ಅಭಿ ನೊಂದುಕೊಳ್ಳುತ್ತಾ ಇರುವಾಗ ಯಶವಂತ್ ಬಂದು, “ಗಿವ್‌ಮಿ ಕಾರ್ ಕೀ, ಐ ವಾಂಟು ಟು ಸೀ,” ಎಂದ. ಚೈಲ್ಡ್ ವಾಕ್ ಆಗಿರುವುದನ್ನು ಖಾತರಿ ಮಾಡಿಕೊಂಡು ಅಭಿ ಮಗನಿಗೆ ಕಾರ್ ಕೀ ಕೊಟ್ಟ.ಅಲ್ಲಿಯೇ ಮೌನವಾಗಿ ಕುಳಿತಿದ್ದ ಅತ್ತೆ ಮಾವರನ್ನು ಕುರಿತು, “ನಾನು ಮೈನಾಳ ವಿಚಾರವನ್ನು ಮನೆಯಲ್ಲಿ ಹೇಳಿದ್ದೆ ಗೊತ್ತ….. ಆದರೆ ಮದುವೆಯಾದ ವಿಚಾರ ಮುಚ್ಚಿಟ್ಟಿದ್ದೆ. ಅಷ್ಟರಲ್ಲಿ ತಂದೆ ತೀರಿಕೊಂಡರು. ಇನ್ನು ನಿಧಾನಿಸಬಾರದೆಂದು ಎಂದು ಆತುರಕ್ಕೆ ನನಗೆ ಮದುವೆ ಮಾಡಿಬಿಟ್ಟರು,” ಕಣ್ಣೊರೆಸಿಕೊಂಡ ಅಭಿ.
ಮನೆಯಲ್ಲಿ ಅಳಿಯನಿಗೆ ಮಾಡಿದ ಅಡುಗೆ ಖರ್ಚಾದದ್ದು ಅಷ್ಟಕ್ಕಷ್ಟೇ. ಅಭಿ ಇನ್ನೇನೋ ಬೇಕು ಎಂದು ಚಡಪಡಿಸುತ್ತಿದ್ದ. ಮೈನಾ ಉದ್ದನೆಯ ಗಾಜಿನ ಲೋಟವನ್ನು ಟೇಬಲ್ ಮೇಲೆ ತಂದಿಟ್ಟಳು. ಅದು ತನಗೇ ಎಂದು ತಿಳಿದ ಅಭಿ, “ಥ್ಯಾಂಕ್ಸ್ ಫಾರ್ ಲೆಮೆನ್ ವಾಟರ್ ರಿಯಲಿ ದಿಸ್ ಈಸ್ ಟೂ ಗುಡ್,” ಎನ್ನುತ್ತಾ ಮೈನಾಳ ಕಡೆಗೆ ನೋಡಿ. ಅವಳು, `ಹೀಗೆ ಮಾಡಬಾರದಿತ್ತು,’ ಎಂಬ ಭಾವದಲ್ಲಿ ನೋಡುತ್ತಿದ್ದಳು.
ಕೊರೋನಾ ಬಂದು ಊರು ಹಾಳಾದರೂ ಮಗಳಿಗೆ ಒಳ್ಳೆಯದಾಗುತ್ತಿದೆ ಎಂಬ ಸಮಾಧಾನದಲ್ಲಿಯೇ ಮೈನಾಳ ತಾಯಿ ತಂದೆ ಕೊಂಚ ಸಮಾಧಾನ ತಂದುಕೊಂಡರು. ಆದರೆ ಮೈನಾಗೆ ಅಭಿಯ ಬಗ್ಗೆ ತೀವ್ರ ಆಕ್ರೋಶ ಮನಸ್ಸಿನಲ್ಲಿತ್ತು. ಅವಳಿಗೆ ಅನ್ನಿಸಿದ್ದು ಒಂದೇ, ಅಂದು ತಾನು ಅಪ್ಪ ಅಮ್ಮನ ಜೊತೆ ಸೆಲ್ಛಿ ತೆಗೆದುಕೊಂಡಂತೆ ನನ್ನ ಮಗನೂ ಸೆಲ್ಛಿ ತೆಗೆದುಕೊಳ್ಳಬೇಕು. ಅವನ ಆ್ಯಕ್ಟಿವಿಟಿ ಬುಕ್ ನಲ್ಲಿ ಮೈ ಫ್ಯಾಮಿಲಿ ಕಾಲಂನ್ನು ಫೋಟೋದೊಂದಿಗೆ ತುಂಬಬೇಕಿತ್ತು. ಮಗನ ಅರ್ಜಿಯಲ್ಲಿ ಸಿಂಗ್ ಪೇರೆಂಟ್ ಎಂದು ನಮೂದು ಮಾಡುವುದು ಇಷ್ಟವಿರಲಿಲ್ಲ. ಮಗನನ್ನು ಶಾಲೆಗೆ ಸೇರಿಸುವಾಗ ಯಶವಂತ್ F/B ಅಭಿಜಿತ್ ಎಂದೇ ಕೊಟ್ಟಿದ್ದಳು.
ಮೈನಾಳ ತಾಯಿ ತಂದೆಗೆ ಅಳಿಯ ಮನೆಗೆ ಬಂದು ಹೋದ ನಂತರ ಆತುರ ಹೆಚ್ಚಾಯಿತು. ಯಾವಾಗ ಮನೆಗೆ ಕರೆದುಕೊಂಡು ಹೋಗುತ್ತಾನೋ ಎನಿಸಿತು.
ಮೈನಾಳ ತಂದೆ ಅಭಿಯ ಬಳಿ, “ನಿಮ್ಮ ಮನಿ ನಾನು ನೋಡಬೇಕು,” ಎನ್ನುತ್ತಾ ಅಲ್ಲಿ ಹೋಗಿ ಮಗಳ ಬದುಕಿನ ನೆಮ್ಮದಿಯನ್ನು ಹಾಳು ಮಾಡಬಹುದಾದ ಅಭಿಯ ಮೊದಲ ಮದುವೆಯ ಯಾವ ಕುರುಹುಗಳು ಅಲ್ಲಿರಬಾರದು ಎನಿಸಿ, ಅಲ್ಲಿದ್ದ ಫೋಟೋ ಇನ್ನಿತರೆ ವಸ್ತುಗಳನ್ನೆಲ್ಲಾ ಖುದ್ದು ತಾವೇ ತೆಗೆಸಿ ಮನೆಯನ್ನು ಹೊಸದಾಗಿ ಪೇಂಟ್ ಮಾಡಿಸಿದರು. ಆದರೆ ಮೈನಾಳಿಗೆ ಅಭಿಯ ಮೇಲೆ ಸಿಟ್ಟಿತ್ತು.
ಅಭಿಯ ಮನೆಯಲ್ಲಿ ಬೇಡವೆಂದು ತಮ್ಮ ಮನೆಯಲ್ಲೇ ಹೋಮ ಮಾಡಿಸಿ, ಅವರಿಬ್ಬರು ಪರಸ್ಪರ ಹಾರ ಬದಲಾಯಿಸಿಕೊಳ್ಳುವಂತೆ ಮಾಡಿ ಒಂದು ಚಿಕ್ಕ ಸಮಾರಂಭ ಮಾಡಿದರು. ಅಭಿಯೂ ವಜ್ರದ ಹಾರ, ನೆಕ್ಲೇಸ್, ಓಲೆ, ಬಳೆ ಎಲ್ಲವನ್ನೂ ತಂದಿದ್ದ. ಆದರೆ ಮೈನಾಳಿಗೆ ಅದರ ಬಗ್ಗೆ ಸ್ವಲ್ಪ ಆಸಕ್ತಿ ಇರಲಿಲ್ಲ. ಯಶವಂತ್ ನನ್ನು ಜೊತೆಯಲ್ಲಿಯೇ ಕೂರಿಸಿಕೊಂಡ ಅಭಿಯನ್ನು ಕಂಡು ಮೈನಾ ಕೊಂಚ ನಿರಾಳಳಾದಳು. ಮಗನಿಗಾಗಿ ಹೊಸ ಆಟಿಕೆಯನ್ನು ತಂದು, ಅವನಿಗೋಸ್ಕರ ಸ್ಟಡಿ ರೂಮನ್ನು ತಯಾರು ಮಾಡಿ ಅಭಿ ಸಂತೋಷಿಸಿದ.
ಮೈನಾಳ ಕನವರಿಕೆ ಕೈಗೂಡಿದಂತಾಗಿ ತವರಿನಿಂದ ತನ್ನ ಗಂಡನ ಮನೆಗೆ ಕಾಲಿಟ್ಟಳು. ಪ್ರಾರಂಭದಲ್ಲಿ ಮನೆಯ ವಸ್ತುಗಳನ್ನು ಅವಳೇ ಜೋಪಾನವಾಗಿ ಜೋಡಿಸಿಕೊಂಡಳು. ಅಭಿ ಜೊತೆ ಮಾತನಾಡಿದಳು ಆದರೆ ಸಲಿಗೆಯಿಂದ ವರ್ತಿಸುತ್ತಿರಲಿಲ್ಲ.
ಅಭಿಗೆ ತನ್ನಿಂದ ತಪ್ಪಾಗಿದೆ ಎಂದು ತಿಳಿದಿತ್ತು. ಅದರಿಂದ ಅವಳಿಗೆ ಸ್ವಲ್ಪ ಸಮಯ ಕೊಡೋಣ ಎಂದು ಯೋಚಿಸಿದ. ಅವಳ ಕೋಪ ಕರಗುವವರೆಗೂ ಮಾತನಾಡಿಸುವುದಿಲ್ಲ ಎಂದುಕೊಂಡ. ವರ್ಕ್ ಫ್ರಮ್ ಹೋಮ್ ಮುಗಿದು ಮೈನಾ ಆಫೀಸಿಗೆ ಹೋಗಲು ಪ್ರಾರಂಭಿಸಿದಳು. ಅಭಿ ಹೈದರಾಬಾದಿನ ಕೆಲಸ ಬಿಟ್ಟು ಬೆಂಗಳೂರಿನಲ್ಲೇ ಹೊಸ ಕೆಲಸ ಹುಡುಕಿಕೊಂಡ.
ಕೆಲಸ ಸಿಕ್ಕ ನಂತರ ಮೈನಾಗೆ, “ಆರಾಮವಾಗಿ ಮನೆಯಲ್ಲಿರು. ನಾನು ಕೆಲಸಕ್ಕೆ ಹೋಗ್ತೀನಿ. ಹ್ಯಾಂಡ್ ಸಂ ಪ್ಯಾಕೇಜ್…..” ಎಂದ ಅಭಿ.
“ನೋ, ನೆವರ್….. ಐ ವಿಲ್ ಗೋ,” ಎಂದು ಗಟ್ಟಿಯಾಗಿ ಹೇಳಿದಳು ಮೈನಾ.
“ಸಾರಿ ಯೂ ಕ್ಯಾನ್. ಆದರೆ ನಾನು ನಿನ್ನನ್ನು ಪಿಕ್ ಅಪ್ ಡ್ರಾಪ್ ಮಾಡುತ್ತೇನೆ. ನೈಟ್ ಶಿಫ್ಟ್ ಕಷ್ಟ ಆಗುತ್ತೆ. ಡೇ ಶಿಫ್ಟ್ ಆದರೆ ಒಟ್ಟಿಗೆ ಒಂದೇ ಕಾರಲ್ಲಿ ಮಾತಾಡ್ಕೊಂಡು ಹೋಗಬಹುದಲ್ವಾ…. ಆ್ಯಮ್ ಐ ರೈಟ್,” ಎಂದ ಕೇಳಿದ. ಏನೂ ಉತ್ತರಿಸದ ಮೈನಾ ನಕ್ಕು ಸುಮ್ಮನಾದಳು.
ಅಷ್ಟರಲ್ಲಿ ಮಗಳು ಅಳಿಯನ ಹೊಸ ಸಂಸಾರ ಹೇಗಿದೆ ಎಂದು ನೋಡಲು ಅವಳ ತಾಯಿ ತಂದೆ ಬಂದರು. ಇಬ್ಬರೇ ಇದ್ದರೆ ಇನ್ನೂ ಸಲಿಗೆ ಬೆಳೆಯುತ್ತೆ ಅನ್ನುವ ಕಾರಣಕ್ಕೆ ಮೊಮ್ಮಗನನ್ನು ಕರೆದುಕೊಂಡು ಹೋದರು. ಮೈನಾಳ ಬೇಸರ, ಸಿಟ್ಟನ್ನು ಕಳೆಯಬೇಕೆಂದು ನೆನೆಸಿದ ಅಭಿ, ಮೈನಾಳನ್ನು ತಬ್ಬಿ ಕ್ಷಮೆ ಕೇಳಿಬಿಡಬೇಕು ಎಂದು ನಿರ್ಧರಿಸಿದ. ಮೈನಾ ಅಭಿಗೆ ತನ್ನ ನಿರ್ಧಾರವನ್ನು ಹೇಳಲು ಇದೇ ಸರಿಯಾದ ಸಮಯ ಎಂದು ಕಾಯುತ್ತಿದ್ದಳು.
“ಇವತ್ತು ಸಂಜೆಗೆ ಅಡುಗೆ ಬೇಡ. ಐ ವಿಲ್ ಆರ್ಡರ್ ಫ್ರಂ ಔಟ್ ಸೈಡ್,” ಎಂದು ಹೇಳಿದ ಅಭಿ.
ಮೈನಾಳಿಗೂ ಖುಷಿ. ಹೇಗೂ ಆಫೀಸಿಗೆ ಹೋಗಲು ಹೊಸ ಹೊಸ ಬಟ್ಟೆಗಳನ್ನು ಖರೀದಿಸಿದ್ದಳು. ಅವುಗಳನ್ನು ವಾರ್ಡ್ ರೋಬ್ ನಲ್ಲಿ ಜೋಡಿಸಿಕೊಳ್ಳುತ್ತಿದ್ದಳು. ಅವಳು ತಾನೇ ಊಟಕ್ಕೆ ಬರುವವರೆಗೂ ಅಭಿ ಕಾಯುತ್ತಿದ್ದ. ಊಟ ಮಾಡುವಾಗ ಅಭಿ ಸಲಿಗೆಯಿಂದ ವರ್ತಿಸಿದ.
“ಪ್ಲೀಸ್ ಅಭಿ ಡೋಂಟ್ ಟಚ್ ಮಿ ನೌ….. ನಾನು ನೀನು ಲೋಕದ ಕಣ್ಣಿಗೆ ಕಪಲ್ಸ್ ನಿಜ. ಆದರೆ ಮನೆಯೊಳಗೆ ಫ್ರೆಂಡ್ಸ್ ಅಷ್ಟೇ,” ಎಂದು ರೇಗಿದಳು.
“ನೀನೊಬ್ಬ ಫ್ರೆಂಡ್ ಆಗಿ ನಿನ್ನ ಫ್ರೆಂಡ್ ನನಗೆ ಅವಳ ಗಂಡ ಮಾಡಿದ ಮೋಸ ನೆನಪಿಸಿಕೋ ಜಸ್ಟ್ ಇಮ್ಯಾಜಿನ್,” ಎಂದು ಅಳುತ್ತಾ ಹೇಳಿದಳು.
“ಇದು ಮೋಸ ಅಲ್ಲ ಅರ್ಥ ಮಾಡ್ಕೊ,” ಎಂದು ಅವಳ ಕೈ ಹಿಡಿದುಕೊಂಡ.
ಅವಳು ಕೈ ಬಿಡಿಸಿಕೊಂಡು, “ಕೈ ಹಿಡಿಬೇಕಾದಾಗ ನೀನು ಕೈ ಬಿಟ್ಟೆ. ಕೊರೋನಾ ಬಂದು ನಿಮ್ಮನೇಲಿ ದುರಂತ ಆಗದೆ ಇದ್ದಿದ್ರೆ ನೀನು ಮತ್ತೆ ಬರುತ್ತಲೇ ಇರಲಿಲ್ಲ ಅಲ್ವಾ…. ಇದೇ ಸತ್ಯ ಅಲ್ವಾ ಹೇಳು. ನಿನಗೆ ಏಕಾಂಗಿ ಆಗಿ ಇರಕ್ಕಾಗಲ್ಲ ಜೊತೆ ಬೇಕು. ಆದರೆ ನನಗೆ ಜೊತೆ ಬೇಡ. ನಾನಿಲ್ಲಿ ಬಂದಿರೋದು ಜಸ್ಟ್ ಯಶವಂತ್ ಗಾಗಿ. ಹೀ ಹ್ಯಾಸ್ ಟು ಫೀಲ್ ಕಂಫರ್ಟ್ ಅಂತ. ಸಿಂಗಲ್ ಪೇರೆಂಟಿಂಗ್ ಕಷ್ಟ. ಆ ಮಕ್ಕಳ ಕಷ್ಟ ನೋಡಿದ್ದೀನಿ, ಕೇಳಿದ್ದೀನಿ. ನಮ್ಮ ಯಶ್ ಗೂ ಹಾಗಾಗಬಾರದೆನ್ನುವ ಒಂದೇ ಒಂದು ಕಾರಣಕ್ಕೆ ನಾನು ನಿನ್ನ ಜೊತೆ ಬಂದೆ ಅಷ್ಟೆ.
“ಹಸಿ ಬಾಣಂತಿ ಬಿಟ್ಟು ಇನ್ನೊಂದು ಮದುವೆಯಾದೆ. ಈಗಲೂ ನಾನು ಬೇಡ ಅನ್ನಿಸಿದ್ರೆ ಹೇಳು ಮಗನನ್ನು ಕರಕೊಂಡು ಬೇರೆ ಮನೆ ಮಾಡ್ತೀನಿ. ಅಲ್ಲೇ ವಾರಕ್ಕೊಮ್ಮೆ ಬಂದು ಮಗುನಾ ನೋಡ್ಕೊಂಡು ಹೋಗು,” ಎಂದಳು.
“ಹಾಗೆಲ್ಲ ಮಾಡಬೇಡ. ನನ್ನ ತಪ್ಪಿಗೆ ಇಲ್ಲೇ ಪ್ರಾಯಶ್ಚಿತ್ತ ಮಾಡ್ಕೋತೀನಿ. ಆಯ್ತು ಈ ಮನೆಯಲ್ಲಿ ನಾವು ಫ್ರೆಂಡ್ಸ್ ತರಾನೇ ಇರೋಣ. ನೀನಾಗೆ ಬರೋವರೆಗೂ ಐ ವಿಲ್ ವೆಯ್ಟ್ ಬಲಂತವಿಲ್ಲ,” ಎಂದ ಅಭಿ.
ಮೈನಾಗೆ ಇತರರಿಂದ ಕೇಳಿದ ಮಾತುಗಳನ್ನು, ಅನುಭವಿಸಿದ ಒಂಟಿತನವನ್ನು ಮರೆಯುವುದು ಕಷ್ಟ ಅನಿಸುತ್ತಿತ್ತು. ಅಳಿಸಿ ಹಾಕಿದ ಹಳೆಯ ನಂಬರ್ ಗಳನ್ನು ಮತ್ತೆ ಕಲೆಕ್ಟ್ ಮಾಡಿ ಸೇವ್ ಮಾಡಿಕೊಂಡು ಮದುವೆಯಾದ ಫೋಟೋ, ಈಗಿನ ಹೊಸ ಮನೆಯ ಫೋಟೋ, ಯಶವಂತ್ ಮತ್ತು ಅಭಿಯ ತರಹೇಲಾರಿ ಫೋಟೋಗಳನ್ನು ಸ್ಟೇಟಸ್ ಗೆ ಹಾಕಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದಳು.
“ಒಮ್ಮೆ ನನ್ನಿಂದ ತಪ್ಪಾಗಿದೆ ಅನ್ನುವುದಕ್ಕೆ ಇಷ್ಟು ಕಷ್ಟ ಪಡುತ್ತಿದ್ದೀ,” ಅಂದು ಅವಳ ಕೈಗಳನ್ನು ಹಿಡಿದುಕೊಂಡು ತನ್ನ ಕಪಾಳಕ್ಕೆ ಹೊಡಿ ಎಂದು ಕೇಳಿದ ಅಭಿ.
“ಒಡೆದ ಕನ್ನಡಿಯನ್ನು ಮತ್ತೆ ಜೋಡಿಸೋದು ಕಷ್ಟ. ಒಂದು ವೇಳೆ ಜೋಡಿಸಿದರೂ ಅದರಲ್ಲಿ ಮುಖ ನೋಡಿಕೊಳ್ಳುವುದು ಕಷ್ಟ.”
ಅಭಿ ಸ್ವಲ್ಪ ದಿನ ಮೌನವಾಗಿದ್ದರೂ ಮೈನಾಳ ಮೇಲೆ ಅಸಾಧ್ಯ ಕೋಪ ಮಾಡಿಕೊಳ್ಳುತ್ತಿದ್ದ. ಈ ನಡುವೆ ಮೈನಾಳ ಅಣ್ಣ ತನ್ನ ಮದುವೆಗೋಸ್ಕರ ರಜೆ ಹಾಕಿ ಕೊಚ್ಚಿನ್ ನಿಂದ ಬಂದ. “ಹುಡುಗಿ ಕಡೆಯವರು ಬರುತ್ತಿದ್ದಾರೆ. ಮನೆಯ ಫರ್ನೀಚರ್, ಇಂಟೀರಿಯರ್ಸ್ ಎಲ್ಲಾ ಬದಲಿಸಬೇಕು. ಶಾಪಿಂಗ್ ಮಾಡೋಣ ಬನ್ನಿ,” ಎಂದು ತಂಗಿ ಮತ್ತು ಭಾವನನ್ನು ಕರೆದ.
ದಾರಿಯಲ್ಲಿ ತಂಗಿಯ ಸಂಸಾರದ ಬಗ್ಗೆ ತಿಳಿಯಬೇಕೆಂದು, “ಹೌ ಆರ್ ಯೂ ಬೋತ್? ಗುಡ್ ಆಮ್ ಐ ರೈಟ್,” ಎಂದು ಕೇಳಿದ.
“ನಿಮ್ಮ ತಂಗಿ ನೆನಪಲ್ಲಿ ಕಟ್ಟಿಕೊಂಡ ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ನಾನು ಇವಳ ಜೊತೆ ಸಂಸಾರ ಮಾಡಬೇಕು ಅಂತಾನೆ ನಾನು ಕಾರಣ ಹೇಳಿಕೊಂಡು ಬೆಂಗಳೂರಿಗೆ ಬರಲಿಲ್ಲ. ಹೈದರಾಬಾದಿಗೂ ಕರೆಸಿಕೊಳ್ಳಲಿಲ್ಲ,” ಎಂದು ರೇಗಾಡಿದಾಗ ಅವನ ಧ್ವನಿಯಲ್ಲಿ ಸತ್ಯವಿದೆ ಎಂದು ಅಣ್ಣತಂಗಿಗೆ ಅನಿಸಿತು.
“ನೀವಿಬ್ರೂ ಸರಿ ಹೋಗೋವರ್ಗೂ ನಾನು ಸೆಟ್ ಆಗಲ್ಲ,” ಎಂದು ಮೈನಾಳಾ ಅಣ್ಣ ಮಾತು ಮುಗಿಸಿದ.
ಸ್ವಲ್ಪ ಸಮಯದ ನಂತರ ಇಬ್ಬರನ್ನೂ ಹೋಟೆಲ್ ಗೆ ಕರೆದುಕೊಂಡು ವಿಶಾಲವಾದ ಲಾಂಜ್ ನಲ್ಲಿ ಮಬ್ಬು ಬೆಳಕಿನಲ್ಲಿ ಅಭಿಯ ಪರವಾಗಿ ತಂಗಿಗೆ ಬುದ್ಧಿವಾದ ಹೇಳಿದ.
“ಅಭಿ ಹೇಳೋದ್ರಲ್ಲಿ ಸತ್ಯವಿದೆ ಅನಿಸ್ತಿದೆ. ಕಳೆದುಕೊಂಡದ್ದನ್ನು ಮತ್ತೆ ಪಡೆದುಕೊಂಡಿದ್ದೀಯ. ಮತ್ತೆ ಕೈಬಿಡಬೇಡ. ಯೂ ವಿವ್ ಪೇ ಫಾರ್ ಇಟ್ ಹುಷಾರ್,” ಎಂದ.
ಅಭಿ ತಲೆ ತಗ್ಗಿಸಿ ಸುಮ್ಮನಿದ್ದದ್ದನ್ನು ನೋಡಿದ ಮೈನಾ ಅವನನ್ನು ಮತ್ತೆ ಕೆಣಕಿದಳು, “ನಿನ್ನ ಹೆಂಡ್ತೀನೂ ಸರಿಯಾಗಿ ನೋಡಿಕೊಂಡಿಲ್ಲ! ನೀನೂ ಒಬ್ಬ ಮನುಷ್ಯನಾ ಛೇ…..” ಎಂದು ರೇಗಾಡಿದಳು.
“ಮನಸ್ಸಲ್ಲಿ ನೀನೇ ಇದ್ದೆ ಕಣೇ…. ನೀನು ಮಾತ್ರನೇ ಇದ್ದೆ,” ಎಂದು ಅಭಿ ಹನಿಗಣ್ಣಿನಿಂದ ಹೇಳಿದ.
ಮೈನಾಳ ಅಣ್ಣ ಮಾತು ಮುಂದುವರಿಸುತ್ತಾ, “ದುರಂತಕ್ಕೆ ವಿಷಾದವಿದೆ. ಆದರೆ ಇಲ್ಲಿ ನಿಮ್ಮಿಬ್ಬರ ಸಂಸಾರ ಸರಿ ಹೋಗುತ್ತೆ…. ಸರಿ ಮಾಡ್ಕೊಬೇಕು. ಹೇಗೂ ಅಮ್ಮನಿಗೆ ಮೊಮ್ಮಕ್ಕಳು ಅಂದರೆ ಇಷ್ಟ. ಮೊಮ್ಮಗಳ ಬಗ್ಗೆ ಕನಸು ಕಾಣತ್ತಿದ್ದಾರೆ. ನೀವಿಬ್ಬರೂ ಈಗ ಹೊಸದಾಗಿ ಬದುಕು ಕಟ್ಟಿಕೊಂಡಿದ್ದೀರಿ. ಅಭಿ, ಐ ಆಮ್ ವೆರಿ ಸಾರಿ. ತೀರಿಕೊಂಡ ನಿಮ್ಮ ವೈಫ್ ಹೆಸರು ಕೇಳಬಹುದೇ.”
ಮೈನಾಳ ಅಣ್ಣ ಖಂಡಿತವಾಗಿ ತನ್ನ ಮತ್ತು ಮೈನಾಳ ಬದುಕನ್ನು ಸರಿ ಮಾಡುತ್ತಾನೆ ಎಂಬ ಭರವಸೆಯಿಂದ, “ಶಿವಾನಿ,” ಎಂದ. “ಸರಿ ಹಾಗಿದ್ರೆ ನೀನ್ಯಾಕೆ ಶಿವಾನಿಯ ಹೆಸರಲ್ಲಿ ಒಂದು ಹೆಣ್ಣು ಮಗುವನ್ನು ದತ್ತು ತೊಗೋಬಾರದು. ಅವರದ್ದೆ ಹೆಸರನ್ನು ಇಡಿ. ಅಮ್ಮ ಅಪ್ಪ ಆ ಮಗೂನ ಶಾಲೆಗೆ ಹೋಗೋವರೆಗೂ ಸಾಕಿ ಕೊಡ್ತಾರೆ. ಅವರನ್ನು ಒಪ್ಪಿಸ್ತೀನಿ. ನಂಗೂ ಸೋದರ ಸೊಸೆ ಬಂದಹಾಗೆ ಆಗುತ್ತೆ, ಯಶವಂತ್ ಗೂ ಜೊತೆ ಸಿಕ್ಕುವ ಹಾಗೆ ಆಗುತ್ತೆ,” ಎಂದು ಮೈನಾಳ ಅಣ್ಣ ಆತ್ಮವಿಶ್ವಾಸದಿಂದ ನಗುತ್ತಾ ಹೇಳಿದ.
ಇದು ಸಾಧ್ಯಾನಾ ಎಂಬಂತೆ, ಮೈನಾ ಅಣ್ಣನ ಮುಖವನ್ನು ಅಭಿಯ ಮುಖವನ್ನು ಇದು ಸಾಧ್ಯಾನಾ ಎಂಬಂತೆ ನೋಡಿದಳು.
“ಎಲ್ಲಾ ಸರಿಹೋಗುತ್ತೆ ಮೈನಾ, ನೀವು ಅಡಾಪ್ಟ್ ಮಾಡಿಕೊಳ್ಳೋ ಮಗೂಗೆ ಶಿವಾನಿ ಹೆಸರು ಇಡ್ತೀರಾ. ಇದರಿಂದ ಆಕೆಯ ಆತ್ಮಕ್ಕೂ ನೆಮ್ಮದಿ ಸಿಗುತ್ತದೆ. ಒಪ್ಕೋ ಮೈನಾ ಪ್ಲೀಸ್,” ಎಂದು ಆತ್ಮವಿಶ್ವಾಸ ತುಂಬಿ ಆವಳ ಜೀವನವನ್ನು ಸರಿಪಡಿಸಲು ಪ್ರಯತ್ನಿಸಿದ.
ಹೇಗೂ ಹಳಿ ತಪ್ಪಿದ ಮೈನಾ ಅಭಿ ಸಂಸಾರ ಸರಿಹೋಗಿ ಅನಾಥ ಹೆಣ್ಣು ಮಗುವೊಂದರ ಸುಭದ್ರ ಜೀವನಕ್ಕೆ ನಾಂದಿ ಹಾಡಿತು.