ಸ್ಪೆಷಲ್ ಟೇಸ್ಟಿ ದಾಲ್

ಸಾಮಗ್ರಿ : 1 ಕಪ್‌ ಹೆಸರುಬೇಳೆ, 1 ತುಂಡು ಶುಂಠಿ, 3-4 ಹಸಿ ಮೆಣಸಿನಕಾಯಿ, 1-2 ಲವಂಗದೆಲೆ, 1-2 ಈರುಳ್ಳಿ, 5-6 ಎಸಳು ಬೆಳ್ಳುಳ್ಳಿ, ಅರ್ಧ ಸೌಟು ತುಪ್ಪ, 3 ಇಡಿ ಒಣ ಮೆಣಸಿನಕಾಯಿ, ಒಗ್ಗರಣೆಗೆ ತುಸು ಸಾಸುವೆ, ಜೀರಿಗೆ, ಸೋಂಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸ, ಚಿಟಕಿ ಅರಿಶಿನ.

ವಿಧಾನ : ಮೊದಲು ಚಿಕ್ಕ ಕುಕ್ಕರ್‌ ನಲ್ಲಿ ತುಸು ತುಪ್ಪ ಬಿಸಿ ಮಾಡಿ, ಹೆಸರುಬೇಳೆ ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ಇದನ್ನು ಬದಿಗಿರಿಸಿ, ಉಳಿದ ತುಪ್ಪ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಇದಕ್ಕೆ ಹೆಚ್ಚಿದ ಹಸಿ ಮೆಣಸು, ಬೆಳ್ಳುಳ್ಳಿ, ಆಮೇಲೆ ಇಡಿ ಒಣ ಮೆಣಸು ಹಾಕಿ ಹುರಿಯಿರಿ. ನಂತರ ಲವಂಗದೆಲೆ, ಶುಂಠಿ, ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಬೇಕು. ಕೊನೆಯಲ್ಲಿ ಬೇಳೆ, ಉಪ್ಪು, ಅರಿಶಿನ ಎಲ್ಲಾ ಹಾಕಿ ಚೆನ್ನಾಗಿ ಕುದಿಸಿ ಕೆಳಗಿಳಿಸಿ. ನಂತರ ಹೆಚ್ಚಿದ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಬಿಸಿ ಬಿಸಿಯಾಗಿ ಅನ್ನ, ಚಪಾತಿ ಜೊತೆ ಸವಿಯಿರಿ.

kulcha-logo

ಸ್ಪೆಷಲ್ ಟೇಸ್ಟಿ ಕುಲ್ಚಾ

ಮೂಲ ಸಾಮಗ್ರಿ : 2 ಕಪ್‌ ಮೈದಾ, 1 ಚಮಚ ಕ್ಲೆಸ್ಟರ್‌ ಶುಗರ್‌, 2-2 ಚಿಟಕಿ ಬೇಕಿಂಗ್‌ ಪೌಡರ್‌, ಬೇಕಿಂಗ್‌ ಸೋಡ ಉಪ್ಪು, ಅರ್ಧರ್ಧ ಸೌಟು ಮೊಸರು, ತುಪ್ಪ.

ಹೂರಣದ ಸಾಮಗ್ರಿ : 1-1 ಚಮಚ ಧನಿಯ, ಜೀರಿಗೆ (ಎರಡನ್ನೂ ಹುರಿದು ಪುಡಿ ಮಾಡಿಡಿ), ಹೆಚ್ಚಿದ 2 ಈರುಳ್ಳಿ, 2-3 ಹಸಿ ಮೆಣಸು, ಬೇಯಿಸಿ ಮಸೆದ 4 ಆಲೂ, ರುಚಿಗೆ ತಕ್ಕಷ್ಟು ಉಪ್ಪು, ಅಮ್ಚೂರ್‌ ಪುಡಿ, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಮೂಲ ಸಾಮಗ್ರಿಯನ್ನೆಲ್ಲ ಬೆರೆಸಿ, ತುಸು ನೀರು ಬೆರೆಸಿ ಪೂರಿ ಹಿಟ್ಟಿನಂತೆ ಮೃದುವಾಗಿ ಕಲಸಿಡಿ. ತುಪ್ಪ ಹಾಕಿ ಚೆನ್ನಾಗಿ ನಾದಿಕೊಳ್ಳಿ, 1 ಗಂಟೆ ಕಾಲ ನೆನೆಯಲು ಬಿಡಿ. ನಂತರ ಹೂರಣದ ಎಲ್ಲಾ ಸಾಮಗ್ರಿ ಬೆರೆಸಿಕೊಂಡು ಕ್ರೀಮಿ ಟೆಕ್ಸ್ ಚರ್‌ ಬರುವಂತೆ ಮಾಡಿ. ನೆನೆದ ಹಿಟ್ಟಿನಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ ಲಟ್ಟಿಸಿ. ನಂತರ ಇದಕ್ಕೆ 2-3 ಚಮಚ ಹೂರಣ ತುಂಬಿಸಿ, ಮಡಿಚಿ ಮತ್ತೆ ಲಟ್ಟಿಸಿ. ಇದನ್ನು ತುಪ್ಪದ ಕೈನಿಂದ ಜಿಡ್ಡು ಸವರಿ, ತುಸು ಕೊ.ಸೊಪ್ಪು ಉದುರಿಸಿ ಅದುಮಿರಿ. ನಂತರ ಇದನ್ನು ಬಿಸಿ ಹೆಂಚಿಗೆ ಹಾಕಿ, ತುಪ್ಪ ಬಿಡುತ್ತಾ ಎರಡೂ ಬದಿ ಬೇಯಿಸಿ. ಬಿಸಿ ಬಿಸಿಯಾಗಿ ದಾಲ್ ‌ಜೊತೆ ಸವಿಯಿರಿ.

shakarkandi-chaat

ಸಿಹಿ ಗೆಣಸಿನ ಚಾಟ್

ಕೆಂಪು ಚಟ್ನಿಗಾಗಿ ಸಾಮಗ್ರಿ : 2 ಚಮಚ ಎಣ್ಣೆ, ಒಂದಿಷ್ಟು ಮೆಂತ್ಯ, ಜೀರಿಗೆ, ಸೋಂಪು, 1-2 ಏಲಕ್ಕಿ, ಹೆಚ್ಚಿದ 1 ದೊಡ್ಡ ಈರುಳ್ಳಿ, ತುಸು ಶುಂಠಿ, ಬೆಳ್ಳುಳ್ಳಿ, 7-8 ಒಣ ಮೆಣಸಿನಕಾಯಿ, ತುಸು ಶುಗರ್‌ ಸಿರಪ್‌, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ಸಾಸುವೆ/ ಎಳ್ಳೆಣ್ಣೆ. ಚಾಟ್ಗಾಗಿ ಸಾಮಗ್ರಿ : ಮುಕ್ಕಾಲು ಭಾಗ ಬೇಯಿಸಿದ 3 ಸಿಹಿ ಗೆಣಸು (ಕ್ಯೂಬ್ಸ್ ಆಗಿ ಕತ್ತರಿಸಿ), ಅರ್ಧ ಸೌಟು ತುಪ್ಪ, ತುಸು ಹೆಚ್ಚಿದ ಶುಂಠಿ, ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ಈರುಳ್ಳಿ, ಬೆಳ್ಳುಳ್ಳಿ, ಗರಿಗರಿಯಾದ ಕಡಲೆಪುರಿ, ರೋಸ್ಟಿಂಗಾಗಿ ತುಸು ಕೆಂಡ.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ನಂತರ ಮೆಂತ್ಯ, ಜೀರಿಗೆ, ಸೋಂಪು, ಏಲಕ್ಕಿ ಹಾಕಿ ಚಟಪಟಾಯಿಸಿ. ನಂತರ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ಒಣ ಮೆಣಸಿನಕಾಯಿ ಹಾಕಿ ಬಾಡಿಸಿ. ಮಂದ ಉರಿಯಲ್ಲಿ 5 ನಿಮಿಷ ಬಾಡಿಸಿದ ನಂತರ ಕೆಳಗಿಳಿಸಿ ಆರಲು ಬಿಡಿ. ನಂತರ ಇದಕ್ಕೆ ಉಪ್ಪು, ಶುಗರ್‌ ಸಿರಪ್‌, ಬೆಲ್ಲ ಬೆರೆಸಿ ನುಣ್ಣಗೆ ಪೇಸ್ಟ್ ಮಾಡಿ. ಆಮೇಲೆ ಇದಕ್ಕೆ ಸಾಸುವೆ/ಎಳ್ಳೆಣ್ಣೆಯ ಒಗ್ಗರಣೆ ಕೊಡಿ.

ಸಿಹಿ ಗೆಣಸಿನ ತುಂಡುಗಳನ್ನು ಸ್ಟೀಲ್ ರಾಡಿಗೆ ಸಿಗಿಸಿ ಕೆಂಡದಲ್ಲಿ ಅಥವಾ ಗ್ಯಾಸ್‌ ಒಲೆಯಲ್ಲಿ ರೋಸ್ಟ್ ಮಾಡಿ. ನಂತರ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಇದಕ್ಕೆ ರೋಸ್ಟೆಡ್‌ ಗೆಣಸು ಹಾಕಿ ಬಾಡಿಸಿ, ತೆಗೆದುಬಿಡಿ. ನಂತರ ಉಳಿದ ತುಪ್ಪಕ್ಕೆ ಚಟ್ನಿ ಬೆರೆಸಿ ಮಂದ ಉರಿಯಲ್ಲಿ ಬಾಡಿಸಿ. ಆಮೇಲೆ ಇದಕ್ಕೆ ಈರುಳ್ಳಿ, ಶುಂಠಿ, ಹಸಿ ಮೆಣಸು, ಕಡಲೆಪುರಿ ಎಲ್ಲಾ ಬೆರೆಸಿ ಬೇಗ ಬೇಗ ಕೈಯಾಡಿಸಿ. ಒಂದು ಟ್ರೇನಲ್ಲಿ ಗೆಣಸು ಜೋಡಿಸಿ, ಅದರ ಮೇಲೆ ಈ ಚಟ್ನಿ ಸುರಿದು, ಮೇಲೆ ಒಂದಿಷ್ಟು ಕೊ.ಸೊಪ್ಪು, ಕಡಲೆಪುರಿ ಉದುರಿಸಿ ಸವಿಯಲು ಕೊಡಿ.

Logo-navratna-pulao

ನವರತ್ನ ಪಲಾವ್

ಸಾಮಗ್ರಿ : 1 ಕಪ್‌ ಬಾಸುಮತಿ ಅಕ್ಕಿಯ ಅನ್ನ, ಒಟ್ಟಾರೆ 500 ಗ್ರಾಂನಷ್ಟು ಬೆಂದ ಮಿಶ್ರ ತರಕಾರಿ (ಬೀನ್ಸ್, ಆಲೂ, ಕ್ಯಾರೆಟ್‌, ಬಟಾಣಿ, ಹೂಕೋಸು, ಗೆಡ್ಡೆಕೋಸು, ಡಬ್ಬಲ್ ಬೀನ್ಸ್, ಕ್ಯಾಪ್ಸಿಕಂ ಇತ್ಯಾದಿ), 100 ಗ್ರಾಂ ತುಪ್ಪದಲ್ಲಿ ಹುರಿದ ಪನೀರ್‌ ಕ್ಯೂಬ್ಸ್, ತುಂಡರಿಸಿದ ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ, ಖರ್ಜೂರ, ಅಖರೋಟ್‌ (ಒಟ್ಟಾಗಿ 1 ಕಪ್‌), 1 ದೊಡ್ಡ ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್, 2 ಲವಂಗದೆಲೆ, ತುಸು ಲವಂಗ, ಚಕ್ಕೆ, ಏಲಕ್ಕಿ, ಮೊಗ್ಗು, ಕಾಳು ಮೆಣಸು, ಸೋಂಪು, 4 ಚಮಚ ತುಪ್ಪ, ಅರ್ಧ ಸೌಟು ರೀಫೈಂಡ್‌ ಎಣ್ಣೆ, ಹಾಲಲ್ಲಿ ನೆನೆದ ತುಸು ಕೇಸರಿ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸ, ಅಲಂಕರಿಸಲು ಹೆಚ್ಚಿದ ಕೊ.ಸೊಪ್ಪು, ಪುದೀನಾ, ನಿಂಬೆಹೋಳು, ಉದ್ದನೆ ಹಸಿ ಮೆಣಸು.

ವಿಧಾನ : ಮೊದಲು ದೊಡ್ಡ ಕುಕ್ಕರ್‌ ನಲ್ಲಿ ಎಣ್ಣೆ ಬಿಸಿ ಮಾಡಿ ಎಲ್ಲಾ ತರಕಾರಿ ಹಾಕಿ ಚೆನ್ನಾಗಿ ಫ್ರೈ ಮಾಡಿ ಬೇರೆಯಾಗಿಡಿ. ಇದರಲ್ಲಿ ತುಪ್ಪ ಹಾಕಿ ಮೊದಲು ಪನೀರ್‌ ಕ್ಯೂಬ್ಸ್, ನಂತರ ಡ್ರೈಫ್ರೂಟ್ಸ್ ಜೊತೆ ಚಕ್ಕೆ ಲವಂಗ ಇತ್ಯಾದಿ ಸಹ ಹಾಕಿ ಹುರಿದು ತೆಗೆಯಿರಿ. ನಂತರ ಇನ್ನಷ್ಟು ಎಣ್ಣೆ ಬೆರೆಸಿ, ಬಿಸಿಯಾದಾಗ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ಇದಕ್ಕೆ ಕಾಳು ಮೆಣಸು, ಚಕ್ಕೆ ಲವಂಗ ಎಲ್ಲಾ ಸೇರಿಸಿ. ಆಮೇಲೆ ಇದಕ್ಕೆ ಮೊದಲೇ ನೆನಿಸಿಟ್ಟಿದ್ದ ಅಕ್ಕಿ, ಉಪ್ಪು, ತುಪ್ಪ ಸೇರಿಸಿ ಮಂದ ಉರಿಯಲ್ಲಿ 5 ನಿಮಿಷ ಕೆದಕಬೇಕು. ನಂತರ ಇದಕ್ಕೆ ಹಾಲು ಸಹಿತ ಕೇಸರಿ, ಅಗತ್ಯವಿದ್ದಷ್ಟು ನೀರು ಬೆರೆಸಿ, ಕೈಯಾಡಿಸಿ. ಕೊನೆಯಲ್ಲಿ ತರಕಾರಿ, ಉಪ್ಪು, ಖಾರ, ಪನೀರ್‌ ಎಲ್ಲಾ ಸೇರಿಸಿ 1 ಸೀಟಿ ಬರುವಂತೆ ಬೇಯಿಸಿ. ಕೆಳಗಿಳಿಸಿ ಆರಿದ ನಂತರ, ಇದಕ್ಕೆ ನಿಂಬೆಹಣ್ಣು ಹಿಂಡಿಕೊಂಡು, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

stuffed-tomato

ಟೊಮೇಟೊ ಫಿಲ್ಲಿಂಗ್ಸ್ ಸ್ಟಫಿಂಗ್

ಸಾಮಗ್ರಿ : ಅರ್ಧ ಸೌಟು ಎಣ್ಣೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು, ತರಿತರಿಯಾಗಿ ಕುಟ್ಟಿದ  ಧನಿಯಾ, ಹೆಚ್ಚಿದ ತುಸು ಶುಂಠಿ, 2 ಹಸಿ ಮೆಣಸು, 2 ಆಲೂ, 2 ಚಿಟಕಿ ಅರಿಶಿನ, ಧನಿಯಾ ಪುಡಿ, ರುಚಿಗೆ ಉಪ್ಪು, ಖಾರ, 100 ಗ್ರಾಂ ಸಣ್ಣಗೆ ಹೆಚ್ಚಿದ ಪನೀರ್‌ ಕ್ಯೂಬ್ಸ್, ಅರ್ಧ ಕಪ್‌ ಬೆಂದ ಹಸಿ ಬಟಾಣಿ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ.

ಗ್ರೇವಿಯ ಸಾಮಗ್ರಿ : ಮಾಗಿದ ಗಟ್ಟಿಯಾದ 4 ದೊಡ್ಡ  ಗಾತ್ರದ ಟೊಮೇಟೊ, 3-4 ಚಮಚ ಎಣ್ಣೆ, ತುಸು ಜೀರಿಗೆ, ಹೆಚ್ಚಿದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಇಂಗು, ಟೊಮೇಟೊ ಪೇಸ್ಟ್, ಸಕ್ಕರೆ, ಬೆಣ್ಣೆ, ಫ್ರೆಶ್‌ ಕ್ರೀಂ.

ವಿಧಾನ : ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ, ಸಾಸುವೆ, ಸೋಂಪು, ಧನಿಯಾ ಹಾಕಿ ಒಗ್ಗರಣೆ ಕೊಡಿ. ನಂತರ ಶುಂಠಿ, ಹಸಿ ಮೆಣಸು ಹಾಕಿ ಬಾಡಿಸಿ. ನಂತರ ಹೆಚ್ಚಿದ ಆಲೂ, ಉಪ್ಪು, ಅರಿಶಿನ, ಧನಿಯಾಪುಡಿ, ಖಾರ ಹಾಕಿ ಬಾಡಿಸಬೇಕು. ಆಲೂ ಮುಕ್ಕಾಲು ಭಾಗ  ಬೇಯಲಿ. ನಂತರ ಪನೀರ್‌, ಬಟಾಣಿ ಸೇರಿಸಿ ಬಾಡಿಸಬೇಕು. ಕೆಳಗಿಳಿಸಿ ಆರಿಸಿದ ನಂತರ ಚೆನ್ನಾಗಿ  ಮ್ಯಾಶ್‌ ಮಾಡಿ. ಇದಕ್ಕೆ ಕೊ.ಸೊಪ್ಪು, ಪುದೀನಾ ಸೇರಿಸಿ. ಟೊಮೇಟೋಗಳ ಮೇಲ್ಭಾಗ ಮುಚ್ಚಳದಂತೆ ಕತ್ತರಿಸಿ, ಒಳಗಿನದ್ದನ್ನು ತೆಗೆದು ಟೊಳ್ಳಾಗಿಸಿ. ತುಸು ಎಣ್ಣೆಗೆ ಉಪ್ಪು, ಖಾರ ಹಾಕಿ ಮಿಕ್ಸ್ ಮಾಡಿ. ಅದರಲ್ಲಿ ಟೊಮೇಟೊ ಬಟ್ಟಲುಗಳನ್ನು 1 ಗಂಟೆ ಕಾಲ ಮ್ಯಾರಿನೇಟ್‌ ಮಾಡಿ. ಸ್ಟಫಿಂಗ್‌ ಮಿಶ್ರಣ ಆರಿದ ನಂತರ, ಟೊಮೇಟೋಗಳಿಗೆ ಅದನ್ನು ತುಂಬಿಸಿಡಿ.

ಅದೇ ಬಾಣಲೆಯಲ್ಲಿ ಮತ್ತಷ್ಟು ಎಣ್ಣೆ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಶುಂಠಿ, ಹಸಿ ಮೆಣಸು, ಧನಿಯಾಪುಡಿ, ಅರಿಶಿನ, ಉಪ್ಪು, ಖಾರ, ಇಂಗು ಹಾಕಿ ಕೈಯಾಡಿಸಿ. ನಂತರ ಇದಕ್ಕೆ ಟೊಮೇಟೊ ಪೇಸ್ಟ್, ಬೆಣ್ಣೆ ಬೆರೆಸಿ ಲೈಟ್‌ ಆಗಿ ಕುದಿಸಬೇಕು. ನಂತರ ಸ್ಟಫ್ಡ್ ಟೊಮೇಟೋಗಳನ್ನು ಇದಕ್ಕೆ ಹಾಕಿ, ಮಂದ ಉರಿಯಲ್ಲಿ ಕೆದಕುತ್ತಾ ಗ್ರೇವಿ ಕುದಿಸಬೇಕು. ಟೊಮೇಟೊ ಹದನಾಗಿ ಬೇಯಲಿ. ಗ್ರೇವಿ ಬಾಣಲೆಗೆ ಮೆತ್ತಿಕೊಳ್ಳದಂತೆ ಬೆಣ್ಣೆ ಬೆರೆಸುತ್ತಾ ಗಮನಿಸಿಕೊಳ್ಳಿ. ನಂತರ ಇದರಿಂದ ಟೊಮೇಟೊ ಬೇರ್ಪಡಿಸಿ. ಆಮೇಲೆ ಗ್ರೇವಿಗೆ ಕ್ರೀಂ ಬೆರೆಸಿ 1-2 ಕುದಿ ಬಂದಾಗ ಕೆಳಗಿಳಿಸಿ. ಸರ್ವಿಂಗ್‌ ಡಿಶ್‌ ನಲ್ಲಿ ಮೊದಲು ಗ್ರೇವಿ ತುಂಬಿಸಿ, ಅದರಲ್ಲಿ ಟೊಮೇಟೊ ತೇಲಿಬಿಡಿ. ಮೇಲೆ ಕೊ.ಸೊಪ್ಪು, ಕ್ರೀಂ ಉದುರಿಸಿ, ಬಿಸಿ ಬಿಸಿಯಾಗಿ ಚಪಾತಿ, ಪೂರಿ ಜೊತೆ ಸವಿಯಲು ಕೊಡಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ