ಕ್ರಿಸ್ಪಿ ರಿಬ್ಬನ್ರಿಂಗ್ಸ್

ಸಾಮಗ್ರಿ : 200 ಗ್ರಾಂ ಮೈದಾ, 50 ಗ್ರಾಂ ಸಣ್ಣ ರವೆ, 1 ದೊಡ್ಡ ಸೌಟು ತುಪ್ಪ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.

ವಿಧಾನ : ಜರಡಿಯಾಡಿದ ಮೈದಾ, ಸಣ್ಣ ರವೆಗೆ ಉಪ್ಪು, ಮೆಣಸು, ತುಸು ನೀರು ಬೆರೆಸಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ನಾದಿಕೊಂಡು ಮೃದುವಾಗಿರುವಂತೆ ಮಾಡಿ. ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಕಾದ ನಂತರ, ಈ ಮೇಲಿನ ಮಿಶ್ರಣವನ್ನು ಚಕ್ಕುಲಿ ಒರಳಿಗೆ ಹಾಕಿಕೊಳ್ಳಬೇಕು, ಜೊತೆಗೆ 2 ಗೆರೆಗಳುಳ್ಳ ರಿಬ್ಬನ್‌ ಬಿಲ್ಲೆ ಸೇರಿಸಿ. ಬಾಣಲೆಗೆ ಈ ಮಿಶ್ರಣವನ್ನು ನೇರವಾಗಿ ಒತ್ತಿಕೊಂಡು, ರಿಬ್ಬನ್‌ ತರಹ ಎಳೆಗಳನ್ನು ಬಿಡಿಸಿಕೊಂಡು, ಮಂದ ಉರಿಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ನಂತರ ಹೊರ ತೆಗೆದು ಟಿಶ್ಯು ಪೇಪರ್‌ ಮೇಲೆ ಹರಡಿಕೊಂಡು, ಹೆಚ್ಚುವರಿ ಎಣ್ಣೆ ಹೋಗಲಾಡಿಸಿ. ನಂತರ ಇದನ್ನು ಗಾಳಿಯಾಡದ ಡಬ್ಬಗಳಿಗೆ ತುಂಬಿಸಿ, ಬೇಕೆನಿಸಿದಾಗ ಚಿತ್ರದಲ್ಲಿರುವಂತೆ ಟೊಮೇಟೊ ಸಾಸ್‌, ಸಲಾಡ್‌, ಪುದೀನಾ ಚಟ್ನಿ ಜೊತೆ ಬಿಸಿ ಬಿಸಿ ಕಾಫಿ/ಟೀ ಸಮೇತ ಸವಿಯಿರಿ.

Kurkure-Palak-Hearts

ಕುರ್ಕುರೆ ಪಾಲಕ್ಬಿಸ್ಕತ್ತು

ಸಾಮಗ್ರಿ : 1 ಕಂತೆ ಶುಚಿಗೊಳಿಸಿ, ಹೆಚ್ಚಿ, ಬ್ಲಾಂಚ್‌ ಗೊಳಿಸಿ, ರುಬ್ಬಿದ ಪಾಲಕ್‌ ಪೇಸ್ಟ್, 200 ಗ್ರಾಂ ಮೈದಾ, 50 ಗ್ರಾಂ ಸಣ್ಣ ರವೆ, ಕರಿಯಲು ರೀಫೈಂಡ್‌ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಓಮ, ಬಣ್ಣ ಬಣ್ಣದ ಚೆರ್ರಿ ಟೂಟಿಫ್ರೂಟಿ, ತುಸು ತುಪ್ಪ.

ವಿಧಾನ : ಒಂದು ಬೇಸನ್ನಿಗೆ ಮೇಲಿನ ಎಲ್ಲಾ ಸಾಮಗ್ರಿ ಜೊತೆ ತುಸು ನೀರು ಬೆರೆಸಿಕೊಂಡು ಮೃದು ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ನಾದಿಕೊಂಡು ಸ್ವಲ್ಪ ಹೊತ್ತು ನೆನೆಯಲು ಬಿಡಿ. ನಂತರ ದಪ್ಪ ಚಪಾತಿಗಳಾಗಿ ಲಟ್ಟಿಸಿ, ಹಾರ್ಟ್ ಶೇಪ್‌ ಕಟರ್‌ ನಿಂದ ಚಿತ್ರದಲ್ಲಿರುವಂತೆ ಲಟ್ಟಿಸಿದ ಮಿಶ್ರಣ ಕತ್ತರಿಸಿ. ಇದನ್ನು ಕಾದ ಎಣ್ಣೆಯಲ್ಲಿ, ಮಂದ ಉರಿಯಲ್ಲಿ ಕರಿಯಬೇಕು. ಚೆನ್ನಾಗಿ ಆರಿದ ನಂತರ, ಚಿತ್ರದಲ್ಲಿರುವಂತೆ ಟೂಟಿಫ್ರೂಟಿಯಿಂದ ಅಲಂಕರಿಸಿ, ಸಂಜೆಯ ಟೀ-ಕಾಫಿ ಜೊತೆ ಸವಿಯಿರಿ.

Kurkure-Makka-Donut

ಕುರ್ಕುರೆ ಸ್ಪೆಷಲ್ ಡೋನಟ್

ಸಾಮಗ್ರಿ : 250 ಗ್ರಾಂ ಜೋಳದ ಹಿಟ್ಟು, ತುಸು ತರಿತರಿ ಆಗಿಸಿದ ದನಿಯಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸಿನ ಪೇಸ್ಟ್, ಬೇಕಿಂಗ್‌ ಸೋಡ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅಮ್ಚೂರ್‌ ಪುಡಿ, ಟೊಮೇಟೊ ಕೆಚಪ್‌, ಹೆಚ್ಚಿದ ಕೊ.ಸೊಪ್ಪು, ಕರಿಯಲು ಎಣ್ಣೆ, ಜೊತೆಗೆ ಪುದೀನಾ ಚಟ್ನಿ.

ವಿಧಾನ : ಒಂದು ಬೇಸನ್ನಿಗೆ ಮೇಲಿನ ಎಲ್ಲಾ ಸಾಮಗ್ರಿ ಹಾಕಿ, ನೀರು ಬೆರೆಸಿ, ಮೃದುವಾದ ಮಿಶ್ರಣ ಕಲಸಿರಿ. ಇದಕ್ಕೆ ತುಪ್ಪ ಬೆರೆಸಿ ನಾದಿಕೊಂಡು ಸ್ವಲ್ಪ ಹೊತ್ತು ನೆನೆಯಲು ಬಿಡಿ. ನಂತರ ಸಣ್ಣ ನಿಂಬೆಗಾತ್ರದ ಉಂಡೆ ಹಿಡಿದು, ದಪ್ಪಗೆ ಲಟ್ಟಿಸಿ, ಮಧ್ಯೆ ರಂಧ್ರ ಮಾಡಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು ತೆಗೆಯಿರಿ. ಆರಿದ ನಂತರ, ಚಿತ್ರದಲ್ಲಿರುವಂತೆ ಟೊಮೇಟೊ ಕೆಚಪ್‌, ಪುದೀನಾ ಚಟ್ನಿ ಜೊತೆ ಬಿಸಿ ಕಾಫಿ/ಟೀ ಸಮೇತ ಸವಿಯಲು ಕೊಡಿ.

Kheel-Ke-Pakode

ಅಖರೋಟಿನ ಪಕೋಡ

ಸಾಮಗ್ರಿ : 2 ಕಪ್‌ ಅಖರೋಟು, ಅರ್ಧ ಕಪ್‌ ಕಡಲೆಹಿಟ್ಟು, ತುಸು ಅರಾರೂಟ್‌, ಒಂದಿಷ್ಟು ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಅಮ್ಚೂರ್‌ ಪುಡಿ, ಸೋಂಪು, ಕರಿಯಲು ಎಣ್ಣೆ.

ವಿಧಾನ : ಮೊದಲು ಅಖರೋಟ್‌ ನ್ನು ತುಸು ಜಜ್ಜಿಕೊಂಡು ತುಂಡರಿಸಿ. ಇದಕ್ಕೆ ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿ, ನೀರು ಚಿಮುಕಿಸಿ ಪಕೋಡ ಹದಕ್ಕೆ ಹಿಟ್ಟು ಕಲಸಿಡಿ. ನಂತರ ಕಾದ ಎಣ್ಣೆಗೆ ಇದನ್ನು ನೇರವಾಗಿ ಪಕೋಡ ತರಹ ಸ್ವಲ್ಪ ಸ್ವಲ್ಪವೇ ಹಾಕುತ್ತಾ, ಗರಿಗರಿಯಾಗಿ ಹೊಂಬಣ್ಣ ಬರುವಂತೆ ಕರಿದು ತೆಗೆಯಿರಿ. ಪುದೀನಾ ಚಟ್ನಿ ಜೊತೆ ಬಿಸಿ ಬಿಸಿಯಾಗಿ, ಕಾಫಿ/ಟೀ ಸಹಿತ ಸವಿಯಲು ಕೊಡಿ.

Curd-Potli

ಸ್ಪೆಷಲ್ ಸಂಚಿ

ಸಾಮಗ್ರಿ : 300 ಗ್ರಾಂ ಹುಳಿ ಮೊಸರು, 150 ಗ್ರಾಂ ಮೈದಾ, ಒಂದಿಷ್ಟು ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಾಟ್‌ ಮಸಾಲ, ಓಮ, ಕರಿಯಲು ಎಣ್ಣೆ.

ವಿಧಾನ : ರಾತ್ರಿ ಮಲಗುವ ಮುನ್ನ ಮೊಸರನ್ನು ಒಂದು ತೆಳು ಬಟ್ಟೆಗೆ ಕಟ್ಟಿ ನೇತುಹಾಕಿ. ಬೆಳಗ್ಗೆ ಹೊತ್ತಿಗೆ ಅದರ ತೇವಾಂಶವೆಲ್ಲ ಹಿಂಗಿ ಹೋಗಿರುತ್ತದೆ. ನಂತರ ಮೈದಾಗೆ ತುಸು ಉಪ್ಪು, ಸೋಡ, ಖಾರ ಬೆರೆಸಿ, ತುಸು ನೀರು ಚಿಮುಕಿಸಿ ಮೃದು ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಆಮೇಲೆ ಗಟ್ಟಿ ಮೊಸರಿಗೆ ಉಳಿದೆಲ್ಲ ಸಾಮಗ್ರಿ ಬೆರೆಸಿ ಮಿಶ್ರಣ ಮಾಡಿ. ನೆನೆದ ಮೈದಾ ಮಿಶ್ರಣಕ್ಕೆ ತುಸು ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಳ್ಳಿ. ಇದರಿಂದ ಸಣ್ಣ ಸಣ್ಣ ಪೂರಿ ಲಟ್ಟಿಸಿ, ಚಿಕ್ಕ ಗುಂಡಗಿನ ಸ್ಟೀಲ್ ಮುಚ್ಚಳದಿಂದ ಕತ್ತರಿಸಿ. ಅದಕ್ಕೆ 1-2 ಚಮಚ ಮೊಸರಿನ ಮಿಶ್ರಣ ತುಂಬಿಸಿ, ಎಲ್ಲಾ ಬದಿಯಿಂದ ಪೂರಿ ಮಡಿಚಿ, ಚಿತ್ರದಲ್ಲಿರುವಂತೆ ಸಂಚಿ ಆಕಾರ ನೀಡಿ. ಕಾದ ಎಣ್ಣೆಯಲ್ಲಿ ಈ ಎಲ್ಲಾ ಸಂಚಿಗಳನ್ನು ಕರಿದು, ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

Chukandar-Tikki

ಬೀಟ್ರೂಟ್ಕಟ್ಲೆಟ್

ಸಾಮಗ್ರಿ : 1-2 ತುರಿದ ಬೀಟ್‌ ರೂಟ್‌, 1 ದೊಡ್ಡ ಆಲೂ (ಬೇಯಿಸಿ ಮರೆದಿಡಿ), ಅರ್ಧ ಕಪ್‌ ಸಣ್ಣ ರವೆ, 4 ಚಮಚ ಕಾರ್ನ್‌ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅಮ್ಚೂರ್‌ ಪುಡಿ, ಚಾಟ್‌ ಮಸಾಲ, ಕರಿಯಲು ಎಣ್ಣೆ.

ವಿಧಾನ : ಮೊದಲು ತುರಿದ ಬೀಟ್‌ ರೂಟ್‌ ಗೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ಉಂಡೆ ಮಾಡಿ, ಚಿತ್ರದಲ್ಲಿರುವಂತೆ ಕಟ್‌ ಲೆಟ್‌ ತಟ್ಟಿಕೊಂಡು, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ನಂತರ ಚಿತ್ರದಲ್ಲಿರುವಂತೆ ಪುದೀನಾ ಚಟ್ನಿ, ಸಲಾಡ್‌ ಜೊತೆ ಅಲಂಕರಿಸಿ ಸವಿಯಲು ಕೊಡಿ.

Gobhi-Kabab

ಹೂಕೋಸಿನ ಕಟ್ಲೆಟ್

ಸಾಮಗ್ರಿ : 1 ದೊಡ್ಡ ಹೂಕೋಸು, 2 ದೊಡ್ಡ ಆಲೂ (ಬೇಯಿಸಿ ಮಸೆದಿಡಿ), ಅರ್ಧ ಕಪ್‌ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ಅಮ್ಚೂರ್‌ ಪುಡಿ, ಗರಂ ಮಸಾಲ, ಚಾಟ್‌ ಮಸಾಲ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಕರಿಯಲು ಎಣ್ಣೆ, ಪುದೀನಾ ಚಟ್ನಿ, ಟೊಮೇಟೊ ಸಾಸ್‌.

ವಿಧಾನ : ಹೂಕೊಸು ಶುಚಿಗೊಳಿಸಿ, ಲಘುವಾಗಿ ಬ್ಲಾಂಚ್‌ ಮಾಡಿ, ನೀರಿನಂಶ ಸೋರುವಂತೆ ಮಾಡಿ. ಇದನ್ನು ನೀಟಾಗಿ ತುರಿದು ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ಸಣ್ಣ ಉಂಡೆ ಮಾಡಿ, ಚಿತ್ರದಲ್ಲಿರುವಂತೆ ಕಟ್‌ ಲೆಟ್ ತಟ್ಟಿಕೊಂಡು, ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿದು ತೆಗೆಯಿರಿ. ನಂತರ ಚಿತ್ರದಲ್ಲಿರುವಂತೆ ಚಟ್ನಿ, ಸಾಸ್‌ ಜೊತೆ ಸವಿಯಲು ಕೊಡಿ.

Untitled-2

ಸ್ಪೆಷಲ್ ಮೈದಾ ರೋಲ್ಸ್

ಸಾಮಗ್ರಿ : 2 ಕಪ್‌ ಮೈದಾ, ಅರ್ಧ ಸೌಟು ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಖಾರ, ಅರಿಶಿನ, ಕರಿಯಲು ಎಣ್ಣೆ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿ, ನೀರು ಚಿಮುಕಿಸುತ್ತಾ ಮೃದು ಪೂರಿ ಹಿಟ್ಟಿನ ಹದಕ್ಕೆ ಕಲಸಿ, ತುಪ್ಪ ಹಾಕಿ ಚೆನ್ನಾಗಿ ನಾದಿಕೊಳ್ಳಿ. ಅರ್ಧ ಗಂಟೆ ನೆನೆದ ನಂತರ, ಸಣ್ಣ ಉಂಡೆ ಮಾಡಿ, ತೆಳುವಾದ ಪೂರಿ ಲಟ್ಟಿಸಿ. ಇದನ್ನು ಚಾಕುವಿನಿಂದ ಮಧ್ಯೆ ಮಧ್ಯೆ ಕತ್ತರಿಸಿ, ಒಂದೆಡೆ ಎಲ್ಲವನ್ನೂ ಹಿಡಿದಿಡುವಂತೆ  ಮಾಡಿ, ಚಿತ್ರದಲ್ಲಿರುವಂತೆ ಸುರುಳಿ ಸುತ್ತಿಕೊಳ್ಳಿ. ಇವನ್ನು ಕಾದ ಎಣ್ಣೆಯಲ್ಲಿ ಹೊಂಬಣಕ್ಕೆ ಗರಿಗರಿಯಾಗಿ ಕರಿದು, ಗಾಳಿಯಾಡದ ಡಬ್ಬಕ್ಕೆ ತುಂಬಿಸಿಡಿ. ಬೇಕೆನಿಸಿದಾಗ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

Untitled-1

ಚೀಝೀ ಪಾಲಕ್ಬಾಲ್ಸ್

ಸಾಮಗ್ರಿ : 1-1 ಕಪ್‌ ತುರಿದ ಚೀಝ್, ಹೆಚ್ಚಿದ ಪಾಲಕ್‌ ಸೊಪ್ಪು, ಬೇಯಿಸಿ ಮಸೆದ ಆಲೂ, ಹೆಚ್ಚಿದ ಪನೀರ್‌, ಹೆಚ್ಚಿದ 2 ಈರುಳ್ಳಿ, ತುಸು ಶುಂಠಿ, ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್ ಮಸಾಲ, ಟೊಮೇಟೊ ಸಾಸ್‌, ಕರಿಯಲು ಎಣ್ಣೆ.

ವಿಧಾನ : ಪನೀರ್‌ ಬಿಟ್ಟು ಉಳಿದೆಲ್ಲ ಸಾಮಗ್ರಿಗಳನ್ನು ಒಂದು ಬೇಸನ್ನಿಗೆ ಬೆರೆಸಿಕೊಳ್ಳಿ. ಇದನ್ನು ಪೂರಿ ಹಿಟ್ಟಿನ ಮಿಶ್ರಣದಂತೆ ಗಟ್ಟಿಯಾಗಿ ಕಲಸಿಕೊಳ್ಳಿ. ಇದರಿಂದ ಸಣ್ಣ ನಿಂಬೆಗಾತ್ರದ ಉಂಡೆ ಹಿಡಿದು, ಅರ್ಧ ಗಂಟೆ ಫ್ರಿಜ್‌ ನಲ್ಲಿ ಇರಿಸಿಬಿಡಿ. ಹೊರ ತೆಗೆದು ಸ್ವಲ್ಪ ಹೊತ್ತು ಆದಮೇಲೆ, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಅದೇ ರೀತಿ ಪನೀರ್‌ ಕ್ಯೂಬ್ಸ್ ಸಹ ಲಘು ಕರಿಯಿರಿ. ಚಿತ್ರದಲ್ಲಿರುವಂತೆ ಒಂದು ಪ್ಲೇಟಿನಲ್ಲಿ ಎಲ್ಲವನ್ನೂ ಬೆರೆಸಿಕೊಂಡು, ಮೇಲೆ ಟೊಮೇಟೊ ಸಾಸ್‌ ಹಾಕಿ ಸವಿಯಲು ಕೊಡಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ