ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಕರ್ನಾಟಕ ಸರ್ಕಾರದ ಒಡೆತನದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್‌ನ (KSDL) ಪ್ರತಿಷ್ಠಿತ ಮೈಸೂರು ಸ್ಯಾಂಡಲ್ ಸೋಪ್‌ನ ಬ್ರಾಂಡ್ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
ಈ ನಿರ್ಧಾರವನ್ನು ರಾಜ್ಯ ಸರ್ಕಾರವು ಅಧಿಕೃತ ಪ್ರಕಟಣೆಯ ಮೂಲಕ ಘೋಷಿಸಿದ್ದು, ತಮನ್ನಾ ಅವರು ಎರಡು ವರ್ಷ ಮತ್ತು ಎರಡು ದಿನಗಳ ಅವಧಿಗೆ ರೂ. 6.20 ಕೋಟಿ ಸಂಭಾವನೆಯೊಂದಿಗೆ ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಈ ನೇಮಕವನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ)ರಡಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ವಿನಾಯಿತಿ ನೀಡಿ ದೃಢಪಡಿಸಲಾಗಿದೆ.
ಮಿಲ್ಕಿ ಬ್ಯೂಟಿ ಎಂದೇ ಖ್ಯಾತರಾಗಿರುವ ತಮನ್ನಾ ಭಾಟಿಯಾ, ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ, ಮೋಹಕ ನೋಟ ಮತ್ತು ಆಕರ್ಷಕ ನೃತ್ಯದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದವರು. ಕನ್ನಡ ಚಿತ್ರರಂಗದಲ್ಲಿ ‘ಜಾಗ್ವಾರ್’ ಮತ್ತು ‘ಕೆಜಿಎಫ್’ ಚಿತ್ರಗಳಲ್ಲಿ ವಿಶೇಷ ಗೀತೆಗಳಲ್ಲಿ ಕಾಣಿಸಿಕೊಂಡು ಕನ್ನಡಿಗರ ಮನಗೆದ್ದವರು.
ಮೈಸೂರು ಸ್ಯಾಂಡಲ್ ಸೋಪ್ ಕರ್ನಾಟಕದ ಸಾಂಸ್ಕೃತಿಕ ಮತ್ತು ಆರ್ಥಿಕ ಗುರುತಿನ ಒಂದು ಭಾಗವಾಗಿದೆ. 1916ರಲ್ಲಿ ಸ್ಥಾಪನೆಯಾದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್, ಶತಮಾನಕ್ಕೂ ಹೆಚ್ಚು ಕಾಲದಿಂದ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುತ್ತಿದೆ. ಈ ಸೋಪ್‌ನ ಚಂದನದ ಸುಗಂಧವು ಜಗತ್ತಿನಾದ್ಯಂತ ಖ್ಯಾತಿ ಗಳಿಸಿದೆ. ಇಂತಹ ಐತಿಹಾಸಿಕ ಉತ್ಪನ್ನಕ್ಕೆ ತಮನ್ನಾ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿರುವುದು, ಬ್ರಾಂಡ್‌ನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಕರ್ನಾಟಕದ ಸ್ಥಳೀಯ ನಟಿಯರಾದ ರಶ್ಮಿಕಾ ಮಂದಣ್ಣ, ರಾಗಿಣಿ ದ್ವಿವೇದಿ ಅಥವಾ ಶ್ರುತಿ ಹರಿಹರನ್‌ರಂತಹ ಜನಪ್ರಿಯ ಕನ್ನಡ ನಟಿಯರನ್ನು ಆಯ್ಕೆ ಮಾಡಬಹುದಿತ್ತು ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಸಾಂಸ್ಕೃತಿಕ ಗುರುತನ್ನು ಪ್ರತಿನಿಧಿಸುವ ಉತ್ಪನ್ನಕ್ಕೆ ಸ್ಥಳೀಯ ಕಲಾವಿದರನ್ನೇ ಆಯ್ಕೆ ಮಾಡಬೇಕಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಕೆಲವರು ತಮನ್ನಾ ಅವರ 6.20 ಕೋಟಿ ರೂಪಾಯಿಯ ಸಂಭಾವನೆಯನ್ನು ಪ್ರಶ್ನಿಸಿದ್ದಾರೆ. ಇದು ರಾಜ್ಯ ಸರ್ಕಾರದ ಸಾರ್ವಜನಿಕ ವೆಚ್ಚದ ದೃಷ್ಟಿಯಿಂದ ತುಂಬಾ ದುಬಾರಿಯೆಂದು ಹೇಳಲಾಗಿದೆ.
ತಮನ್ನಾ ಅವರು ತಮಿಳು, ತೆಲುಗು, ಮತ್ತು ಹಿಂದಿ ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ, ಇದು ಮೈಸೂರು ಸ್ಯಾಂಡಲ್ ಸೋಪ್‌ನ ಮಾರುಕಟ್ಟೆಯನ್ನು ವಿಸ್ತರಿಸಲು ಸಹಾಯಕವಾಗಬಹುದು ಎನ್ನಲಾಗಿದೆ.
ತಮನ್ನಾ ಭಾಟಿಯಾ ಅವರು ಈ ಜವಾಬ್ದಾರಿಯನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದು, ಮೈಸೂರು ಸ್ಯಾಂಡಲ್ ಸೋಪ್‌ನ ಶತಮಾನದ ಇತಿಹಾಸ ಮತ್ತು ಗುಣಮಟ್ಟಕ್ಕೆ ತಾವು ಗೌರವ ಕೊಡುವುದಾಗಿ ಹೇಳಿದ್ದಾರೆ. ಈ ಬ್ರಾಂಡ್‌ನೊಂದಿಗೆ ಕೆಲಸ ಮಾಡಲು ತಾವು ಉತ್ಸುಕರಾಗಿದ್ದೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.