ಗುಂಡ ಏನೋ ಕಾರಣವಾಗಿ ಗರ್ಲ್ ಫ್ರೆಂಡ್ ಗುಂಡಿಯಿಂದ ಬೇರಾಗಿದ್ದ. ಅವಳು ಹಾಯಾಗಿ ಬೇರೊಬ್ಬ ವರನನ್ನು ಮದುವೆಯಾದಳು. ಗುಂಡನಿಗೆ ಅವಳ ಗರ್ಲ್ ಫ್ರೆಂಡ್ ನಿಂದ ಬಂದ ಕೊನೆಯ ಮೆಸೇಜ್ : ಅಂತೂ ನನ್ನ ಮದುವೆಯ ದಿಬ್ಬಣ ಬಂದೇಬಿಟ್ಟಿತು! ಈ ವರನ ಕಡೆಯವರು ಬಹಳ ಧಾರಾಳಿಗಳು. ಪ್ರತಿಯೊಂದು ಶಾಸ್ತ್ರದಲ್ಲೂ ಸಭಿಕರಿಗೆಲ್ಲ ಧಾರಾಳವಾಗಿ 2000/ದ ನೋಟನ್ನೇ ಉಡುಗೊರೆಯಾಗಿ ಹಂಚುತ್ತಿದ್ದಾರೆ. ನೀನು ಇದುವರೆಗೂ ನನಗಾಗಿ ಮಾಡಿದ್ದ ಖರ್ಚನ್ನು ಈ ಮೂಲಕ ಬಂದು ಗಿಟ್ಟಿಸಿಕೋ!
ಮದುವೆಯ ನಂತರ ಪತ್ನಿ ಮೊದಲ ಸಲ ಸೋರೆಕಾಯಿ ಪಲ್ಯ ಮಾಡಿ ಗಂಡನಿಗೆ ಬಡಿಸಿ, ರುಚಿ ಹೇಗಿದೆ ಎಂದು ಕೇಳಿದರೆ, `ಬಿಸಿ ತುಪ್ಪ ಉಗುಳಲಾರದೆ.... ನುಂಗಲಾರದೆ ತತ್ತರಿಸಿದಂತೆ...' ಎಂದು ಹಿಂದೆ ತಾನು ಎಲ್ಲೋ ಓದಿದ್ದ ಗಾದೆಯನ್ನು ಅವನು ಪ್ರಾಕ್ಟಿಕಲ್ ಆಗಿ ಈಗ ಅರ್ಥ ಮಾಡಿಕೊಳ್ಳಬಲ್ಲ!
ಮದುವೆಯಾದ ಹೊಸತರಲ್ಲಿ `ಅತಿ ಮಧುರ.... ಅನುರಾಗ...' ಹೇಗಿರುತ್ತೆ ಅಂತೀರಾ? ಇಲ್ಲಿ ನೋಡಿ :
ಹನೀಮೂನಿಗೆ ಹೊರಟಿದ್ದ ನವ ದಂಪತಿ ವಿಹಾರ ಮುಗಿಸಿ ರಾತ್ರಿ ಹೋಟೆಲ್ ಸೇರಿದರು. ಆಕಸ್ಮಿಕವಾಗಿ ತನ್ನ ಪತ್ನಿಯ ಕೈ ಮೇಲಿದ್ದ ರಕ್ತದ ಕಲೆ ಗುರುತಿಸಿದ ನಾಣಿ, ತಕ್ಷಣ ಓಡಿ ಬಂದು ಅವಳ ಕೈ ಹಿಡಿದು, ಆ ರಕ್ತ ಹೀರಿ, ಅಲ್ಲೇ ಇದ್ದ ಹ್ಯಾಂಡಿ ಪ್ಲಾಸ್ಟ್ ಹಚ್ಚಿ ಆರೈಕೆ ಮಾಡಿದ.
ಅದಕ್ಕೆ ಅವನ ಪತ್ನಿ ಮುದ್ದಾಗಿ ಉಲಿದಳು, ``ಇದೇನು ಮಾಡಿದಿರಿ ನೀವು.... ನನ್ನ ಕೈ ಮೇಲೆ ಕುಳಿತಿದ್ದ ದೊಡ್ಡ ಸೊಳ್ಳೆಯನ್ನು ಈಗ ತಾನೇ ಹೊಡೆದು ಸಾಯಿಸಿದ್ದೆ!''
ಪ್ರೇಯಸಿ : ಮದುವೆ ನಂತರದ ನಿನ್ನ ಎಲ್ಲಾ ದುಃಖವನ್ನೂ ನನ್ನದೆಂದೇ ಭಾವಿಸಿ, ಅದನ್ನು ಹಂಚಿಕೊಳ್ಳುತ್ತೇನೆ.
ಪ್ರಿಯತಮ : ಅಯ್ಯೋ.... ಆದರೆ ನನಗೆ ಯಾವ ದುಃಖ ಇಲ್ಲವಲ್ಲ?
ಪ್ರೇಯಸಿ : ಅರೆ.... ನಾನು ಹೇಳಿದ್ದು ಮದುವೆ ಆದ ಮೇಲೆ ಶುರುವಾಗುವ ದುಃಖಗಳ ಬಗ್ಗೆ!
ಪತ್ನಿ : ಅದು ಸರಿ, ನಾನು ಹಾಡು ಹೇಳಲು ಶುರು ಮಾಡಿದಾಗೆಲ್ಲ ನೀವೇಕೆ ಹೋಗಿ ಬಾಲ್ಕನಿಯಲ್ಲಿ ನಿಂತುಬಿಡ್ತೀರಿ?
ಪತಿ : ಇದರಿಂದ ನಮ್ಮ ಹೊರೆಯವರಿಗೆ ನಾನು ನಿನ್ನನ್ನು ಹೊಡೆದು ಬಡಿದೂ ಮಾಡುತ್ತಿಲ್ಲ, ಒಂಟಿಯಾಗಿ ಬಾಲ್ಕನಿಯಲ್ಲಿ ನಿಂತಿದ್ದೇನೆ ಅಂತ ಖಾತ್ರಿಯಾಗಲಿ ಅಂತ!
ಗುಂಡ ತನ್ನ ಗೆಳೆಯ ವೆಂಕಿಗೆ ಹಿಂದೆ ಹೇಳಿದ್ದ ಮಾತು ಇಂದು ಬಹಳ ದುಬಾರಿ ಆಯ್ತು. `ನಿನಗೆ ಮುಂದೆ ಯಾವುದೇ ತೊಂದರೆ ಬರಲಿ, ಮರೆಯದೆ ನನ್ನನ್ನು ನೆನಪಿಸಿಕೋ.'
ಅದರ ಫಲವಾಗಿ ಗುಂಡನ ಮನೆಗೆ ಅವನ ಗೆಳೆಯ ವೆಂಕಿ, ಮರು ವಾರ ತನ್ನ ಮದುವೆ ಅಂತ ಆಹ್ವಾನಪತ್ರಿಕೆ ಕಳುಹಿಸುವುದೇ?
ಯಾರೋ ಕರೆಗಂಟೆ ಒತ್ತಿದಾಗ ಶೈಲಾ ಹೋಗಿ ಬಾಗಿಲು ತೆರೆದಳು. ಎದುರಿಗೆ ತನ್ನ ಮಾಜಿ ಬಾಯ್ ಫ್ರೆಂಡ್ ನಿಂತಿದ್ದ.
ಶೈಲಾ : ಇದೇಕೆ ಈ ಹೊತ್ತಿನಲ್ಲಿ ನನ್ನ ಮನೆ ಹುಡುಕಿಕೊಂಡು ಬಂದೆ? ನನಗೆ ಮದುವೆ ಫಿಕ್ಸ್ ಆಗಿದೆ ಅಂತ ನಿನಗೆ ಮೆಸೇಜ್‌ಕಳುಹಿಸಿದ್ದೆನಲ್ಲ....?
ಮಾಜಿ : ಬಡ್ಕೊಂಡ್ರು.... ಸದಾ ನಿನ್ನ ಫಾಲೋ ಮಾಡೋದೊಂದೇ ನನ್ನ ಕೆಲಸ ಅಂದುಕೊಂಡೆಯಾ? ಮನೆ ಮುಂದೆ ಚಪ್ಪರ, ಶಾಮಿಯಾನಾ ಹಾಕಿಸುವ ಹುಡುಗರ ತಂಡಕ್ಕೆ ನಾನೇ ಲೀಡರ್. ಕರಿ ನಿಮ್ಮಪ್ಪನ್ನ.... ಮೊದಲು ಅಡ್ವಾನ್ಸ್ ಕೊಡಲಿ!