– ರಾಘವೇಂದ್ರ ಅಡಿಗ ಎಚ್ಚೆನ್

ಕನ್ನಡಿಗರಿಗೆ ಕ್ಷಮೆ ಕೇಳಲು ಮೊಂಡಾಟ ಪ್ರದರ್ಶಿಸುತ್ತಿದ್ದ ನಟ ಕಮಲ್ ಹಾಸನ್​ಗೆ ಹೈಕೋರ್ಟ್‌ ಬಿಗ್ ಶಾಕ್ ನೀಡಿದೆ. ಥಗ್ ಲೈಫ್ ಸಿನಿಮಾ ರಿಲೀಸ್‌ಗೆ ಭದ್ರತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಲಾಗಿದೆ.
ಕಮಲ್ ಹಾಸನ್ ಅವರ ಥಗ್‌ ಲೈಫ್‌ ಸಿನಿಮಾ ಬಿಡುಗಡೆಗೆ ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರ ಪೀಠದಲ್ಲಿ ನಡೀತು. ಈ ವೇಳೆ ಕಮಲ್ ಹಾಸನ್ ಪರ ವಕೀಲ ಧ್ಯಾನ್ ಚಿನ್ನಪ್ಪ ಅವರು ಫಿಲ್ಮ್‌ ಚೇಂಬರ್ ಜೊತೆ ಮಾತುಕತೆ ನಡೆಸಲು ಒಂದು ವಾರಗಳ ಸಮಯ ಕೋರಿದರು.
ಅರ್ಜಿದಾರರ ಪರ ವಕೀಲರೇ 1 ವಾರಗಳ ಸಮಯ ಕೇಳಿದರಿಂದ ಈ ಸಮಸ್ಯೆ ಬಗೆಹರಿಯುವವರೆಗೂ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಪ್ರದರ್ಶನ ಇಲ್ಲ. ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜೂನ್ 10ಕ್ಕೆ ಮುಂದೂಡಿಕೆ ಮಾಡಿದೆ. ಹೈಕೋರ್ಟ್​ ಆದೇಶಕ್ಕೆ 7 ಕೋಟಿ ಕನ್ನಡಿಗರು ಸಂತಸ ವ್ಯಕ್ತಪಡಿಸಿದ್ದಾರೆ.
ತಮಿಳಿನಿಂದ ಕನ್ನಡ ಹುಟ್ಟಿದೆ ಅನ್ನೋ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳು ನಟ ಕಮಲ್ ಹಾಸನ್​ ‘ನಾನು ಯಾವುದೇ ತಪ್ಪು ಮಾಡಿಲ್ಲ, ಕ್ಷಮೆಯಾಚಿಸುವುದಿಲ್ಲ’ ಎಂದು ಉದ್ಧಟತನ ಮೆರೆದಿದ್ದರು. ಹೀಗಾಗಿ ಕಮಲ್​ ಹಾಸನ್​ ಕ್ಷಮೆಯಾಚಿಸದಿದ್ದರೆ ಅವರ ಚಿತ್ರ ಬಿಡುಗಡೆ ಮಾಡಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಅಂತ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದರು. ಹಾಗಾಗಿ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ನೀಡಬೇಕು ಮತ್ತು ಚಿತ್ರ ಮಂದಿರಕ್ಕೆ ಪೊಲೀಸ್‌ ಭದ್ರತೆ ಒದಗಿಸಬೇಕೆಂದು ಕೋರಿ ಕಮಲ್‌ ಹಾಸನ್‌ ಅರ್ಜಿ ಸಲ್ಲಿಸಿದ್ದರು.
ಇಂದು ಅರ್ಜಿಯ ವಿಚಾರಣೆ ನ್ಯಾ. ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ನಡೆಯಿತು. ಈ ವೇಳೆ ಭಾಷೆ ಹುಟ್ಟಿದರ ಬಗ್ಗೆ ನೀವು ಮಾತನಾಡುವುದಕ್ಕೆ ನೀವು ಭಾಷಾ ತಜ್ಞರೇ ಅಥವಾ ಇತಿಹಾಸಕಾರರೇ? ಎಂದು ನ್ಯಾಯಮೂತಿ ಅವರು ಕಮಲ್​ ಹಾಸನ್​ನ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಹೈಕೋರ್ಟ್​ ಥಗ್ ಲೈಫ್ ಸಿನಿಮಾ ರಿಲೀಸ್‌ಗೆ ಭದ್ರತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಲಾಗಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ