ಕಥೆ – ಡಾ. ದೀಪಾ ಹಿರೇಮಠ್
ಮೊದಲಿನಿಂದಲೂ ಬಡತನದ ಬೇಗೆಯಲ್ಲಿ ಬೆಂದಿದ್ದ ಪಾರ್ವತಿ, ಹುಟ್ಟಿದ ಮನೆಯಿಂದ ಮೆಟ್ಟಿದ ಮನೆಗೆ ಬಂದರೂ ಕಷ್ಟ ಕಾರ್ಪಣ್ಯ ತಪ್ಪಲಿಲ್ಲ. ಕುಡುಕ ಗಂಡನ ಕಾಟದೊಂದಿಗೆ ಸಂಸಾರದ ನೊಗ ಎಳೆಯುತ್ತಾ ಪಾರ್ವತಿ ಮಕ್ಕಳನ್ನು ಓದಿಸಿ ಬೆಳೆಸಿದಳು. ಮುಂದೆ ಅವಳ ಬದುಕಿನ ಜಟಕಾ ಬಂಡಿ ಎತ್ತ ಸಾಗಿತು……?
ಜವರಾಯ ಬಂದರೆ ಬರಿ ಕೈಲಿ ಬರಲಿಲ್ಲ ಕುಡುಗೋಲು ಕೊಡಲಿ ಹೆಗಲಲ್ಲಿ ಇಟುಗೊಂಡು ಒಳ್ಳೊಳ್ಳೆ ಮರ ಕಡಿದು ಬಂದ ಅಲ್ವಾ ಹಾಗೂ ದೊಡ್ಡ ದಿನ ರಾತ್ರಿ ರಾಗಿ ಬೀಸುವಾಗ ಹಾಡುತ್ತಿದ್ದ ಅನೇಕ ಜನಪದ ಗೀತೆಗಳಲ್ಲಿ ಇದೂ ಒಂದು. ಜವರಾಯ ಯಾವಾಗಲೂ ಹಾಗೆ, ಅವನಿಗೆ ಒಳ್ಳೆಯವರ ಮೇಲೆ ಕಣ್ಣು. ಬದುಕು ಬೇಡವೆನಿಸಿ ಸಾವಿಗಾಗಿ ಹಂಬಲಿಸುವ ವೃದ್ಧರ ಬಳಿ ಅವನು ಸುಳಿಯುವುದೇ ಇಲ್ಲ. ಬಾಳಬೇಕಾದ ಮಕ್ಕಳು, ಸಾಧಿಸಬೇಕಾದ ಯುವಜನತೆ ಅವನಿಗೆ ಬಲು ಪ್ರೀತಿ ಎಂದು ಕಾಣುತ್ತದೆ.
ಕಲ್ಯಾಣಪುರ ನಗರದಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿರುವ ಸುಂದರ ಪುಟ್ಟ ಹಳ್ಳಿ. ಇತ್ತೀಚೆಗೆ ನಗರದ ಪ್ರಭಾವದಿಂದ ಅದೂ ಬೆಳೆಯುತ್ತಿದೆ. ಇಲ್ಲಿನ ಜನರು ನಗರಕ್ಕೆ ಹೋಗಿ ಹಾಲು ಮಾರಿ ಬರುತ್ತಾರೆ. ಸೊಪ್ಪು, ತರಕಾರಿ, ಸೌತೆಕಾಯಿ, ಹೂವು ಮೊದಲಾದವುಗಳನ್ನು ಬೆಳೆದು ಮಾರಿ ಹಣ ಸಂಪಾದಿಸುತ್ತಾರೆ. ಕೂಲಿ ಕಾರ್ಮಿಕರು ಸಹ ಗಾರೆ ಕೆಲಸಕ್ಕೆ ಹೋಗಿ ಸಾಕಷ್ಟು ಚೆನ್ನಾಗಿಯೇ ಬದುಕುತ್ತಿದ್ದಾರೆ. ಆದರೆ ಕೆಂಚ ಮಾತ್ರ ಯಾವ ರೀತಿಯಿಂದಲೂ ಬದಲಾಗಲಾರ.
ಕೆಂಚನ ಮನೆ ಮುಂದೆ ಜನ ಸೇರಿದ್ದಾರೆ. ಗುಂಪು ಗುಂಪಾಗಿ ನಿಂತು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವರು ಮೌನಕ್ಕೆ ಶರಣಾಗಿದ್ದಾರೆ. ದುಂಡು ಮುಖದ ಗೋಧಿ ಮೈ ಬಣ್ಣದ, ಸದಾ ನಗು ನಗುತ್ತಿದ್ದ ಕೆಂಚನ ಹಿರಿಮಗಳು ಲಕ್ಷ್ಮಿ ಇಂದು ಹೆಣವಾಗಿ ಮಲಗಿದ್ದಾಳೆ. ಜಗುಲಿಯ ಮೇಲೆ ಲಕ್ಷ್ಮಿಯ ದೇಹವನ್ನು ಇಟ್ಟು ಮುಖ ಮಾತ್ರ ಕಾಣುವಂತೆ ಮೈ ತುಂಬಾ ಬಟ್ಟೆ ಹೊದಿಸಿದ್ದಾರೆ. ಊದಿಕೊಂಡ ಮುಖ, ಕೆಂಪಾದ ಕಣ್ಣು ಗುಡ್ಡೆಗಳು, ಮೂಗಿನಲ್ಲಿ ಹತ್ತಿ….. ಒಟ್ಟಿನಲ್ಲಿ ಲಕ್ಷ್ಮಿ ವಿಕಾರವಾಗಿ ಕಾಣುತ್ತಿದ್ದಾಳೆ.
ಅವಳ ತಲೆಯ ಬಳಿ ಕೆಂಚನ ಹೆಂಡತಿ ಪಾರ್ವತಿ ಎದೆ ಎದೆ ಬಡಿದುಕೊಂಡು ಗೋಳಾಡುತ್ತಿದ್ದಾಳೆ. ತಲೆಗೂದಲನ್ನು ಕಿತ್ತುಕೊಳ್ಳುತ್ತಾಳೆ. ಅವಳು ಒಂದು ವಾರದಿಂದ ಲಕ್ಷ್ಮಿಯನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಗಿದೆ. ಅವಳು ಹರಕೆ ಹೊತ್ತ ದೇವರುಗಳಾವು ಲಕ್ಷ್ಮಿಯನ್ನು ಅವಳ ಪಾಲಿಗೆ ಉಳಿಸಿಕೊಡಲಿಲ್ಲ. ನಿದ್ದೆಯಿಲ್ಲದ ಕಣ್ಣುಗಳು, ಊಟವಿಲ್ಲದೆ ಬಳಲಿದ ದೇಹ, ಲಕ್ಷ್ಮಿಯನ್ನು ನೋಡಲು ಬಂದ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳನ್ನು ನೋಡಿ ಅವಳ ದುಃಖ ಇನ್ನಷ್ಟು ಹೆಚ್ಚಾಯಿತು.
ಹರಿದ ಸೀರೆ ಸೆರಗಿನ ಪರಿವೆಯು ಇಲ್ಲದ ಪಾರ್ವತಿ, ನೋಡಿ ಸ್ವಾಮಿ ನನ್ನ ಮಗಳು ಹೆಂಗೆ ಮಲಗವಳೆ, ನೀವಾದ್ರೂ ಅವಳನ್ನು ಉಳಿಸಿಕೊಡಿ ಎಂದು ಗೋಗರೆಯುತ್ತಾಳೆ. ಉಪನ್ಯಾಸಕರ ಕಾಲು ಹಿಡಿಯಲು ಹೋಗುತ್ತಾಳೆ. ಕುಡುಕ ಗಂಡನೊಡನೆ ಬಾಳ್ವೆ ಮಾಡುತ್ತಾ ಹದಿನೇಳು ವರ್ಷಗಳು ಕಣ್ಣ ರೆಪ್ಪೆಯಂತೆ ಕಾಪಾಡಿದ್ದ ಮಗಳ ಉಸಿರು, ಕಣ್ಮುಚ್ಚಿ ಕಣ್ಣು ಬಿಡುವುದರೊಳಗೆ ನಿಂತುಹೋಗಿತ್ತು. ಇದನ್ನು ತಾಯಿಯ ಹೃದಯ ಹೇಗೆ ಸಹಿಸಬಲ್ಲದು? ಪಾರ್ವತಿಯ ಸಂಕಟವನ್ನು ನೋಡಿ ಎಲ್ಲರ ಕಣ್ಣಲ್ಲೂ ನೀರು. ಅಲ್ಲಿದ್ದವರೆಲ್ಲ ಅವಳನ್ನು ನೋಡಿ ಮರಗುವವರೆ.
ಕೆಂಚ ಅಲ್ಲಿಯೇ ಗೋಡೆಗೊರಗಿ ಕುಳಿತಿದ್ದಾನೆ. ಗೋಡೆಗೆ ಅಂಟಿಕೊಂಡ ಹಲ್ಲಿಯಂತಹ ದೇಹ, ಕುಡಿದು ಕುಡಿದು ಸೊರಗಿದ ಅವನಿಗೆ ಗೋಳಾಡಿ ಅಳಲು ಮೈಯಲ್ಲಿ ಕಸುವಿಲ್ಲ ಧ್ವನಿಯಲ್ಲಿ ಶಕ್ತಿ ಇಲ್ಲ. ಶೂನ್ಯ ನೋಟವನ್ನು ಎಲ್ಲರ ಕಡೆಗೂ ಬೀರುತ್ತಾನೆ. ಯಾರೂ ತಂದುಕೊಡಲಾರದ ಜಾಗಕ್ಕೆ ಲಕ್ಷ್ಮಿ ಹೋಗಿದ್ದಾಳೆ. ಲಕ್ಷ್ಮಿ ಹುಟ್ಟಿದಾಗ ಹೆಣ್ಣು ಎಂದು ಹೀಗಳೆದಿದ್ದ ಕೆಂಚ ಅವಳ ಆಟ ಪಾಠಗಳನ್ನು ನೋಡುತ್ತಾ ಒಂದು ದಿನ ಅವಳನ್ನು ಬಿಟ್ಟಿರಲಾರದಷ್ಟು ಹಚ್ಚಿಕೊಂಡುಬಿಟ್ಟಿದ್ದ. ಪ್ರತಿದಿನ ಕೆಲಸ ಮುಗಿಸಿ ಬರುವಾಗ ತಾನು ಕುಡಿದರೂ ಮಕ್ಕಳಿಗೆ ಬೇಕರಿ ತಿಂಡಿಗಳು ಮತ್ತು ಹಣ್ಣುಗಳನ್ನು ತರಲು ಮರೆಯುತ್ತಿರಲಿಲ್ಲ.
ಪಾರ್ವತಿ ಕೆಂಚನನ್ನು ಮದುವೆಯಾಗಿ ಬಂದಾಗ ಬಣ್ಣ ಬಣ್ಣದ ಕನಸುಗಳನ್ನು ಹೊತ್ತು ಬಂದಿದ್ದಳು. ತನ್ನ ಗಂಡ `ಸರ್ವಚಟ ಸಂಪನ್ನ’ ಎಂದು ತಿಳಿದಾಗ ದಾರಿ ಕಾಣದೆ ಕಂಗಾಲಾಗಿದ್ದಳು. ಚೆನ್ನಾಗಿ ದುಡಿಯುತ್ತಿದ್ದ. ದುಡಿದು ಬಂದ ಕಾಸಿನಲ್ಲಿ ಕುಡಿಯುತ್ತಿದ್ದ. ಕುಡಿದು ಬಂದು ಹೆಂಡತಿಗೆ ಬಡಿಯುತ್ತಿದ್ದ. ಒಳ್ಳೆಯ ಕೆಲಸಗಾರನೆಂದು ಹೆಸರು ಮಾಡಿದ್ದ ಅವನ ಹಿಂದೆ ಯಾವಾಗಲೂ ಒಂದು ಗುಂಪು ಇರುತ್ತಿತ್ತು. ದುಡಿದ ದುಡ್ಡಿನಲ್ಲಿ ತಾನು ಮಾತ್ರ ಕುಡಿಯದೇ ಧಾರಾಳವಾಗಿ ಎಲ್ಲರಿಗೂ ಕುಡಿಸುತ್ತಿದ್ದ. ಎಷ್ಟೋ ಬಾರಿ ಇವನು ಕುಡಿದಾಗ ಇವನ ಜೊತೆಯವರೇ ಇವನ ಬಳಿ ಇದ್ದ ಉಳಿದ ದುಡ್ಡನ್ನು ಲಪಟಾಯಿಸುತ್ತಿದ್ದರು.
ಮೊದ ಮೊದಲು ಕುಡಿದು ಬಂದ ಗಂಡನನ್ನು ನೋಡಿ ಪಾರ್ವತಿ ಹೆದರಿ ಮೂಲೆ ಸೇರಿಬಿಡುತ್ತಿದ್ದಳು. ಮದುವೆ ಮಾಡಿದರೆ ಕೆಂಚ ಸರಿ ಹೋಗುತ್ತಾನೆ ಎಂಬ ಊರವರ ಲೆಕ್ಕಾಚಾರ ತಲೆಕೆಳಗಾಗಿತ್ತು. ಕೆಂಚ ಮದುವೆಯ ನಂತರ ಯಾವುದೇ ರೀತಿಯಲ್ಲೂ ಬದಲಾಗಲಿಲ್ಲ. ಅವನು ಸ್ವಭಾತಃ ಒಳ್ಳೆಯವನೇ….. ಆದರೆ ಕುಡಿತದ ಚಟ ಅವನನ್ನು ಕೆಟ್ಟವನನ್ನಾಗಿ ಮಾಡಿತ್ತು.
ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆ ಎಂಬಂತೆ ಪಾರ್ವತಿಯ ಪಾಲಿಗೆ ಪಕ್ಕದ ಮನೆಯ ನಿಂಗವ್ವ ಸಿಕ್ಕಿದ್ದಳು. ನೀನು ಹಿಂಗೆ ಹೆದರಿಕೊಂಡ್ರೆ ಹೆಂಗವ್ವ ಶಿವ ಏನಾರ ದಾರಿ ತೋರುಸ್ತಾನೆ ಸುಮ್ಕಿರು. ನೀನು ವಸಿ ಧೈರ್ಯ ತಂದ್ಕಬೇಕು ಕಣ್ವ ಎಂದು ಪಾರ್ವತಿಗೆ ಯಾವಾಗಲೂ ಸಮಾಧಾನ ಮಾಡುತ್ತಿದ್ದಳು. ಊಟ ತಿಂಡಿ ತಂದು ತಿನ್ನುವವರೆಗೂ ಬಿಡದೆ ತಿನ್ನಿಸುತ್ತಿದ್ದಳು. ಕ್ರಮೇಣ ಪರಿಸ್ಥಿತಿಗೆ ಹೊಂದಿಕೊಂಡ ಪಾರ್ವತಿ ನಿಂಗವ್ವನೊಡನೆ ನಗರದಲ್ಲಿ ಛತ್ರದ ಸ್ವಚ್ಛತೆಯ ಕೆಲಸಕ್ಕೆ ಹೋಗಲಾರಂಭಿಸಿದಳು. ಇದರಿಂದ ಅವಳಲ್ಲಿ ಸ್ವಲ್ಪ ಧೈರ್ಯ ಬರಲಾರಂಭಿಸಿತು. ಬದುಕು ಭರವಸೆ ಚಿಗುರಿತು. ಸಮಯವರಿತು ನಿಂಗವ್ವ ಪಾರ್ವತಿಗೆ ಬುದ್ಧಿಮಾತುಗಳಿಂದ ಧೈರ್ಯ ತುಂಬುತ್ತಿದ್ದಳು.
ಮೊದಮೊದಲು ಇದನ್ನು ತಿಳಿದ ಕೆಂಚ ಕೂಗಾಡಲಾರಂಭಿಸಿದ. ಹೊಡೆದು ಬಡಿದು ಹೆದರಿಸಿದ. ಯಾವುದಕ್ಕೂ ಜಗ್ಗದ ಪಾರ್ವತಿ ನಿಂಗವ್ವನ ಜೊತೆ ಕೆಲಸಕ್ಕೆ ಹೋಗಲಾರಂಭಿಸಿದಳು. ಬಂದ ಹಣವನ್ನು ಅಗತ್ಯ ವಸ್ತುಗಳನ್ನು ಕೊಳ್ಳಲು ಬಳಸಿ ಉಳಿದಿದ್ದನ್ನು ಜೋಪಾನವಾಗಿ ಎತ್ತಿಡುತ್ತಿದ್ದಳು.
ಪಾರ್ವತಿಯ ಜೀವನದಿ ಹೀಗೆ ಕಲ್ಲು ಮುಳ್ಳುಗಳನ್ನು ದಾಟಿಕೊಂಡು ಹರಿಯುವಾಗ ಪಾರ್ವತಿ ಬಸುರಿಯಾದಳು. ಇವಳ ತಂದೆ ಮಲತಾಯಿಯ ಆಜ್ಞಾಪಾಲಕ, ಮಗಳ ಮೇಲೆ ಮಮತೆ ಇದ್ದರೂ ಹೆಂಡತಿಗೆ ಬಹಳ ಹೆದರುತ್ತಿದ್ದ. ಹೀಗಾಗಿ ಹೆರಿಗೆಗೆ ಪಾರ್ವತಿ ತವರಿಗೆ ಹೋಗಾಗಲಿಲ್ಲ. ನಿಂಗವ್ವನೆ ತಾಯಿಯಾಗಿ ಪಾರ್ವತಿಯನ್ನು ಸಂತೈಸಿದಳು. ಹೀಗೆ ಪಾರ್ವತಿಗೆ ಲಕ್ಷ್ಮಿಯ ನಂತರ ಎರಡನೆ ಮಗಳು `ಸರಸ್ವತಿ’ ಎಂದು ನಿಂಗವ್ವನ ನೇತೃತ್ವದಲ್ಲೇ ನಾಮಕರಣ ಆಯಿತು. ಎರಡನೆ ಬಾರಿ ಹೆಣ್ಣು ಮಗುವಾದಾಗ `ಎರಡೂ ನಿನ್ನಂತೋವೆ ಹುಟ್ಟಾವೆ, ಮನೆ ಹಾಳ್ಮಾಡಾಕೆ ಅವನ್ನು ಕರ್ಕೊಂಡು ಎಲ್ಲಾದ್ರೂ ತೊಲಗಿಹೋಗು,’ ಎಂದು ಕೆಂಚ ಮೊದ ಮೊದಲು ಬಹಳ ರೇಗಾಡುತ್ತಿದ್ದ. ಕ್ರಮೇಣ ಮಕ್ಕಳ ಆಟಪಾಠಗಳನ್ನು ನೋಡಿ ಅವುಗಳನ್ನು ಮುದ್ದಿಸಲಾರಂಭಿಸಿದ. ಪ್ರತಿದಿನ ಸಂಜೆ ಬರುವಾಗ ಮಕ್ಕಳಿಗಾಗಿ ತಿಂಡಿ ತರುತ್ತಿದ್ದ `ಬೀದಿ ಮಕ್ಕಳು ತಾವಾಗಿ ಬೆಳೆದವು’ ಎಂಬ ಗಾದೆ ಮಾತಿನಂತೆ ಯಾವ ಕಾಯಿಲೆ ಕಸಾಲೆಗಳಿಗೂ ಜಗ್ಗದೆ ಮಕ್ಕಳು ಬೆಳೆಯಲಾರಂಭಿಸಿದ.
ಪಾರ್ವತಿಗೆ ಈಗ ಹೆಚ್ಚಿನ ಜವಾಬ್ದಾರಿ. ದುಡಿದ ಸ್ವಲ್ಪ ಹಣವನ್ನು ನಿಂಗವ್ವನ ಸಲಹೆಯಂತೆ ಬ್ಯಾಂಕಿನಲ್ಲಿಟ್ಟು ಮಕ್ಕಳನ್ನು ಓದಿಸಲಾರಂಭಿಸಿದಳು. ಪುಸ್ತಕ, ಫೀಜು, ಬಟ್ಟೆ, ಮಧ್ಯಾಹ್ನದ ಊಟ ಎಲ್ಲ ಸರ್ಕಾರಿ ಶಾಲೆಯಲ್ಲೇ ಆಗುತ್ತಿತ್ತು. ಲಕ್ಷ್ಮಿ ಈಗ ಪ್ರಥಮ ಪಿಯುಸಿ ಮುಗಿಸಿ ದ್ವಿತೀಯ ಪಿಯುಸಿಯಲ್ಲಿದ್ದಾಳೆ. ಸರಸ್ವತಿ ಒಂಬತ್ತನೇ ತರಗತಿಯಲ್ಲಿದ್ದಾಳೆ.
ಲಕ್ಷ್ಮಿ ಓದಿನಲ್ಲಿ ಮುಂದು. ಪಿಯುಸಿ ಮುಗಿದ ನಂತರ ಬಿಎ ಮಾಡಿ ಟೀಚರ್ ಆಗ್ತೀನಿ ಎಂದಿದ್ದಳು. ಪಾರ್ವತಿ ಈಗ ಬಣ್ಣ ಬಣ್ಣದ ಕನಸು ಕಾಣಲಾರಂಭಿಸಿದಳು. ತನ್ನ ಮಗಳು ಒಳ್ಳೊಳ್ಳೆ ಸೀರೆ ಉಟ್ಟು, ಹೆಗಲಿಗೆ ವ್ಯಾನಿಟಿ ಬ್ಯಾಗ್ ಹಾಕಿಕೊಂಡು, ಎತ್ತರದ ಚಪ್ಪಲಿ ಮೆಟ್ಟಿ, ತುಟಿಗೆ ಲಿಪ್ ಸ್ಟಿಕ್ ಹಚ್ಚಿ ಕೈಯಲ್ಲಿ ಮೊಬೈಲ್ ಹಿಡಿದು ಶಾಲೆಗೆ ಹೋಗುವ ತನ್ನೂರಿನ ಮೇಡಂನಂತೆ, ತನ್ನ ಲಕ್ಷ್ಮಿ ಕೂಡ ಆಗುತ್ತಾಳೆಂದು ಕಲ್ಪನೆ ಮಾಡಿಕೊಳ್ಳುತ್ತಿದ್ದಳು. ಆದರೆ `ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ,’ ಎಂಬಂತೆ ಪಾರ್ವತಿಯ ಕನಸು ನನಸಾಗುವ ಮೊದಲೇ ಲಕ್ಷ್ಮಿಯ ಜೀವನ ಅಂತ್ಯಗೊಂಡಿತ್ತು. ಮತ್ತೆಂದೂ ಬಾರದ ಊರಿಗೆ ಲಕ್ಷ್ಮಿ ಪ್ರಯಾಣ ಬೆಳೆಸಿದ್ದಳು. ಪಾರ್ವತಿಯ ಜೀವನದಲ್ಲಿ ಮತ್ತೊಮ್ಮೆ ವಿಧಿಯ ಆಟವೇ ಗೆದ್ದಿತ್ತು.
ಲಕ್ಷ್ಮಿ ಶನಿವಾರದ ದಿನ ಕಾಲೇಜಿನಿಂದ ಬಂದು ಉಂಡು ಮಲಗಿದಳು ಎದ್ದಾಗ ತಲೆ ನೋವೆಂದಳು. ಪಾರ್ವತಿ ಯಾವಾಗಲೂ ತೋರಿಸುತ್ತಿದ್ದ ಡಾಕ್ಟರ್ ರತ್ನಾಕರ್ ಶೆಟ್ಟಿಯವರ ಶಾಪಿಗೆ ಹೋದಾಗ ಅವರು ಪರೀಕ್ಷಿಸಿ ಮಾತ್ರೆ ಬರೆದುಕೊಟ್ಟಿದ್ದರು. ಆದರೆ ಮರುದಿನ ತಲೆನೋವು ಕಡಿಮೆಯಾಗುವ ಬದಲು ಹೆಚ್ಚಾದಾಗ ಗಾಬರಿಯಾದ ಪಾರ್ವತಿ ನಗರದ ದೊಡ್ಡಾಸ್ಪತ್ರೆಗೆ ಕರೆದೊಯ್ದಳು. ಅಲ್ಲಿ ಒಂದು ದಿನ ಇಟ್ಟುಕೊಂಡು ಪರೀಕ್ಷಿಸಿದ ವೈದ್ಯರು ಏನು ಕಾಯಿಲೆ ಎಂದು ತಿಳಿಯದೆ, `ಇಲ್ಲಿ ಆಗಲ್ಲ ಬೆಂಗಳೂರಿಗೆ ಕರ್ಕೊಂಡು ಹೋಗಿ,’ ಎಂದಾಗ ಪಾರ್ವತಿಯ ಜಂಘಾಬಲವೇ ಉಡುಗಿಹೋಯಿತು. ಡಾಕ್ಟರ್ ನ್ನು ಅಂಗಲಾಚಿ ಬೇಡಿಕೊಂಡಳು. ನನ್ನ ಮಗಳಿಗೆ ಏನಾಗಿದೆ ಡಾಕ್ಟ್ರೇ? ಏನಾರ ಮಾಡಿ ನನ್ನ ಮಗಳನ್ನು ಉಳಿಸಿಕೊಡಿ ಎಂದು ಗೋಗರೆದಳು. ನೋಡಮ್ಮ ಆಗುವುದಾಗಿದ್ದರೆ ಇಲ್ಲೇ ಚಿಕಿತ್ಸೆ ಮಾಡುತ್ತಿದ್ದೆ. ಕೂಡಲೇ ಬೆಂಗಳರಿಗೋ ಮಂಗಳೂರಿಗೋ ಕರ್ಕೊಂಡು ಹೋಗಿ, ಚೀಟಿ ಬರೆದು ಕೊಡ್ತೀನಿ ಎಂದು ಕೈ ಚೆಲ್ಲಿ ಬಿಟ್ಟರು.
ಎದೆಗುಂದದ ಪಾರ್ವತಿ ತನ್ನಲ್ಲಿದ್ದ ಹಣದ ಜೊತೆಗೆ ನಿಂಗವ್ವ ಮತ್ತು ಇತರೆ ನೆರೆಹೊರೆಯವರ ಸಹಾಯ ಪಡೆದು ರಾತ್ರೋರಾತ್ರಿ ಮಂಗಳೂರಿನ ಆಸ್ಪತ್ರೆಗೆ ಮಗಳನ್ನು ಕರೆದುಕೊಂಡು ಹೋಗಿ ಸೇರಿಸಿದಳು. ಅನ್ನ ಆಹಾರಗಳ ಪರಿವೆ ಇಲ್ಲದೆ, ಮಗಳಿಗಾಗಿ ಕಾದಳು. ಮೂರು ದಿನಗಳ ಸತತ ಹೋರಾಟದ ನಡುವೆ ಲಕ್ಷ್ಮಿ ಕೊನೆಯುಸಿರೆಳೆದಳು. ಲಕ್ಷ್ಮಿಯ ಮೃತ ದೇಹವನ್ನು ನೋಡಿ ಪಾರ್ವತಿಯ ಉಸಿರೇ ನಿಂತಂತಾಯ್ತು. ಅಂತಿಮ ದರ್ಶನಕ್ಕಾಗಿ ದೇಹವನ್ನು ಇಟ್ಟಿದ್ದರು. ಅವಳ ಕಾಲೇಜಿನ ಉಪನ್ಯಾಸಕರು ಹಾಗೂ ನೂರಾರು ವಿದ್ಯಾರ್ಥಿಗಳು ಬಂದಿದ್ದರು.
ಪಾರ್ವತಿಯ ಗೋಳು ಹೇಳತೀರದು. ಎಲ್ಲರೂ ಅವಳನ್ನು ನೋಡಿ ಮರಗುವವರೇ! ಆ ತಾಯಿ ತಂದೆಯರಿಗೆ ಮಗಳ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕೊಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಅಷ್ಟೇ ಅವರಿಂದ ಸಾಧ್ಯವಾಗೋದು. ಅವರೆಲ್ಲರ ಮನಸ್ಸಲ್ಲೂ ಬುದ್ಧಿವಂತೆ, ಜಾಣೆ, ಸಿಹಿಮನದ ಲಕ್ಷ್ಮಿ ಕಹಿನೆನಪು ತಂದು ಮರೆಯಾದಳು.
ಪಾರ್ವತಿ ಇದ್ದಬದ್ದ ಹಣವನ್ನೆಲ್ಲಾ ಆಸ್ಪತ್ರೆಗೆ ಖರ್ಚು ಮಾಡಿ ಬಂದಿದ್ದಳು. ಅವಳ ಪರಿಸ್ಥಿತಿಯನ್ನರಿತ ನೆರೆಹೊರೆಯವರು ಶವ ಸಂಸ್ಕಾರಕ್ಕೆ ಅಣಿ ಮಾಡುತ್ತಿದ್ದರು.
ಬಡವರು ಸತ್ತರೆ ಸುಡಲು ಸೌದಿಲ್ಲ ಒಡಲ ಕಿಚ್ಚಲ್ಲಿ ಹೆಣ ಬೆಂದೊ ಜವರಾಯ ಬಡವರಿಗೆ ಸಾವು ಕೊಡಬ್ಯಾಡ